ನಮ್ಮ ವಿಸ್ಮಯಕರವಾದ ಕೆಂಪು ರಕ್ತಕಣಗಳು
ದಕ್ಷಿಣ ಆಫ್ರಿಕದಲ್ಲಿನ ಎಚ್ಚರ! ಲೇಖಕರಿಂದ
ನಿಮ್ಮ ರಕ್ತಪ್ರವಾಹದಲ್ಲಿ ಅತಿ ಸಾಮಾನ್ಯವಾಗಿರುವ ಕಣದಿಂದಾಗಿ ನಿಮ್ಮ ರಕ್ತದ ಬಣ್ಣ ಕೆಂಪಾಗಿರುತ್ತದೆ. ಈ ಕಾರಣದಿಂದಲೇ ಆ ಕಣವನ್ನು ಕೆಂಪು ರಕ್ತಕಣವೆಂದು ಕರೆಯಲಾಗುತ್ತದೆ. ನಿಮ್ಮ ರಕ್ತದ ಕೇವಲ ಒಂದೇ ಒಂದು ತೊಟ್ಟಿನಲ್ಲಿ ಇಂಥ ಕೋಟಿಗಟ್ಟಲೆಯಷ್ಟು ಕಣಗಳಿರುತ್ತವೆ. ಒಂದು ಸೂಕ್ಷ್ಮದರ್ಶಕದಲ್ಲಿ ನೋಡುವಾಗ ಅವು ವಡೆಗಳಂತಿರುತ್ತವೆ, ಆದರೆ ಮಧ್ಯದಲ್ಲಿ ಮಾತ್ರ ತೂತಿರುವ ಬದಲಿಗೆ ಸ್ವಲ್ಪ ತಗ್ಗಿರುತ್ತದೆ. ಪ್ರತಿಯೊಂದು ಕಣದಲ್ಲಿ ಕೋಟಿಗಟ್ಟಲೆ ಹೀಮಗ್ಲೋಬಿನ್ ಅಣುಗಳು ತುಂಬಿರುತ್ತವೆ. ಮತ್ತು ಈ ಹೀಮಗ್ಲೋಬಿನ್ ಅಣು ಸಹ ಸುಂದರವಾದ ಉರುಟಾಕಾರದ್ದಾಗಿದೆ. ಅದು ಸುಮಾರು 10,000 ಜಲಜನಕ, ಇಂಗಾಲ, ಸಾರಜನಕ, ಆಮ್ಲಜನಕ ಮತ್ತು ಗಂಧಕ ಪರಮಾಣುಗಳು ಹಾಗೂ ಕಬ್ಬಿಣದ ನಾಲ್ಕು ಭಾರಿ ಪರಮಾಣುಗಳಿಂದ ರಚಿತವಾಗಿದೆ. ಈ ಕಬ್ಬಿಣದ ಪರಮಾಣುಗಳಿಂದಾಗಿ, ರಕ್ತಕ್ಕೆ ಆಮ್ಲಜನಕವನ್ನು ಒಯ್ಯುವ ಸಾಮರ್ಥ್ಯವಿದೆ. ಅಂಗಾಂಶಗಳಿಂದ ಶ್ವಾಸಕೋಶಗಳಿಗೆ ಇಂಗಾಲಾಮ್ಲವನ್ನು ರವಾನಿಸುವುದರಲ್ಲಿ ಹೀಮಗ್ಲೋಬಿನ್ ಸಹಾಯಮಾಡುತ್ತದೆ, ಮತ್ತು ಆ ಶ್ವಾಸಕೋಶಗಳಿಂದ ಇಂಗಾಲಾಮ್ಲವು ಹೊರಹೋಗುತ್ತದೆ.
ನಿಮ್ಮ ಕೆಂಪು ರಕ್ತಕಣಗಳ ಇನ್ನೊಂದು ಪ್ರಮುಖ ಭಾಗವು, ಅವುಗಳ ಪೊರೆಯೆಂದು ಕರೆಯಲಾಗುವ ಚರ್ಮ ಆಗಿದೆ. ಈ ವಿಸ್ಮಯಕರ ಪೊರೆಯಿಂದಾಗಿ, ಕೆಂಪು ರಕ್ತಕಣಗಳು ತುಂಬ ತೆಳುವಾದ ಆಕಾರಕ್ಕೆ ಚಾಚಿಕೊಳ್ಳಬಲ್ಲವು. ನಿಮ್ಮಲ್ಲಿರುವ ಅತಿ ಪುಟ್ಟ ರಕ್ತನಾಳಗಳ ಮಧ್ಯದಿಂದ ಅವು ಹಾದುಹೋಗಬಲ್ಲವು ಮತ್ತು ಹೀಗೆ ನಿಮ್ಮ ದೇಹದ ಪ್ರತಿಯೊಂದು ಭಾಗಕ್ಕೆ ಪೋಷಣೆಯನ್ನು ಒದಗಿಸಬಲ್ಲವು.
ನಿಮ್ಮ ಕೆಂಪು ರಕ್ತಕಣಗಳು ಅಸ್ಥಿಮಜ್ಜೆ (ಮೂಳೆ ಕೊಬ್ಬು)ಯಲ್ಲಿ ತಯಾರಿಸಲ್ಪಡುತ್ತವೆ. ಒಂದು ಹೊಸ ಕಣ ನಿಮ್ಮ ರಕ್ತಪ್ರವಾಹವನ್ನು ಪ್ರವೇಶಿಸಿದ ಅನಂತರ ಅದು ನಿಮ್ಮ ಹೃದಯ ಹಾಗೂ ದೇಹದಾದ್ಯಂತ 1,00,000ಕ್ಕಿಂತ ಹೆಚ್ಚು ಸಲ ಸಂಚರಿಸಬಹುದು. ಬೇರೆ ಕಣಗಳಂತೆ ಕೆಂಪು ರಕ್ತಕಣಗಳಿಗೆ ಕೋಶಬೀಜವಿರುವುದಿಲ್ಲ. ಇದರಿಂದಾಗಿ ಆಮ್ಲಜನಕವನ್ನು ಒಯ್ಯಲು ಅವುಗಳಲ್ಲಿ ಹೆಚ್ಚು ಸ್ಥಳವಿರುತ್ತದೆ ಮತ್ತು ಅವು ಹೆಚ್ಚು ಹಗುರವಾಗುತ್ತವೆ. ಇದು, ನಿಮ್ಮ ದೇಹದಾದ್ಯಂತ ಕೋಟಿಗಟ್ಟಲೆ ಕೆಂಪು ರಕ್ತಕಣಗಳನ್ನು ಪಂಪ್ ಮಾಡಲು ನಿಮ್ಮ ಹೃದಯಕ್ಕೆ ಸಹಾಯಮಾಡುತ್ತದೆ. ಆದರೆ ಕೋಶಬೀಜ ಇಲ್ಲದಿರುವುದರಿಂದ ಅವುಗಳಿಗೆ ತಮ್ಮ ಒಳಗಣ ಭಾಗಗಳನ್ನು ನವೀಕರಿಸಲಾಗುವುದಿಲ್ಲ. ಆದುದರಿಂದ ಸುಮಾರು 120 ದಿನಗಳ ಬಳಿಕ ನಿಮ್ಮ ಕೆಂಪು ರಕ್ತಕಣಗಳು ಕ್ಷಯಿಸಲಾರಂಭಿಸಿ ತಮ್ಮ ಆಕಾರವನ್ನು ಬದಲಾಯಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಫ್ಯಾಗಸೈಟ್ಸ್ ಎಂದು ಕರೆಯಲ್ಪಡುವ ದೊಡ್ಡ ಬಿಳಿ ರಕ್ತಕಣಗಳು ಈ ಸವೆದುಹೋಗಿರುವ ಕಣಗಳನ್ನು ಕಬಳಿಸಿಬಿಡುತ್ತವೆ ಮತ್ತು ಕಬ್ಬಿಣದ ಅಣುಗಳನ್ನು ಹೊರಹಾಕುತ್ತವೆ. ಈ ವಿರಳ ಕಬ್ಬಿಣದ ಪರಮಾಣುಗಳು ತಮ್ಮನ್ನು ಹೊತ್ತೊಯ್ಯುವ ಅಣುಗಳಿಗೆ ತಮ್ಮನ್ನು ಜೋಡಿಸಿಕೊಳ್ಳುತ್ತವೆ. ಈ ಅಣುಗಳು ಅವುಗಳನ್ನು ನಿಮ್ಮ ಎಲುಬಿನ ನೆಣಕ್ಕೆ ಕೊಂಡೊಯ್ಯುತ್ತವೆ, ಮತ್ತು ಅಲ್ಲಿ ಅವು ಹೊಸ ಕೆಂಪು ರಕ್ತಕಣಗಳ ತಯಾರಿಯಲ್ಲಿ ಉಪಯೋಗಿಸಲ್ಪಡುತ್ತವೆ. ನಿಮ್ಮ ಎಲುಬಿನ ನೆಣವು ಪ್ರತಿ ಕ್ಷಣ 20ರಿಂದ 30 ಲಕ್ಷ ಹೊಸ ಕೆಂಪು ರಕ್ತಕಣಗಳನ್ನು ನಿಮ್ಮ ರಕ್ತಪ್ರವಾಹಕ್ಕೆ ಸೇರಿಸುತ್ತದೆ.
ನಿಮ್ಮ ಕೋಟಿಗಟ್ಟಲೆ ಕೆಂಪು ರಕ್ತಕಣಗಳು ಥಟ್ಟನೆ ಕೆಲಸಮಾಡುವುದನ್ನು ನಿಲ್ಲಿಸಿಬಿಡುವಲ್ಲಿ ನೀವು ಕೆಲವೇ ನಿಮಿಷಗಳಲ್ಲಿ ಸಾಯುವಿರಿ. ನಾವು ಬದುಕಿರಲು ಮತ್ತು ಬದುಕನ್ನು ಆನಂದಿಸಲು ಸಾಧ್ಯಮಾಡುವ ಯೆಹೋವ ದೇವರ ಸೃಷ್ಟಿಯ ಈ ವಿಸ್ಮಯಕರವಾದ ಅಂಶಕ್ಕಾಗಿ ನಾವು ಆತನಿಗೆ ಎಷ್ಟು ಆಭಾರಿಗಳಾಗಿರಬೇಕು! “ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ; ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ” ಎಂದು ಹೇಳಿದ ಕೀರ್ತನೆಗಾರನೊಂದಿಗೆ ನೀವು ಸಮ್ಮತಿಸುತ್ತಿರೆಂಬುದರಲ್ಲಿ ಸಂದೇಹವಿಲ್ಲ.—ಕೀರ್ತನೆ 139:1, 14. (g 1/06)
[ಪುಟ 30ರಲ್ಲಿರುವ ರೇಖಾಕೃತಿ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಕೆಂಪು ರಕ್ತಕಣ
ಪೊರೆ
ಹೀಮಗ್ಲೋಬಿನ್ (ದೊಡ್ಡದಾಗಿ ತೋರಿಸಲ್ಪಟ್ಟಿದೆ)
ಆಮ್ಲಜನಕ