ಮೆಕ್ಸಿಕೊ ಸಿಟಿ ಬೆಳೆಯುತ್ತಿರುವ ರಾಕ್ಷಸ?
ಮೆಕ್ಸಿಕೊದ ಎಚ್ಚರ! ಸುದ್ದಿಗಾರರಿಂದ
“ಮೆಕ್ಸಿಕೊ ಸಿಟಿ . . . ಇನ್ನೂ ಆಶ್ಚರ್ಯಕರವಾಗಿ ಕೆಲಸ ನಡಿಸುವ ಒಂದು ರಾಕ್ಷಸ” ಎಂದರು ಮೆಕ್ಸಿಕನ್ ವಾಸ್ತುಶಿಲ್ಪಿ ಟಿಯೊಡೋರೊ ಗೊನ್ಸಾಲೆಸ್ ಡಿಲಿಯೊನ್. ನ್ಯಾಷನಲ್ ಜಿಯೊಗ್ರಾಫಿಕ್ ಪತ್ರಿಕೆ ಅದನ್ನು “ಭೀತಿಸೂಚಕ ರಾಕ್ಷಕ” ಎಂದು ಕರೆಯಿತು. 30 ವರ್ಷಗಳ ಹಿಂದೆ ಅಲ್ಲಿ ಹುಟ್ಟಿದ್ದ ಕಾರ್ಮೆನ್ ಹೇಳುವುದು: “ಇದು ನಮ್ರ ಜನರ ಗದ್ದಲದ ನಗರ. ಇಲ್ಲಿಯ ಜನರಿಗೆ ಸಂತುಷ್ಟರಾಗಿದ್ದು ತಮ್ಮ ಮೆಚ್ಚಿಕೆಯ ಎಂಚಿಲಾಡ, ಟಮಾಲೀ, ಟೋರ್ಟಿಯ ಮತ್ತು ಮೋಲೀ ಮುಂತಾದ ಮೆಕ್ಸಿಕನ್ ಆಹಾರವನ್ನು ಸವಿದು ಹೀಗೆ ಜೀವನದ ಸರಳ ವಿಷಯಗಳಲ್ಲಿ ಆನಂದಿಸಲು ತಿಳಿದದೆ.”
ಸುಮಾರು 1 ಕೋಟಿ 50 ಲಕ್ಷ ಜನಸಂಖ್ಯೆಯಿರುವ ಮೆಕ್ಸಿಕೊ ಸಿಟಿ ಇಂದು ಲೋಕದ ಅತಿ ದೊಡ್ಡ ನಗರಗಳಲ್ಲಿ ಒಂದಾದರೂ, ಅದು ಶತಮಾನಗಳಿಂದಲೂ ಏಳಿಗೆ ಹೊಂದಿರುವ ರಾಜಧಾನಿಯಾಗಿತ್ತು.a ಅದು ಆರಂಭದಲ್ಲಿ ಸುಮಾರು 1325 ರಲ್ಲಿ ಟೆನಾಕ್ಟೀಟ್ಲನ್ ಎಂಬ ಹೆಸರಿನಿಂದ ಸ್ಥಾಪಿಸಲ್ಪಟ್ಟು, ಆ್ಯಸ್ಟೆಕ್ ಸಾಮ್ರಾಜ್ಯದ ರಾಜಧಾನಿಯಾಯಿತು. ಆ್ಯಸ್ಟೆಕ್ ಜನರು ಟೆಕ್ಸ್ಕಾಕೊ ಸರೋವರದ ಒಂದು ದ್ವೀಪದಲ್ಲಿ ನೆಲೆಸಿದಾಗ ಈ ನಗರವನ್ನು ಕಟ್ಟಲಾರಂಭಿಸಿದರು. ಸಮಯ ಕಳೆದಂತೆ ನಗರವನ್ನು ವಿಸ್ತರಿಸುವ ಉದ್ದೇಶದಿಂದ ಅವರು ಸರೋವರವನ್ನು ಮಣ್ಣಿನಿಂದ ತುಂಬಿಸಿದರೂ, ಇದು ಕಾಲುವೆಗಳ ನಗರವಾಗಿದ್ದು ಸದಾ ನೀರಿನಿಂದ ಆವರಿಸಲ್ಪಟ್ಟಿತ್ತು. 1519 ರಲ್ಲಿ ಸ್ಪೇನಿನ ಜನರು ಬಂದಾಗ ಸುಮಾರು 2,00,000 ದಿಂದ 3,00,000 ನಿವಾಸಿಗಳಿದ್ದ ಈ ನಗರದ ವೈಭವ, ಸೌಂದರ್ಯ, ಮತ್ತು ಸುವ್ಯವಸ್ಥೆಯನ್ನು ಕಂಡು ಅಚ್ಚರಿಪಟ್ಟರು.
ವೈಲಕ್ಷಣ್ಯದ ನಗರ
ಅನೇಕ ದೊಡ್ಡ ನಗರಗಳಂತೆ ಮೆಕ್ಸಿಕೊ ಸಿಟಿಯಲ್ಲಿ ಸಹ ದಾರಿದ್ರ್ಯ, ಪಾತಕಗಳ ದೋಷಪಕ್ಕವಿರುವುದಾದರೂ ಇತರ ಅನೇಕ ವಿಧಗಳಲ್ಲಿ ಇದು ಅತಿ ಆಕರ್ಷಣೀಯ ನಗರ. ಇದರ ಆಶ್ಚರ್ಯಕರವಾದ ಬೆಳವಣಿಗೆ ಅದಕ್ಕೆ “ಅವ್ಯವಸ್ಥಿತ” ಎಂಬ ನಾಮ ವಿಶೇಷಣವನ್ನು ಕೊಟ್ಟರೂ, ವೈಲಕ್ಷಣ್ಯವಾಗಿ, ನಗರದ ಮಧ್ಯದಲ್ಲಿ ಜಗತ್ತಿನ ಅತಿ ದೊಡ್ಡ ಉದ್ಯಾನವನಗಳಲ್ಲಿ ಒಂದಾದ 1,600 ಎಕ್ರೆ ವಿಸ್ತಾರವಿರುವ ಚಪುಲೆಪ್ಟೆಕ್ ಉದ್ಯಾನ ಅಲ್ಲಿದೆ. ಅಲ್ಲಿ ಕಾಡು ಪ್ರದೇಶ, ಅನೇಕ ಸರೋವರಗಳು, ಭೋಜನ ಮಂದಿರಗಳು, ಪುರಾತನ ವಸ್ತುಪ್ರದರ್ಶನ ಶಾಲೆಗಳು ಇರುವುದಲ್ಲದೆ, ಅನೇಕ ಸಾಂಸ್ಕೃತಿಕ ಸಮಾರಂಭಗಳು ಅಲ್ಲಿ ನಡೆಯುತ್ತವೆ. ಒಂದು ಸರೋವರದ ತೀರದ ಪ್ರಾಕೃತಿಕ ಹಿನ್ನೆಲೆಯಲ್ಲಿ ವಾರ್ಷಿಕವಾಗಿ ನಡೆಯುವ ಚೈಕೊಫ್ಸ್ಕಿಯವರ “ಸ್ವಾನ್ ಲೇಕ್” ನರ್ತನ ಮೂಕಾಭಿನಯವು ಒಂದು ಸುಂದರ ಸಂಪ್ರದಾಯ. ವಾರಾಂತ್ಯದಲ್ಲಿ ನಗರ ಬಿಟ್ಟು ಹೋಗಲಾದವರಿಗೆ, ಈ ಉದ್ಯಾನವನ ವಿನೋದ ವಿಹಾರ ಮತ್ತು ಮನೋರಂಜನೆಯ ಪ್ರವಾಸ ಸ್ಥಳವಾಗುತ್ತದೆ.
ನ್ಯೂ ಯಾರ್ಕ್ ಯಾ ಶಿಕಾಗೋ ನಗರಗಳೊಂದಿಗೆ ಸ್ಪರ್ಧಿಸದಿದ್ದರೂ, ಮೆಕ್ಸಿಕೊ ಸಿಟಿಗೆ ತನ್ನದೇ ಆದ ರಾಸ್ಕಸಿಯೆಲೊ ಅಥವಾ ಗಗನಚುಂಬಿ ಕಟ್ಟಡಗಳಿವೆ. 1956ರಲ್ಲಿ ಕಟ್ಟಿ ಮುಗಿಸಿದ 44 ಅಂತಸ್ತುಗಳ ಲ್ಯಾಟಿನ್ ಅಮೆರಿಕನ್ ಟವರ್, ಭೂಕಂಪವನ್ನು ತಡೆದು ನಿಲ್ಲುವಂತೆ ರಚಿಸಲ್ಪಟ್ಟ ಕಟ್ಟಡದ ಮಾದರಿಯಾಗಿದೆ. ಕಟ್ಟಡವನ್ನು ಭೂಕಂಪದ ಚಲನೆಗಳಿಂದ ತಡೆದು ನಿಲ್ಲುವಂತೆ ಮಾಡಲು ಅದನ್ನು 361 ನೇರಾಧಾರದ ಕಂಬಗಳನ್ನು ಹುಗಿದು ರಚಿಸಲಾಗಿದೆ. ಅದರ 40 ಮತ್ತು 41 ನೆಯ ಮಹಡಿಗಳಲ್ಲಿರುವ ಭೋಜನಾಲಯದಿಂದ ನಾವು ನಗರವನ್ನು, ವಿಶೇಷವಾಗಿ ರಾತ್ರಿಯಲ್ಲಿ, ಕಪ್ಪು ಮಖಮಲ್ಲಿನ ಹಿನ್ನೆಲೆಯಲ್ಲಿ ಸಹಸ್ರಾರು ಬೆಳಕುಗಳು ಬೆಳಗುವಾಗ ನೋಡಿ ಶ್ಲಾಘಿಸಬಹುದು. ನಗರದ ಅತಿ ಎತ್ತರದ ಗಗನಚುಂಬಿಯಾದ ಮೆಕ್ಸಿಕೋದ ವರ್ಲ್ಡ್ ಟ್ರೇಡ್ ಸೆಂಟರ್ ಇನ್ನೂ ಮುಗಿದಿರುವುದಿಲ್ಲ. ಅದರಲ್ಲಿ 54 ಮಹಡಿಗಳಿದ್ದು ಲೋಕ ವ್ಯಾಪಾರದ ಅಂತರಾಷ್ಟ್ರೀಯ ಆಫೀಸುಗಳೂ, ಇತರ ಸೌಕರ್ಯಗಳೂ ಅಲ್ಲಿರುವುವು.
ಮೆಕ್ಸಿಕೊ ಸಿಟಿ ಎಷ್ಟರ ಮಟ್ಟಿಗೆ ಬೆಳೆದು ಹಬ್ಬಿದೆಯೆಂದರೆ ಈ ಮೊದಲು ನಗರದ ಹೊರಗಿದ್ದ ಬೆನಿಟೊ ಹ್ವಾರೆಸ್ ಅಂತರಾಷ್ಟ್ರೀಯ ವಿಮಾನಾಗಾರ ಈಗ ಕಾರ್ಯಥಃ ನಗರದ ಮಧ್ಯದಲ್ಲಿದೆ. ಇದು ಜಗತ್ತಿನ ಅತ್ಯಂತ ಕಾರ್ಯಮಗ್ನ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದ್ದು, ತಿಂಗಳಿಗೆ ಸುಮಾರು ಹತ್ತು ಲಕ್ಷ ಜನರನ್ನು ತಂದು ರವಾನಿಸುತ್ತದೆ.
ಮೆಕ್ಸಿಕೊ ಸಿಟಿಯಲ್ಲಿ ವೈದೃಶ್ಯಗಳು ವಿಪರೀತ. ವಿಸ್ತಾರವಾದ ಹಾಗೂ ಸೌಕರ್ಯಭರಿತ ಭವನಗಳು, ಪ್ರತ್ಯೇಕವಾದ ಮತ್ತು ಜಾಸ್ತಿ ಖರ್ಚು ತಗಲುವ ಹೋಟೇಲುಗಳು, ಆಕರ್ಷಕ ವಸತಿ ಗೃಹಗಳು ಮತ್ತು ಅಂಗಡಿ ಸಾಲುಗಳು ಕತ್ತಲೆ ಮತ್ತು ಮಸುಕಾದ ಹೊಲಸುಕೇರಿಗಳೊಂದಿಗಿವೆ. ಆದರೂ ಲೋಕದ ಇತರ ದೊಡ್ಡ ನಗರಗಳಿಗೆ ಅಸದೃಶವಾಗಿ, ಅತಿ ರಾತ್ರಿಯಲ್ಲೂ ಬೀದಿಗಳಲ್ಲಿ ಜನರು ತುಂಬಿರುತ್ತಾರೆ.
ದೊಡ್ಡ ನಗರದ ಸಮಸ್ಯೆಗಳು
ಮೆಕ್ಸಿಕೊ ಸಿಟಿ, ಒಂದು ಹರಡುತ್ತಾ ಇರುವ ಅಷ್ಟಪಾದಿಯಂತೆ ಈಗ 1,000ಕ್ಕಿಂತಲೂ ಹೆಚ್ಚು ಚದರ ಕಿಲೊ ಮೀಟರು ಸ್ಥಳವನ್ನು ಆವರಿಸಿ, ಫೆಡರಲ್ ಡಿಸ್ಟ್ರಿಕ್ಟ್ ಎಂದು ಕರೆಯಲ್ಪಡುವ ಎಲ್ಲವನ್ನೂ ಮತ್ತು ಮೆಕ್ಸಿಕೊ ರಾಜ್ಯದ ಭಾಗವನ್ನೂ ವ್ಯಾಪಿಸಿದೆ. ಹಿಂದೆ ಸ್ವತಂತ್ರವಾಗಿದ್ದ ಅನೇಕ ಹಳ್ಳಿಗಳು ಮತ್ತು ಹೊರವಲಯಗಳು ಈಗ ನಗರದ ಗೃಹಣಾಂಗಗಳೊಳಗೆ ಬಂದಿವೆ.
ಇಷ್ಟು ವಿಸ್ತಾರವಾಗಿರುವ ನಗರ ಮಹಾ ಸಮಸ್ಯೆಗಳನ್ನು ಎದುರಿಸುವುದು ಸ್ವಾಭಾವಿಕ. ಇವುಗಳಲ್ಲಿ ಪ್ರಧಾನವಾದುದು ವಿಪರೀತ ಜನಸಂಖ್ಯೆ ಹಾಗೂ ಅದರ ಪರಿಣಾಮವಾಗಿರುವ ಮಾಲಿನ್ಯ, ವಸತಿಯ ಅಭಾವ, ಜೀವನ ಸಂಪನ್ಮೂಲಗಳ ಗುರುತರದ ಕೊರತೆ ಮತ್ತು ಎಡೆಬಿಡದೆ ವೃದ್ಧಿಯಾಗುತ್ತಿರುವ ಪಾತಕದ ಪ್ರಮಾಣ. ದೇಶದ ಜನನ ಪ್ರಮಾಣವನ್ನು ಕಡಮೆ ಮಾಡುವ ಪ್ರಯತ್ನದಲ್ಲಿ ನಿಯತ ಕ್ರಮದ ಶಿಕ್ಷಣ ಕೊಡಲ್ಪಟ್ಟರೂ, ಮೆಕ್ಸಿಕೊದಲ್ಲಿ ದೊಡ್ಡ ಕುಟುಂಬಗಳು ಸಾಂಸ್ಕೃತಿಕ ಪರಂಪರೆಯಾಗಿರುವುದರಿಂದ, ಅವನ್ನು ಪುರುಷರ ಗಂಡುತನ ಮತ್ತು ಹೆಂಗಸರ ಫಲಶಕ್ತಿಯಾಗಿ ನೋಡಲಾಗುತ್ತದೆ. ಇದಲ್ಲದೆ, ಅನೇಕರು ಹೆಚ್ಚು ಉತ್ತಮ ಜೀವನವನ್ನು ಹುಡುಕುತ್ತಾ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಹೋಗುತ್ತಾರೆ. 1985 ರ ಭೂಕಂಪ ಅನೇಕರು ನಗರವನ್ನು ಬಿಟ್ಟು ಹೋಗುವಂತೆ ಮಾಡಿದರೂ ಜನಸಂಖ್ಯೆ ವೃದ್ಧಿಯಾಗುತ್ತಾ ಇದೆ. ಜನರು ಕೆಲಸವಿರುವಲಿಗ್ಲೆ, ಬದುಕಿ ಉಳಿಯಲು ಹೆಚ್ಚು ಉತ್ತಮ ನಿರೀಕ್ಷೆಯಿರುವಲ್ಲಿಗೆ ಹೋಗುತ್ತಾರೆ.
“ರಾಕ್ಷಸ” ಉಸಿರಾಡಬಲ್ಲನೇ?
ಕಳೆದ ಹತ್ತು ವರ್ಷಗಳಲ್ಲಿ ಮೆಕ್ಸಿಕೊ ಸಿಟಿಯ ಗಾಳಿ ಮಾಲಿನ್ಯ ವಿಷಮ ಸ್ಥಿತಿಗೇರಿದೆ. 1960 ಗಳಲ್ಲಿ ನಗರದ ಒಂದು ವಲಯವನ್ನು “ಅತ್ಯಂತ ಪಾರದರ್ಶಕ ಪ್ರದೇಶ” ವೆಂದು ಕರೆಯಲಾಗುತ್ತಿತ್ತು. ಆದರೆ ಈಗ ಮೆಕ್ಸಿಕೊ ಸಿಟಿಯ ಯಾವ ಭಾಗವೂ ಪಾರದರ್ಶಕವಲ್ಲ. ಮಾಧ್ಯಮಗಳಲ್ಲಿ ಎಚ್ಚರಿಕೆ ನೀಡಲ್ಪಟ್ಟಿದೆ. “ಮೆಕ್ಸಿಕೊ ಕಣಿವೆಯಲ್ಲಿ ವಾಯು ಮಾಲಿನ್ಯ ಅಪಾಯದ ಮಟ್ಟಕ್ಕೇರಿದೆ” ಎಂದಿತು ಒಂದು ವಿಜ್ಞಾನ ಪತ್ರಿಕೆ. ಟೈಮ್ ಪತ್ರಿಕೆ ಹೇಳಿದ್ದು: “ಮೂವತ್ತು ಲಕ್ಷ ಕಾರುಗಳು ಮತ್ತು 7,000 ಡೀಸೆಲ್ ಬಸ್ಸುಗಳು, ಇವುಗಳಲ್ಲಿ ಅನೇಕ ಹಳೆಯವು ಮತ್ತು ರಿಪೇರಿಯಾಗದವು, ಮಾಲಿನ್ಯವನ್ನು ಗಾಳಿಗೆ ಕಾರುತ್ತವೆ. ಹಾಗೆಯೇ, ಮೆಕ್ಸಿಕೊ ದೇಶದ ಉದ್ಯಮಗಳಲ್ಲಿ 50 ಪ್ರತಿಶತಕ್ಕಿಂತಲೂ ಹೆಚ್ಚನ್ನು ಪ್ರತಿನಿಧೀಕರಿಸುವ ಹತ್ತಿರದ ಸುಮಾರು 1,30,000 ಕಾರ್ಖಾನೆಗಳೂ ಕಕ್ಕುತ್ತವೆ. ಪ್ರತಿ ದಿನದ ರಾಸಾಯನಿಕ ಗಾಳಿ ಮಾಲಿನ್ಯದ ಮೊತ್ತ 11,000 ಟನ್ನುಗಳು. ಇದನ್ನು ಉಸಿರಾಡುವುದು ದಿನಕ್ಕೆ ಎರಡು ಪ್ಯಾಕೆಟ್ ಸಿಗರೇಟು ಸೇದುವುದಕ್ಕೆ ಸಮಾನ.”
ಪರಿಸ್ಥಿತಿ ಹೆಚ್ಚು ಕೆಡುತ್ತಾ ಇದೆ. ಅಕ್ಟೋಬರ್ 12, 1989ರ ಎಲ್ ಯೂನಿವರ್ಸಲ್ ವಾರ್ತಾಪತ್ರಿಕೆ, ಅಟಾನಮಸ್ ಇನ್ಸ್ಟಿಟ್ಯೂಟ್ ಆಫ್ ಇಕಲಾಜಿಕಲ್ ಇನ್ವೆಸಿಗ್ಟೇಶನ್ ಸಂಘದ ಡೈರೆಕ್ಟರು ಹೀಗೆ ಹೇಳಿದರೆಂದು ಉಲ್ಲೇಖಿಸಿತು: “ಮೆಟ್ರೊಪಾಲಿಟನ್ ವಲಯದ ಪ್ರತಿ ವ್ಯಕ್ತಿ, ಪ್ರತಿ ದಿನ 580 ಗ್ರ್ಯಾಮ್ [20 ಔನ್ಸ್] ಹಾನಿಕಾರಕ ಗಾಳಿಯನ್ನು ಪಡೆಯುವುದರಿಂದ ಮೆಕ್ಸಿಕೊ ಸಿಟಿಯ ಮಾಲಿನ್ಯ ಪ್ರಮಾಣ ಭೀತಿಸೂಚಕವಾಗಿದೆ.” ಪ್ರತಿ ವರ್ಷ, ಸುಮಾರು ನಾಲ್ವತ್ತು ಲಕ್ಷ ಟನ್ನು ಮಲಿನ ಪದಾರ್ಥವನ್ನು ನಗರದಲ್ಲಿ ವಿಸರ್ಜಿಸಲಾಗುತ್ತದೆ.
ಇತ್ತೀಚೆಗೆ, ಮಾಲಿನ್ಯದ ವಿರುದ್ಧ ಹೋರಾಡಲು ಕೆಲವು ತುರ್ತು ಕ್ರಮಗಳನ್ನು ಕೈಕೊಳ್ಳಲಾಗಿದೆ. ಇಷ್ಟು ಕಾರುಗಳು ನಗರದೊಳಗೆ ಬರುವುದನ್ನು ತಡೆಯಲು ಒಂದು ಏರ್ಪಾಡನ್ನು ಮಾಡಲಾಯಿತು. ಏಕೆಂದರೆ, ಒಂದು ಸರಕಾರಿ ವರದಿಗನುಸಾರ, ಸಾರಿಗೆ ವಾಹನಗಳು ಪ್ರತಿ ದಿನ 9,778.3 ಟನ್ನು ಮಲಿನ ಪದಾರ್ಥಗಳನ್ನು ಉತ್ಪಾದಿಸುತ್ತವೆ.” ಇದರಲ್ಲಿ 7,430 ಟನ್ನು ಖಾಸಗಿ ವಾಹನಗಳಿಂದ ಬರುತ್ತದೆ. ಜನರು ಸ್ವಯಂಪ್ರೇರಿತರಾಗಿ, ಕೆಲಸಕ್ಕೆ ಯಾ ಇತರ ಕಡೆಗಳಿಗೆ ಹೋಗುವಾಗ ಕಾರುಗಳ ಉಪಯೋಗವನ್ನು ಕಡಮೆ ಮಾಡಬೇಕೆಂದೂ, ಒಂದೇ ಕಾರಿನಲ್ಲಿ ಅನೇಕರು ಕುಳಿತು ಹೋಗಬೇಕೆಂದೂ ಜನರನ್ನು ಆಗಲೇ ಆಮಂತ್ರಿಸಲಾಗಿತ್ತು. ಆದರೆ ಇದು ಸಫಲ ಹೊಂದಿರಲಿಲ್ಲ. ಸರಕಾರ ಏನು ಮಾಡಿತು?
ಈಗ “ಒಂದು ದಿವಸ ಕಾರಿಲ್ಲ” ಎಂಬ ಕಾರ್ಯಕ್ರಮದ ಮೂಲಕ ವಾರಕ್ಕೆ ಒಂದು ದಿನ ಸರದಿಯಾಗಿ, ಎಲ್ಲಾ ಖಾಸಗಿ ಕಾರುಗಳು ಅವುಗಳ ರೆಜಿಸ್ಟ್ರೇಶನ್ ಕಾರ್ಡಿನ ಕೊನೆಯ ಅಂಕ ಯಾ ಕಾರಿನ ಬಣ್ಣವನ್ನು ಹೊಂದಿಕೊಂಡು ನಿಷೇಧಿಸಲ್ಪಡುತ್ತವೆ. ಅಂದರೆ ಪ್ರತಿ ದಿನ, ಮೂವತ್ತು ಲಕ್ಷ ಖಾಸಗಿ ಕಾರುಗಳಲ್ಲಿ 20 ಪ್ರತಿಶತವನ್ನು ಉಪಯೋಗಿಸಲಾಗುವುದಿಲ್ಲ. ಆದಿಯಲ್ಲಿ ಈ ಕಾರ್ಯಕ್ರಮವನ್ನು ಕಾವಿನ ವಿಪರ್ಯಯವನ್ನು ತಡೆಯುವ ಉದ್ದೇಶದಿಂದ ಕೇವಲ ಚಳಿಗಾಲದಲ್ಲಿ ಅನ್ವಯಿಸುವಂತೆ ಏರ್ಪಡಿಸಲಾಗಿತ್ತು, ಆದರೆ ಈಗ ಅಧಿಕಾರಿಗಳು ಇದನ್ನು ಕಾಯಂ ಉಪಯೋಗಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಪಾಲಿಸದವರಿಗೆ ತೆರಲು ದೊಡ್ಡ ಜುಲ್ಮಾನೆ ಇರುವುದು ಮಾತ್ರವಲ್ಲ, ವಶಪಡಿಸಲಾಗಿರುವ ಕಾರನ್ನು ಹಿಂದೆ ಪಡೆಯಲು ಉಪದ್ರವಕಾರಿಯಾದ ಕಾರ್ಯವಿಧಾನಗಳೂ ಇವೆ. ಈ ನಿರ್ದಯೆಯ ಕ್ರಮಗಳು ಅಧಿಕಾಂಶ ಡ್ರೈವರುಗಳು ಈ ಕಾರ್ಯಕ್ರಮವನ್ನು ಬೆಂಬಲಿಸುವಂತೆ ಅವರನ್ನು ನಂಬಿಸಿವೆ.
ಗ್ಯಾಸೊಲಿನಿನಲ್ಲಿರುವ ಸೀಸವನ್ನು ಕಡಮೆ ಮಾಡಿ ಅದರ ಗುಣಮಟ್ಟವನ್ನು ಉತ್ತಮಗೊಳಿಸುವಂತೆ ಮಾಡುವುದು ತೆಗೆದುಕೊಂಡಿರುವ ಇನ್ನೊಂದು ಹೆಜ್ಜೆಯಾಗಿದೆ. ಇದಲ್ಲದೆ, ಎಲ್ಲಾ ವಾಹನಗಳು ಮಾಲಿನ್ಯ ವಿಸರ್ಜನೆಯ ಪರೀಕೆಗ್ಷೆ ನಿಯತಕಾಲಿಕವಾಗಿ ಒಳಗಾಗಬೇಕು ಎಂಬುದು ಈಗಿನ ಇನ್ನೊಂದು ಆವಶ್ಯಕತೆ. ಮತ್ತು, ಕಾರ್ಖಾನೆಗಳು ಮಾಲಿನ್ಯವಿರುದ್ಧ ವ್ಯವಸ್ಥೆಗಳನ್ನು ಮಾಡಬೇಕೆಂದು ಹೊಸ ಕಾಯಿದೆಗಳು ಕೇಳಿಕೊಳ್ಳುತ್ತವೆ. ಈ ಕಾಯಿದೆಗಳಿಗೆ ಹೊಂದಿಕೊಳ್ಳದ ಕಾರಣ ಕೆಲವು ಕಾರ್ಖಾನೆಗಳನ್ನು ಮುಚ್ಚಲಾಗಿದೆ. ಈ ಹೆಜ್ಜೆಗಳು ಮಾಲಿನ್ಯದ ಸಮಸ್ಯೆಯನ್ನು ತುಸು ಶಮನ ಮಾಡಿರುವುದಾದರೂ ಇದು ಪರಿಹರಿಸಲ್ಪಟ್ಟಿರುವುದಿಲ್ಲ. ಲೋಕದ ಇತರ ಕಡೆಗಳಂತೆ, ಮೆಕ್ಸಿಕೊ ದೇಶದ ಸಮಸ್ಯೆಗಳಿಗೂ ಒಂದು ವಿಶ್ವ ಪರಿಹಾರ ಮಾರ್ಗ ಅಗತ್ಯ.
ಬೇಗನೆ ಒಂದು ದಿನ, ದೇವರ ಸ್ವರ್ಗೀಯ ಸರಕಾರದ ಆಳಿಕೆಯಲ್ಲಿ, ಮಾನವ ಸಂತತಿ ತನ್ನ ಮೂಲಸಂಪತ್ತನ್ನು ವಿವೇಕದಿಂದ ಉಪಯೋಗಿಸುವುದು, ಮತ್ತು ಎಲ್ಲಾ ಮಾನವರು ಜನನಿಬಿಡವಾದ ನಗರಗಳಲ್ಲಿ ಅಲ್ಲ, ತೆರೆದಿರುವ ಪ್ರದೇಶಗಳಲ್ಲಿ, ಸಂತೋಷದ ಜೀವನಕ್ಕೆ ಬೇಕಾಗುವ ಸಕಲ ಸಂಗತಿಗಳೊಂದಿಗೆ ಆನಂದಿಸಲು ಶಕ್ತರಾಗುವರು. ಆದರೆ ಈ ಮಧ್ಯೆ, ಮೆಕ್ಸಿಕೊ ಸಿಟಿ ನೀಡುವ ಉದಾರ ಮನಸ್ಸಿನ ಜನರ ಮನೋರಂಜಕ ವೈವಿಧ್ಯ ಸಹಿತವಾದ ಅನೇಕ ಉತ್ತಮ ವಸ್ತುಗಳೊಂದಿಗೆ ಒಬ್ಬನು ಅಲ್ಲಿಯ ಜನಸಂದಣಿ ಮತ್ತು ಅನನುಕೂಲಗಳನ್ನೂ ಸಹಿಸಿಕೊಳ್ಳಬೇಕು.—ಪ್ರಕಟನೆ 11:18; 21:1-4. (g91 1/8)
[ಅಧ್ಯಯನ ಪ್ರಶ್ನೆಗಳು]
a 1990 ರ ರಾಷ್ಟ್ರೀಯ ಜನಗಣಿತಿ ಜನಸಂಖ್ಯೆಯ ಹಿಂದಿನ ಅಂದಾಜನ್ನು ಕೆಳಗಿಳಿಸಿದೆ.
[ಪುಟ 21 ರಲ್ಲಿರುವಚಿತ್ರಗಳು]
ಮೆಕ್ಸಿಕೊ ಸಿಟಿಯಲ್ಲಿ ಗಗನಚುಂಬಿಗಳು ಮತ್ತು ವಾಹನ ಸಂಚಾರ