ಈಗಸ್ವು ಜಲಪಾತಗಳು ಹಸುರು ಮೇಲ್ಜಪ್ಪರದ ಮೇಲಿನ ರತ್ನಗಳು
ಬ್ರೆಸೀಲ್ನ ಎಚ್ಚರ! ಸುದ್ದಿಗಾರರಿಂದ
“ದಕ್ಷಿಣ ಅಮೆರಿಕದ ಅತಿ ಗಮನಾರ್ಹ ಪ್ರಾಕೃತಿಕ ಅದ್ಭುತಗಳಲ್ಲಿ ಒಂದು” ಎಂದು ಅರ್ಜೆಂಟೀನ, ಬ್ರೆಸೀಲ್, ಮತ್ತು ಪ್ಯಾರಗ್ವೈ ದೇಶಗಳ ಮೇರೆಗಳು ಕೂಡುವಲ್ಲಿರುವ ಈ ಪ್ರಾಮುಖ್ಯ ಜಲಪಾತಗಳ ವರ್ಣನೆಯನ್ನು ಒಂದು ವಿಶ್ವಕೋಶ ಆರಂಭಿಸುತ್ತದೆ. ಇವುಗಳನ್ನು ವಿಶೇಷ ಆಕರ್ಷಕವಾಗಿ ಮಾಡುವುದು ಅವುಗಳ ಪ್ರಾಕೃತಿಕ ಹಿನ್ನೆಲೆಯಾದ ಒಂದು ಅಕೃಷ್ಟ ಉಷ್ಣವಲಯದ ಕಾಡೇ. ಇವು ನಿಜವಾಗಿಯೂ ಹಸುರು ಹಿನ್ನೆಲೆಯಲ್ಲಿ ಇರಿಸಿರುವ ರತ್ನಗಳು. ದಕ್ಷಿಣ ಅಮೆರಿಕಕ್ಕೆ ಭೇಟಿ ಕೊಡುವ ಯಾತ್ರಿಕರಿಗೆ ಇದು ನೋಡಲೇ ಬೇಕಾಗಿರುವ ಸ್ಥಳವಾಗಿರುವುದರಲ್ಲಿ ಆಶ್ಚರ್ಯವಿಲ್ಲ.
ಗುವರಾನಿ ಭಾಷೆಯಲ್ಲಿ “ಈಗಸ್ವು” ಅಂದರೆ “ಮಹಾ ನೀರು.” ಇದು ಮಹಾ ನೀರೇನೋ ನಿಜ, ಏಕೆಂದರೆ ಈ ಗುಡುಗುವ ಜಲಪಾತಗಳ ಸದ್ದು 30 ಕಿಲೊ ಮೀಟರುಗಳಷ್ಟೂ ದೂರದಲ್ಲಿ ಕೇಳಿಸುತ್ತದೆ. ವರ್ಷದ ಋತುವಿನ ಮೇಲೆ ಹೊಂದಿಕೊಂಡು, ಸುಮಾರು 300 ಪ್ರತ್ಯೇಕ ಜಲಪಾತಗಳು ಒಂದು ದೊಡ್ಡ ಪ್ರಪಾತದ ಮೇಲಿಂದ ದುಮುಕುವುದನ್ನು ನಾವು ಲೆಕ್ಕಿಸಬಹುದು. ಇವುಗಳಲ್ಲಿ ಕೆಲವು ಜಲಪಾತಗಳು ನೇರವಾಗಿ ಒಂದೇ ಸಲ ದುಮುಕುತ್ತವಾದರೂ ಇನ್ನು ಕೆಲವು ಒಂದು ಚಾಚುಬಂಡೆಯ ಮೇಲೆ ದುಮುಕಿ ಆ ಬಳಿಕ ಅಲ್ಲಿಂದ ಕಮರಿಯ ತಳಕ್ಕೆ ದುಮುಕುತ್ತವೆ. ಮಳೆಗಾಲದಲ್ಲಿ ಸುಮಾರು 10,000 ಕ್ಯೂಬಿಕ್ ಮೀಟರ್ ಜಲವು ಒಂದು ಸೆಕೆಂಡಿನಲ್ಲಿ ಕೆಳಗೆ ಹಾರುತ್ತದೆಂದು ಅಂದಾಜು ಮಾಡಲಾಗುತ್ತದೆ. ಇದರ ಪರಿಣಾಮವಾಗಿ, ಕೆಳಗಿರುವ ಬೃಹದಾಕಾರದ ಜಲ ಕಡಾಯಿ ದೊಡ್ಡ ಗಾತ್ರದಲ್ಲಿ ಮಂಜು ಮತ್ತು ತುಂತುರು ಹನಿಗಳನ್ನುಂಟುಮಾಡುವುದರಿಂದ ಸೂರ್ಯ ಪ್ರಕಾಶವಿರುವ ದಿನದಲ್ಲಿ ಅದು ದಿನವಿಡಿ ಅನೇಕ ವರ್ಣಮಯ ಮಳೆ ಬಿಲ್ಲುಗಳನ್ನು ಉಂಟುಮಾಡುತ್ತದೆ.
ಈ ಅದ್ಭುತಕರವಾದ ಪ್ರದರ್ಶನದ ಮುಖ್ಯಾಂಶವು ಯಾತ್ರಿಕರ ಕೈಪಿಡಿಯಲ್ಲಿ “ಇಡೀ ಪ್ರದರ್ಶನದಲ್ಲಿಯೇ ಮಹಾ ವೈಭವದ ಸುತ್ತುನೋಟವಾಗಿರುವ, ಪ್ರಪಾತದ ಸುಮಾರು 90 ಮೀಟರ್ ಎತ್ತರದಿಂದ ಕೆಳಗೆ ದುಮುಕುವ ಹದಿನಾಲ್ಕು ಜಲಪಾತಗಳ ವೃತ್ತವಾದ ಗರ್ಗಾಂಟ ಡೊ ಡಾಯಬೊ (ಪಿಶಾಚನ ಕತ್ತು, ಯಾ ಕಮರಿ).”
ಜಲಪಾತವನ್ನು ನೋಡುವ ಅತ್ಯುತ್ತಮ ವಿಧಾನವು ಪ್ರಾಯಶಃ ಹೆಲಿಕಾಪ್ಟರಿನ ಮಾಲಕವೆ. ಇಂಥ ಸವಾರಿ ಮಾಡಿದ ಬಳಿಕ ಒಬ್ಬ ಯಾತ್ರಿಕನು ಹೇಳಿದ್ದು: ‘ನಮ್ಮ ಪೈಲಟನು, ನಾವು ಕೆಳಗಿನ ಸುಂದರ ದೃಶ್ಯವನ್ನು ಗಣ್ಯ ಮಾಡುವುದನ್ನು ತಿಳಿದು, ಅನೇಕ ವೇಳೆ ಅವನು ಮಾಡುವಂತೆ ಹೆಲಿಕಾಪ್ಟರನ್ನು ಅತಿ ದೂರ ಒಯ್ಯದೆ ಆ ಕಮ್ಮರಿ ಹಳ್ಳವನ್ನು ಅನೇಕ ವೇಳೆ ಹಿಂದೆ ಮುಂದೆ ದಾಟಿಸುತ್ತಾನೆ. ಯೆಹೋವನ ಸೃಷ್ಟಿಕ್ರಿಯೆಗಳ ಈ ಸೋಜಿಗದ ಪ್ರದರ್ಶನವನ್ನು ನಮ್ಮ ಕ್ಯಾಮರ ಮತ್ತು ವಿಡಿಯೋಗಳು ದಾಖಲೆ ಮಾಡುತ್ತಾ ಹೋದವು.’
ಇತರ ಭೇಟಿಕಾರರು ಅವರಿಗಾಗಿ ತಯಾರಿಸಿದ ಅನೇಕ ಕಾಲುದಾರಿ ಮತ್ತು ಹಾದಿಗಳಲ್ಲಿ ಕೇವಲ ನಡೆಯಲು ಇಷ್ಟಪಟ್ಟರು. ಬ್ರೆಸೀಲಿಯನ್ ಪಕ್ಕದಿಂದ ನಮಗೆ ಜಲಪಾತಗಳ ಪೂರ್ತಿ ಭೂದೃಶ್ಯ ಕಾಣಸಿಗುತ್ತದಾದರೂ ಅರ್ಜೆಂಟೀನದ ಬದಿಯಿಂದ ಒಬ್ಬನು ಒಂದೊಂದು ಜಲಪಾತದ ಉದ್ದಕ್ಕೂ ನಡೆದಾಡಬಹುದಲ್ಲದೆ, ಕೆಲವು ಸ್ಥಳಗಳಲ್ಲಿ ಕಾಂಕ್ರೀಟ್ ನಡೆದಾರಿಗಳ ಮೂಲಕ ಒಂದು ದ್ವೀಪದಿಂದ ಇನ್ನೊಂದಕ್ಕೆ ಹೋಗಬಹುದು. ಹೆಚ್ಚಿನ ಭೇಟಿಕಾರರು, ದೂರದ ದಿಗಂತದ ವರೆಗೂ ಚಾಚಿರುವ ಮಹಾ ಮಳೆಗಾಡಿನ ಹುಲುಸಾದ ಹಸುರು ಚೌಕಟ್ಟಿನೊಳಗಿರುವ ಜಲಪಾತಗಳನ್ನು ಸವಿಯುತ್ತಾ ತಮ್ಮ ಕ್ಯಾಮರಗಳನ್ನು ಅವುಗಳ ಮೇಲೆ ಕೇಂದ್ರೀಕರಿಸುವಾಗ ಇವೆರಡನ್ನೂ ಮಾಡುತ್ತಾರೆ.
ಎಚ್ಚರದಿಂದಿರುವ ಪ್ರೇಕ್ಷಕರು ಸ್ವಾಲೊ ಹಕ್ಕಿಗಳನ್ನು, ಅವು ತುಂತುರು ಹನಿಯ ಮೋಡದೊಳಗೂ ಹೊರಗೂ ಹಾರಿ, ಬಳಿಕ ಮರಗಳ ತುದಿಗೇರಿ ಪುನಃ ರಭಸದಿಂದ ಒಳಹೊಗುವಾಗ ನೋಡುವರು. ಅಥವಾ ಅವರು, ನೀರು ಅಷ್ಟು ಆಳವಾಗಿಲ್ಲದ ಜಲಪಾತದ ಮೇಲ್ಭಾಗದಲ್ಲಿ ಅದರ ಒಳಗೆ ದುಮುಕಿ ಆ ಬಳಿಕ ಪ್ರಪಾತದ ಅಂಚಿನಲ್ಲಿದ್ದು, ಪುನಃ ಥಟ್ಟನೆ ಮೇಲೆ ಕಾಣಿಸಿಕೊಂಡು ಮರಗಳ ಮೇಲ್ಭಾಗಕ್ಕೆ ಹಾರಿ ಹೋಗಿ ಅಲ್ಲಿ ತಮ್ಮನ್ನು ಬಾಚಿಕೊಳ್ಳುವ ಚೀರಾಡುವ ಪಚ್ಚೆ ಗಿಳಿಗಳ ಗುಂಪನ್ನು ನೋಡಬಲ್ಲರು. ಮತ್ತು ಭೇಟಿಕಾರರು ಇನ್ನೂ ಸೂಕ್ಷ್ಮವಾಗಿ ನೋಡುವಲ್ಲಿ ಗದ್ದಲ ಮಾಡುವ ಜೇಡರ ಹಕ್ಕಿ ಜಾತಿಯ ಕೆಂಪು ಪೃಷ್ಠದ ಕಸೀಕ್ ಹಕ್ಕಿಗಳ ನೇತಾಡುವ ದೊಡ್ಡ ಗೂಡುಗಳನ್ನು ನೋಡಬಹುದು. ಈ ಹಕ್ಕಿಗಳು ಹಿಂಡಾಗಿ ಜೀವಿಸುತ್ತವೆ, ಮತ್ತು ಉದ್ದದ ಹುಲ್ಲಿನ ದಾರದಿಂದ ಮಾಡಿರುವ ಅವುಗಳ ಗೂಡುಗಳು ಮರಗಳ ಕೆಳರೆಂಬೆಗಳಿಂದ ತೂಗಾಡುತ್ತವೆ. ಇವಲ್ಲದೆ, ಅನೇಕ ವಿಧದ ಪತಂಗ ಹುಳುಗಳು ಈ ಜಲಪಾತದ ಭೇಟಿಗೆ ವರ್ಣರಂಜಿತ ಶೈಲಿಯನ್ನು ಒದಗಿಸುತ್ತವೆ.
ಈಗಸ್ವು ಜಲಪಾತವನ್ನು ಪೂರ್ಣ ರೀತಿಯಲ್ಲಿ ಗಣ್ಯ ಮಾಡಲು ಅದನ್ನು ನೋಡಿ ಕೇಳಬೇಕೆಂಬುದು ಸತ್ಯ. ಈ ಅಗಾಧ ಪ್ರಾಕೃತಿಕ ಸೌಂದರ್ಯಕ್ಕೆ ಹಿನ್ನೆಲೆಯಾಗಿರುವ, 1939ರಲ್ಲಿ ರಚಿಸಿದ ಬ್ರೆಸೀಲಿನ ಈಗಸ್ವು ನ್ಯಾಷನಲ್ ಪಾರ್ಕಿಗೆ ಪ್ರತಿ ವರ್ಷ, ಸಾವಿರಾರು ಪ್ರವಾಸಿಗಳು ಭೇಟಿ ಕೊಡುತ್ತಾರೆ. ಅವರು ಇದರಿಂದ ನಿರಾಶರಾಗುವುದಿಲ್ಲ; ಮತ್ತು ನಿಮ್ಮ ಮುಂದಿನ ದಕ್ಷಿಣ ಅಮೆರಿಕದ ಪ್ರವಾಸದಲ್ಲಿ ಇದನ್ನು ಸೇರಿಸುವಲ್ಲಿ ನೀವೂ ಆಶಾಭಂಗ ಹೊಂದದೆ ಇರುವಿರಿ. (g91 1/22)
[ಪುಟ 10,11 ರಲ್ಲಿರುವ ಚೌಕ/ಚಿತ್ರಗಳು]
(For fully formatted text, see publication)
ಪ್ಯಾರಗ್ವೈ
ಈಗಸ್ವು ಜಲಪಾತಗಳು
ಅರ್ಜೆಂಟೀನ
ಬ್ರೆಸೀಲ್