ಮನುಷ್ಯ ಮತ್ತು ಮೃಗದ ಮಧ್ಯೆ ಶಾಂತಿಗೆ ಇರುವ ತಡೆಗಳು
ಈ ಪತ್ರಿಕೆಯ ಹೊದಿಕೆಯಲ್ಲಿರುವ ಚಿತ್ರದಂಥ ಚಿತ್ರಗಳು ಮಕ್ಕಳಿಗೆ ಆನಂದದಾಯಕ. ಇಂಥ ದೃಶ್ಯಗಳಿಗೆ ಅನೇಕ ವೇಳೆ ವಯಸ್ಕರೂ ಆಕರ್ಷಿತರಾಗುತ್ತಾರೆ.
ಮಾನವರು ಇಂಥ ಪ್ರತಿಕ್ರಿಯೆ ತೋರಿಸುವುದೇಕೆ? ಮನುಷ್ಯ ಮತ್ತು ಅತಿ ಕ್ರೂರ ಮೃಗದ ಮಧ್ಯೆ ಸಹ ನೈಜ ಶಾಂತಿಯು ಕೇವಲ ಶಿಶುಸಹಜ ಸ್ವಪ್ನವೆ? ಅಥವಾ ಅದು ವಾಸ್ತವವಾದೀತೆ?
ಮಾನವನು ಒಂದು ತಡೆ
ಇಂಥ ಶಾಂತಿಗಿರುವ ಒಂದು ದೊಡ್ಡ ತಡೆ ಮನುಷ್ಯನು ತಾನೆ. “ಮಾನವನು ಇನ್ನೊಬ್ಬ ಮಾನವನ ಮೇಲೆ ಹಾನಿಗಾಗಿ ಅಧಿಕಾರ ನಡೆಸಿದ್ದಾನೆ” ಎನ್ನುತ್ತದೆ ಒಂದು ಪುರಾತನ ನಾಣ್ಣುಡಿ. (ಪ್ರಸಂಗಿ 8:9, NW) ಮತ್ತು ತನ್ನ ಸ್ವಂತ ಜಾತಿಗೆ ಹಾನಿ ಮಾಡುವ ಈ ಇತಿಹಾಸ, ಅವನು ಪ್ರಾಣಿಗಳೊಂದಿಗೆ ಮಾಡುವ ಅವನ ವ್ಯವಹಾರದಲ್ಲಿಯೂ ಪ್ರತಿಬಿಂಬಿತವಾಗಿದೆ.
ದೃಷ್ಟಾಂತಕ್ಕೆ, ಪುರಾತನ ಕಾಲದ ರೋಮಿನಲ್ಲಿ, ಅನೇಕಾನೇಕ ಕಾಡುಮೃಗಗಳನ್ನು ಹಿಡಿದು ಮಲ್ಲರಂಗದಲ್ಲಿ ಅವು ಹೋರಾಡುವಂತೆ ಮಾಡಲಾಗುತ್ತಿತ್ತು. ಸಾ.ಶ. 106ರಲ್ಲಿ ರೋಮನ್ ಚಕ್ರವರ್ತಿ ಟ್ರೇಜನನು ಒಂದು ಆಟವನ್ನು ಏರ್ಪಡಿಸಿದನೆಂದೂ, ಅದರಲ್ಲಿ ಕ್ರೌರ್ಯದಾಹಿ ಪ್ರೇಕ್ಷಕರ ರಕ್ತದಾಹವನ್ನು ತಣಿಸಲು 10,000 ಖಡ್ಗಮಲ್ಲರೂ 11,000 ಮೃಗಗಳೂ ಕೊಲ್ಲಲ್ಪಟ್ಟವೆಂದೂ ವರದಿಯಾಗಿತ್ತು.
ಹೌದು, ಈ ನಿರ್ದಿಷ್ಟ ರೀತಿಯ ಮನೋರಂಜನೆ ಇಂದು ಶೈಲಿಯಲ್ಲಿಲ್ಲವೆಂಬುದು ನಿಜ. ಆದರೆ, ಅಳಿದಿರುವ ಮತ್ತು ಅಪಾಯಕ್ಕೊಳಗಾಗಿರುವ ಪ್ರಾಣಿಜಾತಿಗಳ ಬೆಳೆಯುತ್ತಿರುವ ಪಟ್ಟಿಯು, ಮನುಷ್ಯನು ಕಾಡುಮೃಗಗಳನ್ನು ನೋಡಿಕೊಳ್ಳುವ ವಿಧದಲ್ಲಿ ಏನೋ ತಪ್ಪು ಇದೆ ಎಂದು ತೋರಿಸುತ್ತದೆ. ಮಾನವ ಜನಸಂಖ್ಯೆ ಸ್ಫೋಟಗೊಳ್ಳುವಾಗ ಕಾಡುಮೃಗಗಳ ಇರುನೆಲೆ ಕಮ್ಮಿಯಾಗುತ್ತದೆ. ಮತ್ತು ಮಾನವ ಲೋಭದ ಕಾರಣ, ವಿಚಿತ್ರ ಸೌಂದರ್ಯದ ಮೃಗಚರ್ಮ, ಕೊಂಬು, ಮತ್ತು ದಂತಗಳಿಗೆ ಗಿರಾಕಿ ಇದೆ. ಅತಿ ದೊಡ್ಡ ಮೃಗಜಾತಿಗಳ ನಮೂನೆಗಳು ಅಂತಿಮವಾಗಿ ಮೃಗಶಾಲೆಗಳಲ್ಲಿ ಮಾತ್ರ ಇರುವುವೆಂದು ಕೆಲವು ಪರಿಣತರ ಭಯ.
ನರಭಕ್ಷಕ ಮೃಗಗಳು
ಶಾಂತಿಗೆ ಇನ್ನೊಂದು ತಡೆ ಕೆಲವು ವನ್ಯಮೃಗಗಳು ತಾವೇ ಎಂದು ತೋರಬಹುದು. ಏಷ್ಯಾ ಮತ್ತು ಆಫ್ರಿಕದಲ್ಲಿ, ಮನುಷ್ಯರ ಮೇಲೆ ಬಿದ್ದು ಅವರನ್ನು ಕೊಂದ ಕಾಡುಮೃಗಗಳ ವಿಷಯ ಓದುವುದು ಅಸಾಮಾನ್ಯವಲ್ಲ. ದ ಗಿನೆಸ್ ಬುಕ್ ಆಫ್ ಆ್ಯನಿಮಲ್ ಫ್ಯಾಕ್ಟ್ಸ್ ಆ್ಯಂಡ್ ಫೀಟ್ಸ್ ಹೇಳುವುದೇನಂದರೆ, ಬೆಕ್ಕಿನ ಕುಟುಂಬದ ಸದಸ್ಯರು, “ವಾರ್ಷಿಕವಾಗಿ ಪ್ರಾಯಶಃ ಸುಮಾರು 1000 ಮರಣಗಳಿಗೆ ಕಾರಣವಾಗುತ್ತವೆ.” ಭಾರತದಲ್ಲಿಯೆ, ಹುಲಿಗಳು ಪ್ರತಿ ವರ್ಷ 50 ಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತವೆ. ಕೆಲವು ಚಿರತೆಗಳು ಭಾರತದಲ್ಲಿ ನರಭಕ್ಷಕಗಳೂ ಆಗಿವೆ.
ಡೇಂಜರಸ್ ಟು ಮ್ಯಾನ್ ಎಂಬ ತನ್ನ ಪುಸ್ತಕದಲ್ಲಿ, ರಾಜರ್ ಕಾರಸ್ ಹೇಳುವುದೇನಂದರೆ ಕೆಲವು ಸಲ ಚಿರತೆಗಳು ನರರನ್ನು ತಿನ್ನಲು ಆರಂಭಿಸುವುದು ಸಾಂಕ್ರಾಮಿಕ ರೋಗಗಳ ಸಮಯ ಕೊಳೆತ ಮೃತ ಮಾನವ ಶರೀರಗಳನ್ನು ತಿನ್ನುವ ಮೂಲಕವೆ. ಇಂಥ ವ್ಯಾಧಿಗಳನ್ನು “ಮನುಷ್ಯ ಮಾಂಸಕ್ಕೆ ತಮಗಿರುವ ಹೊಸ ರುಚಿಯ ಕಾರಣ ಕೊಲಲ್ಲಾರಂಭಿಸಿದ ಚಿರತೆಗಳ ಭಯವಿರುವ ತಿಂಗಳುಗಳು ಅನುಸರಿಸಿ ಬರುತ್ತವೆ” ಎಂದವನು ವಿವರಿಸುತ್ತಾನೆ.
ಆದರೆ ಸಾಂಕ್ರಾಮಿಕ ರೋಗಗಳೆ ಚಿರತೆಗಳ ಎಲ್ಲ ಆಕ್ರಮಣಕ್ಕೆ ಕಾರಣವಲ್ಲ ಎಂದು ಕಾರಸ್ ಗಮನಿಸುತ್ತಾರೆ. ಚಿರತೆಯು ವಿಶೇಷವಾಗಿ ಮಕ್ಕಳ ಸಮೀಪವಿರುವಾಗ ಅದರ ಉದ್ರೇಕ ಸ್ವಭಾವವು ಇನ್ನೊಂದು ಕಾರಣ.
ಭಾರತದಲ್ಲಿ ಒಂದು ಚಿರತೆ, 1918-26ರ ವರ್ಷಗಳಲ್ಲಿ 125 ಜನರನ್ನು ಕೊಂದಿತೆಂದು ದ ಮ್ಯಾನ್-ಈಟಿಂಗ್ ಲೆಪರ್ಡ್ ಆಫ್ ರುದ್ರಪ್ರಯಾಗ್ ಎಂಬ ಪುಸ್ತಕದಲ್ಲಿ ಕರ್ನೆಲ್ ಜೆ. ಕಾರ್ಬೆಟ್ ವರದಿ ಮಾಡಿದ್ದಾರೆ. ದಶಕಗಳು ಕಳೆದ ತರುವಾಯ, ನರಭಕ್ಷಕ ಚಿರತೆಗಳು ಭಾಗಲ್ಪುರ ಜಿಲ್ಲೆಯಲ್ಲಿ ಕಡಮೆ ಪಕ್ಷ 82 ಜನರನ್ನಾದರೂ ಕೊಂದವು.
ಟಾಂಗನ್ಯಿಕ (ಈಗ ಟಾನ್ಸೆನೀಯದ ಭಾಗ) ದಲ್ಲಿ ಒಬ್ಬ ಬೇಟೆ ಕಾವಲುಗಾರನು, ತಾನು 1950 ರಲ್ಲಿ, ರುಪೊಂಡ ಹಳ್ಳಿಯ ಸುತ್ತಮುತ್ತ ಜನರನ್ನು ಭಯಭೀತಿಗೊಳಪಡಿಸಿದ ಒಂದು ಚಿರತೆಯನ್ನು ಗುಂಡಿಕ್ಕಿ ಕೊಲ್ಲುವ ಪ್ರಯತ್ನದಲ್ಲಿ ಅಸಫಲನಾದುದನ್ನು ತಿಳಿಸಿದನು. ಕ್ರಮೇಣ, 18 ಮಕ್ಕಳನ್ನು ಕೊಂದ ಬಳಿಕ ಅದನ್ನು ಆಫ್ರಿಕದ ಒಬ್ಬ ಹಳ್ಳಿಗನು ಬೋನಿಗೆ ಬೀಳಿಸಿದನು. ಇನ್ನೊಂದು ಚಿರತೆ ಮಾಸಗುರು ಹಳ್ಳಿಯಲ್ಲಿ 26 ಮಂದಿ ಸ್ತ್ರೀಯರನ್ನೂ ಮಕ್ಕಳನ್ನೂ ಕೊಂದಿತು.
ಇದಲ್ಲದೆ, ಆಫ್ರಿಕದ ಸಿಂಹವಿದೆ. ಅದು ನರಭಕ್ಷ್ಯಕ್ಕೆ ತಿರುಗುವಾಗ, ಅನೇಕ ವೇಳೆ ಅದಕ್ಕೆ ಬಲಿಯಾಗುವವರು ವಯಸ್ಕ ಪುರುಷರು. ಸಿ. ಐಯೊನೀಡಿಸ್ ಎಂಬವರು, ಮ್ಯಾಂಬಸ್ ಆ್ಯಂಡ್ ಮ್ಯಾನ್-ಈಟರ್ಸ್ ಎಂಬ ಪುಸ್ತಕದಲ್ಲಿ ಬರೆಯುವುದು: “ಬೇಟೆ ಕಾವಲಿನ ಇಲಾಖೆಯಲ್ಲಿ ನಾನು ಕಳೆದ ಇಪ್ಪತ್ತಮೂರು ವರ್ಷಗಳಲ್ಲಿ, ನಾನು ನಲವತ್ತಕ್ಕೂ ಹೆಚ್ಚು ಸಿಂಹಗಳನ್ನು ಗುಂಡಿಕ್ಕಿ ಕೊಂದೆ. ಇವುಗಳಲ್ಲಿ ಹೆಚ್ಚಿನವು ಆಗಲೆ ನರಭಕ್ಷ್ಯಕ್ಕೆ ತಿರುಗಿದ್ದವು. ಉಳಿದವು ಒಂದೇ ನರಭಕ್ಷಕವಾಗಲಿದ್ದವು ಇಲ್ಲವೆ ಜಾನುವಾರುಗಳ ಮೇಲೆ ಆಗಲೇ ದಾಳಿಮಾಡುವವುಗಳಾಗಿದ್ದವು.” ಐಯೊನೀಡಿಸ್ ಅವರಿಗನುಸಾರ, ಸಿಂಹಗಳು ಮನುಷ್ಯರಿಗೆ ಅಪಾಯಕಾರಿಗಳಾಗುವುದು, ಮನುಷ್ಯರು ಅವುಗಳ ಮಾಮೂಲಿ ಆಹಾರವನ್ನು ತೀರಾ ಕಡಮೆ ಮಾಡುವಾಗ.
ಭೂವ್ಯಾಪಕ ಶಾಂತಿ ಮುಂತಿಳಿಸಲ್ಪಟ್ಟದ್ದು
ಮಾನವ ಮತ್ತು ಮೃಗದ ಮಧ್ಯೆ ಇರುವ ಇಂಥ ತಡೆಯ ಎದುರಿನಲ್ಲೂ ಬೈಬಲು, “ನರಜಾತಿಯು ಸಕಲ ಜಾತಿಯ ಮೃಗ . . . ಗಳನ್ನು ಹತೋಟಿಗೆ ತರುವದುಂಟು ಮತ್ತು ತಂದದ್ದುಂಟು” ಎಂದು ಹೇಳುತ್ತದೆ.—ಯಾಕೋಬ 3:7.
ಯೆಹೆಜ್ಕೇಲ 34:25 ರಲ್ಲಿ ಬೈಬಲು ಮುಂತಿಳಿಸುವುದು: “ನಾನು [ದೇವರು] ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ದುಷ್ಟಮೃಗಗಳು ದೇಶದಲ್ಲಿ ಇನ್ನಿರದಂತೆ ಮಾಡುವೆನು; ನನ್ನ ಜನರು ಕಾಡಿನಲ್ಲಿ ನಿರ್ಭಯವಾಗಿ ವಾಸಿಸುವರು, ಅರಣ್ಯದಲ್ಲಿ ಹಾಯಾಗಿ ನಿದ್ರಿಸುವರು.”
ಇಂಥ ಬೈಬಲ್ ಪ್ರವಾದನೆಗಳು ಕೇವಲ ಅವಾಸ್ತವಿಕವಾದ ಸ್ವಪ್ನವೆ? ಮನುಷ್ಯ ಮತ್ತು ಮೃಗದ ಮಧ್ಯೆ ಭೂವ್ಯಾಪಕವಾದ ಶಾಂತಿಯ ಪ್ರತೀಕ್ಷೆಯನ್ನು ನಿರಾಕರಿಸುವ ಮೊದಲು, ಬೈಬಲ್ ಹೇಳುವ ಸತ್ಯತೆಯನ್ನು ಸೂಚಿಸುವ ಕೆಲವು ಸೂಚನೆಗಳನ್ನು ಪರಿಗಣಿಸಿರಿ. ಪರಾಮರಿಸುವ ಮಾನವರು ಮತ್ತು ಅಪಾಯ ಮಾಡುವ ಸಾಮರ್ಥ್ಯವುಳ್ಳ ಮೃಗಗಳ ಮಧ್ಯೆ ಇರುವ ಸಾಮರಸ್ಯದ ಕುರಿತ ಕೆಲವು ಅಚ್ಚರಿಗೊಳಿಸುವ ಮಾದರಿಗಳನ್ನು ದಾಖಲೆ ಮಾಡಲಾಗಿದೆ. (g91 4/8)