ಮನುಷ್ಯನೂ ಮೃಗವೂ ಶಾಂತಿಯಿಂದ ಜೀವಿಸಬಲ್ಲರೆ?
“ಪ್ರಮೋದವನದ ಬಾಗಲಲ್ಲಿ ನಿಂತ ಅನುಭವ ನನಗಾಯಿತು; ಮನುಷ್ಯ ಮತ್ತು ಮೃಗ ಅಲ್ಲಿ ಭರವಸೆಯ ಏಕತೆಯಲಿದ್ದರು.” ಕೆನ್ಯ ದೇಶದ ಯೂರ ನದಿಯ ತೀರದಲ್ಲಿ, ವಿವಿಧ ಪಕ್ಷಿಗಳೂ ಪ್ರಾಣಿಗಳೂ ನೀರು ಕುಡಿಯಲು ಬರುವ ದೃಶ್ಯವನ್ನು ಜೈ ಆ್ಯಡಮ್ಸನ್ ಹೀಗೆ ವರ್ಣಿಸಿದರು. ಆ ದೃಶ್ಯದ ಒಂದು ಆಕರ್ಷಕ ಭಾಗವು ಅವರ ಪಕ್ಕದಲ್ಲಿ ಶಾಂತತೆಯಿಂದ ಕುಳಿತಿದ್ದ ಪ್ರಾಣಿಯು—ಪೂರ್ತಿ ಬೆಳೆದಿದ್ದ ಸಿಂಹಿಣಿಯಾಗಿತ್ತು!
ಜೈ ಆ್ಯಡಮ್ಸನ್ ಬರೆದ ಬಾರ್ನ್ ಫ್ರೀ ಎಂಬ ಪುಸ್ತಕದ ಮೂಲಕ ಕೋಟ್ಯಂತರ ಜನರು ತಿಳಿದಿದ್ದ ಎಲ್ಸ ಎಂಬ ಈ ನಿರ್ದಿಷ್ಟ ಸಿಂಹಿಣಿಯಲ್ಲಿ ಏನಾದರೂ ವಿಶೇಷತೆಯಿತ್ತೆ? ಇಲ್ಲ, ಅದು ಸಾಮಾನ್ಯ ಸಿಂಹಿಣಿ. ವ್ಯತ್ಯಾಸವೇನಂದರೆ ಈ ಸಿಂಹಿಣಿ ಮನುಷ್ಯರೊಂದಿಗೆ ಶಾಂತಿಯಿಂದ ಜೀವಿಸಲು ಕಲಿತಿತ್ತು.
ಸಮಯಾನಂತರ, ಬಾರ್ನ್ ಫ್ರೀ ಚಲನ ಚಿತ್ರವನ್ನು ಮಾಡಿದಾಗ, ಎಲ್ಸಳ ಪಾತ್ರ ವಹಿಸಲು ಅನೇಕ ಸಾಧು ಸಿಂಹಿಣಿಗಳನ್ನು ಉಪಯೋಗಿಸಲಾಯಿತು. ಒಂದರ ಹೆಸರು ಮಾರ. ಅದು ಮೊದಲಾಗಿ ಸಂಶಯ ಪಟ್ಟರೂ, ಬಳಿಕ, ತನ್ನ ಮಾನವ ಸ್ನೇಹಿತರನ್ನು ಕಣ್ಣಿಗೆ ಮರೆಯಾಗಲು ಬಿಡದೆ ತುಂಬ ಸ್ವಾಧೀನ ಭಾವವನ್ನು ತೋರಿಸಿತು. ಅದನ್ನು ಶಾಂತಪಡಿಸಲು ಜೈಯ ಪತಿ ಜಾರ್ಜ್ ಆ್ಯಡಮ್ಸನ್ ತನ್ನ ಡೇರೆಯನ್ನು ಮಾರಳ ಆವರಣಕ್ಕೆ ತಾಗಿಸಿ ಹಾಕಿದರು. ಕ್ರಮೇಣ, ತನ್ನ ಡೇರೆಯನ್ನು ನೇರವಾಗಿ ಅದರ ಆವರಣದೊಳಗೆ ತುಂಬ ಹಾಕಿದರು! ಅವರು ತನ್ನ ಬ್ವಾನ ಗೇಮ್ ಎಂಬ ಪುಸ್ತಕದಲ್ಲಿ ಬರೆದುದು: “ಮುಂದಿನ ಮೂರು ತಿಂಗಳಲ್ಲಿ, ಅದು ಕ್ರಮವಾಗಿ [ನನ್ನ ಡೇರೆಯ] ಒಳಗೆ, ಸಾಧಾರಣವಾಗಿ ನನ್ನ ಮಂಚದ ಪಕ್ಕದಲ್ಲಿ ನೆಲದ ಮೇಲೆ ಮತ್ತು ಕೆಲವು ಸಲ ಮಂಚದಲ್ಲಿ ಮಲಗುತ್ತಿತ್ತು. . . . ನನ್ನ ಸ್ವಂತ ರಕ್ಷೆಯ ವಿಷಯದಲ್ಲಿ ನನಗೆ ಅದು ಚಿಂತೆಯನ್ನೂ ಕೊಡಲಿಲ್ಲ.”
ಶ್ರೀ ಆ್ಯಡಮ್ಸನ್ ಬರೆದುದು: “ನಮ್ಮ ಆಟಗಳಲ್ಲಿ ಒಂದು ಪ್ರಿಯ ಆಟವು, ನಾನು ಸ್ವಲ್ಪ ಹುಲ್ಲಿನ ಹಿಂದೆ ನೆಲದ ಮೇಲೆ ಸಮತಲವಾಗಿ ಮಲಗುವುದು. ಆಗ ಮಾರ ಮಹಾ ರಹಸ್ಯದಲ್ಲಿ, ಸಿಂಹದೋಪಾದಿ, ಹೊಟ್ಟೆಯನ್ನು ನೆಲದಲ್ಲಿ ಎಳೆಯುತ್ತ ಬೇಟೆಯಾಡುತ್ತ ಬಂದು, ಕೊನೆಗೆ ಮಿಂಚಿನೋಪಾದಿ ನೆಗೆದು ನನ್ನ ಮೇಲೆ ಬಂದು ಬೀಳುತ್ತಿತ್ತು. ಆದರೆ ಅದರ ಬಲಾಢ್ಯ ಪಂಜದ ವಿಷಯದಲ್ಲಿ ಅದು ಸದಾ ನಿಯಂತ್ರಣವನ್ನು ಇಟ್ಟುಕೊಳ್ಳುತ್ತಿತ್ತು ಮತ್ತು ನನಗೆ ಎಂದೂ ನೋವು ಮಾಡಲಿಲ್ಲ.”
ಎಲ್ಸಳ ಪಾತ್ರ ವಹಿಸಿದ ಇನ್ನೊಂದು ಸಿಂಹಿಣಿಯ ಹೆಸರು ಗರ್ಲ್. ಚಲನ ಚಿತ್ರ ಮಾಡಿ ಮುಗಿಸಿದಾಗ, ಗರ್ಲನ್ನು ಕಾಡಿಗೆ ಹಿಂದೆ ಕಳುಹಿಸಲಾಯಿತು. ಅಲ್ಲಿ ಅದು ಗಂಡನ್ನು ಕೂಡಿ ಎರಡು ಮರಿಗಳನ್ನು ಹಾಕಿತು. ಅದರ ಹಕ್ಕೆಯನ್ನು ಆ್ಯಡಮ್ಸನ್ ಅವರ ಸ್ನೇಹಿತರಲ್ಲಿ ಇಬ್ಬರು ಕಂಡು ಹಿಡಿದರು. ಆ್ಯಡಮ್ಸನ್ ಬರೆದುದು: “ಗಮನಾರ್ಹವಾದ ಭರವಸ ಮತ್ತು ಒಳ್ಳೆಯ ಪ್ರಕೃತಿಯಿಂದ, ಗರ್ಲ್, ಬಹಳ ಅಪಾಯದ ಎದುರಿನಲ್ಲಿಯೂ ಮುಂದೆ ಬರುತ್ತಿದ್ದ ಈ ಇಬ್ಬರು ಪುರುಷರನ್ನು ಕೆಲವೇ ಅಡಿಗಳಷ್ಟೂ ಹತ್ತಿರ ಬರುವಂತೆ ಬಿಟಳ್ಟು . . . ಈ ಸಿಂಹದ ವರ್ತನೆ ಹೆಚ್ಚು ಗಮನಾರ್ಹವಾಗಿತ್ತು, ಏಕೆಂದರೆ [ಪುರುಷರಲ್ಲಿ ಒಬ್ಬನು] ಅದಕ್ಕೆ ತೀರಾ ಅಪರಿಚಿತನಾಗಿದ್ದನು.” ಆ್ಯಡಮ್ಸನರ ವಿಷಯ ಹೇಳುವುದಾದರೆ, ಗರ್ಲ್, ಇತರ ಸಿಂಹಗಳನ್ನು ಓಡಿಸಿ ಬಿಟ್ಟರೂ, ಅವರಿಗೆ ತನ್ನ ಮರಿಗಳನ್ನು ಮುಟ್ಟಲಿಕ್ಕೂ ಅನುಮತಿಸಿದಳು.
ಕ್ರೂರ ಸ್ವಭಾವದ ಸಿಂಹವನ್ನು ಪಳಗಿಸುವುದು
ವೈಲಕ್ಷಣ್ಯದಲ್ಲಿ ಒಂದು ಸಿಂಹ ಇನ್ನೊಂದಕ್ಕಿಂತ ವಿಭಿನ್ನ. ಜೈ ಆ್ಯಡಮ್ಸನ್ ಎಲ್ಸಳನ್ನು ಬೆಳೆಸುತ್ತಿದ್ದಾಗ, ಉತ್ತರ ರೊಡೇಸ್ಯ (ಈಗ ಜಾಂಬಿಯ) ದಲ್ಲಿ ಬೇಟೆ ರಕ್ಷಕ, ನಾರ್ಮನ್ ಕಾರ್, ಎರಡು ಗಂಡು ಮರಿಗಳನ್ನು ಬೆಳೆಸುತ್ತಿದ್ದರು. ಅವುಗಳಲ್ಲಿ ಬಿಗ್ ಬೈ ಎಂಬ ಒಂದು ಮರಿ ತೀರಾ ಸ್ನೇಹಭಾವ ತೋರಿಸಿದರೂ ಲಿಟ್ಲ್ ಬೈ ಎಂಬ ಇನ್ನೊಂದು ಮರಿ ಮುನಿಸು ಸ್ವಭಾವದ್ದಾಗಿತ್ತು. ಈ ಲಿಟ್ಲ್ ಬೈಯ ಕುರಿತು ಕಾರ್ ತನ್ನ ರಿಟರ್ನ್ ಟು ದ ವೈಲ್ಡ್ ಎಂಬ ಪುಸ್ತಕದಲ್ಲಿ ಬರೆದುದು:
“ಲಿಟ್ಲ್ ಬೈ ಈ ಸಿಡುಕಿನಲ್ಲಿರುವಾಗ, ನಾನು ಅವನ ಹರಿತ ಪಂಜದ ಬಲಿಷ್ಟ ಹೊಡೆತ ಮುಟ್ಟುವ ಕ್ಷೇತ್ರಕ್ಕಿಂತ ದೂರದಲ್ಲಿ ಅದರ ಬಳಿ ಕುಳಿತುಕೊಳ್ಳುತ್ತೇನೆ. ನಾನು ಅದರೊಂದಿಗೆ ಶಾಂತ ಸರ್ವದಲ್ಲಿ ಮಾತನಾಡುತ್ತ ಮೆಲ್ಲ ಮೆಲ್ಲನೆ ಹತ್ತಿರ ಬರತೊಡಗಿ ಅದನ್ನು ಪುಸಲಾಯಿಸಲು ಪ್ರಯತ್ನಿಸುತ್ತೇನೆ; ಕೊನೆಗೆ ನಾನು ಅದನ್ನು ಮುಟ್ಟುವಾಗ ಅದು ಇನ್ನೂ ಗುರ್ರೆಂದರೂ ಅಷ್ಟು ನಿರ್ಧಾರಿತ ರೀತಿಯಲ್ಲಲ್ಲ. ನಾನು ಅದರ ಪೊದೆಗೂಲಿನ ಭುಜದ ಮೇಲೆ ಕೈಹಾಕಿ ಅದರ ಎದೆಯನ್ನು ಮೈದಡವಿದಾಗ, ಅದು ಅದರ ಬಿಗಿಯಾಗಿದ್ದ ಸ್ನಾಯುಗಳೆಲ್ಲ ಕುಗ್ಗಿ ಹೋಗಿದೆಯೊ ಎಂಬಂತೆ ಹಾಯಾಗಿರುವುದು ಗೋಚರವಾಗುತ್ತದೆ. . . . ಅದು ತನ್ನ ತಲೆಯನ್ನು ನನ್ನ ಮಡಿಲಲ್ಲಿಟ್ಟು ನಾನು ಅದನ್ನು ಮುದ್ದಿಸುವಂತೆ ಕರೆ ಕೊಡುತ್ತದೆ.”
ಕಾರ್ ಅವರ ಪುಸ್ತಕದ ಮುನ್ನುಡಿಗಳಲ್ಲಿ ಆ ದೇಶದ ಗವರ್ನರ್ ಜನರಲ್ ಆಗಿದ್ದ ಅರ್ಲ್ ಆಫ್ ಡಲೌಸಿ, ಆ ಸಿಂಹಗಳಿಗೆ ಎರಡಕ್ಕೂ ಹೆಚ್ಚು ವಯಸ್ಸಾಗಿದ್ದು, ಅವು ಕಾರ್ ಅವರ ಶಿಬಿರದ ಬಳಿ ಬಯಲಿನಲ್ಲಿ ತಿರುಗಾಡುತ್ತಿದ್ದಾಗ ತಾನು ನೋಡಿದ ಒಂದು ಸಂಗತಿಯ ಕುರಿತು ಹೇಳುತ್ತಾರೆ. ಕಾರ್ ಅವರು ಸಿಳ್ಳು ಹೊಡೆದಾಗ, ಅವುಗಳ ಪ್ರತಿಕ್ರಿಯೆಯನ್ನು ಅರ್ಲ್ ಅವರು ಹೀಗೆ ವರ್ಣಿಸುತ್ತಾರೆ: “ಸಿಳ್ಳು ಕೇಳಿದಾಗ ಅವು ನೆಗೆಯುತ್ತಾ ತಮ್ಮ ಯಜಮಾನರ ಬಳಿ ಓಡಿಬಂದು ತಮ್ಮ ದೊಡ್ಡ ತಲೆಗಳನ್ನು ಅವರಿಗೆ ಒತ್ತಿ ಉಜ್ಜತೊಡಗಿದವು. ಅದೇ ಸಮಯ, ಅವುಗಳ ಸಂತೋಷದ, ಆದರೆ ಭಯಪಡಿಸುವ ವಂದನೆಗಳನ್ನು ಗರ್ಜಿಸತೊಡಗಿದವು. ಅವುಗಳಿಗೆ ಅವರ ಮೇಲಿದ್ದ ಮಮತೆ ಖಂಡಿತವಾಗಿಯೂಕಮ್ಮಿಯಾಗಿರಲಿಲ್ಲ.
ಸಿಂಹಗಳಿಗೆ ಸ್ವಾಭಾವಿಕವಾದ ಮನುಷ್ಯಭಯವಿದೆ, ಮತ್ತು ಅವು ಸಾಧಾರಣವಾಗಿ ಅವರಿಂದ ದೂರವಿರುತ್ತವೆ. ಸಿಂಹ ಮತ್ತು ಇತರ ಮೃಗಗಳಲ್ಲಿ ಕಂಡುಬರುವ ಈ ಹುಟ್ಟರಿವಿನ ಪ್ರತಿಕ್ರಿಯೆ ನಿಖರವಾಗಿ ಬೈಬಲಿನಲ್ಲಿ ವರ್ಣಿಸಲ್ಪಟ್ಟಿದೆ. (ಆದಿಕಾಂಡ 9:2) ಇದಿಲ್ಲದಿರುತ್ತಿದ್ದರೆ, ಮನುಷ್ಯನು ಅವುಗಳಿಗೆ ಸುಲಭಬೇಧ್ಯ ಬಲಿಯಾಗುತ್ತಿದ್ದನು. ಆದರೂ, ಕೆಲವು ಮೃಗಗಳು ನರಭಕ್ಷಕಗಳಾಗುತ್ತವೆ.
“ನಿಯಮಕ್ಕಿರುವ ಅಪವಾದ”
ಈ ವಿಷಯದ ತಜ್ಞ, ರಾಜರ್ ಕ್ಯಾರಸ್, ವಿವರಿಸುವುದು: “ದೊಡ್ಡ ಬೆಕ್ಕುಗಳ ಅಧಿಕಾಂಶ ಎಲ್ಲ ಜಾತಿಗಳಲ್ಲಿ, ಮನುಷ್ಯನನ್ನು ಆಹಾರವಾಗಿ ಬಯಸುವ ಅನೇಕ ವಿಪರೀತ ಸ್ವಭಾವದ ಬೆಕ್ಕುಗಳು ತೋರಿಬರುವಂತೆ ಕಾಣುತ್ತದೆ. ಇವುಗಳು ನಿಯಮಕ್ಕಿರುವ ಅಪವಾದ . . . ಮನುಷ್ಯನು ಸಾಮಾನ್ಯವಾಗಿ [ದೊಡ್ಡ ಬೆಕ್ಕುಗಳೊಂದಿಗೆ] ಶಾಂತಿಯಿಂದ ಜೀವಿಸಬಲ್ಲನು.”
ಮನುಷ್ಯರು ವಾಹನಗಳಲ್ಲಿ ಅಡಗಿ ಕುಳಿತಿರುವಾಗ ಅನೇಕ ಮೃಗಗಳು ಅವರನ್ನು ಗುರುತಿಸುವಂತೆ ಕಾಣುವುದಿಲ್ಲ. ಹೀಗೆ, ಅವರು ಸಿಂಹಗಳ ಹತ್ತಿರದ ಚಿತ್ರವನ್ನು ಹಿಡಿಯಸಾಧ್ಯವಾಗುತ್ತದೆ. “ಆದರೆ,” ಮೇಬರ್ಲಿಸ್ ಮ್ಯಾಮಲ್ಸ್ ಆಫ್ ಸದರ್ನ್ ಆಫ್ರಿಕ ಎಂಬ ಪುಸ್ತಕ ಎಚ್ಚರಿಸುವುದು, “ಬಾಗಿಲು ತೆರೆಯುವಲ್ಲಿ ಇಲ್ಲವೆ ಸಿಂಹಗಳ ಸಮೀಪ ಬರಲು ಪ್ರಯತ್ನಿಸುವಲ್ಲಿ, ಅವು ಮಾನವ ಹಾಜರಿಯನ್ನು ಗುರುತಿಸುವುದರಿಂದ, ನೀವು ಹೆಚ್ಚು ಅಪಾಯವನ್ನು ಆಮಂತ್ರಿಸಬಹುದು. ಮತ್ತು, ನಿಮ್ಮ ಥಟ್ಟನೆ ತೋರಿಬರುವಿಕೆಯು ಅವುಗಳ ಭಯಭೀತಿಗೆ ಕೂಡಿಸಿದಂತಾಗುವುದರಿಂದ, ಇದು ಸ್ವರಕ್ಷಣೆಯ ದೃಷ್ಟಿಯಿಂದ ಆಕ್ರಮಣವನ್ನು ಉದ್ರೇಕಿಸಬಹುದು. . . . ಸಿಂಹದ ಎದುರಿನಲ್ಲಿ ವಾಹನದಿಂದ ಒಡನೆ ಹೊರಗೆ ಬರುವುದಕ್ಕಿಂತ ಕಾಡಿನಲ್ಲಿ ಸಿಂಹಕ್ಕೆ ಎದುರಾಗುವುದು ಕಡಮೆ ಅಪಾಯಕರ!”
ಚಿರತೆಗಳ ವಿಷಯವೇನು?
ನರಭಕ್ಷಕಗಳಾಗುವ ಚಿರತೆಗಳು ಸಹ ನಿಯಮಕ್ಕೆ ಅಪವಾದಗಳು. ದ ಲೆಪರ್ಡ್ಸ್ ಟೇಲ್ ಎಂಬ ತನ್ನ ಪುಸ್ತಕದಲ್ಲಿ ಜಾನತನ್ ಸ್ಕಾಟ್ ವಿವರಿಸುವುದು: “ಕಾಡಿಸಲ್ಪಡದಿರುವಲ್ಲಿ ಮತ್ತು ಉತ್ತಮ ಆರೋಗ್ಯವಿರುವಲ್ಲಿ, ಚಿರತೆಯು ಮನುಷ್ಯಭಯವನ್ನು ತೋರಿಸುವ ಲಜ್ಜಾಭಾವದ, ಹಿಮ್ಮೆಟ್ಟುವ ಪ್ರಾಣಿ. ಎದುರೆದುರು ಬರುವಲ್ಲಿ ಅದು ಸಾಮಾನ್ಯವಾಗಿ ಹತ್ತಿರದ ಪೊದೆಯ ಮರೆಗೆ ಓಡಿಹೋಗುತ್ತದೆ.”
ಸ್ಕಾಟ್ ಅವರು ಕೆನ್ಯ ದೇಶದ ಮಸೈ ಮಾರ ಅಭಯಾರಣ್ಯದಲ್ಲಿ ತಾನು ಚುಯ್ ಎಂದು ಹೆಸರಿಟ್ಟಿದ್ದ ಹೆಣ್ಣು ಚಿರತೆಯ ಚಲನೆಯನ್ನು ಅಧ್ಯಯನ ಮಾಡುತ್ತಾ ಅನೇಕ ತಿಂಗಳುಗಳನ್ನು ಕಳೆದರು. ಕ್ರಮೇಣ ಚುಯ್ಗೆ ಸ್ಕಾಟ್ ಅವರ ವಾಹನವನ್ನು ನೋಡುವುದು ಮಾಮೂಲಿಯಾಯಿತು. ಮತ್ತು ಒಮ್ಮೆ, ಡಾರ್ಕ್ ಮತ್ತು ಲೈಟ್ ಎಂದು ಕರೆಯಲ್ಪಟ್ಟ ಅದರ ಮರಿಗಳು ಕಾರಿನ ಸಮೀಪ ಬಂದು ಅದನ್ನು ಪರೀಕ್ಷಿಸಿದವು. ಚಿರತೆಯ ಶೀತಲ ಹೊರಕವಚದೊಳಗೆ ಬೆಚ್ಚಗೆನ ಸ್ನೇಹಪ್ರಕೃತಿಯಿದೆಯೆಂದು ಸ್ಕಾಟ್ ಅವರ ನಂಬಿಕೆ.
ಚಿರತೆಯ ಸ್ನೇಹ ಪ್ರಕೃತಿಯನ್ನು ಇತರರು ಅನುಭವಿಸಿದ್ದಾರೆ. ಉದಾಹರಣೆಗೆ, ಜೈ ಆ್ಯಡಮ್ಸನ್ ತಾನು ಪೆನಿ ಎಂದು ಕರೆದ ತಬ್ಬಲಿ ಚಿರತೆಯ ಮರಿಯೊಂದನ್ನು ಬೆಳೆಸಿ ದೊಡ್ಡದು ಮಾಡಿದರು. ಅದನ್ನು ಕಾಡಿಗೆ ಬಿಡಲಾಗಿ ಅದು ಗಂಡನ್ನು ಕೂಡಿ ಮರಿಗಳನ್ನು ಹಾಕಿತು. ಅದರ ಮಾನವ ಮಿತ್ರರು ಆ ಪ್ರದೇಶದಲ್ಲಿದ್ದಾಗ, ಪೆನಿ ತನ್ನನ್ನು ತೋರಿಸಿಕೊಂಡು ಅವರು ಬಂದು ತನ್ನ ಹೊಸದಾಗಿ ಹುಟ್ಟಿದ ಮರಿಗಳನ್ನು ನೋಡುವಂತೆ ಪ್ರೋತ್ಸಾಹಿಸಿತು. ಹಕ್ಕೆಯಲ್ಲಿ, ಅಭಿಮಾನದಿಂದ ನೋಡುತ್ತಿದ್ದ ತಾಯಿಯ ಪಕ್ಕದಲ್ಲಿ ಕುಳಿತುಕೊಂಡ ಜೈ ಆ್ಯಡಮ್ಸನ್ ಆನಂದದಾಯಕ ದೃಶ್ಯವನ್ನು ವರ್ಣಿಸುತ್ತಾರೆ: “ಮರಿಗಳು ಅದರ ಮುಂಗಾಲುಗಳ ಮಧ್ಯೆ ಬೆಚ್ಚಗೆ ಮಲಗಿದ್ದು ಎಲ್ಲವೂ ಪರಮ ಸಂತೋಷದಲ್ಲಿರುವಾಗ ಅದು ನಮ್ಮ ಕೈಗಳನ್ನು ನೆಕ್ಕಿತು. ಆಫ್ರಿಕದ ಮೃಗಗಳಲ್ಲಿ ಚಿರತೆಗಳು ಅತ್ಯಪಾಯಕರವೆಂಬುದು ಮತ್ತು ಮರಿಗಳಿರುವ ಹೆಣ್ಣು ಚಿರತೆಗಳು ಭಯಂಕರವೆಂಬುದು ಸಾಮಾನ್ಯವಾದ ನಂಬಿಕೆ.” ಆದರೆ, “ಅಂಗೀಕರಿಸಲ್ಪಟ್ಟಿರುವ ಅಧಿಕಾಂಶ ನಂಬಿಕೆಗಳು ತಪ್ಪಾದ ವಾದಗಳು” ಎಂದು ಪೆನಿಯೊಂದಿಗೆ ತನಗಾದ ಅನುಭವ ರುಜುಪಡಿಸುತ್ತದೆ ಎಂದು ಜೈ ಆ್ಯಡಮ್ಸನ್ ಹೇಳಿದರು.
ಇನ್ನೊಂದು “ಸುಪ್ರಕೃತಿಯ” ಹ್ಯಾರಿಯೆಟ್ ಎಂಬ ಚಿರತೆ, ಉತ್ತರ ಭಾರತದ ಅರ್ಜನ್ ಸಿಂಗರಿಗೆ ಇನ್ನೂ ಹೆಚ್ಚು ಗಮನಾರ್ಹ ಅನುಭವವನ್ನು ಒದಗಿಸಿತು. ಸಿಂಗರು ಹ್ಯಾರಿಯೆಟನ್ನು ಮರಿಪ್ರಾಯದಿಂದ, ಅದು ಕೊನೆಗೆ ತನ್ನ ಹೊಲದ ಪಕ್ಕದಲ್ಲಿರುವ ಕಾಡಿನಲ್ಲಿ ಸರ್ವಕ್ಷಣೆ ಮಾಡಿಕೊಂಡು ಜೀವಿಸುವ ಉದ್ದೇಶದಿಂದ ಬೆಳೆಸಿ ತರಬೇತುಗೊಳಿಸಿದರು. ಈ ತರಬೇತಿನ ಭಾಗವಾಗಿ, ಸಿಂಗರು ಕೆಲವು ಸಲ ಚಿರತೆ ಆಕ್ರಮಣ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದರು. ಪ್ರಿನ್ಸ್ ಆಫ್ ಕ್ಯಾಟ್ಸ್ ಎಂಬ ತನ್ನ ಪುಸ್ತಕದಲ್ಲಿ ಅವರು ವಿವರಿಸುವುದು: “ನಾನು ಬಗ್ಗಿ ಆಕ್ರಮಣ ಮಾಡುವಂತೆ ಪ್ರಚೋದಿಸಿದಾಗ, ಅದು ನನ್ನ ಕಡೆಗೆ ತಲೆ ನೇರವಾಗಿ ತಿರುಗಿಸಿ ಓಡಿಬಂತು . . . , ಆದರೆ ನನ್ನ ಮೇಲೆ ಹಾರಿದಾಗ ಮೇಲಿಂದ ಹೋಗುವಂತೆ ನೋಡಿಕೊಂಡು ನನ್ನ ತಲೆಯನ್ನು ತಿರುಗಣೆಗೂಟ ಮಾಡಿಕೊಂಡು ಬೆನ್ನ ಮೇಲಿಂದ ನನ್ನ ಬರಿಯ ಹೆಗಲ ಮೇಲೆ ಒಂದು ಗೀರೂ ಇಲ್ಲದಂತೆ ಜಾರುತ್ತಾ ಹೋಯಿತು.”
ಸಿಂಗರ ನಾಯಿ ಈಲಿಯೊಡನೆ ಈ ಚಿರತೆಯ ಆಟದ ಕ್ರಮವೂ ಗಮನಾರ್ಹವಾಗಿತ್ತು. “ಒಂದು ಚಲನ ಚಿತ್ರ, [ಚಿರತೆ] ಟೊಂಕಕೊಟ್ಟು ಕುಳಿತುಕೊಂಡು, ನಾಯಿ ಅದರ ಮೇಲೆ ಆಕ್ರಮಣ ಮಾಡುವಾಗ ಅದು ಮುಷ್ಟಿಕಾಳಗ ಮಾಡಿದರೂ ನಾಯಿಯನ್ನು ಕೆಳಗುರುಳಿಸಲು ಅದು ಯಾವ ಪ್ರಯತ್ನವನ್ನೂ ಮಾಡದಿರುವುದನ್ನು ತೋರಿಸುತ್ತದೆ. ಅದರ ದೊಡ್ಡ ಪಂಜ ಈಲಿಯ ಕತ್ತಿನ ಒಂದು ಬದಿಯಿಂದ ಹಿಡಿದು ತಲೆಯ ಮೇಲಿಂದ ಹೋಗಿ ಇನ್ನೊಂದು ಬದಿಯಿಂದ ಧೂಳುಬಟ್ಟೆಯಷ್ಟೆ ಲಘುವಾಗಿ ಹೋಗುತ್ತದೆ.”
ಮನುಷ್ಯ, ನಾಯಿ ಮತ್ತು ಚಿರತೆಯ ಮಧ್ಯೆ ಇದ್ದ ಈ ಮಿತ್ರ ಸಂಬಂಧ, ಹ್ಯಾರಿಯೆಟ್ ಮನೆ ಬಿಟ್ಟು ಕಾಡಿನಲ್ಲಿ ಜೀವಿಸತೊಡಗಿದಾಗಲೂ ಮುಂದುವರಿಯಿತು. “ಚಿರತೆಗಳನ್ನು ನಂಬಸಾಧ್ಯವಿಲ್ಲ ಎಂದು ಯಾವನಾದರೂ ಹೇಳುವಲ್ಲಿ, [ನನ್ನ ಹೊಲದಲ್ಲಿ] ನಾನು ಮನೆಯ ಹೊರಗೆ ನಿದ್ರೆ ಹೋಗುತ್ತಿದ್ದಾಗ ಹ್ಯಾರಿಯೆಟ್ ಮಧ್ಯರಾತ್ರಿಯಲ್ಲಿ ಬಂದು ವಂದಿಸಲು ಮೃದುವಾಗಿ ನನ್ನನ್ನು ಎಬ್ಬಿಸಿದ ಅನೇಕ ಸಂದರ್ಭಗಳನ್ನು ನಾನು ನೆನಸಿದರೆ ಸಾಕು” ಎಂದು ಕೊನೆಗಾಣಿಸುತ್ತಾರೆ ಸಿಂಗ್.
ಕ್ರಮೇಣ, ಹ್ಯಾರಿಯೆಟ್ ಗಂಡನ್ನು ಕೂಡಿ ಎರಡು ಮರಿಗಳನ್ನು ಹೆತ್ತಿತು. ಅದರ ಹಕ್ಕೆಗೆ ನೆರೆ ಬರುವ ಅಪಾಯವಿದ್ದಾಗ, ಆ ಚಿರತೆ ತನ್ನ ಬಾಯಿಯಲ್ಲಿ ಮರಿಗಳನ್ನು ಒಂದೊಂದಾಗಿ ಹಿಡಿದೆತ್ತಿಕೊಂಡು ಸಿಂಗರ ಮನೆಯ ಭದ್ರತೆಗೆ ಬಂತು. ನೆರೆ ಇಳಿದಾಗ, ಹ್ಯಾರಿಯೆಟ್ ಸಿಂಗರ ದೋಣಿ ಹತ್ತಿ, ಸಿಂಗರು ತನ್ನನ್ನು ಒಮ್ಮೆಗೆ ಒಂದು ಮರಿಯೊಂದಿಗೆ ತಾನು ಹೊಸ ಕಾಡಿನ ಹಕ್ಕೆಗೆ ಹೋಗಲಿಕ್ಕಾಗಿ ಆಚೆಯ ದಡ ಸೇರಿಸುವಂತೆ ಪ್ರೇರಿಸಿತು.
ಆಫ್ರಿಕನ್ ಆನೆ
ಆಫ್ರಿಕನ್ ಆನೆ ಪಳಗಿಸಲಾಗದಷ್ಟು ಒರಟಾಗಿದೆ ಎಂದು ಹೇಳಲಾಗಿದೆ. ಆದರೆ ನಿಜತ್ವವು ಇದಕ್ಕೆ ವಿರುದ್ಧವೆಂದು ಅನೇಕರು ರುಜುಮಾಡಿದ್ದಾರೆ. ಇದರ ಒಂದು ಉದಾಹರಣೆಯು, ಮೂರು ಆಫ್ರಿಕನ್ ಆನೆಗಳ ಮತ್ತು ರ್ಯಾಂಡಲ್ ಮೋರ್ ಎಂಬ ಒಬ್ಬ ಅಮೆರಿಕನನ ಮಧ್ಯೆ ಇದ್ದ ಹೃದಯದ್ರಾವಕ ಸಂಬಂಧವೆ. ಈ ಆನೆಗಳು ದಕ್ಷಿಣ ಆಫ್ರಿಕದ ಕ್ರೂಗರ್ ನ್ಯಾಷನಲ್ ಪಾರ್ಕಿನಲ್ಲಿ ಹಿಡಿಯಲ್ಪಟ್ಟು ಯುನೊಯಿಟೆಡ್ ಸ್ಟೇಟ್ಸಿಗೆ ರವಾನಿಸಲ್ಪಟ್ಟ ಮರಿಗಳ ಭಾಗವಾಗಿದ್ದವು. ಬಳಿಕ, ಅವುಗಳಿಗೆ ಸರ್ಕಸಿನ ತರಬೇತು ಕೊಡಲ್ಪಟ್ಟು ಅವು ಉತ್ತಮ ಪ್ರದರ್ಶನಗಳನ್ನು ನೀಡಿದವು. ಅವುಗಳ ಯಜಮಾನನು ಸಾಯಲಾಗಿ ಈ ಮೂರು ಆನೆಗಳು ಮೋರ್ ರಿಗೆ ಕೊಡಲ್ಪಟ್ಟವು ಮತ್ತು ಮೋರ್ ಅವುಗಳನ್ನು ಆಫ್ರಿಕಕ್ಕೆ ಹಿಂದೆ ಕಳುಹಿಸಿದರು.
ಒವಾಲ ಮತ್ತು ದುರ್ಗ ಎಂಬ ಹೆಸರಿನ ಎರಡು ಹೆಣ್ಣಾನೆಗಳನ್ನು 1982 ರಲ್ಲಿ ಬೋಫುಟಟ್ಸ್ವಾನದ ಪಿಲೇನ್ಸ್ಬರ್ಗ್ ಅಭಯಾರಣ್ಯದಲ್ಲಿ ಬಿಡಲಾಯಿತು. ಆ ಸಮಯದಲ್ಲಿ ಆ ಪಾರ್ಕಿನಲ್ಲಿ ಕ್ಷೀಣವಾಗಿದ್ದ ಮತ್ತು ದೊಡ್ಡ ಹೆಣ್ಣಾನೆಗಳ ಪರಾಮರಿಕೆ ಅಗತ್ಯವಿದ್ದ ಅನೇಕ ತಬ್ಬಲಿ ಆನೆಮರಿಗಳಿದ್ದವು. ಸರ್ಕಸಿನ ತರಬೇತು ಹೊಂದಿದ್ದ ಈ ಒವಾಲ ಮತ್ತು ದುರ್ಗ ಎಂಬ ಆನೆಗಳಿಗೆ ಈ ಪಾತ್ರ ವಹಿಸಲು ಸಾಧ್ಯವಾಯಿತೊ?
ಒಂದು ವರ್ಷಾನಂತರ, ತನ್ನ ಆನೆಗಳು 14 ತಬ್ಬಲಿಗಳನ್ನು ಆಯ್ದುಕೊಂಡಿವೆಯೆಂದೂ ಇನ್ನೂ ಹೆಚ್ಚು ತಬ್ಬಲಿಗಳು ಈ ಕಾಡಿಗೆ ತರಲ್ಪಡುವುವೆಂದೂ ಮೋರ್ ಅವರಿಗೆ ವರದಿ ಸಿಕ್ಕಿತು. ನಾಲ್ಕು ವರ್ಷಗಳ ಗೈರುಹಾಜರಿಯ ಬಳಿಕ ಮೋರ್ ಇದನ್ನು ತಾನೆ ನೋಡಲಿಕ್ಕಾಗಿ ಬಂದರು. ಪಿಲೇನ್ಸ್ಬರ್ಗ್ ಬೆಟ್ಟಗಳಲ್ಲಿ ದೀರ್ಘಕಾಲ ಹುಡುಕುವುದನ್ನು ಎದುರು ನೋಡುತ್ತಿದ್ದ ಅವರು, ಬಂದ ಸ್ವಲ್ಪದರಲ್ಲಿ, ಒಂದು ದೊಡ್ಡ ಆನೆಗಳ ಗುಂಪಿನಲ್ಲಿ ಒವಾಲ ಮತ್ತು ದುರ್ಗರನ್ನು ನೋಡಿದಾಗ ಆಶ್ಚರ್ಯಪಟ್ಟರು. ಅವರು ಬ್ಯಾಕ್ ಟು ಆಫ್ರಿಕ ಎಂಬ ಪುಸ್ತಕದಲ್ಲಿ ಬರೆದುದು: “ನನ್ನ ಪ್ರಥಮ, ವೃತ್ತಿಗೆ ಉಚಿತವಲ್ಲದ ಪ್ರವೃತ್ತಿ, ಅವುಗಳ ಬಳಿ ಓಡಿ, ಅವುಗಳನ್ನು ಮುದ್ದಿಸಿ ಪ್ರಶಂಸಿಸುವುದಾಗಿತ್ತು. ಆದರೆ ನಾನು ಆ ಪ್ರವೃತ್ತಿಯನ್ನು ಹೆಚ್ಚು ವಿವೇಚನೆಯ ಇನ್ನೊಂದರಿಂದ ಭರ್ತಿ ಮಾಡಿದೆನು.”
ಪ್ರಥಮವಾಗಿ, ತಮ್ಮ ಹಳೆಯ ಮಿತ್ರನ ಹಾಜರಿ, ಒವಾಲ ಮತ್ತು ದುರ್ಗರಿಗೆ ಖಚಿತವಾಗಬೇಕಿತ್ತು. ಅವು ಸೊಂಡಿಲಿಂದ ಅವರ ಚಾಚಿದ ಕೈಯನ್ನು ಪರೀಕ್ಷಿಸಿದವು. ಮೋರ್ ಬರೆಯುವುದು: “ಒವಾಲ ಮುಂದಿನ ಆಜ್ಞೆಯನ್ನು ಕಾಯುತ್ತಾಳೊ ಎಂಬಂತೆ ನನ್ನನ್ನು ಬಹು ಎತ್ತರದಿಂದ ನೋಡುತ್ತಿದ್ದಳು. ಗುಂಪಿನ ಇತರ ಆನೆಗಳು ಸ್ತಂಭೀಭೂತವಾದ ಭಂಗಿಯಲ್ಲಿ ಸುತ್ತ ನಿಂತವು. ನಾನು ಒಪ್ಪಿದೆನು. ‘ಒವಾಲ, ಸೊಂಡಿಲು ಮತ್ತು ಪಾದ ಮೇಲೆ!’ ಎಂದು ಹೇಳಿದೆನು. ಒಡನೆ ಒವಾಲ ತನ್ನ ಮಂದಿನ ಪಾದವನ್ನು ಗಾಳಿಗೆ ಮೇಲೆತ್ತಿ ತನ್ನ ಸೊಂಡಿಲನ್ನು ಆ ಹಿಂದಿನ ಸರ್ಕಸ್ ದಿನಗಳಂತೆ ಅಭಿವಂದನೆಯ ಭಂಗಿಯಲ್ಲಿ ಸುರುಳಿಸಿ ಆಕಾಶದತ್ತ ಎತ್ತಿತು. ಆನೆ ಮರೆಯುವುದೇ ಇಲ್ಲವೆಂದು ಮೊದಲನೆಯದಾಗಿ ಯಾರದು ಹೇಳಿದ್ದು?”
ಮೂರು ವರ್ಷಗಳ ಬಳಿಕ, 1989ರ ಅಕ್ಟೋಬರಿನಲ್ಲಿ, ಒವಾಲಳ ಜ್ಞಾಪಕಶಕ್ತಿಗೆ ಇನ್ನೊಂದು ಪರೀಕ್ಷೆ ಕೊಡಲಾಯಿತು. ಈ ಬಾರಿ, ಏಳು ವರ್ಷಗಳ ಹಿಂದೆ ಈ ಆನೆಗಳನ್ನು ಪಾರ್ಕಿಗೆ ಬಿಟ್ಟಂದಿನಿಂದ ಮಾಡಿರದ ಇನ್ನೊಂದು ವಿಷಯವನ್ನು ಪ್ರಯೋಗಿಸಲು ಮೋರ್ ನಿರ್ಧರಿಸಿದರು. ಒವಾಲ, ಚಾಚಿ ಕುಳಿತುಕೊಳ್ಳಬೇಕು ಎಂಬ ಆಜೆಗ್ಞೆ ವಿಧೇಯಳಾಗಿ ಅವಳ ಬೆನ್ನ ಮೇಲೆ ಅವರು ಹತ್ತುವಂತೆ ಬಿಟಳ್ಟು. 30ಕ್ಕೂ ಹೆಚ್ಚು ಕಾಡಾನೆಗಳ ಮಧ್ಯೆ ಅವರು ಆನೆಯ ಮೇಲೆ ಕುಳಿತು ತಿರುಗುವುದನ್ನು ದಕ್ಷಿಣ ಆಫ್ರಿಕದ ಟೆಲಿವಿಜನ್ ದರ್ಶಕರು ನೋಡಿ ಪುಳಕಿತರಾದರು. ಮೋರ್ ಅವರು ಎಚ್ಚರ! ಕ್ಕೆ ಮಾಡಿದ ಪತ್ರಿಕಾಭೇಟಿಯಲ್ಲಿ ಹೇಳಿದ್ದು: “ನಾನಿದನ್ನು ಸುದ್ದಿ ಪ್ರಕಟನೆಗಾಗಿ ಮಾಡದೆ ಆನೆಗೆ ಎಷ್ಟು ಬಂಧಕಶಕ್ತಿ ಮತ್ತು ಬುದ್ಧಿಶಕ್ತಿಯಿದೆ ಎಂದು ತಿಳಿಯಲು ಆತುರವುಳ್ಳವನಾಗಿ ಮಾಡಿದೆನು.” ಪಿಲೇನ್ಸ್ಬರ್ಗಿನ ತಬ್ಬಲಿಗಳು ಒವಾಲ ಮತ್ತು ದುರ್ಗರ ಬುದ್ಧಿಶಕ್ತಿಯ ಪರಾಮರಿಕೆಯಲ್ಲಿ ಹಸನಾಗಿ ಬೆಳೆದವು.
ಹೌದು, ಮನುಷ್ಯ ಮತ್ತು ಕಾಡುಮೃಗಗಳ ಮಧ್ಯೆ ಮಿತ್ರತ್ವವು ಇಂದು ನಿಯಮವಲ್ಲ; ಈ ಮಿತ್ರತ್ವಕ್ಕೆ ಜಾಗ್ರತೆಯ ಪೋಷಣೆ ಅಗತ್ಯ. ಸಾಮಾನ್ಯ ಜನರು ಕಾಡಿಗೆ ಹೋಗಿ ಸಿಂಹ, ಚಿರತೆ, ಮತ್ತು ಆನೆಗಳನ್ನು ಸಮೀಪಿಸಪ್ರಯತ್ನಿಸುವುದು ಹುಚ್ಚುತನವೇ ಸರಿ. ಆದರೆ, ಮನುಷ್ಯ ಮತ್ತು ಕಾಡುಮೃಗಗಳ ಮಧ್ಯೆ ಮಿತ್ರತ್ವವು ಇಂದು ವಿರಳವಾದರೂ ಭವಿಷ್ಯದ ವಿಷಯವೇನು? ಆಗ ಇದು ನಿಯಮವಾದೀತೆ? (g91 4/8)
[Box/Pictures on page 8]
ಸಿಂಹಗಳನ್ನು ಪಳಗಿಸುವುದು ಸಾಧ್ಯ!
“ಬನ್ನಿ, ನನ್ನ ಸಿಂಹಗಳೊಂದಿಗೆ ಕೆಲವು ಫೋಟೊ ಹಿಡಿಯಿರಿ,” ಎಂದರು ದಕ್ಷಿಣ ಆಫ್ರಿಕದ ಹಾರ್ಟ್ಬೀಸ್ಪೂರ್ಟ್ಡ್ಯಾಮ್ ಹಾವು ಮತ್ತು ಮೃಗ ಪಾರ್ಕಿನ ಡೈರಕ್ಟರ್, ಜ್ಯಾಕ್ ಸೀಲ್. ನಾನು ಪುಕ್ಕಲುತನದಿಂದ ಅವರನ್ನು ಸಿಂಹಗಳ ಆವರಣದ ಬಳಿ ಹಿಂಬಾಲಿಸಿದೆ. ರಕ್ಷಾಬೇಲಿಯ ಹೊರಗಿಂದ ನಾನು ಚಿತ್ರ ಹಿಡಿಯುವಂತೆ ಅವರು ಬಿಡುವರೆಂದು ನಾನು ನಿರೀಕ್ಷಿಸುತ್ತಿದ್ದೆ.
ಆವರಣ ನಿರ್ಮಲವಾಗಿತ್ತು, ಸುತ್ತಲಿದ್ದ ಮರಗಳಿಂದ ಅಲ್ಲಿ ತುಂಬ ನೆರಳಿತ್ತು. ಅವುಗಳ ತರಬೇತುಗಾರನು ಒಬ್ಬ ಸಹಾಯಕನೊಂದಿಗೆ ಆ ಆವರಣದೊಳಗೆ ಕಾಲಿಟ್ಟಾಗ ಅಲ್ಲಿದ್ದ ಒಂಭತ್ತು ಆರೋಗ್ಯಕಾಯದ ಸಿಂಹಗಳು ಅವರನ್ನು ಒಡನೆ ಗುರುತಿಸಿದವು. ಸಿಂಹಗಳು ಮಿತ್ರಭಾವದಿಂದ ಗುರ್ರೆನ್ನುತ್ತಾ ಉದ್ರೇಕದಿಂದ ಅತ್ತಿತ್ತು ಚಲಿಸತೊಡಗಿದವು.
“ಒಳಗಡೆ ಬನ್ನಿ” ಎಂದರು ಜ್ಯಾಕ್. ನಾನು ಕೇಳಿಸದವನಂತೆ ವರ್ತಿಸಿದೆ. “ಒಳಗಡೆ ಬನ್ನಿ” ಎಂದರು ಅವರು ಪುನಃ ಗಟ್ಟಿಯಾಗಿ. ಸಿಂಹಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅವರೊಂದಿಗೆ ಕೇವಲ ಕೋಲುಗಳಿದ್ದವು! ಹೇಡಿತನವನ್ನು ಹೋರಾಡುತ್ತಾ ನನ್ನ ಹೃದಯಬಡಿತ ಜೋರಾಗುತ್ತಿದ್ದಾಗ ಕೊನೆಗೆ ಆವರಣದೊಳಗೆ ಇಳಿದೆ. ಜ್ಯಾಕ್ ತನ್ನ ಸೊಗಸಾದ ಮೃಗಗಳ ಮೇಲೆ ಕೈಯಾಡಿಸಿದಾಗ ನಾನು ಬೇಗಬೇಗನೆ ಚಿತ್ರಗಳನ್ನು ಹಿಡಿದೆ. ನಾವೆಲ್ಲರೂ ಸುರಕ್ಷಿತವಾಗಿ ಹೊರಗೆ ಬಂದಾಗ ನನಗೆಂಥ ಉಪಶಮನ! ಆದರೆ ನಾನು ಹೆದರಬೇಕಾಗಿರಲಿಲ್ಲ.
ಆ ಬಳಿಕ ಜ್ಯಾಕ್ ವಿವರಿಸಿದ್ದು: “ನಾವು ಕೋಲು ಹಿಡಿದುಕೊಂಡು ಹೋಗುವುದು ಸಿಂಹಗಳು ಮಮತೆ ತೋರಿಸಿ ಪ್ರೀತಿಯಿಂದ ಕಚ್ಚುವ ಕಾರಣವೆ. ನಮ್ಮ ತೋಳುಗಳ ಬದಲು ಅವು ಕೋಲನ್ನು ಕಚ್ಚುವಂತೆ ನಾವು ಅದನ್ನು ಎತ್ತಿ ಹಿಡಿಯುತ್ತೇವೆ.” ಜ್ಯಾಕ್ ಮತ್ತು ಅವರ ಸಿಂಹಗುಂಪು, ನಮೀಬಿಯದ ಎಟೋಷ ನ್ಯಾಷನಲ್ ಪಾರ್ಕಿನಿಂದ ಆಗಲೆ ಹಿಂದಿರುಗಿ ಬಂದಿದ್ದವು. ಹಾಗಾದರೆ ಅಷ್ಟು ದೂರದ ಕಾಡಿಗೆ ಅವುಗಳನ್ನು ಒಯ್ದದೇಕ್ದೆ? ಅವರು ವಿವರಿಸಿದ್ದು:
“ನಮೀಬಿಯದ ಕಾಡಿನಲ್ಲಿ ಸಿಂಹ ಸಂಖ್ಯೆಯ ವೃದ್ಧಿಯನ್ನು ನಿಯಂತ್ರಿಸಲು ಸಂಶೋಧಕ ವಿಜ್ಞಾನಿಗಳು ಏನು ಮಾಡುತ್ತಿದ್ದಾರೆಂಬ ವಿಷಯ ಒಂದು ಸಾಕ್ಷ್ಯಚಲನ ಚಿತ್ರವನ್ನು ಮಾಡಲು ಅವುಗಳನ್ನು ಉಪಯೋಗಿಸಲಾಗಿತ್ತು. ಆದರೆ ನನ್ನ ಸಿಂಹಗಳಿಗೆ ಇಲ್ಲಿಯ ಪರಿಚಿತ ಜೀವನವೆ ಇಷ್ಟವಾಗಿದೆ. ನಮೀಬಿಯದಲ್ಲಿ, ಅವು ನನ್ನ ವಾಹನವನ್ನು ನೋಡಿದೊಡನೆ ಅದರ ಹತ್ತಿರ ಬಂದವು. ಅವುಗಳನ್ನು ತಮ್ಮ ಮನೆಗೆ ಹಿಂದೆ ಬರಿಸಲು ಯಾವ ಕಷ್ಟವೂ ಆಗಲಿಲ್ಲ.”—ದತ್ತ ಲೇಖನ.
[ಕೃಪೆ]
Courtesy Hartebeespoortdam Snake and Animal Park
[ಪುಟ 9 ರಲ್ಲಿರುವ ಚಿತ್ರ]
ರ್ಯಾಂಡಲ್ ಮೋರ್, ಆಫ್ರಿಕದ ಕಾಡಿನಲ್ಲಿ ತನ್ನ ವಶದಲ್ಲಿದ್ದ ಆನೆಗಳೊಂದಿಗೆ