ಟೆಲಿವಿಷನ್ ಜಗತ್ತನ್ನು ಬದಲಾಯಿಸಿರುವ ವಿಧ
ಕಳೆದ ಬೇಸಗೆಯಲ್ಲಿ, ಜಗತ್ತನ್ನು ಟೀವೀ ಭೂವ್ಯಾಪಕವಾದ ಕ್ರೀಡಾಂಗಣವಾಗಿ ಪರಿವರ್ತಿಸಿತು. ಇಟೆಲಿಯ ರೋಮಿನಲ್ಲಿ ರಸ್ತೆಗಳು ನಿರ್ಜನವಾಗಿದ್ದವು. ಸುಮಾರು 2 ಕೋಟಿ 50 ಲಕ್ಷ ಇಟ್ಯಾಲಿಯಾನರು ವರ್ಲ್ಡ್ ಕಪ್ ಸಾಕರ್ ಪಂದ್ಯಾಟಗಳನ್ನು ಪ್ರೇಕ್ಷಿಸುತ್ತಿದ್ದರು. ಅರ್ಜೆಂಟೀನದ ಬೆನ್ವೋಸ್ ಆ್ಯರೀಸ್ನ ರಸ್ತೆಗಳು ಸಹ ಅದೇ ಕಾರಣಕ್ಕಾಗಿ ನಿರ್ಜನವಾಗಿದ್ದವು. ಪಶ್ಚಿಮ ಆಫ್ರಿಕದ ಕ್ಯಾಮರೂನ್ನಲ್ಲಿಯೂ ಅದೇ ಬೂದು ನೀಲ ಬಣ್ಣದ ಬೆಳಕು ಕೋಟಿಗಟ್ಟಲೆ ಜನರು ಒಟ್ಟಾಗಿ ಜಯಘೋಷ ಮಾಡುತ್ತಿದ್ದಾಗ ಅಮಾನುಷವಾಗಿ ಮಿನುಗುತ್ತಿತ್ತು. ಯುದ್ಧ ಛಿದ್ರಿತವಾದ ಲೆಬನಾನಿನಲ್ಲಿ ಸೈನಿಕರು ಟೆಲಿವಿಷನ್ಗಳನ್ನು ತಮ್ಮ ಸುಮ್ಮಗಿದ್ದ ಟ್ಯಾಂಕ್ಗಳ ಮೇಲೆ ಇಟ್ಟು ನೋಡಿದರು. ಈ ಪಂದ್ಯಾಟ ತನ್ನ ಪರಮಾವಧಿಯನ್ನು ಏರುವಷ್ಟರೊಳಗೆ, ಭೂಮಿಯ ಜನಸಂಖ್ಯೆಯಲ್ಲಿ ಐದರಲ್ಲಿ ಒಂದಂಶ, ಜ್ವಾಲೆಗೆ ಆಕರ್ಷಿಸಲ್ಪಟ್ಟ ಹಾತೆಗಳಂತೆ ಈ ಪೆಟ್ಟಿಗೆಗೆ, ಅದರ ನಸುಬೆಳಕಿನಲ್ಲಿ ಮುಖ ಬೆಳಗಿಸಿಕೊಂಡವರಾಗಿ ಆಕರ್ಷಿಸಲ್ಪಟ್ಟಿದ್ದರು.
ಈ ಮಹಾ ಟೀವೀ ಘಟನೆ ಸಾಟಿಯಿಲ್ಲದಾಗಿರಲಿಲ್ಲ. 1985ರಲ್ಲಿ ಭೂಮಿಯ ಮೂರನೆಯ ಒಂದಂಶ ಜನರು—ಸುಮಾರು 160 ಕೋಟಿ—ಲೈವ್ ಎಯ್ಡ್ ಎಂಬ ರಾಕ್ ಸಂಗೀತಮೇಳವನ್ನು ಪ್ರೇಕ್ಷಿಸಿದರು. ಒಂದು ಡಜನ್ ಉಪಗ್ರಹಗಳು ಐಸ್ಲೆಂಡಿನಿಂದ ಘಾನದ ತನಕ ಸುಮಾರು 150 ದೇಶಗಳಿಗೆ ಕಾರ್ಯಕ್ರಮವನ್ನು ಪ್ರಸಾರ ಮಾಡಿದವು.
ಟೀವೀ—ಎಂಬ ಆ ಸರ್ವತ್ರ ವ್ಯಾಪಕ ಪೆಟ್ಟಿಗೆ ಒಂದು ಯುಕ್ತಿಯ ವಿಪ್ಲವ ಕೇಂದ್ರವಾಗಿತ್ತು. ಈ ಯಂತ್ರಕಲೆಯು 1920 ಮತ್ತು 1930ಗಳ ಚಿಕ್ಕ ಮಿನುಗುವ ಪರದೆಗಳಿಂದ ಹಿಡಿದು ಇಂದಿನ ಉಜ್ವಲವೂ ಸ್ಪಷ್ಟವೂ ಆದ ನವನಾಜೂಕು ಪರದೆಗಳ ತನಕ ಬೆಳೆದುಬಂದು ಲೋಕವ್ಯಾಪಕ ವ್ಯಾಪಾರೋದ್ಯಮವಾಗಿ ಪರಿಣಮಿಸಿದೆ. 1950ರಲ್ಲಿ ಲೋಕದಲ್ಲಿ 50 ಲಕ್ಷಕ್ಕಿಂತ ಕಡಮೆ ಟೆಲಿವಿಷನ್ ಸೆಟ್ಟುಗಳಿದ್ದವು. ಈಗ ಸುಮಾರು 75 ಕೋಟಿ ಸೆಟ್ಟುಗಳಿವೆ.
ವರ್ಲ್ಡ್ ಕಪ್ ಸಾಕರ್ನಂಥ ಘಟನೆಗಳು ಒಂದೇ ಮಾಹಿತಿಯನ್ನು ಪಡೆಯಲಿಕ್ಕಾಗಿ ಜನರನ್ನು ಐಕ್ಯಗೊಳಿಸಲು ಟೀವೀಗಿರುವ ಶಕ್ತಿಯನ್ನು ಚಿತ್ರಿಸುತ್ತವೆ. ತಮ್ಮ ಸುತ್ತಲೂ ಇರುವ ಜಗತ್ತಿನ ವಿಷಯ ಕಲಿಯುವ ವಿಧವನ್ನು ಟೀವೀ ಬದಲಾಯಿಸಿದೆ. ವಾರ್ತೆ ಮತ್ತು ಹೊಸ ವಿಚಾರಗಳನ್ನು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಸಹ, ಒಂದು ದೇಶದಿಂದ ಇನ್ನೊಂದಕ್ಕೆ ಹರಡಿಸಲು ಇದು ಸಹಾಯ ಮಾಡಿದೆ. ಇಂಥ ಅಭಿಪ್ರಾಯಗಳನ್ನು ಒಂದೊಮ್ಮೆ ತಡೆದಿದ್ದ ರಾಜಕೀಯ ಮತ್ತು ಭೂಗೋಳಿಕ ಮೇರೆಗಳನ್ನು ಅದು ಸಲೀಸಾಗಿ ದಾಟಿಬಿಟ್ಟಿದೆ. ಟೀವೀ ಜಗತ್ತನ್ನು ಬದಲಾಯಿಸಿದೆ. ಅದು ನಿಮ್ಮನ್ನೂ ಬದಲಾಯಿಸಬಲ್ಲದೆಂದು ಕೆಲವರ ಹೇಳಿಕೆ.
ಪ್ರಥಮ ಬೈಬಲು 1455ರಲ್ಲಿ ಜೊಹಾನೆಸ್ ಗುಟೆನ್ಬರ್ಗನ ಮುದ್ರಣ ಯಂತ್ರದಿಂದ ಹೊರಬಂದಾಗ ಅವನೇ ಸಾರ್ವಜನಿಕ ಸಂಪರ್ಕವನ್ನು ಪುನರ್ರಚಿಸಿದವನೆಂದು ವ್ಯಾಪಕವಾಗಿ ಹೇಳಲಾಯಿತು. ಆದರೆ ಈಗ, ಒಂದೇ ಸಂದೇಶ ಎಷ್ಟೋ ದೊಡ್ಡ ವೀಕ್ಷಕ ವರ್ಗಕ್ಕೆ ಒಡನೆ, ಸ್ವಲ್ಪ ಸಮಯಾವಧಿಯಲ್ಲಿ, ತುಂಬ ಕಡಮೆ ಖರ್ಚಿನಲ್ಲಿ ಮುಟ್ಟ ಬಲ್ಲದು. ಸರಕಾರಗಳು ಒಡನೆ ಇದರ ಶಕ್ತಿಯನ್ನು ಗ್ರಹಿಸಿ ಲೈಸನ್ಸ್ ನಿಯಮವನ್ನು ಜಾರಿಗೆ ತಂದು ಅದನ್ನು ನಿಯಂತ್ರಿಸಲು ಪ್ರಯತ್ನಿಸಿದವು. ಆದರೆ ಈ ಮುದ್ರಿತ ಮಾಧ್ಯಮವು ಇನ್ನೂ ಹೆಚ್ಚು ಜನರನ್ನು ತಲುಪತೊಡಗಿತು. 1800ಗಳ ಮೊದಲಲ್ಲಿ, ಇತಿಹಾಸಗಾರ ಅಲೆಕ್ಸಿ ಡಿ ಟೋಕ್ವಿಲ್, ವಾರ್ತಾ ಪತ್ರಿಕೆಗಳಿಗೆ ಒಂದು ದಿನದಲ್ಲಿ 10,000 ಮನಗಳಲ್ಲಿ ಒಂದೇ ವಿಚಾರವನ್ನು ನೆಡುವ ಅಸಾಧಾರಣ ಶಕ್ತಿಯಿದೆ ಎಂದು ಹೇಳಿದನು.
ಈಗ ಟೆಲಿವಿಷನನ್ನು ಪರಿಗಣಿಸಿರಿ. ಅದು ಒಂದೇ ಸಮಯದಲ್ಲಿ ಕೋಟಿಗಟ್ಟಲೆ ಜನರ ಮನಸ್ಸಿನಲ್ಲಿ ಒಂದೇ ವಿಚಾರವನ್ನು ನೆಡಬಲ್ಲದು! ಮತ್ತು ಮುದ್ರಿತ ಪುಟಕ್ಕೆ ಅಸದೃಶವಾಗಿ, ಅದರ ಪ್ರೇಕ್ಷಕರು ಓದುವ ಜಟಿಲ ಕಲೆಯಲ್ಲಿ ಶಿಕ್ಷಿತರಾಗಬೇಕೆಂದಾಗಲಿ, ಅವರ ಸ್ವಂತ ಮಾನಸಿಕ ಚಿತ್ರ ಯಾ ಅಭಿಪ್ರಾಯಗಳನ್ನು ಅವರು ರೂಪಿಸಿಕೊಳ್ಳಬೇಕೆಂದಾಗಲಿ ಅದು ಕೇಳಿಕೊಳ್ಳುವುದಿಲ್ಲ. ಅದು ಅದರ ಸಂದೇಶಗಳನ್ನು ಸಕಲ ಆಕರ್ಷಣೆಗಳೂ ಇರುವ ಚಿತ್ರ ಮತ್ತು ಧ್ವನಿಗಳೊಂದಿಗೆ ರವಾನಿಸುತ್ತದೆ.
ಟೆಲಿವಿಷನಿಗಿರುವ ಈ ಮಹಾ ಸಾಮರ್ಥ್ಯವನ್ನು ನೋಡಲು ರಾಜಕಾರಣಿಗಳಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಅಮೆರಿಕದಲ್ಲಿ, 1952ರ ಅಧ್ಯಕ್ಷ ಪದವಿಯ ಚುನಾವಣೆಯಲ್ಲಿ ಡ್ವೈಟ್ ಡಿ. ಐಸೆನ್ಹಾವರ್ ಟೀವೀಯನ್ನು ವಿವೇಚನೆಯಿಂದ ಉಪಯೋಗಿಸಿದರು. ಟ್ಯೂಬ್ ಆಫ್ ಪ್ಲೆಂಟಿ—ದಿ ಎವೊಲ್ಯೂಷನ್ ಆಫ್ ಅಮೆರಿಕನ್ ಟೆಲಿವಿಷನ್ ಎಂಬ ಪುಸ್ತಕಕ್ಕನುಸಾರ ಐಸೆನ್ಹಾವರ್ ಅವರು ಚುನಾವಣೆ ಗೆಲ್ಲಲು ಕಾರಣ ಅವರು ಮಾಧ್ಯಮದ ಹೆಚ್ಚು “ಗಿರಾಕಿಯಿದ್ದ” ಉಮೇದ್ವಾರರಾಗಿದ್ದರು. ಮತ್ತು 1960ರ ಚುನಾವಣೆಯಲ್ಲಿ ರಿಚರ್ಡ್ ಎಮ್. ನಿಕ್ಸನರನ್ನು ಸೋಲಿಸಿದ ಜಾನ್ ಎಫ್. ಕೆನೆಡಿ ಅವರ ವಿಜಯದಲ್ಲಿ ಟೀವೀ ಇನ್ನೂ ದೊಡ್ಡ ಪಾತ್ರ ವಹಿಸಿರಬಹುದೆಂದು ಆ ಪುಸ್ತಕ ತೋರಿಸುತ್ತದೆ. ಟೀವೀಯಲ್ಲಿ ಉಮೇದ್ವಾರರ ವಾಗ್ವಾದ ನಡೆದಾಗ ಕೆನೆಡಿ ಅವರನ್ನು ವೀಕ್ಷಕರು ನಿಕ್ಸನರಿಗಿಂತ ಹೆಚ್ಚು ಮೆಚ್ಚಿದರು. ಆದರೂ, ಅದೇ ಚರ್ಚೆಯನ್ನು ರೇಡಿಯೊ ಮೂಲಕ ಕೇಳಿದ ಜನರು ಅದು ಸರಿಸಮ ಚರ್ಚೆ ಎಂದೆಣಿಸಿದರು. ವ್ಯತ್ಯಾಸವೇಕೆ? ಏಕೆಂದರೆ, ನಿಕ್ಸನರು ಬಿಳಿಚಾಗಿ ಮತ್ತು ಕಂಗೆಟ್ಟವರಾಗಿ ತೋರಿಬಂದಾಗ ಕೆನೆಡಿ ಭರವಸೆ ಮತ್ತು ಸಜೀವವನ್ನು ಹೊರಸೂಸುವ ದೃಢಕಾಯರೂ ಕಂದಿಸಲ್ಪಟ್ಟವರೂ ಆಗಿ ತೋರಿಬಂದರು. ಚುನಾವಣೆಯ ನಂತರ ಕೆನೆಡಿ ಅವರು ಟೆಲಿವಿಷನಿನ ಕುರಿತು ಹೇಳಿದ್ದು: “ಆ ಯಂತ್ರವಲ್ಲದಿದ್ದರೆ ನಮಗೆ ಜಯಿಸುವ ಅವಕಾಶವೇ ಇರಲಿಲ್ಲ.”
“ಆ ಯಂತ್ರ” ತನ್ನ ಶಕ್ತಿಯನ್ನು ಲೋಕವ್ಯಾಪಕವಾಗಿ ತೋರಿಸುತ್ತಾ ಹೋಯಿತು. ಕೆಲವರು ಅದನ್ನು ಮೂರನೆಯ ಲೋಕಶಕ್ತಿ ಎಂದು ಕರೆಯಲಾರಂಭಿಸಿದರು. ಉಪಗ್ರಹ ಯಂತ್ರಕಲೆಯು ವಾರ್ತಾಪ್ರಸಾರಕರು ತಮ್ಮ ವಿದ್ಯುತ್ಕಿರಣ ಸಂಕೇತಗಳನ್ನು ರಾಷ್ಟ್ರದ ಮೇರೆಗಳನ್ನು ಮತ್ತು ಸಾಗರಗಳನ್ನೂ ದಾಟಿಸುವಂತೆ ಸಾಧ್ಯ ಮಾಡಿತು. ಲೋಕ ನಾಯಕರು ಟೀವೀಯನ್ನು ತಮಗೆ ಅಂತಾರಾಷ್ಟ್ರೀಯ ಬೆಂಬಲ ಸಿಕ್ಕುವಂತೆ ಮತ್ತು ತಮ್ಮ ಪ್ರತಿಸ್ಪರ್ಧಿಗಳನ್ನು ಖಂಡಿಸಲಿಕ್ಕಾಗಿ ಉಪಯೋಗಿಸಿದರು. ಕೆಲವು ಸರಕಾರಗಳು ತಮ್ಮ ಪ್ರಚಾರಕಾರ್ಯವನ್ನು ವೈರಿ ದೇಶಗಳಿಗೆ ಪ್ರಸಾರ ಮಾಡಿದರು. ಮತ್ತು ಗುಟೆನ್ಬರ್ಗನ ಕಂಡುಹಿಡಿತದ ಶಕ್ತಿಯನ್ನು ಸರಕಾರಗಳು ತಿಳಿದ ಮೇಲೆ ನಿಯಂತ್ರಿಸಲು ಒಂದೊಮ್ಮೆ ಸರಕಾರಗಳು ಹೇಗೆ ಪ್ರಯತ್ನಿಸಿದವೋ ಹಾಗೆಯೆ ಅನೇಕ ಸರಕಾರಗಳು ಟೆಲಿವಿಷನನ್ನು ಬಿಗಿಯಾಗಿ ಹಿಡಿದುಕೊಂಡವು. 1986ರಲ್ಲಿ ರಾಷ್ಟ್ರಗಳಲ್ಲಿ ಸುಮಾರು ಅರ್ಧಾಂಶ ಸರಕಾರಿ ನಿಯಂತ್ರಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದವು.
ಆದರೆ ಯಂತ್ರಕಲಾ ಶಾಸ್ತ್ರ, ಟೀವೀ ನಿಯಂತ್ರಣವನ್ನು ಹೆಚ್ಚು ಕಷ್ಟಕರವಾಗಿ ಮಾಡಿದೆ. ಇಂದಿನ ಉಪಗ್ರಹಗಳು ರವಾನಿಸುವ ಸಂಕೇತಗಳನ್ನು ಸುಮಾರು ಸಣ್ಣ ತಟ್ಟೆಯಾಕಾರದ ವಾರ್ತಾಗ್ರಾಹಕಗಳಿರುವ ಮನೆಗಳಲ್ಲಿಯೂ ಪಡೆಯಬಹುದು. ಚಿಕ್ಕದಾದ, ಒಯ್ಯಸಾಧ್ಯವಿರುವ ವಿಡಿಯೊಕ್ಯಾಸೆಟ್, ವಿಡಿಯೊಕ್ಯಾಮರ ಮತ್ತು ವಿನೋದಹವ್ಯಾಸಿಗಳಾದ ಛಾಯಾಚಿತ್ರಗಾರರ ವಿಪುಲತೆಯು ಹೆಚ್ಚುಕಡಮೆ ಯಾವ ವಾರ್ತಾರ್ಹ ಘಟನೆಯೆ ಆಗಲಿ, ಅದರ ವಿಷಯ ಅನೇಕ ವೇಳೆ ತಡೆಯಸಾಧ್ಯವಿಲ್ಲದ ದೃಶ್ಯ ದಾಖಲೆಗಳ ನೆರೆಯನ್ನು ಉತ್ಪಾದಿಸುತ್ತದೆ.
ಅಮೆರಿಕದ ಒಂದು ವಾರ್ತಾ ಸಂಘವಾದ ಟರ್ನರ್ ಬ್ರಾಡ್ಕಾಸ್ಟಿಂಗ್ನ ಸಿಎನ್ಎನ್ (CNN, Cable News Network) ಸುಮಾರು 80 ದೇಶಗಳಿಂದ ವಾರ್ತಾ ವರದಿಗಳನ್ನು ಸಂಗ್ರಹಿಸಿ ಲೋಕವ್ಯಾಪಕವಾಗಿ ರವಾನಿಸುತ್ತದೆ. ಅದರ ಭೂವ್ಯಾಪಕವಾದ ದಿನರಾತ್ರಿಯ ಸುದ್ದಿ ಸಂಗ್ರಹವು ಯಾವುದೇ ಘಟನೆಯನ್ನು ತತ್ಕ್ಷಣ ಅಂತಾರಾಷ್ಟ್ರೀಯ ಸುದ್ದಿಯನ್ನಾಗಿ ಮಾಡುತ್ತದೆ.
ಹೆಚ್ಚೆಚ್ಚಾಗಿ, ಟೆಲಿವಿಷನ್ ಲೋಕ ಘಟನೆಗಳನ್ನು ದಾಖಲೆ ಮಾಡುವುದರ ಬದಲಿಗೆ ಲೋಕ ಘಟನೆಗಳನ್ನು ರೂಪಿಸುವ ವಸ್ತುವಾಗಿ ಪರಿವರ್ತನೆ ಹೊಂದಿದೆ. 1989ರಲ್ಲಿ ಪೂರ್ವ ಯೂರೋಪನ್ನು ಕಂಪಿಸಿದ ವಿಪ್ಲವಗಳಲ್ಲಿ ಟೀವೀ ಮುಖ್ಯ ಪಾತ್ರ ವಹಿಸಿತು. ಚೆಕೊಸ್ಲೊವಾಕಿಯದ ಪ್ರಾಗ್ನಲ್ಲಿ ಜನರು ಟೀವೀಯಲ್ಲಿ ತಮ್ಮ “ಜೀವಂತ ವಹನ” ಬೇಕೆಂದು ತಗಾದೆ ಮಾಡುತ್ತಾ ರಸ್ತೆಯ ಮೇಲೆ ಕೂಗಾಡಿದರು. ಕ್ರಾಂತಿಕಾರರು ಒಮ್ಮೆ ಸರಕಾರೀ ಭವನ, ಕೋಟೆ, ಯಾ ಪೊಲೀಸರ ಮುಖ್ಯಾಲಯವನ್ನು ವಶಮಾಡಿಕೊಳ್ಳಲು ತಮ್ಮ ರಕ್ತವನ್ನು ಸುರಿಸಿದರು. ಆದರೆ 1989ರ ಕ್ರಾಂತಿಕಾರರು ಪ್ರಥಮವಾಗಿ ಟೆಲಿವಿಷನ್ ಸೇಶ್ಟನ್ಗಳನ್ನು ಪ್ರವೇಶಿಸಲಿಕ್ಕಾಗಿ ಹೋರಾಡಿದರು. ವಾಸ್ತವವೇನಂದರೆ, ರೊಮೇನಿಯದ ಹೊಸ ಸರಕಾರ ಟೆಲಿವಿಷನ್ ಸೇಶ್ಟನಿನಿಂದಲೇ ಪ್ರಥಮವಾಗಿ ದೇಶವನ್ನು ಆಳತೊಡಗಿತು! ಆದುದರಿಂದ, ಟೀವೀಯನ್ನು ಮೂರನೆಯ ಮಹಾ ಲೋಕಶಕ್ತಿಯೆಂದು ಕರೆಯುವುದು ಅತಿಶಯೋಕ್ತಿಯೇ ಅಲ್ಲ.
ಆದರೆ ಕೇವಲ ರಾಜಕೀಯ ಕ್ಷೇತ್ರವಲ್ಲ, ಅದಕ್ಕೂ ಹೆಚ್ಚಿನದರ ಮೇಲೆ ಟೀವೀ ಪ್ರಭಾವ ಬೀರಿದೆ. ಅದು ಈಗಲೂ ಲೋಕದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬದಲಾಯಿಸುತ್ತಿದೆ. ‘ಸಾಂಸ್ಕೃತಿಕ ಸಾಮ್ರಾಜ್ಯಶಾಹಿ’ ಅಂದರೆ, ತನ್ನ ಸಂಸ್ಕೃತಿಯನ್ನು ಟೆಲಿವಿಷನ್ ಮಾಧ್ಯಮದ ಮೂಲಕ ಜಗತ್ತಿನ ಮೇಲೆ ಹೊರಿಸುತ್ತದೆಂಬ ಆರೋಪ ಅನೇಕ ವೇಳೆ ಅಮೆರಿಕದ ಮೇಲೆ ಬೀಳುತ್ತದೆ. ಲಾಭದಾಯಕವಾದ ವ್ಯಾವಹಾರಿಕ ಕಾರ್ಯಕ್ರಮಗಳನ್ನು ಸಂಗ್ರಹಿಸಿದ ಪ್ರಥಮ ದೇಶ ಅಮೆರಿಕವಾದುದರಿಂದ, 1940 ಮತ್ತು 1950ಗಳಲ್ಲಿ, ಅಮೆರಿಕನ್ ಉತ್ಪಾದಕರಿಗೆ ಇತರ ರಾಷ್ಟ್ರಗಳವರು ತಮ್ಮದೇ ಆದ ಚಿತ್ರಗಳನ್ನು ತಯಾರಿಸುವ ವೆಚ್ಚದ ಒಂದು ಚಿಕ್ಕ ಅಂಶಕ್ಕೆ ತಮ್ಮ ಕಾರ್ಯಕ್ರಮಗಳನ್ನು ಮಾರಲು ಸಾಧ್ಯವಾಯಿತು.
ಕೆನ್ಯ ದೇಶ, 1980ಗಳ ಅಂತ್ಯ ಭಾಗದಲ್ಲಿ ಅದರ ಟೀವೀ ಚಿತ್ರಗಳಲ್ಲಿ 60 ಸೇಕಡದ ಮಟ್ಟಿಗೂ ಆಮದು ಮಾಡಿತು. ಆಸ್ಟ್ರೇಲಿಯ, 46 ಸೇಕಡ; ಎಕಡ್ವರ್, 70 ಸೇಕಡ; ಮತ್ತು ಸ್ಪೆಯ್ನ್, 35 ಸೇಕಡ. ಇವುಗಳಲ್ಲಿ ಹೆಚ್ಚಿನ ಆಮದು ಅಮೆರಿಕದಿಂದ ಬಂತು. ಅಮೆರಿಕದ ಲಿಟ್ಲ್ ಹೌಸ್ ಆನ್ ದ ಪ್ರೇರಿ ಎಂಬ ಚಿತ್ರ 110 ದೇಶಗಳಲ್ಲಿ ಪ್ರಸಾರ ಮಾಡಲ್ಪಟ್ಟಿತು. ಡಾಲ್ಲಸ್ ಎಂಬ ಚಿತ್ರ 96 ದೇಶಗಳಲ್ಲಿ ಪ್ರಸಾರವಾಯಿತು. ಲೋಕದಾದ್ಯಂತವಾಗಿ ಟೆಲಿವಿಷನಿನಿಂದ ಸ್ಥಳೀಕ ಅಭಿರುಚಿ ಮಾಯವಾಗುತ್ತಿದೆಯೆಂದೂ ಅಮೆರಿಕನ್ ಬಳಕೆದಾರತ್ವ ಮತ್ತು ಪ್ರಾಪಂಚಿಕತೆ ಹರಡುತ್ತಿದೆಯೆಂದೂ ಕೆಲವರು ಗೊಣಗಿದರು.
ಅನೇಕ ರಾಷ್ಟ್ರಗಳು ಈ ‘ಸಾಂಸ್ಕೃತಿಕ ಸಾಮ್ರಾಜ್ಯಶಾಹಿ’ ಯ ಕಾರಣ ಗುಲ್ಲೆಬ್ಬಿಸುತ್ತಿವೆ. ನೈಜೀರಿಯದಲ್ಲಿ, ವಿದೇಶಿ ಚಿತ್ರಗಳ ಒಳಬರುವಿಕೆ ರಾಷ್ಟ್ರೀಯ ಸಂಸ್ಕೃತಿಯನ್ನು ಕೊರೆಯುತ್ತದೆಯೆಂದು ಅಲ್ಲಿಯ ಪ್ರಸಾರಕರು ದೂರುಕೊಟ್ಟರು; ನೈಜೀರಿಯದ ವೀಕ್ಷಕರಿಗೆ ನೈಜೀರಿಯಕ್ಕಿಂತ ಹೆಚ್ಚಾಗಿ ಅಮೆರಿಕ ಮತ್ತು ಬ್ರಿಟನಿನ ಪರಿಚಯವಾಗುತ್ತದೆ ಎಂದು ಅವರ ಚಿಂತೆ. ಯೂರೋಪಿಯನರ ಅನುಭವವೂ ಹೀಗೆಯೆ. ಇತ್ತೀಚೆಗಿನ ಯು.ಎಸ್. ಕಾಂಗ್ರೆಸ್ನ ವಿಚಾರಣೆಯಲ್ಲಿ ಪ್ರಸಾರ ವ್ಯಾಪಾರೋದ್ಯಮಿ ರಾಬರ್ಟ್ ಮ್ಯಾಕ್ಸ್ವೆಲ್ ಸಿಟ್ಟಿನಿಂದ ಹೇಳಿದ್ದು: “ವಿದೇಶೀಯರಿಂದ ತನ್ನ ಸಂಸ್ಕೃತಿ ಅಧೀನತೆಗೊಳಗಾಗುವುದನ್ನು ಯಾವ ರಾಷ್ಟ್ರವೂ ಸಹಿಸಿಕೊಳ್ಳಬಾರದು.” ಈ ಪರಿಣಾಮವಾಗಿ, ಕೆಲವು ರಾಷ್ಟ್ರಗಳು ತಮ್ಮ ಸೇಶ್ಟನ್ಗಳು ಪ್ರಸಾರ ಮಾಡುವ ವಿದೇಶಿ ಕಾರ್ಯಕ್ರಮಗಳಿಗೆ ಮಿತಿಯನ್ನು ಕಲ್ಪಿಸಿವೆ.
‘ಸಾಂಸ್ಕೃತಿಕ ಸಾಮ್ರಾಜ್ಯಶಾಹಿ’ ಸಂಸ್ಕೃತಿಗಿಂತಲೂ ಹೆಚ್ಚಿನ ಹಾನಿ ತರಬಲ್ಲದು. ಅದು ಈ ಗ್ರಹಕ್ಕೂ ಹಾನಿ ತರಬಲ್ಲದು. ಸರ್ವವೂ ಈಗಲೇ ಬೇಕೆನ್ನುವ ಪಾಶ್ಚಿಮಾತ್ಯ ಸಮಾಜದ ಬಳಕೆದಾರತ್ವ ಗಾಳಿಯನ್ನು ಮಲಿನಗೊಳಿಸುವುದರಲ್ಲಿ, ನೀರಿನಲ್ಲಿ ವಿಷ ಹರಡುವುದರಲ್ಲಿ, ಮತ್ತು ಭೂಮಿಯ ಸಾಮಾನ್ಯ ಧ್ವಂಸದಲ್ಲಿ ಪಾತ್ರ ವಹಿಸಿದೆ. ಲಂಡನಿನ ದಿ ಇಂಡಿಪೆಂಡೆಂಟ್ ಪತ್ರಿಕೆಯ ಒಬ್ಬ ಲೇಖಕನು ಹೇಳಿದಂತೆ: “ಟೆಲಿವಿಷನ್ ಲೋಕಕ್ಕೆ ಭ್ರಾಂತಿಕಾರಕ ಭೌತಿಕ ವಿಮೋಚನೆ—ಪಾಶ್ಚಿಮಾತ್ಯ ಸಮೃದ್ಧಿ—ಯ ಪ್ರಜ್ವಲಿಸುವ ಪ್ರತೀಕ್ಷೆಯನ್ನು ತಂದಿದೆ. ಹೇಗೆಂದರೆ ನೈಸರ್ಗಿಕ ಸುತ್ತುಗಟ್ಟನ್ನು ಸರಿಮಾಡಲಾಗದಂತೆ ಹಾನಿ ಮಾಡಿ ಮಾತ್ರ ನಾವು ಇದನ್ನು ಸಾಧಿಸಬಹುದು.”
ಟೆಲಿವಿಷನ್ ಇಂದು ಲೋಕವನ್ನು ಬದಲಾಯಿಸುತ್ತಿದೆಯೆಂಬುದು ಸ್ಪಷ್ಟ. ಮತ್ತು ಈ ಬದಲಾವಣೆ ವಿಷಯಗಳನ್ನು ಸದಾ ಉತ್ತಮಗೊಳಿಸಿರುವುದಿಲ್ಲ. ಅದು ವ್ಯಕ್ತಿಗಳ ಮೇಲೆ ಹೆಚ್ಚು ನಿರ್ದಿಷ್ಟ ಪರಿಣಾಮವನ್ನೂ ಬೀರುತ್ತದೆ. ನೀವು ಸುಲಭಭೇದ್ಯರೊ?
[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]
ವೃತ್ತಪತ್ರಕೆಗಳು ಒಂದು ದಿನಕ್ಕೆ ಹತ್ತು ಸಾವಿರ ಮನಗಳಲ್ಲಿ ಒಂದು ವಿಚಾರವನ್ನು ಹಾಕಬಲ್ಲವು
[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಟೆಲಿವಿಷನ್ ಕೋಟಿಗಟ್ಟಲೆ ಮನಗಳಲ್ಲಿ ತತ್ಕ್ಷಣ ಒಂದು ವಿಚಾರವನ್ನು ಹಾಕಬಲ್ಲದು