ಜಗತ್ತನ್ನು ಗಮನಿಸುವುದು
ಮೊಸಾಂಬೀಕ್‌ನಲ್ಲಿ ಸಾಕ್ಷಿಗಳಿಗೆ ಶಾಸನಬದ್ಧ ಮನ್ನಣೆ
ಯೆಹೋವನ ಸಾಕ್ಷಿಗಳ ಸಾರುವ ಚಟುವಟಿಕೆಗೆ ಆಗ್ನೇಯ ಆಫ್ರಿಕ ದೇಶವಾದ ಮೊಸಾಂಬೀಕ್‌ನಲ್ಲಿ ಶಾಸನಬದ್ಧ ಮನ್ನಣೆ ಸಿಕ್ಕಿದೆ. ನ್ಯಾಯ ಮಂತ್ರಾಲಯದಿಂದ ಫೆಬ್ರವರಿ 11, 1991ರಲ್ಲಿ ಬಂದ ಪತ್ರ ಹೇಳುವುದು: “ಯೆಹೋವನ ಸಾಕ್ಷಿಗಳು, ಇತರ ಧರ್ಮ ಸಂಸ್ಥೆಗಳಂತೆ, ಮೊಸಾಂಬೀಕ್ ಗಣರಾಜ್ಯದ ಸಂವಿಧಾನದಲ್ಲಿ ಕೊಡಲ್ಪಟ್ಟಿರುವ ಹಕ್ಕು ಮತ್ತು ಗ್ಯಾರಂಟಿಗಳನ್ನು ಅನುಭವಿಸುತ್ತಾರೆ.” ಇದಕ್ಕೆ ಹಸ್ತಾಕ್ಷರವನ್ನು ದೇಶದ ಧರ್ಮ ವಿಚಾರಗಳ ಡೈರೆಕ್ಟರ್ ಹಾಕಿದ್ದರು. ಈ ಸುವಾರ್ತೆಯನ್ನು ಅಲ್ಲಿ ಕಳೆದ ಜನವರಿಯಲ್ಲಿ ಸಾರಿ ವರದಿ ಮಾಡಿದ್ದ 5,235 ಜನ ಸಾಕ್ಷಿಗಳು ಸ್ವಾಗತಿಸಿದರು. ಈ ಅಧಿಕೃತ ಮಾನ್ಯತೆಯ ಪ್ರಕಟನೆಗೆ ಮೊಸಾಂಬೀಕ್‌ನಲ್ಲಿ ಇತ್ತೀಚೆಗೆ ನಡೆದ ಮತ್ತು 357 ಮಂದಿಗೆ ದೀಕ್ಷಾಸ್ನಾನವಾದ “ಶುದ್ಧ ಭಾಷೆ” ಡಿಸ್ಟ್ರಿಕ್ಟ್ ಸಮ್ಮೇಳನಗಳಲ್ಲಿ ನೆರೆದು ಬಂದ 13,971 ಮಂದಿ ಪ್ರತಿನಿಧಿಗಳೂ ಕೃತಜ್ಞರಾದರು. (91 6/22)
ಯು.ಎಸ್.ಎಸ್.ಆರ್. ನಿಂದ ಸುಸಂದೇಶ
ಮಾರ್ಚ್ 28, 1991ರಲ್ಲಿ ನ್ಯಾಯ ಮಂತ್ರಿಗಳು ಯೆಹೋವನ ಸಾಕ್ಷಿಗಳ ಸಂಘಕ್ಕೆ ಸೋವಿಯೆಟ್ ಯೂನಿಯನ್‌ನಲ್ಲಿ ಸಂಘಕ್ಕೆ ಶಾಸನಬದ್ಧ ಮನ್ನಣೆ ಕೊಡುವ ಪ್ರಮಾಣಪತ್ರವನ್ನು ಕೊಟ್ಟರು.
“ಹೆಚ್ಚು ಬಲಪ್ರಯೋಗವಿರುವ ಇಟೆಲಿ”
ಇಟೆಲಿಯಲ್ಲಿ 1990ರ ಪಾತಕಗಳ ಸಂಖ್ಯೆಯನ್ನು ಸಂಗ್ರಹಿಸಲಾಗಿದೆ, ಮತ್ತು ಕೋರೀಏರೇ ಡೇಲ ಸೇರ ಎಂಬ ಇಟ್ಯಾಲಿಯನ್ ದೈನಿಕಕ್ಕನುಸಾರ ಅದು “ಅತಿ ಸ್ಪಷ್ಟ ಹೇಳಿಕೆ ಕೊಡುತ್ತದೆ. ಮತ್ತು ಅದು ಎಚ್ಚರಿಕೆಗೆ ಕಾರಣ ಕೊಡುತ್ತದೆ.” ಪಾತಕಗಳು ಹಿಂದಿನ ವರ್ಷಕ್ಕಿಂತ 21.8 ಪ್ರತಿಶತ ಹೆಚ್ಚಾದವು. 1990ರಲ್ಲಿ, ಇಟ್ಯಾಲಿಯನ್ ಸಂಖ್ಯಾಸಂಗ್ರಹಣ ಸಂಸ್ಥೆ (ISTAT) ಒದಗಿಸಿದ ಸಂಖ್ಯೆಗನುಸಾರ 25,01,640 ಪಾತಕಗಳನ್ನು ನ್ಯಾಯಾಧಿಕಾರಿಗಳಿಗೆ ವರದಿ ಮಾಡಲಾಯಿತು. ಹೀಗೆ, ದರೋಡೆಗಳು ಭಯಂಕರ ವೇಗದಲ್ಲಿ ವೃದ್ಧಿಯಾಗುತ್ತಾ, ಪ್ರತಿದಿನ ಸರಾಸರಿ 6854 ಪಾತಕಗಳು ನಡೆದವು. ಸುಧಾರಣೆ ಅನಿಶ್ಚಿತ, ಏಕೆಂದರೆ 1990ರಲ್ಲಿ ಅಪ್ರಾಪ್ತ ವಯಸ್ಕರಿಂದ 28,817 ಪಾತಕಗಳು ನಡೆದವೆಂದು ಹೇಳಲಾಗುತ್ತದೆ. ಇದು, 1989ಕ್ಕೆ ಹೋಲಿಸುವಾಗ 17.9 ಪ್ರತಿಶತ ವೃದ್ಧಿ. 1990ಕ್ಕೆ ಪ್ರವೇಶಿಸುವುದು “ಹೆಚ್ಚು ಬಲಪ್ರಯೋಗವಿರುವ ಇಟೆಲಿ” ಎನ್ನುತ್ತದೆ ದೈನಿಕವಾದ ಲ ರೇಪಬೀಕ್ಲ. (91 7/8)
ಆಫ್ರಿಕದ ದೈತ್ಯರನ್ನು ಸಂರಕ್ಷಿಸುವುದು
ಒಂದು ಜರ್ಮನ್ ಪರಿಣತರ ತಂಡ ಇತ್ತೀಚೆಗೆ, ಆಫ್ರಿಕದ ಆನೆಗಳ ಸಂಖ್ಯೆ ಒಂದು ದಶಕದಲ್ಲಿ ಪ್ರಥಮ ಬಾರಿ ಏರಿದೆ ಎಂದು ಹೇಳಿತೆಂದು ದಕ್ಷಿಣ ಆಫ್ರಿಕದ ದ ಸ್ಟಾರ್ ಎಂಬ ವೃತ್ತಪತ್ರ ವರದಿ ಮಾಡಿತು. ಈಗ ಆಫ್ರಿಕದಲ್ಲಿ 6,09,000 ಆನೆಗಳಿವೆಯೆಂದು ಆ ತಂಡದ ಅಂದಾಜು. ಇದು 1979ರಲ್ಲಿದ್ದುದಕ್ಕಿಂತ ಅರ್ಧಾಂಶಕ್ಕೂ ಕಡಮೆಯಾದರೂ ಈ ಇಳಿಮುಖ ಪ್ರವೃತ್ತಿಯನ್ನು ನಿಲ್ಲಿಸಲಾಗಿದೆಯೆಂದು ಈ ತಂಡದ ನಂಬುಗೆ. ವ್ಯಾಪಕವಾದ ದಂತ ನಿಷೇಧವು ದಂತದ ಬೆಲೆಯಲ್ಲಿ ಕುಸಿತ ಮತ್ತು ವ್ಯಾಪಾರದಲ್ಲಿ ಕುಸಿತವನ್ನುಂಟುಮಾಡಿದ್ದು ಇದಕ್ಕೆ ಕಾರಣವೆಂದು ಅವರ ಅಭಿಪ್ರಾಯ. ಈ ಮಧ್ಯೆ, ಆಫ್ರಿಕನ್ ಖಡ್ಗಮೃಗವನ್ನು ಸಂರಕ್ಷಿಸುವ ಅವಸರದ ಪ್ರಯತ್ನಗಳೂ ನಡೆಯುತ್ತಿವೆ. ನಮೀಬಿಯದಲ್ಲಿ, ಕಳ್ಳಬೇಟೆಗಾರರು ಖಡ್ಗಮೃಗವನ್ನು ಕೊಲ್ಲದಂತೆ ವನರಕ್ಷಕರು ಅದರ ಕೊಂಬುಗಳನ್ನು ತೆಗೆಯುತ್ತಾರೆ. ಆದರೂ, ದ ಸ್ಟಾರ್ ವೃತ್ತಪತ್ರಕ್ಕನುಸಾರ, ಸ್ವಾಸಿಲೆಂಡಿನ ವನರಕ್ಷಕ ಟೆಡ್ ರೈಲಿ ಈ ಅತಿ ಸಾಹಸದ ಕೆಲಸ ಸಿದ್ಥಿಯಾಗದೆಂದು ಮುಂತಿಳಿಸಿದರು. ಕಳ್ಳಬೇಟೆಗಾರರು ಚಿಕ್ಕ ಖಡ್ಗಮೃಗಗಳನ್ನು ಸಹ ಅವುಗಳ ಚಿಕ್ಕ ಕೊಂಬುಗಳಿಗಾಗಿ ಕೊಲ್ಲುವುದನ್ನು ಅವರು ನೋಡಿದ್ದಾರಂತೆ. (91 7/8)
ಹಂಗೆರಿಯಲ್ಲಿ ಸೈತಾನಿಕ ಕುಪಂಥಗಳು
ಸೈತಾನಾರಾಧನೆ ಹಂಗೆರಿಯಲ್ಲಿ ಯುವಜನರ ಮಧ್ಯೆ ಎಷ್ಟು ವ್ಯಾಪಕವಾಗಿದೆಯೆಂದರೆ ಅದು ರಾಷ್ಟ್ರವನ್ನು ಸ್ತಬ್ಧಗೊಳಿಸಿದೆ. “ಹದಿಹರೆಯದವರು ಸಾಂಸ್ಕಾರಿಕವಾಗಿ ಕೊಂದದರ್ದ ಮೇಲೆ ಮಾಡಿದ ತನಿಖೆಯು, ನೂರಾರು ಯುವಜನರು ಇತ್ತೀಚೆಗೆ ದೊರೆಯುತ್ತಿರುವ ಮಾಟ ಕಲಾ ಪತ್ರಿಕೆಗಳನ್ನು ಓದಿ ಸೈತಾನತ್ವದಲ್ಲಿ ಕೈಹಾಕುವಂತೆ ಪ್ರೇರಿಸಲ್ಪಡುತ್ತಾರೆಂದು ತೋರಿಬಂದಿದೆ,” ಎಂದು ದ ಯೂರೋಪಿಯನ್ ಎಂಬ ಲಂಡನ್-ಪ್ರಕಾಶಿತ ಸಾಪ್ತಾಹಿಕ ವರದಿ ಮಾಡುತ್ತದೆ. ಇಂಥ ಒಂದು ಸಾಂಸ್ಕಾರಿಕ ಕೊಲೆಯಲ್ಲಿ ಒಬ್ಬ 17 ವಯಸ್ಸಿನ ಹುಡುಗನು ತನ್ನ 13 ವಯಸ್ಸಿನ ತಂಗಿಯನ್ನು ತಿವಿದು ಕೊಂದು ಅವಳನ್ನು ಅಂಗಚ್ಛೇದ ಮಾಡಿ ಅವಳ ಅಂಗಾಂಗಗಳನ್ನು ಕೋಣೆಯಲ್ಲೆಲ್ಲ ಹರಡಿದನು. ಆದುದರಿಂದ ಕ್ರಿಶ್ಚನ್ ಡೆಮೊಕ್ರ್ಯಾಟಿಕ್ ಪೀಪ್‌ಲ್ಸ್ ಪಾರ್ಟಿಯ ಪ್ರತಿನಿಧಿ ಬೇಲ ಸೀಪಿ ಇಂಥ ನಡುಕ ಬರಿಸುವ ಪುಸ್ತಕ, ಚಲನ ಚಿತ್ರ, ಮತ್ತು ವಿಡಿಯೊಗಳ ಜಾಹೀರಾತನ್ನು ನಿಷೇಧಿಸಬೇಕೆಂದು ಕರೆಕೊಟ್ಟದ್ದರಲ್ಲಿ ಆಶ್ಚರ್ಯವಿಲ್ಲ. (91 7/8)
ಗ್ರೇಟ್ ಬ್ಯಾರಿಯರ್ ರೀಫ್ ಹವಳ ದಿಬ್ಬ—ಅಷ್ಟು ಹಳೆಯದಲ್ಲ
ಜಗತ್ತಿನ ಅತಿ ದೊಡ್ಡ ಹವಳ ರಚನೆ—ಗ್ರೇಟ್ ಬ್ಯಾರಿಯರ್ ರೀಫ್—ಒಮ್ಮೆ ಎಣಿಸಿರುವಷ್ಟು ಹಳೆಯದಾಗಿರಲಿಕ್ಕಿಲ್ಲ. ಆಸ್ಟ್ರೇಲಿಯದ ಈಶಾನ್ಯ ತೀರದಲ್ಲಿರುವ, ಸುಮಾರು 2,000 ಕಿಲೋ ಮೀಟರು ಉದ್ದಕ್ಕೆ ಹರಡಿರುವ ಈ ಮಹಾ ಹವಳ ದಿಬ್ಬ 2 ಕೋಟಿ ವರ್ಷ ಪುರಾತನದ್ದು ಎಂದು ಅಂದಾಜು ಮಾಡಲಾಗಿತ್ತು. ಆದರೆ ಈ ದಿಬ್ಬವನ್ನು ಅಧ್ಯಯನ ಮಾಡಿದ ಭೂವಿಜ್ಞಾನ ಶಾಸ್ತ್ರಜ್ಞರು ಇತ್ತೀಚೆಗೆ ಈ ಹವಳ ರಚನೆಯೊಳಗೆ ಕೊರೆದಿದ್ದಾರೆ. ಅವರ ಕಂಡುಹಿಡಿತಗಳು ಈ ದಿಬ್ಬದ ವಯಸ್ಸನ್ನು ವಿಜ್ಞಾನಿಗಳು ಪುನಃ ಪರೀಕ್ಷಿಸುವಂತೆ ಮಾಡಿಯದೆ. ಈಗ ಅವರು ಇದರ ವಯಸ್ಸು 5 ಲಕ್ಷದಿಂದ 10 ಲಕ್ಷ ಮಾತ್ರ ಇರಬಹುದೆಂದು ಅಭಿಪ್ರಯಿಸುತ್ತಾರೆ. ಟೆರ್ ಸಾವಾಜ್ ಎಂಬ ಫ್ರೆಂಚ್ ಪತ್ರಿಕೆ, ಈ ಕಂಡುಹಿಡಿತ ವಿಜ್ಞಾನಿಗಳ ಸಮಾಜವನ್ನು ಕೆರಳಿಸುವ ಸಂಭವವಿದೆ, ಏಕೆಂದರೆ ಇದು ಸಾಂಪ್ರದಾಯಿಕ ವಿಕಾಸವಾದಕ್ಕೆ, ವಿವಿಧ ಜೀವರೂಪಗಳು ಕ್ರಮೇಣ, ಮಿಲ್ಯಾಂತರ ವರ್ಷಗಳಲ್ಲಿ ತೋರಿಬಂದವು ಎಂಬುದಕ್ಕೆ ಪ್ರತಿಕೂಲವಾಗಿದೆ. ದಿಬ್ಬದಿಂದ ದೊರೆತಿರುವ ಸಾಕ್ಷ್ಯ, ಜೀವವು “ದೈತ್ಯಪ್ರಮಾಣದ ತಳಶಾಸ್ತ್ರೀಯ ಸ್ಫೋಟನ”ವೆಂದು ಯಾವುದನ್ನು ಟೆರ್ ಸಾವಾಜ್ ವರ್ಣಿಸಿತೋ ಅದರಿಂದ ಬಂತೆಂದು ಸೂಚಿಸುತ್ತದೆ. (91 7/8)
ಪ್ಲಾಸ್ಟಿಕ್ ಕಾಡುಗಳು
“ನಾವು ಕೃತಕ ಕಾಡುಗಳನ್ನು ನೆಡುವಲ್ಲಿ, ಹತ್ತು ವರ್ಷಗಳಲ್ಲಿ ಮರುಭೂಮಿಗಳಲ್ಲಿ ವ್ಯವಸಾಯ ಮಾಡಬಹುದು” ಎನ್ನುತ್ತಾರೆ ಸಂಶೋಧಕ ಆ್ಯಂಟೋನಿಯೊ ಇಬನೆಸ್ ಆಲ್ಬ. ಇದು ಪ್ರಯಾಸದ್ದೆಂದು ತೋರಿಬಂದರೂ ಉತ್ತರ ಅಮೆರಿಕದ ಅನೇಕ ದೇಶಗಳು ಈ ವಿಚಾರವನ್ನು ಅಂಗೀಕರಿಸಿವೆ ಎಂದು ಮಡ್ರೀಡ್ ದೈನಿಕ ಡೈರಿಯೊ 16. ಮಿಲ್ಯಾಂತರ ಪ್ಲಾಸ್ಟಿಕ್ ಮರಗಳು ಕಾಡಿನ ನೈಸರ್ಗಿಕ ಪಾತ್ರವನ್ನು ನಕಲು ಮಾಡಿ ರಾತ್ರಿ ಗಾಳಿಯ ತೇವವನ್ನು ಹಿಡಿದು ಬಳಿಕ ದಿನದಲ್ಲಿ ಆ ಪಸೆಯನ್ನು ಹೊರಬಿಡುವುದೇ ಇದರ ಉಪಾಯ. ಹತ್ತು ವರ್ಷಾವಧಿಯಲ್ಲಿ, ಈ ಕೃತಕ ಮರಗಳು ಊಹಾತ್ಮಕವಾಗಿ ಸಾಕಷ್ಟು ಮಳೆಯನ್ನು ಪ್ರಚೋದಿಸಿ ನೈಸರ್ಗಿಕ ಮರಗಳು ಕೊನೆಗೆ ತಮ್ಮ ಕೆಲಸವನ್ನು ಮಾಡುವಂತೆ ಇದು ಸಾಧ್ಯ ಮಾಡಬಲ್ಲದು. ಈ ಪಾಲಿಯೂರಿಥೇನ್ ಮರಗಳು ಹೇಗೆ ಕಾಣುತ್ತವೆ? “ನಿಸರ್ಗದ ರಚನೆಗಳು ಸರ್ವೋತ್ತಮವಾದುದರಿಂದ, ಅವು ತಾಳೆ ಮರಗಳನ್ನು ಹೋಲುತ್ತವೆ. ಇದು ಇಬ್ಬನಿಯನ್ನು ಹಿಡಿದು ಬಾಷ್ಪೀಕರಣ ಮಾಡಲು ಆದರ್ಶ ರಚನೆ” ಎನ್ನುತ್ತಾರೆ ಅದರ ರಚಕ. ಅವುಗಳ ಪ್ರಧಾನ ಅನುಕೂಲವೊ? ಅವುಗಳಿಗೆ ನೀರಾವರಿ ಅಗತ್ಯವಿಲ್ಲ, ಮತ್ತು ಕಟ್ಟಿಗೆಗಾಗಿ ಅದನ್ನು ಕಡಿಯುವುದು ಅಸಂಭವನೀಯ. (91 7/8)
ಕಂದು ಕರಡಿಗಳಿಗೆ ಬೀಳ್ಕೊಡುವಿಕೆ?
ಪ್ಯಾರಿಸ್ ವೃತ್ತಪತ್ರ ಲೆ ಫಿಗರೊ, ಫ್ರಾನ್ಸ್ ಬೇಗನೆ ತನ್ನ ಕೊನೆಯ ಕಂದು ಕರಡಿಗಳನ್ನು ಕಳೆದುಕೊಳ್ಳಬಹುದೆಂದು ವರದಿ ಮಾಡಿತು. ಒಮ್ಮೆ ಬ್ರಿಟಿಷ್ ದ್ವೀಪಗಳಿಂದ ಸ್ಪೇನಿನ ವರೆಗಿನ ಪ್ರದೇಶದಲ್ಲಿ ವಾಸಿಸುತ್ತಿದ್ದ ಯೂರೋಪಿನ ಈ ಕಂದು ಕರಡಿ [Ursus arctos] ಪಶ್ಚಿಮ ಯೂರೋಪಿನಿಂದ ಈಗ ಅಧಿಕಾಂಶ ಪೂರ್ತಿ ಮಾಯವಾಗಿದೆ. ಅಧಿಕೃತವಾಗಿ, ಈ ಕರಡಿಗಳು 1962ರಿಂದ ಫ್ರಾನ್ಸಿನಲ್ಲಿ ಸಂರಕ್ಷಿಸಲ್ಪಟ್ಟ ಜೀವಜಾತಿಗಳಾಗಿದ್ದುವು. ಆದರೆ ಕಳ್ಳಬೇಟೆ, ವಿಷ ಹಾಕುವಿಕೆ, ಮತ್ತು ಫ್ರಾನ್ಸ್ ಮತ್ತು ಸ್ಪೇನಿನ ಮಧ್ಯೆ ಇರುವ ಪಿರೆನೀಸ್ ಬೆಟ್ಟಗಳಲ್ಲಿ ಕರಡಿಯ ನೈಸರ್ಗಿಕ ವಾಸಸ್ಥಾನದ ನಷ್ಟ—ಇವು ಹೆಚ್ಚು ಕಡಮೆ ಹತ್ತು ಕರಡಿಗಳು ಉಳಿಯುವಂತೆ ಮಾಡಿವೆಯೆಂದೂ, ಇದು ಆ ಜಾತಿಯನ್ನು ಮುಂದುವರಿಸಲು ತೀರಾ ಚಿಕ್ಕ ಸಂಖ್ಯೆಯೆಂದೂ ಪರಿಸರವಾದಿಗಳ ಭಯ. ಕರಡಿಗಳನ್ನು ರಕ್ಷಿಸಲು ಮಾಡಿರುವ ಪ್ರಯತ್ನಗಳ ವ್ಯಕ್ತ ವಿಫಲತೆಯ ಕುರಿತು ಪ್ರಲಾಪಿಸುತ್ತಾ ಪರಿಸರವಾದಿ ಜಾರ್ಜ್ ಎರೋಮ್ ಗಮನಿಸಿದ್ದು: “ಪರಿಸರವನ್ನು ನಿರ್ವಹಿಸುವುದರಲ್ಲಿ ನಮ್ಮ ಪೂರ್ತಿ ಅಸಮರ್ಥತೆಯನ್ನು ಇದು ತೋರಿಸುತ್ತದೆ. ಆದರೆ ಇಂದು, ಪರಿಸರವೇ ಜೀವವೆಂದು ನಾವು ಗ್ರಹಿಸುತ್ತೇವೆ.” (91 7/8)
ಶಾಂತಿಯ ಸಹಭಾವಿತ್ವ
ಕಾಗೆಗಳ ಮತ್ತು ಮನುಷ್ಯರ ನಡುವೆ ನಡೆದ ಯುದ್ಧದಲ್ಲಿ ಕಾಗೆಗಳು ಜಯಹೊಂದಿವೆ—ಜಪಾನಿನ ಓಟ ಸಿಟಿಯಲ್ಲಾದರೂ. ವಿದ್ಯುತ್ ಟ್ರಾನ್ಸ್‌ಮಿಷನ್ ಗೋಪುರಗಳಲ್ಲಿ ಕಾಗೆಗಳು ಅನೇಕ ವರ್ಷಗಳಿಂದ ತಮ್ಮ ಗೂಡುಗಳನ್ನು ಕಟ್ಟಲು ಬಿಸಾಡಿರುವ ಉಕ್ಕು ಮತ್ತು ತಾಮ್ರದ ಸರಿಗೆಗಳನ್ನು ಉಪಯೋಗಿಸುತ್ತಿದ್ದವು. ತಮ್ಮ ಲೋಹದ ಗೂಡುಗಳಿಂದ ವಿದ್ಯುಚ್ಫಕ್ತಿಯ ಪ್ರವಾಹ ಕಡಿಯಬಹುದೊ ಎಂಬ ಚಿಂತೆ ಕಾಗೆಗಳಿಗಿಲ್ಲ. ಇಂಥ ಗೂಡುಗಳನ್ನು ಸದಾ ತೆಗೆಯುತ್ತಾ ಬೇಸತ್ತ ಟೋಕಿಯೊ ಇಲೆಕ್ಟ್ರಿಕ್ ಪವರ್ ಕಂಪೆನಿ, ಕೊನೆಗೆ ಅವುಗಳ ಗೂಡುಕಟ್ಟುವುದರಲ್ಲಿ ಸಹಾಯ ಮಾಡಲು ನಿಶ್ಚಯಿಸಿತು. ಇಲೆಕ್ಟ್ರಿಕ್ ಕಂಪೆನಿಯ ಹೊಸ ಕಾರ್ಯನೀತಿಯ ಮೊದಲನೆಯ ವರ್ಷದಲ್ಲಿ, ಟ್ರಾನ್ಸ್‌ಮಿಷನ್ ಟವರುಗಳಿಗೆ ನೂರಾರು ಬುಟ್ಟಿಯಂಥ ಗೂಡುಗಳನ್ನು ವಿದ್ಯುತ್ ಸಮಸ್ಯೆಗಳು ಬಾರದ ರೀತಿಯಲ್ಲಿ ತೂಗಹಾಕಲಾಯಿತು. ಕಾಗೆಗಳಿಗೆ ಹೊಸ ಬುಟ್ಟಿಗಳಿಂದ ಸಂತೋಷವಾದಂತೆ ಕಂಡಿತು. ಈಗಲಾದರೂ ಕೊನೆಗೆ ಕಾಗೆಗಳೂ ಓಟದ ಇಲೆಕ್ಟ್ರಿಕ್ ಕಂಪೆನಿಯೂ ಶಾಂತಿಯ ಸಹಭಾವಿತ್ವದಲ್ಲಿವೆ. (91 7/8)
ಪುಸ್ತಕ ಕಳ್ಳರು
ಲೈಬ್ರೇರಿಯನರು ಮತ್ತು ಪುಸ್ತಕ ಉದ್ಯಮದ ಇತರರು ಪುಸ್ತಕ ಕಳ್ಳತನದಲ್ಲಿ ಉನ್ನತಿಯಿಂದ ಕಿರುಕುಳಕ್ಕೊಳಗಾಗಿದ್ದಾರೆ. ದ ನ್ಯೂ ಯಾರ್ಕ್ ಟೈಮ್ಸ್ ಬುಕ್ ರಿವ್ಯೂ ಪತ್ರಿಕೆಗನುಸಾರ, ಶಿಕಾಗೊ ಪಬ್ಲಿಕ್ ಲೈಬ್ರೆರಿಯ ಕಲೆಕ್ಷನ್ ಡೆವಲಪ್‌ವೆಂಟ್ ಡೈರೆಕ್ಟರ್ ಮೇರಿ ಎಲನ್ ಕಿನ್ವ್, ‘ಲೈಬ್ರೆರಿ ವ್ಯವಸ್ಥೆಯ ಪ್ರಾಯಶಃ ಪ್ರತಿ ವರ್ಷ ಕಳ್ಳತನವಾಗುವಷ್ಟೆ ಸಂಖ್ಯೆಯಲ್ಲಿ ಪುಸ್ತಕ ಖರೀದಿಸುತ್ತದೆ’ ಎಂದು ಹೇಳಿದರು. ಈ ಪುಸ್ತಕ ಕಳ್ಳರ ಪಟ್ಟಿಯಲ್ಲಿ ಕೆಲವು ಡಾಕ್ಟರರು, ಪತ್ರಿಕೋದ್ಯಮಿಗಳು, ವಕೀಲರು, ಸೆಮಿನೆರಿಯ ವ್ಯಕ್ತಿಗಳು, ಅಧ್ಯಾಪಕರು, ಮತ್ತು ಲೈಬ್ರೇರಿಯನರನ್ನೂ ಸೇರಿಸಲಾಗಿದೆ, ಮತ್ತು ಒಬ್ಬ ನಿಪುಣರು, ಪುಸ್ತಕಕಳ್ಳರನ್ನು ಸೂಚಿಸಿ, ಅವರು “ಲೋಕದ ಅತ್ಯುತ್ತಮ ಜನರಲ್ಲಿ ಕೆಲವರು” ಎಂದು ಹೇಳಿದರು. ಸಂಶೋಧಕರ ವಾದವೇನಂದರೆ ಬೈಬಲು “ಹೆಚ್ಚು ಕಳ್ಳತನವಾಗುವ, ಜನರಿಗೆ ಕದಿಯುವುದನ್ನು ತಡೆಯಲಿಕ್ಕೇ ಸಾಧ್ಯವಾಗದ ಒಂದೇ ಸರ್ವ ಸಮಯಗಳ ಜನಪ್ರಿಯ ಪುಸ್ತಕ.” (91 6/22)
ಆಫೀಸು ‘ವಾಹನ ಮಾರ್ಗ’
ಜಪಾನಿನ ಒಸಾಕ ಸಿಟಿಗೆ ಭೇಟಿಕೊಡುವವರು ಒಂದು ವೇಗ ವಾಹನ ಸಂಚಾರದ ಹಾದಿ ಒಂದು ಸ್ತಂಭಾಕೃತಿಯ ಕಟ್ಟಡದೊಳಗೆ ಹೋಗಿ ಇನ್ನೊಂದು ಬದಿಯಿಂದ ಹೊರಬರುವುದನ್ನು ನೋಡಿ ವಿಸ್ಮಯಗೊಳ್ಳುತ್ತಾರೆ. “ರಸ್ತೆಯ ರಚನೆ ಕಟ್ಟಡವನ್ನು ಮುಟ್ಟದಿರುವುದರಿಂದ ಅದು ಅದುರಬಾರದು. ಸದ್ದು ಮತ್ತು ವಾಹನಗಳ ಗ್ಯಾಸು ಆಫೀಸು ಕಾರ್ಮಿಕರಿಗೆ ತೊಂದರೆಕೊಡದಂತೆ ನಾವು ರಸ್ತೆಯನ್ನು ಆವರಿಸುವಂತೆ ಗೋಡೆಯನ್ನೂ ಕಟ್ಟುವೆವು” ಎನ್ನುತ್ತಾರೆ, ಹ್ಯಾನ್ಶಿನ್ ಎಕ್ಸ್‌ಪ್ರೆಸ್‌ವೇ ಪಬ್ಲಿಕ್ ಕಾರ್ಪೊರೇಶನಿನ ಒಬ್ಬ ಅಧಿಕಾರಿ, ಮೆಯ್ನಿಚಿ ಡೆಯ್ಲಿ ನ್ಯೂಸ್ ವರದಿಗನುಸಾರ. ಈ ರಸ್ತೆಯ ರಚನೆಗೆ ಮುಖ್ಯ ಕಾರಣ, ಈ ಪ್ರದೇಶದಲ್ಲಿ ಜಮೀನಿನ ಕ್ರಯ ಒಂದು ಚದರ ಅಡಿಗೆ 7,600 ಡಾಲರುಗಳು, ಮತ್ತು ಈ 16 ಮಹಡಿಗಳ ಕಟ್ಟಡದ ಐದರಿಂದ ಏಳನೆಯ ಮಹಡಿಗಳನ್ನು ದಾಟಿ ಹೋಗುವ ಎತ್ತರಿಸಿದ ವೇಗಸಂಚಾರ ರಸ್ತೆಯ ಕಾರಣ, ಹ್ಯಾನ್ಶಿನ್ ಕಾರ್ಪೊರೇಶನ್ ಸುಮಾರು 1,20,00,000 ಡಾಲರುಗಳ ದೊಡ್ಡ ಉಳಿತಾಯವನ್ನು ಮಾಡುತ್ತದೆ. ಇದು ಒಸಾಕದಲ್ಲಿ ಯೋಜಿಸಿರುವ ಮೂರು ಕಟ್ಟಡಗಳನ್ನು ಹಾದುಹೋಗುವ ಹೈವೇಗಳಲ್ಲಿ ಪ್ರಥಮವಾಗಿದ್ದು ಮುಂದಿನ ವರ್ಷ ತೆರೆಯಲ್ಪಡಲಿಕ್ಕಿದೆ. (91 7/8)
ನಿರ್ಣಯಿಸುವುದು ಯಾರು?
ಮಕ್ಕಳಿಗೆ ಹಿಡಿಸುವಂತೆ ಮಾಡಿ ಅವರ ಹೆತ್ತವರು ಖರೀದಿಸುವಂತೆ ಹೇಗೆ ಮಾಡುವುದೆಂದು ಜಾಹೀರಾತುಗಾರರಿಗೆ ಬಹಳ ಸಮಯದಿಂದ ಗೊತ್ತು. ಲೆ ಫಿಗರೊ ಮ್ಯಾಗಸೀನ್ ವರದಿ ಮಾಡುವುದೇನಂದರೆ ಫ್ರಾನ್ಸಿನ ಚಿಲ್ಡ್ರನ್ಸ್ ಇನ್‌ಸ್ಟಿಟ್ಯೂಟ್ ನಡೆಸಿದ ಸಮೀಕ್ಷೆ “ಒಂದು ಮಗುವಿನ ಅಭಿಪ್ರಾಯ ಈ ಕೆಳಗಿನ ವಿಷಯಗಳಲ್ಲಿ ನಿರ್ಣಾಯಕ: ಆಹಾರ (70 ಸೇಕಡ), ರಜಾ ಯೋಜನೆ (51 ಸೇಕಡ), ಆರೋಗ್ಯ ಮತ್ತು ಸೌಂದರ್ಯ ಸಾಧನ (43 ಸೇಕಡ), ಮನೆಯ ಉಪಕರಣಗಳು (40 ಸೇಕಡ), ಟೀವೀ-ಹೈಫೈ (33 ಸೇಕಡ), ಮತ್ತು ಕಾರುಗಳು (30 ಸೇಕಡ).” ಆದರೆ ಒಂದು ದೊಡ್ಡ ಜಾಹೀರಾತು ಕಂಪೆನಿಯ ಒಬ್ಬ ಅಧಿಕಾರಿ ಈ ಸುಲಭ ಜ್ಞಾಪನವನ್ನು ಕೊಟ್ಟನು: “ಮಕ್ಕಳು ತಮ್ಮನ್ನು ಆಳುವಂತೆ ವಯಸ್ಕರು ಬಿಡಬಾರದು.” (91 7/8)