ಇಂದು ಕ್ರೀಡೆಗಳಲ್ಲಿರುವ ಸಮಸ್ಯೆಗಳು
ಕ್ರೀಡೆಗಳಲ್ಲಿ ಉಪಯುಕ್ತತೆ ಇದೆ, ಏಕೆಂದರೆ ಅವು ನೀತಿಬಲವನ್ನು ಕಟ್ಟುತ್ತವೆ ಎಂದು ಜನರು ವಾದಿಸುತ್ತಿದ್ದರು. ಆಟಗಳು ಕಠಿಣ ಕೆಲಸಕ್ಕೆ, ಉದಾರ ಸ್ಪರ್ಧಾಭಾವಕ್ಕೆ, ಮತ್ತು ಆಡುವ ಸಂತಸಕ್ಕೆ ಗಣ್ಯತೆಯನ್ನು ಬೆಳೆಸುತ್ತವೆಂದು ಅವರು ವಾದಿಸುತ್ತಿದ್ದರು. ಆದರೆ ಇಂದು ಅನೇಕರಿಗೆ, ಇಂಥ ವಾದಗಳು ಟೊಳ್ಳಾಗಿಯೂ, ಕಪಟಾಚರಣೆಯದ್ದಾಗಿಯೂ ಕೇಳಿಬರುತ್ತವೆ.
ವಿಜೇತರಾಗುವುದಕ್ಕೆ ಕೊಡುವ ಮಹತ್ವವು ಒಂದು ವಿಶೇಷ ಸಮಸ್ಯೆ. ಸೆವೆಂಟೀನ್ ಪತ್ರಿಕೆ ಇದನ್ನು “ಕ್ರೀಡೆಗಳ ಅಹಿತಕರ ಪಕ್ಕ”ವೆಂದು ಕರೆಯುತ್ತದೆ. ಏಕೆ? ಏಕೆಂದರೆ, ಪತ್ರಿಕೆಯ ಉಲ್ಲೇಖದಂತೆ, “ಜಯ ಹೊಂದುವುದು, ಪ್ರಾಮಾಣಿಕತೆ, ಶಾಲಾಕೆಲಸ, ಆರೋಗ್ಯ, ಆನಂದ, ಮತ್ತು ಹೆಚ್ಚಿನ ಇನ್ನಿತರ ಪ್ರಾಮುಖ್ಯ ಜೀವನ ಭಾಗಗಳ ಚಿಂತೆಯನ್ನು ರದ್ದುಪಡಿಸುತ್ತದೆ. ವಿಜಯ ಗಳಿಸುವುದೇ ಸರ್ವಸ್ವವಾಗುತ್ತದೆ.”
ಅಮೆರಿಕದ ಕಾಲೆಜ್ಗಳ ಓಟದ ಪಟುವಾಗಿದ್ದ ಕ್ಯಾಥಿ ಆರ್ಮ್ಸ್ಬಿ ಎಂಬಾಕೆಯ ಅನುಭವವನ್ನು, ಕ್ರೀಡಾ ಸಾಧನೆಗಳಿಗೆ ಕೊಡುವ ವಿಪರೀತ ಮಹತ್ವದ ದುಃಖಕರವಾದ ಪರಿಣಾಮವನ್ನು ಚಿತ್ರಿಸಲು ಉಪಯೋಗಿಸಲಾಗಿತ್ತು. 10,000 ಮೀಟರ್ ಓಟದಲ್ಲಿ ರಾಷ್ಟ್ರೀಯ ಕಾಲೆಜ್ ಮಹಿಳೆಯರ ದಾಖಲೆಯನ್ನು ಸ್ಥಾಪಿಸಿ ಕೆಲವೇ ವಾರಗಳಲ್ಲಿ, ಜೂನ್ 4, 1986ರಲ್ಲಿ, ಎನ್ಸಿಸಿಎ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾಗ ಕ್ಯಾಥಿ, ತನ್ನ ಓಟದ ಪಥವನ್ನು ಬಿಟ್ಟು, ಹತ್ತಿರದ ಸೇತುವೆಗೆ ಓಡಿ, ಆತ್ಮಹತ್ಯದ ಉದ್ದೇಶದಿಂದ ಕೆಳಗೆ ಹಾರಿದಳು. ಅವಳು ಬದುಕಿ ಉಳಿದರೂ ಸೊಂಟದಿಂದ ಕೆಳಗೆ ಪಾರ್ಶ್ವವಾಯು ಬಡಿದವಳಾದಳು.
ಅಂಗಸಾಧಕರ ಚಿಕಿತ್ಸೆ ಮಾಡುವ ಮನಶ್ಶಾಸ್ತ್ರಜ್ಞ ಸ್ಕಾಟ್ ಪೆಂಗೆಲಿಗನುಸಾರ ಕ್ಯಾಥಿ ಇದರಲ್ಲಿ ಅದ್ವಿತೀಯಳಲ್ಲ. ಕ್ಯಾಥಿಯ ಆತ್ಮಹತ್ಯೆಯ ಪ್ರಯತ್ನದ ಬಳಿಕ, ಪೆಂಗೆಲಿ ವರದಿ ಮಾಡಿದ್ದು: “‘ನನಗೂ ಕ್ಯಾಥಿಯ ಹಾಗೆಯೆ ಅನಿಸುತ್ತದೆ’ ಎಂದು ಹೇಳಿದ ಫೋನ್ ಕಾಲ್ಗಳು ನನಗೆ ಬಂದವು.” ಮತ್ತು ಅರ್ಧ ಮ್ಯಾರತಾನ್ ಓಟದಲ್ಲಿ ರಾಷ್ಟ್ರೀಯ ಏಜ್ಗ್ರೂಪ್ ದಾಖಲೆಯನ್ನು ಸ್ಥಾಪಿಸಿದ ಜಾರ್ಜ್ಟೌನ್ ಯೂನಿವರ್ಸಿಟಿಯ ಇನ್ನೊಬ್ಬ ಅಂಗಸಾಧಕಿ, ಮೇರಿ ವಾಸಿಟರ್ ಸಹ ಒಂದು ಸೇತುವೆಯಿಂದ ಕೆಳಗೆ ಹಾರಿ ಆತ್ಮಹತ್ಯ ಮಾಡಲು ಪ್ರಯತ್ನಿಸಿ ಜೀವಾವಧಿ ಪಾರ್ಶ್ವವಾಯು ಪೀಡಿತಳಾದಳು.
ಜಯಿಸಲು, ನಿರೀಕ್ಷಣೆಯನ್ನು ಪೂರೈಸಲು ಬರುವ ಒತ್ತಡ ಭಾರಿಯಾಗಬಲ್ಲದು, ಮತ್ತು ಸೋಲುವ ಪರಿಣಾಮ ಧ್ವಂಸಕಾರಿಯಾಗಬಲ್ಲದು. ಕ್ಯಾಲಿಫೋರ್ನಿಯ ಏಂಜಲ್ಸ್ ಬೇಸ್ಬಾಲ್ ಟೀಮಿನ ಚೆಂಡೆಸೆತದ ಪಟು ಡಾನಿ ಮೋರ್ ಎಂಬವನಿಗೆ, ತನ್ನ ಟೀಮನ್ನು 1986ರ ವರ್ಲ್ಡ್ ಸೀರೀಸ್ಗೆ ಮುಟ್ಟಿಸಲು ಕೇವಲ ಒಂದು ಸ್ಟ್ರೈಕ್ ಬೇಕಿತ್ತು. ಆದರೆ ಬಾಸನ್ಟಿನ ದಾಂಡುಗಾರನು ಹೋಮ್ ರನ್ನನ್ನು ಹೊಡೆಯಲಾಗಿ, ಬಾಸ್ಟನ್ ಆ ಆಟದಲ್ಲಿ ಗೆದ್ದು ಅಮೆರಿಕನ್ ಲೀಗ್ ಚ್ಯಾಂಪಿಯನ್ಶಿಪ್ ಗೆದ್ದಿತು. ಈ ವೈಫಲ್ಯದಿಂದ—ಸ್ನೇಹಿತರಿಗನುಸಾರ—ಗೀಳು ಹಿಡಿಯಲ್ಪಟ್ಟಿದ್ದ ಡಾನಿ, ಗುಂಡಿಕ್ಕಿ ತನ್ನನ್ನೇ ಕೊಂದನು.
ವಿಪರೀತ ಸ್ಪರ್ಧಾಭಾವ
ಇಂದಿನ ಕ್ರೀಡೆಗಳಿಗೆ ಸಂಬಂಧಿತವಾದ ಇನ್ನೊಂದು ಸಮಸ್ಯೆ ವಿಪರೀತ ಸ್ಪರ್ಧಾಭಾವವೇ. ಸ್ಪರ್ಧಿಗಳು ಘೋರ ಮೃಗಗಳಾಗಿ ರೂಪಾಂತರಗೊಳ್ಳಬಹುದು ಎಂದು ಹೇಳುವುದು ಅತಿಶಯೋಕ್ತಿಯಾಗಲಾರದು. ಲ್ಯಾರಿ ಹೋಮ್ಸ್, ಬಾಕ್ಸಿಂಗ್ ಚ್ಯಾಂಪಿಯನ್ ಆಗಿದ್ದಾಗ, ತಾನು ಕಳವನ್ನು ಪ್ರವೇಶಿಸಿದಾಗ ಬದಲಾವಣೆ ಹೊಂದಲೇ ಬೇಕಿತ್ತೆಂದು ಹೇಳಿದನು: “ಎಲ್ಲ ಒಳ್ಳೆತನವನ್ನು ಹೊರಗೆ ಬಿಟ್ಟು ಎಲ್ಲ ಕೆಟ್ಟತನವನ್ನು, ಡಾಕ್ಟರ್ ಜೆಕಿಲ್ ಮತ್ತು ಮಿಸ್ಟರ್ ಹೈಡ್ ಎಂಬ ದ್ವಂದಸ್ವರೂಪಿಯಂತೆ, ಒಳಗೆ ತರಬೇಕಾಗುತ್ತದೆ.” ತಮಗೆ ಸಮಾನವಾಗಿರುವ ಸಾಮರ್ಥ್ಯವಿರುವ ಇತರರು ತಮ್ಮನ್ನು ಸೋಲಿಸದಂತೆ ಬಲಾತ್ಕಾರ ಮನೋಭಾವದ ಗೀಳನ್ನು ಸ್ಪರ್ಧಿಗಳು ಬೆಳೆಸುತ್ತಾರೆ.
ಮಾಜಿ ಫುಟ್ಬಾಲ್ ಶಿಕ್ಷಕರೊಬ್ಬರು ಒಮ್ಮೆ ಹೇಳಿದ್ದು: “ನಿಮ್ಮಲ್ಲಿ ಅಂಥ ವಿಪರೀತ ಸ್ಪರ್ಧಾಭಾವವಿರಬೇಕು. ಮತ್ತು ಅಂಥ ಮನೋಭಾವದ ಬೆಂಕಿಯನ್ನು ದ್ವೇಷದಷ್ಟು ಉರಿಸುವಂಥ ಇನ್ನೊಂದು ವಸ್ತುವಿಲ್ಲ.” ಅಮೆರಿಕದ ಮಾಜಿ ಅಧ್ಯಕ್ಷ ರಾನಲ್ಡ್ ರೇಗನ್ ಸಹ ಒಮ್ಮೆ ಒಂದು ಕಾಲೆಜ್ ಫುಟ್ಬಾಲ್ ಟೀಮಿಗೆ ಹೀಗೆ ಹೇಳಿದರಂತೆ: “ನಿಮ್ಮ ಎದುರಾಳಿಗೆ ನಿರ್ಮಲವಾದ ದ್ವೇಷವನ್ನು ನೀವು ತೋರಿಸಬಲ್ಲಿರಿ. ಇದು ನಿರ್ಮಲವಾದ ದ್ವೇಷ ಏಕೆಂದರೆ ನೀವು ಫುಟ್ಬಾಲ್ ಷರ್ಟನ್ನು ಧರಿಸುವಾಗ ಮಾತ್ರ ಅದು ಸಾಂಕೇತಿಕ.” ಆದರೆ ನಿಮ್ಮ ಎದುರಾಳಿಯ ವಿರುದ್ಧ ದ್ವೇಷವನ್ನು ಬೆಳೆಸುವುದು ನಿಜವಾಗಿ ಒಳ್ಳೆಯದೆ?
ಬಾಸ್ಟನ್ ಸೆಲಿಕ್ಟ್ಸ್ ಬಾಸ್ಕೆಟ್ಬಾಲ್ ಟೀಮಿನ ಮಾಜಿ ಪಟು ಬಾಬ್ ಕೂಸಿ, ತನಗೆ ಲಾಸ್ ಆ್ಯಂಜಲೀಸ್ ಲೇಕರ್ಸ್ ಟೀಮಿನ ಹೆಚ್ಚು ಸ್ಕೋರ್ ಮಾಡಿರುವ ಡಿಕ್ ಬಾರ್ನೆಟ್ನನ್ನು ಕಾಯಲು ತನಗೆ ಸಿಕ್ಕಿದ ನೇಮಕದ ಬಗ್ಗೆ ಒಮ್ಮೆ ತಿಳಿಸಿದನು. ಕೂಸಿ ಹೇಳಿದ್ದು: “ನಾನು ಬೆಳಿಗ್ಗೆಯಿಂದ ಸಂಜೆಯ ತನಕ ನನ್ನ ಕೋಣೆಯಲ್ಲಿ ಕುಳಿತೆ. ನಾನು ಕೇವಲ ಬಾರ್ನೆಟ್ನ ಕುರಿತು, ಅಂಶಿಕವಾಗಿ ಅವನಿಗೆ ವಿರೋಧವಾಗಿ ಆಡುವುದರ ಕುರಿತು, ಮತ್ತು ಅಂಶಿಕವಾಗಿ ಅವನ ವಿರುದ್ಧ ದ್ವೇಷ ಬೆಳೆಸುವುದರ ಕುರಿತು ಧ್ಯಾನಿಸಿದೆ. ಹೀಗೆ, ನಾನು ಬಾಸ್ಕೆಟ್ಬಾಲ್ ಕಳಕ್ಕೆ ಹೋಗುವುದರೊಳಗೆ, ನಾನು ಎಷ್ಟು ಉದ್ರೇಕವುಳ್ಳವನಾಗಿದ್ದೆನೆಂದರೆ, ಬಾರ್ನೆಟ್ ಕೇವಲ ‘ಹೆಲೊ’ ಎಂದು ಹೇಳುತ್ತಿದ್ದರೂ ನಾನು ಅವನನ್ನು ಒದ್ದು ಅವನ ಹಲ್ಲು ಮುರಿಯುತ್ತಿದ್ದೆ.”
ವಾಸ್ತವವೇನಂದರೆ, ಆಟಗಾರರು ಎದುರಾಳಿಗಳನ್ನು ಅನೇಕ ವೇಳೆ ಬೇಕೆಂದು ಆಡಲು ಅನರ್ಹರಾಗುವಂತೆ ಮಾಡುತ್ತಾರೆ ಮಾತ್ರವಲ್ಲ, ಅದಕ್ಕಾಗಿ ಅವರಿಗೆ ಬಹುಮಾನವೂ ದೊರೆಯುತ್ತದೆ. ಐರ ಬರ್ಕಾ ಎಂಬ ಪತ್ರಿಕಾ ಕ್ರೀಡಾಲೇಖಕ ಹೇಳಿದ್ದೇನಂದರೆ, ಒಬ್ಬ ಫುಟ್ಬಾಲ್ ಆಟಗಾರ ಎದುರಾಳಿಗೆ ಡಿಕ್ಕಿ ಹೊಡೆದು ಅವನನ್ನು ಆಡದಂತೆ ಆಟದಿಂದ ಹೊರಗಿಡುವುದಾದರೆ, “ಅವನ ತಂಡದವರು, ಮಾಡಿದ ಉತ್ತಮ ಕೆಲಸಕ್ಕಾಗಿ ಅವನನ್ನು ಅಪ್ಪಿ, ತಬ್ಬುತ್ತಾರೆ. ಅವನು ಅಂಥ ಹಾನಿಕರವಾದ ಸಾಕಷ್ಟು ಪೆಟ್ಟುಗಳನ್ನು ಕೊಟ್ಟಿರುವಲ್ಲಿ . . . ಅವನಿಗೆ ಆಟ ಕಾಲಾವಧಿಯ ಸಮಯಾಂತ್ಯದಲ್ಲಿ ಹೆಚ್ಚು ಸಂಬಳ ಕೊಡಲ್ಪಡುತ್ತದೆ, ಯಾ, ಅವನು ಉತ್ಕೃಷ್ಟ ಆಟಗಾರನಲ್ಲದಿರುವಲ್ಲಿ, ಮುಂದುವರಿಯುವ ಉದ್ಯೋಗ ಅವನಿಗೆ ದೊರೆಯುತ್ತದೆ. ಹೀಗೆ ಆಟಗಾರರು ಅಡಹ್ಡೆಸರುಗಳನ್ನು, ‘ತುಚ್ಫ’ ಜೋ ಗ್ರೀನ್, ಜ್ಯಾಕ್ (ಹತ್ಯಾಕಾರಿ) ಟೇಟಮ್,” ಇತ್ಯಾದಿಯಂತೆ, “ಅಲಂಕಾರಿಕ ಬಿಲ್ಲೆಯಾಗಿ ಧರಿಸುತ್ತಾರೆ.”—ದ ನ್ಯೂ ಯಾರ್ಕ್ ಟೈಮ್ಸ್, ಡಿಸೆಂಬರ್ 12, 1989.
ಅಮೆರಿಕನ್ ಫುಟ್ಬಾಲಿನಲ್ಲಿ ಸೆಂಟ್ ಲೂಯಿ ಫುಟ್ಬಾಲ್ ತಂಡದಲ್ಲಿ ತಡೆಗಟ್ಟುವ ಸ್ಥಾನದಲ್ಲಿ ಆಡುವ ಫ್ರೆಡ್ ಹೆರನ್ ಹೇಳಿದ್ದು: “ನಮ್ಮ ಕೋಚ್ಗಳು ನಮಗೆ, ಬ್ರೌನ್ಸ್ ಟೀಮಿನ ಕ್ವಾರ್ಟರ್ಬ್ಯಾಕ್ಗೆ ಕತ್ತಿನ ಬಲಹೀನತೆಯಿದೆ ಎಂದು ಹೇಳಿದರು. ನನಗೆ ಸಂದರ್ಭ ಸಿಗುವಲ್ಲಿ ಅವನನ್ನು ಆಟದಿಂದ ಹೊರಗೆಸೆಯಲು ನಾನು ಪ್ರಯತ್ನಿಸಬೇಕೆಂದು ಅವರು ಸೂಚಿಸಿದರು. ಆದುದರಿಂದ, ಆಟದ ಸಮಯ, ನಾನು ಆಟಗಾರರ ಸಾಲನ್ನು ನುಗ್ಗಿ ಮುರಿದು, ಸೆಂಟರ್ ಮತ್ತು ಗಾರ್ಡನ್ನು ಹಿಂದೆ ಹಾಕಿ ಓಡಿದಾಗ ಅವನು ಅಲ್ಲಿ ನಿಂತಿದ್ದನು. ನಾನು ಅವನ ತಲೆಯನ್ನು ನನ್ನ ತೋಳುಗಳಲ್ಲಿ ಹಿಡಿದು ಎಳೆದಾಗ ಅವನು ತಡಕಾಡಿ ಚೆಂಡು ಕೆಳಗೆ ಬಿತ್ತು. ನನ್ನ ತಂಡದವರು ನನ್ನನ್ನು ಹೊಗಳಿದರು. ಆದರೆ ನಾನು ಆ ಕ್ವಾರ್ಟರ್ಬ್ಯಾಕನ್ನು ನೋಡಲಾಗಿ ಅವನು ನೆಲದಲ್ಲಿ ನೋವಿನಿಂದ ಬಾಧೆಪಡುವುದು ಕಂಡುಬಂತು. ಆಗ ನಾನು ನನ್ನೊಳಗೆ, ‘ನಾನು ಮೃಗವಾಗಿ ಬಿಟ್ಟಿದೇನ್ದೆಯೆ? ಇದೊಂದು ಆಟವಾದರೂ ನಾನು ಇನ್ನೊಬ್ಬನನ್ನು ಅಂಗಹೀನನಾಗಿ ಮಾಡುತ್ತಿದ್ದೇನೆ,’ ಎಂದು ಯೋಚಿಸಿದೆ.” ಆದರೂ, ಹೆರನ್ ಗಮನಿಸಿದ್ದು: “ಪ್ರೇಕ್ಷಕರು ನನಗೆ ಜಯಘೋಷ ಮಾಡುತ್ತಿದ್ದರು.”
ವಿಪರೀತ ಸ್ಪರ್ಧಾಭಾವದಿಂದ ಆಗುವ ದೈಹಿಕ ಹಾನಿಗಳು ಇಂದಿನ ಕ್ರೀಡೆಗಳಲ್ಲಿರುವ ಮಹಾ ಸಮಸ್ಯೆಯೆಂದು ಅನೇಕರ ಪ್ರಲಾಪ. ದುಃಖಕರವಾದ ವಿಷಯವೇನಂದರೆ, ಇಂಥ ಲಕ್ಷಾಂತರ ಕೇಡುಗಳು ತೀರಾ ಸ್ಪರ್ಧಾತ್ಮಕ ಆಟಗಳಿಗೆ ತಮ್ಮ ಜೀವನದ ಆದಿಯಲ್ಲಿಯೆ ಪರಿಚಯಿಸಲ್ಪಡುವ ಮಕ್ಕಳಿಗೆ ಸಂಭವಿಸುತ್ತವೆ. ಅಮೆರಿಕದ ಕನ್ಸೂಮರ್ ಪ್ರಾಡಕ್ಟ್ ಸೇಫ್ಟಿ ಕಮಿಷನ್ಗನುಸಾರ, ಪ್ರತಿ ವರ್ಷ ನಲ್ವತ್ತು ಲಕ್ಷ ಮಕ್ಕಳಿಗೆ ಕ್ರೀಡೆಗಳಿಂದಾಗುವ ಕೇಡುಗಳಿಗಾಗಿ ಆಸ್ಪತ್ರೆಗಳ ತುರ್ತುಕೋಣೆಗಳಲ್ಲಿ ಚಿಕಿತ್ಸೆ ನಡೆಯುತ್ತದೆ, ಮತ್ತು ಎಂಭತ್ತು ಲಕ್ಷ ಮಕ್ಕಳು ಕುಟುಂಬ ವೈದ್ಯರುಗಳಿಂದ ಚಿಕಿತ್ಸೆಗೊಳಗಾಗುತ್ತಾರೆ ಎಂದು ಅಂದಾಜು ಮಾಡಲಾಗುತ್ತದೆ.
ಅನೇಕ ಮಕ್ಕಳು ಇಂದು ವಿಪರೀತ ಪ್ರಯೋಗದ ನೋವುಗಳಿಂದ ಬಾಧೆ ಪಡುತ್ತಿದ್ದಾರೆ. ಇದನ್ನು ಹಿಂದಿನ ವರ್ಷಗಳಲ್ಲಿ ನೋಡುವುದೇ ವಿರಳವಾಗಿತ್ತು. ಮಕ್ಕಳು ವಿನೋದಕ್ಕಾಗಿ ಆಟವಾಡುತ್ತಿದ್ದ ಸಮಯದಲ್ಲಿ, ನೋವಾದಾಗ ಮನೆಗೆ ಹೋಗುತ್ತಿದ್ದರು, ಮತ್ತು ಗಾಯ ಯಾ ನೋವು ಗುಣವಾಗುವ ತನಕ ಪುನಃ ಆಟವಾಡುತ್ತಿರಲಿಲ್ಲ. ಆದರೆ ತೀರಾ ಸ್ಪರ್ಧಾತ್ಮಕ, ವ್ಯವಸ್ಥಾಪಿತ ಕ್ರೀಡೆಗಳಲ್ಲಿ ಮಕ್ಕಳು ಅನೇಕ ವೇಳೆ ಆಡುತ್ತಾ ಹೋಗಿ, ಆಗಲೆ ಗಾಯವಾಗಿರುವ ಯಾ ನೋಯುತ್ತಿರುವ ಅಂಗಾಂಗಗಳಿಗೆ ಇನ್ನೂ ಹೆಚ್ಚು ಹಾನಿ ಮಾಡುತ್ತಾರೆ. ಬೇಸ್ಬಾಲಿನ ಮಾಜಿ ಚೆಂಡೆಸೆತದ ಪಟು ರಾಬಿನ್ ರಾಬರ್ಟ್ಸ್ಗನುಸಾರ, ಇದಕ್ಕೆ ಮುಖ್ಯ ಕಾರಣರು ವಯಸ್ಕರೆ. “ಅವರು ಮಕ್ಕಳ ಮೇಲೆ, ತಯಾರಾಗಿರುವ ಮೊದಲೆ—ಮನೋವೈಜ್ಞಾನಿಕವಾಗಿ ಮತ್ತು ಶಾರೀರಿಕವಾಗಿ—ವಿಪರೀತ ಒತ್ತಡವನ್ನು ಹಾಕುತ್ತಾರೆ.”
ಹಣ ಮತ್ತು ವಂಚನೆ
ಕ್ರೀಡೆಗಳಲ್ಲಿ ಇನ್ನೊಂದು ಸಮಸ್ಯೆ ಹಣ ಅದರ ಅತಿ ಪ್ರಧಾನ ಚಿಂತೆಯಾಗಿರುವುದೆ. ಉದಾರ ಸ್ಪರ್ಧಾಭಾವ ಮತ್ತು ನಿಷ್ಪಕ್ಷಪಾತದ ಬದಲಿಗೆ ಲೋಭವು ಈಗ ಕ್ರೀಡೆಗಳನ್ನು ಚಲಾಯಿಸುತ್ತದೆ. “ಕ್ರೀಡೆಗಳ ನಿಷ್ಕಾಪಟ್ಯ 1980ಗಳಲ್ಲಿ ಪೂರ್ತಿ ಮಾಯವಾಗಿದೆ ಎಂದು ವರದಿಸಲು ವಿಷಾದವಾಗುತ್ತದೆ,” ಎಂದು ಪ್ರಲಾಪಿಸುತ್ತಾರೆ, ದ ಡೆನರ್ವ್ ಪೋಸ್ಟ್ನ ಜೇ ಮಾರ್ಯೊಟಿ. “ಕ್ರೀಡೆಗಳು 90ಗಳಲ್ಲಿ ನಮ್ಮ ಸಂಸ್ಕೃತಿಯೊಳಗೆ ಅಬ್ಬರಿಸಿ ಬರುವ ಘೋರ ಮೃಗೀಯ ಶಕ್ತಿಯಾಗಿದೆ; ಅವು ನಂಬಲು ಕಷ್ಟವಾಗುವಷ್ಟು ದೊಡ್ಡದಾದ ಕೋಟ್ಯನುಕೋಟಿ ಡಾಲರುಗಳ, ಒಮ್ಮೊಮ್ಮೆ ಮೋಸದ ವ್ಯಾಪಾರವೆಂದೇ ಉತ್ತಮವಾಗಿ ವರ್ಣಿಸಬಹುದಾದ ಉದ್ಯಮವಾಗಿದೆ.”
ಕಳೆದ ವರ್ಷ ಅಮೆರಿಕದಲ್ಲಿ 162 ಮೇಜರ್ ಲೀಗ್ ಬೇಸ್ಬಾಲ್ ಆಟಗಾರರು—ಸರ್ವ ಆಟಗಾರರಲ್ಲಿ 5ರಲ್ಲಿ 1—ಹತ್ತು ಲಕ್ಷ ಡಾಲರಿಗಿಂತಲೂ ಹೆಚ್ಚು ಹಣ ಗಳಿಸಿದರು. ಅವರಲ್ಲಿ ಅತ್ಯುನ್ನತ ಸಂಬಳ ಮೂವತ್ತು ಲಕ್ಷಕ್ಕೂ ಹೆಚ್ಚು ಡಾಲರಾಗಿತ್ತು. ಈಗ, ಒಂದು ವರ್ಷದ ಮೇಲೆ, 120ಕ್ಕೂ ಹೆಚ್ಚು ಆಟಗಾರರಿಗೆ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಡಾಲರು ವೇತನ ದೊರೆಯುವುದು. ಇವರಲ್ಲಿ 32 ಆಟಗಾರರು ತಲಾ 30ಕ್ಕೂ ಹೆಚ್ಚು ಲಕ್ಷ ಡಾಲರನ್ನು ಪಡೆಯುವರು; ಮತ್ತು ಕಡಮೆ ಪಕ್ಷ ಒಬ್ಬನಾದರೂ 1992ರಿಂದ 1995ರ ತನಕ, 50 ಲಕ್ಷ ಡಾಲರಿಗೂ ಹೆಚ್ಚಿನದನ್ನು ಪಡೆಯುವರು! ಹಣದ ಅನ್ವೇಷಣೆ ಮತ್ತು ದೊಡ್ಡ ಸಂಖ್ಯೆಯ ಸಂಬಳಗಳು ಇತರ ಕ್ರೀಡೆಗಳಲ್ಲಿಯೂ ಸಾಮಾನ್ಯ.
ಕಾಲೆಜ್ ಆಟಗಳಲ್ಲಿಯೂ ಅನೇಕ ವೇಳೆ ಹಣಕ್ಕೆ ಪ್ರಾಧಾನ್ಯ ಕೊಡಲಾಗುತ್ತದೆ. ಗೆಲ್ಲುವ ತಂಡಗಳ ಕೋಚ್ ಶಿಕ್ಷಕರಿಗೆ ಉತ್ತಮ ಬಹುಮಾನ ಕೊಡಲಾಗುತ್ತದೆ. ಅವರು ವರ್ಷಕ್ಕೆ ಹತ್ತು ಲಕ್ಷ ಡಾಲರಿನಷ್ಟೂ ಹಣವನ್ನು ವೇತನವಾಗಿ ಮತ್ತು ವ್ಯಾಪಾರಗಳ ಎಂಡೋರ್ಸ್ಮೆಂಟ್ ಹಣವಾಗಿ ಪಡೆಯುವುದುಂಟು. ಅಮೆರಿಕದಲ್ಲಿ ವರ್ಷಾಂತ್ಯದ ಬೋಲ್ ಗೇಮ್ಸ್ಗಳಿಗೆ ಯೋಗ್ಯತೆ ಪಡೆಯುವ ಫುಟ್ಬಾಲ್ ತಂಡಗಳ ಶಾಲೆಗಳು ದಶಲಕ್ಷಾಂತರ ಡಾಲರುಗಳನ್ನು—ಇತ್ತೀಚಿನ ಒಂದು ವರ್ಷದಲ್ಲಿ 550 ಲಕ್ಷ ಡಾಲರನ್ನು—ಪಡೆಯುತ್ತವೆ. ಕಾಲೆಜ್ ಅಧ್ಯಕ್ಷ ಜಾನ್ ಸ್ಲಾಟರ್ ಹೇಳುವುದು: “ಫುಟ್ಬಾಲ್ ಮತ್ತು ಬಾಸ್ಕೆಟ್ಬಾಲ್ ಕಾಲೆಜ್ ತಂಡಗಳು ಹಣ ಮಾಡಲೇ ಬೇಕು. ಮತ್ತು ಹಣ ಮಾಡಬೇಕಾದರೆ ಅವರು ಗೆಲ್ಲಲೇ ಬೇಕು.” ಇದು ಒಂದು ವಿಷಮ ಚಕ್ರವಾಗಿ, ಜಯಿಸುವುದೇ ಒಂದು ಗೀಳಾಗಿ ಬಿಟ್ಟು, ಪರಿಣಾಮ ವಿಪತ್ಕಾರಕವಾಗುತ್ತದೆ.
ಕಸಬುದಾರ ಆಟಗಾರರ ಉದ್ಯೋಗ ವಿಜಯಗಳ ಮೇಲೆ ಹೊಂದಿಕೊಂಡಿರುವುದರಿಂದ, ವಿಜೇತರಾಗಲು ಅವರು ಅನೇಕ ವೇಳೆ ಸರಿ ಸುಮಾರಾಗಿ ಏನನ್ನೂ ಮಾಡುತ್ತಾರೆ. ಮಾಜಿ ಬೇಸ್ಬಾಲ್ ಪಟು ರಸ್ಟಿ ಸ್ಟಾಬ್ ಹೇಳುವುದು: “ಇದು ಈಗ ಕ್ರೀಡೆಯೆ ಅಲ್ಲ; ಕುತ್ಸಿತ, ಶಾರೀರಿಕ ವ್ಯಾಪಾರ.” ವಂಚನೆ ವ್ಯಾಪಕವಾಗಿದೆ. “ನೀವು ಮೋಸ ಮಾಡದಿದ್ದರೆ ಜಯಿಸಲು ಪ್ರಯತ್ನಿಸುವುದಿಲ್ಲ,” ಎನ್ನುತ್ತಾರೆ, ಬೇಸ್ಬಾಲ್ ಔಟ್ಫೀಲರ್ಡ್ ಚಿಲಿ ಡೇವಿಸ್. “ಹಿಡಿಯಲ್ಪಡದಿರುವಷ್ಟರ ತನಕ ನಿಮಗೆ ಸಾಧ್ಯವಿರುವುದನ್ನು ಮಾಡುತ್ತೀರಿ,” ಎನ್ನುತ್ತಾರೆ ನ್ಯೂ ಯಾರ್ಕ್ ಮೆಟ್ಸ್ ಟೀಮಿನ ಇನ್ಫೀಲರ್ಡ್ ಹಾವರ್ಡ್ ಜಾನ್ಸನ್.
ಹೀಗೆ, ನೈತಿಕ ಗುಣ ಕೊರೆಯಲ್ಪಡುತ್ತದೆ, ಮತ್ತು ಇದು ಕಾಲೆಜ್ ಕ್ರೀಡೆಗಳಲ್ಲಿಯೂ ಇರುವ ದೊಡ್ಡ ಸಮಸ್ಯೆ. ಒಹಾಯೊ ಸ್ಟೇಟ್ ಯೂನಿವರ್ಸಿಟಿಯ ಮಾಜಿ ಅಧ್ಯಕ್ಷ ಹ್ಯಾರಲ್ಡ್ ಎಲ್. ಎನರ್ಸನ್ ಹೇಳುವುದು: “ಕೆಲವು ಕೋಚ್ಗಳೂ ಪಂದ್ಯಾಟ ಡೈರೆಕ್ಟರ್ಗಳೂ ವಂಚಿಸುತ್ತಾರೆ. ಆಗ ಅಧ್ಯಕ್ಷರು ಮತ್ತು ಟ್ರಸ್ಟಿಗಳು ಇನ್ನೊಂದು ಕಡೆ ನೋಡಿ ಅದನ್ನು ಅಸಡ್ಡೆ ಮಾಡುತ್ತಾರೆ.” ಇತ್ತೀಚಿನ ಒಂದು ವರ್ಷದಲ್ಲಿ, ಅಮೆರಿಕದ 21 ಯೂನಿವರ್ಸಿಟಿಗಳನ್ನು ನಿಯಮ ಉಲ್ಲಂಘನೆಗಾಗಿ ನ್ಯಾಷನಲ್ ಕಾಲೀಜಿಯೇಟ್ ಎತೆಟ್ಲಿಕ್ ಎಸೋಸಿಯೇಷನ್ ಶಿಕ್ಷೆಗೊಳಪಡಿಸಿದ್ದು ಮಾತ್ರವಲ್ಲ ಇತರ 28 ಯೂನಿವರ್ಸಿಟಿಗಳು ತನಿಖೆಗೊಳಗಾದವು.
ಹೀಗೆ, ಯುವ ಆಟಗಾರರ ಮೌಲ್ಯಗಳು ಹಾಳಾಗುವುದು ಆಶ್ಚರ್ಯವೇನೂ ಅಲ್ಲ, ಮತ್ತು ಇದು ಇಂದಿನ ಕ್ರೀಡೆಗಳಲ್ಲಿ ಇನ್ನೊಂದು ದೊಡ್ಡ ಸಮಸ್ಯೆ. ಸ್ವರ್ಧಾ ದಾಖಲೆಗಳನ್ನು ವರ್ಧಿಸಲು ಮಾದಕ ಪದಾರ್ಥಗಳ ಉಪಯೋಗ ಸಾಮಾನ್ಯ, ಆದರೆ ಅನೇಕ ವೇಳೆ ವಿದ್ಯಾವರ್ಧನೆ ಪ್ರಾಮುಖ್ಯವಲ್ಲ. ದೊಡ್ಡ ಸ್ಪರ್ಧಾ ಕಾರ್ಯಕ್ರಮಗಳಿರುವ ವಿದ್ಯಾಶಾಲೆಗಳ ಆಟಗಾರರು ಆ ಕಾಲಾವಧಿಯಲ್ಲಿ ಕಲಿಯುವುದಕ್ಕಿಂತ ಮತ್ತು ಕ್ಲಾಸಿಗೆ ಹಾಜರಾಗುವುದಕ್ಕಿಂತ ಹೆಚ್ಚು ಹೆಚ್ಚಾಗಿ ತಮ್ಮ ಆಟಗಳಲ್ಲಿ ಕಾಲ ಕಳೆಯುತ್ತಾರೆಂದು ಒಂದು ಪ್ರೌಢ ಅಧ್ಯಯನ ದೃಢೀಕರಿಸಿದೆ. ಸರಕಾರದ ಒಂದು ಅಧ್ಯಯನ ಸಹ, ಪುರುಷರಿಗೆ ದೊಡ್ಡ ಬಾಸ್ಕೆಟ್ಬಾಲ್ ಕಾರ್ಯಕ್ರಮಗಳಿರುವ ಮೂರರಲ್ಲಿ ಒಂದು ಅಮೆರಿಕನ್ ಕಾಲೆಜ್ ಮತ್ತು ಯೂನಿವರ್ಸಿಟಿಗಳಲ್ಲಿ 5ರಲ್ಲಿ 1ಕ್ಕಿಂತಲೂ ಕಡಮೆ ಮಂದಿ ಪದವೀಧರರಾಗುತ್ತಾರೆ ಎಂದು ಕಂಡುಹಿಡಿಯಿತು.
ಕಸಬುದಾರ ಆಟಗಳಲ್ಲಿ ಕ್ರಮೇಣ ಸಾಫಲ್ಯ ಹೊಂದಿ ಉತ್ತಮ ವೇತನ ಪಡೆಯುವ ಕೆಲವೇ ವಿದ್ಯಾರ್ಥಿ ಅಂಗಸಾಧಕರು ಸಹ ಅನೇಕ ವೇಳೆ ದುರಂತಪೂರ್ಣ ವ್ಯಕ್ತಿಗಳಾಗುತ್ತಾರೆ. ಅವರು ತಮ್ಮ ಹಣಕಾಸನ್ನು ನಿರ್ವಹಿಸಲು ಮತ್ತು ಜೀವನವನ್ನು ವಾಸ್ತವಿಕತೆಯಿಂದ ಎದುರಿಸಲು ಅಶಕ್ತರಾಗುತ್ತಾರೆ. 1991ರ ಫೆಬ್ರವರಿಯಲ್ಲಿ, ತನ್ನ 45ನೆಯ ವಯಸ್ಸಿನಲ್ಲಿ ಮನೆರಹಿತ ದಾರಿದ್ರ್ಯದಲ್ಲಿ ನಿಧನ ಹೊಂದಿದ ಟ್ರ್ಯಾವಿಸ್ ವಿಲ್ಯಮ್ಸ್ ಇದರ ಒಂದು ಮಾದರಿ. 1967ರಲ್ಲಿ ಗ್ರೀನ್ ಬೇ ಪ್ಯಾಕರ್ಸ್ ಫುಟ್ಬಾಲ್ ಟೀಮಿನಲ್ಲಿ ಆಡುತ್ತಿದ್ದಾಗ ಅವನು ಅಮೆರಿಕದ ಪ್ರೊಫೆಶನಲ್ ಫುಟ್ಬಾಲ್ನಲ್ಲಿ ಈಗಲೂ ನಿಂತಿರುವ ಒಂದು ದಾಖಲೆಯನ್ನು ಸ್ಥಾಪಿಸಿದನು. ಕಿಕಾಫ್ನಲ್ಲಿ ಸಿಕ್ಕಿದ ಚೆಂಡನ್ನು ಹಿಡಿದು ವಿರೋಧ ತಂಡದವರ ಕಡೆಗೆ ಸರಾಸರಿ 37.6 ಮೀಟರ್ ಓಡಿ ಇದನ್ನು ಸ್ಥಾಪಿಸಿದನು. ಅವನು ಒಮ್ಮೆ ಹೇಳಿದ್ದು: “ಕಾಲೆಜಿನಲ್ಲಿರುವಾಗ ಅವನಿಗೆ ಕ್ಲಾಸಿಗೆ ಹೋಗಬೇಕೆಂದೇ ಇರಲಿಲ್ಲ. ಕೇವಲ ಫುಟ್ಬಾಲ್ ಅಭ್ಯಾಸ ಮತ್ತು ಆಟಗಳಿಗೆ ಹಾಜರಿದ್ದರೆ ಸಾಕಾಗಿತ್ತು.”
ಪ್ರೇಕ್ಷಕ ಸಂಬಂಧಿತ ಸಮಸ್ಯೆಗಳು
ಇಂದು ಜನರು ಆಡುವುದಕ್ಕಿಂತ ಹೆಚ್ಚು ಸಮಯವನ್ನು ಆಟಗಳನ್ನು ಪ್ರೇಕ್ಷಿಸುವುದರಲ್ಲಿ ಕಳೆಯುತ್ತಾರೆ, ಮತ್ತು ಇದರಿಂದ ಗಮನಾರ್ಹ ಸಮಸ್ಯೆಗಳು ಬಂದಿವೆ. ಒಂದನೆಯದಾಗಿ, ಆಟಗಳಿಗೆ ಹೋಗುವುದರಲ್ಲಿ ಪ್ರೇಕ್ಷಕರ ಅಶ್ಲೀಲ ಮತ್ತು ಅನೇಕ ವೇಳೆ ಹಿಂಸಾತ್ಮಕ ವರ್ತನೆಗೆ ಬಲಿಯಾಗಬೇಕಾಗುತ್ತದೆ. ಕೆಲವು ಕ್ರೀಡೆಗಳ ಉದ್ರೇಕಿತ ವಾತಾವರಣದಲ್ಲಿ ಕಾದಾಟಗಳು ಸಾಮಾನ್ಯ, ಮತ್ತು ಹಾಗೆ ಹಾಜರಿದ್ದಾಗ ನೂರಾರು ಮಂದಿ ಗಾಯಗೊಂಡಿರುವುದಲ್ಲದೆ ಕೆಲವರು ಸತ್ತದ್ದೂ ಉಂಟು.
ಆದರೆ ಇಂದು, ಹೆಚ್ಚಿನ ಪ್ರೇಕ್ಷಕರು ಶಾರೀರಿಕವಾಗಿ ಆಟಗಳಲ್ಲಿ ಹಾಜರಿರುವುದಿಲ್ಲ; ಅವರು ಅವುಗಳನ್ನು ಟೆಲಿವಿಷನ್ಗಳಲ್ಲಿ ನೋಡುತ್ತಾರೆ. ಅಮೆರಿಕದಲ್ಲಿ 24 ತಾಸುಗಳ ಟೆಲಿವಿಷನ್ ಆಟ ಪ್ರಸಾರವಿದೆ. ಇದು ದೈನಂದಿನ ಆಟಪ್ರಸಾರಗಳಿಗೆ, ಯಾವುದೇ ದೊಡ್ಡ ಪ್ರಸಾರ ಕೇಂದ್ರಗಳು ದೈನಂದಿನ ವಾರ್ತಾಪ್ರಸಾರಗಳಿಗೆ ಮೀಸಲಾಗಿಡುವುದಕ್ಕಿಂತಲೂ ಹೆಚ್ಚು ಸಮಯವನ್ನು ಮೀಸಲಾಗಿಡುತ್ತವೆ! ಆದರೆ ಒಬ್ಬನ ಮನೆಯ ಏಕಾಂತತೆಯಲ್ಲಿ ಕ್ರೀಡೆಗಳ ಪ್ರೇಕ್ಷಣೆ ಸಮಸ್ಯೆರಹಿತವೆ?
ನಿಶ್ಚಯವಾಗಿಯೂ ಅಲ್ಲ. ಒಬ್ಬ ಮಹಿಳೆ ಹೇಳುವುದು: “ಅನೇಕ ವರ್ಷಗಳಿಂದ ನನ್ನ ಗಂಡನಿಗೆ ಪ್ರತಿಯೊಬ್ಬ ಕಸಬುದಾರ ಕ್ರೀಡಾಪಟುಗಳ ಪರಿಚಯವಿದೆ, ಮತ್ತು ನನ್ನ ಗಂಡನದ್ದು ಒಂಟಿ ಉದಾಹರಣೆಯಲ್ಲ. ಕ್ರಮವಾಗಿ ಕ್ರೀಡೆಗಳನ್ನು ಪ್ರೇಕ್ಷಿಸದ ಮಿತ್ರರು ಅವರಿಗಿರುವುದು ಕಡಮೆ. ಈ ಕ್ರಿಯೆಯಲ್ಲಿರುವ ಅತಿ ದೊಡ್ಡ ಅಪರಾಧವು ಮಕ್ಕಳ ಮೇಲೆ ಇದರಿಂದಾಗುವ ಪ್ರಭಾವವೆ,” ಎಂದು ಹೇಳಿ ಆ ಮಹಿಳೆ ಮುಂದುವರಿಸುವುದು: “ನನ್ನ ಗಂಡ ತನ್ನ ವ್ಯಕ್ತಿಪರ ಸಮಯವನ್ನು, ನನ್ನ ಮತ್ತು ಮಕ್ಕಳ ಪರಿವೆಯೇ ಇಲ್ಲದೆ ಕ್ರೀಡೆ ಪ್ರೇಕ್ಷಿಸಲು ಉಪಯೋಗಿಸುವುದರಲ್ಲಿ ನನಗೆ ಅಸಮಾಧಾನವಿದೆ.”
ಇದು ಒಂಟಿ ಗೊಣಗುವಿಕೆಯೆ? ಅಲ್ಲವೇ ಅಲ್ಲ. ಲೋಕದ ಅಧಿಕ ಭಾಗಗಳ ಮನೆಗಳಲ್ಲಿ, ಕುಟುಂಬದ ಇತರ ಸದಸ್ಯರನ್ನು ಅಸಡ್ಡೆ ಮಾಡುತ್ತಾ, ತೀರಾ ಹೆಚ್ಚು ಸಮಯವನ್ನು ಕ್ರೀಡಾ ಪ್ರೇಕ್ಷಣೆಯಲ್ಲಿ ಕಳೆಯುವ ಕುಟುಂಬ ಸದಸ್ಯರುಗಳಿದ್ದಾರೆ. ಬ್ರೆಸೀಲಿನ ಮನೆಯಾಕೆಯೊಬ್ಬಳು ಇದರಿಂದಾಗುವ ಅಪಾಯಕರ ಪರಿಣಾಮವನ್ನು ಸೂಚಿಸಿ ಹೇಳುವುದು: “ಪತಿ ಪತ್ನಿಯರ ನಡುವೆ ಇರುವ ಪ್ರೇಮ ಮತ್ತು ಭರವಸೆ ಕ್ರಮೇಣ ಶಿಥಿಲಗೊಂಡು, ಇದು ವಿವಾಹವನ್ನು ಅಪಾಯಕ್ಕೊಳಪಡಿಸಬಲ್ಲದು.”
ಕ್ರೀಡಾಸಕ್ತರು ಅನೇಕ ವೇಳೆ ಇನ್ನಿತರ ವಿಧಗಳಲ್ಲಿಯೂ ಅಸಮತೆ ತೋರಿಸುತ್ತಾರೆ. ಅವರು ಸಾಮಾನ್ಯವಾಗಿ ಆಟಗಾರರನ್ನು ಮೂರ್ತೀಕರಿಸುತ್ತಾರೆ. ಇದನ್ನು ಕೆಲವು ಆಟಗಾರರೇ ಸಮಸ್ಯೆಯಾಗಿ ಕಾಣುತ್ತಾರೆ. ಜರ್ಮನ್ ಟೆನಿಸ್ ಪಟು ಬಾರಿಸ್ ಬೆಕರ್ ಹೇಳಿದ್ದು: “ನಾನು ಸ್ವಂತ ಊರಿಗೆ ಬಂದಾಗ, ಜನರು ನಿಂತು, ಪೋಪರಿಂದ ಆಶೀರ್ವಾದಗಳನ್ನು ಪಡೆಯಲು ಅಪೇಕ್ಷಿಸುತ್ತಿರುವಂತೆ ನನ್ನನ್ನು ದಿಟ್ಟಿಸು ನೋಡುತ್ತಿದ್ದರು. ನಾನು ನನ್ನ ಆಸಕ್ತರ ಕಣ್ಣುಗಳನ್ನು ನೋಡಿದಾಗ . . . ಇದು ಘೋರ ಮೃಗಗಳನ್ನು ನೋಡುತ್ತಾ ಇದ್ದೇನೆ ಎಂದು ಭಾವಿಸಿದೆ. ಅವರ ಕಣ್ಣುಗಳು ನೆಟ್ಟಿದ್ದು ಅವುಗಳಲ್ಲಿ ಜೀವವಿರಲಿಲ್ಲ.”
ಕ್ರೀಡೆ ಉದ್ರೇಕ ಮತ್ತು ಬಲವಾದ ನಿಷ್ಠೆಯನ್ನು ಉಂಟುಮಾಡುವ ಕಾಂತತೆಯ ಶಕ್ತಿಯಾಗಿರಬಲ್ಲದು ನಿಸ್ಸಂದೇಹ. ಆಟಗಾರರ ತಂಡ ಸಹಕಾರ ಮತ್ತು ನೈಪುಣ್ಯದಿಂದ ಮಾತ್ರವಲ್ಲ, ಆಟದ ಫಲಿತಾಂಶದ ಅನಿಶ್ಚಿತತೆಯಿಂದ ಸಹ ಜನರು ಕ್ರೀಡೆಗಳಿಗೆ ಆಕರ್ಷಿತರಾಗುತ್ತಾರೆ. ಗೆಲ್ಲುವುದು ಯಾರೆಂದು ಅವರು ತಿಳಿಯಬಯಸುತ್ತಾರೆ. ಇದಲ್ಲದೆ, ಕೋಟಿಗಟ್ಟಲೆ ಜನರಿಗೆ ಅವರ ನೀರಸ ಜೀವನದಿಂದ ಕ್ರೀಡೆಗಳು ದಿಕ್ಚ್ಯುತಿಯನ್ನು ಒದಗಿಸುತ್ತವೆ.
ಆದರೂ, ಕ್ರೀಡೆಗಳು ಜನರಿಗೆ ಸಂತೋಷವನ್ನು ತರಬಲ್ಲವೆ? ಅವು ಒದಗಿಸಬಲ್ಲ ನಿಜ ಪ್ರಯೋಜನಗಳಿವೆಯೆ? ಮತ್ತು ಅವುಗಳೊಂದಿಗೆ ಜೊತೆಗೊಂಡಿರುವ ಸಮಸ್ಯೆಗಳಿಂದ ನೀವು ಹೇಗೆ ದೂರವಿರಬಲ್ಲಿರಿ? (g91 8/22)
[ಪುಟ 9 ರಲ್ಲಿರುವ ಚೌಕ]
ಕ್ರೀಡೆಗಳ ಧರ್ಮ
ಕೆನಡದ ಟಾಮ್ ಸಿಂಕರ್ಲ್-ಫಾಕ್ನರ್, ಐಸ್ “ಹಾಕಿ ಕೆನಡದಲ್ಲಿ ಕೇವಲ ಆಟವಲ್ಲ: ಅನೇಕರಿಗೆ ಅದು ಧರ್ಮವಾಗಿ ಕೆಲಸ ನಡೆಸುತ್ತದೆ,” ಎಂದು ವಾದಿಸಿದ್ದಾರೆ. ಇದು ಅನೇಕ ಕ್ರೀಡಾಸಕ್ತರು—ಅವರು ಎಲಿಯ್ಲೆ ಜೀವಿಸಲಿ—ಪ್ರದರ್ಶಿಸುವ ಮನೋಭಾವದ ಪ್ರತೀಕ.
ಉದಾಹರಣೆಗೆ, ಅಮೆರಿಕದಲ್ಲಿ ಕ್ರೀಡೆಗಳನ್ನು “ಮನ್ನಣೆ ಪಡೆದಿರುವ ಜಾತ್ಯಾತೀತ ಧರ್ಮ”ವೆಂದು ಕರೆಯಲಾಗಿದೆ. ಕ್ರೀಡಾ ಮನಶ್ಶಾಸ್ತ್ರಜ್ಞ ಡೇವಿಡ್ ಕಾಕ್ಸ್ ಹೇಳಿದ್ದೇನಂದರೆ, “ಕ್ರೀಡೆಗಳು ಮತ್ತು ಧರ್ಮದ ಬಗೆಗೆ ನಿಘಂಟಿನಲ್ಲಿರುವ ನಿರೂಪಣೆಯ ಮಧ್ಯೆ ಇರುವ ಸಂಬಂಧಗಳೊ ಅನೇಕ.” ಶ್ರೀ ಕಾಕ್ಸ್ ಮುಂದುವರಿಸಿದ್ದು: ಕೆಲವರು “ಅಂಗಸಾಧಕರನ್ನು ಅವರು ದೇವತೆಗಳೊ, ಸಂತರೊ ಎಂಬಂತೆ ಕಾಣುತ್ತಾರೆ.”
ಕ್ರೀಡಾಂಧರು ಮಾಡುವ ತ್ಯಾಗಗಳೊ ಹೇರಳ. ಅವರು ಕ್ರೀಡೆಗಳಿಗೆ ಸಮಯ ಮತ್ತು ಹಣವನ್ನು, ಅನೇಕ ವೇಳೆ ತಮ್ಮ ಕುಟುಂಬಗಳಿಗೆ ಹಾನಿಯನ್ನುಂಟುಮಾಡಿ ವ್ಯಯಿಸುತ್ತಾರೆ. ಕ್ರೀಡಾಸಕ್ತರು ಟೆಲಿವಿಷನ್ನಲ್ಲಿ ಆಟಗಳನ್ನು ಪ್ರೇಕ್ಷಿಸಲು ಅಸಂಖ್ಯಾತ ತಾಸುಗಳನ್ನು ಕಳೆಯುತ್ತಾರೆ. ಅವರು ಅಭಿಮಾನದಿಂದ ತಮ್ಮ ಟೀಮಿನ ಬಣ್ಣಗಳನ್ನು ಧರಿಸಿ ಬಹಿರಂಗವಾಗಿ ಕ್ರೀಡಾ ದ್ಯೋತಕಗಳನ್ನು ಪ್ರದರ್ಶಿಸುತ್ತಾರೆ. ಅವರು ಕಟ್ಟಾಸಕ್ತಿಯಿಂದ ಗೀತ ಹಾಡುತ್ತಾ ತಮ್ಮ ಕ್ರೀಡೆಯ ಭಕ್ತರೆಂದು ಗುರುತಿಸುವ ಮಂತ್ರಗಳನ್ನು ಕಿರಿಚುತ್ತಾರೆ.
ಅನೇಕ ಸ್ಪರ್ಧಿಗಳು ಆಟಕ್ಕೆ ಮೊದಲು ದೇವರ ಆಶೀರ್ವಾದಕ್ಕಾಗಿ ಪ್ರಾರ್ಥಿಸುವುದಲ್ಲದೆ, ಗೋಲ್ ಹೊಡೆದ ಬಳಿಕ ಮೊಣಕಾಲೂರಿ ಉಪಕಾರಸ್ತುತಿ ಮಾಡುತ್ತಾರೆ. 1986ರ ವರ್ಲ್ಡ್ ಕಪ್ ಆಟದಲ್ಲಿ, ಆರ್ಜೆಂಟೀನದ ಸಾಕರ್ ಪಟುವೊಬ್ಬನು ತಾನು ಹೊಡೆದ ಗೋಲನ್ನು, ಅದು ದೇವರ ಹಸ್ತವೆಂದನು. ಮತ್ತು ಕೆಲವು ಮತಾಸ್ತಕರಂತೆ, ಕ್ರೀಡಾಂಧರನ್ನು “ತತ್ವಾತ್ಮಕ ಸಾಂಪ್ರದಾಯಿಗಳು” ಎಂದೂ ಕರೆಯಲಾಗಿದೆ. ಈ ಕ್ರೀಡಾಂಧತೆ ರಕ್ತಮಯ, ಮತ್ತು ಹಲವೊಮ್ಮೆ, ಎದುರಾಳಿ ಆಸಕ್ತರ ಮಧ್ಯೆ ಮಾರಕ ಕಾದಾಟಗಳಿಗೂ ನಡಿಸಿದೆ.
ಸುಳ್ಳು ಧರ್ಮದಂತೆಯೆ, ಈ “ಜಾತ್ಯಾತೀತ ಧರ್ಮ” ಸಹ “ಸಂತ”ರನ್ನು, ಸಂಪ್ರದಾಯಗಳನ್ನು, ಸ್ಮಾರಕ ವಸ್ತುಗಳನ್ನು, ಮತ್ತು ಸಂಸ್ಕಾರಗಳನ್ನು ತನ್ನ ಹೆಬ್ಬಯಕೆಯ ಹಿಂಬಾಲಕರಿಗೆ ನೀಡಿದರೂ ಅವರ ಜೀವನಗಳಿಗೆ ನೈಜ ಯಾ ಬಾಳಿಕೆ ಬರುವ ಯಾವ ಅರ್ಥವನ್ನೂ ಒದಗಿಸುವುದಿಲ್ಲ.
[ಪುಟ 7 ರಲ್ಲಿರುವ ಚಿತ್ರ]
ಆಟಗಾರರನ್ನು ಅನೇಕ ವೇಳೆ ಆಟಕ್ಕೆ ಅನರ್ಹರಾಗುವಂತೆ ಮಾಡಲಾಗುತ್ತದೆ
[ಪುಟ 8 ರಲ್ಲಿರುವ ಚಿತ್ರ]
ಟೀವೀಯಲ್ಲಿ ಕ್ರೀಡಾ ಪ್ರೇಕ್ಷಣ ಕೌಟುಂಬಿಕ ಭಿನ್ನಾಭಿಪ್ರಾಯಗಳಿಗೆ ನಡೆಸಬಲ್ಲದು