ಯುವ ಜನರು ಪ್ರಶ್ನಿಸುವುದು . . .
ತಂಡ ಕ್ರೀಡೆಗಳು ಅವು ನನಗೆ ಉಚಿತವಾಗಿವೆಯೊ?
“ನಾನು ಕ್ರೀಡೆಗಳನ್ನು ಇಷ್ಟಪಡುತ್ತೇನೆ. ನಿಜವಾಗಿಯೂ ನನಗೆ ಒಳ್ಳೆಯ ಅನಿಸಿಕೆಯಾಗುತ್ತದೆ. ಮತ್ತು ನನ್ನ ಸ್ನೇಹಿತರೊಂದಿಗೆ ಇರುವುದರಲ್ಲಿ ನಾನು ಆನಂದಿಸುತ್ತೇನೆ.”—14 ವರ್ಷ ಪ್ರಾಯದ ಸ್ಯಾಂಡಿ.
“ವಿನೋದ!” “ಉದ್ರೇಕ!” “ಗೆಲ್ಲುವಿಕೆ!” ಅಮೆರಿಕ ಮತ್ತು ಕೆನಡದ ಯುವಜನರು, ಸಂಘಟಿತ ಕ್ರೀಡೆಗಳಲ್ಲಿ ಯಾಕೆ ಭಾಗವಹಿಸಿದರೆಂಬುದರ ಕುರಿತಾಗಿ ಅವರ ಸಮೀಕ್ಷೆ ನಡೆಸಲ್ಪಟ್ಟಾಗ, ಇವು ಅವರಿಂದ ಕೊಡಲ್ಪಟ್ಟ ಕಾರಣಗಳಲ್ಲಿ ಕೆಲವಾಗಿದ್ದವು. ಅನೇಕ ಯುವಜನರು ಅವರ ಅತ್ಯುತ್ಸಾಹವನ್ನು ಹಂಚಿಕೊಳ್ಳುತ್ತಾರೆಂಬುದು ಸ್ಪಷ್ಟ.
ಉದಾಹರಣೆಗಾಗಿ ಅಮೆರಿಕವನ್ನು ತೆಗೆದುಕೊಳ್ಳಿರಿ. ಲಾರೆನ್ಸ್ ಗಾಲ್ಟನ್ರಿಂದ ಬರೆಯಲ್ಪಟ್ಟ ಯುವರ್ ಚೈಲ್ಡ್ ಇನ್ ಸ್ಪೋರ್ಟ್ಸ್ ಎಂಬ ಪುಸ್ತಕಕ್ಕನುಸಾರ, “ಪ್ರತಿ ವರ್ಷ, ಆರು ವರ್ಷ ಪ್ರಾಯಗಳಿಗೆ ಮೇಲ್ಪಟ್ಟ ಅಮೆರಿಕದ 2 ಕೋಟಿ ಮಕ್ಕಳು, ಸಂಘಟಿಸಲ್ಪಟ್ಟ ಕ್ರೀಡೆಗಳ ತಂಡಗಳಲ್ಲಿ ಆಟವಾಡುತ್ತಾರೆ, ಅಥವಾ ಆಟವಾಡಲು ಪ್ರಯತ್ನಿಸುತ್ತಾರೆ.” ಮತ್ತು ಕೇವಲ ಕೆಲವು ವರ್ಷಗಳ ಹಿಂದಾದರೋ, ಸಂಘಟಿಸಲ್ಪಟ್ಟ ಕ್ರೀಡೆಗಳ ತಂಡಗಳಲ್ಲಿ ಬಹುಮಟ್ಟಿಗೆ ಅತ್ಯಧಿಕ ಹುಡುಗರಿರುತ್ತಿದ್ದರು, ಈಗ ದಾಖಲಿತ ಸಂಖ್ಯೆಗಳಲ್ಲಿ ಹುಡುಗಿಯರು, ಬೇಸ್ಬಾಲ್ಗಳನ್ನು ಎಸೆಯುತ್ತಿದ್ದಾರೆ, ಬಾಸ್ಕೆಟ್ಬಾಲ್ಗಳನ್ನು ಗುರಿಮುಟ್ಟಿಸುತ್ತಿದ್ದಾರೆ, ಮತ್ತು ಕಾಲ್ಚೆಂಡಾಟದ ಕ್ಷೇತ್ರದಲ್ಲಿಯೂ ಪರಸ್ಪರ ಸ್ಪರ್ಧಿಸುತ್ತಿದ್ದಾರೆ.
ನೀವು ಸ್ಪರ್ಧಾಳು ಮಾದರಿಯವರಾಗಿರಬಹುದು ಮತ್ತು ತಂಡವೊಂದಕ್ಕೆ ಸೇರಿಕೊಳ್ಳುವುದು ವಿನೋದಕರವಾಗಿರಸಾಧ್ಯವಿದೆಯೆಂದು ಭಾವಿಸಬಹುದು. ಅಥವಾ ನೀವು ಹೆತ್ತವರಿಂದ, ಶಿಕ್ಷಕರಿಂದ, ಅಥವಾ ಕ್ರೀಡಾದಳ ಶಿಕ್ಷಕರಿಂದ ಹಾಗೆ ಮಾಡುವಂತೆ ಬಹಳ ಉತ್ತೇಜನವನ್ನು—ಬಹುಶಃ ಒತ್ತಡವನ್ನೂ—ಪಡೆದುಕೊಳ್ಳುತ್ತಿರಬಹುದು. ಸನ್ನಿವೇಶವು ಏನೇ ಆಗಿರಲಿ, ತಂಡ ಕ್ರೀಡೆಗಳೊಂದಿಗೆ ಒಳಗೂಡುವುದು, ಅದಕ್ಕಾಗಿ ನಿಮ್ಮ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ಮೀಸಲಾಗಿಡುವುದನ್ನು ಅಗತ್ಯಪಡಿಸುತ್ತದೆ. ಆದುದರಿಂದ ಒಳಿತುಗಳು ಹಾಗೂ ಕೆಡುಕುಗಳಲ್ಲಿ ಕೆಲವನ್ನು ಅರಿತಿರುವುದು, ಸಮಂಜಸವಾದದ್ದೂ ಪ್ರಾಯೋಗಿಕವಾದದ್ದೂ ಆಗಿದೆ. ಮೊದಲಾಗಿ ಕೆಲವು ಒಳಿತುಗಳ ಕಡೆಗೆ ನೋಡೋಣ.
ಕ್ರೀಡೆಗಳು—ಪ್ರಯೋಜನಗಳು
“ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ,” ಎಂದು ಬೈಬಲು ಹೇಳುತ್ತದೆ. (1 ತಿಮೊಥೆಯ 4:8) ಮತ್ತು ಎಳೆಯರು ಶಾರೀರಿಕ ಚಟುವಟಿಕೆಯಿಂದ ನಿಶ್ಚಯವಾಗಿಯೂ ಪ್ರಯೋಜನವನ್ನು ಪಡೆಯಬಲ್ಲರು. ಅಮೆರಿಕದಲ್ಲಿ, ಗಾಬರಿಹುಟ್ಟಿಸುವಂತಹ ಸಂಖ್ಯೆಗಳಲ್ಲಿ ಎಳೆಯರು ಸ್ಥೂಲ ಕಾಯ, ಅಧಿಕ ರಕ್ತದೊತ್ತಡ, ಮತ್ತು ಅಧಿಕ ಕಲೆಸ್ಟರಾಲ್ನಿಂದ ಕಷ್ಟಾನುಭವಿಸುತ್ತಾರೆ. ಅಂತಹ ಸಮಸ್ಯೆಗಳನ್ನು ನಿಯಂತ್ರಣದ ಕೆಳಗೆ ತರಲಿಕ್ಕಾಗಿ ಕ್ರಮವಾದ ವ್ಯಾಯಾಮವು ಹೆಚ್ಚನ್ನು ಮಾಡಬಲ್ಲದು. ಅಮೆರಿಕನ್ ಹೆಲ್ತ್ ಪತ್ರಿಕೆಯಲ್ಲಿನ ಲೇಖನವೊಂದಕ್ಕನುಸಾರವಾಗಿ, “ಜಡತನದ [ಚಟುವಟಿಕೆರಹಿತ] ಮಕ್ಕಳಿಗಿಂತಲೂ, ಕ್ರಮವಾಗಿ ವ್ಯಾಯಾಮ ಮಾಡುವ ಎಳೆಯರು ಹೆಚ್ಚು ಉತ್ತಮವಾದ ಉಸಿರಾಟದ ಸಾಮರ್ಥ್ಯವನ್ನು ಸಾಧಿಸುತ್ತಾರೆ. ಆಗಿಂದಾಗ್ಗೆ ವ್ಯಾಯಾಮ ಮಾಡುವವರು ಸಹ ಕ್ರೀಡೆಗಳಲ್ಲಿ ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಹೆಚ್ಚು ಉತ್ತಮವಾದ ತೂಕ ನಿಯಂತ್ರಣವನ್ನು ಅಭ್ಯಾಸಿಸುತ್ತಾರೆ.” ವ್ಯಾಯಾಮವು, ಒತ್ತಡದಿಂದ ವಿಮುಕ್ತಗೊಳಿಸಬಲ್ಲದು, ಆಯಾಸವನ್ನು ಕಡಿಮೆಮಾಡಬಲ್ಲದು, ಮತ್ತು ನಿಮ್ಮ ನಿದ್ರೆಯನ್ನೂ ಉತ್ತಮಗೊಳಿಸಬಲ್ಲದು ಎಂದೂ ಸಂಶೋಧಕರು ಹೇಳುತ್ತಾರೆ.
ಆಸಕ್ತಿಕರವಾಗಿ, ಯುವರ್ ಚೈಲ್ಡ್ ಇನ್ ಸ್ಪೋರ್ಟ್ಸ್ ಎಂಬ ಪುಸ್ತಕವು ಗಮನಿಸುವುದು: “ಅನೇಕ ವಯಸ್ಕ ಆರೋಗ್ಯ ಸಮಸ್ಯೆಗಳು ತಮ್ಮ ಮೂಲವನ್ನು ಯುವ ಪ್ರಾಯದಲ್ಲೇ ಹೊಂದಿವೆ ಎಂಬುದು ಸುವ್ಯಕ್ತವಾಗಿದೆ.” ಹೀಗೆ ಕ್ರಮವಾದ ವ್ಯಾಯಾಮದ ಪ್ರಯೋಜನಗಳು ಪ್ರಾಪ್ತವಯಸ್ಕತೆಗೂ ವ್ಯಾಪಿಸಬಹುದು ಎಂದು ಅನೇಕ ವೈದ್ಯರು ಭಾವಿಸುತ್ತಾರೆ. ಲೇಖಕಿ ಮರೀ ಸಿ. ಹಿಕೀ ವರದಿಸುವುದು: “ಕ್ರೀಡೆಗಳನ್ನು ಆಡುವ ಮಕ್ಕಳು, ವಯಸ್ಕರೋಪಾದಿ ಶಾರೀರಿಕವಾಗಿ ಹೆಚ್ಚು ಕ್ರಿಯಾಶೀಲರಾಗಿರುವುದು ಸಂಭವನೀಯ ಎಂಬುದಾಗಿ ಸಂಶೋಧನೆಯು ಕಂಡುಕೊಂಡಿದೆ.”
ತಂಡ ಕ್ರೀಡೆಗಳಲ್ಲಿ ಇನ್ನೂ ಇತರ ಅರ್ಥಗರ್ಭಿತವಾದ ಪ್ರಯೋಜನಗಳಿವೆ ಎಂದು ಅನೇಕರು ಭಾವಿಸುತ್ತಾರೆ. ತನ್ನ ಮಗನ ಕಾಲ್ಚೆಂಡಾಟದ ಆಡುವಿಕೆಯ ಕುರಿತಾಗಿ ಒಬ್ಬ ತಂದೆಯು ಹೇಳಿದ್ದು: ‘ಅದು ಅವನನ್ನು ಬೀದಿಗಳಲ್ಲಿ ತಿರುಗಾಡುತ್ತಿರುವುದರಿಂದ ತಡೆಯುತ್ತದೆ. ಅದು ಅವನಿಗೆ ಶಿಸ್ತನ್ನು ಕಲಿಸುತ್ತದೆ.’ ತಂಡವೊಂದರೊಂದಿಗೆ ಆಟವಾಡುವುದು, ಯುವಕನೊಬ್ಬನಿಗೆ ಇತರರರೊಂದಿಗೆ ಸಹಕರಿಸುವುದನ್ನು—ಜೀವನ ಪರ್ಯಂತರ ಪ್ರಯೋಜನಗಳನ್ನು ಹೊಂದಿರಬಹುದಾದ ಒಂದು ಕೌಶಲವನ್ನು—ಕಲಿಸುತ್ತದೆ ಎಂದು ಇತರರು ಭಾವಿಸು ತ್ತಾರೆ. ತಂಡ ಕ್ರೀಡೆಗಳು ಯುವಜನರಿಗೆ ನಿಯಮಗಳನ್ನು ಪಾಲಿಸಲು, ಸ್ವಶಿಸ್ತಿನವರಾಗಿರಲು, ನಾಯಕತ್ವವನ್ನು ಅಭ್ಯಾಸಿಸಲು, ಮತ್ತು ಯಶಸ್ಸು ಹಾಗೂ ಅಪಜಯ—ಎರಡರೊಂದಿಗೂ ವಿನಯದಿಂದ ವ್ಯವಹರಿಸಲು ಸಹ ಕಲಿಸುತ್ತವೆ. “ಯುವ ಜನರಿಗೆ ಕ್ರೀಡೆಗಳು ಪ್ರಧಾನ ಪ್ರಯೋಗಶಾಲೆಯಾಗಿವೆ” ಎಂದು ಡಾ. ಜಾರ್ಜ್ ಶೀಹ್ಯಾನ್ ಹೇಳುತ್ತಾರೆ. “ವಿದ್ಯಾರ್ಥಿಗಳು ಅನೇಕವೇಳೆ ಶಿಕ್ಷಕರಿಂದ ಯಾವ ವಿಚಾರಗಳ ಕುರಿತು ಕೇಳುತ್ತಾರೊ ಅದರ ಕುರಿತಾದ ನೇರವಾದ ಅನುಭವವನ್ನು ಅವು ವಿದ್ಯಾರ್ಥಿಗಳಿಗೆ ಕೊಡುತ್ತವೆ: ಧೈರ್ಯ, ಕೌಶಲ, ಅರ್ಪಣೆ.”—ಕರೆಂಟ್ ಹೆಲ್ತ್, ಸೆಪ್ಟೆಂಬರ್ 1985.
ಕನಿಷ್ಠಪಕ್ಷ, ಜಯಗಳಿಸುವ ತಂಡವೊಂದರಲ್ಲಿರುವುದು, ಒಬ್ಬನ ಆತ್ಮಾಭಿಮಾನಕ್ಕೆ ಪುಷ್ಟಿಕೊಡುವಂತಹದ್ದಾಗಿರಸಾಧ್ಯವಿದೆ. “ನಾನು ಚೆಂಡನ್ನು ಟಚ್ಡೌನ್ ಮಾಡುವುದಾದರೆ ಅಥವಾ ಒಂದು ಶಾಟನ್ನು ಮಾಡುವುದಾದರೆ ನನ್ನ ಕುರಿತು ನನಗೆ ಬಹಳ ಹೆಮ್ಮೆಯ ಅನಿಸಿಕೆಯಾಗುತ್ತದೆ” ಎಂದು ಯುವಕನಾದ ಎಡಿ ಹೇಳುತ್ತಾನೆ.
ಕೀರ್ತಿ, ಸಂಪತ್ತು, ಮತ್ತು ಜನಪ್ರಿಯತೆ
ಆದರೂ, ಇತರ ಯುವ ಜನರಿಗೆ ತಂಡ ಕ್ರೀಡೆಗಳ ನೈಜ ಆಕರ್ಷಣೆಯು, ತಮ್ಮ ಸಮಾನಸ್ಥರ ಒಪ್ಪಿಗೆ ಮತ್ತು ಅಂಗೀಕಾರವನ್ನು ಪಡೆದುಕೊಳ್ಳುವುದಾಗಿದೆ. “ಪ್ರತಿ ಸಲ ನೀವು ಯಾವುದಾದರೂ ಒಳ್ಳೆಯ ವಿಷಯವನ್ನು ಮಾಡಿದಾಗ, ಪ್ರತಿಯೊಬ್ಬರೂ ಸದಾ ನಿಮ್ಮ ಬೆನ್ನುತಟ್ಟುತ್ತಿರುತ್ತಾರೆ” ಎಂದು 13 ವರ್ಷ ಪ್ರಾಯದ ಗಾರ್ಡನ್ ವಿವರಿಸುತ್ತಾನೆ.
ಸೂಸನ್ ಮತ್ತು ಡ್ಯಾನಿಯೆಲ್ ಕೋಅನ್ರಿಂದ ಬರೆಯಲ್ಪಟ್ಟ ಟೀನೇಜ್ ಸ್ಟ್ರೆಸ್ ಎಂಬ ಪುಸ್ತಕವು ಒಪ್ಪಿಕೊಳ್ಳುವುದು: “ವಿಶೇಷವಾಗಿ ಹುಡುಗರಿಗೆ, ಜನಪ್ರಿಯತೆಗೆ ಯಾವುದೇ ನಿಶ್ಚಿತ ರಸ್ತೆಯಿದೆ ಎಂಬಂತೆ ಭಾಸವಾಗುವಲ್ಲಿ, ಅದು ಸ್ಪರ್ಧೆಯಾಗಿದೆ. . . . ಕಾಲ್ಚೆಂಡಾಟ ಅಥವಾ ಬಾಸ್ಕೆಟ್ಬಾಲ್ ತಂಡ ತಾರೆಗೆ ಅಂಗೀಕಾರದ ಕೊರತೆಯಿರುವುದನ್ನು ನೀವು ಕಾಣುವುದು ತೀರ ವಿರಳ.” ಸ್ಪರ್ಧಾಳುಗಳು ಎಷ್ಟು ಹೆಚ್ಚಾಗಿ ಗೌರವಿಸಲ್ಪಡುತ್ತಾರೆ ಎಂಬುದನ್ನು ಒಂದು ಸಮೀಕ್ಷೆಯು ಪ್ರಕಟಿಸಿತು. ವಿದ್ಯಾರ್ಥಿಗಳಿಗೆ, ಅವರು ಒಬ್ಬ ಸ್ಪರ್ಧಾ ತಾರೆಯೋಪಾದಿ, ಒಬ್ಬ ಬುದ್ಧಿವಂತ ವಿದ್ಯಾರ್ಥಿಯೋಪಾದಿ ಅಥವಾ ಅತ್ಯಂತ ಜನಪ್ರಿಯ ವ್ಯಕ್ತಿಯೋಪಾದಿ ಸ್ಮರಿಸಲ್ಪಡಲು ಇಷ್ಟಪಡುವರೋ ಎಂದು ಕೇಳಲಾಯಿತು. ಹುಡುಗರಲ್ಲಿ, ಒಬ್ಬ “ಸ್ಪರ್ಧಾ ತಾರೆ”ಯಾಗುವುದು ಪ್ರಥಮ ಆಯ್ಕೆಯಾಗಿತ್ತು.
ಅಧಿಕ ಸಂಖ್ಯೆಯ ಮಾಧ್ಯಮಗಳು ವೃತ್ತಿಪರ ಸ್ಪರ್ಧಾಳುಗಳ ಮೇಲೆ ಹೇರುವ ಆರಾಧನಾಪೂರ್ವಕ ಗಮನವನ್ನು ನೀವು ಪರಿಗಣಿಸುವಾಗ, ಒಬ್ಬ ಪಂಡಿತನಿಗಿಂತಲೂ ಕಾಲ್ಚೆಂಡಾಟ ಅಥವಾ ಬಾಸ್ಕೆಟ್ಬಾಲ್ ಆಟಗಾರರು ಹೆಚ್ಚು ಗೌರವವನ್ನು ಪಡೆದುಕೊಳ್ಳುತ್ತಾರೆಂಬುದು ಹೆಚ್ಚು ಆಶ್ಚರ್ಯಕರವೇನಲ್ಲ. ಅವರ ಕುರಿತ ಹೆಚ್ಚಿನ ಸುದ್ದಿ ಪ್ರಕಟನೆಯು, ಅವರ ಬೃಹತ್ಸಂಖ್ಯೆಗಳಷ್ಟಿರುವ ಸಂಬಳಗಳು ಮತ್ತು ಅದ್ಧೂರಿಯ ಜೀವನ ಶೈಲಿಗಳ ಮೇಲೆ ಕೇಂದ್ರೀಕರಿಸುತ್ತದೆ. ಅನೇಕ ಯುವಜನರು, ವಿಶೇಷವಾಗಿ ನಗರದ ಕೇಂದ್ರ ಭಾಗದಲ್ಲಿರುವವರು, ಶಾಲೆಯ ಕ್ರೀಡೆಗಳನ್ನು ಸಮೃದ್ಧಿ—ಬಡತನದಿಂದ ತಪ್ಪಿಸಿಕೊಳ್ಳಲಿಕ್ಕಾಗಿರುವ ಒಂದು ಮಾರ್ಗ—ಗಾಗಿರುವ ಮೆಟ್ಟುಗಲ್ಲಿನೋಪಾದಿ ನೋಡಬಹುದು ಎಂಬುದರಲ್ಲಿ ಆಶ್ಚರ್ಯವಿಲ್ಲ!
ಅಸಂತೋಷಕರವಾಗಿ, ವಾಸ್ತವಿಕತೆಯು, ಮೇಲೆ ಉಲ್ಲೇಖಿಸಲ್ಪಟ್ಟ ನಿರೀಕ್ಷಣೆಗಳನ್ನು ತಲಪಲು ತೀರ ಸೋತುಹೋಗುತ್ತದೆ. ಕರೆಂಟ್ ಹೆಲ್ತ್ ಪತ್ರಿಕೆಯಲ್ಲಿನ “ಎಷ್ಟು ಮಂದಿ ಸ್ಪರ್ಧಾಳುಗಳು ವೃತ್ತಿಪರ ಸ್ಪರ್ಧಾಳುಗಳಾಗಿ ಪರಿಣಮಿಸುವುದರಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ?” ಎಂಬ ಶಿರೋನಾಮವುಳ್ಳ ಒಂದು ಲೇಖನವು, ಕೆಲವು ವಾಸ್ತವವಾದ ಸಂಖ್ಯಾಸಂಗ್ರಹಣಗಳನ್ನು ಕೊಟ್ಟಿತು. ಅದು ವರದಿಸಿದ್ದು: “[ಅಮೆರಿಕದಲ್ಲಿ] 10 ಲಕ್ಷಕ್ಕಿಂತಲೂ ಹೆಚ್ಚಿನ ಹುಡುಗರು, ಪ್ರೌಢ ಶಾಲೆಯ ಕಾಲ್ಚೆಂಡಾಟವನ್ನು ಆಡುತ್ತಾರೆ; ಬಹುಮಟ್ಟಿಗೆ 5,00,000 ಮಂದಿ ಬಾಸ್ಕೆಟ್ಬಾಲ್ ಆಡುತ್ತಾರೆ; ಮತ್ತು ಸುಮಾರು 4,00,000 ಮಂದಿ ಬೇಸ್ಬಾಲ್ ಆಟದಲ್ಲಿ ಭಾಗವಹಿಸುತ್ತಾರೆ. ಪ್ರೌಢ ಶಾಲೆಯಿಂದ ಕಾಲೇಜಿಗೆ, ಭಾಗವಹಿಸುವವರ ಸಂಖ್ಯೆಯು ಪ್ರಚಂಡವಾಗಿ ಇಳಿಯುತ್ತದೆ. ಕಾಲೇಜಿನ ಕಾಲ್ಚೆಂಡಾಟ, ಬಾಸ್ಕೆಟ್ಬಾಲ್, ಮತ್ತು ಬೇಸ್ಬಾಲ್ನಲ್ಲಿ, ಒಟ್ಟಿಗೆ ಸುಮಾರು 11,000 ಸ್ಪರ್ಧಾಳುಗಳು ಮಾತ್ರವೇ ಭಾಗವಹಿಸುತ್ತಾರೆ.” ಕಾಲೇಜಿನಿಂದ, ಸಂಖ್ಯಾಸಂಗ್ರಹಣಗಳು ಇನ್ನೂ ನಿರಾಶೆಹುಟ್ಟಿಸುವಂತಹವುಗಳಾಗಿ ಪರಿಣಮಿಸುತ್ತವೆ. “[ಕಾಲೇಜಿನ ಸ್ಪರ್ಧಾಳುಗಳಲ್ಲಿ] ಇಷ್ಟರ ವರೆಗೆ ಸುಮಾರು 8 ಪ್ರತಿಶತ ಮಂದಿ ಮಾತ್ರವೇ ವೃತ್ತಿಪರ ತಂಡಗಳಿಂದ ಆಯ್ಕೆಮಾಡಲ್ಪಟ್ಟಿದ್ದು, ಅವರಲ್ಲಿ ಕೇವಲ 2 ಪ್ರತಿಶತ ಮಂದಿ ವೃತ್ತಿಪರ ಒಪ್ಪಂದಕ್ಕೆ ಸಹಿ ಮಾಡುತ್ತಾರೆ.” ತದನಂತರ ಆ ಲೇಖನವು ಈ ಜ್ಞಾಪನವನ್ನು ಕೊಡುತ್ತದೆ: “ಒಪ್ಪಂದವೊಂದಕ್ಕೆ ಸಹಿ ಮಾಡುವುದು ಸಹ, ಸ್ಪರ್ಧಾಳುವು ತಂಡದಲ್ಲಿ ಒಂದು ಸ್ಥಾನವನ್ನು ಪಡೆಯುವನೆಂಬುದನ್ನು ಅರ್ಥೈಸುವುದಿಲ್ಲ.”
ಹಾಗಾದರೆ, ಒಟ್ಟಿಗೆ “ಪ್ರೌಢ ಶಾಲೆಯ ಪ್ರತಿ 12,000 ಸ್ಪರ್ಧಾಳುಗಳಲ್ಲಿ ಕೇವಲ ಒಬ್ಬನು ವೃತ್ತಿಪರನಾಗುವನು.” ಲಾಟರಿಯೊಂದರಲ್ಲಿ ಪ್ರಥಮ ಬಹುಮಾನವನ್ನು ಗೆಲ್ಲುವ ಅವಕಾಶಗಳಿಗಿಂತ ಹೆಚ್ಚು ಉತ್ತಮವಾದ ಭಾಗ್ಯವು ಅದಾಗಿಲ್ಲದಿರಬಹುದು! ಆದರೆ ಕಡಿಮೆಪಕ್ಷ, ಒಬ್ಬ ಸ್ಪರ್ಧಾಳುವು ತನ್ನ ಎಲ್ಲಾ ಪ್ರಯತ್ನಗಳಿಗಾಗಿ ಉಚಿತ ಕಾಲೇಜು ಶಿಕ್ಷಣವನ್ನು ಪಡೆಯಸಾಧ್ಯವಿಲ್ಲವೊ? ಎಂದು ನೀವು ಕುತೂಹಲಪಡಬಹುದು. ಪುನಃ ಒಮ್ಮೆ, ಅವಕಾಶಗಳು ಅಷ್ಟೊಂದು ಒಳ್ಳೆಯವುಗಳಾಗಿಲ್ಲ. ರಿಚರ್ಡ್ ಇ. ಲ್ಯಾಪ್ಚಿಕ್ ಮತ್ತು ರಾಬರ್ಟ್ ಮಾಲ್ಕಾಫ್ರಿಂದ ಬರೆಯಲ್ಪಟ್ಟ, ಆನ್ ದ ಮಾರ್ಕ್ ಎಂಬ ಪುಸ್ತಕಕ್ಕನುಸಾರವಾಗಿ, “ಪ್ರೌಢ ಶಾಲೆಯ ಲಕ್ಷಾಂತರ ಸ್ಪರ್ಧಾಳುಗಳಲ್ಲಿ . . . ಕಾಲೇಜಿನಲ್ಲಿ ಕ್ರೀಡೆಗಳನ್ನು ಆಡಲಿಕ್ಕಾಗಿ 50 ಮಂದಿಯಲ್ಲಿ ಕೇವಲ ಒಬ್ಬನು ವಿದ್ಯಾರ್ಥಿವೇತನವನ್ನು ಪಡೆಯುವನು.” ವಿಷಾದಕರವಾದ ಇನ್ನೊಂದು ಸಂಖ್ಯಾಸಂಗ್ರಹಣವು ಹೀಗಿದೆ: “ಕಾಲ್ಚೆಂಡಾಟ ಮತ್ತು ಬಾಸ್ಕೆಟ್ಬಾಲ್ನಂತಹ ದೊಡ್ಡ ಮೊತ್ತದ ಹಣವನ್ನು ತರುವ ಕ್ರೀಡೆಗಳಲ್ಲಿ ವಿದ್ಯಾರ್ಥಿವೇತನಗಳನ್ನು ಪಡೆಯುವ ಉಚ್ಚ ಆಟಗಾರರ ನಡುವೆ, 30 ಪ್ರತಿಶತಕ್ಕಿಂತಲೂ ಕಡಿಮೆ ಮಂದಿ ನಾಲ್ಕು ವರ್ಷಗಳ ಬಳಿಕ ಕಾಲೇಜಿನಿಂದ ಪದವಿಪಡೆಯುವರು.”
ಆಟಗಾರರಲ್ಲಿ ಅಧಿಕಾಂಶ ಮಂದಿಗೆ, ಐಶ್ವರ್ಯವಂತರೂ ಪ್ರಸಿದ್ಧರೂ ಆದ ಸ್ಪರ್ಧಾಳುವಾಗಿ ಪರಿಣಮಿಸುವುದು, ಕೇವಲ ಒಂದು ಭ್ರಮೆಯಾಗಿದೆ—ಒಂದು ಅಸಂಭವವಾದ ಕಲ್ಪನೆ.
ಕ್ರೀಡಾ ತ್ಯಾಗಿಗಳು
ಉತ್ತಮವಾದ ಆರೋಗ್ಯ, ಶೀಲ ವಿಕಸನ, ಮತ್ತು ಹೆಚ್ಚಾದ ಜನಪ್ರಿಯತೆಯ ಪ್ರತೀಕ್ಷೆಗಳನ್ನು ನೀವು ಪರಿಗಣಿಸುವಾಗ, ಸಂಘಟಿತ ಕ್ರೀಡೆಗಳ ತಂಡವನ್ನು ಸೇರುವುದು, ಇನ್ನೂ ಮಾಡಲಿಕ್ಕಾಗಿರುವ ಚತುರ ವಿಷಯವಾಗಿ ತೋರಬಹುದು. ಆದರೆ ನೀವು ಅವಸರದಿಂದ ಅಭ್ಯಾಸಕ್ಕಿಳಿಯುವ ಮೊದಲು, ಲೇಡಿಸ್ ಹೋಮ್ ಜರ್ನಲ್ನಲ್ಲಿ ಹೇಳಲ್ಪಟ್ಟಿರುವ ವಿಷಯವನ್ನು ಪರಿಗಣಿಸಿರಿ: “ಹಿಂದಿನ ಯಾವುದೇ ಸಂತತಿಗಿಂತಲೂ ಇಂದು ಹೆಚ್ಚಿನ ಮಕ್ಕಳು ಸಂಘಟಿತ ಕ್ರೀಡೆಗಳಲ್ಲಿ ತಮ್ಮನ್ನು ನಮೂದಿಸಿಕೊಳ್ಳುತ್ತಿದ್ದಾರೆ. ಕೆಟ್ಟ ಸುದ್ದಿ: ಅಧಿಕ ಸಂಖ್ಯೆಗಳಲ್ಲಿ ಅವರು ಈ ಕ್ರೀಡೆಗಳ ಕಾರ್ಯಕ್ರಮಗಳನ್ನು ತೊರೆಯುತ್ತಿದ್ದಾರೆ.” ಈ ವಿಷಯದ ಕುರಿತ ಪರಿಣತರಾದ ಡಾ. ವರ್ನ್ ಸೇಫೆಲ್ಟ್, ಹೀಗೆ ಹೇಳಿರುವುದಾಗಿ ಉಲ್ಲೇಖಿಸಲ್ಪಟ್ಟಿದ್ದಾರೆ: “ಅವರು ಹದಿನೈದರ ಪ್ರಾಯವನ್ನು ತಲಪುವಷ್ಟಕ್ಕೆ, ಎಂದಾದರೂ ಕ್ರೀಡೆಯೊಂದನ್ನು ಆಡಿರುವ ಮಕ್ಕಳಲ್ಲಿ ಎಪ್ಪತ್ತೈದು ಪ್ರತಿಶತ ಮಂದಿ ಅದರಲ್ಲಿ ಭಾಗವಹಿಸುವುದನ್ನು ನಿಲ್ಲಿಸಿರುತ್ತಾರೆ.”
ಎಲ್ಲಿ ಐಸ್ ಹಾಕಿಯ ಕ್ರೀಡೆಯು ವಿಪರೀತ ಜನಪ್ರಿಯತೆಯನ್ನು ಅನುಭವಿಸುತ್ತದೊ ಆ ಕೆನಡವನ್ನು ಪರಿಗಣಿಸಿರಿ. ಹವ್ಯಾಸಿ ಹಾಕಿ ಸಂಘವೊಂದರಲ್ಲಿ, ಅದರ 6,00,000ಕ್ಕಿಂತಲೂ ಹೆಚ್ಚಿನ ಆಟಗಾರರಲ್ಲಿ 53 ಪ್ರತಿಶತ ಮಂದಿ, 12 ವರ್ಷ ಪ್ರಾಯಕ್ಕಿಂತ ಕೆಳಗಿನವರಾಗಿದ್ದರು. ಆದರೂ, 15ಕ್ಕಿಂತ ಮೇಲ್ಪಟ್ಟ ಪ್ರಾಯದವರು, 11 ಪ್ರತಿಶತ ಮಾತ್ರವೇ ಇದ್ದರು. ಕಾರಣವೇನು? ಆ ಪ್ರಾಯದೊಳಗೆ ಅಧಿಕಾಂಶ ಯುವ ಜನರು ಆಡುವುದನ್ನು ಬಿಟ್ಟುಬಿಟ್ಟಿದ್ದಾರೆ. ಅಷ್ಟೊಂದು ಜನರು ಏಕೆ ಬಿಟ್ಟುಬಿಡುತ್ತಾರೆ?
ಸಾಮಾನ್ಯವಾಗಿ ಕ್ರೀಡಾ ತ್ಯಾಗಿಗಳು, ಆಶ್ಚರ್ಯಕರವಾಗಿ ತಮ್ಮ ವಿಪಥಕ್ಕಾಗಿ ಸರಳ ಕಾರಣವನ್ನು ಕೊಡುತ್ತಾರೆಂದು ಸಂಶೋಧಕರು ಹೇಳುತ್ತಾರೆ: ಕ್ರೀಡೆಗಳು ಇನ್ನು ಮುಂದೆ ವಿನೋದಕರವಾಗಿರುವುದಿಲ್ಲ. ವಾಸ್ತವವಾಗಿ, ತಂಡವೊಂದರಲ್ಲಿ ಆಡುವುದು, ಆಯಾಸಪಡಿಸುವ, ಸಮಯವನ್ನು ವ್ಯಯಮಾಡುವ ಕಾರ್ಯಯೋಜನೆಯಾಗಿರಸಾಧ್ಯವಿದೆ. ತಂಡವೊಂದಕ್ಕಾಗಿ ಕೇವಲ ಅಭ್ಯಾಸಿಸುವುದು, “ದಿನವೊಂದಕ್ಕೆ ಮೂರು ತಾಸುಗಳು, ಒಂದು ವಾರಕ್ಕೆ ಐದು ದಿನಗಳು . . . ಸುಮಾರು ಎರಡು ಅಥವಾ ಮೂರು ವಾರಗಳ ವರೆಗೆ” ಕೆಲಸ ಮಾಡುವುದನ್ನು ಒಳಗೊಳ್ಳಬಹುದು ಎಂದು ಸೆವೆಂಟೀನ್ ಪತ್ರಿಕೆಯು ತನ್ನ ಓದುಗರಿಗೆ ಹೇಳಿತು. ನೀವು ಆ ಉಗ್ರಪರೀಕ್ಷೆಯನ್ನು ಪಾರಾಗಿ, ತಂಡವನ್ನು ಸೇರಲು ಅನುಮತಿಸಲ್ಪಡುವುದಾದರೆ, ನಿಮ್ಮ ಭವಿಷ್ಯತ್ತಿನಲ್ಲಿ ಇನ್ನೂ ಹೆಚ್ಚಿನ ತಾಸುಗಟ್ಟಲೆ ಅಭ್ಯಾಸಗಳು ಮತ್ತು ಕ್ರಮವಾದ ವ್ಯಾಯಾಮಗಳು ಇವೆ. ತನ್ನ ಆಟಕ್ಕಾಗಿ ತರಬೇತಿ ಪಡೆಯುತ್ತಾ, ದಿನವೊಂದಕ್ಕೆ ಮೂರು ತಾಸುಗಳಿಗಿಂತಲೂ ಹೆಚ್ಚಿನ ಸಮಯವನ್ನು ವ್ಯಯಿಸುವ, ಹುಡುಗಿಯರ ಬಾಸ್ಕೆಟ್ಬಾಲ್ ತಂಡದ ಸದಸ್ಯೆಯು ಪ್ರತಿನಿಧಿರೂಪವಾಗಿದ್ದಾಳೆ. ಆ ಸಮಯವು ಹೆಚ್ಚು ಪ್ರಯೋಜನಕರವಾದ ಇತರ ಯಾವುದೇ ವಿಷಯವನ್ನು ಮಾಡುವುದರಲ್ಲಿ ವ್ಯಯಿಸಲ್ಪಡಸಾಧ್ಯವಿದೆ.
ನಿಶ್ಚಯವಾಗಿ, ಅನೇಕ ಯುವಜನರು ಈ ಶಕ್ತಿಗುಂದಿಸುವ ನಿಯತಕ್ರಮವನ್ನು ಆಕ್ಷೇಪಿಸುವುದಿಲ್ಲ. ತಮ್ಮ ಸ್ಪರ್ಧಾ ಕೌಶಲಗಳನ್ನು ಪರಿಪೂರ್ಣಗೊಳಿಸುವುದರ ಕುರಿತಾದ ವಿನೋದವನ್ನು ಮತ್ತು ಪಂಥಾಹ್ವಾನವನ್ನು ಅವರು ಆನಂದಿಸುತ್ತಾರೆ. ಆದರೆ ದೊಡ್ಡ ಸಂಖ್ಯೆಯಲ್ಲಿ ಯುವಜನರು ಸಂಘಟಿತ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ಏಕೆ ನಿಲ್ಲಿಸುತ್ತಾರೆಂಬುದಕ್ಕೆ ಇತರ ಕಾರಣಗಳು ಇವೆ. ಒಂದು ತಂಡವನ್ನು ಸೇರಬೇಕೊ ಸೇರಬಾರದೊ ಎಂಬುದನ್ನು ನಿರ್ಧರಿಸಲಿಕ್ಕಾಗಿ, ನೀವು ಆ ಕಾರಣಗಳ ಕುರಿತಾಗಿ ಅರಿವುಳ್ಳವರಾಗಿರಬೇಕಾದ ಅಗತ್ಯವಿದೆ. ಜ್ಞಾನೋಕ್ತಿ 13:16 ಹೇಳುವಂತೆ, “ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನು ತಿಳುವಳಿಕೆಯಿಂದ ನಡಿಸುವನು.” ಆದುದರಿಂದ ಮುಂದಿನ ಲೇಖನವೊಂದು ಈ ಚರ್ಚೆಯನ್ನು ಮುಂದುವರಿಸುವುದು.
[ಪುಟ 23 ರಲ್ಲಿರುವ ಚಿತ್ರ]
ಸ್ಪರ್ಧಾಳುಗಳ ಜನಪ್ರಿಯತೆಯು, ಅನೇಕ ಯುವಜನರನ್ನು ಸಂಘಟಿತ ಕ್ರೀಡೆಗಳ ಕಡೆಗೆ ಆಕರ್ಷಿಸುತ್ತದೆ
[ಪುಟ 24 ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ಕ್ರೀಡಾ ವಿದ್ಯಾರ್ಥಿವೇತನಗಳನ್ನು ಪಡೆಯುವ, ವಿಶ್ವವಿದ್ಯಾನಿಲಯದ ಹೆಚ್ಚಿನ ಉಚ್ಚ ಆಟಗಾರರು ಪದವಿಪಡೆಯುವುದರಲ್ಲಿ ವಿಫಲರಾಗುತ್ತಾರೆ’