ಡೈಕು ಸಾನ್ ಒಂದು ಸ್ವಪ್ನ ಬೀಡನ್ನು ಕಟ್ಟುತ್ತಾರೆ
ಜಪಾನಿನ ಎಚ್ಚರ! ಸುದ್ದಿಗಾರರಿಂದ
ಜಪಾನಿಗೆ ಭೇಟಿ ಕೊಡುವ ಅನೇಕರು ಇಲ್ಲಿಯ ಸೊಬಗಿನ ಸಾಂಪ್ರದಾಯಿಕ ಮನೆಗಳನ್ನು ನೋಡಿ ಆಕರ್ಷಿತರಾಗುತ್ತಾರೆ. ಇಳುಕಲು ಚಾವಣಿ, ಮೇಲೆ ತಿರುಗಿರುವ ಏಣುಗಳು, ಆವರಣದೊಳಗಿರುವ ತೋಟ ಮತ್ತು ವರಾಂಡಗಳು—ಇವೆಲ್ಲ ಅವುಗಳ ಸೊಬಗನ್ನು ಹೆಚ್ಚಿಸುತ್ತವೆ. ಆದರೂ, ಸ್ವಾರಸ್ಯದ ವಿಷಯವೇನಂದರೆ, ಈ ನಮೂನೆಯ ಮನೆಯು ಸಾಮಾನ್ಯವಾಗಿ ಒಬ್ಬನೇ ವ್ಯಕ್ತಿಯ ಮೇಲ್ವಿಚಾರಣೆಯಲ್ಲಿ ನಕ್ಷೆ ಹಾಕಲ್ಪಟ್ಟು, ಕಟ್ಟಲ್ಪಟ್ಟು, ಅಲಂಕರಿಸಲ್ಪಡುತ್ತದೆ. ಅವನನ್ನು ಡೈಕು ಸಾನ್, ಅಥವಾ ನಿಪುಣ ಬಡಗಿ ಎಂದು ಕರೆಯಲಾಗುತ್ತದೆ.
ಶ್ರೀ ಕಾಟೊ 40 ವರ್ಷ ಅನುಭವದ ಒಬ್ಬ ಡೈಕು ಸಾ. ಅವರು ಮತ್ತು ಅವರ ಶಿಲ್ಪಿ ತಂಡವು, ಬಹುತೇಕ ಜಪಾನೀಯರು ತಮ್ಮ ಸ್ವಪ್ನ ಬೀಡೆಂದೆಣಿಸುವ ಮನೆಯನ್ನು ಕಟ್ಟುತ್ತಿದ್ದಾರೆ. ಅವರು ಈ ಮನೆಯ ಅದ್ವಿತೀಯ ಶೈಲಿ ಮತ್ತು ತಾನು ಅದನ್ನು ಕಟ್ಟುವ ವಿಧದ ಕುರಿತು ತುಸು ತಿಳಿಸುವಾಗ ನಾವು ಕಿವಿಗೊಟ್ಟು ಕೇಳೋಣ.
ಉತ್ತಮ ತರಗತಿಯ ವಿನ್ಯಾಸ
“ಉತ್ತಮ ತರಗತಿಯ ಜ್ಯಾಪನೀಸ್ ಮನೆಯ ಸಾರವನ್ನು ವಾಬಿ ಮತ್ತು ಸಾಬಿ ಎಂಬ ಎರಡು ಪದಗಳಲ್ಲಿ ಹೇಳಸಾಧ್ಯವಿದೆ,” ಎನ್ನುತ್ತಾರೆ ಡೈಕು ಸಾನ್. ಇತರ ಅರ್ಥಗಳೊಂದಿಗೆ, ಈ ಎರಡು ಪದಗಳಿಗೂ “ಪರಿಷ್ಕೃತ ಮತ್ತು ರಸಕರವಾದ ಸರಳತೆ” ಎಂಬ ಅರ್ಥವಿದೆ. “ನವಿರು,” “ಪ್ರಶಾಂತಿ,” ಮತ್ತು “ಕೋಮಲ” ಎಂಬ ಪದಗಳು ಜಪಾನೀ ವಾಸ್ತುಶಿಲ್ಪ ಮತ್ತು ಅದರ ಆಕರ್ಷಣೆಯನ್ನು ನಾವು ತಿಳಿಯುವಂತೆ ಸಹಾಯ ಮಾಡುವ ಇತರ ಪದಗಳು.
ಜಪಾನಿನಲ್ಲಿ ಪದೇ ಪದೇ ಬರುವ ಟೈಫೂನ್ ತುಫಾನು, ಭೂಕಂಪಗಳು ಮತ್ತು ಬೇಸಗೆಯ ವಿಶೇಷ ತೇವದಿಂದಾಗಿ ಒಂದು ಕುಟುಂಬ ಮನೆಗೆ ಜನರು ಇಷ್ಟಪಡುವ ವಸ್ತುವು, ಅದರ ಸ್ಥಿತಿಸ್ಥಾಪಕತೆಯ ಕಾರಣ, ಮರವಾಗಿದೆ ಎಂದು ವಿವರಿಸುತ್ತಾರೆ ಡೈಕು ಸಾನ್. ಜೇಡಿಮಣ್ಣು, ಬಿದಿರು, ಮತ್ತು ಕಾಗದಗಳು ಸಹ ಉಪಯೋಗಿಸಲ್ಪಡುವ ಮೂಲವಸ್ತುಗಳಲ್ಲಿ ಕೆಲವಾಗಿವೆ. ದೃಷ್ಟಿ ಸಾಮರಸ್ಯವನ್ನು ಸಾಧಿಸಲು ಮನೆ ಮತ್ತು ಅಲಂಕಾರೋದ್ಯಾನಗಳನ್ನು ಒಟ್ಟಿಗೆ ಕಲ್ಪಿಸಲಾಗುತ್ತದೆ.
ಸ್ವಪ್ನ ಬೀಡು ಮತ್ತು ಉದ್ಯಾನ ಹೇಗೆ ಕಂಡುಬಂದೀತು? ಅದು ಹೇಗೆ ಕಟ್ಟಲ್ಪಡುವುದು? ನಾವು ಇನ್ನೊಂದು ಕಟ್ಟಡ ನಿವೇಶನಕ್ಕೆ ವಾಹನದಲ್ಲಿ ಹೋಗುವಲ್ಲಿ ಡೈಕು ಸಾನ್ ಹೇಗೆ ಸ್ವಪ್ನ ಬೀಡನ್ನು ಕಟ್ಟುತ್ತಾರೆಂಬ ವಿಷಯ ನೇರ ನೋಟವನ್ನು ತಾನು ಕೊಡುವೆನೆಂದು ಅವರು ಸೂಚಿಸುತ್ತಾರೆ.
ನೆಲದಿಂದ ಮೇಲೆ
ನಾವು ನಿವೇಶನದ ಸುತ್ತಲೂ ನಡೆದಾಡುತ್ತಿದ್ದಾಗ ಡೈಕು ಸಾನ್ ತಿಳಿಸುವುದು: “ನೂರು ವರ್ಷಗಳ ಹಿಂದೆ ಕಟ್ಟಿದ ಮನೆಗಳನ್ನು ನೆಲಕ್ಕೆ ದೃಢವಾಗಿ ಬಂಧಿಸಲಾಗುತ್ತಿರಲಿಲ್ಲ. ಬಂಡೆಯ ಮೇಲೆ ಕೂತಿದ್ದ ಗಿಡ್ಡ ಕಂಬಗಳು ಎತ್ತಿ ಹಿಡಿದಿರುವ ಸಮತಲದ ತೊಲೆಗಳ ಒಂದು ಜಾಲದ ಮೇಲೆ ಅವು ಕುಳಿತುಕೊಳ್ಳುತ್ತಿದ್ದವು.” ಇಂಥ ಅನೇಕ ಮನೆಗಳು ಈಗಲೂ ನಿಂತಿರುವುದು ಡೈಕು ಸಾನ್ನ ನೈಪುಣ್ಯಕ್ಕೆ ಸಾಕ್ಷಿಕೊಡುತ್ತವೆ. “ಈಗಿನ ಕಾಲದಲ್ಲಿ ಅಡಿ ವರಿಸೆ ಮತ್ತು ಅಸ್ತಿವಾರಗಳನ್ನು ಸಿಮೆಂಟಿನಿಂದ ಮಾಡಲಾಗುತ್ತದೆ. ಆದರೆ ರಚನಾಸೂತ್ರಗಳು ಹಿಂದಿನಂತೆಯೇ ಇವೆ” ಎಂದು ನಮಗೆ ಹೇಳಲಾಗುತ್ತದೆ. ಇದು ಗೋಡೆಗಳಿಗೂ ಅನ್ವಯಿಸುತ್ತದೆ. ಇವು ಕಲ್ಪನೆ ಮತ್ತು ರಚನೆಯಲ್ಲಿ, ಪಾಶ್ಚಿಮಾತ್ಯ ಶೈಲಿಯ ಮನೆಗಳಿಗಿಂತ ತೀರಾ ಪ್ರತ್ಯೇಕ.
ಜ್ಯಾಪನೀಸ್ ಮನೆಯ ಒಳಗೋಡೆಗಳು ಗಟ್ಟಿಯಾದ ಅಡ್ಡಗಟ್ಟಲ್ಲ, ಹೆಚ್ಚಾಗಿ ತಡಕೆಗಳಾಗಿರುವಂತೆ ನಿರ್ಮಿಸಲ್ಪಟ್ಟಿವೆ. ರಚಿಸಲ್ಪಡುತ್ತಿರುವ ಗೋಡೆಯನ್ನು ತೋರಿಸುತ್ತಾ, ಡೈಕು ಸಾನ್ ವಿವರಿಸುವುದು: “ಇದರಂತಿರುವ ಒಡೆದ ಬಿದಿರನ ಜಾಲಕದ ಮೇಲೆ ಜೇಡಿಮಣ್ಣಿನ ಎರಡರಿಂದ ಐದು ಪದರಗಳನ್ನು ಹಚ್ಚಲಾಗುವುದು. ಪ್ರತಿಯೊಂದು ಪದರದ ಸಾಂದ್ರತೆಯಲ್ಲಿ ಅಂತರವಿದೆ, ಮತ್ತು ಪ್ರತಿ ಪದರದ ಮೇಲೆ ಇನ್ನೊಂದನ್ನು ಬಳಿಯುವ ಮೊದಲು ಅದು ಪೂರ್ತಿ ಒಣಗಿರಬೇಕು. ಈ ಕಾರಣದಿಂದ ಒಂದು ಮನೆಯನ್ನು ಕಟ್ಟಿ ಮುಗಿಸಲು, ಸರಾಸರಿ ಮೂರು ತಿಂಗಳು ಹಿಡಿಯುತ್ತದೆ.” (ಸ್ವಪ್ನ ಬೀಡನ್ನು ಕಟ್ಟಲು ಇನ್ನೂ ಹೆಚ್ಚು ಕಾಲ ಹಿಡಿಯುತ್ತದೆ ನಿಶ್ಚಯ.) ಜಪಾನೀಯರು ಇಷ್ಟಪಡುವ ಕಂದು ಕಪ್ಪು ಮಣ್ಣು ಬಣ್ಣದ ಉತ್ತಮ ತೆರದ ಜೇಡಿಮಣ್ಣು ಯಾ ಮರಳನ್ನು ಹಚ್ಚಿ ಮುಗಿಸಿದ ಗೋಡೆಗಳು ಉಸಿರಾಡುವುದರಿಂದ, ತೇವದ ಹವಾಮಾನದಲ್ಲಿ ಅನೇಕ ವೇಳೆ ಕಾಂಕ್ರೀಟ್ ಗೋಡೆಗಳಂತೆ ಬೆವರುವುದಿಲ್ಲ.
ಮುಂದಕ್ಕೆ, ಡೈಕು ಸಾನ್ ನೆಲಕ್ಕೆ ನಮ್ಮ ಗಮನವನ್ನು ಸೆಳೆಯುತ್ತಾರೆ. ವರಾಂಡ, ಮುನ್ನಂಗಳ, ಮತ್ತು ಅಡುಗೆ ಮನೆಯ ನೆಲಗಳು ಗಟ್ಟಿ ಮರದ್ದು. ಇತರ ಕೋಣೆಗಳಲ್ಲಿ ಅಧಿಕಾಂಶ ಕೋಣೆಗಳ ನೆಲದಲ್ಲಿ ಟಟಾಮಿ ಎಂದು ಕರೆಯಲ್ಪಡುವ ಒತ್ತಾಗಿ ಹೆಣೆದಿರುವ ಹುಲ್ಲಿನ ಚಾಪೆಗಳು ಹಾಸಲ್ಪಡುತ್ತವೆ. ಈ ಅದ್ವಿತೀಯ ನೆಲಹಾಸು ಚಳಿಗಾಲದಲ್ಲಿ ಬೆಚ್ಚಗೆ, ಬೇಸಗೆಯಲ್ಲಿ ತಂಪು, ಮತ್ತು ಕುಳಿತುಕೊಳ್ಳಲು ಯಾ ಮಲಗಲು ಸ್ಥಿರವಾದರೂ ಮೆತ್ತಗಾಗಿದೆ. ಪ್ರತಿ ಚಾಪೆ ಸುಮಾರು ಒಂದು ಮೀಟರ್ ಉದ್ದ, ಎರಡು ಮೀಟರ್ ಅಗಲ ಮತ್ತು ಐದು ಸೆಂಟಿಮೀಟರ್ ದಪ್ಪವಿದೆ. ಕೋಣೆಗಳ ಗುರುತು ಅವುಗಳಲ್ಲಿರುವ ಚಾಪೆಗಳ ಸಂಖ್ಯೆಗಳ ಮೇಲೆ ಹೊಂದಿಕೊಂಡಿದ್ದು, ಅವುಗಳ ಗಾತ್ರಾನುಸಾರವಾಗಿ ಎಂಟು-, ಆರು-, ಯಾ ನಾಲ್ಕೂವರೆ ಚಾಪೆಗಳ ಕೋಣೆಗಳಾಗುತ್ತವೆ.
ಬಲು ಜೋಕೆಯಿಂದ ಕಾಪಾಡಿರುವ ಕುಟುಂಬ ರಹಸ್ಯ
ಡೈಕು ಸಾನ್ನ ನೈಪುಣ್ಯ ನಿಜವಾಗಿಯೂ ಅತಿಶಯಿಸುವುದು ಜೋಡಣೆಯ ಕುಶಲ ಉಪಯೋಗದಲ್ಲಿ. ತನ್ನ ತಂದೆಯಿಂದ ತನಗೆ ಬಂದಿದ್ದ, 70 ವರ್ಷದ ಹಳೆಯ ಪ್ರಯೋಗ ಪುಸ್ತಕಗಳನ್ನು ನಮ್ಮ ಗೈಡ್ ನಮಗೆ ತೋರಿಸುತ್ತಾರೆ. ಅವುಗಳಲ್ಲಿ ಜಟಿಲವಾದ, ಮೋಹಕ ಜೋಡಣೆಯ ಖಂಡಗಳಿವೆ. ಪುರಾತನ ಕಾಲದಿಂದಲೂ ಒಬ್ಬ ನಿಪುಣ ಬಡಗಿಯು ತನ್ನ ಜೋಡಣೆಯ ಕೌಶಲವನ್ನು ಬಲು ಜೋಕೆಯಿಂದ ಕಾಪಾಡಿ ರಹಸ್ಯವಾಗಿಟ್ಟುಕೊಂಡು, ಅದನ್ನು ತನ್ನ ಮಗನಿಗೆ ಯಾ ಉತ್ತರಾಧಿಕಾರಿಗೆ ಮಾತ್ರ ದಾಟಿಸುತ್ತಿದ್ದನು. ಈಗ ಇದು ಅವಶ್ಯವಿಲ್ಲದಿದ್ದರೂ, ಇದರ ಮೂಲಕ ಒಂದು ಮೊಳೆಯನ್ನೂ ಉಪಯೋಗಿಸದೆ ಇಡಿಯ ಮನೆಯನ್ನು ಕಟ್ಟಸಾಧ್ಯವಿದೆ.
“ಈ ಜೋಡಣೆಯ ವಿಧಾನಗಳಲ್ಲಿ ಕೆಲವು, ಬಡಗಿಗಳು ಬೇರೆಡೆಗಳಲ್ಲಿ ಉಪಯೋಗಿಸುವುದಕ್ಕೆ ಹೋಲಿಕೆಯಾಗಿವೆ. ಉದಾಹರಣೆಗೆ, ಪರಸ್ಪರ ತೊಡರಿಕೊಳ್ಳುವ ಕೂಲು ಜೋಡಣೆ, ಕೂರುಕಾಲುವೆ, ತುದಿ ಜೋಡಣೆ, ಮತ್ತು ಪಡ ಪದರು ಜೋಡಣೆಗಳಿವೆ,” ಎಂದು ಡೈಕು ಸಾನ್ ವಿವರಿಸುತ್ತಾರೆ. ಒಂದು ಕಟ್ಟಡದ ಆಯಾ ಭಾಗದಲ್ಲಿರುವ ಬಿಗಿತ ಮತ್ತು ಒತ್ತಡವನ್ನು ಹೊಂದಿಕೊಂಡು ಯಾವ ಜೋಡಣೆಯನ್ನು ಉಪಯೋಗಿಸಬೇಕೆಂಬದನ್ನು ನಿರ್ಧರಿಸಲಾಗುತ್ತದೆ. ಇಂಥ ಯೋಗ್ಯ ಜೋಡಣೆಗಳು ಭೂಕಂಪದ ಕಂಪನವನ್ನೂ ಹೀರಿಕೊಂಡು, ಮನೆಯು ಧಕ್ಕೆಯೊಂದಿಗೆ ಉರುಳುವಂತೆ ಬಿಡುತ್ತದೆ.
ಸಫಲ ವೈಭವಾತಿಶಯ
ಸಾಂಪ್ರದಾಯಿಕ ಜಪಾನೀ ಮನೆಯ ಅತಿ ಗಮನಾರ್ಹವಾದ ಲಕ್ಷಣವು ಪ್ರಾಯಶಃ ಅದರ ಚಾವಣಿಯಾಗಿದೆ. ಮನೆಗೆ ಹೋಲಿಸುವಾಗ ಅದು ದೊಡ್ಡದೂ ಭಾರವುಳ್ಳದ್ದೂ ಆಗಿ ಕಾಣುತ್ತದೆ. ಆದರೆ ಚಾವಣಿಯು ನಿಜವಾಗಿಯೂ ವಾತಾವರಣದ ಶಕ್ತಿಗಳ ವಿರುದ್ಧ ಒಂದು ಸಮಸ್ಥಿತಿಸ್ಥಾಪಕವಾಗಿದ್ದು ತನ್ನ ಶಕ್ತಿಯನ್ನು ಚಾವಣಿಯ ಬಲವಾದ ಪೂರ್ಣಅಡ್ಡತೊಲೆಗಳಿಂದ ಪಡೆಯುತ್ತವೆಂದು ಡೈಕು ಸಾನ್ ಹೇಳುತ್ತಾರೆ. ಚಾವಣಿಗಳು ಅನೇಕ ಶೈಲಿಗಳಲ್ಲಿ ಬರುವುದಾದರೂ, ಸಾಧಾರಣವಾಗಿ ಅವು ತ್ರಿಕೋನಾಕಾರದ ಯಾ ಬಾಗಿರುವ ಆಕಾರದ ಯಾ ಇವೆರಡರ ಸಂಯೋಜನೆಯಾಗಿರುತ್ತವೆ. ಸುಟ್ಟ ಜೇಡಿಮಣ್ಣಿನಿಂದ ಮಾಡಿದ ಕೆಲವು ಚಾವಣಿಯ ಹೆಂಚುಗಳನ್ನು ಡೈಕು ಸಾನ್ ನಮಗೆ ತೋರಿಸುತ್ತಾರೆ. ಒಂದು ಹೊಳೆಯುವ ಬಾನ್ನೀಲಿ ಬಣ್ಣವನ್ನು ಬಿಟ್ಟರೆ ಇದೂ ಕಂದು ಕಪ್ಪು ಬಣ್ಣದ್ದು.
“ಏಣುಗಳ ಕೊಂಚ ಮೇಲೆ ತಿರುಗಿದ ಮೂಲೆಗಳು ಮತ್ತು ಆಳವಾದ ಮೇಲ್ಚಾಚುವಿಕೆ ಮುಂದಿನ ಬಾಡಿಗೆದಾರರ ಸುಖಕ್ಕೆ ಪ್ರಾಮುಖ್ಯ ವಿವರಗಳಾಗಿವೆ. ತೇವವಿರುವ ಮಳೆಗಾಲದಲ್ಲಿ, ನೆಲದಿಂದ ಮಾಳಿಗೆಯ ಒಳನೆಲದ ತನಕ ಚಾಚಿರುವ ಗಾಜಿನ ಜಾರುವ ಬಾಗಿಲುಗಳನ್ನು ವರಾಂಡಕ್ಕೆ ತೆರೆಯುವಂತೆ ಇವು ಬಿಡುತ್ತವೆ. ಅದೇ ಸಮಯದಲ್ಲಿ ಬೇಸಗೆಯ ಬಿಸಿ ಸೂರ್ಯಪ್ರಕಾಶವನ್ನು ತಡೆಯುವಂತೆ ಅದನ್ನು ಸರಿಯಾದ ಕೋನದಲ್ಲಿ ಇಡಲಾಗಿದೆ,” ಎಂದು ಡೈಕು ಸಾನ್ ತೋರಿಸಿಕೊಡುತ್ತಾರೆ.
ನಮ್ಮ ಕಟ್ಟಡ ಪರೀಕ್ಷೆ ಮುಗಿಯುತ್ತದೆ. ಈಗ ನಮ್ಮ ಗೈಡ್, ಕಟ್ಟಲು ತನಗೆ ಒಂದೂವರೆ ವರ್ಷ ಹಿಡಿದ ಮನೆಯನ್ನು ನೋಡಲು ನಮಗೆ ಕರೆಕೊಡುತ್ತಾನೆ.
ಒಂದು ವಾಸ್ತವವಾದ ಸ್ವಪ್ನ ಬೀಡು
ನಾವು ಅಲ್ಲಿಗೆ ವಾಹನದಲ್ಲಿ ಬಂದು ಅದರ ಸೊಬಗಿನ ರೇಖೆಗಳನ್ನು ನೋಡಿದ ಕ್ಷಣದಲ್ಲಿ, ಇದು ಯಾರೂ ಆರಾಮವಾಗಿರಬಲ್ಲ ಒಂದು ಮನೆ ಎಂದು ತಿಳಿದೆವು. ಮುಂಬಾಗಿಲು ಜೋಡಣೆಯಿಂದ ಕೂಡಿಸಿದ ಮತ್ತು ಹಿಂದೆ ಗಾಜಿರುವ ಮರಪಟ್ಟಿಗಳ ಜಾಲಕವಾಗಿದೆ. ಬಾಗಿಲನ್ನು ಸುಲಭವಾಗಿ ಜಾರಿಸಿ ತೆರೆದಾಗ, ನಾವು ಸುಂದರವಾದ ಪ್ರವೇಶದ್ವಾರದೊಳಗೆ ನಡೆಯುತ್ತೇವೆ. ನಮ್ಮ ಪಾದರಕ್ಷೆಗಳನ್ನು ತೆಗೆದು ನಾವು ಮನೆಯೊಳಗೆ ಪ್ರವೇಶಿಸುತ್ತೇವೆ. ಹಜಾರದ ನೆಲಮರಗಳು ನಮ್ಮ ಕಾಲಡಿಯಲ್ಲಿ ಸ್ಥಿರವಾಗಿರುವಂತೆ ನಮಗೆ ಭಾಸವಾಗುತ್ತದೆ.
ಹೊರಗೆ ಕಾಣುವ ರಚನಾ ಕಂಬಗಳನ್ನು ನೋಡಲು ನಾವು ನಿಲ್ಲುತ್ತೇವೆ. ಅವು ಎಷ್ಟು ನುಣುಪಾಗಿವೆಯೆಂದರೆ ಮುಟ್ಟುವಾಗ ರೇಶ್ಮೆಯಂತೆ ಅನಿಸಿ ವಾರ್ನಿಷ್ ಬಳಿದಂತೆ ಹೊಳೆಯುತ್ತವೆ. ಡೈಕು ಸಾನ್ ನಮ್ಮ ಮನಸ್ಸನ್ನು ಓದಿದವರಂತೆ, “ಮನೆಯ ಯಾವ ಮರದ ಕೆಲಸಕ್ಕೂ ಬಣ್ಣ ಯಾ ಮೆರುಗೆಣ್ಣೆಯನ್ನು ಬಳಿದಿರುವುದಿಲ್ಲ. ಮರವು ಎಷ್ಟು ಸಾಧ್ಯವೂ ಅಷ್ಟು ಹತ್ತರಿಯಿಂದ ನಯಮಾಡಲಾಗಿದೆ” ಎನ್ನುತ್ತಾರೆ.
ಜ್ಯಾಪನೀಸ್ ಶೈಲಿಯ ನಡುಕೋಣೆಯಲ್ಲಿ, ಅದರ ಅಲಂಕಾರ ರೀತಿಯನ್ನು ನಾವು ಪರೀಕ್ಷಿಸುತ್ತೇವೆ. ಜಾರುವ ಬಾಗಿಲುಗಳ ಯಾ ಪುಟೀಪುಗಳ (PANELS) ಮೇಲಿರುವ ಅಡಪ್ಡಟ್ಟಿ ಯಾ ತಲೆಮರದಲ್ಲಿ ಚೆರಿ ಹೂವುಗಳ ನಯನಾಜೂಕಾದ ಕೆತ್ತನೆಯಿದೆ. ಕೋಣೆಯ ಸುತ್ತಲೂ ಮರದ ಚೌಕಟ್ಟಿನ ಮೇಲೆ ಹಚ್ಚಿದ ಕಾಗದವಿರುವ ಜಾರುವ ಪುಟೀಪುಗಳಿವೆ. ವರಾಂಡದ ಎದುರಿರುವ ಜಾರುವ ಬಾಗಿಲುಗಳು ಜಾಲಕವಾಗಿದ್ದು ತೆಳುವಾದ, ಬಿಳಿಯ ಶೋಜಿ ಕಾಗದದಿಂದ ಆವರಿಸಲ್ಪಟ್ಟಿದೆ. ಮನ್ನಂಗಳಕ್ಕೆ ಯಾ ಇತರ ಕೋಣೆಗಳಿಗೆ ತೆರೆಯುವ (ಫೂಸೂಮಾ ಎಂದು ಕರೆಯಲ್ಪಡುವ) ಬಾಗಿಲುಗಳನ್ನು ಹೆಚ್ಚು ದಪ್ಪವಾದ ಕಾಗದದಿಂದ ಮುಚ್ಚಲಾಗಿದೆ. ಕೋಣೆ ವಿಭಾಜಕಗಳಾಗಿ ಕೆಲಸ ಮಾಡುವ ಈ ಪುಟೀಪುಗಳಲ್ಲಿ ಪ್ರತಿಯೊಂದು ವಿಭಿನ್ನ ಚಿತ್ರಾಕೃತಿಗಳಿಂದ ಅಲಂಕರಿಸಲ್ಪಟ್ಟಿವೆ. “ಈ ಚಿಕ್ಕ ಕೋಣೆಗಳನ್ನು, ಜಾರುವ ಪುಟೀಪುಗಳನ್ನು ಕೇವಲ ತೆಗೆಯುವುದರ ಮೂಲಕ ಒಂದು ದೊಡ್ಡ ಕೋಣೆಯಾಗಿ ಪರಿವರ್ತಿಸಬಹುದು” ಎಂದು ಡೈಕು ಸಾನ್ ವಿವರಿಸುತ್ತಾರೆ. ಎಷ್ಟು ಪ್ರಾಯೋಗಿಕವಿದು!
ಇರುವ ಒಂದೇ ಗಟಿಮ್ಟುಟ್ಟಾದ ಗೋಡೆಯಲ್ಲಿ ಟೋಕೊನೋಮ, ಯಾ ಚಿತ್ರದ ಸ್ಥಳ ಮತ್ತು ಕೂಡಿಸಿರುವ ಅಂತಸ್ತು ಹಲಗೆಯಿದೆ. “ಇದು ಮನೆಯ ಚೆಲುವುನಿಟ್ಟು. ಮತ್ತು ಇದಕ್ಕೆ ಅತ್ಯುತ್ತಮ ಮರ ಮತ್ತು ಕೆಲಸವನ್ನು ಉಪಯೋಗಿಸಲಾಗುತ್ತದೆ,” ಎನ್ನುತ್ತಾರೆ ಡೈಕು ಸಾನ್. ಇಂದು ಅಲ್ಲಿ ಒಂದು ಅಲಂಕಾರಾಕ್ಷರದ ಸುರುಳಿ ತೂಗಾಡುತ್ತಿದೆ.
ಮನೆಯ ಬಾಕಿ ಸ್ಥಳಗಳನ್ನು ನಮಗೆ ತೋರಿಸಲಾಗುತ್ತದೆ. ಪ್ರತಿಯೊಂದು ಕೋಣೆಯಲ್ಲಿ ದೇವದಾರು, ಸೈಪ್ರೆಸ್, ಪೀತದಾರು ಮತ್ತು ಟಟಾಮಿ ಮರಗಳ ಸುವಾಸನೆ ಹಿತವಾಗಿ ತುಂಬಿರುತ್ತದೆ. ಮನೆಯಲ್ಲಿ ಪ್ರತಿಯೊಂದರಲ್ಲೂ ಒಂದು ನಯವಾದ ಸರಳತೆ ಮತ್ತು ಸೊಬಗಿನ ಛಾಯೆಯಿದೆ.
ನಾವು ಹೊರಗೆ ಹೊರಡುವಾಗ ಉದ್ಯಾನವು ನಮ್ಮ ಪರೀಕೆಗ್ಷಾಗಿ ಕಾಯುತ್ತದೆ. ಹೆಚ್ಚು ದೊಡ್ಡದಲ್ಲದಿದ್ದರೂ ಅದು ಪ್ರಸನ್ನವೂ ಪ್ರಶಾಂತವೂ ಆಗಿದೆ. ಅದರಲ್ಲಿ ಉಜ್ವಲ ವರ್ಣಗಳ ಕಾರ್ಪ್ ಮೀನು ತುಂಬಿರುವ ಒಂದು ಕೊಳವೂ ಒಂದು ಸುಂದರ ಜಲಪಾತವೂ ಇದೆ. ನಾವು ಡೈಕು ಸಾನ್ ಮನೆ ಕಟ್ಟುವಾಗ ತೋರಿಸುವ ನೈಪುಣ್ಯ ಮತ್ತು ಕಲ್ಪನಾ ಚಾತುರ್ಯದಿಂದ ಬೆರಗುಗೊಂಡವರಾಗಿ, ತೃಪ್ತಿಯ ಅನಿಸಿಕೆಯುಳ್ಳವರಾಗಿ ಹಿಂದೆ ಬರುತ್ತೇವೆ. (g91 10/22)