ನಾವು ಮನೆಯೆಂದು ಕರೆಯುವ ಸ್ಥಳಗಳನ್ನು ನೋಡಿ
“ಸುಖಭೋಗಿಸಿ, ಅರಮನೆಗಳಲ್ಲಿ ನಾವು ಅಲೆದಾಡಿದರೂ, ಅದೆಷ್ಟೇ ಬಡಸ್ಥಿತಿಯದ್ದಾದರೂ, ಇಲ್ಲ ಮನೆಯಂಥ ಸ್ಥಳವು.”—ಜಾನ್ ಹಾವರ್ಡ್ ಪೆಯ್ನ್.
ನೀವು ಯಾವುದನ್ನು ಮನೆಯೆಂದು ಕರೆಯುತ್ತೀರಿ? ಕಟ್ಟಡದ ಕೆಲಸದಲ್ಲಿರುವವರು ಆಧುನಿಕ ಸಾಮಗ್ರಿಗಳನ್ನು ಉಪಯೋಗಿಸಿ ಕಟ್ಟಿದ ಸುರಚಿತ ಮನೆಯನ್ನೊ? ಅಥವಾ ಆಸುಪಾಸಿನಲ್ಲಿ ಸ್ಥಳೀಕವಾಗಿ ದೊರೆಯುವ ಸಾಮಗ್ರಿಗಳನ್ನು ಉಪಯೋಗಿಸಿ ಮನೆಯ ಯಜಮಾನರೇ ಕಟ್ಟಿದ ಮನೆಯನ್ನೊ? ಲೋಕವ್ಯಾಪಕವಾಗಿ ಜನರು ಮನೆಯೆಂದು ಕರೆಯುವ ಸ್ಥಳಗಳ ಕಡೆ ಒಂದು ಚುರುಕು ದೃಷ್ಟಿಯನ್ನು ಹರಿಸೋಣ.
ನಮ್ಮ ಮೊದಲನೆಯ ನಿಲುಗಡೆ ಎಲ್ ಸಾಲ್ವೆಡೋರ್ ದೇಶದಲ್ಲಿ. ಇಲ್ಲಿ ಟೇಹಿಸೆಪ್ಟೆಕೆ ಎಂಬ ಚಿಕ್ಕ ಹಳ್ಳಿಯಲ್ಲಿ ನಾವು ಹಾರ್ಹೆ ಮತ್ತು ಅವನ ಹೆತ್ತವರನ್ನು ಭೇಟಿಯಾಗುತ್ತೇವೆ. ನಾವು ಹಾರ್ಹೆಯ ಮನೆಯಲ್ಲಿ ತಿರುಗುವಾಗ ಅಲ್ಲಿಯ ನೆಲವು ಬರಿಯ ಜಮೀನೆಂದು ಗಮನಿಸುತ್ತೇವೆ. ಚಾವಣಿಗೆ ಆಧಾರಗಳು ನೆಲದಲ್ಲಿ ನೆಟ್ಟಿರುವ ಮರದ ಕೊಂಬೆಗಳು. ಹಸಿ ಇಟ್ಟಿಗೆಯ ಗೋಡೆಗಳಿಗೆ ಮಣ್ಣಿನ ಗಾರೆ ಹಚ್ಚಲ್ಪಟ್ಟಿದೆ. ಹೆಂಚಿನ ಚಾವಣಿಯು ನೆರಳು ಕೊಡಲಿಕ್ಕಾಗಿ ಮತ್ತು ಮಳೆಯಿಂದ ಕಾಪಾಡಲಿಕ್ಕಾಗಿ ಗೋಡೆಗಳ ಹೊರಗೆ ವ್ಯಾಪಿಸಿದೆ. ಆದರೂ, ಎಲ್ ಸಾಲ್ವೆಡೋರಿನ ಅನೇಕ ಜನರು ಚಾವಣಿಯನ್ನು, 15 ಸೆಂಟಿಮೀಟರ್ ದಪ್ಪದಲ್ಲಿ ಕಟ್ಟಿರುವ ಉದ್ದದ ಹುಲ್ಲಿನಿಂದ ಮಾಡುತ್ತಾರೆ.
ಕೊಲಂಬಿಯದ ಹಳ್ಳಿಯ ಬಡ ಜನರು ಸುಮಾರು ಇದೇ ರೀತಿಯ ಮನೆಗಳಲ್ಲಿ ವಾಸಿಸುತ್ತಾರೆ. ಜಮೀನಿನಲ್ಲಿ ನೆಟ್ಟಿರುವ ಮೂಲೆಯ ಕಂಬಗಳ ಮಧ್ಯೆ, ಮಣ್ಣಿನ ಗಾರೆ ಹಚ್ಚಿರುವ ಒಡೆದ ಬಿದಿರು ಗೋಡೆಗಳಾಗುತ್ತವೆ. ಆಧಾರ ಕಂಬಗಳ ಮೇಲೆ ಇಟ್ಟಿರುವ ತಾಳೆಯ ಜಾತಿಯ ಮರದ ಎಲೆಗಳು ಚಾವಣಿಯನ್ನು ಒಳಗೊಂಡಿರುತ್ತವೆ.
ಯುರಗ್ವೈಯ ಟಾಕರ್ವೆಂಬೊದಲ್ಲಿ ಕೆಲವು ಮನೆಗಳು ಕುದುರೆ ಸಗಣಿ, ಮಣ್ಣು, ಮತ್ತು ನೀರಿನಿಂದ ಮಾಡಿದ ಹಸಿ ಇಟ್ಟಿಗೆಗಳಿಂದ ರಚಿಸಲ್ಪಡುತ್ತವೆ. ಈ ಮಿಶ್ರಣವನ್ನು ಮರದ ಅಚ್ಚುಪಟ್ಟಿಗೆ ಹೊಯ್ದು, ಅದನ್ನು ಸಮತಲದ ನೆಲದಲ್ಲಿ ಬಿಸಿಲಿನಲ್ಲಿ ಒಣಗಲಿಕ್ಕಾಗಿ ಬಿಡಲಾಗುತ್ತದೆ. ಹೀಗೆ ಗಟ್ಟಿಯಾದ ಇಟ್ಟಿಗೆಗಳನ್ನು ಗೋಡೆಗಳಿಗೆ ಬಳಸಲಾಗುತ್ತದೆ, ಮತ್ತು ಒಂದು ಹುಲ್ಲಿನ ಚಾವಣಿಯನ್ನು ಆಧಾರ ಕಂಬಗಳ ಮೇಲೆ ಕಟ್ಟಲಾಗುತ್ತದೆ. ಕಿಟಿಕಿಯ ಕದಗಳನ್ನು ಗಾಜಿನ ಬದಲಿಗೆ ಮರದಲ್ಲಿ ಮಾಡಲಾಗುತ್ತದೆ, ಮತ್ತು ನೆಲ ಕೇವಲ ಮಣ್ಣಿನದ್ದು.
ಯುರಗ್ವೈಯ ಒಳಪ್ರದೇಶದಲ್ಲಿ ಕೆಲವು ಬಡ ಕುಟುಂಬಗಳು ಹುಲ್ಲುಮಣ್ಣಿನ ಮನೆಗಳಲ್ಲಿ ಜೀವಿಸುತ್ತಾರೆ. ಹಸಿ ಇಟ್ಟಿಗೆಯ ಮನೆಗಳಂತೆ, ಇಂಥ ಮನೆಗಳೂ ಬೇಸಗೆಯಲ್ಲಿ ತಣ್ಣಗೆ ಮತ್ತು ಚಳಿಗಾಲದಲ್ಲಿ ಬೆಚ್ಚಗೆಯಾಗಿ ಇರುತ್ತವೆ. ಹುಲ್ಲುಮಣ್ಣಿನ ಇಟ್ಟಿಗೆಗಳನ್ನು, ಅವು 0.6 ಮೀಟರ್ ದಪ್ಪ ಮತ್ತು 1.8 ಮೀಟರ್ ಎತ್ತರದ ಗೋಡೆಯನ್ನು ರಚಿಸುವಂತೆ ಪರಸ್ಪರ ತೊಡರಿಕೊಳ್ಳುವ ನಮೂನೆಯಲ್ಲಿ ಇಡಲಾಗುತ್ತದೆ. ಚಾವಣಿಯ ಆಧಾರಗಳಿಗೆ, 18 ಸೆಂಟಿಮೀಟರ್ ದಪ್ಪದ ಚಾವಣಿಯಿರುವಂತೆ ಆಪುಹುಲ್ಲನ್ನು ಜೋಡಿಸಲಾಗುತ್ತದೆ. ಹೊರಗೋಡೆಗಳಿಗೆ ಗಟ್ಟಿಯಾದ, ನುಣುಪಾದ ಹೊರಮೈ ಇರುವಂತೆ ಕೆಲವು ಧಣಿಗಳು ಮಣ್ಣು ಮತ್ತು ದನದ ಸಗಣಿಯ ಮಿಶ್ರಣದ ಗಾರೆಯನ್ನು ಹಚ್ಚುತ್ತಾರೆ. ಮನೆಯನ್ನು ವಿಭಾಗಿಸುವ ತಡಕೆಗಳನ್ನು ಎಳೆಯ ಗಿಡಗಳಿಂದ ಮಾಡಿರುವ ಚೌಕಟ್ಟಿಗೆ ಗೋಣಿ ಪಟ್ಟೆಯನ್ನು ಸುತ್ತಿ ಹೊಲಿದು ಮಾಡಲಾಗುತ್ತದೆ. ಕೆಲವು ಬಾರಿ ಗೋಣಿ ಪಟ್ಟೆಯ ಮೇಲೆ ಮಣ್ಣನ್ನು ಹಚ್ಚಲಾಗುತ್ತದೆ.
ಹಳ್ಳ, ಜವುಗುಭೂಮಿಯ ಹತ್ತಿರದ ಪ್ರದೇಶಗಳಲ್ಲಿ, ಯುರಗ್ವೈ ದೇಶದ ಒಳಭಾಗದಲ್ಲಿ ಜೀವಿಸುವ ಕೆಲವರು, ಹೊಸದಾಗಿ ಕಡಿದ ಮರದ ಕೊಂಬೆಗಳಿಗೆ ಗಟ್ಟಿಯಾಗಿ ಜೋಡಿಸಿರುವ ಆಪುಹುಲ್ಲಿನ ಕಟ್ಟುಗಳಿರುವ ಜಲಸಸ್ಯ ಮನೆಗಳಲ್ಲಿ ಜೀವಿಸುತ್ತಾರೆ. ಇದನ್ನು ಹೇಗೆ ಮಾಡಲಾಗುತ್ತದೆ? ಆಪುಹುಲ್ಲನ್ನು 1.5ರಿಂದ 1.8 ಮೀಟರ್ ವರೆಗಿನ ಉದ್ದಕ್ಕೆ ಕತ್ತರಿಸಿ, ಅವುಗಳಲ್ಲಿರುವ ತೇವ ಒಣಗುವ ತನಕ ಬಿಸಿಲಲ್ಲಿ ಒಣಗಿಸಲಾಗುತ್ತದೆ. ಬಳಿಕ ಅವನ್ನು ಸುಮಾರು 23 ಸೆಂಟಿಮೀಟರ್ ವ್ಯಾಸದ ಕಟ್ಟುಗಳಾಗಿ ಕಟ್ಟಿ, ಕೊನೆಗೆ ಅವನ್ನು ಚೌಕಟ್ಟಿಗೆ ಜೋಡಿಸಿ ಅವನ್ನು ಗೋಡೆ ಮತ್ತು ಚಾವಣಿಯಾಗಿ ರಚಿಸಲಾಗುತ್ತದೆ.
ತೇಲು ಮನೆಗಳು
ಪೆರು ದೇಶದ ಇಕೀಟ್ವೊಸ್ ಪಟ್ಟಣದ ಸಮೀಪ ಒಬ್ಬ ಬಡವನು ಆ್ಯಮೆಸಾನ್ ನದಿಯಲ್ಲಿ ತನ್ನ ಮನೆಯನ್ನು ಕಟ್ಟುತ್ತಾನೆ. ಆದರೆ ಈ ಮನೆ ತೇಲುತ್ತಾ ಹೋಗದಂತೆ ಮಾಡುವುದು ಹೇಗೆ? ಅವನು ಕಾಡಿನಿಂದ ದೊಡ್ಡ, ಕಡಮೆ ಭಾರದ ದಿಮ್ಮಿಯನ್ನು ಕಡಿದು ಒಂದು ತೆಪ್ಪವನ್ನು ಮಾಡಿ, ನದಿಯಡಿಯಲ್ಲಿ ನೆಟ್ಟಿರುವ ಕಂಬಗಳಿಗೆ ಬಂಧಿಸುತ್ತಾನೆ. ತೆಪ್ಪವನ್ನು ಕಂಬಗಳಿಗೆ ಕಟ್ಟಿದ ಬಳಿಕ, ಅವನು ಅದರ ಮೇಲೆ ತನ್ನ ಮನೆ—ಬಿದಿರಿನ ಬದಿ ಮತ್ತು ಹುಲ್ಲಿನ ಚಾವಣಿಯಿರುವ ಒಂದು ಕೋಣೆ—ಯನ್ನು ಕಟ್ಟುತ್ತಾನೆ. ಈ ಮನೆಗೆ ತನ್ನದೇ ರೀತಿಯ ಹವಾ ನಿಯಂತ್ರಣ—ಬಿದಿರಿನ ಬೇಲಿಗಳ ಮಧ್ಯೆ ಹಾದು ಹೋಗುವ ಗಾಳಿ—ಇದೆ. ಅನೇಕ ವೇಳೆ, ಉಷ್ಣವಲಯದ ತೀವ್ರ ಸೆಕೆಯ ಕಾರಣ ಇಡೀ ಗೋಡೆಯನ್ನು ತೆಗೆದು ಬಿಡಲಾಗುತ್ತದೆ.
ಮಲಗುವ ಆನುಕೂಲ್ಯಗಳಲ್ಲಿ ಮರದ ಮಂಚ, ಜೋಲೆ, ಯಾ ನೆಲದ ಮೇಲೆ ಚಾಪೆಗಳು ಕೂಡಿವೆ. ಇಕೀಟ್ವೊಸ್ನ ಹೆಚ್ಚಿನ ಮನೆಗಳಿಗೆ ಹೋಲಿಸುವಾಗ ಈ ಮನೆ ಅಸಂಸ್ಕೃತ ರೂಪದ್ದಾದರೂ, ಬಡ ಜನರಿಗೆ ಇದೊಂದು ಮನೆಯಾಗಿದೆ.
ಪೆರುವಿನ ಸುಂದರ ಟಿಟಿಕಾಕ ಸರೋವರದಲ್ಲಿ, ಜಲಸಸ್ಯದ ಮನೆಗಳು ತೇಲು ದ್ವೀಪಗಳ ಮೇಲೆ ಕಟ್ಟಲ್ಪಡುತ್ತವೆ. ಈ ದ್ವೀಪಗಳನ್ನು ಸಹ ಜಲಸಸ್ಯಗಳಿಂದ ಮಾಡಲಾಗಿದ್ದು, ಅವು ಅನೇಕ ಗಾತ್ರಗಳಲ್ಲಿ, ಕೆಲವು ಒಂದು ಟೆನಿಸ್ ಕೋರ್ಟಿನಷ್ಟು ಚಿಕ್ಕ ಗಾತ್ರದಲ್ಲಿಯೂ ಇವೆ. ಸಮುದ್ರ ಮಟ್ಟಕ್ಕಿಂತ 3,800 ಮೀಟರಿಗಿಂತಲೂ ಹೆಚ್ಚು ಮೇಲಿರುವ ಈ ಸರೋವರದಲ್ಲಿ ಆಪುಹುಲ್ಲು ಹೇರಳವಾಗಿದೆ.
ಉಪಾಯ ಕೌಶಲದ ನಿವಾಸಿಗಳು, ತೇಲುವ ದಿಬ್ಬದ ಮೇಲೆ ರಚಿಸಲ್ಪಟ್ಟ ತಮ್ಮ ಮನೆಗಳ ಗೋಡೆ ಮತ್ತು ಚಾವಣಿಗಳನ್ನು ರಚಿಸಲು ಆಪುಹುಲ್ಲಿನ ಕಟ್ಟುಗಳನ್ನು ಜೋಡಿಸಿ ಕಟ್ಟುತ್ತಾರೆ. ವರ್ಷಕ್ಕೊಮ್ಮೆ ಜನರು ದಿಬ್ಬದ ಅತಿ ಮೇಲಿರುವ ಹುಲ್ಲಿನ ಪದರವನ್ನು ನವೀಕರಿಸುತ್ತಾರೆ. ಇದು ಅತಿ ಕೆಳಗಿನ ಪದರದ ಕೊಳೆಯುವಿಕೆಯ ನಷ್ಟಭರ್ತಿ ಮಾಡುತ್ತದೆ. ಈ ದಿಬ್ಬ ಸುಮಾರು 1.8 ಮೀಟರ್ ದಪ್ಪವಿರುತ್ತದೆ, ಮತ್ತು ಅದರ ಅಡಿಭಾಗ ಕ್ರಮೇಣ ಕೊಳೆತು ಹೋಗುತ್ತದೆ.
ಇನ್ನೊಂದು ರೀತಿಯ, ಕೆಲವು ಚೀನೀಯರು ಮನೆಯೆಂದು ಕರೆಯುವ ತೇಲುಮನೆ, ಹಾಂಗ್ ಕಾಂಗ್ನಲ್ಲಿ ಕಾಣಸಿಗುತ್ತದೆ. ಹಾಂಗ್ ಕಾಂಗಿನ ಅಬಿರ್ಡೀನ್ ಹಾರ್ಬರಿನಲ್ಲಿ ಹಣ ತೆರುವ ಪ್ರಯಾಣಿಕರನ್ನು ರವಾನಿಸುವ ಚಿಕ್ಕ ವಾಟರ್ ಟ್ಯಾಕ್ಸಿ, ಅದನ್ನು ನಡಿಸುವ ಕುಟುಂಬದ ತೇಲುಮನೆಯಾಗಿರುವುದು ಅರೂಢಿಯಾಗಿರುವುದಿಲ್ಲ. ಆ ಕುಟುಂಬ ಅಲ್ಲಿಯೇ ಅಡುಗೆ ಮಾಡಿ, ತಿಂದು, ಮಲಗುತ್ತದೆ. ಇತರ ಚೈನೀಸ್ ಕುಟುಂಬಗಳು ತಮ್ಮ ಇಡೀ ಜೀವಮಾನಕಾಲವನ್ನು, ತಮಗೆ ಮನೆಯಾಗಿ ಪರಿಣಮಿಸಿರುವ ಜಂಕ್ಸ್ ಎಂದು ಕರೆಯಲ್ಪಡುವ ಮೀನು ಹಿಡಿಯುವ ದೋಣಿಗಳಲ್ಲಿ ಕಳೆಯುತ್ತವೆ.
ಯೂರೋಪಿನಲ್ಲಿ ವ್ಯಾಪಾರದ ಸರಕುಗಳನ್ನು ರವಾನಿಸಲು ಓಡಗಳನ್ನು ಉಪಯೋಗಿಸುವ ಅನೇಕ ನದಿ ಮತ್ತು ಕಾಲುವೆಗಳಿವೆ. ಈ ಓಡಗಳನ್ನು ನಡೆಸುವ ಕೆಲವು ಕುಟುಂಬಗಳು ಅವುಗಳ ಒಂದು ತುದಿಯನ್ನು ವಾಸಸ್ಥಳವಾಗಿ ಉಪಯೋಗಿಸುತ್ತವೆ, ಹೀಗೆ ಓಡ ಅವರ ತೇಲುಮನೆಯಾಗುತ್ತದೆ.
ಬೋರ್ನಿಯೊ ಶೈಲಿಯ ವಾಸದ ಕೊಠಡಿ ಮನೆಗಳು
ಬೋರ್ನಿಯೊ ದ್ವೀಪದಲ್ಲಿ, ಐಬನರು ಯಾ ಸೀ ಡಾಯಕರು ಎಂದು ಕರೆಯಲ್ಪಡುವ ಜನರು, ಅವರ ರೀತಿಯ ವಾಸದ ಕೊಠಡಿಮನೆಗಳಾದ ಉದಮ್ದನೆಗಳನ್ನು ಕಟ್ಟುತ್ತಾರೆ. ನೆಲದಲ್ಲಿ ನೆಟ್ಟಿರುವ ಅನೇಕ ಕಂಬಗಳಿಂದ ಆಧರಿಸಲ್ಪಟ್ಟ, ಈ ಉದ್ದದ, ಎತ್ತರತಗ್ಗಾದ ಕಟ್ಟಡಗಳು ನದೀತೀರದ ಮೆಟ್ಟಲು ದಿಬ್ಬಗಳ ಮೇಲೆ ನೆಲೆಸಿವೆ. ಪ್ರತಿಯೊಂದು ಉದಮ್ದನೆಯಲ್ಲಿ ಒಂದು ಇಡೀ ಸಮಾಜ, ಒಂದೇ ಚಾವಣಿಯಡಿಯಲ್ಲಿ ಒಂದು ಹಳ್ಳಿ ಇದೆ.
ಮನೆಯ ಉದ್ದ ಸಮುದಾಯದ ಗಾತ್ರಕ್ಕನುಸಾರವಾಗಿದೆ. ಇದರಲ್ಲಿ ಹತ್ತರಿಂದ ಒಂದು ನೂರು ಜನರಿರಬಹುದು. ಮದುವೆಯ ಮೂಲಕ ಹೆಚ್ಚು ಕುಟುಂಬಗಳು ರಚಿಸಲ್ಪಟ್ಟಂತೆ, ಅವರ ವಾಸಕ್ಕಾಗಿ ಉದಮ್ದನೆಯನ್ನು ಇನ್ನೂ ಲಂಬಿಸಲಾಗುತ್ತದೆ.
ಪ್ರತಿ ಕುಟುಂಬಕ್ಕೆ ಅದರದ್ದೇ ಆದ ವಾಸದ ಕೊಠಡಿ ಮನೆಯಿದೆ. ಕುಟುಂಬದ ಸದಸ್ಯರು ಅವರ ಮನೆಗೆ ಪ್ರವೇಶಿಸುವುದು ಹೇಗೆ? ಮನೆಯ ಉದ್ದಕ್ಕೂ ಹೋಗುವ ತೆರೆದ ಚಾವಣಿ ಹಾದಿಯ ಮೂಲಕವೇ. ಈ ಚಾವಣಿ ಹಾದಿಯ ಮೇಲೆ ತೂಗುವ ಒಂದು ಹುಲ್ಲಿನ ಚಾವಣಿ ಈ ಹಾದಿಗೆ ನೆರಳನ್ನು ಕೊಟ್ಟು ಮಳೆಯಿಂದ ಅದನ್ನು ರಕ್ಷಿಸುತ್ತದೆ. ಮನೆಯಲ್ಲಿರುವಾಗ ನಿವಾಸಿಗಳು ಹೆಚ್ಚಿನ ಸಮಯವನ್ನು, ಭೇಟಿಯಲ್ಲಿ ಯಾ ಬುಟ್ಟಿ ನಿರ್ಮಾಣದಲ್ಲಿ ಯಾ ಸರಾಂಗ್ ನೆಯ್ಗೆಯಲ್ಲಿ, ಈ ಚಾವಣಿ ಹಾದಿಯಲ್ಲಿ ಕಳೆಯುತ್ತಾರೆ.
ಪ್ರತಿ ವಾಸದ ಕೊಠಡಿಯಲ್ಲಿ, ಕುಟುಂಬವು ಅಡುಗೆ ಮಾಡಿ, ಊಟ ಮಾಡಿ, ಮಲಗುತ್ತದೆ. ಈ ವಾಸಸ್ಥಳ ಮತ್ತು ಚಾವಣಿ ಹಾದಿಯ ಮೇಲ್ಗಡೆ, ಬೇಸಾಯದ ಉಪಕರಣ ಮತ್ತು ಅಕ್ಕಿಯನ್ನು ಶೇಖರಿಸಿಡುವ ಒಂದು ಅಟ್ಟವಿದೆ. ಇದು ಅವಿವಾಹಿತ ಹುಡುಗಿಯರ ಶಯನ ಸ್ಥಳವೂ ಆಗಿದೆ. ಅವಿವಾಹಿತ ಯುವಕರು ಹೊರಗೆ ಚಾವಣಿ ಹಾದಿಯ ನೆಲದಲ್ಲಿ ಚಾಪೆಯ ಮೇಲೆ ಮಲಗುತ್ತಾರೆ.
ಪಾಶ್ಚಾತ್ಯ ನಗರಗಳಲ್ಲಿ ಬಹುಮಾಳಿಗೆಗಳ ವಸತಿಗಳಿಗೆ ಅಸದೃಶವಾಗಿ, ಈ ಉದಮ್ದನೆಗಳಲ್ಲಿ ಸ್ನಾನದ ಕೋಣೆಗಳಾಗಲಿ, ಪಾಯಿಖಾನೆಗಳಾಗಲಿ ಇಲ್ಲ. ಸ್ನಾನವನ್ನು ಹತ್ತಿರದ ನದಿಯಲ್ಲಿ ಮಾಡಲಾಗುತ್ತದೆ ಮತ್ತು ಕಚಡವನ್ನು ನೆಲದ ಪಟ್ಟಿಗಳ ಮಧ್ಯದಿಂದ ನಾಲ್ಕು ಮೀಟರ್ ಕೆಳಗಿರುವ ನೆಲಕ್ಕೆ ಬೀಳಿಸಲಾಗುತ್ತದೆ. ಅಲ್ಲಿ ಹಂದಿಗಳು ಮತ್ತು ಕೋಳಿಗಳು ಅದನ್ನು ಮುಗಿಸಿ ಬಿಡಲು ಸಹಾಯ ಮಾಡುತ್ತವೆ.
ನೆಲದಡಿಯ ಮನೆಗಳು
ಹತ್ತೊಂಬತ್ತನೆಯ ಶತಮಾನದಲ್ಲಿ, ಅಮೆರಿಕದ ಅನೇಕ ಆದಿ ನೆಲಸಿಗರು ದಿಮ್ಮಿಗಳ ಯಾ ಹುಲ್ಲುಗರಿಕೆಯ ಮನೆಗಳನ್ನು ಮಾಡಿದರೂ ಕೆಲವರು ನೆಲದಡಿಯಲ್ಲಿ ಮನೆಗಳನ್ನು ಕಟ್ಟಿದರು. ಅವರು ಒಂದು ಕಮರಿಯ ದಿಣ್ಣೆಯಲ್ಲಿ, ಅದರ ಚಾವಣಿ ದಿಣ್ಣೆಗೆ ಸಮಾನವಾಗಿರುವಂತೆ ಒಂದು ಕೋಣೆಯನ್ನು ತೋಡುತ್ತಿದ್ದರು. ಅಡುಗೆ ಮತ್ತು ಶಾಖಕ್ಕಾಗಿ ಮಾಡುತ್ತಿದ್ದ ಬೆಂಕಿಯ ಹೊಗೆ ಹೋಗಲಿಕ್ಕಾಗಿ, ಚಾವಣಿಯ ಮೂಲಕ ಮುಚ್ಚೊಲಿಯ ನಳಿಕೆ ಹೊರಹೋಗುತ್ತಿತ್ತು. ಈ ಭೂಗತ ಮನೆಗಳು ಕತ್ತಲಾಗಿದ್ದುದು ನಿಜವಾದರೂ, ಚಳಿಗಾಲದಲ್ಲಿ ಅವು ಬೆಚ್ಚಗಾಗಿಯೂ ಇದ್ದವು. ಮತ್ತು ಒಂಟಿಗರಾಗಿ ಜೀವಿಸುತ್ತಿದ್ದ ಪುರುಷರು, ಈ ತೋಡುಮನೆಯಲ್ಲಿ ತಮ್ಮ ಕುದುರೆಗಳೊಂದಿಗೆ ಯಾ ಎತ್ತುಗಳೊಂದಿಗೆ ಪಾಲಿಗರಾಗುತ್ತಿದ್ದುದು ಅರೂಢಿಯದ್ದಾಗಿರಲಿಲ್ಲ.
ಇಂದು, ಟಯಿವಾನಿನ ಸಮೀಪದ ಆರ್ಕಿಡ್ ದ್ವೀಪದಲ್ಲಿ, ಯಾಮಿ ಜನರು ಸಾಂಪ್ರದಾಯಿಕ ಮನೆಗಳನ್ನು ಇನ್ನೂ ಅಧಿಕಾಂಶ ನೆಲದಡಿಯಲ್ಲೇ ಕಟ್ಟುತ್ತಾರೆ. ತೆರೆದ ಹೊಂಡದ ಗೋಡೆಗಳಲ್ಲಿ ಕಲ್ಲುಗಳು ಇಡಲ್ಪಡುತ್ತವೆ, ಮತ್ತು ಮಳೆಯ ಸಮಯದಲ್ಲಿ ನೀರು ತುಂಬದಂತೆ ತಡೆಯಲು ಒಂದು ಚರಂಡಿಯಿದೆ. ದೂಲಗಳನ್ನು ಮತ್ತು ಹುಲ್ಲಿನ ಚಾವಣಿಯನ್ನು ಆಧರಿಸಲು ಮರದ ತೊಲೆಗಳಿವೆ. ನೆಲದ ಮೇಲೆ, ಪ್ರತಿ ಮನೆಗೆ ಒಂದು ಚಿಕ್ಕ, ಪ್ರತ್ಯೇಕವಾದ, ಗೋಡೆರಹಿತವಾದ, ಇನ್ನೊಂದು ಹುಲ್ಲಿನ ಚಾವಣಿಯಿಂದ ಮುಚ್ಚಲ್ಪಟ್ಟ ತುಸು ಎತ್ತಿ ಕಟ್ಟಿರುವ ಜಗಲಿಯಿದೆ. ಈ ಮರೆಯ ಜಗಲಿ, ಉಷ್ಣವಲಯದ ಮಧ್ಯಾಹ್ನದಲ್ಲಿ ಕುಟುಂಬವು ಕಾವನ್ನು ತಪ್ಪಿಸಸಾಧ್ಯವಾಗುವ ಅದರ ಶೀತಲ ಗೋಪುರವಾಗುತ್ತದೆ. ಆದರೂ, ಪೂರ್ತಿಯಾಗಿ ನೆಲದಡಿಯಲ್ಲಿ ಮನೆಗಳಿರುವ ಇತರರೂ ಇದ್ದಾರೆ.
ಕೆಲವು ವರ್ಷಗಳ ಹಿಂದೆ, ಗುಹೆಗಳನ್ನು ಮನೆಗಳಾಗಿ ಬಳಸುವ ವಿಚಾರವು ಲೋಕದ ಇನ್ನೊಂದು ಭಾಗದಲ್ಲಿ ಹೊಸ ರೂಪವನ್ನು ತಕ್ಕೊಂಡಿತು. ಫ್ರಾನ್ಸಿನ ಲೆವಾರ್ ಕಣಿವೆಯಲ್ಲಿ ಗುಹೆ ಜೀವನ ಅನೇಕ ಧನಿಕ ಕುಟುಂಬಗಳ ಮಧ್ಯೆ ಶೈಲಿಯದ್ದಾಗಿ ಪರಿಣಮಿಸಿತು. ಅಲ್ಲಿ ಬೈಠಕ್ಖಾನೆ, ಊಟದ ಕೋಣೆ, ಮತ್ತು ಅಡುಗೆಮನೆಯಾಗಿ ಪರಿವರ್ತಿಸಿದ ಗುಹೆಯನ್ನು ನೀವು ನೋಡಸಾಧ್ಯವಿತ್ತು. ಈ ಕೋಣೆಗಳ ಸಾಲು ಒಂದರ ಹಿಂದೆ ಒಂದಾಗಿ, ಬಂಡೆಯೊಳಗೆ ಆಳವಾಗಿ ಚಾಚಲ್ಪಡುತ್ತಿತ್ತು. ಇನ್ನೊಂದು ಮನೆಯನ್ನು, ಒಂದರ ಪಕ್ಕದಲ್ಲಿ ಇನ್ನೊಂದಾಗಿದ್ದ ಅನೇಕ ಗುಹೆಗಳನ್ನು ಸೇರಿಸಿ ರಚಿಸಲಾಗಿತ್ತು. ಪ್ರತಿಯೊಂದು ಗುಹೆಗೆ ಕಿಟಿಕಿಗಳೂ, ಗುಹೆಯ ಬಾಯಿಯಲ್ಲಿ, ಬೆಳಕು ಪ್ರವೇಶಿಸುವಂತೆ ಕಟ್ಟಿದ ಗಾಜಿನ ಬಾಗಲೂ ಇತ್ತು. ಈ ಗುಹೆಗಳಲ್ಲಿ ಜೀವಿಸಿದ ಕುಟುಂಬಗಳು, ಹರಿಯುವ ನೀರು, ವಿದ್ಯುಚ್ಫಕ್ತಿ, ಮತ್ತು ತೇವ ಮತ್ತು ಬೂಷ್ಟನ್ನು ಹೋಗಲಾಡಿಸಲು ಬಲಾತ್ಕಾರ ವಾಯುಸಂಚಾರ ಸೇರಿರುವ ಇತರ ಅನುಕೂಲತೆಗಳಿಂದ ಆಧುನಿಕದ್ದಾಗಿ ಮಾಡಲು ಗಣನೀಯ ಗಾತ್ರದ ಖರ್ಚಿಗೆ ಹೋದರು.
ಇಲ್ಲಿ ನಾವು ಪರಿಗಣಿಸಿರುವ ಮನೆಗಳು ನಿಮ್ಮದ್ದಕ್ಕಿಂತ ವಿಭಿನ್ನ ವಾಗಿರಬಹುದು. ಆದರೆ ಲೋಕದ ವಿಭಿನ್ನ ಭಾಗಗಳಲ್ಲಿ ಇವುಗಳಲ್ಲಿ ಜೀವಿಸುವವರಿಗೆ ಇದು, “ಮನೆ, ಮಧುರ ಮನೆ.” (g92 12/8)