ಜನಸಂದಣಿಯ ಹಾಂಗ್ ಕಾಂಗ್ನ ನನ್ನ ಜೀವನದಲ್ಲಿ ಒಂದು ದಿನ
ಹಾಂಗ್ಕಾಂಗ್ ಜಗತ್ತಿನ ಅತ್ಯಂತ ಜನನಿಬಿಡವಾದ ಸ್ಥಳಗಳಲ್ಲಿ ಒಂದು. ಅದರ 1,070 ಚದರ ಕಿಲೊಮೀಟರ್ ಜಮೀನಿನಲ್ಲಿ 58 ಲಕ್ಷ ಜನರು ವಾಸಿಸುತ್ತಿರುವುದರಿಂದ, ಪ್ರತಿ ಚದರ ಕಿಲೊಮೀಟರಿಗೆ 5,592 ಜನರು ಅಲ್ಲಿದ್ದಾರೆ. ಜಮೀನಿನಲ್ಲಿ 10 ಪ್ರತಿಶತ ಮಾತ್ರ ನಿವಾಸಿಸಲ್ಪಟ್ಟಿರುವ ಕಾರಣ, ಇದು ಜನರಿರುವ ಪ್ರತಿ ಚದರ ಕಿಲೊಮೀಟರಿನಲ್ಲಿ ಸರಾಸರಿ ಸುಮಾರು 54,000 ಮಂದಿ ಇರುವುದನ್ನು ಪ್ರತಿನಿಧೀಕರಿಸುತ್ತದೆ! ಆದರೂ ಸ್ಥಳೀಕರು ಈ ಇಕ್ಕಟ್ಟಾದ ವಾಸಸ್ಥಳ, ಸದ್ದಿನ ವಾಹನ ಸಂಚಾರ ಮತ್ತು ಮಾಲಿನ್ಯವಿರುವ ಜನನಿಬಿಡವಾದ ನಗರದ ಗಡಿಬಿಡಿಗೆ ಪ್ರಶಂಸನೀಯವಾಗಿ ಹೊಂದಿಕೊಂಡಿರುವಂತೆ ತೋರಿಬರುತ್ತದೆ.
ನಾನು ಬೆಳಿಗ್ಗೆ 7:30ಕ್ಕೆ ನನ್ನ ಎಚ್ಚರಿಸುವ ಗಡಿಯಾರದ ಕೀರಲು ಧ್ವನಿಗೆ ಎಚ್ಚತ್ತೆ. ನನ್ನ ಆರಾಮ ಸೋಫ ಮಂಚದಿಂದ ಎದ್ದು, ಬೇಗನೆ ಬಟ್ಟೆ ಉಟ್ಟೆ. ನಾನು ನನ್ನ ತಂದೆತಾಯಿ ಮತ್ತು ಮೂರು ತಂಗಿಯಂದಿರು—ಎಲ್ಲರೂ ಉದ್ಯೋಗದಲ್ಲಿದ್ದಾರೆ—ಇವರೊಂದಿಗೆ ಒಂದು ಚಿಕ್ಕ ಮನೆಯಲ್ಲಿ ವಾಸಿಸುತ್ತೇನೆ. ಆದುದರಿಂದ ಸ್ನಾನದ ಕೋಣೆಯ ಸರದಿಗಾಗಿ ಸದಾ ಸಾಲು ಇದೆ, ಮತ್ತು ನಮ್ಮ ಸಮಯ ಪರಿಮಿತ. ಬೇಗನೆ ನಾಷ್ಟ ಮುಗಿಸಿ, ನಾನು ಟ್ರೇನ್ ಸೇಶ್ಟನಿಗೆ ಹೋಗಲು ನನ್ನ ಸೈಕಲನ್ನು ಹಿಡಿದು ಸಿದ್ಧನಾಗುತ್ತೇನೆ. ದಿನನಿತ್ಯದ ಉಗ್ರಪರೀಕ್ಷೆ ಆರಂಭವಾಯಿತು. ಗಲಿಬಿಲಿಯ ಹಾಂಗ್ಕಾಂಗಿನಲ್ಲಿ ಕೆಲಸಕ್ಕೆ ಹೋಗುವವರ ಮಹಾ ಸಮೂಹದಲ್ಲಿ ನಾನು ಒಬ್ಬನಾಗುತ್ತೇನೆ.
ನನ್ನ ಟ್ರೇನು ನನ್ನನ್ನು ನಿಬಿಡವಾದ ವಾಸದ ಕೊಠಡಿಗಳ ತಂಡ ಮತ್ತು ಕಿಕ್ಕಿರಿದು ಜನರು ವಾಸಿಸುವ ಗಗನಚುಂಬಿಗಳನ್ನು ರಭಸದಿಂದ ದಾಟಿಸುತ್ತಾ ರವಾನಿಸುತ್ತದೆ. ಆ ಬಳಿಕ ನಾನು ಬಂದರನ್ನು ದಾಟಲು ಬಸ್ಸು ಹತ್ತುತ್ತೇನೆ. ಒಂದರ ಬೆನ್ನಿಗೆ ಇನ್ನೊಂದು ತಾಗುವಂತಿರುವ ವಾಹನ ಸಮೂಹದ ಮಧ್ಯೆ ಸುರಂಗ ಮಾರ್ಗವಾಗಿ ನಾವು ಚಲಿಸುತ್ತೇವೆ. ನಾನು ಕೆಲಸ ಮಾಡುತ್ತಿರುವ ಹಾಂಗ್ ಕಾಂಗ್ ಐಲೆಂಡಿನ ಹಣಕಾಸಿನ ವ್ಯವಹಾರದ ಕೇಂದ್ರ ವಠಾರದಲ್ಲಿ ಬಂದು ಮುಟ್ಟುವಾಗ ಎಂಥ ಉಪಶಮನ. ಈ ಪ್ರಯಾಣ, ವಾಹನ ಸಂಚಾರದ ಮೇಲೆ ಹೊಂದಿಕೊಂಡು ಒಂದು ಯಾ ಒಂದೂವರೆ ತಾಸು ಹಿಡಿಯುತ್ತದೆ. ನಾನು ಕೊನೆಗೆ 9:30ಕ್ಕೆ ಬಂದು ಮುಟ್ಟುತ್ತೇನೆ. ಆದರೆ ಆರಾಮವಾಗಿ ಕುಳಿತುಕೊಳ್ಳಲು ಸಮಯವಿಲ್ಲ. ಫೋನು ಘಣಘಣಿಸಲಾರಂಭಿಸುತ್ತದೆ. ಅದು ದಿನದ ನನ್ನ ಮೊದಲನೆಯ ಗಿರಾಕಿ. ಮತ್ತು ಒಂದರ ಹಿಂದೆ ಇನ್ನೊಂದು ಫೋನ್ ಕರೆ ಬಂದು, ಅದನ್ನು ಕೆಳಗಿಡುವುದೇ ವಿರಳವಾಗಿ, ಇದೇ ನನ್ನ ದಿನದ ಕಥೆಯಾಗುತ್ತದೆ. ಆ ಬಳಿಕ ಮಧ್ಯಾಹ್ನದ ಊಟಕ್ಕೆ ತುಸು ವಿರಾಮ.
ಈಗ ಆ ವಠಾರದಲ್ಲಿರುವ ಅನೇಕಾನೇಕ ಭೋಜನಾಲಯಗಳಲ್ಲಿ ಸ್ಥಳ ಕಂಡುಹಿಡಿಯುವುದು ಒಂದು ಸಮಸ್ಯೆ. ಎಲ್ಲರೂ ಒಂದೇ ಸಮಯದಲ್ಲಿ, ಒಂದೇ ಸ್ಥಳದಲ್ಲಿ, ಮತ್ತು ಅನೇಕ ವೇಳೆ ಒಂದೇ ಮೇಜಿನಲ್ಲಿ ಊಟಮಾಡಲು ಪ್ರಯತ್ನಿಸುವಂತೆ ಕಾಣುತ್ತದೆ! ಪುನಃ ತೀರಾ ಅಪರಿಚಿತರು ನನ್ನ ಮೇಜಿನಲ್ಲಿ ಪಾಲಿಗರಾಗುತ್ತಾರೆ. ಇದು ಜನನಿಬಿಡವಾದ ಹಾಂಗ್ ಕಾಂಗ್ನ ಜೀವನ. ನನ್ನ ಅಲ್ಪ ಸಮಯದ ಆದರೂ ಪುಷ್ಟಿದಾಯಕ ಚೈನೀಸ್ ಊಟ ಮುಗಿದಾಗ ನಾನು ಪುನಃ ಆಫೀಸಿಗೆ ಹೋಗುತ್ತೇನೆ.
ನನ್ನ ಕೆಲಸ 5:30ಕ್ಕೆ ಮುಗಿಯಬೇಕೆಂದಿದೆ. ಆದರೆ ಇದರ ಸಾಧ್ಯತೆ ವಿರಳ. ನಾನು ಕೊನೆಗೆ ಚಟುವಟಿಕೆ ನಿಲ್ಲಿಸಿ ವಿಶ್ರಮಿಸುತ್ತಾ ಗಡಿಯಾರ ನೋಡುವಾಗ, ಸಮಯ 6:15. ಕೆಲವು ದಿನಗಳಲ್ಲಿ, ನಾನು ಕೆಲಸ ಬಿಟ್ಟು ಹೋಗುವಾಗ ಸಮಯ ಏಳಕ್ಕೂ ದಾಟಿಹೋಗುತ್ತದೆ. ಆ ಮೇಲೆ ಮನೆಗೆ ಹಿಂದೆ ಹೋಗುವ ಪ್ರಯಾಣ.
ಮೊದಲು ಬಸ್, ಬಳಿಕ ಟ್ರೇನು. ಕಟ್ಟಕಡೆಗೆ ಅದು ನನ್ನ ಸೇಶ್ಟನಿಗೆ ತಲುಪಲಾಗಿ ನಾನು ಸೈಕಲಿಗಾಗಿ ಹೋಗುತ್ತೇನೆ. ಸೈಕಲು ನಡೆಸುತ್ತಿರುವಾಗ, ನಮ್ಮ ಚಿಕ್ಕ ಪಟ್ಟಣ, ಗಡಿಬಿಡಿಯ ಬಿರಿಯುವ ಆಧುನಿಕ ನಗರವಾಗಿ ಹೇಗೆ ಪರಿಣಮಿಸಿತೆಂದು ನಾನು ಜ್ಞಾಪಿಸಿಕೊಳ್ಳುತ್ತೇನೆ. ಹಳ್ಳಿಯ ಎತ್ತರವಿಲ್ಲದ ಮನೆಗಳ ಸ್ಥಾನದಲ್ಲಿ ಈಗ 20ರಿಂದ 30 ಮಹಡಿ ಎತ್ತರದ ಮನೆಗಳು ನಿಂತಿವೆ. ದೊಡ್ಡ, ವಿಶಾಲವಾದ ಹೆದ್ದಾರಿಗಳು ದೊಡ್ಡ ಗಾತ್ರದ ಪ್ರದೇಶಗಳನ್ನು ಆಕ್ರಮಿಸಿವೆ, ಮತ್ತು ಬೃಹದಾಕಾರದ ಮೇಲ್ಸೇತುವೆಗಳು ಎಡೆಬಿಡದ ಸದ್ದಿನ ವಾಹನಸಂಚಾರದಿಂದ ನಿಮಿರಿವೆ. ಹಿಂದಿನ ಜೀವನದ ಸಾವಕಾಶ ರೀತಿ ಎಂದೆಂದಿಗೂ ಇಲ್ಲದೆ ಹೋಗಿದೆ.
ಮನೆ ಚಿಕ್ಕದು—ನಮ್ಮಲ್ಲಿರುವ ಆರು ಜನರಿಗೆ 28 ಚದರ ಮೀಟರುಗಳಿಗಿತಲೂ ಕಡಮೆ ಸ್ಥಳ, ಮತ್ತು ನನಗೆ ಸ್ವಂತ ಕೋಣೆಯಿಲ್ಲ. ಆದುದರಿಂದಲೆ ನಾನು ವಾಸದ ಕೊಠಡಿಯಲ್ಲಿ ಆರಾಮ ಸೋಫದ ಮೇಲೆ ಮಲಗುತ್ತೇನೆ. ಆದರೆ ನನ್ನ ತಂದೆ ತಾಯಿಗಳಿಗಾದರೂ ಒಂದು ಖಾಸಗಿ ಕೋಣೆಯಿದೆ, ಮತ್ತು ನನ್ನ ಮೂವರು ತಂಗಿಯರು ಅವರ ಚಿಕ್ಕ ಕೋಣೆಯ ಅಟಮ್ಟಂಚಗಳಲ್ಲಿ ಮಲಗುತ್ತಾರೆ. ಏಕಾಂತತೆ ನಮಗೆ ಭೋಗ ಸಾಮಗ್ರಿ.
ಇದು ಚಿಕ್ಕದಾದರೂ ಹಿಂದೆ ಇದ್ದುದಕ್ಕಿಂತ ಎಷ್ಟೋ ದೊಡ್ಡ ಸುಧಾರಣೆ. ಆಗ ನಾವು ಸರಕಾರಿ ವಸತಿ ಸ್ಥಳದಲ್ಲಿ ಎಲ್ಲರೂ ಒಂದೇ ಕೋಣೆಯಲ್ಲಿ ಕೂಡಿ ಜೀವಿಸುತ್ತಿದ್ದೆವು. ಆದರೆ ಅದು ಸಹ, ಮಾಂಗ್ ಕಾಕ್ ಜಿಲ್ಲೆಯಲ್ಲಿ ಜೀವಿಸುವ ಸಾವಿರಾರು ಜನರ ಪರಿಸ್ಥಿತಿಗೆ ಹೋಲಿಸುವಲ್ಲಿ ಎಷ್ಟೋ ಒಳ್ಳೆಯದು. ಅಲ್ಲಿ ಅವರು 1.8 ಮೀಟರ್ ಉದ್ದ, .8 ಮೀಟರ್ ಆಳ ಮತ್ತು .8 ಮೀಟರ್ ಎತ್ತರವಿದ್ದು, ಇಂಥ ಮೂರು ಗೂಡುಗಳು ಒಂದರ ಮೇಲೊಂದು ಇರುವ “ಗೂಡು ಮನೆ”ಗಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಅವರಿಗೆ ಅಲ್ಲಿ ಒಂದು ಹಾಸಿಗೆ ಮತ್ತು ಕೆಲವು ವ್ಯಕ್ತಿಪರ ವಸ್ತುಗಳಿಗೆ ಮಾತ್ರ ಸ್ಥಳವಿದೆ. ಪೀಠೋಪಕರಣಗಳಿಗೆ ಸ್ಥಳವಿಲ್ಲ.
ಒಂಬತ್ತು ಗಂಟೆಯೊಳಗೆ ಎಲ್ಲರೂ ಮನೆ ಸೇರಿರುತ್ತಾರೆ, ಮತ್ತು ನಾವು ರಾತ್ರಿಯ ಊಟಕ್ಕೆ ಕುಳಿತುಕೊಳ್ಳುತ್ತೇವೆ. ಊಟವಾದ ಬಳಿಕ ಯಾರಾದರೂ ಟೀವೀ ಆನ್ ಮಾಡಲಾಗಿ ನನ್ನ ನೆಮ್ಮದಿಯಿಂದ ಓದುವ ಮತ್ತು ಅಧ್ಯಯನ ಮಾಡುವ ನಿರೀಕ್ಷೆ ಅಂತ್ಯಗೊಳ್ಳುತ್ತದೆ. ಹನ್ನೊಂದು ಗಂಟೆಗೆ ಎಲ್ಲರೂ ನಿದ್ರೆ ಮಾಡಲು ಹೋಗುವ ತನಕ ನಾನು ಕಾಯುತ್ತೇನೆ, ಮತ್ತು ಆಗ ಕೋಣೆ ಮತ್ತು ಏಕಾಗ್ರತೆಗಾಗಿ ಪ್ರಶಾಂತತೆ ಮತ್ತು ಮೌನ ನನ್ನದಾಗುತ್ತದೆ. ಮಧ್ಯ ರಾತ್ರಿಯೊಳಗೆ ನಾನೂ ನಿದ್ದೆ ಮಾಡಲು ಸಿದ್ಧನಾಗುತ್ತೇನೆ.
ಹನ್ನೆರಡು ವರ್ಷಗಳ ಹಿಂದೆ, ಶಾಲೆ ಬಿಟ್ಟಂದಿನಿಂದ ನಾನು ಕೆಲಸ ಮಾಡುತ್ತಿದ್ದೇನೆ. ಯಾವಾಗಲೋ ಒಮ್ಮೆ ನನಗೆ ಮದುವೆ ಮಾಡಿಕೊಳ್ಳುವ ಅಪೇಕ್ಷೆ ಇದೆ, ಆದರೆ ದಿನ ದೂಡಲು ನನಗೆ ಎಷ್ಟು ಕಠಿಣ ಕೆಲಸ ಮಾಡಬೇಕಾಗುತ್ತದೆಂದರೆ ಒಬ್ಬ ಹೆಂಗಸಿನ ಸುಪರಿಚಯ ಮಾಡಿಕೊಳ್ಳುವಷ್ಟೂ ಸಮಯ ನನಗಿಲ್ಲ. ಮತ್ತು ಜೀವಿಸಲು ಮನೆ ಕಂಡುಹಿಡಿಯುವುದು, ನಾವು ಹೇಳುವಂತೆ, ಆಕಾಶವನ್ನು ಹತ್ತುವುದಕ್ಕಿಂತ ಕಷ್ಟ. ನಾವು ನಿಭಾಯಿಸಲು ಕಲಿತಿರುವುದಾದರೂ, ಈ ಆವೇಶದ ನಗರ ಜೀವನ ಸ್ವಾಭಾವಿಕವೆಂದು ನನಗೆನಿಸುವುದಿಲ್ಲ. ಆದರೂ, ಜಗತ್ತಿನ ಇತರ ಭಾಗಗಳಲ್ಲಿ ಯೋಗ್ಯ ಮನೆ, ವಿದುಚ್ಫಕ್ತಿ, ನಳ್ಳಿಯ ನೀರು, ಯಾ ಯೋಗ್ಯ ಶುಚಿತ್ವದ ಏರ್ಪಾಡಿಲ್ಲದೆ ಬದುಕುವ ಲಕ್ಷಾಂತರ, ಪ್ರಾಯಶಃ ಕೋಟ್ಯಂತರ ಜನರಿಗಿಂತ ನನ್ನ ಸ್ಥಿತಿ ಎಷ್ಟೋ ಉತ್ತಮ ಎಂಬುದನ್ನು ನಾನು ಒಪ್ಪುತ್ತೇನೆ. ನಮಗೆ ಹೆಚ್ಚು ಉತ್ತಮವಾದ ವ್ಯವಸ್ಥೆ, ಹೆಚ್ಚು ಉತ್ತಮವಾದ ಜಗತ್ತು, ಹೆಚ್ಚು ಉತ್ತಮವಾದ ಜೀವನ ಅಗತ್ಯವೆಂಬುದು ನಿಶ್ಚಯ.—ಕೀನ್ ಕುರ್ನ್ ಹೇಳಿರುವಂತೆ. (g91 11/8)