ಚಿಕ್ಕ ದ್ವೀಪದಿಂದ ಜನನಿಬಿಡವಾದ ವಿಮಾನ ನಿಲ್ದಾಣವಾಗಿ ಮಾರ್ಪಟ್ಟಿತು
ಹಾಂಗ್ ಕಾಂಗ್ನಲ್ಲಿರುವ ಎಚ್ಚರ! ಸುದ್ದಿಗಾರರಿಂದ
ವಿಮಾನವು ಹಾಂಗ್ ಕಾಂಗ್ನ ಕೈ ಟೆಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಕೆಳಗಿಳಿಯಲಿದ್ದಾಗ, ಪ್ರಯಾಣಿಕಳೊಬ್ಬಳು ಕಿಟಕಿಯಿಂದ ಹೊರಗೆ ನೋಡಿ ಗಾಬರಿಗೊಂಡು, “ನಾವು ಛಾವಣಿಗಳ ಮೇಲಿರುವ ಟಿವಿ ಆ್ಯಂಟೆನಾಗಳನ್ನು ಬೀಳಿಸುತ್ತಿರಬೇಕು!” ಎಂದು ಕೂಗಿ ಹೇಳಿದಳು. ಕೆಳಗೆ, ಕೌಲೂನ್ ನಗರದ ಸಮೀಪದಲ್ಲಿದ್ದ ಮನೆಯ ಛಾವಣಿಯ ಮೇಲೆ, ಬಟ್ಟೆಗಳನ್ನು ಒಣಹಾಕುತ್ತಿದ್ದ ಸ್ತ್ರೀಯೊಬ್ಬಳ ತಲೆಯ ಮೇಲಿನಿಂದ ದೊಡ್ಡ ಶಬ್ದವನ್ನು ಮಾಡುತ್ತಾ ವಿಮಾನವು ಹಾರಿಹೋದಾಗ, ಇನ್ನೊಮ್ಮೆ ಆಕೆ ಆ ಕಿವಿಬಿರಿಯುವ ಸದ್ದನ್ನು ಹಲ್ಲುಕಚ್ಚುತ್ತಾ ಸಹಿಸಿಕೊಂಡಳು.
“ಪರ್ವತಗಳಿಂದಾಗಿ ಇಳಿಯಲು ಕಷ್ಟವಾಗುತ್ತದೆ” ಎಂದು ಜಾನ್ ಹೇಳುತ್ತಾನೆ. ಅವನು ಒಬ್ಬ ವಿಮಾನ ಚಾಲಕನಾಗಿದ್ದು, ಅನೇಕ ಬಾರಿ ಅವನು ಇಂತಹ ಅಪಾಯಕರ ವಿಧಾನಗಳಲ್ಲಿ ವಿಮಾನವನ್ನು ಕೆಳಗಿಳಿಸಿದ್ದಾನೆ. “ನಾವು ವಾಯವ್ಯ ದಿಕ್ಕಿನಿಂದ ಕೆಳಗೆ ಇಳಿಯುವಲ್ಲಿ, ರನ್ವೇ (ವಿಮಾನಗಳು ಹಾರಾಟ ಆರಂಭಿಸಲು ಹಾಗೂ ಇಳಿಯಲು ಸಿದ್ಧಪಡಿಸಿರುವ ಪಥ)ಯನ್ನು ತಲಪುವುದಕ್ಕೆ ಸ್ವಲ್ಪ ಮುಂಚೆ ಕಠಿನವಾದ ಒಂದು ತಿರುವನ್ನು ಮಾಡಬೇಕಾಗುತ್ತದೆ. ಪರ್ವತಗಳು ಸಹ ಅಪಾಯಕರವಾದ ಇಳಿಗಾಳಿಯನ್ನು ಉಂಟುಮಾಡುತ್ತವೆ, ಇವುಗಳನ್ನು ನಾವು ಗಾಳಿಯ ಕಡಿತ ಎಂದು ಕರೆಯುತ್ತೇವೆ.”
ಭಯಗ್ರಸ್ತ ಪ್ರಯಾಣಿಕರು, ವಿಮಾನ ಚಾಲಕರು, ಮತ್ತು ವಿಶೇಷವಾಗಿ ಕೌಲೂನ್ ನಗರದ ಜನರು, ಕೈ ಟೆಕ್ನಲ್ಲಿ ವಿಮಾನ ಹಾರಾಟದ ಕೊನೆಗೊಳ್ಳುವಿಕೆಯನ್ನು ಬಹಳ ಸಮಯದಿಂದ ಮುನ್ನೋಡುತ್ತಿದ್ದರು. ಮತ್ತು 1998ರ ಜುಲೈ ತಿಂಗಳಿನಲ್ಲಿ ಆ ದಿನವು ಬಂತು. ಆಗ ಹಾಂಗ್ ಕಾಂಗ್ ಒಂದು ಹೊಸ ವಿಮಾನ ನಿಲ್ದಾಣವನ್ನು ಉಪಯೋಗಿಸಲು ಆರಂಭಿಸಿತು.
ಒಂದು ದ್ವೀಪದ ಮೇಲೆ ವಿಮಾನ ನಿಲ್ದಾಣ
1980ಗಳಲ್ಲಿ, ಕೈ ಟೆಕ್ ವಿಮಾನ ನಿಲ್ದಾಣದಲ್ಲಿ ಸ್ಥಳವೇ ಇರಲಿಲ್ಲ. ಇನ್ನೂ ಹೆಚ್ಚು ವಿಸ್ತರಿಸುವುದು ಅಸಾಧ್ಯವಾಗಿದ್ದರಿಂದ, ಒಂದು ಹೊಸ ವಿಮಾನ ನಿಲ್ದಾಣಕ್ಕಾಗಿ ಸ್ಥಳವನ್ನು ಹುಡುಕಲಾಯಿತು. ಆದರೆ ಹಾಂಗ್ ಕಾಂಗ್ನಲ್ಲಿ ಒಂದು ವಿಮಾನ ನಿಲ್ದಾಣವನ್ನು ಕಟ್ಟಲು ಸಾಕಾಗುವಷ್ಟು ದೊಡ್ಡ ಸಮತಟ್ಟಾದ ಪ್ರದೇಶವು ಲಭ್ಯವಿರಲಿಲ್ಲ. ಇದಲ್ಲದೆ, ತಮ್ಮ ನೆರೆಹೊರೆಯಲ್ಲಿ ಗದ್ದಲಮಯವಾದ ಒಂದು ವಿಮಾನ ನಿಲ್ದಾಣವು ಸ್ಥಾಪನೆಯಾಗುವುದನ್ನು ಜನರು ಇಷ್ಟಪಡಲಿಲ್ಲ. ಇದಕ್ಕೆ ಪರಿಹಾರವೇನು? ಒಂದು ಚಿಕ್ಕ ದ್ವೀಪವಾದ ಚೆಕ್ ಲಪ್ ಕಾಕ್. ದೊಡ್ಡದಾದರೂ ಹೆಚ್ಚು ಅಭಿವೃದ್ಧಿಯಾಗಿಲ್ಲದ ಲಾಂಟೌ ದ್ವೀಪದ ಉತ್ತರ ಭಾಗದಲ್ಲಿ ಇದು ಇದೆ. ಸಿವಿಲ್ ಇಂಜಿನಿಯರುಗಳು ಈ ನಿರ್ಮಾಣಕಾರ್ಯದ ಪಂಥಾಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದರು.
ವಿಮಾನ ನಿಲ್ದಾಣವನ್ನು ಕಟ್ಟಲು, ಈ ಚಿಕ್ಕ ದ್ವೀಪವನ್ನು ಹಾಗೂ ಇದರ ಪಕ್ಕದಲ್ಲಿರುವ ಅತಿ ಚಿಕ್ಕ ದ್ವೀಪವನ್ನು ಸಮತಟ್ಟುಮಾಡುವ ಮತ್ತು ಸಮುದ್ರದಿಂದ ಸುಮಾರು ಒಂಬತ್ತೂವರೆ ಚದರ ಕಿಲೊಮೀಟರುಗಳಷ್ಟು ಭೂಪ್ರದೇಶವನ್ನು ಲಭ್ಯಗೊಳಿಸುವ ಅಗತ್ಯವಿತ್ತು. ಈ ವಿಮಾನ ನಿಲ್ದಾಣಕ್ಕೂ ಹಾಂಗ್ ಕಾಂಗ್ ನಗರಕ್ಕೂ ಸಂಚಾರವನ್ನು ನಿರ್ಮಿಸಲಿಕ್ಕಾಗಿ, 34 ಕಿಲೊಮೀಟರುಗಳ ಒಂದು ರೈಲುಮಾರ್ಗವನ್ನೂ ಇನ್ನೊಂದು ಹೆದ್ದಾರಿಯನ್ನೂ ಕಟ್ಟಲಾಯಿತು. ಈ ಎರಡೂ ಮಾರ್ಗಗಳು, ದ್ವೀಪಗಳು ಹಾಗೂ ಕಾಲುವೆಗಳ ಮೂಲಕ ಹೊರಟು, ಕೌಲೂನ್ ನಗರದಿಂದ ಹಾದುಹೋಗಿ, ವಿಕ್ಟೋರಿಯ ಹಾರ್ಬರನ್ನು ಬಳಸಿ, ಹಾಂಗ್ ಕಾಂಗನ್ನು ತಲಪುತ್ತಿದ್ದವು. ಇದಕ್ಕಾಗಿ ಸೇತುವೆಗಳು, ಸುರಂಗಗಳು, ಹಾಗೂ ಕಮಾನು ಸೇತುವೆಗಳನ್ನು ನಿರ್ಮಿಸಬೇಕಾಗಿತ್ತು. ಆದುದರಿಂದ, ಈ ಯೋಜನೆಯು, ಇದುವರೆಗೆ ಕೈಗೊಂಡಿರುವ ಅತ್ಯಂತ ದೊಡ್ಡ ನಿರ್ಮಾಣ ಯೋಜನೆಗಳಲ್ಲಿ ಒಂದಾಗಿ ಪರಿಣಮಿಸಿತು.
ದ್ವೀಪವನ್ನು ದಾಟಲಿಕ್ಕಾಗಿ ಅಸಾಧಾರಣ ಸೇತುವೆಗಳು
ಜಗತ್ಪ್ರಸಿದ್ಧವಾದ ಈ ಪ್ರದೇಶವನ್ನು ನೋಡಲು, ಸಾವಿರಾರು ಮಂದಿ ಹಾಂಗ್ ಕಾಂಗ್ನ ನ್ಯೂ ಟೆರಿಟೊರೀಸ್ಗೆ ಬರುತ್ತಾರೆ. ಆ ಪ್ರದೇಶದ ಹೆಸರು ಲಾಂಟೌ ಲಿಂಕ್ ಎಂದಾಗಿದೆ. ಇದು ಲಾಂಟೌ ದ್ವೀಪವನ್ನು ವಿಸ್ತಾರವಾದ ಭೂಭಾಗದೊಂದಿಗೆ ಒಟ್ಟುಗೂಡಿಸುತ್ತದೆ. ಇದು ದಪ್ಪ ದಪ್ಪ ತಂತಿಗಳಿಂದ ಮಾಡಲ್ಪಟ್ಟ ಸೇತುವೆಯಾಗಿದ್ದು, ಲಾಂಟೌ ದ್ವೀಪವನ್ನು ಒಂದು ಚಿಕ್ಕ ಮಾ ವಾನ್ ದ್ವೀಪದೊಂದಿಗೆ ಒಟ್ಟುಗೂಡಿಸುತ್ತದೆ; ಮಾ ವಾನ್ನ ಮೇಲೆ ಒಂದು ಕಮಾನು ಸೇತುವೆಯೂ ಇದೆ, ಮತ್ತು ಇನ್ನೊಂದು ಸೇತುವೆಯ ಉದ್ದ ಸುಮಾರು 1,377 ಮೀಟರುಗಳಷ್ಟಿದ್ದು, ಇದು ಮಾ ವಾನ್ ದ್ವೀಪವನ್ನು, ಸಿಂಗ್ ಈ ಎಂಬ ಮೂರನೆಯ ದ್ವೀಪದೊಂದಿಗೆ ಜೊತೆಗೂಡಿಸುತ್ತದೆ. ಈ ಡಬಲ್ ಡೆಕ್ (ಒಂದರ ಮೇಲೆ ಒಂದು) ಸೇತುವೆಗಳು, ಲೋಕದಲ್ಲಿರುವ ಈ ರೀತಿಯ ಸೇತುವೆಗಳಲ್ಲೇ ಅತ್ಯಂತ ಉದ್ದವಾದ ಸೇತುವೆಗಳಾಗಿವೆ. ಮೇಲಿನ ಸೇತುವೆಯಲ್ಲಿ ರಸ್ತೆ ಸಂಚಾರವಿದೆ ಮತ್ತು ಕೆಳಗಿನ ಸುತ್ತುಗಟ್ಟಿರುವ ಸೇತುವೆಯಲ್ಲಿ ರೈಲುಮಾರ್ಗ ಹಾಗೂ ಮೋಟಾರು ವಾಹನಗಳ ಸಂಚಾರಕ್ಕಾಗಿ ಎರಡು ಪಥಗಳ ರಸ್ತೆಯಿದೆ.
ತೂಗು ಸೇತುವೆಗೆ ಆಧಾರವಾಗಿರುವ ತಂತಿಗಳನ್ನು ದೂರದಿಂದ ನೋಡುವಾಗ, ಅವು ತುಂಬ ನಾಜೂಕಾಗಿ ಕಾಣುತ್ತವೆ. ಇಂಜಿನಿಯರುಗಳು ಇದನ್ನು ಸರಿಯಾಗಿ ರಚಿಸಿದ್ದಾರೋ ಅಥವಾ ಈ ಸೇತುವೆಯು ನೀರಿನಲ್ಲಿ ಕುಸಿದು ಬೀಳುತ್ತದೋ ಎಂದು ವ್ಯಕ್ತಿಯೊಬ್ಬನು ಯೋಚಿಸಬಹುದು. ಆದರೆ, ತೀರ ಸಮೀಪದಿಂದ ನೋಡುವಲ್ಲಿ, ಆ ತಂತಿಗಳು ಖಂಡಿತವಾಗಿಯೂ ನಾಜೂಕಾಗಿಲ್ಲ ಎಂಬುದು ಗೊತ್ತಾಗುತ್ತದೆ. ಆ ತಂತಿಗಳು 1.1 ಮೀಟರುಗಳಷ್ಟು ದಪ್ಪವಿದ್ದು, 1,60,000 ಕಿಲೊಮೀಟರುಗಳಷ್ಟು ಉದ್ದ ಇವೆ—ಅಂದರೆ ಭೂಮಿಯ ಸುತ್ತಲೂ ನಾಲ್ಕು ಬಾರಿ ಸುತ್ತುವಷ್ಟು ಉದ್ದ. ಆ ತಂತಿಗಳು ಅಷ್ಟೇ ದಪ್ಪವಿರಬೇಕು, ಏಕೆಂದರೆ ಅವು ಒಂದು ಸೇತುವೆಯಲ್ಲಿ ಒಳಗೂಡಿರುವ 95 ಲೋಹಭಾಗಗಳ ಭಾರವನ್ನು ಹೊರಬೇಕು. ಮತ್ತು ಪ್ರತಿಯೊಂದು ಲೋಹಭಾಗವು 500 ಟನ್ಗಳಷ್ಟು ಭಾರವಿರುತ್ತದೆ. ತಂತಿಗಳ ಕೆಲಸವು ಪೂರ್ಣಗೊಂಡಾಗ, ಈ ಮುಂಚೆಯೇ ತಯಾರಿಸಲ್ಪಟ್ಟಿದ್ದ ಈ ಲೋಹಭಾಗಗಳನ್ನು, ದೋಣಿಯಲ್ಲಿ ಆ ಸ್ಥಳಕ್ಕೆ ಕೊಂಡೊಯ್ದು, ದೋಣಿಯಿಂದಲೇ ನೇರವಾಗಿ ಕ್ರೇನ್ನಿಂದ ಮೇಲಕ್ಕೆ ಎಳೆದು ಕೂರಿಸಲಾಯಿತು.
ತಂತಿಗಳಿಗೆ ಆಧಾರವನ್ನು ಒದಗಿಸಲಿಕ್ಕಾಗಿ ರಚಿಸಲ್ಪಟ್ಟಿದ್ದ ಸ್ತಂಭಗಳನ್ನು ನಿಲ್ಲಿಸಿದಾಗ, ಆ ದೃಶ್ಯವನ್ನು ಸಮೀಪದಲ್ಲಿ ವಾಸಿಸುತ್ತಿದ್ದ ನಿವಾಸಿಗಳು ತುಂಬ ಆಸಕ್ತಿಯಿಂದ ವೀಕ್ಷಿಸಿದರು. ನಿಲ್ಲಿಸಲ್ಪಟ್ಟ ಸ್ತಂಭಗಳು ಆಕಾಶವನ್ನು ಮುಟ್ಟುತ್ತಿರುವಂತೆ ತೋರುತ್ತಿದ್ದವಾದರೂ, ಸಾಮಾನ್ಯವಾಗಿ ನಿರ್ಮಾಣ ಸ್ಥಳಗಳಲ್ಲಿ ಕಂಡುಬರುವ ಆಧಾರಕಟ್ಟನ್ನು ಅವರು ಉಪಯೋಗಿಸಲಿಲ್ಲ. ಅದಕ್ಕೆ ಬದಲಾಗಿ, ಸೇತುವೆಯನ್ನು ಕಟ್ಟುವವರು ಸ್ಲಿಪ್ಫಾರ್ಮಿಂಗ್ ಎಂದು ಕರೆಯಲ್ಪಡುವ ಕಾರ್ಯವಿಧಾನವನ್ನು ಉಪಯೋಗಿಸಿದರು. ಈ ವಿಧಾನದಲ್ಲಿ, ಒಂದು ಅಚ್ಚನ್ನು ಮಾಡಿ, ಆ ಅಚ್ಚಿನೊಳಗೆ ಕಾಂಕ್ರೀಟನ್ನು ಸುರಿದು, ಅದು ಗಟ್ಟಿಯಾದ ಕೂಡಲೆ ಅಚ್ಚನ್ನು ನಿಧಾನವಾಗಿ ಮೇಲೆ ಮೇಲೆ ಎತ್ತಲಾಗುತ್ತದೆ. ಈ ವಿಧಾನವನ್ನು ಉಪಯೋಗಿಸುವಾಗ, ಪ್ರತಿ ಹಂತದಲ್ಲಿ ಅಚ್ಚುಗಳನ್ನು ಹೊರತೆಗೆದು, ಪುನಃ ಹಾಕುವ ಅಗತ್ಯವಿರುವುದಿಲ್ಲ. ಈ ಹೊಸ ವಿಧಾನವನ್ನು ಉಪಯೋಗಿಸಿ, ಸೇತುವೆಯನ್ನು ಕಟ್ಟುವವರು ಕೇವಲ ಮೂರೇ ತಿಂಗಳುಗಳಲ್ಲಿ 190 ಮೀಟರ್ ಎತ್ತರದ ಒಂದು ಸ್ತಂಭವನ್ನು ನಿರ್ಮಿಸಿದರು.
ಭಾರಿ ಬಿರುಗಾಳಿಯು ಬಡಿಯುವಂತಹ ಕ್ಷೇತ್ರದಲ್ಲಿ ಹಾಂಗ್ ಕಾಂಗ್ ಇದೆ. ವೇಗವಾಗಿ ಗಾಳಿಯು ಬೀಸುವಾಗ, ಅದು ಸೇತುವೆಯ ಮೇಲೆ ಯಾವ ಪರಿಣಾಮವನ್ನು ಬೀರಬಲ್ಲದು? 1940ರಲ್ಲಿ, ಅಮೆರಿಕದ ವಾಷಿಂಗ್ಟನ್ನಲ್ಲಿ, ಮೊದಲ ಟಾಕೊಮ ನ್ಯಾರೊಸ್ ಸೇತುವೆಯನ್ನು, ಒಂದು ತಾಸಿಗೆ 68 ಕಿಲೊಮೀಟರ್ ವೇಗದಿಂದ ಬಂದ ಗಾಳಿಯು ಸೇತುವೆಯನ್ನು ತಿರುಚಿಬಿಟ್ಟು, ಅದು ಬಿದಿರಿನಿಂದ ಮಾಡಲ್ಪಟ್ಟಿತ್ತೋ ಎಂಬಂತೆ ಅದನ್ನು ಧ್ವಂಸಮಾಡಿಬಿಟ್ಟಿತು. ಆದರೆ, ಅಂದಿನಿಂದ ಸೇತುವೆಗಳ ರಚನೆಯಲ್ಲಿ ತುಂಬ ಪ್ರಗತಿಯಾಗಿದೆ. ಈ ಹೊಸ ಸೇತುವೆಗಳು, ಒಂದು ತಾಸಿಗೆ 300 ಕಿಲೊಮೀಟರ್ನಷ್ಟು ವೇಗದಿಂದ ಬರುವ ಗಾಳಿಯ ಹೊಡೆತಗಳನ್ನು ತಾಳಿಕೊಳ್ಳುವಂತೆ ರಚಿಸಲ್ಪಟ್ಟು, ಪರೀಕ್ಷಿಸಲ್ಪಟ್ಟಿವೆ.
ವಿಮಾನ ನಿಲ್ದಾಣದಿಂದ ನಗರಕ್ಕೆ 23 ನಿಮಿಷಗಳಲ್ಲಿ!
ಈಗ ಕೈ ಟೆಕ್ನಲ್ಲಿರುವ ವಿಮಾನ ನಿಲ್ದಾಣಕ್ಕಿಂತಲೂ, ಹೊಸ ವಿಮಾನ ನಿಲ್ದಾಣದಿಂದ ಹಾಂಗ್ ಕಾಂಗ್ ಐಲೆಂಡ್ಗೆ ಬಹಳ ಬೇಗನೆ ತಲಪಸಾಧ್ಯವಿದೆ. ಇಷ್ಟಲ್ಲದೆ, ಇದು ಕೈ ಟೆಕ್ ವಿಮಾನ ನಿಲ್ದಾಣಕ್ಕಿಂತ ನಾಲ್ಕುಪಟ್ಟು ಹೆಚ್ಚು ಅಂತರದಲ್ಲಿದೆ. ಆದರೂ ಅಷ್ಟು ಬೇಗನೆ ಹೇಗೆ ತಲಪಸಾಧ್ಯವಿದೆ? ರೈಲುಗಳು ಒಂದು ತಾಸಿಗೆ 135 ಕಿಲೊಮೀಟರ್ಗಳಷ್ಟು ವೇಗದಲ್ಲಿ ಹಾಂಗ್ ಕಾಂಗ್ನ ವ್ಯಾಪಾರ ಕೇಂದ್ರವನ್ನು ತಲಪುತ್ತವೆ. ಉಚಿತವಾಗಿಯೇ ಆ ಸ್ಥಳವು ಸೆಂಟ್ರಲ್ ಎಂದು ಪ್ರಸಿದ್ಧವಾಗಿದೆ. ಮೊದಲಾಗಿ ಲಾಂಟೌನ ಬಂಜರು ಪರ್ವತಗಳ ಅತ್ಯಂತ ಮನೋಹರವಾದ ನೋಟವು ಕಾಣಸಿಗುತ್ತದೆ. ತದನಂತರ, ದ್ವೀಪಗಳನ್ನು ದಾಟುತ್ತಾ ರೈಲು ವಿಸ್ತಾರವಾದ ಭೂಭಾಗಕ್ಕೆ ಧಾವಿಸುತ್ತಿರುವಾಗ, ಕ್ವೈ ಚುಂಗ್ನಲ್ಲಿರುವ ಲೋಕದ ಅತ್ಯಂತ ದೊಡ್ಡ ಸರಕುಸಾಗಾಣಿಕೆಯ ಬಂದರನ್ನು ಹಾದುಹೋಗುತ್ತದೆ. ಐದು ಕಿಲೊಮೀಟರ್ ಮುಂದೆ ಹೋಗಿ ಅದು ಮಾಂಗ್ ಕಾಕ್ ಎಂಬ ಸ್ಥಳವನ್ನು ತಲಪುತ್ತದೆ. ಇಲ್ಲಿ 1,70,000 ಜನರು ವಾಸಿಸುತ್ತಾರೆ. ಅನಂತರ, ರೈಲು ಸಿಮ್ ಶಾ ಸೂಯ್ ಎಂಬ ಪ್ರವಾಸಿ ಕೇಂದ್ರವನ್ನು ಹಾದುಹೋಗುತ್ತಾ, ಅಲ್ಲಿಂದ ಬಂದರಿನ ಕೆಳಗಿರುವ ಸುರಂಗದ ಮೂಲಕ ಪ್ರಯಾಣಿಸಿ, ಸೆಂಟ್ರಲ್ನಲ್ಲಿರುವ ರೈಲು ನಿಲ್ದಾಣವನ್ನು ತಲಪುತ್ತದೆ. ವಿಮಾನ ನಿಲ್ದಾಣವನ್ನು ಬಿಟ್ಟ 23 ನಿಮಿಷಗಳಲ್ಲೇ ನೀವು ಇಲ್ಲಿಗೆ ಬಂದು ತಲಪುತ್ತೀರಿ!
ಭವಿಷ್ಯತ್ತಿಗಾಗಿ ನಿರ್ಮಿಸಲ್ಪಟ್ಟಿರುವ ವಿಮಾನ ನಿಲ್ದಾಣ
1992ರ ಡಿಸೆಂಬರ್ ತಿಂಗಳಿನಲ್ಲಿ, ಚೆಕ್ ಲಪ್ ಕಾಕ್ ಕೇವಲ ಕಲ್ಲುಬಂಡೆಯಿಂದ ತುಂಬಿದ್ದ 302 ಹೆಕ್ಟೇರ್ನಷ್ಟು ದೊಡ್ಡ ದ್ವೀಪವಾಗಿತ್ತು. 1995ರ ಜೂನ್ ತಿಂಗಳಷ್ಟಕ್ಕೆ, ಅದು ಹೊಸ ವಿಮಾನ ನಿಲ್ದಾಣಕ್ಕಾಗಿ ಸಿದ್ಧಗೊಳಿಸಲ್ಪಟ್ಟ 3,084 ಎಕ್ರೆ ಪ್ರದೇಶವಾಗಿತ್ತು ಮತ್ತು ಇದರಿಂದಾಗಿ ಹಾಂಗ್ ಕಾಂಗ್ನ ಭೂಪ್ರದೇಶದಲ್ಲಿ 1 ಪ್ರತಿಶತ ಅಗಲವು ಹೆಚ್ಚಾಯಿತು. ಈ ಹಿಂದೆ ದ್ವೀಪವಾಗಿದ್ದ ಜಾಗವು, 44,000 ಟನ್ಗಳಷ್ಟು ಪ್ರಬಲವಾದ ಸ್ಫೋಟಕಗಳಿಂದ ಸಮತಟ್ಟು ಮಾಡಲ್ಪಡುತ್ತಿದ್ದಾಗ, ಸಮುದ್ರತಳದಿಂದ ಮರಳನ್ನು ಮೇಲೆ ತರುವ ಹಡಗುಗಳು, ಮರಳನ್ನು ತಂದು ದ್ವೀಪದ ಮೇಲೆ ರಾಶಿಹಾಕಿದವು. ನಿರ್ಮಾಣ ಕಾರ್ಯವು ರಭಸವಾಗಿ ನಡೆಯುತ್ತಿದ್ದ ಸಮಯದಲ್ಲಿ, ಒಂದು ದಿನಕ್ಕೆ ಸುಮಾರು ಐದು ಎಕ್ರೆಗಳಷ್ಟು ಪ್ರದೇಶವು ಈ ದ್ವೀಪಕ್ಕೆ ಕೂಡಿಸಲ್ಪಟ್ಟಿತು. ನಿರ್ಮಾಣ ಕೆಲಸದ ಇಡೀ 31 ತಿಂಗಳುಗಳ ವರೆಗೆ, ಪ್ರತಿ ಸೆಕೆಂಡಿಗೆ ಸರಾಸರಿ ಹತ್ತು ಟನ್ನುಗಳಷ್ಟು ನೆಲಭರ್ತಿಮಾಡುವ ಸಾಮಗ್ರಿಯು ಸಾಗಿಸಲ್ಪಟ್ಟಿತು. ಭೂಪ್ರದೇಶವನ್ನು ಸಿದ್ಧಮಾಡುವ ಗುತ್ತಿಗೆದಾರರು ತಮ್ಮ ಕೆಲಸವನ್ನು ಪೂರೈಸಿದ ಕೂಡಲೆ, ಇನ್ನಿತರರು ವಿಮಾನ ನಿಲ್ದಾಣವನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸಿದರು.
ಸ್ಟೀವ್ ಎಂಬ ವ್ಯಕ್ತಿಯು ಈ ಕಾರ್ಯಯೋಜನೆಯಲ್ಲಿ ಒಳಗೂಡಿದ್ದನು. ಅವನು ಕೆಲವು ಮುಖ್ಯಾಂಶಗಳನ್ನು ತಿಳಿಸುತ್ತಾನೆ: “ವಿಮಾನ ನಿಲ್ದಾಣದ ರನ್ವೇಯನ್ನು ಸರಿಯಾಗಿ ಕಟ್ಟದಿದ್ದಲ್ಲಿ, ಆಧುನಿಕ ದಿನದ ಜಂಬೋ ಜೆಟ್ಗಳು ಅವುಗಳನ್ನು ಬೇಗನೆ ಹಾಳುಮಾಡಿಬಿಡಸಾಧ್ಯವಿದೆ. ಆದುದರಿಂದ, ರನ್ವೇಗೆ ಟಾರನ್ನು ಹಾಕುವುದಕ್ಕೆ ಮೊದಲು, ಮರಳನ್ನು ಸರಿಯಾಗಿ ಜೋಡಿಸಲಿಕ್ಕಾಗಿ ಬೃಹತ್ ಗಾತ್ರದ ರೋಲರ್ಗಳನ್ನು ಉಪಯೋಗಿಸಲಾಯಿತು. ಈ ರೋಲರ್ಗಳು ಮೊದಲ ರನ್ವೇಯನ್ನು ಹಾಗೂ ವಿಮಾನಗಳ ಪಾರ್ಕಿಂಗ್ ಸ್ಥಳಗಳನ್ನು ಪೂರ್ಣಗೊಳಿಸುವಷ್ಟರಲ್ಲಿ, ಅವು 1,92,000 ಕಿಲೊಮೀಟರ್ಗಳಷ್ಟು ದೂರವನ್ನು ಆವರಿಸಿದ್ದವು; ಈ ದೂರವು ಇಡೀ ಲೋಕವನ್ನು ಐದು ಬಾರಿ ಸುತ್ತುವುದಕ್ಕೆ ಸಮಾನವಾಗಿದೆ ಎಂದು ಅಂದಾಜುಮಾಡಲಾಗಿದೆ.
“ನಮ್ಮ ಕಂಪೆನಿಯು ಈ ಟರ್ಮಿನಲನ್ನು ಕಟ್ಟುವ ಕಾಂಟ್ರ್ಯಾಕ್ಟ್ ತೆಗೆದುಕೊಂಡಿತ್ತು; ಛಾವಣಿಗಾಗಿ ನಾವು ಸ್ಟೀಲ್ನ ಆಸರೆಕಟ್ಟುಗಳನ್ನು ಕಟ್ಟಿ, ಅದರ ಸ್ಥಾನದಲ್ಲಿ ನಿಲ್ಲಿಸಿದೆವು. ಇವುಗಳಲ್ಲಿ ಪ್ರತಿಯೊಂದು ಆಸರೆಕಟ್ಟು, ಸುಮಾರು 150 ಟನ್ಗಳಷ್ಟು ಭಾರವಿತ್ತು. ನಾವು ದೊಡ್ಡ ಕ್ರೇನ್ಗಳನ್ನು ಉಪಯೋಗಿಸಿ, ಅವುಗಳನ್ನು ಅನೇಕ ಗಾಲಿಗಳುಳ್ಳ ಟ್ರಕ್ಗಳ ಮೇಲೆ ಇರಿಸಿದೆವು; ಆ ಟ್ರಕ್ಗಳು ಒಂದು ತಾಸಿಗೆ ಸುಮಾರು 2 ಕಿಲೊಮೀಟರುಗಳಷ್ಟು ಪ್ರಯಾಣಿಸಿ, ಅವುಗಳನ್ನು ಟರ್ಮಿನಲ್ನ ಬಳಿಗೆ ಕೊಂಡೊಯ್ದವು.”
ಈ ಟರ್ಮಿನಲ್ ಒಂದು ಸಾಮಾನ್ಯವಾದ ಕಾಂಕ್ರೀಟ್ ಕಟ್ಟಡವಾಗಿರಲಿಲ್ಲ. ಬದಲಾಗಿ, ವಿಮಾನ ನಿಲ್ದಾಣದ ಕೆಲಸಗಾರರಿಗೆ ಹಾಗೂ ಪ್ರಯಾಣಿಕರಿಗೆ ಹಿತಕರವಾಗಿರುವ ಬೆಳಕು ಹಾಗೂ ಗಾಳಿಯು ದೊರಕುವ ವಾತಾವರಣವನ್ನು ರೂಪಿಸುವ ವಿಷಯದಲ್ಲಿ ಹೆಚ್ಚು ಆಸಕ್ತಿಯು ವಹಿಸಲಾಗಿತ್ತು. ಇದಲ್ಲದೆ ಪ್ರಯಾಣಿಕರು ತಡೆಯಿಲ್ಲದೆ ಬೇಗನೆ ಆಚೆಈಚೆ ಓಡಾಡುವಂತಹ ಉದ್ದೇಶದಿಂದಲೂ ಈ ವಿಮಾನ ನಿಲ್ದಾಣವು ಕಟ್ಟಲ್ಪಟ್ಟಿತ್ತು. ಚೆಕ್-ಇನ್-ಕೌಂಟರ್ಗೆ ಬಂದ ಬಳಿಕ, ಪ್ರಯಾಣಿಕರು 30 ನಿಮಿಷಗಳೊಳಗೆ ವಿಮಾನದಲ್ಲಿ ಕುಳಿತುಕೊಳ್ಳಸಾಧ್ಯವಿದೆ. ಯಾವುದೇ ತಡೆಯುಂಟಾಗದಂತೆ ಮಾಡಲು, ಟರ್ಮಿನಲ್ನ ಒಂದು ತುದಿಯಿಂದ ಇನ್ನೊಂದು ತುದಿಗೆ ಪ್ರಯಾಣಿಕರನ್ನು ಸಾಗಿಸಲಿಕ್ಕಾಗಿ ಡ್ರೈವರ್ರಹಿತ ರೈಲು ಲಭ್ಯವಿದೆ. ಇದಲ್ಲದೆ, 2.8 ಕಿಲೊಮೀಟರ್ಗಳಷ್ಟು ಉದ್ದದ ಲಿಫ್ಟ್ನಂತಹ ಮಾರ್ಗವೂ ಇದೆ; ಇದರಿಂದ ಆಯಾಸಗೊಂಡಿರುವ ಪ್ರಯಾಣಿಕರು ನಡೆಯಬೇಕಾದ ಅಗತ್ಯವಿರುವುದಿಲ್ಲ.
ಸ್ಟೀವ್ ಮುಂದುವರಿಸಿ ಹೇಳಿದ್ದು: “1995ರಲ್ಲಿ 2.7 ಕೋಟಿ ಪ್ರಯಾಣಿಕರು ಹೋಗಿಬರುತ್ತಿದ್ದ ಕೈ ಟೆಕ್ ವಿಮಾನ ನಿಲ್ದಾಣಕ್ಕೂ ಇದಕ್ಕೂ ಎಷ್ಟೊಂದು ವ್ಯತ್ಯಾಸವಿದೆ! ಈ ಹೊಸ ವಿಮಾನ ನಿಲ್ದಾಣದಲ್ಲಿ ಒಂದು ವರ್ಷಕ್ಕೆ 3.5 ಕೋಟಿ ಪ್ರಯಾಣಿಕರು ಹಾಗೂ 30 ಲಕ್ಷ ಟನ್ಗಳಷ್ಟು ಸಾಮಾನುಗಳನ್ನು ನಿರ್ವಹಿಸಸಾಧ್ಯವಿದೆ. ಕಾಲಕ್ರಮೇಣ ಇದು 8.7 ಕೋಟಿ ಪ್ರಯಾಣಿಕರನ್ನು ಹಾಗೂ 90 ಲಕ್ಷ ಟನ್ಗಳಷ್ಟು ಸಾಮಾನುಗಳನ್ನು ನಿರ್ವಹಿಸಲು ಶಕ್ತವಾಗುವುದು!”
ತನ್ನ ಈ ಕಾರ್ಯಯೋಜನೆಗಾಗಿ ಹಾಂಗ್ ಕಾಂಗ್ ಭಾರಿ ಮೊತ್ತದಲ್ಲಿ ಹಣವನ್ನು ವಿನಿಯೋಗಿಸುತ್ತಿದೆ—ಅಂದರೆ ಸುಮಾರು 2,000 ಕೋಟಿ ಡಾಲರುಗಳು ಅಥವಾ ಹಾಂಗ್ ಕಾಂಗ್ನಲ್ಲಿರುವ 63 ಲಕ್ಷ ನಿವಾಸಿಗಳಲ್ಲಿ ಪ್ರತಿಯೊಬ್ಬರಿಗಾಗಿ ಸುಮಾರು 3,300 ಡಾಲರ್ಗಳಷ್ಟು ಹಣವನ್ನು ಖರ್ಚುಮಾಡುತ್ತಿದೆ. ಚೆಕ್ ಲಪ್ ಕಾಕ್ ವಿಮಾನ ನಿಲ್ದಾಣವು, ಹಾಂಗ್ ಕಾಂಗ್ನ ಸದ್ಯದ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದೆಂದು ನಿರೀಕ್ಷಿಸಲಾಗಿದೆ. ಹೀಗೆ ಸಂಭವಿಸುತ್ತದೋ ಇಲ್ಲವೋ ಎಂಬುದನ್ನು ಕಾದುನೋಡಬೇಕಾಗಿದೆ, ಆದರೆ ಒಂದು ವಿಷಯವಂತೂ ಖಂಡಿತ: ಹಾಂಗ್ ಕಾಂಗ್ನಲ್ಲಿ ವಿಮಾನದಿಂದ ಕೆಳಗಿಳಿಯುವುದು, ಯಾವಾಗಲೂ ಒಂದು ಅವಿಸ್ಮರಣೀಯ ಅನುಭವವಾಗಿರುವುದು.
[ಪುಟ 12ರಲ್ಲಿರುವಚಿತ್ರ]
(For fully formatted text, see publication)
ವಿಮಾನ ನಿಲ್ದಾಣದ ರೈಲುಮಾರ್ಗ
ಚೆಕ್ ಲಪ್ ಕಾಕ್ನಲ್ಲಿರುವ ವಿಮಾನ ನಿಲ್ದಾಣ
ಲಾಂಟೌ ದ್ವೀಪ
ನಾರ್ತ್ ಲಾಂಟೌ ಹೆದ್ದಾರಿ
ಲಾಂಟೌ ಲಿಂಕ್
ಕೆಪ್ ಶೂಯ್ ಮುನ್ ಸೇತುವೆ
ಸಿಂಗ್ ಮಾ ಸೇತುವೆ
ವೆಸ್ಟ್ ಕೌಲೂನ್ ಹೆದ್ದಾರಿ
ಕೌಲೂನ್
ಕೈ ಟೆಕ್ನಲ್ಲಿರುವ ವಿಮಾನ ನಿಲ್ದಾಣ
ಹಾಂಗ್ ಕಾಂಗ್ ಐಲೆಂಡ್
[ಪುಟ 13 ರಲ್ಲಿರುವ ಚಿತ್ರ]
ಸಿಂಗ್ ಮಾ ಸೇತುವೆಯನ್ನು ಕಟ್ಟುತ್ತಿರುವುದು
[ಪುಟ 11 ರಲ್ಲಿರುವ ಚಿತ್ರ ಕೃಪೆ]
New Airport Projects Co-ordination Office