ಸಕಲರಿಗೂ ತೃಪ್ತಿಕರವಾದ ಒಂದು ಹೊಸ ಜಗತ್ತು
ನಂಬಲು ತೀರಾ ಕಷ್ಟವಾಗಬಹುದಾದರೂ, ಒಂದು ಹೊಸ ಜಗತ್ತು ವಾಸ್ತವವಾಗಿ ಸನ್ನಿಹಿತವಾಗಿದೆ. ಭೂಮಿಗೆ ಜೀವವನ್ನು ಪೋಷಿಸಲು ಇರುವ ಸಾಮರ್ಥ್ಯವು ಪೂರ್ತಿ ನಾಶವಾಗುವ ಮೊದಲು ತಕ್ಕ ಸಮಯದಲ್ಲಿ ನಮ್ಮ ಭೂಮಿಯನ್ನು ರಕ್ಷಿಸಲು ಅದು ಆಗಮಿಸುವುದು. ಮತ್ತು ಈ ನೂತನ ಜಗತ್ತು ಮಾನವ ಅಸ್ತಿತ್ವಕ್ಕೆ ಧಕ್ಕೆ ತರುವ ಸಕಲ ಅಪಾಯಗಳನ್ನೂ ನಿವಾರಿಸುವುದು. ಇದನ್ನು ಅದು ಹೇಗೆ ಮಾಡುವುದು?
ಜಾಗತಿಕ ಪರಿಸ್ಥಿತಿಗಳ ವಿಷಮಾವಸ್ಥೆಯನ್ನು ತೋರಿಸಿದ ಬಳಿಕ, ಅನೇಕ ವರುಷಗಳ ಹಿಂದೆ ಇತಿಹಾಸಗಾರ ಆರ್ನಲ್ಡ್ ಜೆ. ಟಾಯ್ನ್ಬಿ ಪ್ರಶ್ನಿಸಿದ್ದು: “ರಕ್ಷಿಸಲ್ಪಡಲು ನಾವೇನು ಮಾಡೋಣ?” ತನ್ನ ಪ್ರಶ್ನೆಗೆ ತಾನೇ ಉತ್ತರಿಸುತ್ತಾ ಅವರಂದದ್ದು: “ರಾಜಕೀಯದಲ್ಲಿ, ಲೋಕ ಸರಕಾರದ ಒಂದು ಸಾಂವಿಧಾನಿಕ ಸಹಕಾರಕ ವ್ಯವಸ್ಥೆಯನ್ನು ಸ್ಥಾಪಿಸಿರಿ.”
ಬರಲಿರುವ ಹೊಸ ಜಗತ್ತು ಒಂದು “ಸಹಕಾರಕ ವ್ಯವಸ್ಥೆ” ಯಾಗಿರುವುದು ಸರಿಯಾದರೂ, ಅದು “ರಾಜಕೀಯದಲ್ಲಿ” ಇರುವುದಿಲ್ಲ. ಅದು ಪ್ರಜಾಪ್ರಭುತ್ವವನ್ನಾಗಲಿ, ಇತರ ಯಾವ ಮಾನವ-ನಿರ್ಮಿತ ರಾಜಕೀಯ ಭಾವನಾ ಶಾಸ್ತ್ರವನ್ನಾಗಲಿ ಅವಲಂಬಿಸದು. ಈ ಹೊಸ ಜಗತ್ತು ಅದರ ಗುರಿಗಳನ್ನು ಸಾಧಿಸುವುದು ಅದನ್ನು ಒಂದೇ ಒಂದು ಸರಕಾರ ಆಳುವ ಕಾರಣವೆ. ಬೆರಗುಗೊಳಿಸುವ ಕಾರ್ಯಸರಣಿಗಳಿಂದ, ಈ ಭೌಗೋಲಿಕ ಸರಕಾರವು ಬೇಗನೆ ಇಂದು ಮಾನವ ಕುಲವನ್ನು ಎದುರಿಸಿರುವ ಸಮಸ್ಯೆಗಳನ್ನು ಕಿತ್ತು ಹಾಕುವುದು. ಹೇಗೆ? ಈ ಸಮಸ್ಯೆಗಳಿಗಿರುವ ಕಾರಣಗಳನ್ನು ಮತ್ತು ಅವನ್ನು ತಿದ್ದಲು ಮಾಡುವ ಪ್ರಯತ್ನಗಳನ್ನು ಎಷ್ಟೋ ಸಲ ಹತಾಶೆಗೊಳಿಸುವ ತಡೆಗಳನ್ನು ನಿವಾರಣೆ ಮಾಡಿಯೆ.
ಆದರೆ, ವ್ಯಾವಹಾರಿಕವಾಗಿ ಇದು ಸಾಧಿಸಲ್ಪಡುವುದಾದರೂ ಹೇಗೆ? ಅಪೂರ್ಣರಾದ, ಭ್ರಷ್ಟರೆಂದೂ ಮಾನವ ಸಮಸ್ಯೆಗಳನ್ನು ಬಗೆಹರಿಸಲು ಅಶಕ್ತರೆಂದೂ ತೋರಿಬಂದಿರುವ ಜನರು ಆಗಲೂ ಆಳುವುದಿಲ್ಲವೆ? ಒಳ್ಳೆಯದು, ಈ ಲೋಕ ಸರಕಾರದಲ್ಲಿ ಪರಿಪೂರ್ಣರಾದ, ತಮ್ಮ ಪ್ರಜೆಗಳ ಹಿತಗಳನ್ನು ನಿಸ್ವಾರ್ಥತೆಯಿಂದ ತಮ್ಮ ಹೃದಯದಲ್ಲಿರಿಸಿಕೊಂಡಿರುವ ಆಳುವವರು ಇರುವಲ್ಲಿ ಏನಾದೀತೆಂದು ಭಾವಿಸಿರಿ. ಆ ಬಳಿಕ ಸಮಸ್ಯೆಗಳು ಹೇಗೆ ಪರಿಹರಿಸಲ್ಪಡುವುವೆಂದು ಪರಿಗಣಿಸಿರಿ.
ಏಕಕಾಲಿಕ ಪರಿಹಾರಗಳು
ಪರಿಪೂರ್ಣರಾದ ಪ್ರಭುಗಳಿರುವ ಭೌಗೋಲಿಕ ಸರಕಾರವಿರುವ ಕಾರಣದಿಂದ ಒಂದೊಂದು ನಿರ್ದಿಷ್ಟ ಬಗೆಯ ಸರಕಾರಗಳಿರುವ ಪ್ರತ್ಯೇಕ ರಾಷ್ಟ್ರಗಳು ಇನ್ನು ಮುಂದೆ ಅಸ್ತಿತ್ವದಲ್ಲಿರವು. ರಾಜ್ಯ ನೀತಿಜ್ಞರು, ರಾಯಭಾರಿಗಳು, ಮತಿತ್ತರ ರಾಜಕಾರಣಿಗಳು ಮಾನವಸಂತತಿಯ ಅನೇಕ ಜನಾಂಗ, ಕುಲ ಮತ್ತು ವಂಶಗಳ ಮೇಲೆ ಅಧಿಕಾರ ನಡೆಸರು. ಅನೇಕ ಸ್ಥಳೀಕ ಹಾಗೂ ರಾಷ್ಟ್ರೀಯ ರಾಜಧಾನಿಗಳು, ಅವುಗಳ ಕಟ್ಟಡ ಮತ್ತು ಅಧಿಕೃತ ನಿವಾಸಗಳ ಸಹಿತ, ಇನ್ನು ಮುಂದೆ ಬೇಕಾಗವು. ಇಂಥ ಭವನಗಳನ್ನು ಸಂರಕ್ಷಿಸಲು ತಗಲುವ ಭಾರೀ ವೆಚ್ಚ, ಹಾಗೂ ಅಧಿವೇಶನ, ಕಮಿಟಿ ಕೂಟ, ರಾಷ್ಟ್ರ ಹಾಗೂ ಶೃಂಗ ಸಭೆಗಳಿಗೆ ಹೋಗಲು ತಗಲುವ ಪ್ರಯಾಣದ ಖರ್ಚನ್ನು ಇದು ಕೊನೆಗಾಣಿಸುವುದು. ಸರಕಾರದ ಹಣವನ್ನು ವ್ಯರ್ಥ ವೆಚ್ಚ ಮಾಡುವ, ಅನೇಕಾನೇಕ ಸಹಾಯಕರು, ಕಾರ್ಯದರ್ಶಿಗಳು, ಗುಮಾಸ್ತರುಗಳಿರುವ ಅಧಿಕಾರಿಶಾಹಿ, ಪ್ರಗತಿಯನ್ನು ತಡೆಯುವ ಕೆಂಪು ಪಟ್ಟಿಯ ಸಮೇತ ಇಲ್ಲದೆ ಹೋಗುವರು.
ವಿಂಗಡಿಸುವ ರಾಷ್ಟ್ರೀಯತೆ ಇಲ್ಲದೆ ಹೋಗಿ ಅದರ ಸ್ಥಾನದಲ್ಲಿ ಐಕ್ಯಗೊಳಿಸುವ ಭೌಗೋಲಿಕ ಅಧಿಕಾರ ಭರ್ತಿಯಾಗುವುದರಿಂದ ಶಾಂತಿಯು ವಾಸ್ತವವಾಗುವುದು. ಸೈನಿಕ, ನೌಕಾ ಮತ್ತು ವಾಯು ಪಡೆಗಳು, ಅವುಗಳ ಸಕಲ ಶಸ್ತ್ರಗಳೊಂದಿಗೆ, ಮತ್ತು ಉನ್ನತ ದರ್ಜೆಯ ಮತ್ತು ಕೆಳಗಿನ ದರ್ಜೆಯ ಅಧಿಪತಿಗಳೊಂದಿಗೆ, ಪ್ರತಿಯೊಂದು ರಾಷ್ಟ್ರದ ಸರ್ವ ಸ್ವಾಮ್ಯವನ್ನು ರಕ್ಷಿಸಲು ಇನ್ನು ಮುಂದೆ ಬೇಕಾಗಿರರು. ಗೂಢಚಾರ ಪದ್ಧತಿಯೂ ಇನ್ನಿರದು. ಪರಿಪೂರ್ಣರಾದ ಆಳುವವರಿರುವ ಭೌಗೋಲಿಕ ಸರಕಾರದ ಕೆಳಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಯಾ ಮಾರಲು ಬಹಿರಂಗ ಮಾರುಕಟ್ಟೆಯಾಗಲಿ ಕಳ್ಳಸಂತೆಯಾಗಲಿ ಇರದು; ವಿವಾದಕ್ಕೊಳಗಾಗಿರುವ ಯಾವ ಪ್ರದೇಶವೂ ಅಲ್ಲಿರದು. ಭೂಮಿಯ ಸಕಲ ಜನರು ಒಂದು ಅವಿಭಜಿತ ಭ್ರಾತೃವರ್ಗವಾಗಿರುವರು. ಈ ಕಾರಣದಿಂದ, ರಾಷ್ಟ್ರೀಯತೆ ಕಣ್ಮರೆಯಾಗುವುದು.
ಪರಿಪೂರ್ಣರಾದ ಆಳುವವರಿರುವ ಒಂದು ಅವಿಭಾಜ್ಯವಾದ ಸರಕಾರದ ಕೆಳಗೆ ಜನರಿಗೆ ದೊರೆಯುವ ಇನ್ನೂ ಕೆಲವು ಪ್ರಯೋಜನಗಳನ್ನು ಪರಿಗಣಿಸಿರಿ. ಶಸ್ತ್ರಾಸ್ತ್ರ ತಯಾರಕರಂಥ ಬಲಾಢ್ಯ ವ್ಯಾಪಾರಿಗಳು ತಮ್ಮ ನಾಶಕರವಾದ ಉತ್ಪಾದನೆಗಳನ್ನು ತಯಾರಿಸಿ ಮಾರುವಂತೆ ರಾಜಕಾರಣಿಗಳನ್ನು ಪ್ರಭಾವಿಸುವ ಯಾವ ಮಾರ್ಗವೂ ಇರದು. ಕೇವಲ ಸ್ಥಳೀಕ ಹಿತಗಳನ್ನು ತಟ್ಟುವ ಕೆಲವು ನಿರ್ದಿಷ್ಟ ನಿಯಮ ಯಾ ಮಸೂದೆಗಳ ವಿಷಯದಲ್ಲಿ ಅಧಿಕಾರಿಗಳನ್ನು ತಿರುಗಿಸುವ ಕುಶಲ ಪ್ರೇರೇಪಕರು ಇನ್ನು ಮುಂದೆ ಇರುವುದಿಲ್ಲ; ಒಂದಕ್ಕೊಂದು ವಿರುದ್ಧೋದ್ದೇಶದಿಂದ ವರ್ತಿಸುತ್ತಾ, ಕೇವಲ ಕೆಲವರಿಗೆ ಲಾಭದಾಯಕವಾಗಿರುವ ವ್ಯರ್ಥ ಯೋಜನೆಗಳ ಮೇಲೆ ಹಣದ ದೊಡ್ಡ ಮೊತ್ತವನ್ನು ವ್ಯಯಿಸುವ ಅಸ್ತವ್ಯಸ್ತವಾದ ವಿಶಿಷ್ಟ ಸರಕಾರಿ ಇಲಾಖೆಗಳು ಇನ್ನು ಮುಂದೆ ಇರುವುದಿಲ್ಲ; ಮಾಲಿನ್ಯ ಸಮಸ್ಯೆಗಳ ಪರಿಹಾರಗಳನ್ನು ಸ್ವಾರ್ಥದ ವ್ಯಾಪಾರ ಕಾರಣಗಳಿಗಾಗಿ (ಲಾಭವನ್ನು ಹೆಚ್ಚಿಸಲಿಕ್ಕಾಗಿ) ತಡೆಯುವ ಸಂಗತಿಯೇ ಇಲ್ಲ; ಅಪಾಯಕ್ಕೊಳಗಾಗಿರುವ ಪ್ರಾಣಿಜಾತಿಗಳನ್ನು ಸಂರಕ್ಷಿಸುವ ವಿಷಯದ ಕಾನೂನುಗಳನ್ನು ಪಟ್ಟಭದ್ರ ಹಿತಾರ್ಥಿಗಳು ಸೋಲಿಸುವ ಸಂಗತಿಯೂ ಇಲ್ಲ.
ಇತರ ಸಮಸ್ಯೆಗಳು ಸರಿಪಡಿಸಲಾಗುವುದು
ಇಂಥ ಪರಿಪೂರ್ಣ ಜಾಗತಿಕ ಸರಕಾರ ಅನ್ಯಾಯವನ್ನು ಸಹಿಸಿಕೊಳ್ಳದು. ಅಧಿಕಾರ ವಹಿಸಿದಾಗ, ಪಾತಕ ಕೃತ್ಯಗಳು ಯೋಗ್ಯ ಹಾಗೂ ನ್ಯಾಯ ರೀತಿಯಲ್ಲಿ ನಿಭಾಯಿಸಲ್ಪಡುವಂತೆ ಅದು ನೋಡಿಕೊಳ್ಳುವುದು. ಹೀಗೆ, ನಾಗರಿಕರು, ಹೆಚ್ಚು ಅಪಾಯಕಾರಿಗಳಾದ ಕೊಲೆಪಾತಕಿಗಳು ಕೊಲೆಮಾಡುವ ಕೇಳಿಯನ್ನು ಮುಂದುವರಿಸಬಹುದೆಂಬ ಭಯದಿಂದ ಮುಕ್ತರಾಗುವರು.
ಮತ್ತು ಲೋಕವನ್ನಾವರಿಸಿರುವ ವ್ಯವಸ್ಥಿತ ಪಾತಕದ ಕ್ರೈಮ್ ಸಿಂಡಿಕೇಟ್ಗಳ ಮತ್ತು ಮಾದಕೌಷಧದ ಬಲಾಢ್ಯ ಸಂಘಗಳ ವಿಷಯದಲ್ಲೇನು? ಇವನ್ನು ಪರಿಪೂರ್ಣ ಲೋಕ ಸರಕಾರವು ಪೂರ್ಣವಾಗಿ ಮುಗಿಸಿ ಬಿಡುವುದು. ಇಂಥ ಅಂತಾರಾಷ್ಟ್ರೀಯ ಪಾತಕಿಗಳಿಗೆ ಅವರನ್ನು ಸ್ವದೇಶದ ವಶಕ್ಕೆ ಒಪ್ಪಿಸಲು ಅನುಮತಿಸದ ನಿಯಮಗಳು ಇನ್ನು ಮುಂದೆ ಆಶ್ರಯ ಸ್ಥಾನವಾಗಿರವು. ಈ ನಿಯಮೋಲ್ಲಂಘನೆ ಮಾಡುವವರು ಸ್ಥಳೀಕ ನಿಯಮಗಳಲ್ಲಿರುವ ತಪ್ಪಿಸಿಕೊಳ್ಳುವ ಉಪಾಯಗಳನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವ ಮತ್ತು ರಾಜಕೀಯ ಸಂಬಂಧಗಳ ಮೇಲೆ ಅನುಚಿತ ಪ್ರಾಬಲ್ಯವನ್ನು ಬೀರುವ ಬುದ್ಧಿವಂತಿಕೆಯ ಉಪಯೋಗವು ಗತ ಸಂಗತಿಯಾಗಿರುವುದು. ಪಾತಕಗಳನ್ನು ನಿವಾರಿಸುವ ಈ ಒಂದೇ ಕ್ರಮವು ಭೂಮಿಯಿಂದ ಜೂಜಾಟ, ತಂಡ ಯುದ್ಧ, ಅಶ್ಲೀಲ ಸಾಹಿತ್ಯ, ಸೂಳೆಗಾರಿಕೆ, ಮತ್ತು ಕಳ್ಳ ಸಾಗಾಣಿಕೆಯಂತಹ ಇತರ ಅನೇಕ ಸಾಮಾಜಿಕ ಪೀಡೆಗಳನ್ನೂ ತೊಲಗಿಸುವುದು. ಇದೆಂತಹ ದಕ್ಷ ಹಾಗೂ ಹಿಡಿತ ವೆಚ್ಚದ ತಿದ್ದಾಣಿಕೆ!
ಹೌದು, ಇಂದು ಮಾನವರಲ್ಲಿ ಅತ್ಯಂತ ತೇಜಸ್ವಿಗಳನ್ನೂ ಕಕ್ಕಾಬಿಕ್ಕಿ ಮಾಡುವ ಈ ಎಲ್ಲ ಕಂಗೆಡಿಸುವ, ಬಿಡಿಸಲಿಕ್ಕಾಗದ, ಮತ್ತು ಕಂಟಕಿತ ಸಮಸ್ಯೆಗಳು ಇಂತಹ ಹೊಸ ಜಗತ್ತಿನಲ್ಲಿ ಪೂರ್ಣವಾಗಿ ಬಗೆಹರಿಸಲ್ಪಡುವುವು. ಮತ್ತು ಪ್ರತಿಯೊಂದು ಸಮಸ್ಯೆಯು ಕಾಯಂ ಆಗಿ—ನಿಶ್ಚಾಯಕವಾಗಿ—ತಿದ್ದಲ್ಪಡುವುದು. ಮುಂದಿನ ಸಂತತಿಗಳು ಇವುಗಳನ್ನು ಎಂದಿಗೂ ಪುನಃ ಅನುಭವಿಸಲಿಕ್ಕಿರುವುದಿಲ್ಲ.
ಮುಂದಕ್ಕೆ ದೂಡುತ್ತಾ ಹೋಗುವ ಕನಸಲ್ಲ
‘ಆದರೆ, ಅಂತಹ ಒಂದು ನೂತನ ಜಗತ್ತನ್ನು ಆಳಲು ಪರಿಪೂರ್ಣ ಪ್ರಭುಗಳು ಎಲ್ಲಿಂದ ಬರುವರು?’ ಎಂದು ನೀವು ಕೇಳಬಹುದು. ಇವರನ್ನು ಮಾನವನ ಸೃಷ್ಟಿಕರ್ತನೇ ಒದಗಿಸುವನು! ಇದನ್ನು ನಂಬುವುದು ಅಸಾಧ್ಯವೆಂದನಿಸುತ್ತದೊ? ಒಳ್ಳೆಯದು, ಇವನ್ನು ಪರ್ಯಾಲೋಚಿಸಿರಿ: ನಿಮಗೆ ಶಕ್ತಿ ಇರುವಲ್ಲಿ ಭೂಮಿಯ ಮೇಲೆ ಇಷ್ಟೊಂದು ಸಂಕಟವನ್ನು ತರುವ ಪರಿಸ್ಥಿತಿಗಳಿಗೆ ನೀವು ಅಂತ್ಯ ತರಲಿಕ್ಕಿಲ್ಲವೆ? ನಿಶ್ಚಯ ತರುವಿರಿ! ಹಾಗಾದರೆ ನಮ್ಮ ಸೃಷ್ಟಿಕರ್ತನು ಇದಕ್ಕಿಂತ ಕಡಮೆ ಮಾಡುತ್ತಾನೆಂದು ನಾವು ನೆನಸಬೇಕೊ?
ನಿಜತ್ವವೇನಂದರೆ, ನಮ್ಮ ಪ್ರೀತಿಸುವ ಸೃಷ್ಟಿಕರ್ತನು ಒಂದು ಹೊಸ ಜಗತ್ತನ್ನು ಸೃಷ್ಟಿಸಲು ಉದ್ದೇಶಿಸುತ್ತಾನೆ, ಮತ್ತು ಇದನ್ನು ಒಳತರುವ ಮಾಧ್ಯಮವು ಒಂದು ನೀತಿಯ ಜಾಗತಿಕ ಸರಕಾರವೇ. ಆತನ ಪುತ್ರ ಯೇಸು ಕ್ರಿಸ್ತನು, “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂಬ ಮಾತುಗಳಿಂದ ಮಾನವರು ಇದಕ್ಕಾಗಿಯೇ ಪ್ರಾರ್ಥಿಸುವಂತೆ ಕಲಿಸಿದನು.—ಮತ್ತಾಯ 6:10.
ಆ ರಾಜ್ಯವು ಒಂದು ನಿಜ ಸರಕಾರ, ಜಾಗತಿಕ ಸರಕಾರ. ಅದರ ಅರಸನಾದ ಯೇಸು ಕ್ರಿಸ್ತನಿಗೆ, “ಸಮುದ್ರದಿಂದ ಸಮುದ್ರದ ವರೆಗೂ ನದಿಯಿಂದ ಭೂಮಿಯ ಕಟ್ಟಕಡೆಯ ವರೆಗೂ” ಪ್ರಜೆಗಳಿರುವರು. (ಕೀರ್ತನೆ 72:8) ಮತ್ತು ಇದು ಬೇಗನೆ, ದೇವರ ವಾಕ್ಯವು ವಾಗ್ದಾನಿಸುವಂತೆ, ಸಕಲ ಮಾನವ ಸರಕಾರಗಳ ಸ್ಥಾನದಲ್ಲಿ ಭರ್ತಿಯಾಗುವುದು. ಅದು ಹೇಳುವುದು: “ಆ ರಾಜರ ಕಾಲದಲ್ಲಿ ಪರಲೋಕ ದೇವರು ಒಂದು ರಾಜ್ಯವನ್ನು [ದೇವರ ಅರಸನಾದ ಯೇಸು ಕ್ರಿಸ್ತನಿಂದ ಆಳಲ್ಪಡುವ ಸರಕಾರ] ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ [ಈ ದಿನಗಳ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮ ಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44.
ಸ್ವರ್ಗದ ದೇವರು ಸ್ಥಾಪಿಸುವ ಈ ಲೋಕ ಸರಕಾರವು ಮಾನವಾತೀತ ಪ್ರಭುಗಳಿಂದ ನಿರ್ವಹಿಸಲ್ಪಡುವುದರಿಂದ, ಮಾನವ ಪ್ರಭುಗಳಿಗೆ ಅಸಾಧ್ಯವಾಗಿರುವ ಸಕಲ ಸತ್ಕಾರ್ಯಗಳನ್ನು ಸಾಧಿಸುವುದು. ಬೈಬಲು ಇದನ್ನು ಒಂದು ಸ್ವರ್ಗೀಯ ರಾಜ ಪ್ರಭುತ್ವವೆಂದೂ, ಅದರಲ್ಲಿ ರಾಜ ಯೇಸು ಕ್ರಿಸ್ತನಲ್ಲದೆ ಅವನ ಸಹಾಯಕರಾದ 1,44,000 ಮಂದಿ ಆತ್ಮವ್ಯಕ್ತಿಗಳಿರುವರೆಂದೂ ಹೇಳಿ ವರ್ಣಿಸುತ್ತದೆ. ಈ ಪ್ರಭುಗಳೆಲ್ಲ ಭರವಸಾರ್ಹರಾಗಿರುವರು; ಸ್ವರ್ಗ ಜೀವನಕ್ಕೆ ಪುನರುತ್ಥಾನಗೊಳಿಸಲ್ಪಡುವ ಮೊದಲು ತಮ್ಮ ಭೂಜೀವಿತದಲ್ಲಿ ನಿರ್ದುಷ್ಟವಾದ ಸಮಗ್ರತೆಯನ್ನು ತೋರಿಸಿದವರು. ಇವರು ಭೂಮಿಯ ಮೇಲೆ ಜೀವಿಸುತ್ತಿದ್ದಾಗ ಮಾನವ ಆವಶ್ಯಕತೆಗಳ ಅನುಭವವಿದ್ದವರಾದುದರಿಂದ ಮಾನವಕುಲದ ಹಿತಕ್ಕಾಗಿ ಕೆಲಸ ನಡೆಸಲು ಇವರೆಲ್ಲರೂ ಉತ್ಕೃಷ್ಟ ಸ್ಥಾನದಲ್ಲಿರುವರು.—ಪ್ರಕಟನೆ 14:1-3.
ಇದು ತೊಲಗಿಸುವ ಸಮಸ್ಯೆಗಳನ್ನು ಚಿಂತಿಸಿರಿ. ಅಮರತ್ವ ಇರುವವರಾಗಿರುವುದರಿಂದ, ಈ ಆತ್ಮರೂಪಿ ಪ್ರಭುಗಳು ದಣಿಯರು ಯಾ ಸಾಯರು. (1 ಕೊರಿಂಥ 15:50, 53) ನ್ಯಾಯವನ್ನು ಅಪಪ್ರಯೋಗ ಮಾಡಲು ಯಾ ಕೊಡುಗೆಗಳಿಗೆ ಪ್ರತಿಯಾಗಿ ಪಕ್ಷಪಾತ ತೋರಿಸಲು ಬರುವ ಶೋಧನೆಗಳಿಂದ ಅವರು ಭ್ರಷ್ಟರಾಗುವುದು ಅಸಾಧ್ಯ. ಎಷ್ಟೆಂದರೂ, ಒಬ್ಬ ಅಮರನಾದ ಆತ್ಮ ವ್ಯಕ್ತಿಗೆ ಒಬ್ಬನು ಗುಟ್ಟಾಗಿ ಯಾವುದನ್ನು ಲಂಚವಾಗಿ ಕೊಡಬಲ್ಲನು? ಹಣವನ್ನೊ, ತುಂಬ ತುಟ್ಟಿಯ ಮದ್ಯದ ಸೀಸೆಗಳ ಪೆಟ್ಟಿಗೆಯನ್ನೊ, ಒಂದು ವಿಚಿತ್ರ ಸೊಬಗಿನ ದ್ವೀಪಪ್ರವಾಸವನ್ನೊ, ಯಾ ಒಂದು ನಾಟಕ ಪ್ರದರ್ಶನಕ್ಕೆ ಯಾ ಒಂದು ಗಾನಗೋಷ್ಠಿಗೆ ಟಿಕೆಟನ್ನೊ? ಇಂಥ ಐಹಿಕ ವಿಷಯಗಳು ರಕ್ತ ಮಾಂಸದೇಹಿಗಳನ್ನು ಶೋಧನೆಗೊಳಪಡಿಸಬಹುದಾದರೂ ಈ ಆತ್ಮಜೀವಿಗಳನ್ನು ಒಳಪಡಿಸವು. ಆದುದರಿಂದ ಈ ಪ್ರಭುಗಳಿಂದ ಆಳಲ್ಪಡುವ ಜನರು ಇಂದು ಸಾಮಾನ್ಯವಾಗಿರುವ ಸರಕಾರಗಳ ಭ್ರಷ್ಟತೆಯನ್ನು ಅನುಭವಿಸರು.
ಹೊಸ ಲೋಕವು ನಿಮ್ಮನ್ನು ಸಂತೃಪ್ತಿಪಡಿಸುವುದು
ನೀವು ವಯಸ್ಸಾದ ವ್ಯಕ್ತಿಯೊ? ಅನೇಕ ವರ್ಷಗಳಿಂದ ನೀವು ಪಡೆದಿರುವ ಜ್ಞಾನ, ಕೌಶಲ್ಯ ಮತ್ತು ಅನುಭವಗಳ ಕುರಿತು ಯೋಚಿಸಿರಿ. ಆದರೆ ನಿಮ್ಮ ಮನಸ್ಸು ಯಾ ಮಾನಸಿಕ ಶಕ್ತಿಗಳು ಉತ್ತಮವಾಗಿರಬಹುದಾದರೂ ಶಾರೀರಿಕ ಸಾಮರ್ಥ್ಯಗಳು ಕ್ರಮೇಣ ಶಕ್ತಿಗುಂದುವುದನ್ನು ನೀವು ಗಮನಿಸಿದ್ದೀರೊ? ಒಮ್ಮೆ ಮಾಡಿರುವಂತೆ, ನಿಮ್ಮ ಶರೀರ ನಿಮ್ಮ ಮಾನಸಿಕ ಆಜೆಗ್ಞಳಿಗೆ ಪ್ರತಿಕ್ರಿಯೆಯನ್ನು ತೋರಿಸುವುದಿಲ್ಲ. ಹೌದು, ನಿಮ್ಮ ಪ್ರತಿಕ್ರಿಯೆ ನಿಧಾನಗೊಳ್ಳುತ್ತಿದೆ, ನಿಮ್ಮ ಬಲ ಕುಂದುತ್ತಿದೆ, ಮತ್ತು ನಿಮ್ಮ ತಾಳ್ಮೆ ಕಮ್ಮಿಯಾಗುತ್ತಿದೆ. ನಿಮ್ಮ ದೃಷ್ಟಿ ಮತ್ತು ಕೇಳಿಸುವ ಶಕ್ತಿ ಹೆಚ್ಚು ಮಂದವಾಗುತ್ತದೆ, ಮತ್ತು ನಿಮ್ಮ ಸ್ನಾಯುಗಳು ಬಲಹೀನವಾಗುವಾಗ ನೋವು ಹೆಚ್ಚುತ್ತಾ ಹೋಗುತ್ತದೆ.
ಆದರೆ ನಿಮ್ಮ 20ಗಳಲ್ಲಿ ನಿಮಗಿದ್ದ ಯುವ ಶರೀರಕ್ಕಿಂತಲೂ ಉತ್ತಮವಾದ ಒಂದು ದೇಹದಲ್ಲಿ ಅನೇಕ ವರ್ಷಗಳಲ್ಲಿ ಪಡೆದ ವಿವೇಕವಿರುವುದನ್ನು ಭಾವಿಸಲು ಪ್ರಯತ್ನಿಸಿರಿ—ಹೌದು, ನಿಮ್ಮ ಮಾನಸಿಕ ಸಾಮರ್ಥ್ಯದಷ್ಟೆ ಉತ್ತಮವಾಗಿ ಶಾರೀರಿಕ ಶಕ್ತಿಯೂ ಇರುವುದನ್ನು ಭಾವಿಸಿರಿ. ನಿಮ್ಮ ಆರೋಗ್ಯಕರವಾದ ದೇಹರಚನೆಯ ಕಾರಣ ನಿಮಗೆ ಮಾಡಸಾಧ್ಯವಿರುವ ಅನೇಕ ವಿಷಯಗಳ ಕುರಿತು ಯೋಚಿಸಿರಿ! ನಿಮ್ಮ ಪಕ್ವತೆಯ ಮನಸ್ಸಿಗೆ ಇಂಥ ಸುಸಾಂಗತ್ಯವಿರುವ ಶರೀರ ಓಗೊಡುವಲ್ಲಿ, ನೀವು ಮಾಡುವ ಯಾವ ಕೆಲಸವೂ ಅತಿ ಸಂತೋಷದಾಯಕವೆಂದು ನೀವು ಕಂಡುಕೊಳ್ಳುವಿರಿ. ನಿಮ್ಮ ಅನುಭವ, ನೀವು ಸಂಗತಿಗಳನ್ನು ಹೆಚ್ಚು ಕಾರ್ಯಸಾಧಕವಾಗಿ ಮಾಡುವಂತೆ ಸಾಧ್ಯಮಾಡಿ, ಇದು ನಿಮ್ಮ ತೃಪ್ತಿಗೆ ಇನ್ನೂ ಹೆಚ್ಚಿನದನ್ನು ಕೂಡಿಸುವುದು. ಮತ್ತು ನೀವು ಎಳೆಯರಾಗಿರುವಲ್ಲಿ, ವಿವೇಕ, ಜ್ಞಾನ, ಮತ್ತು ಅನುಭವವನ್ನು ಸದಾಕಾಲಕ್ಕೂ ಪಡೆಯುತ್ತಿರುವಾಗ ನಿಮ್ಮ ಯೌವನ ಮತ್ತು ಬಲವನ್ನು ಕಾಪಾಡಿಕೊಳ್ಳುವುದರಲ್ಲಿರುವ ಉಲ್ಲಾಸವನ್ನು ಭಾವಿಸಿರಿ.
ಈಗ, ಇದನ್ನು ಇನ್ನೊಂದು ಹೆಜ್ಜೆ ಮುಂದುವರಿಸಿ ನಿಮ್ಮ ಸಹೋದ್ಯೋಗಿಗಳು, ಗೆಳೆಯರು, ಒಡನಾಡಿಗಳು ಮತ್ತು ಸಂಬಂಧಿಗಳು—ಎಲ್ಲರೂ ಅದೇ ಪರಿಸ್ಥಿತಿಯಲ್ಲಿರುವುದರ ಕುರಿತು ಯೋಚಿಸಿರಿ. ನಿರ್ಮಾಣ, ಕಟ್ಟಡ ರಚನೆ ಯಾ ಶಿಲ್ಪಕಲೆಯಲ್ಲಿ ನೀವೆಲ್ಲರೂ ಏನು ಸಾಧಿಸಬಲ್ಲಿರಿ ಎಂಬುದನ್ನು ಯೋಚಿಸಿರಿ. ಇದು ಕಲಾವಿದ, ಸಂಗೀತಕಾರ, ನಕ್ಷೆಗಾರ, ಭೂದೃಶ್ಯಗಾರ, ತೋಟಗಾರ, ಮತ್ತು ಸಸ್ಯಶಾಸ್ತ್ರಜ್ಞರಂತಹ ಜನರಿಗೆ ಎಷ್ಟು ಅದ್ಭುತವಾದ ಪ್ರತೀಕ್ಷೆಗಳನ್ನು ಕೊಡುವುದು! ಅವರ ಕೆಲಸಗಳು ಬೆರಗುಗೊಳಿಸುವಂಥವುಗಳಾಗಿರುವುವು. ಮನೋಹರವಾದ ವರ್ಣಚಿತ್ರಗಳು, ಮನೆಗಳು, ತೋಟಗಳು, ಉದ್ಯಾನಗಳು—ಹೌದು, ಶ್ರೇಷ್ಠ ತೆರದ ಸಂಗೀತೋಪಕರಣಗಳು ಮತ್ತು ಅವುಗಳಲ್ಲಿ ನುರಿತವರಾಗುವ ಕಲೆ, ಈ ಕಾರ್ಯಗಳಲ್ಲಿ ಕೇವಲ ಕೆಲವು.
ಈ ಹೊಸ ಜಾಗತಿಕ ಸರಕಾರದ ಗುರಿಗಳಲ್ಲಿ ಒಂದು ಗುರಿಯು ಮಾನವಕುಲವನ್ನು ಶಾರೀರಿಕ ಪರಿಪೂರ್ಣತೆಗೆ ಪುನರುಜ್ಜೀವಿಸುವುದೇ. ನಿಮ್ಮ ದೃಷ್ಟಿ, ಕಿವಿ ಮತ್ತು ಇತರ ಇಂದ್ರಿಯಗಳು ತಮ್ಮ ಪರಮ ಮಟ್ಟದಲ್ಲಿ ಕಾರ್ಯ ನಡೆಸುವುವು. ಎಷ್ಟು ಕಾಲ? ಒಳ್ಳೆಯದು, ಒಂದು ಮಾನವ ಸರಕಾರ ಒಂದು ಚಿಕ್ಕ ತೆರಕ್ಕೆ ನಿಮ್ಮ ಶರೀರದ ಕಾರ್ಯಗಳನ್ನೆಲ್ಲ ಒಂದು ವರ್ಷಕಾಲ 50 ಪ್ರತಿಶತ ಪುನರುಜ್ಜೀವಿಸುವ ಚಿಕಿತ್ಸೆಯ ಖಾತರಿ ಕೊಡುವಲ್ಲಿ, ಅದನ್ನು ಪಡೆಯಲು ನೀವು ಸರದಿಸಾಲಿನಲ್ಲಿ ಮೊದಲು ಬಂದು ನಿಲ್ಲಲಿಕ್ಕಿಲ್ಲವೆ? ಈ ಹೊಸ ಜಾಗತಿಕ ಸರಕಾರ ಉಚಿತವಾಗಿ ಪೂರ್ತಿ, 100 ಪ್ರತಿಶತ ಪುನರುಜ್ಜೀವನದ ಖಾತರಿಯನ್ನು, 1, 5, ಯಾ 50 ವರ್ಷಗಳಿಗಲ್ಲ, ಸದಾಕಾಲಕ್ಕಾಗಿ ಕೊಡುತ್ತದೆ.
ಮಾನವರು ಇದೇ ಭೂಮಿಯ ಮೇಲೆ ನಿಶ್ಚಯವಾಗಿ ಅನುಭವಿಸಲಿರುವ ಈ ಅದ್ಭುತಕರ ಪ್ರತೀಕ್ಷೆ ನಂಬಲಶಕ್ಯವೆಂದು ಹೇಳಿ ಅದನ್ನು ಮನಸ್ಸಿನಿಂದ ತೊಲಗಿಸಿ ಬಿಡಬೇಡಿರಿ. ದೇವರನ್ನು ಪ್ರೀತಿಸುವವರು ಅನುಭವಿಸುವ ಆಶೀರ್ವಾದಗಳಲ್ಲಿ ಕೆಲವನ್ನು 7-10 ಪುಟಗಳಲ್ಲಿ ಪರಿಗಣಿಸಿರಿ. (g92 10/22)
[ಪುಟ 7-10 ರಲ್ಲಿರುವ ಚೌಕ/ಚಿತ್ರಗಳು]
ಹೊಸ ಜಗತ್ತು ತರಲಿರುವ ವಿಷಯಗಳು
ಪಾತಕ ಮತ್ತು ಬಲಾತ್ಕಾರಗಳಿಗೆ ಅಂತ್ಯ
“ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು.”—ಜ್ಞಾನೋಕ್ತಿ 2:22.
ಯುದ್ಧದ ತೊಲಗಿಸುವಿಕೆ
“ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.”—ಯೆಶಾಯ 2:4.
ಎಲ್ಲರು ತಿನ್ನಲಿಕ್ಕಾಗಿ ಧಾರಾಳ ಉತ್ತಮ ವಸ್ತುಗಳು
“ಭೂಮಿಯ ಮೇಲೆ ಹೇರಳವಾದ ಧಾನ್ಯವಿರುವುದು; ಬೆಟ್ಟಗಳ ಮೇಲೆಡೆಯಲ್ಲಿ ತುಂಬಿದ ಸಮೃದ್ಧಿ ಇರುವುದು.—ಕೀರ್ತನೆ 72:16, NW.
ಪ್ರತಿಯೊಬ್ಬನಿಗೂ ಉತ್ತಮ ಮನೆ ಹಾಗೂ ಆನಂದದಾಯಕ ಕೆಲಸ
“ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, . . . ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.”—ಯೆಶಾಯ 65:21, 22.
ಮನುಷ್ಯ ಮತ್ತು ಮೃಗಗಳ ಮಧ್ಯೆ ಶಾಂತಿ
“ತೋಳವು ಕುರಿಯ ಸಂಗಡ ವಾಸಿಸುವುದು, ಚಿರತೆಯು ಮೇಕೆಮರಿಯೊಂದಿಗೆ ಮಲಗುವದು; . . . ಇವುಗಳನ್ನು ಚಿಕ್ಕ ಮಗುವು ನಡಿಸುವುದು.”—ಯೆಶಾಯ 11:6.
ರೋಗ, ವೃದ್ಧಾಪ್ಯ ಯಾ ಮರಣ ಇನ್ನಿಲ್ಲ
“ಅವರ ಕಣ್ಣೀರನ್ನೆಲ್ಲಾ ಒರಸಿ ಬಿಡುವನು. ಇನ್ನು ಮರಣವಿರುವದಿಲ್ಲ. ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದದ್ದೆಲ್ದಾ ಇಲ್ಲದೆ ಹೋಯಿತು.”—ಪ್ರಕಟನೆ 21:4.
ಮೃತರಾಗಿರುವ ಪ್ರಿಯರ ಪುನರುತ್ಥಾನ
“ಸಮಾಧಿಗಳಲ್ಲಿರುವವರೆಲ್ಲರು ಆತನ [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”—ಯೋಹಾನ 5:28, 29.