ಮಾನವ ಕುಲವು ಒಂದು ಹೊಸ ಜಗತ್ತಿಗಾಗಿ ಹಾತೊರೆಯುತ್ತದೆ
ಒಂದು ಹೊಸ ಜಗತ್ತಿಗಾಗಿ ಹಾತೊರೆಯುವಿಕೆ ಇಂದಿನಷ್ಟು ಮಹತ್ತಾಗಿ ಹಿಂದೆಂದೂ ಇದ್ದಿರಲಿಲ್ಲ. ಯುದ್ಧ, ದೊಂಬಿ, ಬರ, ಸಾಂಕ್ರಾಮಿಕ ರೋಗ, ಪಾತಕ, ಮತ್ತು ಮಾಲಿನ್ಯಗಳ ಕಳೆದ ಎಂಟು ದಶಕಗಳು ಒಂದು ಭೀಕರ ಸ್ವಪ್ನದಂತಿದ್ದವು. ಶಾಂತಿಯ ಒಂದು ಹೊಸ ಲೋಕದಲ್ಲಿ ಎಚ್ಚತ್ತುಕೊಳ್ಳಬೇಕೆಂಬುದು ಮಾನವ ಕುಲದ ಬಯಕೆ. ಈ ಅಪೇಕ್ಷೆಗೆ ಓಗೊಡುತ್ತಾ, ಲೋಕನಾಯಕರು ಇಂಥ ಒಂದು ಜಗತ್ತನ್ನು ಸೃಷ್ಟಿಸುವ ಕುರಿತು ಮಾತಾಡಲಾರಂಭಿಸಿದ್ದಾರೆ.
ಒಂದು ಹೊಸ ಜಗತ್ತು ನಿಕಟವಿದೆ ಎಂದನ್ನುವ ಪ್ರಮುಖ ಜನರ ಮಾತುಗಳನ್ನು ನೀವು ಕೇಳಿದ್ದೀರಿ ಯಾ ಓದಿದ್ದೀರಿ ಎಂಬುದು ನಿಸ್ಸಂದೇಹ. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಶ್, ಸಪ್ಟಂಬರ್ 1991ರ ತನ್ನ ಒಂದು ಭಾಷಣದಲ್ಲಿ ಹೇಳಿದ್ದು: “ಈ ರಾತ್ರಿ, ಭೌಗೋಲಿಕವಾಗಿ ಪ್ರಜಾಪ್ರಭುತ್ವ ನಾಟಕವು ಬಯಲಾಗುವುದನ್ನು ನಾನು ನೋಡುವಾಗ, ನಾವು ಪ್ರಾಯಶಃ, ಹೌದು ಪ್ರಾಯಶಃ, ಆ ನೂತನ ಜಗತ್ತಿಗೆ ಹಿಂದೆಂದಿಗಿಂತಲೂ ಹೆಚ್ಚು ಸಮೀಪವಾಗಿದ್ದೇವೆ.”
ಈ ನೂತನ ಜಗತ್ತು ನಿಕಟವೆಂಬುದಕ್ಕೆ ಸಾಕ್ಷ್ಯವಾಗಿ, ಪೂರ್ವ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಮಧ್ಯೆ ಇದ್ದ ಶೀತಲ ಯುದ್ಧದ ಅಂತ್ಯವನ್ನು ಲೋಕ ನಾಯಕರು ತೋರಿಸುತ್ತಾರೆ. ನಿರಸ್ತ್ರೀಕರಣ ಕಾರ್ಯಕ್ರಮಗಳು ಜಾರಿಗೆ ತರಲ್ಪಡುವಾಗ, ಲೋಕವು ತುಸು ಸಲೀಸಾಗಿ ಉಸಿರಾಡುತ್ತದೆಂಬುದು ನಿಶ್ಚಯ. ಅಣು ಯುದ್ಧಾಸ್ತ್ರಗಳ ಕಮ್ಮಿ ಮಾಡುವಿಕೆ, ಶಾಂತಿ ಮತ್ತು ಭದ್ರತೆಯ ಒಂದು ಹೊಸ ಜಗತ್ತಿನ ಕುರಿತ ಅನೇಕರ ನಿರೀಕ್ಷೆಯನ್ನು ಬಲಪಡಿಸುತ್ತದೆ.
ಕಳೆದ ವರ್ಷದ ಏಪ್ರಿಲಿನಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನೆಡಿಯ ಸರಕಾರದಲ್ಲಿ ಉಪ ವಿದೇಶ ಮಂತ್ರಿಯಾಗಿದ್ದ ಜಾರ್ಜ್ ಮೆಗೀ ಪ್ರಕಟಿಸಿದ್ದು: “ನಮಗೆ ಈಗ, ಹೊಸ ಭದ್ರತಾ ಚಿಂತನಾರೂಪಗಳ ಮೇಲೆ ಆಧಾರವಾಗಿರುವ ಒಂದು ಹೊಸ ಲೋಕ ವ್ಯವಸ್ಥೆಯ ನೀಲಿಪ್ರತಿಯನ್ನು ತಯಾರಿಸುವ ಅವಕಾಶ—ಹೌದು, ಅವಶ್ಯ—ಇದೆ.” ಅವರು ಕೂಡಿಸಿ ಹೇಳಿದ್ದು: “ಯಶಸ್ವಿಯಾಗುವ ಹೊಸ ಲೋಕ ವ್ಯವಸ್ಥೆಗೆ ಅತ್ಯಂತ ಭರವಸೆ ಕೊಡುವ ನಿರೀಕ್ಷೆಯು ಅಂತಾರಾಷ್ಟ್ರೀಯ ಸಮುದಾಯದ ಬಂಧಗಳನ್ನು ಬಲಪಡಿಸುವುದರಲ್ಲಿದೆ ಎಂದು ನನ್ನ ನಂಬಿಕೆ.”
ಫ್ರಾನ್ಸ್ ದೇಶ 1992ರ ಅಂತ್ಯದ ತನಕ ನ್ಯೂಕ್ಲಿಯರ್ ಪ್ರಯೋಗಗಳನ್ನು ರದ್ದು ಮಾಡಲು ಕಾರಣ, “ಇತರ ನ್ಯೂಕ್ಲಿಯರ್ ಶಕ್ತಿಗಳು ಹಾಗೆ ಮಾಡುವಂತೆ ಪ್ರೋತ್ಸಾಹಿಸಲಿಕ್ಕಾಗಿಯೆ,” ಎಂದು ಮೆಗೀ ನುಡಿದರು. “ನ್ಯೂಕ್ಲಿಯರ್ ಆಯುಧ ಶಾಲೆಗಳನ್ನು ಕಮ್ಮಿ ಮಾಡುವ ಮತ್ತು ವ್ಯೂಹ ಯುಕ್ತಿಯ ನ್ಯೂಕ್ಲಿಯರ್ ಸೈನ್ಯಗಳ ಯುದ್ಧ ಸಿದ್ಧತೆಯ ವಿಷಮಾವಸ್ಥೆಯಿಂದ ಹಿಂದೆಗೆಯುವ” ರಷ್ಯದ “ಆರಂಭಿಕ ಹೆಜ್ಜೆ”ಯನ್ನೂ ಅವರು ತೋರಿಸಿದರು.
ಇದಲ್ಲದೆ, 1991ರ ಜೂಲೈಯಲ್ಲಿ ಲಂಡನಿನಲ್ಲಾದ ಲೋಕ ನಾಯಕರುಗಳ ಒಂದು ಕೂಟದಲ್ಲಿ, ಪರ್ಸಿಯನ್ ಕೊಲ್ಲಿ ಒಕ್ಕೂಟವು, “‘ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಪುನಃ ಸ್ಥಾಪಿಸಲು ಮತ್ತು ಬಿಕ್ಕಟ್ಟನ್ನು ಪರಿಹರಿಸಲು ಅಂತಾರಾಷ್ಟ್ರೀಯ ಸಮುದಾಯಕ್ಕಿರುವ ಸಾಮರ್ಥ್ಯವನ್ನು ಸ್ಥಿರಪಡಿಸುತ್ತದೆ” ಎಂದು ಅವರಲ್ಲಿ ಏಳು ಮಂದಿ ಘೋಷಿಸಿದರು.
ಯಾವ ತೆರದ ಹೊಸ ಜಗತ್ತು?
ಇದೆಲ್ಲ ಉತ್ತೇಜಕವಾಗಿ ಕೇಳಿ ಬರುತ್ತದೆ. ಆದರೆ, ರಾಷ್ಟ್ರಗಳು ಸೃಷ್ಟಿಸಲು ನಿರೀಕ್ಷಿಸುವ ಹೊಸ ಜಗತ್ತು ಯಾವ ವಿಧದ್ದೆಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ಅದು ಶಸ್ತ್ರಮುಕ್ತ, ಯುದ್ಧಮುಕ್ತವಾದ ಜಗತ್ತೊ?
ಮೆಗೀ ಉತ್ತರಿಸುವುದು: “ಅಮೆರಿಕವು, ಭಾವೀ ಐಕ್ಯ ಮಿಲಿಟರಿ ಪ್ರಯತ್ನಗಳಿಗೆ ತನ್ನ ಪಾಲನ್ನು ನೀಡುವ, ಯಾ ಯುದ್ಧವನ್ನು ತಪ್ಪಿಸುವುದು ಅಸಾಧ್ಯವಾಗುವಲ್ಲಿ ಅದರಲ್ಲಿ ಜಯಿಸುವ ಉದ್ದೇಶದಿಂದ ಸಾಕಷ್ಟು ಅಸ್ತ್ರ ಶಕ್ತಿಯನ್ನು ಇಟ್ಟುಕೊಳ್ಳಬೇಕು.” ಹೀಗೆ, ಲೋಕ ನಾಯಕರು ಪೂರ್ತಿ ನಿರಸ್ತ್ರೀಕರಣವನ್ನು ಸಮರ್ಥಿಸುವುದೂ ಇಲ್ಲ, ಯಾ ಮೆಗೀ ಹೇಳಿದಂತೆ, “ಯುದ್ಧವನ್ನು ತಪ್ಪಿಸುವುದು ಅಸಾಧ್ಯವಾಗುವಲ್ಲಿ” ಮಿಲಿಟರಿ ಪ್ರಯತ್ನವನ್ನು ವರ್ಜಿಸುವುದೂ ಇಲ್ಲ. ಸರಕಾರಗಳು ಯುದ್ಧಮುಕ್ತವಾದ ಹೊಸ ಲೋಕದ ಭರವಸೆಯನ್ನು ಕೊಡಲು ಸಾಧ್ಯವೇ ಇಲ್ಲ. ವ್ಯಾವಹಾರಿಕವಾಗಿ, ಇಂಥ ಒಂದು ಜಗತ್ತನ್ನು ಸೃಷ್ಟಿಸುವುದು ಅಸಾಧ್ಯವೆಂದು ಅವರು ಬಲ್ಲರು.
ದೃಷ್ಟಾಂತಕ್ಕೆ, ಆಗಲೆ ಸಂಭವಿಸಿರುವುದನ್ನು ನೋಡಿರಿ. ಮೇ 17, 1992ರ ನ್ಯೂ ಯಾರ್ಕ್ ಟೈಮ್ಸ್ನಲ್ಲಿ “ಹೊಸ ಲೋಕ ವ್ಯವಸ್ಥೆ” ಎಬ ಶೀರ್ಷಿಕೆಯ ಕೆಳಗೆ ವ್ಯಾಖ್ಯಾನಕಾರ ಆ್ಯಂಟನಿ ಲೂವಿಸ್ ಬರೆದುದು: “ಗುಂಡುಗಳು [ಸರಯೇವೊ, ಬಾಸ್ನಿಯ ಮತ್ತು ಹೆರ್ಸಗೋವಿನ] ಮೇಲೆ ಬೀಳುವುದನ್ನು ಮತ್ತು ಅಯೋಧರು ಭಯದಿಂದ ಒತ್ತೊತ್ತಾಗಿ ಸೇರಿರುವುದನ್ನು ಟೆಲಿವಿಷನ್ನಲ್ಲಿ ನೋಡುವಾಗ, ರಾಟರ್ಡ್ಯಾಮಿನ ಮೇಲೆ ನಾಟ್ಸಿಗಳ ಬಾಂಬು ಬಿದ್ದ ಸಮಯದಿಂದ ನಾಗರಿಕತೆ ಮುಂದುವರಿದಿಲ್ಲವೆಂದು ನಾನು ಯೋಚಿಸಿದೆ. ಇದು ಪಕ್ಕಾ ಹೊಸ ಲೋಕ ವ್ಯವಸ್ಥೆಯೇ ಸರಿ.”
ಆದರೂ, ಯುದ್ಧವನ್ನು ತೊಲಗಿಸುವುದಲ್ಲದೆ, ತೃಪ್ತಿ ಪಡಿಸುವ ನೂತನ ಲೋಕವನ್ನು ಸೃಷ್ಟಿಸಬೇಕಾದರೆ, ಪರಿಹರಿಸಲು ಅವಶ್ಯವಾಗಿರುವ ಇನ್ನೂ ಅನೇಕ ಸಮಸ್ಯೆಗಳಿವೆ. ನಮ್ಮ ಗಾಳಿ, ನೆಲ ಮತ್ತು ಸಮುದ್ರವನ್ನು ನಿಧಾನವಾಗಿ, ಅಗೋಚರವಾಗಿ ಕೆಡಿಸುವ ಮಾಲಿನ್ಯವನ್ನು ಪರಿಗಣಿಸಿರಿ; ಲಕ್ಷಗಟ್ಟಲೆ ಜನರ ಸೊತ್ತು ಮತ್ತು ಆರೋಗ್ಯವನ್ನು ಅಪಹರಿಸುವ ಬಲಾಢ್ಯವಾದ ಪಾತಕ ಸಂಘ (ಕ್ರೈಮ್ ಸಿಂಡಿಕೇಟ್)ಗಳನ್ನೂ, ಮಾದಕೌಷಧ ವ್ಯಾಪಾರದ ಕಾನೂನುಬಾಹಿರ ಸಂಘಗಳನ್ನೂ ತೆಗೆದುಕೊಳ್ಳಿರಿ; ಮಣ್ಣಿನ ಸವೆತಕ್ಕೆ ಸಹಾಯ ಮಾಡಿ, ಕ್ರಮೇಣ ಬೆಳೆಯನ್ನು ನಾಶಮಾಡುವಂಥ ನೆರೆಗೆ ನಡೆಸುವ ಗೊತ್ತುಗುರಿಯಿಲ್ಲದ ಮಳೆಗಾಡಿನ ನಾಶವನ್ನು ಪರಿಗಣಿಸಿರಿ.
ಇದಲ್ಲದೆ, ಹೃದ್ರೋಗ, ಕ್ಯಾನ್ಸರ್, ಏಯ್ಡ್ಸ್, ಲುಕೀಮಿಯ ಮತ್ತು ಮಧುಮೂತ್ರ ಸೇರಿರುವ ಭಯಂಕರ ಶಾರೀರಿಕ ಸಂಕಟಗಳು ಇನ್ನೂ ಪರಿಹಾರಕ್ಕಾಗಿ ಕಾಯುತ್ತಿವೆ. ಮತ್ತು ದಾರಿದ್ರ್ಯ, ವಸತಿರಾಹಿತ್ಯ, ಆಹಾರ ಮತ್ತು ನೀರಿನ ಅಭಾವ, ನ್ಯೂನ ಪೋಷಣೆ, ಅನಕ್ಷರತೆ, ಮತ್ತು ಓಸೋನ್ ಪದರದ ಬರಿದಾಗುವಿಕೆ—ಇವುಗಳ ವಿಷಯವೇನು? ಹೌದು, ಈ ಪಟ್ಟಿ ಲಂಬಿಸುತ್ತಾ ಹೋಗುತ್ತದೆ. ಈ ಕಠಿಣ ಸಮಸ್ಯೆಗಳು ಸ್ಫೋಟನಕ್ಕೆ ಸಮಯ ನಿಶ್ಚಯಿಸಿರುವ ಮತ್ತು ಟಿಕ್ಟಿಕ್ಕೆಂದು ಸದ್ದು ಮಾಡುತ್ತಾ ಹೋಗುತ್ತಿರುವ ಟೈಮ್ ಬಾಂಬುಗಳ ರಾಶಿಯಂತಿವೆ. ಅವು ಸರಪಣಿ ಪ್ರತಿಕ್ರಿಯೆಯ ವಿಪತ್ತುಗಳಾಗಿ ಸ್ಫೋಟಗೊಂಡು ತನ್ನ ಸ್ವಂತ ವಿನಾಶಕ್ಕೆ ನಡೆಸುವ ಮೊದಲಾಗಿ ಈಗಲೇ ಮನುಷ್ಯನು ಅವನ್ನು ನಿಷ್ಕ್ರಿಯಗೊಳಿಸಬೇಕು. ಇದನ್ನು ಮಾಡುವ ಸಮಯದೊಳಗೆ ಅವನು ಒಂದು ಹೊಸ ಜಗತ್ತನ್ನು ಸ್ಥಾಪಿಸಬಲ್ಲನೆ?
ಅನೇಕ ವರ್ಷಗಳಿಂದ ಸಂಘಗಳು ಮತ್ತು ಪರಿಷತ್ತುಗಳು ಭೂಮಿಯ ಸಮಸ್ಯೆಗಳನ್ನು ಪರಿಹರಿಸಲು ಶ್ರಮಪಟ್ಟಿದ್ದಾರೆ. ಆದರೂ, ಸಮಸ್ಯೆಗಳು ಹೆಚ್ಚಾಗಿರುವುದು ಮಾತ್ರವಲ್ಲ, ಹೊಸತಾದ ಮತ್ತು ಹೆಚ್ಚು ಜಟಿಲವಾದ ಸಮಸ್ಯೆಗಳು ವಿಕಾಸಗೊಂಡಿವೆ. ಇವುಗಳನ್ನು ಬಗೆಹರಿಸಲು ಮನುಷ್ಯನಿಗಿರುವ ಅಸಾಮರ್ಥ್ಯವು, ಶಾಂತಿಭರಿತವೂ ಭದ್ರವೂ ಆದ ಹೊಸ ಜಗತ್ತಿಗೆ ಮಾನವಕುಲದ ಹಾತೊರೆಯುವಿಕೆ ವ್ಯರ್ಥವೆಂಬ ಅರ್ಥವನ್ನು ಕೊಡುತ್ತದೊ? ಇದಕ್ಕೆ ನಾವು ಭರವಸೆಯಿಂದ ಇಲ್ಲ! ಎಂದು ಉತ್ತರಿಸಬಲ್ಲೆವು. ನಾವು ಏಕೆ ಹೀಗೆ ಉತ್ತರಿಸುತ್ತೇವೆಂಬುದನ್ನು ದಯವಿಟ್ಟು ಪರಿಗಣಿಸಿರಿ. (g92 10/22)