ನೀವು ಒಲುಮೆಯ ಒಬ್ಬ ಹೆತ್ತವರೊ?
ನೀವು ನಿಮ್ಮ ಮಕ್ಕಳನ್ನು ಪ್ರೀತಿಸುತ್ತೀರೊ? ಅವರಲ್ಲಿ ನಿಮಗೆ ಅಭಿಮಾನವಿದೆಯೆ? ಅವರಲ್ಲಿ ಪ್ರತಿಯೊಬ್ಬನೂ ವಿಶಿಷ್ಟನೂ ಅನನ್ಯನೂ ಬದಲಿಡಲಾಗದ ವ್ಯಕ್ತಿಯೂ ಆಗಿದ್ದಾನೆಂಬುದು ನಿಮ್ಮ ಅನಿಸಿಕೆಯೆ? ಅಧಿಕಾಂಶ ಹೆತ್ತವರು ಹಾಗೆ ಎಣಿಸುತ್ತಾರೆ. ಆದರೆ ನಿಮ್ಮ ಅನಿಸಿಕೆ ಹಾಗಿದೆಯೆಂದು ನೀವು ನಿಮ್ಮ ಮಕ್ಕಳಿಗೆ ಹೇಳುತ್ತೀರೊ? ಅವರು ಒಂದು ಸಂಗತಿಯನ್ನು ಒಳ್ಳೆಯದಾಗಿ ಮಾಡಿದಾಗ ನೀವು ನಿರ್ದಿಷ್ಟವಾಗಿ ಅವರನ್ನು ಪ್ರಶಂಸಿಸುತ್ತೀರೊ? ಮತ್ತು ನೀವು ಒಲುಮೆಯನ್ನು ಇತರ ವಿಧಗಳಲ್ಲಿ—ಮೃದುವಾದ ಆಟ, ಪುನರಾಶ್ವಾಸನೆ ಕೊಡುವ ಸ್ಪರ್ಶ, ಪ್ರೀತಿಯ ಅಪ್ಪಿಕೊಳ್ಳುವಿಕೆ—ವ್ಯಕ್ತ ಪಡಿಸುತ್ತೀರೊ?
“ಆದರೆ ಅದು ನನ್ನ ರೀತಿಯಲ್ಲ. ನಾನು ನನ್ನ ಅನಿಸಿಕೆಗಳನ್ನು ಬಹಿರಂಗವಾಗಿ ತೋರಿಸುವುದಿಲ್ಲ,” ಎಂದು ಕೆಲವರು ಆಕ್ಷೇಪವನ್ನು ಎತ್ತಾರು. ಎಲ್ಲರೂ ಬಹಿರಂಗಪಡಿಸುವ ಪ್ರಕೃತಿಯವರಲ್ಲವೆಂಬುದು ನಿಜ. ಆದರೂ, ನಿಮ್ಮ ಮಕ್ಕಳಿಗೆ ಒಲುಮೆ ತೋರಿಸುವುದು ನೀವು ಇದುವರೆಗೆ ಗ್ರಹಿಸಿರುವುದಕ್ಕಿಂತ ಹೆಚ್ಚು ಪ್ರಾಮುಖ್ಯವಾಗಿರಬಹುದು.
ವಿಜ್ಞಾನಿಗಳ ಒಂದು ತಂಡ ಇತ್ತೀಚೆಗೆ 400 ಕಿಂಡರ್ಗಾರ್ಟನ್ ಮಕ್ಕಳ ಮೇಲೆ 1951ರಲ್ಲಿ ಮಾಡಿದ ಅಧ್ಯಯನವನ್ನು ಪುನಃ ಆನ್ವೇಷಿಸಲು ತೊಡಗಿತು. ಅವರು ಕಂಡುಹಿಡಿಯಲು ಸಾಧ್ಯವಾದ 94 ಪುರುಷ ಮತ್ತು ಸ್ತ್ರೀಯರಲ್ಲಿ ಅವರು ಒಂದು ಪರಿಣಾಮಕಾರಿಯಾದ ನಮೂನೆಯನ್ನು ಕಂಡರು. ದ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಗನುಸಾರ, ಯಾವ ಮಕ್ಕಳ ಹೆತ್ತವರು ಒಲುಮೆ, ಮಮತೆಯವರಾಗಿದ್ದರೊ ಅವರು ವಯಸ್ಕ ಜೀವಿತವನ್ನು ಹೆಚ್ಚು ಉತ್ತಮವಾಗಿ ಬಾಳಿದರು. ಅವರ ಮದುವೆಗಳು ಮೂಲತಃ ಯಶಸ್ವಿ ಹೊಂದಿದ್ದವು, ಅವರು ಮಕ್ಕಳನ್ನು ಬೆಳೆಸಿದ್ದರು, ತಮ್ಮ ಕೆಲಸದಲ್ಲಿ ಸಂತೋಷಿಸಿದ್ದರು, ಮತ್ತು ಆಪ್ತ ಸ್ನೇಹಗಳನ್ನು ಪೋಷಿಸುತ್ತಾ ಬಂದಿದ್ದರು. ಈ ಅಧ್ಯಯನದ ಮುಂದಾಳುವಾಗಿದ್ದ ಡಾ. ಕ್ಯಾರಲ್ ಫ್ರಾನ್ಸ್, ಪತ್ರಿಕೆಗೆ, ಅವರು “ಮನೋವೈಜ್ಞಾನಿಕ ಸ್ವಾಸ್ಥ್ಯವನ್ನು, ಹುರುಪನ್ನು ಮತ್ತು ತಮ್ಮೊಂದಿಗೆ ಮತ್ತು ತಮ್ಮ ಜೀವನಗಳೊಂದಿಗೆ ತೃಪ್ತಿಯನ್ನು ತೋರಿಸಿದರು,” ಎಂದು ಹೇಳಿದರು.
ಇದಕ್ಕೆ ವಿರೋಧಾತ್ಮಕವಾಗಿ, “ಅನಾದರದ, ನಿರಾಕರಣೆಯ ಹೆತ್ತವರಿದ್ದವರು ಅವರ ಮುಂದಿನ ಜೀವನವನ್ನು, ಎಲ್ಲ ವಿಧಗಳಲ್ಲಿಯೂ, ಅಂದರೆ, ಕೆಲಸ, ಸಾಮಾಜಿಕ ಹೊಂದಿಕೊಳ್ಳುವಿಕೆ, ಮತ್ತು ಮನೋವೈಜ್ಞಾನಿಕ ಯೋಗಕ್ಷೇಮದಲ್ಲಿ ಅತಿ ಕಠಿಣ ರೀತಿಯಲ್ಲಿ ಬಾಳಿದರು” ಎಂದು ಫ್ರಾನ್ಸ್ ಕಂಡುಕೊಂಡರು. ವಾಸ್ತವವಾಗಿ, ಕಟ್ಟಕಡೆಗೆ, ಹೆತ್ತವರ ಈ ಒಲುಮೆಯ ಕೊರತೆಯು ಮಕ್ಕಳಿಗೆ, ಹೆತ್ತವರ ವಿವಾಹವಿಚ್ಛೇದ, ಮದ್ಯ ರೋಗಾವಸ್ಥೆ, ಯಾ ಬಡತನಕ್ಕೂ ಹೆಚ್ಚು ಹಾನಿಕರವೆಂದು ಆ ಅಧ್ಯಯನವು ಸೂಚಿಸಿತು.
ಇದು ಯಥಾರ್ಥ ಬೈಬಲ್ ವಿದ್ಯಾರ್ಥಿಗಳಿಗೆ ಆಶ್ಚರ್ಯವೆಂದು ತೋರಬಾರದು. ಯೇಸು ಮಕ್ಕಳೊಂದಿಗೆ ಹೇಗೆ ವ್ಯವಹರಿಸಿದನೆಂದು ಅವರಿಗೆ ಚೆನ್ನಾಗಿ ಗೊತ್ತು. ಅವನು ಅವರಿಗೆ ಮುಖ್ಯತೆ ಕೊಟ್ಟು, ಅವರನ್ನು ತನ್ನ ಬಳಿಗೆ ಎಳೆದು, ಅವರ ಕಡೆಗೆ ತನಗಿದ್ದ ಮಮತೆಯು ಕಾಣುವಂತೆ ಮಾಡಿದನು. (ಮಾರ್ಕ 10:13-16; ಲೂಕ 9:46-48; 18:15-17) ಹೌದು. ಇದರಲ್ಲಿ ಅವನು ತನ್ನ ಸ್ವರ್ಗೀಯ ತಂದೆಯನ್ನು, ಅನಾಥ ಹುಡುಗನಿಗೆ ತಂದೆಯಾಗುವಾತನನ್ನು ಅನುಕರಿಸಿದನು, ಅಷ್ಟೆ. (ಕೀರ್ತನೆ 68:5) ಯೆಹೋವನೇ ಪರಿಪೂರ್ಣ ತಂದೆ; ಆತನನ್ನು ಪ್ರೀತಿಸುವವರಿಗೆ ಸಂತೋಷಕರವಾಗಿ, ಅಪೂರ್ಣ ಮಾನವ ಹೆತ್ತವರಲ್ಲಿರುವ ಯಾವ ಕೊರತೆಯನ್ನೂ ಆತನು ತುಂಬಿಸುವನು.—2 ಕೊರಿಂಥ 6:18. (g92 10/22)