ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 7/8 ಪು. 9-12
  • ಗೃಹ ಶಾಲಾ ಶಿಕ್ಷಣ ಅದು ನಿಮಗೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಗೃಹ ಶಾಲಾ ಶಿಕ್ಷಣ ಅದು ನಿಮಗೊ?
  • ಎಚ್ಚರ!—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅವರು ಮಾಡುವುದಕ್ಕೆ ಕಾರಣ
  • ಅದು ಸಾಧಕವೊ?
  • ಅನೇಕರು ಇನ್ನೂ ಅನಿಶ್ಚಯಿಗಳು
  • ಅದು ನಿಮಗೊ?
  • ನನ್ನ ಮಗು ಶಾಲೆಗೆ ಹೋಗಬೇಕೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಒಂದು ಉದ್ದೇಶವಿರುವ ವಿದ್ಯೆ
    ಕಾವಲಿನಬುರುಜು—1993
  • ಬೈಬಲು ಶಿಕ್ಷಣವನ್ನು ನಿರುತ್ತೇಜಿಸುತ್ತದೊ?
    ಎಚ್ಚರ!—1998
  • ಶಾಲೆಗೆ ವಾಪಸ್ಸು ಏಕೆ?
    ಎಚ್ಚರ!—1994
ಇನ್ನಷ್ಟು
ಎಚ್ಚರ!—1993
g93 7/8 ಪು. 9-12

ಗೃಹ ಶಾಲಾ ಶಿಕ್ಷಣ ಅದು ನಿಮಗೊ?

“ರಾಷ್ಟ್ರೀಯ ಚಳುವಳಿಯಾಗಿರುವ ಒಂದು ವಿಲಕ್ಷಣತೆ.” ಹೀಗೆಂದು ಇತ್ತೀಚೆಗೆ ಟೈಮ್‌ ಪತ್ರಿಕೆ ಅಮೆರಿಕದ ಗೃಹ ಶಿಕ್ಷಣ ಕ್ರಮವನ್ನು—ಒಂದು ಮಗುವಿಗೆ ಅತ್ಯುತ್ತಮ ವಿದ್ಯೆಯು ಸಾಂಪ್ರದಾಯಿಕವಾದ ಕ್ಲಾಸ್‌ ಕೊಠಡಿಯಲ್ಲಲ್ಲ, ಅವನ ಯಾ ಅವಳ ವಾಸದ ಕೊಠಡಿಯಲ್ಲಿ ಸಿಕ್ಕುತ್ತದೆಂದು ನಂಬುವುದನ್ನು ಹೆತ್ತವರು ಸಮರ್ಥಿಸುವ ಬೆಳೆಯುತ್ತಿರುವ ಒಂದು ಪ್ರವೃತ್ತಿ—ಯನ್ನು ವರ್ಣಿಸಿತು.

ಆದರೂ, ವಿಲಕ್ಷಣವಾಗಿದೆ ಅಥವಾ ಕ್ರಾಂತಿಕಾರಕವೂ ಆಗಿದೆ ಎಂದು ಕೆಲವರಿಂದ ವೀಕ್ಷಿಸಲ್ಪಡುವ ಗೃಹ ಶಿಕ್ಷಣ ಪ್ರತಿ ವರ್ಷ ಹೆಚ್ಚು ಪಕ್ಷವಾದಿಗಳನ್ನು ಗೆಲ್ಲುತ್ತಿದೆ. ಸಂಶೋಧಕರು ಹೇಳುವುದೇನಂದರೆ ಗೃಹ ಶಿಕ್ಷಣವನ್ನು ಪಡೆಯುವವರ ಸಂಖ್ಯೆ, 1970ರಲ್ಲಿದ್ದ 15,000ದಿಂದ 1990ರಲ್ಲಿ 5,00,000ಕ್ಕೆ ಏರಿದೆ. ಕೆಲವು ಗೃಹ ಶಿಕ್ಷಣ ಪಕ್ಷವಾದಿಗಳು, ಅಮೆರಿಕದಲ್ಲಿ 10 ಲಕ್ಷಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮಕ್ಕಳಿಗೆ ಮನೆಯಲ್ಲಿ ಕಲಿಸುತ್ತವೆ ಎಂದು ವಾದಿಸುತ್ತಾರೆ.

ಗೃಹ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುಂಪುಗಳು ಆಸ್ಟ್ರೇಲಿಯ, ಕೆನಡ, ಇಂಗ್ಲೆಂಡ್‌, ಜರ್ಮನಿ, ಜಪಾನ್‌ ಮತ್ತು ನ್ಯೂ ಜೀಲೆಂಡ್‌ನಲ್ಲಿ ಸಹ ಚಿಗುರಿ ಬಂದಿವೆ. ಇದು, ಗೃಹ ಶಿಕ್ಷಣದಲ್ಲಿ ಆಸಕ್ತಿ ಭೂಮ್ಯಾದ್ಯಂತ ಹರಡುತ್ತಿದೆ ಎಂದು ತೋರಿಸುತ್ತದೆ.

ಹಾಗಾದರೆ ಇಷ್ಟೊಂದು ಹೆತ್ತವರು ಮಕ್ಕಳಿಗೆ ಮನೆಯಲ್ಲಿ ಕಲಿಸಲು ತೀರ್ಮಾನಿಸುವುದೇಕೆ? ಗೃಹ ಶಿಕ್ಷಣ ಎಷ್ಟು ಕಾರ್ಯಸಾಧಕ? ಈ ಆಯ್ಕೆಯನ್ನು ನಿಮ್ಮ ಕುಟುಂಬಕ್ಕಾಗಿ ಪರಿಗಣಿಸುವುದು ಸಾರ್ಥಕವೊ?

ಮೂಲ ಭಾವನೆಯಲ್ಲಿ, ಗೃಹ ಶಿಕ್ಷಣವು ತೋರಿ ಬರುವಷ್ಟು ತೀವ್ರ ಸುಧಾರಣೆಯದ್ದಲ್ಲ. “ಮನೆಯೇ ಆದಿ ವಿದ್ಯಾ ವ್ಯವಸ್ಥೆಯಾಗಿತ್ತು, ಶಾಲೆಯಲ್ಲ,” ಎನ್ನುತ್ತಾರೆ ರೇಮಂಡ್‌ ಮತ್ತು ಡಾರತಿ ಮೋರ್‌, ತಮ್ಮ ಪುಸ್ತಕವಾದ ಹೋಮ್‌ಸ್ಪನ್‌ ಸ್ಕೂಲ್ಸ್‌ನಲ್ಲಿ. “ಕಳೆದ ಶತಮಾನದ ತನಕ, ಶಾಲೆಗೆ ಹೋದ ಅಧಿಕಾಂಶ ಮಕ್ಕಳು ಹನ್ನೆರಡು ಯಾ ಅದಕ್ಕಿಂತಲೂ ಹೆಚ್ಚು ಪ್ರಾಯದಲ್ಲಿ ಆರಂಭಿಸಿದರು.”

ಜಾರ್ಜ್‌ ವಾಷಿಂಗ್ಟನ್‌, ಏಬ್ರಹಾಮ್‌ ಲಿಂಕನ್‌, ಥಾಮಸ್‌ ಜೆಫರ್ಸನ್‌, ಮತ್ತು ಆಲ್ಬರ್ಟ್‌ ಐನ್‌ಸ್ಟೈನ್‌ರಂಥ ಪ್ರಸಿದ್ಧ ವ್ಯಕ್ತಿಗಳಿಗೆ ಮನೆಯಲ್ಲಿ ಶಿಕ್ಷಣ ದೊರೆಯಿತು. ವಾಸ್ತವವೇನಂದರೆ, ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕೆಂಬ ನಿಯಮಗಳು 19ನೆಯ ಶತಮಾನದ ಅಂತ್ಯದ ತನಕ ಜಾರಿಗೆ ಬರಲಿಲ್ಲ. ಆದುದರಿಂದ, ಲೇಖಕಿಯೂ ಗೃಹ-ಶಾಲಾ ಹೆತ್ತವರೂ ಆದ ಕೆರಿ ಬೆನೆಟ್‌ ವಿಲ್ಯಮ್ಸನ್‌ ಎಂಬವರಿಗನುಸಾರ, ಗೃಹ ಶಿಕ್ಷಣ ಇತ್ತೀಚಿನ ಒಂದು ಗೀಳಾಗಿರದೆ, “ಒಂದು ಹಳೆಯ ವಿದ್ಯಾ ಮಟ್ಟವಾಗಿದೆ.” ಗೃಹ ಶಿಕ್ಷಣವು ಬೈಬಲ್‌ ಸಮಯಗಳಲ್ಲಿ ಅಧಿಕಾಂಶ ಜನರ ಮಟ್ಟವೂ ಆಗಿತ್ತು.

ಅವರು ಮಾಡುವುದಕ್ಕೆ ಕಾರಣ

ರಸಕರವಾಗಿ, ಅಮೆರಿಕದಲ್ಲಿ ಗೃಹ ಶಿಕ್ಷಣವನ್ನು ಅಭ್ಯಸಿಸುವವರಲ್ಲಿ 50ರಿಂದ 90 ಪ್ರತಿಶತ ಹೆತ್ತವರು ಅದನ್ನು ಧಾರ್ಮಿಕ ಕಾರಣಕ್ಕಾಗಿ ಮಾಡುತ್ತಾರೆ ಎಂದು ನ್ಯಾಷನಲ್‌ ಕ್ಯಾತೊಲಿಕ್‌ ರಿಪೋರ್ಟರ್‌ ಅಂದಾಜು ಮಾಡುತ್ತದೆ. ಈ ಹೆತ್ತವರು, ಯಾವುದನ್ನು ಶಾಲೆಗಳಲ್ಲಿ ನಾಸ್ತಿಕತೆಯ ಪ್ರಭಾವವೆಂದು ಗ್ರಹಿಸುತ್ತಾರೋ ಅದರಿಂದ ತಮ್ಮ ಮಕ್ಕಳನ್ನು ಸಂರಕ್ಷಿಸುವ ವಿಷಯದಲ್ಲಿ ಚಿಂತಿತರಾಗಿದ್ದಾರೆ. “ಗೃಹ ಶಿಕ್ಷಣ ಚಳುವಳಿಯ ಬೆನ್ನೆಲುಬು, ಕ್ಲಾಸಿನಲ್ಲಿ ಧರ್ಮವು ಒಂದೇ ದುರುಪಯೋಗಿಸಲ್ಪಡುತ್ತದೆ ಇಲ್ಲವೆ ಅಸಡ್ಡೆ ಮಾಡಲ್ಪಡುತ್ತದೆ ಎಂದು ನಂಬುವ ಕ್ರೈಸ್ತ ಸಾಂಪ್ರದಾಯಿಕ ಸಮುದಾಯವೇ,” ಎಂದಿತು ಟೈಮ್‌ ಪತ್ರಿಕೆ.

ಬೇರೆ ಹೆತ್ತವರು ತಮ್ಮ ಮಕ್ಕಳನ್ನು ಸಾರ್ವಜನಿಕ ಶಾಲೆಗಳಿಂದ, ಚಿಕ್ಕ ವಯಸ್ಸಿನಲ್ಲಿ ಹಾನಿಕಾರಕವಾದ ಅನೈತಿಕ ಪ್ರಭಾವಗಳಿಗೆ ಅವರು ಒಡ್ಡಲ್ಪಡುವುದನ್ನು ತಡೆಯಲಿಕ್ಕಾಗಿ ತೆಗೆಯುತ್ತಾರೆ. ಕೆಲವು ವರ್ಷಗಳ ಹಿಂದೆ, ತಾನೂ ತನ್ನ ಹೆಂಡತಿಯೂ ತಮ್ಮ ಮಕ್ಕಳಿಗೆ ಮನೆಯಲ್ಲೇ ಕಲಿಸುತ್ತೇವೆಂದು ನಿರ್ಣಯಿಸಿದ ಒಬ್ಬ ಕ್ರೈಸ್ತನು ಹೇಳಿದ್ದು: “ಶಾಲೆಗಳಲ್ಲಿ ದುರ್ನೀತಿ ನಿಯಂತ್ರಣ ತಪ್ಪಿ ಹೋಗುತ್ತಿತ್ತು. ನಮಗೆ ಮಕ್ಕಳ ಮತ್ತು ಶಾಲೆಯಲ್ಲಿದ್ದ ಶೋಚನೀಯ ಪರಿಸ್ಥಿತಿಯ ವಿಷಯದಲ್ಲಿ ಚಿಂತೆಯಿತ್ತು.”

ಹಲವು ಬಾರಿ ಹೆತ್ತವರು ಭಾವನಾ ಶಾಸ್ತ್ರದ ಕಾರಣಗಳಿಗಲ್ಲ, ವಿದ್ಯಾ ಸಂಬಂಧವಾದ ಕಾರಣಗಳಿಗಾಗಿ ಗೃಹ ಶಿಕ್ಷಣವನ್ನು ಆಯ್ದುಕೊಳ್ಳುತ್ತಾರೆ. ಮಿತಿಮೀರಿದ ವಿದ್ಯಾರ್ಥಿಸಂಖ್ಯೆಯ ತರಗತಿಗಳು, ಕೆಳದರ್ಜೆಯ ಶೈಕ್ಷಣಿಕ ಮಟ್ಟಗಳು, ಮತ್ತು ಅನೇಕ ಶಾಲೆಗಳಲ್ಲಿರುವ ನಿರಪಾಯತೆಯ ಸಮಸ್ಯೆಗಳು—ಇವುಗಳಿಂದ ಅವರು ಬೇಸತ್ತು ಹೋಗಿದ್ದಾರೆ. ಅನೇಕ ವೇಳೆ ಸಾಂಘಿಕ ಶಿಕ್ಷಣದ ಕಾಂತಿಹೀನ ಫಲಿತಾಂಶದಿಂದ ನಿರಾಶರಾಗಿ, ಗೃಹ ಶಿಕ್ಷಣವು ಸಾಧ್ಯ ಮಾಡುವ ಒಬ್ಬನಿಗೆ ಒಬ್ಬನು ಕೊಡುವ ಗಮನದಿಂದ ತಮ್ಮ ಮಕ್ಕಳಿಗೆ ತಾವು ಹೆಚ್ಚು ಸಹಾಯ ನೀಡಬಲ್ಲೆವು ಎಂದು ಅವರು ನಂಬುತ್ತಾರೆ.

ಕೆಲವರು ಏಕೆ ಗೃಹ ಶಿಕ್ಷಣದಲ್ಲಿ ಹೆಚ್ಚು ಇಷ್ಟಪಡುತ್ತಾರೆಂದು ವಿವರಿಸುತ್ತಾ, ಹೋಮ್‌ ಸ್ಕೂಲ್ಸ್‌: ಆ್ಯನ್‌ ಆಲರ್ನ್ಟೆಟಿವ್‌ ಹೇಳುವುದು: “[ಮನೆಯಲ್ಲಿ ಕಲಿಸುವ] ಹೆತ್ತವರು ತಮ್ಮ ಮಕ್ಕಳೊಂದಿಗೆ 100 ಪ್ರತಿಶತ ಬೆರೆತುಕೊಂಡಿರುತ್ತಾರೆ. . . . ತಮ್ಮ ಸ್ವಂತ ಮಗುವಿನ ವಿದ್ಯೆಗೆ ಅವರು ಸಮಯವನ್ನು ಮೀಸಲಾಗಿಡಬಲ್ಲರು.”

ಅದು ಸಾಧಕವೊ?

ಗೃಹ ಶಿಕ್ಷಣವನ್ನು ಸಮರ್ಥಿಸುವವರು, ಪಾಠಗಳು ಕುಟುಂಬದ ದೈನಂದಿನ ಚಟುವಟಿಕೆಯ ಪ್ರತಿಯೊಂದು ಮುಖದೊಂದಿಗೆ ಹೆಣೆಯಲ್ಪಟ್ಟಿರುವುದರಿಂದ ಮಕ್ಕಳು ಹೆಚ್ಚು ಕಾರ್ಯಸಾಧಕವಾಗಿ ಕಲಿಯುತ್ತಾರೆ ಎಂದು ಹೇಳುತ್ತಾರೆ. “ಅನೇಕ ಕುಟುಂಬಗಳು ಗಣಿತ ಪಠ್ಯಪುಸ್ತಕದಿಂದ ಆರಂಭ ಮಾಡಿದರೂ ಆ ಬಳಿಕ, ದೈನಂದಿದ ಅನುಭವಗಳಿಂದ ಪಾಠಗಳನ್ನು ಕಲಿಯಬಹುದೆಂದು ಕಂಡುಹಿಡಿಯುತ್ತಾರೆ,” ಎಂದು ಜೇನ್‌ ಎ. ಆವ್ನರ್‌ ಸ್ಕೂಲ್‌ ಲೈಬ್ರೆರಿ ಜರ್ನಲ್‌ನಲ್ಲಿ ಬರೆಯುತ್ತಾರೆ. “ಉದಾಹರಣೆಗೆ, ಅಂಗಡಿ ಹೋಗಿ ಬಂದು ಜಮಾಖರ್ಚು ಪಟ್ಟಿಯನ್ನು ತುಲನೆ ಮಾಡುವುದು ವಿದ್ಯಾರ್ಥಿಗಳು ಹಣ ನಿರ್ವಹಣೆಯನ್ನು ಗ್ರಹಿಸುವಂತೆಯೂ, ಮನೆಯ ರಿಪೇರಿಯು ಅಳತೆ ಮಾಡುವುದಕ್ಕೆ ಒಂದು ಉತ್ಕೃಷ್ಟ ಸಾಂಕೇತಿಕ ಪ್ರಾಥಮಿಕ ಪಠ್ಯಪುಸ್ತಕವಾಗಿಯೂ ಕೆಲಸ ಮಾಡುವುದು.”

ಗೃಹ ಶಿಕ್ಷಣವು ಎಷ್ಟು ಕಾರ್ಯಸಾಧಕವಾಗಿ ಪರಿಣಮಿಸಿದೆ? ಗೃಹ ವಿದ್ಯಾರ್ಥಿಗಳು ಪ್ರಮಾಣಿಸಿದ ಸಾಧನೆಗಳ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ರಾಷ್ಟ್ರೀಯ ಸರಾಸರಿಗೆ ಸಮಾನವಾದ ಯಾ ಅದಕ್ಕೂ ಹೆಚ್ಚಿನ ಅಂಕಗಳನ್ನು ಪಡೆಯುತ್ತಾರೆಂದು ಕೆಲವು ಅಧ್ಯಯನಗಳು ತೋರಿಸಿವೆ. ಆದರೆ ಇಂಥ ಫಲಿತಾಂಶಗಳು ಗೃಹ ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಾಲಾ ಮಕ್ಕಳಿಗಿಂತ ಉತ್ತಮರು ಎಂದು ರುಜುಪಡಿಸುತ್ತವೆ ಎಂದಾಗಬೇಕೆಂದಿಲ್ಲ.

“ಪ್ರಸ್ತುತದ ರುಜುವಾತು ಅಸಂಪೂರ್ಣ,” ಎನ್ನುತ್ತದೆ ದ ಹೋಮ್‌ ಸ್ಕೂಲ್‌ ಮ್ಯಾನ್ಯುಅಲ್‌. “ಈ ಎಲ್ಲ ಅಧ್ಯಯನಗಳಲ್ಲಿರುವ ಪ್ರಾಥಮಿಕ ಸಮಸ್ಯೆಯು, ಗೃಹ ವಿದ್ಯಾರ್ಥಿಗಳಲ್ಲಿ ಒಂದು ಗಮನಾರ್ಹ ಸಂಖ್ಯೆಯವರ ಪರೀಕ್ಷಾ ಅಂಕಗಳು ಸಂಶೋಧಕರಿಗೆ ಸಿಕ್ಕದಿರುವುದೇ.”

ಗೃಹ ಶಿಕ್ಷಣವು ಶೈಕ್ಷಣಿಕವಾಗಿ ಶ್ರೇಷ್ಠ ವಿದ್ಯಾ ವಿಧಾನವೆಂದು ನಿರ್ಣಾಯಕವಾಗಿ ರುಜುಪಡಿಸಲು “ನಿಜವಾಗಿಯೂ ಯಾವ ಪ್ರಾಯೋಗಿಕ ರುಜುವಾತೂ ದೊರೆಯುವುದಿಲ್ಲ” ಎನ್ನುತ್ತದೆ ದ ಹೋಮ್‌ ಸ್ಕೂಲ್‌ ಮ್ಯಾನ್ಯುಅಲ್‌. “ಗೃಹ ವಿದ್ಯಾರ್ಥಿಗಳು ಸಾಮಾನ್ಯವಾಗಿ ಉತ್ತಮ ಕೆಲಸ ಮಾಡುತ್ತಾರಾದರೂ, ಇರುವ ವ್ಯತ್ಯಾಸವು ಇತರ ಸಂಗತಿಗಳ ಕಾರಣದಿಂದಲ್ಲವೆಂದು ಯೋಗ್ಯ ಸಂಶೋಧನಾ ವಿನ್ಯಾಸವು ತೋರಿಸಬೇಕಾಗುವುದು ಅಗತ್ಯ.”

ಅನೇಕರು ಇನ್ನೂ ಅನಿಶ್ಚಯಿಗಳು

ಗೃಹ ಶಿಕ್ಷಣಕ್ಕೆ ಟೀಕಾಕಾರರಿಲ್ಲವೆಂದಲ್ಲ. ಅನೇಕ ಶಾಲಾ ಅಧಿಕಾರಿಗಳು, ಗೃಹ ಶಿಕ್ಷಣ ಪ್ರಯತ್ನದ ಮೂಲಕ ನೀಡಲ್ಪಡುತ್ತಿರುವ ಸಾಮರಸ್ಯವಿಲ್ಲದ ಗುಣಮಟ್ಟದ ವಿದ್ಯೆಯ ಬಗೆಗೆ ಚಿಂತೆಯನ್ನು ವ್ಯಕ್ತಪಡಿಸುತ್ತಾರೆ. ಟೈಮ್‌ ಪತ್ರಿಕೆ ಇದನ್ನು ಹೀಗೆ ವರ್ಣಿಸುತ್ತದೆ: “ಸದುದ್ದೇಶಗಳು ಸ್ವಯಂಚಾಲಿತವಾಗಿ ಮಜಬೂತಾದ ವಿದ್ಯೆಯಾಗಿ ಪರಿಣಮಿಸುವುದಿಲ್ಲ.”

ಆ ಕಾರಣದಿಂದ, ಹೆತ್ತವರು ತಾವು ಮಕ್ಕಳಿಗೆ ಸ್ವತಃ ಕಲಿಸುವ ಯೋಜನೆಗಳನ್ನು ಪ್ರಕಟಿಸುವಾಗ, ಕೆಲವು ಶಾಲಾ ವಲಯಗಳು ಕೆಲವು ಬಾರಿ ಅಸಹಕಾರ ಪ್ರವೃತ್ತಿಯನ್ನು, ಯಾ ತೀವ್ರ ವಿರೋಧವನ್ನು ಸಹ ತೋರಿಸುತ್ತವೆ. ಕೆಲವು ಶಾಲಾ ವಲಯಗಳು ಇತ್ತೀಚಿನ ವರ್ಷಗಳಲ್ಲಿ ಗೃಹ ಶಿಕ್ಷಣ ನಡೆಸುವವರೊಂದಿಗೆ ಹೆಚ್ಚು ಒತ್ತಾಗಿ ಕೆಲಸ ಮಾಡಲು ಪ್ರಯತ್ನಿಸಿವೆಯಾದರೂ, ಇತರ ವಿದ್ಯಾ ಅಧಿಕಾರಿಗಳು ಅನಿಶ್ಚಯಿಗಳಾಗಿದ್ದಾರೆ. ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಎಲಿಮೆಂಟರಿ ಸ್ಕೂಲ್‌ ಪ್ರಿನ್ಸಿಪಲ್ಸ್‌ ಮತ್ತು ನ್ಯಾಷನಲ್‌ ಎಡ್ಯುಕೇಷನ್‌ ಅಸೋಸಿಯೇಷನ್‌ (NEA)—ಇವೆರಡೂ ಕೆಲವು ಹೆತ್ತವರು ಉಚಿತವಾದ ಗೃಹ ಶಿಕ್ಷಣ ಕೊಡಲು ಶಕ್ತರಾಗಿರಲಿಕ್ಕಿಲ್ಲವೆಂದು ಹೆದರಿ, ಗೃಹ ಶಿಕ್ಷಣದ ವಿರುದ್ಧ ಸ್ಥಾನವನ್ನು ತೆಗೆದುಕೊಂಡಿವೆ. ಎನ್‌ಇಎಯ ಅಧಿಕೃತ ಸ್ಥಾನದ ಹೇಳಿಕೆಗನುಸಾರ, “ಗೃಹ-ಶಿಕ್ಷಣ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವ್ಯಾಪಕವಾದ ಶೈಕ್ಷಣಿಕ ಅನುಭವವನ್ನು ಕೊಡಶಕ್ತವಾಗಿರುವುದಿಲ್ಲ.”

ಗೃಹ ಶಿಕ್ಷಣ ಪಕ್ಷವಾದಿಗಳು, ಹೆತ್ತವರು ಉತ್ತಮ ಶಿಕ್ಷಕರಾಗಲು ಅವರಿಗೆ ಕಾಲೆಜ್‌ ಪರಿಚಯಪತ್ರಗಳ ಅವಶ್ಯವಿಲ್ಲವೆಂದು ಹೇಳುತ್ತಾರೆ. “ತಮ್ಮ ಮಕ್ಕಳು ಅವರ ಸ್ವಂತ ಉತ್ತರಗಳನ್ನು ಹುಡುಕುವಂತೆ ಪ್ರೋತ್ಸಾಹಿಸಲು ಹೆತ್ತವರಿಗೆ ಸಕಲ ಉತ್ತರಗಳನ್ನು ತಿಳಿಯುವ ಅವಶ್ಯವಿಲ್ಲ,” ಎಂದು ಹೋಮ್‌ ಸ್ಕೂಲಿಂಗ್‌—ಆನ್ಸರಿಂಗ್‌ ಕ್ವೆಸ್ಟ್ಯನ್ಸ್‌ ಎಂಬ ಪುಸ್ತಕ ಹೇಳುತ್ತದೆ. ಮಕ್ಕಳನ್ನು ಯೋಗ್ಯವಾದ ಮೂಲ ಪುಸ್ತಕಗಳನ್ನು ನೋಡುವಂತೆ ನಡೆಸಸಾಧ್ಯವಿದೆ. ಹೆತ್ತವರೂ ಮಕ್ಕಳೂ ಕೂಡಿ ಕಲಿಯಬಲ್ಲರು. ಮತ್ತು ಎಲ್ಲಿ ಮುಂದುವರಿದ ತರಬೇತು ಮತ್ತು ನೈಪುಣ್ಯವು ಬೇಕಾಗುತ್ತದೋ, ಅಲ್ಲಿ ಖಾಸಗಿ ಶಿಕ್ಷಕರನ್ನು ಅಂಶಾವಧಿಯಾಗಿ ಕೆಲಸಕ್ಕೆ ಹಿಡಿಯಸಾಧ್ಯವಿದೆ.

ಗೃಹ ಶಿಕ್ಷಣ ಪಡೆಯುವ ಮಕ್ಕಳು ತೀರಾ ಒಂಟಿಗರಾಗಿರುತ್ತಾರೆಂದೂ ಅವರಿಗೆ ತಮ್ಮ ಸಮಾನ ವಯಸ್ಕರೊಂದಿಗೆ ಸಾಮಾನ್ಯ ಪರಸ್ಪರಕ್ರಿಯೆಯು ತಪ್ಪುತ್ತದೆಂದೂ ಟೀಕಾಕಾರರು ವಾದಿಸುತ್ತಾರೆ. ಪುನಃ, ಪಕ್ಷವಾದಿಗಳು ಜೋರಾಗಿ ಅಲ್ಲಗಳೆಯುವ ತೀರ್ಮಾನವಿದು. “ಈ ಮಕ್ಕಳು ಸಾಮಾಜಿಕವಾಗಿ ಒಂಟಿಗರಾಗಿರುವುದಿಲ್ಲ,” ಎನ್ನುತ್ತಾರೆ, ನ್ಯಾಷನಲ್‌ ಹೋಮ್‌ ಎಡ್ಯುಕೇಷನ್‌ ರಿಸರ್ಚ್‌ ಇನ್‌ಸಿಟ್ಟ್ಯೂಟಿನ ಡೈರೆಕ್ಟರ್‌ ಬ್ರೈಅನ್‌ ರೇ. “ಗೃಹ ವಿದ್ಯಾರ್ಥಿಗಳು ಸಾಧಾರಣವಾಗಿ ಮೃಗಾಲಯಕ್ಕೋ, ಕಲಾ ವಸ್ತು ಸಂಗ್ರಹಾಲಯಕ್ಕೋ ಪ್ರವಾಸ ಕೈಕೊಳ್ಳುತ್ತಾರೆ. ಅವರು ಇತರ ಮಕ್ಕಳಂತೆಯೇ ನೆರೆಹೊರೆಯಲ್ಲಿ ಆಟವಾಡುತ್ತಾರೆ. ಅವರನ್ನು ಬೆಳಗ್ಗೆ ಎಂಟರಿಂದ ರಾತ್ರಿ ಹತ್ತರ ತನಕ ಕೋಣೆಯೊಳಗೆ ಬಂದಿಸಲಾಗುತ್ತದೆಂಬ ವಿಚಾರವು ಖಂಡಿತವಾಗಿಯೂ ಸರಿಯಲ್ಲ.”

ಅದು ನಿಮಗೊ?

“ಗೃಹ ಶಿಕ್ಷಣಕ್ಕೆ ಕೇವಲ ಧೈರ್ಯವಷ್ಟೇ ಅಲ್ಲ, ತ್ರಾಣ, ಕಲ್ಪನಾ ಶಕ್ತಿ, ಮತ್ತು ಸ್ಥಿರ ಕಸುವು ಬೇಕಾಗುತ್ತದೆ,” ಎನ್ನುತ್ತದೆ ಕ್ರಿಸ್ಟಿಯಾನಿಟಿ ಟುಡೇ. ಆದುದರಿಂದ ನೀವು ಗೃಹ ಶಿಕ್ಷಣದ ಬಗ್ಗೆ ಚಿಂತಿಸುತ್ತಿರುವುದಾದರೆ, ಅದಕ್ಕೆ ಬೇಕಾಗುವ ಬದ್ಧತೆಯ ಕುರಿತು ವಾಸ್ತವವಾಗಿ ಯೋಚಿಸಿರಿ. ಮಕ್ಕಳಿಗೆ ದೈನಂದಿನ ಶೈಕ್ಷಣಿಕ ಕಾರ್ಯಕ್ರಮವನ್ನು ಒದಗಿಸುವುದಕ್ಕೆ ಕೂಡಿಸಿ ಮನೆಗೆಲಸ ಮತ್ತು ಕುಟುಂಬದ ಇತರ ಜವಾಬ್ದಾರಿಗಳನ್ನು ವಹಿಸಲು ಶ್ರದ್ಧಾಪೂರ್ವಕವಾದ ಪ್ರಯತ್ನ ಮತ್ತು ಉತ್ತಮ ಸಂಘಟನೆ ಅಗತ್ಯವಿರುವುದು. “ನೀವು ಎಷ್ಟು ಕಠಿನವಾಗಿ ಕೆಲಸಮಾಡಬಹುದೆಂದರೆ ತೊರೆದು ಬಿಡುವ ಅನಿಸಿಕೆ ನಿಮಗೆ ಬರಬಹುದು. ಅದು ಬಹಳ ನಿರ್ಬಂಧಿಸುವಂತಹದ್ದು,” ಎಂದರು ರೇ.

ಆ ಬಳಿಕ, ನಿಮ್ಮ ಪ್ರದೇಶದ ಗೃಹ ಶಿಕ್ಷಣ ನಿಯಮಗಳನ್ನು ಕಂಡುಹಿಡಿಯಿರಿ. ಉದಾಹರಣೆಗೆ, ಅಮೆರಿಕದಲ್ಲಿ, ಗೃಹ ಶಿಕ್ಷಣವು ಎಲ್ಲ 50 ರಾಜ್ಯಗಳಲ್ಲಿ ಶಾಸನಬದ್ಧವಾದರೂ ಕಾನೂನಿನ ಮಟ್ಟಗಳಲ್ಲಿ ತುಂಬಾ ವೈವಿಧ್ಯವಿದೆ. ಕೆಲವು ಸ್ಥಳಗಳಲ್ಲಿ, ಮಗುವಿಗೆ ಮನೆಯಲ್ಲಿ ಕಲಿಸುವುದೆಂದರೆ ಸ್ಥಳಿಕ ಶಾಲಾ ಸೂಪರಿಂಟೆಂಡೆಂಟರಿಗೆ ತಿಳಿಸಿ ಒಂದು ಪುಟದ ಒಂದು ಫಾರ್ಮನ್ನು ತುಂಬಿಸುವುದು, ಅಷ್ಟೆ. ಇತರ ರಾಜ್ಯಗಳಲ್ಲಿ, ಗೃಹ ಶಿಕ್ಷಣಕ್ಕೆ ಅರ್ಹರಾಗಲು ಒಬ್ಬ ಹೆತ್ತವರು ಯೋಗ್ಯತಾಪತ್ರವಿರುವ ಅಧ್ಯಾಪಕರಾಗಿರಬೇಕು. ನೀವು ಸಕಲ ಶಾಸನಬದ್ಧ ಆವಶ್ಯಕತೆಗಳನ್ನು ಪಾಲಿಸುವಂತೆ ಸ್ಥಳಿಕ ಕಾರ್ಯನೀತಿ ಏನೆಂದು ನಿರ್ಣಯಿಸಿರಿ.

ಬಳಿಕ, ತಗಲುವ ವೆಚ್ಚವನ್ನು ಪರಿಗಣಿಸಿರಿ. ಕಲಿಸುವ ಸಲಕರಣೆಗಳನ್ನು ಕೊಳ್ಳುವ ಪ್ರಯತ್ನವು ಗೃಹ ಶಿಕ್ಷಣದ ಅತಿ ದೊಡ್ಡ ಪಂಥಾಹ್ವಾನಗಳಲ್ಲಿ ಒಂದಾಗಿದೆ—ವಿಶೇಷವಾಗಿ ನಿಮ್ಮಲ್ಲಿ ಸೀಮಿತ ಹಣವಿರುವುದಾದರೆ. “ನೀವು ಶೈಕ್ಷಣಿಕ ಸಾಮಗ್ರಿಗಳ ಸರಬರಾಯಿ ಮಾಡುವವರಿಗೆ ಸುಲಭ ಗುರಿಹಲಗೆಗಳಾಗುತ್ತೀರಿ,” ಎನ್ನುತ್ತದೆ ಎ ಸರ್ವೈವರ್ಸ್‌ ಗೈಡ್‌ ಟು ಹೋಮ್‌ ಸ್ಕೂಲಿಂಗ್‌.

ಕೆಲವು ಸರಬರಾಯಿಗಾರರು ಒಂದು ಮಿತವಾದ ಗೃಹಪಾಠ ಸಂಭಾವನೆಯನ್ನು ಕೇಳುತ್ತಾರಾದರೂ, ಬೇರೆ ಗೃಹ ಶಿಕ್ಷಣ ಕಾರ್ಯಕ್ರಮಗಳಿಗೆ ನೂರಾರು ಡಾಲರ್‌ ವೆಚ್ಚ ತಗಲುತ್ತದೆ. ಕೆಲವು ರಾಜ್ಯಗಳಲ್ಲಿ ಗೃಹ ವಿದ್ಯಾರ್ಥಿಗಳು ತಕ್ಕೊಳ್ಳಲೇಬೇಕಾದ ಪ್ರಮಾಣೀಕರಿಸಿದ ಪರೀಕೆಗ್ಷಳಿಗೆ 50 ಡಾಲರ್‌ಗಳಷ್ಟೂ ವೆಚ್ಚ ತಗಲಬಲ್ಲದು. ಹೊಸ ಪಠ್ಯಪುಸ್ತಕಗಳು, ಕೆಲಸದ ಪುಸ್ತಿಕೆಗಳು, ಮತ್ತು ಇತರ ಸಾಧನಗಳು ಪ್ರತಿ ವರ್ಷವೂ ಬೇಕಾಗುವುದರಿಂದ ಜಾಗರೂಕತೆಯಿಂದ ಯೋಜಿಸಿದ ಗೃಹ-ಶಾಲಾ ಅಂದಾಜುಪಟ್ಟಿ ಆವಶ್ಯಕ.

ಹೌದು, ಗೃಹ ಶಿಕ್ಷಣವನ್ನು ಸಫಲಗೊಳಿಸಲು ಆವಶ್ಯಕವೆಂದು ನಿಪುಣರು ಹೇಳುವ ಸಮಯ, ಪ್ರಯತ್ನ ಮತ್ತು ಹಣವನ್ನು ಖರ್ಚುಮಾಡಲು ಸಕಲ ಹೆತ್ತವರು ಬಯಸುವುದಿಲ್ಲವೆಂಬುದು ನಿಶ್ಚಯ. ಏಳು ವರ್ಷ ಪ್ರಾಯದಿಂದ ಗೃಹ ಶಿಕ್ಷಣವನ್ನು ಪ್ರಾರಂಭಿಸಿದ ಒಬ್ಬ 14 ವಯಸ್ಸಿನ ಹುಡುಗಿ ಹೇಳಿದ್ದು: “ಗೃಹ ಶಿಕ್ಷಣ ಎಲ್ಲರಿಗೂ ಆಗಿರುವುದಿಲ್ಲ. ಅದಕ್ಕೆ ಸಮರ್ಪಕವಾದ ಪರಿಸ್ಥಿತಿಗಳು, ಸಮರ್ಪಕವಾದ ಮನೋಭಾವಗಳು ಮತ್ತು ಸಮರ್ಪಕರಾದ ಹೆತ್ತವರು ಅಗತ್ಯ.” ಈ ಪಟ್ಟಿಗೆ ಆತ್ಮಶಿಸ್ತನ್ನೂ—ಹೆತ್ತವರಿಂದಲೂ ಮಗುವಿನಿಂದಲೂ—ಕೂಡಿಸಸಾಧ್ಯವಿದೆ. ಈ ಹಿಂದೆ ಉಲ್ಲೇಖಿಸಲ್ಪಟ್ಟಿರುವ ಪುರುಷನು, ಗೃಹ ಶಿಕ್ಷಣದ ಯಶಸ್ಸಿಗೆ, “ಬಲವಾದ ಬದ್ಧತೆ ಅಗತ್ಯ” ಎಂದು ಹೇಳಿದನು. ಅವನು ಮುಂದುವರಿಸಿದ್ದು: “ನಿಜವಾದ ಪಂಥಾಹ್ವಾನವು ಅದಕ್ಕೆ ಸಮಯವನ್ನು ಮೀಸಲಾಗಿಡುವುದು ಮತ್ತು ಮುಗಿಸುವಂತೆ ನೋಡುವುದೇ ಆಗಿದೆ.”

ಗೃಹ ಶಿಕ್ಷಣದ ಉತ್ಸಾಹಪೂರಿತ ಬೆಂಬಲಿಗರು ಸಹ, ಗೃಹ ಶಿಕ್ಷಣವು ಕೆಲವು ಬಾರಿ ಕಾರ್ಯಸಾಧಕವಲ್ಲದ ರೀತಿಯಲ್ಲಿ ಯಾ ಬೇಜವಾಬ್ದಾರಿಯಿಂದ ಮಾಡಲ್ಪಡುತ್ತದೆಂದು ಒಪ್ಪಿಕೊಳ್ಳುತ್ತಾರೆ. ಪ್ರತಿ ವರ್ಷ, ಕೆಲವು ಗೃಹ ಶಿಕ್ಷಣ ಪ್ರಯತ್ನಗಳು ವಿಫಲಗೊಳ್ಳುತ್ತವೆ ಮತ್ತು ಇದು ಭಾವೀ ಶೈಕ್ಷಣಿಕ ಆಹ್ವಾನಗಳನ್ನು ಎದುರಿಸಲು ಸಿದ್ಧವಾಗಿಲ್ಲದ ಮಕ್ಕಳನ್ನು ಬಿಟ್ಟುಹೋಗುತ್ತದೆ.

ಇದಲ್ಲದೆ, ಸಾರ್ವಜನಿಕ ಶಾಲೆಗಳಲ್ಲಿ ಕಂಡುಬರುವ ಅನೈತಿಕ ಪ್ರಭಾವಗಳಿಂದ ತಮ್ಮ ಮಕ್ಕಳನ್ನು ಗೃಹ ಶಿಕ್ಷಣವು ಮಾತ್ರ ಸಂರಕ್ಷಿಸುವುದೆಂದು ಯೋಚಿಸಿ ಹೆತ್ತವರು ಮೋಸಹೋಗಬಾರದು. ಲೋಕದೊಂದಿಗೆ ಸಂಪರ್ಕದಿಂದ ಪೂರ್ತಿಯಾಗಿ ರಕ್ಷಿಸಲ್ಪಡುವ ಯಾವ ಮಾರ್ಗವೂ ಇಲ್ಲ. ಮಗುವಿನ ಯೋಚನೆಯನ್ನು ರೂಪಿಸುವುದರಲ್ಲಿ ವಿಧಿವಿಹಿತ ಶಾಲಾಶಿಕ್ಷಣವಲ್ಲದೆ, ಹೆತ್ತವರ ಮಾದರಿ, ಸಹವಾಸಗಳು, ಮನೋರಂಜನೆಗಳು ಮತ್ತು ವೈಯಕ್ತಿಕ ಹಾಗೂ ಕುಟುಂಬ ಅಧ್ಯಯನಗಳು ಸೇರಿವೆ. ಈ ಎಲ್ಲ ಕ್ಷೇತ್ರಗಳಲ್ಲಿ ಶ್ರದ್ಧಾಪೂರ್ವಕವಾದ ತರಬೇತು ಇಲ್ಲದಿದ್ದರೆ, ಯಾವ ವಿದ್ಯಾ ಪದ್ಧತಿಯೂ ಕ್ರೈಸ್ತ ಮಕ್ಕಳನ್ನು ಬೆಳೆಸುವುದರಲ್ಲಿ ಯಶಸ್ಸನ್ನು ಹೊಂದದು.

ನಿಜ, ತಮ್ಮ ಮಕ್ಕಳ ಆತ್ಮಿಕ ಪ್ರಗತಿಗೆ ಗೃಹ ಶಿಕ್ಷಣ ಸಹಾಯ ಮಾಡಿದೆ ಎಂದು ಕೆಲವು ಹೆತ್ತವರಿಗೆ ಅನಿಸಿದೆ. ಆದರೆ ಸಾರ್ವಜನಿಕ ಶಾಲೆಗಳಿಗೆ ಹೋಗುವ ಅನೇಕ ಕ್ರೈಸ್ತ ಯುವಜನರೂ ಉತ್ತಮ ಆತ್ಮಿಕ ಪ್ರಗತಿಯನ್ನು ಮಾಡುತ್ತಿದ್ದಾರೆಂಬುದನ್ನು ಮರೆಯಬಾರದು. ಅನೇಕ ಸಂದರ್ಭಗಳಲ್ಲಿ ತಮ್ಮ ಮಕ್ಕಳಿಗೆ ಗುಣಮಟ್ಟದ ವಿದ್ಯೆ ದೊರೆಯುವಂತೆ ಸ್ಥಳಿಕ ಶಾಲಾ ವಲಯದೊಂದಿಗೆ ಒತ್ತಾಗಿ ಕೆಲಸಮಾಡಿದುದರಿಂದ ಹೆತ್ತವರಿಗೆ ಉತ್ತಮ ಫಲಿತಾಂಶಗಳು ದೊರಕಿವೆ.

ತಮ್ಮ ಸ್ವಂತ ಮಕ್ಕಳ ಯೋಗ್ಯ ವಿದ್ಯಾಭ್ಯಾಸ ಮತ್ತು ತರಬೇತಿಗೆ ಅಂತಿಮವಾಗಿ ಉತ್ತರವಾದಿಗಳಾದ ಹೆತ್ತವರು, ತಮ್ಮ ಕುಟುಂಬಕ್ಕೆ ಅತಿ ಪ್ರಯೋಜನಕರವಾಗಬಹುದೆಂದು ನೆನಸುವ ರೀತಿಯ ಶಾಲಾ ಶಿಕ್ಷಣವನ್ನು ಕೊಡಲು ನಿರ್ಣಯಿಸುವ ಅವಶ್ಯವಿದೆ. ಆದುದರಿಂದ ನಿಮ್ಮ ಮಕ್ಕಳಿಗೆ ಮನೆಯಲ್ಲಿ ಕಲಿಸುವ ಪಂಥಾಹ್ವಾನವನ್ನು ಎದುರಿಸಲು ನೀವು ಸಿದ್ಧರಾಗಿದ್ದೀರೋ ಎಂಬುದನ್ನು ನಿರ್ಣಯಿಸುವ ಮೊದಲು ಈ ಎಲ್ಲ ಸಂಗತಿಗಳನ್ನು ಜಾಗರೂಕತೆಯಿಂದ ತೂಗಿ ನೋಡಿರಿ.

[ಪುಟ 12 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಮಕ್ಕಳು ಶಾಲೆಯಲ್ಲಿ ಇದ್ದಾರೊ ಎಂಬಂತೆ ಅವರಿಗೊಂದು ಸಮಯ ತಖ್ತೆ ಇರಬೇಕು.”

ಸಿ. ಎಫ್‌. ಎಲ್‌., ಮಗಳಿಗೆ ಮನೆಯಲ್ಲಿ ಕಲಿಸಿದ ತಾಯಿ

[ಪುಟ 10 ರಲ್ಲಿರುವ ಚಿತ್ರಗಳು]

ನಿಮ್ಮ ಮಗುವಿಗೆ ಯಾವುದು ಅತ್ಯುತ್ತಮ—ಸಾರ್ವಜನಿಕ ಶಿಕ್ಷಣವೊ ಗೃಹ ಶಿಕ್ಷಣವೊ—ಎಂಬುದನ್ನು ನೀವು ಮಾತ್ರ ನಿರ್ಣಯಿಸಬಲ್ಲಿರಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ