ಭಾಗ 4
ವಿಜ್ಞಾನ—ಸತ್ಯಕ್ಕಾಗಿ ಮಾನವ ಕುಲದ ಮುಂದುವರಿಯುತ್ತಿರುವ ತಲಾಷು
ಕ್ರಾಂತಿಯ ಮೂಲಕ ವಿಜ್ಞಾನದ ಪುನರುಜ್ಜೀವನ
ಹದಿನೆಂಟನೆಯ ಶತಮಾನದ ಎರಡನೆಯ ಭಾಗದಲ್ಲಿ, ರಾಜಕೀಯ ಭೂದೃಶ್ಯವನ್ನು ಮೊದಲು ಅಮೆರಿಕದಲ್ಲಿ, ಆಮೇಲೆ ಫ್ರಾನ್ಸ್ನಲ್ಲಿ ಕ್ರಾಂತಿಗಳು ಬದಲಾಯಿಸಿದಾಗ, ಗಲಭೆಯು ಲೋಕವನ್ನು ತಾಕಿತು. ಅಷ್ಟರಲ್ಲಿ, ಇಂಗ್ಲೆಂಡ್ನಲ್ಲಿ ಭಿನ್ನವಾದೊಂದು ಬಗೆಯ ಕ್ರಾಂತಿಯು, ಕೈಗಾರಿಕೆಗಳ ಕ್ರಾಂತಿಯು ಆರಂಭಿಸಿತು. ಅದಕ್ಕೆ ಇನ್ನೊಂದು ಬಗೆಯ ಕ್ರಾಂತಿ, ವೈಜ್ಞಾನಿಕ ಕ್ರಾಂತಿಯೊಂದಿಗೆ ಹೆಚ್ಚನ್ನು ಮಾಡಲಿಕ್ಕಿತ್ತು.
ಕೆಲವರು ವಿಜ್ಞಾನದ ಪುನಃ ಜನ್ಮವನ್ನು—ವೈಜ್ಞಾನಿಕ ಆಲೋಚನೆಯನ್ನು ಆಳವಾಗಿ ಪ್ರಭಾವಿಸಿದ ಪುಸ್ತಕಗಳನ್ನು ಪೋಲಿಷ್ ಖಗೋಳಶಾಸ್ತ್ರಜ್ಞ ನಿಕೊಲಾಸ್ ಕೊಪರ್ನಿಕಸ್ ಮತ್ತು ಬ್ಯೆಲ್ಜಿಯನ್ ಅಂಗರಚನಾ ಶಾಸ್ತ್ರಜ್ಞನಾದ ಆ್ಯನ್ಡ್ರೀಯಸ್ ವೆಸಾಲಿಯಸ್ ಪ್ರಕಾಶಿಸಿದ 1540ರುಗಳಿಂದ ನಿಶ್ಚಯಿಸುತ್ತಾರೆ. ಇತರರು ಬದಲಾವಣೆಯನ್ನು ಅದಕ್ಕಿಂತ ಮುಂಚಿತವಾಗಿ, 1452ರಲ್ಲಿ ಲಿಯೋನಾರ್ಡೊ ಡಾ ವಿನ್ಸಿ ಹುಟ್ಟಿದ ಸಮಯಕ್ಕೆ ಗೊತ್ತು ಮಾಡುತ್ತಾರೆ. ಅನೇಕ ವೈಜ್ಞಾನಿಕ ಕಾಣಿಕೆಗಳನ್ನು ಎಡೆ ಬಿಡದೆ ಮಾಡಿದ ಒಬ್ಬ ಪ್ರಯೋಗಕಾರನಾದ ಲಿಯೋನಾರ್ಡೊ, ಕೆಲವು ಸಂದರ್ಭಗಳಲ್ಲಿ ವಿಮಾನ, ಸೈನಿಕ ಟ್ಯಾಂಕ್, ಮತ್ತು ದುಮುಕು ಕೊಡೆಗಳಂಥ ಶತಮಾನಗಳ ಅನಂತರ ಸಿದ್ಧಗೊಳಿಸಲ್ಪಟ್ಟ ಶೋಧನೆಯ ಬೀಜಗಳಂತಿರುವ ವಿಚಾರಗಳನ್ನು ವಿಕಸಿಸಿದನು.
ಆದರೆ ನಮಗೆ ವಿಜ್ಞಾನವು ಇಂದು ಗೊತ್ತಿರುವಂತೆ, “ಹದಿನೇಳನೆಯ ಮತ್ತು ಹದಿನೆಂಟನೆಯ ಶತಮಾನಗಳ ತನಕ ಪಾಶ್ಚಾತ್ಯ ಸಮಾಜದಲ್ಲಿ ಅಭಿವೃದ್ಧಿಹೊಂದುತ್ತಿರುವ ಸಂಸ್ಥೆಯೋಪಾದಿಯಲ್ಲಿ ದೃಢವಾಗಿ ಸ್ಥಾಪಿತಗೊಳ್ಳಲಿಲ್ಲ,” ಎಂಬುದಾಗಿ ಕೊಲಂಬಿಯ ವಿಶ್ವವಿದ್ಯಾನಿಲಯದ ವಿಶ್ರಾಂತ ಮಹೋಪಾಧ್ಯಾಯರಾದ ಅರ್ನೆಸ್ಟ್ ನೇಗೆಲ್ ಹೇಳುತ್ತಾರೆ. ವಿಜ್ಞಾನವು ದೃಢವಾಗಿ ಸ್ಥಾಪಿಸಲ್ಪಟ್ಟ ಮೇಲೆ, ಮಾನವ ಇತಿಹಾಸದಲ್ಲಿ ಒಂದು ಪ್ರಮುಖವಾದ ಉತ್ಕಟ ಸಮಯವನ್ನು ಮುಟ್ಟಲಾಗಿತ್ತು. “ಬೇರೆ ಯಾವುದೇ 100 ವರ್ಷದ ಅವಧಿಗೆ ಕೊಂಚವೂ ಸರಿಸಮಾನವಾಗದಿರುವ ಏಳಿಗೆ ಪಡೆಯುತ್ತಿರುವ ಸಂಶೋಧನೆಯನ್ನು . . . 1590 ಮತ್ತು 1690ರ ನಡುವೆ ಪ್ರತಿಭಾಶಾಲಿಗಳ ಒಂದು ಸಮೂಹವು ಉತ್ಪಾದಿಸಿತು,” ಎಂಬುದಾಗಿ ದ ಸೈಎನ್ಟಿಸ್ಟ್ ಎಂಬ ಪುಸ್ತಕವು ಗಮನಿಸುತ್ತದೆ.
ಖಳನಾಯಕರು ಮಾರ್ಗವನ್ನು ಕತ್ತಲಾಗಿಸುತ್ತಾರೆ
ಯಥಾರ್ಥವಾದ ವೈಜ್ಞಾನಿಕ ಅಭಿವೃದ್ಧಿಯ ದಾರಿಯಲ್ಲಿ ಖಳನಾಯಕರುಗಳ ತಪ್ಪಾದ ಸಿದ್ಧಾಂತಗಳು ನಿಂತಂತೆ, ಸುಳ್ಳುವಿಜ್ಞಾನಗಳೂ ಕೂಡ ಏಳಿಗೆಹೊಂದಿದವು. ದಹನ ತತ್ವವು ಅವುಗಳಲ್ಲಿ ಒಂದಾಗಿತ್ತು. ಗ್ರೀಕ್ನಿಂದ ಬಂದ “ಫ್ಲೊಜಿಸ್ಟನ್”ನ ಅರ್ಥವು “ದಹಿಸಿಬಿಡು” ಎಂಬುದಾಗಿದೆ. ದಾಹ್ಯ ಸಾಮಾಗ್ರಿಗಳನ್ನು ಸುಟ್ಟಾಗ ಫ್ಲೊಜಿಸ್ಟನ್ ಬಿಡುಗಡೆ ಹೊಂದುತ್ತದೆ ಎಂಬುದಾಗಿ ನಂಬಿದ ಜಾರ್ಜ್ ಅರ್ನೆಸ್ಟ್ ಸ್ಟಾಲ್ನಿಂದ, ಅದು 1702ರಲ್ಲಿ ಪರಿಚಯಪಡಿಸಲಾಗಿತ್ತು. ಅದನ್ನು ನಿಜವಾದ ಪದಾರ್ಥಕ್ಕಿಂತಲೂ ಹೆಚ್ಚಾಗಿ ಒಂದು ತತ್ವದಂತೆ ಎಂದು ಅವನು ಯೋಚಿಸಿದನು, ಆದರೆ ಅದು ನಿಜವಾದ ಪದಾರ್ಥವೆಂಬ ನಂಬಿಕೆಯು ವರ್ಷಗಳಾನಂತರ ಹುಟ್ಟಿತು. ಇಸವಿ 1770 ಮತ್ತು 1790ರ ನಡುವೆ, ಆ್ಯನ್ಟ್ವಾನ್ ಲಾರೆನ್ ಲಾವೈಸಿಯರ್ನು ಈ ಸಿದ್ಧಾಂತದಲ್ಲಿ ಅಪನಂಬಿಕೆ ಹುಟ್ಟಿಸುವ ತನಕ ಅದು ಸಾಧ್ಯವಾಗಲಿಲ್ಲ.
ಫ್ಲೊಜಿಸ್ಟನ್ ಸಿದ್ಧಾಂತವು “ಸಂಪೂರ್ಣವಾಗಿ ತಪ್ಪಾಗಿದ್ದರೂ, ಸ್ವಲ್ಪ ಸಮಯದ ವರೆಗೆ ಅನೇಕ ಸ್ವಾಭಾವಿಕ ಘಟನೆಗಳನ್ನು ವಾಸ್ತವವಾಗಿ ವಿವರಿಸಿದ ಒಂದು ಕಾರ್ಯಫಲದ ಊಹೆಯನ್ನು ಅದು ಒದಗಿಸಿತು. ವರ್ಷಗಳಲ್ಲಿಲ್ಲಾ, ವಾಸ್ತವವಾದವುಗಳೆಂದು ರುಜುವಾಗದ ಅನೇಕ ವೈಜ್ಞಾನಿಕ ಸಿದ್ಧಾಂತಗಳಲ್ಲಿ ಅದು ಒಂದಾಗಿತ್ತು,” ಎಂದು ದ ಬುಕ್ ಆಫ್ ಪಾಪ್ಯುಲರ್ ಸೈಎನ್ಸ್ ಒಪ್ಪಿಕೊಳ್ಳುತ್ತದೆ.
ರಸವಿದ್ಯೆ ಇನ್ನೊಂದು ಖಳನಾಯಕವಾಗಿತ್ತು. “ಕ್ರೈಸ್ತ ಶಕದ ಮೊದಲೇ ಹುಟ್ಟಿ, ಕೀಳುಲೋಹಗಳನ್ನು ಚಿನ್ನಕ್ಕೆ ಪರಿವರ್ತಿಸಲು, ಮನುಷ್ಯನ ಆಯುಷ್ಯವನ್ನು ವರ್ಧಿಸಲು, ಮತ್ತು ಅಮರತ್ವದ ರಹಸ್ಯವನ್ನು ಹಲವು ಬಗೆಯಲ್ಲಿ ಹುಡುಕುವ, ತತ್ವಜ್ಞಾನ, ರಹಸ್ಯವಾದ, ಮತ್ತು ರಸಾಯನಿಕ ತಂತ್ರಜ್ಞಾನದ ಒಂದು ಸಂಮಿಶ್ರಣ,” ಎಂಬುದಾಗಿ ಹರಪ್ಸ್ ಇಲಸ್ಟ್ರೇಟೆಡ್ ಡಿಕಷ್ನರಿ ಆಫ್ ಸೈಎನ್ಸ್ ಅದನ್ನು ಅರ್ಥವಿವರಿಸುತ್ತದೆ. ನಿರಾಕರಿಸಲ್ಪಡುವ ಮುಂಚೆ, ರಸವಿದ್ಯೆಯು ಆಧುನಿಕ ರಸಾಯನಶಾಸ್ತ್ರಕ್ಕಾಗಿ ಅಸ್ತಿವಾರವನ್ನು ಹಾಕುವುದರಲ್ಲಿ ಸಹಾಯಮಾಡಿತು, ಇದು 17ನೆಯ ಶತಮಾನದ ಕೊನೆಯೊಳಗಾಗಿ ಸಂಪೂರ್ಣಗೊಂಡ ಪರಿವರ್ತನೆಯಾಗಿತ್ತು.
ಖಳನಾಯಕರುಗಳಾಗಿದ್ದರೂ, ಫ್ಲೊಜಿಸ್ಟನ್ ಸಿದ್ಧಾಂತಕ್ಕೆ ಮತ್ತು ರಸವಿದ್ಯೆಗೆ ಕೆಲವು ಬೆಲೆಯುಳ್ಳ ವಿಷಯಗಳಿದ್ದವು. ಧಾರ್ಮಿಕ ಬೆನ್ನಟ್ಟುವಿಕೆಯಿಂದಾಗಿ ಅವೈಜ್ಞಾನಿಕವಾದ ಮನೋಭಾವಗಳನ್ನು ಪೋಷಿಸಿದ ಮಾನವ ಖಳನಾಯಕರುಗಳ ವಿಷಯದಲ್ಲಿ ಹಾಗೆ ಇರಲಿಲ್ಲ. ವಿಜ್ಞಾನ ಮತ್ತು ದೇವತಾ ಶಾಸ್ತ್ರದ ನಡುವೆ ಇರುವ ಸ್ಪರ್ಧೆಯು—ಅ ವಿಶ್ವದ ಕುರಿತು ಇರುವ ಪ್ರಶ್ನೆಗಳಿಗೆ ಏಕಮಾತ್ರ ಅಧಿಕಾರಿಯು ತಾನೆಂದು ಎರಡೂ ಹೇಳಿಕೊಳ್ಳುವುದು ಅನೇಕ ಬಾರಿ ನೇರವಾದ ಅಭಿಮುಖತೆಗೆ ನಡೆಸಿದೆ.
ಉದಾಹರಣೆಗೆ, ಸಾ.ಶ. ಎರಡನೆಯ ಶತಮಾನದಲ್ಲಿ, ಬಹುಪ್ರಸಿದ್ಧನಾದ ಖಗೋಳಶಾಸ್ತ್ರಜ್ಞ ಟಾಲೆಮಿಯು, ಭೂಕೇಂದ್ರೀಯ ಸಿದ್ಧಾಂತವನ್ನು, ಅಂದರೆ ಗ್ರಹಗಳು ಒಂದು ವೃತ್ತದಲ್ಲಿ ಸುತ್ತುತ್ತಿರುವಾಗ, ಉಪರಿ ವೃತ್ತವೆಂದು ಕರೆಯಲ್ಪಡುವ ವೃತ್ತದ ಕೇಂದ್ರವು ಕೂಡ ಇನ್ನೊಂದು ವೃತ್ತದ ಆವರಣರೇಖೆಯ ಮೇಲೆ ಸುತ್ತುತ್ತದೆ ಎಂಬುದಾಗಿ ಅರ್ಥಕೊಡುವ ಸಿದ್ಧಾಂತವನ್ನು ರಚಿಸಿದನು. ಅದು ಅತ್ಯುತ್ತಮವಾದ ಗಣಿತಶಾಸ್ತ್ರದ ಕಲ್ಪನಾ ಚಾತುರ್ಯವಾಗಿತ್ತು ಮತ್ತು ಆಕಾಶದಲ್ಲಿ ಸೂರ್ಯ, ಚಂದ್ರ, ಗ್ರಹಗಳು, ಮತ್ತು ನಕ್ಷತ್ರಗಳ ವಾಸ್ತವವಾದ ಚಲನೆಯ ಕುರಿತು, 16ನೆಯ ಶತಮಾನದ ತನಕ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ವಿವರಣೆಯಾಗಿತ್ತು.
ಕೊಪರ್ನಿಕಸ್ (1473-1543) ಪ್ರತಿಯಾಗಿ ಒಂದು ಸಿದ್ಧಾಂತವನ್ನು ವಿಕಸಿಸಿದನು. ಭೂಮಿಯನ್ನು ಸೇರಿಸಿ ಎಲ್ಲಾ ಗ್ರಹಗಳು ಸೂರ್ಯನ ಸುತ್ತಲೂ ಸುತ್ತಿದರೂ, ಸೂರ್ಯನು ನಿಶ್ಚಲವಾಗಿರುತ್ತಾನೆ ಎಂಬುದಾಗಿ ಅವನು ನಂಬಿದನು. ಈ ವಿಚಾರವು—ಇನ್ನು ಮುಂದೆ ಚಲಿಸುವ ಒಂದು ಭೂಮಿ ವಿಶ್ವದ ಕೇಂದ್ರವಾಗಿರುವುದಿಲ್ಲ—ಸತ್ಯವಾಗಿದ್ದರೆ, ಬಹು ದೂರ ಮುಟ್ಟುವ ಪರಿಣಾಮಗಳನ್ನು ಹೊಂದುತ್ತಿತ್ತು. ನೂರಕ್ಕಿಂತ ಕಡಿಮೆ ವರ್ಷಗಳಾನಂತರ, ಸೂರ್ಯನ ಸುತ್ತಲೂ ಸುತ್ತುತ್ತಿರುವ ಭೂಮಿಯ ಕುರಿತಾದ ಕೊಪರ್ನಿಕಸನ ಊಹೆಯು ನಿಜವಾಗಿಯೂ ಸತ್ಯವೆಂದು ಅವನಿಗೆ ಮನವರಿಕೆ ಮಾಡಿದ ನಿರೀಕ್ಷಣಗಳನ್ನು ದೂರದರ್ಶಕಗಳ ಮುಖಾಂತರ ಇಟ್ಯಾಲಿಯನ್ ಖಗೋಳಶಾಸ್ತ್ರಜ್ಞನಾದ ಗ್ಯಾಲಿಲಿಯೊ ಗ್ಯಾಲಿಲಿ ಮಾಡಿದನು. ಆದರೆ ಕ್ಯಾತೊಲಿಕ್ ಚರ್ಚು ಗ್ಯಾಲಿಲಿಯೊವಿನ ದೃಷ್ಟಿಕೋನಗಳನ್ನು ಅಸಂಪ್ರದಾಯವೆಂದು ನಿರಾಕರಿಸಿ ಅವನ ಸಿದ್ಧಾಂತವನ್ನು ಹಿಂದೆತೆಗೆದುಕೊಳ್ಳುವಂತೆ ಅವನನ್ನು ಬಲಾತ್ಕರಿಸಿತು.
ಚರ್ಚಿನ ದೇವತಾ ಶಾಸ್ತ್ರಜ್ಞರು ವೈಜ್ಞಾನಿಕ ಸತ್ಯವನ್ನು ಅಲ್ಲಗಳೆಯುವಂತೆ ಧಾರ್ಮಿಕ ತಪ್ಪುಗಳು ಮಾಡಿವೆ. ಬಹುಮಟ್ಟಿಗೆ 360 ವರ್ಷಗಳ ತನಕ ಗ್ಯಾಲಿಲಿಯೊವಿನ ಮೇಲೆ ಇರುವ ಅಪವಾದಗಳನ್ನು ಚರ್ಚು ತೆಗೆಯಲಿಲ್ಲ. ಗ್ಯಾಲಿಲಿಯೊವಿನ ವಿರುದ್ಧವಿರುವ ಅಪಾದನೆಯಲ್ಲಿ, “ನ್ಯಾಯತೀರ್ಪಿನ ಕಾಲ್ಪನಿಕ ತಪ್ಪು” ಎಂಬುದಾಗಿ, ಎಲ್ಒಸರ್ವೆಟೊರ್ ರೊಮಾನೊ, ನವಂಬರ 4, 1992ರ ಅದರ ವಾರದ ಮುದ್ರಣದಲ್ಲಿ ಅಂಗೀಕರಿಸಿತು.
ಖಳನಾಯಕರುಗಳು ಇನ್ನೂ ಇದ್ದಾರೆ
ಅದೇ ರೀತಿಯಲ್ಲಿ, ಈ 20ನೆಯ ಶತಮಾನದಲ್ಲಿ, ಕ್ರೈಸ್ತಪ್ರಪಂಚದ ಧರ್ಮಗಳು ಸತ್ಯಕ್ಕಾಗಿ ಸದೃಶ್ಯವಾದ ಅಗೌರವವನ್ನು ಪ್ರದರ್ಶಿಸುತ್ತವೆ. ವೈಜ್ಞಾನಿಕ ಮತ್ತು ಧಾರ್ಮಿಕ ಸತ್ಯದ ಎದುರಿನಲ್ಲಿಯೂ ರುಜುವಾಗದ ವೈಜ್ಞಾನಿಕ ಸಿದ್ಧಾಂತಗಳಿಗೆ ಪ್ರಾಧಾನ್ಯತೆ ಕೊಡುವ ಮೂಲಕ ಅವರು ಇದನ್ನು ಮಾಡುತ್ತಾರೆ. ಮೂಲಭೂತವಾಗಿ ಗಂಭೀರವಾದ ರೀತಿಯಲ್ಲಿ ಕಳಂಕಿತವಾಗಿರುವ ವೈಜ್ಞಾನಿಕ “ಜ್ಞಾನ” ಮತ್ತು ಸುಳ್ಳು ಧಾರ್ಮಿಕ ಬೋಧನೆಗಳ ಅನುಚಿತ ಸಂತಾನ—ರುಜುವಾಗದ ವಿಕಾಸವಾದದ ಸಿದ್ಧಾಂತವು, ಅತ್ಯುತ್ತಮ ಉದಾಹರಣೆಯಾಗಿದೆ.a
ನವಂಬರ 24, 1859ರಂದು, ಚಾರ್ಲ್ಸ್ ಡಾರ್ವಿನ್ ಆನ್ ದಿ ಒರಿಜಿನ್ ಆಫ್ ಸ್ಪೀಸೀಸ್ ಬೈ ಮೀನ್ಸ್ ಆಫ್ ನ್ಯಾಚುರಲ್ ಸಿಲೆಕ್ಷನ್ ಎಂಬ ತನ್ನ ಪುಸ್ತಕವನ್ನು ಪ್ರಕಾಶಿಸಿದನು. ಆದರೆ ವಿಕಾಸವಾದದ ವಿಚಾರವು ನಿಜವಾಗಿಯೂ ಕ್ರೈಸ್ತ ಪೂರ್ವ ಸಮಯಗಳಿಂದ ಬಂದಿದೆ. ಉದಾಹರಣೆಗೆ, ಗ್ರೀಕ್ ತತ್ವಜ್ಞಾನಿಯಾದ ಆ್ಯರಿಸ್ಟಾಟಲನು, ಕೆಳಮಟ್ಟದ ಪ್ರಾಣಿ ಜೀವದಿಂದ ವಿಕಾಸ ಹೊಂದುವ ರೇಖೆಯ ಮೇಲ್ಭಾಗದಲ್ಲಿ ಮನುಷ್ಯನನ್ನು ಚಿತ್ರಿಸಿದನು. ಮೊದಲಿಗೆ, ಪಾದ್ರಿಗಳು ಡಾರ್ವಿನ್ನ ಸಿದ್ಧಾಂತವನ್ನು ನಿರಾಕರಿಸಿದರು, ಆದರೆ ದ ಬುಕ್ ಆಫ್ ಪಾಪ್ಯುಲರ್ ಸೈಎನ್ಸ್ ಗಮನಿಸುವುದು: “ವಿಕಾಸವಾದವು [ತದನಂತರ] ಒಂದು ವೈಜ್ಞಾನಿಕ ಸಿದ್ಧಾಂತಕ್ಕಿಂತ ಅಧಿಕವಾಗಿ ಪರಿಣಮಿಸಿತು . . . ಅದೊಂದು ಯುದ್ಧದ ಕರೆ ಮತ್ತು ಒಂದು ತತ್ವಜ್ಞಾನವೂ ಕೂಡ ಆಯಿತು.” ಜೀವಿಸಲು ಯೋಗ್ಯತೆಯುಳ್ಳದ್ದು ಬದುಕಿ ಉಳಿಯುವುದು ಎಂಬ ವಿಚಾರವು, ಜೀವನದಲ್ಲಿ ಅತಿ ಉನ್ನತ ಸ್ಥಾನಕ್ಕೆ ಹೋಗಲು ಪ್ರಯಾಸಪಡುವ ಜನರ ಮನಸ್ಸಿಗೆ ಹಿಡಿಸಿತು.
ಪುರೋಹಿತ ತಡೆಯು ಬೇಗನೆ ಕ್ಷೀಣವಾಯಿತು. “ಡಾರ್ವಿನ್ನ ವಿಕಾಸವಾದದ ಸಿದ್ಧಾಂತವು ಕೇವಲ ಅನುಮೋದನೆಯನ್ನು ಅಲ್ಲ ಆದರೆ ಗಟ್ಟಿಯಾಗಿ ಘೋಷಿಸುವ ಪ್ರಶಂಸೆಯನ್ನೂ ಸಂಪಾದಿಸಿತು,” ಮತ್ತು “1883ರಲ್ಲಿ ಅವನ ಮರಣದ ಸಮಯದೊಳಗಾಗಿ, ಅತ್ಯಂತ ಆಲೋಚನಾಸಕ್ತ ಮತ್ತು ತಿಳಿಮಾತಿನ ಪುರೋಹಿತ ವರ್ಗವು, ಶಾಸ್ತ್ರದ ಜ್ಞಾನೋದಯದ ತಿಳಿವಳಿಕೆಯೊಂದಿಗೆ ವಿಕಾಸವಾದವು ಸಂಪೂರ್ಣವಾಗಿ ಸಮರಸವಾಗಿದೆ ಎಂಬ ತೀರ್ಮಾನಕ್ಕೆ ಬಂದಿತ್ತು,” ಎಂದು ದ ಎನ್ಸೈಕ್ಲೊಪಿಡೀಯ ಆಫ್ ರಿಲಿಜಯನ್ ಹೇಳುತ್ತದೆ.
ಇದು ದ ಬುಕ್ ಆಫ್ ಪಾಪ್ಯುಲರ್ ಸೈಎನ್ಸ್ ಎಂಬ ಪುಸ್ತಕದ ಮೂಲಕ ಕೆಳಗೆ ಸೂಚಿಸಲಾದ ಒಪ್ಪಿಗೆಯ ಎದುರಿನಲ್ಲಿಯೂ: “ಡಾರ್ವಿನ್ನ ಮೂಲಭೂತ ಸಿದ್ಧಾಂತದಲ್ಲಿ ಹೆಚ್ಚು ಗಮನ ಸೆಳೆಯುವ ತಪ್ಪುಗಳು ಮತ್ತು ಅಂತರಗಳು ಇದ್ದವೆಂದು ಜೈವಿಕ ವಿಕಾಸವಾದದ ತತ್ವವನ್ನು ಅತಿ ದೃಢವಾಗಿ ಬೆಂಬಲಿಸುವವರೂ ಕೂಡ ಒಪ್ಪಿಕೊಳ್ಳಬೇಕಿತ್ತು.” “ಡಾರ್ವಿನ್ನ ಮೂಲಭೂತ ಸಿದ್ಧಾಂತದಲ್ಲಿ ಹೆಚ್ಚನ್ನು ಮತ್ತೆ ಹೊಸದಾಗಿ ಮಾಡಲಾಯಿತು ಅಥವಾ ತ್ಯಜಿಸಲಾಯಿತು” ಎಂಬುದಾಗಿ ಹೇಳುವುದಾದರೂ, ವಿಕಾಸವಾದದ “ಪ್ರಭಾವವು ಬಹುಮಟ್ಟಿಗೆ ಮಾನವ ಚಟುವಟಿಕೆಯ ಎಲ್ಲಾ ಕ್ಷೇತ್ರಗಳಲ್ಲಿ ಬಹಳ ಅಧಿಕವಾಗಿದೆ. ಸಿದ್ಧಾಂತದ ಕಾರಣದಿಂದಾಗಿ ಇತಿಹಾಸ, ಭೂಸಂಶೋಧನಾ ಶಾಸ್ತ್ರ ಮತ್ತು ಮಾನವ ಕುಲ ಶಾಸ್ತ್ರಗಳು ಆಳವಾದ ಬದಲಾವಣೆಗಳನ್ನು ಹೊಂದಿವೆ,” ಎಂದು ಪುಸ್ತಕವು ಹೇಳುತ್ತದೆ.
ಇಂದು, ಅನೇಕ ಆಲೋಚನಾಸಕ್ತ ವಿಜ್ಞಾನಿಗಳು ವಿಕಾಸವಾದದ ಸಿದ್ಧಾಂತವನ್ನು ಗಂಭೀರವಾಗಿ ಪ್ರಶ್ನಿಸುತ್ತಾರೆ. ಕ್ಯಾಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ತೀಯೊರಿಟಿಕಲ್ ಅಸ್ಟ್ರಾನೊಮಿಯ ಸ್ಥಾಪಕರು ಮತ್ತು ಅಮೆರಿಕನ್ ನ್ಯಾಷನಲ್ ಅಕ್ಯಾಡಮಿ ಆಫ್ ಸೈಎನ್ಸ್ಸ್ನ ಜೊತೆ ಸದಸ್ಯರೂ ಆದ ಸರ್ ಫ್ರೆಡ್ ಹೊಯಲ್, ಸುಮಾರು ಹತ್ತು ವರ್ಷಗಳ ಹಿಂದೆ ಹೀಗೆ ಬರೆದರು: “ಕಾರ್ಯಮಾಡದೆ ಇರುವಂತೆ ಕಾಣುವ ವಿಕಾಸವಾದದ ಸಿದ್ಧಾಂತವು ಇಷ್ಟು ವ್ಯಾಪಕವಾಗಿ ನಂಬುವಂತೆ ಆಯಿತು ಎಂಬ ವಿಚಾರವನ್ನು ಭವಿಷ್ಯದ ವೈಜ್ಞಾನಿಕ ಇತಿಹಾಸಗಾರರು ಒಂದು ರಹಸ್ಯವೆಂದು ಕಾಣುವರು ಎಂಬ ವಿಷಯದಲ್ಲಿ ನನಗೆ ಸಂಶಯವೇ ಇಲ್ಲ.”
ಮಾನವ ಅಸ್ತಿತ್ವದ ಆಧಾರವನ್ನೇ ಹೊಡೆಯುತ್ತಾ, ವಿಕಾಸವಾದವು ಸೃಷ್ಟಿಕರ್ತನಿಗೆ ಸಲ್ಲತಕ್ಕ ವಿಷಯದಿಂದ ಆತನನ್ನು ವಂಚಿಸುತ್ತದೆ. ಅದು ವೈಜ್ಞಾನಿಕವಾಗಿದೆ ಎಂಬ ಅದರ ವಾದವನ್ನು ಕೂಡ ಸುಳ್ಳಾಗಿಸುತ್ತದೆ ಮತ್ತು ವೈಜ್ಞಾನಿಕ ಸತ್ಯಕ್ಕಾಗಿ ಮಾನವಕುಲದ ಮುಂದುವರಿಯುತ್ತಿರುವ ತಲಾಷಿಗೆ ಯಾವ ಸಹಾಯವನ್ನು ಮಾಡುವುದಿಲ್ಲ. ಕಮ್ಯೂನಿಸಂನ ಏರಿಕೆಗೆ ಬೆಂಬಲ ಕೊಡಲು, ವಿಕಾಸವಾದ ಮತ್ತು ‘ಜೀವಿಸಲು ಯೋಗ್ಯತೆಯುಳ್ಳದ್ದು ಬದುಕಿ ಉಳಿಯುವುದು’ ಎಂಬ ಸಿದ್ಧಾಂತವನ್ನು ಸ್ವೀಕರಿಸಲು ಕಾರ್ಲ್ ಮಾರ್ಕ್ಸ್ ಹರ್ಷಿತನಾಗಿದ್ದನು. ಆದರೆ ವಿಕಾಸವಾದವು ಅತಿ ನೀಚವಾದ ಬಗೆಯ ಖಳನಾಯಕವಾಗಿದೆ.
ಯಾರು ಬಲಿಪಶುಗಳಾಗಿದ್ದಾರೆ?
ಸುಳ್ಳುವೈಜ್ಞಾನಿಕ ಸಿದ್ಧಾಂತಗಳನ್ನು ನಂಬುವಂತೆ ನಡೆಸಲ್ಪಟ್ಟ ಯಾವುದೇ ವ್ಯಕ್ತಿ ಬಲಿಪಶುವಾಗುತ್ತಾನೆ. ಆದರೆ ವೈಜ್ಞಾನಿಕ ಸತ್ಯಗಳನ್ನು ನಂಬುವುದು ಕೂಡ ಅಪಾಯವನ್ನು ಒಡ್ಡುತ್ತದೆ. ವೈಜ್ಞಾನಿಕ ಕ್ರಾಂತಿಯಿಂದ ಫಲಿಸಿದ ಪ್ರೇಕ್ಷಣೀಯ ವೈಜ್ಞಾನಿಕ ಅಭಿವೃದ್ಧಿಗಳು, ಈಗ ಯಾವುದೂ ಅಸಾಧ್ಯವಲ್ಲ ಎಂಬ ವಿಷಯವನ್ನು ನಂಬುವಂತೆ ಅನೇಕರನ್ನು ಮೋಸಗೊಳಿಸಿವೆ.
ಸುಳ್ಳು ಧರ್ಮವು ಒಮ್ಮೆ ಪೋಷಿಸಿದ ಅವೈಜ್ಞಾನಿಕ ಮನೋಭಾವವನ್ನು ವೈಜ್ಞಾನಿಕ ಪ್ರಗತಿಯು ಸವೆಯಿಸಲು ಮುಂದುವರಿದಂತೆ, ಈ ನಂಬಿಕೆಯು ತೀಕ್ಷೈಗೊಂಡಿತು. ಅದು ಹಣಕಾಸಿನ ಪ್ರತಿಫಲವೇ ಆಗಿರಲಿ ಅಥವಾ ರಾಜಕೀಯ ಶಕ್ತಿಯ ಬಲಪಡಿಸುವಿಕೆಯೇ ಆಗಿರಲಿ, ತಮ್ಮ ಗುರಿಗಳನ್ನು ಸಾಧಿಸುವುದರಲ್ಲಿ ವಿಜ್ಞಾನವು ಒಂದು ಶಕ್ತಿಶಾಲಿಯಾದ ಸಾಧನವೆಂದು ವಾಣಿಜ್ಯ ಮತ್ತು ರಾಜಕೀಯ ಗುರುತಿಸಲು ಆರಂಭಿಸಿದವು.
ಸ್ಪಷ್ಟವಾಗಿಗಿ ಹೇಳುವುದಾದರೆ, ವೈಜ್ಞಾನಿಕತೆಗೆ ಜನ್ಮ ಕೊಡುತ್ತಾ, ವಿಜ್ಞಾನವು ನಿಧಾನವಾಗಿ ಒಂದು ದೇವರಂತೆ ವಿಕಾಸಹೊಂದುತ್ತಿತ್ತು. ವೆಬ್ಸ್ಟರ್ಸ್ ನೈನ್ತ್ ನ್ಯೂ ಕೊಲೆಜಿಯೆಟ್ ಡಿಕ್ಷನರಿ ಇದನ್ನು “ಪರಿಶೀಲನೆಯ ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸಲಾದ ಸ್ವಾಭಾವಿಕ ವಿಜ್ಞಾನದ ವಿಧಾನಗಳ ಸಫಲತ್ವದಲ್ಲಿ ಅತಿಶಯವಾದ ಭರವಸೆ,” ಎಂಬುದಾಗಿ ಅರ್ಥ ನಿರೂಪಿಸುತ್ತದೆ.
ಹತ್ತೊಂಬತ್ತನೆಯ ಶತಮಾನವು ಅಂತ್ಯಕ್ಕೆ ಬಂದಂತೆ, 20ನೆಯ ಶತಮಾನವು ಏನನ್ನು ತರುವುದೆಂದು ಜನರು ಬೆರಗುಗೊಂಡರು. “ಭೂಮಿಯ ಮೇಲೆ ಸಾಕ್ಷಾತ್ತಾದ ಸ್ವರ್ಗವನ್ನು” ತಯಾರಿಸುವ ಸಾಮರ್ಥ್ಯ ಅದಕ್ಕೆ ಇದೆ ಎಂಬುದಾಗಿ ಅನೇಕರು ಯೋಚಿಸಿದಂತೆ ವಿಜ್ಞಾನವು ಅದನ್ನು ಸ್ಥಾಪಿಸಲಿಕ್ಕಿತ್ತೊ? ಅಥವಾ ಸೇರಿಸಲಾದ ಬಲಿಪಶುಗಳ ಅವ್ಯವಸ್ಥೆಯ ದೇಹಗಳೊಂದಿಗೆ ಕ್ರಾಂತಿಯ ರಣರಂಗವನ್ನು ಕೆದರಲು ಅದರ ಖಳನಾಯಕರುಗಳು ಮುಂದುವರಿದರೊ? ನಮ್ಮ ಮುಂದಿನ ಸಂಚಿಕೆಯಲ್ಲಿ ಕಾಣಿಸಿಕೊಳ್ಳುವ, “ಕಾರ್ಯಫಲದ 20ನೆಯ ಶತಮಾನದ ‘ಮಂತ್ರವಿದ್ಯೆ,’” ಅದನ್ನು ಉತ್ತರಿಸುವುದು. (g93 5/22)
[ಪುಟ 24 ರಲ್ಲಿರುವ ಚೌಕ]
ಪ್ಲಗ್ ಒಂದರ ತೆಗೆದುಹಾಕುವಿಕೆಯೊಂದಿಗೆ
ಹತ್ತೊಂಬತ್ತನೆಯ ಶತಮಾನದ ಆದಿಭಾಗದಷ್ಟು ಇತ್ತೀಚೆಗೆ, ವಿದ್ಯುಚ್ಛಕ್ತಿಯನ್ನು ಕಡಿಮೆ ಪ್ರಾಯೋಗಿಕವಾದ ಉಪಯೋಗದೊಂದಿಗೆ ಆಸಕ್ತಿಕರವಾದ ಒಂದು ವಿಷಯವೆಂದು ಪರಿಗಣಿಸಲಾಗುತ್ತಿತ್ತು. ಎಚ್. ಸಿ. ಆರ್ಸ್ಟೇಡ್ (1777-1851), ಎಮ್. ಫ್ಯಾರಡೆ (1791-1867), ಎ. ಆ್ಯಮ್ಪೀರ್ (1775-1836), ಮತ್ತು ಬಿ. ಫ್ರ್ಯಾಂಕಿನ್ಲ್ (1706-90) ಇವರನ್ನು ಸೇರಿಸಿ, ವಿಭಿನ್ನ ದೇಶಗಳು ಮತ್ತು ಹಲವಾರು ಬಗೆಯ ಹಿನ್ನೆಲೆಯಿಂದ ಬಂದ ಪುರುಷರು, ಅದನ್ನು ಬೇರೆ ರೀತಿಯಲ್ಲಿ ರುಜುಪಡಿಸಿದ ಪ್ರಾಮುಖ್ಯ ಆವಿಷ್ಕಾರಗಳನ್ನು ಮಾಡಿ, ವಿದ್ಯುಚ್ಛಕ್ತಿಯ ಇಂದಿನ ಲೋಕದ—ವಿದ್ಯುಚ್ಛಕ್ತಿ ಇಲ್ಲದೆ ಕಾರ್ಯಮಾಡಲು ಸಾಧ್ಯವಾಗದ ಒಂದು ಲೋಕದ—ಅಸ್ತಿವಾರವನ್ನು ಹಾಕಿದರು.
[ಅಧ್ಯಯನ ಪ್ರಶ್ನೆಗಳು]
a ಆದಿಕಾಂಡದಲ್ಲಿ ತಿಳಿಸಲಾದ ಸೃಷ್ಟಿಯ “ವಾರ”ವು ಅಕ್ಷರಾರ್ಥಕವಾದ 24 ತಾಸಿನ ದಿನಗಳ ಶ್ರೇಣಿ ಎಂಬ ಪ್ರಾಮಾಣ್ಯವಾದದ ವಿಚಾರವು ಇಂಥ ಬೋಧನೆಗಳಲ್ಲಿ ಒಂದಾಗಿದೆ. ಅವು ನಿಜತ್ವದಲ್ಲಿ ಅನೇಕ ಸಾವಿರಾರು ವರ್ಷಗಳಿಗೆ ಸಮನಾಗುವ ಅವಧಿಗಳೆಂದು ಬೈಬಲ್ ಸೂಚಿಸುತ್ತದೆ.
[ಪುಟ 25 ರಲ್ಲಿರುವ ಚಿತ್ರಗಳು]
ನಿಕೋಲಸ್ ಕೊಪರ್ನಿಕಸ್
ಗ್ಯಾಲಿಲಿಯೋ ಗ್ಯಾಲಿಲಿ
[ಕೃಪೆ]
Photos taken from Giordano Bruno and Galilei (German edition)