ಯುವ ಜನರು ಪ್ರಶ್ನಿಸುವುದು . . .
ನಾನೊಂದು ಅಂಗವಿಕಲತೆಯಿಂದ ಕಷ್ಟವನ್ನು ಯಾಕೆ ಅನುಭವಿಸಬೇಕು?
“ನಾನು ಐದು ವರ್ಷ ಪ್ರಾಯದವಳಾಗಿದ್ದೆ,” ಎಂದು ಬೆಕಿ ಜ್ಞಾಪಿಸಿಕೊಳ್ಳುತ್ತಾಳೆ. “ಗೆಳೆಯನೊಬ್ಬನು ಅವನ ಸೈಕಲಿನ ಮೇಲೆ ನನಗೊಂದು ಸವಾರಿಯನ್ನು ಕೊಡುತ್ತಿರುವಾಗ, ಮೂಲೆಯಿಂದ ಒಂದು ಕಾರು ಬಂದು ನಮ್ಮನ್ನು ಹೊಡೆಯಿತು.” ಪರಿಣಾಮ? “ನಾನು ಒಂದು ಕಾಲನ್ನು ಮುರಿದುಕೊಂಡೆನು ಮತ್ತು ತಲೆಯ ಮೇಲೆ ವ್ಯಾಪಕವಾದ ಗಾಯಗಳನ್ನು ಅನುಭವಿಸಿದೆನು. ನಾನು ಜೀವಿಸುವೆನೆಂದು ವೈದ್ಯರು ನಿರೀಕ್ಷಿಸಲಿಲ್ಲ.” ಹಾಗಿದ್ದರೂ ಬೆಕಿ ಜೀವಿಸಿದಳು, ಮತ್ತು ಇಂದು ಅವಳು 16 ವರ್ಷ ಪ್ರಾಯದ ಹಸನ್ಮುಖಳಾಗಿದ್ದಾಳೆ. ಆದರೂ, ಆ ಆಕಸ್ಮಿಕ ಘಟನೆಯು ತನ್ನ ಗುರುತನ್ನು ಬಿಟ್ಟು ಹೋಯಿತು. “ಅದು ನನ್ನನ್ನು ಬಹಳ ದುರ್ಬಲವಾಗಿ ಮಾಡಿತು,” ಅವಳನ್ನುತ್ತಾಳೆ.
ಸಿಪಿ (ಸೆರಿಬ್ರಲ್ ಪ್ಯಾಲ್ಸಿ) ಎಂಬುದಾಗಿ ಕರೆಯಲ್ಪಡುವ ಒಂದು ರೋಗದ ಕಾರಣವಾಗಿ, ಕ್ರ್ಯಾಗ್ ಎಂಬ ಹೆಸರುಳ್ಳ ಒಬ್ಬ ಯುವಕನು ಕೂಡ ಅಂಗವಿಕಲನಾಗಿದ್ದಾನೆ. “ಸಿಪಿ ನನ್ನ ಮಾಂಸಖಂಡಗಳನ್ನು ಮತ್ತು ನರವ್ಯೂಹವನ್ನು ಪ್ರಭಾವಿಸುತ್ತದೆ,” ಎಂದು ಕ್ರ್ಯಾಗ್ ವಿವರಿಸುತ್ತಾನೆ. “ನನ್ನ ಮಿದುಳು ಅವುಗಳಿಗೆ ಕಳುಹಿಸುವ ಸಂದೇಶಗಳಿಗೆ ನನ್ನ ಮಾಂಸಖಂಡಗಳು ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ಆದುದರಿಂದ, ನಡೆಯಲು, ಮಾತಾಡಲು, ಮತ್ತು ನನ್ನ ಸಮತೂಕವನ್ನು ಕಾಪಾಡಿಕೊಳ್ಳಲು ನನಗೆ ತೊಂದರೆಯಾಗುತ್ತದೆ. ನಾನು ಆ ಎಲ್ಲಾ ವಿಷಯಗಳನ್ನು ಮಾಡ ಬಲ್ಲೆನು ಆದರೆ ಬಹಳ ಸುಗಮವಾಗಿ ಅಲ್ಲ.”
ಈ ರೀತಿ ಯಾವುದಾದರೊಂದು ಶಾರೀರಿಕ ಅಂಗವಿಕಲತೆಯು ನಿಮಗಿದೆಯೊ? ಇಸವಿ 2000ದೊಳಗೆ, ಲೋಕವ್ಯಾಪಕವಾಗಿ ಅಂಗವಿಕಲತೆಗಳಿರುವ ಯುವ ಜನರ ಸಂಖ್ಯೆಯು 5.9 ಕೋಟಿಯನ್ನು ಮುಟ್ಟುವುದೆಂದು ಅಂಕಿಅಂಶಗಳು ತೋರಿಸುತ್ತವೆ. (ವರ್ಲ್ಡ್ ಹೆಲ್ತ್, ಜನವರಿ⁄ಫೆಬ್ರವರಿ 1985) ಹಾಗಿದ್ದರೂ, ನೀವು ಇತರ ಎಳೆಯರಂತೆ ಓಡಲು, ಜಿಗಿಯಲು, ಮತ್ತು ಆಡಲು ಬಯಸಿದಾಗ, ಆದರೆ ಅದು ಸಾಧ್ಯವಾಗದಿರುವಾಗ, ನಿಮಗಿರುವ ಅದೇ ಸಮಸ್ಯೆಯು ಅನೇಕರಿಗೆ ಇದೆಯೆಂಬ ನಿಜತ್ವವು, ನಿಮಗೆ ಸ್ವಲ್ಪ ಸಾಂತ್ವನವನ್ನು ನೀಡುತ್ತದೆ.
ಅಂಗವಿಕಲರ ಸಮಸ್ಯೆಗಳು
ಶಾರೀರಿಕ ಅಂಗವಿಕಲತೆಗಳು ಹೊಸದೇನೂ ಅಲ್ಲ. ಬೈಬಲ್ ಸಮಯಗಳಲ್ಲಿ ಕೆಲವರು ಕುಂಟತನದೊಂದಿಗೆ (2 ಸಮುವೇಲ 4:4; 9:13), ದೃಷ್ಟಿಹೀನತೆಯೊಂದಿಗೆ (ಮಾರ್ಕ 8:22), ಮತ್ತು ಅಂಗವಿಕಾರಗಳೊಂದಿಗೆ (ಮತ್ತಾಯ 12:10) ನಿಭಾಯಿಸಬೇಕಿತ್ತು. ಅಂಥ ಅಂಗವಿಕಲರಿಗೆ ಅನೇಕ ಬಾರಿ ಜೀವನದ ಅತ್ಯಂತ ಮೂಲಭೂತ ಕಾರ್ಯಗಳನ್ನು ಸಾಧಿಸಲು ಕಷ್ಟವಾಗುತ್ತಿತ್ತು.—ಹೋಲಿಸಿ ಧರ್ಮೋಪದೇಶಕಾಂಡ 28:29; ಜ್ಞಾನೋಕ್ತಿ 26:7.
ನಿಮ್ಮ ಮೇಲೆ ಇರಿಸಲಾದಂಥ ಮಿತಿಗಳೊಂದಿಗೆ ನಿಮಗೆ ಸಮಾನವಾದ ಒಂದು ಹೋರಾಟವಿರಬಹುದು. ಬಟ್ಟೆಹಾಕಿಕೊಳ್ಳುವುದು, ಊಟಮಾಡುವುದು, ಯಾ ಶಾಲೆಗೆ ಹೋಗುವುದು ಅಪರಿಮಿತ ಪ್ರಮಾಣದ ಪ್ರಯತ್ನವನ್ನು—ಮತ್ತು ಇತರರಿಂದ ಗಣನೀಯವಾದ ಸಹಾಯವನ್ನು ಕೇಳಿಕೊಳ್ಳಬಹುದು. “ನನ್ನ ಬಲಗಡೆಯಲ್ಲಿ ನಾನು ಯಾವುದೇ ನಿಖರವಾದ ಚಾಲಕ ಕ್ರಿಯೆಗಳನ್ನು ಮಾಡಲಾಗುವುದಿಲ್ಲ,” ಎಂದು ಬೆಕಿ ಹೇಳುತ್ತಾಳೆ. “ಆದುದರಿಂದ ನನ್ನ ಎಡಕೈಯಿಂದ ಬರೆಯಲು ನಾನು ಕಲಿಯಬೇಕಿತ್ತು. ನಡೆಯುವುದು ಕೂಡ ಕಷ್ಟಕರವಾಗಿದೆ. ಈಗ ನಾನು ಬಹಳ ಸಾಮಾನ್ಯವಾಗಿ ನಡೆಯುತ್ತೇನೆ, ಆದರೆ ಕೆಲವು ದಿನಗಳಲ್ಲಿ ಬಹಳವಾಗಿ ಕುಂಟುತ್ತೇನೆ.” ಅಥವಾ ಕುಬ್ಚತೆಯಿಂದ ಬಾಧಿಸಲ್ಪಟ್ಟ ಒಬ್ಬ ಯುವಕನಿಂದ ಎದುರಿಸಲಾದ ಸಮಸ್ಯೆಗಳನ್ನು ಪರಿಗಣಿಸಿರಿ. ಹಾಸ್ಯಪ್ರವೃತ್ತಿಯೊಂದಿಗೆ ಅವನು ಹೇಳುವುದು; “ಗೋಡೆಯ ಮೇಲಿರುವ ಬೆಳಕಿನ ಸ್ವಿಚ್ಗಳನ್ನು ತಲಪುವುದು ಇನ್ನೊಂದು ಸಿಡುಕಿನ ವಿಷಯವಾಗಿದೆ . . . ಮನೆಗಳು ನಿಶ್ಚಯವಾಗಿಯೂ ಎತ್ತರವಾಗಿರುವ ಜನರಿಗಾಗಿ ರಚಿಸಲ್ಪಟ್ಟಿವೆ.”—ಜಿಲ್ ಕ್ರೀಮೆಂಟ್ಸ್ನಿಂದ ಬರೆಯಲಾದ, ಹೌ ಇಟ್ ಫೀಲ್ಸ್ ಟು ಲಿವ್ ವಿತ್ ಎ ಫಿಸಿಕಲ್ ಡಿಸ್ಎಬಿಲಿಟಿ.
ನಿಮ್ಮ ಅತ್ಯಂತ ವ್ಯಥೆಗೊಳಿಸುವ ಸಮಸ್ಯೆಗಳು ಸ್ವರೂಪದಲ್ಲಿ ಶಾರೀರಿಕವಾಗಿಲ್ಲ ಎಂದು ನೀವು ಕಂಡುಕೊಳ್ಳಬಹುದು. ಪೇರೆಂಟ್ಸ್ ಎಂಬ ಪತ್ರಿಕೆಯು ವಿವರಿಸುವುದು: “ಇತರರ ಪ್ರತಿಕ್ರಿಯೆಗಳಿಗೆ ಹದಿಹರೆಯದವರು ಬಹಳ ಸೂಕ್ಷ್ಮವಾಗಿದ್ದು, ವಿಶೇಷವಾದ ಅಗತ್ಯಗಳಿರುವ ಯುವ ಜನರಿಗೆ ಜೀವಿತವನ್ನು ಬಹಳ ಕಷ್ಟಕರವಾಗಿ ಮಾಡುತ್ತದೆ. . . . ಅವರ ತೋರಿಕೆಯ ಕುರಿತು ಇತರ ಜನರು ಏನನ್ನು ಯೋಚಿಸುತ್ತಾರೆಂದು ಅವರು ಬೆರಗುಗೊಳ್ಳುತ್ತಾರೆ ಮತ್ತು ಅನೇಕ ಬಾರಿ ಗೆಳೆತನದ ಅಭಿವ್ಯಕ್ತಿಗಳನ್ನು ಸಂಶಯಿಸುತ್ತಾ, ಸದುದ್ದೇಶವುಳ್ಳ ಈ ಭಾವಾಭಿನಯಗಳನ್ನು ಬೇಡವಾದ ಕನಿಕರದ ಅಭಿವ್ಯಕ್ತಿಗಳೆಂದು ಅರ್ಥವಿವರಣೆ ಮಾಡುತ್ತಾರೆ.” ಇತರರಿಂದ ಇಷ್ಟವಾಗಲು ಮತ್ತು ಸ್ವೀಕರಿಸಲ್ಪಡಲು ಬಯಸುವುದು ಸ್ವಾಭಾವಿಕವಾದ ವಿಷಯ ಮಾತ್ರ. ಆದರೂ, ನೀವು ಪರಕೀಯರೆಂದು ನಿಮಗೆ ಅನಿಸಬಹುದು. ಯುವ ಮಿಶೆಲ್ ಅದನ್ನು ಹೇಳಿದಂತೆ: “ನನ್ನ ಜೀವನವಿಡೀ ನಾನು ಬೇರೆ ಎಲ್ಲರಿಗಿಂತ ಭಿನ್ನವಾಗಿದ್ದೇನೆ. ಕಾರಣವೇನಂದರೆ, ನನಗೆ ಎಡಕೈ ಇಲ್ಲ.”
ಭಿನ್ನವಾಗಿ ಇರುವುದು ನಿಮ್ಮನ್ನು ಕೊನೆಗೊಳ್ಳದ ಕೀಟಲೆಗೆ ಕೂಡ ಗುರಿಮಾಡಬಹುದು. “ಐದನೆಯ ತರಗತಿಯ ವರೆಗೆ ನಾನು ವಿಶೇಷವಾದ ಶಾಲಾ ತರಬೇತಿಯನ್ನು ಪಡೆದೆ,” ಎಂದು ಕ್ರ್ಯಾಗ್ ಜ್ಞಾಪಿಸಿಕೊಳ್ಳುತ್ತಾನೆ. “ಆದರೆ ಐದನೆಯ ತರಗತಿಯಲ್ಲಿ, ನಾನೊಂದು ಸಾಮಾನ್ಯವಾದ ಶಾಲೆಗೆ ಹೋಗಲು ಆರಂಭಿಸಿದೆ. ಒಂದು ದಿನ ಕೆಲವೊಂದು ಹುಡುಗರು ನನ್ನನ್ನು ನೋಡಿ ನಗಲಾರಂಭಿಸಿದ ತನಕ ನನಗೆ ನಿಜವಾಗಿಯೂ ಬಹಳ ಸಮಸ್ಯೆಗಳಿರಲಿಲ್ಲ. ನಾನು ನಡೆಯುವ ರೀತಿಯಿಂದಾಗಿ ಅವರು ನಕ್ಕರು.” ಆಕೆಯ ಶಾಲಾಸಂಗಾತಿಗಳಿಂದ ಕ್ರೂರ ವರ್ತನೆಯ ದುಃಖಕರ ನೆನಪುಗಳು ಬೆಕಿಗೆ ಕೂಡ ಇವೆ. ಹಿಂದಿನ ಶಸ್ತ್ರ ಚಿಕಿತ್ಸೆಯು ಅವಳ ಧ್ವನಿ ತಂತಿಗಳನ್ನು ಹಾನಿಗೊಳಿಸಿದ್ದರಿಂದ, ಅವಳ ಧ್ವನಿಗೆ ತುಸು ಒರಟಾದ ಗುಣವಿತ್ತು. “ಶಾಲೆಯಲ್ಲಿದ್ದ ಮಕ್ಕಳು ನನ್ನನ್ನು ರಾಕ್ಷಸ ಧ್ವನಿಯವಳೆಂದು ಕರೆಯುತ್ತಿದ್ದರು,” ಎಂಬುದಾಗಿ ಅವಳು ಹೇಳುತ್ತಾಳೆ.
ವಯಸ್ಕರೂ ಅಂತೆಯೇ ಅನ್ಯಾಯವಾದ ದುರಭಿಪ್ರಾಯಗಳನ್ನು ಪ್ರದರ್ಶಿಸಬಹುದು. ಕೆಲವರು ನಿಮ್ಮೊಂದಿಗೆ ಕಣ್ಣಿನ ಸಂಪರ್ಕವನ್ನು ಮಾಡುವುದನ್ನು ತಡೆಯಬಹುದು. ನೀವು ಅದೃಶ್ಯರೂ ಅಥವಾ ಮಾನಸಿಕವಾಗಿ ನ್ಯೂನತೆಯುಳ್ಳವರಂತೆ—ತಮ್ಮ ಹೇಳಿಕೆಗಳನ್ನು ನಿಮ್ಮ ಹೆತ್ತವರ ಯಾ ಸಂಗಾತಿಗಳ ಕಡೆಗೆ ನಿರ್ದೇಶಿಸುತ್ತಾ, ನಿಮ್ಮೊಂದಿಗೆ ಮಾತಾಡುವುದನ್ನೇ ಇನ್ನಿತರರು ತ್ಯಜಿಸಬಹುದು. ನೀವು ಹಾನಿಗೊಂಡ ಸರಕುಗಳೆಂಬ ಅನಿಸಿಕೆಯನ್ನು ಬಲಪಡಿಸುತ್ತಾ, ದಯೆಯನ್ನು ನಿಮ್ಮ ಮೇಲೆ ಸಂತತವಾಗಿ ಚೆಲ್ಲುವ ಹಿತೈಷಿಗಳು ಎಲ್ಲಕ್ಕಿಂತಲೂ ಹೆಚ್ಚು ಪೀಡಿಸುವವರಾಗಿರಬಹುದು.
ವಿಷಯದ ಕುರಿತು ದೇವರ ದೃಷ್ಟಿಕೋನ
ಆದಾಗ್ಯೂ, ದೇವರಿಗೆ ನಿಮ್ಮ ಕುರಿತು ಹೇಗೆ ಅನಿಸುತ್ತದೆ? ನಿಮ್ಮ ಅಂಗವಿಕಲತೆಯು ಆತನ ಅಸಮ್ಮತಿಯ ಯಾವುದಾದರೊಂದು ಬಗೆಯ ಸೂಚನೆಯಾಗಿದೆಯೊ? ಒಬ್ಬ “ಹುಟ್ಟು ಕುರುಡನನ್ನು” ಸಂಧಿಸಿದಾಗ ಯೇಸು ಹೇಳಿದ್ದನ್ನು ಗಮನಿಸಿರಿ. ಅವನ ಶಿಷ್ಯರು, “ಇವನು ಕುರುಡನಾಗಿ ಹುಟ್ಟಿರುವದಕ್ಕೆ ಯಾರು ಪಾಪ ಮಾಡಿದರು? ಇವನೋ? ಇವನ ತಂದೆತಾಯಿಗಳೋ?” ಎಂದು ಕೇಳಿದರು. ಯೇಸು, “ಇವನೂ ಪಾಪಮಾಡಲಿಲ್ಲ. ಇವನ ತಂದೆತಾಯಿಗಳೂ ಪಾಪಮಾಡಲಿಲ್ಲ” ಎಂದು ಉತ್ತರಿಸಿದನು. (ಯೋಹಾನ 9:1-3) ಇಲ್ಲ, ದೃಷ್ಟಿಹೀನತೆಯು ಕುರುಡ ಮನುಷ್ಯನು ಅಥವಾ ಅವನ ಹೆತ್ತವರ ನಿರ್ದಿಷ್ಟ ಪಾಪದ ಫಲಿತಾಂಶವಾಗಿರಲಿಲ್ಲ. ಬದಲಾಗಿ, ಅದು ನಾವೆಲ್ಲರೂ ಆದಾಮನಿಂದ ಪಿತ್ರಾರ್ಜಿತವಾಗಿ ಪಡೆದ ಅಪರಿಪೂರ್ಣತೆಯ ಫಲಿತಾಂಶವಾಗಿತ್ತು. ಅಪೊಸ್ತಲ ಪೌಲನು ವಿವರಿಸುತ್ತಾನೆ: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮಾಪುರ 5:12.
ಹಾಗಾದರೆ, ಶಾರೀರಿಕ ಅಂಗವಿಕಲತೆಗಳು, ದೈವಿಕ ಮಧ್ಯಸಿಕ್ತೆ ಯಾ ಶಿಕ್ಷೆಯ ಪರಿಣಾಮವಾಗಿರುವುದಿಲ್ಲ. ಕೆಲವು ಅಜಾಗರೂಕತೆಯ ಫಲವಾಗಿರುತ್ತವೆ. ಇನ್ನೂ ಕೆಲವು “ಕಾಲವೂ ಮತ್ತು ಎದುರುನೋಡದ ಘಟನೆ”ಗಳಿಂದ ಆಗಿವೆ. (ಪ್ರಸಂಗಿ 9:11 NW) ಅವರ ಹೆತ್ತವರ ದುರುಪಯೋಗ ಯಾ ಅಲಕ್ಷ್ಯದಿಂದ ಶಾರೀರಿಕವಾಗಿ ಕಷ್ಟವನ್ನು ಅನುಭವಿಸುವ ಯುವ ಜನರೂ ಇದ್ದಾರೆ.
ನಿಮ್ಮ ತೊಂದರೆಗಳ ಕಾರಣವು ಏನೇ ಆಗಿರಲಿ, ದೇವರು ನಿಮ್ಮನ್ನು ಹಾನಿಹೊಂದಿದವರಂತೆ ವೀಕ್ಷಿಸುತ್ತಾನೆಂದು ನೀವು ಎಣಿಸುವ ಅಗತ್ಯವಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ವಿಶೇಷವಾಗಿ ನೀವು ದೇವ ಭಯವುಳ್ಳವರಾಗಿದ್ದರೆ, ಆತನು ನಿಮ್ಮನ್ನು ಅಮೂಲ್ಯರೆಂದೂ ಉಪಯುಕ್ತರೆಂದೂ ನೋಡುತ್ತಾನೆ. (ಲೂಕ 12:7) ಬಹಳ ವೈಯಕ್ತಿಕ ವಿಧದಲ್ಲಿ ಆತನು “ನಿಮಗೋಸ್ಕರ ಚಿಂತಿಸುತ್ತಾನೆ” ಮತ್ತು ನಿಮ್ಮನ್ನು ಆತನ ಸೇವೆಯಲ್ಲಿ ಉಪಯೋಗಿಸಲು ಆತನು ಸಂತೋಷಿಸುತ್ತಾನೆ. (1 ಪೇತ್ರ 5:7) ದೇವರ ಸೇವಕರುಗಳಲ್ಲಿ ಅತಿಯಾಗಿ ಎದ್ದುಕಾಣುವವರಲ್ಲಿ ಒಬ್ಬನಾದ ಅಪೊಸ್ತಲ ಪೌಲನು, ಸ್ಪಷ್ಟವಾಗಿಗಿ ಒಂದು ಶಾರೀರಿಕ ಅಂಗವಿಕಲತೆಯನ್ನು ಅನುಭವಿಸಿದಂತೆ—“ಒಂದು ಶೂಲ ನನ್ನ ಶರೀರದಲ್ಲಿ ನಾಟಿದೆಯೋ ಎಂಬಂತೆ” ತೋರುತ್ತದೆ. (2 ಕೊರಿಂಥ 12:7) ‘ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ’ ಎಂಬುದನ್ನು ತಿಳಿದುಕೊಳ್ಳುವುದು ಎಷ್ಟು ಸಮಾಧಾನಕರವಾಗಿದೆ. (1 ಸಮುವೇಲ 16:7) ಆತನು ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾನೆ ಮತ್ತು ಆತನ ಹೊಸ ಲೋಕದಲ್ಲಿ ನೀವು ಪರಿಪೂರ್ಣತೆಗೆ ಪುನಃ ಸ್ಥಾಪಿಸಲ್ಪಟ್ಟಾಗ, ನೀವು ಏನನ್ನು ಮಾಡ ಶಕ್ತರೆಂದು ಆತನಿಗೆ ಗೊತ್ತಿದೆ.—ಪ್ರಕಟನೆ 21:3, 4.
ಇತರರೊಂದಿಗೆ ನಿಭಾಯಿಸುವುದು
ದುರದೃಷ್ಟಕರವಾಗಿ, ನಿಮ್ಮ ಶಾಲಾಸಂಗಾತಿಗಳು ಮತ್ತು ಇತರರು ದೇವರ ಉಚ್ಚ ದೃಷ್ಟಿಕೋನದಲ್ಲಿ ಪಾಲ್ಗೊಳ್ಳದಿರಬಹುದು. ನಿಜವಾಗಿಯೂ, ಜನರು ಕೆಲವೊಮ್ಮೆ ಅತೀ ಕ್ರೂರರಾಗಿರುತ್ತಾರೆ. ಆದಕಾರಣ, ನಿಮ್ಮ ವೇದನೆಯ ಸಂಬಂಧದಲ್ಲಿ, ನಿಮ್ಮ ಸಮಾನ ಸ್ಕಂದರಲ್ಲಿ ಕೆಲವರು ಸಮವಾಗಿ ದಯಾಶೂನ್ಯರಾಗಿದ್ದರೆ ಆಶ್ಚರ್ಯಗೊಳ್ಳಬೇಡಿರಿ. ಸಾಮಾನ್ಯವಾಗಿ, ಜನರಿಗೆ ನೋವುಪಡಿಸುವ ಅಥವಾ ಪೇಚಾಟಕ್ಕೊಳಪಡಿಸುವ ಉದ್ದೇಶವಿರುವುದಿಲ್ಲ; ಕೆಲವೊಮ್ಮೆ ಅವರು ಕೇವಲ ಕುತೂಹಲವುಳ್ಳವರಾಗಿರುತ್ತಾರೆ. ನಿಮ್ಮ ವೇದನೆಯಿಂದ ಚಿಂತಿತರಾಗಿ ಯಾ ಬಹುಶಃ ಸಂವೇದನಾರಹಿತರಾಗಿ, ಅವರು ಅವಿವೇಕವಾದ ಯಾ ನೋಯಿಸುವಂಥ ಯಾವ ವಿಷಯವನ್ನಾದರೂ ಹೇಳಬಹುದು.
ನೀವು ಏನು ಮಾಡಸಾಧ್ಯವಿದೆ? ಕೆಲವೊಮ್ಮೆ ಪೇಚಾಟಗೊಳಿಸುವ ಸನ್ನಿವೇಶಗಳನ್ನು ನೀವು ತಡೆಯಬಹುದು. ಉದಾಹರಣೆಗೆ, ಇತರರು ಒತ್ತಡದಲ್ಲಿರುವಂತೆ ಯಾ ಏನು ಹೇಳಬೇಕೆಂದು ತಿಳಿಯದೆ ಇರುವಂತೆ ತೋರಿದರೆ, ಅವರನ್ನು ಹಾಯಾಗಿರುವಂತೆ ಮಾಡಿರಿ. ನಾವು ಏನನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲವೊ ಅದರ ಕುರಿತು ಭಯಪಡುವ ನಮ್ಮೆಲ್ಲರ ಪ್ರವೃತ್ತಿಯನ್ನು ಗ್ರಹಿಸಿರಿ. ಅವರು ನಿಮ್ಮ ನಿಜ ರೂಪವನ್ನು ತಿಳಿದುಕೊಳ್ಳುವಂತೆ, ನಿಮ್ಮ ದೌರ್ಬಲ್ಯದ ಕುರಿತು ಗಂಭೀರವಾಗಿ ಯೋಚಿಸದಂತೆ ಇರಲು ಅವರಿಗೆ ಸಹಾಯ ಮಾಡಿರಿ. ಸನ್ನಿವೇಶವು ಅದನ್ನು ದೃಢಪಡಿಸುವಂತೆ ತೋರಿದಾಗ, ನೀವು ಹೀಗೆ ಏನಾದರೂ ಹೇಳಲು ಪ್ರಯತ್ನಿಸಬಹುದು: “ನಾನೊಂದು ಗಾಲಿಕುರ್ಚಿಯನ್ನು ಯಾಕೆ ಉಪಯೋಗಿಸುತ್ತಿದ್ದೇನೆಂದು ನೀವು ಯೋಚಿಸುತ್ತಿರುವಿರಾ?” ಪೇರೆಂಟ್ಸ್ ಪತ್ರಿಕೆಗನುಸಾರ, ಅಂಗವಿಚ್ಛೇದಿತಳಾಗಿರುವ ಒಬ್ಬಾಕೆ ಅಧ್ಯಾಪಕಿಯು, ತನ್ನ ವಿದ್ಯಾರ್ಥಿಗಳ ಕುತೂಹಲವನ್ನು ಹೀಗೆ ಹೇಳುವ ಮೂಲಕ ತಣಿಸುತಾಳ್ತೆ: “ಏನು ಸಂಭವಿಸಿತ್ತೆಂದು ನೀವು ಯೋಚಿಸುತ್ತಿದ್ದಿರೆಂದು ನಾನೆಣಿಸುತ್ತೇನೆ. ಅದನ್ನು ತಿಳಿಯಲು ಇಷ್ಟಪಡುವಿರೋ?”
ನಿಮ್ಮ ಅತ್ಯುತ್ತಮ ಪ್ರಯತ್ನಗಳ ಎದುರಿನಲ್ಲಿಯೂ, ನೀವು ಆಗಾಗ ನೋವನ್ನು ಅನುಭವಿಸಬಹುದು. ಎಳೆಯ ಬೆಕಿ ಹೇಳುತ್ತಾಳೆ: “ನಾನು ಚಿಕ್ಕವಳಾಗಿದ್ದಾಗ, ಇತರರು ನನ್ನನ್ನು ಹಾಸ್ಯಮಾಡಿದಾಗ ನಾನು ಕಳವಳಗೊಳ್ಳುತ್ತಿದ್ದೆ; ನಾನು ನನ್ನ ಜೀವನವಿಡೀ ಸೂಕ್ಷ್ಮ ಪ್ರವೃತ್ತಿಯುಳ್ಳವಳಾಗಿದ್ದೆ. ಆದರೆ ಈಗ ಅದು ನನ್ನನ್ನು ಕಳವಳಗೊಳಿಸುವಂತೆ ನಾನು ಬಿಡುವುದಿಲ್ಲ. ಕೆಲವೊಮ್ಮೆ ಸನ್ನಿವೇಶದಿಂದಾಗಿ ನಾನು ನಗಲು ಶಕ್ತಳಾಗಿದ್ದೇನೆ ಕೂಡ.” ಹೌದು, ಹಾಸ್ಯದ ಒಂದು ತಿಳಿವಳಿಕೆ ನೋವನ್ನುಂಟುಮಾಡುವ ಹೇಳಿಕೆಗಳನ್ನು ಓರೆಯಾಗಿಸುವಲ್ಲಿ ಬಹಳ ಮುಖ್ಯವಾಗಿದೆ. “ನಗಲು ಒಂದು ಸಮಯ”ವಿದೆ. (ಪ್ರಸಂಗಿ 3:4) ರಾಜ ಸೊಲೊಮೋನನು ಈ ಸಲಹೆಯನ್ನು ಕೊಟ್ಟನು: “ಆಡುವ ಮಾತುಗಳನ್ನೆಲ್ಲಾ ಲಕ್ಷ್ಯಕ್ಕೆ ತಾರದಿರು.” (ಪ್ರಸಂಗಿ 7:21) ಕೆಲವೊಮ್ಮೆ ಅವಿವೇಕದ ಮಾತುಗಳನ್ನು ನಿರ್ವಹಿಸುವ ಅತ್ಯುತ್ತಮ ವಿಧಾನವು ಅದನ್ನು ಅಲಕ್ಷ್ಯಮಾಡುವುದಾಗಿದೆ. “ಜನರು ಏನು ಹೇಳುತ್ತಾರೊ ಅದರ ಕುರಿತು ಚಿಂತಿಸಬೇಡಿರಿ,” ಎನ್ನುತ್ತಾಳೆ ಬೆಕಿ.
ನಿರೀಕ್ಷೆಯು ನೀವು ನಿಭಾಯಿಸುವಂತೆ ಸಹಾಯ ಮಾಡುತ್ತದೆ
ನಿಜವಾಗಿಯೂ, ಇಡೀ ಮಾನವಕುಲವು ಅಪೂರ್ಣವಾಗಿದೆ. “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆಂದು,” ಬೈಬಲ್ ಹೇಳುತ್ತದೆ. (ರೋಮಾಪುರ 8:22) ಆದರೆ ಭವಿಷ್ಯತ್ತಿಗಾಗಿ ಒಂದು ನಿರೀಕ್ಷೆಯನ್ನು ನೀವು ಹೊಂದಿರಬಹುದು. ಉದಾಹರಣೆಗೆ, ಕ್ಯಾರೆಲ್ ಎಂಬುದಾಗಿ ನಾವು ಕರೆಯುವ ಒಬ್ಬ ಎಳೆಯ ಹುಡುಗಿಯನ್ನು ತೆಗೆದುಕೊಳ್ಳಿ. ಅವಳು ನಿಜವಾಗಿಯೂ ಕಿವುಡಳಾಗಿ ಹುಟ್ಟಿದ್ದಳು. ತದನಂತರ, ಒಂದು ಸೈಕಲ್ ಅಪಘಾತವು ಅವಳ ಒಂದು ಕಾಲು ಕತ್ತರಿಸುವಿಕೆಯಲ್ಲಿ ಫಲಿಸಿತು. ಕ್ಯಾರೆಲ್ ಸಾಯಲು ಬಯಸಿದಳು. ಆದರೆ ಅವಳು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಳು ಮತ್ತು ಎಲ್ಲಿ ‘ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನೋ’ ಆ ಬರುವಂತಹ ನೀತಿಯುಳ್ಳ ಹೊಸ ಲೋಕದ ಕುರಿತು ಅವಳು ಕಲಿತಳು. (ಯೆಶಾಯ 33:24) ನಿಶ್ಚಯವಾಗಿಯೂ, ಒಂದು ದಿನ ಅವಳ ಅಂಗವಿಕಲತೆಗಳು—ಅದ್ಭುತಕರವಾಗಿ ನಿವಾರಿಸಲ್ಪಡುವುದೆಂಬ ನಿರೀಕ್ಷೆಯನ್ನು ಅವಳು ಪಡೆದಳು!—ಯೆಶಾಯ 35:5, 6.
ಕ್ಯಾರೆಲ್ನ ಪ್ರವೃತ್ತಿಯ ಮೇಲೆ, ದೇವರ ಕುರಿತು ಕಲಿಯುವುದು ಯಾವ ಪ್ರಭಾವವನ್ನು ಬೀರಿದೆ? ಕೆಲವು ಆಪ್ತ ಕ್ರೈಸ್ತ ಮಿತ್ರರು ಅವಳ ಬಗೆಗೆ ಹೀಗೆ ಹೇಳುತ್ತಾರೆ: “ಅವಳು ಯಾವಾಗಲೂ ಪ್ರಸನ್ನಳಾಗಿರುತ್ತಾಳೆ ಮತ್ತು ಅವಳ ಅಂಗವಿಕಲತೆಯ ಕಡೆಗೆ ಎಂದೂ ಗಮನಕೊಡುವುದಿಲ್ಲ.” ಆಶ್ಚರ್ಯಕರವಾಗಿ, ಅವರು ಹೀಗೆ ಕೂಡ ಹೇಳುತ್ತಾರೆ: “ಅವಳ ಸ್ನೇಹಿತರಲ್ಲಿ ಅನೇಕರು ಅವಳೊಂದು ಕೃತಕವಾದ ಕಾಲನ್ನು ಧರಿಸುತ್ತಾಳೆಂದು ಮತ್ತು ಇಷ್ಟು ಅಗಾಧವಾದ ಆಲಿಸುವ ನಷ್ಟವನ್ನು ಹೊಂದಿದ್ದಾಳೆಂದು ಗ್ರಹಿಸುವುದಿಲ್ಲ.” ಯಾಕೆ? “ಅವಳು ತುಟಿಯ ವಾಚನ ಮತ್ತು ಶ್ರವಣ ಸಾಧನದ ಮೇಲೆ ಆತುಕೊಳ್ಳುತ್ತಾಳೆ.” ವಿಶದವಾಗಿ, ಭವಿಷ್ಯತ್ತಿಗಾಗಿ ನಿರೀಕ್ಷಿಸುವುದಕ್ಕಿಂಥ ಕ್ಯಾರೆಲ್ ಹೆಚ್ಚಿನದನ್ನು ಮಾಡಿದ್ದಾಳೆ. ತನ್ನ ಸಂಪೂರ್ಣ ಸಾಮರ್ಥ್ಯವನ್ನು ಮುಟ್ಟಲು ಅವಳು ಪ್ರಯತ್ನಿಸಿದ್ದಾಳೆ. ನೀವು ಅದನ್ನೇ ಹೇಗೆ ಮಾಡಬಲ್ಲಿರೆಂಬುದು ಈ ಶ್ರೇಣಿಯಲ್ಲಿ ನಮ್ಮ ಮುಂದಿನ ಲೇಖನದ ವಿಷಯವಾಗಿರುವುದು. (g93 5/22)
[ಪುಟ 24 ರಲ್ಲಿರುವ ಚಿತ್ರ]
ಯಾರು ಕುತೂಹಲಿಗಳಾಗಿ ಕಾಣುತ್ತಾರೋ ಅಂಥವರಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸುವುದು ಸಹಾಯಕಾರಿಯೆಂದು ಕೆಲವರು ಕಂಡುಕೊಂಡಿದ್ದಾರೆ