“ಸೈರಣೆಯ ಪಾಠವನ್ನು ಕಲಿಯುವುದು”
ಇಪ್ಪತ್ತನೆಯ ಶತಮಾನದ ಅಂತ್ಯವನ್ನು ನಾವು ಸಮೀಪಿಸುತ್ತಿದ್ದ, ಸಾಮಾನ್ಯ ಅರ್ಥದಲ್ಲಿ ಮಾನವವರ್ಗವು, 1914ರಂದಿನಿಂದ ಅದರ ಹಿಂಸಾತ್ಮಕ ಇತಿಹಾಸದಿಂದ ಯಾವ ಪಾಠಗಳನ್ನಾದರೂ ಕಲಿತಿದೆಯೋ? ಫೆಡರಿಕೊ ಮೆಯರ್, ಯುನೆಸ್ಕೊವಿನ (ಸಂಯುಕ್ತ ರಾಷ್ಟ್ರಗಳ ಶೈಕ್ಷಣಿಕ, ವೈಜ್ಞಾನಿಕ, ಮತ್ತು ಸಾಂಸ್ಕೃತಿಕ ಸಂಸ್ಥೆ) ನಿರ್ದೇಶಕರು, ದ ಯುನೆಸ್ಕೊ ಕೂರಿಯರ್ಗಾಗಿ ಒಂದು ಲೇಖನವನ್ನು ಬರೆದಾಗ ಅತಿ ಆಶಾವಾದಿಯಾಗಿರಲಿಲ್ಲ. “ಅದರ ಉದಯವನ್ನು ವಿವೇಚಿಸಬಲ್ಲ ಲೋಕವು . . . ಮನಃಪೂರ್ತಿಯಾದ ಉತ್ಸಾಹವನ್ನು ಪ್ರೇರೇಪಿಸುವುದಿಲ್ಲ. ಧಾರ್ಮಿಕ ಮೂಲತತ್ವವಾದ, ರಾಷ್ಟ್ರೀಯತೆ, ಕುಲ ಮತ್ತು ಮತಧರ್ಮಗಳಿಗೆ ಸಂಬಂಧವಾದ ಪೂರ್ವಾಗ್ರಹ, ಯೆಹೂದ್ಯ ವಿರೋಧತ್ವ, ದ್ವೇಷದ ಕಿಡಿಗಳನ್ನು ಸ್ವಾತಂತ್ರ್ಯದ ಗಾಳಿಗಳು ಪುನಃ ಆವೇಶಗೊಳಿಸಿವೆ. . . . ಹಳೆಯ ವ್ಯವಸ್ಥೆಯ ಕುಸಿತವು, ಎಲ್ಲಾ ವಿಧಗಳ ಹೊಸ ಮುಂತೊಡಗುವಿಕೆಗಳಿಗೆ—ಅವುಗಳಲ್ಲಿ ಕೆಲವು ಅತಿಯಾದ ಅವ್ಯವಸ್ಥೆಯ ಪ್ರಾರಂಭಗಳಿಗೆ ಕ್ಷೇತ್ರವನ್ನು ತೆರೆದಿಟ್ಟಿದೆ—ಮತ್ತು ಹಿಂಸೆಯು ಶೂನ್ಯ ಸ್ಥಳದಲ್ಲಿ ವರ್ಧಿಸುತ್ತಿದೆ.”
ಹಿಂಸೆಯು ಯಾಕೆ ವರ್ಧಿಸುತ್ತಿದೆ? ಧರ್ಮ ಯಾ ಕುಲದ ಹಿನ್ನೆಲೆಯಲ್ಲಿ ಕೇವಲ ಭಿನ್ನತೆಗಳ ಕಾರಣ ಜನರು ಇತರರನ್ನು ದ್ವೇಷಿಸಿ, ಕೊಲ್ಲುವುದು ಯಾಕೆ? ಹಿಂದಿನ ಯುಗೊಸ್ಲಾವಿದಲ್ಲಾಗಲಿ, ಭಾರತದಲ್ಲಾಗಲಿ, ಉತ್ತರ ಐರ್ಲ್ಯಾಂಡ್ನಲ್ಲಾಗಲಿ, ಅಮೆರಿಕದಲ್ಲಾಗಲಿ, ಯಾ ಲೋಕದ ಬೇರೆ ಯಾವುದೇ ಕಡೆಯಲ್ಲಾಗಲಿ, ಮುಖ್ಯ ಕಾರಣಗಳಲ್ಲಿ ಒಂದು, ತಪ್ಪಾಗಿ ಮಾರ್ಗದರ್ಶಿಸಲ್ಪಟ್ಟ ಶಿಕ್ಷಣದಲ್ಲಿ ಅಡಕವಾಗಿದೆ. ಪರಸ್ಪರ ಸೈರಣೆ ಮತ್ತು ಗೌರವವನ್ನು ಕಲಿಯುವ ಬದಲು, ತಮ್ಮ ಹೆತ್ತವರಿಂದ, ತಮ್ಮ ಶಾಲೆಗಳಿಂದ, ಮತ್ತು ಸಾಮಾನ್ಯವಾಗಿ ಸಮಾಜದಿಂದ ಜನರು ಅವಿಶ್ವಾಸ ಮತ್ತು ದ್ವೇಷವನ್ನು ಕಲಿತಿದ್ದಾರೆ.
ಫೆಡರಿಕೊ ಮೆಯರ್ ಮುಂದುವರಿಸಿದ್ದು: “ಸಹಿಸಲಾಗದ ವಿಷಯಗಳನ್ನು—ಬಡತನ, ಹಸಿವೆ ಮತ್ತು ಲಕ್ಷಾಂತರ ಮನುಷ್ಯ ಜೀವಿಗಳ ಕಷ್ಟಾನುಭವವನ್ನು ಸಹಿಸುವಂತೆ ನಮಗೆ ಅನುಮತಿ ನೀಡುವ ಆ ಸಂದೇಹಾಸ್ಪದವಾದ ಸೈರಣೆಯನ್ನು ನಾವು ತೊರೆದುಬಿಡೋಣ. ನಾವು ಹಾಗೆ ಮಾಡಿದರೆ, ಅನುಕಂಪ ಮತ್ತು ಸಹೋದರತ್ವದ ಪ್ರಸನ್ನತೆಯ ಅನುರಾಗವನ್ನು ನಾವು ಸಂಧಿಸಲಿರುವೆವು.” ಇವು ಉತ್ತಮ ಮನೋಭಾವಗಳಾಗಿವೆ. ಆದರೆ ಜ್ಞಾನೋದಯ ಪಡೆದ ಲೋಕ ಎಂದು ಕರೆಯಲಾದ ನಮ್ಮ ಲೋಕದ ಕೆಳಗಿರುವ ಮಸುಕಾದ ಆತ್ಮವನ್ನು ಬದಲಾಯಿಸಬಲ್ಲ ಯಾವ ವ್ಯವಹಾರಿಕ ಸಾಧನಗಳು ಅಸ್ತಿತ್ವದಲ್ಲಿವೆ?
ಎರಡು ಸಾವಿರ ಐನೂರು ವರ್ಷಗಳ ಹಿಂದೆ, ಯೆಶಾಯನು ಯೆಹೋವನ ಈ ಮಾತುಗಳನ್ನು ದಾಖಲೆ ಮಾಡಿದನು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು.” (ಯೆಶಾಯ 54:13) “ದೇವರು ಪ್ರೀತಿಯಾಗಿರುವ”ದರಿಂದ, ಆತನ ತತ್ವಗಳನುಸಾರ ನಿಜವಾಗಿಯೂ ಜೀವಿಸುವವರು ಯುದ್ಧವನ್ನಲ್ಲ, ಶಾಂತಿಯನ್ನು; ದ್ವೇಷವನ್ನಲ್ಲ, ಪ್ರೀತಿಯನ್ನು; ಅಸಹಿಷ್ಣುತೆಯನ್ನಲ್ಲ, ಸಹಿಷ್ಣುತೆಯನ್ನು ಕಲಿಯುವರು ಎಂಬ ಅರ್ಥವನ್ನು ಇದು ಕೊಡುತ್ತದೆ.—1 ಯೋಹಾನ 4:8.
ಜನರನ್ನು ಶಾಂತಿ ಮತ್ತು ಪ್ರೀತಿ ಮತ್ತು ಸೈರಣೆಯ ಕಡೆಗೆ ನಡೆಸುವ ಈ ಬೋಧನೆಯನ್ನು ಪ್ರವರ್ತಿಸುತ್ತಿರುವವರು ಯಾರು? ತಮ್ಮ ರಾಷ್ಟ್ರೀಯ ಮೂಲವನ್ನು ಲಕ್ಷಿಸದೆ ಐಕ್ಯತೆಯಲ್ಲಿ ಜೀವಿಸುವವರು ಯಾರು? ದ್ವೇಷದಿಂದ ಪ್ರೀತಿಯ ಕಡೆಗೆ ತಮ್ಮ ಸಂಪೂರ್ಣ ನೋಟವನ್ನು ಬದಲಾಯಿಸಿರುವ ಒಂದು ಬೈಬಲ್ ಶಿಕ್ಷಣವನ್ನು ಪಡೆದಿರುವವರು ಯಾರು? ಅವರಿಗೆ ಲೋಕವ್ಯಾಪಕವಾದ ಒಂದು ಐಕ್ಯತೆ ನಿಜವಾಗಿಯೂ ಯಾಕೆ ಇದೆ ಎಂಬುದನ್ನು ಕಂಡುಹಿಡಿಯಲು, ನೀವು ಯೆಹೋವನ ಸಾಕ್ಷಿಗಳ ಬೋಧನೆಗಳನ್ನು ಮತ್ತು ಆಚರಣೆಗಳನ್ನು ಪರೀಕ್ಷಿಸುವಂತೆ ನಾವು ಶಿಫಾರಸ್ಸು ಮಾಡುತ್ತೇವೆ.—ಯೋಹಾನ 13:34, 35; 1 ಕೊರಿಂಥ 13:4-8. (g93 9/8)