ಸಹನೆ ಒಂದು ವಿಪರೀತದಿಂದ ಇನ್ನೊಂದು ವಿಪರೀತಕ್ಕೆ
ಕಾಶ್ಮೀರದ ಕಣಿವೆಯ ಚಿತ್ರಮಯ ಸೊಬಗು, 16ನೇ ಶತಮಾನದ ತತ್ತ್ವಜ್ಞಾನಿಯೊಬ್ಬನನ್ನು ಹೀಗೆ ಉದ್ಗರಿಸುವಂತೆ ಪ್ರಚೋದಿಸಿತು: “ಪ್ರಮೋದವನವೊಂದು ಎಲ್ಲಿಯಾದರೂ ಇರುವುದಾದರೆ ಅದು ಇಲ್ಲಿಯೇ!” ಲೋಕದ ಆ ಭಾಗದಲ್ಲಿ ಅನಂತರ ಏನು ಸಂಭವಿಸಲಿತ್ತು ಎಂಬುದರ ಕುರಿತು ಅವನಿಗೆ ಕಲ್ಪನೆಯಿದ್ದಿರಲಿಲ್ಲವೆಂಬುದು ಸ್ಫುಟ. ಕಳೆದ ಐದು ವರ್ಷಗಳೊಳಗೆ, ಪ್ರತ್ಯೇಕತಾವಾದಿಗಳು ಹಾಗೂ ಭಾರತೀಯ ಸೇನೆಯ ನಡುವೆ ನಡೆದ ಹೋರಾಟದಲ್ಲಿ, ಕಡಿಮೆಪಕ್ಷ 20,000 ಜನರು ಅಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಜರ್ಮನ್ ವಾರ್ತಾಪತ್ರಿಕೆಯಾದ ಸ್ಯುಯೆಟೆಡೈಚಿ ಟ್ಸೈಟುಂಗ್, ಈಗ ಆ ಪ್ರದೇಶವನ್ನು “ಕಣ್ಣೀರಿನ ಕಣಿವೆ” ಎಂಬುದಾಗಿ ವರ್ಣಿಸುತ್ತದೆ. ಕಾಶ್ಮೀರದ ಕಣಿವೆಯು, ಒಂದು ಸರಳವಾದ ಆದರೂ ಅತ್ಯಮೂಲ್ಯವಾದ ಪಾಠವನ್ನು ಕಲಿಸುತ್ತದೆ: ಅಸಹನೆಯು ಒಂದು ಭಾವೀ ಪ್ರಮೋದವನವನ್ನು ಧ್ವಂಸಮಾಡಬಲ್ಲದು.
ಸಹನೆಯುಳ್ಳವರಾಗಿರುವುದು ಏನನ್ನು ಅರ್ಥೈಸುತ್ತದೆ? ಕಾಲಿನ್ಸ್ ಕೋಬಿಲ್ಡ್ ಇಂಗ್ಲಿಷ್ ಲ್ಯಾಂಗ್ವೆಜ್ ಡಿಕ್ಷನರಿಗನುಸಾರ, “ನೀವು ಸಹನೆಯುಳ್ಳವರಾಗಿರುವಲ್ಲಿ, ಇತರ ಜನರಿಗೆ ಅವರದ್ದೇ ಆದ ಮನೋಭಾವಗಳು ಅಥವಾ ನಂಬಿಕೆಗಳು ಇರುವಂತೆ ಅಥವಾ ಒಂದು ನಿರ್ದಿಷ್ಟವಾದ ರೀತಿಯಲ್ಲಿ ವರ್ತಿಸುವಂತೆ—ನೀವು ಅದಕ್ಕೆ ಒಪ್ಪುವುದಿಲ್ಲ ಇಲ್ಲವೇ ಸಮ್ಮತಿಸುವುದಿಲ್ಲವಾದರೂ—ನೀವು ಅನುಮತಿಸುತ್ತೀರಿ.” ತೋರಿಸಲಿಕ್ಕಾಗಿರುವ ಎಂಥ ಒಂದು ಉತ್ತಮ ಗುಣ! ನಮ್ಮ ನಂಬಿಕೆಗಳನ್ನೂ ಮನೋಭಾವಗಳನ್ನೂ ಗೌರವಿಸುವ ಜನರೊಂದಿಗಿರುವುದು—ಇವು ತಮ್ಮ ಸ್ವಂತ ನಂಬಿಕೆಗಳಿಗಿಂತ ಭಿನ್ನವಾಗಿರುವಾಗಲೂ—ನಮಗೆ ಖಂಡಿತವಾಗಿಯೂ ಹಾಯೆನಿಸುತ್ತದೆ.
ಸಹನೆಯಿಂದ ಅಂಧಾಭಿಮಾನಕ್ಕೆ
ಸಹನೆಗೆ ವಿರುದ್ಧವಾದದ್ದು ಅಸಹನೆಯಾಗಿದೆ; ಇದಕ್ಕೆ ಗಾಢತೆಯ ಹಲವಾರು ಮಟ್ಟಗಳಿವೆ. ಯಾರೋ ಒಬ್ಬರ ವರ್ತನೆ ಅಥವಾ ವಿಷಯಗಳನ್ನು ಮಾಡುವ ರೀತಿಯ ಬಗ್ಗೆ, ಸಂಕುಚಿತ ಸ್ವಭಾವದ ಅಸಮ್ಮತಿಯೊಂದಿಗೆ ಅಸಹನೆಯು ಪ್ರಾರಂಭವಾಗಬಹುದು. ಸಂಕುಚಿತ ಸ್ವಭಾವವು ಜೀವಿತದಿಂದ ಸಿಗುವ ಆನಂದವನ್ನು ಹೊಸಕಿಹಾಕಿ, ಹೊಸ ವಿಚಾರಗಳಿಗೆ ಒಬ್ಬನ ಮನಸ್ಸನ್ನು ಮುಚ್ಚಿಬಿಡುತ್ತದೆ.
ದೃಷ್ಟಾಂತಕ್ಕಾಗಿ, ಅತಿ ಕಟ್ಟುನಿಟ್ಟಿನ ವ್ಯಕ್ತಿಯೊಬ್ಬನು ಮಗುವೊಂದರ ಬಲು ಉತ್ಸಾಹದ ನೆಗೆಯುವಿಕೆಯಿಂದ ಹೇವರಿಕೆಯುಳ್ಳವನಾಗಬಹುದು. ಒಬ್ಬ ಯುವ ವ್ಯಕ್ತಿಯು, ತನಗಿಂತ ಹಿರಿಯನಾಗಿರುವ ಒಬ್ಬನ ಚಿಂತನೆ ಮಾಡುವ ವಿಧಗಳ ಕುರಿತು ಬೇಸರಿಸಬಹುದು. ಒಬ್ಬ ಅತಿ ಜಾಗರೂಕತೆಯುಳ್ಳ ವ್ಯಕ್ತಿಯನ್ನು, ಒಬ್ಬ ಸಾಹಸಮಯ ವ್ಯಕ್ತಿಯೊಂದಿಗೆ ಪರಸ್ಪರ ಒತ್ತಾಸೆಯಿಂದ ಕೆಲಸಮಾಡುವಂತೆ ಕೇಳಿಕೊಳ್ಳಿರಿ, ಆಗ ಅವರಿಬ್ಬರಿಗೂ ಸಿಟ್ಟುಬರಸಾಧ್ಯವಿದೆ. ಏಕೆ ಈ ಹೇವರಿಕೆ, ಬೇಸರ, ಹಾಗೂ ಸಿಟ್ಟು? ಏಕೆಂದರೆ ಪ್ರತಿಯೊಂದು ವಿದ್ಯಮಾನದಲ್ಲಿಯೂ ಒಬ್ಬ ವ್ಯಕ್ತಿಯು ಮತ್ತೊಬ್ಬನ ಮನೋಭಾವಗಳನ್ನು ಇಲ್ಲವೇ ವರ್ತನೆಯನ್ನು ಸಹಿಸಿಕೊಳ್ಳುವುದನ್ನು ಕಷ್ಟಕರವಾಗಿ ಕಂಡುಕೊಳ್ಳುತ್ತಾನೆ.
ಎಲ್ಲಿ ಅಸಹನೆಯು ವಿಕಸನಗೊಳ್ಳುತ್ತದೋ ಅಲ್ಲಿ, ಸಂಕುಚಿತ ಸ್ವಭಾವವು ಪೂರ್ವಕಲ್ಪಿತ ಅಭಿಪ್ರಾಯವಾಗಿ ವಿಕಸಿಸಬಲ್ಲದು; ಇದು ಒಂದು ಗುಂಪು, ಕುಲ ಅಥವಾ ಧರ್ಮಕ್ಕೆ ದ್ವೇಷದ ಒಂದು ಸಂಗತಿಯಾಗಿದೆ. ಪೂರ್ವಕಲ್ಪಿತ ಅಭಿಪ್ರಾಯಕ್ಕಿಂತಲೂ ಹೆಚ್ಚು ತೀಕ್ಷ್ಣವಾದದ್ದು ಅಂಧಾಭಿಮಾನವಾಗಿದೆ, ಇದು ತನ್ನನ್ನು ಒಂದು ಹಿಂಸಾತ್ಮಕ ದ್ವೇಷದಲ್ಲಿ ತೋರ್ಪಡಿಸಿಕೊಳ್ಳಬಲ್ಲದು. ಫಲಿತಾಂಶವು ಕ್ಲೇಶವೂ ರಕ್ತಪಾತವೂ ಆಗಿದೆ. ಧರ್ಮಯುದ್ಧಗಳ ಸಮಯದಲ್ಲಿ ಅಸಹನೆಯು ಯಾವುದಕ್ಕೆ ಮುನ್ನಡೆಸಿತೆಂಬುದರ ಕುರಿತಾಗಿ ಯೋಚಿಸಿರಿ! ಇಂದು ಕೂಡ, ಅಸಹನೆಯು ಬಾಸ್ನಿಯ, ರ್ವಾಂಡ, ಹಾಗೂ ಮಧ್ಯ ಪೂರ್ವದಲ್ಲಿನ ಸಂಘರ್ಷಗಳಿಗೆ ಒಂದು ಅಂಶವಾಗಿದೆ.
ಸಹನೆಯು ಸಮತೋಲನವನ್ನು ಕೇಳಿಕೊಳ್ಳುತ್ತದೆ ಹಾಗೂ ಯೋಗ್ಯ ಸಮತೋಲನವನ್ನು ಕಾಪಾಡಿಕೊಳ್ಳುವುದು ಸುಲಭವಾಗಿರುವುದಿಲ್ಲ. ನಾವು ಒಂದು ಪಕ್ಕದಿಂದ ಮತ್ತೊಂದು ಪಕ್ಕಕ್ಕೆ ತೂಗಾಡುತ್ತಿರುವ ಗಡಿಯಾರವೊಂದರ ಲೋಲಕ ದಂಡದಂತಿದ್ದೇವೆ. ಕೆಲವೊಮ್ಮೆ, ನಾವು ತೀರ ಕಡಿಮೆ ಸಹನೆಯನ್ನು, ಕೆಲವೊಮ್ಮೆ ತೀರ ಹೆಚ್ಚು ಸಹನೆಯನ್ನು ತೋರಿಸುತ್ತೇವೆ.
ಸಹನೆಯಿಂದ ಅನೈತಿಕತೆಗೆ
ತೀರ ಹೆಚ್ಚು ಸಹನೆಯುಳ್ಳವರಾಗಿರಲು ಸಾಧ್ಯವಿದೆಯೋ? ಅಮೆರಿಕದ ಸೆನೆಟರ್ ಡಾನ್ ಕಾಟ್ಸ್, 1993ರಲ್ಲಿ ಮಾತಾಡುತ್ತಾ, “ಸಹನೆಯ ಅರ್ಥ ಹಾಗೂ ಆಚರಣೆಯ ಕುರಿತಾದ ಒಂದು ವಾಗ್ವಾದ”ವನ್ನು ವರ್ಣಿಸಿದರು. ಅವರು ಏನನ್ನು ಅರ್ಥೈಸಿದರು? ಸಹನೆಯ ಹೆಸರಿನಲ್ಲಿ, ಕೆಲವರು “ಒಳ್ಳೆಯದ್ದು ಹಾಗೂ ಕೆಟ್ಟದ್ದು, ಸರಿ ಹಾಗೂ ತಪ್ಪು ಎಂಬ ವಿಷಯದ ಕುರಿತಾದ ನೈತಿಕ ಸತ್ಯದಲ್ಲಿನ ನಂಬಿಕೆಯನ್ನು ತ್ಯಜಿಸಿಬಿಡುತ್ತಾರೆ” ಎಂದು ಸೆನೆಟರ್ ಪ್ರಲಾಪಿಸಿದರು. ಯಾವುದು ಸುವರ್ತನೆಯಾಗಿದೆ ಹಾಗೂ ಯಾವುದು ದುರ್ವರ್ತನೆಯಾಗಿದೆ ಎಂಬುದನ್ನು ತೀರ್ಮಾನಿಸಲು ಸಮಾಜಕ್ಕೆ ಹಕ್ಕಿಲ್ಲವೆಂದು ಅಂಥ ಜನರು ಭಾವಿಸುತ್ತಾರೆ.
1990ರಲ್ಲಿ, ಬ್ರಿಟಿಷ್ ರಾಜಕಾರಿಣಿ ಲಾರ್ಡ್ ಹೆಲ್ಶಮ್ ಬರೆದುದೇನೆಂದರೆ, “ನೈತಿಕತೆಗೆ ಅತ್ಯಂತ ಬದ್ಧವೈರಿಯು, ನಾಸ್ತಿಕತೆ, ಆಜ್ಞೇಯತಾವಾದ, ಪ್ರಾಪಂಚಿಕತೆ, ಲೋಭ ಇಲ್ಲವೇ ಇತರ ಯಾವುದೇ ಸ್ವೀಕೃತ ಕಾರಣಗಳಾಗಿರುವುದಿಲ್ಲ. ನೈತಿಕತೆಯ ನಿಜವಾದ ವೈರಿಯು, ಶೂನ್ಯವಾದ, ಅಕ್ಷರಶಃ ಯಾವುದರಲ್ಲಿಯೂ ನಂಬಿಕೆಯಿಲ್ಲದಿರುವುದೇ ಆಗಿದೆ.” ನಾವು ಯಾವುದರಲ್ಲಿಯೂ ನಂಬಿಕೆಯನ್ನಿಡದಿರುವುದಾದರೆ, ನಮಗೆ ಯೋಗ್ಯ ವರ್ತನಾ ಮಟ್ಟಗಳಿರುವುದಿಲ್ಲ ಹಾಗೂ ಪ್ರತಿಯೊಂದು ವಿಷಯವನ್ನೂ ಸಹಿಸಿಕೊಳ್ಳಸಾಧ್ಯವಿದೆ ಎಂಬುದು ಸ್ಪಷ್ಟ. ಆದರೆ ನಡತೆಯ ಪ್ರತಿಯೊಂದು ವಿಧವನ್ನು ಸಹಿಸಿಕೊಳ್ಳುವುದು ಯೋಗ್ಯವಾಗಿದೆಯೋ?
ಡೇನಿಷ್ ಪ್ರೌಢ ಶಾಲೆಯ ಪ್ರಾಂಶುಪಾಲರು ಅದು ಯೋಗ್ಯವಲ್ಲವೆಂದು ನೆನಸಿದರು. ಪ್ರಾಣಿಗಳ ಹಾಗೂ ಮನುಷ್ಯರ ನಡುವೆ ಲೈಂಗಿಕ ಸಂಭೋಗವನ್ನು ಚಿತ್ರಿಸುವ ವಿಷಯಲಂಪಟ ಮನೋರಂಜನೆಗಾಗಿ, ವಾರ್ತಾಮಾಧ್ಯಮದಲ್ಲಿ ಕೊಡಲ್ಪಟ್ಟ ಜಾಹೀರಾತುಗಳ ಕುರಿತಾಗಿ ಆಪಾದಿಸುತ್ತಾ, ಅವರು ಆದಿ 1970ಗಳಲ್ಲಿ ವಾರ್ತಾಪತ್ರಿಕೆಯ ಲೇಖನವೊಂದನ್ನು ಬರೆದರು. ಈ ಜಾಹೀರಾತುಗಳು ಡೆನ್ಮಾರ್ಕ್ನ “ಸಹನೆ”ಯ ಕಾರಣದಿಂದಲೇ ಅನುಮತಿಸಲ್ಪಟ್ಟವು.
ಸ್ಫುಟವಾಗಿ, ಸಮಸ್ಯೆಗಳು ಕೇವಲ ತೀರ ಸ್ವಲ್ಪ ಸಹನೆಯನ್ನು ತೋರಿಸುವುದರಿಂದ ಮಾತ್ರವಲ್ಲ, ತೀರ ಹೆಚ್ಚು ಸಹನೆಯನ್ನು ತೋರಿಸುವುದರಿಂದಲೂ ಏಳುತ್ತವೆ. ವಿಪರೀತಗಳಿಂದ ದೂರವಿದ್ದು, ಯೋಗ್ಯ ಸಮತೋಲನದಲ್ಲಿ ಉಳಿಯುವುದು ಏಕೆ ಕಷ್ಟಕರವಾಗಿದೆ? ದಯವಿಟ್ಟು ಮುಂದಿನ ಲೇಖನವನ್ನು ಓದಿರಿ.
[ಪುಟ 4 ರಲ್ಲಿರುವ ಚಿತ್ರ]
ಮಕ್ಕಳ ತಪ್ಪುಗಳಿಗೆ ಅತಿಯಾಗಿ ವರ್ತಿಸುವುದು, ಅವರಿಗೆ ಹಾನಿಕರವಾಗಿರಸಾಧ್ಯವಿದೆ
[ಪುಟ 5 ರಲ್ಲಿರುವ ಚಿತ್ರ]
ಮಕ್ಕಳು ಮಾಡುವ ಪ್ರತಿಯೊಂದು ವಿಷಯವನ್ನು ಸಹಿಸಿಕೊಳ್ಳುವುದು, ಅವರನ್ನು ಜೀವಿತದ ಜವಾಬ್ದಾರಿಗಳಿಗೆ ಸಿದ್ಧಪಡಿಸದು