“ಓ ಯೆಹೋವನೇ, ನನ್ನ ಎಳೆಯ ಹುಡುಗಿಯನ್ನು ನಂಬಿಗಸ್ತಳಾಗಿ ಇಡು!”
ನಾನು 1930ರಲ್ಲಿ ಫ್ರಾನ್ಸ್ನ ಆ್ಯಲ್ಸ್ಯಾಸ್ನಲ್ಲಿ, ಕಲಾತ್ಮಕ ಕುಟುಂಬವೊಂದರಲ್ಲಿ ಜನಿಸಿದೆ. ಸಾಯಂಕಾಲಗಳಲ್ಲಿ, ಆರಾಮ ಕುರ್ಚಿಯಲ್ಲಿ ಕುಳಿತುಕೊಂಡಿರುವ ತಂದೆ, ಭೂಗೋಳಶಾಸ್ತ್ರ ಯಾ ಖಗೋಳಶಾಸ್ತ್ರದ ಕುರಿತು ಯಾವುದಾದರೂ ಪುಸ್ತಕಗಳನ್ನು ಓದುತ್ತಿದ್ದರು. ನನ್ನ ನಾಯಿಮರಿಯು ಅವರ ಪಾದದ ಬಳಿ ಮಲಗಿರುತ್ತಿತ್ತು, ಮತ್ತು ತಾಯಿ ಕುಟುಂಬಕ್ಕಾಗಿ ಹೆಣೆಯುತ್ತಿರುವಾಗ, ತಂದೆ, ತನ್ನ ಓದುವಿಕೆಯಿಂದ ಕೆಲವು ಅತ್ಯುಜಲ್ವ ಭಾಗಗಳಲ್ಲಿ ಪಾಲಿಗರಾಗುತ್ತಿದ್ದರು. ಆ ಸಾಯಂಕಾಲಗಳಲ್ಲಿ ನಾನು ಎಷ್ಟು ಆನಂದಿಸಿದೆ!
ಧರ್ಮವು ನಮ್ಮ ಜೀವಿತಗಳಲ್ಲಿ ಒಂದು ದೊಡ್ಡ ಪಾತ್ರವನ್ನು ವಹಿಸಿತು. ನಾವು ದೃಢ ಕ್ಯಾತೊಲಿಕರಾಗಿದೆವ್ದು, ಮತ್ತು ಆದಿತ್ಯವಾರ ಬೆಳಗ್ಗೆ ನಾವು ಚರ್ಚಿಗೆ ಹೋಗುವುದನ್ನು ಕಂಡ ಜನರು ಹೀಗನ್ನುತ್ತಿದ್ದರು: “ಈಗ ಸಮಯ ಒಂಬತ್ತು ಗಂಟೆ. ಆರ್ನಲ್ಡ್ ಕುಟುಂಬವು ಚರ್ಚಿಗೆ ಹೋಗುತ್ತಿದೆ.” ಪ್ರತಿ ದಿನ ಶಾಲೆಗೆ ಹೋಗುವ ಮೊದಲು, ನಾನು ಚರ್ಚಿಗೆ ಹೋಗುತ್ತಿದ್ದೆ. ಆದರೆ ಪಾದ್ರಿಯ ಅಯೋಗ್ಯ ವರ್ತನೆಯಿಂದಾಗಿ, ಒಬ್ಬೊಂಟ್ಟಿಗಳಾಗಿ ನಾನು ಚರ್ಚಿಗೆ ಹೋಗುವುದನ್ನು ತಾಯಿ ನಿಷೇಧಿಸಿದರು. ಆ ಸಮಯದಲ್ಲಿ ನಾನು ಆರು ವರ್ಷ ಪ್ರಾಯದವಳಾಗಿದ್ದೆ.
ಬೈಬಲ್ಫಾರ್ಷರ್ (ಯೆಹೋವನ ಸಾಕ್ಷಿಗಳೆಂದು ಈಗ ಕರೆಯಲ್ಪಡುವ, ಬೈಬಲ್ ವಿದ್ಯಾರ್ಥಿಗಳು)ಗಳ ಕೇವಲ ಮೂರು ಪುಸ್ತಿಕೆಗಳನ್ನು ಓದಿದ ಬಳಿಕ, ನನ್ನ ತಾಯಿಯು ಮನೆಯಿಂದ ಮನೆಗೆ ಸಾರುವುದನ್ನು ಆರಂಭಿಸಿದರು. ತಂದೆ ಅದರಿಂದ ಕ್ಷೋಬೆಗೊಂಡರು. ನನ್ನ ಮುಂದೆ ಯಾವುದೇ ಧಾರ್ಮಿಕ ಚರ್ಚೆಯು ನಡೆಸಲ್ಪಡಬಾರದೆಂಬ ಒಂದು ಕಟ್ಟಳೆಯನ್ನು ಅವರು ಮಾಡಿದರು. ‘ಆ ಕಳಪೆಯ ಓದುವಿಕೆ ಇಲ್ಲ!’ ಆದರೆ ತಾಯಿಯು ಸತ್ಯದ ಕುರಿತು ಎಷ್ಟು ಉತ್ಸಾಹಿಯಾಗಿದ್ದರೆಂದರೆ, ನನ್ನೊಂದಿಗೆ ಸ್ವಲ್ಪ ಬೈಬಲ್ ಓದುವಿಕೆಯನ್ನು ಮಾಡಲು ಅವರು ನಿಶ್ಚಯಿಸಿದರು. ಬೈಬಲಿನ ಕ್ಯಾತೊಲಿಕ್ ತರ್ಜುಮೆಯನ್ನು ಅವರು ಪಡೆದರು ಮತ್ತು ಪ್ರತಿದಿನ ಬೆಳಗ್ಗೆ, ತಂದೆಗೆ ವಿಧೇಯರಾಗಲು, ಅದರ ಕುರಿತು ಚರ್ಚಿಸದೆ ಓದಿದರು.
ಒಂದು ದಿನ ಅವರು ಕೀರ್ತನೆ 115:4-8ನ್ನು ಓದಿದರು: “ಅವರ ವಿಗ್ರಹಗಳೋ ಬೆಳ್ಳಿಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ. . . . ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವರೂ ಅವುಗಳಂತೆಯೇ.” “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು,” ಎಂಬ ಎರಡನೆಯ ಆಜ್ಞೆಯೊಂದಿಗೆ ಅವರು ಅದನ್ನು ಜೋಡಿಸಿದರು. (ವಿಮೋಚನಕಾಂಡ 20:4-6) ನಾನು ಕೂಡಲೇ ಎದ್ದು ನನ್ನ ಕೋಣೆಯಲ್ಲಿದ್ದ ನನ್ನ ವೈಯಕ್ತಿಕ ಪೂಜಾವೇದಿಕೆಯನ್ನು ನಾಶಮಾಡಿದೆ.
ನಾನು ಶಾಲೆಗೆ ಹೋಗಿ ನನ್ನ ಕ್ಯಾತೊಲಿಕ್ ಸಹಪಾಠಿಗಳೊಂದಿಗೆ ನನ್ನ ದೈನಿಕ ಬೈಬಲ್ ಓದುವಿಕೆಯಲ್ಲಿ ಪಾಲಿಗಳಾಗುತ್ತಿದ್ದೆ. ಅದು ಶಾಲೆಯಲ್ಲಿ ಸಾಕಷ್ಟು ಅಶಾಂತಿಯನ್ನು ಉಂಟುಮಾಡಿತು. ಅನೇಕ ವೇಳೆ ಮಕ್ಕಳು ನನ್ನನ್ನು “ಗಬ್ಬು ಯೆಹೂದ್ಯೆ” ಎಂದು ಕರೆಯುತ್ತಾ, ರಸ್ತೆಯಲ್ಲಿ ನನ್ನನ್ನು ಹಿಂಬಾಲಿಸುತ್ತಿದ್ದರು! ಅದು 1937ರಲ್ಲಿ ನಡೆದ ವಿಷಯವಾಗಿತ್ತು. ಈ ಸನ್ನಿವೇಶವು ನಾನು ಏನನ್ನು ಕಲಿಯುತಿದ್ದೇನೆಂದು ನನ್ನ ತಂದೆಯು ಪರಿಶೀಲಿಸುವಂತೆ ಮಾಡಿತು. ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟ ಸೃಷ್ಟಿ (ಕ್ರಿಯೇಷನ್) ಎಂಬ ಪುಸ್ತಕವನ್ನು ಅವರು ಸ್ವತಃ ಪಡೆದುಕೊಂಡರು. ಅದನ್ನು ಅವರು ಓದಿದರು ಮತ್ತು ಸ್ವತಃ ತಾವೇ ಒಬ್ಬ ಸಾಕ್ಷಿಯಾದರು!
ಜರ್ಮನ್ ಸೈನ್ಯವು ಬೆಲ್ಜಿಯಮ್ ಸೀಮೆಯ ಮುಖಾಂತರ ಫ್ರಾನ್ಸ್ ದೇಶವನ್ನು ಪ್ರವೇಶಿಸಿದ ಕೂಡಲೇ, ಪುರಸಭಾ ಭವನದ ಮೇಲೆ ಫ್ರೆಂಚ್ ಧ್ವಜವು ಇನ್ನೂ ಹಾರುತ್ತಿದ್ದರೂ, ಚರ್ಚುಗಳ ಮೇಲೆ ಇದ್ದ ಧ್ವಜಗಳ ಮೇಲೆ ಸ್ವಸ್ತಿಕ ಚಿಹ್ನೆಗಳನ್ನು ನಾವು ಕಾಣತೊಡಗಿದೆವು. ಫ್ರೆಂಚ್ ಸರಕಾರವು ನಮ್ಮ ರಾಜ್ಯ ಸಭಾಗೃಹವನ್ನು ಮುಚ್ಚಿತ್ತು ಮತ್ತು ಯೆಹೋವನ ಸಾಕ್ಷಿಗಳ ಕೆಲಸವನ್ನು ನಿಷೇಧಿಸಿತ್ತು, ಮತ್ತು ಜರ್ಮನರು ಬಂದಾಗ, ನಾವು ಆಗಲೇ ಗೋಪ್ಯವಾಗಿ ಕೆಲಸಮಾಡುತ್ತಿದ್ದೆವು. ಆದರೆ ಸಾಕ್ಷಿಗಳನ್ನು ಜಜ್ಜುವ ಪ್ರಯತ್ನವು ತೀಕ್ಷೈಗೊಂಡಿತು. ಎರಡು ವರ್ಷಗಳಾನಂತರ, 11ನೆಯ ವಯಸ್ಸಿನಲ್ಲಿ ನಾನು ದೀಕ್ಷಾಸ್ನಾನವನ್ನು ಪಡೆದೆ.
ಒಂದು ತಿಂಗಳ ನಂತರ, ಸೆಪ್ಟಂಬರ 4, 1941ರಂದು, ಮಧ್ಯಾಹ್ನ ಎರಡು ಗಂಟೆಗೆ, ಬಾಗಿಲ ಗಂಟೆ ಬಾರಿಸಿತು. ತಂದೆಯು ಕೆಲಸದಿಂದ ಬರಬೇಕಿತ್ತು. ನಾನು ಜಿಗಿದು ಹೋಗಿ ಬಾಗಿಲನ್ನು ತೆರೆದು, ಅವರನ್ನು ಅಪ್ಪಿಕೊಂಡೆ. ಅವರ ಹಿಂದೆ ಇದ್ದ ಒಬ್ಬ ಮನುಷ್ಯನು, “ಹೈಲ್ ಹಿಟ್ಲರ್” ಎಂದು ಕೂಗಿದ! ಅವನ ಅಪ್ಪುಗೆಯಿಂದ ಬಿಡುಗಡೆ ಹೊಂದಿ, ನಾನು ಅಪ್ಪಿಕೊಂಡಿದ್ದ ಮನುಷ್ಯನು ಎಸ್ಎಸ್ ಸೈನಿಕನಾಗಿದ್ದನೆಂದು ನಾನು ಆಗ ಗ್ರಹಿಸಿದೆ! ಅವರು ನನ್ನನ್ನು ನನ್ನ ಕೋಣೆಗೆ ಕಳುಹಿಸಿ, ನನ್ನ ತಾಯಿಯನ್ನು ನಾಲ್ಕು ತಾಸಿನ ಪಾಟಿಸವಾಲಿಗೆ ಗುರಿಮಾಡಿದರು. ಅವರು ಬಿಟ್ಟು ಹೋಗುವಾಗ, ಅವರಲ್ಲಿ ಒಬ್ಬನು, “ನಿನ್ನ ಗಂಡನನ್ನು ನೀನು ಇನ್ನೆಂದೂ ನೋಡಲಾರೆ! ನಿನ್ನ ಗಂಡನಿಗೆ ಆದಂತೆ ನಿನಗೂ ನಿನ್ನ ಮಗುವಿಗೂ ಆಗುವುದು,” ಎಂದು ಕೂಗಿಹೇಳಿದನು!
ತಂದೆಯನ್ನು ಆ ದಿನ ಬೆಳಗ್ಗೆ ಸೆರೆಹಿಡಿಯಲಾಗಿತ್ತು. ಅವರ ಜೇಬಿನಲ್ಲಿ ಆ ತಿಂಗಳದ ಸಂಬಳವಿತ್ತು. ಎಸ್ಎಸ್ ಪಡೆಯವರು ಬ್ಯಾಂಕ್ ಖಾತೆಯನ್ನು ಮುಚ್ಚಿ, ಒಂದು ಕೆಲಸವನ್ನು ಪಡೆಯಲು ಆವಶ್ಯಕವಾಗಿ ಬೇಕಾದ ಒಂದು ದಸ್ತೈವಜು—ಒಂದು ಕೆಲಸಮಾಡುವ ಕಾರ್ಡನ್ನು ನನ್ನ ತಾಯಿಗೆ ಕೊಡಲು ನಿರಾಕರಿಸಿದನು. ಈಗ ಅವರ ನೀತಿಯು: “ಆ ನೀಚರಿಗೆ ಜೀವನೋಪಾಯ ಇಲ್ಲ” ಎಂದಾಗಿತ್ತು!
ಶಾಲೆಯಲ್ಲಿ ಹಿಂಸೆ
ಈ ಸಮಯದಲ್ಲಿ ನಾನು ಹಾಜರಾಗುತ್ತಿದ್ದ ಕಾಲೇಜು ಶಿಕ್ಷಣಕ್ಕಾಗಿ ತರಬೇತು ಮಾಡುವ ಪ್ರಾಥಮಿಕ ಶಾಲೆಯಲ್ಲಿ ಒತ್ತಡಗಳು ಹೆಚ್ಚಾಗಲು ಮುಂದುವರಿದವು. ಶಿಕ್ಷಕರು ಕ್ಲಾಸಿನೊಳಗೆ ಬಂದಾಗಲ್ಲೆಲ್ಲಾ, ಎಲ್ಲಾ 58 ವಿದ್ಯಾರ್ಥಿಗಳು ಪೂರ್ತಿ ಚಾಚಿದ ಕೈಗಳೊಂದಿಗೆ ಎದ್ದು, “ಹೈಲ್ ಹಿಟ್ಲರ್” ಎಂದು ಹೇಳಬೇಕಿತ್ತು. ಧಾರ್ಮಿಕ ಶಿಕ್ಷಣಕ್ಕಾಗಿ ಪಾದ್ರಿಯು ಬಂದಾಗ, ಅವನು ಒಳಗೆ ಬಂದು, “ಹೈಲ್ ಹಿಟ್ಲರ್—ಕರ್ತನ ಹೆಸರಿನಲ್ಲಿ ಬರುವವನು ಧನ್ಯನು” ಎಂದು ಹೇಳುತ್ತಿದ್ದನು. ಕ್ಲಾಸು, “ಹೈಲ್ ಹಿಟ್ಲರ್—ಆಮೆನ್” ಎಂದು ಉತ್ತರಿಸುತ್ತಿತ್ತು!
“ಹೈಲ್ ಹಿಟ್ಲರ್” ಎಂದು ಹೇಳಲು ನಾನು ನಿರಾಕರಿಸಿದೆನು, ಮತ್ತು ಈ ವಿಷಯವು ಶಾಲಾ ನಿರ್ದೇಶಕರ ಮುಂದೆ ಬಂದಿತು. “ಶಾಲಾ ನಿಯಮಗಳಿಗೆ ಒಬ್ಬ ವಿದ್ಯಾರ್ಥಿಯು ಅಧೀನಳಾಗುತ್ತಿಲ್ಲ, ಒಂದು ವಾರದ ಸಮಯದಲ್ಲಿ ಯಾವ ಬದಲಾವಣೆಯೂ ಸಂಭವಿಸದಿದ್ದರೆ, ಈ ವಿದ್ಯಾರ್ಥಿಗೆ ಶಾಲೆಯನ್ನು ಬಿಡಬೇಕಾಗುವುದು,” ಎಂದು ಹೇಳುವ ಒಂದು ಎಚ್ಚರಿಕೆಯ ಪತ್ರವನ್ನು ಬರೆಯಲಾಯಿತು. ಈ ಪತ್ರವನ್ನು 20ಕ್ಕಿಂತ ಹೆಚ್ಚಿನ ಕ್ಲಾಸ್ಗಳಲ್ಲಿ ಓದಬೇಕು ಎಂಬುದಾಗಿ ಕೊನೆಯಲ್ಲಿ ಅದು ತಿಳಿಸಿತು.
ನನ್ನ ಕ್ಲಾಸಿನ ಮುಂದೆ ನನ್ನನ್ನು ಕರೆಯಿಸಿ, ನನ್ನ ನಿರ್ಣಯವನ್ನು ತಿಳಿಯಪಡಿಸುವ ದಿನ ಬಂದಿತು. ವಂದಿಸಲು ಯಾ ನನ್ನ ಶಾಲಾ ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಶಾಲಾ ನಿರ್ದೇಶಕರು ನನಗೆ ಐದು ನಿಮಿಷಗಳನ್ನು ಹೆಚ್ಚಿಗೆ ಕೊಟ್ಟರು. ಗಡಿಯಾರದಲ್ಲಿ ಆ ಐದು ನಿಮಿಷಗಳು ಒಂದು ನಿತ್ಯತೆಯಂತೆ ತೋರಿತು. ನನ್ನ ಕಾಲುಗಳು ಬಲಹೀನಗೊಂಡವು, ನನ್ನ ತಲೆ ಭಾರವಾಯಿತು, ನನ್ನ ಹೃದಯವು ಕುಟ್ಟುತ್ತಿತ್ತು. ಒಂದು ಕರ್ಕಶ ಧ್ವನಿಯ “ಹೈಲ್ ಹಿಟ್ಲರ್,” ಮತ್ತು ಇಡೀ ಕ್ಲಾಸು ಅದನ್ನು ಮೂರು ಬಾರಿ ಪುನರಾವರ್ತಿಸುವ ಮೂಲಕ, ಇಡೀ ಕ್ಲಾಸಿನ ನಿಶ್ಶಬ್ದತೆಯು ಭೇದಿಸಲ್ಪಟ್ಟಿತು. ನಾನು ಮೇಜಿನ ಬಳಿ ಓಡಿ, ನನ್ನ ಪುಸ್ತಕಗಳನ್ನು ತೆಗೆದುಕೊಂಡು, ಹೊರಗೆ ಓಡಿಹೋದೆ.
ಮುಂದಿನ ಸೋಮವಾರ, ಇನ್ನೊಂದು ಶಾಲೆಗೆ ಹೋಗಲು ನನಗೆ ಅನುಮತಿ ನೀಡಲಾಯಿತು. ಬೇರೆ ಶಾಲೆಯಿಂದ ನನ್ನನ್ನು ಯಾಕೆ ಹೊರಗೆ ಹಾಕಲಾಯಿತು ಎಂದು ನಾನು ಯಾರಿಗೂ ಹೇಳದೆ ಇರುವೆನು ಎಂಬ ಕರಾರಿನ ಮೇಲೆ ನಾನು ಶಾಲೆಗೆ ಮತ್ತೆ ಬರಬಹುದಿತ್ತು ಎಂದು ನಿರ್ದೇಶಕರು ಹೇಳಿದರು. ನನ್ನ ಸಹಪಾಠಿಗಳು ನನ್ನ ವಿರುದ್ಧ ಎದ್ದು, ನನ್ನನ್ನು ಕಳ್ಳಿಯೆಂತಲೂ, ಒಬ್ಬ ಅಪರಾಧಿಯೆಂತಲೂ ಕರೆಯುತ್ತಾ, ಆ ಕಾರಣಕ್ಕಾಗಿಯೇ ನನ್ನನ್ನು ಕಳುಹಿಸಲಾಗಿತ್ತೆಂದು ಹೇಳಿದರು. ನಿಜವಾದ ಕಾರಣವನ್ನು ವಿವರಿಸಲು ನನಗೆ ಸಾಧ್ಯವಾಗಲಿಲ್ಲ.
ಕ್ಲಾಸಿನ ಹಿಂದುಗಡೆ ನನ್ನನ್ನು ಕುಳ್ಳಿರಿಸಲಾಗಿತ್ತು. ನನ್ನ ಪಕ್ಕದಲ್ಲಿ ಇದ್ದ ಹುಡುಗಿಯು ನಾನು ವಂದಿಸುತ್ತಿಲ್ಲ ಎಂಬುದನ್ನು ಗ್ರಹಿಸಿದಳು. ನಾನೊಬ್ಬಾಕೆ ಫ್ರೆಂಚ್ ಪ್ರತಿಭಟಕಳು ಎಂದು ಅವಳು ನೆನಸಿದಳು. ಹಿಟ್ಲರನನ್ನು ವಂದಿಸಲು ನಾನು ಯಾಕೆ ನಿರಾಕರಿಸಿದೆನು ಎಂಬುದನ್ನು ನಾನು ಅವಳಿಗೆ ವಿವರಿಸಲೇ ಬೇಕಾಯಿತು. “ಅಪೊಸ್ತಲ ಕೃತ್ಯಗಳು 4:12ಕ್ಕನುಸಾರ, ‘ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ.’ ಕ್ರಿಸ್ತನು ಮಾತ್ರ ನಮ್ಮ ರಕ್ಷಕನಾಗಿದ್ದಾನೆ. ‘ಹೈಲ್’ (ವಂದಿಸು) ಎಂಬ ಪದವು ಯಾರಿಂದಲೊ ರಕ್ಷಣೆಯನ್ನು ಪಡೆಯುವುದಕ್ಕಾಗಿ ಉಪಯೋಗಿಸಲ್ಪಡುವ ಕಾರಣ, ನಾನು ಈ ರಕ್ಷಣೆಯನ್ನು, ಹಿಟ್ಲರನನ್ನು ಸೇರಿಸಿ ಯಾವ ಮನುಷ್ಯನಿಗೂ ಆರೋಪಿಸಲಾರೆ.” ಈ ಹುಡುಗಿ ಮತ್ತು ಅವಳ ತಾಯಿಯು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದರು ಮತ್ತು ಸ್ವತಃ ತಾವೇ ಸಾಕ್ಷಿಗಳಾದರು!
ಭೂಗತ ಚಟುವಟಿಕೆ
ಈ ಎಲ್ಲಾ ಸಮಯದಲ್ಲಿ, ಭೂಗತವಾಗಿ ಸಾರುವುದನ್ನು ನಾವು ಮುಂದುವರಿಸಿದೆವು. ಪ್ರತಿ ತಿಂಗಳಿನ ಮೊದಲನೆಯ ಆದಿತ್ಯವಾರ, ಗುಡ್ಡಗಳಲ್ಲಿ ಒಂದು ಸ್ಥಳಕ್ಕೆ ನಾವು ಹೋದೆವು. ಅಲ್ಲಿ ಕಾವಲಿನಬುರುಜುವಿನ ಫ್ರೆಂಚ್ ಸಂಚಿಕೆಯನ್ನು ನಾವು ಜರ್ಮನ್ ಭಾಷೆಯಲ್ಲಿ ಭಾಷಾಂತರಿಸಬೇಕಿತ್ತು. ಕಾವಲಿನಬುರುಜು ಪತ್ರಿಕೆಯನ್ನು ಕೊಂಡೊಯ್ಯಲು, ಗುಟ್ಟಾದ ಒಂದು ಜೇಬಿರುವ ವಿಶೇಷವಾದ ಕಾಲೀಲ್ಚದ ಬಿಗಿಪಟ್ಟಿಯನ್ನು ತಾಯಿಯು ನನಗಾಗಿ ಮಾಡಿದ್ದಳು. ಒಂದು ದಿನ ನಾವು ಇಬ್ಬರು ಸೈನಿಕರಿಂದ ನಿಲ್ಲಿಸಲ್ಪಟ್ಟು ಗುಡ್ಡಗಳಲ್ಲಿದ್ದ ಒಂದು ಹೊಲಕ್ಕೆ ಒಯ್ಯಲ್ಪಟ್ಟೆವು, ಮತ್ತು ಅಲ್ಲಿ ನಮ್ಮನ್ನು ಪರೀಕ್ಷಿಸಲಾಯಿತು. ನಾನು ಎಷ್ಟು ನಿಶ್ಶಕ್ತಳಾದೆನೆಂದರೆ, ಹುಲ್ಲಿನ ಮೇಲೆ ಮಲಗುವಂತೆ ಅವರು ನನಗೆ ಹೇಳಿದರು, ಮತ್ತು ಇದರಿಂದ, ಅವರು ಕಾವಲಿನಬುರುಜು ಪತ್ರಿಕೆಯನ್ನು ಕಂಡುಹಿಡಿಯಲೇ ಇಲ್ಲ. ಒಂದಲ್ಲ ಇನ್ನೊಂದು ರೀತಿಯಲ್ಲಿ, ಯೆಹೋವನು ಯಾವಾಗಲೂ ನನ್ನನ್ನು ಪಾರುಮಾಡುವಂತೆ ತೋರಿತು.
ಒಂದು ದಿನ ಒಬ್ಬ “ಮನೋರೋಗ ಚಿಕಿತ್ಸಕ”ನ ಬಳಿ ಹೋಗುವಂತೆ ನನಗೆ ಕರೆ ಬಂದಿತು. ಅವರು ಇಬ್ಬರು ಎಸ್ಎಸ್ ಸೈನಿಕರೆಂದು ಗೊತ್ತಾಗಿ ಬಂತು. ಇತರ ಸಾಕ್ಷಿ ಮಕ್ಕಳು ಕೂಡ ಅಲಿದ್ದರು. ಒಳಗೆ ಕರೆಯಲ್ಪಟ್ಟವರಲ್ಲಿ ನಾನು ಕೊನೆಯವಳಾಗಿದ್ದೆ. ಆ ಇಬ್ಬರು “ವೈದ್ಯರು” ಒಂದು ಮೇಜಿನ ಹಿಂದೆ ಕುಳಿತುಕೊಂಡರು, ನನ್ನ ಮುಖದ ಮೇಲೆ ಪ್ರಜ್ವಲಿಸುವ ಒಂದು ಬೆಳಕಿನ ಎದುರು ನಾನು ಕುಳಿತೆ, ಮತ್ತು ಪಾಟಿಸವಾಲು ಆರಂಭವಾಯಿತು. ಒಬ್ಬ “ವೈದ್ಯನು” ಯಾವುದೊ ಭೌಗೋಲಿಕ ಯಾ ಐತಿಹಾಸಿಕ ಪ್ರಶ್ನೆಗಳನ್ನು ಕೇಳುತ್ತಿದ್ದನು, ಆದರೆ ನಾನು ಉತ್ತರ ನೀಡುವ ಮೊದಲು, ಇನ್ನೊಬ್ಬನು ಭೂಗತ ಕೆಲಸಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದನು. ಬೇರೆ ಸಾಕ್ಷಿಗಳ ಹೆಸರುಗಳಿಗಾಗಿಯೂ ಕೂಡ ಅವನು ಕೇಳುತ್ತಿದ್ದನು. ನಾನೊಂದು ಮಾನಸಿಕ ಕುಸಿತದ ಅಂಚಿನಲ್ಲಿದ್ದಾಗ, ಒಂದು ಫೋನ್ ಕರೆಯು ಅವರ ಪ್ರಶ್ನಮಾಲೆಯನ್ನು ಭಂಗಪಡಿಸಿತು. ಯೆಹೋವನ ಸಹಾಯವು ಯಾವಾಗಲೂ ಎಷ್ಟು ಅದ್ಭುತಕರವಾಗಿ ಬಂದಿತು!
ನಮ್ಮ ನಂಬಿಕೆಗಳನ್ನು ನಾನು ನಮ್ಮ ಸಹಪಾಠಿಗಳಲ್ಲಿ ಒಬ್ಬಳಿಗೆ ವಿವರಿಸುತ್ತಾ ಇದ್ದೆನೆಂದು ನನ್ನ ಶಾಲಾ ನಿರ್ದೇಶಕರು ಅರಿತಾಗ, ನನ್ನನ್ನು ದಸ್ತಗಿರಿಮಾಡಲಾಯಿತು, ನ್ಯಾಯವಿಚಾರಿಸಲಾಯಿತು, ಮತ್ತು ಒಬ್ಬ ನ್ಯಾಯಾಧೀಶನ ಮೂಲಕ ಒಂದು “ಸುಧಾರಣೆಯ ಶಾಲೆ”ಗೆ ಕಳುಹಿಸಲಾಯಿತು. ‘ನ್ಯಾಯ ಶಾಸ್ತ್ರದ ಮೂಲಕ ನಿಷೇಧಿಸಲ್ಪಟ್ಟ ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳ ಸಂಘ ಅವರ ಬೋಧನೆಗಳಲ್ಲಿ ಅವಳು ಬೆಳೆಸಲ್ಪಟ್ಟಿದ್ದಾಳೆ, ಮತ್ತು ಅವಳೊಬ್ಬ ಭ್ರಷ್ಟ ವ್ಯಕ್ತಿಯಾಗುವಳು, ಹಾಗೂ ಇತರರಿಗೆ ಒಂದು ಅಪಾಯವಾಗಿರುವಳು’ ಎಂಬುದಾಗಿ ತೀರ್ಪು ಗಮನಿಸಿತು. ಈಗ 12 ವರ್ಷ ಪ್ರಾಯದವಳಾಗಿದ್ದ ನನಗೆ, ಆ ಭಯ ಹುಟ್ಟಿಸುವ ನ್ಯಾಯಾಲಯದಲ್ಲಿ, ಅದೊಂದು ಭಯಂಕರ ಪರೀಕೆಯ್ಷಾಗಿತ್ತು! ಹಾಗಿದ್ದರೂ, ಆಡಳಿತದಲ್ಲಿ ಕೆಲಸಮಾಡುತ್ತಿದ್ದ ಒಬ್ಬ ಸಹಾನುಭೂತಿಯುಳ್ಳ ಮಿತ್ರನ ಸಹಾಯದಿಂದಾಗಿ, ನನ್ನ ತೀರ್ಪನ್ನು ಕೂಡಲೇ ಕಾರ್ಯರೂಪಕ್ಕೆ ಹಾಕಲಿಲ್ಲ.
ಒಂದು ತಿಂಗಳಾದ ನಂತರ, ಎರಡು ವಾರಗಳಿಗಾಗಿ ಹಿಟ್ಲರ್ ಯುವ ಜನರ ತರಬೇತಿ ಶಿಬಿರಕ್ಕೆ ಹೋಗಲು, ನಮ್ಮ ಶಾಲಾ ಕ್ಲಾಸನ್ನು ಆರಿಸಲಾಯಿತು. ಅದರ ಕುರಿತು ನಾನು ನನ್ನ ತಾಯಿಯೊಡನೆ ಮಾತಾಡಲೇ ಇಲ್ಲ. ಅಲ್ಲಿಗೆ ಹೋಗಬಾರದೆಂಬ ನನ್ನ ನಿರ್ಣಯದ ಬಗ್ಗೆ ಯಾವುದೇ ಜವಾಬ್ದಾರಿಯನ್ನು ಅವಳು ಹೊತ್ತುಕೊಳ್ಳುವುದು ನನಗೆ ಬೇಕಾಗಿರಲಿಲ್ಲ. ಹೊರಡುವ ದಿನವು ಬರುವ ಮೊದಲೆ, ಶಾಲಾ ನಿರ್ದೇಶಕರು ನನ್ನನ್ನು ಎಚ್ಚರಿಸಿದರು: “ಸೋಮವಾರದಂದು ನೀನು ರೈಲು ನಿಲ್ದಾಣದಲ್ಲಾಗಲಿ ಯಾ ನನ್ನ ಆಫೀಸಿನಲ್ಲಿಯಾಗಲಿ ಇರದಿದ್ದರೆ, ನಿನ್ನ ಹಿಂದೆ ನಾನು ಪೊಲೀಸರನ್ನು ಕಳುಹಿಸುವೆನು!”
ಆದುದರಿಂದ ಸೋಮವಾರ ಬೆಳಗ್ಗೆ ಶಾಲೆಗೆ ಹೋಗುವ ದಾರಿಯಲ್ಲಿ ನಾನು ರೈಲು ನಿಲ್ದಾಣವನ್ನು ಹಾದು ಹೋದೆ. ನನ್ನ ಎಲ್ಲಾ ಸಹಪಾಠಿಗಳು ಅವರೊಂದಿಗೆ ಹೋಗಲು ನನ್ನನ್ನು ಕರೆಯುತ್ತಾ ಇದ್ದರು, ಆದರೆ ನಾನು ನಿರ್ದೇಶಕರ ಆಫೀಸಿಗೆ ಹೋಗಲು ನಿಶ್ಚಯಿಸಿದ್ದೆ. ಅಲ್ಲಿ ಹೋಗಿ ಸೇರಲು ನನಗೆ ತಡವಾಗಿದರ್ದಿಂದ, ರೈಲು ಗಾಡಿಯಲ್ಲಿ ನಾನು ಇತರರೊಂದಿಗೆ ಹೋಗಿದ್ದೇನೆಂದು ಅವರು ಊಹಿಸಿದರು. ನನ್ನನ್ನು ಕಂಡಾಗ ಅವರು ಅತ್ಯುಗ್ರಗೊಂಡರು. ಅವರು ನನ್ನನ್ನು ಅವರ ಕ್ಲಾಸಿಗೆ ಕರೆದುಕೊಂಡು ಹೋಗಿ, ಇಡೀ ಕ್ಲಾಸನ್ನು ನಾಲ್ಕು ತಾಸುಗಳ ಕಾಲ ಕಷ್ಟಾನುಭವಿಸಲು ಬಿಟ್ಟರು. ಉದಾಹರಣೆಗೆ, ಪ್ರತಿಯೊಂದು ಮಗುವನ್ನು ಅವರು ಕ್ಲಾಸಿನ ಮುಂದೆ ಕರೆಯಿಸಿ, ಅವರ ಪುಸ್ತಕವನ್ನು ಅವರಿಗೆ ಕೊಡುವ ಬದಲು, ಅದರಿಂದ ಅವರ ಮುಖಕ್ಕೆ ಹೊಡೆಯುತ್ತಿದ್ದರು. ನನ್ನನ್ನು ಸೂಚಿಸಿ, “ಇವಳು ಹೊಣೆಯಾಗಿದ್ದಾಳೆ” ಎಂದು ಹೇಳುತ್ತಿದ್ದರು. ಕೇವಲ ಹತ್ತು ವರ್ಷ ಪ್ರಾಯದ 45 ಮಕ್ಕಳನ್ನು ನನ್ನ ವಿರುದ್ಧ ಏಳುವಂತೆ ಅವರು ಪ್ರಯತ್ನಿಸಿದರು. ಆದರೆ ಕ್ಲಾಸು ಕೊನೆಗೊಂಡಾಗ, ನಾನು ಸೈನಿಕ ಹಾಡುಗಳನ್ನು ಹಾಡಲು ನಿರಾಕರಿಸುತ್ತಾ ಇದ್ದ ಕಾರಣ ಮಕ್ಕಳು ನನ್ನನ್ನು ಅಭಿನಂದಿಸಿದರು.
ತದನಂತರ ಹಾಳೆ, ಡಬ್ಬಿಗಳನ್ನು, ಮತ್ತು ಎಲುಬುಗಳನ್ನು ವಿಂಗಡಿಸಲು ನನ್ನನ್ನು ನೇಮಿಸಲಾಯಿತು. ಡಬ್ಬಿಗಳನ್ನು ಸೈನಿಕ ಉದ್ದೇಶಗಳಿಗಾಗಿ ಉಪಯೋಗಿಸುತ್ತಿದದ್ದರಿಂದ, ನಾನು ಅದನ್ನು ಮಾಡಲು ನಿರಾಕರಿಸಿದೆ. ನನ್ನನ್ನು ಹೊಡೆದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಡಲಾಯಿತು. ತದನಂತರ ಎದ್ದು ನಿಲ್ಲುವಂತೆ ನನ್ನ ಸಹಪಾಠಿಗಳು ನನಗೆ ಸಹಾಯ ಮಾಡಿದರು.
ನಾನು ಶಾಲೆಗೆ ಹಿಂದಿರುಗಿದಾಗ, ಎಲ್ಲಾ ಕ್ಲಾಸುಗಳು, ಸುಮಾರು 800 ಮಕ್ಕಳು ಒಂದು ಧ್ವಜಕಂಭದ ಸುತ್ತಲೂ ಪ್ರಾಂಗಣದಲ್ಲಿ ನಿಂತಿರುವುದನ್ನು ನೋಡಿ ನಾನು ಆಶ್ಚರ್ಯಚಕಿತಳಾದೆ. ನನ್ನನ್ನು ಮಧ್ಯದಲ್ಲಿ ನಿಲ್ಲಿಸಲಾಯಿತು. ಸ್ವಾತಂತ್ರ್ಯದ ಒಂದು ದೀರ್ಘ ವರ್ಣನೆ ಮತ್ತು ದೇಶದ್ರೋಹಿಗಳಿಗೆ ಆಗುವ ಫಲಿತಾಂಶವನ್ನು ನೀಡಲಾಯಿತು, ಅದನ್ನು ಜೀಗ್ ಹೈಲ್! (ಜಯ ಮತ್ತು ರಕ್ಷಣೆ)ನ ಮೂರು ಕರೆಗಳು ಹಿಂಬಾಲಿಸಿದವು. ಬಿಗಿಯಾಗಿ ಮತ್ತು ನಡಗುತ್ತಾ ನಾನು ನಿಂತಿರುವುದರೊಂದಿಗೆ ರಾಷ್ಟ್ರೀಯ ಗೀತೆಯನ್ನು ಹಾಡಲಾಯಿತು. ಯೆಹೋವನು ನನ್ನನ್ನು ಬೆಂಬಲಿಸಿದನು; ನಾನು ಸಮಗ್ರತೆಯನ್ನು ಕಾಪಾಡಿಕೊಂಡೆ. ಆಮೇಲೆ ನಮ್ಮ ಕೋಣೆಯನ್ನು ಪ್ರವೇಶಿಸಿದಾಗ, ಮಂಚದ ಮೇಲೆ ನನ್ನ ಬಟ್ಟೆಗೆಳು ಬಿದ್ದಿರುವುದನ್ನು ಮತ್ತು ಹೀಗೆ ಹೇಳುವ ಒಂದು ಪತ್ರವನ್ನು ನಾನು ಕಂಡೆ: “ಸಿಮೋನ್ ಆರ್ನಲ್ಡ್ ನಾಳೆ ಬೆಳಗ್ಗೆ ರೈಲು ನಿಲ್ದಾಣದಲ್ಲಿ ತನ್ನನ್ನು ಪ್ರಸ್ತುತಪಡಿಸಿಕೊಳ್ಳಬೇಕು.”
ಸುಧಾರಣೆಯ ಶಾಲೆಗೆ
ಮರುದಿನ ಬೆಳಗ್ಗೆ ತಾಯಿ ಮತ್ತು ನಾನು ರೈಲು ನಿಲ್ದಾಣದಲ್ಲಿದೆವ್ದು. ಇಬ್ಬರು ಸ್ತ್ರೀಯರು ನನ್ನನ್ನು ತಮ್ಮ ವಶದಲ್ಲಿ ತೆಗೆದುಕೊಂಡರು. ರೈಲು ಗಾಡಿಯಲ್ಲಿ ತಾಯಿ ನನ್ನ ವರ್ತನೆಯ ಕುರಿತಾದ ಅವಳ ಬುದ್ಧಿವಾದವನ್ನು ಪುನರಾವರ್ತಿಸಿದರು. “ಅನ್ಯಾಯವನ್ನು ಅನುಭವಿಸುತ್ತಿರುವಾಗ ಕೂಡ, ಯಾವಾಗಲೂ ಸಭ್ಯಳಾಗಿ, ದಯೆಯುಳ್ಳವಳಾಗಿ ಮತ್ತು ಮೃದು ಸ್ವಭಾವದವಳಾಗಿ ಇರು. ಎಂದೂ ಹಟಮಾರಿಯಾಗಿರ ಬೇಡ. ಎಂದೂ ಎದುರು ಮಾತಾಡಬೇಡ ಯಾ ದುರಹಂಕಾರದಿಂದ ಉತ್ತರಿಸಬೇಡ. ಸ್ಥಿರಚಿತ್ತರಾಗಿರುವುದು ಹಟಮಾರಿಗಳಾಗಿರುವುದರೊಡನೆ ಯಾವುದೇ ಸಂಬಂಧವನ್ನು ಇಟ್ಟುಕೊಳ್ಳುವುದಿಲ್ಲ ಎಂಬುದನ್ನು ನೆನಪಿನಲ್ಲಿಡು. ಅದು ನಿನ್ನ ಭವಿಷ್ಯತ್ತಿನ ಜೀವನಕ್ಕಾಗಿ ನಿನ್ನ ಶಾಲಾ ಶಿಕ್ಷಣವಾಗಿರಲಿದೆ. ನಮ್ಮ ಭವಿಷ್ಯತ್ತಿನ ಪ್ರಯೋಜನಕ್ಕಾಗಿ ನಾವು ಕಷ್ಟಗಳನ್ನು ಅನುಭವಿಸಬೇಕೆಂಬುದು ಯೆಹೋವನ ಚಿತ್ತವಾಗಿದೆ. ಅದಕ್ಕಾಗಿ ನೀನು ಸಿದ್ಧಳಾಗಿರುವೆ. ನಿನಗೆ ಹೊಲಿಯುವುದು, ಅಡಿಗೆ ಮಾಡುವುದು, ಬಟ್ಟೆ ಒಗೆಯುವುದು, ಮತ್ತು ತೋಟಗಾರಿಕೆ ಮಾಡುವುದು ಹೇಗೆ ಎಂಬುದು ಗೊತ್ತಿದೆ. ನೀನಿಗ ಒಬ್ಬ ಯೌವನಸ್ಥೆಯಾಗಿರುವೆ.”
ಆ ಸಂಜೆ, ನಮ್ಮ ಹೋಟೆಲಿನ ಹೊರಗಿದ್ದ ದ್ರಾಕ್ಷಾತೋಟದಲ್ಲಿ, ತಾಯಿ ಮತ್ತು ನಾನು ಮೊಣಕಾಲೂರಿ, ಪುನರುತ್ಥಾನ ನಿರೀಕ್ಷೆಯ ಕುರಿತು ಒಂದು ರಾಜ್ಯ ಹಾಡನ್ನು ಹಾಡಿ, ಒಂದು ಪ್ರಾರ್ಥನೆಯನ್ನು ಮಾಡಿದೆವು. ಅಚಲ ಧ್ವನಿಯಲ್ಲಿ, ತಾಯಿ ನನ್ನ ಪರವಾಗಿ ಯಾಚಿಸಿದಳು: “ಯೆಹೋವನೇ, ನನ್ನ ಎಳೆಯ ಹುಡುಗಿಯನ್ನು ನಂಬಿಗಸ್ತಳಾಗಿ ಇಡು!” ಕೊನೆಯ ಬಾರಿಗೆ, ತಾಯಿ ನನ್ನನ್ನು ಮಲಗಿಸಿ, ಮುದ್ದಿಟ್ಟಳು.
ಮರುದಿನ ನಾವು ಸುಧಾರಣಾ ಗೃಹವನ್ನು ತಲಪಿದಾಗ, ತಾಯಿಗೆ ಗುಡ್ ಬೈ ಹೇಳುವ ಒಂದು ಅವಕಾಶವು ಇರದಂತೆ ವಿಷಯಗಳು ವೇಗದಿಂದ ಘಟಿಸಿದವು. ಗೋಧಿ ಹೊಟ್ಟು ತುಂಬಿರುವ ಮಂಚವೊಂದನ್ನು ಒಬ್ಬಾಕೆ ಹುಡುಗಿ ನನಗೆ ತೋರಿಸಿದಳು. ನನ್ನ ಪಾದರಕ್ಷೆಗಳನ್ನು ತೆಗೆದುಕೊಳ್ಳಲಾಯಿತು, ಮತ್ತು ನಾವು ಬರಿಯ ಕಾಲಿನಲ್ಲಿ ನವಂಬರ ಒಂದನೆಯ ತಾರೀಖಿನ ವರೆಗೆ ನಡೆಯಬೇಕಿತ್ತು. ಪ್ರಥಮ ಮಧ್ಯಾಹ್ನದ ಊಟವನ್ನು ತಿನ್ನುವುದು ಬಹಳ ಕಷ್ಟಕರವಾಗಿತ್ತು. ಹೊಲಿದು ದುರಸ್ತು ಮಾಡಲು ಆರು ಜೋಡಿ ಕಾಲೀಲ್ಚಗಳನ್ನು ನನಗೆ ಕೊಡಲಾಯಿತು; ಇಲ್ಲದಿದ್ದರೆ ನನಗೆ ಊಟ ಸಿಗುವಂತಿಲ್ಲ. ಮೊದಲ ಬಾರಿಗೆ ನಾನು ಅಳಲು ಆರಂಭಿಸಿದೆ. ಕಣ್ಣೀರು ಆ ಕಾಲೀಲ್ಚಗಳನ್ನು ತೊಯಿಸಿತು. ಸುಮಾರು ಇಡೀ ರಾತ್ರಿ ನಾನು ಅತ್ತೆ.
ಮರುದಿನ ಬೆಳಗ್ಗೆ ನಾನು 5:30ಕ್ಕೆ ಎದ್ದೆ. ನನ್ನ ಮಂಚವು ರಕ್ತ ಕಲೆಗಳಿಂದ ತುಂಬಿತ್ತು—ನನ್ನ ಮುಟ್ಟು ಇದರ ತುಸು ಮುಂಚೆ ಆರಂಭಗೊಂಡಿತ್ತು. ನಡುಗುತ್ತಾ, ಮೊದಲಾಗಿ ನನ್ನ ಎದುರಿಗೆ ಬಂದ ಶಿಕ್ಷಕಿ, ಮಿಸ್ ಮೆಸಿಂಗರ್ ಬಳಿ ಹೋದೆ. ನನ್ನ ಹಾಸಿಗೆಯನ್ನು ತಣ್ಣೀರಿನಲ್ಲಿ ಹೇಗೆ ಒಗೆಯಬೇಕೆಂದು ನನಗೆ ತೋರಿಸಿಕೊಟ್ಟ ಒಂದು ಹುಡುಗಿಯನ್ನು ಅವಳು ಕರೆದಳು. ಕಲ್ಲಿನ ನೆಲವು ತಣ್ಣಗಿತ್ತು, ಮತ್ತು ನನ್ನ ವೇದನೆ ತೀವ್ರಗೊಂಡಿತು. ನಾನು ಮತ್ತೆ ಅಳಲು ಪ್ರಾರಂಭಿಸಿದೆ. ಆಗ ಮಿಸ್ ಮೆಸಿಂಗರ್ ಮನ ನೋಯಿಸುವ ಹುಸಿನಗೆಯೊಂದಿಗೆ ಹೇಳಿದ್ದು: “ನಿನ್ನ ಹಾಸಿಗೆಯನ್ನು ಒಗೆಯಬೇಕೆಂದು ನಿನ್ನ ಯೆಹೋವನಿಗೆ ಹೇಳು!” ನನಗೆ ಅದನ್ನೇ ಕೇಳುವ ಅಗತ್ಯವಿತ್ತು. ನನ್ನ ಕಣ್ಣುಗಳನ್ನು ನಾನು ಒರೆಸಿಕೊಂಡೆ, ಮತ್ತು ಪುನಃ ನಾನು ಕಣ್ಣೀರನ್ನು ಹಾಕುವಂತೆ ಮಾಡಲು ಅವರಿಗೆ ಎಂದೂ ಸಾಧ್ಯವಾಗಲಿಲ್ಲ.
ಬೆಳಗ್ಗೆ 8 ಗಂಟೆಗೆ ದಿನದ ಮೊದಲೂಟ—ಒಂದು ಪಾತ್ರೆ ತಿಳಿ ಸಾರು—ಕ್ಕೆ ಮನೆಯನ್ನು ಶುಚಿಮಾಡಲು ಪ್ರತಿ ಬೆಳಗ್ಗೆ ನಾವು 5:30ಕ್ಕೆ ಏಳಬೇಕಿತ್ತು. ಆರರಿಂದ 14ರ ವಯೋಮಿತಿಯಲ್ಲಿರುವ 37 ಮಕ್ಕಳಿಗಾಗಿ ಮನೆಯಲ್ಲಿ ಶಾಲೆಯನ್ನು ನಡೆಸಲಾಗುತ್ತಿತ್ತು. ಕಠಿನ ಕೆಲಸವನ್ನು ಮಾಡಲು ಪುರುಷರು ಲಭ್ಯವಿರದ ಕಾರಣ, ಮಧ್ಯಾಹ್ನದಲ್ಲಿ ನಾವು ಬಟ್ಟೆ ಒಗೆಯುವುದನ್ನು, ಹೊಲಿಗೆಯನ್ನು ಮತ್ತು ತೋಟಗಾರಿಕೆಯನ್ನು ಮಾಡಿದೆವು. 1944⁄45ರ ಚಳಿಗಾಲದಲ್ಲಿ, ಇನ್ನೊಂದು ಹುಡುಗಿಯೊಂದಿಗೆ, 60 ಸೆಂಟಿಮೀಟರ್ ಅಗಲವಿದ್ದ ಮರಗಳನ್ನು ಒಂದು ಗರಗಸವನ್ನು ಉಪಯೋಗಿಸುತ್ತಾ ನಾನು ಕೊಯ್ಯಬೇಕಿತ್ತು. ಮಕ್ಕಳು ಒಬ್ಬರು ಮತ್ತೊಬ್ಬರೊಂದಿಗೆ ಮಾತಾಡದಂತೆ ನಿರ್ಬಂಧಿಸಲ್ಪಟ್ಟಿದ್ದರು ಮತ್ತು ಒಬ್ಬಂಟಿಗರಾಗಿರಲು, ಪಾಯಿಖಾನೆಗೂ ಕೂಡ ಒಬ್ಬಂಟಿಗರಾಗಿ ಹೋಗಲು ಅನುಮತಿಸಲ್ಪಡುತ್ತಿರಲಿಲ್ಲ. ಒಂದು ವರ್ಷಕ್ಕೆ ಎರಡು ಬಾರಿ ನಾವು ಸ್ನಾನ ಮಾಡುತ್ತಿದ್ದೆವು, ಮತ್ತು ನಮ್ಮ ಕೂದಲನ್ನು ವರ್ಷಕ್ಕೆ ಒಂದಾವರ್ತಿ ನಾವು ತೊಳೆಯುತ್ತಿದ್ದೆವು. ದಂಡನೆಯು ಆಹಾರರಾಹಿತ್ಯ ಯಾ ಹೊಡೆತವಾಗಿತ್ತು.
ನಾನು ಮಿಸ್ ಮೆಸಿಂಗರ್ ಕೋಣೆಯನ್ನು ಶುಚಿಮಾಡಬೇಕಾಗಿತ್ತು. ಸ್ಪ್ರಿಂಗ್ಗಳನ್ನು ಶುಚಿಮಾಡಲು ಪ್ರತಿ ದಿನ ನಾನು ಮಂಚದ ಕೆಳಗೆ ಹೋಗುವಂತೆ ಅವಳು ಒತ್ತಯಾ ಪಡಿಸಿದಳು. ಮನೆಯೊಳಗೆ ನಾನು ಕಳ್ಳತನದಿಂದ ಸಾಗಿಸಿದ್ದ ಒಂದು ಚಿಕ್ಕ ಬೈಬಲ್ ನನ್ನ ಬಳಿಯಲ್ಲಿತ್ತು, ಮತ್ತು ಇದನ್ನು ಸ್ಪ್ರಿಂಗ್ಗಳೊಳಗೆ ತುರುಕಲು ನಾನು ಶಕ್ತಳಾದೆ. ತದನಂತರ, ಪ್ರತಿ ದಿನ ಬೈಬಲ್ ಭಾಗಗಳನ್ನು ಓದಲು ನಾನು ಶಕ್ತಳಾದೆ. ಅವರಲ್ಲಿ ಇದ್ದವರೊಳಗೆ ಅತಿ ನಿಧಾನವಾಗಿ ಕೆಲಸಮಾಡುವ ಹುಡುಗಿ ಎಂಬುದಾಗಿ ನಾನು ಕರೆಯಿಸಿಕೊಂಡಿದರ್ದಲ್ಲಿ ಯಾವ ಆಶ್ಚರ್ಯವೂ ಇಲ್ಲ!
ಪ್ರಾಟೆಸ್ಟಂಟ್ ಹುಡುಗಿಯರು ಆದಿತ್ಯವಾರ, ತಮ್ಮ ಚರ್ಚಿಗೆ ಹೋದರು, ಮತ್ತು ಮೂರು ಕ್ಯಾತೊಲಿಕ್ ಹುಡುಗಿಯರು ಅವರ ಚರ್ಚಿಗೆ ಹೋದರು, ಆದರೆ ನಾನು ಎಲ್ಲಾ 37 ಮಕ್ಕಳಿಗಾಗಿ ಅಡಿಗೆಯನ್ನು ಮಾಡಬೇಕಿತ್ತು. ನಾನು ಎಷ್ಟು ಚಿಕ್ಕವಳಾಗಿದ್ದೆನೆಂದರೆ, ಸಾರನ್ನು ಕಲಕಲು ನಾನು ಬೆಂಚಿನ ಮೇಲೆ ನಿಂತು, ಎರಡೂ ಕೈಗಳಿಂದ ಚಮಚೆಯನ್ನು ಹಿಡಿಯಬೇಕಿತ್ತು. ನಮ್ಮ ನಾಲ್ಕು ಶಿಕ್ಷಕರಿಗಾಗಿ, ನಾನು ಮಾಂಸವನ್ನು ಬೇಯಿಸಬೇಕಿತ್ತು, ಕೇಕ್ಗಳನ್ನು ಬೇಯಿಸಬೇಕಿತ್ತು, ಮತ್ತು ಕಾಯಿಪಲ್ಯಗಳನ್ನು ತಯಾರಿಸಬೇಕಿತ್ತು. ಆದಿತ್ಯವಾರ ಮಧ್ಯಾಹ್ನದಂದು, ಕರವಸ್ತ್ರಗಳ ಮೇಲೆ ಕಸೂತಿ ಹಾಕಬೇಕಿತ್ತು. ಆಟಕ್ಕೆ ಸಮಯವಿರಲಿಲ್ಲ.
ಹಲವಾರು ತಿಂಗಳುಗಳ ಅನಂತರ, ನನ್ನ ತಾಯಿಯನ್ನು ದಸ್ತಗಿರಿಮಾಡಲಾಗಿದೆ ಮತ್ತು ಅವರು ಒಂದು ಸೆರೆಶಿಬಿರದಲ್ಲಿ ಇದ್ದಾರೆಂಬ ವಾರ್ತೆಯನ್ನು ಸ್ಪಷ್ಟವಾಗಿದ ಆನಂದದಿಂದ, ಮಿಸ್ ಮೆಸಿಂಗರ್ ನನಗೆ ಕೊಟ್ಟಳು.
ಇಸವಿ 1945ರಲ್ಲಿ ಯುದ್ಧವು ಕೊನೆಗೊಂಡಿತು. ಸೆರೆಶಿಬಿರಗಳು ಬಿದ್ದು, ಅವುಗಳ ಹಿಂಸಿಸಲ್ಪಟ್ಟ ಬಲಿಪಶುಗಳನ್ನು ದೇಶದಲ್ಲಿ ಚೆಲ್ಲಿ, ಇನ್ನೂ ಅಸ್ತಿತ್ವದಲ್ಲಿ ಇರಬಹುದಾದ ಕುಟುಂಬದ ಉಳಿಕೆಯವರಿಗಾಗಿ ಹುಡುಕಲು ಸಾವಿರಾರು ಜನರನ್ನು ಅಲೆದಾಡುವಂತೆ ಬಿಟ್ಟವು.
ಹೃದಯ ಸ್ಪರ್ಶಿ ಪುನರ್ಮಿಲನಗಳು
ನಾನು ಎಲ್ಲಿದ್ದೆ ಎಂಬ ವಿಷಯ ನನ್ನ ತಾಯಿಗಾದರೊ ಗೊತ್ತಿತ್ತು, ಆದರೆ ಅವರು ನನ್ನನ್ನು ಕರೆದುಕೊಂಡು ಹೋಗಲು ಬಂದಾಗ, ನಾನು ಅವರನ್ನು ಗುರುತಿಸಲಿಲ್ಲ. ಅವರು ಏನನ್ನು ಅನುಭವಿಸಿದ್ದರೊ ಅದರಿಂದ ಇದು ಯಾವ ಆಶ್ಚರ್ಯದ ಸಂಗತಿಯೂ ಆಗಿರಲಿಲ್ಲ! ತಾಯಿಯು ದಸ್ತಗಿರಿಮಾಡಲ್ಪಟ್ಟಾಗ, ತಂದೆಯನ್ನು ಕಳುಹಿಸಿದ್ದ ಷಿರ್ಮೆಕ್ ಶಿಬಿರಕ್ಕೇ ತಾಯಿಯನ್ನು ಕಳುಹಿಸಲಾಗಿತ್ತು, ಆದರೆ ಅವರನ್ನು ಹೆಂಗಸರ ಶಿಬಿರದಲ್ಲಿ ಹಾಕಲಾಯಿತು. ಸೈನಿಕರ ಸಮವಸ್ತ್ರಗಳನ್ನು ದುರುಸ್ತು ಮಾಡಲು ಅವರು ನಿರಾಕರಿಸಿದರು ಮತ್ತು ಅನೇಕ ತಿಂಗಳುಗಳ ಕಾಲ ಒಂದು ನೆಲಗೂಡಿನಲ್ಲಿ ಏಕಾಂತ ಬಂಧನದಲ್ಲಿ ಅವರನ್ನು ಇಡಲಾಯಿತು. ಅವರನ್ನು ಕಲುಷಿತಗೊಳಿಸಲು, ಮೇಹರೋಗವಿರುವ ಹೆಂಗಸರೊಂದಿಗೆ ಅವರನ್ನು ಹಾಕಲಾಯಿತು. ರಾವೆನ್ಸ್ಬ್ರೂಕ್ ಶಿಬಿರಕ್ಕೆ ಸಾಗಿಸಲ್ಪಡುವ ಸಮಯದಲ್ಲಿ, ಕೆಮ್ಮಿನಿಂದ ಅವರು ಬಹಳ ಬಲಹೀನರಾದರು. ಆ ಸಮಯದಲ್ಲಿ ಜರ್ಮನರು ಓಡಿಹೋದರು, ಮತ್ತು ರಾವೆನ್ಸ್ಬ್ರೂಕ್ಗೆ ಹೋಗುವ ದಾರಿಯಲ್ಲಿ ಕೈದಿಗಳು—ಅವರೊಳಗೆ ಇದ್ದ ನನ್ನ ತಾಯಿಯ ಸಮೇತ ಇದ್ದಕ್ಕಿದ್ದಹಾಗೆ ಸ್ವತಂತ್ರರಾದರು. ನಾನು ಇದ್ದ ಕಾನ್ಸೆನ್ಟ್ಸ್ ಕಡೆಗೆ ತಾಯಿ ಧಾವಿಸಿದರು, ಆದರೆ ಒಂದು ವಿಮಾನ ದಾಳಿ ಆಸ್ಫೋಟವು ಅವರ ಮುಖವನ್ನು ಗಾಯಪಡಿಸಿತ್ತು.
ನಾನು ಅವರ ಮುಂದೆ ತರಲ್ಪಟ್ಟಾಗ,—ಹಸಿವೆಯಿಂದ ಕ್ಷಯಿಸಲ್ಪಟ್ಟ, ಸ್ಪಷ್ಟವಾಗಿಗಿ ಅಸ್ವಸ್ಥಳಾಗಿದ್ದ, ಮತ್ತು ರಕ್ತದಿಂದ ತುಂಬಿದ ಅವರ ಗಾಯಗೊಂಡ ಮುಖ—ಇವುಗಳಿಂದ ಅವರು ಎಷ್ಟು ಬದಲಾಗಿದ್ದರೆಂದರೆ, ಅವರ ಧ್ವನಿಯು ಕೇಳಿಸತ್ತಿರಲಿಲ್ಲ. ಭೇಟಿಕಾರರ ಮುಂದೆ ತಲೆ ಬಾಗಿಸಿ ನನ್ನ ಎಲ್ಲ ಕೆಲಸಗಳನ್ನು—ಕಸೂತಿ ಹಾಕಿದ ಬಟ್ಟೆಗೆಳನ್ನು, ಹೊಲಿದ ಬಟ್ಟೆಗೆಳನ್ನು—ತೋರಿಸುವಂತೆ ನನ್ನನ್ನು ತರಬೇತಿ ಮಾಡಲಾಗಿತ್ತು, ಯಾಕಂದರೆ ಕೆಲವು ಸ್ತ್ರೀಯರು ಒಬ್ಬಾಕೆ ಕೆಲಸದಾಳನ್ನು ಪಡೆಯಲು ಗೃಹಕ್ಕೆ ಬರುತ್ತಿದ್ದರು. ಮತ್ತು ನಾನು ನನ್ನ ಬಡ ತಾಯಿಯ ಮುಂದೆ ನಡೆದುಕೊಂಡ ರೀತಿಯು ಅದೇ ಆಗಿತ್ತು! ನನ್ನನ್ನು ಮನೆಗೆ ಕರೆದುಕೊಂಡು ಹೋಗಲು ನ್ಯಾಯಬದ್ಧವಾದ ಹಕ್ಕನ್ನು ಪಡೆಯಲು ನನ್ನನ್ನು ಒಬ್ಬ ನ್ಯಾಯಾಧೀಶನ ಬಳಿಗೆ ಕರೆದುಕೊಂಡು ಹೋದಾಗ ಮಾತ್ರ ಇವರು ನನ್ನ ತಾಯಿ ಎಂದು ನಾನು ಗ್ರಹಿಸಿದೆ! ಕಳೆದ 22 ತಿಂಗಳುಗಳಿಂದ ನನ್ನಲ್ಲಿ ಇಟ್ಟುಕೊಂಡಿದ್ದ ಕಣ್ಣೀರು ಒಮ್ಮೆಲೆ ಹೊರಚಿಮ್ಮಿತು.
ನಾವು ಅಲ್ಲಿಂದ ಹೋಗುವಾಗ, ನಿರ್ದೇಶಕಿಯಾದ ಮಿಸ್ ಲೆಡರ್ಲೇಯವರ ಹೇಳಿಕೆಯು, ತಾಯಿಗೆ ಸಂತೈಸುವ ಎಣ್ಣೆಯೋಪಾದಿಯಲ್ಲಿತ್ತು. ಅವರು ಹೇಳಿದ್ದು: “ಬಂದಾಗ ಇದ್ದ ಅದೇ ಮಾನಸಿಕ ಮನೋವೃತ್ತಿಯೊಂದಿಗೆ ನಿನ್ನ ಹುಡುಗಿಯನ್ನು ನಾನು ನಿನಗೆ ವಾಪಸು ಕೊಡುತ್ತಿದ್ದೇನೆ.” ನನ್ನ ಸಮಗ್ರತೆಯು ಇನ್ನೂ ಕುಂದಿಲ್ಲದೆ ಇತ್ತು. ನಾವು ನಮ್ಮ ಮನೆಯನ್ನು ಕಂಡುಹಿಡಿದು ನೆಲಸಲು ತೊಡಗಿದೆವು. ತಂದೆಯ ಇಲ್ಲದಿರುವಿಕೆ ನಮ್ಮನ್ನು ಇನ್ನೂ ದುಃಖಿತರನ್ನಾಗಿ ಮಾಡುತ್ತಿದ್ದ ವಿಷಯವಾಗಿತ್ತು. ರೆಡ್ ಕ್ರಾಸ್ ಸಂಸ್ಥೆಯಲ್ಲಿ ಅವರನ್ನು ಸತ್ತವರ ಪಟ್ಟಿಗೆ ಸೇರಿಸಲಾಗಿತ್ತು.
ಮೇ 1945ರ ಮಧ್ಯದಲ್ಲಿ, ಬಾಗಿಲು ತಟ್ಟುವ ಶಬ್ದವಾಯಿತು. ಅದನ್ನು ತೆರೆಯಲು ನಾನು ಪುನಃ ಓಡಿದೆ. ಬಾಗಿಲಿನ ಬಳಿಯಲ್ಲಿ ಮರಿಯ ಕೊಯೆಲ್ ಎಂಬ ಒಬ್ಬ ಸ್ನೇಹಿತೆ ನಿಂತಿದ್ದಳು, ಮತ್ತು ಅವಳು, “ಸಿಮೋನ್, ನಾನು ಒಬ್ಬಂಟಿಗಳಾಗಿಲ್ಲ. ನಿನ್ನ ತಂದೆ ಕೆಳಗೆ ಇದ್ದಾರೆ,” ಎಂದು ಹೇಳಿದಳು. ತಂದೆಗೆ ಮೆಟ್ಟಲುಗಳನ್ನು ಏರಿ ಬರಲು ತುಂಬ ಕಷ್ಟವಾಯಿತು, ಮತ್ತು ಕೇಳಿಸಿಕೊಳ್ಳುವ ಶಕ್ತಿಯನ್ನು ಅವರು ಕಳೆದುಕೊಂಡಿದ್ದರು. ಅವರು ನನ್ನನ್ನು ದಾಟಿಕೊಂಡು ನೇರವಾಗಿ ತಾಯಿಯ ಬಳಿಗೆ ಹೋದರು! ಅವರು ಒಮ್ಮೆ ಅರಿತಿದ್ದ 11 ವರ್ಷ ಪ್ರಾಯದ ಚಿಕ್ಕ ಸರಳ ಹುಡುಗಿಯು, ಬೇರ್ಪಡೆಯ ಆ ದೀರ್ಘ ಸಮಯದಲ್ಲಿ ಲಜ್ಜೆಯುಳ್ಳ ಒಬ್ಬ ಯುವ ಹದಿವಯಸ್ಕಳಾಗಿ ಬೆಳೆದಿದ್ದಳು. ಈ ಹೊಸ ಹುಡುಗಿಯನ್ನು ಅವರು ಗುರುತಿಸಲೂ ಇಲ್ಲ.
ಅವರು ಏನನ್ನು ಅನುಭವಿಸಿದ್ದರೊ, ಅದು ಅದರ ಬೆಲೆಯನ್ನು ತೆಗೆದುಕೊಂಡಿತ್ತು. ಮೊದಲು ವಿಶೇಷವಾದ ಒಂದು ಶಿಬಿರ—ಷಿರ್ಮೆಕ್ಗೆ, ಆಮೇಲೆ ಎಲ್ಲಿ ಅವರು ಟೈಫಸ್ ಜ್ವರವನ್ನು ಹತ್ತಿಸಿಕೊಂಡು ತದನಂತರ ಅದರಿಂದ 14 ದಿನಗಳ ವರೆಗೆ ಪ್ರಜ್ಞೆಯಿಲ್ಲದೆ ಇದ್ದರೊ ಆ ಡಾಕಾವ್ ಶಿಬಿರಕ್ಕೆ ಅವರನ್ನು ಕಳುಹಿಸಲಾಗಿತ್ತು. ಅವರನ್ನು ಅನಂತರ ವೈದ್ಯಕೀಯ ಪ್ರಯೋಗಗಳಲ್ಲಿ ಉಪಯೋಗಿಸಲಾಗಿತ್ತು. ಡಾಕಾವ್ಕ್ಕಿಂತ ಹೀನವಾದ ಒಂದು ನಿರ್ಮೂಲನಾ ಶಿಬಿರ—ಮೊತಾಸನ್ ಶಿಬಿರಕ್ಕೆ ಅವರನ್ನು ಡಾಕಾವ್ದಿಂದ ಕಳುಹಿಸಲಾಗಿತ್ತು. ಅಲ್ಲಿ ಅವರು ಕಠಿನ ಪ್ರಯಾಸವನ್ನು ಮತ್ತು ಹೊಡೆತಗಳನ್ನು ಅನುಭವಿಸಿದರು ಮತ್ತು ಪೊಲೀಸ್ ನಾಯಿಗಳು ಅವರ ಮೇಲೆ ಆಕ್ರಮಣ ಮಾಡಿದ್ದವು. ಆದರೆ ಅವರು ಪಾರಾಗಿ ಕೊನೆಗೆ ಇಲ್ಲಿ ಮತ್ತೊಮ್ಮೆ ಮನೆಯಲ್ಲಿ ಇದ್ದರು.
ನನಗೆ 17 ವರ್ಷ ವಯಸ್ಸಾದಾಗ, ಯೆಹೋವನ ಸಾಕ್ಷಿಗಳ ಒಬ್ಬ ಶುಶ್ರೂಷಕಳಾಗಿ ನಾನು ಪೂರ್ಣ ಸಮಯ ಸೇವೆಯನ್ನು ಪ್ರವೇಶಿಸಿದೆ ಮತ್ತು ಆ ಮೇಲೆ ಮಿಷನೆರಿಗಳಿಗಾಗಿ ವಾಚ್ ಟವರ್ ಸೊಸೈಟಿಯ ಶಾಲೆ—ಅಮೆರಿಕದಲ್ಲಿರುವ ಗಿಲ್ಯಾದ್ಗೆ ನಾನು ಹೋದೆ. ಸೊಸೈಟಿಯ ಲೋಕ ಮುಖ್ಯಾಲಯದಲ್ಲಿ, ಹಿಟ್ಲರ್ನ ಒಂದು ಸೆರೆಶಿಬಿರದಲ್ಲಿ ಸಾಕ್ಷಿಯಾಗಿದ್ದ ಒಬ್ಬ ಜರ್ಮನ್ ಯೆಹೂದಿಯಾಗಿದ್ದ ಮ್ಯಾಕ್ಸ್ ಲಿಬ್ಸ್ಟರ್ನನ್ನು ನಾನು ಭೇಟಿಯಾದೆ. ನಾವು 1956ರಲ್ಲಿ ಮದುವೆಯಾದೆವು, ಮತ್ತು ನಮ್ಮ ದೇವರಾದ ಯೆಹೋವನ ಸಹಾಯದಿಂದ, ಫ್ರಾನ್ಸ್ನಲ್ಲಿ ವಿಶೇಷ ಪಯನೀಯರ್ ಶುಶ್ರೂಷಕರಾಗಿ ಪೂರ್ಣ ಸಮಯದ ಸೇವೆಯಲ್ಲಿ ಇಲ್ಲಿಯ ತನಕ ಕೆಲಸಮಾಡುತ್ತಾ ಇದ್ದೇವೆ.
ಸುಧಾರಣೆಯ ಗೃಹದಲ್ಲಿ ನನ್ನನ್ನು ಬಿಡುವ ಮುಂಚೆ ಆ ಹಿಂದಿನ ಸಾಯಂಕಾಲ, ಆ ಅನೇಕ ವರ್ಷಗಳ ಹಿಂದೆ ನನಗಾಗಿ ಅವಳ ಪ್ರಾರ್ಥನೆಯಲ್ಲಿ ತಾಯಿಯು ಹೇಳಿದ್ದ ಮಾತುಗಳು ಎಷ್ಟು ನಿಜವಾಗಿದ್ದವು: “ನಾನು ನಿನ್ನನ್ನು ಕೇಳಿಕೊಳ್ಳುತ್ತೇನೆ, ಓ ಯೆಹೋವನೇ, ನನ್ನ ಎಳೆಯ ಹುಡುಗಿಯನ್ನು ನಂಬಿಗಸ್ತಳಾಗಿ ಇಡು!”
ಮತ್ತು ಈ ದಿನದ ವರೆಗೂ, ಯೆಹೋವನು ಅದನ್ನೇ ಮಾಡಿದ್ದಾನೆ!—ಸಿಮೋನ್ ಆರ್ನಲ್ಡ್ ಲಿಬ್ಸ್ಟರ್ ಹೇಳಿದಂತೆ. (g93 9/22)
[ಪುಟ 26 ರಲ್ಲಿರುವ ಚಿತ್ರ]
ಸಿಮೋನ್ ಆರ್ನಲ್ಡ್ ಲಿಬ್ಸ್ಟರ್ ಮತ್ತು ಆಕೆಯ ಗಂಡ, ಮ್ಯಾಕ್ಸ್ ಲಿಬ್ಸ್ಟರ್