ನಾವು ಹಿಟ್ಲರನ ಯುದ್ಧವನ್ನು ಬೆಂಬಲಿಸಲಿಲ್ಲ
ಫ್ರಾನ್ಟ್ಸ್ ವಾಲ್ಫಾರ್ಟ್ ಹೇಳಿರುವಂತೆ
ನನ್ನ ತಂದೆ ಗ್ರೇಗೊರ್ ವಾಲ್ಫಾರ್ಟ್, Iನೆಯ ಲೋಕ ಯುದ್ಧದಲ್ಲಿ (1914ರಿಂದ 1918ರ ವರೆಗೆ) ಆಸ್ಟ್ರಿಯನ್ ಸೇನೆಯಲ್ಲಿ ಕೆಲಸ ಮಾಡಿದರು ಮತ್ತು ಇಟೆಲಿಯ ವಿರುದ್ಧ ಹೋರಾಟ ನಡೆಸಿದರು. ಒಟ್ಟಿಗೆ, ನೂರಾರು ಸಾವಿರ ಆಸ್ಟ್ರಿಯನರು ಮತ್ತು ಇಟೆಲಿಯನರು ಸಾಮೂಹಿಕವಾಗಿ ಸಂಹರಿಸಲ್ಪಟ್ಟರು. ಆ ಅನುಭವದ ಘೋರ ಭೀತಿಗಳು, ಯುದ್ಧ ಮತ್ತು ಧರ್ಮದ ಕುರಿತಾದ ತಂದೆಯ ಹೊರನೋಟವನ್ನು ಸಂಪೂರ್ಣವಾಗಿ ಬದಲಾಯಿಸಿದವು.
ಆಸ್ಟ್ರಿಯದ ಪುರೋಹಿತರು ಸೈನ್ಯಗಳನ್ನು ಆಶೀರ್ವದಿಸುವುದನ್ನು ತಂದೆ ನೋಡಿದರು, ಮತ್ತು ಮತ್ತೊಂದು ಕಡೆಯಲ್ಲಿ ಇಟೆಲಿಯ ಪುರೋಹಿತರು ಅದನ್ನೇ ಮಾಡುತ್ತಿದ್ದರೆಂದು ಅವರು ತಿಳಿದುಕೊಂಡರು. ಆದುದರಿಂದ ಅವರು ಕೇಳಿದ್ದು: “ಕ್ಯಾತೊಲಿಕ್ ಸೈನಿಕರು ಇತರ ಕ್ಯಾತೊಲಿಕರನ್ನು ಕೊಲ್ಲುವಂತೆ ಏಕೆ ಒತ್ತಾಯಿಸಲ್ಪಡುತ್ತಾರೆ? ಕ್ರೈಸ್ತರು ಒಬ್ಬರು ಇನ್ನೊಬ್ಬರ ವಿರುದ್ಧವಾಗಿ ಯುದ್ಧ ಮಾಡಬೇಕೊ?” ಪುರೋಹಿತರಲ್ಲಿ ಸಮಾಧಾನಕರವಾದ ಉತ್ತರಗಳು ಇರಲಿಲ್ಲ.
ತಂದೆಯ ಪ್ರಶ್ನೆಗಳಿಗೆ ಉತ್ತರಗಳು
ಯುದ್ಧಾನಂತರ ತಂದೆ ವಿವಾಹವಾದರು ಮತ್ತು ಇಟೆಲಿಯ ಹಾಗೂ ಯುಗೊಸ್ಲಾವಿನ ಗಡಿಗಳ ಬಳಿ, ಆಸ್ಟ್ರಿಯದ ಪರ್ವತಗಳಲ್ಲಿ ನೆಲೆಸಿದರು. ಅಲ್ಲಿ ನಾನು 1920ರಲ್ಲಿ—ಆರು ಮಕ್ಕಳಲ್ಲಿ ಮೊದಲನೆಯವನಾಗಿ—ಜನಿಸಿದೆ. ನಾನು ಆರು ವರ್ಷದವನಿರುವಾಗ, ಪೂರ್ಟ್ಶಾಕ್ನ ವಿಹಾರ ಪಟ್ಟಣದ ಬಳಿ, ಕೆಲವೊಂದು ಮೈಲು ಪೂರ್ವಕ್ಕಿರುವ ಸೆಂಟ್ ಮಾರ್ಟೀನ್ಗೆ ನಾವು ಸ್ಥಳಾಂತರಿಸಿದೆವು.
ನಾವು ಅಲ್ಲಿ ವಾಸಿಸುತ್ತಿದ್ದಾಗ, ಯೆಹೋವನ ಸಾಕ್ಷಿಗಳ ಶುಶ್ರೂಷಕರು (ಆಗ ಬೈಬಲ್ ವಿದ್ಯಾರ್ಥಿಗಳೆಂದು ಕರೆಯಲ್ಪಡುತ್ತಿದ್ದರು) ನನ್ನ ಹೆತ್ತವರನ್ನು ಭೇಟಿಮಾಡಿದರು. ಅವರು 1929ರಲ್ಲಿ ಪ್ರಾಸ್ಪರಿಟಿ ಷೂಅರ್ ಎಂಬ ಪುಸ್ತಿಕೆಯನ್ನು ಬಿಟ್ಟುಹೋದರು, ಅದು ತಂದೆಯ ಅನೇಕ ಪ್ರಶ್ನೆಗಳನ್ನು ಉತ್ತರಿಸಿತು. ಈ ಲೋಕವು, ಪಿಶಾಚನೆಂತಲೂ ಸೈತಾನನೆಂತಲೂ ಕರೆಯಲ್ಪಡುವ ಅದೃಶ್ಯ ಅಧಿಪತಿಯಿಂದ ನಿಯಂತ್ರಿಸಲ್ಪಡುತ್ತಿದೆಯೆಂಬುದನ್ನು ಅದು ಬೈಬಲಿನಿಂದ ತೋರಿಸಿತು. (ಯೋಹಾನ 12:31; 2 ಕೊರಿಂಥ 4:4; ಪ್ರಕಟನೆ 12:9) ಈ ಲೋಕದ ಧರ್ಮ, ರಾಜಕೀಯ, ಮತ್ತು ವಾಣಿಜ್ಯದ ಮೇಲಿನ ಅವನ ಪ್ರಭಾವವು, Iನೆಯ ಲೋಕ ಯುದ್ಧದಲ್ಲಿ ತಂದೆಯು ಕಂಡಂತಹ ಘೋರ ಭೀತಿಗಳಿಗೆ ಕಾರಣವಾಗಿತ್ತು. ಕೊನೆಯದಾಗಿ ತಾವು ಅನ್ವೇಷಿಸುತ್ತಾ ಇದ್ದ ಉತ್ತರಗಳನ್ನು ತಂದೆ ಕಂಡುಕೊಂಡರು.
ಹುರುಪಿನ ಶುಶ್ರೂಷೆ
ತಂದೆಯವರು ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಸಾಹಿತ್ಯಕ್ಕಾಗಿ ಆರ್ಡರ್ ಮಾಡಿದರು ಮತ್ತು ಅದನ್ನು ತಮ್ಮ ಸಂಬಂಧಿಕರಿಗೆ ಹಾಗೂ ಬಳಿಕ ಮನೆಯಿಂದ ಮನೆಗೆ ವಿತರಿಸಲಾರಂಭಿಸಿದರು. ಕೂಡಲೆ, ಕೇವಲ 20ರ ಪ್ರಾಯದ ನೆರೆಯ ತರುಣನಾದ ಹಾನ್ಸ್ ಷ್ಟಾಸೀರ್ ಅವರೊಂದಿಗೆ ಮನೆಮನೆಯ ಶುಶ್ರೂಷೆಯಲ್ಲಿ ಜೊತೆಗೂಡಿದನು. ತರುವಾಯ, ನಮ್ಮ ಸಂಬಂಧಿಕರಲ್ಲಿ ಐದು ಜನರು ಸಹ ಸಾಕ್ಷಿಗಳಾದರು—ತಂದೆಯ ಅಣ್ಣ ಫ್ರಾನ್ಟ್ಸ್, ಅವರ ಹೆಂಡತಿ ಆನ, ತದನಂತರ ಅವರ ಮಗ ಆ್ಯಂಟನ್, ತಂದೆಯ ತಂಗಿಯಾದ ಮರೀಯ, ಮತ್ತು ಅವಳ ಗಂಡ ಹರ್ಮಾನ್.
ಇದು ನಮ್ಮ ಸಣ್ಣ ಪಟ್ಟಣವಾದ ಸೆಂಟ್ ಮಾರ್ಟೀನ್ನಲ್ಲಿ ಸಂಪೂರ್ಣವಾಗಿ ಗಲಭೆಯನ್ನುಂಟುಮಾಡಿತು. “ಫಾದರ್ ಲೈಗೆ, ವಾಲ್ಫಾರ್ಟ್ ಆರಾಧಿಸುತ್ತಿರುವ ಹೊಸ ದೇವರಾದ ಯೆಹೋವನು ಯಾರು?” ಎಂದು ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ನಮ್ಮ ಕ್ಯಾತೊಲಿಕ್ ಶಿಕ್ಷಕರಿಗೆ ಕೇಳಿದಳು.
“ಇಲ್ಲ, ಇಲ್ಲ, ಮಕ್ಕಳೇ” ಎಂದು ಪುರೋಹಿತನು ಉತ್ತರಿಸಿದನು. “ಇದು ಒಂದು ಹೊಸ ದೇವರಾಗಿರುವುದಿಲ್ಲ. ಯೆಹೋವನು ಯೇಸು ಕ್ರಿಸ್ತನ ತಂದೆಯಾಗಿದ್ದಾನೆ. ಆ ದೇವರ ಕಡೆಗೆ ಪ್ರೀತಿಯಿಂದ ಪ್ರಚೋದಿಸಲ್ಪಟ್ಟಿದ್ದು ಅವರು ಆ ಸಂದೇಶವನ್ನು ಹಬ್ಬಿಸುತ್ತಿರುವುದಾದರೆ, ಅದು ತುಂಬಾ ಒಳ್ಳೇದು.”
ಅನೇಕ ಬಾರಿ ನನ್ನ ತಂದೆಯವರು ಬೈಬಲ್ ಸಾಹಿತ್ಯ ಮತ್ತು ಒಂದು ಸ್ಯಾಂಡ್ವಿಚನ್ನು ಹೊತ್ತುಕೊಂಡು, 1 ಗಂಟೆಗೆ ಮನೆಬಿಡುತ್ತಿದ್ದದ್ದು ನನಗೆ ನೆನಪಿದೆ. ಆರು ಅಥವಾ ಏಳು ತಾಸುಗಳ ಬಳಿಕ, ಇಟೆಲಿಯ ಗಡಿಯ ಬಳಿ ತಾವು ಸಾರುವ ಟೆರಿಟೊರಿಯ ಅತ್ಯಂತ ದೂರದ ಸ್ಥಳವನ್ನು ತಲಪಸಾಧ್ಯವಿತ್ತು. ಹೆಚ್ಚು ಸಮೀಪದ ಪ್ರಯಾಣಗಳಲ್ಲಿ ನಾನು ಅವರೊಂದಿಗೆ ಹೋಗುತ್ತಿದ್ದೆ.
ತಮ್ಮ ಸಾರ್ವಜನಿಕ ಶುಶ್ರೂಷೆಯ ಹೊರತೂ, ತಂದೆಯವರು ತಮ್ಮ ಸ್ವಂತ ಕುಟುಂಬದ ಆತ್ಮಿಕ ಆವಶ್ಯಕತೆಗಳನ್ನು ಅಲಕ್ಷಿಸಲಿಲ್ಲ. ನಾನು ಸುಮಾರು ಹತ್ತು ವರ್ಷದವನಿದ್ದಾಗ, ಅವರು ದ ಹಾರ್ಪ್ ಆಫ್ ಗಾಡ್ ಎಂಬ ಪುಸ್ತಕವನ್ನು ಉಪಯೋಗಿಸಿ, ನಮ್ಮೆಲ್ಲಾ ಆರು ಮಂದಿಯೊಂದಿಗೆ ಕ್ರಮವಾಗಿ ವಾರದ ಬೈಬಲ್ ಅಧ್ಯಯನವನ್ನು ಆರಂಭಿಸಿದರು. ಬೇರೆ ಸಮಯಗಳಲ್ಲಿ ನಮ್ಮ ಮನೆಯು ಆಸಕ್ತರಾದ ನೆರೆಯವರು ಮತ್ತು ಸಂಬಂಧಿಕರಿಂದ ತುಂಬಿರುತ್ತಿತ್ತು. ಬೇಗನೇ ನಮ್ಮ ಸಣ್ಣ ಪಟ್ಟಣದಲ್ಲಿ, 26 ರಾಜ್ಯ ಘೋಷಕರ ಒಂದು ಸಭೆಯು ಇತ್ತು.
ಹಿಟ್ಲರನು ಅಧಿಕಾರಕ್ಕೆ ಬರುತ್ತಾನೆ
ಜರ್ಮನಿಯಲ್ಲಿ ಹಿಟ್ಲರನು 1933ರಲ್ಲಿ ಅಧಿಕಾರಕ್ಕೆ ಬಂದನು, ಮತ್ತು ತದನಂತರ ಬೇಗನೆ ಯೆಹೋವನ ಸಾಕ್ಷಿಗಳ ಹಿಂಸೆಯು ಅಧಿಕಗೊಳಿಸಲ್ಪಟ್ಟಿತು. 1937ರಲ್ಲಿ, ತಂದೆಯವರು ಚೆಕಸ್ಲೊವಾಕಿಯದ ಪ್ರಾಗ್ನಲ್ಲಿ ಅಧಿವೇಶನವೊಂದನ್ನು ಹಾಜರಾದರು. ಮುಂದಿರುವ ಪರೀಕ್ಷೆಗಳ ಕುರಿತು ಅಧಿವೇಶನದ ಸದಸ್ಯರು ಎಚ್ಚರಿಸಲ್ಪಟ್ಟಿದ್ದರು, ಆದುದರಿಂದ ಅವರು ಹಿಂದಿರುಗಿದಾಗ, ಹಿಂಸೆಗಾಗಿ ಸಿದ್ಧರಾಗುವಂತೆ ನಮ್ಮೆಲ್ಲರನ್ನು ತಂದೆಯವರು ಒತ್ತಾಯಿಸಿದರು.
ಅದೇ ಸಮಯದಲ್ಲಿ, 16ರ ಪ್ರಾಯದಲ್ಲಿ ನಾನು ಮನೆಯ ಬಣ್ಣಗಾರನಾಗಿ ಕೆಲಸ ಕಲಿಯಲು ಆರಂಭಿಸಿದೆ. ಕುಶಲ ಬಣ್ಣಗಾರನೊಬ್ಬನೊಂದಿಗೆ ನಾನು ವಾಸಿಸಿದೆ ಮತ್ತು ಒಂದು ವೃತ್ತಿ ಶಿಕ್ಷಣಶಾಲೆಗೆ ಹಾಜರಾದೆ. ನಾಜಿ ಆಳಿಕೆಯನ್ನು ತಪ್ಪಿಸಿಕೊಳ್ಳಲಿಕ್ಕಾಗಿ ಜರ್ಮನಿಯಿಂದ ಪಲಾಯನ ಮಾಡಿದ ಒಬ್ಬ ವೃದ್ಧ ಪುರೋಹಿತನು, ಶಾಲೆಯಲ್ಲಿ ಧಾರ್ಮಿಕ ಬೋಧನಾ ತರಗತಿಯನ್ನು ನಡೆಸುತ್ತಿದ್ದನು. ವಿದ್ಯಾರ್ಥಿಗಳು ಅವನನ್ನು “ಹೈಲ್ ಹಿಟ್ಲರ್!” ಎಂದು ಅಭಿವಂದಿಸಿದಾಗ, ಅವನು ಅಸಮಾಧಾನವನ್ನು ತೋರಿಸಿದನು ಮತ್ತು “ನಮ್ಮ ನಂಬಿಕೆಯಲ್ಲಿ ಏನು ದೋಷವಿದೆ?” ಎಂದು ಕೇಳಿದನು.
ಈ ಸಂದರ್ಭದ ಸದುಪಯೋಗವನ್ನು ನಾನು ಮಾಡಿದೆ ಮತ್ತು ತನ್ನ ಹಿಂಬಾಲಕರೆಲ್ಲರೂ ಸಹೋದರರಾಗಿದ್ದಾರೆ ಎಂದು ಯೇಸು ಹೇಳಿರುವಾಗ್ಯೂ, ಯಾಕೆ ಕ್ಯಾತೊಲಿಕರು “ಯುವರ್ ಎಮಿನೆನ್ಸ್” ಮತ್ತು “ಹೋಲಿ ಫಾದರ್”ಗಳಂತಹ ಬಿರುದುಗಳನ್ನು ಉಪಯೋಗಿಸುತ್ತಾರೆ ಎಂದು ವಿಚಾರಿಸಿದೆ. (ಮತ್ತಾಯ 23:8-10) ಇದನ್ನು ಮಾಡುವುದು ತಪ್ಪಾಗಿತ್ತು ಮತ್ತು ಬಿಷಪನ ಮುಂದೆ ತಲೆಬಾಗಲು ಹಾಗೂ ಅವನ ಕೈಗೆ ಮುತ್ತಿಡಲು ನಿರಾಕರಿಸಿದಕ್ಕಾಗಿ ತಾನೂ ತೊಂದರೆಗೊಳಗಾಗಿದ್ದೆ ಎಂದು ಪುರೋಹಿತನು ಒಪ್ಪಿಕೊಂಡನು. ಬಳಿಕ ನಾನು ಕೇಳಿದ್ದು: “ಚರ್ಚಿನ ಆಶೀರ್ವಾದದೊಂದಿಗೆ ಜೊತೆ ಕ್ಯಾತೊಲಿಕರನ್ನು ಕೊಲ್ಲುವುದು ಹೇಗೆ ಸಾಧ್ಯ?”
“ಇದು ಅತ್ಯಂತ ದೊಡ್ಡ ಅವಮಾನ!” ಎಂದು ಪುರೋಹಿತನು ಖಂಡಿಸಿದನು. “ಇದು ಪುನಃ ಎಂದಿಗೂ ಸಂಭವಿಸಬಾರದು. ನಾವು ಕ್ರೈಸ್ತರಾಗಿದ್ದೇವೆ ಮತ್ತು ಚರ್ಚು ಯುದ್ಧದಲ್ಲಿ ಒಳಗೂಡಿರಬಾರದು.”
1938, ಮಾರ್ಚ್ 12ರಂದು ಹಿಟ್ಲರನು ಪ್ರತಿರೋಧವಿಲ್ಲದೆ ಆಸ್ಟ್ರಿಯದೊಳಗೆ ದಂಡಿನೊಂದಿಗೆ ನಡೆದನು ಮತ್ತು ಕೂಡಲೆ ಅದನ್ನು ಜರ್ಮನಿಯ ಒಂದು ಭಾಗವಾಗಿ ಮಾಡಿಕೊಂಡನು. ಚರ್ಚುಗಳು ಬೇಗನೆ ಅವನಿಗೆ ಬೆಂಬಲ ನೀಡಿದವು. ವಾಸ್ತವವಾಗಿ, ಒಂದು ವಾರಕ್ಕಿಂತಲೂ ಕಡಿಮೆ ದಿನಗಳ ಬಳಿಕ, ಕಾರ್ಡಿನಲ್ ಟೆಯೊಡೋರ್ ಇನಟ್ಸರ್ನನ್ನು ಒಳಗೊಂಡು ಆಸ್ಟ್ರಿಯದ ಆರು ಮಂದಿ ಬಿಷಪರೆಲ್ಲರೂ, ವಿಪರೀತ ಮೆಚ್ಚಿಕೆಯುಳ್ಳ “ಗಂಭೀರವಾದ ಘೋಷಣೆ”ಗೆ ಸಹಿ ಮಾಡಿದರು. ಅದರಲ್ಲಿ ಅವರು ಹೇಳಿದ್ದೇನಂದರೆ, ಬರುವ ಚುನಾವಣೆಯಲ್ಲಿ “ಬಿಷಪರಾದ ನಮಗೆ ಜರ್ಮನ್ ರೈಕ್ಗೆ ಮತವನ್ನು ನೀಡುವುದು, ಜರ್ಮನಿನವರೋಪಾದಿ ಅಗತ್ಯವಾಗಿದೆ ಮತ್ತು ರಾಷ್ಟ್ರೀಯ ಕರ್ತವ್ಯವಾಗಿದೆ.” (9ನೇ ಪುಟವನ್ನು ನೋಡಿರಿ.) ವಿಯೆನ್ನದಲ್ಲಿ ಒಂದು ದೊಡ್ಡ ಸಮಾರಂಭವಿತ್ತು, ಅಲ್ಲಿ ಹಿಟ್ಲರನನ್ನು ನಾಜಿ ಪ್ರಣಾಮದೊಂದಿಗೆ ಅಭಿವಂದಿಸಲಿದ್ದವರಲ್ಲಿ ಕಾರ್ಡಿನಲ್ ಇನಟ್ಸರ್ ಮೊದಲಿಗರಾಗಿದ್ದರು. ಆಸ್ಟ್ರಿಯದ ಎಲ್ಲಾ ಚರ್ಚುಗಳು ಸ್ವಾಸ್ತಿಕ ಧ್ವಜವನ್ನು ಹಾರಿಸುವಂತೆ, ತಮ್ಮ ಗಂಟೆಗಳನ್ನು ಹೊಡೆಯುವಂತೆ, ಮತ್ತು ನಾಜಿ ಸರ್ವಾಧಿಕಾರಿಗಾಗಿ ಪ್ರಾರ್ಥಿಸುವಂತೆ ಕಾರ್ಡಿನಲ್ ಆಜ್ಞೆಯನ್ನಿತ್ತರು.
ಒಂದೇ ರಾತ್ರಿಯಲ್ಲಿ ಆಸ್ಟ್ರಿಯದ ರಾಜಕೀಯ ಮನೋಭಾವವು ಬದಲಾದಂತೆ ಭಾಸವಾಯಿತು. ಸ್ವಾಸ್ತಿಕ ತೋಳ್ಪಟ್ಟಿಗಳೊಂದಿಗೆ ತಮ್ಮ ಕಂದು ಬಣ್ಣದ ಸಮವಸ್ತ್ರಗಳಲ್ಲಿ ನಾಜಿ ಖಾಸಗಿ ಸಿಪಾಯಿಗಳು ಅಣಬೆಗಳಂತೆ ಇಲ್ಲಿಗೆ ಬಂದರು. “ಹೈಲ್ ಹಿಟ್ಲರ್!” ಎಂದು ಹೇಳಲು ನಿರಾಕರಿಸಿದ ಕೆಲವು ಪುರೋಹಿತರಲ್ಲಿ, ಯುದ್ಧದಲ್ಲಿ ಚರ್ಚು ಒಳಗೂಡಿರಬಾರದೆಂದು ಈ ಮುಂಚೆ ಹೇಳಿದ್ದ ಪುರೋಹಿತನೂ ಒಬ್ಬನಾಗಿದ್ದನು. ಹಿಂಬಾಲಿಸಿದ ವಾರದಲ್ಲಿ ಒಬ್ಬ ಹೊಸ ಪುರೋಹಿತನು ಅವನ ಸ್ಥಾನಕ್ಕೆ ಭರ್ತಿಮಾಡಲ್ಪಟ್ಟನು. ತನ್ನ ಹಿಮ್ಮಡಿಗಳನ್ನು ಜೋರಾಗಿ ಬಡಿದು, ತನ್ನ ಕೈಯನ್ನು ಮೇಲಕ್ಕೆತ್ತಿ ವಂದನೆ ಮಾಡುತ್ತಾ, “ಹೈಲ್ ಹಿಟ್ಲರ್!” ಎಂದು ಹೇಳಿದ್ದೇ, ಆ ಹೊಸ ಪುರೋಹಿತನು ತರಗತಿಯನ್ನು ಪ್ರವೇಶಿಸಿದ ಮೇಲೆ ಮೊದಲಾಗಿ ಮಾಡಿದ ವಿಷಯವಾಗಿತ್ತು.
ಸರಿಹೊಂದಿಸಿಕೊಳ್ಳಲು ಒತ್ತಡ
ಪ್ರತಿಯೊಬ್ಬರೂ ನಾಜಿಗಳ ಒತ್ತಡಕ್ಕೆ ಅಧೀನವಾಗಿಸಲ್ಪಟ್ಟಿದ್ದರು. ನಾನು “ಹೈಲ್ ಹಿಟ್ಲರ್!”ಗೆ ಬದಲಾಗಿ “ಗುಟೆನ್ ಟಾಗ್” (ಶುಭ ದಿನ) ಎಂದು ಜನರನ್ನು ಅಭಿವಂದಿಸಿದಾಗ, ಅವರು ಕೋಪಗೊಂಡರು. ಸುಮಾರು 12 ಬಾರಿ ನನ್ನ ಕುರಿತು ಯಾರೋ ಗೆಸ್ಟಪೊಗಳಿಗೆ ವರದಿ ಮಾಡಿದ್ದರು. ಒಮ್ಮೆ, ನಾನು ಧ್ವಜ ವಂದನೆ ಮಾಡುವುದಿಲ್ಲವಾದರೆ ಮತ್ತು ಹಿಟ್ಲರ್ ಯೂಥ್ ಸಂಸ್ಥೆಯನ್ನು ಸೇರದಿರುವುದಾದರೆ, ನಾನು ಸೆರೆಶಿಬಿರವೊಂದಕ್ಕೆ ಕಳುಹಿಸಲ್ಪಡುವೆನೆಂದು ಹೇಳುವ ಮೂಲಕ, ನಾನು ಯಾರೊಂದಿಗೆ ವಾಸಿಸುತ್ತಿದ್ದೆನೊ ಆ ಕುಶಲಿಯಾದ ಬಣ್ಣಗಾರನಿಗೆ ನಾಜಿ ಖಾಸಗಿ ಸಿಪಾಯಿಗಳ ಒಂದು ಗುಂಪು ಬೆದರಿಕೆಹಾಕಿತು. ಕ್ರಮೇಣವಾಗಿ ನಾನು ಬದಲಾಗಬಹುದೆಂದು ಅವನಿಗೆ ಖಾತರಿಯಿದ್ದುದರಿಂದ, ಒಬ್ಬ ನಾಜಿ ಅನುಮೋದಕನಾದ ಆ ಬಣ್ಣಗಾರನು ನನ್ನ ವಿಷಯದಲ್ಲಿ ತಾಳ್ಮೆಯುಳ್ಳವರಾಗುವಂತೆ ಅವರನ್ನು ಕೇಳಿಕೊಂಡನು. ನಾನೊಬ್ಬ ಒಳ್ಳೆಯ ಕೆಲಸಗಾರನಾಗಿದದ್ದರಿಂದ ನನ್ನನ್ನು ಕಳೆದುಕೊಳ್ಳಲು ತನಗೆ ಇಷ್ಟವಿರಲಿಲ್ಲವೆಂದು ಅವನು ವಿವರಿಸಿದನು.
ನಾಜಿ ಆಡಳಿತ ವಹಿಸುವಿಕೆಯಿಂದಾಗಿ, ರಾತ್ರಿ ಬಹಳ ಹೊತ್ತಿನ ವರೆಗೆ ಮೆರೆವಣಿಗೆಗಳು ಮುಂದುವರಿದಿದ್ದವು, ಮತ್ತು ಜನರು ಉನ್ಮತ್ತಾಭಿಮಾನದಿಂದ ಘೋಷಣೆಗಳನ್ನು ಗಟ್ಟಿಯಾಗಿ ಕೂಗಿಹೇಳುತ್ತಿದ್ದರು. ಪ್ರತಿ ದಿನ ರೇಡಿಯೊಗಳು ಹಿಟ್ಲರ್, ಗಾಬೆಲ್ಸ್, ಮತ್ತು ಇತರರ ಭಾಷಣಗಳಿಂದ ಮೊಳಗುತಿದ್ತವ್ದು. ಪುರೋಹಿತರು ಹಿಟ್ಲರನಿಗೆ ನಿಯತಕ್ರಮವಾಗಿ ಪ್ರಾರ್ಥಿಸಿದಂತೆ ಮತ್ತು ಆಶೀರ್ವದಿಸಿದಂತೆ, ಹಿಟ್ಲರನಿಗೆ ಕ್ಯಾತೊಲಿಕ್ ಚರ್ಚಿನ ಅಧೀನತೆಯು ಹೆಚ್ಚು ಗಾಢವಾಯಿತು.
ಒಂದು ದೃಢವಾದ ನಿಲುವನ್ನು ತೆಗೆದುಕೊಳ್ಳುವುದರ ಕುರಿತು ಮತ್ತು ನನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸುವುದರ ಕುರಿತು ಹಾಗೂ ದೀಕ್ಷಾಸ್ನಾನ ಪಡೆದುಕೊಳ್ಳುವ ಕುರಿತು ತಂದೆಯವರು ನನಗೆ ಜ್ಞಾಪಿಸಿದರು. ಬೈಬಲ್ ಸತ್ಯಕ್ಕಾಗಿ ಒಂದು ನಿಲುವನ್ನು ತೆಗೆದುಕೊಂಡಿದ್ದ, ನಮ್ಮ ನೆರೆಯವನಾದ ಹಾನ್ಸ್ನ ತಂಗಿ ಮರೀಯ ಷ್ಟಾಸೀರಳ ಕುರಿತೂ ಅವರು ನನ್ನೊಂದಿಗೆ ಮಾತಾಡಿದರು. ಮರೀಯ ಮತ್ತು ನಾನು ವಿವಾಹವಾಗಲು ಒಪ್ಪಿಕೊಂಡಿದೆವ್ದು, ಮತ್ತು ಅವಳಿಗೆ ಆತ್ಮಿಕವಾಗಿ ಉತ್ತೇಜಿಸುವಂತೆ ತಂದೆ ನನಗೆ ಪ್ರಚೋದಿಸಿದರು. ನಾನು ಮತ್ತು ಮರೀಯ 1939ರ ಆಗಸ್ಟ್ನಲ್ಲಿ, ಅವಳ ಅಣ್ಣ ಹಾನ್ಸ್ನಿಂದ ದೀಕ್ಷಾಸ್ನಾನ ಪಡೆದುಕೊಂಡೆವು.
ತಂದೆಯವರ ಆದರ್ಶಪ್ರಾಯ ಸಮಗ್ರತೆ
ಮರುದಿನ ಮಿಲಿಟರಿ ಸೇವೆಗಾಗಿ ತಂದೆಯವರು ಕರೆಯಲ್ಪಟ್ಟರು. Iನೆಯ ಲೋಕ ಯುದ್ಧದಲ್ಲಿ ಅನುಭವಿಸಿದ್ದ ಕಷ್ಟದೆಸೆಗಳಿಂದ ಫಲಿಸಿದ ನ್ಯೂನ ಆರೋಗ್ಯವು, ಸೇವೆ ಮಾಡುವುದರಿಂದ ಅವರನ್ನು ಹೇಗೂ ತಡೆಗಟ್ಟಿದರ್ದಿಂದಾಗಿ, ತಾನು ಒಬ್ಬ ಕ್ಯಾತೊಲಿಕನಾಗಿದ್ದಾಗ ಯುದ್ಧದಲ್ಲಿ ಒಳಗೂಡಿದ್ದಂತೆ ಪುನಃ ಎಂದಿಗೂ ಒಬ್ಬ ಕ್ರೈಸ್ತನೋಪಾದಿ ಯುದ್ಧದಲ್ಲಿ ಒಳಗೂಡುವುದಿಲ್ಲವೆಂದು ತಂದೆಯವರು ಸಂದರ್ಶಕರಿಗೆ ಹೇಳಿದರು. ಈ ಹೇಳಿಕೆಗಾಗಿ ಇನ್ನೂ ಹೆಚ್ಚಿನ ತನಿಖೆಗೆ ಅವರು ಒಳಪಡಿಸಲ್ಪಟ್ಟರು.
ಜರ್ಮನಿಯು ಪೋಲೆಂಡನ್ನು ಅತಿಕ್ರಮಿಸಿದ—ಇದು ಎರಡನೆಯ ಲೋಕ ಯುದ್ಧವನ್ನಾರಂಭಿಸಿತು—ಎರಡು ವಾರಗಳ ಬಳಿಕ, ವಿಯೆನ್ನಕ್ಕೆ ಅವರು ಕೊಂಡೊಯ್ಯಲ್ಪಟ್ಟರು. ಅವರು ಅಲ್ಲಿ ಹಿಡಿಯಲ್ಪಟ್ಟಿರುವಾಗ, ಇತರ ಸಾಕ್ಷಿಗಳು ಹಿಟ್ಲರನನ್ನು ಬೆಂಬಲಿಸಲು ನಿರಾಕರಿಸಿರುವುದಕ್ಕೆ ತಂದೆಯು ಕಾರಣರಾಗಿದ್ದರು ಮತ್ತು ಇದರಿಂದಾಗಿ ತಂದೆಯವರಿಗೆ ಮರಣ ದಂಡನೆಯಾಗಬೇಕು ಎಂದು ಪ್ರತಿಪಾದಿಸುತ್ತಾ ನಮ್ಮ ಜಿಲ್ಲೆಯ ಮೇಯರರು ಪತ್ರ ಬರೆದರು. ಫಲಿತಾಂಶವಾಗಿ, ತಂದೆಯವರು ಬರ್ಲಿನ್ಗೆ ಕಳುಹಿಸಲ್ಪಟ್ಟರು, ಮತ್ತು ತದನಂತರ ಕೂಡಲೆ ಶಿರಶ್ಛೇದನ ಮಾಡಲ್ಪಡುವಂತೆ ಅವರಿಗೆ ಶಿಕ್ಷೆ ವಿಧಿಸಲ್ಪಟ್ಟಿತು. ಅವರು ಮೋಆಬೀಟ್ ಜೈಲಿನಲ್ಲಿ ಹಗಲುರಾತ್ರಿ ಸರಪಣಿಗಳಲ್ಲಿ ನಿರ್ಬಂಧಿಸಲ್ಪಟ್ಟರು.
ಅಷ್ಟರಲ್ಲಿ ಕುಟುಂಬದ ವಿಚಾರವಾಗಿ ನಾನು ತಂದೆಗೆ ಪತ್ರ ಬರೆದೆ ಮತ್ತು ನಾವು ಅವರ ನಂಬಿಗಸ್ತ ಮಾದರಿಯನ್ನು ಅನುಸರಿಸಲು ನಿರ್ಧರಿಸಿದ್ದೇವೆಂದು ಅವರಿಗೆ ಹೇಳಿದೆ. ಸಾಮಾನ್ಯವಾಗಿ ತಂದೆಯವರು ಭಾವನಾತ್ಮಕ ವ್ಯಕ್ತಿಯಾಗಿರಲಿಲ್ಲ, ಆದರೂ ಅವರು ನಮಗೆ ಬರೆದ ಕೊನೆಯ ಪತ್ರವು ಕಣ್ಣೀರಿನಿಂದ ಕಲೆಯಾದದ್ದನ್ನು ನೋಡಿದಾಗ ಅವರಿಗೆ ಹೇಗೆನಿಸಿತೆಂಬುದನ್ನು ನಾವು ಕಾಣಬಹುದಿತ್ತು. ಅವರ ನಿಲುವನ್ನು ನಾವು ಅರ್ಥಮಾಡಿಕೊಂಡದ್ದಕ್ಕಾಗಿ ಅವರು ಬಹಳ ಸಂತೋಷಗೊಂಡಿದ್ದರು. ನಮ್ಮಲ್ಲಿ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಹೆಸರಿನಿಂದ ಉಲ್ಲೇಖಿಸುವ ಮೂಲಕ ಮತ್ತು ನಂಬಿಗಸ್ತರಾಗಿ ಇರುವಂತೆ ಪ್ರೇರೇಪಿಸುವ ಮೂಲಕ ಅವರು ಉತ್ತೇಜನದಾಯಕ ಮಾತುಗಳನ್ನು ಕಳುಹಿಸಿದರು. ಪುನರುತ್ಥಾನದಲ್ಲಿ ಅವರ ನಂಬಿಕೆಯು ಬಲವಾಗಿತ್ತು.
ತಂದೆಯವರಲ್ಲದೆ, ಸುಮಾರು ಎರಡು ಡಜನ್ಗಳಷ್ಟು ಇತರ ಸಾಕ್ಷಿಗಳು ಮೋಆಬೀಟ್ ಜೈಲಿನಲ್ಲಿ ನಿರ್ಬಂಧಿಸಲ್ಪಟ್ಟಿದ್ದರು. ಹಿಟ್ಲರನ ಉಚ್ಚ ದರ್ಜೆಯ ಅಧಿಕಾರಿಗಳು, ತಮ್ಮ ನಂಬಿಕೆಯನ್ನು ತ್ಯಜಿಸುವಂತೆ ಅವರಿಗೆ ಒತ್ತಾಯಿಸಲು ಪ್ರಯತ್ನಿಸಿದರು ಆದರೆ ಯಶಸ್ವಿಯಾಗಲಿಲ್ಲ. 1939, ದಶಂಬರದಲ್ಲಿ ಸುಮಾರು 25 ಸಾಕ್ಷಿಗಳು ಗಲ್ಲಿಗೇರಿಸಲ್ಪಟ್ಟರು. ತಂದೆಯವರ ಶಿರಚ್ಛೇದನದ ಕುರಿತು ಕೇಳಿದ ಬಳಿಕ, ತಂದೆಯವರು ಮರಣ ಪರ್ಯಂತ ನಂಬಿಗಸ್ತರಾಗಿ ಉಳಿಯುವಂತೆ ಯೆಹೋವನು ಬಲವನ್ನು ಕೊಟ್ಟದ್ದಕ್ಕಾಗಿ ತಾನೆಷ್ಟು ಅಭಾರಿ ಎಂಬುದನ್ನು ತಾಯಿಯವರು ವ್ಯಕ್ತಪಡಿಸಿದರು.
ನನ್ನ ಪರೀಕ್ಷೆಗಳು ಆರಂಭವಾದವು
ಕೆಲವು ವಾರಗಳ ಬಳಿಕ, ನಾನು ಕೆಲಸಕ್ಕಾಗಿ ಕರೆಯಲ್ಪಟ್ಟೆ, ಆದರೆ ಪ್ರಮುಖ ಚಟುವಟಿಕೆಯು ಮಿಲಿಟರಿ ತರಬೇತಿಯಾಗಿತ್ತೆಂಬುದನ್ನು ಕೂಡಲೆ ತಿಳಿದುಕೊಂಡೆ. ನಾನು ಸೈನ್ಯದಲ್ಲಿ ಕೆಲಸ ಮಾಡುವುದಿಲ್ಲ, ಆದರೆ ಬೇರೆ ಕೆಲಸವನ್ನು ಮಾಡುವೆನೆಂದು ನಾನು ವಿವರಿಸಿದೆ. ಆದಾಗ್ಯೂ, ನಾಜಿ ಹೋರಾಟದ ಸಂಗೀತಗಳನ್ನು ಹಾಡಲು ನಾನು ನಿರಾಕರಿಸಿದಾಗ ಅಧಿಕಾರಿಗಳು ಕೋಪೋದ್ರಿಕ್ತರಾದರು.
ಮರುದಿನ ಬೆಳಗ್ಗೆ ನಮಗೆ ಕೊಡಲ್ಪಟ್ಟಿದ್ದ ಸೈನಿಕ ಸಮವಸ್ತ್ರವನ್ನು ಧರಿಸುವುದಕ್ಕೆ ಬದಲಾಗಿ ನಾಗರಿಕ ಪೋಷಾಕಿನಲ್ಲಿ ನಾನು ಹಾಜರಾದೆ. ನೆಲಮಾಳಿಗೆಯ ಬಂದಿಖಾನೆಯಲ್ಲಿ ನನ್ನನ್ನು ಹಾಕುವುದೇ ತಾನು ಮಾಡಸಾಧ್ಯವಿರುವ ವಿಷಯವಾಗಿದೆಯೆಂದು ಮೇಲ್ವಿಚಾರಣೆಯಲ್ಲಿದ್ದ ಅಧಿಕಾರಿಯು ಹೇಳಿದನು. ಅಲ್ಲಿ ಬ್ರೆಡ್ ಮತ್ತು ನೀರಿನ ಸಹಾಯದಿಂದ ಜೀವನಮಾಡುತ್ತಿದ್ದೆ. ತದನಂತರ ಧ್ವಜ ವಂದನೆಯ ಆಚರಣೆಯು ಇರುತ್ತದೆಂದು ನನಗೆ ಹೇಳಲಾಯಿತು, ಮತ್ತು ಅದರಲ್ಲಿ ಭಾಗವಹಿಸಲು ನಿರಾಕರಿಸುವುದು ನನ್ನ ಮೇಲೆ ಗುಂಡು ಹಾರಿಸುವುದರಲ್ಲಿ ಫಲಿಸುವುದೆಂದು ನನ್ನನ್ನು ಎಚ್ಚರಿಸಲಾಗಿತ್ತು.
ತರಬೇತಿ ಪಡೆಯುವ ಮೈದಾನಗಳಲ್ಲಿ 300 ಸೈನಿಕರು ಹಾಗೂ ಮಿಲಿಟರಿ ಅಧಿಕಾರಿಗಳಿದ್ದರು. ಅಧಿಕಾರಿಗಳು ಮತ್ತು ಸ್ವಾಸ್ತಿಕ ಧ್ವಜದ ಮುಂದೆ ಹಾದುಹೋಗುವಂತೆ ಮತ್ತು ಹಿಟ್ಲರನಿಗೆ ವಂದನೆ ಮಾಡುವಂತೆ ನನಗೆ ಆಜ್ಞೆಯು ಕೊಡಲ್ಪಟ್ಟಿತು. ಮೂವರು ಇಬ್ರಿಯರ ಕುರಿತಾದ ಬೈಬಲಿನ ವೃತ್ತಾಂತದಿಂದ ಆತ್ಮಿಕ ಬಲವನ್ನು ಪಡೆದುಕೊಳ್ಳುತ್ತಾ, ನಾನು ಹಾದುಹೋಗುವಾಗ “ಗುಟೆನ್ ಟಾಗ್” (ಶುಭ ದಿನ) ಎಂದು ಸರಳವಾಗಿ ಹೇಳಿದೆ. (ದಾನಿಯೇಲ 3:1-30) ನಾನು ಪುನಃ ಶಿಸ್ತಿನಿಂದ ನಡೆಯುವಂತೆ ಆಜ್ಞಾಪಿಸಲ್ಪಟ್ಟೆ. ಈ ಬಾರಿ ನಾನು ಏನನ್ನೂ ಹೇಳಲಿಲ್ಲ, ಕೇವಲ ನಸುನಗೆಯನ್ನು ವ್ಯಕ್ತಪಡಿಸಿದೆ.
ನಾಲ್ವರು ಅಧಿಕಾರಿಗಳು ನನ್ನನ್ನು ನೆಲಮಾಳಿಗೆಯ ಬಂದಿಖಾನೆಗೆ ಹಿಂದಿರುಗಿ ಕರೆದೊಯ್ಯುತ್ತಿದ್ದಾಗ, ನನಗೆ ಗುಂಡು ಹಾರಿಸಲ್ಪಡಬಹುದೆಂದು ಅವರು ನಿರೀಕ್ಷಿಸಿದರ್ದಿಂದ, ತಾವು ನಡುಗುತ್ತಿದ್ದೆವೆಂದು ಅವರು ನನಗೆ ಹೇಳಿದರು. “ನೀನು ನಗುತ್ತಿದ್ದಿ ಮತ್ತು ನಾವು ತೀರ ದುರ್ಬಲಗೊಂಡಿದೆವ್ದು, ಅದು ಹೇಗೆ ಸಾಧ್ಯ?” ಎಂದು ಅವರು ಕೇಳಿದರು. ನನ್ನ ಧೈರ್ಯವು ತಮಗಿರಬೇಕಿತ್ತೆಂದು ತಾವು ಬಯಸಿದೆವೆಂದು ಅವರು ನನಗೆ ಹೇಳಿದರು.
ಕೆಲವು ದಿನಗಳ ಬಳಿಕ, ಬರ್ಲಿನ್ನಲ್ಲಿರುವ ಹಿಟ್ಲರನ ಮುಖ್ಯ ಕಾರ್ಯಾಲಯದಿಂದ ಉಚ್ಚ ದರ್ಜೆಯ ಅಧಿಕಾರಿಯಾದ ಡಾ. ಆಲ್ಮೆಂಡಿಂಗರ್, ಶಿಬಿರಕ್ಕೆ ಆಗಮಿಸಿದನು. ನಾನು ಅವನ ಮುಂದೆ ಕರೆಯಲ್ಪಟ್ಟೆ. ನಿಯಮಗಳು ಹೆಚ್ಚು ಕಠಿನವಾಗಿ ಪರಿಣಮಿಸಿವೆ ಎಂದು ಅವನು ವಿವರಿಸಿದನು. “ನೀನು ಯಾವ ತೊಂದರೆಯನ್ನು ಎದುರಿಸಲಿದೀಯ್ದೆಂದು ನಿನಗೆ ಗೊತ್ತಿಲ್ಲ” ಎಂದು ಅವನಂದನು.
“ಓ, ಹೌದು, ನನಗೆ ಗೊತ್ತಿದೆ” ಎಂದು ನಾನು ಉತ್ತರಿಸಿದೆ. “ಕೆಲವೇ ವಾರಗಳ ಹಿಂದೆ ಇದೇ ಕಾರಣಕ್ಕಾಗಿಯೇ ನನ್ನ ತಂದೆಗೆ ಶಿರಚ್ಛೇದನ ಮಾಡಲಾಗಿತ್ತು.” ಅವನು ದಿಗ್ಭಮ್ರೆಗೊಂಡನು ಮತ್ತು ಮೌನಿಯಾದನು.
ತದನಂತರ ಬರ್ಲಿನ್ನಿಂದ ಇನ್ನೊಬ್ಬ ಉಚ್ಚ ದರ್ಜೆಯ ಅಧಿಕಾರಿಯು ಆಗಮಿಸಿದನು, ಮತ್ತು ನನ್ನ ಮನಸ್ಸನ್ನು ಬದಲಾಯಿಸಲು ಇನ್ನೂ ಹೆಚ್ಚಿನ ಪ್ರಯತ್ನಗಳು ಮಾಡಲ್ಪಟ್ಟವು. ನಾನು ದೇವರ ನಿಯಮಗಳನ್ನು ಯಾಕೆ ಉಲ್ಲಂಘಿಸುವುದಿಲ್ಲವೆಂಬುದನ್ನು ಕೇಳಿದ ಬಳಿಕ, ಅವನು ನನ್ನ ಕೈಯನ್ನು ತೆಗೆದುಕೊಂಡು ತನ್ನ ಮುಖದಲ್ಲಿ ಮೇಲಿನಿಂದ ಕೆಳಕ್ಕೆ ಹರಿಯುತ್ತಿರುವ ಕಣ್ಣೀರಿನೊಂದಿಗೆ ಹೇಳಿದ್ದು: “ನಾನು ನಿನ್ನ ಜೀವವನ್ನು ರಕ್ಷಿಸಲು ಬಯಸುತ್ತೇನೆ!” ಈ ದೃಶ್ಯವನ್ನು ವೀಕ್ಷಿಸುತ್ತಿದ್ದ ಎಲ್ಲಾ ಅಧಿಕಾರಿಗಳು ಬಹಳ ಪ್ರಭಾವಿಸಲ್ಪಟ್ಟರು. ಬಳಿಕ ನಾನು ಒಟ್ಟಿಗೆ 33 ದಿನಗಳನ್ನು ಕಳೆದ ನೆಲಮಾಳಿಗೆಯ ಬಂದಿಖಾನೆಗೆ ಪುನಃ ಕರೆದೊಯ್ಯಲ್ಪಟ್ಟೆ.
ವಿಚಾರಣೆ ಮತ್ತು ಬಂಧನ
1940ರ ಮಾರ್ಚ್ನಲ್ಲಿ, ಫ್ಯೂರ್ಸನ್ಟ್ಫೆಲ್ಟ್ನಲ್ಲಿರುವ ಜೈಲಿಗೆ ನಾನು ವರ್ಗಾಯಿಸಲ್ಪಟ್ಟೆ. ಕೆಲವು ದಿನಗಳ ಬಳಿಕ ನನ್ನ ನಿಶ್ಚಿತ ವಧುವಾದ ಮರೀಯ, ಮತ್ತು ನನ್ನ ಸಹೋದರನಾದ ಗ್ರೇಗೊರ್ ಭೇಟಿ ನೀಡಿದರು. ಗ್ರೇಗೊರ್ ನನಗಿಂತಲೂ ಕೇವಲ ಒಂದೂವರೆ ವರ್ಷ ಚಿಕ್ಕವನಾಗಿದ್ದನು, ಮತ್ತು ಅವನು ಶಾಲೆಯಲ್ಲಿ ಬೈಬಲ್ ಸತ್ಯಕ್ಕಾಗಿ ದೃಢವಾದ ನಿಲುವನ್ನು ತೆಗೆದುಕೊಂಡಿದ್ದನು. ಮಾಡಲಿಕ್ಕಿರುವ ಒಂದೇ ವಿಷಯವು ಯೆಹೋವನನ್ನು ಸೇವಿಸುವುದೇ ಎಂದು ನಮ್ಮ ಚಿಕ್ಕ ಸಹೋದರರನ್ನು ಹಿಂಸೆಗಾಗಿ ಸನ್ನದ್ಧರಾಗುವಂತೆ ಅವನು ಒತ್ತಾಯಿಸುತ್ತಿದ್ದದ್ದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ! ಒಬ್ಬರನ್ನೊಬ್ಬರು ಉತ್ತೇಜಿಸುತ್ತಾ ಕಳೆದ ಅಮೂಲ್ಯವಾದ ತಾಸೇ, ನಾನು ಅವನನ್ನು ಕೊನೆಯ ಬಾರಿಗೆ ಸಜೀವವಾಗಿ ಕಂಡಂತಹದ್ದಾಗಿತ್ತು. ತದನಂತರ, ಗ್ರಾಟ್ಸ್ನಲ್ಲಿ, ಐದು ವರ್ಷಗಳ ಕಠಿನ ದುಡಿತದ ಶಿಕ್ಷೆಗೆ ನಾನು ಒಳಪಡಿಸಲ್ಪಟ್ಟೆ.
1940ರ ಕೊನೆಯಲ್ಲಿ, ಚೆಕಸ್ಲೊವಾಕಿಯದಲ್ಲಿರುವ ಕಾರ್ಮಿಕರ ಶಿಬಿರಕ್ಕೆ ರವಾನಿಸಲು ಪೂರ್ವ ನಿರ್ಧಾರಿತವಾದ ರೈಲಿನಲ್ಲಿ ನನ್ನನ್ನು ಹಾಕಲಾಯಿತು, ಆದರೆ ನಾನು ವಿಯೆನ್ನದಲ್ಲಿ ತಡೆಹಿಡಿಯಲ್ಪಟ್ಟೆ ಮತ್ತು ಅಲ್ಲಿನ ಸೆರೆಮನೆಯಲ್ಲಿ ಹಾಕಲ್ಪಟ್ಟೆ. ಪರಿಸ್ಥಿತಿಗಳು ಭೀಕರವಾಗಿದ್ದವು. ನಾನು ಹಸಿವೆಯಿಂದ ಕಷ್ಟಾನುಭವಿಸಿದ್ದಲ್ಲದೆ, ನನ್ನ ಶರೀರವು ರಕ್ತ ಸುರಿಸುವಂತೆ ಮತ್ತು ಉರಿಯುವಂತೆ ಮಾಡಿದ ದೊಡ್ಡ ಕೀಟಗಳು ನನ್ನನ್ನು ಕಚ್ಚಿದವು. ಆಗ ನನಗೆ ಗೊತ್ತಿಲ್ಲದ ಕಾರಣಗಳಿಗಾಗಿ ನಾನು, ಗ್ರಾಟ್ಸ್ನಲ್ಲಿರುವ ಸೆರೆಮನೆಗೆ ಹಿಂದಿರುಗಿಸಲ್ಪಟ್ಟೆ.
ನನ್ನ ಕೇಸಿನಲ್ಲಿ ಆಸಕ್ತಿಯಿತ್ತು ಏಕೆಂದರೆ, ಗೆಸ್ಟಪೊಗಳು, ಯೆಹೋವನ ಸಾಕ್ಷಿಗಳನ್ನು ಸ್ವರ್ಗೀಯ ಪುನರುತ್ಥಾನವನ್ನು ಪಡೆದುಕೊಳ್ಳಲಿಕ್ಕಾಗಿ ಮರಣ ಶಿಕ್ಷೆಯನ್ನು ಅಪೇಕ್ಷಿಸುವ ಮತಭ್ರಾಂತ ಧರ್ಮಬಲಿಗಳೋಪಾದಿ ವಿವರಿಸಿದ್ದರು. ಫಲಿತಾಂಶವಾಗಿ, ಗ್ರಾಟ್ಸ್ ವಿಶ್ವವಿದ್ಯಾನಿಲಯದ ಒಬ್ಬ ಪ್ರೊಫೆಸರ್ ಮತ್ತು ಎಂಟು ವಿದ್ಯಾರ್ಥಿಗಳ ಮುಂದೆ, ಕೇವಲ 1,44,000 ವ್ಯಕ್ತಿಗಳು ಮಾತ್ರವೇ ಕ್ರಿಸ್ತನೊಂದಿಗೆ ಆಳಲು ಪರಲೋಕಕ್ಕೆ ಕೊಂಡೊಯ್ಯಲ್ಪಡುವರು ಎಂದು ವಿವರಿಸುತ್ತಾ, ಎರಡು ದಿನಗಳ ವರೆಗೆ ಮಾತಾಡುವ ಒಂದು ಸದವಕಾಶವು ನನಗಿತ್ತು. (ಪ್ರಕಟನೆ 14:1-3) ಭೂಮಿಯ ಮೇಲೆ ಪ್ರಮೋದವನ ಪರಿಸ್ಥಿತಿಗಳ ಕೆಳಗೆ ನಿತ್ಯ ಜೀವವನ್ನು ಅನುಭವಿಸುವುದೇ ನನ್ನ ನಿರೀಕ್ಷೆಯಾಗಿತ್ತೆಂದು ನಾನು ಹೇಳಿದೆ.—ಕೀರ್ತನೆ 37:29; ಪ್ರಕಟನೆ 21:3, 4.
ಎರಡು ದಿನಗಳ ವರೆಗೆ ಪ್ರಶ್ನೆಗಳನ್ನು ಕೇಳಿದ ಬಳಿಕ, ಪ್ರೊಫೆಸರರು ಹೇಳಿದ್ದು: “ನೀನು ನ್ಯಾಯ ಸಮ್ಮತವಾಗಿ ಆಲೋಚಿಸುತ್ತಿದ್ದೀ ಎಂಬ ನಿರ್ಧಾರಕ್ಕೆ ನಾನು ಬಂದಿದ್ದೇನೆ. ಸಾಯುವುದು ಮತ್ತು ಪರಲೋಕಕ್ಕೆ ಹೋಗುವುದು ನಿನ್ನ ಅಪೇಕ್ಷೆಯಾಗಿಲ್ಲ.” ಅವರು ಯೆಹೋವನ ಸಾಕ್ಷಿಗಳ ಹಿಂಸೆಯ ಕುರಿತು ದುಃಖವನ್ನು ವ್ಯಕ್ತಪಡಿಸಿದರು ಮತ್ತು ನನಗೆ ಅತ್ಯುತ್ತಮವಾದುದನ್ನು ಹಾರೈಸಿದರು.
1941ರ ಆರಂಭದಲ್ಲಿ, ಜರ್ಮನಿಯಲ್ಲಿರುವ ಕಠಿನ ದುಡಿತದ ರಾಲ್ವಾಲ್ಟ್ ಶಿಬಿರದ ಕಡೆಗೆ ಹೋಗುತ್ತಿದ್ದ ಒಂದು ರೈಲಿನಲ್ಲಿ ನಾನಿದ್ದುದಾಗಿ ಕಂಡುಕೊಂಡೆ.
ಕ್ರೂರವಾದ ಶಿಬಿರ ಜೀವನ
ಫ್ರಾಂಕ್ಫರ್ಟ್ ಮತ್ತು ಡಾರ್ಮ್ಸ್ಟಾಟ್ ನಗರಗಳ ಮಧ್ಯೆ ರಾಲ್ವಾಲ್ಟ್ ಇತ್ತು, ಮತ್ತು ಸುಮಾರು 5,000 ಸೆರೆಯಾಳುಗಳನ್ನು ಸ್ವಾಧೀನದಲ್ಲಿಟ್ಟುಕೊಂಡಿತ್ತು. ಪ್ರತಿ ದಿನವು ಬೆಳಗ್ಗೆ 5ಕ್ಕೆ ಹಾಜರಿ ಕೂಗುವುದರೊಂದಿಗೆ ಆರಂಭವಾಗುತ್ತಿತ್ತು, ಅಧಿಕಾರಿಗಳು ನಿಧಾನ ಗತಿಯಲ್ಲಿ ತಮ್ಮ ಪಟ್ಟಿಗಳನ್ನು ಕಾಲೋಚಿತವಾಗಿ ಮಾಡುವಾಗ ಸುಮಾರು ಎರಡು ತಾಸುಗಳನ್ನು ತೆಗೆದುಕೊಳ್ಳುತ್ತಿತ್ತು. ಸ್ತಬ್ಧರಾಗಿ ನಿಲ್ಲುವಂತೆ ನಾವು ಅಗತ್ಯಪಡಿಸಲ್ಪಟ್ಟಿದ್ದೆವು, ಮತ್ತು ತೀರ ನಿಶ್ಚಲವಾಗಿ ನಿಲ್ಲದ್ದಕ್ಕಾಗಿ ಅನೇಕ ಸೆರೆವಾಸಿಗಳು ವಿಪರೀತ ಹೊಡೆತಗಳನ್ನು ಅನುಭವಿಸಿದರು.
ಹೊತ್ತರೂಟವು ಹಿಟ್ಟು, ಮರದ ಪುಡಿ, ಮತ್ತು ಅನೇಕವೇಳೆ ಕೊಳೆತಿದ್ದ ಆಲೂಗಡ್ಡೆಯಿಂದ ಮಾಡಲ್ಪಟ್ಟ ರೊಟ್ಟಿಯನ್ನು ಒಳಗೊಂಡಿತ್ತು. ತದನಂತರ ನಾವು ಜೌಗು ನೆಲದಲ್ಲಿ—ವ್ಯಾವಸಾಯಿಕ ಉದ್ದೇಶಗಳಿಗಾಗಿ ನೆಲವನ್ನು ಒಣಗಿಸಲಿಕ್ಕಾಗಿ ಕಂದಕಗಳನ್ನು ತೋಡುವುದು—ಕೆಲಸ ಮಾಡಲು ಹೋದೆವು. ಇಡೀ ದಿನ ನಾವು ಸಮರ್ಪಕವಾದ ಕಾಲ್ದೊಡಿಗೆಯಿಲ್ಲದೆ ಜೌಗು ನೆಲದಲ್ಲಿ ಕೆಲಸ ಮಾಡಿದ ಬಳಿಕ, ನಮ್ಮ ಪಾದಗಳು ಸ್ಪಂಜುಗಳಂತೆ ಊದುತ್ತಿದ್ದವು. ಒಮ್ಮೆ ನನ್ನ ಪಾದಗಳು ಗ್ಯಾಂಗ್ರೀನ್ (ಅಂಗಕ್ಷಯ)ನಂತೆ ಕಾಣಿಸುವಷ್ಟು ವಿಕಸಿಸಿದವು, ಮತ್ತು ಅವುಗಳನ್ನು ಕತ್ತರಿಸಿ ತೆಗೆಯಬೇಕಾಗಬಹುದೆಂದು ನಾನು ಹೆದರಿದ್ದೆ.
ಮಧ್ಯಾಹ್ನ ಸಮಯದಲ್ಲಿ ಕೆಲಸದ ಸ್ಥಳದ ಬಳಿ, ಸೂಪ್ ಎಂದು ಹೆಸರಿಸಲ್ಪಟ್ಟ ಪ್ರಾಯೋಗಿಕ ಮಿಶ್ರಣವು ನಮಗೆ ಕೊಡಲ್ಪಡುತ್ತಿತ್ತು. ಅದು ಟರ್ನಿಪ್ ಗೆಡ್ಡೆ ಅಥವಾ ಎಲೆಕೋಸಿನೊಂದಿಗೆ ಒಗ್ಗರಿಸಲ್ಪಡುತ್ತಿತ್ತು ಅಥವಾ ಕೆಲವೊಮ್ಮೆ ರೋಗಹಿಡಿದ ಪ್ರಾಣಿಗಳ ಅರೆದ ಮಾಂಸದಿಂದಲೂ ಕೂಡಿರುತ್ತಿತ್ತು. ನಮ್ಮ ಬಾಯಿಗಳು ಮತ್ತು ಗಂಟಲುಗಳು ಉರಿಯುತ್ತಿದವ್ದು, ಮತ್ತು ನಮ್ಮಲ್ಲಿ ಅನೇಕರಿಗೆ ದೊಡ್ಡ ಕೀವುಗುಳ್ಳೆಗಳಾದವು. ಸಂಜೆ ಸಮಯದಲ್ಲಿ ನಮಗೆ ಹೆಚ್ಚು “ಸೂಪ್” ದೊರೆಯುತ್ತಿತ್ತು. ಅನೇಕ ಸೆರೆಯಾಳುಗಳು ತಮ್ಮ ಹಲ್ಲುಗಳನ್ನು ಕಳೆದುಕೊಂಡರು, ಆದರೆ ಹಲ್ಲುಗಳನ್ನು ಕ್ರಿಯಾಶೀಲವಾಗಿಡುವುದರ ಪ್ರಮುಖತೆಯ ಕುರಿತು ನನಗೆ ಹೇಳಲ್ಪಟ್ಟಿತ್ತು. ಪೈನ್ ಮರದ ಒಂದು ತುಂಡು ಅಥವಾ ಹೇಜ್ಲ್ ಕೊಂಬೆಗಳನ್ನು ನಾನು ಅಗಿಯುತ್ತಿದ್ದೆ ಮತ್ತು ನಾನೆಂದಿಗೂ ನನ್ನ ಹಲ್ಲುಗಳನ್ನು ಕಳೆದುಕೊಳ್ಳಲಿಲ್ಲ.
ಆತ್ಮಿಕವಾಗಿ ಬಲವಾಗಿ ಇರುವುದು
ನನ್ನ ನಂಬಿಕೆಯನ್ನು ಮುರಿಯುವ ಪ್ರಯತ್ನದಲ್ಲಿ, ಗಾರ್ಡ್ಗಳು ನನ್ನನ್ನು ಇತರ ಸಾಕ್ಷಿಗಳ ಸಂಪರ್ಕದಿಂದ ಪ್ರತ್ಯೇಕಿಸಿದರು. ನನ್ನಲ್ಲಿ ಬೈಬಲ್ ಸಾಹಿತ್ಯವು ಇಲ್ಲದರ್ದಿಂದ, ನಾನು ಗಟ್ಟಿಮಾಡಿದ್ದ ‘ನಮ್ಮ ಪೂರ್ಣ ಹೃದಯದಿಂದ ಯೆಹೋವನಲ್ಲಿ ಭರವಸ’ವಿಡುವಂತೆ ನಮ್ಮನ್ನು ಪ್ರೇರೇಪಿಸುವ ಜ್ಞಾನೋಕ್ತಿ 3:5, 6, ಮತ್ತು ಯೆಹೋವನು ‘ನಾವು ಸಹಿಸಬಲ್ಲ ಶೋಧನೆಯನ್ನು ಹೊರತು ಬೇರೆ ಯಾವದೂ ನಮಗೆ ಸಂಭವಿಸ’ದಂತೆ ಮಾಡುತ್ತಾನೆಂದು ವಾಗ್ದಾನಿಸುವ 1 ಕೊರಿಂಥ 10:13ಗಳಂತಹ ಶಾಸ್ತ್ರವಚನಗಳನ್ನು ನಾನು ಮನಸ್ಸಿಗೆ ತರುತ್ತಿದ್ದೆ. ಅಂತಹ ಶಾಸ್ತ್ರವಚನಗಳನ್ನು ನನ್ನ ಮನಸ್ಸಿನಲ್ಲಿ ಪುನರ್ವಿಮರ್ಶಿಸುವ ಮೂಲಕ ಮತ್ತು ಪ್ರಾರ್ಥನೆಯಲ್ಲಿ ಯೆಹೋವನ ಮೇಲೆ ಆತುಕೊಳ್ಳುವ ಮೂಲಕ ನಾನು ಬಲಗೊಳಿಸಲ್ಪಟ್ಟೆ.
ಬೇರೊಂದು ಶಿಬಿರದಿಂದ ಸ್ಥಳಾಂತರಿಸಲ್ಪಡುವ ಒಬ್ಬ ಸಾಕ್ಷಿಯನ್ನು ನಾನು ಆಗಾಗ ನೋಡಶಕ್ತನಾಗುತ್ತಿದ್ದೆ. ನಮಗೆ ಮಾತಾಡಲು ಅವಕಾಶವು ಇಲ್ಲದಿರುವಲ್ಲಿ, ನಮ್ಮ ತಲೆ ಅಲುಗಿಸುವಿಕೆಯಿಂದ ಅಥವಾ ಬಿಗಿದ ಮುಷ್ಟಿಯ ಕೈಯನ್ನು ಎತ್ತುವ ಮೂಲಕ, ದೃಢವಾಗಿ ನಿಲ್ಲುವಂತೆ ನಾವು ಒಬ್ಬರನ್ನೊಬ್ಬರು ಉತ್ತೇಜಿಸುತ್ತಿದ್ದೆವು. ಆಗಾಗ ಮರೀಯ ಮತ್ತು ತಾಯಿಯಿಂದ ಪತ್ರಗಳು ಬರುತ್ತಿದ್ದವು. ಒಂದು ಪತ್ರದಲ್ಲಿ ನನ್ನ ಪ್ರೀತಿಯ ತಮ್ಮ ಗ್ರೇಗೊರ್ನ ಮರಣದ ಕುರಿತಾಗಿಯೂ, ಮತ್ತು ಇನ್ನೊಂದರಲ್ಲಿ, ಯುದ್ಧದ ಅಂತ್ಯದಲ್ಲಿ, ಮರೀಯಳ ಅಣನ್ಣಾದ ಹಾನ್ಸ್ ಷ್ಟಾಸೀರ್ನ ಶಿರಚ್ಛೇದನ ಮಾಡಲ್ಪಟ್ಟದ್ದನ್ನೂ ನಾನು ತಿಳಿದುಕೊಂಡೆ.
ತದನಂತರ, ಬರ್ಲಿನ್ನ ಮೋಆಬೀಟ್ ಜೈಲಿನಲ್ಲಿ ಅವರಿಬ್ಬರೂ ಒಟ್ಟಿಗೆ ಇದ್ದಾಗ, ಗ್ರೇಗೊರ್ನ ಕುರಿತು ತಿಳಿದಿದ್ದ ಒಬ್ಬ ಸೆರೆವಾಸಿಯು ನಮ್ಮ ಶಿಬಿರಕ್ಕೆ ವರ್ಗಾಯಿಸಲ್ಪಟ್ಟನು. ಏನು ಸಂಭವಿಸಿತ್ತೋ ಅದರ ಕುರಿತಾದ ವಿವರಗಳನ್ನು ನಾನು ಅವನಿಂದ ತಿಳಿದುಕೊಂಡೆ. ಗ್ರೇಗೊರ್ಗೆ ಶಿರಚ್ಛೇದಕ ಯಂತ್ರದಿಂದ ಸಾಯುವಂತೆ ಶಿಕ್ಷೆ ವಿಧಿಸಲ್ಪಟ್ಟಿತ್ತು, ಆದರೆ ಆತನ ಸಮಗ್ರತೆಯನ್ನು ಮುರಿಯುವ ಪ್ರಯತ್ನದಿಂದ, ಶಿರಚ್ಛೇದನ ಮಾಡುವುದಕ್ಕೆ ಮುನ್ನ ವಾಡಿಕೆಯಾಗಿ ಕಾಯಬೇಕಾದ ಕಾಲಾವಧಿಯು ನಾಲ್ಕು ತಿಂಗಳುಗಳ ವರೆಗೆ ವಿಸ್ತರಿಸಲ್ಪಟ್ಟಿತ್ತು. ಆ ಸಮಯದಲ್ಲಿ ಅವನು ರಾಜಿಮಾಡಿಕೊಳ್ಳುವಂತೆ ಮಾಡಲಿಕ್ಕಾಗಿ ಎಲ್ಲಾ ರೀತಿಯ ಒತ್ತಡಗಳು ಪ್ರಯೋಗಿಸಲ್ಪಟ್ಟವು—ಅವನ ಕೈಗಳು ಮತ್ತು ಕಾಲುಗಳು ಭಾರವಾದ ಸರಪಣಿಗಳಿಂದ ಕಟ್ಟಲ್ಪಟ್ಟಿದ್ದವು, ಮತ್ತು ಅವನಿಗೆ ಅಪರೂಪವಾಗಿ ಆಹಾರವನ್ನು ಕೊಡಲಾಗುತ್ತಿತ್ತು. ಆದರೂ, ಅವನು ಎಂದಿಗೂ ಸ್ಥೈರ್ಯಗೆಡಲಿಲ್ಲ. ಅವನು 1942, ಮಾರ್ಚ್ 14ರ ವರೆಗೆ, ಮರಣದ ತನಕ ನಂಬಿಗಸ್ತನಾಗಿದ್ದನು. ಈ ಸಮಾಚಾರದಿಂದ ನಾನು ದುಃಖಿತನಾದರೂ, ಬರಬಹುದಾದ ಯಾವುದೇ ಕಷ್ಟದ ಹೊರತೂ ಯೆಹೋವನಿಗೆ ನಂಬಿಗಸ್ತನಾಗಿ ಉಳಿಯುವಂತೆ ಇದರಿಂದ ನಾನು ಬಲಗೊಳಿಸಲ್ಪಟ್ಟೆ.
ಸಕಾಲದಲ್ಲಿ, ನನ್ನ ತಮ್ಮಂದಿರಾದ ಕ್ರಿಸ್ಟ್ಯಾನ್ ಮತ್ತು ವಿಲೀಬಾಲ್ಟ್ ಹಾಗೂ ನನ್ನ ತಂಗಿಯರಾದ ಈಡ ಮತ್ತು ಆನಿ, ಜರ್ಮನಿಯ ಲಾಂಡಾವ್ನಲ್ಲಿ ಒಂದು ಶಿಕ್ಷಾಗೃಪದೋಪಾದಿ ಉಪಯೋಗಿಸಲ್ಪಡುವ ಕಾನ್ವೆಂಟೊಂದಕ್ಕೆ ಕರೆದೊಯ್ಯಲ್ಪಟ್ಟರೆಂದು ಸಹ ನನಗೆ ಗೊತ್ತಾಯಿತು. ಹಿಟ್ಲರನಿಗೆ ವಂದಿಸಲು ನಿರಾಕರಿಸಿದ ಕಾರಣ ಹುಡುಗರು ಬಹಳವಾಗಿ ಹೊಡೆಯಲ್ಪಟ್ಟರು.
ಸಾಕ್ಷಿ ನೀಡಲು ಸಂದರ್ಭಗಳು
ನಾನು ವಾಸಿಸುತ್ತಿದ್ದ ವಠಾರಗಳಲ್ಲಿ ಇದ್ದವರಲ್ಲಿ ಅಧಿಕಾಂಶ ಮಂದಿ ರಾಜಕೀಯ ಕೈದಿಗಳೂ ಅಪರಾಧಿಗಳೂ ಆಗಿದ್ದರು. ಅನೇಕವೇಳೆ ನಾನು ಸಾಯಂಕಾಲಗಳನ್ನು ಅವರಿಗೆ ಸಾಕ್ಷಿ ನೀಡುವುದರಲ್ಲಿ ಕಳೆಯುತ್ತಿದ್ದೆ. ಕಾಪ್ಫೆನ್ಬರ್ಗ್ನ ಯೋಹಾನ್ ಲಿಸ್ಟ್ ಎಂಬ ಹೆಸರಿನ ಕ್ಯಾತೊಲಿಕ್ ಪಾದ್ರಿಯು ಒಬ್ಬನಾಗಿದ್ದನು. ಬ್ರಿಟಿಷ್ ಪ್ರಸರಣದಲ್ಲಿ ಕೇಳಿದ ವಿಷಯಗಳ ಕುರಿತು ಅವನು ತನ್ನ ಸಭೆಗೆ ಮಾತಾಡಿದರ್ದಿಂದಾಗಿ ಅವನು ಸೆರೆಯಲ್ಲಿ ಹಾಕಲ್ಪಟ್ಟಿದ್ದನು.
ಯೋಹಾನ್ನು ಕಠಿನವಾದ ಶಾರೀರಿಕ ದುಡಿತಕ್ಕೆ ಒಗ್ಗಿಕೊಂಡಿರದ ಕಾರಣ ಅದು ಅವನಿಗೆ ಕಷ್ಟವಾಗಿತ್ತು. ಅವನು ಆನಂದದಾಯಕ ವ್ಯಕ್ತಿಯಾಗಿದ್ದನು, ಮತ್ತು ಅವನು ತೊಂದರೆಗೆ ಸಿಕ್ಕಿಕೊಳ್ಳದಿರಲಿಕ್ಕಾಗಿ ತನ್ನ ಕೆಲಸದ ಪಾಲನ್ನು ಅವನು ತಲಪುವಂತೆ ನಾನು ಅವನಿಗೆ ಸಹಾಯ ಮಾಡುತ್ತಿದ್ದೆ. ಕ್ರೈಸ್ತ ನಿಯಮಗಳಿಗೆ ಅಂಟಿಕೊಂಡದ್ದಕ್ಕಾಗಿ ಅಲ್ಲ, ರಾಜಕೀಯ ಕಾರಣಗಳಿಗಾಗಿ ತಾನು ಸೆರೆಯಲ್ಲಿ ಹಾಕಲ್ಪಟ್ಟದ್ದರಿಂದ ಲಜ್ಜಿತನಾಗಿದ್ದೇನೆಂದು ಅವನು ಹೇಳಿದನು. “ಒಬ್ಬ ಕ್ರೈಸ್ತನೋಪಾದಿ ನೀನು ನಿಜವಾಗಿಯೂ ಕಷ್ಟಾನುಭವಿಸುತ್ತಿದ್ದೀ” ಎಂದು ಅವನು ಹೇಳಿದನು. ಸುಮಾರು ಒಂದು ವರ್ಷದ ಬಳಿಕ ಅವನು ಬಿಡುಗಡೆ ಮಾಡಲ್ಪಟ್ಟಾಗ, ನನ್ನ ತಾಯಿ ಮತ್ತು ನನ್ನ ನಿಶ್ಚಿತ ವಧುವನ್ನು ಭೇಟಿ ಮಾಡುತ್ತೇನೆಂದು ಅವನು ವಾಗ್ದಾನಿಸಿದನು, ಅದನ್ನು ಅವನು ಪಾಲಿಸಿದನು.
ನನಗಾಗಿ ಜೀವಿತವು ಉತ್ತಮಗೊಳ್ಳುತ್ತದೆ
1943ರ ಕೊನೆಗೆ, ನಮ್ಮ ಶಿಬಿರದಲ್ಲಿರುವ ಪರಿಸ್ಥಿತಿಗಳನ್ನು ಪ್ರಗತಿಗೊಳಿಸಲು ಆರಂಭಿಸಿದ, ಎತ್ತರವಾದ, ಬಿಳಿಯ ಕೂದಲುಳ್ಳ, ಕಾರ್ಲ್ ಸ್ಟಂಫ್ ಎಂಬ ಹೆಸರಿನ ಒಬ್ಬ ಹೊಸ ಶಿಬಿರ ಅಧಿಕಾರಿಯು ನಮಗೆ ದೊರಕಿದನು. ಅವನ ಮನೆಗೆ ಬಣ್ಣ ಹಚ್ಚಬೇಕಿತ್ತು, ಮತ್ತು ನಾನು ವೃತ್ತಿಯಿಂದಲೇ ಬಣ್ಣಗಾರನೆಂದು ಅವನಿಗೆ ಗೊತ್ತಾದಾಗ, ನನಗೆ ಆ ಕೆಲಸವು ಕೊಡಲ್ಪಟ್ಟಿತು. ಜೌಗು ನೆಲದಲ್ಲಿ ಕೆಲಸಮಾಡುವುದರಿಂದ ಬೇರೆ ಕಡೆಗೆ ನಾನು ಕರೆದೊಯ್ಯಲ್ಪಟ್ಟದ್ದು ಅದೇ ಪ್ರಥಮಬಾರಿಯಾಗಿತ್ತು.
ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೋಪಾದಿ ನನ್ನ ನಂಬಿಕೆಯ ಕಾರಣದಿಂದ ನಾನು ಅಲ್ಲಿದ್ದೇನೆಂದು ಅವಳ ಗಂಡನು ವಿವರಿಸಿದ್ದಾಗ್ಯೂ, ನಾನು ಏಕೆ ಸೆರೆಹಿಡಿಯಲ್ಪಟ್ಟಿದೆನ್ದೆಂದು ಅರ್ಥಮಾಡಿಕೊಳ್ಳುವುದು ಅಸಾಧ್ಯವೆಂದು ಅಧಿಕಾರಿಯ ಹೆಂಡತಿಯು ಆಲೋಚಿಸಿದ್ದಳು. ನಾನು ತೀರ ಬಡಕಲಾಗಿದದ್ದರಿಂದ ಅವಳು ನನಗೆ ಕರುಣೆ ತೋರಿಸಿದಳು ಮತ್ತು ಆಹಾರ ಕೊಟ್ಟಳು. ನಾನು ಶಾರೀರಿಕವಾಗಿ ಅಭಿವೃದ್ಧಿ ಹೊಂದಸಾಧ್ಯವಾಗುವಂತೆ ಅವಳು ನನಗಾಗಿ ಹೆಚ್ಚಿನ ಕೆಲಸಗಳನ್ನು ಏರ್ಪಡಿಸಿದಳು.
1943ರ ಅಂತ್ಯ ಭಾಗದಲ್ಲಿ, ಶಿಬಿರದ ಸೆರೆವಾಸಿಗಳು ಯುದ್ಧರಂಗದಲ್ಲಿರುವ ಸೈನ್ಯದಲ್ಲಿ ಹೋರಾಟಕ್ಕಾಗಿ ಕರೆಯಲ್ಪಟ್ಟಾಗ, ಅಧಿಕಾರಿ ಸ್ಟಂಫ್ನೊಂದಿಗಿನ ನನ್ನ ಒಳ್ಳೆಯ ಸಂಬಂಧವು ನನ್ನನ್ನು ರಕ್ಷಿಸಿತು. ಯುದ್ಧದಲ್ಲಿ ಭಾಗವಹಿಸಿ ರಕ್ತಾಪರಾಧಿಯಾಗುವುದಕ್ಕೆ ಬದಲಾಗಿ ನಾನು ಸಾವನ್ನು ಅನುಭವಿಸುತ್ತೇನೆಂದು ಅವನಿಗೆ ನಾನು ವಿವರಿಸಿದೆ. ನನ್ನ ತಾಟಸ್ಥ್ಯದ ನಿಲುವು ಅವನನ್ನು ಕಷ್ಟದ ಸನ್ನಿವೇಶದಲ್ಲಿ ಹಾಕಿತಾದರೂ, ಕರೆಯಲ್ಪಟ್ಟವರ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದುಹಾಕಲು ಅವನು ಶಕ್ತನಾದನು.
ಯುದ್ಧದ ಕಡೆಯ ದಿವಸಗಳು
1945ರ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ, ಕಡಮೆ ಎತ್ತರದಲ್ಲಿ ಹಾರಾಡುತ್ತಿದ್ದ ಅಮೆರಿಕನ್ ವಿಮಾನಗಳು, ಯುದ್ಧವು ಅದರ ಅಂತ್ಯಕ್ಕೆ ಸಮೀಪದಲ್ಲಿದೆ ಎಂದು ಹೇಳಿದ ಹಸ್ತ ಪತ್ರಿಕೆಗಳನ್ನು ಕೆಳಕ್ಕೆ ಬೀಳಿಸುವ ಮೂಲಕ ನಮ್ಮನ್ನು ಉತ್ತೇಜಿಸಿದವು. ನನ್ನ ಜೀವವನ್ನು ಕಾಪಾಡಿದ್ದ ಅಧಿಕಾರಿ ಸ್ಟಂಫ್, ನನಗೆ ನಾಗರಿಕ ವಸ್ತ್ರಗಳನ್ನು ಕೊಟ್ಟನು ಮತ್ತು ಅವರ ಮನೆಯನ್ನು ಅವಿತುಕೊಳ್ಳುವ ಸ್ಥಳದೋಪಾದಿ ನೀಡಿದನು. ಶಿಬಿರವನ್ನು ಬಿಡುವಾಗ, ತಡೆಯಲಸಾಧ್ಯವಾದ ಅವ್ಯವಸ್ಥೆಗಳನ್ನು ನಾನು ಕಂಡೆ. ಉದಾಹರಣೆಗೆ, ತಮ್ಮ ಮುಖಗಳ ಮೇಲೆ ಕಣ್ಣೀರು ಹರಿಯುತ್ತಿರುವ, ಯುದ್ಧ ಉಡಿಗೆಯೊಂದಿಗೆ ಸಜ್ಜಾದ ಮಕ್ಕಳು ಅಮೆರಿಕದವರ ಮುಂದೆ ಪಲಾಯನ ಮಾಡುತ್ತಿದ್ದರು. ನನ್ನ ಹತ್ತಿರ ಏಕೆ ಬಂದೂಕು ಇಲ್ಲವೆಂದು ಕುತೂಹಲಪಡಸಾಧ್ಯವಿರುವ ಎಸ್ಎಸ್ ಅಧಿಕಾರಿಗಳ ಕೈಗೆ ನಾನು ಸಿಕ್ಕಿಬೀಳುವೆನೆಂದು ಭಯಪಡುತ್ತಾ, ಶಿಬಿರಕ್ಕೆ ಹಿಂದಿರುಗಲು ನಾನು ನಿರ್ಧರಿಸಿದೆ.
ಕೂಡಲೆ ಅಮೆರಿಕದ ಸೈನ್ಯಗಳಿಂದ ನಮ್ಮ ಶಿಬಿರವು ಸಂಪೂರ್ಣವಾಗಿ ಆವರಿಸಲ್ಪಟ್ಟಿತು. 1945, ಮಾರ್ಚ್ 24ರಂದು ಬಿಳಿಯ ಧ್ವಜಗಳನ್ನು ಹಾರಿಸುತ್ತಾ, ಶಿಬಿರವು ಶರಣಾಗತವಾಯಿತು. ಅಧಿಕಾರಿ ಸ್ಟಂಫ್ನ ಮೂಲಕ ಶಿರಚ್ಛೇದನದಿಂದ ತಡೆಹಿಡಿಯಲ್ಪಟ್ಟಿದ್ದ ಇತರ ಸಾಕ್ಷಿಗಳೂ ಶಿಬಿರದಲಿದ್ದರು ಎಂಬುದನ್ನು ತಿಳಿಯಲು ನಾನೆಷ್ಟು ಆಶ್ಚರ್ಯಚಕಿತನಾದೆ! ಎಂತಹ ಆನಂದಕರ ಸಂಧಿಸುವಿಕೆ ನಮಗಾಯಿತು! ಅಧಿಕಾರಿ ಸ್ಟಂಫ್ ಜೈಲಿಗೆ ಹಾಕಲ್ಪಟ್ಟಾಗ, ನಮ್ಮಲ್ಲಿ ಅನೇಕರು ಅಮೆರಿಕದ ಅಧಿಕಾರಿಗಳನ್ನು ಸಮೀಪಿಸಿದೆವು ಮತ್ತು ಅವನ ವಿಷಯವಾಗಿ ವೈಯಕ್ತಿಕವಾಗಿ ಹಾಗೂ ಪತ್ರದ ಮೂಲಕ ಸಾಕ್ಷಿ ನೀಡಿದೆವು. ಫಲಿತಾಂಶವಾಗಿ, ಮೂರು ದಿನಗಳ ಬಳಿಕ ಅವನು ಬಿಡುಗಡೆಗೊಳಿಸಲ್ಪಟ್ಟನು.
ನನಗೆ ಆಶ್ಚರ್ಯವಾಗುವಂತೆ, ಬಿಡುಗಡೆಯಾಗಿ ಹೋಗಲು ಅನುಮತಿಸಲ್ಪಟ್ಟ 5,000 ಸೆರೆವಾಸಿಗಳಲ್ಲಿ ನಾನು ಮೊದಲಿಗನಾಗಿದ್ದೆ. ಐದು ವರ್ಷಗಳ ಸೆರೆವಾಸದ ಬಳಿಕ, ನಾನು ಕನಸು ಕಾಣುತ್ತಿದ್ದೇನೋ ಎಂಬಂತೆ ನನಗನಿಸಿತು. ನನ್ನನ್ನು ಸಜೀವವಾಗಿ ಸಂರಕ್ಷಿಸಿರುವುದಕ್ಕಾಗಿ ನಾನು ಯೆಹೋವನಿಗೆ ಆನಂದಾಶ್ರುಗಳೊಂದಿಗೆ ಪ್ರಾರ್ಥನೆಯಲ್ಲಿ ಉಪಕಾರ ಸಲ್ಲಿಸಿದೆ. ಸುಮಾರು ಆರು ವಾರಗಳ ಬಳಿಕ, 1945, ಮೇ 7ರ ವರೆಗೆ ಜರ್ಮನಿಯು ಶರಣಾಗಲಿಲ್ಲ.
ನನ್ನ ಬಿಡುಗಡೆಯ ಅನಂತರ, ಆ ಕ್ಷೇತ್ರದಲ್ಲಿದ್ದ ಇತರ ಸಾಕ್ಷಿಗಳೊಂದಿಗೆ ನಾನು ಕೂಡಲೆ ಸಂಪರ್ಕವನ್ನು ಸ್ಥಾಪಿಸಿದೆ. ಒಂದು ಬೈಬಲ್ ಅಧ್ಯಯನದ ಗುಂಪು ವ್ಯವಸ್ಥಾಪಿಸಲ್ಪಟ್ಟಿತು ಮತ್ತು ಹಿಂಬಾಲಿಸಿದ ವಾರಗಳಲ್ಲಿ, ಶಿಬಿರದ ಸುತ್ತಲೂ ಇದ್ದ ಕ್ಷೇತ್ರದಲ್ಲಿರುವ ಜನರಿಗೆ ಸಾಕ್ಷಿ ನೀಡುತ್ತಾ ಅನೇಕ ತಾಸುಗಳನ್ನು ನಾನು ಕಳೆದೆ. ಅದೇ ಸಮಯದಲ್ಲಿ, ಒಬ್ಬ ಬಣ್ಣಗಾರನೋಪಾದಿ ಉದ್ಯೋಗವನ್ನೂ ಸಂಪಾದಿಸಿದೆ.
ಪುನಃ ಮನೆಗೆ ಹಿಂದಿರುಗಿದ್ದು
ಜುಲೈಯಲ್ಲಿ ಒಂದು ಮೋಟಾರ್ಸೈಕಲನ್ನು ಕೊಂಡುಕೊಳ್ಳಲು ನಾನು ಶಕ್ತನಾದೆ ಮತ್ತು ಬಳಿಕ ಮನೆಯ ಕಡೆಗೆ ನನ್ನ ದೀರ್ಘ ಪ್ರಯಾಣವು ಆರಂಭವಾಯಿತು. ಹೆದ್ದಾರಿಯುದ್ದಕ್ಕೂ ಅನೇಕ ಸೇತುವೆಗಳು ಸಿಡಿಮದ್ದಿನಿಂದ ನಾಶಗೊಳಿಸಲ್ಪಟ್ಟದ್ದರಿಂದ ಪ್ರಯಾಣಕ್ಕೆ ಅನೇಕ ದಿನಗಳು ತಗಲಿದವು. ಕೊನೆಯದಾಗಿ ಸೆಂಟ್ ಮಾರ್ಟೀನ್ನಲ್ಲಿರುವ ಮನೆಗೆ ಆಗಮಿಸುತ್ತಾ, ನಾನು ರಸ್ತೆಯ ಮೇಲೆ ವಾಹನ ನಡೆಸುತ್ತಿದ್ದಾಗ ಮರೀಯಳು ಗೋದಿಯನ್ನು ಕೊಯ್ದು ಸಂಗ್ರಹಿಸುತ್ತಿದುದನ್ನು ಕಂಡೆ. ಕೊನೆಗೂ ಅವಳು ನನ್ನನ್ನು ಗುರುತಿಸಿದಾಗ, ಅವಳು ಓಡುತ್ತಾ ಬಂದಳು. ಆ ಆನಂದದ ಪುನರ್ಮಿಲನವನ್ನು ನೀವು ಊಹಿಸಿಕೊಳ್ಳಬಲ್ಲಿರಿ. ತಾಯಿ ಸಹ ತಮ್ಮ ಕುಡುಗೋಲನ್ನು ಕೆಳಕ್ಕೆ ಎಸೆದು ಓಡುತ್ತಾ ಬಂದರು. ಈಗ, 49 ವರ್ಷಗಳ ಬಳಿಕ, ತಾಯಿಯವರು 96 ವರ್ಷ ಪ್ರಾಯದವರೂ ಕುರುಡರೂ ಆಗಿದ್ದಾರೆ. ಅವರ ಮನಸ್ಸು ಇನ್ನೂ ಎಚ್ಚರವಾಗಿದೆ ಮತ್ತು ಅವರು ಯೆಹೋವನ ಒಬ್ಬ ನಂಬಿಗಸ್ತ ಸಾಕ್ಷಿಯಾಗಿ ಉಳಿದಿದ್ದಾರೆ.
1945ರ ಅಕ್ಟೋಬರದಲ್ಲಿ ನಾನು ಮತ್ತು ಮರೀಯ ವಿವಾಹವಾದೆವು, ಮತ್ತು ಅಂದಿನ ವರುಷಗಳಿಂದ, ಒಟ್ಟಿಗೆ ಯೆಹೋವನ ಸೇವೆ ಮಾಡುವುದರಲ್ಲಿ ನಾವು ಆನಂದಿಸಿದ್ದೇವೆ. ನಾವು ಮೂವರು ಹೆಣ್ಣು ಮಕ್ಕಳು, ಒಬ್ಬ ಮಗ, ಮತ್ತು ಆರು ಮಂದಿ ಮೊಮ್ಮಕ್ಕಳಿಂದ—ಅವರೆಲ್ಲರೂ ಹುರುಪಿನಿಂದ ಯೆಹೋವನ ಸೇವೆ ಮಾಡುತ್ತಿದ್ದಾರೆ—ಆಶೀರ್ವದಿಸಲ್ಪಟ್ಟಿದ್ದೇವೆ. ಗತ ವರುಷಗಳಲ್ಲಿ ನೂರಾರು ಜನರು ಬೈಬಲ್ ಸತ್ಯಕ್ಕಾಗಿ ತಮ್ಮ ನಿಲುವನ್ನು ತೆಗೆದುಕೊಳ್ಳುವಂತೆ ಸಹಾಯಮಾಡಿದ ಸಂತೃಪ್ತಿಯು ನನಗಿದೆ.
ತಾಳಿಕೊಳ್ಳಲು ಧೈರ್ಯ
ಕೇವಲ ಒಬ್ಬ ಯೌವನಸ್ಥನೋಪಾದಿ, ಭಯವಿಲ್ಲದೆ ಮರಣವನ್ನು ಎದುರಿಸಲು ನಾನು ಹೇಗೆ ಶಕ್ತನಾಗಿದ್ದೆ ಎಂದು ಅನೇಕ ವೇಳೆ ನಾನು ಕೇಳಲ್ಪಟ್ಟಿದೇನ್ದೆ. ನಿಷ್ಠೆಯಿಂದ ಉಳಿಯಲು ನೀವು ನಿರ್ಧರಿಸುವುದಾದರೆ ಯೆಹೋವ ದೇವರು ತಾಳಿಕೊಳ್ಳಲು ಬಲವನ್ನು ಕೊಡುತ್ತಾನೆಂದು ಭರವಸದಿಂದಿರ್ರಿ. ಪ್ರಾರ್ಥನೆಯ ಮೂಲಕ ಒಬ್ಬನು ಆತನ ಮೇಲೆ ಸಂಪೂರ್ಣವಾಗಿ ಆತುಕೊಳ್ಳಲು ಬಹಳ ಬೇಗನೆ ಕಲಿಯುತ್ತಾನೆ. ಮತ್ತು ನನ್ನ ಸ್ವಂತ ತಂದೆ ಮತ್ತು ಸಹೋದರನನ್ನೊಳಗೊಂಡು ಇತರರು ಮರಣದ ವರೆಗೆ ನಂಬಿಗಸ್ತಿಕೆಯಿಂದ ತಾಳಿಕೊಂಡರೆಂಬುದನ್ನು ತಿಳಿದಿರುವುದು, ತದ್ರೀತಿಯಲ್ಲಿ ನಿಷ್ಠೆಯಿಂದ ಉಳಿಯುವಂತೆ ನನಗೆ ಸಹಾಯ ಮಾಡಿತು.
ಯೆಹೋವನ ಸಾಕ್ಷಿಗಳು ಯುದ್ಧದಲ್ಲಿ ಪಕ್ಷ ವಹಿಸದಿರುವುದು ಕೇವಲ ಯುರೋಪಿನಲ್ಲಿ ಮಾತ್ರವಲ್ಲ. 1946ರಲ್ಲಿ ನ್ಯುರೆಂಬರ್ಗ್ನ ವಿಚಾರಣೆಗಳ ಸಮಯದಲ್ಲಿ, ಸೆರೆಶಿಬಿರಗಳಲ್ಲಿ ಯೆಹೋವನ ಸಾಕ್ಷಿಗಳ ಹಿಂಸೆಯ ಕುರಿತು ಹಿಟ್ಲರನ ಉಚ್ಚ ದರ್ಜೆಯ ಅಧಿಕಾರಿಗಳಲ್ಲಿ ಒಬ್ಬನು ಪ್ರಶ್ನಿಸಲ್ಪಟ್ಟಿದ್ದನು. ಅವನು ತನ್ನ ಜೇಬಿನಿಂದ ವಾರ್ತೆಯ ಕತ್ತರಿಸಿ ತೆಗೆದ ಒಂದು ಭಾಗವನ್ನು ಹೊರಕ್ಕೆಳೆದನು, ಅದು IIನೆಯ ಲೋಕ ಯುದ್ಧದ ಸಮಯದಲ್ಲಿ ತಮ್ಮ ತಾಟಸ್ಥ್ಯದ ಕಾರಣದಿಂದ, ಅಮೆರಿಕದ ಸಾವಿರಾರು ಮಂದಿ ಯೆಹೋವನ ಸಾಕ್ಷಿಗಳು ಅಮೆರಿಕದ ಸೆರೆಮನೆಗಳಲ್ಲಿದ್ದರೆಂದು ವರದಿಸಿತ್ತು.
ವಾಸ್ತವವಾಗಿ, ತನ್ನ ಜೀವಿತದ ಕಡೆಯ ಗಳಿಗೆಯ ತನಕ ದೇವರಿಗೆ ಯಾರು ಸಮಗ್ರತೆಯನ್ನು ಕಾಪಾಡಿಕೊಂಡನೋ ಆ ಯೇಸು ಕ್ರಿಸ್ತನ ಉದಾಹರಣೆಯನ್ನು ನಿಜ ಕ್ರೈಸ್ತರು ಧೈರ್ಯದಿಂದ ಅನುಸರಿಸುತ್ತಾರೆ. 1930ಗಳಲ್ಲಿ, ದೇವರಿಗಾಗಿ ಮತ್ತು ತಮ್ಮ ಜೊತೆಮಾನವರಿಗಾಗಿ ಪ್ರೀತಿಯಿಂದ, ಹಿಟ್ಲರನ ಯುದ್ಧವನ್ನು ಬೆಂಬಲಿಸಲು ನಿರಾಕರಿಸಿದ ಮತ್ತು ಆ ಕಾರಣಕ್ಕಾಗಿ ಮರಣಕ್ಕೆ ಒಪ್ಪಿಸಲ್ಪಟ್ಟ, ಸೆಂಟ್ ಮಾರ್ಟೀನ್ನಲ್ಲಿರುವ ನಮ್ಮ ಸಣ್ಣ ಸಭೆಯ 14 ಮಂದಿ ಸದಸ್ಯರ ಕುರಿತು, ಇಂದಿನ ದಿನದ ವರೆಗೂ ನಾನು ಅನೇಕವೇಳೆ ಆಲೋಚಿಸುತ್ತೇನೆ. ದೇವರ ನೂತನ ಲೋಕದಲ್ಲಿ ಜೀವನವನ್ನು ಸದಾಕಾಲಕ್ಕೂ ಅನುಭವಿಸಲು ಅವರು ಹಿಂದಕ್ಕೆ ತರಲ್ಪಡುವಾಗ ಎಂತಹ ಒಂದು ಮಹಾ ಪುನರ್ಮಿಲನವು ಅದಾಗಲಿರುವುದು!
[ಪುಟ 9 ರಲ್ಲಿರುವ ಚಿತ್ರ]
ನನ್ನ ತಂದೆ
[ಪುಟ 8,9 ರಲ್ಲಿರುವ ಚಿತ್ರ]
ಕೆಳಗೆ ಮತ್ತು ಎಡಕ್ಕೆ: ಜರ್ಮನ್ ರೈಕ್ಗೆ ಬೆಂಬಲವಾಗಿ ಕಾರ್ಡಿನಲ್ ಇನಟ್ಸರ್ ಮತ ನೀಡುತ್ತಿರುವುದು
ಬಲಗಡೆ: ‘ಜರ್ಮನ್ ರೈಕ್ಗೆ ಮತ ನೀಡುವುದು ತಮ್ಮ ರಾಷ್ಟ್ರೀಯ ಕರ್ತವ್ಯ’ವಾಗಿದೆ ಎಂದು ಆರು ಮಂದಿ ಬಿಷಪರು ಘೋಷಿಸುವ “ಗಂಭೀರವಾದ ಘೋಷಣೆ.”
[ಕೃಪೆ]
UPI/Bettmann
[ಪುಟ 10 ರಲ್ಲಿರುವ ಚಿತ್ರ]
ಮರೀಯ ಮತ್ತು ನಾನು 1939ರಲ್ಲಿ ವಿವಾಹ ನಿಶ್ಚಯ ಮಾಡಿಕೊಂಡಿದ್ದೆವು
[ಪುಟ 13 ರಲ್ಲಿರುವ ಚಿತ್ರ]
ನಮ್ಮ ಕುಟುಂಬ. ಎಡದಿಂದ ಬಲಕ್ಕೆ: ಗ್ರೇಗೊರ್ (ಶಿರಚ್ಛೇದನವಾದವನು), ಆನಿ, ಫ್ರಾನ್ಟ್ಸ್, ವಿಲೀಬಾಲ್ಟ್, ಈಡ, ಗ್ರೇಗೊರ್ (ತಂದೆ, ಶಿರಚ್ಛೇದನವಾದವರು), ಬಾರ್ಬರ (ತಾಯಿ), ಮತ್ತು ಕ್ರಿಸ್ಟ್ಯಾನ್
[ಪುಟ 15 ರಲ್ಲಿರುವ ಚಿತ್ರ]
ಇಂದು ಮರೀಯಳೊಂದಿಗೆ