ಪ್ರವೀಣ ಯಂತ್ರಶಿಲ್ಪಿಗಳು
ದಕ್ಷಿಣ ಆಫ್ರಿಕದಲ್ಲಿನ ಎಚ್ಚರ! ಸುದ್ದಿಗಾರರಿಂದ
ಈ ಪುಟದಲ್ಲಿ ದೃಷ್ಟಾಂತಿಸಲಾದಂತಹ ಸ್ವಾಭಾವಿಕ ಕಟ್ಟಡಗಳನ್ನು ನೀವೆಂದಾದರೂ ನೋಡಿದ್ದೀರೊ? ಆಫ್ರಿಕದ ಹುಲ್ಲುಗಾಡಿನಲ್ಲಿ ಗೆದ್ದಲು ದಿಬ್ಬಗಳು ಸಾಮಾನ್ಯ ದೃಶ್ಯವಾಗಿವೆ. ಕೆಲವು ಅಗಲಕಿರಿದಾದ ಹೊಗೆ ಕೊಳವೆಗಳಂತೆ ರೂಪಿಸಲ್ಪಟ್ಟಿದ್ದು, ಕೆಲವೊಮ್ಮೆ 6 ಮೀಟರ್‌ಗಳಿಗೂ ಎತ್ತರವಿರುತ್ತವೆ. ಇತರ ದಿಬ್ಬಗಳು ಸಿಂಹಗಳಂತಹ ಮಾಂಸಾಹಾರಿಗಳಿಗೆ ನೆಚ್ಚಿನ ವೀಕ್ಷಣ ಸ್ಥಾನವನ್ನು ಒದಗಿಸುವ ಮಣ್ಣು ದಿಬ್ಬಗಳಂತಿವೆ.
ಪ್ರತಿಯೊಂದು ದಿಬ್ಬದೊಳಗೆ ಹಲವಾರು ಲಕ್ಷ ಸಣ್ಣ ಗೆದ್ದಲುಗಳು ವಾಸಿಸಬಹುದಾದ ಬಹುಸಂಖ್ಯಾತ ಓಣಿಗಳು ಮತ್ತು ಕೋಣೆಗಳು ಇವೆ. ಕೆಲವು ಗೆದ್ದಲುಗಳು ತಮ್ಮ ಸ್ವಂತ ಅಣಬೆಯ ತೋಟಗಳನ್ನು ನೋಡಿಕೊಳ್ಳುತ್ತವೆ ಮತ್ತು ಅವುಗಳನ್ನು ಅನಾವೃಷ್ಟಿಯ ವರುಷಗಳಲ್ಲೂ ನೀರು ಸಂಪನ್ನವಾಗಿಡಲು ಶಕವ್ತಾಗಿವೆ. ಅದು ಹೇಗೆ ಸಾಧ್ಯ? ಇಸವಿ 1930ಗಳಲ್ಲಿ, ದಕ್ಷಿಣ ಆಫ್ರಿಕದ ಪ್ರದೇಶಗಳು ತೀವ್ರ ಅನಾವೃಷ್ಟಿಯಿಂದ ಹಾಳುಗೆಡವಲ್ಪಟ್ಟಾಗ, ಪ್ರಕೃತಿ ಶಾಸ್ತ್ರಜ್ಞ, ಡಾ. ಯೂಜೀನ್ ಮಾರೇ, ಒಂದು ಸುರಂಗದೊಳಗೆ ಒಂದು ಇಳಿಯುವ ಮತ್ತೊಂದು ಹತ್ತುವ ಗೆದ್ದಲುಗಳ ಎರಡು ಉದ್ದ ಸಾಲುಗಳನ್ನು ಕಂಡುಹಿಡಿದನು. ಆ ಸಣ್ಣ ಜೀವಿಗಳು 30 ಮೀಟರ್‌ಗಳಷ್ಟು ಆಳ ಕೊರೆದು ದಾರಿ ಮಾಡಿದ್ದವು! ಅವುಗಳು ಒಂದು ನೈಸರ್ಗಿಕ ಬಾವಿಯನ್ನು ತಲಪಿದ್ದವು. ಹೀಗೆ ಅವುಗಳು ತಮ್ಮ ಅಣಬೆಯ ತೋಟಗಳನ್ನು ಅನಾವೃಷ್ಟಿಯಲ್ಲಿ ತೇವವಾಗಿಡುವಂತಹ ನಿರ್ವಹಣೆಯ ಕಾರಣವನ್ನು ಮಾರೇ ಕಂಡುಹಿಡಿದನು.
ಕಾಲಹಾರಿ ಎಂಬ ತನ್ನ ಪುಸ್ತಕದಲ್ಲಿ, ಮೈಕಲ್ ಮೇನ್ ವಿವರಿಸುವುದು, ಒಂದು ಪ್ರತಿನಿಧಿರೂಪದ ಗೆದ್ದಲಿನ ದಿಬ್ಬವು, “ಲೋಕದಲ್ಲಿ ಯಾವುದೇ ಪ್ರಾಣಿಯ ಮೂಲಕ ಕಟ್ಟಲಾದ ಗೂಡಿಗಿಂತ ಅತಿ ಉತ್ಕರ್ಷವಾದುದಾಗಿದೆಯೆಂದು ನಂಬಲಾಗಿದೆ. . . . ಅಣಬೆಗೆ ಮತ್ತು ಗೆದ್ದಲಿಗೆ ಸರಿಬೀಳುವ 100 ಸೇಕಡ ತೇವಾಂಶವನ್ನು ಮತ್ತು ಪರಿವೇಷ್ಟಕ ಉಷ್ಣಾಂಶವನ್ನು 29ರಿಂದ 31 ಡಿಗ್ರಿ ಸೆಂಟಿಗ್ರೇಡ್‌ನ ನಡುವೆ ಗಳಿಸಲು ಮತ್ತು ಕಾಪಾಡಲು ಎಲ್ಲವು ಪ್ರಯತ್ನಿಸುತ್ತವೆ. . . . ಪ್ರತಿಯೊಂದು ಗೂಡು, ಪರಿಣಾಮಕಾರಿಯಾಗಿ, ಒಂದು ಪರಿಪೂರ್ಣ ಹವಾನಿಯಂತ್ರಿತ ಏಕಾಂಶವಾಗಿದೆ.”
ಈಗ ಈ ಗೂಡುಗಳು ಹೇಗೆ ಕಟ್ಟಲ್ಪಡುತ್ತವೆ ಎಂಬುದನ್ನು ಗಮನಿಸಿರಿ. ಗೆದ್ದಲುಗಳು ಮರಳಿನ ಒಂದು ಸಣ್ಣ ಹರಳಿಗೆ ಮೆರಗು ಕೊಡುತ್ತವೆ ಮತ್ತು ಅನಂತರ ಇತರವುಗಳ ಮೇಲೆ ಕೂಡಿಸುತ್ತವೆ. ಒಂದು ದಿಬ್ಬವನ್ನು ಕಟ್ಟಲು ಎಷ್ಟೊಂದು ಲಕ್ಷಗಟ್ಟಲೆ ಮರಳಿನ ಹರಳುಗಳು ಬಳಸಲ್ಪಟ್ಟಿವೆ ಎಂಬುದನ್ನು ಊಹಿಸಿರಿ! “ಭೂಮಿಯ ಮೇಲೆ ಮನುಷ್ಯನು ಕಟ್ಟಿರುವ ಬಲಿಷ್ಠವಾದ ಕಟ್ಟಡಗಳು; ಈಜಿಪ್ಟಿನ ಪಿರಮಿಡ್‌ಗಳು, ಲಂಡನ್ನಿನ ಭೂಗತ ರೈಲುಮಾರ್ಗ ವ್ಯವಸ್ಥೆ, ನ್ಯೂ ಯಾರ್ಕಿನ ಗಗನಚುಂಬಿ ಭವನಗಳನ್ನು . . . ಗೆದ್ದಲಿನ ಕೆಲಸಗಳಿಗೆ ಹೋಲಿಸುವುದು, . . . ಸಣ್ಣ ಮಣ್ಣುದಿಬ್ಬಗಳನ್ನು ಬೆಟ್ಟಗಳೊಂದಿಗೆ ಹೋಲಿಸುವಂತಿದೆ,” ಎಂದು ಬಿಳಿ ಇರುವೆಯ ಆತ್ಮ (ದ ಸೋಲ್ ಆಫ್ ದ ವ್ಯೈಟ್ ಆ್ಯನ್ಟ್) ಎಂಬ ತನ್ನ ಪುಸ್ತಕದಲ್ಲಿ ಮಾರೇ ಬರೆದನು. ಅವನು ಮುಂದುವರಿಸುವುದು, “ಗಾತ್ರವನ್ನು ಪರಿಗಣಿಸುವಾಗ, ಮನುಷ್ಯನ ಕೆಲಸವು ಗೆದ್ದಲಿನ ನಾಲ್ವತ್ತು ಅಡಿ ಎತ್ತರದ ಒಂದು ಬುರುಜಿಗೆ ಸಮಾನವಾಗಬೇಕಾದರೆ, ಅವನು ಮ್ಯಾಟರ್‌ಹಾರ್ನ್‌ನಷ್ಟು [14,692 ಅಡಿ ಎತ್ತರದ ಸ್ವಿಟ್ಸರ್‌ಲೆಂಡ್‌ನ ಪರ್ವತಶಿಖರ] ಎತ್ತರದ ಒಂದು ಕಟ್ಟಡವನ್ನು ನಿಲ್ಲಿಸಬೇಕಾಗುವುದು.”
ಆದರೆ ಗೆದ್ದಲುಗಳು ಮನುಷ್ಯನಿಗೆ ಯಾವ ಪ್ರಯೋಜನಕ್ಕಾಗಿ ಇವೆ? ಒಂದು ವಿಷಯ, ಗೆದ್ದಲುಗಳು ನಿರ್ಜೀವ ಸಸ್ಯಗಳನ್ನು ಮೇಯುತ್ತವೆ ಮತ್ತು ಹೀಗೆ ಹೆಚ್ಚಿನ ಅಪ್ರಯೋಜಕ ವಸ್ತುವನ್ನು ತೊಲಗಿಸುತ್ತದೆ. “ಒಣ ಪದಾರ್ಥವನ್ನು ನೆಲದ ಕೆಳಗೆ ಎಳೆಯುವುದರ ಮೂಲಕ, ಅವುಗಳು ಬೆಂಕಿಯ ಅಪಾಯವನ್ನು ತಡೆಯುವುದು ಮಾತ್ರವಲ್ಲ, ಕೆಳಗಿರುವ ಮಣ್ಣನ್ನೂ ಫಲವತ್ತಾಗಿ ಮಾಡುತ್ತವೆ,” ಎಂದು ಕ್ರೂಗರ್ ರಾಷ್ಟ್ರೀಯ ಉದ್ಯಾನದಲ್ಲಿನ ಒಂದು ಗುರುತು ಹಲಗೆಯು ನಮೂದಿಸುತ್ತದೆ.
ಆ ವಿನೀತ ಗೆದ್ದಲುಗಳು ಪ್ರವೀಣ ಯಂತ್ರಶಿಲ್ಪಿಗಳೆಂದು ಕರೆಯಲ್ಪಡಲು ಅರ್ಹವಾಗುತ್ತವೆಂದು ಪ್ರಾಯಶಃ ನೀವು ಕೂಡ ಒಪ್ಪುವಿರಿ. (g93 11/08)