ಅಪೂರ್ವವಾಗಿರುವ ಮ್ಯಾಟರ್ಹಾರ್ನ್
ಸ್ವಿಟ್ಸರ್ಲೆಂಡ್ನಲ್ಲಿನ ಎಚ್ಚರ! ಸುದ್ದಿಗಾರರಿಂದ
“ಇಡೀ ಭೂಮಿಯಲ್ಲಿ ಒಂದೇ ಒದು ಮ್ಯಾಟರ್ಹಾರ್ನ್ ಇದೆ; ಅಂತಹ ಸಮತೂಕದ ಪ್ರಮಾಣಗಳುಳ್ಳ ಒಂದೇ ಒಂದು ಪರ್ವತವು ಅದಾಗಿದೆ. ಒಂದು ಅದ್ಭುತಕರವಾದ ದೃಶ್ಯ!” ಹೀಗೆಂದು ಇಟಲಿಯ ಆಲ್ಪ್ಸ್ ಪರ್ವತಾರೋಹಿಯಾದ ಗ್ವೀಡೊ ರೇ ಹೇಳಿದರು.
ವಾಸ್ತವವಾಗಿ, ಮ್ಯಾಟರ್ಹಾರ್ನ್ ಒಂದು ಅತ್ಯಂತ ಅಸಾಮಾನ್ಯವಾದ ಶಿಖರವಾಗಿದ್ದು, ಪ್ರಪಂಚದಲ್ಲಿನ ಅತ್ಯಂತ ಪ್ರಸಿದ್ಧ ಪರ್ವತಗಳಲ್ಲಿ ಒಂದಾಗಿದೆ. ಈ ಪುಟಗಳಲ್ಲಿರುವ ಛಾಯಾಚಿತ್ರವು, ಬಹುಶಃ ನೀವು ನೋಡಿರುವ ಈ ಆಕರ್ಷಕ ಪರ್ವತದ ಮೊದಲ ಚಿತ್ರವಾಗಿರುವುದಿಲ್ಲ.
ಪಿರಮಿಡ್ ಆಕೃತಿಯ ಮ್ಯಾಟರ್ಹಾರ್ನ್, ಇಟಲಿ ಮತ್ತು ಸ್ವಿಟ್ಸರ್ಲೆಂಡ್ನ ಗಡಿಯಲ್ಲಿ—ಸ್ವಿಟ್ಸರ್ಲೆಂಡ್ನ ಸರ್ಮ್ಯಾಟ್ ಹಳ್ಳಿಯಿಂದ ಹತ್ತು ಕಿಲೊಮೀಟರ್ಗಳಷ್ಟು ನೈರುತ್ಯಕ್ಕಿದ್ದು, ಅದರ ಶಿಖರವು ಆ ಪಟ್ಟಣದ ಹೆಸರನ್ನು ಪಡೆದಿದೆ—ನೆಲಸಿದೆ. ಅದು 4,478 ಮೀಟರ್ಗಳಷ್ಟು ಎತ್ತರವಾಗಿದೆ ಮತ್ತು 100 ಮೀಟರ್ಗಳಷ್ಟು ಅಂತರದಲ್ಲಿ ಎರಡು ಶಿಖರಗಳನ್ನು ಹೊಂದಿದೆ.
ಅದು ಸೆಂಟ್ರಲ್ ಆಲ್ಪ್ಸ್ನ ಒಂದು ಭಾಗವಾಗಿರುವುದಾದರೂ, ಅತಿ ಸಮೀಪದಲ್ಲಿ ಪರ್ವತಗಳು ಇಲ್ಲದಿರುವುದರಿಂದ, ಮ್ಯಾಟರ್ಹಾರ್ನ್ ಒಂಟಿಯಾಗಿದೆ. ಇದು ಎಲ್ಲಾ ದಿಕ್ಕುಗಳಿಂದ ಪರ್ವತದ ಭವ್ಯವಾದ ನೋಟಕ್ಕೆ ಕಾರಣವಾಗಿದ್ದು, ಇದನ್ನು ಬಹಳ ಛಾಯಾಚಿತ್ರಜನಕವನ್ನಾಗಿ ಮಾಡುತ್ತದೆ.
ಕೆಲವರು ಮ್ಯಾಟರ್ಹಾರ್ನ್ ಅನ್ನು, ಸೂಕ್ತವಾಗಿಯೇ ಒಂದು ನಿಲುಗಂಬದ ಆಕಾರವನ್ನು ಹೊಂದಿರುವುದರೋಪಾದಿ ವರ್ಣಿಸಿದ್ದಾರೆ. ಅದು ತನ್ನ ನಾಲ್ಕು ಬದಿಗಳನ್ನು ನಾಲ್ಕು ಪ್ರಮುಖ ದಿಕ್ಕುಗಳ ಕಡೆಗೆ ಒಡ್ಡುತ್ತದೆ; ಪ್ರತಿಯೊಂದು ಬದಿಯೂ ಒಂದು ಶಿಖರಾಗ್ರದಿಂದ ಸ್ಫುಟವಾಗಿ ಬೇರ್ಪಡಿಸಲ್ಪಟ್ಟಿದೆ.
ತನ್ನ ಎತ್ತರದ ಹೊರತಾಗಿಯೂ, ಮ್ಯಾಟರ್ಹಾರ್ನ್ ಯಾವಾಗಲೂ ಹಿಮದಿಂದ ಆವರಿಸಲ್ಪಟ್ಟಿರುವುದಿಲ್ಲ. ವಸಂತಕಾಲದ ಅಂತ್ಯಭಾಗದಲ್ಲಿ ಮೇಲ್ಭಾಗದಲ್ಲಿರುವ ಅದರ ಕಡಿದಾದ ಶಿಲಾಮಯ ಗೋಡೆಗಳು, ಸೂರ್ಯನ ಕಾವಿಗೆ ತಮ್ಮ ಹಿಮದ ಮತ್ತು ಮಂಜುಗಡ್ಡೆಯ ಹೊದಿಕೆಯನ್ನು ತೆಗೆದುಬಿಡುತ್ತವೆ. ಸ್ವಲ್ಪ ಕೆಳಗೆ, ಪೂರ್ವ ಮತ್ತು ವಾಯವ್ಯ ದಿಕ್ಕಿನ ಕಡೆಗಿನ ನೀರ್ಗಲ್ಲ ನದಿಗಳು, ವರ್ಷವಿಡೀ ಪರ್ವತದ ನಡುಭಾಗದ ಸುತ್ತಲೂ ಬಿಳಿಯ ನಡುಪಟ್ಟಿಯೋಪಾದಿ ಆವರಿಸಿರುತ್ತವೆ.
ಈ ಅಸಾಮಾನ್ಯವಾದ ಪರ್ವತವು ಹೇಗೆ ಉಂಟಾಯಿತೆಂದು ಅನೇಕ ಅಭಿಮಾನಿಗಳು ಕುತೂಹಲಪಟ್ಟಿದ್ದಾರೆ. ಇದು ಯಾವುದರಿಂದ ಶಿಲ್ಪಾಲಂಕಾರ ಮಾಡಲ್ಪಟ್ಟಿತೊ, ಆ ವಸ್ತುಗಳ ಉಳಿಕೆಯ ಭಾಗದೋಪಾದಿ ಇರುವ ಕಲ್ಲಿನ ಚೂರುಗಳನ್ನು ಅದರ ಬುಡದ ಬಳಿಯಲ್ಲಿ ಎಲ್ಲಿಯೂ ನೋಡಸಾಧ್ಯವಿಲ್ಲ. ಅಂತಹ ಯಾವುದೇ ಕಲ್ಲಿನ ಚೂರುಗಳು, ಅದರ ಅಸ್ತಿತ್ವದ ಅಗಣಿತವಾದ ಸಾವಿರಗಟ್ಟಲೆ ವರ್ಷಗಳ ಸಮಯದಲ್ಲಿ ಶುಭ್ರಮಾಡಲ್ಪಟ್ಟಿರಬೇಕು. ನಿಸರ್ಗದ ಎಂತಹ ಪ್ರಬಲ ಶಕ್ತಿಗಳು ಈ ಸುಂದರ ದೃಶ್ಯಕ್ಕೆ ನೆರವನ್ನಿತ್ತಿರಬೇಕು!
ಆರಂಭದ ವಸಾಹತುಗಳು
ಮ್ಯಾಟರ್ಹಾರ್ನ್ನ ಬುಡದ ತನಕ ಮುಂದುವರಿಯುವ ಆಲ್ಪೈನ್ ಪರ್ವತದ ಕಣಿವೆಯು, ರೋಮನ್ ಚಕ್ರಾಧಿಪತ್ಯದ ಸಮಯದಲ್ಲಾಗಲೆ ನಿವಾಸಿಸಲ್ಪಟ್ಟಿತ್ತು. ಸಾ.ಶ.ಪೂ. 100ರ ವರ್ಷದಲ್ಲಿ, ರೋಮನ್ ಜನರಲ್ ಮರೀಯಸನು ಟೇಓಡೂಲ್, ಮ್ಯಾಟರ್ಹಾರ್ನ್ನ ಪೂರ್ವಭಾಗದಲ್ಲಿರುವ ಕಣಿವೆಯನ್ನು, 3,322 ಮೀಟರ್ಗಳಷ್ಟು ಎತ್ತರದಲ್ಲಿ ದಾಟಿದನೆಂದು ಇತಿಹಾಸವು ವರದಿಸುತ್ತದೆ. ಮಧ್ಯ ಯುಗಗಳ ಸಮಯದಲ್ಲಿ, ದಕ್ಷಿಣದಿಂದ ಉತ್ತರಕ್ಕೆ ಸರಕುಗಳನ್ನು ರವಾನಿಸಲಿಕ್ಕಾಗಿಯೂ, ಪರ್ವತದ ಈ ಕಾಲುದಾರಿಯು ಉಪಯೋಗಿಸಲ್ಪಟ್ಟಿತು.
ಆ ಸಮಯಗಳಲ್ಲಿ ಆ ನಿವಾಸಿಗಳು ಮ್ಯಾಟರ್ಹಾರ್ನ್ ಅನ್ನು ಬಹಳ ಪೂಜ್ಯಭಾವದಿಂದ, ಮೂಢಾಚರಣೆಯ ಭಯದಿಂದಲೂ ನೋಡಿದರು. ಪರ್ವತದಲ್ಲಿ ಸ್ವತಃ ಪಿಶಾಚನು ನೆಲೆಸಿರುತ್ತಾನೆಂದು ಅವರು ಅಭಿಪ್ರಯಿಸಿದ್ದರಿಂದ, ಅವರು ಎಂದಿಗೂ ಪರ್ವತವನ್ನು ಹತ್ತಲು ಪ್ರಯತ್ನಿಸಲಿಲ್ಲ! ಮನೆಗಳಷ್ಟು ದೊಡ್ಡ ಗಾತ್ರದ ಮಂಜುಗಡ್ಡೆ ಮತ್ತು ಹಿಮಪ್ರಪಾತ ಮತ್ತು ಬಂಡೆಗಳನ್ನು ಇನ್ನಾರು ಎಸೆಯಸಾಧ್ಯವಿದೆ?
ನೈಸರ್ಗಿಕ ವಿಜ್ಞಾನದಲ್ಲಿ ಬೆಳೆಯುತ್ತಿರುವ ಆಸಕ್ತಿ
ಆ ನಮ್ರ ಜನರು ಯಾವುದನ್ನು ಭಯದ ಕಾರಣದಿಂದ ದೂರೀಕರಿಸಿದ್ದರೋ ಅದು, ತದನಂತರ ಇಂಗ್ಲೆಂಡಿನ ಗಣ್ಯ ಸಮಾಜದಲ್ಲಿ ಅತಿ ಫ್ಯಾಷನ್ ಆಗಿ ಪರಿಣಮಿಸಿತು. ಭೂವಿಜ್ಞಾನ, ಪ್ರದೇಶ ವಿವರಣೆ, ಮತ್ತು ಸಸ್ಯವಿಜ್ಞಾನದಂತಹ ಜ್ಞಾನದ ಕ್ಷೇತ್ರಗಳಲ್ಲಿ ಅಧ್ಯಯನ ನಡೆಸಲಿಕ್ಕಾಗಿ, ಪರಿಶೋಧಕರು ಪರ್ವತಗಳನ್ನು ಹತ್ತುವಂತೆ ಮಾಡುತ್ತಾ, ವೈಜ್ಞಾನಿಕ ಆಸಕ್ತಿಯು ಬೆಳೆಯಲಾರಂಭಿಸಿತು.
ವಾಸ್ತವವಾಗಿ, 1857ರಲ್ಲಿ ಲಂಡನ್ನಲ್ಲಿ ಆಲ್ಪೈನ್ ಕ್ಲಬ್ ಸ್ಥಾಪಿಸಲ್ಪಟ್ಟಿತು, ಮತ್ತು ಆಲ್ಪ್ಸ್ನ ಆರೋಹಣದಲ್ಲಿ ಭಾಗವಹಿಸಲಿಕ್ಕಾಗಿ, ಅನೇಕ ಶ್ರೀಮಂತ ಇಂಗ್ಲಿಷಿನವರು ಫ್ರಾನ್ಸ್, ಇಟಲಿ, ಅಥವಾ ಸ್ವಿಟ್ಸರ್ಲೆಂಡ್ಗೆ ಪ್ರಯಾಣಿಸಿದರು. ಮೌಂಟ್ ಬ್ಲಾನ್ ಅನ್ನು ಒಳಗೊಂಡು, ಸಾಹಸಿಗಳು ಒಂದು ಶಿಖರದ ನಂತರ ಇನ್ನೊಂದು ಶಿಖರವನ್ನು ಹತ್ತಿದರು. 4,807 ಮೀಟರ್ಗಳಷ್ಟು ಎತ್ತರವಾಗಿರುವ ಈ ಪರ್ವತವು ಯೂರೋಪಿನಲ್ಲಿರುವ ಅತ್ಯಂತ ಎತ್ತರವಾದ ಪರ್ವತವಾಗಿರುವುದಾದರೂ, ಇದು ಪರ್ವತಾರೋಹಿಗಳಿಗೆ ಮ್ಯಾಟರ್ಹಾರ್ನ್ಗಿಂತಲೂ ಕಡಿಮೆ ತೊಂದರೆಯನ್ನು ಕೊಡುತ್ತದೆ.
ಈ ಎಲ್ಲಾ ಪ್ರಯತ್ನಗಳು ಸಂಪೂರ್ಣವಾಗಿ ನೈಸರ್ಗಿಕ ವಿಜ್ಞಾನದ ಹೆಸರಿನಲ್ಲಿ ಮಾಡಲ್ಪಟ್ಟಿರಲಿಲ್ಲ. ಮಹತ್ವಾಕಾಂಕ್ಷೆಗಳು ಒಳಸೇರಿಕೊಂಡವು. ಪ್ರಥಮಸ್ಥಾನಕ್ಕಾಗಿ, ಅತ್ಯಂತ ಧೈರ್ಯಶಾಲಿಯಾಗಿರುವುದಕ್ಕಾಗಿ, ಅತ್ಯಂತ ದುರ್ಭರವಾಗಿರುವುದಕ್ಕಾಗಿರುವ ಪ್ರಖ್ಯಾತಿಯು ಒಂದು ಪ್ರಮುಖ ಅಂಶವಾಗಿತ್ತು. ಆ ಸಮಯದಲ್ಲಿ ಇಂಗ್ಲೆಂಡ್ನಲ್ಲಿ, “ಕ್ರೀಡೆ” ಎಂಬ ಶಬ್ದವು ಪ್ರಮುಖವಾಗಿ ಪರ್ವತಾರೋಹಣ ಮಾಡುವುದನ್ನು ಅರ್ಥೈಸಿತು.
1865ರ ಬೇಸಗೆಕಾಲವು, ಪರ್ವತವನ್ನು ಹತ್ತುವುದರಲ್ಲಿನ—ವಿಶೇಷವಾಗಿ ಮ್ಯಾಟರ್ಹಾರ್ನ್ನ ವಿಷಯದಲ್ಲಿ—ಅತ್ಯಂತ ಕಾರ್ಯಮಗ್ನ ಸಮಯಗಳಲ್ಲಿ ಒಂದಾಗಿತ್ತು. ಆರೋಹಿಸದೆ ಉಳಿದಿದ್ದ ಕೊನೆಯ ಶಿಖರಗಳಲ್ಲಿ ಈ ಚಿತ್ತಾಕರ್ಷಕ ಪಿರಮಿಡ್ ಒಂದಾಗಿತ್ತು. ಇದು ಹತ್ತಲುಸಾಧ್ಯವಿಲ್ಲದ್ದಾಗಿ ಪರಿಗಣಿಸಲ್ಪಟ್ಟಿತು ಮತ್ತು ಸ್ಥಳಿಕ ಮಾರ್ಗದರ್ಶಿಗಳು ಪ್ರಯತ್ನಿಸಲು ಸಹ ನಿರಾಕರಿಸಿದರು. ಅವರ ಮನೋಭಾವವು ಹೀಗಿತ್ತು, ‘ತಾವು ಇತರ ಯಾವುದೇ ಶಿಖರವನ್ನು ಹತ್ತುವೆವು—ಆದರೆ ಹಾರ್ನ್ ಪರ್ವತವನ್ನಲ್ಲ’.
ಹಾಗಿದ್ದರೂ, ಮ್ಯಾಟರ್ಹಾರ್ನ್ನ ಆರೋಹಣವು ಅನಿವಾರ್ಯವಾಗಿತ್ತು. 1860ಗಳ ಆರಂಭದಲ್ಲಿ ಅನೇಕ ಉನ್ನತ ಪರ್ವತಗಳು ಆರೋಹಿಸಲ್ಪಟ್ಟವು. ಆರೋಹಣ ಮಾಡುವವರು ಅನುಭವದಿಂದ ಕಲಿತುಕೊಂಡರು ಮತ್ತು ಹೊಸ ತಾಂತ್ರಿಕತೆಗಳನ್ನು ವಿಕಸಿಸಿದರು. 20ರ ಪ್ರಾಯದಲ್ಲಿ ಇಂಗ್ಲೆಂಡ್ನ ಎಡ್ವರ್ಡ್ ವಿಂಪರ್, ಉನ್ನತ ಪರ್ವತಗಳ ಕುರಿತಾಗಿ ಒಂದು ಪುಸ್ತಕವನ್ನು ಚಿತ್ರಗಳಿಂದ ವಿಶದೀಕರಿಸಲಿಕ್ಕಾಗಿ, ಉನ್ನತ ಪರ್ವತಗಳ ದೃಶ್ಯಗಳನ್ನು ಬಿಡಿಸಲು, ಲಂಡನ್ನ ಸಂಪಾದಕರೊಬ್ಬರಿಂದ ಸ್ವಿಟ್ಸರ್ಲೆಂಡ್ಗೆ ಕಳುಹಿಸಲ್ಪಟ್ಟನು. ವಿಂಪರ್ ಪರ್ವತಗಳಿಂದ ಆಕರ್ಷಿತನಾದನು, ಮತ್ತು ಪರ್ವತಾರೋಹಣವು ಅವನ ಮುಖ್ಯ ಉತ್ಸಾಹವಾಗಿ ಪರಿಣಮಿಸಿತು. ಫ್ರಾನ್ಸ್ನಲ್ಲಿ ಮತ್ತು ಸ್ವಿಟ್ಸರ್ಲೆಂಡ್ನಲ್ಲಿ, ಎರಡೂ ಸ್ಥಳಗಳಲ್ಲಿರುವ ಅನೇಕ ಶಿಖರಗಳನ್ನು ಅವನು ಆರೋಹಿಸಿದನು ಮತ್ತು ಮ್ಯಾಟರ್ಹಾರ್ನ್ ಪರ್ವತವನ್ನು ಹತ್ತಲಿಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡಿದನು. ಆದರೆ ಅವನು ಮ್ಯಾಟರ್ಹಾರ್ನ್ ಅನ್ನು ಹತ್ತಲು ಶಕ್ತನಾಗಲಿಲ್ಲ.
ಮ್ಯಾಟರ್ಹಾರ್ನ್ ಆರೋಹಿಸಲ್ಪಟ್ಟದ್ದು!
ಅಂತಿಮವಾಗಿ, 1865ರ ಜುಲೈ ತಿಂಗಳಲ್ಲಿ ಮೂರು ವಿಭಿನ್ನ ಆರೋಹಣಾ ತಂಡಗಳು—ಮೂರು ತಂಡಗಳೂ ಮ್ಯಾಟರ್ಹಾರ್ನ್ ಅನ್ನು ಹತ್ತಲು ನಿರ್ಧರಿಸಿದ್ದವು—ಸರ್ಮ್ಯಾಟ್ನಲ್ಲಿ ಸೇರಿಬಂದವು. ಇಟಲಿಯ ತಂಡವೊಂದು ತಮಗಿಂತಲೂ ಮುಂದೆ ಹೋಗಬಹುದೆಂಬ ಕಾರಣದಿಂದ ಸಮಯದ ಒತ್ತಡಕ್ಕೆ ಒಳಗಾಗಿ, ಈ ಮೂರು ಗುಂಪುಗಳು ಒಂದು ಕಾರ್ಡೇ, ಅಥವಾ ಒಂದೇ ಹಗ್ಗದಿಂದ ಬಿಗಿದುಕೊಂಡಿರುವ ಪರ್ವತಾರೋಹಿಗಳ ಸಾಲಾಗಿ ಒಂದೂಗೂಡಲು ನಿರ್ಧರಿಸಿದವು. ಆ 7 ಜನರ ಗುಂಪು—ಎಡ್ವರ್ಡ್ ವಿಂಪರ್ ಮತ್ತು ಲಾರ್ಡ್ ಫ್ರಾನ್ಸಿಸ್ ಡಗ್ಲಸ್, ಚಾರ್ಲ್ಸ್ ಹಡ್ಸನ್ ಮತ್ತು ಅವನ ಯುವ ಸ್ನೇಹಿತ ಹ್ಯಾಡೊ, ಇವರೆಲ್ಲರೂ ಇಂಗ್ಲಿಷರಾಗಿದ್ದರು ಮತ್ತು ಯಾರನ್ನು ಬಾಡಿಗೆಗೆ ಪಡೆಯುವುದರಲ್ಲಿ ಅವರು ಯಶಸ್ವಿಯಾದರೊ ಆ ಇಬ್ಬರು ಸ್ವಿಸ್ ಮತ್ತು ಒಬ್ಬ ಫ್ರೆಂಚ್ ಮಾರ್ಗದರ್ಶಿಗಳೊಂದಿಗೆ ರಚಿತವಾಗಿತ್ತು.
ಜುಲೈ 13ರ ಬೆಳಗ್ಗೆ ಸರ್ಮ್ಯಾಟನ್ನು ಬಿಟ್ಟು ಅವರು ಪೂರ್ವದಿಂದ ಪರ್ವತವನ್ನು ತರಾತುರಿಯಿಲ್ಲದೆ ಸಮೀಪಿಸಿದರು ಮತ್ತು ಹತ್ತಲಿಕ್ಕಾಗಿ ತಗ್ಗಿನ ಭಾಗಗಳು ಸಂಬಂಧಸೂಚಕವಾಗಿ ಸುಲಭವಾಗಿವೆ ಎಂಬುದನ್ನು ಕಂಡುಕೊಂಡರು. ಸುಮಾರು 3,300 ಮೀಟರ್ಗಳಷ್ಟು ಎತ್ತರದಲ್ಲಿ ಅವರು ತಮ್ಮ ಡೇರೆಯನ್ನು ಹಾಕಿದರು ಮತ್ತು ಆ ಪ್ರಕಾಶಮಾನವಾದ ದಿನದ ಉಳಿದ ಸಮಯವನ್ನು ಸಾವಕಾಶವಾಗಿ ಆನಂದಿಸಿದರು.
ಮರುದಿನ ಬೆಳಗ್ಗೆ, ಜುಲೈ 14, ಮುಂಜಾವಿಗೆ ಮೊದಲು ಅವರು ಹತ್ತಲಾರಂಭಿಸಿದರು. ಹಗ್ಗವು ಸಾಂದರ್ಭಿಕವಾಗಿ ಮಾತ್ರವೇ ಅಗತ್ಯವಾಗಿತ್ತು. ಕೆಲವು ಭಾಗಗಳು ಇತರ ಭಾಗಗಳಿಗಿಂತ ಹೆಚ್ಚು ಕಷ್ಟಕರವಾಗಿದ್ದವು, ಆದರೆ ಅನೇಕವೇಳೆ ಹೆಚ್ಚು ಗಂಭೀರವಾದ ವಿಘ್ನಗಳ ನಡುವೆ ಒಂದು ಮಾರ್ಗವನ್ನು ಅವರು ಕಂಡುಕೊಂಡರು. ಎರಡು ವಿಶ್ರಾಂತಿಯ ಅವಧಿಗಳ ಬಳಿಕ ಅವರು ಅತ್ಯಂತ ನಿರ್ಣಾಯಕ ಭಾಗವನ್ನು ತಲಪಿದರು. ಕೊನೆಯ 70 ಮೀಟರ್ಗಳು ಹಿಮದ ಕ್ಷೇತ್ರದಿಂದಾವೃತವಾಗಿದ್ದವು, ಮತ್ತು ಅಪರಾಹ್ನ 1:45ಕ್ಕೆ ಅವರು ಶಿಖರವನ್ನು ತಲಪಿದರು. ಮ್ಯಾಟರ್ಹಾರ್ನ್ ಆರೋಹಿಸಲ್ಪಟ್ಟಿತು!
ಎರಡು ಶಿಖರಗಳಲ್ಲಿ ಒಂದರಲ್ಲಿಯೂ ಮಾನವ ಭೇಟಿಗಾರರು ಬಂದ ಸುಳಿವು ಕಾಣಲಿಲ್ಲ, ಆದುದರಿಂದ ಅವರೇ ಮೊದಲಿಗರಾಗಿದ್ದರು ಎಂಬುದು ಸ್ಪಷ್ಟ. ಎಂತಹ ಒಂದು ಅನಿಸಿಕೆ! ಸುಮಾರು ಒಂದು ತಾಸಿನ ವರೆಗೆ, ವಿಜಯಶಾಲಿಯಾದ ತಂಡವು ಪ್ರತಿಯೊಂದು ದಿಕ್ಕಿನಿಂದಲೂ ಉಸಿರು ಕಟ್ಟುವಂತೆ ಮಾಡುವ ನೋಟವನ್ನು ಅನುಭೋಗಿಸಿತು, ತದನಂತರ ಅವರು ಇಳಿಯಲು ಸಿದ್ಧರಾದರು. ಅದೇ ದಿನದಲ್ಲಿ ಪರ್ವತವನ್ನು ಹತ್ತಲಿಕ್ಕಾಗಿ ಪ್ರಯತ್ನಿಸುತ್ತಿದ್ದ ಇಟಲಿಯ ಪರ್ವತಾರೋಹಿಗಳು, ತೀರ ಹಿಂದೆ ಉಳಿದಿದ್ದರು ಮತ್ತು ತಾವು ಪಂದ್ಯದಲ್ಲಿ ಸೋತಿದ್ದೇವೆಂಬುದನ್ನು ಅವರು ಗ್ರಹಿಸಿದಾಗ ಅವರು ಹಿಂದಿರುಗಿಹೋದರು.
ತೀರ ಅಧಿಕವಾದ ಬೆಲೆ
ಆದರೂ, ಆರೋಹಿಗಳ ವಿಜಯವು ಅವರಿಗೆ ತೀರ ಅಧಿಕ ಪ್ರಮಾಣದ ಬೆಲೆಯನ್ನು ತಗಲಿಸಲಿತ್ತು. ಅವರೋಹಣದಲ್ಲಿ ಕಷ್ಟಕರವಾದ ಒಂದು ಹಾದಿಯನ್ನು ತಲಪಿದ ನಂತರ ಅವರು ಒಟ್ಟಿಗೆ ಹಗ್ಗದಿಂದ ಬಿಗಿಯಲ್ಪಟ್ಟರು. ಅತ್ಯಂತ ಅನುಭವಸ್ಥನಾಗಿದ್ದ ಮಾರ್ಗದರ್ಶಿಯು ನಾಯಕತ್ವವನ್ನು ವಹಿಸಿದನು. ಅವರ ಎಚ್ಚರಿಕೆಯ ಹೊರತಾಗಿಯೂ, ಭಾಗವಹಿಸುತ್ತಿದ್ದವರಲ್ಲಿ ತೀರ ಎಳೆಯನಾಗಿದ್ದವನು ಹೆಜ್ಜೆತಪ್ಪಿ, ತನ್ನೊಂದಿಗೆ ಮೇಲಿದ್ದವರನ್ನೂ ಎಳೆದುಕೊಂಡು, ಕೆಳಗಿದ್ದ ಮನುಷ್ಯನ ಮೇಲೆ ಬಿದ್ದನು. ಚೀತ್ಕಾರವೊಂದರಿಂದ ಎಚ್ಚರಿಸಲ್ಪಟ್ಟು, ಕೊನೆಯ ಮೂವರು ವ್ಯಕ್ತಿಗಳು ಕೆಲವು ಬಂಡೆಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು. ಆದರೆ ಹಗ್ಗವು ತುಂಡಾಯಿತು, ಮತ್ತು ತೀರ ಸ್ವಲ್ಪ ಸಮಯದೊಳಗೆ, ಆ ಮೊದಲ ನಾಲ್ಕು ವ್ಯಕ್ತಿಗಳು ಕೆಳಗಿನ ಪ್ರಪಾತದಲ್ಲಿ ಕಣ್ಮರೆಯಾದರು.
ನಿಶ್ಚೇಷ್ಟಗೊಳಿಸಲ್ಪಟ್ಟ ಎಡ್ವರ್ಡ್ ವಿಂಪರ್ ಮತ್ತು ಇಬ್ಬರು ಸ್ವಿಸ್ ಮಾರ್ಗದರ್ಶಿಗಳು ತೀರ ಸಂದಿಗ್ಧವಾದ ಸ್ಥಿತಿಯಲ್ಲಿ ಉಳಿದರು. ಅವರು ರಾತ್ರಿಯನ್ನು ಕಳೆಯಲಿಕ್ಕಾಗಿ ಬಯಲು ಶಿಬಿರದಲ್ಲಿ ಉಳಿದುಕೊಂಡು, ಮರುದಿನ ಸರ್ಮ್ಯಾಟ್ಗೆ ಹಿಂದಿರುಗಬೇಕಾಗಿತ್ತು. ಹೀಗೆ ಆ ದಿನದ ಪ್ರತಾಪವು, ಬೇಗನೆ ಬದುಕಿಉಳಿದವರನ್ನು ಅವರ ಉಳಿದ ಜೀವನಪರ್ಯಂತರ ಬಾಧಿಸಿದ ವಿಪತ್ತಾಗಿ ಪರಿಣಮಿಸಿತು.
ನಾಲ್ಕು ಶವಗಳಲ್ಲಿ ಮೂರು ಶವಗಳು, ಅಪಘಾತದ ಸ್ಥಳದಿಂದ 1,200 ಮೀಟರ್ಗಳಷ್ಟು ಕೆಳಗಿರುವ ನೀರ್ಗಲ್ಲ ನದಿಯಿಂದ ತದನಂತರ ಪುನಸ್ಸಂಪಾದಿಸಲ್ಪಟ್ಟವು. ನಾಲ್ಕನೆಯ ಶವವು—ಲಾರ್ಡ್ ಡಗ್ಲಸ್ರದ್ದು—ಎಂದಿಗೂ ಕಂಡುಕೊಳ್ಳಲ್ಪಡಲಿಲ್ಲ.
ಮ್ಯಾಟರ್ಹಾರ್ನ್ನ ಇಳುಕಲುಗಳ ಮೇಲಿನ ಕೊನೆಯ ಬಲಿಪಶುಗಳು ಇವರಾಗಿರಲಿಲ್ಲ. ಅನೇಕ ಹಗ್ಗಗಳು, ಶಿಲಾಮಯವಾದ ಗೋಡೆಗಳು ಮತ್ತು ಸಣ್ಣ ಸಂದುಗಳ ಮೇಲೆ ಅಥವಾ ಸುತ್ತಲೂ ವಿವಿಧ ಹಾದಿಗಳ ಮೇಲೆ ಬಂಡೆಗಳಿಗೆ ಬಲವಾಗಿ ಕಟ್ಟಲ್ಪಟ್ಟಿದ್ದವು ಎಂಬ ವಾಸ್ತವಾಂಶದ ಹೊರತಾಗಿಯೂ, ಪರ್ವತಾರೋಹಿಗಳ ಅಧಿಕವಾದ ಅನುಭವ ಮತ್ತು ಮಹತ್ತರವಾಗಿ ಪ್ರಗತಿಗೊಂಡ ಸಲಕರಣೆಗಳ ಹೊರತಾಗಿಯೂ, ಈ ಪರ್ವತವೊಂದರ ಮೇಲೆಯೇ ಸುಮಾರು 600 ಮರಣಗಳು ಸಂಭವಿಸಿವೆ.
ಅಪಾಯಗಳು
ಅಪಾಯಕ್ಕೆ ಮಹತ್ತರವಾಗಿ ನೆರವನ್ನೀಯುವ ಒಂದು ವಿಷಯವು ಹವಾಮಾನವಾಗಿದೆ. ಅದು ತೀರ ತ್ವರಿತಗತಿಯಲ್ಲಿ ಬದಲಾಗಬಲ್ಲದು. ದಿನವೊಂದು ತೀರ ಮನೋಹರವಾದದ್ದಾಗಿ ಆರಂಭವಾಗಬಹುದು, ಆದರೆ ಒಬ್ಬ ವ್ಯಕ್ತಿಯು ಅದರ ಅರಿವುಳ್ಳವನಾಗುವ ಮೊದಲೇ, ದಟ್ಟವಾದ ಮಂಜು ಅಥವಾ ಭಾರಿ ಕತ್ತಲಾದ ಮೋಡಗಳು ಪಿರಮಿಡ್ನ ಮೇಲೆ ಆವರಿಸಬಲ್ಲವು ಮತ್ತು ಭೀತಿಕಾರಕ ಬಿರುಗಾಳಿಯು ತಲೆದೋರಸಾಧ್ಯವಿದೆ. ಇದರೊಂದಿಗೆ ಭಯಂಕರವಾದ ಮಿಂಚುಗಳು ಮತ್ತು ಸಿಡಿಲುಗಳು ಬಂದು, ಭಾರಿ ಹಿಮಪಾತದಲ್ಲಿ ಮುಕ್ತಾಯಗೊಳ್ಳಬಹುದು. ಇದೆಲ್ಲವೂ ಒಂದು ಸುಂದರವಾದ ಬೇಸಗೆಯ ದಿನದಲ್ಲಿಯೇ!
ಸನ್ನಿವೇಶದಲ್ಲಿನ ಅಂತಹ ಬದಲಾವಣೆಯಿಂದ ಆರೋಹಿಗಳು ಹಠಾತ್ತಾಗಿ ಹಿಡಿಯಲ್ಪಡುವಲ್ಲಿ, ಅವರು ರಾತ್ರಿಯನ್ನು ತೆರೆದ ಸ್ಥಳದಲ್ಲಿ, ಬಹುಶಃ ಅವರಿಗೆ ನಿಂತುಕೊಳ್ಳಲು ಸಾಕಾಗುವಷ್ಟು ಸ್ಥಳವನ್ನು ಮಾತ್ರ ಒದಗಿಸುವ ಸಣ್ಣ ದಿಬ್ಬದ ಮೇಲೆ ಕಳೆಯಬೇಕಾಗಬಹುದು. ತಾಪಮಾನಗಳು ಘನೀಭವಿಸುವ ಬಿಂದುವಿನ ಕೆಳಮಟ್ಟದಲ್ಲಿರಸಾಧ್ಯವಿದೆ. ಕೆಳಗೆ ಅಗಾಧವಾದ ಕೂಪವಿದೆ. ಆಗ, ತಾನು ಬಹಳ ದೂರದಿಂದಲೇ ಮ್ಯಾಟರ್ಹಾರ್ನ್ ಅನ್ನು ಅಭಿವಂದಿಸಬೇಕಿತ್ತು ಎಂದು ಒಬ್ಬನು ಬಯಸಬಹುದು!
ಬೀಳುತ್ತಿರುವ ಕಲ್ಲುಗಳು ಇನ್ನೊಂದು ಅಪಾಯವಾಗಿದೆ. ಕೆಲವೊಮ್ಮೆ ನಿರ್ಲಕ್ಷ್ಯದ ಆರೋಹಿಗಳು ಸ್ವತಃ ತಾವೇ ಕಲ್ಲುಗಳನ್ನು ಬೀಳುವಂತೆ ಮಾಡುತ್ತಾರೆ. ಹೆಚ್ಚಿನ ವಿದ್ಯಮಾನಗಳಲ್ಲಾದರೊ, ಕಾರಣಗಳು ನೈಸರ್ಗಿಕವಾಗಿರುತ್ತವೆ. ತಾಪಮಾನದಲ್ಲಿನ ಬದಲಾವಣೆಗಳು, ಮಂಜು ಮತ್ತು ಹಿಮ, ಸುರಿಯುವ ಮಳೆ, ಮತ್ತು ಬಿಸಿಲಿನ ಸೂರ್ಯನು ಹಾಗೂ ಹಾರ್ನ್ ಪರ್ವತದ ಸುತ್ತಲೂ ಬೀಸುವ ಬಲವಾದ ಬಿರುಗಾಳಿಗಳು, ಇವೆಲ್ಲವೂ ಬಂಡೆಗಳನ್ನು ಪ್ರಭಾವಿಸಿ, ದೊಡ್ಡ ತುಂಡುಗಳನ್ನು ಕಳಚಿಹೋಗುವಂತೆ ಮಾಡುತ್ತವೆ. ಅವು ಕೆಲವೊಮ್ಮೆ ತಟ್ಟೆಗಳ ಒಂದು ದೊಡ್ಡ ರಾಶಿಯಂತೆ, ಅನೇಕ ವರ್ಷಗಳ ವರೆಗೆ ಒಂದು ಸ್ಥಳದಲ್ಲಿ ಉಳಿಯುತ್ತವೆ, ಆದರೆ ಅಂತಿಮವಾಗಿ ಹಿಮ ಪ್ರಪಾತಗಳು, ಅವುಗಳನ್ನು ಕದಲಿಸಿ, ಬಿದ್ದುಹೋಗುವಂತೆ ಮಾಡುತ್ತವೆ.
ಈ ವಿಕಸನವು ಸಾವಿರಾರು ವರ್ಷಗಳಿಂದ ಸಂಭವಿಸುತ್ತಿರುವುದಾದರೂ, ತನ್ನ ಆಕಾರದಲ್ಲಿ ಯಾವ ಬದಲಾವಣೆಯ ಸೂಚನೆಗಳನ್ನೂ ತೋರಿಸದೆ, ಪರ್ವತವು ತನ್ನ ತೆಳ್ಳನೆಯ ನಿಲುಗಂಬಾಕಾರವನ್ನು ಕಾಪಾಡಿಕೊಂಡಿರುವುದನ್ನು ಕಂಡು ಅನೇಕ ಆರೋಹಿಗಳು ಆಶ್ಚರ್ಯಗೊಂಡಿದ್ದಾರೆ. ಆದರೂ, ಲೆಕ್ಕಮಾಡಲ್ಪಟ್ಟ ಅದರ 250 ಕೋಟಿ ಘನ ಮೀಟರ್ಗಳಷ್ಟು ದಪ್ಪದ ಬಂಡೆಗೆ ಹೋಲಿಸುವಾಗ, ಬೀಳುತ್ತಿರುವ ಕಲ್ಲುಗಳು ಅದರ ಆಕಾರವನ್ನು ಬದಲಾಯಿಸಲು ಸಾಕಾಗುವಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಹಾಗಿದ್ದರೂ, ಅವು ಹಾನಿಯನ್ನುಂಟುಮಾಡಿ, ಜೀವನಷ್ಟವನ್ನೂ ಉಂಟುಮಾಡುತ್ತವೆ.
ಈ ಮಧ್ಯೆ, ಮ್ಯಾಟರ್ಹಾರ್ನ್ ಅನ್ನು ಆರೋಹಿಸುವುದು ಅನೇಕರಿಗೆ ಜನಪ್ರಿಯವಾಗಿ ಪರಿಣಮಿಸಿದೆ. ಕೆಲವು ಮಾರ್ಗದರ್ಶಿಗಳು, ನೂರಾರು ಸಲ ಅದರ ತುದಿಯನ್ನು ತಲಪಿದ್ದಾರೆ. ಹಾಗೂ, ಅನೇಕ ಪುರುಷರು ಮತ್ತು ಸ್ತ್ರೀಯರು ಪ್ರತಿ ಸಲ ಬೇರೆ ಬೇರೆ ಹಾದಿಯನ್ನು ಆರಿಸಿಕೊಳ್ಳುವ ಮೂಲಕ ಈ ಸಾಹಸಕಾರ್ಯವನ್ನು ಪುನರಾವರ್ತಿಸುತ್ತಾರೆ.
ಆದರೆ ಸನ್ನಿವೇಶಗಳು ಪ್ರತಿಕೂಲವಾಗಿರುವ ಅಥವಾ ನಮ್ಮ ಸ್ವಂತ ಸಾಮರ್ಥ್ಯ, ಶಾರೀರಿಕ ಸ್ಥಿತಿ ಅಥವಾ ತರಬೇತಿಯು ಸಾಕಷ್ಟಿಲ್ಲದ ಕಾರಣದಿಂದ ಮ್ಯಾಟರ್ಹಾರ್ನ್ ಅನ್ನು ಹತ್ತಲು ಪ್ರಯತ್ನಿಸಿ ಬಿಟ್ಟುಬಿಡುವವರೂ ಇದ್ದಾರೆ. ಆದುದರಿಂದ ಅವರು ಹತ್ತುವುದನ್ನು ಮುಂದುವರಿಸುವುದಿಲ್ಲ, ಬದಲಾಗಿ ಮ್ಯಾಟರ್ಹಾರ್ನ್ ಅನ್ನು “ಆರೋಹಿಸಿ”ರುವ ಪ್ರಖ್ಯಾತಿಯ ಮೇಲೆ ವಿವೇಚನೆಯು ಜಯಹೊಂದುವಂತೆ ಅನುಮತಿಸುತ್ತಾರೆ.
ಹಾಗಿದ್ದರೂ ಈ ಸ್ತಂಭೀಭೂತಗೊಳಿಸುವ ಪರ್ವತವನ್ನು ನೀವು ಛಾಯಾಚಿತ್ರಗಳಲ್ಲಿ ಅಥವಾ ಚಲನ ಚಿತ್ರಗಳಲ್ಲಿ ನೋಡಿರಲಿ ಅಥವಾ ಸೂರ್ಯೋದಯ ಅಥವಾ ಸೂರ್ಯಾಸ್ತಮಾನದ ಸಮಯದಲ್ಲಿ ಭಯಭಕ್ತಿಯಿಂದ ಅದರ ಪ್ರಭಾಮಯ ಛಾಯೆಗಳನ್ನು ಹೊಗಳುತ್ತಾ ಅದರ ಸಮೀಪದಲ್ಲಿ ನೀವು ನಿಂತಿರಲಿ, ನೀವು ಮಹಾನ್ ಶಿಲ್ಪಿಯ ಕುರಿತಾಗಿ ಜ್ಞಾಪಿಸಿಕೊಂಡಿದ್ದಿರಬಹುದು. ಆತನ ಕೈಕೆಲಸಕ್ಕಾಗಿರುವ ಆಳವಾದ ಗೌರವದೊಂದಿಗೆ, ಕೀರ್ತನೆ 104:24ರಲ್ಲಿರುವ ಮಾತುಗಳನ್ನು ನಿಮ್ಮ ಹೃದಯವು ಚೆನ್ನಾಗಿ ಪ್ರತಿಧ್ವನಿಸಿದ್ದಿರಬಹುದು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.”