ರೋಗರಹಿತವಾದ ಒಂದು ಲೋಕ
“ಮಲೇರಿಯಾವು ಯಾವನೂ ಹಿಂದೆಂದೂ ಊಹಿಸದಿರುವುದಕ್ಕಿಂತಲೂ ಹೆಚ್ಚು ಚತುರತೆಯದ್ದು.” ಎಂದು ಸೋಂಕು ರಕ್ಷಾ ಶಾಸ್ತ್ರಜ್ಞರಾದ ಡಾ. ಡ್ಯಾನ್ ಗಾರ್ಡನ್ ಹೇಳುತ್ತಾರೆ. “ಅದಕ್ಕೆ ಪರಿಹಾರವನ್ನು ಕಂಡುಹಿಡಿಯಲು ನಾವು ಇನ್ನೂ ಪ್ರಯತ್ನಿಸುತ್ತಿದ್ದೇವೆ.”
“ನಾವಿನ್ನೂ [ಕ್ಷಯ ರೋಗಾಣು]ವಿನ ಜೀವದ್ರವ್ಯ ಪರಿಣಾಮದ ಕುರಿತು ಸಾಕಷ್ಟು ವಿಷಯವನ್ನು ತಿಳಿದಿಲ್ಲ,” ಎಂದು ಹಾವರ್ಡ್ ಹ್ಯೂಸ್ ವೈದ್ಯಕೀಯ ಸಂಸ್ಥೆಯ ಬ್ಯಾರಿ ಬ್ಲೂಮ್ ಹೇಳುತ್ತಾರೆ. “ಯಾವುದೇ ಔಷಧವು ಹೇಗೆ ಕಾರ್ಯನಡಿಸುತ್ತದೆಂದು ಪೂರ್ಣವಾಗಿ ನಮಗೆ ತಿಳಿದಿಲ್ಲ. ವಾಸ್ತವವಾಗಿ ನಮಗೆ ತಿಳಿದೇ ಇಲ್ಲ.”
ಸಿಫಿಲಿಸ್ ರೋಗವನ್ನು ಕಿತ್ತೊಗೆಯಲಿಕ್ಕಾಗಿ “ಸುರಕ್ಷಿತ ಸಂಭೋಗ” ಕಾರ್ಯಾಚರಣೆಗಳ ಅಪಜಯವನ್ನು ಗಮನಿಸುತ್ತಾ, ರೋಗ ನಿಯಂತ್ರಣ ಕೇಂದ್ರಗಳ ಪ್ರತಿನಿಧಿಯೊಬ್ಬನು “ಜ್ಞಾನವು ಅವಶ್ಯವಾಗಿ ವರ್ತನೆಯ ಬದಲಾವಣೆಯಲ್ಲಿ ಮಾರ್ಪಡುವದಿಲ್ಲ” ಎಂದು ಪ್ರಲಾಪಿಸುತ್ತಾನೆ. ಮೇಲಿನ ಹೇಳಿಕೆಗಳು ಸೂಚಿಸುವಂತೆ, ಮಲೇರಿಯಾ, ಕ್ಷಯ ರೋಗ, ಮತ್ತು ಸಿಫಿಲಿಸ್‌ನ ವಿರುದ್ಧ ಹೋರಾಟಗಳು ಆಶಾಭಂಗಪಡಿಸುವಂಥವುಗಳಾಗಿವೆ. ಭವಿಷ್ಯವು ಈ ರೋಗಗಳಿಗೆ ಉತ್ತಮಗೊಳಿಸಲ್ಪಟ್ಟ ಪರಿಹಾರಗಳನ್ನು ತರುವುದೊ?
ಬಹುಶಃ. ಮನುಷ್ಯನು ಕೆಲವು ವ್ಯಾಧಿಗಳನ್ನು ಜಯಿಸಿ, ಇತರ ವ್ಯಾಧಿಗಳೊಂದಿಗೆ ಜೀವಿಸುವುದನ್ನು ಸರಳಗೊಳಿಸಬಹುದಾದರೂ, ರೋಗದ ವಿರುದ್ಧ ಯುದ್ಧವನ್ನು ಅವನು ಸಂಪೂರ್ಣವಾಗಿ ಯಾಕೆ ಜಯಿಸಲು ಸಾಧ್ಯವಿಲ್ಲ ಎಂಬುದಕ್ಕೆ ಒಂದು ಆಧಾರಭೂತ ಕಾರಣವಿದೆ.
ರೋಗದ ಮೂಲ
ರೋಗದ ವಿರುದ್ಧವಿರುವ ಹೋರಾಟವು ಕೇವಲ ಪರೋಪಜೀವಿಗಳ ಮತ್ತು ಜೀವಾಣುಗಳ ವಿರುದ್ಧವಿರುವ ಹೋರಾಟಕ್ಕಿಂತ ಬಹಳ ಹೆಚ್ಚಿನದ್ದಾಗಿದೆ. ರೋಗವು, ನಮ್ಮ ಮೊದಲ ಮಾನವ ತಂದೆಯಿಂದ ಪಿತ್ರಾರ್ಜಿತವಾಗಿ ಪಡೆದ ಪಾಪದ ಒಂದು ಪರಿಣಾಮವಾಗಿದೆ ಎಂದು ಬೈಬಲ್ ವಿವರಿಸುತ್ತದೆ. (ರೋಮಾಪುರ 5:12) ಪಾಪವು ಸೃಷ್ಟಿಕರ್ತನೊಂದಿಗೆ ಮನುಷ್ಯನ ಸಂಬಂಧವನ್ನು ನಷ್ಟಪಡಿಸಿದ್ದು ಮಾತ್ರವಲ್ಲ, ಅದು ಅವನನ್ನು ಮಾನಸಿಕವಾಗಿ, ಭಾವನಾತ್ಮಕವಾಗಿ, ಮತ್ತು ಶಾರೀರಿಕವಾಗಿ ಕೀಳಾದ ಸ್ಥಿತಿಗೆ ಕೂಡ ನಡೆಸಿತು. ಹೀಗೆ, ಪ್ರಮೋದವನವಾದ ಭೂಮಿಯ ಮೇಲೆ ಪರಿಪೂರ್ಣತೆಯಲ್ಲಿ ಮುಂದುವರಿಯುವ ಬದಲು, ಮಾನವರು ಅಪರಿಪೂರ್ಣರಾದರು ಮತ್ತು ಮರಣವು ಅವರನ್ನು ಬೆನ್ನಟ್ಟಿ ಹಿಡಿಯುವ ತನಕ ಕ್ಷಿಣಿಸಿದರು.—ಆದಿಕಾಂಡ 3:17-19.
ಅತ್ಯುತ್ತಮವಾದ ಔಷಧದಿಂದಲೂ ಕೂಡ ತನ್ನ ಪಾಪಪೂರ್ಣ ಸ್ಥಿತಿಯನ್ನು ಯಾ ಅದರ ಪರಿಣಾಮಗಳನ್ನು ವಿಪರ್ಯಸ್ತ ಮಾಡಲು ಮನುಷ್ಯನಿಗೆ ಸಾಧ್ಯವಿಲ್ಲ. ಈ ಸಂದಿಗ್ಧತೆಯು ಮಾನವ ಕುಲವನ್ನು “ವ್ಯರ್ಥತ್ವಕ್ಕೆ ಒಳಪಡಿಸಿದೆ [“ಬಹಳ ಸೀಮಿತಗೊಳಿಸಿದೆ,” ಫಿಲಿಪ್ಸ್].” (ರೋಮಾಪುರ 8:20) ಮತ್ತು ಇದು ರೋಗವನ್ನು ಜಯಿಸುವ ವಿಷಯದಲ್ಲಿ ಸತ್ಯವಾಗಿದೆ. ವೈದ್ಯಶಾಸ್ತ್ರದ ಕ್ಷೇತ್ರದಲ್ಲಿನ ಜೀವ ಉಳಿಸುವ ಪ್ರಗತಿಯನ್ನು ಅನೇಕ ವೇಳೆ ಜೀವವನ್ನು ಬೆದರಿಸುವ ಸಮಾಜದ ಕುಸಿತದ ಮೂಲಕ ನಿಷ್ಪರಿಣಾಮವಾಗಿಸುತ್ತದೆ.
“ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಇದ್ದೇವೆ,” ಎಂಬುದಾಗಿ ಡಿಸ್ಕವರ್ ಪತ್ರಿಕೆಯಲ್ಲಿ, ಜೆರಲ್ಡ್ ಎಮ್. ಲೊಎನ್‌ಸ್ಟೈನ್ ಬರೆಯುತ್ತಾರೆ. “ರೋಗದೊಂದಿಗೆ ಹೋರಾಡುವುದರಲ್ಲಿ ಮತ್ತು ಮಾನವ ಜೀವವನ್ನು ಲಂಬಿಸುವುದರಲ್ಲಿ ನಮಗೆ ಎಷ್ಟು ಹೆಚ್ಚು ಸಫಲತೆಯಿದೆಯೋ,” ಹೆಚ್ಚಿನ ಜನಸಂಖ್ಯೆ ಮತ್ತು ಪರಿಸರದ ಶಿಥಿಲತೆಯ ಕಾರಣ, “ನಮ್ಮ ಸ್ವಂತ ನಿರ್ಮೂಲನಕ್ಕೆ ಅವಸರ ಮಾಡುವ ಸಾಧ್ಯತೆಗಳು ಅಷ್ಟು ಹೆಚ್ಚಾಗಿ ಕಾಣಿಸುತ್ತವೆ.”
ನಿಜವಾದ ರೋಗಪರಿಹಾರ
ರೋಗಗಳಿಗೆ ನಿಜವಾದ ಪರಿಹಾರವು ಮನುಷ್ಯನಲ್ಲಿ ಅಲ್ಲ ಬದಲಾಗಿ, ಸೃಷ್ಟಿಕರ್ತನಲ್ಲಿ ನೆಲಸಿರುತ್ತದೆ. ಅದಕ್ಕಾಗಿಯೆ ಕೀರ್ತನೆಗಾರನು ಘೋಷಿಸಿದ್ದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡ ಶಕ್ತನಲ್ಲ.” ಬೈಬಲ್ ಇನ್ನೂ ಹೇಳುವುದು: “ಯಾವನು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನೇ ಧನ್ಯನು. ಭೂಮಿ, ಆಕಾಶ, ಸಾಗರ, ಚರಾಚರ ಇವುಗಳನ್ನು ನಿರ್ಮಿಸಿದವನೂ . . . ಆತನೇ.” (ಕೀರ್ತನೆ 146:3, 5, 6) ರೋಗವನ್ನು ಅದರ ಬೇರಿನಿಂದ ನಿರ್ಮೂಲ ಮಾಡುವ ಶಕ್ತಿ ಕೇವಲ ದೇವರಿಗಿದೆ. ಮತ್ತು ಬೈಬಲಿಗನುಸಾರ, ಆತನು ಅದನ್ನೇ ಮಾಡಲು ಉದ್ದೇಶಿಸುತ್ತಾನೆ. ಆ ಸಮಯವು ಸಮೀಪಿಸುತ್ತಿದೆ.
ಹೊಸ ಲೋಕವೊಂದು ಬರುವ ಸ್ವಲ್ಪ ಸಮಯ ಮುಂಚೆ ಮತ್ತು ಸದ್ಯದ ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ ನಾವು ಜೀವಿಸುತ್ತಾ ಇದ್ದೇವೆಂಬ ಅನೇಕ ಪ್ರಮಾಣಗಳಲ್ಲಿ “ಅಂಟುರೋಗಗಳು” ಒಂದಾಗಿರುವುದೆಂದು ಯೇಸು ಕ್ರಿಸ್ತನು ಮುಂತಿಳಿಸಿದನು. ರೋಗವನ್ನು ಉಲ್ಬಣಗೊಳಿಸುವ ಯುದ್ಧ, ಕ್ಷಾಮ, ಮತ್ತು ನಿಯಮರಾಹಿತ್ಯದಂತಹ ಪರಿಸ್ಥಿತಿಗಳ ಹೆಚ್ಚಳವನ್ನು ಕೂಡ ಅವನು ಮುಂತಿಳಿಸಿದನು.—ಲೂಕ 21:11; ಮತ್ತಾಯ 24:3, 7, 12; 2 ತಿಮೊಥೆಯ 3:1-5, 13.
“ನಿಜವಾಗಿಯೂ ನಮ್ಮ ಸಂಕಷ್ಟಗಳನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ, ಹೌದು,” ಎಂಬ ಪ್ರವಾದನೆಯ ನೆರವೇರಿಕೆಯನ್ನು ಆರಂಭಿಸುತ್ತಾ, ಯೇಸು ಭೂಮಿಯಲ್ಲಿದ್ದಾಗ, ಅದ್ಭುತಕರವಾಗಿ ರೋಗಿಗಳನ್ನು ಗುಣಪಡಿಸಿದನು. (ಯೆಶಾಯ 53:4; ಮತ್ತಾಯ 8:17) ಲೋಕವ್ಯಾಪಕ ಪ್ರಮಾಣದಲ್ಲಿ ಶೀಘ್ರದಲ್ಲೇ ನೆರವೇರಿಸಲು ದೇವರು ಉದ್ದೇಶಿಸಿದ್ದನ್ನು ಸಣ್ಣ ಪ್ರಮಾಣದಲ್ಲಿ ಅವನು ಹೀಗೆ ಪ್ರದರ್ಶಿಸಿದನು. ಯೇಸುವಿನ ಕುರಿತು ಬೈಬಲ್ ಹೇಳುವುದು: “ಆಗ ಜನರು ಗುಂಪುಗುಂಪಾಗಿ ಆತನ ಬಳಿಗೆ ಬಂದು ಕುಂಟರು ಕುರುಡರು ಮೂಕರು ಕೈಕಾಲಿಲ್ಲದವರು ಈ ಮುಂತಾದ ಅನೇಕರನ್ನು ಕರತಂದು ಅವರನ್ನು ಆತನ ಪಾದಗಳ ಬಳಿಯಲ್ಲಿ ಬಿಟ್ಟರು; ಆತನು ಅವರನ್ನು ವಾಸಿಮಾಡಿದನು. ಮೂಕರಾಗಿದ್ದವರು ಮಾತಾಡಿದ್ದನ್ನೂ ಕೈಕಾಲಿಲ್ಲದವರು ಸ್ವಸ್ಥವಾದದ್ದನ್ನೂ ಕುಂಟರಿಗೆ ಕಾಲುಬಂದದ್ದನ್ನೂ ಕುರುಡರಿಗೆ ಕಣ್ಣುಬಂದದ್ದನ್ನೂ ಜನರು ಕಂಡು ಆಶ್ಚರ್ಯಪಟ್ಟರು.”—ಮತ್ತಾಯ 15:30, 31.
ಆ ಅದ್ಭುತಕಾರ್ಯಗಳನ್ನು ವೀಕ್ಷಿಸಿದ ಜನರು ದೇವರನ್ನು ಮಹಿಮೆಪಡಿಸಿದರು ಯಾಕೆಂದರೆ ಆ ಅದ್ಭುತಕಾರ್ಯಗಳನ್ನು ಮಾಡಲು ಯೇಸುವಿಗೆ ಶಕ್ತಿಯನ್ನು ಕೊಟ್ಟವನು ಆತನೆಂದು ಅವರು ಅರ್ಥಮಾಡಿಕೊಂಡರು. ಯೇಸುವಿಗೆ ಲಭ್ಯವಿದ್ದ ಶಕ್ತಿಯು, ನಮ್ಮ ವಿಸ್ಮಯಕರ ವಿಶ್ವವನ್ನು ಸೃಷ್ಟಿಸುವುದರಲ್ಲಿ ಉಪಯೋಗಿಸಲ್ಪಟ್ಟ ಅದೇ ಶಕ್ತಿಯಾಗಿತ್ತು. ಅದು ದೇವರ ಪವಿತ್ರಾತ್ಮ, ಆತನ ಕಾರ್ಯಕಾರಿ ಶಕ್ತಿಯಾಗಿತ್ತು.—ಆದಿಕಾಂಡ 1:1, 2; ಪ್ರಕಟನೆ 4:11.
“ಯಾವ ನಿವಾಸಿಯೂ ತಾನು ಅಸ್ವಸ್ಥನು” ಎಂಬುದಾಗಿ ಹೇಳದೆ ಇರುವ ಒಂದು ಸಮಯದ ಕುರಿತು ಪ್ರವಾದಿಯಾದ ಯೆಶಾಯನು ಬರೆದನು. (ಯೆಶಾಯ 33:24) ಮತ್ತು ಪ್ರಕಟನೆ 21:4, 5 ಘೋಷಿಸುವುದು: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು. ಆಗ ಸಿಂಹಾಸನದ ಮೇಲೆ ಕೂತಿದ್ದವನು—ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ ಅಂದನು.”
ನಾವು ಪರಿವರ್ತನೆಯ ಸಮಯದಲ್ಲಿ ಜೀವಿಸುತ್ತಾ ಇದ್ದೇವೆಂದು ಬೈಬಲ್ ತೋರಿಸುತ್ತದೆ. (1 ಯೋಹಾನ 2:15-17) ಬಹು ಬೇಗನೆ ಈ ಲೋಕವು, ಅದರ ಅಸ್ವಸ್ಥತೆ, ದುಃಖ, ಅಪರಾಧ, ಹಿಂಸೆ, ಮತ್ತು ಮರಣದೊಂದಿಗೆ, ಗತಕಾಲದ ವಿಷಯವಾಗಿರುವುದು. ಭೂಮಿಯ ಮೇಲೆ “ನೀತಿಯು ವಾಸವಾಗಿರುವ” ಹೊಸ ಲೋಕವೊಂದಕ್ಕಾಗಿ ಮಾರ್ಗವನ್ನು ಸರಿಮಾಡುತ್ತಾ, ದೇವರು ಅದನ್ನು ಮತ್ತು ಅದರ ವಿಪತ್ತುಗಳನ್ನು ತೆಗೆಯುವನು. (2 ಪೇತ್ರ 3:11-13) ಬರುವಂತಹ ಆ ಹೊಸ ಲೋಕವನ್ನು ಯೇಸು “ಪ್ರಮೋದವನ” ಎಂದು ಸೂಚಿಸಿದ್ದಾನೆ, ಯಾಕೆಂದರೆ ಅದು ಮೂಲ ಏದೆನ್ ಪ್ರಮೋದವನದಂತೆ ಇರುವುದು, ಆದರೆ ಒಂದು ಭೂವ್ಯಾಪಕವಾದ ಪ್ರಮಾಣದಲ್ಲಿ.—ಲೂಕ 23:43; ಆದಿಕಾಂಡ 2:7, 8.
ಆದುದರಿಂದ ಕ್ರೈಸ್ತರಿಗೆ ಕೇವಲ ತಾತ್ಕಾಲಿಕ ಚಿಕಿತ್ಸೆಗಾಗಿ ಅಲ್ಲ, ಆದರೆ ಅಪರಿಪೂರ್ಣತೆ, ರೋಗ, ಮತ್ತು ಮರಣದಿಂದ ಒಂದು ಶಾಶ್ವತವಾದ ಬಿಡುಗಡೆಗಾಗಿ ನಿರೀಕ್ಷೆ ಇದೆ. ದೇವರ ವಾಗ್ದಾನದ ಸಂಪೂರ್ಣ ನೆರವೇರಿಕೆಗೆ ಅವರು ಎದುರು ನೋಡುತ್ತಾರೆ: “ಯೆಹೋವನೆಂಬ ನಾನೇ ನಿಮಗೆ ಆರೋಗ್ಯದಾಯಕನು.” “ನಿಮ್ಮೊಳಗೆ ಯಾವ ವ್ಯಾಧಿಯೂ ಉಂಟಾಗದಂತೆ ಮಾಡುವೆನು.”—ವಿಮೋಚನಕಾಂಡ 15:26; 23:25. (g93 12/8)
[ಪುಟ 9 ರಲ್ಲಿರುವ ಚಿತ್ರಗಳು]
ಮೃತರನ್ನು ಎಬ್ಬಿಸಲು ಮತ್ತು ಅಸ್ವಸ್ಥರನ್ನು ಗುಣಪಡಿಸಲು ಯೇಸುವಿಗೆ ದೇವರ ಮೂಲಕ ಅಧಿಕಾರವು ಕೊಡಲ್ಪಟ್ಟಿತ್ತು