“ಪರಿಹಾರಸಾಧ್ಯ” ರೋಗಗಳ ಹಿಮ್ಮರಳಿಕೆ ಏಕೆ?
ಒಂದು ಮನೆಯು ಈಗತಾನೆ ಸಂಪೂರ್ಣವಾಗಿ ಸ್ವಚ್ಛಗೊಳಿಸಲ್ಪಟ್ಟಿದೆ. ಆದರೂ, ದಿನಗಳು, ವಾರಗಳು, ಮತ್ತು ತಿಂಗಳುಗಳು ಕಳೆದಂತೆ, ಧೂಳು ಮತ್ತು ಕೊಳೆಯು ಕ್ರಮೇಣ ಪುನಃ ಕಾಣಿಸಿಕೊಳ್ಳುತ್ತದೆ. ಆದುದರಿಂದ, ಕೇವಲ ಒಂದು ಸ್ವಚ್ಛಗೊಳಿಸುವಿಕೆಯು ಸಾಕಾಗಿರುವುದಿಲ್ಲ. ಸಂತತವಾದ ಊರ್ಜಿತದಲ್ಲಿಡುವಿಕೆ ಆವಶ್ಯಕ.
ಒಂದು ಕಾಲಕ್ಕೆ, ಆಧುನಿಕ ಔಷಧವು ಮಲೇರಿಯಾ, ಕ್ಷಯ, ಮತ್ತು ಸಿಫಿಲಿಸ್ ರೋಗಗಳನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸಿದಂತೆ ಭಾಸವಾಗುತ್ತಿತ್ತು. ಆದರೆ ಸಂಶೋಧನೆಯ ಮತ್ತು ಚಿಕಿತ್ಸೆಯ ಮೂಲಕ ಮಾಡಲ್ಪಡುವ ಅಗತ್ಯವಾದ ಊರ್ಜಿತದಲ್ಲಿಡುವಿಕೆಯು ಹೆಚ್ಚಾಗಿ ಅಲಕ್ಷ್ಯಮಾಡಲ್ಪಟ್ಟಿತು. ಈಗ “ಧೂಳು ಮತ್ತು ಕೊಳಕು” ಪುನಃ ಕಾಣಿಸಿಕೊಂಡಿದೆ. “ಭೌಗೋಲಿಕವಾಗಿ, ಮಲೇರಿಯಾ ಪರಿಸ್ಥಿತಿಯು ಗಂಭೀರವಾಗಿದೆ ಮತ್ತು ಇನ್ನೂ ಕೆಟ್ಟದ್ದಾಗುತ್ತಿದೆ,” ಎಂದು ಡಬ್ಲ್ಯೂ ಏಚ್ ಓ (ವಿಶ್ವ ಆರೋಗ್ಯ ಸಂಸ್ಥೆ)ಯ ಡಾ. ಹೀರೋಶಿ ನಾಕಾಜೀಮ ಹೇಳುತ್ತಾರೆ. “ಕ್ಷಯ ರೋಗವು ಪುನಃ ಹಿಂದಿರುಗಿದೆ ಮತ್ತು ಪ್ರತೀಕಾರದೊಂದಿಗೆ ಹಿಮ್ಮರಳಿದೆ ಎಂಬುದನ್ನು ಜನರು ಸ್ಪಷ್ಟವಾಗಿಗಿ ಗ್ರಹಿಸಬೇಕು,” ಎಂದು ಕ್ಷಯ ರೋಗದ ವಿಶೇಷ ತಜ್ಞರಾದ ಡಾ. ಲೀ ರೈಕ್ಮನ್ ಎಚ್ಚರಿಸುತ್ತಾರೆ. ಮತ್ತು “1949ರಿಂದ ಸಿಫಿಲಿಸ್ನ ಹೊಸ ರೋಗಿಗಳು ಅತ್ಯುನ್ನತ ಮಟ್ಟದಲ್ಲಿದ್ದಾರೆ,” ಎಂದು ದ ನ್ಯೂ ಯಾರ್ಕ್ ಟೈಮ್ಸ್ ಈ ದಶಮಾನದ ಆರಂಭದಲ್ಲಿ ಪ್ರಕಟಿಸಿತು.
ಮಲೇರಿಯಾ—ಬಹುಮಟ್ಟಿಗೆ ಲೋಕದ ಅರ್ಧ ಭಾಗವನ್ನು ಬೆದರಿಸುತ್ತಿದೆ
ಇಂದು, ಅದು ಸುಮಾರು ನಿರ್ಮೂಲನಗೊಳಿಸಲ್ಪಟ್ಟಿದೆ ಎಂದು ಘೋಷಿಸಲ್ಪಟ್ಟು ಬಹುತೇಕ 40 ವರ್ಷಗಳ ಅನಂತರ, ಮಲೇರಿಯಾ ರೋಗವು ಆಫ್ಘಾನಿಸ್ಥಾನ, ಇಂಡೋನೇಶಿಯಾ, ಕ್ಯಾಂಬೋಡಿಯ, ಚೈನಾ, ಥಾಯ್ಲೆಂಡ್, ಬ್ರೆಸಿಲ್, ಭಾರತ, ಶ್ರೀ ಲಂಕ, ವಿಯೆಟ್ನಾಮ್, ಮತ್ತು ಆಫ್ರಿಕದ ಅನೇಕ ಭಾಗಗಳಲ್ಲಿ ಒಂದು ಗಂಭೀರವಾದ ಬೆದರಿಕೆಯನ್ನೊಡ್ಡುತ್ತಿದೆ. “ಮಲೇರಿಯಾ ಸೋಂಕಿನಿಂದ ಪ್ರತಿ ನಿಮಿಷ ಇಬ್ಬರು ಮಕ್ಕಳು ಸಾಯುತ್ತಾರೆ,” ಎಂದು ಪ್ರೆಂಚ್ ವಾರ್ತಾ ಪತ್ರಿಕೆ ಲ ಫೀಗರೊ ವರದಿಸುತ್ತದೆ. ವಾರ್ಷಿಕ ಮರಣ ನಷ್ಟವು 20 ಲಕ್ಷ—ಏಯ್ಡ್ಸ್ ರೋಗದಿಂದ ಕೊಲ್ಲಲ್ಪಟ್ಟವರಿಗಿಂತಲೂ ತೀರ ಹೆಚ್ಚು—ವಾಗಿದೆ.
ಸುಮಾರು 27 ಕೋಟಿಗಳಷ್ಟು ವ್ಯಕ್ತಿಗಳು ಮಲೇರಿಯಾ ರೋಗದ ಪರೋಪಜೀವಿಯಿಂದ ಸೋಂಕಿತರಾಗಿದ್ದಾರೆ, ಆದರೆ 220 ಕೋಟಿ ಜನರು ಮಲೇರಿಯಾ ರೋಗವನ್ನು ಅಂಟಿಸಿಕೊಳ್ಳುವ ಗಂಡಾಂತರದಲ್ಲಿದ್ದಾರೆಂದು ಪರಿಗಣಿಸಲ್ಪಟ್ಟಿದ್ದಾರೆ. “ಈ ಹಿಂದೆ ಲೋಕದ ಜನಸಂಖ್ಯೆಯಲ್ಲಿ ಸುಮಾರು 90 ಪ್ರತಿಶತಕ್ಕೆ ನಿರ್ಮೂಲನಗೊಳಿಸಲ್ಪಟ್ಟ ಅಥವಾ ಬಹುತೇಕ ನಿಯಂತ್ರಿಸಲ್ಪಟ್ಟ ಮಲೇರಿಯಾ ರೋಗವು, ಇಂದು ನಮ್ಮಲ್ಲಿ 40 ಪ್ರತಿಶತಕ್ಕಿಂತಲೂ ಹೆಚ್ಚು ಮಂದಿಯನ್ನು ಬೆದರಿಸುತ್ತಿರುವುದು ಹೇಗೆ?” ಎಂದು ನ್ಯೂ ಸೈಂಟಿಸ್ಟ್ನಲಿ ಫಿಲೀಡ ಬ್ರೌನ್ ಕೇಳುತ್ತಾರೆ. ಕಾರಣಗಳೋ ಅನೇಕ.
ಅರಣ್ಯನಾಶ ಮತ್ತು ವಸಾಹತುಗಾರಿಕೆ. ಸೊಳ್ಳೆತುಂಬಿದ ಮಳೆಗಾಡು ಪ್ರದೇಶಗಳಲ್ಲಿ ಜನರ ವಸತಿಯು ಬ್ರೆಸಿಲ್ನಲ್ಲಿ ಮಲೇರಿಯಾದ ತಲೆದೋರುವಿಕೆಗೆ ಕಾರಣವಾಗಿದೆ. “ಸೊಳ್ಳೆಯ ಪರಿಸರದ ಆಕ್ರಮಣವನ್ನು ನಾವು ನಡೆಸಿದೆವು,” ಎಂದು ಸೋಂಕು ರಕ್ಷಾ ಶಾಸ್ತ್ರಜ್ಞ ಕ್ಲಾಡಿಯೊ ರಿಬೇರೊ ಹೇಳುತ್ತಾರೆ. ಅವರನ್ನುವುದು, ವಾಸಿಗರಿಗೆ “ಮಲೇರಿಯಾ ರೋಗದ ಅನುಭವವಾಗಲಿ ಮತ್ತು ರೋಗದ ಪ್ರತಿರೋಧಕ ಶಕ್ತಿಯಾಗಲಿ ಇರಲಿಲ್ಲ.”
ವಲಸೆಹೋಗುವಿಕೆ. ಉದ್ಯೋಗವನ್ನು ಹುಡುಕುವ ಆಶ್ರಿತರು ಮ್ಯಾನ್ಮಾರ್ನಿಂದ, ಥಾಯ್ಲೆಂಡ್ನ ರತ್ನದ ಗಣಿಗಳ ಚಿಕ್ಕ ಪಟ್ಟಣವಾದ ಬೋರೈನಲ್ಲಿ ಹಿಂಡುಗೂಡುತ್ತಾರೆ. “ಅವರ ಸಂತತವಾದ ಚಲನೆಯು ಮಲೇರಿಯಾ ರೋಗ ನಿಯಂತ್ರಣವನ್ನು ಅಸಾಧ್ಯವನ್ನಾಗಿ ಮಾಡುತ್ತದೆ,” ಎಂದು ನ್ಯೂಸ್ವೀಕ್ ವರದಿಸುತ್ತದೆ. ಪ್ರತಿ ತಿಂಗಳು, ಕೇವಲ ಗಣಿ ಕೆಲಸದವರಲ್ಲಿಯೆ ಸುಮಾರು 10,000 ಮಲೇರಿಯಾ ರೋಗಿಗಳು ದಾಖಲಿಸಲ್ಪಡುತ್ತಿದ್ದಾರೆ!
ಪ್ರವಾಸ. ಮಲೇರಿಯಾ ರೋಗದಿಂದ ತುಂಬಿರುವ ಪ್ರದೇಶಗಳನ್ನು ಸಂದರ್ಶಿಸುವ ಅನೇಕರು ಸೋಂಕಿತರಾಗಿ ಮನೆಗೆ ಹಿಂದಿರುಗುತ್ತಾರೆ. ಹೀಗೆ, 1991ರಲ್ಲಿ, ಯೂರೋಪಿನಲ್ಲಿ ಸುಮಾರು 10,000 ಮತ್ತು ಅಮೆರಿಕದಲ್ಲಿ 1,000 ರೋಗಿಗಳು ರೋಗ ನಿರೂಪಣೆ ಮಾಡಲ್ಪಟ್ಟರು. ವಾರ್ಷಿಕವಾಗಿ ನೂರಾರು ಪ್ರವಾಸಿಗರು ಮತ್ತು ಕಡಲಾಚೆಯ ಕೆಲಸಗಾರರು ಸೋಂಕಿತರಾಗಿ ಕೆನಡಕ್ಕೆ ಹಿಂತಿರುಗುತ್ತಾರೆ. ಒಂದು ದುರಂತ ಸನ್ನಿವೇಶದಲ್ಲಿ, ಕುಟುಂಬವು ಆಫ್ರಿಕದಿಂದ ಹಿಂತಿರುಗಿದ ಕೂಡಲೆ ಇಬ್ಬರು ಮಕ್ಕಳಲ್ಲಿ ಜ್ವರವು ಕಾಣಿಸಿಕೊಂಡಿತು. ವೈದ್ಯರು ಅದು ಮಲೇರಿಯವೆಂದು ಸಂದೇಹಿಸಲಿಲ್ಲ. “ಹೆತ್ತವರು ಅವರನ್ನು ಆಸ್ಪತ್ರೆಗೆ ಕೊಂಡೊಯ್ದಾಗ, ಹೊತ್ತು ಮೀರಿಹೋಗಿತ್ತು,” ಎಂದು ಟೊರಾಂಟೊ ಗ್ಲೋಬ್ ಆ್ಯಂಡ್ ಮೇಯ್ಲ್ ವರದಿಸುತ್ತದೆ. “ಅವರು ಕೆಲವು ತಾಸುಗಳ ಅಂತರದೊಳಗೆ ಮರಣಪಟ್ಟರು.”
ಮಲೇರಿಯಾ ಔಷಧ ನಿರೋಧಕ ರೂಪಗಳು. ಮಲೇರಿಯಾದ ಔಷಧ ನಿರೋಧಕ ರೂಪಗಳು, ಆಫ್ರಿಕದ ಇಡೀ ಉಷ್ಣವಲಯಕ್ಕೆ ಹಬ್ಬಿದೆಯೆಂದು ಡಬ್ಲ್ಯೂ ಏಚ್ ಓ ವರದಿಸುತ್ತದೆ. ಆಗ್ನೇಯ ಏಷಿಯದಲ್ಲಿ, “ಔಷಧ ನಿರೋಧಶಕ್ತಿಯು ಎಷ್ಟೊಂದು ತ್ವರಿತವಾಗಿ ಪ್ರಗತಿಹೊಂದುತ್ತಿದೆಯೆಂದರೆ ಕೆಲವು ರೂಪಗಳಿಗೆ ಅತಿ ಬೇಗನೆ ಚಿಕಿತ್ಸೆ ನಡಿಸಲು ಅಸಾಧ್ಯವಾಗಬಹುದು,” ಎಂದು ನ್ಯೂಸ್ವೀಕ್ ಹೇಳುತ್ತದೆ.
ಸಂಪನ್ಮೂಲಗಳ ಕೊರತೆ. ಕೆಲವು ಸ್ಥಳಗಳಲ್ಲಿ, ರಕ್ತ ಲೇಪನವೆಂದು ಕರೆಯಲ್ಪಡುವ ಒಂದು ಸರಳ ಪರೀಕ್ಷೆಯನ್ನು ನಿರ್ವಹಿಸಲಿಕ್ಕೆ ಬೇಕಾದ ಉಪಕರಣಗಳಿರುವ ಚಿಕಿತ್ಸಾಲಯಗಳು ಇರುವುದಿಲ್ಲ. ಬೇರೆ ಸ್ಥಳಗಳಲ್ಲಿ ಆರೋಗ್ಯ ಆಯವ್ಯಯದ ಅಧಿಕ ಭಾಗವು ಇತರ ತುರ್ತುಚಿಕಿತ್ಸೆಗಳಿಗೆ ಬೇಕಾಗುತ್ತದೆ, ಫಲಿತಾಂಶವಾಗಿ ಕೀಟನಾಶಕಗಳ ಮತ್ತು ಔಷಧಗಳ ಕೊರತೆಯುಂಟಾಗುತ್ತದೆ. ಕೆಲವೊಮ್ಮೆ ಇದು ಲಾಭದ ಕುರಿತಾದ ಪ್ರಶ್ನೆಯಾಗಿದೆ. “ಉಷ್ಣವಲಯದ ರೋಗಗಳಲ್ಲಿ ಲಾಭವಿಲ್ಲ,” “ಯಾಕಂದರೆ, ಸಾಮಾನ್ಯವಾಗಿ, ರೋಗದಿಂದ ಬಾಧಿತರಾದವರಿಗೆ ಔಷಧವನ್ನು ಕೊಳ್ಳಲು ಸಾಧ್ಯವಿರುವುದಿಲ್ಲ,” ಎಂದು ನ್ಯೂ ಸೈಎನ್ಟಿಸ್ಟ್ ಒಪ್ಪಿಕೊಳ್ಳುತ್ತದೆ.
ಹೊಸ ತಂತ್ರಗಳುಳ್ಳ ಪುರಾತನ ಕೊಲೆಗಾರ—ಕ್ಷಯ
ಇಸವಿ 1947ರಲ್ಲಿ, ಕ್ಷಯ ರೋಗವನ್ನು ಹತೋಟಿಯಲ್ಲಿಡುವಂತಹ ಭರವಸೆಕೊಟ್ಟ ಔಷಧವಾದ ಸ್ಟ್ರೆಪ್ಟೋಮೈಸಿನ್, ಪರಿಚಯಿಸಲ್ಪಟ್ಟಿತು. ಆ ಸಮಯದಲ್ಲಿ, ಕ್ಷಯ ರೋಗವು ಶಾಶ್ವತವಾಗಿ ತೆಗೆದುಹಾಕಲ್ಪಡುವುದೆಂದು ಅಭಿಪ್ರಯಿಸಲಾಗಿತ್ತು. ಆದರೆ ಪರಿಸ್ಥಿತಿಯು ಕೆಟ್ಟದ್ದಾಗಿದೆ ಎಂಬ ಒಂದು ಹಠಾತ್ತಾದ ಗ್ರಹಿಕೆಯು ಕೆಲವು ದೇಶಗಳಿಗೆ ಬಂದಿದೆ: ಇತ್ತೀಚಿಗಿನ ವರ್ಷಗಳಲ್ಲಿ ಕ್ಷಯ ರೋಗದ ಪ್ರಮಾಣಗಳು ಗಮನಾರ್ಹವಾಗಿ ಅಭಿವೃದ್ಧಿಯಾಗಿವೆ. “ಆಫ್ರಿಕದ ಸಹಾರ ಸಮೀಪದಲ್ಲಿರುವ ಅತ್ಯಂತ ಬಡ ದೇಶಗಳಲ್ಲಿರುವುದಕ್ಕಿಂತಲೂ, ಅಮೆರಿಕದಲ್ಲಿ ಬಡತನವು ಸಾಮಾನ್ಯವಾಗಿರುವ ಕ್ಷೇತ್ರಗಳಲ್ಲಿ, ಕ್ಷಯ ರೋಗದ ಪ್ರಮಾಣಗಳು ಹೆಚ್ಚು ಕೆಟ್ಟದ್ದಾಗಿವೆ,” ಎಂದು ದಿ ವಾಷಿಂಗ್ಟನ್ ಪೋಸ್ಟ್ ವರದಿಮಾಡುತ್ತದೆ. ಒಂದು ಪತ್ರಿಕೆಯು ಕರೆಯುವಂತಹ “ಕ್ಷಯ ರೋಗದ ಒಂದು ಪಾಶವೀಯ ಪುನರ್ಜಾಗೃತಿ” ಕೋಟ್ಡೀವಾರ್ನಲ್ಲಿದೆ.
“ಅದನ್ನು ಹೇಗೆ ಗುಣಪಡಿಸಬೇಕೆಂಬುದು ನಮಗೆ ತಿಳಿದಿತ್ತು. ನಾವು ಅದನ್ನು ನಮ್ಮ ಹತೋಟಿಯಲ್ಲಿಟ್ಟಿದ್ದೆವು. ಆದರೆ ಕ್ಷಯ ರೋಗವನ್ನು ನಿರ್ಮೂಲಮಾಡುವ ಕೆಲಸವನ್ನು ಪೂರ್ಣಗೊಳಿಸುವುದರಲ್ಲಿ ಯಾವುದೋ ರೀತಿಯಲ್ಲಿ ನಾವು ಸೋತುಹೋದೆವು,” ಎಂದು ಡಾ. ಮೈಕಲ್ ಐಸ್ಮನ್ ಪ್ರಲಾಪಿಸುತ್ತಾರೆ. ಕ್ಷಯ ರೋಗದ ವಿರುದ್ಧವಾದ ಹೋರಾಟಕ್ಕೆ ಯಾವುದು ತಡೆಯನ್ನುಂಟುಮಾಡಿತು?
ಏಯ್ಡ್ಸ್. ಇದು ರೋಗದ ಸೋಂಕಿನ ವಿರುದ್ಧ ಒಬ್ಬ ವ್ಯಕ್ತಿಯನ್ನು ಅರಕ್ಷಿತನನ್ನಾಗಿ ಬಿಡುವುದರಿಂದ, ಏಯ್ಡ್ಸ್ ಕ್ಷಯ ರೋಗದ ಪುನರುಜ್ಜೀವನಕ್ಕೆ ಒಂದು ಮುಖ್ಯ ಕಾರಣವೆಂದು ಪರಿಗಣಿಸಲಾಗಿದೆ. “ಪ್ರಥಮವಾಗಿ ಬೇರೊಂದು ಕಾರಣದಿಂದ ಅವರು ಸಾಯದಿದ್ದರೆ, ಕ್ಷಯ ರೋಗದ ರೋಗಾಣುವನ್ನು ಹೊಂದಿರುವ ಏಯ್ಡ್ಸ್ ರೋಗಿಗಳಲ್ಲಿ 100 ಪ್ರತಿಶತ ಜನರು ವಾಸ್ತವವಾಗಿ ಕ್ಷಯ ರೋಗವನ್ನು ವರ್ಧಿಸಿಕೊಳ್ಳುವರೆಂದು,” ಡಾ. ಐಸ್ಮನ್ ಹೇಳುತ್ತಾರೆ.
ಪರಿಸರ. ಸೆರೆಮನೆಗಳು, ನರ್ಸಿಂಗ್ ಹೋಮ್ಗಳು, ನಿರಾಶ್ರಿತರಿಗಾಗಿರುವ ನಿವಾಸಗಳು, ಆಸ್ಪತ್ರೆಗಳು, ಮತ್ತು ಇತರ ಸಂಸ್ಥೆಗಳು ಕ್ಷಯ ರೋಗದ ಬೆಳವಣಿಗೆಗೆ ಅನುಕೂಲಕರವಾದ ಸ್ಥಳಗಳಾಗಿ ಪರಿಣಮಿಸಬಲ್ಲವು. ಒಂದು ಆಸ್ಪತ್ರೆಯಲ್ಲಿ ವಾಯುಕಲಿಲ ಚಿಕಿತ್ಸೆಯೊಂದು, ನ್ಯುಮೋನಿಯಾ ರೋಗಿಯ ಕೆಮ್ಮನ್ನು ಹೆಚ್ಚಿಸಿತು ಮತ್ತು ಇದು ಆಸ್ಪತ್ರೆಯ ಸಿಬ್ಬಂದಿಗಳ ನಡುವೆ ಒಂದು ಕಾರ್ಯತಃ ಸಾಂಕ್ರಾಮಿಕ ಕ್ಷಯ ರೋಗವನ್ನುಂಟುಮಾಡಿತು ಎಂದು ಡಾ. ಮಾರ್ವಿನ್ ಪಾಮರ್ಯಾಂಟ್ಸ್ ಹೇಳುತ್ತಾರೆ.
ಸಂಪನ್ಮೂಲಗಳ ಕೊರತೆ. ಕ್ಷಯ ರೋಗವು ಹತೋಟಿಯಲ್ಲಿದೆಯೊ ಎಂಬಂತೆ ಕಂಡುಬಂದ ಕೂಡಲೆ, ಅದರ ಉಪಯೋಗಕ್ಕಾಗಿ ದೊರೆಯುತ್ತಿದ್ದ ಹಣವು ಕಡಮೆಯಾಯಿತು, ಮತ್ತು ಸಾರ್ವಜನಿಕರ ಗಮನ ಬೇರೆಕಡೆ ತಿರುಗಿತು. “ಕ್ಷಯ ರೋಗವನ್ನು ನಿರ್ಮೂಲನಗೊಳಿಸುವುದಕ್ಕೆ ಬದಲಾಗಿ, ಕ್ಷಯ ರೋಗವನ್ನು ಚಿಕಿತ್ಸಿಸಲು, ನಿರ್ವಹಿಸಲು, ಮತ್ತು ನಿರ್ಮೂಲನಗೊಳಿಸಲಿಕ್ಕಾಗಿ ಮಾಡಲ್ಪಟ್ಟ ಕಾರ್ಯಕ್ರಮಗಳನ್ನೇ ವರ್ಜಿಸಿದೆವು,” ಎಂದು ಡಾ. ಲೀ ರೈಕ್ಮನ್ ಹೇಳುತ್ತಾರೆ. ಜೀವರಸಾಯನ ವಿಜ್ಞಾನಿ ಪ್ಯಾಟ್ರಿಕ್ ಬ್ರೆನ್ನನ್ ಹೇಳುವುದು: “1960ಗಳ ಆರಂಭದಲ್ಲಿ, ಕ್ಷಯ ರೋಗದ ನಿರೋಧಕ ಔಷಧಿಯ ಮೇಲೆ ನಾನು ತೀವ್ರಾಭಿಲಾಷೆಯಿಂದ ಕೆಲಸಮಾಡಿದೆ, ಆದರೆ ಕ್ಷಯ ರೋಗವು ವಾಸಿಮಾಡಲ್ಪಟ್ಟಿದೆಯೆಂದು ನಾನು ಭಾವಿಸಿದುದರಿಂದ ಕ್ಷಯ ರೋಗದ ಸಂಶೋಧನಾ ಕೆಲಸದಿಂದ ಹೊರಬರಲು ನಾನು ನಿರ್ಧರಿಸಿದೆ.” ಹೀಗೆ, ವೈದ್ಯರುಗಳು ನಿರೀಕ್ಷಿಸಿರದ ಅಥವಾ ಅದಕ್ಕಾಗಿ ಸನ್ನದ್ಧರಾಗಿಲ್ಲದ ಒಂದು ಸಮಯದಲ್ಲಿ ಕ್ಷಯ ರೋಗವು ಹಿಮ್ಮರಳಿತ್ತು. “ಒಂದು ವಾರದಲ್ಲಿ [1989ರ ಅಂತ್ಯದಲ್ಲಿ], ಪುನಃ ನಾನೆಂದಿಗೂ ನೋಡುವುದಿಲ್ಲವೆಂದು ನನ್ನ ವೈದ್ಯಕೀಯ ಶಾಲೆಯ ಉಪಾಧ್ಯಾಯಿನಿ ಹೇಳಿದಂತಹ, ಆ ರೋಗದ ನಾಲ್ಕು ಹೊಸ ರೋಗಿಗಳನ್ನು ನಾನು ನೋಡಿದೆ,” ಎಂದು ಒಬ್ಬ ವೈದ್ಯೆ ಹೇಳಿದಳು.
ಸಿಫಿಲಿಸ್—ಒಂದು ಮಾರಕ ಹಿಮ್ಮರಳಿಕೆ
ಪೆನಿಸಿಲಿನ್ನ ಪ್ರಭಾವಕಾರಿ ಶಕ್ತಿಯ ಹೊರತೂ, ಆಫ್ರಿಕದಲ್ಲಿ ಸಿಫಿಲಿಸ್ ಇನ್ನೂ ವ್ಯಾಪಕವಾಗಿ ಹಬ್ಬುತ್ತಾ ಇದೆ. ಅಮೆರಿಕದಲ್ಲಿ, 40 ವರ್ಷಗಳಲ್ಲಿ ಅದರ ಅತ್ಯಂತ ಬಲವಾದ ಹಿಮ್ಮರಳಿಕೆಯನ್ನು ಅದು ಮಾಡುತ್ತಿದೆ. ದ ನ್ಯೂ ಯಾರ್ಕ್ ಟೈಮ್ಸ್ಗನುಸಾರ ಸಿಫಿಲಿಸ್ ಇಂದು “ಸಿಫಿಲಿಸ್ನ ಒಬ್ಬ ರೋಗಿಯನ್ನು, ಎಂದಾದರೂ ಇದ್ದಿದ್ದರೆ, ಅಪರೂಪವಾಗಿ ನೋಡಿರುವ ವೈದ್ಯರುಗಳ ಒಂದು ಸಂತತಿಯನ್ನೇ ಮೋಸಗೊಳಿಸುತ್ತಿದೆ.” ಇದು ಯಾಕೆ ಪುನರುಜ್ಜೀವಿಸಿದೆ?
ಕ್ರ್ಯಾಕ್. ಒಬ್ಬ ವೈದ್ಯನು “ಕೊಕೇನ್ ಉಪಯೋಗದ ಮ್ಯಾರತಾನ್ ಪಾನಕೇಳಿಗಳು ಮತ್ತು ಕಾಮ” ಎಂದು ಕರೆಯುವಂಥದನ್ನು ಕ್ರ್ಯಾಕ್ ಚಟವು ಪ್ರಚೋದಿಸಿದೆ. ತಮ್ಮ ಚಟವನ್ನು ಬೆಂಬಲಿಸಲಿಕ್ಕಾಗಿ ಪುರುಷರು ಆಗಾಗ್ಗೆ ಕದಿಯುವಾಗ, ಸ್ತ್ರೀಯರು ಅಮಲೌಷಧಗಳಿಗಾಗಿ ದೇಹವಿಕ್ರಯ ಮಾಡಿಕೊಳ್ಳುವ ಅಧಿಕ ಸಂಭವನೀಯತೆಗಳಿವೆ. “ಕ್ರ್ಯಾಕ್ ವಿತರಣಾ ಗೃಹಗಳಲ್ಲಿ, ಮೈಥುನವಿದೆ ಮತ್ತು ಅನೇಕ ಸಹಭಾಗಿಗಳಿದ್ದಾರೆ. ಆ ಪರಿಸರಗಳಲ್ಲಿ ಸಾಮಾನ್ಯವಾಗಿ ಸಂಭವಿಸಬಹುದಾದ ಯಾವುದೇ ಅಂಟುರೋಗವು ಒಂದು ರವಾನಿತ ರೋಗವಾಗಿ ಪರಿಣಮಿಸುತ್ತದೆ,” ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರಗಳ ಡಾ. ವಿಲರ್ಡ್ಲ್ ಕೇಟ್ಸ್ ಹೇಳುತ್ತಾರೆ.
ಸಂರಕ್ಷಣೆಯ ಕೊರತೆ. “‘ಸುರಕ್ಷಿತ ಸಂಭೋಗ’ದ ಕಾರ್ಯಾಚರಣೆಯ ಹೊರತೂ, ತಮ್ಮನ್ನು ರೋಗದಿಂದ ಸಂರಕ್ಷಿಸಿಕೊಳ್ಳಲು ಶಿಶ್ನಕವಚಗಳನ್ನು ಉಪಯೋಗಿಸುವುದರ ಕುರಿತು ಹದಿವಯಸ್ಕರು ಇನ್ನೂ ವಿಷಣ್ಣತೆ ತೋರುವವರಾಗಿದ್ದಾರೆ,” ಎಂದು ಡಿಸ್ಕವರ್ ವರದಿಸುತ್ತದೆ. ಲೈಂಗಿಕ ಸಹಭಾಗಿಗಳೊಂದಿಗಿರುವವರಲ್ಲಿ ಕೇವಲ 12.6 ಪ್ರತಿಶತ ಜನರು ಶಿಶ್ನಕವಚಗಳನ್ನು ಸಮಂಜಸವಾಗಿ ಉಪಯೋಗಿಸಿದರೆಂದು ಅಮೆರಿಕದಲ್ಲಿ ಒಂದು ಅಧ್ಯಯನವು ಪ್ರಕಟಪಡಿಸಿತು.
ಮಿತವಾದ ಸಂಪನ್ಮೂಲಗಳು. ದ ನ್ಯೂ ಯಾರ್ಕ್ ಟೈಮ್ಸ್ ಹೇಳಿಕೆ ನೀಡುವುದು: “ಹೆಚ್ಚಿನ ಸಿಫಿಲಿಸ್ ಮತ್ತು ಇತರ ರತಿ ರವಾನಿತ ರೋಗಗಳು ರೋಗ ನಿರ್ಣಯ ಮಾಡಲ್ಪಡುವಂತಹ ಸಾರ್ವಜನಿಕ ಚಿಕಿತ್ಸಾಲಯಗಳು ಅಂದಾಜುಪಟ್ಟಿಯ ಕಡಿತದಿಂದಾಗಿ ಆರ್ಥಿಕ ತಡೆಗೊಳಗಾಗಿವೆ.” ಇನ್ನೂ ಅಧಿಕವಾಗಿ, ಪರೀಕ್ಷಾ ವಿಧಾನಗಳು ಯಾವಾಗಲೂ ನಿಷ್ಕೃಷ್ಟವಾಗಿರುವುದಿಲ್ಲ. ಆಸ್ಪತ್ರೆಯೊಂದರಲ್ಲಿ ಅನೇಕ ಸ್ತ್ರೀಯರು ಸಿಫಿಲಿಸ್ನಿಂದ ಸೋಂಕಿತವಾದ ಶಿಶುಗಳಿಗೆ ಜನ್ಮ ನೀಡಿರುವುದಾದರೂ, ಸಿಫಿಲಿಸ್ನ ಕುರಿತಾದ ಯಾವುದೇ ಮಾಹಿತಿಯನ್ನು, ತಾಯಿಯ ಹಿಂದಿನ ರಕ್ತ ಪರೀಕ್ಷೆಗಳು ಕೊಡಲಿಲ್ಲ.
ಅಂತ್ಯವು ಗೋಚರಿಸುತ್ತದೆಯೆ?
ರೋಗಗಳ ವಿರುದ್ಧವಾದ ಮಾನವನ ಹೋರಾಟವು ದೀರ್ಘವಾದದ್ದೂ ಮತ್ತು ಆಶಾಭಂಗದ್ದೂ ಆಗಿದೆ. ಆಗಿಂದಾಗ್ಗೆ ಕೆಲವು ವ್ಯಾಧಿಗಳನ್ನು ಜಯಿಸುವುದರಲ್ಲಿ ಆಗುವ ಸಾಫಲ್ಯವು ಇತರ ರೋಗಗಳನ್ನು ಜಯಿಸುವುದರಲ್ಲಿ ಅಸಫಲವಾಗುವ ಮೂಲಕ ಪ್ರತಿಯೋಜಿಸಲ್ಪಡುತ್ತದೆ. ಮಾನವನು ಎಂದಿಗೂ ಜಯಿಸಸಾಧ್ಯವಿರದ ಒಂದು ನಿರಂತರ ದುರ್ಗತಿಗೆ ತಳ್ಳಲ್ಪಟ್ಟಿದ್ದಾನೊ? ರೋಗರಹಿತ ಲೋಕವೊಂದು ಎಂದಾದರೂ ಅಸ್ತಿತ್ವದಲ್ಲಿರುವುದೊ? (g93 12/8)
[ಪುಟ 7 ರಲ್ಲಿರುವ ಚೌಕ/ಚಿತ್ರಗಳು]
ಸಿಫಿಲಿಸ್ ರೋಗದ ಪರಿಣಾಮಗಳು
ಸಿಫಿಲಿಸ್ ರೋಗವು, ಒಂದು ಬಿರಡೆ ತಿರುಪಿನಂತಹ ಆಕಾರವುಳ್ಳ ಸುರುಗೂದಲಿಯಾದ, ಟ್ರಿಪೋನೆಮಾ ಪ್ಯಾಲಿಡಮ್ನಿಂದ ಉಂಟಾಗುತ್ತದೆ ಮತ್ತು ಅದು ಸಾಮಾನ್ಯವಾಗಿ ಜನನೇಂದ್ರಿಯಗಳ ಮೂಲಕ ಅಂಟುವ ರೋಗವಾಗಿದೆ. ಅನಂತರ ಈ ಸುರುಗೂದಲಿಯು ರಕ್ತ ಪ್ರವಾಹವನ್ನು ಪ್ರವೇಶಿಸುತ್ತದೆ ಮತ್ತು ಇಡೀ ದೇಹಕ್ಕೆ ಹರಡುತ್ತದೆ.
ಸೋಂಕು ತಗಲಿದ ಅನೇಕ ವಾರಗಳ ಅನಂತರ, ಮೇಹವ್ರಣವೆಂಬ ಒಂದು ಹುಣ್ಣು ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಜನನೇಂದ್ರಿಯಗಳ ಮೇಲೆ ಉಂಟಾಗುತದ್ತಾದರೂ, ಅದಕ್ಕೆ ಬದಲಾಗಿ ತುಟಿಗಳು, ಮೆಂಡಿಕೆ, ಯಾ ಬೆರಳುಗಳ ಮೇಲೂ ಕಂಡುಬರಬಹುದು. ಕ್ರಮೇಣ ಆ ಮೇಹವ್ರಣವು ಗಾಯದ ಒಂದು ಕಲೆಯನ್ನೂ ಉಳಿಸದೆ ವಾಸಿಯಾಗುತ್ತದೆ. ಆದರೆ ಈ ದ್ವಿತೀಯ ರೋಗಲಕ್ಷಣಗಳು ಕಾಣಿಸಿಕೊಳ್ಳುವ ವರೆಗೆ ರೋಗಾಣುಗಳು ದೇಹದಲ್ಲೆಲ್ಲಾ ಹಬ್ಬುವುದನ್ನು ಮುಂದರಿಸುತ್ತವೆ: ಚರ್ಮ ಗುಳ್ಳೆ, ನೋಯುವ ಗಂಟಲು, ಮೈಕೈ ನೋವು, ಕೂದಲು ಉದುರುವಿಕೆ, ವಿಕಾರತೆ, ಮತ್ತು ಕಣ್ಣುಗಳ ಉರಿಯೂತ.
ಚಿಕಿತ್ಸೆ ಮಾಡದಿದ್ದರೆ, ಸಿಫಿಲಿಸ್ ರೋಗವು ಜೀವಮಾನವಿಡೀ ಉಳಿಯಬಹುದಾದ ಒಂದು ಜಡ ಸ್ಥಿತಿಯಲ್ಲಿ ನೆಲೆಗೊಳ್ಳುತ್ತದೆ. ಈ ಹಂತದಲ್ಲಿ ಸ್ತ್ರೀಯೊಬ್ಬಳು ಗರ್ಭವತಿಯಾಗುವುದಾದರೆ, ಅವಳ ಮಗು ಪ್ರಾಯಶಃ ಕುರುಡಾಗಿ, ವಿಕೃತವಾಗಿ, ಅಥವಾ ಸತ್ತದ್ದಾಗಿ ಜನಿಸುತ್ತದೆ.
ದಶಕಗಳ ಬಳಿಕ ಕೆಲವರು, ಸುರುಗೂದಲಿಯು ಹೃದಯ, ಮಿದುಳು, ಮಿದುಳು ಬಳ್ಳಿ, ಅಥವಾ ದೇಹದ ಇತರ ಭಾಗಗಳಲ್ಲಿ ನೆಲೆಗೊಳ್ಳಬಹುದಾದ, ಸಿಫಿಲಿಸ್ ರೋಗದ ಮುಂದಿನ ಹಂತಕ್ಕೆ ತಲಪುತ್ತಾರೆ. ಸುರುಗೂದಲಿಯು ಮಿದುಳಿನಲ್ಲಿ ನೆಲೆಸಿರುವುದಾದರೆ, ಸೆಟೆತಗಳು, ಸಾಮಾನ್ಯ ಪಾರ್ಶ್ವವಾಯು, ಮತ್ತು ಮತಿವಿಕಲತೆಯು ಕೂಡ ಫಲಿಸಬಹುದು. ಕ್ರಮೇಣ, ಆ ರೋಗವು ಮಾರಕವಾಗಿ ಪರಿಣಮಿಸಬಹುದು.
[ಕೃಪೆ]
Biophoto Associates/Science Source/Photo Researchers
[ಪುಟ 7 ರಲ್ಲಿರುವ ಚೌಕ/ಚಿತ್ರಗಳು]
“ಒಂದು ಮಹತ್ತಾದ ಅನುಕರಣ ನಿಪುಣ ರೋಗ”
ಹೀಗೆಂದು ಡಾ. ಲೀ ರೈಕ್ಮನ್ ಕ್ಷಯ ರೋಗವನ್ನು ಕರೆಯುತ್ತಾರೆ. “ನೆಗಡಿ, ಶ್ವಾಸನಾಳಗಳ ಉರಿಯೂತ, ಫ್ಲೂನಂತಹ ರೋಗಲಕ್ಷಣಗಳಂತೆ ಅದು ತೋರಬಹುದು,” ಎಂದು ಅವರು ಹೇಳುತ್ತಾರೆ. “ಆದುದರಿಂದ ವೈದ್ಯನೊಬ್ಬನು ಕ್ಷಯ ರೋಗದ ಕುರಿತು ಯೋಚಿಸದ ಹೊರತು, ಅವನು ಅಥವಾ ಅವಳು ರೋಗ ನಿರ್ಣಯಿಸುವಿಕೆಯಲ್ಲಿ ತಪ್ಪಬಹುದು.” ಈ ರೋಗವನ್ನು ದೃಢಪಡಿಸಲು ಎದೆಗೂಡಿನ ಎಕ್ಸ್ ರೇ ಅಗತ್ಯವಾಗಿದೆ.
ಕ್ಷಯ ರೋಗವು ವ್ಯಕ್ತಿಯಿಂದ ವ್ಯಕ್ತಿಗೆ ಗಾಳಿಯ ಮೂಲಕ ಹರಡಿಸಲ್ಪಡುತ್ತದೆ. ಶ್ವಾಸಕೋಶಗಳನ್ನು ಪ್ರವೇಶಿಸಲು ಸಾಕಷ್ಟು ಸಣ್ಣದಾಗಿರುವ ಅಣುಗಳನ್ನು ಒಂದು ಕೆಮ್ಮು ಸೃಷ್ಟಿಸಬಲ್ಲದು. ಆದರೂ, ಸಾಮಾನ್ಯವಾಗಿ ದೇಹದ ರಕ್ಷಣಾ ವ್ಯವಸ್ಥೆಗಳು ರೋಗವು ಹರಡದಂತೆ ತಡೆಯಲು ಸಾಕಷ್ಟು ಬಲವಾಗಿವೆ. “ತಮ್ಮ ಎದೆಗೂಡುಗಳಲ್ಲಿ ಯಾರಲ್ಲಿ ಸಾಕಷ್ಟು ಬಸಿಲಸ್ ಏಕಾಣುಜೀವಿಗಳು—ನಿಷ್ಕ್ರಿಯ ರೋಗವಾಹಕದಲ್ಲಿರುವ 10,000ಕ್ಕೆ ಬದಲಾಗಿ 10 ಕೋಟಿ ಏಕಾಣುಜೀವಿಗಳು—ಇವೆಯೋ ಅವರು ರೋಗವನ್ನು ಹರಡಬಲ್ಲರು,” ಎಂದು ಡಾ. ರೈಕ್ಮನ್ ವಿವರಿಸುತ್ತಾರೆ.
[ಕೃಪೆ]
SPL/Photo Researchers
[ಪುಟ 7 ರಲ್ಲಿರುವ ಚೌಕ/ಚಿತ್ರಗಳು]
ಭೌಗೋಲಿಕವಾಗಿ ಕಾವೇರುವಿಕೆ ಮತ್ತು ಮಲೇರಿಯಾ
ಸೋಂಕು ರೋಗವನ್ನು ಹರಡುವ ಅನಾಫಿಲೀಸ್ ಗಾಂಬಿಯೆ ಎಂಬ ಸೊಳ್ಳೆಯು ಇಲ್ಲದೆ ಮಲೇರಿಯಾ ರೋಗವು ಆರಂಭವಾಗುವುದಿಲ್ಲ. “ಕೀಟದ ಸಂಖ್ಯೆಯನ್ನು ಬದಲಾಯಿಸಿರಿ ಮತ್ತು ರೋಗದ ವ್ಯಾಪ್ತಿಯನ್ನೇ ನೀವು ಆಗ ಬದಲಾಯಿಸುವಿರಿ,” ಎಂದು ದ ಇಕಾನೊಮಿಸ್ಟ್ ಗಮನಿಸುತ್ತದೆ.
ಉಷ್ಣತೆಯಲ್ಲಿ ಸ್ವಲ್ಪ ವ್ಯತ್ಯಾಸವು ಕೀಟ ಸಂಖ್ಯೆಯ ಮೇಲೆ ವಿಶೇಷವಾಗಿ ಪರಿಣಾಮವನ್ನುಂಟುಮಾಡಸಾಧ್ಯವಿದೆಯೆಂದು ಪ್ರಯೋಗಶಾಲೆಯ ಪ್ರಯೋಗಗಳು ತೋರಿಸಿವೆ. ಹೀಗೆ, ಭೌಗೋಲಿಕ ಕಾವೇರುವಿಕೆಯು ಮಲೇರಿಯಾ ರೋಗದ ವ್ಯಾಪ್ತಿಯ ಮೇಲೆ ಮಹತ್ತಾದ ಸಂಘಟನೆಯನ್ನು ಮಾಡಬಹುದೆಂದು ಕೆಲವು ಪರಿಣತರು ತೀರ್ಮಾನಿಸುತ್ತಾರೆ. “ಆದ್ಯಂತವಾಗಿ ಭೂಮಿಯ ಉಷ್ಣತೆಯು ಒಂದು ಅಥವಾ ಎರಡು ಡಿಗ್ರಿ ಸೆಲ್ಸಿಯಸ್ನಷ್ಟು ಸಹ ಹೆಚ್ಚಾಗುವುದಾದರೆ, ಮಲೇರಿಯಾ ರೋಗವು ಈಗ ಅಸ್ತಿತ್ವದಲ್ಲಿರುವುದಕ್ಕಿಂತಲೂ ಹೆಚ್ಚು ವ್ಯಾಪಕವಾಗಿ ಹರಡಲ್ಪಡುವಂತೆ, ಅದು ಸೊಳ್ಳೆಗಳ ಸಂತಾನ ವರ್ಧಕ ಕ್ಷೇತ್ರಗಳನ್ನು ಹೆಚ್ಚಿಸಬಲ್ಲದು,” ಎಂದು ಡಾ. ವಾಲೆಸ್ ಪೀಟರ್ಸ್ ಹೇಳುತ್ತಾರೆ.
[ಕೃಪೆ]
Dr. Tony Brain/SPL/Photo Researchers
[ಪುಟ 6 ರಲ್ಲಿರುವ ಚಿತ್ರ]
ಮನೆಯಿಲ್ಲದವರಿಗಾಗಿರುವ ಆಶ್ರಯಾಲಯಗಳು ಕ್ಷಯ ರೋಗವನ್ನು ಉತ್ಪಾದಿಸುವ ಸ್ಥಳಗಳಾಗಿ ಪರಿಣಮಿಸಬಲ್ಲವು
[ಕೃಪೆ]
Melchior DiGiacomo