ಬಾಳೆಹಣ್ಣು ಒಂದು ಅಸಾಧಾರಣವಾದ ಹಣ್ಣು
ಹಾಂಡ್ಯುರಸ್ನಲ್ಲಿನ ಎಚ್ಚರ! ಸುದ್ದಿಗಾರರಿಂದ
ಅದನ್ನು “ಒಂದು ಅಸಾಧಾರಣ ಹಣ್ಣಿನ ಮರ”ವೆಂದು ಗ್ರೀಕರು ಮತ್ತು ಅರಬ್ಬಿಗಳು ಕರೆದರು. ಸಾ.ಶ.ಪೂ. 327ರಲ್ಲಿ, ಮಹಾ ಆ್ಯಲೆಗ್ಜಾಂಡರ್ನ ಸೇನೆಗಳ ಮೂಲಕ ಅದನ್ನು ಭಾರತದಲ್ಲಿ ಕಂಡುಹಿಡಿಯಲಾಯಿತು. ಒಂದು ಹಳೆಯ ಕಥೆಗನುಸಾರ, ಭಾರತದ ಋಷಿಗಳು ಅದರ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಂಡು ಅದರ ಹಣ್ಣನ್ನು ಸೇವಿಸಿದರು. ಆದುದರಿಂದ ಅದನ್ನು “ಜ್ಞಾನಿಗಳ ಹಣ್ಣು” ಎಂದು ಕರೆಯಲಾಗಿದೆ. ಅದು ಯಾವುದು? ಅದು ಬಾಳೆಹಣ್ಣು!
ಆದರೆ ಬಾಳೆಹಣ್ಣು ಏಷಿಯದಿಂದ ಕ್ಯಾರಿಬೀಅನ್ ದ್ವೀಪಗಳಿಗೆ ಹೋದದ್ದು ಹೇಗೆ? ಒಳ್ಳೆಯದು, ಆರಂಭದ ಅರಬ್ಬಿ ವ್ಯಾಪಾರಿಗಳು ಬಾಳೆಗಿಡದ ಬೇರುಗಳನ್ನು ಏಷಿಯದಿಂದ ಆಫ್ರಿಕದ ಮೂಡಲ ತೀರಕ್ಕೆ ಕೊಂಡೊಯ್ದರು. ಬಾಳೆಗಿಡ ಅಲ್ಲಿ ಬೆಳೆಯುತ್ತಿರುವುದನ್ನು ಪೋರ್ಟ್ಯುಗೀಜ್ ಪರಿಶೋಧಕರು 1482ರಲ್ಲಿ ಕಂಡುಹಿಡಿದರು ಮತ್ತು ಕೊಂಚ ಬೇರುಗಳನ್ನು ಹಾಗೂ ಬನಾನ ಎಂಬ ಅದರ ಆಫ್ರಿಕನ್ ಹೆಸರನ್ನು ಕನೆರಿ ದ್ವೀಪಗಳಲ್ಲಿರುವ ಪೋರ್ಟ್ಯುಗೀಜ್ ವಸಾಹತುಗಳಿಗೆ ಕೊಂಡೊಯ್ದರು. ಮುಂದಿನ ಹೆಜ್ಜೆಯು ಅಟ್ಲಾಂಟಿಕ್ ಸಾಗರದ ಆಚೆ ಕಡೆಗಿರುವ ಪಶ್ಚಿಮಾರ್ಧ ಗೋಳಕ್ಕೆ ಪ್ರಯಾಣವಾಗಿತ್ತು. ಅದು 1516ರಲ್ಲಿ, ಕೊಲಂಬಸ್ನ ಜಲಯಾನಗಳ ತರುವಾಯ ಕೆಲವೊಂದು ವರ್ಷಗಳಲ್ಲಿ ಸಂಭವಿಸಿತು. ಸ್ಪೇಯಿನಿನ ಮಿಷನೆರಿಗಳು ಬಾಳೆಗಿಡಗಳನ್ನು ಕ್ಯಾರಿಬೀಅನ್ನ ದ್ವೀಪಗಳಿಗೆ ಮತ್ತು ಉಷ್ಣವಲಯದ ವಿಸ್ತಾರವಾದ ಭೂಭಾಗಕ್ಕೆ ಕೊಂಡೊಯ್ದರು. ಹೀಗೆ, ಈ ಅಸಾಧಾರಣವಾದ ಹಣ್ಣಿನ ಗಿಡವು ಮಧ್ಯ ಮತ್ತು ದಕ್ಷಿಣ ಅಮೆರಿಕವನ್ನು ತಲಪಲು ಭೂಗೋಲದ ಅರ್ಧಭಾಗವನ್ನು ಸಂಚರಿಸಬೇಕಾಗಿತ್ತು.
ವರದಿಗನುಸಾರವಾಗಿ, 1690ರಲ್ಲಿ ಬಾಳೆಹಣ್ಣನ್ನು ಪ್ರಥಮವಾಗಿ ಕ್ಯಾರಿಬೀಅನ್ ದ್ವೀಪಗಳಿಂದ ಅಮೆರಿಕದ ನ್ಯೂ ಇಂಗ್ಲೆಂಡ್ಗೆ ಕೊಂಡೊಯ್ಯಲಾಯಿತು. ಪ್ಯೂರಿಟನರು ಈ ವಿಚಿತ್ರವಾದ ಹಣ್ಣನ್ನು ಬೇಯಿಸಿದರು ಮತ್ತು ಅದರಲ್ಲಿ ಇಷ್ಟಪಡಲಿಲ್ಲ. ಹಾಗಿದ್ದರೂ, ದಕ್ಷಿಣ ಮತ್ತು ಮಧ್ಯ ಅಮೆರಿಕನ್ ದೇಶಗಳಲ್ಲಿ, ಅಷ್ಟೇ ಅಲ್ಲದೆ ಇತರ ಉಷ್ಣವಲಯದ ಪ್ರದೇಶಗಳಲ್ಲಿ, ಲಕ್ಷಾಂತರ ಜನರು ಹಸಿಯಾದ ಹಸಿರು ಬಾಳೆಕಾಯಿಗಳನ್ನು ಬೇಯಿಸಿ ಅವುಗಳನ್ನು ಹರ್ಷದಿಂದ ತಿನ್ನುತ್ತಾರೆ.
ಬಾಳೆಹಣ್ಣಿನ ತೋಟಗಳು
ಇಸವಿ 1870 ಮತ್ತು 1880ರ ನಡುವೆ, ಬಾಳೆಹಣ್ಣುಗಳನ್ನು ರಪ್ತು ಮಾಡುವ ಸಾಧ್ಯತೆಯು ಹಲವಾರು ಯೂರೋಪಿಯನ್ ಮತ್ತು ಉತ್ತರ ಅಮೆರಿಕದ ವ್ಯಾಪಾರಿಗಳಲ್ಲಿ ಆಸಕ್ತಿಯನ್ನು ಕೆರಳಿಸಿತು. ಅವರು ಕಂಪನಿಗಳನ್ನು ರಚಿಸಿ ಫಿಂಕಾಸ್ ಎಂಬುದಾಗಿ ಕರೆಯಲ್ಪಡುವ ಬಾಳೆಹಣ್ಣಿನ ತೋಟಗಳನ್ನು ಸ್ಥಾಪಿಸಿದರು. ಈ ಉದ್ದೇಶಕ್ಕಾಗಿ, ಕೆಲಸಗಾರರು ಮತ್ತು ವಾಸ್ತುಶಿಲ್ಪಿಗಳು ಕಾಡುಗಳನ್ನು ಕಡಿದು ರಸ್ತೆಗಳನ್ನು ನಿರ್ಮಿಸಬೇಕಿತ್ತು, ಮತ್ತು ರೈಲುಮಾರ್ಗ ಹಾಗೂ ಸಂಸರ್ಗ ವ್ಯವಸ್ಥೆಗಳನ್ನು ಸ್ಥಾಪಿಸಬೇಕಿತ್ತು. ಕೆಲಸಗಾರರು ಮತ್ತು ಅವರ ಕುಟುಂಬಗಳಿಗಾಗಿ ವಸತಿ, ಶಾಲೆಗಳು, ಮತ್ತು ಆಸ್ಪತ್ರೆಗಳೂ ಸಹ ಇರುವ ಹಳ್ಳಿಗಳು ಕಟ್ಟಲ್ಪಟ್ಟವು. ಲೋಕದ ಸುತ್ತಲೂ ಬಾಳೆಯ ಹಣ್ಣುಗಳನ್ನು ಸಾಗಿಸಲು ಆವಿ ಹಡಗಿನ ಮಾರ್ಗಗಳು ಸ್ಥಾಪಿಸಲ್ಪಟ್ಟವು. ಕೈಗಾರಿಕೆಯು ಬೆಳೆದಂತೆ, ಬಾಳೆಹಣ್ಣನ್ನು ಬೆಳೆಸುವ ದೇಶಗಳಲ್ಲಿನ ಹೆಚ್ಚಿನ ಜಮೀನನ್ನು ಕಂಪನಿಗಳು ಖರೀದಿಸಿದವು.
ಇಂದು, ಉತ್ತರ ಅಮೆರಿಕದಲ್ಲಿ ತಿನ್ನಲ್ಪಡುವ 90 ಪ್ರತಿಶತಕ್ಕಿಂತಲೂ ಹೆಚ್ಚಿನ ಬಾಳೆಹಣ್ಣುಗಳನ್ನು ಲ್ಯಾಟಿನ್ ಅಮೆರಿಕದ ಪ್ರದೇಶಗಳು ಸರಬರಾಯಿ ಮಾಡುತ್ತವೆ. ರಪ್ತುಮಾಡುವ ಪ್ರಧಾನ ದೇಶ ಬ್ರೆಜಿಲ್ ಆಗಿದೆ. ಹಾಂಡ್ಯುರಸ್ ವಾರ್ಷಿಕವಾಗಿ ಸುಮಾರು ಒಂದು ನೂರು ಕೋಟಿ ಕಿಲೊಗ್ರಾಮಿನಷ್ಟು ಬಾಳೆಹಣ್ಣುಗಳನ್ನು ರಪ್ತುಮಾಡುತ್ತಾ, ಪಟ್ಟಿಯಲ್ಲಿ ಆರನೆಯ ಸ್ಥಾನದಲ್ಲಿದೆ.
ಬಾಳೆಹಣ್ಣುಗಳು ಬೆಳೆಯುವ ವಿಧ
ಬಾಳೆಗಿಡವು ಒಂದು ಮರವಾಗಿರುವುದಿಲ್ಲ. ಅದರಲ್ಲಿ ಮರದ ನಾರು ಇರುವುದಿಲ್ಲ. ಬದಲಿಗೆ ಅದು ತಾಳೆ ಮರದಂತೆ ಕಾಣುವ ಒಂದು ದೈತ್ಯಾಕಾರದ ಗಿಡವಾಗಿದೆ. ವಾಯುಗುಣ ಮತ್ತು ಮಣ್ಣು, ಗಿಡದ ಬೆಳವಣಿಗೆ ಮತ್ತು ಗಾತ್ರವನ್ನು ನಿಶ್ಚಯಿಸುತ್ತವೆ. ಬಾಳೆಹಣ್ಣುಗಳು ಹೆಚ್ಚು ಕಾವಿನ, ತೇವವಿರುವ ಹವಾಮಾನಗಳಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತವೆ ಮತ್ತು ಒಳ್ಳೆಯ ಜಲನಿರ್ಗಮನವಿರುವ ಸಮೃದ್ಧವಾದ ಜೇಡಿ ಮಣ್ಣಿನಲ್ಲಿ ಹುಲುಸಾಗಿ ಬೆಳೆಯುತ್ತವೆ. ಅತ್ಯುತ್ತಮ ಬೆಳವಣಿಗೆಗಾಗಿ, ತಾಪಮಾನವು ಯಾವುದೇ ಕಾಲದಲ್ಲಿ 20 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಬಾರದು.
ಒಂದು ಬೆಳೆಯನ್ನಾರಂಭಿಸಲು, ಬಲಿತ ಗಿಡಗಳ ನೆಲದಡಿಯ ಬುಡದಿಂದ ಕತ್ತರಿಸಿದ, ಕಂದುಗಳೆಂದು ಕರೆಯಲ್ಪಡುವ ಕತ್ತರಿಸಿದ ತುಂಡುಗಳನ್ನು ನೀವು ನೆಡಬೇಕು. ಒಂದು ಮೀಟರಿನ ಮೂರನೆಯ ಒಂದು ಭಾಗದಷ್ಟು ಆಳವಾದ ಮತ್ತು 5 ಮೀಟರುಗಳ ಅಂತರದಲ್ಲಿರುವ ಕುಳಿಗಳನ್ನು ತೋಡಲಾಗುತ್ತದೆ. ಮೂರರಿಂದ ನಾಲ್ಕು ವಾರಗಳೊಳಗೆ ಹಸಿರು ಚಿಗುರುಗಳು ಕಾಣಿಸಿಕೊಳ್ಳುತ್ತವೆ, ಮತ್ತು ಬಿಗಿಯಾಗಿ ಸುತ್ತಿಕೊಂಡಿರುವ ಹಸಿರು ಎಲೆಗಳು ಅವುಗಳು ಬೆಳೆದಂತೆ ಕುಡಿಯೊಡೆದು ಬಿಚ್ಚಿಕೊಳ್ಳುತ್ತವೆ. ಬಾಳೆಗಿಡಗಳು ಬಹಳ ಬೇಗನೆ ಬೆಳೆಯುತ್ತವೆ, ಪ್ರತಿದಿನ ಸುಮಾರು ಮೂರು ಸೆಂಟಿಮೀಟರುಗಳಷ್ಟು. ಹತ್ತು ತಿಂಗಳುಗಳ ಬಳಿಕ, ಒಂದು ಗಿಡವು ಪೂರ್ಣವಾಗಿ ಬೆಳೆದು, ಮೂರರಿಂದ ಆರು ಮೀಟರುಗಳಷ್ಟು ಎತ್ತರ ನಿಲ್ಲುತ್ತಾ ಒಂದು ತಾಳೆ ಮರವನ್ನು ಹೋಲುತ್ತದೆ.
ಸಂಪೂರ್ಣವಾಗಿ ಬೆಳೆದ ಒಂದು ಗಿಡದ ಮೇಲೆ, ಕಂತೆಯೊಳಗೆ ಸುತ್ತಿಕೊಳ್ಳುವ ಎಲೆಗಳಿಂದ ಚಿಕ್ಕ ಕಡುಗೆಂಪು ಎಲೆಗಳಿರುವ ಒಂದು ದೊಡ್ಡ ಮೊಗ್ಗು ಬೆಳೆಯುತ್ತದೆ. ಆಮೇಲೆ ಸಣ್ಣ ಹೂವುಗಳ ಗೊಂಚಲುಗಳು ಕಾಣಿಸಿಕೊಳ್ಳುತ್ತವೆ. ಒಂದು ಗಿಡವು 30ರಿಂದ 50 ಕಿಲೊಗ್ರಾಮಿನಷ್ಟು ತೂಕವಿರುವ ಒಂದೇ ಒಂದು ಗೊನೆಯನ್ನು ಉತ್ಪಾದಿಸುತ್ತದೆ ಮತ್ತು 9ರಿಂದ 16 ಬಾಳೆಯ ಗೊಂಚಲುಗಳು ಅದರಲ್ಲಿರುತ್ತವೆ. ಕೈಯೆಂದು ಕರೆಯಲ್ಪಡುವ ಪ್ರತಿಯೊಂದು ಗೊಂಚಲು, 10ರಿಂದ 20 ಬಾಳೆಹಣ್ಣುಗಳನ್ನು ಉತ್ಪಾದಿಸುತ್ತದೆ. ಹೀಗೆ, ಬಾಳೆಹಣ್ಣುಗಳನ್ನು ಬೆರಳುಗಳೆಂದು ಕರೆಯಲಾಗುತ್ತದೆ.
ಬಾಳೆಹಣ್ಣುಗಳು ಪ್ರಥಮವಾಗಿ ಇಳಿಮುಖವಾಗಿ, ನೆಲದ ಕಡೆಗೆ ಆಮೇಲೆ ಪ್ರಖ್ಯಾತವಾದ ಬಾಳೆ ವಕ್ರರೇಖೆಯನ್ನು ರಚಿಸುತ್ತಾ ಹೊರಗೆ ಹಾಗೂ ಮೇಲಕ್ಕೆ ಬೆಳೆಯುತ್ತವೆ. ಬೆಳವಣಿಗೆಯ ಸಮಯದಲ್ಲಿ ಪೋಷಣೆ ಮತ್ತು ರಕ್ಷಣೆಯ ಕುರಿತೇನು? ಗಿಡದಿಂದ ಎಲ್ಲಾ ಶಕ್ತಿಯನ್ನು ಬಾಳೆಹಣ್ಣುಗಳು ಪಡೆಯುವಂತೆ ಸಕಾಲದಲ್ಲಿ ಕೆಲಸಗಾರನೊಬ್ಬನು ಬಂದು ಮೊಗ್ಗನ್ನು ತೆಗೆದುಬಿಡುತ್ತಾನೆ. ಅನಂತರ ಅವನು ಕೀಟಗಳನ್ನು ದೂರವಿಡಲು ಹಣ್ಣನ್ನು ಒಂದು ಪಾಲಿಎತಿಲೀನ್ ಚೀಲದಿಂದ ಮುಚ್ಚುತ್ತಾನೆ. ಬಾಳೆಹಣ್ಣುಗಳು ಮೇಲಕ್ಕೆ ಬೆಳೆದು ಬಹಳ ಭಾರವಾಗುವುದರಿಂದ, ಗಾಳಿಯು ಅಥವಾ ಹಣ್ಣಿನ ತೂಕವು ಅದನ್ನು ಉರುಳಿಸುವುದರಿಂದ ತಡೆಯಲು ಗಿಡವನ್ನು ಹತ್ತಿರದಲ್ಲಿರುವ ಗಿಡಗಳ ಬುಡಕ್ಕೆ ಕಟ್ಟಲಾಗುತ್ತದೆ. ಕೊನೆಯದಾಗಿ, ಹಣ್ಣು ಕೊಯ್ಲಿಗಾಗಿ ಯಾವಾಗ ಸಿದ್ಧವಾಗಿರುವುದು ಎಂಬುದನ್ನು ಸೂಚಿಸಲು ಹೊದಿಕೆಗೆ ಬಣ್ಣದ ಪಟ್ಟಿಯನ್ನು ಕಟ್ಟಲಾಗುತ್ತದೆ.
ಗಿಡಗಳ ಎಲೆಗಳ ಮೇಲೆ ಔಷಧವನ್ನು ಚಿಮುಕಿಸಲು ಪ್ರತಿದಿನ ತೋಟದ ಮೇಲೆ ವಿಮಾನಗಳು ಹಾರುತ್ತವೆ. ಇದು ಅವುಗಳನ್ನು ಮೂರು ಪ್ರಮುಖ ರೋಗಗಳಿಂದ ರಕ್ಷಿಸುತ್ತದೆ. ಒಂದು ಪ್ಯಾನಮಾ ರೋಗವಾಗಿದೆ, ಇದರಲ್ಲಿ ಶಿಲೀಂಧ್ರವು ಕೆಲವೊಂದು ಗಿಡಗಳನ್ನು ನಾಶಮಾಡುತ್ತದೆ. ಆದರೆ ಇಂತಹ ಗಿಡಗಳನ್ನು ಪ್ಯಾನಮಾ ರೋಗವನ್ನು ಪ್ರತಿರೋಧಿಸಬಲ್ಲ ರೀತಿಯ ಗಿಡಗಳಿಂದ ಮತ್ತೆ ಭರ್ತಿಮಾಡಲಾಗುತ್ತದೆ. ಇನ್ನೊಂದು ಬ್ಯಾಕ್ಟೀರಿಯದಿಂದ ಉಂಟಾಗುವ ಮಾಕೊ ರೋಗವಾಗಿದೆ. ರೋಗ ತಗುಲಿದ ಗಿಡಗಳನ್ನು ಮತ್ತು ರೋಗವನ್ನು ಹರಡಿಸುವ ಕೆಲವು ಕೀಟಗಳನ್ನು ಆಕರ್ಷಿಸುವಂತಹ ಯಾವುದೇ ಹೂವುಗಳನ್ನು ತೆಗೆದುಹಾಕುವ ಮೂಲಕ ಇದನ್ನು ನಿಯಂತ್ರಿಸಲಾಗುತ್ತದೆ. ಆಮೇಲೆ, ಗಿಡದ ಎಲೆಗಳನ್ನು ನಾಶಮಾಡುವ ಆದರೆ ರಾಸಾಯನಿಕ ಔಷಧಗಳನ್ನು ಸಾಕಷ್ಟು ಬೇಗನೆ ಉಪಯೋಗಿಸುವಲ್ಲಿ ಬಾಳೆಯ ಹಣ್ಣುಗಳಿಗೆ ಕೇಡನ್ನುಂಟುಮಾಡದ, ಸಿಗಟೋಕ ರೋಗವಿದೆ. ನೀರಾವರಿಯ ಮೂಲಕ ಮತ್ತು ಉನ್ನತ ಒತ್ತಡದ ಚಿಮುಕಿಸುವ ವ್ಯವಸ್ಥೆಗಳ ಮೂಲಕ ಒದಗಿಸಲ್ಪಡುವ ಅತಿ ಹೆಚ್ಚು ನೀರಿನ ಅಗತ್ಯ ಬಾಳೆಯ ಹಣ್ಣುಗಳಿಗಿವೆ. ತೋಟವನ್ನು ಹುಲ್ಲು ಮತ್ತು ಕಳೆ ಮುಕ್ತವಾಗಿ ಇಡಲಾಗುತ್ತದೆ ಎಂಬುದನ್ನು ಕೂಡ ತಿಳಿಸಬಹುದಾಗಿದೆ.
ತೋಟದಿಂದ ನಿಮ್ಮ ಮೇಜಿಗೆ
ಬಾಳೆಹಣ್ಣುಗಳು ಕೊಯ್ಲಿಗಾಗಿ ಸಿದ್ಧವಾಗಿವೆ ಎಂದು ಪಟ್ಟಿಯ ಬಣ್ಣವು ಸೂಚಿಸುವ ಸಮಯದಲ್ಲಿ, ಕತ್ತರಿಸಲಿಕ್ಕಾಗಿ ಅವು ಸರಿಯಾದ ಗಾತ್ರದ್ದಾಗಿವೆ ಎಂಬುದನ್ನು ಖಚಿತ ಮಾಡಲು ಅವುಗಳನ್ನು ಪ್ರಥಮವಾಗಿ ಅಳೆಯಲಾಗುತ್ತದೆ. ಇನ್ನೊಂದು ಗಮನಾರ್ಹವಾದ ವಾಸ್ತವಾಂಶವು ಏನೆಂದರೆ, ಸ್ಥಳಿಕ ಬಳಕೆಗಾಗಿಯೂ ಕೂಡ ಬಾಳೆಹಣ್ಣುಗಳನ್ನು ಗಿಡದಲ್ಲಿಯೇ ಹಣ್ಣಾಗಲು ಎಂದಿಗೂ ಬಿಡಲಾಗುವುದಿಲ್ಲ. ಹೀಗೆ ಯಾಕೆ? ಯಾಕೆಂದರೆ ಅವು ತಮ್ಮ ರುಚಿಯನ್ನು ಕಳೆದುಕೊಳ್ಳುವವು. ಒಂದು ಬೆಳೆಯನ್ನು ಯಾವಾಗ ಕೊಯ್ಯಬೇಕು ಎಂಬುದನ್ನು ನಿರ್ಣಯಿಸುವ ಮೊದಲು, ರಪ್ತು ಮಾಡುವುದಕ್ಕಾಗಿರುವ ಅಂತರವನ್ನು ಮತ್ತು ಸಾಗಣೆಯ ಮಾದರಿಯನ್ನು ಪರಿಗಣಿಸಬೇಕು. ಆಗ ಒಬ್ಬ ಕೆಲಸಗಾರನು ಗೊಂಚಲುಗಳನ್ನು ತನ್ನ ಮಚ್ಚುಕತ್ತಿಯಿಂದ ಕತ್ತರಿಸುತ್ತಾನೆ, ಮತ್ತು ಅವುಗಳನ್ನು ಕಂತೆಕಟ್ಟುವ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಕೊಯ್ಲಿನ ತರುವಾಯ ಬಾಳೆಗಿಡಕ್ಕೆ ಏನನ್ನು ಮಾಡಲಾಗುತ್ತದೆ? ಅದರ ಸ್ಥಾನದಲ್ಲಿ ಬೆಳೆಯುವ ಹೊಸ ಗಿಡಗಳನ್ನು ಅದು ಫಲವತ್ತಾಗಿ ಮಾಡುವಂತೆ ಅದನ್ನು ಕಡಿದು ಹಾಕಲಾಗುತ್ತದೆ.
ಕಂತೆಕಟ್ಟುವ ಕೇಂದ್ರದಲ್ಲಿ, ಬಾಳೆಹಣ್ಣುಗಳನ್ನು ತೊಳೆಯಲಾಗುತ್ತದೆ, ಮತ್ತು ಕೆಲಸಗಾರರು ಹಾಗೂ ಅವರ ಕುಟುಂಬಗಳಿಂದ ತಿನ್ನಲ್ಪಡುವುದಕ್ಕಾಗಿ ಯಾವುದೇ ಜಜ್ಜಿಹೋದ ಹಣ್ಣನ್ನು ತೆಗೆಯಲಾಗುತ್ತದೆ. ಚಿಕ್ಕ ಬಾಳೆಹಣ್ಣುಗಳನ್ನು ರುಚಿಕೊಡುವುದಕ್ಕಾಗಿ ಮತ್ತು ಶಿಶು ಆಹಾರಕ್ಕಾಗಿ ಉಪಯೋಗಿಸಲಾಗುವುದು. ಅತ್ಯುತ್ತಮ ಬಾಳೆಹಣ್ಣುಗಳನ್ನು ಒಂದು ಪೆಟ್ಟಿಗೆಗೆ 18 ಕಿಲೊಗ್ರಾಮಿನಂತೆ ತುಂಬಿಸಿ, ಶೀತೀಕರಿಸಲ್ಪಟ್ಟ ರೈಲುಗಾಡಿಗಳ ಮತ್ತು ಹಡಗುಗಳ ಮೂಲಕ ವಿದೇಶಕ್ಕೆ ಕಳುಹಿಸಲಾಗುತ್ತದೆ.
ಹಡಗುಕಟ್ಟೆಯ ಮೇಲೆ, ಹಣ್ಣಿನ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ, ಮತ್ತು ಅದರ ತಾಪಮಾನವನ್ನು ತೆಗೆಯಲಾಗುತ್ತದೆ. ಒಮ್ಮೆ ಕತ್ತರಿಸಿಯಾದ ಮೇಲೆ, ಮಾರುಕಟ್ಟೆಯನ್ನು ತಲಪುವ ತನಕ ಹಣ್ಣು ಹಸಿರಾಗಿ ಉಳಿಯಬೇಕು. ಬಾಳೆಹಣ್ಣು ಬೇಗನೆ ಕೊಳೆತುಹೋಗುವುದರಿಂದ, ಅದನ್ನು 10ರಿಂದ 20 ದಿನಗಳೊಳಗೆ ಕೊಯ್ದು, ಹಡಗಿನಲ್ಲಿ ಸಾಗಿಸಿ, ಅಂಗಡಿಗಳಲ್ಲಿ ಮಾರಬೇಕು. ಅದನ್ನು ಹಣ್ಣಾಗುವುದರಿಂದ ತಡೆಯಲು 12ರಿಂದ 13 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ತಣ್ಣಗೆ ಇಡಲಾಗುತ್ತದೆ. ಆಧುನಿಕ ಸಾಗಣೆಯಿಂದ ಬಾಳೆಹಣ್ಣುಗಳನ್ನು ಯಾವುದೇ ಸಮಸ್ಯೆಯಿಲ್ಲದೆ ಮಧ್ಯ ಮತ್ತು ದಕ್ಷಿಣ ಅಮೆರಿಕದಿಂದ ಕೆನಡ ಮತ್ತು ಯೂರೋಪಿನಷ್ಟು ದೂರಕ್ಕೆ ಕಳುಹಿಸಸಾಧ್ಯವಿದೆ.
ಪ್ರಾಯೋಗಿಕ ಮೌಲ್ಯ ಮತ್ತು ಪುಷ್ಟಿ
ಬಾಳೆಹಣ್ಣಿನ ಒಂದು ನೂರು ಅಥವಾ ಹೆಚ್ಚು ವಿಧಗಳು ಇವೆ. ಸಣ್ಣಗಾತ್ರದ ಬಾಳೆಹಣ್ಣು ಸಾಮಾನ್ಯ ರೀತಿಯದ್ದಾಗಿದ್ದು, ಪ್ರಧಾನವಾಗಿ ಯೂರೋಪ್, ಕೆನಡ, ಮತ್ತು ಅಮೆರಿಕಕ್ಕೆ ರಪ್ತುಮಾಡಲ್ಪಡುತ್ತದೆ. ರಪ್ತು ಮಾಡುವುದಕ್ಕಾಗಿ ಅತಿ ತೆಳು ಸಿಪ್ಪೆಯಿರುವ ಚಿಕ್ಕ ನಮೂನೆಗಳನ್ನು ಹಾಂಡ್ಯುರಸ್ನಲ್ಲಿ ಹೇರಳವಾಗಿ ಕಂಡುಕೊಳ್ಳಸಾಧ್ಯವಿದೆ. ಇವುಗಳು ಮಾಂಜಾನಾ (ಆ್ಯಪ್ಲ್) ಮತ್ತು ರೆಡ್ ಜಮೇಕ ಎಂಬುದಾಗಿ ಕರೆಯಲ್ಪಡುತ್ತವೆ.
ಬಾಳೆ ಎಲೆಗಳಲ್ಲಿ ಉಪಯುಕ್ತವಾದ ನಾರುಗಳಿವೆ ಮತ್ತು ಉಷ್ಣವಲಯದ ದೇಶಗಳಲ್ಲಿ ಅವು ಹಲವಾರು ಉದ್ದೇಶಗಳಿಗೆ ಉಪಯೋಗಿಸಲ್ಪಡುತ್ತವೆ. ಒಂದು ಬಹಿರಂಗ ಮಾರುಕಟ್ಟೆಯನ್ನು ಸಂದರ್ಶಿಸುವಾಗ, ಹಲವಾರು ಪ್ರದೇಶಗಳಲ್ಲಿ ಬಹಳ ಜನಪ್ರಿಯವಾದ ಊಟವೊಂದನ್ನು—ಬಿಸಿಯಾಗಿರುವ ಟಮಾಲಿಯನ್ನು—ಸುತ್ತಲು, ಮಾರುವುದಕ್ಕಾಗಿ ರಸ್ತೆಯಲ್ಲಿ ಶೇಖರಿಸಿ ಇಡಲ್ಪಟ್ಟ ಎಲೆಗಳನ್ನು ಒಬ್ಬನು ಸಾಮಾನ್ಯವಾಗಿ ಕಾಣುತ್ತಾನೆ.
ಹಾಂಡ್ಯುರಸ್ನಲ್ಲಿರುವ ಅನೇಕ ಜನರು ತಮ್ಮ ಊಟಗಳೊಂದಿಗೆ ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಹಾಂಡ್ಯುರಸ್ನ ಉತ್ತರ ತೀರದ ರುಚಿಕರವಾದೊಂದು ಭಕ್ಷ್ಯವನ್ನು ಮಾಚೂಕಾ ಎಂಬುದಾಗಿ ಕರೆಯಲಾಗುತ್ತದೆ. ಅದನ್ನು ತಯಾರಿಸಲು, ಬಾಳೆ ಕಾಯನ್ನು ಒಂದು ಒರಳಿನಲ್ಲಿ ಜಜ್ಜಿ, ಮಸಾಲೆಯನ್ನು ಸೇರಿಸಿ, ಮತ್ತು ಮಿಶ್ರಣವನ್ನು ತೆಂಗಿನ ಎಣ್ಣೆಯಲ್ಲಿ ಏಡಿಗಳೊಂದಿಗೆ ಬೇಯಿಸಲಾಗುತ್ತದೆ.
ಅಮೆರಿಕದಲ್ಲಿ ಸುಮಾರು 11 ಶತಕೋಟಿ ಬಾಳೆಹಣ್ಣುಗಳನ್ನು ವಾರ್ಷಿಕವಾಗಿ ತಿನ್ನಲಾಗುತ್ತದೆ. ಒಂದು ಮಹಾ ಮೊತ್ತವು ಕೆನಡ ಮತ್ತು ಬ್ರಿಟನಿಗೆ ಹಾಗೂ ಯೂರೋಪಿನ ಇತರ ದೇಶಗಳಿಗೆ ಹೋಗುತ್ತದೆ. ಈ ಹಣ್ಣನ್ನು ತಿನ್ನುವುದರಿಂದ ಯಾವ ಪೌಷ್ಟಿಕ ಪ್ರಯೋಜನಗಳಿವೆ? ಬಾಳೆಹಣ್ಣುಗಳಲ್ಲಿ ಎ ಮತ್ತು ಸಿ ಜೀವಸ್ವತ, ಶರ್ಕರ ಷ್ಟಿ, ರಂಜಕ, ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿದೆ.
ಬಾಳೆ ಹಣ್ಣಿಗೆ ಎಷ್ಟೋ ವಿಧಗಳ ಉಪಯೋಗಗಳಿವೆ! ಅದು ಉಪಾಹಾರಗಳಲ್ಲಿ, ತಿಂಡಿಗಳಲ್ಲಿ, ಹಣ್ಣಿನ ರಸಗಳಲ್ಲಿ, ಕಡುಬುಗಳಲ್ಲಿ, ಕೇಕುಗಳಲ್ಲಿ, ಮತ್ತು ಖಂಡಿತವಾಗಿ, ಸುಪ್ರಸಿದ್ಧ ಬನಾನ ಸ್ಪ್ಲಿಟ್ ಐಸ್ಕ್ರೀಮಿನಲ್ಲಿ ಸೂಕ್ತವಾಗಿದೆ. ಆದರೆ ಮುಂದಿನ ಸಾರಿ ನೀವೊಂದು ಬಾಳೆಹಣ್ಣನ್ನು ತಿನ್ನುವಾಗ, ಅದರ ಎದ್ದುಕಾಣುವ ಗುಣಗಳ ಕುರಿತು ಯೋಚಿಸಿರಿ. ಈ ಹಣ್ಣಿಗೆ ಅದರ ಸ್ವಂತ ಹೊದಿಕೆ ಇದೆ. ಅದು ಜೀವಸ್ವತಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಮತ್ತು ಆ ಬಾಳೆಹಣ್ಣು ನಿಮ್ಮ ಮೇಜನ್ನು ತಲಪಲು ಲೋಕದ ಅರ್ಧಭಾಗವನ್ನು ಸಂಚರಿಸಿ ಬಂದಿರಬಹುದು.