ಯುವ ಜನರು ಪ್ರಶ್ನಿಸುವುದು . . .
ನಾನು ಅವಿಶ್ವಾಸಿಯೊಂದಿಗೆ ಮೋಹಿತಳಾಗುವುದಾದರೆ ಆಗೇನು?
“ನನಗೆ ಒಂದು ಸಮಸ್ಯೆಯಿದೆ,” ಎಂದು ಕ್ರೈಸ್ತ ಹುಡುಗಿಯೊಬ್ಬಳು ಒಪ್ಪಿಕೊಂಡಳು. “ನನ್ನ ನೆರೆಯವನೊಂದಿಗೆ ನಾನು ಮೋಹಗೊಂಡಿದ್ದೇನೆ. ಅವನು ದಯಾಪರನೂ, ಸಭ್ಯನೂ, ವಿಚಾರಪರನೂ ಆಗಿದ್ದಾನೆ, ಆದರೆ ಅವನಲ್ಲಿರುವ ಒಂದು ಕೊರತೆ—ಅವನು ಯೆಹೋವನನ್ನು ಪ್ರೀತಿಸುವಾತನಾಗಿಲ್ಲ. ಆತನನ್ನು ಮೋಹಿಸುವುದು ತಪ್ಪಾಗಿದೆ ಎಂದು ನನಗೆ ತಿಳಿದಿದೆ, ಆದರೆ ಆತನ ಕಡೆಗಿರುವ ನನ್ನ ಭಾವನೆಗಳನ್ನು ಹೇಗೆ ನಿರ್ವಹಿಸಬೇಕೆಂಬುದರ ಕುರಿತು ನನಗೆ ಭರವಸೆಯಿಲ್ಲ.”
ತದ್ರೀತಿಯ ಒಂದು ಸನ್ನಿವೇಶದಲ್ಲಿ ತನ್ನನ್ನು ಕಂಡುಕೊಂಡಾಗ ಮಾರ್ಕ್ 14 ವರ್ಷ ಪ್ರಾಯದವನಾಗಿದ್ದನು. ತನ್ನ ಧಾರ್ಮಿಕ ನಂಬಿಕೆಗಳಲ್ಲಿ ಭಾಗಿಯಾಗದ ಹುಡುಗಿಯೊಬ್ಬಳಲ್ಲಿ ಅವನು ಮೋಹಪರವಶನಾದನು.a “ನಾವು ಒಟ್ಟಿಗೆ ವಿವಾಹವಾಗಿ ಇರುವುದು ಹೇಗಿದ್ದೀತು ಎಂಬುದರ ಕುರಿತು ನಾನು ಅನೇಕವೇಳೆ ಹಗಲು ಕನಸು ಕಾಣುತ್ತಿದ್ದೆ,” ಎಂದು ಅವನು ಹೇಳುತ್ತಾನೆ. “ಆದರೆ ಅದು ತಪ್ಪೆಂದು ನನಗೆ ಗೊತ್ತಿತ್ತು.”
ಭಾವೋದ್ರೇಕದ ಪ್ರಚೋದನೆಗಳು ತೀಕ್ಷೈವಾಗಿರುವ ಹದಿಪ್ರಾಯದ ವರುಷಗಳಲ್ಲಿ ವ್ಯಾಮೋಹಗಳು ಮತ್ತು ಮೋಹಪರವಶತೆಗಳು ಸಾಮಾನ್ಯವಾಗಿವೆ. (ಹೋಲಿಸಿ 1 ಕೊರಿಂಥ 7:36) ಅಂತಹ ಭಾವನೆಗಳಿಗೆ ಸುರಕ್ಷಿತವಾದ ಹೊರಮಾರ್ಗಗಳಿರದೆ, ಯುವಜನರು ತಮ್ಮ ಅಚ್ಚುಮೆಚ್ಚಿನ ಶಿಕ್ಷಕರು, ವಿನೋದಗಾರರು ಮತ್ತು ಇನ್ನು ಮುಂತಾದವರ ಕಡೆಗೆ ಮೋಹಪರವಶತೆಯನ್ನು ಬೆಳೆಸಿಕೊಳ್ಳುವ ಪ್ರವೃತ್ತಿಯುಳ್ಳವರಾಗಿದ್ದಾರೆ. ಅಂತಹ ವಯಸ್ಕರೊಂದಿಗೆ ವೈಯಕ್ತಿಕ ಸಂಬಂಧಗಳು ಅಧಿಕಾಂಶ ಅಪ್ರಾಪ್ಯವಾಗಿರುವುದರಿಂದ, ಈ ವ್ಯಾಮೋಹಗಳು ಸಾಮಾನ್ಯವಾಗಿ ಅಲ್ಪಕಾಲದ್ದೂ ಮತ್ತು ಸಂಬಂಧ ಸೂಚಕವಾಗಿ ಅಪಾಯರಹಿತವೂ ಆಗಿರುತ್ತವೆ.b ಆದರೂ, ಸಮಾನಸ್ಥನೊಬ್ಬನಿಗಾಗಿ ನೀವು ಬಲವಾದ ಭಾವನೆಗಳನ್ನು ಬೆಳೆಸಿಕೊಂಡಿರುವುದಾದರೂ ಆ ವ್ಯಕ್ತಿಯು—ಒಂದು ಸಂಬಂಧವನ್ನು ಇಟ್ಟುಕೊಳ್ಳಲು ಇಷ್ಟಪಡುತ್ತಿರುವ ಮತ್ತು ಶಕ್ತನಾಗಿರುವವನು—ನಿಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಪಾಲಿಗನಾಗುವುದಿಲ್ಲವಾದರೆ ಆಗೇನು?
ಕೆಲವರು ಇದನ್ನು ಒಂದು ಸಮಸ್ಯೆಯೋಪಾದಿ ಕಾಣದಿರಬಹುದು. ಒಂದು ಕಾರಣವೇನಂದರೆ, ಅನೇಕ ಯುವಜನರಿಗೆ ಧರ್ಮದಲ್ಲಿ ಕೊಂಚವೇ ಆಸಕ್ತಿ ಇದೆ. ಮತ್ತು ಹಾಗೆ ಮಾಡುವವರ ನಡುವೆ ಸಹ, ಬೇರೊಂದು ಧರ್ಮದ ಒಬ್ಬರೊಂದಿಗೆ ವಿಹಾರ ನಿಶ್ಚಯ ಮಾಡುವುದು ಯಾವಾಗಲು ಅಸಮ್ಮತಿಯಿಂದ ನೋಡಲ್ಪಡದಿರಬಹುದು. ಉದಾರ ಮನಸ್ಸಿನ ಜನರು ಅದನ್ನು ಸಮ್ಮತಿಸಲೂಬಹುದು. ಆದರೂ, ವಿಶೇಷವಾಗಿ ಅವು ಅನೇಕ ವೇಳೆ ವಿವಾಹದಲ್ಲಿ ಫಲಿಸುವ ಕಾರಣದಿಂದಾಗಿ ಅನೇಕ ವಯಸ್ಕರು ಅಂತಹ ಸಂಬಂಧಗಳಲ್ಲಿ ನಿಗೂಢ ಸಮಸ್ಯೆಗಳನ್ನು ಕಾಣುತ್ತಾರೆ. ಬರಹಗಾರ್ತಿ ಆ್ಯಂಡ್ರಿಯ ಈಗನ್ ಯುವಜನರಿಗೆ ಹೀಗೆ ಸಲಹೆ ನೀಡಿದ್ದಾರೆ: “ನೀವಿಬ್ಬರೂ ಮತಶ್ರದ್ಧೆಯುಳ್ಳವರಾಗಿಲ್ಲವಾದರೆ ಒಂದೇ ರೀತಿಯ ಧಾರ್ಮಿಕ ಹಿನ್ನೆಲೆಯಿರುವುದು ಪ್ರಾಮುಖ್ಯವಾಗಿರುವುದಿಲ್ಲ. ಆದರೆ ಒಬ್ಬರಿಗೆ ಅಥವಾ ನಿಮ್ಮಿಬ್ಬರಿಗೆ ಧಾರ್ಮಿಕ ಪದ್ಧತಿಯು ಪ್ರಾಮುಖ್ಯವಾಗಿರುವಲ್ಲಿ, ಧರ್ಮದ ಕುರಿತಾದ ಭಿನ್ನತೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. . . . ಧರ್ಮದ ಕುರಿತಾಗಿ ಬರುವಾಗ ನೀವು ಏಕಪ್ರಕಾರವಾಗಿರಬೇಕಾಗಿಲ್ಲ . . . , ಆದರೆ ಒಬ್ಬರೊಂದಿಗೊಬ್ಬರು ಸಮರಸವಾಗಿ ಜೀವಿಸಲು ಶಕ್ತರಾಗಿರಬೇಕು.”
ಅಂತಹ ಬುದ್ಧಿವಾದವು ನ್ಯಾಯಸಮ್ಮತವಾದದ್ದಾಗಿ ತೋರಬಹುದು. ಆದರೆ ವಾಸ್ತವತೆಯಲ್ಲಿ ಅದು “ಇಹಲೋಕದ ಜ್ಞಾನ”ವನ್ನು ಪ್ರತಿಬಿಂಬಿಸುತ್ತದೆ. (1 ಕೊರಿಂಥ 3:19) ಒಬ್ಬ ವಿಶ್ವಾಸಿಯ ಮತ್ತು ಅವಿಶ್ವಾಸಿಯೊಬ್ಬಳ ನಡುವಿನ ಭಾವೋದ್ರೇಕತೆಯು ವೈವಾಹಿಕ ಹೊಂದಾಣಿಕೆಗಿಂತಲೂ ಹೆಚ್ಚು ಮಹತ್ತಾದ ಪ್ರಮುಖತೆಯ ವಿವಾದಗಳನ್ನು ಎಬ್ಬಿಸುತ್ತದೆಂದು ಬೈಬಲು ತೋರಿಸುತ್ತದೆ. ಕ್ರೈಸ್ತರನ್ನು “ಕರ್ತನಲ್ಲಿ ಮಾತ್ರವೇ” ವಿವಾಹವಾಗುವಂತೆ ಒತ್ತಾಯಿಸುವ ದೇವರ ವಾಕ್ಯಕ್ಕೆ ವಿಧೇಯತೆ ತೋರಿಸುವ ಸಂಗತಿಯು ಇದಾಗಿದೆಯೆಂದು ಯೆಹೋವನ ಸಾಕ್ಷಿಗಳ ನಡುವೆ ಇರುವ ಯುವಜನರು ತಿಳಿದಿದ್ದಾರೆ. (1 ಕೊರಿಂಥ 7:39, NW) ವಿಹಾರ ನಿಶ್ಚಯಿಸುವುದು ಒಂದು ವಿನೋದವಾಗಿರುವುದಿಲ್ಲ, ಆದರೆ ವಿವಾಹಕ್ಕೆ ಪೀಠಿಕೆಯಾಗಿರುವುದರಿಂದ, ತನ್ನ ಸೇವಕರಲ್ಲಿ ಒಬ್ಬನು ಅವನ ಅಥವಾ ಅವಳ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿರದ ಒಬ್ಬರೊಂದಿಗೆ ಭಾವೋದ್ರೇಕತೆಯಿಂದ ಒಳಗೂಡುವುದು ದೇವರನ್ನು ಅಸಂತೋಷಗೊಳಿಸುತ್ತದೆ.
ಹಾಗಿರುವುದಾದರೂ, ಕೆಲವು ಸಾಕ್ಷಿ ಯುವಜನರು ತಾವು ಅವಿಶ್ವಾಸಿಗಳಿಗೆ ಆಕರ್ಷಿತರಾಗುತ್ತಿದ್ದೇವೆಂದು ಕಂಡುಕೊಂಡಿದ್ದಾರೆ. ಇದು ಹೇಗೆ ಸಂಭವಿಸುತ್ತದೆ? ಅಂತಹ ಒಂದು ಸನ್ನಿವೇಶದಲ್ಲಿ ನೀವು ನಿಮ್ಮನ್ನು ಕಂಡುಕೊಳ್ಳುವುದಾದರೆ ನೀವೇನು ಮಾಡಬೇಕು?
ಅದು ಸಂಭವಿಸುವ ವಿಧ
ಪ್ರಥಮವಾಗಿ, ಎಲ್ಲಾ ಮಾನವರು ತಪ್ಪು ಮಾಡುವ ಪ್ರವೃತ್ತಿಯುಳ್ಳವರಾಗಿದ್ದಾರೆಂಬುದನ್ನು ಗ್ರಹಿಸಿರಿ. “ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವವನು ಯಾವನು?” ಎಂದು ಕೀರ್ತನೆಗಾರನು ಕೇಳಿದನು. (ಕೀರ್ತನೆ 19:12) ಭಾವೋದ್ರೇಕತೆಯ ಸಾಮ್ರಾಜ್ಯದಲ್ಲಿ ನಿರ್ದಿಷ್ಟವಾಗಿ ಯುವಜನರು ತಪ್ಪುಗಳಿಗೆ ಅಧೀನರಾಗುತ್ತಾರೆ. ಯಾಕೆ? ಸರಳವಾದ ಕಾರಣವೇನಂದರೆ ಅನುಭವ ಮತ್ತು ಪ್ರಾಯದಿಂದ ಬರುವ ಬುದ್ಧಿವಂತಿಕೆಯ ಕೊರತೆಯು ಅವರಿಗಿರುವುದರಿಂದಲೆ. (ಜ್ಞಾನೋಕ್ತಿ 1:4) ವಿರುದ್ಧ ಲಿಂಗದವರೊಂದಿಗೆ ವ್ಯವಹರಿಸುವುದರಲ್ಲಿ ಕಡಿಮೆ ಅನುಭವವನ್ನು ಹೊಂದಿರುವುದರಿಂದ, ಭಾವೋದ್ರೇಕದ ಆಕರ್ಷಣೆಯನ್ನು ಅಥವಾ ಗಮನವನ್ನು ಹೇಗೆ ನಿರ್ವಹಿಸಬೇಕೆಂದು ಕ್ರೈಸ್ತ ಯುವಜನರಿಗೆ ತಿಳಿಯದಿರಬಹುದು.
ಶಾಲಾ ಸ್ನೇಹಿತನೊಬ್ಬನು ತನ್ನ ಮೇಲೆ ಮೋಹಗೊಂಡಿದ್ದಾನೆಂಬುದನ್ನು ಗ್ರಹಿಸಿದಾಗ ಶೀಲಳ ಸಂಬಂಧದಲ್ಲಿ ಇದು ಸತ್ಯವಾಗಿತ್ತು. “ಅವನು ನನ್ನನ್ನು ಇಷ್ಟಪಟ್ಟನೆಂದು ನಾನು ಹೇಳಬಹುದಿತ್ತು,” ಎಂದಳು ಶೀಲ. “ಊಟದ ತಾಸುಗಳಲ್ಲಿ ಅವನು ಇಲ್ಲಿಗೆ ಬಂದು ನನ್ನೊಂದಿಗೆ ಊಟಮಾಡುತ್ತಿದ್ದನು. ಗ್ರಂಥಾಲಯದಲ್ಲಿ ಅಭ್ಯಾಸದ ಕಾಲಾವಧಿಗಳಲ್ಲಿ ಅವನು ನನ್ನನ್ನು ಹುಡುಕುತ್ತಿದ್ದನು.” ಆ ಹುಡುಗನಿಗಾಗಿ ಶೀಲಳ ಭಾವನೆಗಳು ಬೆಳೆಯತೊಡಗಿದವು. ಈ ಮುಂಚೆ ಪ್ರಸ್ತಾಪಿಸಲ್ಪಟ್ಟ ಮಾರ್ಕ್ ತದ್ರೀತಿಯಲ್ಲಿ ಜ್ಞಾಪಿಸಿಕೊಳ್ಳುವುದು: “ಈ ಹುಡುಗಿಯನ್ನು ನಾನು ವ್ಯಾಯಾಮದ ಅವಧಿಯಲ್ಲಿ ಯಾವಾಗಲೂ ನೋಡಬಹುದಿತ್ತು. ನನ್ನನ್ನು ಸಮೀಪಿಸಲು ಮತ್ತು ನನ್ನೊಂದಿಗೆ ಮಾತನಾಡಲು ಅವಳು ವಿಶೇಷ ಪ್ರಯತ್ನವನ್ನು ಮಾಡಿದಳು. ಗೆಳೆತನವನ್ನು ವಿಕಸಿಸುವುದು ಕಷ್ಟಕರವಾಗಿರಲಿಲ್ಲ.” ಹದಿನಾಲ್ಕು ವರ್ಷ ಪ್ರಾಯದ ಪ್ಯಾಮ್ನ ವಿಷಯದಲ್ಲಿ, ನೆರೆಹೊರೆಯ ಹುಡುಗನೊಬ್ಬನು ಅವಳ ಕಡೆಗಿನ ತನ್ನ ಪ್ರೀತಿಯ ಅಭಿವ್ಯಕ್ತಿಯಾಗಿ ಅವಳಿಗೆ ಒಂದು ಉಂಗುರವನ್ನು ಕೊಡುವಷ್ಟರ ವರೆಗೆ ಮುಂದುವರಿದನು.
ಒಬ್ಬ ಸಾಕ್ಷಿಯು ಪ್ರತಿ ಸಂದರ್ಭದಲ್ಲಿಯೂ ಇನ್ನೊಬ್ಬನಿಂದ ಮಾಡಲ್ಪಡುವ ಪ್ರೇಮ ಪ್ರಯತ್ನದ ಮುಗ್ಧ ಬಲಿಪಶುವಾಗಿರುವುದಿಲ್ಲವೆಂಬುದು ಒಪ್ಪತಕ್ಕ ವಿಷಯ. ಜಿಮ್ ಎಂಬ ಹೆಸರಿನ ಕ್ರೈಸ್ತ ಹುಡುಗನೊಬ್ಬನಿಂದ ತೋರಿಸಲ್ಪಟ್ಟ ಸ್ಫುಟವಾದ ಆಸಕ್ತಿಯನ್ನು ಹುಡುಗಿಯೊಬ್ಬಳು ಕೇವಲ ಪ್ರತಿಯಾಗಿ ಹಿಂದಿರುಗಿಸುತ್ತಿದ್ದಳು. ಆದರೆ ಒಂದು ದಿನ ಆತನನ್ನು ಹುಡುಕುತ್ತಾ ಅವಳು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಬಂದಾಗ, ಅವನು ಏನನ್ನು ಮಾಡಿದ್ದನೊ ಅದನ್ನು ಅಂಗೀಕರಿಸುವಂತೆ ಒತ್ತಾಯಿಸಲ್ಪಟ್ಟನು!
ಪರಿಸ್ಥಿತಿಯು ಏನೇ ಇರಲಿ, ಅದರಲ್ಲಿ ಒಳಗೂಡುವುದು ತಪ್ಪಾಗಿತ್ತು ಎಂಬುದು ನಿಮಗೆ ತಿಳಿದಿದ್ದಿರಬಹುದು. ಆದರೆ ಕೆಲವೊಮ್ಮೆ ವಿರುದ್ಧ ಲಿಂಗದವರಿಂದ ಗಮನವನ್ನು ನಿಗ್ರಹಿಸುವುದು ಕಷ್ಟವಾಗಿದೆ. ಆ್ಯಂಡ್ರುವನ್ನು ಪರಿಗಣಿಸಿ. ಪ್ರೌಢ ಶಾಲೆಯ ಪ್ರಥಮ ವರ್ಷದಲ್ಲಿ ಅವನಿದ್ದಾಗ ಅವನ ಹೆತ್ತವರು ವಿವಾಹ ವಿಚ್ಛೇದನದ ಕಾರ್ಯಗತಿಯಲ್ಲಿ ಇದ್ದರು. “ನನಗೆ ಮಾತಾಡಲಿಕ್ಕಾಗಿ ಯಾರಾದರೊಬ್ಬರು ಬೇಕಿತ್ತು,” ಎಂದು ಅವನು ಜ್ಞಾಪಿಸಿಕೊಳ್ಳುತ್ತಾನೆ. ಶಾಲೆಯಲ್ಲಿ ಹುಡುಗಿಯೊಬ್ಬಳು ಅವನಿಗಾಗಿ ಸದಾ ಪ್ರೋತ್ಸಾಹನೆಯ ಯುಕ್ತವಾದ ಮಾತುಗಳನ್ನು ಆಡುವವಳಂತೆ ಭಾಸವಾಯಿತು. ಅತಿಬೇಗನೆ ಪರಸ್ಪರ ಭಾವೋದ್ರೇಕದ ಭಾವನೆಗಳು ವಿಕಸನಗೊಂಡವು.
ಅಪಾಯಗಳು
ಪರೀಕ್ಷಿಸದೆ ಬಿಡಲ್ಪಟ್ಟಲ್ಲಿ, ಅಂತಹ ಭಾವನೆಗಳು ವಾಸ್ತವವಾದ ಸಮಸ್ಯೆಯಲ್ಲಿ ನಿಮ್ಮನ್ನು ಸಿಕ್ಕಿಸಬಲ್ಲವು. ಜ್ಞಾನೋಕ್ತಿ 6:27 ಹೇಳುವುದು: “ಮಡಲಲ್ಲಿ ಬೆಂಕಿಯನ್ನಿಟ್ಟುಕೊಂಡರೆ ಬಟ್ಟೆ ಸುಡುವದಿಲ್ಲವೇ?” ಉದಾಹರಣೆಗೆ ಕಿಮ್ ಎಂಬ ಹೆಸರಿನ ಹುಡುಗಿಯೊಬ್ಬಳ ಅನುಭವವನ್ನು ಪರಿಗಣಿಸಿ. ಕ್ರೈಸ್ತಳೋಪಾದಿ ಅವಳು ಬೆಳೆಸಲ್ಪಟ್ಟಿದ್ದರೂ, ಶಾಲೆಯಲ್ಲಿ ಒಬ್ಬ ಹುಡುಗನೊಂದಿಗೆ ಭಾವನಾತ್ಮಕವಾಗಿ ಒಳಗೂಡುವಂತೆ ಅವಳು ತನ್ನನ್ನು ಬಿಟ್ಟುಕೊಟ್ಟಳು. “ಶಾಲೆಯಲ್ಲಿ ಅತ್ಯಂತ ಹೆಚ್ಚು ಜನಪ್ರಿಯರಾದ ಮತ್ತು ಭಾವೋದ್ರೇಕಗೊಳಿಸುವ ಹುಡುಗರಲ್ಲಿ ಅವನು ಒಬ್ಬನಾಗಿದ್ದನು,” ಎಂದು ಕಿಮ್ ಜ್ಞಾಪಿಸಿಕೊಳ್ಳುತ್ತಾಳೆ. ಶೀಘ್ರದಲ್ಲಿಯೇ ಅಮಲೌಷಧಗಳು ಬಹಿರಂಗವಾಗಿ ಉಪಯೋಗಿಸಲ್ಪಡುತ್ತಿದ್ದ ಗೋಷ್ಠಿಗಳನ್ನು ಅವಳು ಗುಪ್ತವಾಗಿ ಹಾಜರಾಗುತ್ತಿದ್ದಳು. “ನಾನು ತೀರ ಗಾಬರಿಗೊಂಡಿದ್ದೆ, ಆದರೆ ನಾನು ಆತನನ್ನು ಪ್ರೀತಿಸುತ್ತಿದ್ದೆ. ನಾನು ಗರ್ಭಿಣಿಯಾದೆ.” ಕಿಮ್ ತನ್ನ ಪ್ರಣಯ ಸ್ನೇಹಿತನನ್ನು ವಿವಾಹವಾದಳು, ಆದರೆ ಶಸ್ತ್ರಾಸ್ತ್ರವೊಂದರ ಉಪಯೋಗವನ್ನು ಒಳಗೊಂಡ ಕಳ್ಳತನಕ್ಕಾಗಿ ಅವನು ಸೆರೆಮನೆಗೆ ಹಾಕಲ್ಪಟ್ಟನು. ಪುನಃ ಒಮ್ಮೆ ಬೈಬಲಿನ ಎಚ್ಚರಿಕೆಯು ಸತ್ಯವಾಗಿ ಪರಿಣಮಿಸಿತ್ತು: “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.”—1 ಕೊರಿಂಥ 15:33.
ಯೆಹೋವನ ಸಾಕ್ಷಿಗಳಾಗಿಲ್ಲದ ಎಲ್ಲಾ ಯುವಜನರು ಅನೈತಿಕರು ಅಥವಾ ಅಮಲೌಷಧವನ್ನು ಉಪಯೋಗಿಸುವವರು ಎಂಬುದನ್ನು ಸೂಚಿಸುವುದಕ್ಕಾಗಿ ಹೀಗೆ ಹೇಳಿರುವುದಿಲ್ಲ. ಆದರೆ, ಕನಿಷ್ಠ ಪಕ್ಷ, ಸಾಕ್ಷಿ ಯುವಜನರಂತೆ ಒಂದೇ ರೀತಿಯ ಮೌಲ್ಯಗಳಲ್ಲಿ, ದೃಷ್ಟಿಕೋನಗಳಲ್ಲಿ, ಅಥವಾ ಗುರಿಗಳಲ್ಲಿ ಅಂತಹ ಯುವಜನರು ಪಾಲಿಗರಾಗುವುದಿಲ್ಲ. ಅವಿಶ್ವಾಸಿಯೊಬ್ಬನು “ದೇವರಾತ್ಮನ ವಿಷಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚುಮಾತಾಗಿ ತೋರುತ್ತವೆ; ಅವು ಆತ್ಮವಿಚಾರದಿಂದ ತಿಳಿಯತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಸಲಾರನು,” ಎಂದು 1 ಕೊರಿಂಥ 2:14 ವಿವರಿಸುತ್ತದೆ. ನಿಮ್ಮ ಧಾರ್ಮಿಕ ಮೌಲ್ಯಗಳು ನಿಮ್ಮ ಭಾವನೆಗಳನ್ನು ಎಷ್ಟರ ಮಟ್ಟಿಗೆ ರೂಪಿಸಿವೆ ಎಂಬುದರ ಕುರಿತು ಆಲೋಚಿಸಿರಿ—ಕ್ರೈಸ್ತ ಕೂಟಗಳಲ್ಲಿ ನೀವು ಅನುಭವಿಸುವ ಆನಂದ, ಗ್ರಹಿಸುವ ಸಾಮರ್ಥ್ಯವುಳ್ಳ ಒಬ್ಬ ವ್ಯಕ್ತಿಯೊಂದಿಗೆ ಬೈಬಲ್ ಸಂದೇಶವನ್ನು ಹಂಚಿಕೊಳ್ಳುವ ರೋಮಾಂಚನ, ಸ್ವತಃ ಬೈಬಲನ್ನು ಅಭ್ಯಸಿಸುವ ಆನಂದ. ಅವಿಶ್ವಾಸಿಯೊಬ್ಬನು ಬಹುಶಃ ಅಂತಹ ಭಾವನೆಗಳಲ್ಲಿ—ಪಾಲಿಗನಾಗುವುದು ಬಿಡಿರಿ—ಅವುಗಳನ್ನು ಗ್ರಹಿಸಬಲ್ಲನೊ? ಅಸಂಭವನೀಯ.
ಹೀಗೆ ಪೌಲನು ಕ್ರೈಸ್ತರಿಗೆ ಬುದ್ಧಿವಾದ ಹೇಳುವುದು: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? ಬೆಳಕಿಗೂ ಕತ್ತಲೆಗೂ ಐಕ್ಯವೇನು? ಕ್ರಿಸ್ತನಿಗೂ ಸೈತಾನನಿಗೂ ಒಡನಾಟವೇನು? ನಂಬುವವನಿಗೂ ನಂಬದೆ ಇರುವವನಿಗೂ ಪಾಲುಗಾರಿಕೆ ಏನು?” (2 ಕೊರಿಂಥ 6:14, 15) ತಾನು ಅವಿಶ್ವಾಸಿಯೊಬ್ಬನೊಂದಿಗೆ ಭಾವನಾತ್ಮಕವಾಗಿ ಒಳಗೂಡಿದವಳಾಗಿ ಪರಿಣಮಿಸಿದಾಗ, ಯುವತಿ ಸೋನ್ಯ ಈ ಪಾಠವನ್ನು ನೇರವಾಗಿ ಕಲಿತಳು. ಅವಳು ಒಪ್ಪಿಕೊಳ್ಳುವುದು: “ಯೆಹೋವನ ಕುರಿತಾದ ನಿಮ್ಮ ಪ್ರೀತಿ ಮತ್ತು ಉತ್ಸಾಹದಲ್ಲಿ ಪಾಲಿಗನಾಗದ ಒಬ್ಬ ಜೊತೆಗಾರನಿರುವುದು ಊಹಿಸಸಾಧ್ಯವಿರುವ ಅತ್ಯಂತ ಕೆಟ್ಟದಾದ ಒಂಟಿತನವಾಗಿದೆ. ಇದು ಭಾವನಾತ್ಮಕವಾಗಿ ಜಜ್ಜಿಬಿಡುವಂಥದ್ದಾಗಿದೆ. ಸತ್ಯವು ನಿಮ್ಮ ಜೀವಿತದ ಪ್ರಚೋದನಾ ಶಕ್ತಿಯಾಗಿರುವಲ್ಲಿ, ನೀವದನ್ನು ಹಂಚಿಕೊಳ್ಳಬೇಕು—ಖಂಡಿತವಾಗಿ ನೀವು ಹಂಚಿಕೊಳ್ಳಬೇಕು! ನೀವು ಒಬ್ಬ ಅವಿಶ್ವಾಸಿಯೊಂದಿಗೆ ಇರುವುದರಿಂದ, ನೀವದನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲದಿರುವಾಗ ಅದು ತೀರ ಶೂನ್ಯ ಭಾವನೆಯಾಗಿದೆ.”
ಆಗ ಅಂತಹ ಸಂಬಂಧದಲ್ಲಿ ಧರ್ಮವು ಉಭಯ ಸಮ್ಮತ ಅಂಶವಾಗುವುದಿಲ್ಲ, ಆದರೆ ಕಲಹದ ಒಂದು ಮುಖ್ಯ ಕ್ಷೇತ್ರವಾಗಿ ಪರಿಣಮಿಸುವುದು ಸಂಭವನೀಯ. ಶಾಂತಿಯನ್ನು ಕಾಪಾಡಿಕೊಳ್ಳಲಿಕ್ಕಾಗಿ ನಿಮ್ಮ ಆತ್ಮಿಕ ಅಭಿರುಚಿಗಳನ್ನು ಕಡಮೆ ಮಾಡಲು ಒತ್ತಾಯಿಸಲ್ಪಟ್ಟಿರುವಂತೆ ನಿಮಗೆ ಸುಲಭವಾಗಿ ಅನಿಸಬಹುದು. ಆದರೆ ಹಾಗೆ ಮಾಡುವುದು ನಿಮ್ಮ ಆತ್ಮಿಕತೆಯನ್ನು ಕೇವಲ ವಿನಾಶಗೊಳಿಸುವುದು. ಒಬ್ಬೊಂಟಿಗಳಾದ ಯುವತಿಯೊಬ್ಬಳು ಹೇಳುವುದು: “ಸಾಕ್ಷಿಯಾಗಿರದ ಒಬ್ಬ ಹುಡುಗನೊಂದಿಗೆ ನಾನು ತೀರ ಆಪ್ತಳಾದೆ. ಆದರೆ ಸ್ನೇಹವು ಹೆಚ್ಚು ನಿಕಟವಾಗಿ ಬೆಳೆದಂತೆ, ನಾನು ಆತನನ್ನು ಮೋಹಿಸುತ್ತಿದ್ದೇನೆಂದು ನಾನು ಗ್ರಹಿಸಿದೆ. ಕ್ರಮೇಣ ಯೆಹೋವನೊಂದಿಗಿನ ನನ್ನ ಸಂಬಂಧವು ನನಗೆ ಕಡಿಮೆ ಪ್ರಮುಖತೆಯದ್ದಾಗಿ ಪರಿಣಮಿಸಿತು; ಈ ಹುಡುಗನೊಂದಿಗಿನ ನನ್ನ ಸಂಬಂಧವು ನನಗೆ ಅತ್ಯಂತ ಹೆಚ್ಚು ಪ್ರಾಮುಖ್ಯ ವಿಷಯವಾಯಿತು. ಹಿಂದಿನಂತೆ ಕೂಟಗಳಿಗೆ ಹೋಗಲು, ಕ್ರೈಸ್ತ ಸಹೋದರರೊಂದಿಗೆ ಸೇರಲು, ಅಥವಾ ಸಾರುವ ಕೆಲಸದಲ್ಲಿ ಭಾಗವಹಿಸಲು ನಾನು ಇನ್ನು ಮುಂದೆ ಬಯಸಲಿಲ್ಲ. ಅವನೊಂದಿಗಿರುವುದೇ ನಾನು ಮಾಡಲು ಅಪೇಕ್ಷಿಸುವಂತಹದ್ದಾಗಿತ್ತು. ಸಾಕ್ಷಿಯೋಪಾದಿ ನಾನು ಅನಂತರದ ಎರಡು ವರ್ಷಗಳ ವರೆಗೆ ಅಕ್ರಿಯಳಾದೆ. ಮತ್ತು ಆದ್ಯಂತವಾಗಿ, ನನ್ನ ‘ಸ್ನೇಹಿತನು’ ಆತನಿಗಾಗಿರುವ ನನ್ನ ಪ್ರೀತಿಯನ್ನು ಎಂದಿಗೂ ಪ್ರತಿಯಾಗಿ ಹಿಂದಿರುಗಿಸಲಿಲ್ಲ. ಒಂದಾನೊಂದು ದಿನ ಅವನು ಕೊನೆಗೆ ಹಿಂದಿರುಗಿಸುವನೆಂದು ನಾನು ಆಲೋಚಿಸುತ್ತಿದ್ದೆ, ಆದರೆ ಅದು ಎಂದಿಗೂ ಸಂಭವಿಸಲಿಲ್ಲ.”
ಹೌದು, ನಿಮ್ಮ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳಲ್ಲಿ ಭಾಗಿಯಾಗದ ಯಾರೊಂದಿಗಾದರೂ ಒಳಗೂಡುವುದು ನಿಮಗೆ ದುಃಖ ಮತ್ತು ಅಸಂತೋಷವನ್ನು ತರುವುದು ಖಂಡಿತ. ಅಂತಹ ಅವಿಶ್ವಾಸಿ ನೊಗದಿಂದ ಹಿಂದೆಗೆದುಕೊಳ್ಳುವುದು ವಿವೇಕದ ಪಥವಾಗಿದೆ. ಆದರೆ ಯಾರಾದರೊಬ್ಬರ ಕುರಿತು ಬಲವಾದ ಭಾವನೆಯು ನಿಮಗಿರುವಾಗ ನೀವು ಅದನ್ನು ಹೇಗೆ ಮಾಡಬಲ್ಲಿರಿ? ಈ ಸರಣಿಯಲ್ಲಿ ನಮ್ಮ ಮುಂದಿನ ಲೇಖನದ ವಿಷಯವು ಇದಾಗಿರುವುದು. (g94 5/22)
[ಅಧ್ಯಯನ ಪ್ರಶ್ನೆಗಳು]
a ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧ್ಯ ಉತ್ತರಗಳು, (ಇಂಗ್ಲಿಷ್ನಲ್ಲಿ) ಎಂಬ ಪುಸ್ತಕದ 28ನೇ ಅಧ್ಯಾಯವನ್ನು ನೋಡಿ.
[ಪುಟ 16 ರಲ್ಲಿರುವ ಚಿತ್ರ]
ಆತ್ಮಿಕ ವಿಷಯಗಳ ಕುರಿತಾದ ನಿಮ್ಮ ಉತ್ಸಾಹದಲ್ಲಿ ಅವಿಶ್ವಾಸಿಯೊಬ್ಬನು ಪಾಲಿಗನಾಗುವನೊ?