ಜಗತ್ತನ್ನು ಗಮನಿಸುವುದು
ಮಾನವ ಹಕ್ಕುಗಳ ಸನ್ನಿವೇಶ: “ಸಂಕಟಕರ”
“ಮಾನವ ಕುಲದ ಭವಿಷ್ಯದ ಹಿತಕ್ಕಾಗಿ, ಮಾನವ ಹಕ್ಕುಗಳಿಗೆ ಗೌರವವು ನಿರ್ಣಾಯಕವಾಗಿದೆ,” ಎಂದು ಮಾನವ ಹಕ್ಕುಗಳಿಗಾಗಿರುವ ಸಹಾಯಕ ಸೆಕ್ರಿಟರಿ ಜೆನೆರಲ್ ಇಬ್ರಾಹಿಂ ಫಾಲ್, ಮಾನವ ಹಕ್ಕುಗಳ ಕುರಿತ ಯುಎನ್‌ನ ವಿಶ್ವ ಸಮ್ಮೇಳನವೊಂದರಲ್ಲಿ ಹೇಳಿದರು. “ಆದರೆ ಅನೇಕ [ದೇಶಗಳಲ್ಲಿ], ಮುಂದುವರಿಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗಳ ಮಟ್ಟವು ಸಂಕಟಕರವಾಗಿದೆ,” ಎಂದು ಅವರು ಗಮನಿಸಿದರು. ಲೋಕದ ಜನಸಂಖ್ಯೆಯಲ್ಲಿ ಕಡಿಮೆಪಕ್ಷ ಅರ್ಧಭಾಗವು, ಇಂದು ಮಾನವ ಹಕ್ಕುಗಳ ಉಲ್ಲಂಘನೆಗಳ ಕೆಳಗೆ ಕಷ್ಟಾನುಭವಿಸುತ್ತಿದೆ, ಎಂದು ಯುಎನ್‌ನ ಒಂದು ವಾರ್ತಾಪತ್ರವಾದ, ವರ್ಲ್ಡ್ ಕಾನ್‌ಫರನ್ಸ್ ಆನ್ ಹ್ಯೂಮನ್ ರೈಟ್ಸ್ ದೃಢಪಡಿಸುತ್ತದೆ. ಫಾಲ್ ಕೂಡಿಸಿದ್ದು: “ಮರಣ, ನಾಶನ, ಪಕ್ಷಪಾತ, ಬಡತನ, ಹಿಂಸೆ, ಬಲಾತ್ಕಾರ ಸಂಭೋಗ, ಗುಲಾಮಗಿರಿ, ಹಸಿವೆ ಮತ್ತು ಕುಂಠಿತಗೊಳಿಸಲ್ಪಟ್ಟ ಅಥವಾ ಸೊರಗಿದ ಜೀವಿತಗಳು ಲಕ್ಷಾಂತರ ಜನರ ಪ್ರತಿನಿತ್ಯದ ಶಾಪವಾಗಿ ಉಳಿದಿವೆ.” ಶಾಪವು ಇನ್ನೂ ಹೆಚ್ಚಾಗಿ ಹಬ್ಬುತ್ತಿದೆ ಯಾಕಂದರೆ “ಹಕ್ಕುಗಳ ಸಮಸ್ಯೆಗಳು ಗಗನಕ್ಕೇರುತ್ತಿವೆ,” ಎಂದು ಯುಎನ್ ಎಚ್ಚರಿಸುತ್ತದೆ. (g94 7/8)
ಹಣ್ಣನ್ನು ಒಟ್ಟುಗೂಡಿಸುವ ರೋಬಾಟ್ (ಯಾಂತ್ರಿಕ ಮನುಷ್ಯ)
ಇಟೆಲಿಯ ವ್ಯಾವಸಾಯಿಕ ಯಂತ್ರಕಲಾಶಾಸ್ತ್ರದಲ್ಲಿ ಅತ್ಯಾಧುನಿಕ ನವೀನತೆಯ “ನೇರವಾಗಿ ಮರಗಳಿಂದ ಗಂಟೆಯೊಂದಕ್ಕೆ ಸುಮಾರು 2,500 ಕಿತ್ತಿಳೆಯ ಹಣ್ಣುಗಳನ್ನು” ಒಟ್ಟುಗೂಡಿಸಲು ಸಮರ್ಥವಾಗಿ ಕಂಪ್ಯೂಟರೀಕರಿಸಿದ ರೋಬಾಟ್. ಲ ಸ್ಟಾಂಪಾಕ್ಕನುಸಾರ, ಈ ಯಂತ್ರವು “ಅತ್ಯಂತ ಹೆಚ್ಚು ಸೂಕ್ಷ ಗ್ರಾಹಿ”ಯಾಗಿರುವ ಎಂಟು ಯಾಂತ್ರಿಕ ಕೈಗಳಿಂದ ಸಿದ್ಧಗೊಳಿಸಲ್ಪಟ್ಟು, ಪ್ರತಿಯೊಂದೂ ಇಲೆಕ್ಟ್ರಾನಿಕ್ ಕಣ್ಣಿನಿಂದ ಸಜ್ಜುಗೊಳಿಸಲ್ಪಟ್ಟಿದೆ, ಮತ್ತು “ವರ್ಣಗಳ ತೀವ್ರತೆಯನ್ನು ಗ್ರಹಿಸು”ವಂತೆ ಹಾಗೂ “ಅವುಗಳನ್ನು ಸೂಕ್ಷವಾಗಿ ಸ್ಪರ್ಶಿಸಿದ ಬಳಿಕ, ಅಪಕ್ವ ಹಣ್ಣುಗಳನ್ನು ಗುರಿತಪ್ಪದೆ ಹಾದು ಹೋಗಿ, ಪಕ್ವವಾದ ಹಣ್ಣನ್ನು” ಆರಿಸುವಂತೆ ಏರ್ಪಡಿಸಲ್ಪಟ್ಟಿದೆ. ಜಾಡುಪಟ್ಟಿಯಿಂದ ಸಿದ್ಧಗೊಳಿಸಲ್ಪಟ್ಟ ಈ ರೋಬಾಟ್, “ಡೀಜಲ್ ಎಂಜಿನ್‌ನಿಂದ ಅನುಗೊಳಿಸಲ್ಪಟ್ಟಿದ್ದು, ಕೆಟ್ಟ ಹವಾಮಾನದಲ್ಲಿ ಸಹ ಹಗಲುರಾತ್ರಿ ಕೆಲಸಮಾಡಬಲ್ಲದು ಮತ್ತು ಸುಮಾರು ಮೂರುವರೆ ಮೀಟರ್‌ಗಳಷ್ಟು [11 ಅಡಿ] ಎತ್ತರವಿರುವ ಮರಗಳಿಂದ ಕಿತ್ತಿಳೆ ಹಣ್ಣುಗಳನ್ನು ಕೀಳಬಲ್ಲದು . . . ಒಟ್ಟುಗೂಡಿಸುವಾಗ, ಅದು ತಾಸೊಂದಕ್ಕೆ ಎಂಟು ಕಿಲೋಮೀಟರುಗಳಷ್ಟು [5 ಮೈಲುಗಳು] ಅಧಿಕತಮ ವೇಗದಲ್ಲಿ ಚಲಿಸುತ್ತದೆ ಮತ್ತು 500 ಕಿಲೋಗಳ ವರೆಗೆ [1,100 ಪೌಂಡ್‌ಗಳು] ಭಾರವನ್ನು ಕೊಂಡೊಯ್ಯಬಲ್ಲ ಬಂಡಿಯೊಂದನ್ನು ಎಳೆಯುತ್ತಾ, ತಾಸೊಂದಕ್ಕೆ 14 ಕಿಲೋಮೀಟರುಗಳಷ್ಟು [ತಾಸೊಂದಕ್ಕೆ 9 ಮೈಲುಗಳು] ಚಲನಾ ವೇಗವನ್ನು ಹೊಂದಿರುತ್ತದೆ.” (g94 7/8)
ನಿರ್ನಿದ್ರತಾ ರೋಗಿಗಳಿಗೆ ಸಹಾಯ
ನಿದ್ರೆ ಹೋಗುವುದರಲ್ಲಿ ಗಂಭೀರವಾದ ತೊಂದರೆಯಿರುವ ಜನರಿಗಾಗಿ, ಹಾರ್ವರ್ಡ್ ವೈದ್ಯಕೀಯ ಶಾಲೆಯ ಸಂಶೋಧಕರು ಸಲಹೆಗಳ ಒಂದು ಪಟ್ಟಿಯನ್ನು ಸಂಗ್ರಹಿಸಿದ್ದಾರೆ. ದ ಹಾರ್ವರ್ಡ್ ಮೆಂಟಲ್ ಹೆಲ್ತ್ ಲೆಟರ್‌ಗನುಸಾರ, ನಿದ್ದೆ ಹೋಗಲು ಸುಮಾರು 80 ನಿಮಿಷಗಳ ಅಗತ್ಯವಿದ್ದವರು ಗಮನಾರ್ಹವಾದ ಪ್ರಗತಿಯನ್ನು ಅನುಭವಿಸಿದರು. ಚಿಕಿತ್ಸೆಯನ್ನು ಅನೇಕ ವಾರಗಳ ವರೆಗೆ ಪ್ರಯತ್ನಿಸಿದ ಬಳಿಕ, “ರೋಗಿಗಳು ನಿದ್ದೆ ಹೋಗಲು ಸರಾಸರಿ ಕೇವಲ ಹತ್ತೊಂಬತ್ತು ನಿಮಿಷಗಳನ್ನು ತೆಗೆದುಕೊಂಡರು (75 ಸೇಕಡ ಇಳಿತ),” ಎಂದು ಲೆಟರ್ ದಾಖಲಿಸುತ್ತದೆ. ಶಿಫಾರಸ್ಸು ಮಾಡಲ್ಪಟ್ಟ ವಿಧಾನಗಳಲ್ಲಿ ಇವು ಸೇರಿವೆ: ಹಾಸಿಗೆಯಲ್ಲಿ ಏಳಕ್ಕಿಂತ ಹೆಚ್ಚು ತಾಸುಗಳನ್ನು ಕಳೆಯುವುದನ್ನು ತೊರೆಯಿರಿ; ನಿಮ್ಮ ಸರಾಸರಿ ನಿದ್ರಿಸುವ ಸಮಯಕ್ಕಿಂತಲೂ ಒಂದು ತಾಸು ಮೀರಿ ಹಾಸಿಗೆಯಲ್ಲಿ ಉಳಿಯುವುದನ್ನು ತ್ಯಜಿಸಿರಿ; ವಾರಾಂತ್ಯಗಳನ್ನು ಒಳಗೊಂಡು ಪ್ರತಿ ದಿನ ಅದೇ ಸಮಯದಲ್ಲಿ ಏಳಿರಿ; ನಿಮಗೆ ನಿದ್ರೆ ಬರುವಾಗ ಮಾತ್ರ ಮಲಗಲು ಹೋಗಿರಿ; ಮತ್ತು ನೀವು ಮಲಗಲು ಹೋದ ಬಳಿಕ 20 ನಿಮಿಷಗಳೊಳಗೆ ನೀವು ನಿದ್ದೆ ಹೋಗದಿರುವುದಾದರೆ, ಎದ್ದೇಳಿ ಮತ್ತು ಪುನಃ ನಿಮಗೆ ನಿದ್ರೆ ಬರುವ ವರೆಗೆ ವಿಶ್ರಾಂತಿಕರವಾದ ಏನನ್ನಾದರೂ ಮಾಡಿರಿ. (g94 6/22)
ಹೊರಗಿನ ದೃಶ್ಯದ ನೋಟದ ಮೌಲ್ಯ
ಅಮೆರಿಕದ ಮಿಶಿಗನ್‌ನ ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರಿಂದ ನಡೆಸಲ್ಪಟ್ಟ ಒಂದು ಅಧ್ಯಯನಕ್ಕನುಸಾರ, ಹೊರಗಿನ ದೃಶ್ಯದ ನೋಟವಿರುವ ಉದ್ಯೋಗಿಗಳು ಹೆಚ್ಚು ಉತ್ತಮವಾಗಿ ಕೆಲಸ ನಡೆಸುತ್ತಾರೆ. ಜನಪ್ರಿಯವಾದ ನಂಬಿಕೆಗೆ ಪ್ರತಿಕೂಲವಾಗಿ, ಒಂದು ನೋಟವಿರುವುದು ಹಗಲುಗನಸು ಕಾಣುವುದನ್ನು ಅಗತ್ಯವಾಗಿ ಉತ್ತೇಜಿಸುವುದಿಲ್ಲ. “ಹೊರಗಿನ ಪ್ರಪಂಚದ ನೋಟಗಳಿರುವ ಕೆಲಸಗಾರರು ತಮ್ಮ ಉದ್ಯೋಗಕ್ಕಾಗಿ ಹೆಚ್ಚು ಉತ್ಸಾಹವನ್ನು, ಕಡಿಮೆ ಆಶಾಭಂಗವನ್ನು, ಹೆಚ್ಚು ತಾಳ್ಮೆಯನ್ನು, ಉತ್ತಮ ಕೇಂದ್ರೀಕರಣವನ್ನು, ಮತ್ತು ಕಡಿಮೆ ಶಾರೀರಿಕ ಅಸ್ವಸ್ಥತೆಗಳನ್ನು ತೋರಿಸುತ್ತಾರೆ,” ಎಂದು ಒಂದು 1,200 ವ್ಯಕ್ತಿಗಳ ಸಮೀಕ್ಷೆಯು ಪ್ರಕಟಪಡಿಸಿತೆಂದು ಬಿಜ್‌ನೆಸ್ ವೀಕ್ (ಇಂಗ್ಲಿಷ್) ಪತ್ರಿಕೆಯು ವರದಿಸುತ್ತದೆ. ಅದಕ್ಕೆ ಪ್ರತಿಯಾಗಿ, ಕಿಟಕಿಗಳಿಲ್ಲದ ಕಿರುಕೋಣೆಗಳಲ್ಲಿರುವ ಕೆಲಸಗಾರರು “ಕಡಿಮೆ ಕಾಲ್ಪನಿಕ ಭಾವನೆಯುಳ್ಳವರು ಮತ್ತು ಹೆಚ್ಚು ಮುಂಗೋಪಿಗಳೂ” ಆಗಿರುವುದು ಸಂಭವನೀಯ ಮತ್ತು ಅವರಿಗೆ ಚಿತ್ತೈಕಾಗ್ರತೆಯೊಂದಿಗೆ ಹೆಚ್ಚು ಸಮಸ್ಯೆಗಳಿರುತ್ತವೆ. (g94 6/22)
ಸ್ತ್ರೀಯರ ವಿರುದ್ಧ ಬಲಾತ್ಕಾರ
ದ ಗ್ಲೋಬ್ ಆ್ಯಂಡ್ ಮೆಯ್‌ಲ್‌ಗನುಸಾರ, ಕೆನಡದ 51 ಸೇಕಡ ಸ್ತ್ರೀಯರು—16 ವರ್ಷ ಪ್ರಾಯದವರು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು—ತಮ್ಮ ವಯಸ್ಕ ಜೀವಿತಗಳಲ್ಲಿ ಕಡಿಮೆಪಕ್ಷ ಒಂದು ಬಾರಿಯಾದರೂ ಪುರುಷ ಬಲಾತ್ಕಾರಕ್ಕೆ ಬಲಿಪಶುಗಳಾಗಿದ್ದಾರೆಂದು ಇತ್ತೀಚೆಗಿನ ಸಮೀಕ್ಷೆಯೊಂದು ಪ್ರಕಟಪಡಿಸಿತು. ಇದು ಐವತ್ತು ಲಕ್ಷ ಸ್ತ್ರೀಯರಿಗಿಂತ ಹೆಚ್ಚಿನದಕ್ಕೆ ಸಮಾನ. “ಸ್ನೇಹಿತರು, ಗಂಡಂದಿರು, ಗೆಳೆಯರು, ಕುಟುಂಬ ಸದಸ್ಯರು ಅಥವಾ ತಮಗೆ ಪರಿಚಯವಿರುವ ಇತರ ವ್ಯಕ್ತಿ”ಗಳಿಂದ ಆಕ್ರಮಣಗಳು ಬಂದವೆಂದು ಸಂದರ್ಶಿಸಲ್ಪಟ್ಟ ಸ್ತ್ರೀಯರಲ್ಲಿ ಬಹುಮಟ್ಟಿಗೆ ಅರ್ಧ ಮಂದಿ ಹೇಳಿದರೆಂದು ಕೆನಡದ ಈ ವಾರ್ತಾ ಪತ್ರಿಕೆಯು ವರದಿಸಿತು. ಸಮೀಕ್ಷೆ ನಡೆಸಲ್ಪಟ್ಟ ಹತ್ತು ಪ್ರತಿಶತ ಸ್ತ್ರೀಯರು, ಕಳೆದ ವರ್ಷ ಒಂದರಲ್ಲಿಯೇ ಬಲಿಪಶುಗಳಾಗಿದ್ದರು, ಮತ್ತು 5ರಲ್ಲಿ 1 ಆಕ್ರಮಣವು ಶಾರೀರಿಕ ಹಾನಿಯನ್ನು ಉಂಟುಮಾಡಲು ಸಾಕಾಗುವಷ್ಟು ಗಂಭೀರವಾಗಿತ್ತು. ತಮ್ಮ ಗಂಡಂದಿರಿಂದ ಅಥವಾ ಸಹಜೀವಿಸುವ ಪುರುಷ ಸಹಭಾಗಿಗಳಿಂದ ತಾವು ತಳ್ಳಲ್ಪಡುತ್ತಾ, ಕಸಿದುಕೊಳ್ಳಲ್ಪಡುತ್ತಾ, ದಬ್ಬಲ್ಪಡುತ್ತಾ, ಹೊಡೆಯಲ್ಪಡುತ್ತಾ, ಒದೆಯಲ್ಪಡುತ್ತಾ, ಕಡಿಯಲ್ಪಡುತ್ತಾ, ಅಥವಾ ಬಡಿಯಲ್ಪಡುತ್ತಾ ಇದ್ದೇವೆಂದು ಅನೇಕ ಸ್ತ್ರೀಯರು ವರದಿಸಿದರು. (g94 6/22)
ಮಾನವ ಕುಲದ ಬಹು ಭಾಗಗಳನ್ನು ಕ್ಷಾಮವು ಪೀಡಿಸುತ್ತದೆ
ಮಾನವ ಕುಲವನ್ನು ಉಣಿಸಲು ಭೂಮಿಯು ಹಿಂದೆಂದೂ ಇಷ್ಟು ಆಹಾರವನ್ನು ಉತ್ಪಾದಿಸಿರಲಿಲ್ಲ; ಹಿಂದೆಂದೂ ಮಾನವ ಕುಲದ ಇಷ್ಟು ಅಧಿಕ ಭಾಗವು ಕ್ಷಾಮದಿಂದ ಪೀಡಿಸಲ್ಪಟ್ಟಿರಲ್ಲಿಲ. ವಿಶ್ವ ಬ್ಯಾಂಕ್‌ನ ಅತ್ಯಾಧುನಿಕ ಸಂಖ್ಯಾ ಸಂಗ್ರಹಣಕ್ಕನುಸಾರ, ಹಿಂದೆಂದಿಗಿಂತಲೂ ಹೆಚ್ಚಾಗಿ 1990ರಲ್ಲಿ ಕ್ಷಾಮವು ಸುಮಾರು 113 ಕೋಟಿ ವ್ಯಕ್ತಿಗಳ ಜೀವಿತಗಳನ್ನು ವೇದನೆಗೊಳಪಡಿಸಿತು, ಎಂದು ಫ್ರಾನ್ಸ್-ಪ್ರೆಸ್‌ನ ವಾರ್ತಾ ನಿಯೋಗವು ವರದಿಸುತ್ತದೆ. ವಿಕಾಸಶೀಲ ದೇಶಗಳಲ್ಲಿ ಜೀವಿಸುತ್ತಿರುವ ಸುಮಾರು 30 ಸೇಕಡದಷ್ಟು ಜನರನ್ನು ಇದು ಬಾಧಿಸಿದೆ. ಲೋಕದ ಅತ್ಯಂತ ಕೆಟ್ಟದ್ದಾಗಿ ಬಾಧಿಸಲ್ಪಟ್ಟ ಪ್ರಾಂತಗಳಾವುವೆಂದರೆ, ದಕ್ಷಿಣ ಏಷಿಯ, ಅಲ್ಲಿ 56.2 ಕೋಟಿ ಜನರು ಕ್ಷಾಮದಿಂದ ಕಷ್ಟಾನುಭವಿಸುತ್ತಾರೆ (ಜನಸಂಖ್ಯೆಯ 49 ಸೇಕಡ); ಆಫ್ರಿಕದಲ್ಲಿ 21.6 ಕೋಟಿ (ಜನಸಂಖ್ಯೆಯ 47.8 ಸೇಕಡ); ಸಮೀಪ ಪೂರ್ವ ಮತ್ತು ಉತ್ತರ ಆಫ್ರಿಕದಲ್ಲಿ 7.3 ಕೋಟಿ (ಜನಸಂಖ್ಯೆಯ 33.1 ಸೇಕಡ); ಮತ್ತು ಲ್ಯಾಟಿನ್ ಅಮೆರಿಕ ಮತ್ತು ಕ್ಯಾರಿಬಿಯನ್‌ನಲ್ಲಿ 10.8 ಕೋಟಿ (ಜನಸಂಖ್ಯೆಯ 25.2 ಸೇಕಡ). ನ್ಯೂನ ಪೋಷಣೆಯಿಂದ ಕಷ್ಟಾನುಭವಿಸುವ ಇತರ ಸುಮಾರು 100 ಕೋಟಿ ವ್ಯಕ್ತಿಗಳನ್ನು ಈ ಸಂಖ್ಯೆಗಳು ಒಳಗೊಂಡಿರುವುದಿಲ್ಲ. (g94 7/8)
ಗಮನಾರ್ಹ ವಿಧಾನದಲ್ಲಿ ಆದಾಯವನ್ನು ಹೆಚ್ಚಿಸುವುದು
ಇಸವಿ 1993ರ ಆರಂಭದಲ್ಲಿ, ಜರ್ಮನಿಯಲ್ಲಿ ಅಸಹಜ ವಿಜ್ಞಾನಗಳ (ಪ್ಯಾರಾ ಸಎನ್ಸಸ್) ವಿಷಯದಲ್ಲಿ ವೈಜ್ಞಾನಿಕ ಸಂಶೋಧನೆಗಾಗಿರುವ ಸಂಘವು, ಜ್ಯೋತಿಷಿಗಳಿಂದ ಮಾಡಲ್ಪಟ್ಟ 70 ಭವಿಷ್ಯ ನುಡಿಗಳನ್ನು ಒಟ್ಟುಗೂಡಿಸಿತು ಮತ್ತು ತದನಂತರ ವರ್ಷದ ಅಂತ್ಯದಲ್ಲಿ ಫಲಿತಾಂಶಗಳನ್ನು ಅಂದಾಜು ಮಾಡಿತು. ಕಳೆದ ವರ್ಷಗಳ ಭವಿಷ್ಯ ನುಡಿಗಳ ಅಸಫಲತೆಗಳ ದೃಷ್ಟಿಕೋನದಲ್ಲಿ (1992 ಜೂನ್ 8ರ ಎಚ್ಚರ!ದ ಪುಟ 29, ಮತ್ತು 1993 ಜುಲೈ 8ರ ಪುಟ 29ನ್ನು ನೋಡಿರಿ), 1993ರಲ್ಲಿ ಜ್ಯೋತಿಷಿಗಳು ಹೆಚ್ಚು ಯಶ್ವಸಿಯಾಗಿದ್ದರೊ? ಅವರು “ಅನೇಕ ಸುಳ್ಳುಗಳನ್ನು ಹೇಳಿದರು” ಎಂದು ನಾಸಾಶ ನೋಯಾ ಪ್ರೆಸ ವರದಿಸುತ್ತದೆ. “ಅಧಿಕಾಂಶ ಜ್ಯೋತಿಷಿಗಳು ತಮ್ಮ ಸ್ವಂತ ವಾರ್ಷಿಕ ಮುನ್ಸೂಚನೆಗಳನ್ನು ಕೂಡ ನಂಬುವುದಿಲ್ಲ,” ಎಂದು ಸಂಘದ ಪ್ರತಿನಿಧಿಯೊಬ್ಬನು ಹೇಳಿಕೆ ನೀಡುತ್ತಾನೆ. ಆದರೆ ಜರ್ಮನಿಯಲ್ಲಿ ಜ್ಯೋತಿಶ್ಶಾಸ್ತ್ರವು ದೊಡ್ಡ ವ್ಯಾಪಾರವಾಗಿದ್ದು, 5.7 ಕೋಟಿ (10 ಕೋಟಿ ಡಾಯಿಚ್ ಮಾರ್ಕ್‌ಗಳು) ಮೊತ್ತದಷ್ಟು ವಾರ್ಷಿಕ ವ್ಯವಹಾರ ನಡೆಸುತ್ತಿದೆ. ಅನೇಕ ಭವಿಷ್ಯ ವಾದಿಗಳು ಗಮನಾರ್ಹ ಮುನ್ಸೂಚನೆಗಳನ್ನು, ಅವು ಆದಾಯ ವೃದ್ಧಿಮಾಡಲಿಕ್ಕಾಗಿ “ಪ್ರಚಾರವನ್ನು ಪಡೆದುಕೊಳ್ಳಲು ಒಂದು ಪರಿಣಾಮಕಾರಿ ವಿಧಾನ”ವಾಗಿ ಎಣಿಸುತ್ತಾರೆ ಎಂದು ವಾರ್ತಾಪತ್ರಿಕೆಯು ವರದಿಸುತ್ತದೆ. (g94 7/8)
ಮಕ್ಕಳ ಉದ್ಯೋಗ ಮಾರುಕಟ್ಟೆ
ಬ್ರೆಜಿಲ್‌ನಲ್ಲಿ ಅಂದಾಜಿಸಲಾಗುವ 80 ಲಕ್ಷ ಮಕ್ಕಳು ಉದ್ಯೋಗ ಮಾಡುತ್ತಿದ್ದಾರೆಂದು ಅ ಎಸ್ಟಾಡ ಡ ಸಾನ್ ಪಾಲ್ ವರದಿಸುತ್ತದೆ. ಈ ಮಕ್ಕಳು ವಯಸ್ಕರು ಮಾಡುವಂತಹದ್ದೇ ಕೆಲಸವನ್ನು ನಿರ್ವಹಿಸಬಹುದು. ಅನೇಕ ವೇಳೆ ಕಡಿಮೆ ಕೂಲಿ ಪಡೆದರೂ, ಅವರು ಕುಟುಂಬದ ಆದಾಯಕ್ಕೆ ಸ್ವಲ್ಪ ಸಹಾಯಮಾಡುತ್ತಾರೆ. ತಕ್ಕಷ್ಟು ವಿದ್ಯಾಭ್ಯಾಸವಿಲ್ಲದೆ ಈ ಎಳೆಯ ಕೆಲಸಗಾರರು ಅರೆಅಕ್ಷರಸ್ಥರಾಗಿ ಮತ್ತು ತಮ್ಮ ಹೆತ್ತವರಷ್ಟೇ ನ್ಯೂನರಾಗಿ ಉಳಿಯುವುದು ಸಂಭವನೀಯ. ಕಾರ್ಮಿಕ ಇಲಾಖೆಯ ಲೂಯೀಸ್ ಕ್ಲಾಡಿಯೂ ಡ ವಾಸ್ಕೊನ್ಸೇಲೋಸ್ ಹೇಳುವುದು, “ವಯಸ್ಕನ ಸಂಬಳದ ಮೂರನೇ ಒಂದು ಭಾಗವನ್ನು ಪಡೆಯಲು ಇಷ್ಟಪಡುವುದರಿಂದ, ಕೆಲಸ ಮಾಡುವ ಹುಡುಗನು ಕುಟುಂಬದ ಇತರ ತಲೆಗಳ ಉದ್ಯೋಗವನ್ನು ತೆಗೆದುಹಾಕುತ್ತಾನೆ.” (g94 7/8)
ಸಾವಿರಾರು ಸಸ್ಯಗಳು ಕಡೆಗಣಿಸಲ್ಪಡುತ್ತವೆ
“ಇತಿಹಾಸದಲ್ಲಿ ಮಾನವನ ಆಹಾರಕ್ಕಾಗಿ ಹಲವಾರು ಸಸ್ಯ ಜಾತಿಗಳು ಉಪಯೋಗಿಸಲ್ಪಟ್ಟಿವೆ, ಆದರೆ ಇಂದು ಕೇವಲ 150 ಜಾತಿಯ ಸಸ್ಯಗಳು ಕೃಷಿಮಾಡಲ್ಪಡುತ್ತಿವೆ ಮತ್ತು, ಕೇವಲ ಮೂರು ಸಸ್ಯಗಳು, ಸಸ್ಯಗಳಿಂದ ಉತ್ಪತ್ತಿ ಮಾಡಲ್ಪಡುವ ಬಹುಮಟ್ಟಿಗೆ 60 ಸೇಕಡ ಕ್ಯಾಲೊರಿಗಳನ್ನು ಮತ್ತು ಸಸಾರಜನಕವನ್ನು ಒದಗಿಸುತ್ತವೆ,” ಎಂದು ಯುಎನ್‌ನ ಆಹಾರ ಮತ್ತು ಕೃಷಿ ಸಂಸ್ಥೆಯು ಹೇಳುತ್ತದೆ. ಅಂತಾರಾಷ್ಟ್ರೀಯ ವ್ಯಾವಸಾಯಿಕ ಅಧ್ಯಯನಗಳು ಇದನ್ನು ದೃಢಪಡಿಸುತ್ತವೆ. ನಿಸರ್ಗದಲ್ಲಿ ದೊರಕುವ ಪುಷ್ಟಿಕರವಾದ ಇತರ ಸಾವಿರಾರು ಸಸ್ಯಗಳನ್ನು ಅಲಕ್ಷಿಸಿ, ಮಾನವರು ತಮ್ಮ ಬಳಕೆಯ ಪದಾರ್ಥಗಳಿಗೆ—ಅಕ್ಕಿ, ಜೋಳ, ಮತ್ತು ಗೋದಿ—ಅಂಟಿಕೊಳ್ಳುತ್ತಾರೆ. (g94 6/22)
ಏಯ್ಡ್ಸ್ ರೋಗವಿರುವ ರಕ್ತದಿಂದ ಪ್ರಮಾದಗಳು
ವೈದ್ಯಕೀಯ ಕೆಲಸಗಾರರನ್ನು ಒಳಗೊಂಡು ಏಚ್‌ಐವಿಯಿಂದ ಸೋಂಕಿತವಾದ ರಕ್ತದಿಂದಾದ ಪ್ರಮಾದಗಳ ಪ್ರಮಾಣದ ಕುರಿತು ವರದಿಗಳನ್ನು ಒಪ್ಪಿಸುವಂತೆ ಇತ್ತೀಚೆಗೆ ಜಪಾನಿನ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಇಲಾಖೆಯು ಆಸ್ಪತ್ರೆಗಳನ್ನು ಕೇಳಿಕೊಂಡಿತು. ಕಳೆದ ಹತ್ತು ವರುಷಗಳಲ್ಲಿ ಸಂಭವಿಸಿದ ಪ್ರಮಾದಗಳಲ್ಲಿ ನಿರ್ದಿಷ್ಟವಾದ ಆಸಕ್ತಿಯಿತ್ತು. ದ ಡೇಲಿ ಯೋಮಿಯುರಿ (ಇಂಗ್ಲಿಷ್)ಗನುಸಾರ, “ಆಕಸ್ಮಿಕವಾದ 2,997 ರಕ್ತ ಸಂಪರ್ಕಗಳು ಸೇರಿ, ಸೂಜಿ ಪ್ರಮಾದಗಳ ಒಟ್ಟು ಸಂಖ್ಯೆಯು 12,914” ಎಂದು ಪ್ರತಿಕ್ರಿಯಿಸಿದ 276 ಆಸ್ಪತ್ರೆಗಳು ವರದಿಮಾಡಿದವು. ಇವುಗಳಲ್ಲಿ, ನೂರಕ್ಕಿಂತಲೂ ಹೆಚ್ಚು ಏಚ್‌ಐವಿ ರೋಗವಿರುವ ರಕ್ತವನ್ನು ಒಳಗೊಂಡಿದ್ದವು. ಈ ಪ್ರಮಾದಗಳಿಗೆ ಆಹುತಿಯಾದವರೆಲ್ಲರೂ ಇಲ್ಲಿಯವರೆಗೆ ಏಚ್‌ಐವಿ—ಏಯ್ಡ್ಸ್ ರೋಗವನ್ನುಂಟುಮಾಡುವ ವೈರಸ್—ಯಿಂದ ಸೋಂಕಿತರಾಗಿಲ್ಲ. (g94 6/22)
ಬೌದ್ಧಿಕ ಆಟಿಕೆಗಳು
“ಭವಿಷ್ಯತ್ತಿನ ಸ್ಪರ್ಧಾತ್ಮಕವಾದ ಪ್ರಯೋಜನಕ್ಕಾಗಿ, ಸರಳ ಮನೋರಂಜಕವಾಗಿರುವುದನ್ನು ಹೆತ್ತವರು ಬದಲಾಯಿಸುವಾಗ, ಶೈಕ್ಷಣಿಕ ಆಟಿಕೆಯ ಮಾರಾಟವು ಗಗನಕ್ಕೇರುತ್ತಿದೆ,” ಎಂದು ಕೆನಡದ ಒಂದು ವಾರ್ತಾಪತ್ರಿಕೆಯಾದ, ದ ಗ್ಲೋಬ್ ಆ್ಯಂಡ್ ಮೆಯಿಲ್ ಗಮನಿಸುತ್ತದೆ. ಕೆಲವು ಹೆತ್ತವರು “ಕೇವಲ ವಿನೋದಕ್ಕಾಗಿ”ರುವ ಆಟಿಕೆಗಳೊಂದಿಗೆ ಆಡುವುದರಿಂದ ಸಹ ತಮ್ಮ ಮಕ್ಕಳನ್ನು ತಡೆಗಟ್ಟುತ್ತಿದ್ದಾರೆಂದು, “ಅದಕ್ಕೆ ಬದಲಾಗಿ, ಆಟದ ಪ್ರತಿಯೊಂದು ಕ್ಷಣವೂ ಕೌಶಲಗಳನ್ನು ಕಲಿಸುವ ಸಾಮರ್ಥ್ಯಗಳಿಂದ ಸಂಪೂರ್ಣವಾಗಿ ಆವರಿಸಲ್ಪಟ್ಟಿರುವುದನ್ನು ಅವರು ಬಯಸುತ್ತಾರೆ,” ಎಂದು ವರದಿಯು ಕೂಡಿಸುತ್ತದೆ. ಈ ಪ್ರವೃತ್ತಿಯು ಹೆಚ್ಚು ಮಹತ್ತರ ಪ್ರಮಾಣದ ಬುದ್ಧಿಶಕ್ತಿಯನ್ನು ಮತ್ತು ಉತ್ತಮ ಕೌಶಲಗಳನ್ನು ಮಕ್ಕಳಲ್ಲಿ ಉತ್ಪಾದಿಸಬಲ್ಲದೆಂದು ಅನೇಕರು ನಂಬುವಾಗ, ಕೆಲವು ಪರಿಣತರು ಅಸಮ್ಮತಿಸುತ್ತಾರೆ. ಬಹುಮೂಲ್ಯವಾದ ರಚನಾಕ್ರಮರಹಿತ ಆಟದ ಸಮಯವನ್ನು ಮಕ್ಕಳಿಂದ ಕಸಿದುಕೊಳ್ಳುವುದು, ಅವುಗಳ ರಚನಾಶಕ್ತಿಯನ್ನು ನಿರ್ಬಂಧಿಸುವುದೆಂದು ಅವರು ಅಭಿಪ್ರಯಿಸುತ್ತಾರೆ, “ಮತ್ತು ಫಲಿತಾಂಶವಾಗಿ, ಅವರು ಕಡಿಮೆ ವಿಷಯಗಳನ್ನು ಕಲಿಯುವರು,” ಎಂದು ವಾರ್ತಾಪತ್ರಿಕೆಯು ಹೇಳುತ್ತದೆ. (g94 6/22)