ಶಿಷ್ಟಾಚಾರಗಳು “ಹೊಸ ನೀತಿ ಪದ್ಧತಿ”ಯಿಂದ ತಳ್ಳಿಹಾಕಲ್ಪಟ್ಟಿವೆಯೊ?
‘ಕೆಟ್ಟದ್ದನ್ನು ಒಳ್ಳೇದೆಂದೂ ಕತ್ತಲನ್ನು ಬೆಳಕೆಂದೂ ಕಹಿಯನ್ನು ಸಿಹಿಯೆಂದೂ ಸ್ಥಾಪಿಸುವವರ ಗತಿಯನ್ನು ಏನೆಂದು ಹೇಳಲಿ.’—ಯೆಶಾಯ 5:20.
ಶಿಷ್ಟಾಚಾರಗಳು ಮತ್ತು ನೀತಿಬೋಧೆಗಳ ಸಂಬಂಧದಲ್ಲಿ 20ನೆಯ ಶತಮಾನ ಬಿರುಸಾದ ಬದಲಾವಣೆಗಳನ್ನು ನೋಡಿತು. ಎರಡು ಜಾಗತಿಕ ಯುದ್ಧಗಳನ್ನು ಅನುಸರಿಸಿ ಬಂದ ದಶಕಗಳಲ್ಲಿ, ಹಳೆಯ ಮೌಲ್ಯ ಪದ್ಧತಿಗಳು ಕ್ರಮೇಣ ಹಳೆಯ ಶೈಲಿಗಳಾಗಿ ವೀಕ್ಷಿಸಲ್ಪಟ್ಟವು. ಮಾನವ ವರ್ತನೆ ಮತ್ತು ವಿಜ್ಞಾನಗಳ ಕ್ಷೇತ್ರಗಳಲ್ಲಿ ಆದ ಬದಲಾವಣೆಯ ಸ್ಥಿತಿಗಳು ಮತ್ತು ಹೊಸ ವಿಚಾರ ಸರಣಿಗಳು, ಹಳೆಯ ಮೌಲ್ಯಗಳು ಇನ್ನುಮುಂದೆ ಕ್ರಮಬದ್ಧವಲ್ಲವೆಂದು ಅನೇಕರಿಗೆ ಮನವರಿಕೆ ಮಾಡಿದವು. ಒಮ್ಮೆ ಉನ್ನತ ಅಭಿಮಾನದಿಂದ ವೀಕ್ಷಿಸಲ್ಪಡುತ್ತಿದ್ದ ಶಿಷ್ಟಾಚಾರಗಳನ್ನು ಆಧಿಕ್ಯವೆಂದು ಬಿಟ್ಟುಬಿಡಲಾಯಿತು. ಒಮ್ಮೆ ಗೌರವಿಸಲ್ಪಡುತ್ತಿದ್ದ ಬೈಬಲ್ ಆದರ್ಶಗಳನ್ನು ಹಳೆಯ ಪದ್ಧತಿಯೆಂದು ಹೇಳಿ ತಳ್ಳಿಬಿಡಲಾಯಿತು. ಇಪ್ಪತ್ತನೆಯ ಶತಮಾನದ ಅತ್ಯಾಧುನಿಕ ವ್ಯಕ್ತಿಗಳ ಅನಿರ್ಬಂಧಿತವಾದ, ವಿಮುಕ್ತ ಸಮಾಜಕ್ಕೆ ಅವು ತೀರ ನಿರ್ಬಂಧಿತವಾಗಿದ್ದವು.
ಮಾನವ ಇತಿಹಾಸದಲ್ಲಿ ಈ ಉತ್ಕಟ ಸಮಯವನ್ನು ನೋಡಿದ ವರ್ಷವು 1914 ಆಗಿತ್ತು. ಆ ವರ್ಷದ ಮತ್ತು Iನೆಯ ಲೋಕಯುದ್ಧದ ಕುರಿತು ಇತಿಹಾಸಕಾರರ ಬರಹಗಳು, 1914ನೆಯ ವರ್ಷವು ಪ್ರಧಾನ ಬದಲಾವಣೆಯ ವರ್ಷ, ಮಾನವ ಇತಿಹಾಸದಲ್ಲಿ ಯುಗಗಳನ್ನು ವಿಭಾಗಿಸುವುದರಲ್ಲಿ ಒಂದು ನಿಜ ಚಿಹ್ನೆಯೆಂದು ಪ್ರಕಟಿಸುವ ಅವರ ಅನೇಕ ಅವಲೋಕನಗಳಿಂದ ತುಂಬಿದೆ. ಯುದ್ಧದ ಬೆನ್ನಲ್ಲಿ ಅಬ್ಬರಿಸುವ ಇಪ್ಪತ್ತುಗಳು ನುಗ್ಗಿ ಬಂದವು ಮತ್ತು ಜನರು ಯುದ್ಧವರ್ಷಗಳಲ್ಲಿ ತಮಗೆ ತಪ್ಪಿಹೋಗಿದ್ದ ವಿನೋದಗಳನ್ನು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದರು. ಹಳೆಯ ಮೌಲ್ಯಗಳನ್ನು ಮತ್ತು ಅನನುಕೂಲವಾಗಿದ್ದ ನೈತಿಕ ನಿರ್ಬಂಧಗಳನ್ನು ವಿಲಾಸ ಲೋಲುಪತೆಗೆ ದಾರಿತೆರೆಯಲಿಕ್ಕಾಗಿ ತೊಲಗಿಸಲಾಯಿತು. ಶಾರೀರಿಕ ಬೆನ್ನಟ್ಟುವಿಕೆಗಳಲ್ಲಿ ಲೋಲುಪರಾಗುವ ಒಂದು ಹೊಸ ನೈತಿಕತೆಯನ್ನು—ಮೂಲತಃ ಯಾವುದಕ್ಕೂ ಅನುಮತಿಯಿದೆ ಎಂಬ ಮಾರ್ಗ—ಅವಿಧಿಯಾಗಿ ಸ್ಥಾಪಿಸಲಾಯಿತು. ಈ ಹೊಸ ನೈತಿಕ ನಿಯಮವು ಅನಿವಾರ್ಯವಾಗಿ ತನ್ನೊಂದಿಗೆ ಶಿಷ್ಟಾಚಾರದಲ್ಲಿ ಬದಲಾವಣೆಯನ್ನು ಒಯ್ಯಿತು.
ಇತಿಹಾಸಕಾರ ಫ್ರೆಡ್ರಿಕ್ ಲೂಇಸ್ ಆ್ಯಲನ್ ಇದರ ವಿಷಯದಲ್ಲಿ ಹೇಳಿಕೆ ನೀಡುತ್ತಾರೆ: “ಕ್ರಾಂತಿಯ ಇನ್ನೊಂದು ಪರಿಣಾಮವು ಶಿಷ್ಟಾಚಾರ ಕೇವಲ ಬದಲಾವಣೆ ಹೊಂದಿದ್ದಷ್ಟೇ ಅಲ್ಲ, ಬದಲಿಗೆ, ಕೆಲವು ವರ್ಷಗಳಲ್ಲಿ ಅದು ಅಶಿಷ್ಟಾಚಾರವಾಗಿತ್ತು . . . ಈ ದಶಕದಲ್ಲಿ ಆತಿಥೇಯ ಸ್ತ್ರೀಯರು . . . ತಮ್ಮ ಅತಿಥಿಗಳು ಬರುವಾಗ ಅಥವಾ ಬೀಳ್ಕೊಡುವಾಗ ತಮ್ಮೊಂದಿಗೆ ಮಾತಾಡುವ ಪ್ರಯತ್ನವನ್ನು ಮಾಡಲಿಲ್ಲವೆಂದು ಕಂಡುಹಿಡಿದರು; ಡಾನ್ಸ್ಗಳಿಗೆ ಆಮಂತ್ರಿಸಲ್ಪಡದೆ ನುಗ್ಗಿ ಬರುವುದು ಅಂಗೀಕರಿಸಲ್ಪಟ್ಟ ಪದ್ಧತಿಯಾಯಿತು. ಜನರು ಊಟಕ್ಕೆ ತಡವಾಗಿ ಬರುವ ಶೈಲಿಯನ್ನು ಉಪಯೋಗಿಸಿದರು, ಉರಿಯುವ ಸಿಗರೇಟುಗಳನ್ನು ಅಲ್ಲಲ್ಲಿ ಬಿಟ್ಟುಹೋದರು, ಅವುಗಳ ಬೂದಿಯನ್ನು, ಕ್ಷಮೆಯನ್ನು ಯಾಚಿಸದೆ ನೆಲಹಾಸುಗಳ ಮೇಲೆ ಚೆಲ್ಲಿದರು. ಹಳೆಯ ನಿರ್ಬಂಧಗಳು ಕೆಳಗೆ ಬಿದ್ದಿದ್ದವು, ಹೊಸತಾದ ಯಾವುದನ್ನೂ ಕಟ್ಟಿರಲಿಲ್ಲ, ಮತ್ತು ಈ ಮಧ್ಯೆ ಅಶಿಷ್ಟಾಚಾರಿಗಳು ತಮಗೆ ಖುಷಿ ಬಂದಂತೆ ಮಾಡಲು ಸ್ವತಂತ್ರರಾಗಿದ್ದರು. ಯಾವುದೋ ಒಂದು ಕಾಲದಲ್ಲಿ, ಯುದ್ಧವನ್ನು ಅನುಸರಿಸಿ ಬಂದ ಆ ಹತ್ತು ವರ್ಷಗಳು ಯೋಗ್ಯವಾಗಿಯೆ ದುಷ್ಟಾಚಾರದ ದಶಕವೆಂದು ಕರೆಯಲ್ಪಡಬಹುದು. . . . ಆ ದಶಕವು ಅಸಭ್ಯವಾಗಿದ್ದರೆ, ಅದು ಅಸಂತುಷ್ಟವಾದದ್ದೂ ಆಗಿತ್ತು. ಆ ಹಳೆಯ ವ್ಯವಸ್ಥೆಯೊಂದಿಗೆ, ಜೀವಕ್ಕೆ ಶೋಭೆ ಮತ್ತು ಅರ್ಥವನ್ನು ಕೊಟ್ಟಿದ್ದ ಮೌಲ್ಯಗಳ ಕಟ್ಟೇ ಹೋಗಿತ್ತು. ಮತ್ತು ಬದಲಿ ಮೌಲ್ಯಗಳು ಬೇಗನೆ ಕಂಡುಹಿಡಿಯಲ್ಪಡಲಿಲ್ಲ.”
ಜೀವನಕ್ಕೆ ಶೋಭೆ ಮತ್ತು ಅರ್ಥವನ್ನು ಕೊಟ್ಟ ಬದಲಿ ಮೌಲ್ಯಗಳು ಕಂಡುಹಿಡಿಯಲ್ಪಡಲೇ ಇಲ್ಲ. ಅವುಗಳನ್ನು ಹುಡುಕಿದ್ದೂ ಇಲ್ಲ. ಅಬ್ಬರಿಸುವ ಇಪ್ಪತ್ತುಗಳ ಉದ್ರಿಕ್ತವಾದ ಏನೂ ನಡೆಯುತ್ತದೆಂಬ ಜೀವನಶೈಲಿ ಜನರನ್ನು ನೈತಿಕ ನಿರ್ಬಂಧಗಳಿಂದ ಬಿಡಿಸಿತು, ಇದು ಅವರಿಗೆ ಯೋಗ್ಯವಾಗಿಯೂ ಕಂಡುಬಂತು. ಅವರು ನೈತಿಕತೆಯನ್ನು ಬದಿಗೊತ್ತುತ್ತಿರಲಿಲ್ಲ; ಅವರು ಅದನ್ನು ಪರಿಷ್ಕರಿಸಿ, ತುಸು ಸಡಲಿಸಿದರು. ತಕ್ಕ ಸಮಯದಲ್ಲಿ ಅವರು ಅದನ್ನು ಹೊಸ ನೈತಿಕತೆಯೆಂದು ಕರೆದರು. ಅದರಲ್ಲಿ ಪ್ರತಿಯೊಬ್ಬನು ತನ್ನ ಕಣ್ಣಿಗೆ ಸರಿಯಾದುದನ್ನು ಮಾಡುತ್ತಾನೆ. ಅವನೇ ಒಂದನೆಯ ನಂಬರು. ಅವನು ತನಗೆ ಇಷ್ಟಬಂದುದನ್ನು ಮಾಡುತ್ತಾನೆ. ಅವನು ತನ್ನ ಸ್ವತಂತ್ರ ಪಥವನ್ನು ಮಾಡಿಕೊಳ್ಳುತ್ತಾನೆ.
ಅಥವಾ ಹಾಗೆಂದು ಅವನು ಯೋಚಿಸುತ್ತಾನೆ. ವಾಸ್ತವವಾಗಿ, ಮೂರು ಸಾವಿರ ವರ್ಷಗಳ ಹಿಂದೆ ವಿವೇಕಿ ರಾಜ ಸೊಲೊಮೋನನು, “ಲೋಕದಲ್ಲಿ ಹೊಸದೇನೂ ಇಲ್ಲ,”ವೆಂದು ಹೇಳಿದನು. (ಪ್ರಸಂಗಿ 1:9) ಅದಕ್ಕೂ ಮೊದಲು, ನ್ಯಾಯಸ್ಥಾಪಕರ ದಿನಗಳಲ್ಲಿ, ಇಸ್ರಾಯೇಲ್ಯರಿಗೆ ಅವರು ದೇವರ ನಿಯಮಗಳಿಗೆ ವಿಧೇಯರಾಗುತ್ತಾರೋ ಇಲ್ಲವೋ ಎಂಬ ವಿಷಯದಲ್ಲಿ ಗಣನೀಯವಾದ ವರ್ತನಾ ಸ್ವಾತಂತ್ರ್ಯವಿತ್ತು: “ಆ ಕಾಲದಲ್ಲಿ ಇಸ್ರಾಯೇಲ್ಯರೊಳಗೆ ಅರಸನಿರಲಿಲ್ಲ; ಪ್ರತಿಯೊಬ್ಬನೂ ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದನು.” (ನ್ಯಾಯಸ್ಥಾಪಕರು 21:25) ಆದರೆ ಹೆಚ್ಚಿನವರು ನಿಯಮಕ್ಕೆ ಕಿವಿಗೊಡದವರಾಗಿ ಪರಿಣಮಿಸಿದರು. ಈ ವಿಧದಲ್ಲಿ ಬಿತ್ತಿದ ಇಸ್ರಾಯೇಲ್ಯರು ರಾಷ್ಟ್ರೀಯ ವಿಪತ್ತುಗಳ ನೂರಾರು ವರ್ಷಗಳನ್ನು ಕೊಯ್ದರು. ತದ್ರೀತಿ, ಇಂದು ಜನಾಂಗಗಳು ವೇದನೆ ಮತ್ತು ಕಷ್ಟಾನುಭವಗಳ ಶತಮಾನಗಳನ್ನು ಕೊಯ್ದಿವೆ—ಮತ್ತು ಅತಿ ಕೆಡುಕಾದ ವಿಪತ್ತು ಇನ್ನೂ ಬರಲಿದೆ.
ಹೊಸ ನೈತಿಕತೆಯನ್ನು ಹೆಚ್ಚು ನಿರ್ದಿಷ್ಟವಾಗಿ ಗುರುತಿಸುವ “ಸಂಬಂಧ ವಾದ” ಎಂಬ ಇನ್ನೊಂದು ಪದವಿದೆ. ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲೀಜಿಯೆಟ್ ಡಿಕ್ಷನರಿ ಅದನ್ನು ಹೀಗೆ ನಿರೂಪಿಸುತ್ತದೆ: “ನೈತಿಕ ಸತ್ಯಗಳು ಅವುಗಳನ್ನು ಹಿಡಿದುಕೊಂಡಿರುವ ವ್ಯಕ್ತಿಗಳ ಮತ್ತು ಗುಂಪುಗಳ ಮೇಲೆ ಹೊಂದಿಕೊಂಡಿವೆ ಎಂಬ ನೋಟ.” ಸಂಕ್ಷಿಪ್ತವಾಗಿ, ಸಂಬಂಧ ವಾದವು ಶಿಷ್ಯರು, ತಮಗೆ ಯಾವುದು ಒಳ್ಳೆಯದೋ ಅದು ತಮಗೆ ನೈತಿಕವೆಂದು ವಾದಿಸುತ್ತಾರೆ. ಒಬ್ಬ ಲೇಖಕನು ಹೀಗೆಂದು ಹೇಳಿದಾಗ ಸಂಬಂಧ ವಾದವನ್ನು ವಿಕಸಿಸಿದನು: “ಮೇಲ್ಮೈಯ ಕೆಳಗೆ ದೀರ್ಘಕಾಲದಿಂದ ಹೊಂಚು ಕಾಯುತ್ತಿದ್ದ ಸಂಬಂಧ ವಾದವು, ಎಪ್ಪತ್ತುಗಳ ‘ಅಹಂ ದಶಕ’ದ ಬಳಕೆಯಲ್ಲಿರುವ ತತ್ವಜ್ಞಾನವಾಗಿ ಎದ್ದುಬಂತು; ಎಂಬತ್ತುಗಳ ಜಾಸ್ತಿ ಹಣ ಸಂಪಾದಿಸುವ ಮಧ್ಯಮ ವರ್ಗದ ಯುವ ಯಪ್ಪಿವಾದದಲ್ಲಿ ಇದು ಇನ್ನೂ ಆಳುತ್ತದೆ. ನಾವು ಇನ್ನೂ ಸಾಂಪ್ರದಾಯಿಕ ಮೌಲ್ಯಗಳಿಗೆ ಔಪಚಾರಿಕ ಸ್ತುತಿಯನ್ನು ಕೊಡುತ್ತಿರಬಹುದು, ಆದರೆ ರೂಢಿಯಲ್ಲಿ, ನನಗೆ ಯಾವುದು ಒಳ್ಳೆಯದಾಗಿದೆಯೋ ಅದು ಸರಿ.”
ಮತ್ತು ಇದರಲ್ಲಿ ಶಿಷ್ಟಾಚಾರಗಳು ಸೇರುತ್ತವೆ—‘ಅದು ನನಗೆ ಇಷ್ಟವಿರುವಲ್ಲಿ ನಾನದನ್ನು ಮಾಡುವೆ; ಇಷ್ಟವಿಲ್ಲದಿರುವಲ್ಲಿ ಮಾಡೆ. ಅದು ನಿನಗೆ ಹೆಚ್ಚು ಶಿಷ್ಟಾಚಾರಾತ್ಮಕವಾಗಿರುವುದಾದರೂ ಅದು ನನಗೆ ಯೋಗ್ಯವಾಗಿರದು. ಅದು ನನ್ನ ಸ್ವತಂತ್ರ ಸ್ವಂತಿಕೆಯನ್ನು ಹಾಳುಮಾಡಿ ನಾನು ಬಲಹೀನನಾಗಿ ಕಾಣುವಂತೆ ಮತ್ತು ಪ್ರಯೋಜನವಿಲ್ಲದವನಾಗಿ ಮಾರ್ಪಡುವಂತೆ ಮಾಡುವುದು.’ ಇಂತಹ ಜನರಿಗೆ ಇದು ಕೇವಲ ಒರಟು ವರ್ತನೆಗೆ ಮಾತ್ರವಲ್ಲ, ‘ದಯಮಾಡಿ, ನನಗೆ ವಿಷಾದವಿದೆ, ಕ್ಷಮಿಸಿ, ಉಪಕಾರ, ನಾನು ಬಾಗಿಲು ತೆರೆಯುವಂತೆ ಬಿಡಿ, ನನ್ನ ಸ್ಥಳದಲ್ಲಿ ಕೂತುಕೊಳ್ಳಿ, ಆ ಕಟ್ಟನ್ನು ನಾನು ತೆಗೆದುಕೊಳ್ಳುತ್ತೇನೆ,’ ಎಂಬ ಸುಲಭವಾದ, ದೈನಂದಿನ ಲಘು ವಿವರಗಳಿಗೂ ಅನ್ವಯಿಸುವುದು ಸುವ್ಯಕ್ತ. ಈ ಮತ್ತು ಇತರ ಪದಸಮೂಹಗಳು ನಮ್ಮ ಮಾನವ ಸಂಬಂಧಗಳನ್ನು ಸರಾಗಗೊಳಿಸಿ ಹಿತಕರವಾಗಿ ಮಾಡುವ ಮೃದು ಚಾಲಕ ಎಣ್ಣೆಗಳಂತಿವೆ. ‘ಆದರೆ ಇತರರಿಗೆ ಶಿಷ್ಟಾಚಾರವನ್ನು ತೋರಿಸುವುದು ನಾನು ಒಂದನೆಯ ನಂಬರಿನವನಾಗಿರುವ ನನ್ನ ಸ್ವರೂಪಕ್ಕನುಸಾರ ಜೀವಿಸುವುದರ ಮೇಲೆ ಮತ್ತು ಆ ಸ್ವರೂಪವನ್ನು ಹರಿಸುವುದರ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವುದು,’ ಎಂದು ಅಹಂ-ಪ್ರಥಮನು ಆಕ್ಷೇಪಣೆ ಎತ್ತುವನು.
ಸಮಾಜ ಶಾಸ್ತ್ರಜ್ಞ ಜೇಮ್ಸ್ ಕ್ಯೂ. ವಿಲ್ಸನ್, ಈ ಹೆಚ್ಚುತ್ತಿರುವ ಘರ್ಷಣೆ ಮತ್ತು ಪಾತಕದ ವರ್ತನೆಯು ಇಂದು ಯಾವುದನ್ನು, “ವ್ಯಂಗ್ಯವಾಗಿ ‘ಮಧ್ಯಮ ವರ್ಗದ ಮೌಲ್ಯಗಳು’ ಎಂದು ಹೇಳಿ ಸೂಚಿಸಲಾಗುತ್ತದೋ” ಅದರ ಪತನದ ಫಲವಾಗಿದೆ ಎಂದು ಹೇಳುತ್ತಾರೆ. ಮತ್ತು ಆ ವರದಿ ಮುಂದುವರಿಸಿ ಹೇಳುವುದು: “ಈ ಮೌಲ್ಯಗಳ ಸಾವು ಮತ್ತು ನೈತಿಕ ಸಂಬಂಧ ವಾದದ ವರ್ಧನವು ಪಾತಕದ ಹೆಚ್ಚು ಉನ್ನತ ಪ್ರಮಾಣಕ್ಕೆ ಅನ್ಯೋನ್ಯಾಂಗವಾಗಿದೆಯೆಂದು ತೋರಿಬರುತ್ತದೆ.” ಆತ್ಮಾಭಿವ್ಯಕ್ತಿಯ ಮೇಲೆ—ಅದು ಎಷ್ಟೇ ಅಶಿಷ್ಟಾಚಾರದ್ದಾಗಿ ಅಥವಾ ಅಪಮಾನಪಡಿಸುವುದೇ ಆಗಿರಲಿ—ಯಾವುದೇ ನಿರ್ಬಂಧವನ್ನು ತಳ್ಳಿಹಾಕುವ ಆಧುನಿಕ ಪ್ರವೃತ್ತಿಯ ಅನ್ಯೋನ್ಯಾಂಗವಾಗಿ ಇದು ಇರುವುದು ನಿಶ್ಚಯ. ಇದು ಇನ್ನೊಬ್ಬ ಸಮಾಜ ಶಾಸ್ತ್ರಜ್ಞ, ಜ್ಯಾರೆಡ್ ಟೆಯ್ಲರ್ ಹೇಳಿದಂತಿದೆ: “ನಮ್ಮ ಸಮಾಜವು ಒಂದೇ ಸಮನೆ ಆತ್ಮ ನಿಯಂತ್ರಣದಿಂದ ಆತ್ಮಾಭಿವ್ಯಕ್ತಿಯ ಕಡೆಗೆ ಚಲಿಸಿದೆ, ಮತ್ತು ಅನೇಕ ಜನರು ಹಳೆಯ ಶೈಲಿಯ ಮೌಲ್ಯಗಳನ್ನು ನಿಗ್ರಹಿಸುವುವುಗಳೆಂದು ಹೇಳಿ ವಿಸರ್ಜಿಸುತ್ತಾರೆ.”
ಸಂಬಂಧ ವಾದದ ಆಚಾರವು, ದೇವರನ್ನು ಸೇರಿಸಿ ಇನ್ನಾವನ ತೀರ್ಮಾನವನ್ನೂ ಅಸಡ್ಡೆಮಾಡುತ್ತಾ, ನಿಮ್ಮ ವ್ಯಕ್ತಿಪರ ನಡತೆಗೆ ನಿಮ್ಮನ್ನೇ ನ್ಯಾಯಾಧೀಶನನ್ನಾಗಿಸುತ್ತದೆ. ಪ್ರಥಮ ಮಾನವ ಜೊತೆ ದೇವರ ಆಜ್ಞೆಯನ್ನು ತಳ್ಳಿಹಾಕಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಏದೆನಿನಲ್ಲಿ ತಾವೇ ನಿರ್ಣಯಿಸಿದಂತೆ, ನೀವೂ ನಿಮಗೆ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಣಯಿಸುತ್ತೀರಿ. ಹವ್ವಳು ದೇವರಿಗೆ ಅವಿಧೇಯಳಾಗಿ ನಿಷಿದ್ಧವಾದ ಹಣ್ಣನ್ನು ತಿನ್ನುವಲ್ಲಿ, ಸರ್ಪವು ಆಕೆಗೆ ಹೇಳಿದಂತೆಯೇ ನಡೆಯುವುದೆಂದು ಹವ್ವಳು ಯೋಚಿಸುವಂತೆ ಸರ್ಪವು ವಂಚಿಸಿತು: “ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ.” ಹೀಗೆ ಹವ್ವಳು ಹಣ್ಣಿನಲ್ಲಿ ಸ್ವಲ್ಪವನ್ನು ತಿಂದು ಆದಾಮನಿಗೂ ಸ್ವಲ್ಪವನ್ನು ಕೊಟ್ಟಾಗ ಅವನು ಅದನ್ನು ತಿಂದನು. (ಆದಿಕಾಂಡ 3:5, 6) ಆದಾಮ ಮತ್ತು ಹವ್ವಳ ಈ ತಿನ್ನುವ ನಿರ್ಣಯವು ಅವರಿಗೆ ವಿಪತ್ಕಾರಕವೂ ಅವರ ಸಂತತಿಗೆ ಆಪತ್ತಿನದ್ದೂ ಆಗಿತ್ತು.
ರಾಜಕಾರಣಿಗಳು, ವ್ಯಾಪಾರಸ್ಥರು, ಕ್ರೀಡಾಪಟುಗಳು, ವಿಜ್ಞಾನಿಗಳು, ಒಬ್ಬ ನೋಬೆಲ್ ಪಾರಿತೋಷಿಕ ವಿಜೇತನು, ಮತ್ತು ಒಬ್ಬ ಪಾದ್ರಿ—ಇವರ ಮಧ್ಯೆ ಕಂಡುಬಂದ ಭ್ರಷ್ಟಾಚಾರದ ಕುರಿತ ಒಂದು ದೀರ್ಘ ಪುನರಾವರ್ತನೆಯಾದ ಮೇಲೆ ಒಬ್ಬ ಪ್ರೇಕ್ಷಕನು ಹಾರ್ವರ್ಡ್ ಬಿಸಿನೆಸ್ ಸ್ಕೂಲ್ನ ಮುಂದೆ ಕೊಟ್ಟ ಭಾಷಣದಲ್ಲಿ ಹೇಳಿದ್ದು: “ನಮ್ಮ ದೇಶದಲ್ಲಿ ಇಂದು ನಾವು ವರ್ತನೆಯ ಬಿಕ್ಕಟ್ಟನ್ನು, ಪಾಶ್ಚಾತ್ಯ ನಾಗರಿಕತೆಯ ಮೂಲಕ ಸಾಂಪ್ರದಾಯಿಕವಾಗಿ ಯಾವುದು ನಮ್ಮನ್ನು ಕೀಳರ್ತದ ಹುಟ್ಟರಿವುಗಳನ್ನು ತಣಿಸುವುದನ್ನು ತಡೆಯುತ್ತದೋ, ಅಂತಹ ಆಂತರಿಕ ನಿರ್ಬಂಧಗಳು ಮತ್ತು ಆಂತರಿಕ ಸದ್ಗುಣಗಳು ಎಂದು ಪರಿಗಣಿಸುಲಾಗುತ್ತಿದ್ದವೊ ಅದರ ನಷ್ಟವನ್ನು ಅನುಭವಿಸುತ್ತಿದ್ದೇವೆಂದು ನನ್ನ ನಂಬುಗೆ.” “ಈ ಸುತ್ತುಗಟ್ಟುಗಳಲ್ಲಿ ಮಾತಾಡುವಲ್ಲಿ ಬಹುಮಟ್ಟಿಗೆ ವಿಚಿತ್ರವಾಗಿ ಕೇಳಿಬರುವ ಪದಗಳ, ಶೌರ್ಯ, ಗೌರವ, ಕರ್ತವ್ಯ, ಜವಾಬ್ದಾರಿ, ಕನಿಕರ, ಸಭ್ಯತೆ ಎಂಬ ಪದಗಳ, ಬಹುಮಟ್ಟಿಗೆ ಬಳಕೆಯಿಂದ ಬಿದ್ದುಹೋಗಿರುವ ಪದಗಳ” ಕುರಿತು ಮಾತಾಡಿದನು.
ವಿಶ್ವವಿದ್ಯಾಲಯಗಳ ಕ್ಷೇತ್ರಗಳಲ್ಲಿ, ’60ಗಳಲ್ಲಿ ಕೆಲವು ನಿರ್ದಿಷ್ಟ ವಿವಾದಾಂಶಗಳು ಸ್ಫೋಟಗೊಂಡವು. ಅನೇಕರು, ‘ದೇವರಿಲ್ಲ, ದೇವರು ಸತ್ತಿದ್ದಾನೆ, ಏನೂ ಇಲ್ಲ, ವಿಷಯಾತೀತವಾದ ಮೌಲ್ಯವೇ ಇಲ್ಲ, ಜೀವವು ತೀರ ಅರ್ಥಹೀನ, ಜೀವನದ ಶೂನ್ಯತೆಯನ್ನು ನೀನು ವೀರೋಚಿತ ಸ್ವಂತಿಕೆಯಿಂದ ಮಾತ್ರ ಜಯಿಸಬಲ್ಲಿ,’ ಎಂದು ವಾದಿಸಿದರು. ಹೂವಿನ ಮಕ್ಕಳು (ಹಿಪ್ಪಿಗಳು) ಇದನ್ನು ತಮ್ಮ ಸೂಚನೆಯಾಗಿ ತಕ್ಕೊಂಡು ಜೀವನದ ಶೂನ್ಯತೆಯನ್ನು, ‘ಕೊಕೆಯ್ನ್ ಸೇದುತ್ತಾ, ಮಾರಿವಾನ ಸೇದುತ್ತಾ, ಯಾವ ಬದ್ಧತೆಯೂ ಇಲ್ಲದೆ ಸಂಭೋಗ ಮಾಡುತ್ತಾ ಮನಶ್ಶಾಂತಿಯನ್ನು ಹುಡುಕಿದರು.’ ಆ ಮನಶ್ಶಾಂತಿ ಅವರಿಗೆ ಸಿಗಲೇ ಇಲ್ಲ.
ಬಳಿಕ ’60ಗಳ ಪ್ರತಿಭಟನಾ ಚಳವಳಿಗಳಿದ್ದವು. ಗೀಳುಗಳಾಗಿ ಮಾತ್ರ ಇಲ್ಲದಿದ್ದ ಇವುಗಳನ್ನು ಅಮೆರಿಕದ ಸಂಸ್ಕೃತಿಯ ಪ್ರಮುಖ ವಿಚಾರ ಪ್ರವಾಹವು ಅವಲಂಬಿಸಿ ’70ಗಳ ಅಹಂ ದಶಕಕ್ಕೆ ನಡೆಸಿತು. ಹೀಗೆ ನಾವು, ಟಾಮ್ ವುಲ್ಫ್ ಎಂಬ ಸಾಮಾಜಿಕ ವಿಮರ್ಶಕನು ಕರೆದ “ನಾನು ದಶಕ”ವನ್ನು ಪ್ರವೇಶಿಸಿದೆವು. ಅದು ಕ್ರಮೇಣ ’80ಗಳೊಳಗೆ, ಯಾವುದನ್ನು ಕೆಲವರು ತಿರಸ್ಕಾರ ಭಾವದಿಂದ “ಲೋಭದ ಸುವರ್ಣ ಯುಗ”ವೆಂದು ಕರೆದರೋ ಅದರೊಳಗೆ ಪ್ರವೇಶಿಸಿತು.
ಇದೆಲ್ಲದಕ್ಕೆ ಶಿಷ್ಟಾಚಾರದೊಂದಿಗೆ ಏನು ಸಂಬಂಧ? ಇದು ನಿಮ್ಮನ್ನು ಪ್ರಥಮವಾಗಿಡುವ ವಿಷಯವಾಗಿದೆ, ಮತ್ತು ನೀವು ನಿಮ್ಮನ್ನೇ ಪ್ರಥಮವಾಗಿಡುವಲ್ಲಿ, ನೀವು ಇತರರಿಗೆ ಸುಲಭವಾಗಿ ಬಿಟ್ಟುಕೊಡಲಾರಿರಿ, ಇತರರನ್ನು ಪ್ರಥಮವಾಗಿಡಲಾರಿರಿ, ಇತರರ ಕಡೆಗೆ ಶಿಷ್ಟಾಚಾರವನ್ನು ಅಭ್ಯಸಿಸಲಾರಿರಿ. ನಿಮ್ಮನ್ನೇ ಪ್ರಥಮವಾಗಿಡುವುದರಿಂದ, ನೀವು ಕಾರ್ಯತಃ ಒಂದು ರೀತಿಯ ಸ್ವಂತ ಆರಾಧನೆಯಲ್ಲಿ, ‘ನಾನು’ ಆರಾಧನೆಯಲ್ಲಿ ಲೋಲುಪರಾಗಬಹುದು. ಹಾಗೆ ಮಾಡುವವನನ್ನು ಬೈಬಲು ಹೇಗೆಂದು ವರ್ಣಿಸುತ್ತದೆ? “ವಿಗ್ರಹಾರಾಧನೆಗೆ ಸಮವಾಗಿರುವ ಲೋಭ”ವನ್ನು ತೋರಿಸುವ “ವಿಗ್ರಹಾರಾಧಕರಂತಿರುವ ಲೋಭಿಗಳು.” (ಎಫೆಸ 5:5; ಕೊಲೊಸ್ಸೆ 3:5) ಇಂತಹ ಜನರು ನಿಜವಾಗಿಯೂ ಯಾರನ್ನು ಸೇವಿಸುತ್ತಾರೆ? “ಹೊಟ್ಟೆಯೇ ಅವರ ದೇವರು.” (ಫಿಲಿಪ್ಪಿ 3:19) ತಮಗೆ ನೈತಿಕವಾಗಿ ಯೋಗ್ಯವಾಗಿದೆ ಎಂದು ಅನೇಕರು ನಿರ್ಣಯಿಸಿರುವ ಹೊಲಸಾದ ಜೀವನ ಶೈಲಿಗಳು ಮತ್ತು ಆ ಜೀವನ ಶೈಲಿಗಳ ಆಪತ್ಕಾರಕ, ಮಾರಕ ಪರಿಣಾಮಗಳು ಯೆರೆಮೀಯ 10:23ರ ಸತ್ಯತೆಯನ್ನು ರುಜುಪಡಿಸುತ್ತವೆ: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”
ಬೈಬಲು ಇದೆಲ್ಲವನ್ನೂ ಮುನ್ನೋಡಿ, 2 ತಿಮೊಥೆಯ 3:1-5ರಲ್ಲಿ (ನ್ಯೂ ಇಂಗ್ಲಿಷ್ ಬೈಬಲ್) “ಕೊನೆಯ ದಿವಸಗಳ” ಎಚ್ಚರಿಕೆಯ ಸೂಚನೆಯಾಗಿ ಮುಂತಿಳಿಸಿತು: “ನೀನು ಈ ನಿಜತ್ವವನ್ನು ಎದುರಿಸಬೇಕು: ಈ ಲೋಕದ ಅಂತಿಮ ಯುಗ ಉಪದ್ರವಗಳ ಸಮಯವಾಗಿರಲಿದೆ. ಮನುಷ್ಯರು ಧನವನ್ನು ಮತ್ತು ತಮ್ಮನ್ನೇ ಅಲ್ಲದೆ ಇನ್ನಾವುದನ್ನೂ ಪ್ರೀತಿಸರು; ಅವರು ದುರಹಂಕಾರಿಗಳೂ ಆತ್ಮಸ್ತುತಿ ಮಾಡುವವರೂ ನಿಂದಿಸುವವರೂ ಆಗಿರುವರು; ತಂದೆತಾಯಿಗಳಿಗೆ ಯಾವ ಗೌರವವೂ ಇಲ್ಲದವರೂ ಕೃತಜ್ಞತೆಯಿಲ್ಲದವರೂ ಧರ್ಮಶ್ರದ್ಧೆಯಿಲ್ಲದವರೂ ಸ್ವಾಭಾವಿಕ ವಾತ್ಸಲ್ಯವಿಲ್ಲದವರೂ ತಮ್ಮ ದ್ವೇಷಗಳಲ್ಲಿ ಸಮಾಧಾನ ಮಾಡಲಾಗದವರೂ ಅಪನಿಂದಕರೂ ಅತಿ ಭೋಗಿಗಳೂ ಭಯಂಕರರೂ ಸಕಲ ಸೌಜನ್ಯಕ್ಕೆ ಅಪರಿಚಿತರೂ ವಿಶ್ವಾಸಘಾತುಕರೂ ಸಾಹಸಿಗರೂ ಸ್ವಪ್ರತಿಷ್ಠೆಯಿಂದ ಉಬ್ಬಿಕೊಂಡವರೂ ಆಗಿರುವರು. ಭೋಗವನ್ನು ದೇವರ ಸ್ಥಾನದಲ್ಲಿ ಹಾಕುವ ಜನರು, ಧರ್ಮದ ಹೊರರೂಪವನ್ನು ಉಳಿಸಿಕೊಳ್ಳುವ ಜನರು ಅವರಾಗಿರುವರು, ಆದರೆ ಅದರ ನಿಜತ್ವದ ಸ್ಥಾಯೀ ನಿರಾಕರಣೆಯಾಗಿರುವರು. ಇಂತಹ ಜನರಿಂದ ಪ್ರತ್ಯೇಕವಾಗಿ ನಿಲ್ಲು.”
ನಾವು ಯಾವುದಾಗಿ ಇರುವಂತೆ—ದೇವರ ಸ್ವರೂಪ ಮತ್ತು ಹೋಲಿಕೆ—ಸೃಷ್ಟಿಸಲ್ಪಟ್ಟಿದ್ದೇವೋ ಅದರಿಂದ ನಾವು ದೂರ ತೇಲಿಕೊಂಡು ಹೋಗಿದ್ದೇವೆ. ಪ್ರೀತಿ, ವಿವೇಕ, ನ್ಯಾಯ ಮತ್ತು ಶಕಿಯ್ತೆಂಬ ಕಾರ್ಯರೂಪಸಾಧ್ಯ ಗುಣಗಳು ನಮ್ಮೊಳಗೆ ಇನ್ನೂ ಇವೆ, ಆದರೆ ಅವು ಅಸಮತೋಲವೂ ವಕ್ರವೂ ಆಗಿವೆ. ಹಿಂದಿರುಗುವ ಮಾರ್ಗದ ಪ್ರಥಮ ಹೆಜ್ಜೆಯು ಮೇಲೆ ಹೇಳಿರುವ ಬೈಬಲ್ ವಚನದ ಕೊನೆಯ ವಾಕ್ಯದಲ್ಲಿ ತಿಳಿಸಲ್ಪಟ್ಟಿದೆ: “ಇಂತಹ ಜನರಿಂದ ಪ್ರತ್ಯೇಕವಾಗಿ ನಿಲ್ಲು.” ಹೊಸ ಪರಿಸರವನ್ನು, ನಿಮ್ಮ ಆಂತರಿಕ ಅನಿಸಿಕೆಗಳನ್ನು ಸಹ ಬದಲಾಯಿಸುವ ಪರಿಸರವನ್ನು ಹುಡುಕಿರಿ. ವರ್ಷಗಳಿಗೆ ಮೊದಲು ದ ಲೇಡೀಸ್ ಹೋಮ್ ಜರ್ನಲ್ನಲ್ಲಿ ಡಾರತಿ ಥಾಮ್ಸನ್ ಬರೆದ ವಿವೇಕದ ಮಾತುಗಳು ಈ ವಿಷಯದಲ್ಲಿ ಬೋಧಪ್ರದ. ಅವರ ಉಲ್ಲೇಖವು ಬಾಲಕರ ಪಾತಕಗಳನ್ನು ಜಯಿಸಲು ಒಬ್ಬ ಯುವ ವ್ಯಕ್ತಿಯ ಬುದ್ಧಿಶಕ್ತಿಯ ಬದಲಿಗೆ ಅವನ ಭಾವಾವೇಶಕ್ಕೆ ಶಿಕ್ಷಣ ನೀಡುವುದು ಅವಶ್ಯ ಎಂಬ ಘೋಷಣೆಯಿಂದ ಆರಂಭಗೊಳ್ಳುತ್ತದೆ:
“ಮಗುವಾಗಿರುವಾಗ ಒಬ್ಬನ ಕ್ರಿಯೆಗಳು ಮತ್ತು ಮನೋಭಾವಗಳು ವಯಸ್ಕನಾಗಿರುವಾಗ ಅವನ ಕ್ರಿಯೆಗಳು ಮತ್ತು ಮನೋಭಾವಗಳನ್ನು ಬಹುಮಟ್ಟಿಗೆ ನಿರ್ಣಯಿಸುತ್ತವೆ. ಆದರೆ ಇವು ಅವನ ಮಿದುಳಿಂದ ಪ್ರೇರಿಸಲ್ಪಡುವುದಿಲ್ಲ, ಅವನ ಅನಿಸಿಕೆಗಳಿಂದಲೇ. ಅವನು ಏನನ್ನು ಪ್ರೀತಿಸುವಂತೆ, ಶ್ಲಾಘಿಸುವಂತೆ, ಆರಾಧಿಸುವಂತೆ, ಆದರಿಸುವಂತೆ ಮತ್ತು ತ್ಯಾಗ ಮಾಡುವಂತೆ ಪ್ರೋತ್ಸಾಹಿಸಲಾಗುತ್ತದೋ ಮತ್ತು ತರಬೇತುಗೊಳಿಸಲಾಗುತ್ತದೋ ಅದೇ ವ್ಯಕ್ತಿ ಅವನಾಗುತ್ತಾನೆ. . . . ಇದೆಲ್ಲದರಲ್ಲಿ ಶಿಷ್ಟಾಚಾರ ಬಲು ಪ್ರಾಮುಖ್ಯ ಪಾತ್ರ ವಹಿಸುತ್ತದೆ. ಏಕೆಂದರೆ ಶಿಷ್ಟಾಚಾರವೆಂದರೆ ಇತರರ ಕಡೆಗೆ ತೋರಿಸುವ ಪರಿಗಣನೆಯ ಅಭಿವ್ಯಕ್ತಿಗಿಂತ ಹೆಚ್ಚೂ ಅಲ್ಲ, ಕಡಮೆಯೂ ಅಲ್ಲ. . . . ಆಂತರಿಕ ಅನಿಸಿಕೆಗಳು ಬಾಹ್ಯ ವರ್ತನೆಯಲ್ಲಿ ಪ್ರತಿಬಿಂಬಿಸುತ್ತವಾದರೂ ಬಾಹ್ಯ ವರ್ತನೆ ಆಂತರಿಕ ಅನಿಸಿಕೆಗಳ ಬೆಳವಣಿಗೆಗೂ ಸಹಾಯ ನೀಡುತ್ತದೆ. ಪರಿಗಣನೆ ತೋರಿಸುತ್ತಾ ವರ್ತಿಸುವಾಗ ಜಗಳ ಹೂಡುವುದು ಕಷ್ಟಕರ. ಆರಂಭದಲ್ಲಿ ಶಿಷ್ಟಾಚಾರವು ಕೇವಲ ಮೇಲುಮೇಲಿನಲ್ಲಿರಬಹುದು, ಆದರೆ ಅವು ಹಾಗೆಯೇ ಉಳಿಯುವುದು ವಿರಳ.”
ವಿರಳ ಅಪವಾದಗಳನ್ನು ಬಿಟ್ಟರೆ, ಸೌಜನ್ಯ ಮತ್ತು ದೌರ್ಜನ್ಯಗಳು, “ಮಿದುಳಿನಿಂದ ಅಲ್ಲ, ಭಾವಾವೇಶಗಳಿಂದ ಒಗ್ಗಿಸಲ್ಪಡುತ್ತವೆ” ಎಂದೂ “ಪಾತಕಿಗಳು ಪಾತಕಿಗಳಾಗುವುದು ಅಪಧಮನೀ ಮಾಂದ್ಯದಿಂದಾಗಿ ಅಲ್ಲ, ಹೃದಯ ಮಾಂದ್ಯದಿಂದಲೇ” ಎಂದು ಅವರು ಅವಲೋಕಿಸುತ್ತಾರೆ. ನಮ್ಮ ವರ್ತನೆಯನ್ನು ಮನಸ್ಸು ಆಳುವುದಕ್ಕಿಂತ ಹೆಚ್ಚು ಸಲ ಭಾವಾವೇಶಗಳು ಆಳುತ್ತವೆಂದೂ, ನಾವು ತರಬೇತುಗೊಳಿಸಲ್ಪಡುವ ವಿಧವು, ನಾವು ವರ್ತಿಸುವ ವಿಧವು, ಮೊದಮೊದಲು ಬಲಾತ್ಕರಿಸಲ್ಪಟ್ಟರೂ ಆಂತರಿಕ ಅನಿಸಿಕೆಗಳ ಮೇಲೆ ಪ್ರಭಾವ ಬೀರಿ ಹೃದಯವನ್ನು ಬದಲಾಯಿಸುತ್ತದೆ ಎಂದೂ ಅವರು ಒತ್ತಿಹೇಳಿದರು.
ಆದರೂ ಹೃದಯದ ಆಂತರಿಕ ರೂಪವನ್ನು ಮಾರ್ಪಡಿಸುವುದಕ್ಕೆ ಪ್ರೇರಿತ ಸೂತ್ರವನ್ನು ಕೊಡುವುದರಲ್ಲಿ ಅತಿಶಯಿಸುವುದು ಬೈಬಲೇ.
ಪ್ರಥಮವಾಗಿ, ಎಫೆಸ 4:22-24: “ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.”
ಎರಡನೆಯದಾಗಿ, ಕೊಲೊಸ್ಸೆ 3:9, 10, 12-14: “ನೀವು ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನಸ್ವಭಾವವನ್ನು ಧರಿಸಿಕೊಂಡಿದೀರ್ದಲ್ಲವೇ. ಈ ಸ್ವಭಾವವು ಅದನ್ನು ಸೃಪ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟುಮಾಡುತ್ತದೆ. ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು [ಯೆಹೋವ, NW] ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”
ಇತಿಹಾಸಗಾರ ವಿಲ್ ಡ್ಯುರ್ಯಾಂಟ್ ಹೇಳಿದ್ದು: “ನಮ್ಮ ಸಮಯಗಳ ಅತ್ಯಂತ ಮಹಾನ್ ಪ್ರಮೇಯ ಸಮತಾವಾದಕ್ಕೆ ಪ್ರತಿಯಾಗಿ ವ್ಯಕ್ತಿ ಸ್ವಾತಂತ್ರ್ಯವಲ್ಲ, ಯೂರೋಪಿಗೆ ಪ್ರತಿಯಾಗಿ ಅಮೆರಿಕವಲ್ಲ, ಪೂರ್ವಕ್ಕೆ ಪ್ರತಿಯಾಗಿ ಪಶ್ಚಿಮವೂ ಅಲ್ಲ; ದೇವರನ್ನು ಬಿಟ್ಟು ಮನುಷ್ಯರು ಜೀವಿಸಬಲ್ಲರೋ ಎಂಬುದೇ ಆಗಿದೆ.”
ಯಶಸ್ವಿಯಾದ ಜೀವನವನ್ನು ನಡೆಸಲು ನಾವು ಈ ಸಲಹೆಗೆ ಕಿವಿಗೊಡಬೇಕು: “ಕಂದಾ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ನಡಿಸು. ಅವು ನಿನ್ನ ದಿನಗಳನ್ನು ಹೆಚ್ಚಿಸಿ ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ ನಿನಗೆ ಸುಕ್ಷೇಮವನ್ನುಂಟುಮಾಡುವವು. ಪ್ರೀತಿಸತ್ಯತೆಗಳು ನಿನ್ನನ್ನು ಬಿಡದಿರಲಿ. ಅವುಗಳನ್ನು ನಿನ್ನ ಕೊರಳಿಗೆ ಕಟ್ಟು, ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ; ಇದರಿಂದ ನೀನು ದೇವರ ಮತ್ತು ಮನುಷ್ಯರ ದಯೆಯನ್ನೂ ಸಮ್ಮತಿಯನ್ನೂ ಪಡೆದುಕೊಳ್ಳುವಿ. ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”—ಜ್ಞಾನೋಕ್ತಿ 3:1-6.
ಶತಮಾನಗಳ ಜೀವಿತದಿಂದ ಕಲಿತಿರುವ ದಯೆ ಮತ್ತು ಪರಿಗಣನೆಯ ಉತ್ತಮ ಶಿಷ್ಟಾಚಾರಗಳು ಎಷ್ಟು ಹೇಳಿದರೂ ಆಧಿಕ್ಯವಲ್ಲ ಮತ್ತು ಜೀವನಕ್ಕಿರುವ ಬೈಬಲಿನ ಮಾರ್ಗದರ್ಶನಗಳು ಎಂದಿಗೂ ಹಳತಾಗಿರುವುದಿಲ್ಲ. ಅದು ಮಾನವಕುಲದ ನಿತ್ಯರಕ್ಷಣೆಯಾಗಿ ಪರಿಣಮಿಸುವುದು. ಯೆಹೋವನ ಹೊರತು, ಮಾನವಕುಲಕ್ಕೆ ಜೀವಿಸುತ್ತಾ ಮುಂದುವರಿಯುವುದು ಅಸಾಧ್ಯ, ಏಕೆಂದರೆ ‘ಯೆಹೋವನಲ್ಲಿ ಜೀವದ ಬುಗ್ಗೆಯಿದೆ.’—ಕೀರ್ತನೆ 36:9. (g94 7⁄22)
[ಪುಟ 11 ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಾವು ವರ್ತಿಸುವ ವಿಧವು, ಆರಂಭದಲ್ಲಿ ಬಲಾತ್ಕರಿಸಲ್ಪಡುವುದಾದರೂ, ಆಂತರಿಕ ಅನಿಸಿಕೆಗಳನ್ನು ಪ್ರಭಾವಿಸಿ ಹೃದಯವನ್ನು ಮಾರ್ಪಡಿಸುತ್ತದೆ
[ಪುಟ 10 ರಲ್ಲಿರುವ ಚೌಕ]
ಅನುಕರಿಸಲು ಹಿತಕರವಾಗಿರುವ ನಿರ್ದುಷ್ಟ ಮೇಜು ಶಿಷ್ಟಾಚಾರಗಳು
ಸೀಡರ್ ವ್ಯಾಕ್ಸ್ವಿಂಗ್ಸ್ ಎಂಬ ಸುಂದರವಾದ, ಶಿಷ್ಟಾಚಾರದ, ಸಂಗಶೀಲ ಪಕ್ಷಿಗಳು ಹಣ್ಣಾಗಿರುವ ಬೆರಿಹಣ್ಣು ತುಂಬಿರುವ ಒಂದು ದೊಡ್ಡ ಪೊದೆಯಲ್ಲಿ ಭೋಜನ ಮಾಡುತ್ತವೆ. ಒಂದು ಕೊಂಬೆಯ ಉದ್ದಕ್ಕೂ ಸಾಲಾಗಿ ಕುಳಿತಿರುವ ಇವು ಹಣ್ಣನ್ನು ತಿನ್ನುತ್ತವೆ, ಆದರೆ ಹೊಟ್ಟೆಬಾಕರಂತಲ್ಲ. ಅವು ಕೊಕ್ಕಿನಿಂದ ಕೊಕ್ಕಿಗೆ ಒಂದರಿಂದ ಇನ್ನೊಂದಕ್ಕೆ, ಕೊನೆಗೆ ಅವುಗಳಲ್ಲಿ ಒಂದು ಉಪಕಾರಭಾವದಿಂದ ಅದನ್ನು ತಿನ್ನುವ ವರೆಗೆ, ಬೆರಿ ಹಣ್ಣನ್ನು ದಾಟಿಸುತ್ತವೆ. ಅವುಗಳ “ಮಕ್ಕಳನ್ನು“ ಅವು ಎಂದಿಗೂ ಮರೆಯುವುದಿಲ್ಲ. ಆಯಾಸರಹಿತವಾಗಿ ಅವು, ಬೆರಿ ಹಣ್ಣನ್ನು ಒಂದೊಂದಾಗಿ, ಖಾಲಿ ಬಾಯಿಗಳೆಲ್ಲ ತುಂಬಿಹೋಗುವ ತನಕ ಆಹಾರವನ್ನು ತರುತ್ತವೆ.
[ಕೃಪೆ]
H. Armstrong Roberts
[ಪುಟ 8 ರಲ್ಲಿರುವ ಚಿತ್ರ]
ಕೆಲವರು ಅನ್ನುವುದು: ‘ಬೈಬಲನ್ನೂ ನೈತಿಕ ಮೌಲ್ಯಗಳನ್ನೂ ತಳ್ಳಿಬಿಡಿ’
[ಪುಟ 9 ರಲ್ಲಿರುವ ಚಿತ್ರ]
“ದೇವರು ಸತ್ತಿದ್ದಾನೆ”
“ಜೀವಕ್ಕೆ ಅರ್ಥವಿಲ್ಲ!”
“ಮಾರಿವಾನ ಸೇದು, ಕೊಕೆಯ್ನ್ ಸೇದು”
[ಪುಟ 7 ರಲ್ಲಿರುವ ಚಿತ್ರ ಕೃಪೆ]
Left: Life; Right: Grandville