ಧರ್ಮವು ಪಕ್ಷ ವಹಿಸುತ್ತದೆ
ಸಪ್ಟಂಬರ 1, 1939ರಂದು ಜರ್ಮನಿಯು, IIನೆಯ ಲೋಕ ಯುದ್ಧವನ್ನು ಆರಂಭಿಸುತ್ತಾ, ಪೋಲೆಂಡನ್ನು ಅತಿಕ್ರಮಣಮಾಡಿತು. ಮೂರು ವಾರಗಳ ಬಳಿಕ ದ ನ್ಯೂ ಯಾರ್ಕ್ ಟೈಮ್ಸ್ ಈ ಶಿರೋನಾಮವನ್ನು ಪ್ರಕಟಿಸಿತು: “ಚರ್ಚಿನ ಮೂಲಕ ಜಮಾಯಿಸಲ್ಪಟ್ಟ ಜರ್ಮನ್ ಸೈನಿಕರು.” ಜರ್ಮನ್ ಚರ್ಚುಗಳು ವಾಸ್ತವವಾಗಿ ಹಿಟ್ಲರನ ಯುದ್ಧಗಳಿಗೆ ಬೆಂಬಲ ನೀಡಿದವೊ?
ವಿಯೆನ್ನ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ರೋಮನ್ ಕ್ಯಾತೊಲಿಕ್ ಪ್ರೊಫೆಸರರಾದ ಫ್ರೀಡ್ರಿಕ್ ಹೇರ್, ಜರ್ಮನ್ ಚರ್ಚುಗಳು ಬೆಂಬಲ ನೀಡಿದವೆಂದು ಒಪ್ಪಿದರು: “ಜರ್ಮನ್ ಇತಿಹಾಸದ ಅನಿವಾರ್ಯ ಸತ್ಯತೆಗಳಲ್ಲಿ, ಶಿಲುಬೆ ಮತ್ತು ಸ್ವಾಸ್ತಿಕಗಳು ಒಂದಕ್ಕೊಂದು ಸಹಕರಿಸಿದವು, ಸ್ವಾಸ್ತಿಕವು ಜರ್ಮನ್ ಕತೀಡ್ರಲ್‌ನ ಬುರುಜುಗಳಿಂದ ವಿಜಯದ ಸಂದೇಶವನ್ನು ಪ್ರಕಟಿಸುವ ವರೆಗೆ, ಸ್ವಾಸ್ತಿಕ ಧ್ವಜಗಳು ಪೂಜಾವೇದಿಕೆಗಳ ಸುತ್ತಲೂ ಕಾಣಿಸಿಕೊಂಡವು ಮತ್ತು ಕ್ಯಾತೊಲಿಕ್ ಮತ್ತು ಪ್ರಾಟೆಸ್ಟಂಟ್ ದೇವತಾ ಶಾಸ್ತ್ರಜ್ಞರು, ಪಾಸ್ಟರ್‌ಗಳು, ಕ್ರೈಸ್ತಮಠೀಯರು ಮತ್ತು ರಾಜ್ಯ ನೀತಿಜ್ಞರು, ಹಿಟ್ಲರನೊಂದಿಗೆ ಮೈತ್ರಿಯನ್ನು ಸ್ವಾಗತಿಸಿದರು.”
ವಾಸ್ತವವಾಗಿ, ರೋಮನ್ ಕ್ಯಾತೊಲಿಕ್ ಪ್ರೊಫೆಸರ್ ಗಾರ್ಡನ್ ಟ್ಸಾನ್ ಬರೆದಂತೆ, ಹಿಟ್ಲರನ ಯುದ್ಧ ಪ್ರಯತ್ನಕ್ಕೆ ಚರ್ಚಿನ ಮುಖಂಡರು ಸಂಪೂರ್ಣ ಬೆಂಬಲವನ್ನು ನೀಡಿದರು: “ಹಿಟ್ಲರನ ಯುದ್ಧಗಳಲ್ಲಿ ಸೇವೆ ಮಾಡುವುದರ ಕುರಿತು ಆತ್ಮಿಕ ಮಾರ್ಗದರ್ಶನ ಮತ್ತು ನಿರ್ದೇಶನಕ್ಕಾಗಿ ತನ್ನ ಧಾರ್ಮಿಕ ಮುಖ್ಯಸ್ಥರ ಮೇಲೆ ಭರವಸೆಯಿಟ್ಟ ಯಾವನೇ ಜರ್ಮನ್ ಕ್ಯಾತೊಲಿಕನು, ನಾಜಿ ಅಧಿಕಾರಿಯಿಂದ ಸ್ವತಃ ತಾನು ಪಡೆದುಕೊಳ್ಳಬಹುದಾಗಿದ್ದ ಉತ್ತರಗಳನ್ನೇ ಕಾರ್ಯತಃ ಪಡೆದುಕೊಂಡನು.”
ವಿರೋಧ ಪಕ್ಷದಲ್ಲಿರುವ ಧರ್ಮಗಳು
ಆದರೆ ಜರ್ಮನಿಯನ್ನು ವಿರೋಧಿಸಿದ ದೇಶಗಳಲ್ಲಿ ಚರ್ಚುಗಳು ಏನೆಂದು ಹೇಳುತ್ತಿದ್ದವು? ಇಸವಿ 1966, ದಶಂಬರ 29ರ ದ ನ್ಯೂ ಯಾರ್ಕ್ ಟೈಮ್ಸ್ ವರದಿಸಿದ್ದು: “ಗತಕಾಲದಲ್ಲಿ ಕ್ಯಾತೊಲಿಕ್ ಮುಖ್ಯ ಪುರೋಹಿತರು, ಸೈನ್ಯಗಳನ್ನು ಆಶೀರ್ವದಿಸುವ ಮೂಲಕ ಮತ್ತು ವಿಜಯಕ್ಕಾಗಿ ಪ್ರಾರ್ಥನೆಗಳನ್ನು ಮಾಡುವ ಮೂಲಕ, ಬಹುಮಟ್ಟಿಗೆ ತಮ್ಮ ರಾಷ್ಟ್ರಗಳ ಯುದ್ಧಗಳನ್ನು ಯಾವಾಗಲೂ ಬೆಂಬಲಿಸಿದ್ದಾರೆ, ಅದೇ ಸಮಯದಲ್ಲಿ ಬೇರೊಂದು ಪಕ್ಷದಲ್ಲಿ ಬಿಷಪರ ಇನ್ನೊಂದು ಗುಂಪು ವಿರುದ್ಧ ಫಲಿತಾಂಶಕ್ಕಾಗಿ ಸಾರ್ವಜನಿಕವಾಗಿ ಪ್ರಾರ್ಥಿಸಿದೆ.”
ವಿರೋಧಿಸುವ ಸೈನ್ಯಗಳ ಈ ಬೆಂಬಲವು ವ್ಯಾಟಿಕನ್‌ನ ಅಂಗೀಕಾರದೊಂದಿಗೆ ಮಾಡಲ್ಪಟ್ಟಿತೊ? ಪರಿಗಣಿಸಿರಿ: IIನೆಯ ಲೋಕ ಯುದ್ಧದ ತಲೆದೋರುವಿಕೆಯ ಕೇವಲ ಮೂರು ತಿಂಗಳುಗಳ ಬಳಿಕ, 1939, ದಶಂಬರ 8ರಂದು, ಪೋಪ್ ಪಯಸ್ XII ಆಸ್ಪರೀಸ್ ಕಾಮಾಟಿ ಆಂಕ್ಸೀಎಟಾಟೀಬುಸ್ ಎಂಬ ಅಧಿಕೃತ ಪತ್ರವನ್ನು ಹೊರಡಿಸಿದರು. ಆ ಪತ್ರವು ಯುದ್ಧ ಮಾಡುವ ರಾಷ್ಟ್ರಗಳ ಸೇನೆಯಲ್ಲಿರುವ ಪಾದ್ರಿಗಳಿಗೆ ಸಂಬೋಧಿಸಲ್ಪಟ್ಟಿತ್ತು, ಮತ್ತು ಎರಡೂ ಪಕ್ಷಗಳಲ್ಲಿರುವವರಿಗೆ, ತಮ್ಮ ವೈಯಕ್ತಿಕ ಮಿಲಿಟರಿ ಬಿಷಪರಲ್ಲಿ ಭರವಸೆಯನ್ನು ಹೊಂದುವಂತೆ ಅದು ಒತ್ತಾಯಿಸಿತ್ತು. “ತಮ್ಮ ದೇಶದ ಹೋರಾಟಗಾರರೋಪಾದಿ ಚರ್ಚಿಗೋಸ್ಕರ ಸಹ ಹೋರಾಡುವಂತೆ” ಆ ಪತ್ರವು ಸೇನಾ ಪಾದ್ರಿಗಳಿಗೆ ಎಚ್ಚರಿಕೆ ನೀಡಿತು.
ದೇಶಗಳನ್ನು ಯುದ್ಧಕ್ಕಾಗಿ ಸಜ್ಜುಗೊಳಿಸುವುದರಲ್ಲಿ ಧರ್ಮವು ಅನೇಕವೇಳೆ ಆಕ್ರಮಣಶೀಲ ನಾಯಕತ್ವವನ್ನು ವಹಿಸುತ್ತದೆ. “ನಮ್ಮ ಚರ್ಚುಗಳಲ್ಲಿಯೂ ನಾವು ಯುದ್ಧ ಧ್ವಜಗಳನ್ನು ಹಾಕಿದ್ದೇವೆ” ಎಂದು ಒಬ್ಬ ಪ್ರಾಟೆಸ್ಟಂಟ್ ಪುರೋಹಿತರಾದ ಮಾಜಿ ಹ್ಯಾರಿ ಎಮರ್‌ಸನ್ ಫಾಸಿಕ್ಡ್ ಒಪ್ಪಿಕೊಂಡರು. ಮತ್ತು ಪ್ರಥಮ ಲೋಕ ಯುದ್ಧದ ಕುರಿತು, ಬ್ರಿಟಿಷ್ ಬ್ರಿಗೆಡಿಯರ್ ಜನರಲ್ ಫ್ರ್ಯಾಂಕ್ ಪಿ. ಕ್ರೋಜರ್ ಹೇಳಿದ್ದು: “ನಮಗಿರುವುವುಗಳಲ್ಲಿ ಕ್ರೈಸ್ತ ಚರ್ಚ್‌ಗಳು ಅತ್ಯುತ್ತಮ ರಕ್ತದಾಹ ಪ್ರವರ್ತಕಗಳಾಗಿವೆ, ಮತ್ತು ಅವನ್ನು ನಾವು ಸರಾಗವಾಗಿ ಬಳಸಿದ್ದೇವೆ.”
ಆದಾಗ್ಯೂ, ಅದು ಧರ್ಮದ ಗತಕಾಲದ ದಾಖಲೆಯಾಗಿತ್ತು. ಅಧಿಕಾಂಶ ಜನರು ರೋಮನ್ ಕ್ಯಾತೊಲಿಕ್ ಅಥವಾ ಆರ್ತೊಡಾಕ್ಸ್ ಆಗಿರುವ, ಪೂರ್ವದ ಯುಗೊಸ್ಲಾವಿಯದ ಪ್ರಜಾಧಿಪತ್ಯಗಳಲ್ಲಿ ಅದರ ಇತ್ತೀಚಿಗಿನ ಪಾತ್ರದ ಕುರಿತೇನು?
ಧರ್ಮದ ಜವಾಬ್ದಾರಿ
ಇಸವಿ 1993, ಅಕ್ಟೋಬರ 20ರ ಏಷಿಯವೀಕ್‌ನಲ್ಲಿ ಒಂದು ಶಿರೋನಾಮವು ಘೋಷಿಸಿದ್ದು: “ಧಾರ್ಮಿಕ ಹೋರಾಟಕ್ಕೆ ಬಾಸ್ನೀಯ ಕೇಂದ್ರವಾಗಿದೆ.” ಜೂನ್ 13, 1993ರ ಸಾನ್ ಅಂಟೋನಿಯೊ ಎಕ್ಸ್‌ಪ್ರೆಸ್-ನ್ಯೂಸ್‌ನಲ್ಲಿ ವ್ಯಾಖ್ಯಾನವೊಂದರ ಶಿರೋನಾಮವು ಪ್ರಕಟಿಸಿದ್ದು: “ಧಾರ್ಮಿಕ ಮುಖ್ಯಸ್ಥರು ಬಾಸ್ನೀಯದ ಸಂಕಟಗಳನ್ನು ಕೊನೆಗೊಳಿಸಬೇಕು.” ಲೇಖನವು ಹೇಳಿದ್ದು: “ರೋಮನ್ ಕ್ಯಾತೊಲಿಕ್, ಪ್ರಾಚ್ಯ ಆರ್ತೊಡಾಕ್ಸ್ ಮತ್ತು ಮುಸ್ಲಿಮ್ ಧರ್ಮಗಳು, ಏನು ಸಂಭವಿಸುತ್ತಿದೆಯೊ ಅದಕ್ಕಾಗಿ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳಲಾರವು. ಲೋಕದಾದ್ಯಂತ ಜನರು ಪ್ರತಿ ರಾತ್ರಿ ಟೆಲಿವಿಷನ್‌ನಲ್ಲಿ ಸಂಧ್ಯಾ ವಾರ್ತೆಯನ್ನು ವೀಕ್ಷಿಸುತ್ತಿರುವುದರಿಂದ, ಈ ಸಲ ಅವು ತಪ್ಪಿಸಿಕೊಳ್ಳಲಾರವು. ಇದು ಧರ್ಮದ ಯುದ್ಧವಾಗಿದೆ. . . . ಧಾರ್ಮಿಕ ಮುಖಂಡರು ಯುದ್ಧಕ್ಕಾಗಿ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಎಂಬ ತತ್ವವು ಸ್ಪಷ್ಟವಾಗಿಗಿದೆ. ಅವರ ಕಪಟ ಧಾರ್ಮಿಕತೆಯೇ ಅದನ್ನು ಉದ್ರೇಕಿಸುತ್ತದೆ. ಒಂದು ಪಕ್ಷಕ್ಕೆ ಎದುರಾಗಿ ಇನ್ನೊಂದು ಪಕ್ಷವನ್ನು ಆಶೀರ್ವದಿಸುವ ಮೂಲಕ ಅವರು ಹಾಗೆ ಮಾಡುತ್ತಾರೆ.”
ಉದಾಹರಣೆಗೆ, ರೋಮನ್ ಕ್ಯಾತೊಲಿಕ್ ಚರ್ಚು ಮತ್ತು ಪ್ರಾಚ್ಯ ಆರ್ತೊಡಾಕ್ಸ್ ಚರ್ಚುಗಳ ಸದಸ್ಯರ ನಡುವೆ ದ್ವೇಷವು ಅಷ್ಟೊಂದು ಮಹತ್ತರವಾಗಿದೆ ಏಕೆ? ಪೋಪರು, ಬಿಷಪರು, ಮತ್ತು ಚರ್ಚಿನ ಇತರ ಮುಖಂಡರು ಹೊಣೆಗಾರರಾಗಿದ್ದಾರೆ. ಇಸವಿ 1054ರಲ್ಲಿ ಈ ಧರ್ಮಗಳ ನಡುವೆ ಅಂತಿಮ ಬೇರ್ಪಡಿಸುವಿಕೆಯಾದಂದಿನಿಂದ, ಚರ್ಚಿನ ಮುಖಂಡರು ತಮ್ಮ ಸದಸ್ಯರ ನಡುವೆ ದ್ವೇಷ ಮತ್ತು ಯುದ್ಧಗಳನ್ನು ಬೆಳೆಸಿದ್ದಾರೆ. ಇಸವಿ 1991, ಸಪ್ಟಂಬರ 20ರ ಮಾಂಟೆನೀಗ್ರಿನ್ ವಾರ್ತಾಪತ್ರಿಕೆಯಾದ ಪೋಬೆಡ, ಇತ್ತೀಚಿಗಿನ ಹೋರಾಟದ ಕುರಿತಾದ ಒಂದು ಲೇಖನದಲ್ಲಿ, ಆ ಧಾರ್ಮಿಕ ಒಡಕುಗಳಿಗೆ ಮತ್ತು ಅದರ ಪರಿಣಾಮಗಳಿಗೆ ನಿರ್ದೇಶಿಸಿತು. “ದೇವರ ಹೆಸರಿನಲ್ಲಿ ಕೊಲೆಗಾರರು” ಎಂಬ ಶಿರೋನಾಮದ ಕೆಳಗೆ, ಲೇಖನವು ವಿವರಿಸಿದ್ದು:
“ಅದು [ಕ್ರೋಆ್ಯಟ್ ಅಧ್ಯಕ್ಷ] ಟುಜ್‌ಮನ್ ಮತ್ತು [ಸರ್ಬಿಯದ ಮುಖಂಡ] ಮಿಲಾಶವೀಕ್‌ನ ನಡುವಿನ ರಾಜಕೀಯತೆಯ ಒಂದು ಪ್ರಶ್ನೆಯಾಗಿರುವುದಿಲ್ಲ, ಬದಲಾಗಿ ಅದು ಒಂದು ಧಾರ್ಮಿಕ ಯುದ್ಧವಾಗಿದೆ. ಪೋಪರು, ಒಂದು ಪ್ರತಿಸ್ಪರ್ಧೆಯೋಪಾದಿ ಆರ್ತೊಡಾಕ್ಸ್ ಧರ್ಮವನ್ನು ತೆಗೆದುಹಾಕಲು ನಿರ್ಧರಿಸಿದಂದಿನಿಂದ ಈಗಾಗಲೇ ಒಂದು ಸಾವಿರ ವರ್ಷಗಳು ಗತಿಸಿವೆಯೆಂದು ಹೇಳಬೇಕಾಗಿದೆ. . . . 1054ರಲ್ಲಿ . . . ಬೇರ್ಪಡಿಸುವಿಕೆಗೆ ಆರ್ತೊಡಾಕ್ಸ್ ಚರ್ಚು ಕಾರಣವೆಂದು ಪೋಪರು ಪ್ರಕಟಿಸಿದರು. . . . ಇಸವಿ 1900ರಲ್ಲಿ, 20ನೆಯ ಶತಮಾನಕ್ಕಾಗಿ ಆರ್ತೊಡಾಕ್ಸ್‌ನ ವಿರುದ್ಧ ದೊಡ್ಡ ಪ್ರಮಾಣದ ನರಹತ್ಯೆಯ ಯೋಜನೆಯನ್ನು ಕ್ಯಾತೊಲಿಕ್ ಸಭೆಯು ಸ್ಪಷ್ಟವಾಗಿಗಿ ವಿವರಿಸಿತು. [ಈ] ಯೋಜನೆಯು ಈಗ ಸಂಭವಿಸುತ್ತಾ ಇದೆ.”
ಆದಾಗ್ಯೂ, ಇತ್ತೀಚಿಗಿನ ಹೋರಾಟವು ಈ ಶತಮಾನದಲ್ಲಿನ ಧಾರ್ಮಿಕ ಕಲಹದ ಮೊದಲ ಉದಾಹರಣೆಯಾಗಿರುವುದಿಲ್ಲ. ಐವತ್ತು ವರ್ಷಗಳ ಹಿಂದೆ, IIನೆಯ ಲೋಕಯುದ್ಧದ ಸಮಯದಲ್ಲಿ, ಆ ಕ್ಷೇತ್ರದಲ್ಲಿ ಆರ್ತೊಡಾಕ್ಸ್ ಚರ್ಚಿನ ಇರುವನ್ನೇ ತೆಗೆದುಹಾಕಲು ರೋಮನ್ ಕ್ಯಾತೊಲಿಕರು ಪ್ರಯತ್ನಿಸಿದರು. ಪೋಪರ ಸಹಾಯದಿಂದ, ಊಸಶ್ಟಿ ಎಂದು ಕರೆಯಲ್ಪಟ್ಟ ಕ್ರೊಏಷಿಯನ್ ರಾಷ್ಟ್ರೀಯ ಪಕ್ಷವು, ಕ್ರೋಏಷಿಯದ ಸ್ವತಂತ್ರ ದೇಶವನ್ನು ಆಳತೊಡಗಿತು. ವ್ಯಾಟಿಕನ್‌ನಿಂದ ಅಂಗೀಕರಿಸಲ್ಪಟ್ಟ ಈ ಆಳಿಕ್ವೆಯು, “ಲಕ್ಷಾಂತರ ಸರ್ಬಿಯನರ ಮತ್ತು ಯೆಹೂದ್ಯರ ಶಿರಶ್ಛೇದನವನ್ನು ಒಳಗೊಂಡ, ಅಸಾಮಾನ್ಯವಾದ ಪಾಶವೀಯ ಪದ್ಧತಿಗಳನ್ನು” ಬಳಸಿತೆಂದು ದ ನ್ಯೂ ಎನ್‌ಸೈಕ್ಲೋಪೀಡಿಯ ಬ್ರಿಟಾನಿಕ ವರದಿಸುತ್ತದೆ.
ದ ಯುಗೊಸ್ಲಾವ್ ಔಷ್‌ವಿಟ್ಸ್ ಆ್ಯಂಡ್ ದ ವ್ಯಾಟಿಕನ್ ಎಂಬ ಪುಸ್ತಕದಲ್ಲಿ, ಈ ಅಧಿಕ ಪ್ರಮಾಣದ ಕೊಲೆಗಳು—ಸಾವಿರಗಟ್ಟಲೆ ಬಲಿಪಶುಗಳನ್ನು ಒಳಗೊಂಡಿರುವ—ದಾಖಲಿಸಲ್ಪಟ್ಟಿವೆ ಮಾತ್ರವಲ್ಲ, ಅವುಗಳಲ್ಲಿ ವ್ಯಾಟಿಕನ್‌ನ ಒಳಗೊಂಡಿರುವಿಕೆಯು ಸಹ ದಾಖಲಿಸಲ್ಪಟ್ಟಿದೆ.
ಮತ್ತೊಂದು ಕಡೆ, ಆರ್ತೊಡಾಕ್ಸ್ ಚರ್ಚು ತನ್ನ ಹೋರಾಟದಲ್ಲಿ ಸರ್ಬಿಯನರಿಗೆ ಬೆಂಬಲ ನೀಡಿದೆ. ವಾಸ್ತವವಾಗಿ, ಒಂದು ಸರ್ಬಿಯನ್ ಸಂಸ್ಥೆಯ ಮುಖಂಡನೊಬ್ಬನು ಹೀಗೆ ಹೇಳಿದನೆಂದು ಉದ್ಧರಿಸಲಾಗಿತ್ತು: ‘ಪೇಟ್ರಿಅರ್ಕರು ನನ್ನ ಆಜ್ಞಾಪಕರಾಗಿದ್ದಾರೆ.’
ಬಾಸ್ನೀಯ ಮತ್ತು ಹರ್‌ಟ್ಸಗೋವೀನ ಒಂದರಲ್ಲಿಯೇ 1,50,000ದಷ್ಟು ಜನರ—ಸಾಯುವಂತೆ ಅಥವಾ ಕಾಣೆಯಾಗುವಂತೆ ಮಾಡಿದ—ಕೊಲ್ಲುವಿಕೆಯನ್ನು ನಿಲ್ಲಿಸಲು ಏನು ಮಾಡಸಾಧ್ಯವಿತ್ತು? ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯು “ಪೋಪರಿಗೆ, ಕಾನ್‌ಸ್ಟೆಂಟಿನೋಪಲಿನ ಪೇಟ್ರಿಅರ್ಕ್‌ರಿಗೆ, ಮತ್ತು ಬಾಸ್ನೀಯ-ಹರ್‌ಟ್ಸಗೋವೀನದ ಕ್ಯಾತೊಲಿಕ್, ಈಸರ್ನ್ಟ್ ಆರ್ತೊಡಾಕ್ಸ್ ಮತ್ತು ಮುಸ್ಲಿಮ್ ಚರ್ಚುಗಳ [ಇತರ ನಾಯಕರಿಗೆ], ಅವರು ಕೂಡಲೆ ಹೋರಾಟವನ್ನು ನಿಲ್ಲಿಸಲು ಆಜ್ಞಾಪಿಸಬೇಕೆಂದು ಮತ್ತು ತಮ್ಮ ಅನುಯಾಯಿಗಳು ಇತರ ನಂಬಿಕೆಯವರೊಂದಿಗೆ ಹೇಗೆ ನೆರೆಹೊರೆಯವರಾಗಿ ಜೀವಿಸಬಲ್ಲರೆಂದು ನಿರ್ಣಯಿಸಬೇಕೆಂದು ಸಲಹೆ ನೀಡುವ ಒಂದು ಔಪಚಾರಿಕ ಠರಾವನ್ನು” ಮಂಜೂರಾಗಿಸಬೇಕೆಂದು ಫ್ರೆಡ್ ಶ್ಮಿಟ್, ಸಾನ್ ಅಂಟೋನಿಯೊ ಎಕ್ಸ್‌ಪ್ರೆಸ್-ನ್ಯೂಸ್‌ನಲ್ಲಿ ಘೋಷಿಸಿದರು.
ತದ್ರೀತಿಯ ಧಾಟಿಯಲ್ಲಿ, ಸ್ಕಾಟ್ಸ್‌ಡೇಲ್, ಆ್ಯರಿಜೋನ, ಪ್ರೋಗ್ರೆಸ್ ಟ್ರಿಬ್ಯೂನ್‌ನಲ್ಲಿ ಒಂದು ವ್ಯಾಖ್ಯಾನವು ಮುಕ್ತಾಯಗೊಳಿಸಿದ್ದೇನಂದರೆ, ಯುದ್ಧವನ್ನು “ನಿಲ್ಲಿಸಲು ಧಾರ್ಮಿಕ ಮುಖಂಡರು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡುವುದಾದರೆ, ಅದನ್ನು ನಿಲ್ಲಿಸಬಹುದು.” “ಸಾರಯೇವೊದಲ್ಲಿ ಸಿಡಿಗುಂಡು ಹಾರಿಸುವ ಯಾವನೇ ಸದಸ್ಯನನ್ನು ಕೂಡಲೆ ಬಹಿಷ್ಕರಿಸುವ ಮೂಲಕ” ಅವರದನ್ನು ಮಾಡಬೇಕೆಂದು ಲೇಖನವು ಸೂಚಿಸಿತು.
ಶಾಂತಿಯನ್ನು ಪ್ರವರ್ತಿಸಲು ನೈಜ ಪ್ರಭಾವವಿಲ್ಲ
ಆದಾಗ್ಯೂ, ಜೊತೆ ಕ್ಯಾತೊಲಿಕರು ಅಂತಹ ಕ್ರಿಯೆಗಳನ್ನು ಕೈಗೊಳ್ಳುವುದಕ್ಕಾಗಿ ಮನವಿ ಸಲ್ಲಿಸಿರುವುದಾದರೂ, ಯುದ್ಧ ಪಾತಕಿಗಳಲ್ಲಿ ಅತ್ಯಂತ ದುಷ್ಟರಾದವರನ್ನು ಬಹಿಷ್ಕರಿಸಲು ಪೋಪರು ದೃಢವಾಗಿ ನಿರಾಕರಿಸಿದ್ದಾರೆ. ಉದಾಹರಣೆಗೆ, ಅಮೆರಿಕದ ಸಿನ್ಸಿನ್ಯಾಟಿ, ಒಹೈಯೊ ಕ್ಯಾತೊಲಿಕ್ ಟೆಲಿಗ್ರಾಫ್-ರಿಜಿಸ್ಟರ್, “ಕ್ಯಾತೊಲಿಕನಾಗಿ ಬೆಳೆಸಲ್ಪಟ್ಟು ನಂಬಿಕೆಯನ್ನು ಉಲ್ಲಂಘಿಸುತ್ತಾನೆ ಎಂದು ಪೋಪನಿಗೆ ತಂತಿವಾರ್ತೆಯು ಹೇಳುತ್ತದೆ” ಎಂಬ ಶಿರೋನಾಮದ ಕೆಳಗೆ ವರದಿಸಿದ್ದು: “ರೈಕ್ಸ್‌ಫ್ಯೂರರ್ ಅಡಾಲ್ಫ್ ಹಿಟ್ಲರನು ಬಹಿಷ್ಕರಿಸಲ್ಪಡಬೇಕು ಎಂದು ಪಯಸ್ XIIನಿಗೆ ಮನವಿ ಮಾಡಲ್ಪಟ್ಟಿದೆ. . . . [ತಂತಿವಾರ್ತೆಯು] ಒಂದು ಭಾಗದಲ್ಲಿ ಓದಲ್ಪಡುವುದು, ‘ಅಡಾಲ್ಫ್ ಹಿಟ್ಲರನು ಕ್ಯಾತೊಲಿಕ್ ಹೆತ್ತವರಿಗೆ ಜನಿಸಿ, ಒಬ್ಬ ಕ್ಯಾತೊಲಿಕನೋಪಾದಿ ದೀಕ್ಷಾಸ್ನಾನ ಹೊಂದಿದ್ದವನಾಗಿದ್ದು, ಕ್ಯಾತೊಲಿಕನಾಗಿಯೇ ಬೆಳೆಸಲ್ಪಟ್ಟಿದ್ದನು ಹಾಗೂ ಶಿಕ್ಷಣ ಪಡೆದಿದ್ದನು.’” ಆದರೂ ಹಿಟ್ಲರನು ಎಂದೂ ಬಹಿಷ್ಕರಿಸಲ್ಪಡಲಿಲ್ಲ.
ಪಾಶವೀಯ ಯುದ್ಧಗಳು ಪ್ರಬಲವಾಗಿರುವ, ಆಫ್ರಿಕದ ಭಾಗಗಳಲ್ಲಿರುವ ಸನ್ನಿವೇಶಗಳನ್ನು ಸಹ ಪರಿಗಣಿಸಿ. ಆಫ್ರಿಕದ ಜನಾಂಗಗಳಾದ ಬುರುಂಡಿ, ರುಆಂಡ, ಟಾನ್ಸೆನೀಯ, ಯುಗಾಂಡ, ಮತ್ತು ಜಯೊರ್‌ನಿಂದ ಬಂದ ಹದಿನೈದು ರೋಮನ್ ಕ್ಯಾತೊಲಿಕ್ ಬಿಷಪರು ಒಪ್ಪಿಕೊಂಡದ್ದೇನಂದರೆ, ಪ್ರಾಂತದಲ್ಲಿ ಅನೇಕ ಸ್ನಾನಿತ “ಕ್ರೈಸ್ತರ” ಹಾಜರಿಯಿದ್ದಾಗ್ಯೂ, “ಆಂತರಿಕ ಕಲಹಗಳು ಕಗ್ಗೊಲೆ, ನಾಶನಕ್ಕೆ ಮತ್ತು ಬಲಾತ್ಕಾರದಿಂದ ಜನರ ತೆಗೆಯುವಿಕೆಗೆ ನಡೆಸಿವೆ.” “ಕ್ರೈಸ್ತ ನಂಬಿಕೆಯು ಜನರ ಮನೋಭಾವವನ್ನು ಸಾಕಷ್ಟು ಪ್ರಭಾವಿಸಿಲ್ಲದಿರುವುದೇ” ಈ ಸಮಸ್ಯೆಯ ಮೂಲ ಕಾರಣವಾಗಿದೆಯೆಂದು ಬಿಷಪರು ಒಪ್ಪಿಕೊಂಡರು.
ಇಸವಿ 1994, ಎಪ್ರಿಲ್ 8ರ ನ್ಯಾಷನಲ್ ಕ್ಯಾತೊಲಿಕ್ ರಿಪೋರ್ಟರ್ ಹೇಳಿದ್ದೇನಂದರೆ: “ಕ್ಯಾತೊಲಿಕ್ ಜನಸಂಖ್ಯೆಯು ಅಧಿಕವಾಗಿರುವ ಆಫ್ರಿಕದ ಸಣ್ಣ [ಬುರುಂಡಿ] ಜನಾಂಗದಲ್ಲಿ ಹೋರಾಟಗಳ ಹೊಸ ವರದಿಗಳಿಂದಾಗಿ ಪೋಪರು . . . ‘ಅಪಾರ ವೇದನೆ’ಯನ್ನು ಅನುಭವಿಸಿದರು.” ಜನಸಂಖ್ಯೆಯಲ್ಲಿ ಸುಮಾರು 70 ಪ್ರತಿಶತ ಕ್ಯಾತೊಲಿಕರಾಗಿರುವ ರುಆಂಡದಲ್ಲಿ, ಕೊಲೆಗಳಿಗೆ “ಕ್ಯಾತೊಲಿಕರು ಸಹ ಹೊಣೆಗಾರರಾಗಿದ್ದಾರೆ” ಎಂದು ಪೋಪರು ಹೇಳಿದರು. ಹೌದು, ಹಿಂದಿನ ಅಸಂಖ್ಯಾತ ಯುದ್ಧಗಳಲ್ಲಿ ಅವರು ಮಾಡಿರುವಂತೆಯೇ, ಎರಡೂ ಪಕ್ಷಗಳಲ್ಲಿರುವ ಕೊಲೆಗಾರರು ಒಬ್ಬರ ಮೇಲೊಬ್ಬರು ಕಗ್ಗೊಲೆ ನಡೆಸಿದ್ದಾರೆ. ಮತ್ತು, ನಾವು ಗಮನಿಸಿದಂತೆ ಇತರ ಧರ್ಮಗಳು ಅದನ್ನೇ ಮಾಡಿವೆ.
ಆದುದರಿಂದ ಎಲ್ಲಾ ಧರ್ಮಗಳು ಯುದ್ಧದಲ್ಲಿ ಪಕ್ಷ ವಹಿಸುತ್ತವೆ ಎಂದು ನಾವು ನಿರ್ಣಯಿಸಬೇಕೊ? ಶಾಂತಿಯನ್ನು ಪ್ರವರ್ತಿಸಲು ನಿಜ ಪ್ರಭಾವವಾಗಿರುವ ಯಾವುದೇ ಧರ್ಮವಾದರು ಇದೆಯೊ?
[ಪುಟ 5 ರಲ್ಲಿರುವ ಚಿತ್ರ]
ಪೇಪಲ್ ನನ್ಸಿಯೊ ಬಾಸಾಲೊ ಡೀ ಟಾರೆಗ್ರಾಸರೊಂದಿಗೆ ಇಲ್ಲಿ ಕಾಣಬಹುದಾದ ಹಿಟ್ಲರನು ಎಂದಿಗೂ ಬಹಿಷ್ಕರಿಸಲ್ಪಡಲಿಲ್ಲ
[ಕೃಪೆ]
Bundesarchiv Koblenz