ವರ್ಧಿಷ್ಣು ದೇಶಗಳಲ್ಲಿ ಕೆಲಸಗಳನ್ನು ಸೃಷ್ಟಿಸುವುದು
ಸೆನಿಗಲ್ನಲ್ಲಿರುವ ಎಚ್ಚರ! ಸುದ್ದಿಗಾರರಿಂದ
ಹದಿವಯಸ್ಕಳ ತಂದೆಯು ಅವಳು ಮಗುವಾಗಿದ್ದಾಗ, ಎಂಟು ಮಕ್ಕಳ ಒಂದು ದೊಡ್ಡ ಕುಟುಂಬದೊಂದಿಗೆ ಅವಳ ತಾಯಿಯನ್ನು ಬಿಟ್ಟು ಮರಣಹೊಂದಿದನು. ಆಕೆಯ ತಾಯಿಯು ಈಗ ವೃದ್ಧೆಯಾಗುತ್ತಿರುವುದರಿಂದ, ಒಂದು ಕೆಲಸವನ್ನು ಕಂಡುಹಿಡಿಯುವ ಮೂಲಕ ಆ ಹದಿವಯಸ್ಕಳು ಕುಟುಂಬದ ಆಸರೆಗಾಗಿ ನೆರವಾಗಬೇಕಾಗಿದೆ. ಶಾಲೆಯನ್ನು ಮುಂದುವರಿಸುವ ಅಪೇಕ್ಷಿತ ಗುರಿಯನ್ನು ಪೂರೈಸಲು ಅವಳಿಗೆ ಸಾಧ್ಯವಿಲ್ಲ. ಅವಳಿಗೆ ಔಪಚಾರಿಕ ಶಿಕ್ಷಣ ಯಾ ಕುಶಲತೆಗಳು ಇಲ್ಲದಿದ್ದಾಗ್ಯೂ, ಅವಳು ಕೆಲಸ ಮಾಡಬೇಕಾಗಿದೆ.
ಈ ರೀತಿಯ ಪರಿಸ್ಥಿತಿಗಳು ವರ್ಧಿಷ್ಣು ದೇಶಗಳಲ್ಲಿ ಸಾಮಾನ್ಯವಾಗಿವೆ. ವಿಶ್ವವಿದ್ಯಾನಿಲಯದ ಪದವಿಗಳನ್ನು ಹೊಂದಿರುವವರಿಗೂ, ಕೆಲಸಗಳು ದುರ್ಲಭವಾಗಿವೆ. ಆದರೂ, ದೃಢಸಂಕಲ್ಪ ಮತ್ತು ಒಂದು ಒಳ್ಳೆಯ ಸೃಜನಶೀಲ ಪ್ರಜ್ಞೆಯೊಂದಿಗೆ, ಅನೇಕರು ತಮಗಾಗಿ ಕೆಲಸಗಳನ್ನು ಯೋಜಿಸಲು ಸಾಮರ್ಥ್ಯವುಳ್ಳವರಾಗಿದ್ದಾರೆ. ಇಂಥ ಕೆಲಸಗಳಿಗೆ ಒಬ್ಬ ವ್ಯಕ್ತಿಯನ್ನು ಸಮೃದತ್ಧೆಯ ಮಡಿಲಲ್ಲಿ ಇಡಲು ಸಾಧ್ಯವಿಲ್ಲದಿರಬಹುದು, ಆದರೆ 1 ತಿಮೊಥೆಯ 6:8, NWರಲ್ಲಿ ಬೈಬಲು ಹೇಳುವುದು: “ಅನ್ನವಸ್ತ್ರಗಳಿರುವಲ್ಲಿ, ಈ ವಿಷಯಗಳೊಂದಿಗೆ ನಾವು ಸಂತೃಪ್ತರಾಗಿರುವೆವು.”
ಒಬ್ಬನನ್ನು ಸಮತೋಲದಲ್ಲಿಡಲು ಸಹಾಯ ಮಾಡುವ ಆ ಸಲಹೆಯನ್ನು ಜ್ಞಾಪಿಸಿಕೊಂಡು, ಕ್ರೈಸ್ತರು ವರ್ಧಿಷ್ಣು ದೇಶಗಳಲ್ಲಿ ಜೀವಿಸಿ ಯಶಸ್ವಿಗೊಳ್ಳುತ್ತಿರುವ ಬುದ್ಧಿವಂತಿಕೆಯ ವಿಧಗಳಲ್ಲಿ ಕೆಲವನ್ನು ನಾವು ಪರಿಗಣಿಸೋಣ.
ಆಹಾರ ವ್ಯಾಪಾರ—ಆಫ್ರಿಕಾದ ಶೈಲಿ
ಆಹಾರಕ್ಕೆ ಯಾವಾಗಲೂ ಗಿರಾಕಿಯಿದೆ. ಪಶ್ಚಿಮ ಆಫ್ರಿಕದಲ್ಲಿ, ಈ ನಿಜತ್ವವನ್ನು ಲಾಭಕರವಾಗಿ ಪರಿವರ್ತಿಸಲು ಸಾಹಸಿ ಮಹಿಳೆಯರು ಆಕರ್ಷಕವಾದ ವಿವಿಧ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಉದಾಹರಣೆಗಾಗಿ, ಕೆಲವರು, ಒಂದು ನಿರ್ಮಾಣ ನಿವೇಶನದ ಹತ್ತಿರ ಒಂದು ಚಿಕ್ಕ ಷೆಡ್ಡನ್ನು ಕಟ್ಟುತ್ತಾರೆ ಮತ್ತು ಕೆಲಸಗಾರರಿಗೆ ಮಧ್ಯಾಹ್ನ ಊಟವನ್ನು ತಯಾರಿಸುತ್ತಾರೆ. ಇನ್ನಿತರರು ಬೆಳಗ್ಗೆ ಕೆಲಸಕ್ಕೆ ಹೋಗುವವರಿಗೆ ಆಹಾರವನ್ನು ಒದಗಿಸುತ್ತಾರೆ. ಅವರು ಬೆಂಚುಗಳನ್ನೊಳಗೊಂಡ ಒಂದು ಚಿಕ್ಕ ಮೇಜನ್ನು ಇಟ್ಟು, ಒಂದು ಕಾಯಿಸುವ ಕಲ್ಲಿದ್ದಲ ಒಲೆಯ ಮೇಲೆ ನೀರನ್ನು ಕುದಿಸಿ, ತಾಜಾ ಬ್ರೆಡ್ ಮತ್ತು ಬೆಣ್ಣೆಯೊಂದಿಗೆ ಬಿಸಿಯಾದ ಕಾಫಿಯನ್ನು—ಒಂದು ಸಾದಾ ಹೊತ್ತರೂಟವನ್ನು ಕೊಡುತ್ತಾರೆ. ಸಾಯಂಕಾಲದಲ್ಲಿ ಪುನಃ ಅವರು ವ್ಯಾಪಾರವನ್ನು ತೆರೆದು ದಿನದ ಕೊನೆಯಲ್ಲಿ ಕೆಲಸಗಾರರಿಗೆ ಒಂದು ಸಣ್ಣ ಉಪಾಹಾರವನ್ನು ಕೊಡುತ್ತಾರೆ. ಈ ರೀತಿಯ ಹೋಟೇಲನ್ನು ನಡಿಸುವುದು ಕಠಿನ ವೇಳಾಪಟ್ಟಿಯ ಕೆಲಸವಾಗುತ್ತದಾದರೂ, ಉದ್ಯೋಗಶೀಲರು ಬದುಕಲು ಹಣವನ್ನು ಹೊಂದುವಂತೆ ಅನುಮತಿಸುತ್ತದೆ.
ಉಪಾಹಾರಗಳನ್ನು ಮಾರಲಿಕ್ಕಾಗಿ ಸಂದರ್ಭವು ಸಹ ಇದೆ. ಕೆಲವು ಮಹಿಳೆಯರು ಕಿಕ್ಕಿರಿದು ತುಂಬಿದ ಒಂದು ಮಾರುಕಟ್ಟೆಯ ಹತ್ತಿರದ ಸ್ಥಳವನ್ನು ಹುಡುಕಿ ನೆಲಗಡಲೆಗಳನ್ನು ಹುರಿಯುತ್ತಾರೆ. ಫಟಾಯಾ—ಒಂದು ಖಾರವಾದ ಸಾರಿನಲ್ಲಿ ಕೊಡಲ್ಪಡುವ ಚಿಕ್ಕ ಮಾಂಸದ ಕಡುಬುಗಳು—ಸಹ ಸುಲಭವಾಗಿ ವಿಕ್ರಯಿಸಲ್ಪಡುತ್ತದೆ. ಹೀಗೆಯೇ ಮಸಾಲೆ ಹಾಕಿದ ಮಾಂಸದ ಸಾರಿನೊಂದಿಗೆ ಮಾಡಲ್ಪಟ್ಟ ಮಾಂಸದ ಸ್ಯಾಂಡ್ವಿಚ್ಗಳು ಸಹ. ಗ್ಯಾಂಬಿಯ ಮತ್ತು ಮಾಲಿಗಳಂಥ ಆಫ್ರಿಕದ ದೇಶಗಳಲ್ಲಿ ಇವುಗಳು ಸುಲಭವಾಗಿ ವಿಕ್ರಯವಾಗುವ ವಸ್ತುಗಳಾಗಿವೆ.
ಗಿನೀಬಿಸಾ ಮತ್ತು ಸೆನಿಗಲ್ನಲ್ಲಿ, ಯೆಹೋವನ ಸಾಕ್ಷಿಗಳಾದ ಅನೇಕ ಯುವಕರು ಇನ್ನೊಂದು ಜನಪ್ರಿಯ ವಸ್ತು—ಚಿಕ್ಕ ಕೇಕ್ಗಳನ್ನು ಸುಟ್ಟು ಮಾರಿ ತಮ್ಮನ್ನು ಪೂರ್ಣ ಸಮಯದ ಸೇವೆಯಲ್ಲಿ ಆಧರಿಸಿಕೊಳ್ಳುತ್ತಾರೆ. ಸೆನಿಗಲ್ನ ರಾಜಧಾನಿಯಾದ ಡಕಾರ್ನ ಒಬ್ಬ ನಿವಾಸಿಯಾದ ಮೋಸೆಸ್ ವಿವರಿಸುವುದು: “ಮಕ್ಕಳನ್ನು ಪಡೆಯಲು ಪ್ರಾರಂಭಿಸಿದಾಗ ನಾನು ಮತ್ತು ನನ್ನ ಹೆಂಡತಿ ವಿಶೇಷ ಪಯನೀಯರರೋಪಾದಿ ಸೇವೆ ಸಲ್ಲಿಸುತ್ತಿದ್ದೆವು. ಅವರನ್ನು ನೋಡಿಕೊಳ್ಳಲಿಕ್ಕಾಗಿ ಈಗ ನಾನು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಾಗಿತ್ತು, ಆದುದರಿಂದ ಚಿಕ್ಕ ಕೇಕ್ಗಳನ್ನು ತಯಾರಿಸುವ ಮತ್ತು ವಿಕ್ರಯಿಸುವ ಯೋಚನೆಯು ನನಗೆ ಬಂತು.
“ಪ್ರಾರಂಭಿಸಲು ನನ್ನಲ್ಲಿ ಸ್ವಲ್ಪವೇ ಹಣವಿತ್ತು. ಆದಕಾರಣ ಲಾಭದೋಪಾದಿ ಇಟ್ಟುಕೊಳ್ಳಬಹುದಾದ ಹಣ ಮತ್ತು ಹಿಟ್ಟು ಹಾಗೂ ಮೊಟ್ಟೆಗಳ ಸಂಗ್ರಹವನ್ನು ತುಂಬಿಸಲು ವ್ಯಾಪಾರಕ್ಕೆ ಹಾಕಬೇಕಾಗಿದ್ದ ಹಣದ ನಡುವೆ ವಿಶೇಷ್ಲಿಸುವದರ ವಿಷಯದಲ್ಲಿ ನಾನು ಜಾಗರೂಕತೆಯಿಂದಿರಬೇಕಾಗಿತ್ತು. ನನ್ನ ಸಣ್ಣ ಕುಟುಂಬದ ಅಧಿಕಾಂಶ ಅಗತ್ಯತೆಗಳನ್ನು ಪೂರೈಸಲಿಕ್ಕಾಗಿ ಈಗ ನಾನು ಸಾಕಷ್ಟು ಕೇಕ್ಗಳನ್ನು ವಿಕ್ರಯಿಸಲು ಶಕ್ತನಾಗಿದ್ದೇನೆ.
“ಆರ್ಥಿಕ ಅಗತ್ಯತೆಗಳೊಂದಿಗೆ ನೆರವಾಗಲು ನನ್ನ ಹೆಂಡತಿ, ಎಸ್ಟರ್, ಮನೆಯಲ್ಲಿ ಉಡುಪುಗಳನ್ನು ಹೊಲಿಯುತ್ತಾಳೆ. ಇದು ನಮ್ಮ ಇಬ್ಬರು ಚಿಕ್ಕ ಹುಡುಗರೊಂದಿಗೆ ಅವಳು ಮನೆಯಲ್ಲಿ ಇರುವಂತೆ ಅನುಮತಿಸುತ್ತದೆ. ನಾವು ಕಠಿನ ಕಾಲದಲ್ಲಿ ಜೀವಿಸುತ್ತಿದ್ದೇವೆಂಬ ವಾಸ್ತವಾಂಶವಿದ್ದಾಗ್ಯೂ, ನಮ್ಮಿಬ್ಬರ ಪ್ರಯತ್ನದಿಂದ, ನಮ್ಮ ಕುಟುಂಬಕ್ಕಾಗಿ ಚೆನ್ನಾಗಿ ಗಮನಕೊಡಲು ಶಕ್ತರಾಗಿದ್ದೇವೆ.”
ಒಂದು ಸಣ್ಣ ವ್ಯಾಪಾರಕ್ಕಾಗಿ ಇನ್ನೊಂದು ಉಪಾಯ ಇಲ್ಲಿದೆ: ಕೆಲಸ ಮಾಡುತ್ತಿರುವ ಜನರು ಕಾರ್ಯಮಗ್ನರಾಗಿರುವುದರಿಂದ ಮತ್ತು ಮಾರುಕಟ್ಟೆಗೆ ಹೋಗಲು ಒಂದು ಬಹಳ ಅಂತರದ ಪ್ರಯಾಣವನ್ನು ಮಾಡಲು ಅವರಿಗೆ ಸಾಮಾನ್ಯವಾಗಿ ಸಮಯವಿಲ್ಲದಿರುವ ಕಾರಣ, ಅವರು ಹಣ್ಣು ಯಾ ತರಕಾರಿಗಳನ್ನು ಮಾರುವ ಸಣ್ಣ ಮಳಿಗೆಗಳನ್ನು ಆಶ್ರಯಿಸುತ್ತಾರೆ. ಕೆಲವು ಮಳಿಗೆಗಳ ಮಾಲಿಕರು, ಹೊಚ್ಚ ಹಸಿಯಾದ ತರಕಾರಿಗಳನ್ನು ನೇರ ಗಿರಾಕಿಗಳ ಮನೆಗೆ ತೆಗೆದುಕೊಂಡು ಹೋಗುವ, ಒಂದು ಸಾಗಿಸುವ ವ್ಯವಸ್ಥೆಯನ್ನು ಸಹ ಹೊಂದಿದ್ದಾರೆ. ಅತಿ ಬೇಗನೆ ನೀವು ಪ್ರಾಮಾಣಿಕರು ಮತ್ತು ಉನ್ನತ ದರ್ಜೆಯ ಉತ್ಪನ್ನಗಳನ್ನು ಮಾರುತ್ತೀರಿ ಎನ್ನುವ ವಿಷಯವು ಹರಡಬಹುದು. ಆದಾಗ್ಯೂ, ಜಾಗರೂಕರಾಗಿರಿ, ಹೆಚ್ಚು ಬೆಲೆಗೆ ಮಾರಬೇಡಿ, ಇಲ್ಲದಿದ್ದಲ್ಲ ಜನರು ನಿತ್ಯವೂ ಹೋಗುವ ಮಾರುಕಟ್ಟೆಗೆ ಹಿಂದಿರುಗುವರು.
ಸೇವಾ ಕಸಬುಗಳು
ಉತ್ಪನ್ನಗಳನ್ನು ಮಾರುವುದು ನಿಮಗೆ ಹಿಡಿಸದಿದ್ದರೆ, ಬೇರೆ ಬೇರೆ ಸೇವೆಗಳನ್ನು ನೀಡಲು ನೋಡಿರಿ. ಶುಚಿಗೊಳಿಸುವುದು, ಅಡಿಗೆ ಮಾಡುವುದು, ಬಟ್ಟೆ ಒಗೆಯುವುದು ಮತ್ತು ಇಸ್ತ್ರಿ ಮಾಡುವುದು, ಇಂಥ ಗೃಹಕೃತ್ಯದ ಕೆಲಸಕ್ಕೆ ಸದಾ ಬೇಡಿಕೆಯಿದೆ. ಮತ್ತು ಇನ್ನಿತರ ಅನೇಕ ಅವಕಾಶಗಳಿವೆ.
ಉದಾಹರಣೆಗಾಗಿ, ಸಮುದ್ರದ ಹತ್ತಿರ ಯಾ ಮೀನಿನ ಮಾರುಕಟ್ಟೆಯ ಹತ್ತಿರ ನೀವು ವಾಸಿಸುತ್ತೀರೋ? ಬೇಗನೆ ಮತ್ತು ಕಡಮೆ ಬೆಲೆಯಲ್ಲಿ ಮೀನನ್ನು ಏಕೆ ಶುಚಿಗೊಳಿಸಿ ಕೊಡಬಾರದು? ನಿಮಗೆ ಒಂದು ಒಳ್ಳೆ ಮರದ ತುಂಡು ಮತ್ತು ಒಂದು ಹರಿತವಾದ ಮೀನು ಕೊಯ್ಯುವ ಚಾಕು ಮಾತ್ರ ಅಗತ್ಯ. ಕಾರನ್ನು ತೊಳೆಯುವುದು ಇನ್ನೊಂದು ಲಾಭದಾಯಕವಾದ ಉದ್ಯಮವಾಗಿದೆ. ಇದಕ್ಕೆ ಅಗತ್ಯವಾದ ಸಾಧನ ಏನು? ಒಂದು ಬಕೆಟ್, ಸ್ವಲ್ಪ ನೀರು, ಒಂದಿಷ್ಟು ಸಾಬೂನು, ಮತ್ತು ಒಂದು ಒಳ್ಳೆಯ ಬಟ್ಟೆ. ಡಕಾರಿನಲ್ಲಿ, ವ್ಯಾಪಾರಿ ಮನೋಭಾವವುಳ್ಳ ಯುವಕರು ಸಾಮಾನ್ಯವಾಗಿ ಎಲ್ಲಾ ವಾಹನ ನಿಲ್ದಾಣ ಸ್ಥಳದಲ್ಲಿ ಮತ್ತು ಒಂದು ನೆರಳಿರುವ ರಸ್ತೆಯಲ್ಲಿ ಈ ಸೇವೆ ನಡೆಸುವುದನ್ನು ಕಾಣಬಹುದು.
ಪ್ರಪಂಚದ ನಿಮ್ಮ ಭಾಗದಲ್ಲಿ ಹರಿಯುವ ನೀರಿನ ಅಭಾವವಿದೆಯೇ? ಕೆಲವೊಂದು ಸಮಯ ಮಹಿಳೆಯರು ಒಂದು ಸಾರ್ವಜನಿಕ ನೀರಿನ ಕೊಳಾಯಿಯಲ್ಲಿ ತಮ್ಮ ಪಾತ್ರೆಗಳನ್ನು ತುಂಬಿಸಲು ತಾಸುಗಟ್ಟಲೆ ನಿಲ್ಲುತ್ತಾರೆ. ಅನಂತರ ಭಾರವಾದ ಬೋಗುಣಿಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮನೆಗೆ ಅದನ್ನು ಸಾಗಿಸಬೇಕಾಗುತ್ತದೆ. ಆದುದರಿಂದ, ಅನೇಕರು ಯಾರು ನೀರನ್ನು ಅವರಿಗೆ ತಲಪಿಸುತ್ತಾರೋ ಅವರಿಗೆ ಹಣವನ್ನು ಕೊಡಲು ತಯಾರಿದ್ದಾರೆ. ತಕ್ಕ ಉಪಾಯವು ಬೆಳಗ್ಗೆ ಬೇಗನೆ ನೀರಿನ ಕೊಳಾಯಿಯ ಹತ್ತಿರ ಹೋಗುವುದು, ಹೀಗೆ ನೀವು ನಿಮ್ಮ ಪಾತ್ರೆಗಳನ್ನು ತುಂಬಿಸಬಹುದು ಮತ್ತು ಕೈಯಿಂದ ತಳ್ಳುವ ಯಾ ಕತ್ತೆಯಿಂದ ಎಳೆಯಲ್ಪಡುವ ಗಾಡಿಯಲ್ಲಿ ಹೇರಿಸಬಹುದು. ಈಗ ನೀವು ನೀರನ್ನು ಅವರ ಮನೆಗಳಿಗೆ ಯಾ ಕೆಲಸದ ನಿವೇಶನಗಳಿಗೆ ತಲಪಿಸಲು ತಯಾರಾಗಿದ್ದೀರಿ.
ಸ್ವಲ್ಪ ಐಹಿಕ ಶಿಕ್ಷಣವನ್ನು ನೀವು ಹೊಂದಿದ್ದೀರೋ? ಪ್ರಾಯಶಃ ವಾರಾಂತ್ಯದಲ್ಲಿ ಎಳೆಯ ಮಕ್ಕಳಿಗೆ ನೀವು ಪಾಠ ಹೇಳಿಕೊಡಬಹುದು. ವರ್ಧಿಷ್ಣು ದೇಶಗಳಲ್ಲಿ ತರಗತಿಗಳು ಕಿಕ್ಕಿರಿದಿರುವ ಪ್ರವೃತ್ತಿಯಿದೆ, ಮತ್ತು ಹೆತ್ತವರು ತಮ್ಮ ಮಕ್ಕಳು ಸ್ವಲ್ಪ ವೈಯಕ್ತಿಕ ಗಮನವನ್ನು ಪಡೆಯಲಿಕ್ಕಾಗಿ ಹಣವನ್ನು ಕೊಡಲು ಸಿದ್ಧರಾಗಿರಬಹುದು.
ಇನ್ನೊಂದು ಉಪಯುಕ್ತವಾದ ಕುಶಲತೆಯು ಈಗಾಗಲೇ ನೀವು ಹೊಂದಿರಬಹುದಾದ ಜಡೆಹೆಣೆಯುವ ಕಲೆಯಾಗಿದೆ. ಜಡೆಹೆಣೆಯುವ ಶೈಲಿಗಳು ಆಫ್ರಿಕಾದ ಮಹಿಳೆಯರಲ್ಲಿ ಸಾಕಷ್ಟು ಜನಪ್ರಿಯವಾಗಿವೆ, ಈ ಕಲೆಯಲ್ಲಿ ನುರಿತ ಜನರಿಗೆ ಹಣಗಳಿಸಲು ಸಾಧ್ಯತೆಯೊಂದಿದೆ.
ಬುದ್ಧಿವಂತಿಕೆಯನ್ನು ಉಪಯೋಗಿಸುವುದು
ಬೈಬಲಿನ ಸಮಯಗಳಲ್ಲಿ, ಆದಾಯವನ್ನು ಸಂಪಾದಿಸಲು ಒಬ್ಬಾಕೆ ಸಮರ್ಥ ಹೆಂಡತಿಯು ಬುದ್ಧಿವಂತಿಕೆಯ ವಿಧಗಳನ್ನು ಕಂಡುಕೊಳ್ಳಬಹುದಾಗಿತ್ತು. ಜ್ಞಾನೋಕ್ತಿ 31:24 ಹೇಳುವುದು: “ಹಚ್ಚಡಗಳನ್ನು ನೇಯ್ದು ಮಾರಾಟಮಾಡುವಳು, ನಡುಕಟ್ಟುಗಳನ್ನು ವರ್ತಕನಿಗೆ ಒದಗಿಸುವಳು.” ತದ್ರೀತಿಯಲ್ಲಿ, ತಮ್ಮ ಸ್ವಂತ ಗೃಹ ಕೈಗಾರಿಕೆಗಳನ್ನು ಯಾ ಸಣ್ಣ ವ್ಯಾಪಾರಗಳನ್ನು ನಡೆಸುವುದರಿಂದ ವರ್ಧಿಷ್ಣು ದೇಶಗಳಲ್ಲಿ ಅನೇಕರು ಯಶಸ್ವಿಯನ್ನು ಕಂಡುಕೊಂಡಿದ್ದಾರೆ. ಉದಾಹರಣೆಗಾಗಿ, ಒಬ್ಬ ಬಡಗಿಯು, ಒಂದು ಸಣ್ಣ ಅಂಗಡಿಯನ್ನು ತೆಗೆಯಬಹುದು ಮತ್ತು ಸರಳವಾದ ಸ್ಟೂಲ್ಗಳನ್ನು, ಬೆಂಚ್ಗಳನ್ನು, ಮತ್ತು ಇನ್ನಿತರ ಗೃಹಕೃತ್ಯದ ವಸ್ತುಗಳನ್ನು ಮಾಡಬಹುದು. ಅತಿ ಮುಖ್ಯವಾದ ಮರಕೆಲಸದ ಸಾಧನಗಳು ಮಾತ್ರ ಅವಶ್ಯವಾಗಿವೆ. ನಿಮಗೆ ವ್ಯವಸಾಯದ ಕೆಲವು ಕೌಶಲಗಳಿರುವುದಾದರೆ, ಪ್ರಾಯಶಃ ನೀವು ಒಂದು ಕೋಳಿಸಾಕಣೆಯ ವ್ಯಾಪಾರವನ್ನು ಪ್ರಾರಂಭಿಸಬಹುದು ಮತ್ತು ಕೋಳಿಮರಿಗಳನ್ನು ಮತ್ತು ಮೊಟ್ಟೆಗಳನ್ನು ಮಾರಬಹುದು.
ಸಣ್ಣ ಕೈಗಾರಿಕೆಗಳನ್ನು ಪ್ರಾರಂಭಿಸಲಿಕ್ಕಾಗಿ ಬುದ್ಧಿವಂತಿಕೆಯು ಒಂದು ಪ್ರಾಮುಖ್ಯ ಅಗತ್ಯತೆಯಾಗಿದೆ. ಕೆಲವು ಜನರು, ಎಸೆದುಬಿಟ್ಟ ಡಬ್ಬಗಳನ್ನು ವರ್ಣರಂಜಿತವಾದ ಉಡುಪು ಕೈಪೆಟ್ಟಿಗೆಗಳಾಗಿ ಮತ್ತು ಸಂದೂಕಗಳಾಗಿ ಪರಿವರ್ತಿಸಿದ್ದಾರೆ. ಇತರರು ಮೋಟಾರುಗಾಡಿ ಟೈರ್ಗಳಿಂದ ಚಪ್ಪಲಿಗಳನ್ನು ಮಾಡಿದ್ದಾರೆ. ಇನ್ನಿತರರು, ಹಳತಾದ ಒಳಗಿನ ಟ್ಯೂಬ್ಗಳಿಂದ ಬಕೆಟ್ಗಳನ್ನು ಮಾಡಿದ್ದಾರೆ. ಸಾಧ್ಯತೆಗಳನ್ನು ನಿಮ್ಮ ಕಲ್ಪನಾಶಕ್ತಿಯೇ ಸೀಮಿತಗೊಳಿಸಬಹುದು.
ವರ್ಧಿಷ್ಣು ದೇಶಗಳಲ್ಲಿ ಬದುಕಿ ಉಳಿಯಲಿಕ್ಕಾಗಿ ಕುಶಲತೆ ಮತ್ತು ಪ್ರತಿಭಾಶಕ್ತಿ ಇವೆರಡು ಬೇಕಾಗಿವೆ, ಆದರೆ ತಾಳ್ಮೆ ಮತ್ತು ಒಂದು ಸಕಾರಾತ್ಮಕ ಮನೋಭಾವವು ಸಹ ನಿಮಗೆ ಅಗತ್ಯವಾಗಿದೆ. ಸುಲಭವಾಗಿ ಬಿಟ್ಟುಕೊಡದಿರಿ. ಹೊಂದಿಕೊಳ್ಳುವವರಾಗಿರ್ರಿ, ಆವಶ್ಯಕವಿದ್ದಲ್ಲಿ ಕೆಲಸಗಳನ್ನು ಬದಲಾಯಿಸಲು ಸಿದ್ಧವಾಗಿರ್ರಿ. ಒಂದು ವ್ಯಾಪಾರವನ್ನು ಪ್ರಾರಂಭಿಸುವುದಾದರೆ ಯಾ ಒಂದು ಸೇವೆಯನ್ನು ಸಲ್ಲಿಸುವುದಾದರೆ, ಸ್ಥಳಿಕ ಕಾನೂನುಗಳನ್ನು ಮತ್ತು ಶಾಸನಗಳನ್ನು ನೋಡಲು ನಿಶ್ಚಿತರಾಗಿರಿ. ದೇಶದ ಕಾನೂನನ್ನು ಕ್ರೈಸ್ತರು ಗೌರವಿಸುವ ಆವಶ್ಯಕತೆಯಿದೆ.—ರೋಮಾಪುರ 13:1-7.
ಒಂದು ವಸ್ತು ಯಾ ಸೇವೆಯನ್ನು ಕೊಡಲು ಯತ್ನಿಸುವ ಮೊದಲು, ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ: ‘ಸ್ಥಳಿಕ ಆವಶ್ಯಕತೆಗಳು ಮತ್ತು ವಾಡಿಕೆಗಳೇನಾಗಿವೆ? ಸ್ಥಳಿಕ ಆರ್ಥಿಕ ಆಡಳಿತದ ಸ್ಥಿತಿಯೇನಾಗಿದೆ? ನಾನು ಏನನ್ನು ನೀಡುತ್ತಿದ್ದೇನೋ ಅದಕ್ಕೆ ಗಿರಾಕಿಗಳು ವೆಚ್ಚ ಮಾಡಲು ಸಮರ್ಥರಾಗಿದ್ದಾರೋ? ಇದೇ ರೀತಿಯ ವಸ್ತು ಯಾ ಸೇವೆಯನ್ನು ಇತರ ಎಷ್ಟು ಮಂದಿ ನೀಡುತ್ತಿದ್ದಾರೆ? ಕುಶಲತೆಗಳು, ಶಕ್ತಿ, ಮುಂದಾಳುತ್ವ, ಆತ್ಮಗೌರವ, ಮತ್ತು ಈ ಉದ್ಯಮವನ್ನು ನಡೆಸಲು ಆವಶ್ಯಕವಾದ ವ್ಯವಸ್ಥಾಪನೆಯ ಪ್ರಜ್ಞೆಯು ನಿಜವಾಗಿ ನನ್ನಲ್ಲಿದೆಯೊ? ಎಷ್ಟು ಬಂಡವಾಳ ಒಳಗೊಳ್ಳುವುದು? ವ್ಯಾಪಾರದಲ್ಲಿ ತೊಡಗಲು ನಾನು ಎರವಲು ಪಡೆಯಬೇಕೋ? ಸಾಲವನ್ನು ನಾನು ಪಾವತಿ ಮಾಡಶಕ್ತನೋ?’
ಲೂಕ 14:28ರಲ್ಲಿ ಯೇಸು ಕ್ರಿಸ್ತನ ಪ್ರಶ್ನೆ ಪ್ರಸಂಗೋಚಿತ: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ?”
ಎಲ್ಲರೂ ಸ್ವಉದ್ಯೋಗದ ಕುಶಲತೆಗಳನ್ನು ಯಾ ಮನೋವೃತ್ತಿಯನ್ನು ಹೊಂದಿರುವುದಿಲ್ಲ, ನಿಜ. ಆದರೂ, ಅದು ಒಂದು ಸದುದ್ದೇಶದೊಂದಿಗೆ ಮುಂದಿಡಲ್ಪಟ್ಟಾಗ, ನಿಮ್ಮ ಮುಂದಾಳುತ್ವವನ್ನು ಮತ್ತು ಮನಃಪೂರ್ವಕ ಪ್ರಯತ್ನವನ್ನು ಯೆಹೋವ ದೇವರು ಆಶೀರ್ವದಿಸುವನು. (ಹೋಲಿಸಿ 2 ಪೇತ್ರ 1:5.) ಆದುದರಿಂದ ಕೆಲಸವನ್ನು ಕಂಡು ಹಿಡಿಯಲು ನಿಮ್ಮ ಕೈಲಾದುದನ್ನೆಲ್ಲಾ ಮಾಡಿರಿ—ಅದನ್ನು ನೀವೇ ಸ್ವತಃ ಸೃಷ್ಟಿಸಬೇಕಾದರೂ ಸಹ!
[ಪುಟ 16,17 ರಲ್ಲಿರುವಚಿತ್ರಗಳು]
ಉಡುಪುಗಳನ್ನು ಹೊಲಿಯುವುದು, ಕಾರ್ಗಳನ್ನು ತೊಳೆಯುವುದು, ಶುದ್ಧ ನೀರನ್ನು ತಲಪಿಸುವುದು, ಮತ್ತು ಮೀನು ಶುಚಿಗೊಳಿಸುವುದು, ಜನರು ಜೀವನೋಪಾಯವನ್ನು ಮಾಡುತ್ತಿರುವ ಕೆಲವು ವಿಧಾನಗಳಾಗಿವೆ