ಯುವ ಜನರು ಪ್ರಶ್ನಿಸುತ್ತಾರೆ . . .
ನಾನು ಒಂದಿಷ್ಟು ಹಣವನ್ನು ಹೇಗೆ ಸಂಪಾದಿಸಬಲ್ಲೆ?
“ಸಾಕಷ್ಟು ಹಣವನ್ನು ನೀಡಬಲ್ಲ ಒಂದು ನೌಕರಿಯು ನನಗೆ ಬೇಕಾಗಿದೆ.”—ಟಾನ್ಯ.
ಅನೇಕ ಯುವ ಜನರು ಟಾನ್ಯಳಂತೆಯೇ ಭಾವಿಸಿಕೊಳ್ಳುತ್ತಾರೆ. “ಒಂದು ಕಾರನ್ನು ಖರೀದಿಸಲು ಮತ್ತು ಬಟ್ಟೆಗಳನ್ನು ಕೊಂಡುಕೊಳ್ಳಲು ನನಗೆ ಹಣದ ಅಗತ್ಯವಿದೆ. ಎಲ್ಲ ವಿಷಯಗಳಿಗಾಗಿ ನನ್ನ ಹೆತ್ತವರ ಮೇಲೆ ಅವಲಂಬಿತನಾಗಿರಲು ನಾನು ಬಯಸುವುದಿಲ್ಲ” ಎಂದು ಸರ್ಸೋ ಎಂಬ ಯುವಕನು ಹೇಳುತ್ತಾನೆ. ಯುವ ಲೋರೀಆ್ಯನ್ಳಿಗೂ ನೌಕರಿಮಾಡಲಿಕ್ಕಾಗಿ ತದ್ರೀತಿಯ ಕಾರಣವಿದೆ. “ನಾನೊಬ್ಬ ಹುಡುಗಿಯಾದ ಕಾರಣ, ಶಾಪಿಂಗ್ ಮಾಡಲು ನನಗಿಷ್ಟ” ಎಂದು ಅವಳು ಹೇಳುತ್ತಾಳೆ.
ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಎಂಬ ಪತ್ರಿಕೆಗನುಸಾರ, “[ಅಮೆರಿಕದ] ಪ್ರೌಢ ಶಾಲೆಯ ನಾಲ್ಕು ವಿದ್ಯಾರ್ಥಿಗಳಲ್ಲಿ ಮೂವರು, ಶಾಲಾನಂತರ ಮತ್ತು ವಾರಾಂತ್ಯಗಳಲ್ಲಿ ನೌಕರಿಮಾಡಲು ಹೋಗುತ್ತಾರೆ” ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ಒಂದಿಷ್ಟು ಮಟ್ಟಿಗೆ ಇದು, ಇಂದಿನ ದ್ರವ್ಯಾಶೆ ತುಂಬಿದ ಲೋಕದಲ್ಲಿ ಬಹಳಷ್ಟು ಸಾಮಾನ್ಯವಾಗಿರುವ, ಸಮತೂಕವಿಲ್ಲದ “ಹಣದಾಸೆ”ಯನ್ನು ಪ್ರತಿಬಿಂಬಿಸುತ್ತದೆ. (1 ತಿಮೊಥೆಯ 6:10) ಹಾಗಿದ್ದರೂ, ಹಣವನ್ನು ಗಳಿಸಲಿಕ್ಕಾಗಿ ಪ್ರಯತ್ನಿಸುವ ಎಲ್ಲ ಯುವ ಜನರು, ದ್ರವ್ಯಾಶೆಗೆ ಬಲಿಯಾಗುತ್ತಿಲ್ಲ.
“ಧನವು . . . ಆಶ್ರಯ”ವಾಗಿದೆ ಎಂದು ಬೈಬಲು ಹೇಳುತ್ತದೆ. (ಪ್ರಸಂಗಿ 7:12) ಮತ್ತು ಒಬ್ಬ ಕ್ರೈಸ್ತ ಯುವಕನೋಪಾದಿ ನೀವು ಒಂದಿಷ್ಟು ಹಣವನ್ನು ಏಕೆ ಸಂಪಾದಿಸಬಯಸುತ್ತೀರಿ ಎಂಬುದಕ್ಕೆ ಹಲವಾರು ನ್ಯಾಯಯುತವಾದ ಕಾರಣಗಳಿರಬಹುದು.a ಉದಾಹರಣೆಗೆ, ಯುವ ಏವೀಅನ್ ತಾನು ವಾರದಲ್ಲಿ ಎರಡು ದಿನಗಳು ಕೆಲಸಮಾಡುವ ಕಾರಣವನ್ನು ವಿವರಿಸುತ್ತಾನೆ: “ಒಬ್ಬ ಕ್ರಮದ ಪಯನೀಯರ್ [ಪೂರ್ಣ ಸಮಯದ ಸೌವಾರ್ತಿಕ] ಆಗಿ ಯಾರ ಮೇಲೂ ಅವಲಂಬಿತನಾಗಿರದಂತೆ ಅದು ನನಗೆ ಸಹಾಯ ಮಾಡುತ್ತದೆ.”
ನೀವು ಪಾರ್ಟ್ ಟೈಮ್ ಕೆಲಸವನ್ನು ಕಂಡುಕೊಳ್ಳಲು ಬಯಸುತ್ತಿರುವುದಕ್ಕೆ ತದ್ರೀತಿಯ ಕಾರಣಗಳಿರಬಹುದು. ನಿಮಗೆ ಒಂದು ಕ್ರೈಸ್ತ ಅಧಿವೇಶನಕ್ಕೆ ಹಾಜರಾಗುವ ಗುರಿಯಿರಬಹುದು. ಇಲ್ಲವೆ, ಸಭಾ ಕೂಟಗಳಿಗೆ ಧರಿಸಲು ಯೋಗ್ಯವಾಗಿರುವ ಹೆಚ್ಚಿನ ಉಡುಪುಗಳ ಅಗತ್ಯ ನಿಮಗಿರಬಹುದು. ವಿಷಯವು ಏನೇ ಆಗಿರಲಿ, ಇವುಗಳಿಗೆ ಹಣದ ಅಗತ್ಯವಿದೆ. ‘ಮೊದಲಾಗಿ ದೇವರ ರಾಜ್ಯವನ್ನು ಹುಡುಕುತ್ತಿರು’ವವರಿಗೆ ದೇವರು ಮೂಲಭೂತ ಅಗತ್ಯಗಳನ್ನು ಒದಗಿಸುವನೆಂದು ಯೇಸು ವಾಗ್ದಾನಿಸಿದ್ದು ಸುಳ್ಳಲ್ಲ. (ಮತ್ತಾಯ 6:33) ಆದರೆ ಈ ಸಂಬಂಧದಲ್ಲಿ, ನೀವು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವುದನ್ನು ಇದು ತಳ್ಳಿಹಾಕುವುದಿಲ್ಲ. (ಅ. ಕೃತ್ಯಗಳು 18:1-3ನ್ನು ಹೋಲಿಸಿರಿ.) ಹಾಗಾದರೆ, ಒಂದಿಷ್ಟು ಹಣವನ್ನು ಸಂಪಾದಿಸಲಿಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಕೆಲವು ಪ್ರಾಯೋಗಿಕ ಹೆಜ್ಜೆಗಳಾವುವು?
ಪ್ರಯತ್ನವನ್ನು ಆರಂಭಿಸಿರಿ
ನೀವು ಕೆಲಸಮಾಡುವ ವಿಷಯದಲ್ಲಿ ನಿಮ್ಮ ಹೆತ್ತವರು ಸಮ್ಮತಿಸುವುದಾದರೆ, ನಿಮ್ಮ ಮೊದಲನೆಯ ಹೆಜ್ಜೆಯು, ನೆರೆಯವರು, ಶಿಕ್ಷಕರು, ಮತ್ತು ಸಂಬಂಧಿಕರ ಬಳಿಗೆ ಹೋಗಿ, ನೀವು ಕೆಲಸಕ್ಕಾಗಿ ಹುಡುಕುತ್ತಿದ್ದೀರಿ ಎಂದು ಅವರಿಗೆ ತಿಳಿಸುವುದೇ ಆಗಿರುತ್ತದೆ. ಅವರನ್ನು ನೇರವಾಗಿ ಕೇಳಲು ನಿಮಗೆ ನಾಚಿಕೆ ಆಗುವುದಾದರೆ, ಅವರು ಹದಿವಯಸ್ಕರಾಗಿದ್ದಾಗ ಕೆಲಸಕ್ಕಾಗಿ ಏನು ಮಾಡಿದರೆಂದು ನೀವು ಅವರನ್ನು ಕೇಳಬಹುದು. ಅವರು ನಿಮಗೆ ಕೆಲವು ಸಹಾಯಕರ ಸಲಹೆಗಳನ್ನು ನೀಡಬಹುದು. ನೀವು ಕೆಲಸಕ್ಕಾಗಿ ಹುಡುಕುತ್ತಿದ್ದೀರೆಂದು ಎಷ್ಟು ಹೆಚ್ಚು ಜನರಿಗೆ ತಿಳಿದುಬರುತ್ತದೊ, ಅಷ್ಟು ಹೆಚ್ಚು ಮಾಹಿತಿ ಮತ್ತು ಉಲ್ಲೇಖಗಳು ನಿಮಗೆ ಸಿಗಬಲ್ಲವು.
ತರುವಾಯ, ವಾರ್ತಾಪತ್ರಿಕೆಗಳಲ್ಲಿ ಬರುವಂತಹ, ಕೆಲಸಕ್ಕೆ ಬೇಕಾಗಿದ್ದಾರೆ ಎಂಬ ಜಾಹೀರಾತುಗಳಿಗೆ, ಮತ್ತು ಅಂಗಡಿಗಳು, ನಿಮ್ಮ ಶಾಲೆ, ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿರುವ ನೋಟೀಸ್ ಬೋರ್ಡುಗಳಲ್ಲಿನ ಜಾಹೀರಾತುಗಳಿಗೆ ಅರ್ಜಿ ಬರೆದುಹಾಕಲು ಪ್ರಯತ್ನಿಸಿರಿ. “ನನಗೆ ಈಗಿನ ಕೆಲಸ ಸಿಕ್ಕಿದ್ದು ಅದೇ ರೀತಿಯಲ್ಲೇ. ನಾನು ವಾರ್ತಾಪತ್ರಿಕೆಯಲ್ಲಿ ಆ ಜಾಹೀರಾತನ್ನು ನೋಡಿದೆ, ಅವರಿಗೆ ನನ್ನ ಬಯೊ ಡೇಟಾವನ್ನು ಫ್ಯಾಕ್ಸ್ ಮೂಲಕ ಕಳುಹಿಸಿದೆ, ಮತ್ತು ಫೋನ್ನಲ್ಲಿ ಅವರೊಂದಿಗೆ ಮಾತಾಡಿದೆ” ಎಂಬುದಾಗಿ ಡೇವ್ ಎಂಬ ಯುವಕನು ಹೇಳುತ್ತಾನೆ. ಆದರೆ, ಅನೇಕ ಕೆಲಸಗಳನ್ನು ಜಾಹೀರುಪಡಿಸಲಾಗುವುದಿಲ್ಲ ಎಂದು ನಿಮಗೆ ತಿಳಿದಿದೆಯೊ? ಸೆವೆಂಟೀನ್ ಎಂಬ ಪತ್ರಿಕೆಗನುಸಾರ, “ಯೋಗ್ಯವಾದ ವ್ಯಕ್ತಿಯು ಬರುವ ತನಕ, ಹತ್ತು ಕೆಲಸಗಳಲ್ಲಿ ಮೂರರಷ್ಟು ಕೆಲಸಗಳು ಅಸ್ತಿತ್ವದಲ್ಲೇ ಇರುವುದಿಲ್ಲ” ಎಂದು ಕೆಲವರು ಅಂದಾಜುಮಾಡುತ್ತಾರೆ. ವಿಷಯವು ಹಾಗಿರುವಲ್ಲಿ, ಧಣಿಯು ನಿಮಗಾಗಿ ಒಂದು ಕೆಲಸವನ್ನು ಕಂಡುಹಿಡಿಯುವಂತೆ ನೀವು ಅವನನ್ನು ಒಪ್ಪಿಸಸಬಲ್ಲಿರಿ!
ಆದರೆ ಇದನ್ನು ಮಾಡುವುದು ಹೇಗೆ? ‘ನನಗೆ ಅನುಭವವಿಲ್ಲ’ ಎಂದು ನೀವು ನೆನಸಬಹುದು. ಆ ವಿಷಯದ ಕುರಿತು ಪುನಃ ಯೋಚಿಸಿರಿ. ನಿಮ್ಮ ಹೆತ್ತವರು ಮನೆಯಲ್ಲಿ ಇಲ್ಲದಿದ್ದಾಗ, ನಿಮ್ಮ ಚಿಕ್ಕ ತಮ್ಮತಂಗಿಯರನ್ನು ನೀವು ನೋಡಿಕೊಂಡಿದ್ದೀರೊ ಇಲ್ಲವೆ ಇತರರ ಮಕ್ಕಳನ್ನು ನೋಡಿಕೊಂಡಿದ್ದೀರೊ? ನೀವು ಹೊಣೆಗಾರಿಕೆಯುಳ್ಳವರೆಂದು ಇದು ತೋರಿಸುತ್ತದೆ. ಸ್ಕೂಟರೊಂದನ್ನು ರಿಪೇರಿ ಮಾಡಲು ನಿಮ್ಮ ತಂದೆಗೆ ನೀವು ಸಹಾಯ ಮಾಡಿದ್ದೀರೊ? ನಿಮಗೆ ತಾಂತ್ರಿಕ ಸಾಮರ್ಥ್ಯಗಳಿರಬಹುದು ಎಂಬುದನ್ನು ಅದು ತೋರಿಸುತ್ತದೆ. ಟೈಪ್ ಮಾಡುವುದು ಇಲ್ಲವೆ ಕಂಪ್ಯೂಟರನ್ನು ಉಪಯೋಗಿಸುವುದು ಹೇಗೆಂದು ನಿಮಗೆ ಗೊತ್ತೊ? ಯಾವುದಾದರೂ ಸೃಜನಾತ್ಮಕ ಯೋಜನೆಗೆ ನಿಮಗೆ ಒಳ್ಳೆಯ ಅಂಕಗಳು ಸಿಕ್ಕಿವೆಯೊ? ಭಾವೀ ಧಣಿಗಳ ಮನವೊಲಿಸಲು ಇವು ಒಳ್ಳೆಯ ಗುಣಾಂಶಗಳಾಗಿವೆ.
ನಿಮ್ಮ ಹವ್ಯಾಸಗಳು ಮತ್ತು ಅಭಿರುಚಿಗಳನ್ನು ಸಹ ಕಡೆಗಣಿಸಬೇಡಿರಿ. ಉದಾಹರಣೆಗೆ, ನಿಮಗೊಂದು ಸಂಗೀತ ವಾದ್ಯವನ್ನು ನುಡಿಸಲು ಗೊತ್ತಿದ್ದರೆ, ಸಂಗೀತ ವಾದ್ಯಗಳ ಅಂಗಡಿಯಲ್ಲಿ ಕೆಲಸದ ಅವಕಾಶ ಇದೆಯೊ ಎಂದು ವಿಚಾರಿಸಿರಿ. ಅಂಗಡಿಯ ಉತ್ಪನ್ನಗಳಲ್ಲಿ ನಿಮಗೆ ಅಭಿರುಚಿ ಇರುವುದರಿಂದ, ಒಬ್ಬ ಗ್ರಾಹಕನ ಪ್ರಶ್ನೆಗಳಿಗೆ ಉತ್ತರ ನೀಡಲು ನೀವು ಖಂಡಿತವಾಗಿಯೂ ಸಮರ್ಥರಾಗಿರುವಿರಿ.
ಒಂದು ಕೆಲಸಕ್ಕೆ ಅರ್ಜಿಹಾಕುವುದು
ನೀವು ಒಂದು ಕೆಲಸದ ಇಂಟರ್ವ್ಯೂಗೆ ಹೋಗಬೇಕೆಂದು ಭಾವಿಸೋಣ. ನಿಮ್ಮ ಹೊರತೋರಿಕೆಯು, ಪರೋಕ್ಷವಾಗಿ ನಿಮ್ಮ ಕುರಿತು ಒಂದು ಸಂದೇಶವನ್ನು ನೀಡುವುದರಿಂದ, ಉಡಿಗೆ ತೊಡಿಗೆ ಮತ್ತು ಕೇಶಾಲಂಕಾರದ ಕಡೆಗೆ ಗಮನಕೊಡಿರಿ. ನೀವು, “ಹೊಣೆಗಾರಿಕೆಯುಳ್ಳವರು, ನೀಟಾದವರು, ವ್ಯವಸ್ಥಿತರು” ಎಂದು ಅದು ಹೇಳಬಲ್ಲದು, ಇಲ್ಲವೆ ತೀರ ವ್ಯತಿರಿಕ್ತವಾದ ವಿಷಯವನ್ನೇ ತಿಳಿಸಬಲ್ಲದು. ಆದುದರಿಂದ ಕ್ರೈಸ್ತ ಸ್ತ್ರೀಯರು “ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು” ಬೈಬಲು ಉತ್ತೇಜಿಸುವಾಗ, ಅದು ಪ್ರಾಯೋಗಿಕವಾಗಿದೆ. (1 ತಿಮೊಥೆಯ 2:9) ಇದು ಪುರುಷರಿಗೂ ಅನ್ವಯಿಸುತ್ತದೆ. ನೀವು ಅರ್ಜಿಹಾಕಿರುವ ನೌಕರಿಯು, ಯಾವ ರೀತಿಯ ಕೆಲಸವನ್ನೇ ಒಳಗೊಂಡಿರಲಿ, ಇಂಟರ್ವ್ಯೂಗಾಗಿ ಅಸಭ್ಯವಾದ ಇಲ್ಲವೆ ಕೊಳಕಾದ ಉಡುಪುಗಳನ್ನು ಎಂದಿಗೂ ಧರಿಸಬೇಡಿರಿ.
ನಿಮ್ಮ ಮನೋಭಾವ ಮತ್ತು ಶಿಷ್ಟಾಚಾರಗಳು ಸಹ, ನಿಮ್ಮ ಕುರಿತು ಬಹಳಷ್ಟು ವಿಷಯವನ್ನು ಹೇಳುತ್ತವೆ. ಸುವರ್ಣ ನಿಯಮವನ್ನು ಪಾಲಿಸಿರಿ: ಇತರರು ನಿಮ್ಮನ್ನು ಹೇಗೆ ಉಪಚರಿಸಲ್ಪಡಬೇಕೆಂದು ನೀವು ಬಯಸುತ್ತೀರೊ ಹಾಗೆಯೇ ಅವರನ್ನು ಉಪಚರಿಸಿರಿ. (ಮತ್ತಾಯ 7:12) ನಿಮ್ಮ ಇಂಟರ್ವ್ಯೂಗೆ ಸರಿಯಾದ ಸಮಯಕ್ಕೆ ಹೋಗಿರಿ. ಉತ್ಸಾಹಪೂರ್ಣರೂ ಜಾಗರೂಕರೂ ಆಗಿರಿ. ಒಳ್ಳೆಯ ಶಿಷ್ಟಾಚಾರಗಳನ್ನು ಪಾಲಿಸಿರಿ. ಜಂಬಕೊಚ್ಚಿಕೊಳ್ಳದೆ ಇಲ್ಲವೆ ಅತಿಶಯಿಸದೆ, ಆ ಸ್ಥಾನಕ್ಕೆ ನೀವು ಏಕೆ ತಕ್ಕವರೆಂದು ನಿಮಗೆ ಅನಿಸುವುದಾಗಿ ವಿವರಿಸಿರಿ. ಸುತ್ತಿಬಳಸಿ ಮಾತಾಡಬೇಡಿರಿ.
ನಿಮ್ಮೊಂದಿಗೆ (ಅಥವಾ ಮುಂಚಿತವಾಗಿ ಕಳುಹಿಸುವಂತೆ) ನೀಟಾದ, ಹಾಗೂ ಸುವ್ಯವಸ್ಥಿತವಾದ ಬಯೊ ಡೇಟಾವನ್ನು ತರುವಂತೆ ಕೆಲವು ಪರಿಣತರು ಶಿಫಾರಸ್ಸುಮಾಡುತ್ತಾರೆ. ಅದರಲ್ಲಿ ನಿಮ್ಮ ಹೆಸರು, ವಿಳಾಸ, ಟೆಲಿಫೋನ್ ನಂಬರ್, ಕೆಲಸದ ಉದ್ದೇಶ, ಶಿಕ್ಷಣ (ನೀವು ಹಾಜರಾಗಿರಬಹುದಾದ ಯಾವುದೇ ವಿಶೇಷ ಕ್ಲಾಸ್ಗಳನ್ನು ಸೇರಿಸಿ), ಹಿಂದಿನ ಕೆಲಸದ ಅನುಭವ (ಸಂಬಳಕ್ಕಾಗಿದ್ದ ಕೆಲಸ ಮತ್ತು ಸ್ವಯಂಸೇವೆಯನ್ನು ಸೇರಿಸಿ), ವಿಶೇಷ ಕೌಶಲಗಳು, ವೈಯಕ್ತಿಕ ಅಭಿರುಚಿಗಳು ಮತ್ತು ಹವ್ಯಾಸಗಳು (ಇವು ನಿಮ್ಮ ಸಾಮರ್ಥ್ಯಗಳ ಮೇಲೆ ಬೆಳಕು ಚೆಲ್ಲಬಹುದು), ಮತ್ತು ವಿನಂತಿಸಿಕೊಳ್ಳುವಲ್ಲಿ ಶಿಫಾರಸ್ಸಿನ ಉಲ್ಲೇಖಗಳು ಲಭ್ಯವಿವೆ ಎಂಬುದನ್ನು ಸೂಚಿಸುವ ಟಿಪ್ಪಣಿಯನ್ನು ಒಳಗೊಂಡಿರಬೇಕು. ಮತ್ತು ಆ ಕೆಲಸಕ್ಕಾಗಿ ನಿಮಗೆ ಶಿಫಾರಸ್ಸು ಪತ್ರವನ್ನು ನೀಡಸಾಧ್ಯವಿರುವ ಕೆಲವು ವ್ಯಕ್ತಿಗಳ ಹೆಸರು, ವಿಳಾಸ, ಮತ್ತು ಟೆಲಿಫೋನ್ ನಂಬರ್ ಇರುವ ಒಂದು ಪ್ರತ್ಯೇಕ ಹಾಳೆಯನ್ನೂ ನೀವು ತಯಾರಿಸಬಹುದು. ಇದಕ್ಕೆ ಅವರ ಅನುಮತಿಯನ್ನು ಮುಂಚಿತವಾಗಿಯೇ ಪಡೆದುಕೊಳ್ಳಿರಿ. ಇವರು, ನಿಮ್ಮ ಕೌಶಲಗಳು, ಸಾಮರ್ಥ್ಯಗಳು, ಇಲ್ಲವೆ ವ್ಯಕ್ತಿತ್ವದ ವಿಶಿಷ್ಟ ಗುಣಗಳಿಗೆ ಸಾಕ್ಷ್ಯ ನೀಡಸಾಧ್ಯವಿರುವ ಮಾಜಿ ಧಣಿಗಳು, ಒಬ್ಬ ಶಿಕ್ಷಕ, ಶಾಲಾ ಸಲಹೆಗಾರ, ಒಬ್ಬ ವಯಸ್ಕ ಮಿತ್ರನೂ ಆಗಿರಬಹುದು.
ಸ್ವತಃ ಕೆಲಸವನ್ನು ಸೃಷ್ಟಿಸಿಕೊಳ್ಳುವುದು
ನೀವು ಎಷ್ಟು ಪ್ರಯತ್ನಿಸಿದರೂ ಕೆಲಸವು ಸಿಗದಿದ್ದಾಗ ಏನು ಮಾಡಸಾಧ್ಯವಿದೆ? ಇದು ಅನೇಕ ದೇಶಗಳಲ್ಲಿ ಸಾಮಾನ್ಯ ವಿಷಯವಾಗಿದೆ. ಹತಾಶರಾಗಬೇಡಿರಿ. ಸ್ವಂತ ವ್ಯಾಪಾರವನ್ನು ಆರಂಭಿಸುವುದು, ಸರಿಯಾದ ಉತ್ತರವಾಗಿರಸಾಧ್ಯವಿದೆ. ಇದರ ಲಾಭಗಳೇನು? ಸ್ವಂತ ವೇಳಾಪಟ್ಟಿಯನ್ನು ನಿರ್ಧರಿಸಿ, ನಿಮ್ಮ ಇಚ್ಛೆಗನುಸಾರ ಹೆಚ್ಚು ಅಥವಾ ಕಡಿಮೆ ಕೆಲಸಮಾಡಬಹುದು. ಸ್ವಉದ್ಯೋಗಸ್ಥರಾಗಿರುವುದು, ನೀವು ಸ್ವಪ್ರೇರಿತರೂ ಶಿಸ್ತಿನವರೂ ಮತ್ತು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಲು ಇಚ್ಛೆಯುಳ್ಳವರೂ ಆಗಿರಬೇಕೆಂದು ಅವಶ್ಯಪಡಿಸುತ್ತದೆ.
ಆದರೆ ಯಾವ ರೀತಿಯ ವ್ಯಾಪಾರವನ್ನು ನೀವು ಆರಂಭಿಸಬಹುದು? ನಿಮ್ಮ ನೆರೆಹೊರೆಯ ಕುರಿತು ಯೋಚಿಸಿರಿ. ಬೇರೆ ಯಾರೂ ಒದಗಿಸದೆ ಇರುವ ಸರಕುಗಳು ಇಲ್ಲವೆ ಸೇವೆಗಳ ಅಗತ್ಯವಿದೆಯೊ? ಉದಾಹರಣೆಗೆ, ನಿಮಗೆ ಹೊಲಿಗೆಯು ಇಷ್ಟವೆಂದು ನೆನೆಸೋಣ. ಒಂದಿಷ್ಟು ಹಣಕ್ಕಾಗಿ ನೀವು ನಿಮ್ಮ ನೆರೆಯವರ ಬಟ್ಟೆಗಳಿಗೆ ಹೊಲಿಗೆ ಹಾಕಸಾಧ್ಯವಿದೆ. ಇಲ್ಲವೆ ನಿಮಗೊಂದು ಸಂಗೀತ ವಾದ್ಯವನ್ನು ನುಡಿಸಲು ಬರುವುದಾದರೆ, ನೀವು ಅದನ್ನು ಇತರರಿಗೆ ಕಲಿಸಸಾಧ್ಯವೊ? ಅಥವಾ ಇತರರು ಇಷ್ಟಪಡದಂತಹ, ಬಟ್ಟೆಗಳನ್ನು ಇಲ್ಲವೆ ಪಾತ್ರೆಗಳನ್ನು ಶುಚಿಮಾಡುವ ಕೆಲಸವು ಅದಾಗಿರಬಹುದು. ಕ್ರೈಸ್ತನೊಬ್ಬನು ತನ್ನ ಕೈಗಳಿಂದ ಕೆಲಸಮಾಡಲು ನಾಚಿಕೊಳ್ಳುವುದಿಲ್ಲ. (ಎಫೆಸ 4:28) ನೀವು ಒಂದು ಹೊಸ ಕೌಶಲವನ್ನು ಕಲಿತುಕೊಳ್ಳಲೂ ಪ್ರಯತ್ನಿಸಬಹುದು. ಸ್ವಸಹಾಯವನ್ನು ನೀಡುವ ಪುಸ್ತಕಗಳಿಗಾಗಿ ಗ್ರಂಥಾಲಯಗಳಲ್ಲಿ ಹುಡುಕಿರಿ, ಇಲ್ಲವೆ ಮಿತ್ರನೊಬ್ಬನು ನಿಮಗೆ ಕಲಿಸುವಂತೆ ಕೇಳಿಕೊಳ್ಳಿರಿ. ಉದಾಹರಣೆಗೆ, ಯುವ ಜೋಶುವ, ಕ್ಯಾಲಿಗ್ರಾಫಿ (ಸುಂದರ ಲಿಪಿ)ಯಲ್ಲಿ ತರಬೇತಿ ಪಡೆದನು. ತರುವಾಯ, ವಿವಾಹಗಳಿಗೆ ಮತ್ತು ಪಾರ್ಟಿಗಳಿಗೆ ಆಮಂತ್ರಣ ಪತ್ರಗಳನ್ನು ವಿನ್ಯಾಸಿಸುವ ಒಂದು ಚಿಕ್ಕ ವ್ಯಾಪಾರದಲ್ಲಿ ಅವನು ತೊಡಗಿದನು.—“ನೀವು ಸೃಷ್ಟಿಸಬಲ್ಲ ಕೆಲಸಗಳು” ಎಂಬ ರೇಖಾಚೌಕವನ್ನು ನೋಡಿರಿ.
ಎಚ್ಚರಿಕೆಯ ಒಂದು ಮಾತು: ಒಂದು ವ್ಯಾಪಾರಕ್ಕೆ ತಗಲುವ ವೆಚ್ಚ ಮತ್ತು ಇತರ ಅಂಶಗಳನ್ನು ಪರಿಶೀಲಿಸದೆ ಅದರಲ್ಲಿ ಕೈ ಹಾಕಬೇಡಿರಿ. (ಲೂಕ 14:28-30) ಮೊದಲು ನಿಮ್ಮ ಹೆತ್ತವರೊಂದಿಗೆ ಅದರ ಕುರಿತು ಮಾತಾಡಿರಿ. ತದ್ರೀತಿಯ ವ್ಯಾಪಾರವನ್ನು ನಡೆಸಿರುವವರೊಂದಿಗೂ ಮಾತಾಡಿರಿ. ನೀವು ತೆರಿಗೆಗಳನ್ನು ತೆರಬೇಕಾಗುವುದೊ? ಲೈಸೆನ್ಸ್ ಇಲ್ಲವೆ ಅನುಮತಿಗಳನ್ನು ನೀವು ಪಡೆದುಕೊಳ್ಳುವ ಅಗತ್ಯವಿದೆಯೊ? ವಿವರಗಳಿಗಾಗಿ ಸ್ಥಳಿಕ ಅಧಿಕಾರಿಗಳಲ್ಲಿ ಕೇಳಿ ತಿಳಿದುಕೊಳ್ಳಿರಿ.—ರೋಮಾಪುರ 13:1-7.
ಸಮತೂಕವನ್ನು ಕಾಪಾಡಿಕೊಳ್ಳಿರಿ!
ನೀವು ನಿರ್ವಹಿಸಸಾಧ್ಯವಿರುವುದಕ್ಕಿಂತ ಹೆಚ್ಚಿನದ್ದನ್ನು ವಹಿಸಿಕೊಳ್ಳುವ ಅಪಾಯ ನಿಶ್ಚಯವಾಗಿಯೂ ಇದೆ. ಲೋರೀಆ್ಯನ್ ಕೆಲವು ಉದ್ಯೋಗಸ್ಥ ಯುವ ಜನರ ಕುರಿತು ಹೇಳಿದ್ದು: “ಅವರು ಹೆಚ್ಚಿನ ಮನೆಗೆಲಸವನ್ನು ಮಾಡುವುದಿಲ್ಲ, ಮತ್ತು ತರಗತಿಯಲ್ಲಿ ಗಮನಕೊಡಲು ಅವರು ತೀರ ದಣಿದಿರುತ್ತಾರೆ.” ಲೋಕದ ಕೆಲವು ಭಾಗಗಳಲ್ಲಿ, ತಮ್ಮ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಲಿಕ್ಕಾಗಿ, ಯುವ ಜನರು ದೀರ್ಘ ಸಮಯದ ವರೆಗೆ ಕೆಲಸಮಾಡದೆ ಬೇರೆ ಮಾರ್ಗವಿಲ್ಲ. ಆದರೆ ನಿಮಗೆ ಅಂತಹ ಪರಿಸ್ಥಿತಿಯು ಇಲ್ಲದಿರುವುದಾದರೆ, ಈ ವಿಷಯದಲ್ಲಿ ನೀವು ವಿಪರೀತವಾಗಿ ಏಕೆ ಕ್ರಿಯೆಗೈಯಬೇಕು? ಹೆಚ್ಚಿನ ಪರಿಣತರಿಗನುಸಾರ, ಶಾಲೆಗೆ ಹಾಜರಾಗುತ್ತಾ, ವಾರಕ್ಕೆ 20 ತಾಸುಗಳಿಗಿಂತಲೂ ಹೆಚ್ಚು ಸಮಯ ಕೆಲಸಮಾಡುವುದು, ಅತಿರೇಕವಾದದ್ದೂ ವಿರುದ್ಧ ಪರಿಣಾಮವನ್ನು ನೀಡುವಂತಹದ್ದೂ ಆಗಿದೆ. ವಾರಕ್ಕೆ ಎಂಟರಿಂದ ಹತ್ತು ತಾಸು ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ಕೆಲಸಕ್ಕೆ ವಿನಿಯೋಗಿಸಬಾರದೆಂದು ಕೆಲವು ಪರಿಣತರು ಸೂಚಿಸುತ್ತಾರೆ.
ಶಾಲಾನಂತರದ ಕೆಲಸಕ್ಕಾಗಿ ನಿಮ್ಮ ಸಮಯ, ಶಕ್ತಿ, ಮತ್ತು ಬುದ್ಧಿಶಕ್ತಿಯನ್ನು ಅತಿ ಹೆಚ್ಚಾಗಿ ನೀವು ಉಪಯೋಗಿಸುವುದಾದರೆ, ನಿಮ್ಮ ಆರೋಗ್ಯ, ದರ್ಜೆಗಳು, ಮತ್ತು ವಿಶೇಷವಾಗಿ ಆತ್ಮಿಕತೆಯು ಬಲಹೀನಗೊಳ್ಳಲು ತೊಡಗುವುದು. ಹೌದು, “ಐಶ್ವರ್ಯದಿಂದುಂಟಾಗುವ ಮೋಸವೂ ಇತರ ವಿಷಯಗಳ ಮೇಲಣ ಆಶೆ”ಗಳಿಂದ ವಯಸ್ಕರು ಮಾತ್ರ ನಿಗ್ರಹಿಸಲ್ಪಟ್ಟಿಲ್ಲ. (ಮಾರ್ಕ 4:18, 19) ಆದುದರಿಂದ ನಿಮ್ಮ ಸಮತೂಕವನ್ನು ಕಾಪಾಡಿಕೊಳ್ಳಿರಿ. ಸೊಲೊಮೋನನು ಮಿತಿಮೀರಿದ ಕೆಲಸದ ವಿರುದ್ಧ ಎಚ್ಚರಿಸುತ್ತಾ, ಹೀಗೆ ಹೇಳಿದನು: “ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸದ ಬೊಗಸೆಗಿಂತಲೂ ನೆಮ್ಮದಿಯ ಸೇರೆಯೇ ಲೇಸು.”—ಪ್ರಸಂಗಿ 4:6.
ಹೌದು, ಹಣ ಸಂಪಾದಿಸುವುದು ಅಗತ್ಯವಾಗಿರಬಹುದು. ಮತ್ತು ಹಣ ಸಂಪಾದಿಸಲಿಕ್ಕಾಗಿರುವ ನಿಮ್ಮ ಉದ್ದೇಶಗಳು ಹಿತಕರವೂ ದೈವಿಕವೂ ಆಗಿರುವಲ್ಲಿ, ಯೆಹೋವನು ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನೆಂಬ ವಿಷಯದಲ್ಲಿ ನೀವು ನಿಶ್ಚಿತರಾಗಿರಸಾಧ್ಯವಿದೆ. ನಿಮ್ಮ ಕೆಲಸದಲ್ಲಿ ನೀವು ಪೂರ್ಣವಾಗಿ ತಲ್ಲೀನರಾಗಿ, “ಉತ್ತಮ ಕಾರ್ಯಗಳು,” ಅಂದರೆ, ಆತ್ಮಿಕ ಅಭಿರುಚಿಗಳನ್ನು ಎಂದಿಗೂ ಮರೆಯದಿರುವಂತೆ ನಿಶ್ಚಯಮಾಡಿಕೊಳ್ಳಿರಿ. (ಫಿಲಿಪ್ಪಿ 1:10) ಹಣವು ‘ಒಂದು ರಕ್ಷಣೆ’ ಆಗಿರಬಹುದಾದರೂ, ನಿಮ್ಮನ್ನು ಸಫಲರನ್ನಾಗಿ ಮಾಡುವಂತಹದ್ದು, ದೇವರೊಂದಿಗಿನ ನಿಮ್ಮ ಸಂಬಂಧವೇ ಆಗಿದೆ.—ಕೀರ್ತನೆ 91:14.
[ಅಧ್ಯಯನ ಪ್ರಶ್ನೆಗಳು]
a ನವೆಂಬರ್ 22, 1990; ಡಿಸೆಂಬರ್ 8, 1990; ಮತ್ತು ಸೆಪ್ಟೆಂಬರ್ 22, 1997ರ ಅವೇಕ್! ಸಂಚಿಕೆಗಳಲ್ಲಿ ಕಂಡುಬಂದ, “ಯುವ ಜನರು ಪ್ರಶ್ನಿಸುತ್ತಾರೆ . . . ” ಎಂಬ ಲೇಖನಗಳು, ಶಾಲಾನಂತರದ ಕೆಲಸಗಳ ಸಾಧಕ ಬಾಧಕಗಳನ್ನು ತೂಗಿನೋಡುತ್ತವೆ.
[ಪುಟ 22 ರಲ್ಲಿರುವ ಚೌಕ]
ನೀವು ಸೃಷ್ಟಿಸಬಲ್ಲ ಕೆಲಸಗಳು
• ಬಟ್ಟೆಗಳನ್ನು ಇಲ್ಲವೆ ಪಾತ್ರೆಗಳನ್ನು ಶುಚಿಮಾಡುವುದು
• ವಾರ್ತಾಪತ್ರಿಕೆಗಳನ್ನು ಮಾರಾಟಮಾಡುವುದು ಇಲ್ಲವೆ ವಿತರಿಸುವುದು
• ಹೊಲಿಗೆ ಕೆಲಸ
• ತೋಟಗಾರಿಕೆ ಇಲ್ಲವೆ ಹುಲ್ಲು ಕತ್ತರಿಸುವುದು
• ಬೇಬಿ ಸಿಟ್ಟಿಂಗ್ (ಮಕ್ಕಳನ್ನು ನೋಡಿಕೊಳ್ಳುವುದು)
• ಪುಸ್ತಕಗಳನ್ನು ಬೈಂಡ್ಮಾಡುವುದು
• ಶೂಗಳಿಗೆ ಪಾಲೀಶ್ ಮಾಡುವುದು
• ಹರಿದ ಬಟ್ಟೆಗಳನ್ನು ಹೊಲಿಯುವುದು ಇಲ್ಲವೆ ಇಸ್ತ್ರಿಮಾಡುವುದು
• ಬೆಳೆಗಳನ್ನು ಬೆಳೆಸಿ, ಅವುಗಳನ್ನು ಮಾರಾಟಮಾಡುವುದು
• ಕೋಳಿಗಳನ್ನು ಸಾಕುವುದು ಇಲ್ಲವೆ ಮೊಟ್ಟೆಗಳನ್ನು ಮಾರಾಟಮಾಡುವುದು
• ಟೈಪಿಂಗ್ ಇಲ್ಲವೆ ಜೆರಾಕ್ಸ್ ಮಾಡುವುದು
• ಚಿಕ್ಕಪುಟ್ಟ ಕೆಲಸಗಳನ್ನು ಮಾಡುವುದು
• ಸರಕುಗಳ ವಿತರಣೆಮಾಡುವುದು
• ಸಂಗೀತವನ್ನು ಇಲ್ಲವೆ ಇತರ ವಿಷಯಗಳನ್ನು ಕಲಿಸುವುದು
[ಪುಟ 32 ರಲ್ಲಿರುವ ಚಿತ್ರ]
ಮಿತಿಮೀರಿದ ಕೆಲಸದಿಂದ ನಿಮ್ಮ ದರ್ಜೆಗಳು ಕುಸಿಯಬಲ್ಲವು