ನಿಮ್ಮ ಜೀವನವು ಬೇಸರಕರವಾಗಿರುತ್ತದೊ? ನೀವದನ್ನು ಮಾರ್ಪಡಿಸಬಲ್ಲಿರಿ!
ಸ್ಪೆಯಿನ್ನ ಎಚ್ಚರ! ಸುದ್ದಿಗಾರರಿಂದ
ಮಾರ್ಗರೆಟ್ ಮತ್ತು ಬ್ರಾಯನ್ 50ರ ನಡು ಪ್ರಾಯದಲ್ಲಿದ್ದಾಗ ಒಂದು ಸುವರ್ಣ ಸಂಧಿಯು ತಲೆದೋರಿತು: ಹೊತ್ತಿಗೆ ಮುಂಚಿನ ನಿವೃತ್ತಿ, ಒಂದು ಒಳ್ಳೆಯ ವಿಶ್ರಾಂತಿ ವೇತನದೊಂದಿಗೆ. ದಕ್ಷಿಣಕ್ಕೆ ಮೆಡಿಟರೇನಿಯನ್ನ ಬಿಸಿಲು ಮತ್ತು ಸಮುದ್ರ ತೀರಗಳಿಗಾಗಿ ತೆರಳುವುದಕ್ಕೆ ಅವರು ನಿರ್ಣಯಿಸಿದ್ದು ಆಗಲೆ. ಇನ್ನು ಮುಂದೆ ಚಿಂತೆಗಳಿಲ್ಲ, ಕ್ಲೇಶಗಳಿಲ್ಲ—ಸಮುದ್ರ ತೀರದ ಅವರ ಬಂಗಲೆಯಲ್ಲಿ ನಿರಾತಂಕವಾದ ಒಂದು ಜೀವನವು ಅವರಿಗೆ ಕಾದಿತ್ತು.
ಎರಡು ವರ್ಷಗಳ ಬಳಿಕ, ಆ ಕನಸು ಹುಳಿಯಾಗಿ ಮಾರ್ಪಟ್ಟಿತು. ಬ್ರಾಯನ್ ವಿವರಿಸಿದ್ದು: “ದಿನ ದಿನವೂ ಮಾಡಲು ಏನೂ ಇಲ್ಲದೆ—ಅದು ತೀರ ಅರ್ಥವಿಲ್ಲದ್ದಾಗಿ ಕಂಡುಬಂತು. ನಿಶ್ಚಯವಾಗಿ ನಾನು ಈಜಾಡಿದೆ, ಸ್ವಲ್ಪ ಗಾಲ್ಛ್ ಅಥವಾ ಟೆನಿಸ್ ಆಡಿದೆ. ಕೇಳುಗನಾದ ಯಾವನೊಂದಿಗೂ ತುದಿಮೊದಲಿಲ್ಲದೆ ಮಾತಾಡಿದೆ. ಯಾವುದರ ಕುರಿತು? ಅಪ್ರಯೋಜಕ ವಿಷಯಗಳ ಕುರಿತು.”
ಜೀಸೆಲಾ ಎಂಬ 20ರ ಆದಿಭಾಗದ ಒಬ್ಬ ತಾಯಿಗೆ ಒಬ್ಬ ಸುಂದರ ಚಿಕ್ಕ ಮಗಳಿದ್ದಾಳೆ. ಎಂದಿನಂತೆ ಮಧ್ಯಾಹ್ನದ ಮೇಲೆ ತಾಯಿ ಮತ್ತು ಮಗಳು ತೋಟಕ್ಕೆ ಹೋಗುತ್ತಾರೆ. ಅಲ್ಲಿ ಮಗಳು ಸಂತೋಷದಿಂದ ಮರಳ ಭಕ್ಷ್ಯಗಳನ್ನು ಮತ್ತು ಕೋಟೆಮನೆಗಳನ್ನು ಮಾಡುತಾ, ಮರಳಗುಪ್ಪೆಯಲ್ಲಿ ಪೂರ್ಣ ಮಗ್ನಳಾಗಿ ಆಡುತಾಳೆ. ಈ ಮಧ್ಯೆ ಅಮ್ಮ, ಹತ್ತಿರದ ತೋಟದ ಬೆಂಚಿನಲ್ಲಿ ಕೂತು ತನ್ನ ಮಗುವನ್ನು ಜೋಕೆಯಿಂದ ನೋಡಿಕೊಳ್ಳುತ್ತಾಳೆ. ಅಥವಾ ಹಾಗೆ ನಿಜವಾಗಿಯೂ ನೋಡಿಕೊಳ್ಳುತ್ತಾಳೊ? ಅಲ್ಲಿ ಅವಳು ಕುಳಿತುಕೊಂಡು, ಒಯ್ಯಲಾಗುವ ತನ್ನ ರೇಡಿಯೊಗೆ ಕಿವಿಯಿಟ್ಟು ಕೇಳುತ್ತಿದ್ದಾಳೆ. ಅವಳ ಸಿಗರೇಟಿನ ಹೊಗೆಯ ಮಧ್ಯೆ ಅವಳ ಚಿಕ್ಕ ಮಗುವಂತೂ ಅವಳಿಗೆ ಬಹಳ ಮಟ್ಟಿಗೆ ಕಾಣಿಸುವುದೂ ಇಲ್ಲ. ಬೇಗೆಯ ಕಣ್ಣೀರಿಳಿಸುವ ಮಟ್ಟಿಗೆ ಅವಳಿಗೆ ಬೇಸರವಾಗುತ್ತದೆ.
ಪ್ರೌಢಶಾಲೆಯ ವಿದ್ಯಾರ್ಥಿಯಾದ 17 ವರ್ಷ ಪ್ರಾಯದ ಪೀಟರ್, ಅತ್ಯಾಧುನಿಕ ಎಲೆಕ್ಟ್ರಾನಿಕ್ ಚಮತ್ಕಾರ ಸಾಧನಗಳೊಂದಿಗೆ ಸುತ್ತುವರಿಯಲ್ಪಟ್ಟು, ತನ್ನ ಕೋಣೆಯಲ್ಲಿ ಕುಳಿತುಕೊಳ್ಳುತ್ತಾನೆ. ಅವನು ತನ್ನ ವೀಡಿಯೊ ಆಟಗಳಲ್ಲಿ ಒಂದನ್ನು ತೆರೆಯುತ್ತಾನೆ, ಆದರೆ ಅದು ಇನ್ನು ಮುಂದೆ ಅವನಿಗೆ ಯಾವ ಸ್ವಾರಸ್ಯವನ್ನೂ ಕೊಡದಿರುವುದನ್ನು ಕಂಡುಕೊಳ್ಳಲಿಕ್ಕಾಗಿ ಮಾತ್ರ. ಈವಾಗಲೆ ಅವನು ಅದನ್ನು ನೂರಾರು ಸಲ ಆಡಿಯಾಗಿದೆ. ಎಷ್ಟೆಂದರೂ ಆ ಆಟವನ್ನು ಮೀರಿಸುವುದು ಹೇಗೆಂದು ಅವನಿಗೀಗ ತಿಳಿದಿದೆಯಲ್ಲ. ಸ್ವಲ್ಪ ಸಂಗೀತ ಕೇಳೋಣವೆ? ಆದರೂ, ಈ ಮೊದಲೆ ಅನೇಕ ಬಾರಿ ಅವನು ಕೇಳದೆ ಇರುವ ಸಂಗೀತ ರೆಕಾರ್ಡು ಅವನಲ್ಲಿಲ್ಲ. ಅತಿರೇಕ ಬೇಸರಗೊಂಡು ಅವನು ಪ್ರಲಾಪಿಸುವುದು: “ಏನು ಮಾಡುವುದೆಂದೆ ನನಗೆ ತಿಳಿಯುವುದಿಲ್ಲ.”
ನೀವು ಬರೇ ಕಾಲತಳ್ಳುತ್ತಿದ್ದೀರೊ?
ಪ್ರತಿಯೊಬ್ಬನ ಜೀವನ ನೀರಸವೂ ನಿರುತ್ಸಾಹಕರವೂ ಆಗಿರುವುದಿಲ್ಲ ನಿಶ್ಚಯ. ಅನೇಕರು ಹೊಸ ವಿಷಯಗಳನ್ನು ಕಲಿಯುವ ಮೂಲಕ, ತಮ್ಮ ರಚನಾತ್ಮಕ ಪ್ರವೃತ್ತಿಗಳನ್ನು ತೃಪ್ತಿಗೊಳಿಸುವ ಮೂಲಕ, ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ, ಬೇರೆ ಜನರೊಂದಿಗೆ—ಮತ್ತು ಎಷ್ಟೊ ಹೆಚ್ಚು ಪ್ರಾಮುಖ್ಯವಾಗಿ ದೇವರೊಂದಿಗೆ ಸುಸಂಬಂಧಗಳನ್ನು ಬೆಳೆಸಿಕೊಳ್ಳುವ ಮೂಲಕ ಸಂತುಷ್ಟಿಯನ್ನು ಕಂಡುಕೊಳ್ಳುತ್ತಾ, ಸಂತೋಷದ ಅರ್ಥಪೂರ್ಣ ಜೀವನಗಳನ್ನು ಇನ್ನೂ ಜೀವಿಸುತ್ತಾರೆ.
ಆದರೂ, ಬೇಸರವು ಎಲ್ಲ ವೃತ್ತಿಗಳ ಜನರನ್ನು ತಟ್ಟುತ್ತದೆ—ಇತ್ತೀಚೆಗಿನ ಒಂದು ಸಂಖ್ಯಾ ಸಂಗ್ರಹಣೆಗನುಸಾರ, ಪ್ರತಿ 3 ಜರ್ಮನರಲ್ಲಿ ಒಬ್ಬನು ಬೇಸರದಿಂದ ಬಾಧಿಸಲ್ಪಡುತ್ತಾನೆ. ಶಹರದ ಎಲ್ಲಾ ಜನಪ್ರಿಯ ಮನೋರಂಜನೆಯ ಸ್ಥಳಗಳನ್ನು ಎಡೆಬಿಡದೆ ಸಂದರ್ಶಿಸುವ ಮಧ್ಯಮವರ್ಗದ ಯುವ ಯಪ್ಪೀ, ದೊಡ್ಡ ಸದ್ದಿನ ಸಂಗೀತ ಮತ್ತು ಅಗದ್ಗ ಬಿಯರ್ ಮದ್ಯದೊಂದಿಗೆ ಕಾಲತಳ್ಳುವ ನಿರುದ್ಯೋಗಿ ಯುವಕ, ಟೆಲಿವಿಷನ್ ವೀಕ್ಷಿಸುತ್ತಾ ವಾರಾಂತ್ಯವನ್ನು ಹಾಳುಮಾಡುವ ಕಾರ್ಖಾನೆ ಕೆಲಸಗಾರ, ಮತ್ತು ತನ್ನ ಆಫೀಸು ಬಿಟ್ಟುಹೋಗುವಾಗ ದಿಕ್ಕುಕಾಣದ ಅನಿಸಿಕೆಯಾಗುವ ಕಾರ್ಯನಿರ್ವಾಹಕ—ಇವರೆಲ್ಲರು ಬೇಸರ ಎಂಬ ಸಾಮಾನ್ಯ ರೋಗ ಪೀಡಿತರು.
ಪುರಾತನ ತತ್ವಜ್ಞಾನಿಗಳು ಅದನ್ನು ಟೈಡಿಯುಮ್ ವೀಟೈ (ಜೀವನದ ದಣಿವಿಗೆ ಲ್ಯಾಟಿನ್ ಪದ) ಎಂದು ಕರೆದರು. ಜರ್ಮನ್ ಭಾಷೆಯಲ್ಲಿ ಅದು ಲಾಂಗವೈಲ (ಬಹಳ ಹೊತ್ತು) ಎಂಬುದಾಗಿದೆ. ನಿಧಾನವಾಗಿ ಎಳೆಯುವ ಹೊತ್ತು, ಅರ್ಥವಿಲ್ಲದ್ದಾಗಿ ತೋರುವ ಕೆಲಸ, “ಎಲ್ಲವನ್ನು ಬಿಟ್ಟು ದೂರ ಹೋಗಿಬಿಡುವ” ಹಂಬಲ, ಇವು ಬೇಸರದ ಅತ್ಯಂತ ಸಾಮಾನ್ಯ ಲಕ್ಷಣಗಳು.
ಧನವಂತರಿಗೆ ಸಹ ಇದರಿಂದ ಬಿಡುತಿ ಇಲ್ಲ. ದುಬಾರಿ ಖರ್ಚುಗಾರರ ಬಹಳ ದುಂದಿನ ಜೀವನ ಶೈಲಿಯನ್ನು ವರ್ಣಿಸಿದ ಬಳಿಕ, ಟೈಮ್ ಪತ್ರಿಕೆಯ ರಾಜರ್ ರಾಜನ್ಬ್ಲಾಟ್ ಗಮನಿಸಿದ್ದು: “ದೊಡ್ಡ ಮನೆ, ದೊಡ್ಡ ತೋಟ, ದೊಡ್ಡ ಪ್ರಾಣಿಗಳನ್ನು ಗಳಿಸಿಯಾದ ಮೇಲೆ, ದೊಡ್ಡ ಪಾರ್ಟಿಗಳನ್ನು ಹಾಜರಾಗಿ ಪ್ರತಿಷ್ಠಿತ ವ್ಯಕ್ತಿಗಳ ಪರಿಚಯ ಮಾಡಿಯಾದ ಮೇಲೆ, ಲೋಕದ ದುಬಾರಿ ಖರ್ಚುಗಾರರಲ್ಲಿ ಹೆಚ್ಚಿನವರು ಏನನ್ನು ಪ್ರಕಟಿಸುತ್ತಾರೆ? ತಮಗೆ ಬೇಸರ ಹಿಡಿದದೆ ಎಂದೇ. ಬೇಸರ.”
ಒಂದು ಕಾಲದಲ್ಲಿ ಅಧಿಕ ವಿಶ್ರಾಂತಿಯು ಬೇಸರಕ್ಕೆ ವಿಶ್ವೌಷಧ ಎಂದು ನೆನಸಲಾಗಿತ್ತು. ಹಿಂದಿನ ಬೇಸರ ಹಿಡಿಸುವ ದುಡಿಮೆಯನ್ನು ಹಿತಕರವಾದ ಕೆಲಸ ಪರಿಸ್ಥಿತಿಗಳು ಕೊನೆಗೊಳಿಸುತ್ತವೆಂಬ ಮತ್ತು ಯಥೇಷ್ಟ ವಿಶ್ರಾಂತಿಯು ಸಾಧಾರಣ ವ್ಯಕ್ತಿಯ ಜೀವನವನ್ನು ಫಲಕಾರಿಯಾಗಿ ಮಾಡುವುದೆಂಬ ಊಹೆಯಿತ್ತು. ದುರ್ಭಾಗ್ಯದಿಂದಲಾದರೊ, ಅದು ಅಷ್ಟೇನೂ ಸುಲಭವಿಲ್ಲ. ಈ ಎಲ್ಲಾ ಬಿಡುವಿನ ಸಮಯದೊಂದಿಗೆ ಏನು ಮಾಡುವುದೆಂದು ನಿರ್ಣಯಿಸುವುದು ನಿರೀಕ್ಷಿಸಿದುದಕ್ಕಿಂತಲೂ ಹೆಚ್ಚು ಕಷ್ಟವಾಗಿ ಪರಿಣಮಿಸಿದೆ. ಅನೇಕರು ಒಂದು ಆನಂದಕರ ವಾರಾಂತ್ಯಕ್ಕಾಗಿ ವಾರವಿಡಿ ಆತುರದಿಂದ ಮುನ್ನೋಡಿದರೂ, ಅದು ಆಗಮಿಸಿದಾಗ ಮಾತ್ರ ತಾವು ನಿರೀಕ್ಷಿಸಿದಷ್ಟು ಆನಂದಕರವಾಗಿ ಅದು ಇರದಿರುವುದನ್ನು ಅವರು ಕಾಣುತ್ತಾರೆ.
ಬೇಸರದ ನಕಾರಾತ್ಮಕ ಫಲಿತಾಂಶಗಳು
ಕೆಲವರು ಮಿತಿಮೀರಿದ ಚಟುವಟಿಕೆಗಳಲ್ಲಿ ತಮ್ಮನ್ನು ಮುಳುಗಿಸಿಕೊಳ್ಳುವ ಮೂಲಕ ಬೇಸರದಿಂದ ಪಾರಾಗಲು ಪ್ರಯತ್ನಿಸುತ್ತಾರೆ. ಕೆಲವು ಅಂತರ್ನಿರ್ಬಂಧದ ಕಾರ್ಯವ್ಯಸನಿಗಳು ಹಾಗಾಗಿರುವುದು ಹೇಗಂದರೆ ಅವರು ಆಫೀಸಿನಲ್ಲಿ ಕೆಲಸದಲ್ಲಿರದಾಗ ತಮ್ಮ ಸಮಯದೊಂದಿಗೆ ಏನು ಮಾಡುವುದೆಂದೆ ಅವರಿಗೆ ತಿಳಿದಿರಲಿಲ್ಲ. ಇತರರು ಮದ್ಯಪಾನದಲ್ಲಿ ತಮ್ಮ ಬೇಸರವನ್ನು ನೀಗಿಸಿಕೊಳಲು ಪ್ರಯತ್ನಿಸುತ್ತಾರೆ, ಇಲ್ಲವೆ ಅಮಲೌಷಧಗಳ ಪ್ರಯೋಗಮಾಡುವ ಮೂಲಕ ಉದ್ರೇಕಕ್ಕಾಗಿ ಹುಡುಕುತ್ತಾರೆ. ಮನೋರಂಜನೆಯ ಜಗತ್ತಿನ ಅನೇಕ ವೇಗ-ಜೀವಿತದ ತಾರೆಗಳು, ಪ್ರದರ್ಶನೆಯ ನಂತರದ ಶೂನ್ಯತೆಯನ್ನು ಕೊಕ್ಯೇನ್ನಂತಹ ಮಾದಕ ದ್ರವ್ಯದ ಸೇವನೆಯಿಂದ ತುಂಬಿಸುತ್ತಾರೆ. ಅವಿವಾಹಿತ ಹದಿಹರೆಯದ ತಾಯಂದಿರ ಸದಾ ಹೆಚ್ಚುತ್ತಿರುವ ಸಂಖ್ಯೆಗೆ ಇರುವ ಕಾರಣಗಳಲ್ಲಿ ಒಂದು ಬೇಸರವೆಂದು ಗುರುತಿಸಲಾಗಿದೆ. ತಮ್ಮ ಶೂನ್ಯ ಜೀವಿತಗಳನ್ನು ಒಂದು ಮಗುವು ಭರ್ತಿಮಾಡುವುದೆಂದು ಅವರಲ್ಲಿ ಅನೇಕರು ನೆನಸಿದಿರ್ದಬಹುದು.
ಬೇಸರವನ್ನು ಬೆಳೆಯುತ್ತಿರುವ ಪಾತಕದ ಗತಿಗೂ ಜೋಡಿಸಲಾಗುತ್ತದೆ. ಹಲವಾರು ಯುವಜನರು 16 ವರ್ಷ ಪ್ರಾಯದಲ್ಲಿ ಶಾಲೆಯನ್ನು ಬಿಡುತ್ತಾರಾದ್ದರಿಂದ ಅವರಿಗೆ ಮಾಡಲು ಏನೂ ಇರುವುದಿಲ್ಲವೆಂದೂ ಮತ್ತು ಪಶ್ಚಿಮ ಯೂರೋಪಿನ ನಿರುದ್ಯೋಗಿಗಳು ಅವರ ಉದ್ಯೋಗಿ ಸಮಾನಸ್ಥರೊಂದಿಗೆ ತುಲನೆಯಲ್ಲಿ, “ಆತ್ಮಹತ್ಯೆಗೆ ಹೆಚ್ಚು ಸಂಭಾವ್ಯವುಳ್ಳವರು, ಮಾದಕದ್ರವ್ಯದ ಅಪಪ್ರಯೋಗಕ್ಕೆ ಹೆಚ್ಚು ಒಳಗಾಗುವವರು, ವಿವಾಹಬಾಹಿರ ಗರ್ಭಧಾರಣೆಗಳಿಗೆ ಹೆಚ್ಚು ಒಲವುಳ್ಳವರು ಮತ್ತು ನಿಯಮೋಲ್ಲಂಘನೆಗೆ ಹೆಚ್ಚು ಪ್ರವೃತ್ತಿಯುಳ್ಳವರೂ” ಆಗಿದ್ದಾರೆ ಎಂದು ಟೈಮ್ ಪತ್ರಿಕೆ ಗಮನಿಸಿರುತ್ತದೆ. “ಮೈಗಳ್ಳನು ಮಾಡುವಂತೆ ಸೈತಾನನು ಇನ್ನು ಯಾವ ತಂಟೆಯನ್ನಾದರೂ ಕಂಡುಹಿಡಿಯುತ್ತಾನೆ” ಎಂಬ ಹಳೆಯ ಗಾದೆಯನ್ನು ಇದು ಪುನಃ ದೃಢೀಕರಿಸುವಂತೆ ತೋರುತ್ತದೆ.—ಹೋಲಿಸಿ ಎಫೆಸ 4:28.