ಹಿತಕರವಾದ ಆಹಾರವು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಬಲ್ಲ ವಿಧ
ಉತ್ತಮವಾಗಿ ಪೋಷಿಸಲ್ಪಟ್ಟಿರುವ ಮಗುವನ್ನು ನೋಡುವುದು ಎಷ್ಟು ಆನಂದದಾಯಕ! ಆದರೂ, ಒಂದು ಮಗುವು ಆಕಸ್ಮಿಕವಾಗಿ ಆರೋಗ್ಯಕರವಾಗಿರುವುದಿಲ್ಲ. ಕೇಟ್ ಎಂಬ ಹೆಸರಿನ ಬ್ರೆಜಿಲ್ನಲ್ಲಿ ಜೀವಿಸುತ್ತಿರುವ ಒಬ್ಬ ಕೆನೇಡಿಯನ್ ಮಹಿಳೆ ಹೇಳುವುದು: “ಸಾಮಾನ್ಯವಾದರೂ ಪೌಷ್ಟಿಕವಾದ ಆಹಾರವು ನಮ್ಮ ಮನೆಯಲ್ಲಿ ಸದಾ ಆದ್ಯತೆಯನ್ನು ವಹಿಸುತ್ತಿತ್ತು. ಆರ್ಥಿಕ ಬಜೆಟಿನ ಪರಿಭಾಷೆಯಲ್ಲಿ ಮಾತ್ರವಲ್ಲ, ಅದನ್ನು ತಯಾರಿಸಲು ತೆಗೆದುಕೊಂಡ ಸಮಯ ಮತ್ತು ಅದನ್ನು ಒಟ್ಟುಗೂಡಿ ಅನುಭೋಗಿಸುವ ಪರಿಭಾಷೆಯಲ್ಲಿಯೂ. ನನ್ನ ತಾಯಿ ಮನೆಯ ಹೊರಗೆ ಕೆಲಸ ಮಾಡುತ್ತಿರಲಿಲ್ಲವಾದುದರಿಂದ, ನಾವು ಪ್ರತಿದಿನ ಶಾಲೆಯಿಂದ ಹಿಂದಿರುಗುವಾಗ ಊಟ ತಯಾರಾಗುತ್ತಿರುವ ಮತ್ತು ಪ್ರಾಯಶಃ ಸುಟ್ಟ ಕಡುಬಿನ ಅಥವಾ ಕೇಕಿನ ಸುವಾಸನೆ ನಮ್ಮನ್ನು ಎದುರ್ಗೊಳ್ಳುತ್ತಿತ್ತು.”
ಆದರೆ ಹಿತಕರವಾದ ಆಹಾರದಿಂದ ಪೋಷಿಸಲ್ಪಡುವ ಬದಲಾಗಿ, ದಿ ಎಕಾನೊಮಿಸ್ಟ್ಗನುಸಾರ “ಬಡ ದೇಶಗಳಲ್ಲಿ ಸುಮಾರು 78 ಕೋಟಿ ಜನರು, ಅವುಗಳ ಜನಸಂಖ್ಯೆಯಲ್ಲಿ ಐವರಲ್ಲಿ ಒಬ್ಬರು, ತಿನ್ನಲು ಸಾಕಷ್ಟು ಆಹಾರವನ್ನು ಪಡೆಯುವುದಿಲ್ಲ. ತಮ್ಮ ಹೊಟ್ಟೆಗಳನ್ನು ತುಂಬಿಸಲು ಸಾಕಷ್ಟಿರುವ ಸುಮಾರು 200 ಕೋಟಿ ಜನರಿಗೆ, ತಮಗೆ ಆವಶ್ಯಕವಾದ ಜೀವಸ್ವತಗಳ ಮತ್ತು ಖನಿಜ ಪದಾರ್ಥಗಳ ಕೊರತೆಯಿದೆ.” ನ್ಯೂನಪೋಷಿತನು ಬಲಹೀನನಾಗಿರುತ್ತಾನೆಂದಷ್ಟೇಯಲ್ಲ, ಅವನು ಇತರರಿಗೆ ಪ್ರಯೋಜನ ತರಲು ಕಡಮೆ ಶಕ್ತನಾಗಿರುತ್ತಾನೆ. ಆದಕಾರಣ, ನ್ಯೂನಪೋಷಿತ ಮಕ್ಕಳ ಸಂಬಂಧದಲ್ಲಿ, ಬ್ರೆಜಿಲ್ನ ಸಾವ್ ಪಾವ್ಲೂ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ಎಡ್ವಾರ್ಡೂ ಜನೆಟಿ ಡಾ ಫೋನ್ಸೇಕ, ಹೀಗೆ ಹೇಳಿದರೆಂದು ಉಲ್ಲೇಖಿಸಲಾಗಿದೆ: “ಇದು [ಮಾನವ ಸಂಪನ್ಮೂಲಗಳ ಹಾಳಾಗುವಿಕೆ] ಇನ್ನಾವುದಕ್ಕಿಂತಲೂ ಹೆಚ್ಚು ಕೆಟ್ಟದ್ದು. . . . ಈ ಮಕ್ಕಳಲ್ಲಿ ಬಡತನದ ನಿಮಿತ್ತ ವಿಕಾಸಗೊಳ್ಳದಿರುವ ಸಹಜ ಶಕ್ತಿ, ಸಾಮರ್ಥ್ಯಗಳಿವೆಯೆಂದು ನನ್ನ ನಂಬಿಕೆ. ಬೇರೆ ಪರಿಸ್ಥಿತಿಗಳಡಿಯಲ್ಲಿ, ಇವರೊಳಗಿಂದ ಒಬ್ಬ ಆಲ್ಬರ್ಟ್ ಐನ್ಸ್ಟೈನ್ ಎದ್ದೇಳುವುದು ಸಾಧ್ಯ.” ವೇಜಾ ಪತ್ರಿಕೆ ಹೇಳುವುದು: “ಈ ದೇಶವು ನ್ಯೂನ ಪೋಷಣೆಯ ಕಾರಣ ಭಾವೀ ಸಮರ್ಥ ಜನರನ್ನು ಕಳೆದುಕೊಳ್ಳುತ್ತಾ ಇದೆ, ಮತ್ತು ಬುದ್ಧಿಶಕ್ತಿ, ಸೃಜನಶೀಲತೆ ಮತ್ತು ಬಲವನ್ನು ಹಾಳುಮಾಡುತ್ತಿದೆ.” ಆದಕಾರಣ, ದುಬಾರಿ ಜೀವನವೆಚ್ಚದ ಹೊರತೂ, ವಿವೇಕಿಗಳಾದ ಹೆತ್ತವರು ಪೌಷ್ಟಿಕ ಆಹಾರಕ್ಕಾಗಿ ವೆಚ್ಚಮಾಡುತ್ತಾ ತಮ್ಮ ಮಕ್ಕಳಿಗೆ ಬಲವಾದ ಅಸ್ತಿವಾರವನ್ನು ಹಾಕುತ್ತಾರೆ.
ಒಂದು ವಿವೇಕಪೂರ್ಣ ಬಂಡವಾಳ
“ಬಂಡವಾಳ” ಎಂದರೆ “ಭಾವೀ ಲಾಭಗಳಿಗಾಗಿ ಅಥವಾ ಪ್ರಯೋಜನಗಳಿಗಾಗಿ ಉಪಯೋಗಿಸುವುದು” ಎಂದರ್ಥ. ನೀವು ಪೌಷ್ಟಿಕತೆಯಲ್ಲಿ ಹೇಗೆ ಬಂಡವಾಳವನ್ನು ಹಾಕಬಲ್ಲಿರಿ? ಅವಶ್ಯವಿರುವಲ್ಲಿ ಭೋಗವಸ್ತುಗಳನ್ನು ಅಥವಾ ಪ್ರತಿಷ್ಠೆ ಕೊಡುವ ವಸ್ತುಗಳನ್ನು ನೀವು ತ್ಯಜಿಸಿ ನಿಮ್ಮ ಸೀಮಿತ ಬಜೆಟನ್ನು, ಹಿತಕರವಾದ ಆಹಾರವನ್ನು ಖರೀದಿಸಲು ಉಪಯೋಗಿಸುವಿರೊ?
ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಜನನದಲ್ಲಿ ಥಟ್ಟನೆ ಹೊತ್ತಿಸಲಾಗುವ ತನಕ ಜ್ಞಾನೇಂದ್ರಿಯಗಳು ಸುಪ್ತಾವಸ್ಥೆಯಲ್ಲಿರುವುದಿಲ್ಲ; ಈ ಜ್ಞಾನೇಂದ್ರಿಯ ವ್ಯವಸ್ಥೆಗಳು ಜನನಕ್ಕೆ ಮೊದಲೇ ಕಾರ್ಯನಡೆಸುತ್ತವೆಂದು ಸಾಕ್ಷ್ಯಗಳು ಸೂಚಿಸುತ್ತವೆ.” ಹೀಗೆ, ಒಂದು ಮಗುವನ್ನು ಪೋಷಿಸಲು ಆರಂಭಿಸುವ ಆದರ್ಶ ವಿಧವು ಒಬ್ಬ ಸುಪೋಷಿತ ತಾಯಿ ಇರುವಂತೆ ನೋಡುವುದೇ. ಮುಂದಿನ ಹೆಜ್ಜೆಯು, ಜನನಾನಂತರ ಶಿಶುವು ಮೊಲೆ ಹಾಲು ಕುಡಿಯುವುದೇ, ಯಾಕೆಂದರೆ ಮಾನವ ಹಾಲು ಪೂರ್ತಿ ಪೌಷ್ಟಿಕತೆಯನ್ನು ಒದಗಿಸುತ್ತದೆ ಮತ್ತು ಸಾಮಾನ್ಯ ರೋಗಗಳಿಗೆದುರಾಗಿ ರೋಗರಕ್ಷೆಯನ್ನು ಸಹ ಕೊಡುತ್ತದೆ. ಫ್ಯಾಕ್ಟ್ಸ್ ಫಾರ್ ಲೈಫ್ ಎಂಬ ವಿಶ್ವ ಸಂಸ್ಥೆಯ ಪ್ರಕಾಶನವೊಂದು ಹೇಳುವುದು: “ಒಂದು ಮಗುವಿನ ಜೀವಿತದ ಮೊದಲ ಕೆಲವು ತಿಂಗಳುಗಳಲ್ಲಿ, ಮೊಲೆಹಾಲು ಮಾತ್ರ ಸಾಧ್ಯವಿರುವ ಅತ್ಯುತ್ತಮ ಆಹಾರ ಮತ್ತು ಪಾನೀಯವಾಗಿದೆ. ಕೂಸುಗಳು ನಾಲ್ಕರಿಂದ ಆರು ತಿಂಗಳ ವರೆಗಿನ ವಯಸ್ಸಿನವರಾಗಿರುವಾಗ ಅವುಗಳಿಗೆ ಮೊಲೆಹಾಲಿಗೆ ಕೂಡಿಸಿದ ಇತರ ಆಹಾರಗಳ ಅವಶ್ಯವಿರುತ್ತವೆ.”
ಮಾನವ ದೇಹವು ಗಮನಾರ್ಹವಾದ ಸ್ಥಿತಿಸ್ಥಾಪಕ ಗುಣವುಳ್ಳದ್ದಾದರೂ, ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಅದನ್ನು ಜೀವನದ ಆರಂಭದಲ್ಲಿಯೇ ಹಿತಕರವಾದ ಆಹಾರದಿಂದ ಬೆಳೆಸುವುದು ಮಹತ್ವದ್ದು. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಒಬ್ಬ ವ್ಯಕ್ತಿ ಆರು ವಯಸ್ಸಿನವನಾಗುವುದರೊಳಗೆ, ಮಿದುಳು 1.4 ಕಿಲೊಗ್ರಾಮ್ಗಳ ಅದರ ಪೂರ್ಣ ತೂಕವನ್ನು ಮುಟ್ಟಿರುತ್ತದೆ. ಅಧಿಕಾಂಶ ಮಿದುಳು ಕಣಗಳು ಜನನದಲ್ಲಿಯೇ ಉಪಸ್ಥಿತವಾಗಿರುವುದರಿಂದ ತೂಕದಲ್ಲಿ ವೃದ್ಧಿಯು ಪ್ರಧಾನವಾಗಿ ಜೀವಕಣಗಳ ಬೆಳವಣಿಗೆಯಿಂದ ಬರುತ್ತದೆ. ಈ ಆರು ವರ್ಷಗಳ ಸಮಯಾವಧಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ಜೀವಮಾನದಲ್ಲಿ ಅತಿ ಹೆಚ್ಚಿನ ವೇಗದಲ್ಲಿ ಹೊಸ ವರ್ತನಾ ನಮೂನೆಗಳನ್ನು ಕಲಿತು ಸಂಪಾದಿಸುತ್ತಾನೆ.” ಆದುದರಿಂದ, ತನ್ನ ಆರನೆಯ ವಯಸ್ಸಿನ ತರುವಾಯ ಒಂದು ಮಗು ಉತ್ತಮ ಆಹಾರ ಕ್ರಮವನ್ನು ಅನುಭವಿಸಿದರೂ, ಸಾಪೇಕ್ಷವಾಗಿ ಕೆಲವೇ ಮಿದುಳಿನ ಕಣಗಳು ಬೆಳೆಯುವುವು. ಕೇಟ್ ಗಮನಿಸುವುದು: “ಹಿತಕರವಾದ, ಪೌಷ್ಟಿಕ ಆಹಾರವು ಹೆತ್ತವರು ತಮ್ಮ ಮಕ್ಕಳಿಗೆ ಕೊಡಸಾಧ್ಯವಿರುವ ಅತಿ ದೊಡ್ಡ ಕೊಡುಗೆಗಳಲ್ಲಿ ಒಂದಾಗಿದೆ. ಜೀವನಾವಶ್ಯಕಗಳೆಂದು ಕರೆಯಲ್ಪಡುವ—ಆದರೂ ಅನೇಕ ವೇಳೆ ಭೋಗ ವಸ್ತುಗಳಾಗಿರುವ—ವಸ್ತುಗಳಲ್ಲಿ ಅನೇಕವನ್ನು ಒದಗಿಸಸಾಧ್ಯವಿಲ್ಲದಿದ್ದರೂ, ತಮ್ಮ ಮಕ್ಕಳ ಮಾನಸಿಕ ಮತ್ತು ಶಾರೀರಿಕ ಆರೋಗ್ಯದಲ್ಲಿ ಬಂಡವಾಳ ಹಾಕುವ ಹೆತ್ತವರು, ಅವರಿಗೆ ಜೀವನದಲ್ಲಿ ಶೈಶವದಿಂದ ಒಂದು ಅತ್ಯಮೂಲ್ಯವಾದ ಆರಂಭವನ್ನು ಕೊಡುತ್ತಾರೆ.”
ವೈವಿಧ್ಯಮಯ ಆಹಾರಕ್ರಮವೇಕೆ?
ಒಂದು ಮಗು ಶಾರೀರಿಕವಾಗಿಯೂ ಮಾನಸಿಕವಾಗಿಯೂ ಬೆಳೆಯಬೇಕಾದರೆ ಅದಕ್ಕೆ ಸಸಾರಜನಕ ಸಮೃದ್ಧವಾದ ಆಹಾರ ಅಗತ್ಯ. ನ್ಯೂನ ಪೌಷ್ಟಿಕತೆಯು ಶಾಲೆಯಲ್ಲಿ ಒಂದು ಮಗುವಿನ ಮಾನಸಿಕ ಬೆಳವಣಿಗೆಯನ್ನು ನಿಧಾನಿಸುತ್ತದೆ, ಮತ್ತು ಆ ಮಗು ನಿರಾಸಕ್ತಿಯದ್ದೂ ಬಳಲಿದ್ದೂ ಆಗಿ ಪರಿಣಮಿಸಿ, ಹೆಚ್ಚು ಗಮನಕೊಡಲು ಅಥವಾ ಕಲಿಸಲ್ಪಟ್ಟದ್ದನ್ನು ನೆನಪಿಸಿಕೊಳ್ಳಲು ಅಶಕ್ತವಾಗಬಹುದು. ಮೂಲ ಪೋಷಕ—ಸಸಾರಜನಕ, ಜೀವಸ್ವತಗಳು, ಅವಶ್ಯ ಕೊಬ್ಬುಗಳು, ಅಥವಾ ಪೋಷಕ ಘಟಕಾಂಶ—ಗಳಲ್ಲಿ ಒಂದರ ಕೊರತೆಯಿಂದ ಕಡಮೆ ಪಕ್ಷ 25 ವಿವಿಧ ಕೊರತೆ ಕಾಯಿಲೆಗಳು ಪರಿಣಮಿಸುತ್ತವೆ.
ಸ್ವಕೀಮ್ ಎಂಬವನ ವಿದ್ಯಮಾನವನ್ನು ಪರಿಗಣಿಸಿರಿ. ಅವನು ಹೇಳುವುದು: “ನಮ್ಮದು ಬಡ ಕುಟುಂಬವಾಗಿತ್ತು. ಆದರೆ ನಮಗೆ ಜಮೀನು ಇದ್ದುದರಿಂದ ಹೆಚ್ಚುಕಡಮೆ ನಾವು ತಿನ್ನುತ್ತಿದ್ದ ಎಲ್ಲವನ್ನೂ ನಾವೇ ಬೆಳೆಸಿದೆವು. ಪ್ರತಿ ಊಟಕ್ಕೆ ನಮಗೆ ಮುಸುಕಿನ ಜೋಳ ಮತ್ತು ಚಿಕ್ಕ ಗೋದಿಯ ಪೂರ್ತಿ ಧಾನ್ಯದಿಂದ ಮಾಡಿದ ರೊಟ್ಟಿಯಿತ್ತು ಮತ್ತು ಇದು ನಮ್ಮ ಉತ್ತಮ ಪೌಷ್ಟಿಕತೆಗೆ ಸಹಾಯಮಾಡಿತು. ಬಹುಮಟ್ಟಿಗೆ ಪ್ರತಿದಿನ ನನ್ನ ತಾಯಿ ಹುರುಳಿ ಕಾಯಿ ಸೇರಿದ ಬಗೆ ಬಗೆಯ ತರಕಾರಿಗಳ ತಿಳಿಸಾರನ್ನು ತಯಾರಿಸುತ್ತಿದ್ದರು ಮತ್ತು ಇದು ನಮ್ಮ ಪೋಷಕಾವಶ್ಯಕತೆಗಳನ್ನು ಒದಗಿಸಿತು. ನಮಗೆ ಹೆಚ್ಚು ಮಾಂಸ ಸಿಕ್ಕುತ್ತಿದ್ದಿಲ್ಲವಾದರೂ, ಮೀನು—ಹೆಚ್ಚಾಗಿ ಸಾರ್ಡೀನ್, ಕಾಡ್, ಮತ್ತು ಹೆರಿಂಗ್—ಸಿಕ್ಕುತ್ತಿತ್ತು.” ಅವನು ಕೂಡಿಸಿ ಹೇಳುವುದು: “ನನ್ನ ತಾಯಿಗೆ ಐದು ಮಂದಿ ಮಕ್ಕಳಿದ್ದರು, ಮತ್ತು ನೆಗಡಿ ಮತ್ತು ಫ್ಲೂ ಅಲ್ಲದೆ ಇನ್ನಾವ ಕಾಯಿಲೆಯೂ ನಮ್ಮಲ್ಲಿ ಯಾವನಿಗೂ ಬಂದದ್ದು ನನಗೆ ನೆನಪಿಲ್ಲ. ನಮ್ಮ ಸುಸಮತೋಲದ ಊಟಗಳು ಇದಕ್ಕೆ ಸಹಾಯ ಮಾಡಿದವೆಂದು ನಾನು ಎಣಿಸುತ್ತೇನೆ.” ಏಳು ಮಕ್ಕಳ ತಾಯಿಯೊಬ್ಬಳು ವಿವರಿಸುವುದು: “ಕಡಮೆ ಖರ್ಚಿನಲ್ಲಿ ಪುಷ್ಟಿಕರವಾದ ಆಹಾರವನ್ನು ಒದಗಿಸುವ ಆವಶ್ಯಕತೆ ನಮಗಿತ್ತು. ಆದಕಾರಣ, ನಾವು ಒಂದು ತರಕಾರಿಯ ತೋಟವನ್ನು ಬೆಳೆಸಿದೆವು. ಅದು ಚಿಕ್ಕದಾಗಿದ್ದರೂ, ನಮ್ಮ ಆವಶ್ಯಕತೆಗಳಿಗೆ ಸಾಕಷ್ಟನ್ನು ಉತ್ಪಾದಿಸಿತು.” ಅವಳು ಕೂಡಿಸುವುದು: “ನಮ್ಮ ಮಕ್ಕಳಿಗೆ ಎಂದೂ ಗುರುತರವಾದ ಅಸ್ವಸ್ಥತೆ ಇರಲಿಲ್ಲ ಮತ್ತು ಅವರು ತಮ್ಮ ಶಾಲಾಕೆಲಸದಲ್ಲಿ ಸದಾ ಅತಿ ಸಾಫಲ್ಯವುಳ್ಳವರಾಗಿದ್ದರು.”
ನಿಮ್ಮ ದೇಹಕ್ಕೆ ಅಧಿಕೃತವಾಗಿ ಅಂಗೀಕರಿಸಲ್ಪಟ್ಟ 103 ರಾಸಾಯನಿಕ ಘಟಕಾಂಶಗಳಲ್ಲಿ 22 ಅಂಶಗಳು ಪೋಷಕಗಳಾಗಿ ಅಗತ್ಯ. ನಿಮಲ್ಲಿ ಒಬ್ಬೊಬ್ಬರಿಗೆ ನಿಖರವಾಗಿ ಜೀವಸ್ವತಗಳು, ಖನಿಜ ಪದಾರ್ಥಗಳು, ಮತ್ತು ಸಸಾರಜನಕಗಳ ಯಾವ ಮೊತ್ತವು ಅಗತ್ಯವೆಂದು ನಿರ್ಣಯಿಸುವುದು ಅಸಾಧ್ಯವಾದರೂ ಒಂದು ಸುಸಮತೋಲದ ಆಹಾರ ಕ್ರಮವು ನಿಮ್ಮ ಆವಶ್ಯಕತೆಗಳನ್ನು ಒದಗಿಸುವುದು. ಒಬ್ಬ ತಜ್ಞರು ಹೇಳಿದ್ದು: “ಉತ್ತಮ ಪೌಷ್ಟಿಕತೆಗಿರುವ ಕೀಲಿ ಕೈಯು ಪ್ರತಿಯೊಂದು ರೀತಿಯ ಪೋಷಕವೂ ಸೇರಿರುವ ವೈವಿಧ್ಯಮಯ ಆಹಾರಕ್ರಮವೇ ಆಗಿದೆ.”
ನಿಮ್ಮ ಮಕ್ಕಳು, ಕಹಿ ರುಚಿಯ ತರಕಾರಿಗಳಂತಹ ಕೆಲವು ಆಹಾರಗಳನ್ನು ಇಷ್ಟಪಡದಿದ್ದಲ್ಲಿ ಏನು? ಒಬ್ಬ ಅನುಭವಸ್ಥ ಬಾಣಸಿಗನಿಗನುಸಾರ, ಹೆತ್ತವರು “ತಮ್ಮ ಪ್ರದೇಶದಲ್ಲಿ ದೊರೆಯುವ ಎಲ್ಲ ಕಾಯಿಪಲ್ಯಗಳನ್ನು” ಬಡಿಸಬೇಕು. “ಅನೇಕ ಪ್ರಾಯಸ್ಥರು, ತಾವು ಮಕ್ಕಳಾಗಿದ್ದಾಗ ತರಕಾರಿಗಳಿಗೆ ಒಡ್ಡಲ್ಪಡದೆ ಹೋಗಿರುವ ಕಾರಣ ಅವನ್ನು ತಿನ್ನುವುದಿಲ್ಲ. ತರಕಾರಿಗಳು ನಾರು ಪದಾರ್ಥ ಮತ್ತು ನಮ್ಮ ಜೀವಸ್ವತ ಆವಶ್ಯಕತೆಗಳಲ್ಲಿ ಅನೇಕವನ್ನು ಒದಗಿಸುವುದರಿಂದ ಮತ್ತು ಅಗ್ಗವಾಗಿರುವುದರಿಂದ, ಹೆತ್ತವರು ಅವನ್ನು ಮಕ್ಕಳಿಗೆ ಸದಾ ದೊರಕಿಸಬೇಕು.” ಆದುದರಿಂದ ಪೊಚ್ಚ ಪೊಸ ತರಕಾರಿ ಮತ್ತು ಹಣ್ಣುಗಳನ್ನು ಸದುಪಯೋಗಿಸುತ್ತಾ, ಪ್ರಾಯಶಃ ಮೊಟ್ಟೆ ಲೋಳೆಯ ರಸವತ್ತಾದ ಭಕ್ಷ್ಯದಲ್ಲಿ ಅಥವಾ ತಿಳಿಸಾರಿನಲ್ಲಿ ಬಡಿಸುವ ಹೊಸ ಪಾಕ ವಿಧಾನಗಳನ್ನು ಏಕೆ ಕಲಿಯಬಾರದು? ಶೂನ್ಯ ಕ್ಯಾಲರಿಗಳೆಂದು ಕರೆಯಲ್ಪಡುವುದರ ಸಂಬಂಧದಲ್ಲಿ ಅವನು ಸೂಚಿಸುವುದು: “ವಿಶೇಷ ಸಂದರ್ಭಗಳಲ್ಲಲ್ಲದೆ ಹೆತ್ತವರು ಮನೆಯಲ್ಲಿ ಸಿಹಿ ತಿಂಡಿಗಳನ್ನು ಇಡಬಾರದು. [ಮಕ್ಕಳು] ಪಡೆಯದಿದ್ದರೆ ಅವರು ಅವನ್ನು ತಿನ್ನರು.”
ಸರಿಯಾದ ಆಹಾರದ ಮೊತ್ತವನ್ನು ತಿನ್ನುವುದು ನ್ಯೂನ ಪೋಷಣೆಯ ಅಪಾಯವನ್ನು ಕಡಮೆ ಮಾಡುತ್ತದಾದರೂ, ಕೆಲವರು ಮಿತಿಮೀರಿ ತಿಂದು ತಮಗೆ ಸಮಸ್ಯೆಗಳನ್ನು ಬರಮಾಡಿಕೊಳ್ಳುತ್ತಾರೆ. ಶರೀರದ ಆವಶ್ಯಕತೆಯನ್ನು ಮೀರುವ ಕ್ಯಾಲರಿಗಳ ತಿನ್ನುವಿಕೆಯು ಬೊಜ್ಜಿಗೆ ನಡೆಸಬಹುದು. ಇದನ್ನು ಮಧುಮೇಹ ಮತ್ತು ಹೃದ್ರೋಗದೊಂದಿಗೆ ಜೊತೆಗೂಡಿಸಲಾಗುತ್ತದೆ.a ಔಷಧವಾಗಲಿ, ಶಾರೀರಿಕ ಚಟುವಟಿಕೆಯಾಗಲಿ, ಸರಿಯಾಗಿ ತಿನ್ನುವ ಹವ್ಯಾಸಗಳ ಸ್ಧಾನವನ್ನು ತೆಗೆದುಕೊಳ್ಳಸಾಧ್ಯವಿಲ್ಲದಿರುವುದರಿಂದ, ಕೊಬ್ಬು, ಸಿಹಿ, ಉಪ್ಪು ಮತ್ತು ಮದ್ಯಸಾರದ ಸೇವನೆಯನ್ನು ಕಡಮೆ ಮಾಡುವುದು ಒಂದು ಉತ್ತಮ ಸೂಚನೆಯಾಗಿದೆ. ಅಲ್ಲದೆ, ಒಂದು ವಿಶ್ವಕೋಶವು ಹೇಳುವುದು: “ಹಸಿವೆ, ಒಂಟಿತನ, ಖಿನ್ನತೆ, ಬೇಸರ, ಕೋಪ, ಮತ್ತು ಆಯಾಸವನ್ನು ಕಡಮೆ ಮಾಡಲು ಕ್ರಮ ಕೈಕೊಳ್ಳಬೇಕು, ಏಕೆಂದರೆ ಇವುಗಳಲ್ಲಿ ಪ್ರತಿಯೊಂದು ಮಿತಿಮೀರಿ ತಿನ್ನುವ ಆವೇಶವನ್ನು ಕೆರಳಿಸಬಲ್ಲದು.”
ಆಹಾರ ಮತ್ತು ಆರೋಗ್ಯದ ಒಂದು ಸಮತೋಲದ ವೀಕ್ಷಣ
ಬೈಬಲು ಪೋಷಕ ಆಹಾರದ ಒಂದು ಕೈಪಿಡಿಯಲ್ಲ; ಆದರೂ ಆರೋಗ್ಯದ ವಿಷಯಗಳಲ್ಲಿ ನಾವು ಸಮತೂಕದಿಂದಿರುವಂತೆ ಅದು ನಮಗೆ ಸಹಾಯ ಮಾಡುತ್ತದೆ. ಅಪೊಸ್ತಲ ಪೌಲನು, ‘ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿದ್ದಾರೋ ಅವರು ಕೃತಜ್ಞತಾಸ್ತುತಿಮಾಡಿ ತಿನ್ನುವದಕ್ಕೋಸ್ಕರ ದೇವರು ಉಂಟುಮಾಡಿದ ಆಹಾರವನ್ನು ತಿನ್ನಬಾರದೆಂದು’ ಆಜ್ಞಾಪಿಸುವ ಜನರ ವಿರುದ್ಧ ಎಚ್ಚರಿಸಿದನು. (1 ತಿಮೊಥೆಯ 4:3) ನಾವು ತೃಪ್ತರಾಗಿರಬೇಕೆಂದೂ ಏನು ದೊರೆಯುತ್ತಿದೆಯೋ ಅದರ ಸದುಪಯೋಗವನ್ನು ಮಾಡಬೇಕೆಂದೂ ದೇವರು ಬಯಸುತ್ತಾನೆ. “ಯೆಹೋವನ ಭಯದಲ್ಲಿ ಅಲ್ಪವಿರುವುದು, ಕಳವಳದಿಂದ ಕೂಡಿದ ಸಮೃದ್ಧಿಯ ಸರಬರಾಯಿಗಿಂತ ಲೇಸು.”—ಜ್ಞಾನೋಕ್ತಿ 15:16, NW.
ಇಂದು ಯಾವನೂ ಪರಿಪೂರ್ಣ ಆರೋಗ್ಯವನ್ನು ಅನುಭವಿಸುವುದಿಲ್ಲ. ಆದಕಾರಣ ಅಲಕ್ಷ್ಯ ಮಾಡುವವರೂ ವಿಪರೀತ ಕಾತರ ಪಡುವವರೂ ಆಗಿರದೆ ವಿವೇಚನೆಯುಳ್ಳವರಾಗಿ ಏಕಿರಬಾರದು? ಪೌಷ್ಟಿಕತೆ ಅಥವಾ ಆರೋಗ್ಯ ವಿಚಾರಗಳಲ್ಲಿ ಹದಗೆಟ್ಟ ಅಥವಾ ವಿಲಕ್ಷಣವಾದ ಆಸಕ್ತಿಯು ನಾವು ಸಮತೋಲನವನ್ನು ಕಳೆದುಕೊಳ್ಳುವಂತೆ ಮಾಡಬಲ್ಲದು.
ನಮ್ಮ ಆರೋಗ್ಯವನ್ನು ಪರಾಮರಿಸುವ ನಮ್ಮ ಪ್ರಯತ್ನಗಳ ಹೊರತೂ, ಪ್ರಸ್ತುತ ವಿಷಯಗಳು ಇರುವ ರೀತಿಯಿಂದ, ನಾವು ಕ್ರಮೇಣ ವೃದ್ಧರಾಗಿ ಸಾಯುತ್ತೇವೆ. ಆದರೆ ಸಂತೋಷಕರವಾಗಿ, ದೇವರ ರಾಜ್ಯವು ನ್ಯೂನಪೋಷಣೆ ಮತ್ತು ರೋಗವನ್ನು ಅಂತ್ಯಗೊಳಿಸುವುದೆಂಬ ಆಶ್ವಾಸನೆಯನ್ನು ಬೈಬಲು ನಮಗೆ ಕೊಡುತ್ತದೆ. ಕ್ಷಾಮವನ್ನು ನೀಗಿಸುವ ಮಾನವ ಯೋಜನೆಗಳು ನಿಷ್ಫಲಗೊಂಡಿರುವುದಾದರೂ, ಎಲ್ಲರಿಗೆ ಪೌಷ್ಟಿಕ ಆಹಾರವು ಧಾರಾಳವಾಗಿರುವ ಜಗತ್ತೊಂದನ್ನು ನಾವು ಮುನ್ನೋಡಬಲ್ಲೆವು.—ಕೀರ್ತನೆ 72:16; 85:12.
[ಅಧ್ಯಯನ ಪ್ರಶ್ನೆಗಳು]
a “ಕೆಲವು ಪರಿಣತರು, ನಿಮ್ಮ ಎತ್ತರ, ಮೈಕಟ್ಟು ಮತ್ತು ಪ್ರಾಯಕ್ಕಾಗಿರುವ ‘ಅಪೇಕ್ಷಣೀಯ’ ತೂಕವನ್ನು ನೀವು 20 ಪ್ರತಿಶತಕ್ಕಿಂತ ಹೆಚ್ಚು ಮೀರುವಲ್ಲಿ . . . ನೀವು ಬೊಜ್ಜು ಮೈಯವರು ಎಂದು ಅಭಿಪ್ರಯಿಸುತ್ತಾರೆ.”—ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಫ್ಯಾಮಿಲಿ ಮೆಡಿಕಲ್ ಗೈಡ್, ಪುಟ 501. 1994, ಮೇ 8ರ ಅವೇಕ್! “ಯುವ ಜನರು ಪ್ರಶ್ನಿಸುವುದು . . . ನಾನು ಹೇಗೆ ತೂಕನಷ್ಟ ಪಡೆಯಬಲ್ಲೆ?” ಮತ್ತು ಮೇ 22, 1989, “ತೂಕನಷ್ಟವು ಒಂದು ಸೋಲುವ ಹೋರಾಟವೋ?” ಸಹ ನೋಡಿ.
[ಪುಟ 8 ರಲ್ಲಿರುವ ಚೌಕ]
ನಿಮ್ಮ ಮಗುವಿಗೆ ಒಳ್ಳೆಯ ತಿನ್ನುವ ಹವ್ಯಾಸಗಳು ಇರುವಂತೆ ಸಹಾಯ ಮಾಡಲಿಕ್ಕಾಗಿ ಸಲಹೆಗಳು
◻ ಒಂದು ಒಳ್ಳೆಯ ಮಾದರಿಯನ್ನಿಡಿರಿ.
◻ ಮಕ್ಕಳು ಏನನ್ನು ಅಪೇಕ್ಷಿಸುತ್ತಾರೋ ಅದನ್ನು ಮಾತ್ರ ತಿನ್ನುವಂತೆ ಅವರಿಗೆ ಅನುಮತಿಸದಿರಿ.
◻ ಮನೆಯಲ್ಲಿ ಕಚಡ ಆಹಾರ ಅಥವಾ ಸಿಹಿತಿಂಡಿ ಇಟ್ಟುಕೊಳ್ಳುವುದನ್ನು ದೂರಮಾಡಿರಿ.
◻ ಬೇರೆ ಬೇರೆ ವಿಧದ ಆಹಾರವನ್ನು ಗಣ್ಯಮಾಡುವಂತೆ ಮಕ್ಕಳಿಗೆ ತರಬೇತಿ ನೀಡಿರಿ.
◻ ಹೊತ್ತರೂಟವನ್ನು ಒಳಗೊಂಡು ಊಟಗಳಿಗಾಗಿ ಒಂದು ನಿಗದಿತ ತಾಸನ್ನು ಇಡಿರಿ.
◻ ನೀವು ಏನನ್ನು ತಿನ್ನುತ್ತೀರೋ ಅದನ್ನು ಟಿವಿ ಜಾಹೀರಾತು ಪ್ರಭಾವಿಸುವಂತೆ ಅನುಮತಿಸದಿರಿ.
◻ ರಿಫ್ರಿಜೆರೇಟರ್ (ಶೀತಕ)ನಿಂದ ಮಕ್ಕಳು ಸ್ವತಃ ಆಹಾರವನ್ನು ತೆಗೆದುಕೊಳ್ಳುವಂತೆ ಬಿಡಬೇಡಿರಿ.
◻ ಆಹಾರವನ್ನು ತಯಾರಿಸಲಿಕ್ಕಾಗಿ ಸಹಾಯ ಮಾಡುವಂತೆ ಮಕ್ಕಳಿಗೆ ತರಬೇತಿ ನೀಡಿರಿ.
◻ ದಿನನಿತ್ಯದ ಒದಗಿಸುವಿಕೆಗಳಿಗಾಗಿ ಕೃತಜ್ಞತೆಯನ್ನು ಬೆಳೆಸಿಕೊಳ್ಳಿರಿ.