ಯುವ ಜನರು ಪ್ರಶ್ನಿಸುವುದು . . .
ನಾನು ನಿಜವಾಗಿಯೂ ದೇವರ ಒಬ್ಬ ಸ್ನೇಹಿತನಾಗಿರಬಲ್ಲೆನೋ?
ದೇವರ ಒಬ್ಬ ಸ್ನೇಹಿತನಾಗಿರುವುದೊ? ಸಾಧ್ಯವೇ ಇಲ್ಲವೆಂದು 20 ವರ್ಷ ಪ್ರಾಯದ ಡಾರಿಸ್ ನಂಬುತ್ತಾಳೆ. “ಯಾರಾದರೂ ನನ್ನನ್ನು ಇಷ್ಟಪಡುವುದರ ಕುರಿತು ನನಗೆ ಅತ್ಯಂತ ಕೀಳು ತೆರದ ಮತ್ತು ಅತ್ಯಂತ ಅನರ್ಹವಾದ ಅನಿಸಿಕೆಯು ಆಗುತ್ತದೆ,” ಎಂದು ಈ ಹರೆಯದ ಸ್ತ್ರೀಯು ವ್ಯಸನಪಡುತ್ತಾಳೆ. “ನಾನು ಆತನ ಸನ್ನಿಧಿಯಲ್ಲಿರಲು ಯೋಗ್ಯಳಲ್ಲವೆಂದು ನೆನೆಸುವುದರಿಂದ, ಯೆಹೋವ ದೇವರಿಗೆ ಪ್ರಾರ್ಥಿಸುವುದರಿಂದಲೂ ನಾನು ದೂರವಿರುತ್ತೇನೆ.” ತಮ್ಮ ಅತಿ ಆಂತರಿಕ ಭಾವನೆಗಳಲ್ಲಿ, ಕೆಲವು ಯುವ ಜನರಿಗೆ ತಾವು ದೇವರ ಸ್ನೇಹಕ್ಕೆ ಸಂಪೂರ್ಣವಾಗಿ ಅನರ್ಹರೆಂದು ಅನಿಸುತ್ತದೆ. ದೇವರ ಒಬ್ಬ ಸ್ನೇಹಿತನಾಗಿರುವ ವಿಚಾರವನ್ನು ಅವರು ಆದರಿಸಬಹುದಾದರೂ, ಅಂತಹದ್ದನ್ನು ಸಾಧಿಸುವುದು ಅಸಾಧ್ಯವೆಂದು ಅವರಿಗೆ ಅನಿಸುತ್ತದೆ. ನಿಮಗೆ ಆ ರೀತಿ ಎಂದಾದರೂ ಅನಿಸಿದೆಯೆ?
ಕೆಲವೊಮ್ಮೆ, ದೇವರನ್ನು ಸಮೀಪಿಸಲಿಕ್ಕೂ ತಾನು ಅನರ್ಹನೆಂದು ಭಾವಿಸುವಂತೆ, ಒಬ್ಬ ಯುವ ವ್ಯಕ್ತಿಯ ಸ್ವಂತ ಬಲಹೀನತೆಗಳು ಮಾಡಬಹುದು. ದೃಷ್ಟಾಂತಕ್ಕೆ ಯುವ ಮೈಕಲ್ನನ್ನು ಪರಿಗಣಿಸಿರಿ. ದೈವಿಕ ಮಾರ್ಗಗಳನ್ನು ಗಣ್ಯಮಾಡಲು ತೊಡಗುವ ಮೊದಲು, ತಾನು “ಅಸ್ತಿತ್ವದಲ್ಲಿರುವ ಬಹುಮಟ್ಟಿಗೆ ಪ್ರತಿಯೊಂದು ಪಾಪಪೂರ್ಣ ಹಾಗೂ ಹಾನಿಕಾರಕ ಆಲೋಚನೆ ಮತ್ತು ಕೆಲಸದಿಂದ ತುಂಬಲ್ಪಟ್ಟಿದ್ದೆನೆಂದು” ಅವನು ಹೇಳುತ್ತಾನೆ. ಆದರೆ, ಬೈಬಲಿನ ತನ್ನ ಅಧ್ಯಯನದಿಂದ ಅವನು ಕಲಿತಂತಹ ವಿಷಯವು, ತಾನು ದೇವರಿಗೆ ಉಂಟುಮಾಡುತ್ತಿದ್ದ ದುಃಖ ಮತ್ತು ನಿರಾಶೆಯನ್ನು ಗ್ರಹಿಸುವಂತೆ ಮಾಡಿತು. ಅವನು ವಿವರಿಸಿದ್ದು: “ಪ್ರತಿಯೊಂದು ಸಭಾ ಕೂಟವು ನನ್ನ ದೋಷಗಳಲ್ಲಿ ಕಡಿಮೆಪಕ್ಷ ಇನ್ನು ಒಂದನ್ನಾದರೂ ನನಗೆ ವ್ಯಕ್ತಪಡಿಸಿತು. . . . ಸ್ವತಃ ನನ್ನನ್ನು ಕ್ಷಮಿಸಿಕೊಳ್ಳಲು ನನಗೆ ಸಾಧ್ಯವಾಗದಿದ್ದಾಗ, ಅಂತ್ಯರಹಿತವೆಂದು ತೋರಿದ ನನ್ನ ಪಾಪಗಳಿಗೆ ಯೆಹೋವನ ಕ್ಷಮಾಪಣೆಯನ್ನು ಮುಂಗಾಣಲು ನನಗೆ ಸಾಧ್ಯವಾಗಲಿಲ್ಲ.”
ಬೇರೆ ವಿದ್ಯಮಾನಗಳಲ್ಲಿ, ಯುವ ವ್ಯಕ್ತಿಯೊಬ್ಬನು ಇತರರಿಂದ ಉಪಚರಿಸಲ್ಪಡುವ ವಿಧವು, ತಾನು ಯೆಹೋವನ ಸ್ನೇಹಕ್ಕೆ ಅನರ್ಹನೆಂದು ಭಾವಿಸುವಂತೆ ಮಾಡಬಹುದು. ದೃಷ್ಟಾಂತಕ್ಕೆ, ಈ ಹಿಂದೆ ಉದ್ಧರಿಸಲ್ಪಟ್ಟ ಡಾರಿಸ್, ಚಿಕ್ಕ ಮಗುವಾಗಿದ್ದಾಗ ತನ್ನ ತಾಯಿಯಿಂದ ತೊರೆಯಲ್ಪಟ್ಟಳು. ಆಕೆ ಪ್ರಕಟಿಸಿದ್ದು: “ಯಾವ ವ್ಯಕ್ತಿಯಾದರೂ ನನ್ನನ್ನು ಪ್ರೀತಿಸುತ್ತಾನೆಂದು ನಾನು ನೆನೆಸುವುದಿಲ್ಲ. ನನ್ನ ಸ್ವಂತ ತಾಯಿ ಮತ್ತು ಕುಟುಂಬವು ನನ್ನನ್ನು ತೊರೆದಿರುವಲ್ಲಿ, ಬೇರೆ ಯಾರಾದರೂ ನನ್ನ ಕುರಿತು ಚಿಂತಿಸುವ ಯಾವ ಸಾಧ್ಯತೆಗಳಿವೆ?” ಬಾಲ್ಯಾವಸ್ಥೆಯಿಂದ ಒಬ್ಬ ಯುವ ವ್ಯಕ್ತಿಯು ತುಚ್ಛವಾಗಿ ಮತ್ತು ದುರುಪಯೋಗದ ವಿಧದಲ್ಲಿ ಉಪಚರಿಸಲ್ಪಟ್ಟಿರುವಾಗ, ದೇವರು ಅವನನ್ನು ಒಬ್ಬ ಸ್ನೇಹಿತನಂತೆ ಬಯಸಲು ಎಂದಿಗೂ ಸಾಧ್ಯವಿಲ್ಲವೆಂದು ಅವನು ಯಥಾರ್ಥವಾಗಿ ನಂಬಬಹುದು.
ಇನ್ನೊಂದು ಕಡೆಯಲ್ಲಿ, ಯುವ ವ್ಯಕ್ತಿಯೊಬ್ಬನು ದೇವರೊಂದಿಗೆ ಮಿತ್ರತ್ವವಿದ್ದವನಾಗಿದ್ದಿರಬಹುದು, ಆದರೆ ಬಲಹೀನತೆಯ ಕಾರಣ ಅವನು ಗಂಭೀರವಾದ ಪಾಪಕ್ಕೆ ಬಲಿಯಾಗುತ್ತಾನೆ. ಇದು ಟ್ರೇಸಿಗೆ ಸಂಭವಿಸಿತು. “ನಾನು ಬಹಳ ಲಜ್ಜಿತಳಾಗಿದ್ದೇನೆ,” ಎಂದು 21 ವರ್ಷ ಪ್ರಾಯದ ಈ ಹುಡುಗಿ ಪ್ರಲಾಪಿಸುತ್ತಾಳೆ, “ನನ್ನ ವೇದನೆಯು ಮತ್ತು ದೋಷವು ಸಹಿಸಲು ಅಸಾಧ್ಯವಾದದ್ದು. ನನ್ನ ತಂದೆಯಾದ ಯೆಹೋವನನ್ನು ನಾನು ಬಹಳಷ್ಟು ನೋಯಿಸಿದ್ದೇನೆ.”
ಬಹುಶಃ ಈ ಮೊದಲೇ ಹೇಳಿದವುಗಳಿಗೆ ಸದೃಶವಾದ ಒಂದು ಸನ್ನಿವೇಶದಲ್ಲಿ ನೀವು ನಿಮ್ಮನ್ನು ಕಂಡುಕೊಳ್ಳುತ್ತೀರಿ. ಆದರೆ ನಿರೀಕ್ಷೆಯಿದೆ: ದೇವರು ನಿಮ್ಮ ಸ್ನೇಹಿತನಾಗಿರಬಲ್ಲನು!
ನೀವು ದೇವರ ಸ್ನೇಹಿತರಾಗಿರಬಲ್ಲಿರಿ ಎಂಬುದಕ್ಕೆ ಕಾರಣ
ಪಾಪಪೂರ್ಣ ಕೃತ್ಯಗಳು ಒಬ್ಬನನ್ನು ದೇವರ ಸ್ನೇಹಿತನಾಗಿರುವುದರಿಂದ ತಡೆಯಬಲ್ಲವು ಎಂಬುದು ನಿಜವಾದ ಸಂಗತಿ. ಸಂತೋಷಕರವಾಗಿ, ನಮ್ಮ ಪ್ರೀತಿಯ ತಂದೆಯು ನಮಗೆ ಸಹಾಯ ಮಾಡಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಂಡಿದ್ದಾನೆ. “ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ,” ಎಂದು ಅಪೊಸ್ತಲ ಪೌಲನು ಬರೆಯುತ್ತಾನೆ. (ರೋಮಾಪುರ 5:8) ತನ್ನ ಮರಣದ ಮೂಲಕ ಯೇಸುವು, ಕೃತಜ್ಞರಾದ ವ್ಯಕ್ತಿಗಳನ್ನು ಪಾಪದ ಸಂಪೂರ್ಣ ಆಧಿಪತ್ಯದಿಂದ ಬಿಡಿಸಲು ಪ್ರಾಯಶ್ಚಿತವ್ತನ್ನು ತೆತ್ತನು. (ಮತ್ತಾಯ 20:28) ಹೀಗೆ, ಅಪೊಸ್ತಲನು ಕೂಡಿಸುವುದು: “ನಾವು ದೇವರ ವೈರಿಗಳಾಗಿದ್ದೆವು, ಆದರೆ ತನ್ನ ಮಗನ ಮರಣದ ಮುಖಾಂತರ ಆತನು ನಮ್ಮನ್ನು ತನ್ನ ಸ್ನೇಹಿತರನ್ನಾಗಿ ಮಾಡಿದನು.”—ರೋಮಾಪುರ 5:10, ಟುಡೇಸ್ ಇಂಗ್ಲಿಷ್ ವರ್ಷನ್.
ಯೆಹೋವನ ಮಟ್ಟಗಳನ್ನು ಗಣ್ಯಮಾಡಲು ತೊಡಗುವ ಮೊದಲು, ಈ ಹಿಂದೆ ಉಲ್ಲೇಖಿಸಲ್ಪಟ್ಟ ಮೈಕಲ್ನಂತಹ ಕೆಲವು ಯುವ ವ್ಯಕ್ತಿಗಳು, ಮಹತ್ತರವಾದ ತಪ್ಪಿನಲ್ಲಿ ತೊಡಗಿರಬಹುದು. ಆದರೂ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮುಖಾಂತರ, ಒಬ್ಬನು ಹಿಂದಿನ ಪಾಪಗಳಿಗಾಗಿ, ಅವು ಎಷ್ಟೇ ಗಂಭೀರವಾದವುಗಳಾಗಿರಲಿ, ಕ್ಷಮಿಸಲ್ಪಡಸಾಧ್ಯವಿದೆ. ಈ ಹೃತ್ಪೂರ್ವಕ ಆಶ್ವಾಸನೆಯನ್ನು ಬೈಬಲ್ ಕೊಡುತ್ತದೆ: “ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿ ಮಾಡುವನು.” (1 ಯೋಹಾನ 1:9) ಆದಾಗ್ಯೂ, ಅಂತಹ ಶುದ್ಧೀಕರಣವನ್ನು ತಾನು ಗಣ್ಯಮಾಡುತ್ತೇನೆಂದು ದೇವರಿಗೆ ತೋರಿಸಲು ವ್ಯಕ್ತಿಯೊಬ್ಬನು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ಅನ್ವಯಿಸಸಾಧ್ಯವಿರುವ ಒಂದು ಮೂಲತತ್ವವನ್ನು ಅಪೊಸ್ತಲ ಪೌಲನು ಹೇಳುತ್ತಾನೆ: “ಅಶುದ್ಧವಾದ ಯಾವದನ್ನೂ ಮುಟ್ಟದಿರಿ,” ಎಂದು ಯೆಹೋವನು ಹೇಳುತ್ತಾನೆ, “ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು.” (2 ಕೊರಿಂಥ 6:17, 18) ವ್ಯಕ್ತಿಯೊಬ್ಬನು ಅಂತಹ ತಪ್ಪಿನಿಂದ ತಿರುಗಿ, ಯಥಾರ್ಥವಾಗಿ ಪಶ್ಚಾತ್ತಾಪಪಡುವವನಾಗಿದ್ದರೆ, ದೇವರು ಅವನನ್ನು ತನ್ನ ಅನುಗ್ರಹದಲ್ಲಿ ಒಬ್ಬ ಸ್ನೇಹಿತನಂತೆ ಬರಮಾಡಿಕೊಳ್ಳಲು ಸಿದ್ಧನಾಗಿದ್ದಾನೆಂದು ಅರಿಯುವುದು ಎಷ್ಟು ಮನಕರಗಿಸುವಂತಹದ್ದಾಗಿದೆ.
ಒಂದು ದುರುಪಯೋಗದ ಪರಿಸರದಲ್ಲಿ ಬೆಳೆಸಲ್ಪಟ್ಟಿರುವ ಯುವ ವ್ಯಕ್ತಿಗಳ ಕುರಿತೇನು? ಜನರ ಇಚ್ಛೆಗೆ ವಿರುದ್ಧವಾಗಿ ವಿಷಯಗಳು ಮಾಡಲ್ಪಟ್ಟಿರುವುದರಿಂದ, ದೇವರು ಅವರನ್ನು ದೋಷಿಗಳಂತೆ ಪರಿಗಣಿಸುವುದಿಲ್ಲವೆಂಬುದನ್ನು ಗ್ರಹಿಸಿರಿ. ಅಂತಹವರು ಪಾಪದಲ್ಲಿ ಪಾಲುಗಾರರಾಗಿರುವ ಬದಲಿಗೆ ಬಲಿಗಳಾಗಿದ್ದರು. ಒಬ್ಬ ವ್ಯಕ್ತಿಯೋಪಾದಿ ನಿಮ್ಮ ಯೋಗ್ಯತೆಯು, ಇನ್ನೊಬ್ಬ ಮಾನವನ ತೀರ್ಪಿನ ಮೇಲೆ ಅವಲಂಬಿಸಿರುವುದಿಲ್ಲ ಎಂಬುದನ್ನು ಸಹ ಜ್ಞಾಪಕದಲ್ಲಿಡಿರಿ. ನಿಮ್ಮ ಪರಿಸ್ಥಿತಿಗಳ ಹೊರತೂ ಯೆಹೋವನು ನಿಮ್ಮ ಸ್ನೇಹಿತನಾಗಬಲ್ಲನು. ತನ್ನ ಮದ್ಯವ್ಯಸನಿ ತಂದೆಯಿಂದಾಗಿ ಹಿಂಸೆಯಿಂದ ತುಂಬಿದ ಒಂದು ಮನೆಯಲ್ಲಿ, ಮಾರೀನ್ ಒಬ್ಬ ಕ್ರೈಸ್ತ ತಾಯಿಯಿಂದ ಬೆಳೆಸಲ್ಪಟ್ಟಳು. ಆದರೂ ಆಕೆ ಹೇಳಿದ್ದು: “ಈ ಕಠಿನ ಸನ್ನಿವೇಶದ ಮಧ್ಯದಲ್ಲಿಯೂ, ಯೆಹೋವನೊಂದಿಗೆ ಒಂದು ಸಂಬಂಧವನ್ನು ವಿಕಸಿಸಿಕೊಳ್ಳಲು ನಾನು ಹೇಗೊ ಶಕ್ತಳಾದೆ. ನನ್ನನ್ನು ಎಂದಿಗೂ ತೊರೆಯದವನೋಪಾದಿ ನನಗೆ ಆತನ ಪರಿಚಯವಾಯಿತು.”
ಗಂಭೀರವಾದ ಪಾಪದೊಳಗೆ ನೀವು ಬೀಳುವುದಾದರೆ ಆಗೇನು?
ದೇವಭಕ್ತಿಯ ಹೆತ್ತವರಿಂದ ಬೆಳೆಸಲ್ಪಟ್ಟಿದ್ದ ಡಗ್, 18ರ ಪ್ರಾಯದಲ್ಲಿ ಲೈಂಗಿಕ ಅನೈತಿಕತೆಯಲ್ಲಿ ಸಿಕ್ಕಿಕೊಂಡ. ಇದು ಅವನ ಕೆಟ್ಟ ಸಹವಾಸಗಳ ಕಾರಣದಿಂದಾಯಿತು. “ಅದು ತಪ್ಪೆಂದು ನನಗೆ ಗೊತ್ತಿತ್ತು, ಆದರೆ ಮಜಾ ಮಾಡಲು ನಾನು ಬಯಸಿದ್ದರಿಂದ ಅದನ್ನು ಮಾಡುತ್ತಾ ಮುಂದುವರಿದೆ,” ಎಂದು ಡಗ್ ತಪ್ಪೊಪ್ಪಿಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ ತನ್ನ ಮಾರ್ಗದ ನಿರರ್ಥಕತೆಯನ್ನು ಡಗ್ ಗ್ರಹಿಸಿದನು. ಅವನು ಒಪ್ಪಿಕೊಂಡದ್ದು: “ನನ್ನ ಸ್ನೇಹಿತರೆಂದು ಎನಿಸಿಕೊಂಡಿದ್ದವರೆಲ್ಲ ನನ್ನ ಹಣವನ್ನು ಪಡೆಯಲು ಅಥವಾ ಮಜಾ ಮಾಡಲು ಮಾತ್ರ ನನ್ನನ್ನು ಬಳಸುತ್ತಿದ್ದರೆಂದು ನಾನು ನೋಡಲಾರಂಭಿಸಿದೆ.” ಅನಂತರ ಅವನು ಯೆಹೋವನ ಸ್ನೇಹವನ್ನು ಪುನಃ ಪಡೆಯಲು ಹೆಜ್ಜೆಗಳನ್ನು ತೆಗೆದುಕೊಳ್ಳಲಾರಂಭಿಸಿದನು. ಆದರೆ ದೊಡ್ಡದಾದ ಒಂದು ಅಡಚಣೆಯು ಅವನ ಪ್ರಗತಿಯನ್ನು ತಡೆಗಟ್ಟಿತು.
“ನಾನು ಬಹಳಷ್ಟು ಅನರ್ಹನೆಂಬ ಅನಿಸಿಕೆಯೇ, ಹಿಂದಿರುಗಿ ಬರುವುದನ್ನು ಅಷ್ಟೊಂದು ಕಠಿನವಾಗಿ ಮಾಡಿದ ಮುಖ್ಯ ವಿಷಯವಾಗಿತ್ತೆಂದು,” ಡಗ್ ಹೇಳಿದನು. “ನಾನು ಮಾಡಿದ್ದೆಲ್ಲವು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿತ್ತೆಂದು ನನಗನಿಸಿತು. ಆತನು ಎಷ್ಟು ಒಳ್ಳೆಯವನೆಂದು ಮತ್ತು ನನ್ನ ವಿಷಯವಾಗಿ ಅವನು ಎಷ್ಟು ಸಹಿಸಿಕೊಂಡಿದ್ದನೆಂದು ತಿಳಿಯುವುದು, ನನ್ನನ್ನು ಕ್ಷಮಿಸಲು ಆತನು ಬಯಸುವನೆಂಬುದಕ್ಕೆ ಯಾವ ಮಾರ್ಗವೂ ಇರುವಂತೆ ತೋರಲಿಲ್ಲ, ಯಾಕೆಂದರೆ ನಾನು ಅಷ್ಟೊಂದು ಕೆಟ್ಟವನಾಗಿದ್ದೆ.” ಆದರೂ ಒಬ್ಬ ಸಭಾ ಹಿರಿಯನ ಸಹಾಯದಿಂದ ಮತ್ತು ಮನಸ್ಸೆಯ ಕುರಿತಾದ ಬೈಬಲ್ ವೃತ್ತಾಂತವನ್ನು ಜಾಗರೂಕವಾಗಿ ಪರಿಗಣಿಸುವ ಮೂಲಕ, ಈ ಅಡಚಣೆಯನ್ನು ಜಯಿಸಲು ಡಗ್ ಶಕ್ತನಾದನು.
ಮನಸ್ಸೆ ಯಾರಾಗಿದ್ದನು? ಪ್ರಾಚೀನ ಯೆಹೂದದ ಒಬ್ಬ ಅರಸ. ಯೆಹೋವನನ್ನು ಪ್ರೀತಿಸುವಂತೆ, ತನ್ನ ದೇವಭಕ್ತಿಯ ತಂದೆಯಾದ ಹಿಜ್ಕೀಯನ ಮೂಲಕ ಅವನು ಬೋಧಿಸಲ್ಪಟ್ಟಿದ್ದನೆಂದು ಬೈಬಲ್ ಸೂಚಿಸುತ್ತದೆ. ಆದರೆ ಅವನ ತಂದೆ ಸತ್ತು, 12ರ ಪ್ರಾಯದಲ್ಲಿ ಅವನು ಅರಸನಾದ ಮೇಲೆ, ತಾನು ಬಯಸಿದಂತೆ ಈಗ ತಾನು ಮಾಡಬಲ್ಲೆನೆಂದು ಅವನು ನೆನೆಸಿದನು. ಬಾಳನ ಆರಾಧನೆಗಾಗಿ ಅವನು ಯೆಹೋವನನ್ನು ತೊರೆದನು. ಅಂತಹ ಆರಾಧನೆಯು ಅಸಹ್ಯಕರವಾದ ಅನೈತಿಕ ಹಾಗೂ ಅನಿರ್ಬಂಧಿತ ಕಾಮಕ್ರೀಡೆಗಳಿಂದ ಗುರುತಿಸಲ್ಪಟ್ಟಿತ್ತು. ಮನಸ್ಸೆಯು “ದುಷ್ಕೃತ್ಯಗಳಿಂದ ಯೆಹೋವನಿಗೆ ಕೋಪವನ್ನೆಬ್ಬಿಸಿದನು.” ನಂಬಿಗಸ್ತ ವಕ್ತಾರರ ಮುಖಾಂತರ, “ಯೆಹೋವನು ಮನಸ್ಸೆಯನ್ನೂ ಅವನ ಪ್ರಜೆಗಳನ್ನೂ ಎಚ್ಚರಿಸಿದರೂ ಅವರು ಲಕ್ಷಿಸಲಿಲ್ಲ.” ಅನಂತರ, ಯೆಹೋವನ ನ್ಯಾಯತೀರ್ಪಿನ ಒಂದು ಅಭಿವ್ಯಕ್ತಿಯಂತೆ, ಮನಸ್ಸೆಯು ಬಬಿಲೋನಿಗೆ ಸಂಕೋಲೆ ತೊಡಿಸಲ್ಪಟ್ಟ ಒಬ್ಬ ಕೈದಿಯೋಪಾದಿ ಕೊಂಡೊಯ್ಯಲ್ಪಟ್ಟನು.—2 ಪೂರ್ವಕಾಲವೃತ್ತಾಂತ 31:20, 21; 33:1-6, 10, 11.
ಮನಸ್ಸೆಯು ತನ್ನ ಹಿಂದಿನ ಕೃತ್ಯಗಳನ್ನು ನೆನೆದು ಅವುಗಳನ್ನು ಯೆಹೋವನ ನಿಯಮಗಳ ಕುರಿತು ಅವನು ಜ್ಞಾಪಿಸಿಕೊಂಡ ವಿಷಯಗಳೊಂದಿಗೆ ಹೋಲಿಸಿದಾಗ, ಅವನು ದೋಷಿ ಮನೋಭಾವದಿಂದ ಭಾವಪರವಶನಾಗಿ, ಕ್ಷಮಾಪಣೆಗಾಗಿ ಬೇಡಿಕೊಂಡನು. ದೇವರ ಮುಂದೆ ತನ್ನನ್ನು ದೀನನಾಗಿಸಿಕೊಂಡು, ‘ಆತನಿಗೆ ಪ್ರಾರ್ಥಿಸುತ್ತಾ’ ಇದ್ದನು. ಮತ್ತು ದೇವರು “ಲಾಲಿಸಿ ಅವನಿಗೆ ಸದುತ್ತರವನ್ನು ದಯಪಾಲಿಸಿ ಅವನನ್ನು ತಿರಿಗಿ ಯೆರೂಸಲೇಮಿಗೆ ಬರಮಾಡಿ ಅರಸುತನವನ್ನು ಕೊಟ್ಟನು.” ಹೌದು, “ಕನಿಕರವುಳ್ಳ ತಂದೆಯು” ಈ ಪಶ್ಚಾತ್ತಾಪಿ ಪಾಪಿಯನ್ನು ಪುನಃ ಆತನ ಹತ್ತಿರಕ್ಕೆ ಬರುವಂತೆ ಅನುಮತಿಸಲು ಸಿದ್ಧನಾಗಿದ್ದನು. ಅಂತಹ ಕನಿಕರವನ್ನು ಪಡೆದಾದ ಬಳಿಕ, ವೈಯಕ್ತಿಕ ಅನುಭವದಿಂದ ಈಗ ಮನಸ್ಸೆಗೆ, “ಯೆಹೋವನೇ ದೇವರೆಂಬದು . . . ಮಂದಟ್ಟಾಯಿತು.”—2 ಪೂರ್ವಕಾಲವೃತ್ತಾಂತ 33:12, 13; 2 ಕೊರಿಂಥ 1:3.
ಯೆಹೋವನು ಮನಸ್ಸೆಯನ್ನು ಹಿಂದೆಗೆದುಕೊಳ್ಳಬಹುದಿದ್ದರೆ, ದಾರಿತಪ್ಪಿದ ಒಬ್ಬ ಯುವ ವ್ಯಕ್ತಿಯು ಇಂದು ಪಶ್ಚಾತ್ತಾಪಿ ಮನೋಭಾವವನ್ನು ತೋರಿಸುವುದಾದರೆ, ಆತನೊಂದಿಗೆ ಒಂದು ಸಂಬಂಧವನ್ನು ಯುವ ವ್ಯಕ್ತಿಯು ಪುನಃ ಪಡೆಯುವಂತೆ ಆತನು ಖಂಡಿತವಾಗಿಯೂ ಅನುಮತಿಸುವನು. ತನ್ನ ಸಭೆಯ ಆತ್ಮಿಕ ಕುರುಬರ ಸಹಾಯಕ್ಕೆ ಡಗ್ ಪ್ರತಿಕ್ರಿಯಿಸಿದನು. ದೇವರು “ಯಾವಾಗಲೂ ತಪ್ಪುಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ,” ಎಂದು ಸ್ಪಷ್ಟವಾಗಿಗಿ ನೋಡುವಂತೆ ಅವನಿಗೆ ಸಹಾಯವನ್ನೀಯಲಾಯಿತು.—ಕೀರ್ತನೆ 103:9.
ದೇವರ ಸ್ನೇಹಿತರಾಗಿ ಉಳಿಯಿರಿ
ದೇವರು ಒಮ್ಮೆ ನಿಮ್ಮ ಸ್ನೇಹಿತನಾದ ಮೇಲೆ, ಈ ಸಂಬಂಧವನ್ನು ಕಾಪಾಡಿಕೊಳ್ಳಲು ನೀವು ಅದನ್ನು ಪೋಷಿಸಬೇಕು. ಒಬ್ಬ 18 ವರ್ಷ ಪ್ರಾಯದ ದೀಕ್ಷಾಸ್ನಾತ ಹುಡುಗಿಯು ಅವಿವಾಹಿತ ತಾಯಿಯಾದಳು. ಹಾಗಿರುವಲಿಯ್ಲೂ, ಯೆಹೋವನೊಂದಿಗೆ ವಿಷಯಗಳನ್ನು ಸರಿಪಡಿಸುವಂತೆ ಆಕೆಗೆ ಸಹಾಯವನ್ನೀಯಲಾಯಿತು. (ಯೆಶಾಯ 1:18ನ್ನು ನೋಡಿರಿ.) ಆಕೆ ಸ್ವಸ್ಥಿತಿಗೆ ಬರುವುದರಲ್ಲಿನ ತಿರುಗುಬಿಂದು ಯಾವುದಾಗಿತ್ತು? “ಯೆಹೋವನು ಒಬ್ಬ ವಧಕಾರನಲ್ಲ, ಪ್ರೀತಿಯ ತಂದೆಯೆಂದು ನಾನು ಕಲಿತೆ,” ಎಂಬುದಾಗಿ ಆಕೆ ವಿವರಿಸಿದಳು. “ನಾನು ಮಾಡಿದಂತಹ ವಿಷಯದಿಂದ ಆತನು ನೋಯಿಸಲ್ಪಟ್ಟಿದ್ದನೆಂದು ನಾನು ಗ್ರಹಿಸಿದೆ. ದೇವರನ್ನು, ಗೌರವವು ನೀಡಲ್ಪಡಬೇಕಾದ ಆದರೆ ಎಂದಿಗೂ ನಿಜವಾಗಿ ಪ್ರೀತಿಸಲ್ಪಡದ ಕೇವಲ ಒಂದು ಅಮೂರ್ತ ಆತ್ಮದಂತಲ್ಲ, ಆದರೆ ಭಾವಗಳಿರುವ ಒಬ್ಬ ಸ್ನೇಹಿತನಂತೆ ನೋಡುವುದು ಬಹಳ ಪ್ರಾಮುಖ್ಯವಾಗಿದೆ.” ಮನಸ್ಸೆಯಂತೆ, ಯೆಹೋವನ ಆರಾಧನೆಯಲ್ಲಿ ಪೂರ್ಣವಾಗಿ ಒಳಗೊಳ್ಳುವಂತೆ ಆಕೆ ಪ್ರಚೋದಿಸಲ್ಪಟ್ಟಳು. (2 ಪೂರ್ವಕಾಲವೃತ್ತಾಂತ 33:14-16) ಇದು ಆಕೆಗೆ ಒಂದು ರಕ್ಷಣೆಯಾಗಿ ಪರಿಣಮಿಸಿದೆ. ಆಕೆ ಇತರ ಯುವ ಜನರಿಗೆ ಸಲಹೆ ನೀಡುವುದು: “ಸನ್ನಿವೇಶವು ಕಠಿನವಾದರೂ ಯೆಹೋವನನ್ನು ಸುತ್ತಿಸಲು ಶ್ರಮಿಸುತ್ತಾ ಇರಿ. ಯೆಹೋವನು ಪುನಃ ಒಮ್ಮೆ ನಿಮ್ಮ ಮಾರ್ಗಗಳನ್ನು ಪ್ರೀತಿಯಿಂದ ಸರಿಪಡಿಸುವನು.”
ದೇವರ ಸ್ನೇಹಿತರಾಗಿರುವವರೊಂದಿಗೆ ಸ್ನೇಹವನ್ನು ನೀವು ಹುಡುಕುವುದು ಸಹ ಪ್ರಾಮುಖ್ಯವಾಗಿದೆ. ಆದರೆ ದೈವಿಕ ಮೂಲತತ್ವಗಳಿಗೆ ಸ್ಪಷ್ಟವಾಗಿಗಿ ಯಾವುದೇ ಗೌರವವಿರದವರನ್ನು ವ್ಯಾಧಿಯಂತೆ ವರ್ಜಿಸಿರಿ. (ಜ್ಞಾನೋಕ್ತಿ 13:20) ಯಾರ ಸ್ನೇಹವು “ಬೇರೆ ಯಾವುದೇ ವಿಷಯಕ್ಕಿಂತ ಹೆಚ್ಚು ಪ್ರಾಮುಖ್ಯವಾದ” ವಿಷಯವಾಯಿತೊ, ಆ ಯುವಕನೊಂದಿಗೆ ಹರೆಯದ ಲಿಂಡ ಲೈಂಗಿಕ ಅನೈತಿಕತೆಯಲ್ಲಿ ಒಳಗೊಂಡಳು. ತನ್ನ ಆತ್ಮಿಕ ಚೇತರಿಸಿಕೊಳ್ಳುವಿಕೆಯ ಬಳಿಕ, ಲಿಂಡ ಒಪ್ಪಿಕೊಂಡದ್ದು: “ಯೆಹೋವನ ಮತ್ತು ನಿಮ್ಮ ನಡುವೆ ಆ ವೈಯಕ್ತಿಕ ಬಂಧವಿರದಿದ್ದರೆ ನೀವು ನಿಮ್ಮ ಇಡೀ ಜೀವಿತವನ್ನು ನಾಶಮಾಡಿಕೊಳ್ಳಸಾಧ್ಯವಿದೆ.”
ನಿಮಗಂತಹ ಒಂದು ಬಂಧವಿದೆಯೆ? ಇಲ್ಲದಿರುವಲ್ಲಿ ಅದನ್ನು ಪಡೆಯಲು ಶ್ರಮಿಸಿರಿ. ದೇವರ ಸ್ನೇಹವನ್ನು ಪಡೆದಿರುವುದರ ಮೌಲ್ಯವನ್ನು ಹೀಗೆ ಹೇಳುವ ಮೂಲಕ ಲಿಂಡ ಸಾರಾಂಶಿಸುತ್ತಾಳೆ: “ಇಡೀ ಲೋಕದಲ್ಲಿಯೇ ಅತ್ಯಂತ ಪ್ರಾಮುಖ್ಯವಾದ ವಿಷಯವು ಯೆಹೋವನೊಂದಿಗೆ ಒಂದು ಒಳ್ಳೆಯ ವೈಯಕ್ತಿಕ ಸಂಬಂಧವಾಗಿದೆ. ಈ ಲೋಕದಲ್ಲಿನ ಯಾವನೇ ಹುಡುಗ ಅಥವಾ ಹುಡುಗಿಯು ಅಥವಾ ಬೇರೆ ಯಾವುದೇ ವಿಷಯವು ಅದಕ್ಕಿಂತ ಹೆಚ್ಚಿನದ್ದಲ್ಲ. ಯೆಹೋವನೊಂದಿಗಿನ ಸ್ನೇಹವು ಇಲ್ಲದಿರುವಲ್ಲಿ, ಬೇರೇನೂ ಪ್ರಾಮುಖ್ಯವಾಗಿರುವುದಿಲ್ಲ.”
[ಪುಟ 27 ರಲ್ಲಿರುವ ಚಿತ್ರ]
ದೇವರ ಸ್ನೇಹಿತರಾಗಿರಲು ತಾವು ಅನರ್ಹರೆಂದು ಕೆಲವು ಯುವ ವ್ಯಕ್ತಿಗಳಿಗೆ ಅನಿಸಬಹುದು