ಯುವ ಜನರು ಪ್ರಶ್ನಿಸುವುದು . . .
ದೇವರ ಸ್ನೇಹಿತೆಯಾಗಿರುವುದು ನನಗೆ ಸಹಾಯ ಮಾಡೀತೆ?
ಇಂದು ಅನೇಕ ಯುವ ಜನರು ಒಂದು ತಲೆಮಾರಿನ ಹಿಂದೆ ನಂಬಲಾಗದೆ ಇದ್ದ ಒತ್ತಡಗಳ ಕೆಳಗೆ ಬೆಳೆಯುತ್ತಾರೆ. 1,60,000 ಯುವ ಜನರ ಒಂದು ರಾಷ್ಟ್ರೀಯ ಸಮೀಕ್ಷೆಯ ಕರ್ತೃಗಳು ವಿವರಿಸಿದ್ದು: “ಅವರ ಹೆಚ್ಚಿನ ಸಂಕ್ಷೋಭೆಗಳು ತಮ್ಮಿಂದ ನಿಭಾಯಿಸಲಾಗದೆಂದು ಅವರು ಭಾವಿಸುವ ಒತ್ತಡಗಳಿಂದ; ತಮ್ಮ ಆತ್ಮವಿಶ್ವಾಸವನ್ನು ಕುಂದಿಸುವ ನಿರುತ್ತೇಜನ ಮತ್ತು ಖಿನ್ನತೆಯಿಂದ; ಮತ್ತು ತಮ್ಮ ಸಮಸ್ಯೆಗಳಿಗೆ ಸಂವೇದನೆ ತೋರಿಸದೇ ಇರುವ ಹೆತ್ತವರಿಂದ ಬರುತ್ತವೆ ಎಂದು ಹದಿವಯಸ್ಕರು ನಮಗನ್ನುತ್ತಾರೆ.” ಒಬ್ಬ ಯುವಕನಿಗೆ ಜೀವನವೆಷ್ಟು ವೇದನಾಮಯವಾಗಿರಬಹುದೆಂದು ಇತರರು ತಿಳಿಯುವುದೇ ಇಲ್ಲವೆಂಬ ಅನಿಸಿಕೆ ಕೆಲವೊಮ್ಮೆ ನಿಮಗೂ ಆಗಬಹುದು.
ಭಾವಾತ್ಮಕ ಬೆಂಬಲಕ್ಕಾಗಿ ನೀವು ತಿರುಗಬಲ್ಲ ಒಬ್ಬ ಆಪ್ತ ಸ್ನೇಹಿತನು ನಿಮಗಿರಬಹುದು ನಿಶ್ಚಯ, ಮತ್ತು ಇದು ಸ್ವಲ್ಪ ಉಪಶಮನವನ್ನು ತಂದೀತು. ಆದರೆ ನೀವೊಬ್ಬರೇ ಎದುರಿಸಬೇಕಾದ ವೇದನಾಮಯ ಕಷ್ಟಗಳು ಇವೆಯೆಂಬುದು ನಿಜವಲ್ಲವೇ? ಕೆಲವೊಮ್ಮೆ “[ನಿಮ್ಮ] ಪ್ರಾಣದ ವೇದನೆಯ ಕುರಿತು” ನಿಮ್ಮ ಸ್ವಂತ “ಹೃದಯವು ಅರಿವುಳ್ಳ”ದ್ದಾಗಿರುತ್ತದೆಂಬುದು ಎಷ್ಟು ಸತ್ಯ. (ಜ್ಞಾನೋಕ್ತಿ 14:10, NW) ಆದರೆ ನಿಮ್ಮನ್ನು ಪೂರ್ಣವಾಗಿ ತಿಳಿದುಕೊಳ್ಳುವಾತನೊಬ್ಬನು ಇದ್ದಾನೆ, ಮತ್ತು ಅವನು ತನ್ನ ಸ್ನೇಹವನ್ನು ನೀಡುತ್ತಾನೆ. ಅತ್ಯಂತ ವೇದನಾಮಯ ಸಮಯದಲ್ಲೂ ಆತನ ಗೆಳೆತನವು ಒಂದು ಮಹಾ ಸಹಾಯವಾಗಿ ಇದೆಯೆಂದು ಅನೇಕ ಯುವ ಜನರು ಕಂಡುಕೊಂಡಿದ್ದಾರೆ.
ದೇವರೊಂದಿಗೆ ಸ್ನೇಹ
ಯೆಹೋವ ದೇವರಿಗೆ ಅವಳು ಯಾವ ವಿಷಯಕ್ಕಾಗಿ ಹೆಚ್ಚು ಉಪಕಾರ ಹೇಳುತ್ತಾಳೆಂದು ಒಬ್ಬ ಯುವತಿಯನ್ನು ಕೇಳಲಾಯಿತು. ಅವಳ ಉತ್ತರ: “ನಾವು ಆತನನ್ನು ತಿಳಿದುಕೊಂಡು ಆತನ ಆಪ್ತ ಸ್ನೇಹಿತರಾಗಬಲ್ಲ ವಿಷಯಕ್ಕಾಗಿ.” ಹೌದು, ವಿಶ್ವದಲ್ಲೇ ಅತ್ಯುತ್ತಮವಾದ ಸ್ನೇಹದೊಳಗೆ ಪ್ರವೇಶಿಸಲು ಸಾಧ್ಯವಿದೆ! ಕೀರ್ತನೆಗಾರನು ಬರೆದದ್ದು: “ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು.”—ಕೀರ್ತನೆ 25:14.
‘ಯೆಹೋವನೊಂದಿಗೆ ಆಪತ್ತೆ’—ಎಂತಹ ಅಮೂಲ್ಯವಾದ ಒಂದು ಸದವಕಾಶ! ಮೂಲ ಹೀಬ್ರು ಪದವು ಇದಕ್ಕೆ, ಒಬ್ಬ ವಿಶೇಷ ಸ್ನೇಹಿತನಾಗಿರುವ ಒಬ್ಬನೊಂದಿಗೆ ಬಿಚ್ಚು ಮನದಿಂದ, ಅಂತರಂಗದಲ್ಲಿ ಹೇಳಿಕೊಳ್ಳುವ ಮಾತು, ಎಂಬ ಅಭಿಪ್ರಾಯವನ್ನು ಕೊಡುತ್ತದೆ. ಹೀಗೆ ಅದೊಂದು ಆಪ್ತವಾದ, ಪ್ರೀತಿಯಿಂದ ಆಧಾರಿತವಾದ ಸಂಬಂಧ, ಪರಸ್ಪರ ನಂಬುಗೆಯಿಂದ ಪ್ರಾಪ್ತವಾಗುವ ಒಂದು ಆಪ್ತ ಸುಯೋಗ. ದೇವರ ಸ್ನೇಹಿತನೋಪಾದಿ, ಒಬ್ಬ ವ್ಯಕ್ತಿಯಂತೆ ನಿಮ್ಮ ನಿಜ ಬೆಲೆಯು ನಿಮ್ಮನ್ನು ನೈಜವಾಗಿ ತಿಳಿದುಕೊಳ್ಳುವ ಈ ವ್ಯಕ್ತಿಯಿಂದ ಮೂಲ್ಯವೆಂದೆಣಿಸಲ್ಪಡುವ ಭಾವನೆ ನಿಮ್ಮದಾಗುವುದು. ಆದರೆ ಈ ಸ್ನೇಹದ ಪ್ರಯೋಜನಗಳೇನು?
‘ಬಾಲಾರಭ್ಯ ನನ್ನ ಭರವಸ’
ಅನೇಕ ಯುವ ಜನರು, ಬಾಹ್ಯ ಬಡಿವಾರವನ್ನು ತೋರಿಸಿದರೂ, ಆಂತರ್ಯದಲ್ಲಿ ಭರವಸೆಯ ಕೊರತೆಯುಳ್ಳವರಾಗಿದ್ದಾರೆ. “ನಾನು ನನ್ನ ಅಭಿಪ್ರಾಯಗಳನ್ನು ತಿಳಿಸುತ್ತೇನೆ ಮತ್ತು ಇನ್ನೊಬ್ಬರು ತಮ್ಮದನ್ನು ಮುಂತಂದು ನನ್ನದನ್ನು ಪೂರ್ಣವಾಗಿ ಬದಲಾಯಿಸಿ ಬಿಡುತ್ತಾರೆ,” ಎಂದು ಹಲುಬುತ್ತಾಳೆ 13 ವರ್ಷ ಪ್ರಾಯದ ಜೂಡಿ. “ಸ್ವತಃ ನನ್ನ ಕುರಿತು ನನಗೆ ಅತಿಯಾದ ಖಾತರಿಯಿಲ್ಲ.” ಆದರೆ ನಮ್ಮ ಸ್ವರ್ಗೀಯ ಸ್ನೇಹಿತನಾದರೋ ತನ್ನ ಲಿಖಿತ ವಾಕ್ಯವಾದ ಬೈಬಲಿನಲ್ಲಿ ಸಾಫಲ್ಯಯುಕ್ತ ಜೀವನಕ್ಕಾಗಿ ವಿಶಿಷ್ಟ ಮಾರ್ಗದರ್ಶನವನ್ನು ಒದಗಿಸುತ್ತಾನೆ. ವಾಸ್ತವಿಕವಾಗಿ, ಅವನು ತನ್ನ ಮಾರ್ಗಗಳನ್ನು ಸರಿಪಡಿಸಿಕೊಳ್ಳುವಂತೆ ಶಕ್ತನನ್ನಾಗಿ ಮಾಡುತ್ತಾ, ಬೈಬಲ್ ಪುಸ್ತಕವಾದ ಜ್ಞಾನೋಕ್ತಿಯಲ್ಲಿ ಕೊಡಲಾದ ಸಲಹೆಯು, ‘ಯೌವನಸ್ಥನಿಗೆ ತಿಳುವಳಿಕೆಯನ್ನೂ ಬುದ್ಧಿಯನ್ನೂ ಉಂಟುಮಾಡ’ಲಿಕ್ಕಾಗಿ ರಚಿಸಲ್ಪಟ್ಟಿದೆ. (ಜ್ಞಾನೋಕ್ತಿ 1:1-4; 3:1-6) ಇದು ನಿಮಗೆ ಭರವಸೆಯನ್ನು ಕೊಡಬಲ್ಲದು! ಜೀವಿಸುವ ಅತ್ಯುತ್ತಮ ಮಾರ್ಗವನ್ನು ನೀವು ತಿಳಿಯಬಲ್ಲಿರಿ.
ಬೈಬಲು, ಈ ಪತ್ರಿಕೆಯಂತಹ ಬೈಬಲ್ ಸಹಾಯಕಗಳೊಂದಿಗೆ, ಜೀವನದ ಕಾರ್ಯತಃ ಪ್ರತಿಯೊಂದು ವಿಷಯಾಂಶಕ್ಕೆ—ಸ್ನೇಹಿತರನ್ನು ಆರಿಸಿಕೊಳ್ಳುವ ವಿಧದಿಂದ ಹಿಡಿದು ನಿಮ್ಮ ಹೆತ್ತವರ ಕಡೆಗೆ ಯೋಗ್ಯ ಮನೋಭಾವದ ವರೆಗೆ—ಸಲಹೆಯನ್ನು ಒದಗಿಸುತ್ತದೆ. (ಜ್ಞಾನೋಕ್ತಿ 1:8, 9; 13:20) ಯಾರು ಅಂತಹ ಮಾರ್ಗದರ್ಶನವನ್ನು ಪಾಲಿಸುತ್ತಾರೋ ಅವರು ಹೀಗೆ “ಮೃತ್ಯುಪಾಶದಿಂದ ತಪ್ಪಿಸಿಕೊಳ್ಳಲು” ಶಕ್ತರಾಗುವರು. (ಜ್ಞಾನೋಕ್ತಿ 14:27) ದೃಷ್ಟಾಂತಕ್ಕಾಗಿ, ಮೇ ಎಂಬ ಹೆಸರಿನ ಹುಡುಗಿ, ತನ್ನ ತಂಗಿಯು ಬೈಬಲ್ ತತ್ವಗಳನ್ನು ತುಚ್ಛೀಕರಿಸುವುದನ್ನು ಕಂಡಳು. ತನ್ನ ಸ್ವೇಚ್ಛಾಚಾರದ ಜೀವನ ಶೈಲಿಯಿಂದಾಗಿ ಆ ಸೋದರಿಯು ಒಂದು ದುರಂತಕರವಾದ ಅಕಾಲ ಮರಣವನ್ನಪ್ಪಿದಳು. ತಾನು ಹೇಗೆ ಅಂತಹ ಅನೈತಿಕತೆಯನ್ನು ಪ್ರತಿಭಟಿಸಲು ಶಕ್ತಳಾದೆನೆಂದು ಮೇ ವಿವರಿಸಿದಳು: “ನೈತಿಕತೆಯ ಕುರಿತ ಯೆಹೋವನ ಮೂಲತತ್ವಗಳನ್ನು ನಾನು ಸ್ಪಷ್ಟವಾಗಿಗಿ ಜ್ಞಾಪಿಸಬಲ್ಲೆ, ಮತ್ತು ಇದು ನನ್ನನ್ನು ಬಲಪಡಿಸುತ್ತದೆ. ಯೆಹೋವನು ಎಷ್ಟು ವಾಸ್ತವಿಕನು ಮತ್ತು ಆತನ ಮಾರ್ಗವೇ ಅತ್ಯುತ್ತಮವೆಂದು ಕಾಣಲು ಈ ಮೂಲತತ್ವಗಳು ನನಗೆ ನೆರವಾಗುತ್ತವೆ.”
ಆದರೂ, ಯೆಹೋವನನ್ನು ಸ್ನೇಹಿತನಾಗಿ ಹೊಂದುವುದರಲ್ಲಿ ಕೇವಲ ಆತನ ಮಟ್ಟಗಳನ್ನು ಕಲಿಯುವುದಕ್ಕಿಂತ ಹೆಚ್ಚು ಒಳಗೂಡುತ್ತದೆ. ನಿಮ್ಮ ಜೀವಿತದಲ್ಲಿ ಆತನ ವೈಯಕ್ತಿಕ ಆಸಕ್ತಿಯನ್ನು ನೀವು ಅನುಭವಿಸಬಲ್ಲಿರಿ. ಯೌವನದಿಂದಲೇ ದೇವರಿಂದ ಕಲಿಸಲ್ಪಟ್ಟ ಅರಸ ದಾವೀದನ ಕುರಿತು ಬೈಬಲು ತಿಳಿಸುತ್ತದೆ. ದಾವೀದನು ದೇವರ ಒಬ್ಬ ಸ್ನೇಹಿತನಾದನು, ಮತ್ತು ಅವನು “ಅನೇಕ ಕಷ್ಟನಷ್ಟಗಳಿಗೆ” ಗುರಿಯಾಗಿದ್ದರೂ, ಯೆಹೋವನು ತನ್ನ ಜೀವನದಲ್ಲಿ ಕಾರ್ಯನಡಿಸುವುದನ್ನು ಅವನು ಕಾರ್ಯತಃ ಕಂಡನು. ತನ್ನ ಪರವಾಗಿ ದೇವರು ಮಾಡಿದ “ಅದ್ಭುತಕೃತ್ಯಗಳ” ಕುರಿತು ಮತ್ತು ಯೆಹೋವನ “ಭುಜ” ಅಥವಾ ಬಲವು ತನ್ನ ಜೀವನದಲ್ಲಿ ಪ್ರಯೋಗಿಸಲ್ಪಟ್ಟ ಕುರಿತು ದಾವೀದನು ಮಾತಾಡಿದನು. ಅಂತಹ ವೈಯಕ್ತಿಕ ಅನುಭವಗಳ ಆಧಾರದಲ್ಲಿ, ದಾವೀದನು ಬರೆದುದು: “ಕರ್ತನಾದ ಯೆಹೋವನೇ, ಬಾಲಾರಭ್ಯ ನನ್ನ ನಿರೀಕ್ಷೆಯೂ ನನ್ನ ಭರವಸವೂ ನೀನಲ್ಲವೋ?” (ಓರೆಅಕ್ಷರಗಳು ನಮ್ಮವು.) (ಕೀರ್ತನೆ 71:5, 17, 18, 20) ನಿಮ್ಮ ಜೀವಿತದಲ್ಲಿ ಯೆಹೋವನ ಆಶೀರ್ವಾದವನ್ನು ನೀವು ಅನುಭವಿಸುವಾಗ ಅದೇ ರೀತಿಯ ಭರವಸವನ್ನು ನೀವೂ ಹೊಂದಬಲ್ಲಿರಿ. ಆತನ ಮಾರ್ಗದರ್ಶನಗಳನ್ನು ಅನುಸರಿಸಲು ನೀವು ಪ್ರಯಾಸಪಡುವಾಗ—ಪಂಥಾಹ್ವಾನಗಳ ಮಧ್ಯೆಯೂ—ದೇವರೊಂದಿಗೆ ನೀವು ಒಂದು ನೆಚ್ಚಿನ ಸಂಬಂಧದಲ್ಲಿ ನಡೆಯುತ್ತಿರುವಿರಿ ನಿಶ್ಚಯ.—ಹೋಲಿಸಿ ಆದಿಕಾಂಡ 6:9.
ಯೋಗ್ಯ ಮಾರ್ಗವನ್ನು ಅನುಸರಿಸುವಂತೆ ದೇವರು ನಮಗೆ ಸಹಾಯ ಮಾಡುತ್ತಾನೆ
ಜೀವನದಲ್ಲಿರುವ ಎಲ್ಲ ಶೋಧನೆಗಳು ಮತ್ತು ಒತ್ತಡಗಳ ನಡುವೆ, ದೇವರ ಮಾರ್ಗದರ್ಶನವನ್ನು ಪಾಲಿಸುವುದೇನೂ ಸುಲಭವಲ್ಲ. ಯುವತಿಯಾಗಿದ್ದಾಗ ಅಮಲೌಷಧ ವ್ಯಸನಿ ಮತ್ತು ವೇಶ್ಯೆಯಾಗಿದ್ದ ಪೆಗಿ ಎಂಬವಳ ವಿಷಯದಲ್ಲಿ ಇದು ಸತ್ಯವಾಗಿತ್ತು. ಬೈಬಲನ್ನು ಅಭ್ಯಸಿಸಿದ ಮೂಲಕ ಅವಳು ತನ್ನ ವ್ಯಸನವನ್ನು ನೀಗಿಸಿಕೊಳ್ಳಲು ಶಕ್ತಳಾಗಿ ನೈತಿಕ ಬದಲಾವಣೆಗಳನ್ನು ಮಾಡಿದಳು, ಮತ್ತು ಹೀಗೆ ಅವಳು ದೇವರೊಂದಿಗೆ ಸ್ನೇಹವನ್ನು ವಿಕಸಿಸಿಕೊಂಡಳು. ಆದರೆ ಅಮಲೌಷಧದ ಮೂಲಕ ಬಿಡುಗಡೆಯನ್ನು ಹುಡುಕುವಂತೆ ಮಾಡಿದ್ದ ಅವೇ ಒತ್ತಡಗಳನ್ನು ಪೆಗಿಯು ಎದುರಿಸುವುದನ್ನು ಮುಂದುವರಿಸಿದಳು. ಅವಳು ಅದನ್ನು ಪ್ರತಿಭಟಿಸುತ್ತಾ ಇರುವುದು ಹೇಗೆಂದು ಅವಳನ್ನು ಕೇಳಿದಾಗ, ಅವಳು ಉತ್ತರಕೊಟ್ಟದ್ದು: “ಅದು ಯೆಹೋವನ ಆತ್ಮದಿಂದಲೇ ಎಂದು ನಾನು ಹೇಳಬಲ್ಲೆ.”
ದೇವರು ತನ್ನ ಸ್ನೇಹಿತರಿಗೆ ತನ್ನ ಆತ್ಮವನ್ನು ಅಥವಾ ಕಾರ್ಯಕಾರಿ ಶಕ್ತಿಯನ್ನು ಕೊಡುತ್ತಾನೆಂದೂ ಮತ್ತು ಇದು ಆತನ ಮಟ್ಟಗಳಿಗನುಸಾರ ಜೀವಿಸಲು ಅವರನ್ನು ಶಕ್ತರನ್ನಾಗಿ ಮಾಡುತ್ತದೆಂದೂ ಪೆಗಿಗೆ ತಿಳಿದಿತ್ತು. (ಅ. ಕೃತ್ಯಗಳು 5:32; 1 ಕೊರಿಂಥ 6:9-11) “ಆ ಹಳೇ ಅನಿಸಿಕೆಗಳು, ವಿಶೇಷವಾಗಿ ನಾನು ಒಂಟಿಯಾಗಿ ಇರುವಾಗ, ಈಗಲೂ ಕೆಲವು ಸಲ ಹಿಂದೆಬರುತ್ತವೆ,” ಎಂದು ಒಪ್ಪುತ್ತಾಳೆ ಪೆಗಿ, “ಆದರೆ ಆ ಕೂಡಲೆ ನಾನು ಪ್ರಾರ್ಥಿಸತೊಡಗುತ್ತೇನೆ. ನನ್ನ ಜೀವಿತದಲ್ಲಿ ಎಂದಾದರೂ ನಾನು ಪೂರೈಸಿದ ಯಾವುದೇ ವಿಷಯಕ್ಕಿಂತ ಈ ಸಮಸ್ಯೆಗಳನ್ನು ನೀಗಿಸಿಕೊಳ್ಳುವ ಸಾಮರ್ಥ್ಯವು ನನಗೆ ಅತಿ ಹೆಚ್ಚು ಪ್ರೇರಕ.” ಒಬ್ಬ ಸ್ನೇಹಿತನೋಪಾದಿ ದೇವರು, “ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು” ನಮಗೆ ಸಹಾಯ ಮಾಡಶಕ್ತನೆಂದು ತಿಳಿಯುವುದು ಅದೆಷ್ಟು ಪ್ರೋತ್ಸಾಹನೀಯ.—ಎಫೆಸ 3:20, 21.
ದೇವರ ಆತ್ಮವು ನಮಗೆ ದೀರ್ಘಶಾಂತಿ, ಸೌಮ್ಯತೆ ಮತ್ತು ಆತ್ಮನಿಯಂತ್ರಣದಂತಹ ಗುಣಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. (ಗಲಾತ್ಯ 5:22, 23) ಅಲ್ಲದೆ, ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ, ದೇವರ ಆತ್ಮದಿಂದ ನೇಮಿಸಲ್ಪಟ್ಟ ಹಿರಿಯರು ಅಥವಾ ಕುರುಬರು ಪ್ರಾಯೋಗಿಕ ಸಹಾಯವನ್ನು ನೀಡುವುದಕ್ಕಾಗಿ ದೇವರಿಂದ ಒದಗಿಸಲ್ಪಟ್ಟಿದ್ದಾರೆ. ಪೆಗಿ ಕೂಡಿಸುವುದು: “ಸಭೆಯಿಂದ, ವಿಶೇಷವಾಗಿ ಹಿರಿಯರಿಂದ ನನಗೆ ಬಹಳಷ್ಟು ಬೆಂಬಲವು ದೊರೆತಿತ್ತು. ಅದೊಂದು ಪ್ರಚಂಡವಾದ ಸಹಾಯವಾಗಿತ್ತು.”
“ನನ್ನ ಹೃದಯದ ಬಂಡೆ”
“ಮಿತ್ರನ ಪ್ರೀತಿಯು ನಿರಂತರ; ಆಪತ್ತಿನ ಸಮಯದಲ್ಲಿ ಅವನು ಸೋದರನಾಗುತ್ತಾನೆ.” ಹೀಗೆಂದು ಹೇಳುತ್ತದೆ ಜ್ಞಾನೋಕ್ತಿ 17:17, ದ ಬೇಸಿಕ್ ಬೈಬಲ್ನಲ್ಲಿ. “ಆಪತ್ತಿನ” ಸಮಯದಲ್ಲಿ ವಿಶೇಷವಾಗಿ ಒಬ್ಬ ಸ್ನೇಹಿತನು ಬೇಕಾಗುತ್ತಾನೆ. ಕೀರ್ತನೆಗಾರ ಆಸಾಫನು ತೀವ್ರ ಭಾವನಾತ್ಮಕ ಸಂಕ್ಷೋಭೆಯನ್ನು ಅನುಭವಿಸಿದರೂ, ಸ್ನೇಹಿತನೋಪಾದಿ ದೇವರಿಗೆ ಹತ್ತಿರವಾಗಿ ಎಳೆಯಲ್ಪಟ್ಟಿದ್ದನು. ಹೀಗೆ, ಅಂತರ್ಯದ ವೇದನೆಯಿಂದ ಅವನ ‘ಹೃದಯ ನೊಂದಿಹೋಗಿ’ದ್ದರೂ ಅವನಂದದ್ದು: “ನನ್ನ ಹೃದಯದ ಬಂಡೆಯು ದೇವರೇ.” (ಕೀರ್ತನೆ 73:21, 26, 28, NW) ಆಸಾಫನ ಭಾವನೆಯನ್ನು ನಿಜವಾಗಿ ತಿಳಿದುಕೊಂಡ ಯೆಹೋವನು, ಅವನಿಗೆ ಭಾವನಾತ್ಮಕ ಬೆಂಬಲವನ್ನು ಕೊಟ್ಟನು. ಆಸಾಫನು ನಿರೀಕ್ಷೆಯನ್ನೂ ಧೈರ್ಯವನ್ನೂ ಕಳೆದುಕೊಳ್ಳದಂತೆ ಯೆಹೋವನು ಅವನಿಗೆ ಒಂದು ದೃಢಗೊಳಿಸುವ ಪ್ರಭಾವವಾಗಿದ್ದನು.
ತದ್ರೀತಿಯಲ್ಲಿ ನಮ್ಮ ಸ್ವರ್ಗೀಯ ಸ್ನೇಹಿತನು ವಿಪತ್ಕಾಲದಲ್ಲಿ ನಿಮಗೆ ಒಂದು ಬಂಡೆಯಂತಹ ಬುನಾದಿಯಾಗಿರಬಲ್ಲನು. ಒಬ್ಬಳು ಹದಿವಯಸ್ಕಳು ವೈಯಕ್ತಿಕ ಅನುಭವದ ಮೂಲಕ ಇದನ್ನು ಕಂಡುಕೊಂಡಳು. ಬಾನಿ ಎಂಬವಳು 13 ವರ್ಷ ಪ್ರಾಯದವಳಾಗಿದ್ದಾಗ, ಅವಳ ಚಿಕ್ಕ ಊರಿನ ಶಾಲಾ ಹುಡುಗಿಯರು ಅವಳ ಕುರಿತ ಕೆಟ್ಟದಾದ, ಮಿಥ್ಯಾಪವಾದದ ಗಾಳಿ ಸುದ್ದಿಯನ್ನು ಹರಡಿಸಿದರು. ಈ ಸುಳ್ಳನ್ನು ಪ್ರತಿಯೊಬ್ಬರು ನಂಬಿದರೋ ಎಂಬಂತೆ ಬಾನಿಗೆ ತೋರಿಬಂತು. ಅವಳ ಸಹಪಾಠಿಗಳಲ್ಲಿ ಅನೇಕರು ಅವಳನ್ನು ನಿರ್ದಯವಾಗಿ ಉಪಚರಿಸಿದರು, ಅವಮಾನಕರ ಹೆಸರುಗಳಿಂದಲೂ ಕರೆದರು. “ಅನೇಕ ಸಲ ರಾತ್ರಿಯಲ್ಲಿ ನಾನು ಮನೆಗೆ ಬಂದು ಕಣ್ಣೀರಿಡುತ್ತಿದ್ದೆ,” ಎಂದು ವಿವರಿಸಿದಳು ಬಾನಿ. “ಅದು ನನ್ನನ್ನು ಆಂತರ್ಯದಲ್ಲಿ ಬಹಳವಾಗಿ ನೋಯಿಸಿದುದರಿಂದ ನನ್ನನ್ನು ಕೊಂದುಕೊಳ್ಳುವ ಅನಿಸಿಕೆಯೂ ನನಗಾಯಿತು.” ಬೆಂಬಲಕ್ಕಾಗಿ ಅವಳು ತನ್ನ ಕೆಲವು ಸ್ನೇಹಿತೆಯರೆಡೆಗೆ ತೆರಳಿದಳು. “ಜನರೊಂದಿಗೆ ನಾನು ಮಾತಾಡಲು ಪ್ರಯತ್ನಿಸಿದೆ, ಆದರೆ ಅದು ಅವರಿಗೆ ತಿಳಿಯುವಂತೆ ತೋರಲಿಲ್ಲ. ನನ್ನ ಸಮಸ್ಯೆಯು ಏನೂ ಅಲ್ಲವೆಂದು ತೋರಿಬರುವಂತೆ ಅವರು ಮಾಡಿದರು. ಕೆಲವು ಸಲ ನನಗೆ ಬಹಳ ಒಂಟಿಯಾಗಿರುವ ಅನಿಸಿಕೆಯಾಯಿತು.” ಅಂತಹ ಸಂಕ್ಷೋಭೆಯ ನಡುವೆ ಅವಳನ್ನು ನಿರೀಕ್ಷಾಹೀನಳಾಗದಂತೆ ಇಟ್ಟದ್ದು ಯಾವುದು? ಅವಳು ಮುಂದುವರಿಸುವುದು: “ಯೆಹೋವನು ಇಲ್ಲದಿರುತ್ತಿದ್ದಲ್ಲಿ, ನಾನು ನನ್ನನ್ನು ಕೊಂದುಕೊಳ್ಳುತ್ತಿದ್ದೆ. ನಾನು ಆತನನ್ನು ಬಹಳವಾಗಿ ಪ್ರೀತಿಸುತ್ತೇನೆ. ಆತನು ನನ್ನ ಪರಮ ಸ್ನೇಹಿತನು.” ದೇವರೊಂದಿಗಿನ ಸ್ನೇಹವೇ ತನಗೆ ಆ ಜಜ್ಜುವ ಭಾವನಾತ್ಮಕ ಅನುಭವವನ್ನು ತಾಳಿಕೊಳ್ಳುವಂತೆ ನೆರವುನೀಡಿತು ಎಂದು ಈಗ ಅವಳಿಗೆ ತಿಳಿದಿದೆ.
ನಾವು ನಿರೀಕ್ಷಿಸಬಹುದಾದ ಸಂವೇದನೆಗಳನ್ನು ಇತರರು ನಮಗೆ ತೋರಿಸದಿರುವಾಗ, ಯೆಹೋವನು ನಮ್ಮ ಪರಿಸ್ಥಿತಿಗಳನ್ನು ತಿಳಿಯುತ್ತಾನೆ ಮತ್ತು ಸಂಭವಿಸಿದ್ದು ನಿಜವಾಗಿ ಏನೆಂದು ಆತನಿಗೆ ಗೊತ್ತದೆ ಎಂದು ತಿಳಿದಿರುವುದು ಒಂದು ಮಹಾ ಸಾಂತ್ವನವಾಗಿದೆ. ಅಲ್ಲದೆ, ನಮ್ಮ ಸ್ನೇಹಿತನು “ಕನಿಕರವುಳ್ಳ ತಂದೆಯೂ” ಆಗಿದ್ದಾನೆಂದು ತಿಳಿಯುವುದು, ನಾವು ನಿರ್ದಯವಾಗಿ ಉಪಚರಿಸಲ್ಪಟ್ಟಾಗ ಅಥವಾ ದೂಷಿಸಲ್ಪಟ್ಟಾಗಲೂ, ಒಂದು ದೊಡ್ಡ ಸಹಾಯವಾಗಿದೆ. ಕೆಲವುಸಾರಿ ನಮ್ಮ ಸ್ವಂತ ಹೃದಯವು ನಮ್ಮನ್ನು ಖಂಡಿಸೀತು, ಆದರೆ “ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆ.” (2 ಕೊರಿಂಥ 1:3, 4; 1 ಯೋಹಾನ 3:20) ವಿಷಯದ ಮೇಲೆ ಯೆಹೋವನ ದೃಷ್ಟಿಕೋನವನ್ನು ಪಡೆದುಕೊಳ್ಳುವುದು ನಿಜವಾಗಿ ಸಾಂತ್ವನಕರವಾಗಿರಬಲ್ಲದು. ದೃಷ್ಟಾಂತಕ್ಕೆ, ಒಬ್ಬ 13 ವರ್ಷ ಪ್ರಾಯದ ಹುಡುಗನು ಮೂವರು ಪುರುಷರಿಂದ ಲೈಂಗಿಕವಾಗಿ ಕ್ರೂರವಾಗಿ ಪೀಡಿಸಲ್ಪಟ್ಟನು. “ಆಮೇಲೆ, ನಾನು ಬಹು ಲಜ್ಜಿತನಾಗಿ ನನಗೆ ಸಂಭವಿಸಿದ ವಿಷಯಕ್ಕಾಗಿ ನನ್ನನ್ನು ನಾನೇ ತೆಗಳಿಕೊಳ್ಳತೊಡಗಿದೆ,” ಎಂದವನು ಒಪ್ಪಿದನು. “ನಾನು ಬಹಳ ಹತಾಶನಾದೆ.” ಅನಂತರ ಅವನು ಬಲಾತ್ಕಾರ ಸಂಭೋಗದ ವಿಷಯದಲ್ಲಿ ವಾಚ್ ಟವರ್ ಸೊಸೈಟಿಯ ಬೈಬಲಾಧಾರಿತ ಪ್ರಕಾಶನಗಳನ್ನು ಸಂಶೋಧಿಸಲು ತೊಡಗಿದನು. “ನಾನು ಈ ಮಾಹಿತಿಯನ್ನು ಓದಿದಾಗ, ನನ್ನ ಭಾವೂದ್ರೇಕವನ್ನು ತಡೆದುಕೊಳ್ಳಲಾರದೆ ಅತುಬ್ತಿಟ್ಟೆ. ನನ್ನ ಹೆಗಲ ಮೇಲಿಂದ ಒಂದು ಭಾರವಾದ ಹೊರೆಯು ತೆಗೆದುಹಾಕಲ್ಪಟ್ಟಂತೆ ನನಗೆ ಭಾಸವಾಯಿತು. ನಾನೊಂದು ಬಲಿಪಶುವಾಗಿದ್ದೆ. ಯೆಹೋವನ ಮೇಲೆ, ಕುಟುಂಬ, ಮತ್ತು ಸ್ನೇಹಿತರ ಮೇಲೆ ಆತುಕೊಳ್ಳುವ ಮೂಲಕ ಈ ದುರ್ದಮ್ಯ ಸಮಯವನ್ನು ಪಾರಾಗಲು ಶಕ್ತನಾದೆ.” ಆ ಬೈಬಲಾಧಾರಿತ ಮಾತುಗಳು ಎಂತಹ ಬೆಂಬಲವನ್ನು ಕೊಟ್ಟವು!
ದೇವರೊಂದಿಗಿನ ಸ್ನೇಹವು ಅನೇಕ ವಿಧಗಳಲ್ಲಿ ಸಹಾಯ ಮಾಡಬಲ್ಲದು! ಜೀವನದಲ್ಲಿ ನಿಜ ಭರವಸೆ ನಮಗಿರಬಲ್ಲದು, ದೇವರ ಮಾರ್ಗವನ್ನು ಅನುಸರಿಸಲು ಆಂತರಿಕ ಬಲವನ್ನು ವಿಕಸಿಸಬಲ್ಲೆವು, ಮತ್ತು ಆಪತ್ಕಾಲದಲ್ಲಿ ಬಂಡೆಯಂಥ ಬೆಂಬಲವನ್ನು ಪಡೆಯಬಲ್ಲೆವು. ಆದರೆ ನಾವು ಅಂತಹ ಒಂದು ಸ್ನೇಹವನ್ನು ಹೇಗೆ ಕಟ್ಟಬಲ್ಲೆವು? ಈ ಸರಣಿಯ ಒಂದು ಮುಂದಿನ ಲೇಖನವು ಅದನ್ನು ವಿವರಿಸುವುದು.
[ಪುಟ 24 ರಲ್ಲಿರುವ ಚಿತ್ರ]
ದೇವರು ‘ನಿಮ್ಮ ಹೃದಯದ ಬಂಡೆ’ಯಾಗಿ ಪರಿಣಮಿಸಬಲ್ಲನು