ಭಾರತದ ಸ್ತ್ರೀಯರು 21ನೆಯ ಶತಮಾನದೊಳಗೆ ಪ್ರವೇಶಿಸುತ್ತಿರುವುದು
ಭಾರತದ ಎಚ್ಚರ! ಸುದ್ದಿಗಾರರಿಂದ
ಅವರು ಎತ್ತರವಾಗಿದ್ದಾರೆ, ಕುಳ್ಳಗಿದ್ದಾರೆ. ಅವರು ತೆಳ್ಳಗಿದ್ದಾರೆ, ದಪ್ಪಗಿದ್ದಾರೆ. ಅವರು ವಿನೋದಶೀಲರಾಗಿದ್ದಾರೆ, ನಿಷ್ಠುರರಾಗಿದ್ದಾರೆ. ಅವರು ಅಪಾರ ಶ್ರೀಮಂತರಾಗಿದ್ದಾರೆ, ಕಡು ಬಡವರಾಗಿದ್ದಾರೆ. ಅವರು ಉಚ್ಚ ಶಿಕ್ಷಣವನ್ನು ಪಡೆದವರಾಗಿದ್ದಾರೆ, ಸಂಪೂರ್ಣ ಅನಕ್ಷರಸ್ಥರಾಗಿದ್ದಾರೆ. ಅವರು ಯಾರು? ಅವರು ಭಾರತದ ಸ್ತ್ರೀಯರು. ಮತ್ತು ಅವರು ಎತ್ತ ಸಾಗುತ್ತಿದ್ದಾರೆ? ಅವರು 21ನೆಯ ಶತಮಾನದೊಳಗೆ ಪ್ರವೇಶಿಸುತ್ತಿದ್ದಾರೆ.
ಭಾರತದ ಹೊರಗೆ ಜೀವಿಸುತ್ತಿರುವ ಹೆಚ್ಚಿನ ಜನರಿಗೆ, ಭಾರತೀಯ ಸ್ತ್ರೀಯೊಬ್ಬಳ ಬಿಂಬವು, ಸೊಬಗು, ಸೌಂದರ್ಯ, ರಹಸ್ಯ, ಮತ್ತು ಮೋಹಕ ಶಕ್ತಿಯ ಬಿಂಬವಾಗಿದೆ. ಹೆಂಡತಿಯರಿಗಾಗಿ ಅನೇಕ ಪುರುಷರು ಭಾರತದ ಕಡೆಗೆ ಎದುರುನೋಡುವುದು, ಸ್ವಲ್ಪಮಟ್ಟಿಗೆ ಭಾರತೀಯ ಸ್ತ್ರೀಯರು ಪಾಶ್ಚಾತ್ಯದಲ್ಲಿರುವ ಹೆಚ್ಚು ಸ್ವಾವಲಂಬಿಗಳಾದ ತಮ್ಮ ಸಹೋದರಿಯರಿಗಿಂತ ಅಧೀನರಾಗಿರುವ, ತಮ್ಮ ಗಂಡಂದಿರನ್ನು ಮೆಚ್ಚಿಸುವ, ಮತ್ತು ಉತ್ತಮ ಗೃಹಿಣಿಯರಾಗಿರುವ ಅಧಿಕ ಒಲವುಳ್ಳವರೆಂಬ ಅಭಿಪ್ರಾಯದಿಂದಲೇ. ಆದರೆ ವಿವಿಧ ಕುಲಸಂಬಂಧದ, ಧಾರ್ಮಿಕ, ಮತ್ತು ಸಾಮಾಜಿಕ ಹಿನ್ನೆಲೆಗಳ ಬದಲಾವಣೆ ಹೊಂದುತ್ತಿರುವ ಈ ವಿಶಾಲವಾದ ನಾಡಿನಲ್ಲಿ, ಪ್ರತಿನಿಧಿರೂಪದ ಒಬ್ಬ ಭಾರತೀಯ ಸ್ತ್ರೀಯನ್ನು ವರ್ಣಿಸುವುದು ತಪ್ಪು ಅಭಿಪ್ರಾಯವನ್ನು ಕೊಡುವುದಾಗಿದೆ. ಎಲ್ಲ ರೀತಿಯ ಸ್ತ್ರೀಯರು ಈ ಆಕರ್ಷಕ ನಾಡಿನಲ್ಲಿ ಜೀವಿಸುತ್ತಾರೆ.
ಭಾರತದ ಇತಿಹಾಸವು, ಶಾಂತಿಯುತವಾಗಿ ಇಲ್ಲವೆ ಬಲವಂತವಾಗಿ ಅಂತರ್ಗತಗೊಳಿಸಲ್ಪಟ್ಟ ಸಂಸ್ಕೃತಿಗಳ ಇತಿಹಾಸವಾಗಿದೆ. ಆದಿ ನೆಲಸಿಗರಾದ ದ್ರಾವಿಡರು ಎಲ್ಲಿಂದ ಬಂದರೆಂಬುದರ ಕುರಿತು ಊಹಾಪೋಹವಿದೆ. ಅವರ ಮೂಲವು, ಕ್ರೀಟ್ ದೇಶಕ್ಕೆ ವಿಶೇಷವಾದ ಸಂಬಂಧಗಳೊಂದಿಗೆ, ಆಸ್ಟ್ರೇಲಿಯನ್ ಮತ್ತು ದಕ್ಷಿಣ ಒಳನಾಡಿನ ಜನರ ಮಿಶ್ರಣದ ಮುಖಾಂತರವೆಂದು ತೋರುತ್ತದೆ. ಆರ್ಯರು ಮತ್ತು ಪಾರಸೀಕರು ವಾಯವ್ಯ ದಿಕ್ಕಿನಿಂದ ಮತ್ತು ಮಂಗೋಲಿಯದವರು ಈಶಾನ್ಯ ದಿಕ್ಕಿನಿಂದ ಭಾರತದೊಳಗೆ ಕಾಲಿರಿಸಿದಂತೆ, ದ್ರಾವಿಡರು ದಕ್ಷಿಣಕ್ಕೆ ಹೊರಟುಹೋದರು. ಆದುದರಿಂದ ನಾವು ಸಾಮಾನ್ಯವಾಗಿ ಕಾಣುವುದೇನೆಂದರೆ, ಎತ್ತರವಾಗಿ ಮತ್ತು ಗೌರ ವರ್ಣವಿರುವ ಒಲವುಳ್ಳವರಾಗಿದ್ದರೂ ಕಪ್ಪು ಕೂದಲು ಮತ್ತು ಕಣ್ಣುಗಳಿರುವ ಉತ್ತರದ ಸ್ತ್ರೀಯರಿಗಿಂತ ದಕ್ಷಿಣ ಭಾರತದ ಸ್ತ್ರೀಯರು ಕುಳ್ಳಗಾಗಿಯೂ ಕಪ್ಪು ವರ್ಣದವರಾಗಿಯೂ ಇರುತ್ತಾರೆ. ಈಶಾನ್ಯ ದಿಕ್ಕಿನಲ್ಲಿರುವ ಜನರಿಗೆ ಅನೇಕವೇಳೆ ಪ್ರಾಚ್ಯ ಗುಣಲಕ್ಷಣಗಳಿರುತ್ತವೆ.
ಭಾರತದಲ್ಲಿ ಸ್ತ್ರೀಯರ ಸ್ಥಾನಮಾನವನ್ನು ಸ್ಥಾಪಿಸುವುದರಲ್ಲಿ, ಧರ್ಮವು ಮಹತ್ತರವಾದೊಂದು ಪಾತ್ರವನ್ನು ವಹಿಸಿದೆ. ಆಧುನಿಕ ಭಾರತವು ಒಂದು ಜಾತ್ಯತೀತ ರಾಷ್ಟವ್ರಾಗಿರುವುದರಿಂದ, ಮುಂದುವರಿಯುವುದರಿಂದ ಸ್ತ್ರೀಯರನ್ನು ತಡೆದಿರುವ ಸಾಂಪ್ರದಾಯಿಕ ದೃಷ್ಟಿಕೋನಗಳನ್ನು ಬದಲಾಯಿಸಲು ಎಲ್ಲ ಪ್ರಯತ್ನವನ್ನು ಮಾಡಲಾಗುತ್ತಿದೆ. ಕೇವಲ ಶ್ರೀಮಂತ ಅಥವಾ ಪ್ರತಿಷ್ಠಿತ ಸ್ತ್ರೀಯರಿಗೆ ಮಾತ್ರವಲ್ಲ, ಎಲ್ಲರಿಗೂ ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿಸಲು ಮಹತ್ತರವಾದ ಕಾರ್ಯಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ. ಸಾಕ್ಷರತೆಯ ತರಗತಿಗಳು, ಹಳ್ಳಿಗಳಲ್ಲಿ ಉದ್ಯೋಗಾಭಿಮುಖವಾದ ತರಬೇತು, ಮತ್ತು ಹುಡುಗಿಯರಿಗಾಗಿ ಉಚಿತ ಶಿಕ್ಷಣವು, ಭಾರತೀಯ ಸ್ತ್ರೀತ್ವದ ಘನತೆಯನ್ನು ಉತ್ತಮಗೊಳಿಸುತ್ತಿವೆ.
ಮಹಾರಾಷ್ಟ್ರದ ರಾಜ್ಯದಲ್ಲಿ 1994ರ ಜೂನ್ 22ರಂದು, ಸ್ತ್ರೀಯರ ಕುರಿತು ಒಂದು ಸರಕಾರೀ ರಾಜ್ಯನೀತಿಯು ಬಿಡುಗಡೆಗೊಳಿಸಲ್ಪಟ್ಟಾಗ, ದೊಡ್ಡ ಸುಧಾರಣೆಯೊಂದನ್ನು ಮಾಡಲಾಯಿತು. ಭಾರತದ ಉಪ ರಾಷ್ಟ್ರಪತಿಗಳಾದ ಕೆ. ಆರ್. ನಾರಾಯಣನ್ ಅವರಿಂದ “ಐತಿಹಾಸಿಕ” ಮತ್ತು “ಕ್ರಾಂತಿಕಾರಿ” ಎಂಬುದಾಗಿ ವರ್ಣಿಸಲ್ಪಟ್ಟ ಈ ನೀತಿಯು, ಕೂಡೊಡೆಯತ್ವದ ಹಕ್ಕುಗಳು, ಪಾಲಕತನ, ವಸತಿ ಪ್ರಯೋಜನಗಳು ಮತ್ತು ಉದ್ಯೋಗದಲ್ಲಿ ಸಮಾನವಾದ ಅವಕಾಶಗಳಂತಹ ಸ್ತ್ರೀಯರ ಮೂಲಭೂತ ಸಮಸ್ಯೆಗಳಿಗೆ ಗಮನಹರಿಸಿತು.
ಹೆಚ್ಚಿನ ಸ್ತ್ರೀಯರು ಇನ್ನುಮೇಲೆ ಮನೆಯಲ್ಲಿ ನಿರ್ಬಂಧಿತರಾಗಿರದೆ, ಕಾಲೇಜುಗಳಿಗೆ ಹಾಜರಾಗಿ ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸಿದಂತೆ, ನೈತಿಕ ವಾತಾವರಣದಲ್ಲಿನ ಮಾರ್ಪಾಡುಗಳ ಪ್ರಶ್ನೆಯು ಎಬ್ಬಿಸಲ್ಪಟ್ಟಿದೆ. ಕಾಲೇಜುಗಳಲ್ಲಿ ಅಮಲೌಷಧದ ದುರುಪಯೋಗ ಮತ್ತು ಕ್ಷೀಣಿಸುತ್ತಿರುವ ನೀತಿತತ್ವಗಳ ಕುರಿತಾದ ವರದಿಗಳು ಕಂಡುಬರುತ್ತವೆ. ಮಾಧ್ಯಮವು ಕೆಲವು ಎಳೆಯ ಭಾರತೀಯ ಸ್ತ್ರೀಯರ ರೂಪಾಂತರದಲ್ಲಿ ಮಹತ್ತರವಾದೊಂದು ಪಾತ್ರವನ್ನು ವಹಿಸುತ್ತದೆ. 30 ವರ್ಷಗಳ ಹಿಂದಿನ ಭಾರತೀಯ ಚಲನಚಿತ್ರಗಳನ್ನು ಇಂದಿನ ಚಲನಚಿತ್ರಗಳಿಗೆ ಹೋಲಿಸುವಾಗ, ಸ್ತ್ರೀಯರ ಚಿತ್ರಣವು ಬಹಳವಾಗಿ ಮಾರ್ಪಟ್ಟಿದೆ ಎಂದು ಅನೇಕರು ಕಂಡುಕೊಳ್ಳುತ್ತಾರೆ. ಒಬ್ಬಾಕೆ ಭಾರತೀಯ ಸ್ತ್ರೀಯು ಹೇಳಿದ್ದು: “ನಾನು ಶಾಲೆಯಲ್ಲಿದ್ದಾಗ, ಚಲನಚಿತ್ರಗಳ ಹಿಂದಿನ ಗಂಭೀರ, ಶಾಂತ, ಮತ್ತು ಸ್ವತ್ಯಾಗಮಾಡುವ ನಾಯಕಿಯು, ದುಃಖಿಯಾದಾಗ ತನ್ನ ಗಂಡನನ್ನು ಮತ್ತು ಅತೆಮ್ತಾವಂದಿರನ್ನು ಬಿಟ್ಟು ತನ್ನ ಹಕ್ಕುಗಳಿಗಾಗಿ ಮತ್ತು ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಆಧುನಿಕ ಹುಡುಗಿಯಿಂದ ಸ್ಥಾನಪಲ್ಲಟಗೊಂಡಿದ್ದಾಳೆ.”
ಒಟ್ಟಿನಲ್ಲಿ, ಅನೇಕ ದೇಶಗಳೊಂದಿಗೆ ಹೋಲಿಸುವಾಗ, ಭಾರತವು ಇನ್ನೂ ನಡತೆ ಮತ್ತು ಉಡಿಗೆತೊಡಿಗೆಯಲ್ಲಿ ಮಿತವಾಗಿದೆ. ಅತ್ಯಂತ ಸಾಮಾನ್ಯವಾಗಿ ತೊಡಲ್ಪಡುವ ಉಡಿಗೆ, ಸುಂದರವಾದ ಸೀರೆಯು, ದೇಹದ ಹೆಚ್ಚಿನ ಭಾಗವನ್ನು ಮಿತವಾಗಿ ಮುಚ್ಚುತ್ತದ. ಎಳೆಯ ಸ್ತ್ರೀಯರಲ್ಲಿ, ವಿಶೇಷವಾಗಿ ಉತ್ತರದಲ್ಲಿ, ಸಡಿಲವಾದ ಪಾಯಿಜಾಮಗಳ ಮೇಲೆ ತೊಡುವಂತಹ ಸಡಿಲವಾದ ಉಡಿಗೆ, ಸಲ್ವಾರ್ ಕಮೀಸ್ ಜನಪ್ರಿಯವಾಗಿದೆ. ಬಾಂಬೆ, ಗೋವ, ಮತ್ತು ಕಲ್ಕತ್ತಾದಲ್ಲಿ ಮುಖ್ಯವಾಗಿ ಕಂಡುಕೊಳ್ಳಲ್ಪಡುವ ಪಾಶ್ಚಾತ್ಯ ಶೈಲಿಗಳು, ಸಾಮಾನ್ಯವಾಗಿ ಸಭ್ಯವಾದ ಮಾದರಿ ಮತ್ತು ನೀಳವಾಗಿರುತ್ತವೆ.
ಉದ್ಯೋಗದಲ್ಲಿ ಹೊಸ ಅವಕಾಶಗಳು
ಭಾರತೀಯ ಸ್ತ್ರೀಯರು 21ನೆಯ ಶತಮಾನದ ಕಡೆಗೆ ಮುಂದುವರಿದಂತೆ, ಯಾವ ರೀತಿಯ ಉದ್ಯೋಗ ಅವರಿಗೆ ಲಭ್ಯವಿದೆ? ಭಾರತದ ಜನಸಂಖ್ಯೆಯಲ್ಲಿ ಒಂದು ದೊಡ್ಡ ಪ್ರಮಾಣವು ಹಳ್ಳಿಗಳಲ್ಲಿ ಜೀವಿಸುತ್ತದೆ, ಮತ್ತು ಅವರ ಕೆಲಸವು ಬೇಸಾಯವಾಗಿದೆ. ಕೋಟಿಗಟ್ಟಲೆ ಜನರು ಹೊಲಗಳಲ್ಲಿ ಕೆಲಸಮಾಡುತ್ತಾರೆ. ಸ್ತ್ರೀಯರು ಪುರುಷರೊಂದಿಗೆ ಎಲ್ಲ ರೀತಿಯ ಹೊಲದ ಕೆಲಸವನ್ನು ಮಾಡುತ್ತಾ ದುಡಿಯುತ್ತಾರೆ. ನದಿಗಳು ಮತ್ತು ಬಾವಿಗಳಿಂದ ಬಹಳಷ್ಟು ದೂರದ ವರೆಗೆ ಅವರು ನೀರನ್ನೂ ಹೊತ್ತುಕೊಂಡು ಹೋಗುತ್ತಾರೆ ಮತ್ತು ಉರುವಲಿಗಾಗಿ ಪ್ರಯಾಸದಿಂದ ಸೌದೆಯನ್ನು ಕೂಡಿಸುತ್ತಾರೆ. ಕೆಲಸದ ಸಮಯದಲ್ಲಿ, ಶಿಶುಗಳು ಸೊಂಟದ ಮೇಲೆ ಕುಳಿತುಕೊಂಡಿರುತ್ತವೆ ಅಥವಾ ಮರಗಳಲ್ಲಿ ಕಟ್ಟಿದ ಜೋಳಿಗೆಗಳಲ್ಲಿ ಮಲಗಿಸಲ್ಪಟ್ಟಿರುತ್ತವೆ.
20ನೆಯ ಶತಮಾನವನ್ನು ಪ್ರವೇಶಿಸಿದಂದಿನಿಂದ, ಗ್ರಾಮೀಣ ಭಾರತೀಯ ಕುಟುಂಬಗಳು ಉದ್ಯೋಗವನ್ನು ಹುಡುಕುತ್ತಾ ಪಟ್ಟಣದ ಕ್ಷೇತ್ರಗಳೊಳಗೆ ನುಗ್ಗಿವೆ. ಸ್ತ್ರೀಯರು ಬಟ್ಟೆಯ ಮಿಲ್ಲುಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಕೆಲಸಮಾಡಿದ್ದಾರೆ. ಆದರೆ ಕೈಗಾರಿಕೆಯ ಆಧುನೀಕರಣವು, ಪುರುಷರಿಗಿಂತ ಕೆಲಸಮಾಡುವ ಸ್ತ್ರೀಯರನ್ನು ಹೆಚ್ಚಾಗಿ ಬಾಧಿಸಿತು. ಯಂತ್ರಗಳನ್ನು ನಡೆಸಲು ಪುರುಷರು ತರಬೇತು ಪಡೆದರು ಆದರೆ ಸ್ತ್ರೀಯರು ಪಡೆಯಲಿಲ್ಲ. ಇದು ಸ್ತ್ರೀಯರಿಗೆ ಹೆಚ್ಚಿನ ತೊಂದರೆಯನ್ನು ಉಂಟುಮಾಡಿತು. ಅವರು ಕಟ್ಟಡ ನಿವೇಶನಗಳಲ್ಲಿ ಸಾಮಗ್ರಿಗಳನ್ನು ಸಾಗಿಸುವಂತೆ, ಭಾರವಾದ ಗೋಣಿಯ ಚೀಲಗಳು ಹೊರಿಸಲ್ಪಟ್ಟ ಕೈಗಾಡಿಗಳನ್ನು ಎಳೆಯುವಂತೆ, ಬಳಸಿದ ಬಟ್ಟೆಗೆಳನ್ನು ಮಾರಾಟಮಾಡುವಂತೆ, ಅಥವಾ ಕಡಿಮೆ ಸಂಬಳ ಕೊಡುವ ಇತರ ಕೆಲಸವನ್ನು ಮಾಡುವಂತೆ ನಿರ್ಬಂಧಿಸಲ್ಪಟ್ಟರು.
ಸಾಮಾಜಿಕ ಸುಧಾರಕರು ಸ್ತ್ರೀಯರ ಸ್ಥಿತಿಯನ್ನು ಉತ್ತಮಗೊಳಿಸಲು ಪ್ರಯತ್ನಿಸಿದರು. ಎಸ್ಈಡಬ್ಲ್ಯೂಎ (ಸೆಲ್ಫ್ ಎಂಪ್ಲಾಯ್ಡ್ ವಿಮೆನ್ಸ್ ಅಸೊಸಿಯೇಷನ್)ಗಳಂತಹ ಚಳವಳಿಗಳು ತಲೆದೋರಿದವು. ಅವುಗಳ ಗುರಿಯು, ತಮಗೆ ಕೆಲಸಮಾಡಲು ಸಾಧ್ಯವಾಗುವಂತೆ ತಮ್ಮ ಆರೋಗ್ಯದ ಕಾಳಜಿವಹಿಸಲು, ಭ್ರಷ್ಟ ಆಚರಣೆಗಳಲ್ಲಿ ಸಿಲುಕಿಕೊಳ್ಳುವುದರಿಂದ ಪಾರಾಗಲು ಬೇಕಾಗುವಷ್ಟು ಶಿಕ್ಷಿತರಾಗಿರಲು, ತಮ್ಮ ಕೆಲಸದ ಕೌಶಲಗಳನ್ನು ಉತ್ತಮಗೊಳಿಸಲು, ತಮ್ಮ ಸ್ವಂತ ಬಂಡವಾಳವನ್ನು ಹೆಚ್ಚಿಸುವಂತೆ ಉಳಿತಾಯ ಮಾಡಲಿಕ್ಕಾಗಿ ಕಲಿಯಲು ಮತ್ತು ನೀತಿನಿಷ್ಠೆಗಳಿಲ್ಲದ ಸಾಲಕೊಡುವವರು ಬಲಾತ್ಕಾರದಿಂದ ಪಡೆಯುವ ಉನ್ನತವಾದ ಬಡ್ಡಿಯ ದರಗಳನ್ನು ತೊರೆಯಲು, ಅಶಿಕ್ಷಿತ ಮಹಿಳಾ ಕಾರ್ಮಿಕರಿಗೆ ಸಹಾಯ ಮಾಡುವುದಾಗಿತ್ತು. ಸ್ತ್ರೀಸ್ವಾತಂತ್ರ್ಯವಾದವನ್ನು ಒಂದು ಸಾಮಾಜಿಕ ಉಪಕರಣದಂತೆ ಉಪಯೋಗಿಸುವುದರ ಕುರಿತು ಕೇಳಲ್ಪಟ್ಟಾಗ, ಪ್ರಖ್ಯಾತ ಸಮಾಜವಾದಿ ಸರೀನ ಭಟ್ಟಿ ಹೇಳಿದ್ದು: “ಭಾರತದಲ್ಲಿ ಸ್ತ್ರೀಸ್ವಾತಂತ್ರ್ಯವಾದವೆಂದರೆ, ಸ್ತ್ರೀಯರ ಸಮಸ್ಯೆಗಳಿಗೆ ಕಿವಿಗೊಡುವುದು, ಅವರನ್ನು ಸಂಘಟಿಸುವುದು, ಆರೋಗ್ಯ ಮತ್ತು ಪೋಷಣೆಯೊಂದಿಗೆ ಅವರಿಗೆ ತಾಂತ್ರಿಕ ಶಿಕ್ಷಣವನ್ನು ನೀಡಲು ಪ್ರಯತ್ನಿಸುವುದಾಗಿದೆ.”
ಅದೇ ಸಮಯದಲ್ಲಿ, ಸಾಮಾಜಿಕ ಮಟ್ಟದಲ್ಲಿ ಉನ್ನತವೆಂದು ಪರಿಗಣಿಸಲ್ಪಡುವ ಶ್ರೀಮಂತ ಕುಟುಂಬಗಳಿಂದ ಬರುವ ಶಿಕ್ಷಿತ ಸ್ತ್ರೀಯರ, ಅಷ್ಟೇ ಅಲ್ಲದೆ ಮಧ್ಯಮ ವರ್ಗದ ಕುಟುಂಬಗಳ ಸ್ತ್ರೀಯರ ಸನ್ನಿವೇಶದ ಕುರಿತು ದೃಷ್ಟಿಕೋನಗಳು ಬದಲಾಗುತ್ತಿವೆ. ಈಗ ಎರಡೂ ಹಿನ್ನೆಲೆಗಳಿಂದ ಬರುವ ಸ್ತ್ರೀಯರನ್ನು ಕೇವಲ ಕಲಿಸುವ ಅಥವಾ ವೈದ್ಯಕೀಯ ಕ್ಷೇತ್ರಗಳಲ್ಲಿ ಮಾತ್ರವಲ್ಲ, ಚಟುವಟಿಕೆಯ ಎಲ್ಲ ಕ್ಷೇತ್ರಗಳಲ್ಲಿ ಕಂಡುಕೊಳ್ಳಸಾಧ್ಯವಿದೆ. ಅವರಿಗೆ ಏರ್ಲೈನ್ ವಿಮಾನಚಾಲಕರು, ರೂಪದರ್ಶಿಗಳು, ಗಗನಸಖಿಯರು ಮತ್ತು ಪೊಲೀಸರಂತಹ ವೃತ್ತಿಗಳಿವೆ ಮತ್ತು ಉಚ್ಚ ಕಾರ್ಯನಿರ್ವಾಹಕ ಸ್ಥಾನಗಳಲ್ಲಿ ಅವರನ್ನು ಕಾಣಬಹುದು. ಅನೇಕ ವರ್ಷಗಳ ಕಾಲ ಭಾರತದಲ್ಲಿ, ಲೋಕದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದಲ್ಲಿ ಚುನಾಯಿಸಲ್ಪಟ್ಟ ಪ್ರಧಾನ ಮಂತ್ರಿಯಾಗಿ ಒಬ್ಬ ಸ್ತ್ರೀಯಿದ್ದರು. ಭಾರತೀಯ ಸ್ತ್ರೀಯರು ಸಶಸ್ತ್ರ ಸೇನೆಗಳಲ್ಲಿ ನಿಯೋಗಿಗಳ ಅಧಿಕಾರವನ್ನು ಪಡೆದಿರುತ್ತಾರೆ ಮತ್ತು ವಕೀಲರೂ ಮುಖ್ಯ ನ್ಯಾಯಾಧೀಶರೂ ಆಗಿದ್ದಾರೆ, ಮತ್ತು ಸಾವಿರಾರು ಮಂದಿ ವ್ಯವಸ್ಥಾಪಕರಂತೆ ವ್ಯಾಪಾರದಲ್ಲಿ ತೊಡಗಿದ್ದಾರೆ.
ವಿವಾಹದ ಕ್ಷೇತ್ರದಲ್ಲಿ ಬದಲಾವಣೆಗಳು
ಸ್ವಾವಲಂಬಿ ಉದ್ಯೋಗದ ಕಡೆಗಿನ ಈ ಒಲವಿನಿಂದಾಗಿ, ವಿವಾಹದ ಕುರಿತು ಆಧುನಿಕ ಭಾರತೀಯ ಸ್ತ್ರೀಗೆ ಹೇಗನಿಸುತ್ತದೆ? 19ನೆಯ ಮತ್ತು 20ನೆಯ ಶತಮಾನಗಳು ವಿವಾಹಿತ ಭಾರತೀಯ ಸ್ತ್ರೀಯರಿಗೆ ಮಹತ್ತರವಾದ ಬದಲಾವಣೆಗಳನ್ನು ತಂದವು. ಒಬ್ಬ ವಿಧವೆಯು ತನ್ನ ಗಂಡನ ಚಿತೆಯ ಮೇಲೆ ತನ್ನನ್ನು ಸ್ವಇಚ್ಛೆಯಿಂದ ಸುಟುಕ್ಟೊಳ್ಳುವ, ಸತಿಯೆಂದು ಕರೆಯಲ್ಪಟ್ಟ ಆ ಪ್ರಾಚೀನ ರೂಢಿಯು ಬ್ರಿಟಿಷ್ ಆಳಿಕೆಯಲ್ಲಿ ರದ್ದುಮಾಡಲ್ಪಟ್ಟಿತು. ಬಾಲ್ಯ ವಿವಾಹವು ಕಾನೂನಿನ ಮೂಲಕ ನಿಷೇಧಿಸಲ್ಪಟ್ಟಿದೆ; ಆದಕಾರಣ 18ರ ಪ್ರಾಯದ ಕೆಳಗಿರುವ ಒಬ್ಬ ಹುಡುಗಿಯು ಈಗ ಕಾನೂನುಬದ್ಧವಾಗಿ ವಿವಾಹವಾಗಲು ಸಾಧ್ಯವಿಲ್ಲ. ಹುಡುಗಿಯ ಕುಟುಂಬದಿಂದ ವರದಕ್ಷಿಣೆಯನ್ನು ಹಕ್ಕುಹಿಡಿದು ಕೇಳುವುದು ಕೂಡ ಕಾನೂನುಬದ್ಧವಾಗಿ ನಿಷೇಧಿಸಲ್ಪಟ್ಟಿದೆ, ಆದರೆ ಈ ಅನಿಷ್ಟವು ಇನ್ನೂ ಅಸ್ತಿತ್ವದಲ್ಲಿದೆ. ಅನೇಕ ಸಾವಿರಾರು ಹರೆಯದ ವಧುಗಳು ಒಂದಲ್ಲ ಒಂದು ವಿಧದಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಅವರ ಕುಟುಂಬವು ಸಾಕಷ್ಟು ವರದಕ್ಷಿಣೆಯನ್ನು ಒದಗಿಸಲು ವಿಫಲವಾಗಿರುವುದರಿಂದ, ಇಲ್ಲವೆ ಎರಡನೆಯ ವಿವಾಹದಿಂದ ಹೆಚ್ಚು ಹಣವನ್ನು ಪಡೆಯಸಾಧ್ಯವಿರುವುದರಿಂದ ಹಾಗಾಗಿರುತ್ತದೆ.
ಕ್ರಮೇಣವಾಗಿ, ವರದಕ್ಷಿಣೆ ಮರಣಗಳಿಗೆ ಸಂಬಂಧಿಸಿದ ಕಾರಣಗಳಿಗೆ ಗಮನವನ್ನು ಕೊಡಲಾಗುತ್ತಿದೆ. ಸಾಂಪ್ರದಾಯಿಕವಾಗಿ, ವಿವಾಹವಾದಾಗ ಒಬ್ಬಾಕೆ ಭಾರತೀಯ ಹುಡುಗಿಯು ತನ್ನ ಗಂಡನೊಂದಿಗೆ ಅವನ ಹೆತ್ತವರ ಮನೆಗೆ ಹೋದಳು ಮತ್ತು ತನ್ನ ಮರಣದ ತನಕ ಅಲ್ಲಿ ಉಳಿದಳು. ಯಾವ ಪರಿಸ್ಥಿತಿಯ ಕೆಳಗೂ ಅವಳ ಹೆತ್ತವರು ಅವಳನ್ನು ಪುನಃ ತಮ್ಮ ಮನೆಗೆ ಕರೆದುಕೊಳ್ಳಲಾರರು. ಔಪಚಾರಿಕ ಶಿಕ್ಷಣದ ಕೊರತೆಯಿಂದ, ಹೆಚ್ಚಿನ ಸ್ತ್ರೀಯರಿಗೆ ತಮ್ಮ ಗಂಡಂದಿರ ಮನೆಯನ್ನು ಬಿಡಲು ಮತ್ತು ತಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ ಕೆಲಸಮಾಡಲು ಸಾಧ್ಯವಿರುತ್ತಿರಲಿಲ್ಲ. ಆದುದರಿಂದ ಹರೆಯದ ಸ್ತ್ರೀಯರು ಅನೇಕವೇಳೆ ಹಿಂಸಿಸಲ್ಪಟ್ಟರು ಮತ್ತು ಮರಣದ ಬೆದರಿಕೆಯು ಯಾವಾಗಲೂ ಅವರ ಮೇಲಿತ್ತು, ಮತ್ತು ಅತ್ಯಾಶೆಯ ಅತೆಮ್ತಾವಂದಿರನ್ನು ತೃಪ್ತಿಪಡಿಸಲು ಹೆಚ್ಚು ಹಣ ಅಥವಾ ಸಾಮಾನುಗಳನ್ನು ಒದಗಿಸಲು ಅವರ ಹೆತ್ತವರಿಗೆ ಸಾಧ್ಯವಾಗದಿದ್ದಲ್ಲಿ, ವಧುಗಳು ತಮ್ಮ ಕಟ್ಟಕಡೆಯ ಅಂತ್ಯಕ್ಕೆ ಮೌನವಾಗಿ ವ್ಯಥೆಪಡುತ್ತಾ ಸುಮ್ಮನೆ ಕಾದರು. ಇದು ಸಾಮಾನ್ಯವಾಗಿ ಸೊವ್ಟ್ ಸ್ಫೋಟಗೊಳ್ಳುವ ಅಥವಾ ಒಂದು ಸೂಕ್ಷ್ಮವಾದ ಸೀರೆಗೆ ಬೆಂಕಿ ಹಿಡಿಯುವ ಒಂದು ಯೋಜಿತ, ಮಾರಕ ಆಕಸ್ಮಿಕ ಘಟನೆಯಾಗಿರುತ್ತಿತ್ತು.
ತನ್ನ ಜೀವನ ಗಂಡಾಂತರದಲ್ಲಿದೆ ಎಂದು ಒಬ್ಬ ವಿವಾಹಿತ ಸ್ತ್ರೀಗೆ ಅನಿಸುವಲ್ಲಿ, ಸಹಾಯಕ್ಕಾಗಿ ಹೋಗುವಂತೆ ಆಕೆಗೆ ಈಗ ಅವಕಾಶವನ್ನು ನೀಡುವ ಕಾನೂನು, ಸ್ತ್ರೀಯರ ಪೊಲೀಸ್ ಕೇಂದ್ರಗಳು, ಮತ್ತು ಸ್ತ್ರೀಯರ ನ್ಯಾಯಾಲಯಗಳು ಹಾಗೂ ಬೆಂಬಲ ನೀಡುವ ಗುಂಪುಗಳಿವೆ. ಹೆಚ್ಚಿನ ಶಿಕ್ಷಣವು ಲಭ್ಯವಿರುವುದರೊಂದಿಗೆ ಮತ್ತು ಅವರಿಗಾಗಿ ಉದ್ಯೋಗ ಅವಕಾಶಗಳು ತೆರೆದುಕೊಳ್ಳುವುದರೊಂದಿಗೆ, ಕೆಲವು ಸ್ತ್ರೀಯರು ವಿವಾಹವಾಗದಿರಲು ಅಥವಾ ತಮಗಾಗಿ ಒಂದು ಜೀವನೋಪಾಯವನ್ನು ಮಾಡಿಕೊಂಡ ತರುವಾಯ ವಯಸ್ಸಾದಾಗ ವಿವಾಹವಾಗಲು ಆರಿಸಿಕೊಳ್ಳುತ್ತಾರೆ. ಹೀಗೆ, ಅನೇಕವೇಳೆ ಕಠೋರ ಪ್ರಭುತ್ವಕ್ಕೆ ನಡೆಸುವ ಪುರುಷರ ಮೇಲಿನ ಅವಲಂಬನೆಯು ಅಷ್ಟು ಮಹತ್ತರವಾಗಿರುವುದಿಲ್ಲ.
ಹೆಚ್ಚಿನ ಗಮನವನ್ನು ಪಡೆಯುತ್ತಿರುವ ಹೆಣ್ಣು ಶಿಶುಗಳು
ಸ್ತ್ರೀಯರನ್ನು ಪ್ರಭಾವಿಸುವ ಇನ್ನೊಂದು ಸಮಸ್ಯೆಯು, ಗಂಡು ಮಕ್ಕಳಿಗಾಗಿರುವ ಅತಿಯಾದ ಬಯಕೆ. ಮತ್ತು ಅದು 21ನೆಯ ಶತಮಾನವು ಸಮೀಪಿಸಿದಂತೆ ಬದಲಾಗುತ್ತಿದೆ. ಆರ್ಥಿಕ ಪರಿಗಣನೆಗಳೊಂದಿಗೆ, ಪ್ರಾಚೀನ ಧಾರ್ಮಿಕ ಬೋಧನೆಗಳ ಮೇಲೆ ಆಧಾರಿತವಾದ ಈ ಕಲ್ಪನೆಯು, ಅನೇಕವೇಳೆ ಹೆಣ್ಣು ಶಿಶುಗಳ ಹತ್ಯೆಗೆ ಮತ್ತು ಹುಡುಗರಿಗೆ ಕೊಡಲ್ಪಡುವುದಕ್ಕಿಂತ ಹುಡುಗಿಯರಿಗೆ ಕಡಿಮೆ ಆಹಾರ, ಶಿಕ್ಷಣ, ಮತ್ತು ಆರೋಗ್ಯ ಆರೈಕೆಯನ್ನು ನೀಡುವ ಮೂಲಕ ಅವರ ಕೆಟ್ಟ ಉಪಚಾರಕ್ಕೆ ನಡೆಸಿದೆ.
ಇತ್ತೀಚಿನ ಸಮಯಗಳಲ್ಲಿ ಭ್ರೂಣದ ಲಿಂಗವನ್ನು ನಿರ್ಧರಿಸಲು—ಅನೇಕವೇಳೆ ಹೆಣ್ಣು ಶಿಶುಗಳ ಗರ್ಭಪಾತಕ್ಕೆ ನಡೆಸುತ್ತದೆ—ಉಲ್ಬದ್ರವಚೂಷಣದ ಬಳಕೆಯು ವಿಸ್ತಾರವಾಗಿ ಹರಡಿದೆ. ಕಾನೂನಿನ ಮೂಲಕ ವಿಧಿಬದ್ಧಮಾಡಲ್ಪಟ್ಟಿದ್ದರೂ, ಈ ಕಾರ್ಯವಿಧಾನವು ಇನ್ನೂ ಒಂದು ಸಾಮಾನ್ಯ ರೂಢಿಯಾಗಿದೆ. ಹೆಣ್ಣು ಶಿಶುವಿಗಿಂತ ಒಂದು ಗಂಡು ಮಗುವಿನ ಕಡೆಗೆ ಹೆಚ್ಚು ಇಷ್ಟತೋರುವ ದೃಷ್ಟಿಕೋನವನ್ನು ಬದಲಾಯಿಸಲು ಶ್ರದ್ಧಾಪೂರ್ವಕ ಪ್ರಯತ್ನಗಳು ಮಾಡಲ್ಪಡುತ್ತಿವೆ.
ಮಾನವ ನಿರ್ಮಿತ ತತ್ವಜ್ಞಾನಗಳು ಸ್ತ್ರೀಯರನ್ನು ಅನೇಕ ವಿಧಗಳಲ್ಲಿ ಕಡೆಗಣಿಸಿವೆ. ವಿಧವೆಯರನ್ನು ನಡೆಸಿಕೊಳ್ಳುವ ರೀತಿಯು ಒಂದು ಉದಾಹರಣೆಯಾಗಿದೆ. ಪ್ರಾಚೀನ ಭಾರತದಲ್ಲಿ, ವಿಧವೆಯರ ಪುನರ್ವಿವಾಹವು ಸ್ವೀಕಾರಾರ್ಹವಾಗಿತ್ತು. ಆದರೆ ಸುಮಾರು ಸಾ.ಶ. ಆರನೆಯ ಶತಮಾನದಿಂದ, ನ್ಯಾಯಗಳನ್ನು ರಚಿಸುವವರು ಇದನ್ನು ವಿರೋಧಿಸಿದರು ಮತ್ತು ವಿಧವೆಯರ ಪರಿಸ್ಥಿತಿಯು ಶೋಚನೀಯವಾಯಿತು. ಪುನರ್ವಿವಾಹವು ನಿರಾಕರಿಸಲ್ಪಟ್ಟು, ಅನೇಕವೇಳೆ ತಮ್ಮ ಸತ್ತ ಗಂಡಂದಿರ ಸ್ವತ್ತುಗಳಿಂದ ಸಂಬಂಧಿಕರ ಮೂಲಕ ವಂಚಿತರಾಗಿ ಮಾಡಲ್ಪಟ್ಟು, ಕುಟುಂಬದ ಮೇಲೆ ಒಂದು ಶಾಪದಂತೆ ಪರಿಗಣಿಸಲ್ಪಡುವ ಅನೇಕ ವಿಧವೆಯರು, ದುರುಪಯೋಗ ಮತ್ತು ಅವಮಾನದ ಜೀವನಕ್ಕಿಂತ ತಮ್ಮ ಗಂಡಂದಿರ ಚಿತೆಯ ಮೇಲೆ ಆಹುತಿಕೊಟ್ಟುಕೊಳ್ಳುವುದನ್ನು ಆರಿಸಿಕೊಂಡರು.
19ನೆಯ ಶತಮಾನದ ಕೊನೆಯ ಭಾಗದಿಂದ, ಇಂತಹ ಸ್ತ್ರೀಯರ ಹೊರೆಯನ್ನು ಹಗುರಗೊಳಿಸಲು ಸುಧಾರಕರು ಪ್ರಯತ್ನಿಸಿದರು, ಆದರೆ ಆಳವಾಗಿ ಬೇರೂರಿರುವ ಭಾವಗಳು ಪಟ್ಟು ಹಿಡಿದಿರುತ್ತವೆ. ಅನೇಕ ಸಮುದಾಯಗಳಲ್ಲಿ ವಿಧವೆಯ—ಕೆಲವೊಮ್ಮೆ ವಯಸ್ಸಾದ ಗಂಡನು ಸತ್ತಿರುವ ಬಹಳ ಎಳೆಯ ಸ್ತ್ರೀಯ—ಪರಿಸ್ಥಿತಿಯು ನಿಜವಾಗಿಯೂ ಸಂಕಟಕರವಾಗಿರುತ್ತದೆ. ಇನ್ಸ್ಟಿಟ್ಯೂಟ್ ಫಾರ್ ಡೆವಲಪ್ಮೆಂಟ್ ಸಡ್ಟೀಸ್ನ ಡಾ. ಶಾರದಾ ಜೇನ್ ಹೇಳುವುದು: “ಸ್ತ್ರೀಯರು ಯಾವ ರೀತಿಯಲ್ಲಿ ಒಗ್ಗಿಸಲ್ಪಟ್ಟಿದ್ದಾರೆಂದರೆ, ಅವರ ಸಂಪೂರ್ಣ ವ್ಯಕ್ತಿತ್ವವು ಗಂಡನ ಸ್ಥಾನಮಾನದ ಮೇಲೆ ಅವಲಂಬಿಸಿದೆ. ಈ ನಿಜತ್ವದಿಂದ ವೈಧವ್ಯದ ಗಾಯ ಮುಖ್ಯವಾಗಿ ಹುಟ್ಟುತ್ತದೆ.” ವಿಧವೆಯರು 21ನೆಯ ಶತಮಾನದ ಕಡೆಗೆ ಘನತೆಯಿಂದ ಸಾಗುವಂತೆ ಸಹಾಯಮಾಡಲು ಪ್ರಯತ್ನಗಳು ಮಾಡಲ್ಪಡುತ್ತಿವೆ.
ಗ್ರಾಮೀಣ ಹಾಗೂ ನಗರದಲ್ಲಿಯ ವ್ಯತ್ಯಾಸಗಳು
ನಗರದ ಸ್ತ್ರೀಯರು ಮತ್ತು ಗ್ರಾಮೀಣ ಸ್ತ್ರೀಯರಲ್ಲಿ ಮಹತ್ತರವಾದ ವ್ಯತ್ಯಾಸವಿದೆ. ಗ್ರಾಮೀಣ ಸ್ತ್ರೀಯರಲ್ಲಿ 25 ಪ್ರತಿಶತ ಅಕ್ಷರಸ್ಥರೆಂದು ಅಂದಾಜುಮಾಡಲಾಗಿದೆ; ನಗರಗಳಲ್ಲಿ ಹೆಚ್ಚಿನ ಪ್ರತಿಶತವು ಶಾಲೆಗಳು ಮತ್ತು ಕಾಲೇಜುಗಳಿಂದ ಪ್ರಯೋಜನ ಪಡೆಯುತ್ತದೆ. ಗ್ರಾಮೀಣ ಸ್ತ್ರೀಯರಿಗೆ ಸಹಾಯ ಮಾಡಲು, ಸಾಮಾಜಿಕ ಕೆಲಸಗಾರರು ಸಾಕ್ಷರತೆಯ ತರಗತಿಗಳನ್ನು, ಆರೋಗ್ಯ ಆರೈಕೆಯ ತರಬೇತನ್ನು ಮತ್ತು ಉದ್ಯೋಗ ಯೋಜನೆಗಳನ್ನು ಏರ್ಪಡಿಸುತ್ತಾರೆ. ಕೆಲವು ರಾಜ್ಯ ಸರಕಾರಗಳು ಸಾರ್ವಜನಿಕ ಕ್ಷೇತ್ರಗಳಲ್ಲಿ, ಸಹಕಾರ ಸಂಘಗಳಲ್ಲಿ ಮತ್ತು ಸ್ಥಳೀಯ ಸ್ವರಾಜ್ಯದಲ್ಲಿ 30 ಪ್ರತಿಶತ ಅವಕಾಶಗಳನ್ನು ಸ್ತ್ರೀಯರಿಗಾಗಿ ಕಾದಿರಿಸಿವೆ. ಸ್ತ್ರೀಯರ ಚಳವಳಿಗಳು, ಭಾರತದಲ್ಲಿ ಕೋಟಿಗಟ್ಟಲೆ ಸ್ತ್ರೀಯರ ಜೀವನ ಪರಿಸ್ಥಿತಿಯಾಗಿರುವ ನೋವು ಮತ್ತು ಸಂಕಟವನ್ನು ಕಡಿಮೆಮಾಡಲು ಪ್ರಯತ್ನಿಸುತ್ತವೆ. ಸ್ವಲ್ಪಮಟ್ಟಿಗೆ ಇವು ಯಶಸ್ಸನ್ನು ಕಂಡಿವೆ. ಆದುದರಿಂದ, ಭಾರತದ ಸ್ತ್ರೀಯರ ಭವಿಷ್ಯತ್ತಿನ ಕುರಿತು ನಾವೇನು ಹೇಳಬಲ್ಲೆವು?
21ನೆಯ ಶತಮಾನದೊಳಗೆ ಪ್ರವೇಶಿಸುತ್ತಿರುವುದು!
ಭಾರತೀಯ ಸ್ತ್ರೀಯ ಪಾತ್ರವು ಆಕೆ 21ನೆಯ ಶತಮಾನವನ್ನು ಪ್ರವೇಶಿಸುತ್ತಿರುವಂತೆ ಬದಲಾಗುತ್ತಿದೆಯೊ? ಹೌದು, ಮತ್ತು ಅದು ತೀವ್ರವಾಗಿಯೇ. ಆದರೆ ಭಾರತೀಯ ಸ್ತ್ರೀಯರು ಲೋಕದಾದ್ಯಂತ ತಮ್ಮ ಸಹೋದರಿಯರು ಎದುರಿಸುವ ತದ್ರೀತಿಯ ಸನ್ನಿವೇಶವನ್ನೇ ಎದುರಿಸುತ್ತಾರೆ. ಪ್ರಗತಿಯಿದೆ ಆದರೆ ಪ್ರತಿಬಂಧಗಳೂ ಇವೆ. ನಿರೀಕ್ಷೆಯಿದೆ ಆದರೆ ನಿರಾಶೆಯೂ ಇದೆ. ಸುಂದರವಾದ ಮನೆಗಳೂ ಭೋಗಪ್ರಧಾನವಾದ ಜೀವನ ಶೈಲಿಗಳೂ ಇವೆ, ಆದರೆ ಕೊಳಚೆ ಪ್ರದೇಶಗಳು, ಕಡು ಬಡತನ, ಮತ್ತು ಕಠಿನವಾದ ಹಸಿವೂ ಇದೆ. ಕೋಟಿಗಟ್ಟಲೆ ಜನರಿಗೆ ಅವರು ಪಡೆಯಸಾಧ್ಯವಿರುವಂತಹದ್ದು ಕನಿಷ್ಠ ಜೀವನಾಧಾರವಾಗಿದೆ. ಇತರರು ಲೋಕವು ಅರ್ಪಿಸುವ ಎಲ್ಲವನ್ನು ಪಡೆದಿರುವಂತೆ ತೋರುತ್ತದೆ. ಭಾರತದಲ್ಲಿರುವ ಅನೇಕ ಸ್ತ್ರೀಯರಿಗೆ ಭವಿಷ್ಯವು ಅನಿಶ್ಚಿತವಾಗಿದೆ; ಅವರಿಗೆ ಆಕಾಂಕ್ಷೆಗಳಿವೆ ಆದರೆ ಸಂದೇಹಗಳೂ ಇವೆ.
ಕೆಲವರಿಗಾದರೊ, ವಿಶೇಷವಾಗಿ ಯೆಹೋವನ ರಾಜ್ಯದ ಆಳಿಕೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ಬರಲಿರುವ ಪ್ರಮೋದವನ ಭೂಮಿಯಲ್ಲಿ ನಿರೀಕ್ಷೆಯುಳ್ಳವರಿಗೆ, ಭವಿಷ್ಯವು ವಾಗ್ದಾನದೊಂದಿಗೆ ಉಜ್ವಲವಾಗಿದೆ. (ಪ್ರಕಟನೆ 21:1, 4, 5) ಇವರು, ಎಲ್ಲಿ ಸ್ತ್ರೀಯರು ಜೀವನವನ್ನು ಪೂರ್ತಿಯಾಗಿ ಅನುಭೋಗಿಸುವರೊ, ಆ 21ನೆಯ ಶತಮಾನವನ್ನು ಸಂಪೂರ್ಣ ಭರವಸೆಯಿಂದ ಎದುರುನೋಡುತ್ತಾರೆ.
[ಪುಟ 31 ರಲ್ಲಿರುವ ಚಿತ್ರ]
ಒಂದು ಕಟ್ಟಡ ನಿವೇಶನಕ್ಕೆ ಇಟ್ಟಿಗೆಗಳನ್ನು ಹೊತ್ತುಕೊಂಡು ಹೋಗುತ್ತಿರುವುದು
[ಪುಟ 32 ರಲ್ಲಿರುವ ಚಿತ್ರ]
ಮನೆಯಲ್ಲಿ ಬಳಕೆಗಾಗಿ ನೀರನ್ನು ಸೇದುತ್ತಿರುವುದು
[ಪುಟ 33 ರಲ್ಲಿರುವ ಚಿತ್ರ]
ಪುರುಷರೊಂದಿಗೆ ಸಮಾಲೋಚನೆಯಲ್ಲಿ
[ಪುಟ 33 ರಲ್ಲಿರುವ ಚಿತ್ರ]
ಕಂಪ್ಯೂಟರೊಂದನ್ನು ನಡೆಸುತ್ತಿರುವುದು