ನನ್ನನ್ನು ನಿಜವಾಗಿಯೂ ಪ್ರೀತಿಸಿದ ಕುಟುಂಬ
ಒಂದು ಮಗುವಿಗೆ, ಯಾವುದೇ ಮಗುವಿಗೆ, ಒಂದು ಕುಟುಂಬವು ಬಹಳಷ್ಟು ಪ್ರಾಮುಖ್ಯವಾಗಿದೆ. ಒಂದು ಉತ್ಸಾಹವುಳ್ಳ ಪ್ರೀತಿಯ ಕುಟುಂಬವು, ಮಗುವಿನ ಶಾರೀರಿಕ ಹಾಗೂ ಭಾವಾತ್ಮಕ ಅಗತ್ಯಗಳನ್ನು ಪೂರೈಸುತ್ತದೆ. ಅದು ತರಬೇತಿ, ಶಿಕ್ಷಣ, ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದು ಮಗುವಿನಲ್ಲಿ ಭದ್ರತೆಯ ಅನಿಸಿಕೆಯನ್ನುಂಟುಮಾಡುತ್ತದೆ. ನನಗೆ ಆದಂತೆ, ನಿಮ್ಮ ಕುಟುಂಬದಿಂದ ಹೊರತಳ್ಳಲ್ಪಡುವುದು ಎಂತಹ ಒಂದು ಏಟಾಗಿದೆ!
ಪೂರ್ವ ನೈಜಿರಿಯದಲ್ಲಿನ ಒಂದು ದೊಡ್ಡ ಕುಟುಂಬದಲ್ಲಿ ನಾನು ಜನಿಸಿದೆ. ನನ್ನ ತಂದೆ ಮುಖ್ಯಸ್ಥರಾಗಿದ್ದರು; ಅವರಿಗೆ ಏಳು ಮಂದಿ ಹೆಂಡತಿಯರಿದ್ದರು. ಅವರಿಗೆ 30 ಜನ ಮಕ್ಕಳಿದ್ದರು, ನಾನು 29ನೆಯವನಾಗಿದ್ದೆ.
ಒಂದು ದಿನ 1965ರಲ್ಲಿ, ನಾನು ಹತ್ತು ವರ್ಷದವನಾಗಿದ್ದಾಗ, ನಾನು ಶಾಲೆಯಿಂದ ಹಿಂದಿರುಗಿ, ಮೊಗಸಾಲೆಯಲ್ಲಿ ಕುಳಿತುಕೊಂಡಿದ್ದ ನನ್ನ ತಂದೆಯನ್ನು ಭೇಟಿಯಾದೆ. ಬ್ರೀಫ್ಕೇಸ್ಗಳನ್ನು ಹಿಡಿದುಕೊಂಡಿದ್ದ ಇಬ್ಬರು ಪುರುಷರು ಆವರಣದೊಳಗೆ ಬಂದರು ಮತ್ತು ಗೆಲುವಿನ ವಂದನೆಯ ಬಳಿಕ ತಮ್ಮನ್ನು ಯೆಹೋವನ ಸಾಕ್ಷಿಗಳೆಂದು ಗುರುತಿಸಿಕೊಂಡರು. ನನ್ನ ತಂದೆ ಅವರು ಹೇಳಿದ್ದನ್ನು ಗಮನವಿಟ್ಟು ಆಲಿಸಿದರು. ಎರಡು ಪತ್ರಿಕೆಗಳನ್ನು ಅವರಿಗೆ ನೀಡಿದಾಗ, ನನ್ನ ತಂದೆ ನನ್ನ ಕಡೆಗೆ ನೋಡಿ ನನಗೆ ಅವು ಬೇಕೊ ಎಂದು ಕೇಳಿದರು. ನಾನು ತಲೆ ಅಲುಗಾಡಿಸಿದೆ, ಆದುದರಿಂದ ಅವುಗಳನ್ನು ನನಗಾಗಿ ಅವರು ಖರೀದಿಸಿದರು.
ಪುನಃ ಭೇಟಿಯಾಗುವ ವಾಗ್ದಾನವನ್ನು ಸಾಕ್ಷಿಗಳು ಮಾಡಿದರು ಮತ್ತು ಅವರು ಪುನಃ ಭೇಟಿಯಾದರು. ಮುಂದಿನ ಎರಡು ವರ್ಷಗಳ ವರೆಗೆ ನನ್ನೊಂದಿಗೆ ಬೈಬಲನ್ನು ಚರ್ಚಿಸಲು ಅವರು ಬಂದರು. ಆದರೆ, ನನ್ನ ಹಳ್ಳಿಯಿಂದ ಅವರು ವಾಸಿಸುತ್ತಿದ್ದ ಸ್ಥಳಕ್ಕೆ ಹತ್ತು ಕಿಲೋಮೀಟರುಗಳ ನಡಿಗೆ ಆಗಿದುದ್ದರಿಂದ, ಅವರ ಭೇಟಿಗಳು ಕ್ರಮವಾದವುಗಳಾಗಿರಲಿಲ್ಲ.
ನನ್ನ ಕುಟುಂಬವು ನನ್ನನ್ನು ತಿರಸ್ಕರಿಸುತ್ತದೆ
ನನ್ನ ತಂದೆಯವರು ಅಸ್ವಸ್ಥರಾಗಿ ಸತ್ತಾಗ ನಾನು 12 ವರ್ಷ ಪ್ರಾಯದವನಾಗಿದ್ದೆ. ಶವಸಂಸ್ಕಾರದ ಎಂಟು ದಿನಗಳ ತರುವಾಯ, ನನ್ನ ಹಿರಿಯ ಅಣ್ಣನು ಕುಟುಂಬವನ್ನು ಒಂದು ಕೂಟಕ್ಕಾಗಿ ಕರೆಯಿಸಿದನು. ಸುಮಾರು 20 ಜನರು ಅಲಿದ್ದರು. ಉತ್ತರಕ್ರಿಯೆಯ ವೆಚ್ಚಗಳ ಕುರಿತು ಅವನು ಮಾತಾಡಲಿಕ್ಕಿದ್ದನೆಂದು ನಾವೆಲ್ಲರೂ ನೆನಸಿದೆವು. ಆದರೆ ನನಗೆ ಆಶ್ಚರ್ಯವಾಗುವಂತೆ, ತನ್ನ ಕಿರಿಯ ತಮ್ಮನ—ನನ್ನ—ಕುರಿತು ಚರ್ಚಿಸಲು ತಾನು ಕೂಟವನ್ನು ಕರೆದಿದ್ದೆನೆಂದು ಅವನು ಹೇಳಿದನು! ನನ್ನನ್ನು ಉಣಿಸಲು ಕುಟುಂಬಕ್ಕೆ ಹಣವಿರಲಿಲ್ಲವೋ ಎಂಬಂತೆ, ನಾಲ್ಕು ಕಾಸಿಗಾಗಿ “ಬೇಡುತ್ತಾ” ಹೋಗುವುದರಲ್ಲಿ ನನಗೆ ಆಸಕ್ತಿಯಿತ್ತೆಂದು ಅವನು ಅವರಿಗೆ ಹೇಳಿದನು. ನಾಲ್ಕು ಕಾಸಿಗಾಗಿ ಪತ್ರಿಕೆಗಳ ವ್ಯಾಪಾರಮಾಡಲು ಹೋಗುವುದು, ಕುಟುಂಬದ ಹೆಸರನ್ನು ಮಣ್ಣುಪಾಲು ಮಾಡುವುದಕ್ಕೆ ಸಮವಾಗಿತ್ತೆಂದು ಅವನು ಕೂಡಿಸಿದನು. ನಾನು ಯಾರೊಂದಿಗೆ—ಸಾಕ್ಷಿಗಳೊಂದಿಗೆ ಅಥವಾ ನನ್ನ ಕುಟುಂಬದೊಂದಿಗೆ—ಸೇರಲು ಬಯಸಿದೆನೆಂದು ನಾನು ಆರಿಸಿಕೊಳ್ಳುವಂತೆ ಅವನು ಹೇಳಿದನು.
ನನ್ನ ತಾಯಿ ಸತ್ತಿದ್ದರು ಆದರೆ ನನ್ನ ಮಲತಾಯಿಯರಲ್ಲಿ ಒಬ್ಬರು ನನಗಾಗಿ ಅತ್ತು ಶ್ರದ್ಧಾಪೂರ್ವಕವಾಗಿ ಬೇಡಿಕೊಂಡರು. ಆಸ್ತಿಯಲಿನ್ಲ ನನ್ನ ಪಾಲನ್ನು ಕಿತ್ತುಕೊಳ್ಳಲು ಇದನ್ನು ಒಂದು ನೆವದಂತೆ ಅವರು ಉಪಯೋಗಿಸಬಾರದೆಂದು ಆಕೆ ಬೇಡಿಕೊಂಡರು. ಆದರೆ ಅವರಿಗೆ ಒಬ್ಬ ಹೆಂಗಸಿನ ಅಭಿಪ್ರಾಯವು ಮಹತ್ವದ್ದಾಗಿರಲಿಲ್ಲ. ಕುಟುಂಬವು ನನ್ನ ಅಣ್ಣನ ಪಕ್ಷವಹಿಸಿತು ಮತ್ತು ನನ್ನಿಂದ ಒಂದು ನಿರ್ಧಾರವನ್ನು ಕೇಳಿತು.
ವಿಷಯದ ಕುರಿತು ಯೋಚಿಸಲು ನಾನು ಸಮಯಕ್ಕಾಗಿ ಕೇಳಿಕೊಂಡೆ. ಮುಂದಿನ ಸಂಜೆಯ ವರೆಗೆ ಸಮಯ ಕೊಡಲು ಅವರು ಒಪ್ಪಿದರು. ಕೋಣೆಯಲ್ಲಿ ಒಬ್ಬನೇ ಇರುವಾಗ ನಾನು ಅಳಲಾರಂಭಿಸಿದೆ. ನನಗೆ ಅಶಕ್ತಿಯ, ತಿರಸ್ಕೃತ, ಹಾಗೂ ಹೆದರಿಕೆಯ ಅನಿಸಿಕೆಯಾಯಿತು. ನನಗೆ ಏನು ಸಂಭವಿಸಲಿರುವುದೆಂದು ನಾನು ಕುತೂಹಲಪಟ್ಟೆ.
ಆ ಸಮಯದ ತನಕ, ನಾನೆಂದೂ ಒಂದು ರಾಜ್ಯ ಸಭಾಗೃಹಕ್ಕೆ ಹೋಗಿರಲಿಲ್ಲ ಮತ್ತು ಸಾಕ್ಷಿಗಳೊಂದಿಗೆ ಸಾರುವುದರಲ್ಲಿ ಎಂದೂ ಭಾಗವಹಿಸಿರಲಿಲ್ಲ. ಬೈಬಲ್ ಬೋಧನೆಗಳ ಅಲ್ಪ ಜ್ಞಾನ ಮಾತ್ರ ನನಗಿತ್ತು, ಮತ್ತು ಮಾತಾಡಲಿಕ್ಕಾಗಿ ನನ್ನ ಹಳ್ಳಿಯಲ್ಲಿ ಯಾವ ಸಾಕ್ಷಿಗಳೂ ಇರಲಿಲ್ಲ.
ನಾನು ಯೆಹೋವನಿಗೆ, ನನ್ನ ಜೀವಿತದಲ್ಲಿ ಪ್ರಥಮ ಬಾರಿ ಹೆಸರಿನಿಂದ ಆತನನ್ನು ಕರೆಯುತ್ತಾ ಪ್ರಾರ್ಥಿಸಿದೆ. ಆತನೇ ಸತ್ಯ ದೇವರೆಂದು ನಾನು ಕಲಿಯುತ್ತಿದ್ದ ವಿಷಯವನ್ನು ಆತನಿಗೆ ಹೇಳಿದೆ. ನನ್ನನ್ನು ಬೆಂಬಲಿಸುವಂತೆ ಮತ್ತು ಆತನನ್ನು ಅಸಂತೋಷಪಡಿಸದಂತಹ ಸರಿಯಾದ ಒಂದು ನಿರ್ಧಾರವನ್ನು ಮಾಡಲು ನನಗೆ ಸಹಾಯ ಮಾಡುವಂತೆ ನಾನು ಬೇಡಿಕೊಂಡೆ.
ಮರುದಿನ ಸಂಜೆ ಕುಟುಂಬವು ಪುನಃ ಸಭೆಸೇರಿತು ಮತ್ತು ನನ್ನ ನಿರ್ಧಾರವನ್ನು ಕೇಳಿತು. ನನಗೆ ಜೀವ ಕೊಟ್ಟಂಥ ನನ್ನ ತಂದೆ ಸಾಕ್ಷಿಗಳೊಂದಿಗೆ ನನ್ನ ಅಧ್ಯಯನವನ್ನು ಆರಂಭಿಸಿದವರೆಂದು ನಾನು ವಿವರಿಸಿದೆ. ನನ್ನ ಪತ್ರಿಕೆಗಳಿಗೆ ಮತ್ತು ಬೈಬಲಿಗೆ ಅವರು ಹಣಕೊಟ್ಟಿದ್ದರು. ಸಾಕ್ಷಿಗಳೊಂದಿಗೆ ನಾನು ಅಭ್ಯಸಿಸುತ್ತಿರುವ ವಿಷಯದಿಂದ ಅವರು ಕೋಪಗೊಳ್ಳದೆ ಇರುವಾಗ, ನನ್ನ ವಿರುದ್ಧ ಇದನ್ನು ನನ್ನ ಹಿರಿಯ ಅಣ್ಣ ಏಕೆ ಉಪಯೋಗಿಸಬೇಕೆಂಬುದು ನನಗೆ ಅರ್ಥವಾಗಲಿಲ್ಲ. ಅವರು ನನಗೆ ಏನು ಮಾಡಿದರೂ ನಾನು ಚಿಂತಿಸುವುದಿಲ್ಲವೆಂದೂ ನನಗೆ ಯೆಹೋವನನ್ನು ಸೇವಿಸಲೇಬೇಕಾಗಿದೆಯೆಂದೂ ನಾನು ಹೇಳಿದೆ.
ಈ ಭಾಷಣದಿಂದ ಅವರು ಸಂತೋಷಪಡಲಿಲ್ಲ. ಅವರಲ್ಲಿ ಒಬ್ಬರು ಹೇಳಿದ್ದು: “ನಮ್ಮನ್ನುದ್ದೇಶಿಸಿ ಈ ರೀತಿಯಲ್ಲಿ ಮಾತಾಡಲು ಈ ಚಿಕ್ಕ ಇಲಿ ಯಾರು?” ತತ್ಕ್ಷಣ ನನ್ನ ಅಣ್ಣ ರಭಸದಿಂದ ನನ್ನ ಕೋಣೆಯೊಳಗೆ ನುಗ್ಗಿ, ನನ್ನ ಬಟ್ಟೆಗೆಳನ್ನು, ನನ್ನ ಪುಸ್ತಕಗಳನ್ನು, ಮತ್ತು ನನ್ನ ಸಣ್ಣ ರಟಿನ್ಟ ಕೈಪೆಟ್ಟಿಗೆಯನ್ನು ಬಲವಂತದಿಂದ ಕಸಿದುಕೊಂಡು ಹೊರಗೆ ನೆಲದ ಮೇಲೆ ಬಿಸಾಡಿದನು.
ಹಳ್ಳಿಯಲ್ಲಿ ವಾಸಿಸುತ್ತಿದ್ದ ಒಬ್ಬ ಶಾಲಾಸಂಗಾತಿಯ ಮನೆಯಲ್ಲಿ ನಾನು ಆಶ್ರಯವನ್ನು ಕಂಡುಕೊಂಡೆ, ಮತ್ತು ಅವನ ಕುಟುಂಬದೊಂದಿಗೆ ಸುಮಾರು ಐದು ತಿಂಗಳುಗಳ ವರೆಗೆ ಉಳಿದೆ. ಈ ನಡುವೆ ಲೇಗಾಸ್ನ ನನ್ನ ಮಾವನಿಗೆ ನಾನು ಪತ್ರ ಬರೆದೆ; ಮತ್ತು ಅವರು ನಾನು ಹೋಗಿ ಅಲ್ಲಿ ಜೀವಿಸುವಂತೆ ಆಮಂತ್ರಿಸಿದರು.
ಹಲವಾರು ತಿಂಗಳುಗಳ ವರೆಗೆ, ತಾಳೆಯ ಬೀಜಗಳನ್ನು ಒಟ್ಟುಗೂಡಿಸುವ ಮತ್ತು ಮಾರಾಟಮಾಡುವ ಮೂಲಕ ನಾನು ಹಣವನ್ನು ಕೂಡಿಸಿದೆ. ನನ್ನ ಪರವಾಗಿ ಮಾತಾಡಿದ್ದ ನನ್ನ ಮಲತಾಯಿ ಕೂಡ ಸ್ವಲ್ಪ ಹಣವನ್ನು ನನಗೆ ಕೊಟ್ಟರು. ನನ್ನಲ್ಲಿ ಸಾಕಷ್ಟು ಹಣವಿದ್ದಾಗ ನಾನು ಲೇಗಾಸ್ಗೆ ಪ್ರಯಾಣ ಬೆಳೆಸಿದೆ. ದಾರಿಯ ಒಂದು ಭಾಗವನ್ನು ನಾನು, ಉಸುಬನ್ನು ರವಾನಿಸುವ ಗಾಡಿಯ ಹಿಂಬದಿಯಲ್ಲಿ ಸವಾರಿ ಮಾಡುವ ಮೂಲಕ ಸಂಚರಿಸಿದೆ.
ಎರಡನೆಯ ಬಾರಿ ಹೊರಹಾಕಲ್ಪಟ್ಟದ್ದು
ನಾನು ಲೇಗಾಸನ್ನು ಬಂದು ತಲಪಿದಾಗ, ನನ್ನ ಮಾವ ಸಾಕ್ಷಿಗಳೊಂದಿಗೆ ಅಭ್ಯಸಿಸುತ್ತಿರುವುದರ ಕುರಿತು ತಿಳಿಯಲು ಹರ್ಷಿಸಿದೆ. ತತ್ಕ್ಷಣ ರಾಜ್ಯ ಸಭಾಗೃಹದಲ್ಲಿ ಸಭಾ ಕೂಟಗಳನ್ನು ನಾನು ಹಾಜರಾಗತೊಡಗಿದೆ. ಆದರೆ ನನ್ನ ಅಣ್ಣ ಭೇಟಿಮಾಡಲು ಬಂದಾಗ, ಯೆಹೋವನನ್ನು ಸೇವಿಸುವುದರಲ್ಲಿ ನನ್ನ ಮಾವನಿಗಿದ್ದ ಆಸಕ್ತಿಯು ಬೇಗನೆ ಮಾಯವಾಯಿತು. ಯೆಹೋವನ ಸಾಕ್ಷಿಗಳೊಂದಿಗೆ ಸೇರಿಬರುವುದನ್ನು ನಾನು ಮುಂದುವರಿಸಿದ್ದರಿಂದ, ನನಗೆ ಬೆಂಬಲವನ್ನಾಗಲಿ ಅಥವಾ ಶಾಲೆಗೆ ಹೋಗುವಂತೆ ಅನುಮತಿಯನ್ನಾಗಲಿ ನೀಡಬಾರದೆಂಬುದು ಕುಟುಂಬದ ನಿರ್ಧಾರವಾಗಿತ್ತೆಂದು ಅವನು ನನ್ನ ಮಾವನಿಗೆ ಹೇಳಿದನು. ನನ್ನ ಮಾವನನ್ನು ಬೆದರಿಸಿ ಅವನು ಮನೆಗೆ ಹಿಂದಿರುಗಿದನು.
ನನ್ನ ಅಣ್ಣ ಹೊರಟುಹೋದ ಒಂದು ವಾರದ ಬಳಿಕ, ನನ್ನ ಮಾವ ನನ್ನನ್ನು ಮಧ್ಯರಾತ್ರಿಯಲ್ಲಿ ಎಚ್ಚರಗೊಳಿಸಿ, ಬರವಣಿಗೆಯಿದ್ದ ಒಂದು ಕಾಗದವನ್ನು ನನ್ನೆಡೆಗೆ ತಳ್ಳಿದರು. ಒಂದು ಪೆನ್ನನ್ನು ನನ್ನ ಕೈಯಲ್ಲಿಟ್ಟು ನನ್ನ ಹೆಸರನ್ನು ಸಹಿಹಾಕುವಂತೆ ತಗಾದೆಮಾಡಿದರು. ಅವರ ಮುಖದ ಮೇಲಿನ ಸಿಡುಕನ್ನು ನಾನು ಕಂಡಾಗ, ಇದು ಏನೋ ಗಂಭೀರ ವಿಷಯವೆಂದು ನನಗೆ ತಿಳಿಯಿತು. “ಮಾವ, ಅದಕ್ಕೆ ನಾನು ಬೆಳಗ್ಗೆ ಸಹಿಹಾಕುವಂತೆ ನೀವು ಯಾಕೆ ಅನುಮತಿಸುವುದಿಲ್ಲ?” ಎಂದು ನಾನು ಕೇಳಿದೆ.
ನಾನು ಅವರನ್ನು “ಮಾವ”ನೆಂದು ಕರೆಯಬಾರದು, ಆದರೆ ಕೂಡಲೇ ಕಾಗದಕ್ಕೆ ಸಹಿಹಾಕಬೇಕೆಂದು ಅವರು ಹೇಳಿದರು. ಒಬ್ಬ ಕೊಲೆಗಾರನಿಗೂ ಅವನ ವಿರುದ್ಧವಿರುವ ಆಪಾದನೆಗಳನ್ನು ತಿಳಿಯುವ ಹಕ್ಕಿದೆ ಎಂದು ನಾನು ಉತ್ತರಿಸಿದೆ. ಕಾಗದಕ್ಕೆ ಸಹಿಹಾಕುವ ಮುಂಚೆ ಅದನ್ನು ಓದುವ ಹಕ್ಕು ಖಂಡಿತವಾಗಿಯೂ ನನಗಿತ್ತು.
ಅದನ್ನು ನಾನು ಓದುವಂತೆ ಅವರು ತದನಂತರ ಸಿಟ್ಟಿನಿಂದ ಸಮ್ಮತಿಸಿದರು. ಅದು ಹೀಗೆ ಹೇಗೊ ಆರಂಭಿಸಿತು: “ನಾನು, ಊ. ಊ. ಊಡೊ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗದಿರುವ ಪ್ರತಿಜ್ಞೆ ಮಾಡಿದ್ದೇನೆ. ನನ್ನ ಬ್ಯಾಗ್ಗಳನ್ನು ಮತ್ತು ಪುಸ್ತಕಗಳನ್ನು ಸುಟ್ಟುಬಿಡಲು ನಾನು ಒಪ್ಪಿದ್ದೇನೆ ಮತ್ತು ಯೆಹೋವನ ಸಾಕ್ಷಿಗಳೊಂದಿಗೆ ಯಾವುದೇ ಸಂಬಂಧವನ್ನು ಎಂದೂ ಇಟ್ಟುಕೊಳ್ಳೆನೆಂಬ ಭಾಷೆ ಕೊಡುತ್ತೇನೆ. . . .” ಮೊದಲ ಕೆಲವು ಸಾಲುಗಳನ್ನು ಓದಿದ ತರುವಾಯ, ನಾನು ನಗಲು ಆರಂಭಿಸಿದೆ. ಅವರಿಗೆ ಅಗೌರವವನ್ನು ತೋರಿಸುವುದು ನನ್ನ ಉದ್ದೇಶವಾಗಿರಲಿಲ್ಲವೆಂದು ನಾನು ಕೂಡಲೇ ವಿವರಿಸಿದೆ, ಆದರೆ ಇಂತಹ ಒಂದು ದಾಖಲೆಗೆ ಸಹಿಹಾಕುವುದು ನನಗೆ ಅಸಾಧ್ಯವಾಗಿತ್ತು.
ನನ್ನ ಮಾವ ಬಹಳ ಕೋಪಗೊಂಡು ಮನೆಯನ್ನು ಬಿಟ್ಟುಹೋಗುವಂತೆ ಆಜ್ಞಾಪಿಸಿದರು. ಶಾಂತವಾಗಿ ನಾನು ನನ್ನ ಪೆಟ್ಟಿಗೆಯಲ್ಲಿ ನನ್ನ ಬಟ್ಟೆಗೆಳನ್ನು ಮತ್ತು ಪುಸ್ತಕಗಳನ್ನು ತುಂಬಿ, ಅವರ ಕೋಣೆಯ ಹೊರಗಿದ್ದ ಹಜಾರದ ನೆಲದ ಮೇಲೆ ಮಲಗಲು ಹೋದೆ. ನನ್ನ ಮಾವ ನನ್ನನ್ನು ಅಲ್ಲಿ ನೋಡಿದಾಗ, ಅವರು ಕೊಡುವ ಬಾಡಿಗೆ ಹಜಾರದ ವರೆಗೆ ವಿಸ್ತರಿಸಿದ ಕಾರಣ ನಾನು ಕಟ್ಟಡವನ್ನು ಬಿಡಬೇಕೆಂದು ಹೇಳಿದರು.
ಪ್ರಲೋಭನವನ್ನೊಡ್ಡುವ ಒಂದು ಪ್ರಸ್ತಾಪ
ನಾನು ಲೇಗಾಸ್ನಲ್ಲಿ ಕೇವಲ ಎರಡು ವಾರಗಳ ಕಾಲ ಇದ್ದೆ ಮತ್ತು ಎಲ್ಲಿ ಹೋಗಬೇಕೆಂದು ನನಗೆ ಗೊತ್ತಿರಲಿಲ್ಲ. ನನ್ನನ್ನು ರಾಜ್ಯ ಸಭಾಗೃಹಕ್ಕೆ ಕರೆದುಕೊಂಡು ಹೋಗಲು ಬರುತ್ತಿದ್ದ ಸಹೋದರನು ಎಲ್ಲಿ ವಾಸಿಸಿದನೆಂದು ನನಗೆ ಗೊತ್ತಿರಲಿಲ್ಲ. ಆದುದರಿಂದ ಬೆಳಗಾದಾಗ, ನನಗೆ ಸಹಾಯ ಮಾಡುವಂತೆ ಯೆಹೋವನಿಗೆ ಪ್ರಾರ್ಥಿಸುತ್ತಾ, ನಡೆಯಲು ಮತ್ತು ಅಲೆದಾಡಲು ತೊಡಗಿದೆ.
ಸಂಜೆಯೊಳಗೆ ಒಂದು ಗ್ಯಾಸ್ ಸ್ಟೇಶನ್ನ ಬಳಿಗೆ ನಾನು ಬಂದೆ. ನಾನು ಯಜಮಾನನನ್ನು ಸಮೀಪಿಸಿ, ಕಳ್ಳರು ನನ್ನಿಂದ ಪೆಟ್ಟಿಗೆಯನ್ನು ಕದಿಯದಂತೆ ಅದನ್ನು ಅವನು ಒಂದು ರಾತ್ರಿ ಆಫೀಸಿನಲ್ಲಿ ಬೀಗಹಾಕಿ ಇಡುವನೊ ಎಂದು ಕೇಳಿದೆ. ನಾನು ಮನೆಗೆ ಏಕೆ ಹೋಗಲಿಲ್ಲವೆಂದು ಕೇಳುವಷ್ಟು ಕುತೂಹಲವನ್ನು ಈ ವಿನಂತಿಯು ಕೆರಳಿಸಿತು. ನನ್ನ ಕಥೆಯನ್ನು ನಾನು ಅವನಿಗೆ ಹೇಳಿದೆ.
ಆ ಪುರುಷನು ಸಹಾನುಭೂತಿಯುಳ್ಳವನಾಗಿದ್ದು, ನನ್ನನ್ನು ಮನೆಯ ಕೆಲಸಗಾರನಾಗಿ ನೇಮಿಸಲು ಪ್ರಸ್ತಾಪಿಸಿದ. ಅವನ ಮನೆಯಲ್ಲಿ ನಾನು ಅವನಿಗೆ ಸಹಾಯ ಮಾಡುವುದಾದರೆ ಅವನು ನನ್ನನ್ನು ಶಾಲೆಗೂ ಕಳುಹಿಸುವೆನೆಂದು ಹೇಳಿದ. ಅದು ಪ್ರಲೋಭನವನ್ನೊಡ್ಡುವ ಪ್ರಸ್ತಾಪವಾಗಿತ್ತು, ಆದರೆ ಮನೆಯ ಕೆಲಸಗಾರನಾಗಿರುವುದು ಪ್ರತಿದಿನ ನಸುಕಿನಿಂದ ರಾತ್ರಿ ತಡವಾಗಿ ಕೆಲಸಮಾಡುವುದನ್ನು ಒಳಗೊಂಡಿತ್ತೆಂದು ನನಗೆ ಗೊತ್ತಿತ್ತು. ಮನೆಯನ್ನು ಲೂಟಿಮಾಡಲು ಮನೆಯ ಕೆಲಸಗಾರರು ಕಳ್ಳರೊಂದಿಗೆ ಒಳಸಂಚು ನಡೆಸಬಹುದೆಂಬ ಭಯದಿಂದ ಮನೆವಾರ್ತೆಯ ಹೊರಗಿನ ಜನರೊಂದಿಗೆ ಸೇರುವುದರಿಂದ ಅವರನ್ನು ತಡೆಯಲಾಗುತ್ತಿತ್ತು. ಹೆಚ್ಚೆಂದರೆ, ನನಗೆ ಒಂದು ತಿಂಗಳಿಗೆ ಬಹುಶಃ ಒಂದೇ ಒಂದು ಆದಿತ್ಯವಾರ ರಜೆ ಸಿಗಲಿಕ್ಕಿತ್ತು. ಆದುದರಿಂದ ಅವನ ಆಸಕ್ತಿಗಾಗಿ ನಾನು ಅವನಿಗೆ ಪ್ರಾಮಾಣಿಕವಾಗಿ ಉಪಕಾರ ಸಲ್ಲಿಸಿದರೂ ಅವನ ಪ್ರಸ್ತಾಪವನ್ನು ನಿರಾಕರಿಸಿದೆ. ಅವನಿಗಾಗಿ ಮನೆಯ ಕೆಲಸಗಾರನಂತೆ ನಾನು ಕೆಲಸಮಾಡಿದರೆ, ರಾಜ್ಯ ಸಭಾಗೃಹದಲ್ಲಿ ಕೂಟಗಳನ್ನು ಹಾಜರಾಗಲು ನನಗೆ ಕಷ್ಟವಾಗುವುದೆಂದು ನಾನು ಹೇಳಿದೆ.
ಆ ಪುರುಷನು ಹೇಳಿದ್ದು: “ನಿನಗೆ ತಂಗಲು ಸಹ ಒಂದು ಸ್ಥಳ ಇಲ್ಲದಿರುವಾಗ ನೀನು ಹೇಗೆ ಕೂಟಗಳ ಬಗ್ಗೆ ಮಾತಾಡುತ್ತಿರಬಲ್ಲೆ?” ಕೂಟಗಳನ್ನು ಹಾಜರಾಗದೆ ಇರಲು ನಾನು ಸಿದ್ಧನಾಗಿದ್ದರೆ ನನ್ನ ತಂದೆಯ ಮನೆಯಲ್ಲಿಯೇ ನಾನು ಜೀವಿಸಬಹುದಿತ್ತೆಂದು ನಾನು ಉತ್ತರಿಸಿದೆ. ನನ್ನ ಧರ್ಮದ ಕಾರಣ ನಾನು ಮನೆಯನ್ನು ಬಿಡಬೇಕಾಗಿತ್ತು. ಅವನಿಂದ ನನಗೆ ಬೇಕಾಗಿದ್ದ ಸಹಾಯವು, ನನ್ನ ಪೆಟ್ಟಿಗೆಗೆ ಒಂದು ಸ್ಥಳ ಮಾತ್ರವೇ ಆಗಿತ್ತು. ಆಗ, ನನಗಾಗಿ ಅದನ್ನು ಸುರಕ್ಷಿತವಾಗಿಡಲು ಅವನು ಒಪ್ಪಿದನು.
ಮತ್ತೊಂದು ಕುಟುಂಬವನ್ನು ಕಂಡುಕೊಳ್ಳುವುದು
ಮೂರು ದಿನಗಳ ಕಾಲ ನಾನು ಗ್ಯಾಸ್ ಸ್ಟೇಶನ್ನ ಹೊರಗೆ ಮಲಗಿದೆ. ಆಹಾರವನ್ನು ಖರೀದಿಸಲು ನನ್ನ ಹತ್ತಿರ ಹಣವಿರಲಿಲ್ಲ, ಆದುದರಿಂದ ಆ ಸಮಯದಲ್ಲಿ ತಿನ್ನಲು ನನ್ನ ಬಳಿಯಲ್ಲಿ ಏನೂ ಇರಲಿಲ್ಲ. ನಾಲ್ಕನೆಯ ದಿನ ನಾನು ಅಲೆದಾಡುತ್ತಿದ್ದಾಗ, ರಸ್ತೆಯ ಬದಿಯಲ್ಲಿ ಜನರಿಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡುತ್ತಿದ್ದ ಒಬ್ಬ ಯುವ ಪುರುಷನನ್ನು ಕಂಡೆ. ಆನಂದದಿಂದ ನಾನು ಅವನ ಬಳಿಗೆ ಓಡಿ, ಸಹೋದರ ಗಾಡ್ವಿನ್ ಈಡೇ ಎಂಬವರ ಗುರುತಿದೆಯೊ ಎಂದು ಅವನನ್ನು ಕೇಳಿದೆ. ನಾನು ಏಕೆ ಕೇಳಿದೆನೆಂದು ತಿಳಿಯಲು ಅವನು ಬಯಸಿದ, ಆದುದರಿಂದ ನನಗೆ ಸಂಭವಿಸಿದ ಎಲ್ಲವನ್ನು ನಾನು ವಿವರಿಸಿದೆ.
ನಾನು ಮುಗಿಸಿದ ನಂತರ, ಅವನು ಕೂಡಲೆ ಪತ್ರಿಕೆಗಳನ್ನು ತನ್ನ ಬ್ಯಾಗಿನಲ್ಲಿ ಹಾಕಿ, ಹೀಗೆ ಕೇಳಿದನು: “ಇಲ್ಲಿ ಲೇಗಾಸ್ನಲ್ಲಿ ಸಾವಿರಾರು ಯೆಹೋವನ ಸಾಕ್ಷಿಗಳಿರುವಾಗ ನೀನು ಯಾಕೆ ಇಷ್ಟೊಂದು ಕಷ್ಟಾನುಭವಿಸಬೇಕು?” ಒಂದು ಟ್ಯಾಕ್ಸಿಯನ್ನು ಕರೆದು, ನನ್ನ ಪೆಟ್ಟಿಗೆಯನ್ನು ಗ್ಯಾಸ್ ಸ್ಟೇಶನ್ನಿಂದ ತರಲು ನನ್ನನ್ನು ಕರೆದುಕೊಂಡುಹೋದನು. ಅನಂತರ ನನ್ನನ್ನು ತನ್ನ ಕೋಣೆಗೆ ಕರೆದುಕೊಂಡುಹೋಗಿ ನನಗಾಗಿ ಊಟವನ್ನು ಸಿದ್ಧಪಡಿಸಿದನು. ಅನಂತರ ಹತ್ತಿರದಲ್ಲಿಯೇ ವಾಸಿಸಿದ ಸಹೋದರ ಈಡೇಯವರನ್ನು ಬರಹೇಳಿದನು.
ಸಹೋದರ ಈಡೇ ಬಂದ ಬಳಿಕ, ಅವರಲ್ಲಿ ಯಾರೊಂದಿಗೆ ನಾನು ಇರಬೇಕೆಂದು ಅವರು ವಾದಿಸಿದರು. ಇಬ್ಬರಿಗೂ ನಾನು ಬೇಕಾಗಿದ್ದೆ! ಕೊನೆಗೆ ನನ್ನನ್ನು ಹಂಚಿಕೊಳ್ಳಲು ಅವರು ಒಪ್ಪಿದರು—ಸ್ವಲ್ಪ ಸಮಯ ಒಬ್ಬರೊಂದಿಗೆ ಮತ್ತು ಸ್ವಲ್ಪ ಸಮಯ ಇನ್ನೊಬ್ಬರೊಂದಿಗೆ ನಾನು ತಂಗಲಿದ್ದೆ.
ಇದಾದ ಸ್ವಲ್ಪ ಸಮಯದಲ್ಲಿಯೇ ನನಗೆ ಓಲೆಕಾರನ (ಮೆಸೆಂಜರ್) ಕೆಲಸ ಸಿಕ್ಕಿತು. ನನ್ನ ಮೊದಲನೆಯ ಸಂಬಳವನ್ನು ಪಡೆದಾಗ, ನಾನು ಇಬ್ಬರೂ ಸಹೋದರರೊಂದಿಗೆ ಮಾತಾಡಿದೆ ಮತ್ತು ಆಹಾರ ಹಾಗೂ ಬಾಡಿಗೆಗಾಗಿ ನಾನೆಷ್ಟು ಹಣಕೊಡಬೇಕೆಂದು ಅವರು ಬಯಸಿದರೆಂದು ಅವರನ್ನು ಕೇಳಿದೆ. ಅವರು ನಕ್ಕು, ನಾನು ಏನೂ ಕೊಡಬೇಕಾಗಿಲ್ಲವೆಂದು ಹೇಳಿದರು.
ಬೇಗನೆ ನಾನು ರಾತ್ರಿಯ ಶಾಲೆಗೆ ಅಷ್ಟೇ ಅಲ್ಲದೆ ಖಾಸಗಿ ಪಾಠಗಳಿಗೆ ನನ್ನ ಹೆಸರನ್ನು ದಾಖಲು ಮಾಡಿಸಿದೆ ಮತ್ತು ಕಟ್ಟಕಡೆಗೆ ನನ್ನ ಮೂಲ ಶಿಕ್ಷಣವನ್ನು ಪೂರ್ತಿಗೊಳಿಸಿದೆ. ಆರ್ಥಿಕವಾಗಿ ನನ್ನ ವಿಷಯಗಳು ಉತ್ತಮಗೊಂಡವು. ಒಬ್ಬ ಸೆಕ್ರಿಟರಿಯೋಪಾದಿ ಒಂದು ಉತ್ತಮ ಕೆಲಸವು ನನಗೆ ಸಿಕ್ಕಿತು ಮತ್ತು ಸಕಾಲದಲ್ಲಿ ನನ್ನ ಸ್ವಂತ ಸ್ಥಳವನ್ನು ದೊರಕಿಸಿಕೊಂಡೆ.
ಎಪ್ರಿಲ್ 1972ರಲ್ಲಿ ನಾನು ದೀಕ್ಷಾಸ್ನಾನ ಪಡೆದೆ. ನಾನು 17 ವರ್ಷದವನಾಗಿದ್ದೆ. ವಿಶೇಷವಾಗಿ ಆ ಕಷ್ಟಕರ ಅವಧಿಯಲ್ಲಿ ನನಗಾಗಿ ಯೆಹೋವನು ಮಾಡಿದ ಎಲ್ಲ ವಿಷಯಕ್ಕಾಗಿ ನನ್ನ ಗಣ್ಯತೆಯನ್ನು ತೋರಿಸಲಿಕ್ಕಾಗಿ, ಪಯನೀಯರ್ ಸೇವೆಯನ್ನು ಪ್ರವೇಶಿಸಲು ನಾನು ಬಯಸಿದೆ. ಸಾಧ್ಯವಾದಾಗ ತಾತ್ಕಾಲಿಕ ಪಯನೀಯರನೋಪಾದಿ ನನ್ನ ಹೆಸರನ್ನು ನಮೂದಿಸಿಕೊಂಡೆ, ಆದರೆ ನೆಲೆಗೊಳ್ಳಲು ಕೆಲವು ವರ್ಷಗಳ ಸಮಯ ಹಿಡಿಯಿತು. ಕೊನೆಯದಾಗಿ 1983ರಲ್ಲಿ ನಾನು ಕ್ರಮದ ಪಯನೀಯರನೋಪಾದಿ ನನ್ನ ಹೆಸರನ್ನು ನಮೂದಿಸಿಕೊಂಡೆ.
ಆ ಸಮಯದೊಳಗಾಗಿ ನನ್ನ ಆತ್ಮಿಕ ಕುಟುಂಬವನ್ನು ನಾನು ಪೂರ್ಣವಾಗಿ ಗಣ್ಯಮಾಡಿದೆ. ಯೇಸುವಿನ ಈ ಮಾತುಗಳು ನನ್ನ ವಿಷಯದಲ್ಲಿ ನಿಜವಾಗಿಯೂ ಸತ್ಯವಾಗಿ ಪರಿಣಮಿಸಿದವು: “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ದೇವರ ರಾಜ್ಯದ ನಿಮಿತ್ತ ಮನೆಯನ್ನಾಗಲಿ ಹೆಂಡತಿಯನ್ನಾಗಲಿ ಅಣತ್ಣಮ್ಮಂದಿರನ್ನಾಗಲಿ ತಂದೆತಾಯಿಗಳನ್ನಾಗಲಿ ಮಕ್ಕಳನ್ನಾಗಲಿ ಬಿಟ್ಟುಬಿಟ್ಟಿರುವನೋ ಅವನಿಗೆ ಈಗಿನ ಕಾಲದಲ್ಲಿ ಅನೇಕ ಪಾಲು ಹೆಚ್ಚಾದವುಗಳು ಸಿಕ್ಕೇ ಸಿಕ್ಕುತ್ತವೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು.”—ಲೂಕ 18:29, 30.
ಸಾಕ್ಷಿಗಳು ನಿಜವಾಗಿಯೂ ನನಗೆ ಪ್ರೀತಿಯನ್ನು ತೋರಿಸಿ ನನ್ನ ಕಾಳಜಿ ವಹಿಸಿದರು. ನಾನು ಕಾಸಿಲ್ಲದವನಾಗಿದ್ದಾಗ ಅವರು ನನಗೆ ಆಶ್ರಯ ನೀಡಿದ್ದರು. ಅವರ ಸಹಾಯದಿಂದ ಮತ್ತು ನನ್ನ ಸ್ವರ್ಗೀಯ ತಂದೆಯ ಸಹಾಯದಿಂದ ನಾನು ಆತ್ಮಿಕವಾಗಿ ಏಳಿಗೆ ಹೊಂದಿದ್ದೆ. ನಾನು ಐಹಿಕ ಶಿಕ್ಷಣವನ್ನು ಪಡೆದಿದ್ದೆ ಮಾತ್ರವಲ್ಲ ಯೆಹೋವನ ಮಾರ್ಗಗಳ ಕುರಿತೂ ಕಲಿತಿದ್ದೆ.
ಇವರು, ನನ್ನ ಸ್ವಾಭಾವಿಕ ಕುಟುಂಬವು ತಿರಸ್ಕರಿಸುವಂತೆ ನನ್ನನ್ನು ಬಲವಂತಪಡಿಸಿದ ಜನರಾಗಿದ್ದರು. ನಾನು ನಿರಾಕರಿಸಿದಾಗ ನನ್ನ ಕುಟುಂಬವು ನನ್ನನ್ನು ತಿರಸ್ಕರಿಸಿತು. ನನ್ನ ಸ್ವಾಭಾವಿಕ ಕುಟುಂಬವನ್ನು ತಿರಸ್ಕರಿಸುವಂತೆ ಈಗ ನನ್ನ ಆತ್ಮಿಕ ಸಹೋದರ ಸಹೋದರಿಯರು ನನ್ನನ್ನು ಉತ್ತೇಜಿಸಿದರೊ? ಇಲ್ಲವೇ ಇಲ್ಲ. ಬೈಬಲ್ ಕಲಿಸುವುದು: “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ.”—ಲೂಕ 6:31.
ನನ್ನನ್ನು ತಿರಸ್ಕರಿಸಿದ ಕುಟುಂಬಕ್ಕೆ ಸಹಾಯ ನೀಡುವುದು
ನಾನು ಮನೆಯನ್ನು ಬಿಟ್ಟ ಸ್ವಲ್ಪ ಸಮಯದ ನಂತರವೆ, ನೈಜಿರಿಯನ್ ಒಳಯುದ್ಧವು ಆರಂಭಿಸಿತು. ನನ್ನ ಹಳ್ಳಿಯು ಧ್ವಂಸಮಾಡಲ್ಪಟ್ಟಿತು. ನನ್ನ ಪರವಾಗಿ ಬೇಡಿಕೊಂಡ ನನ್ನ ಮಲತಾಯಿಯನ್ನು ಸೇರಿಸಿ, ನನ್ನ ಮಿತ್ರರಲ್ಲಿ ಮತ್ತು ಸಂಬಂಧಿಕರಲ್ಲಿ ಅನೇಕರು ತಮ್ಮ ಜೀವಗಳನ್ನು ಕಳೆದುಕೊಂಡರು. ಆರ್ಥಿಕ ಪರಿಸ್ಥಿತಿಯು ಪಾಳು ಬಿದ್ದಿತ್ತು.
ಯುದ್ಧವು ಕೊನೆಗೊಂಡ ಬಳಿಕ, ನಾನು ಹುಡುಗನಾಗಿದ್ದಾಗ ನನ್ನನ್ನು ಓಡಿಸುವುದರಲ್ಲಿ ಭಾಗವಹಿಸಿದ್ದ ನನ್ನ ಸಹೋದರರಲ್ಲಿ ಒಬ್ಬನನ್ನು ಸಂದರ್ಶಿಸಲು ನಾನು ಮನೆಗೆ ಪ್ರಯಾಣ ಬೆಳೆಸಿದೆ. ಅವನ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳು ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಹಾಕಲ್ಪಟ್ಟಿದ್ದರು. ನಾನು ಅವನಿಗೆ ಸಹಾನುಭೂತಿ ತೋರಿಸಿ, ಸಹಾಯ ಮಾಡಲು ನಾನು ಏನು ಮಾಡಬಹುದೆಂದು ಕೇಳಿದೆ.
ಬಹುಶಃ ಒಂದು ದೋಷಿ ಮನಸ್ಸಾಕ್ಷಿಯ ಕಾರಣ, ತನಗೆ ಬೇಕಾದದ್ದು ಏನೂ ಇರಲಿಲ್ಲವೆಂದು ಅವನು ನನಗೆ ಹೇಳಿದನು. ಕುಟುಂಬವು ನನಗೆ ಮಾಡಿದ್ದ ಸಂಗತಿಗಾಗಿ ನಾನು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಬಹುದೆಂದು ಅವನು ಯೋಚಿಸಬಾರದು ಎಂದು ನಾನು ವಿವರಿಸಿದೆ. ಅವರು ಅಜ್ಞಾನದಿಂದ ವರ್ತಿಸಿದ್ದರೆಂದು ನನಗೆ ಗೊತ್ತಿದ್ದ ವಿಷಯವನ್ನು ಮತ್ತು ನಿಜವಾಗಿಯೂ ಅವನಿಗೆ ಸಹಾಯ ಮಾಡಲು ನಾನು ಬಯಸಿದೆನೆಂದು ನಾನು ಅವನಿಗೆ ಹೇಳಿದೆ.
ತದನಂತರ ಅವನು ಅಳಲಾರಂಭಿಸಿದನು ಮತ್ತು ಅವನಲ್ಲಿ ಹಣ ಇರಲಿಲ್ಲವೆಂದೂ ಅವನ ಮಕ್ಕಳು ಕಷ್ಟಾನುಭವಿಸುತ್ತಿದ್ದಾರೆಂದೂ ಅವನು ಒಪ್ಪಿಕೊಂಡನು. 300 ಡಾಲರುಗಳಿಗೆ (ಯು.ಎಸ್.) ಸಮಾನವಾದ ಹಣವನ್ನು ಅವನಿಗೆ ಕೊಟ್ಟು, ಲೇಗಾಸ್ನಲ್ಲಿ ಕೆಲಸಮಾಡಲು ಅವನು ಇಷ್ಟಪಡುವನೋ ಎಂದು ಕೇಳಿದೆ. ನಾನು ಲೇಗಾಸ್ಗೆ ಹಿಂದಿರುಗಿದ ಮೇಲೆ, ಅವನಿಗೆ ಒಂದು ಕೆಲಸವನ್ನು ಕಂಡುಹಿಡಿದು ನನ್ನೊಂದಿಗೆ ಬಂದು ಜೀವಿಸಲು ಅವನನ್ನು ಆಮಂತ್ರಿಸಿದೆ. ಮನೆಯಲ್ಲಿದ್ದ ತನ್ನ ಹೆಂಡತಿ ಮತ್ತು ಮಕ್ಕಳಿಗೆ ಹಣವನ್ನು ಕಳುಹಿಸಲು ಸಂಪಾದಿಸುತ್ತಾ, ಅವನು ನನ್ನೊಂದಿಗೆ ಎರಡು ವರ್ಷಗಳ ಕಾಲ ತಂಗಿದನು. ಆ ಸಮಯದಲ್ಲಿ ಅವನ ಊಟ ಮತ್ತು ವಸತಿಗಾಗಿ ನಾನು ಸಂತೋಷದಿಂದ ಖರ್ಚುಮಾಡಿದೆ.
ಯೆಹೋವನ ಸಾಕ್ಷಿಗಳು ಸತ್ಯ ಧರ್ಮವನ್ನು ಆಚರಿಸುತ್ತಿದ್ದರೆಂಬುದು ತನಗೆ ಗೊತ್ತಿದ್ದ ಸಂಗತಿ ಎಂದು ಅವನು ಹೇಳಿದನು. ತಾನು ಅಷ್ಟೊಂದು ಲೌಕಿಕನಾಗಿರದಿದ್ದರೆ ತಾನೂ ಒಬ್ಬ ಸಾಕ್ಷಿಯಾಗುತ್ತಿದ್ದೆನೆಂದು ಅವನು ಹೇಳಿದನು. ಆದರೆ ಅವನ ಹೆಂಡತಿ ಮತ್ತು ಮಕ್ಕಳಿಗಾಗಿ ಒಂದು ಬೈಬಲ್ ಅಧ್ಯಯನವನ್ನು ಏರ್ಪಡಿಸುವ ವಾಗ್ದಾನವನ್ನು ಅವನು ಮಾಡಿದನು.
1987ರಲ್ಲಿ ಸರ್ಕಿಟ್ ಕೆಲಸವನ್ನು ಮಾಡುವಂತೆ ನಾನು ಆಮಂತ್ರಿಸಲ್ಪಟ್ಟೆ. ಎಪ್ರಿಲ್ 1991ರಲ್ಲಿ ನಾನು ಸಾರಾ ಊಕ್ಪಾಂಗಳನ್ನು ವಿವಾಹವಾದೆ. 1993ರಲ್ಲಿ, ಸರ್ಕಿಟ್ ಕೆಲಸವನ್ನು ಬಿಟ್ಟು ನೈಜಿರಿಯ ಬ್ರಾಂಚ್ನಲ್ಲಿ ಸೇವೆ ಮಾಡುವಂತೆ ನಾವು ಆಮಂತ್ರಿಸಲ್ಪಟ್ಟೆವು. ನಾವು ಆ ಆಮಂತ್ರಣವನ್ನು ಸ್ವೀಕರಿಸಿದೆವು ಮತ್ತು ನನ್ನ ಹೆಂಡತಿ ಗರ್ಭಿಣಿಯಾಗುವ ವರೆಗೆ ಅಲ್ಲಿ ಸೇವೆ ಸಲ್ಲಿಸಿದೆವು.
ನನ್ನ ತಾರುಣ್ಯದಲ್ಲಿ ನನ್ನ ಕುಟುಂಬವು ನನ್ನನ್ನು ಹೊರಗೆ ತಳ್ಳಿದರೂ, ಹೆತ್ತವರು, ಸಹೋದರರು, ಸಹೋದರಿಯರು ಮತ್ತು ಮಕ್ಕಳಿರುವ ಒಂದು ಆತ್ಮಿಕ ಕುಟುಂಬದಿಂದ ನಾನು ಸ್ವೀಕರಿಸಲ್ಪಟ್ಟೆ. ನಾನು ನಿಜವಾಗಿಯೂ ಪ್ರೀತಿಸುವ ಮತ್ತು ನನ್ನನ್ನು ನಿಜವಾಗಿಯೂ ಪ್ರೀತಿಸುವ ಈ ಅಪೂರ್ವ ಭೌಗೋಲಿಕ ಕುಟುಂಬಕ್ಕೆ ಸೇರಿರುವುದು ಎಂತಹ ಒಂದು ಆನಂದವಾಗಿದೆ!—ಊಡೋಮ್ ಊಡೊ ಹೇಳಿದಂತೆ.
[ಪುಟ 37 ರಲ್ಲಿರುವ ಚಿತ್ರ]
ಊಡೋಮ್ ಮತ್ತು ಸಾರಾ ಊಡೊ