ಯುವ ಜನರು ಪ್ರಶ್ನಿಸುವುದು . . .
ಲೈಂಗಿಕ ಕಿರುಕುಳ ನನ್ನನ್ನು ನಾನು ಹೇಗೆ ರಕ್ಷಿಸಿಕೊಳ್ಳಬಲ್ಲೆ?
ಅನೀಟ ಸುಲಭವಾಗಿ ನಗುವ, ಗೆಲವಾದ 16 ವರ್ಷ ಪ್ರಾಯದವಳು. ಆದರೆ ತನ್ನ ಶಾಲೆಯಲ್ಲಿನ ಇತ್ತೀಚಿನ ಘಟನೆಗಳನ್ನು ವರ್ಣಿಸುವಾಗ, ಆಕೆ ಮುಖ ಸಿಂಡರಿಸುತ್ತಾಳೆ. “ಬಹಳ ಜನಪ್ರಿಯನಾದ ಒಬ್ಬ ಹುಡುಗನು, ಮೊಗಸಾಲೆಯಲ್ಲಿ ತಪ್ಪಿಸಿಕೊಳ್ಳಲಾಗದ ಹಾಗೆ ನನ್ನನ್ನು ಮೂಲೆಗೆ ತಳ್ಳಿ, ಅನುಚಿತವಾಗಿ ನನ್ನನ್ನು ಮುಟ್ಟಲು ತೊಡಗಿದನು,” ಎಂದು ಆಕೆ ಜ್ಞಾಪಿಸಿಕೊಳ್ಳುತ್ತಾಳೆ. “ಇತರ ಹಲವಾರು ಹುಡುಗಿಯರು ಅವನ ಕ್ರಿಯೆಗಳಿಗೆ ಆಕ್ಷೇಪವನ್ನು ವ್ಯಕ್ತಪಡಿಸಲಿಲ್ಲ—ಅವನ ಅನುನಯಿಸುವಿಕೆಗಳಿಂದ ಅವರು ಸಂತೋಷಪಟ್ಟುಕೊಂಡರಾದರೂ, ನಾನು ಸಂತೋಷಪಡಲಿಲ್ಲ! ಮುಟ್ಟುವುದನ್ನು ನಿಲ್ಲಿಸುವಂತೆ ಅವನನ್ನು ವಿನಯಪೂರ್ಣವಾಗಿ ಕೇಳಿಕೊಂಡದ್ದು ಪರಿಣಾಮಕಾರಿಯಾಗಿರಲಿಲ್ಲ. ನಾನು ನಿಜವಾಗಿಯೂ ಅದನ್ನು ಅರ್ಥೈಸಿದೆನೆಂದು ಅವನು ನೆನಸಲಿಲ್ಲ.”
ಅನೀಟಳ ಉಭಯ ಸಂಕಟವು ಖಂಡಿತವಾಗಿಯೂ ಅಸಾಮಾನ್ಯವಾದದ್ದಲ್ಲ. ಬೈಬಲ್ ಸಮಯಗಳಲ್ಲಿ, ಲೈಂಗಿಕ ಕಿರುಕುಳವು ಸಾಮಾನ್ಯವಾಗಿತ್ತೆಂಬುದು ಸುವ್ಯಕ್ತ. (ಹೋಲಿಸಿ ರೂತಳು 2:8, 9, 15.) ಮತ್ತು ಇಂದು ಅದು ಗಾಬರಿಯಾಗುವಂತೆ ಪ್ರಚಲಿತವಾಗಿದೆ. “ಉದ್ಯೋಗದ ಸ್ಥಳದಲ್ಲಿ ಕೆಲವು ಪುರುಷರು ನನ್ನ ಶರೀರದ ಕುರಿತು ಕೀಳು ತೆರನಾದ ಹೇಳಿಕೆಗಳನ್ನು ಮಾಡಿದ್ದಾರೆ,” ಎಂದು ಹದಿವಯಸ್ಕ ಹುಡುಗಿಯೊಬ್ಬಳು ಹೇಳುತ್ತಾಳೆ. ಆದರೆ ಅನೇಕವೇಳೆ ಕಿರುಕುಳವು ಬರಿಯ ಮಾತುಗಳಿಗಿಂತ ಹೆಚ್ಚಿನದ್ದನ್ನು ಒಳಗೊಳ್ಳುತ್ತದೆ. “ಕೆಲವರು ನನ್ನನ್ನು ಮುಟ್ಟಲು ಅಥವಾ ಹಿಡಿಯಲು ಪ್ರಯತ್ನಿಸಿದ್ದಾರೆ,” ಎಂದು ಆಕೆ ಕೂಡಿಸುತ್ತಾಳೆ. ರೆನೆ ಎಂಬ ಹದಿವಯಸ್ಕ ಹುಡುಗಿಯೊಬ್ಬಳು ಎಚ್ಚರ!ಕ್ಕೆ ಹೇಳಿದ್ದು: “ಉದ್ಯೋಗದ ಸ್ಥಳದಲ್ಲಿ ಕಿರುಕುಳವು ಎಷ್ಟು ಕೀಳಾಯಿತೆಂದರೆ ನಾನು ಉದ್ಯೋಗವನ್ನು ಬಿಡಬೇಕಾಯಿತು.”
ಇತ್ತೀಚಿನ ಸಮೀಕ್ಷೆಯೊಂದು ವರದಿಸಿತ್ತೇನೆಂದರೆ, 8ರಿಂದ 11ನೆಯ ತರಗತಿಗಳಲ್ಲಿನ 81 ಪ್ರತಿಶತ ವಿದ್ಯಾರ್ಥಿಗಳು, ಕಡಿಮೆಪಕ್ಷ ಒಮ್ಮೆಯಾದರೂ ಅವರು ಲೈಂಗಿಕವಾಗಿ ಕಿರುಕುಳಗೊಳಿಸಲ್ಪಟ್ಟಿದ್ದರೆಂದು ಹೇಳಿದರು. “ಲೈಂಗಿಕವಾದ ರೀತಿಯಲ್ಲಿ ಅವರು ಮುಟ್ಟಲ್ಪಟ್ಟಿದ್ದರು, ಹಿಡಿಯಲ್ಪಟ್ಟಿದ್ದರು ಅಥವಾ ಜಿಗುಟಲ್ಪಟ್ಟಿದ್ದರೆಂದು, ಅವರಲ್ಲಿ 65 ಪ್ರತಿಶತ ಹುಡುಗಿಯರು ಮತ್ತು 42 ಪ್ರತಿಶತ ಹುಡುಗರು ಹೇಳಿದರು,” ಎಂಬುದಾಗಿ ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ವರದಿಸುತ್ತದೆ. ಹೌದು, ಹುಡುಗರು ಮತ್ತು ಹುಡುಗಿಯರು ಗುರಿಗಳಾಗಿದ್ದಾರೆ. ಹದಿವಯಸ್ಕ ಹುಡುಗನೊಬ್ಬನ ತಂದೆಯು ಜ್ಞಾಪಿಸಿಕೊಳ್ಳುವಂತೆ: “ನನ್ನ ಮಗನ ಶಾಲೆಯಲ್ಲಿರುವ ಹುಡುಗಿಯರು ಎಷ್ಟು ಉದ್ಧತರೆಂಬ ವಿಷಯದಲ್ಲಿ ನಾನು ತಲ್ಲಣಗೊಂಡಿದ್ದೇನೆ. ಅವನು ಸರಿಸುಮಾರು 12 ವರ್ಷದವನಾಗಿದ್ದಂದಿನಿಂದ, ನಿತ್ಯವಾದ ಫೋನ್ ಕರೆಗಳು, ವಿಹಾರಕ್ಕಾಗಿ ಆಮಂತ್ರಣಗಳು, ಅಶ್ಲೀಲ ಸೂಚನೆಗಳು—ಮುಂತಾದವುಗಳನ್ನು ನಾವು ಅನುಭವಿಸಿದ್ದೇವೆ.”
ಈ ರೇಗಿಸುವ ವರ್ತನೆಯನ್ನು ಲಘುವಾಗೆಣಿಸುವುದು ಸರಳ. ಒಬ್ಬಾಕೆ ಯುವತಿಯು ಹೇಳಿದ್ದು: “ಕೆಲವೊಮ್ಮೆ ಅದನ್ನು ತಮಾಷೆಯ ರೂಪದಲ್ಲಿ ಮಾಡಲಾಗುತ್ತದೆ.” ಆದರೆ ಕ್ರೈಸ್ತರಿಗೆ ಅದು ಒಂದು ತಮಾಷೆಯಾಗಿರುವುದಿಲ್ಲ! ಲೈಂಗಿಕ ಕಿರುಕುಳವು ಅನೇಕವೇಳೆ ಒಬ್ಬಳನ್ನು ಲೈಂಗಿಕ ಅನೈತಿಕತೆಯಲ್ಲಿ ಸೆಳೆಯುವ ಒಂದು ಪ್ರಯತ್ನವಾಗಿದೆ ಎಂದು ಅವರಿಗೆ ಗೊತ್ತಿದೆ, ಇದು ಯೆಹೋವ ದೇವರು ಖಂಡಿಸುವ ವಿಷಯವಾಗಿದೆ. (1 ಕೊರಿಂಥ 6:9, 10) ಇನ್ನೂ ಹೆಚ್ಚಾಗಿ, ಹರೆಯದ ಸ್ತ್ರೀಯರನ್ನು “ಪೂರ್ಣಶುದ್ಧಭಾವದಿಂದ” ಕಾಣಬೇಕೆಂದು ದೇವರ ವಾಕ್ಯವು ಆಜ್ಞಾಪಿಸುತ್ತದೆ. (1 ತಿಮೊಥೆಯ 5:2) ಅದು “ಹೊಲಸು ಮಾತ”ನ್ನೂ ನಿಷೇಧಿಸುತ್ತದೆ. (ಎಫೆಸ 5:3, 4) ಆದುದರಿಂದ, ಕ್ರೈಸ್ತ ಯುವ ವ್ಯಕ್ತಿಗಳು ಲೈಂಗಿಕ ಕಿರುಕುಳವನ್ನು ಸಹಿಸಬಾರದು! ಪ್ರಶ್ನೆಯು, ಅದರ ಗುರಿಯಾಗಿರುವುದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಲ್ಲಿರಿ? ಎಂಬುದಾಗಿದೆ. ಪ್ರತಿಬಂಧಕ ಹೆಜ್ಜೆಗಳ ಕುರಿತು ನಾವು ಮಾತಾಡೋಣ.
ಕಿರುಕುಳವನ್ನು ತಪ್ಪಿಸುವ ವಿಧಗಳು
ಕ್ರೈಸ್ತ ನಡವಳಿಕೆಗಾಗಿ ಸತ್ಕೀರ್ತಿಯನ್ನು ವಿಕಸಿಸಿಕೊಳ್ಳಿರಿ. “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ” ಎಂದು ಯೇಸು ಪ್ರಬೋಧಿಸಿದನು. (ಮತ್ತಾಯ 5:16) ಇದನ್ನು ಮಾಡುವ ಒಂದು ವಿಧವು, ನೀವು ನಂಬುವಂತಹ ವಿಷಯವನ್ನು ಶಾಲಾಸಂಗಾತಿಗಳೊಂದಿಗೆ ಮತ್ತು ಜೊತೆಕೆಲಸಗಾರರೊಂದಿಗೆ ಹಂಚಿಕೊಳ್ಳುವುದಾಗಿದೆ. ನೀವು ಆಳವಾದ ನಂಬಿಕೆ ಮತ್ತು ಉನ್ನತವಾದ ನೈತಿಕ ಮಟ್ಟಗಳಿರುವಂತಹವರು ಎಂದು ಅರಿಯಲ್ಪಡುವಾಗ, ಕಿರುಕುಳದ ಗುರಿಯು ನೀವಾಗಿರುವ ಸಾಧ್ಯತೆಗಳು ಕಡಿಮೆಯಾಗಿರುತ್ತವೆ.
ನೀವು ಉಡುಪು ಧರಿಸುವ ಮತ್ತು ಕೇಶಶೈಲಿಯ ವಿಷಯದಲ್ಲಿ ಜಾಗರೂಕರಾಗಿರಿ. ಬೈಬಲ್ ಸಮಯಗಳಲ್ಲಿ ನಿರ್ದಿಷ್ಟವಾದ ಉಡಿಗೆಯು ಒಬ್ಬ ಸ್ತ್ರೀಯನ್ನು ಅನೈತಿಕಳೆಂದು ಗುರುತಿಸಿತು. (ಹೋಲಿಸಿ ಜ್ಞಾನೋಕ್ತಿ 7:10.) ಅದೇ ರೀತಿಯಲ್ಲಿ ಇಂದು, ಉದ್ದೀಪಕ ಶೈಲಿಗಳು ನಿಮ್ಮನ್ನು ನಿಮ್ಮ ಸಮಾನಸ್ಕಂದರ ಮಧ್ಯದಲ್ಲಿ ಜನಪ್ರಿಯರನ್ನಾಗಿ ಮಾಡಬಹುದು, ಆದರೆ ಅವು ತಪ್ಪಾದ ಸಂದೇಶವನ್ನು ಹೊರಡಿಸಬಲ್ಲವು. ವಿರುದ್ಧ ಲಿಂಗದಿಂದ ಅನಪೇಕ್ಷಣೀಯ ಗಮನವನ್ನು ಪಡೆಯುತ್ತಿರುವುದಾಗಿ ನೀವು ಸ್ವತಃ ಕಂಡುಕೊಳ್ಳುವಿರಿ. ಹುಡುಗಿಯೊಬ್ಬಳು ತಾನು ನಿಜವಾಗಿಯೂ ಇರುವುದಕ್ಕಿಂತಲೂ ಹೆಚ್ಚು ದೊಡ್ಡವಳಾಗಿ ಕಾಣಿಸಿಕೊಳ್ಳುವ ವಿಧದಲ್ಲಿ ಮೇಕಪ್ ಮಾಡಿಕೊಳ್ಳುವುದಾದರೆ, ತದ್ರೀತಿಯ ಸಮಸ್ಯೆಯೊಂದು ಏಳಬಲ್ಲದು. ಬೈಬಲಿನ ಸಲಹೆಯು, ನೀವು ‘ಸಭ್ಯತೆ ಮತ್ತು ಸ್ವಸ್ಥ ಮನಸ್ಸಿನಿಂದ ಯೋಗ್ಯವಾದ ಉಡುಪನ್ನು ಧರಿಸಿರಿ’ ಎಂದಾಗಿದೆ.—1 ತಿಮೊಥೆಯ 2:9.
ನಿಮ್ಮ ಸಹವಾಸಿಗಳನ್ನು ಜೋಕೆಯಿಂದ ಆರಿಸಿರಿ. (ಜ್ಞಾನೋಕ್ತಿ 13:20) ಎಷ್ಟೆಂದರೂ, ನಿಮ್ಮ ಸಹವಾಸಿಗಳಿಗನುಗುಣವಾಗಿ ಜನರು ನಿಮ್ಮ ಯೋಗ್ಯತೆಯನ್ನು ನಿರ್ಣಯಿಸುವರು. ಮತ್ತು ನಿಮ್ಮ ಸ್ನೇಹಿತರು ವಿರುದ್ಧ ಲಿಂಗದ ಕುರಿತು ಮಾತಾಡುವುದರಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸುವವರೆಂದು ಗುರುತಿಸಲ್ಪಡುವಲ್ಲಿ, ಜನರು ನಿಮ್ಮ ಕುರಿತು ತಪ್ಪಾಗಿ ತಿಳಿಯಬಲ್ಲರು.—ಹೋಲಿಸಿ ಆದಿಕಾಂಡ 34:1, 2.
ಪ್ರಣಯಚೇಷ್ಟೆ ಮಾಡುವುದನ್ನು ತೊರೆಯಿರಿ. ಸ್ನೇಹಿತರಾಗಿರುವುದರಲ್ಲಿ ಯಾವ ತಪ್ಪೂ ಇರುವುದಿಲ್ಲವೆಂಬುದು ಸತ್ಯವಾಗಿದೆ, ಆದರೂ ದುರುಗುಟ್ಟಿ ನೋಡುವುದು ಮತ್ತು ಮುಟ್ಟುವುದು ಸರಳವಾಗಿ ವಿರುದ್ಧ ಲಿಂಗದವರಿಂದ ತಪ್ಪಾಗಿ ಗ್ರಹಿಸಲ್ಪಡಸಾಧ್ಯವಿದೆ. ಸಂಭಾಷಣೆಯೊಂದನ್ನು ಮುಂದುವರಿಸುವ ಸಲುವಾಗಿ ಯಾರೊಬ್ಬರನ್ನು ಮುಟ್ಟುವುದು ಅವಶ್ಯವಲ್ಲ. ಸುವರ್ಣ ನಿಯಮವನ್ನು ಪಾಲಿಸಿ, ನೀವು ಯಾವ ವಿಧದಲ್ಲಿ ಉಪಚರಿಸಲ್ಪಡಬೇಕೆಂದು ಬಯಸುತ್ತೀರೊ, ವಿರುದ್ಧ ಲಿಂಗದವರನ್ನು ಹಾಗೆಯೇ ಉಪಚರಿಸಿರಿ—ಶುದ್ಧವಾಗಿ ಮತ್ತು ಗೌರವದಿಂದ. (ಮತ್ತಾಯ 7:12) ಕೇವಲ ವಿನೋದಕ್ಕಾಗಿ ವಿರುದ್ಧ ಲಿಂಗದವರ ಗಮನ ಸೆಳೆಯಲು ಪ್ರಯತ್ನಿಸಬೇಡಿ. ಹಾಗೆ ಮಾಡುವುದು ಕ್ರೂರವಾದದ್ದೂ ತಪ್ಪು ದಾರಿಗೆಳೆಯುವಂತಹದ್ದೂ ಮಾತ್ರವಲ್ಲ ಅಪಾಯಕರವೂ ಆಗಿರಬಲ್ಲದು. ಜ್ಞಾನೋಕ್ತಿ 6:27ರಲ್ಲಿ ಬೈಬಲ್ ಕೇಳುವುದು, “ಮಡಲಲ್ಲಿ ಬೆಂಕಿಯನ್ನಿಟ್ಟುಕೊಂಡರೆ ಬಟ್ಟೆ ಸುಡುವದಿಲ್ಲವೇ?”
ನೀವು ಬಲಿಯಾದಾಗ
ನಿಶ್ಚಯವಾಗಿ ನಿಮ್ಮ ಉಡಿಗೆ, ಕೇಶಶೈಲಿ, ಅಥವಾ ನಡತೆಯಲ್ಲಿ ಕೆಲವೊಂದು ಬದಲಾವಣೆಗಳು ಸೂಕ್ತವಾಗಿದ್ದರೂ, ನಿಮ್ಮ ಮೇಲೆ ಕೈಗಳನ್ನಿಡುವ ಅಥವಾ ನಿಮಗೆ ಅಶ್ಲೀಲ ಸೂಚನೆಗಳನ್ನು ನೀಡುವ ಅಧಿಕಾರ ಇತರರಿಗೆ ಇರುವುದಿಲ್ಲ. ತೋರಿಕೆ ಮತ್ತು ವರ್ತನೆಯಲ್ಲಿ ಆದರ್ಶಪ್ರಾಯರಾಗಿದ್ದ ಕೆಲವು ಯುವ ವ್ಯಕ್ತಿಗಳು ಸಹ ಬಲಿಯಾಗಿದ್ದಾರೆ. ಇದು ನಿಮಗೆ ಸಂಭವಿಸುವಲ್ಲಿ ನೀವು ಏನು ಮಾಡಬೇಕು? ಇಲ್ಲಿ ಕೆಲವು ಸೂಚನೆಗಳಿವೆ.
ದೃಢವಾಗಿ ನಿರಾಕರಿಸಿರಿ. ಲೈಂಗಿಕ ಸಂಧಾನಗಳನ್ನು ಅವರು ನಿಜವಾಗಿ ಸ್ವಾಗತಿಸುವುದಾದರೂ ಕೆಲವು ಜನರು ಬೇಡವೆಂದು ಹೇಳುವ ವಿಷಯವು ಸುವಿದಿತವಾಗಿದೆ. ಆದುದರಿಂದ ಬೇಡವೆಂಬುದನ್ನು ನೀವು ಅವರಿಗೆ ಮನಗಾಣಿಸುವ ತನಕ ಆಕ್ರಮಣಕಾರರು, ಒಂದು ಅರೆ ಮನಸ್ಸಿನ ಇಲ್ಲವೆಂಬ ಉತ್ತರವನ್ನು ನಿಜವಾಗಿಯೂ ಹೌದು ಅಥವಾ ಕಡಿಮೆಪಕ್ಷ ಹೌದೆನ್ನುವ ಸಾಧ್ಯತೆಯಿದೆ ಎಂಬುದಾಗಿ ಊಹಿಸಬಹುದು. ಈ ವಿಷಯದಲ್ಲಿ ನಿಮ್ಮ ಇಲ್ಲವು ಇಲ್ಲವೆಂಬುದನ್ನು ಅರ್ಥೈಸಲಿ ಎಂಬ ಯೇಸುವಿನ ಸಲಹೆಯು ಬಹಳ ಪ್ರಾಯೋಗಿಕವಾಗಿದೆ. (ಮತ್ತಾಯ 5:37) ಮುಸಿಮುಸಿ ನಗಬೇಡಿ ಅಥವಾ ನಾಚಿಕೆಯ ನಟನೆ ಮಾಡಬೇಡಿ. ನಿಮ್ಮ ಭಾವಾಭಿನಯಗಳು, ಧ್ವನಿ, ಅಥವಾ ಮುಖಭಾವವು ನಿಮ್ಮ ಮಾತುಗಳಿಗೆ ವಿರುದ್ಧವಾಗಿರುವಂತೆ ಬಿಡಬೇಡಿ.
ರಂಪವೆಬ್ಬಿಸಿರಿ. ಲೈಂಗಿಕ ಆಕ್ರಮಣಕಾರರು ಅನೇಕವೇಳೆ, ಪ್ರತಿರೋಧಿಸಲು ತಮ್ಮ ಬಲಿಗಳ ಮನಸ್ಸಿಲ್ಲದಿರುವಿಕೆಯ ಮೇಲೆ ಅವಲಂಬಿಸುತ್ತಾರೆ. ಆದರೆ ಬೈಬಲ್ ಸಮಯಗಳಲ್ಲಿ, ಇಸ್ರಾಯೇಲ್ಯ ಸ್ತ್ರೀಯರಿಗೆ ಲೈಂಗಿಕ ಆಕ್ರಮಣವನ್ನು ಪ್ರತಿರೋಧಿಸುವ ಹಕ್ಕು, ವಾಸ್ತವವಾಗಿ ಹಂಗು ಕೊಡಲ್ಪಟ್ಟಿತ್ತು. (ಧರ್ಮೋಪದೇಶಕಾಂಡ 22:23, 24) ತದ್ರೀತಿಯಲ್ಲಿ ಇಂದು, ಅನುಚಿತವಾಗಿ ಮುಟ್ಟಲ್ಪಡುವುದು ಅಥವಾ ಮುದ್ದಾಡಲ್ಪಡುವುದು ಗಂಭೀರವಾದ ಸಮಸ್ಯೆ ಅಲ್ಲವೆಂದು ಒಬ್ಬ ಕ್ರೈಸ್ತಳಿಗೆ ಅನಿಸಬಾರದು. ಅದು ತಪ್ಪು, ಒಬ್ಬ ವ್ಯಕ್ತಿ ಹಾಗೂ ಕ್ರೈಸ್ತಳೋಪಾದಿ ನಿಮ್ಮ ಘನತೆಯ ಮೇಲೆ ಆಕ್ರಮಣವಾಗಿದೆ. ಅದನ್ನು ನೀವು ಸ್ವೀಕರಿಸಬೇಕಾಗಿಲ್ಲ! “ಕೆಟ್ಟತನವನ್ನು ಹೇಸಿ”ರಿ ಎಂದು ಬೈಬಲ್ ಪ್ರಬೋಧಿಸುತ್ತದೆ!—ರೋಮಾಪುರ 12:9.
ಅಯೋಗ್ಯ ವರ್ತನೆಯನ್ನು ತಡೆಯುವ ಒಂದು ಪರಿಣಾಮಕಾರಿ ವಿಧವು ರಂಪವೆಬ್ಬಿಸಿ, ನಿಮಗೆ ಕಿರುಕುಳ ಕೊಡುವವನನ್ನು ಪೇಚಾಟಕ್ಕೊಳಪಡಿಸುವುದು; ಬಹುಶಃ ಅವನು ನಿಲ್ಲಿಸುವನು. ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ಅನೀಟಳ ಅನುಭವವನ್ನು ಜ್ಞಾಪಿಸಿಕೊಳ್ಳಿರಿ. ತನ್ನನ್ನು ಮುಟ್ಟುವುದನ್ನು ನಿಲ್ಲಿಸಬೇಕೆಂದು ಅವಳ ಆಕ್ರಮಣಕಾರನನ್ನು ವಿನಯಪೂರ್ಣವಾಗಿ ಕೇಳಿಕೊಂಡದ್ದು ಯಶಸ್ಸು ಕಾಣಲಿಲ್ಲ. ಅನೀಟ ನಮಗೆ ಹೇಳುವುದು: “ಆ ರೀತಿಯಲ್ಲಿ ನನ್ನನ್ನು ಅವನು ಮುಟ್ಟಬಾರದು ಎಂದು ಗಟ್ಟಿಯಾಗಿ ಅವನ ಸ್ನೇಹಿತರ ಮುಂದೆ ಹೇಳುವ ಮೂಲಕ ನಾನು ಅವನನ್ನು ಪೇಚಾಟಕ್ಕೊಳಪಡಿಸಬೇಕಿತ್ತು!” ಫಲಿತಾಂಶವು ಏನಾಗಿತ್ತು? “ಅವನೆಲ್ಲ ಸ್ನೇಹಿತರು ಅವನ ಗೇಲಿಮಾಡಿದರು. ಸ್ವಲ್ಪ ಸಮಯಕ್ಕಾಗಿ ಅವನು ಬಹಳ ಉತ್ಸಾಹಶೂನ್ಯನಾಗಿದ್ದನು, ಆದರೆ ಕೆಲವೊಂದು ದಿನಗಳ ತರುವಾಯ ತನ್ನ ವರ್ತನೆಗಾಗಿ ಅವನು ಕ್ಷಮೆಯಾಚಿಸಿದನು ಮತ್ತು ತದನಂತರ ಬೇರೆ ಯಾರೊ ನನ್ನನ್ನು ಕಾಡಿಸಲು ಪ್ರಯತ್ನಿಸಿದಾಗ ನನ್ನನ್ನು ಕಾಪಾಡಿದನು.”
ಮಾತುಗಳು ಪರಿಣಾಮಕಾರಿಯಾಗಿರದಿದ್ದಲ್ಲಿ, ನೀವು ಆಕ್ರಮಣದ ಸ್ಥಳದಿಂದ ಸುಮ್ಮನೆ ನಡೆದುಬಿಡಬೇಕು ಇಲ್ಲವೆ ಓಡಿಹೋಗಬೇಕು. ಮತ್ತು ತಪ್ಪಿಸಿಕೊಳ್ಳುವುದು ಸಾಧ್ಯವಿರದಿದ್ದಲ್ಲಿ, ಪೀಡನೆಯನ್ನು ತಡೆಯಲು ಅಗತ್ಯವಿರುವ ಯಾವುದೇ ವಿಧಾನವನ್ನು ಉಪಯೋಗಿಸುವ ಹಕ್ಕು ನಿಮಗಿದೆ. ಒಬ್ಬ ಕ್ರೈಸ್ತ ಹುಡುಗಿಯು ಅದನ್ನು ಖಡಾಖಂಡಿತವಾಗಿ ಈ ರೀತಿಯಲ್ಲಿ ಹೇಳಿದಳು: “ನನ್ನನ್ನು ಹಿಡಿಯಲು ಒಬ್ಬ ಹುಡುಗನು ಪ್ರಯತ್ನಿಸಿದಾಗ, ಸಾಧ್ಯವಾದಷ್ಟು ಬಲವಾಗಿ ಅವನನ್ನು ಗುದ್ದಿ, ನಾನು ಓಡಿಹೋದೆ!” ನಿಶ್ಚಯವಾಗಿಯೂ ಕಿರುಕುಳ ಕೊಡುವವನು ಮತ್ತೊಮ್ಮೆ ಪ್ರಯತ್ನಿಸಲಾರನೆಂಬುದನ್ನು ಇದು ಅರ್ಥೈಸುವುದಿಲ್ಲ. ಆದುದರಿಂದ ಒಂದಿಷ್ಟು ಸಹಾಯವನ್ನು ಪಡೆಯುವ ಅಗತ್ಯ ನಿಮಗೆ ಬಹುಶಃ ಇರುವುದು.
ಯಾರಿಗಾದರೂ ಹೇಳಿ. “ಅಂತಿಮವಾಗಿ ನಾನು ಅದನ್ನೇ ಮಾಡಬೇಕಾಯಿತು,” ಎಂದು 16 ವರ್ಷ ಪ್ರಾಯದ ಏಡ್ರೀಅನ್ ಒಪ್ಪಿಕೊಳ್ಳುತ್ತಾಳೆ. “ಒಳ್ಳೆಯ ಮಿತ್ರನೆಂದು ನಾನು ನೆನಸಿದ್ದ ಒಬ್ಬ ಹುಡುಗನು ಲೈಂಗಿಕವಾಗಿ ನನ್ನನ್ನು ಬಿಡದೆ ಕಿರುಕುಳಕ್ಕೆ ಒಳಪಡಿಸಿದ ಸನ್ನಿವೇಶದ ಕುರಿತು ಸಲಹೆ ನೀಡುವಂತೆ ನಾನು ನನ್ನ ಹೆತ್ತವರನ್ನು ಕೇಳಿಕೊಂಡೆ. ಬಹುಮಟ್ಟಿಗೆ ಅದೊಂದು ವಿನೋದವೊ ಎಂಬಂತೆ, ನಾನು ಪ್ರತಿಭಟಿಸಿದಷ್ಟು ಹೆಚ್ಚಾಗಿ ಅವನು ಪಟ್ಟುಹಿಡಿಯುವವನಾದನು.” ಸಮಸ್ಯೆಯೊಂದಿಗೆ ಉತ್ತಮವಾಗಿ ನಿಭಾಯಿಸುವಂತೆ ಆಕೆಗೆ ಸಹಾಯ ಮಾಡಿದ ಪ್ರಾಯೋಗಿಕ ಸಲಹೆಯು ಏಡ್ರೀಅನಳ ಹೆತ್ತವರಲ್ಲಿತ್ತು.
ಬಲಿಯಾಗುವಿಕೆಯಿಂದ ಫಲಿಸಬಹುದಾದ ಪೇಚಾಟ, ಭಯ, ಅಥವಾ ಅವಮಾನದಂತಹ ಯಾವುದೇ ಭಾವಾತ್ಮಕ ಪರಿಣಾಮಗಳೊಂದಿಗೆ ನಿರ್ವಹಿಸಲು ಸಹ ನಿಮ್ಮ ಹೆತ್ತವರು ನಿಮಗೆ ಸಹಾಯ ಮಾಡಬಲ್ಲರು. ಆಕ್ರಮಣವು ನಿಮ್ಮ ತಪ್ಪಾಗಿರಲಿಲ್ಲವೆಂಬ ಆಶ್ವಾಸನೆಯನ್ನು ಅವರು ನಿಮಗೆ ನೀಡಬಲ್ಲರು. ಭವಿಷ್ಯದಲ್ಲಿ ನಿಮ್ಮನ್ನು ಸಂರಕ್ಷಿಸಲು ಸಹಾಯ ಮಾಡಲಿಕ್ಕಾಗಿ ಅವರು ಹೆಜ್ಜೆಗಳನ್ನೂ ತೆಗೆದುಕೊಳ್ಳಬಹುದು.
ಉದಾಹರಣೆಗೆ, ಸಮಸ್ಯೆಯ ಕುರಿತು ನಿಮ್ಮ ಶಿಕ್ಷಕರಿಗೆ ಅಥವಾ ಶಾಲಾ ಅಧಿಕಾರಿಗಳಿಗೆ ತಿಳಿಸುವುದು ಪ್ರಯೋಜನಕರವೆಂದು ಅವರು ನಿರ್ಧರಿಸಬಹುದು. ಅಮೆರಿಕದಲ್ಲಿನ ಅನೇಕ ಶಾಲೆಗಳು, ದೂರುಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತವೆ ಮತ್ತು ವಿದ್ಯಾರ್ಥಿಗಳೊಳಗೆ ಲೈಂಗಿಕ ಕಿರುಕುಳವನ್ನು ನಿರ್ವಹಿಸಲು ಸುಸ್ಪಷ್ಟವಾಗಿದ ನೀತಿಗಳನ್ನು ಅನುಸರಿಸುತ್ತವೆ.
ನಿಜ, ಎಲ್ಲ ಶಾಲಾ ಅಧಿಕಾರಿಗಳು ಸಹಾನುಭೂತಿ ತೋರಿಸುವವರಾಗಿರುವುದಿಲ್ಲ. “ನನ್ನ ಶಾಲೆಯಲ್ಲಿ,” 14 ವರ್ಷ ಪ್ರಾಯದ ಅರ್ಲೀಷಾ ಹೇಳುವುದು, “ಶಿಕ್ಷಕರು ಕೆಲವೊಮ್ಮೆ ನಿಂದಿಸಿ, ಮಕ್ಕಳಿಗಿಂತ ಹೆಚ್ಚು ಕೆಟ್ಟದ್ದಾಗಿ ವರ್ತಿಸುತ್ತಾರೆ. ಸಹಾಯಕ್ಕಾಗಿ ಎತ್ತ ಹೋಗಬೇಕೆಂದು ನಿಮಗೆ ತಿಳಿಯದಂತಾಗುತ್ತದೆ.” ಆದಕಾರಣ, ಕಿರುಕುಳಗೊಳಿಸಲ್ಪಟ್ಟೆನೆಂದು ಆಕೆ ವರದಿಸಿದಾಗ, ಅತಿಸೂಕ್ಷ್ಮಸಂವೇದಿಯೆಂಬ ಆಪಾದನೆಯನ್ನು ಆಕೆ ಪಡೆದದ್ದು ಆಶ್ಚರ್ಯಕರವಲ್ಲ. ಆದರೆ ಅರ್ಲೀಷಾ ಪ್ರಯತ್ನವನ್ನು ಬಿಟ್ಟುಬಿಡಲಿಲ್ಲ. ಅದೇ ಹುಡುಗನಿಂದ ಜಿಗುಟಲ್ಪಟ್ಟ ಮತ್ತು ಮುದ್ದಾಡಿಸಲ್ಪಟ್ಟಿದ್ದ ಬೇರೆ ಆರು ಹುಡುಗಿಯರನ್ನು ಆಕೆ ಒಟ್ಟುಸೇರಿಸಿದಳು. “ನಿಜವಾದ ಒಂದು ಸಮಸ್ಯೆಯಿತ್ತೆಂದು ಮುಖ್ಯೋಪಾಧ್ಯಾಯರಿಗೆ ಮನಗಾಣಿಸಲು ನಾವು ಆರು ಮಂದಿ ಬೇಕಾಗಿದ್ದೆವು,” ಎಂದು ಆಕೆ ಹೇಳುತ್ತಾಳೆ. ಕಟ್ಟಕಡೆಗೆ ಆ ಅಯೋಗ್ಯ ವರ್ತನೆಯು ನಿಲ್ಲುವಂತೆ ಮಾಡಲು ಆಕೆ ಶಕ್ತಳಾದಳು.
ಬೆಂಬಲಕ್ಕಾಗಿ ದೇವರ ಕಡೆಗೆ ತಿರುಗಿರಿ. ಶಾಲೆಯಲ್ಲಿರುವುದು ಕೆಲವೊಮ್ಮೆ ಒಂದು ಸಿಂಹದ ಗವಿಯೊಳಗೆ ಇರುವಂತೆ ಅನಿಸಿದರೆ, ಯೆಹೋವ ದೇವರು ಪ್ರವಾದಿಯಾದ ದಾನಿಯೇಲನನ್ನು ಒಂದು ಅಕ್ಷರಾರ್ಥದ ಸಿಂಹಗಳ ಗವಿಯಿಂದ ರಕ್ಷಿಸಿದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. (ದಾನಿಯೇಲ 6:16-22) ಯೆಹೋವನು ನಿಮಗೂ ಸಹಾಯ ನೀಡಬಲ್ಲನು. ಶಾಲೆಯಲ್ಲಿ ನೀವು ಎದುರಿಸುವ ಒತ್ತಡಗಳನ್ನು ಆತನು ಅರ್ಥಮಾಡಿಕೊಳ್ಳುತ್ತಾನೆ. ಮತ್ತು ಸನ್ನಿವೇಶವು ಕಠಿನವಾದರೆ, ಸಹಾಯಕ್ಕಾಗಿ ನೀವು ಆತನಲ್ಲಿ ಬೇಡಿಕೊಳ್ಳಸಾಧ್ಯವಿದೆ—ಅಗತ್ಯವಿದ್ದಲ್ಲಿ ಗಟ್ಟಿಯಾಗಿ! ಸತ್ಯ ದೇವರ ಒಬ್ಬ ಸೇವಕರಂತೆ ಗುರುತಿಸಿಕೊಳ್ಳಲು ಭಯಪಡಬೇಡಿ ಅಥವಾ ನಾಚಿಕೆಪಟ್ಟುಕೊಳ್ಳಬೇಡಿ. ಯೆಹೋವನ ನಂಬಿಗಸ್ತ ಸೇವಕರಿಗೆ ಬೈಬಲ್ ವಾಗ್ದಾನವನ್ನೀಯುವುದು: “ಆತನು ತನ್ನ ಭಕ್ತರ ಪ್ರಾಣಗಳನ್ನು ಕಾಯುವವನಾಗಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.”—ಕೀರ್ತನೆ 97:10.
ಇದು ಅದ್ಭುತಕರವಾದ ಬಿಡುಗಡೆಯ ಖಾತರಿಯನ್ನು ನೀಡುವುದಿಲ್ಲ. ನಿಮ್ಮನ್ನು ಸಂರಕ್ಷಿಸಿಕೊಳ್ಳಲು ನಿಮಗೆ ಸಾಧ್ಯವಾದದ್ದನ್ನು ನೀವು ಮಾಡಬೇಕು. ಬೈಬಲ್ ಮೂಲತತ್ವಗಳನ್ನು ಅನುಸರಿಸಿರಿ. ನಿಮ್ಮ ಮಾತು ಮತ್ತು ತೋರಿಕೆಯಲ್ಲಿ ಸಭ್ಯರಾಗಿರ್ರಿ. ವಿರುದ್ಧ ಲಿಂಗದವರೊಂದಿಗೆ ವ್ಯವಹರಿಸುವಾಗ ಜಾಗ್ರತೆ ವಹಿಸಿರಿ. ಹೀಗೆ ಮಾಡುವ ಮೂಲಕ, ಕಿರುಕುಳದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಹೆಚ್ಚನ್ನು ಮಾಡಬಲ್ಲಿರಿ.
[ಪುಟ 31 ರಲ್ಲಿರುವ ಚಿತ್ರ]
ಅಯೋಗ್ಯ ಸಮೀಪಿಸುವಿಕೆಗಳನ್ನು ನಿರಾಕರಿಸುವಾಗ ಅರೆ ಮನಸ್ಸಿನವರಾಗಿರಬೇಡಿ; ನಿಮ್ಮ ಇಲ್ಲವು ಇಲ್ಲವೆಂಬುದನ್ನು ಅರ್ಥೈಸಲಿ!