ಲೈಂಗಿಕ ಕಿರುಕುಳ ನಿಮ್ಮನ್ನು ಸಂರಕ್ಷಿಸಿಕೊಳ್ಳುವ ವಿಧ
“ಯಾವ ಸ್ತ್ರೀಯೂ ದಿನಾಲೂ ಲೈಂಗಿಕ ವ್ಯಂಗ್ಯೋಕ್ತಿಗೆ ಒಳಗಾಗಬಾರದಾದರೂ, ಅಸಂಸ್ಕೃತ ವರ್ತನೆಯಿಂದ ಮುಕ್ತವಾದ ಹಿಂದಿನ ನಿರ್ಮಲಸ್ಥಿತಿಯ ಕೆಲಸದ ಪರಿಸರವನ್ನು ಸ್ತ್ರೀಯರು ಅಪೇಕ್ಷಿಸುವುದು ಸಹ ವಿವೇಚನೆಯುಳ್ಳದ್ದಾಗಿರುವುದಿಲ್ಲ,” ಎಂದು ಪತ್ರಿಕಾ ಸಂಪಾದಕಿ ಗ್ರೆಚಾನ್ ಮಾರ್ಗೆನ್ಸನ್ ಹೇಳುತ್ತಾರೆ. ಪ್ರಶಂಸನೀಯವಾಗಿ, ಕೆಲಸದ ಸ್ಥಳವನ್ನು ಹೆಚ್ಚು ಸುರಕ್ಷಿತವಾಗಿ ಮಾಡಲು ಧಣಿಗಳು ಹಾಗೂ ನ್ಯಾಯಾಲಯಗಳ ಮೂಲಕ ಕೈಗೊಳ್ಳಲ್ಪಡುವ ಪ್ರಯತ್ನಗಳು, ಕೆಲವೊಂದು ಉತ್ತಮ ಫಲಿತಾಂಶಗಳನ್ನು ಫಲಿಸಿವೆ. ಉದಾಹರಣೆಗೆ, ದಾವೆಯ ಗಂಡಾಂತರವು, ಕೆಲಸದ ಪರಿಸರವನ್ನು ಉತ್ತಮಗೊಳಿಸಲು ಪ್ರಯತ್ನಿಸುವಂತೆ ಲೋಕದ ಸುತ್ತಲೂ ಇರುವ ಧಣಿಗಳನ್ನು ಹಾಗೂ ಕಾರ್ಮಿಕರನ್ನು ಪ್ರೋತ್ಸಾಹಿಸಿದೆ. ಅನೇಕ ಕಂಪನಿಗಳು, ಕೆಲಸದ ಸ್ಥಳದ ಕಾಡಿಸುವಿಕೆಯನ್ನು ನಿಭಾಯಿಸಲಿಕ್ಕಾಗಿ, ಸಂಸ್ಥೆಯೊಳಗೆ ನಡೆಸಲ್ಪಡುವ ಕಾರ್ಯವಿಧಾನಗಳನ್ನು ವಿಕಸಿಸಿಕೊಂಡಿವೆ. ಕೆಲಸದ ಸ್ಥಳದ ಯೋಗ್ಯವಾದ ವರ್ತನೆಯಲ್ಲಿ ಕೆಲಸಮಾಡುವವರಿಗೆ ಉಪದೇಶ ನೀಡಲು, ಕೂಟಗಳು ಹಾಗೂ ಚರ್ಚಾಕೂಟಗಳು ನಡೆಸಲ್ಪಡುತ್ತವೆ.
ನಿಶ್ಚಯವಾಗಿಯೂ, ಕಂಪನಿಯ ಕಾರ್ಯನೀತಿಗಳನ್ನು ಮತ್ತು ಸ್ಥಳಿಕ ನಿಯಮಗಳನ್ನು ಅರಿತಿರುವುದು ಮತ್ತು ಅನುಸರಿಸುವುದು ವಿವೇಕಯುತವಾದ ಸಂಗತಿಯೇ ಸರಿ. (ರೋಮಾಪುರ 13:1; ತೀತ 2:9) ಬೈಬಲ್ ಮೂಲತತ್ವಗಳನ್ನು ಅನ್ವಯಿಸಿಕೊಳ್ಳುವುದನ್ನೂ ಕ್ರೈಸ್ತರು ಸಹಾಯಕಾರಿಯಾಗಿ ಕಂಡುಕೊಂಡಿದ್ದಾರೆ. ನಿಮ್ಮ ಕೆಲಸದ ಸಂಗಾತಿಗಳೊಂದಿಗಿನ ನಿಮ್ಮ ವ್ಯವಹಾರಗಳಲ್ಲಿ ಈ ಪ್ರೇರಿತ ಮಾರ್ಗದರ್ಶನಗಳನ್ನು ಅನುಸರಿಸುವುದು, ಲೈಂಗಿಕ ಕಿರುಕುಳದ ಬಲಿಯಾಗುವುದನ್ನು—ಅಥವಾ ಅದನ್ನು ಆಚರಿಸುವವರಾಗುವುದನ್ನು—ತೊರೆಯುವಂತೆ ನಿಮಗೆ ಸಹಾಯ ಮಾಡಲು ಹೆಚ್ಚನ್ನು ಮಾಡಸಾಧ್ಯವಿದೆ.
ಪುರುಷರಿಗೆ ಯೋಗ್ಯವಾದ ನಡತೆ
ಪುರುಷರು ಸ್ತ್ರೀಯರನ್ನು ಹೇಗೆ ಉಪಚರಿಸಬೇಕೆಂಬ ವಿಷಯವನ್ನು ಪರಿಗಣಿಸಿರಿ. ಅನೇಕ ಪರಿಣತರು, ವಿರುದ್ಧ ಲಿಂಗದವರನ್ನು ಸ್ಪರ್ಶಿಸುವುದರ ವಿರುದ್ಧವಾಗಿ ಎಚ್ಚರಿಸುತ್ತಾರೆ. ಬೆನ್ನಿನ ಮೇಲೆ ಒಂದು ಸ್ನೇಹಪರ ತಟ್ಟುವಿಕೆಯು ಸುಲಭವಾಗಿ ಅಪಾರ್ಥಮಾಡಿಕೊಳ್ಳಲ್ಪಡಸಾಧ್ಯವಿದೆ ಎಂದು ಅವರು ಎಚ್ಚರಿಕೆ ನೀಡುತ್ತಾರೆ. “ನ್ಯಾಯದರ್ಶಿಗಳ ಮಂಡಲಿಯು ಸ್ಪರ್ಶಿಸುವುದನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ,” ಎಂಬುದಾಗಿ ಕಾರ್ಮಿಕ ವಕೀಲರಾದ ಫ್ರ್ಯಾಂಕ್ ಹಾರ್ಟಿ ಗಮನಿಸುತ್ತಾರೆ. ಅವರ ಸಲಹೆಯೇನು? “ಅದು ಕೈಕುಲಕುವುದಕ್ಕಿಂತ ಹೆಚ್ಚಿನದ್ದನ್ನು ಒಳಗೊಳ್ಳುವುದಾದರೆ, ಅದನ್ನು ಮಾಡಬೇಡಿ.” ಈ ವಿಷಯದ ಮೇಲೆ ಸ್ವತಃ ಬೈಬಲು ಯಾವುದೇ ಸರ್ವವ್ಯಾಪಕ ಕಟ್ಟಳೆಯನ್ನು ಮಾಡುವುದಿಲ್ಲ, ನಿಜ.a ಆದರೆ ಸದ್ಯದ ನ್ಯಾಯಸಂಬಂಧಿತ ಹಾಗೂ ನೈತಿಕ ವಾತಾವರಣದ ನೋಟದಲ್ಲಿ—ತಾವು ಸಂಭಾಷಿಸಿದಂತೆ ಅರಿವಿಲ್ಲದೆ ಸ್ಪರ್ಶಿಸುವ ಪ್ರವೃತ್ತಿಯಿರುವವರಿಗೆ ವಿಶೇಷವಾಗಿ—ಎಚ್ಚರಿಕೆಯು ಅತ್ಯಾವಶ್ಯಕವಾಗಿದೆ.
ಇಂತಹ ಬುದ್ಧಿವಾದನ್ನು ಅನುಸರಿಸುವುದು ಯಾವಾಗಲೂ ಸುಲಭವಲ್ಲವೆಂಬ ಮಾತು ಒಪ್ಪತಕ್ಕದ್ದು. ದೃಷ್ಟಾಂತಕ್ಕೆ, ಗ್ಲೆನ್, ಹಿಸ್ಪ್ಯಾನಿಕ್ ಸಂಸ್ಕೃತಿಯಿಂದ ಬರುತ್ತಾನೆ. “ಅಮೆರಿಕದಲ್ಲಿರುವ ಜನರಿಗಿಂತ ನಾನು ಬರುವಂತಹ ಕ್ಷೇತ್ರದಲ್ಲಿನ ಜನರು, ನಿಮ್ಮನ್ನು ಅಪ್ಪಿಕೊಳ್ಳುವ ಹೆಚ್ಚಿನ ಪ್ರವೃತ್ತಿಯುಳ್ಳವರು” ಎಂದು ಅವನು ಹೇಳುತ್ತಾನೆ. “ನನ್ನ ಕುಟುಂಬದಲ್ಲಿ ನಾವು ಅನೇಕ ವೇಳೆ ಸ್ನೇಹಿತರನ್ನು ಮುದ್ದಿಟ್ಟು ವಂದಿಸುತ್ತೇವೆ, ಆದರೆ ಇಲ್ಲಿ ಅದನ್ನು ಮಾಡಲು ತೀರ ಕ್ಷಿಪ್ರರಾಗಿರದಂತೆ ನಾವು ಎಚ್ಚರಿಸಲ್ಪಟ್ಟೆವು.” ಈ ವಿಷಯದಲ್ಲಿ ಬೈಬಲ್ ಮೂಲತತ್ವಗಳಾದರೊ ಸಹಾಯಕರವಾಗಿ ಪರಿಣಮಿಸುತ್ತವೆ. ಯುವ ಪುರುಷನಾದ ತಿಮೊಥೆಯನಿಗೆ ಅಪೊಸ್ತಲ ಪೌಲನು ಹೇಳಿದ್ದು: “ಯುವ ಪುರುಷರನ್ನು ಸಹೋದರರಂತೆ, ಹಿರಿಯ ಸ್ತ್ರೀಯರನ್ನು ತಾಯಂದಿರಂತೆ, ಮತ್ತು ಯುವ ಸ್ತ್ರೀಯರನ್ನು ಸಹೋದರಿಯರಂತೆ, ಸಂಪೂರ್ಣ ಶುದ್ಧತೆಯಿಂದ ಉಪಚರಿಸು.” (1 ತಿಮೊಥೆಯ 5:1, 2, ನ್ಯೂ ಇಂಟರ್ನ್ಯಾಷನಲ್ ವರ್ಷನ್) ಅದು ಸ್ವೇಚ್ಛಾ ಸಂಪರ್ಕದ, ಮೋಹಕವಾದ, ಅಥವಾ ಅಸ್ವೀಕೃತ ಸ್ಪರ್ಶವನ್ನು ಹೊರಹಾಕುವುದಿಲ್ಲವೊ?
ಅದೇ ಮೂಲತತ್ವವು ಮಾತಿಗೆ ಅನ್ವಯಿಸಲ್ಪಡಸಾಧ್ಯವಿದೆ. ಸೂಕ್ತವಾಗಿಯೇ, ಬೈಬಲು ಹೇಳುವುದು: “ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು; ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು. ಹೊಲಸು ಮಾತು ಹುಚ್ಚು ಮಾತು ಕುಚೋದ್ಯ ಮಾತು ಇವು ಬೇಡ, ಅಯುಕ್ತವಾಗಿವೆ.” (ಎಫೆಸ 5:3, 4) ಲೈಂಗಿಕ ಕಿರುಕುಳದ ಸ್ತ್ರೀ ನ್ಯಾಯವಾದಿ, ಕ್ಯಾಥಿ ಚಿನೊಯಿ ಸೂಚಿಸುವುದೇನೆಂದರೆ, ಮಾತಾಡುವ ಮೊದಲು ನೀವು ಒಂದು ಪ್ರಶ್ನೆಯನ್ನು ಪರಿಗಣಿಸಿರಿ: “ಆ ರೀತಿಯ ಮಾತಿಗೆ ನಿಮ್ಮ ತಾಯಿ, ಸಹೋದರಿ, ಅಥವಾ ಮಗಳು ಒಡ್ಡಲ್ಪಡುವುದನ್ನು ನೀವು ಬಯಸುವಿರೊ?” ಅಶ್ಲೀಲ, ಸೂಚನಾತ್ಮಕ ಮಾತು, ಮಾತಾಡುವವನನ್ನೂ ಕೇಳುವವನನ್ನೂ—ಇಬ್ಬರನ್ನೂ—ಕೀಳ್ಮಟ್ಟಕ್ಕಿಳಿಸುತ್ತದೆ.
ಕಿರುಕುಳವನ್ನು ತಡೆಯುವುದು
ಕಿರುಕುಳದ ಒಂದು ಬಲಿಯಾಗುವುದನ್ನು ಒಬ್ಬನು ಹೇಗೆ ತೊರೆಯಲು ಪ್ರಯತ್ನಿಸಬಲ್ಲನು? ಯೇಸು ತನ್ನ ಶಿಷ್ಯರನ್ನು ಅವರ ಪ್ರಥಮ ಸಾರುವ ನೇಮಕದ ಮೇಲೆ ಕಳುಹಿಸಿದಾಗ, ಅವರಿಗೆ ಅವನು ನೀಡಿದ ಬುದ್ಧಿವಾದವು ಬಹುಶಃ ಈ ಸಂದರ್ಭದಲ್ಲಿ ಅನ್ವಯಿಸಲ್ಪಡಸಾಧ್ಯವಿದೆ: “ನೋಡಿರಿ, ತೋಳಗಳ ನಡುವೆ ಕುರಿಗಳನ್ನು ಹೊಗಿಸಿದಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ. ಆದದರಿಂದ ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರ್ರಿ.” (ಮತ್ತಾಯ 10:16) ಹೇಗಾದರೂ, ಕ್ರೈಸ್ತನೊಬ್ಬನು ನಿಸ್ಸಹಾಯಕನಾಗಿರುವುದಿಲ್ಲ. ಬೈಬಲು ನಮಗೆ ಆಶ್ವಾಸನೆ ನೀಡುವುದು: “ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವದು, . . . ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು ನಿನ್ನನ್ನು ಕಾಪಾಡುವದು.” (ಜ್ಞಾನೋಕ್ತಿ 2:10, 11) ಆದುದರಿಂದ, ನೀವು ನಿಮ್ಮನ್ನು ಸಂರಕ್ಷಿಸಿಕೊಳ್ಳಸಾಧ್ಯವಿರುವಂತೆ ಸಹಾಯಮಾಡಬಲ್ಲ ಕೆಲವೊಂದು ಬೈಬಲ್ ಮೂಲತತ್ವಗಳನ್ನು ನಾವು ನೋಡೋಣ.
1. ಕೆಲಸದ ಸಂಗಾತಿಗಳೊಂದಿಗೆ ನೀವು ಹೇಗೆ ನಡೆದುಕೊಳ್ಳುತ್ತೀರೆಂದು ಸ್ವತಃ ಎಚ್ಚರಿಕೆಯಿಂದಿರಿ. ಇದು ನೀವು ನಿರುತ್ಸಾಹಕರಾಗಿ ಅಥವಾ ವೈರತ್ವವುಳ್ಳವರಾಗಿ ಇರುವುದನ್ನು ಅರ್ಥೈಸುವುದಿಲ್ಲ, ಏಕೆಂದರೆ “ಎಲ್ಲರ ಸಂಗಡ ಸಮಾಧಾನದಿಂದಿರುವದಕ್ಕೂ” ಬೈಬಲು ನಮ್ಮನ್ನು ಉತ್ತೇಜಿಸುತ್ತದೆ. (ಇಬ್ರಿಯ 12:14; ರೋಮಾಪುರ 12:18) ಆದರೆ “ಹೊರಗಿನವರ ಮುಂದೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ,” ಎಂಬುದಾಗಿ ಬೈಬಲು ಕ್ರೈಸ್ತರಿಗೆ ಎಚ್ಚರಿಕೆಯನ್ನು ನೀಡುವುದರಿಂದ, ವಿಶೇಷವಾಗಿ ವಿರುದ್ಧ ಲಿಂಗದವರೊಂದಿಗೆ ವ್ಯವಹರಿಸುವಾಗ, ವ್ಯವಹಾರೋಚಿತವಾದ ನಡತೆಯನ್ನು ಕಾಪಾಡಿಕೊಳ್ಳುವುದು ವಿವೇಕಯುತವಾದದ್ದಾಗಿದೆ. (ಕೊಲೊಸ್ಸೆ 4:5) ಎಲಿಸಬೆತ್ ಪಾವೆಲ್ ಅವರಿಂದ ಬರೆಯಲ್ಪಟ್ಟ, ಟಾಕಿಂಗ್ ಬ್ಯಾಕ್ ಟು ಸೆಕ್ಷ್ಯುಅಲ್ ಪ್ರೆಷರ್ ಎಂಬ ಪುಸ್ತಕವು, “ತಮ್ಮ ಪಾತ್ರಕ್ಕೆ ಸೂಕ್ತವಾಗಿರುವ ಹಿತವಾದ ಮನೋಭಾವ ಮತ್ತು ಲೈಂಗಿಕ ಮುಚ್ಚುಮರೆಯಿಲ್ಲದಿರುವಿಕೆಯನ್ನು ಅರ್ಥೈಸಸಾಧ್ಯವಿರುವ ರೀತಿಯ ಸ್ನೇಹಮೈತ್ರಿಯ ನಡುವೆ ವ್ಯತ್ಯಾಸವನ್ನು ಗುರುತಿಸಲು ಕಲಿಯುವಂತೆ,” ಕಾರ್ಮಿಕರನ್ನು ಉತ್ತೇಜಿಸುತ್ತದೆ.
2. ಮಾನಮರ್ಯಾದೆಯಿಂದ ಉಡುಪು ಧರಿಸಿರಿ. ನೀವು ಧರಿಸುವ ಉಡುಪು ಇತರರಿಗೆ ಒಂದು ಸಂದೇಶವನ್ನು ಕಳುಹಿಸುತ್ತದೆ. ಹಿಂದೆ, ಬೈಬಲ್ ಸಮಯಗಳಲ್ಲಿ, ನಿರ್ದಿಷ್ಟ ಶೈಲಿಗಳ ಉಡುಪುಗಳನ್ನು ಧರಿಸುವುದು ಒಬ್ಬ ವ್ಯಕ್ತಿಯನ್ನು ಅನೈತಿಕ ಅಥವಾ ಸ್ವೇಚ್ಛಾಸಂಪರ್ಕವುಳ್ಳವನಾಗಿ ಗುರುತಿಸುತ್ತಿತ್ತು. (ಜ್ಞಾನೋಕ್ತಿ 7:10) ಅದೇ ವಿಷಯವು ಇಂದು ಸಹ ಅನೇಕ ವೇಳೆ ಸತ್ಯವಾಗಿರುತ್ತದೆ; ಬಿಗಿಯಾದ, ಥಳುಕಿನ, ಅಥವಾ ಪ್ರದರ್ಶನಾತ್ಮಕವಾದ ಉಡುಗೆಯು ತಪ್ಪಾದ ರೀತಿಯ ಗಮನವನ್ನು ಸೆಳೆಯಬಲ್ಲದು. ತಾವು ಬಯಸುವ ಏನನ್ನಾದರೂ ಧರಿಸಿಕೊಳ್ಳುವ ಹಕ್ಕು ತಮಗಿದೆಯೆಂದು ಕೆಲವರಿಗೆ ಅನಿಸಬಹುದು, ನಿಜ. ಆದರೆ ಬರಹಗಾರ್ತಿ ಎಲಿಸಬೆತ್ ಪಾವೆಲ್ ಅದನ್ನು ಹೇಳುವಂತೆ, “ಹಣವನ್ನು ಕದಿಯುವುದು ಅಂಗೀಕಾರಾರ್ಹವೆಂದು ನಂಬುವ ಜನರ ಮಧ್ಯದಲ್ಲಿ ನೀವು ಕೆಲಸಮಾಡುವುದಾದರೆ, ನಿಮ್ಮ ನೋಟು ಚೀಲವನ್ನು ಸೊಂಟಕ್ಕೆ ಕಟ್ಟಿಕೊಳ್ಳದೆ ಇರುವಂತೆ ನಾನು ನಿಮಗೆ ಹೇಳುವೆ. . . . ನೀವು ಸಮಾಜದ ಮನೋಭಾವಗಳ . . . ಬಲಹೀನತೆಗಳನ್ನು ಗುರುತಿಸಬೇಕು ಮತ್ತು ಅವುಗಳ ಮೂಲಕ ಬಲಿಯಾಗುವುದರಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಲು ಪ್ರಯತ್ನಿಸಬೇಕು.” ಹೀಗೆ ಬೈಬಲಿನ ಬುದ್ಧಿವಾದವು ಕಾಲೋಚಿತವಾಗಿದೆ. ಅದು ಸ್ತ್ರೀಯರಿಗೆ “ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು,” ಎಚ್ಚರಿಕೆ ನೀಡುತ್ತದೆ. (1 ತಿಮೊಥೆಯ 2:9) ಮಾನಮರ್ಯಾದೆಯಿಂದ ಉಡುಪು ಧರಿಸಿರಿ, ಮತ್ತು ನೀವು ಅಪಪ್ರಯೋಗದ ಮಾತು ಅಥವಾ ಕ್ರಿಯೆಗಳಿಗೆ ಗುರಿಯಾಗುವುದು ಕಡಿಮೆ ಸಂಭವನೀಯವಾಗಿರಬಹುದು.
3. ನಿಮ್ಮ ಸಹವಾಸಗಳ ಕುರಿತು ಎಚ್ಚರದಿಂದಿರಿ! ಲೈಂಗಿಕ ಆಕ್ರಮಣದ ಬಲಿಯಾದ ಒಬ್ಬ ಯುವ ಸ್ತ್ರೀ, ದೀನಳ ಕುರಿತು ಬೈಬಲು ನಮಗೆ ಹೇಳುತ್ತದೆ. ಆಕೆ ಕ್ರಮವಾಗಿ—ಸ್ವೇಚ್ಛಾಸಂಪರ್ಕ ಇಟ್ಟುಕೊಳ್ಳುವವರಾಗಿ ಜ್ಞಾತರಾಗಿದ್ದ ಸ್ತ್ರೀಯರು—ಕಾನಾನ್ “ದೇಶದ ಸ್ತ್ರೀಯರನ್ನು ನೋಡುವದಕ್ಕೆ ಹೊರಗೆ ಬಂದ” ಕಾರಣ, ತನ್ನ ಆಕ್ರಮಣಗಾರನ ಗಮನವನ್ನು ಸೆಳೆದಳೆಂಬುದು ಸುವ್ಯಕ್ತ! (ಆದಿಕಾಂಡ 34:1, 2) ತದ್ರೀತಿಯಲ್ಲಿ ಇಂದು, ಅಶ್ಲೀಲ ವಿಷಯಗಳನ್ನು ಚರ್ಚಿಸುವುದಕ್ಕೆ ಹೆಸರುವಾಸಿಯಾಗಿರುವ ಜೊತೆಕೆಲಸಗಾರರೊಂದಿಗೆ ನೀವು ಕ್ರಮವಾಗಿ ಹರಟುವುದಾದರೆ—ಅಥವಾ ಅವರು ಹೇಳುವುದನ್ನು ಆಲಿಸುವುದಾದರೆ—ನೀವು ಲೈಂಗಿಕ ಪ್ರಸ್ತಾವಗಳನ್ನು ಸ್ವೀಕರಿಸುವಿರೆಂದು ಕೆಲವರು ತೀರ್ಮಾನಿಸಬಹುದು.
ಇದು ನಿಮ್ಮ ಕೆಲಸದ ಸಂಗಾತಿಗಳನ್ನು ನೀವು ಕಡೆಗಣಿಸಬೇಕೆಂಬುದನ್ನು ಅರ್ಥೈಸುವುದಿಲ್ಲ. ಆದರೆ ಸಂಭಾಷಣೆಯು ಅಶ್ಲೀಲ ಸೂಚನೆಯುಳ್ಳದ್ದಾಗುವುದಾದರೆ, ಸುಮ್ಮನೆ ಆ ಸ್ಥಳವನ್ನು ನೀವೇಕೆ ಬಿಟ್ಟುಹೋಗಬಾರದು? ಕುತೂಹಲಕರವಾಗಿ, ಉನ್ನತ ನೈತಿಕ ಮಟ್ಟಗಳಿಗಾಗಿ ಒಂದು ಸತ್ಕೀರ್ತಿಯನ್ನು ಪಡೆದುಕೊಂಡಿರುವುದು, ತಮ್ಮನ್ನು ಕಿರುಕುಳದಿಂದ ಸಂರಕ್ಷಿಸಿಕೊಳ್ಳಲು ಕಾರ್ಯಮಾಡುತ್ತದೆ ಎಂಬುದನ್ನು ಅನೇಕ ಯೆಹೋವನ ಸಾಕ್ಷಿಗಳು ಕಂಡುಕೊಂಡಿದ್ದಾರೆ.—1 ಪೇತ್ರ 2:12.
4. ರಾಜಿಮಾಡಿಕೊಳ್ಳುವ ಸನ್ನಿವೇಶಗಳನ್ನು ತೊರೆಯಿರಿ. ಲೈಂಗಿಕವಾಗಿ ತಾನು ಆಕೆಯನ್ನು ಸ್ವಪ್ರಯೋಜನಕ್ಕಾಗಿ ಉಪಯೋಗಿಸಶಕ್ತನಾಗುವಂತೆ, ಅಮ್ನೋನ್ ಎಂಬ ಹೆಸರಿನ ಒಬ್ಬ ಯುವ ಪುರುಷನು, ತಾಮಾರ್ ಎಂಬ ಹೆಸರಿನ ಒಬ್ಬ ಯುವ ಸ್ತ್ರೀಯೊಂದಿಗೆ ಒಬ್ಬಂಟಿಗನಾಗಿರಲು ಹೇಗೆ ಸಂಚು ನಡೆಸಿದನೆಂದು ಬೈಬಲು ಹೇಳುತ್ತದೆ. (2 ಸಮುವೇಲ 13:1-14) ತಮ್ಮ ಕೈಕೆಳಗೆ ಕೆಲಸಮಾಡುವ ಒಬ್ಬರನ್ನು ಮದ್ಯಪಾನದ ಸೇವನೆಯಲ್ಲಿ ಪಾಲುತೆಗೆದುಕೊಳ್ಳಲು ಅಥವಾ ವ್ಯಕ್ತವಾದ ಯಾವುದೇ ಕಾರಣವಿಲ್ಲದೆ ಕೆಲಸದ ತಾಸುಗಳ ಅನಂತರ ಕೆಲಸದಲ್ಲುಳಿಯಲು ಬಹುಶಃ ಆಮಂತ್ರಿಸುತ್ತಾ, ಕಿರುಕುಳ ಕೊಡುವವರು ಇಂದು ತದ್ರೀತಿಯಲ್ಲಿ ವರ್ತಿಸಬಹುದು. ಅಂತಹ ಆಮಂತ್ರಣಗಳ ಕುರಿತು ಎಚ್ಚರಿಕೆಯಿಂದಿರಿ! ಬೈಬಲ್ ಹೇಳುವುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು.”—ಜ್ಞಾನೋಕ್ತಿ 22:3.
ನೀವು ಕಿರುಕುಳಕ್ಕೆ ಒಳಪಡುವುದಾದರೆ
ಸ್ತ್ರೀಯೊಬ್ಬಳು ತನ್ನನ್ನು ದೋಷರಹಿತಳಾಗಿ ನಡೆಸಿಕೊಂಡಾಗಲೂ, ಕೆಲವು ಪುರುಷರು ಅಯೋಗ್ಯವಾದ ಪ್ರಸ್ತಾವಗಳನ್ನು ಮಾಡುವರೆಂಬುದು ನಿಶ್ಚಯ. ನಿಮ್ಮನ್ನು ಗುರಿಯನ್ನಾಗಿ ಮಾಡುವುದಾದರೆ, ಇಂತಹ ಪ್ರಸ್ತಾವಗಳಿಗೆ ನೀವು ಹೇಗೆ ಪ್ರತಿಕ್ರಿಯಿಸಬೇಕು? ಕ್ಷೋಭೆಗೊಳ್ಳದೆ ಅದನ್ನು ನಿರ್ವಹಿಸುವುದನ್ನು ಕೆಲವರು ಶಿಫಾರಸ್ಸು ಮಾಡಿದ್ದಾರೆ! ‘ಆಫೀಸಿನ ಕಾಮವು ಜೀವನದ ಸ್ವಾರಸ್ಯವಾಗಿದೆ!’ ಎಂಬುದಾಗಿ ಒಬ್ಬಾಕೆ ಸ್ತ್ರೀಯು ಹೇಳುತ್ತಾಳೆ. ಹಾಗಿದ್ದರೂ, ಅಂತಹ ಸೂಕ್ತವಲ್ಲದ ಗಮನವನ್ನು ತಮಾಷೆಯಾಗಿ ಅಥವಾ ಅತಿಪ್ರಶಂಸೆಯಾಗಿ ವೀಕ್ಷಿಸುವುದರಿಂದ ಬಹುದೂರ, ಸತ್ಯ ಕ್ರೈಸ್ತರು ಅದರಿಂದ ವಿಕರ್ಷಿಸಲ್ಪಡುತ್ತಾರೆ. ಅವರು ‘ಕೆಟ್ಟತನವನ್ನು ಹೇಸುತ್ತಾರೆ’ ಮತ್ತು ಅಂತಹ ಪ್ರಸ್ತಾವಗಳ ಉದ್ದೇಶವು ಸಾಮಾನ್ಯವಾಗಿ ಒಬ್ಬರನ್ನು ಲೈಂಗಿಕ ಅನೈತಿಕತೆಯೊಳಗೆ ಸೆಳೆಯುವುದು ಆಗಿದೆ ಎಂಬುದನ್ನು ಗ್ರಹಿಸುತ್ತಾರೆ. (ರೋಮಾಪುರ 12:9; ಹೋಲಿಸಿ 2 ತಿಮೊಥೆಯ 3:6.) ಎಷ್ಟು ಕೊಂಚವೆಂದರೂ, ಆ ಒರಟಾದ ವರ್ತನೆಯು ಅವರ ಕ್ರೈಸ್ತ ಘನತೆಗೆ ಅವಮರ್ಯಾದೆಯಾಗಿದೆ. (1 ಥೆಸಲೊನೀಕ 4:7, 8ನ್ನು ಹೋಲಿಸಿ.) ಅಂತಹ ಸನ್ನಿವೇಶಗಳನ್ನು ನೀವು ಹೇಗೆ ನಿರ್ವಹಿಸಬಲ್ಲಿರಿ?
1. ನಿಮ್ಮ ಸ್ಥಾನವನ್ನು ಧೈರ್ಯದಿಂದ ವ್ಯಕ್ತಪಡಿಸಿರಿ! ಯೋಸೇಫನೆಂಬ ಹೆಸರಿನ ಒಬ್ಬ ದೇವ-ಭಯವುಳ್ಳ ಮನುಷ್ಯನು ಅನೈತಿಕ ಪ್ರಸ್ತಾವಗಳಿಗೆ ಹೇಗೆ ಪ್ರತಿಕ್ರಿಯೆ ತೋರಿಸಿದನೆಂಬುದನ್ನು ಬೈಬಲು ನಮಗೆ ಹೇಳುತ್ತದೆ: “ಹೀಗಿರುವಲ್ಲಿ ಅವನ ದಣಿಯ ಹೆಂಡತಿಯು ಅವನ ಮೇಲೆ ಕಣ್ಣುಹಾಕಿ ತನ್ನೊಡನೆ ಸಂಗಮಕ್ಕೆ ಕರೆದಳು.” ಸಮಸ್ಯೆಯು ತಾನಾಗಿಯೇ ತೊಲಗಿ ಹೋಗುವುದೆಂದು ನಿರೀಕ್ಷಿಸುತ್ತಾ, ಯೋಸೇಫನು ಆಕೆಯ ಸಂಧಿಪ್ರಸ್ತಾವಗಳನ್ನು ಸುಮ್ಮನೆ ಕಡೆಗಣಿಸಿದನೊ? ಅದಕ್ಕೆ ಪ್ರತಿಯಾಗಿ! “ಹೀಗಿರುವಲ್ಲಿ ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಹೇಳುತ್ತಾ, ಆಕೆಯ ಪ್ರಸ್ತಾವಗಳನ್ನು ಅವನು ಧೈರ್ಯದಿಂದ ನಿರಾಕರಿಸಿದನು ಎಂಬುದಾಗಿ ಬೈಬಲು ಹೇಳುತ್ತದೆ.—ಆದಿಕಾಂಡ 39:7-9.
ಯೋಸೇಫನ ಕ್ರಿಯೆಗಳು ಪುರುಷರಿಗೆ ಹಾಗೂ ಸ್ತ್ರೀಯರಿಗೆ—ಇಬ್ಬರಿಗೂ—ಒಂದು ಉತ್ತಮ ಉದಾಹರಣೆಯನ್ನು ಒದಗಿಸಿದವು. ಅಶ್ಲೀಲ ಸೂಚಕ ಮಾತು ಅಥವಾ ಆಕ್ರಮಣಶೀಲ ವರ್ತನೆಯನ್ನು ಕಡೆಗಣಿಸುವುದು—ಅಥವಾ ಇನ್ನೂ ಕೆಟ್ಟದಾಗಿ ಅದರಿಂದ ಭಯಪಡುವುದು—ಅದು ತೊಲಗಿಹೋಗುವಂತೆ ಮಾಡುವುದು ವಿರಳ, ಬದಲಿಗೆ, ಭಯ ಅಥವಾ ಆತ್ಮಸಂಶಯವು ಅದು ಹೆಚ್ಚಾಗುವಂತೆ ಮಾಡಬಹುದು! ಬಲಾತ್ಕಾರ ಸಂಭೋಗವನ್ನು ತಡೆಗಟ್ಟುವ ಸಲಹೆಗಾರ್ತಿ, ಮಾರ್ಥಾ ಲ್ಯಾಂಗ್ಲಾನ್ ಎಚ್ಚರಿಸುವುದೇನೆಂದರೆ, ಅತ್ಯಾಚಾರಿಗಳು ಅನೇಕ ವೇಳೆ ಲೈಂಗಿಕ ಕಿರುಕುಳವನ್ನು “ಒಂದು ಆಕ್ರಮಣದಲ್ಲಿ ಸ್ತ್ರೀಯೊಬ್ಬಳು ಹಿಂದಿರುಗಿ ಕಾದಾಡುವ ಸಾಧ್ಯತೆಯನ್ನು ಅಳತೆಮಾಡುವ ವಿಧ”ದಂತೆ ಉಪಯೋಗಿಸುತ್ತಾರೆ; “ಕಿರುಕುಳಕ್ಕೆ ಒಳಗಾದಾಗ ಆಕೆ ನಿಷ್ಕ್ರಿಯಳಾಗಿಯೂ ಅಂಜುಬುರುಕಳಾಗಿಯೂ ಇರುವುದಾದರೆ, ಆಕ್ರಮಿಸಲ್ಪಡುವಾಗ ಆಕೆ ನಿಷ್ಕ್ರಿಯಳಾಗಿಯೂ ಭಯಭರಿತಳಾಗಿಯೂ ಇರುವಳೆಂದು ಅವರು ಊಹಿಸಿಕೊಳ್ಳುತ್ತಾರೆ.” ಆದುದರಿಂದ ಕಿರುಕುಳದ ಪ್ರಥಮ ಸೂಚನೆಯಲ್ಲಿಯೇ ನಿಮ್ಮ ಸ್ಥಾನವನ್ನು ಧೈರ್ಯದಿಂದ ವ್ಯಕ್ತಪಡಿಸುವುದು ನಿರ್ಣಾಯಕವಾಗಿದೆ. ಒಬ್ಬ ಲೇಖಕನಿಗನುಸಾರ, “ಇಲ್ಲವೆಂದು ಕೂಡಲೆ ಮತ್ತು ಸ್ಪಷ್ಟವಾದ ವಿಧದಲ್ಲಿ ಹೇಳುವುದು, ಅನೇಕ ವೇಳೆ ಆ ಜುಗುಪ್ಸೆ ಹುಟ್ಟಿಸುವ ವರ್ತನೆಯನ್ನು ಕಿರುಕುಳ ಕೊಡುವವನು ನಿಲ್ಲಿಸುವಂತೆ ಮಾಡಲು ಸಾಕಾಗಿರುತ್ತದೆ.”
2. ನಿಮ್ಮ ಇಲ್ಲ, ಇಲ್ಲವೆಂಬುದನ್ನು ಅರ್ಥೈಸಲಿ! ಯೇಸು ಅದನ್ನು ತನ್ನ ಪರ್ವತ ಪ್ರಸಂಗದಲ್ಲಿ ಹೇಳಿದನು. (ಮತ್ತಾಯ 5:37) ಅವನ ಹೇಳಿಕೆಯು ಇಂತಹ ಪರಿಸ್ಥಿತಿಗಳಿಗೆ ಸೂಕ್ತವಾಗಿದೆ ಏಕೆಂದರೆ, ಕಿರುಕುಳ ಕೊಡುವವರು ಅನೇಕ ವೇಳೆ ಪಟ್ಟುಹಿಡಿಯುವವರಾಗಿರುತ್ತಾರೆ. ನೀವು ಎಷ್ಟು ದೃಢರಾಗಿರುವ ಅಗತ್ಯವಿದೆ? ಅದು ಪರಿಸ್ಥಿತಿಗಳು ಹಾಗೂ ಕಿರುಕುಳ ಕೊಡುವವನ ಪ್ರತಿಕ್ರಿಯೆಯ ಮೇಲೆ ಅವಲಂಬಿಸಿರುತ್ತದೆ. ನಿಮ್ಮ ಸ್ಥಾನವನ್ನು ಅವನು ತಿಳಿದುಕೊಳ್ಳುವಂತೆ ಮಾಡಲು ಅವಶ್ಯವಾಗಿರುವ ಯಾವುದೇ ಮಟ್ಟದ ದೃಢತೆಯನ್ನಾದರೂ ಉಪಯೋಗಿಸಿರಿ. ಕೆಲವೊಂದು ವಿದ್ಯಮಾನಗಳಲ್ಲಿ, ಶಾಂತವಾದ ಸ್ವರದಲ್ಲಿ ಹೇಳಲ್ಪಟ್ಟ ಒಂದು ಸರಳವಾದ, ನೇರ ಹೇಳಿಕೆಯು ಸಾಕಾಗಿರುವುದು. ನೇತ್ರ ಸಂಪರ್ಕವನ್ನು ಮಾಡಿರಿ. ಪರಿಣತರು ಈ ಮುಂದಿನದ್ದನ್ನು ಸೂಚಿಸುತ್ತಾರೆ: (ಎ) ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ. (“ನೀನು . . .ವಾಗ, ನನಗೆ ಸ್ಪಲ್ಪವೂ ಇಷ್ಟವಾಗುವುದಿಲ್ಲ.”) (ಬಿ) ಜುಗುಪ್ಸೆ ಹುಟ್ಟಿಸುವ ವರ್ತನೆಯನ್ನು ನಿರ್ದಿಷ್ಟವಾಗಿ ಹೆಸರಿಸಿರಿ. (“. . . ನೀನು ಒರಟಾದ, ಅಶ್ಲೀಲ ಭಾಷೆಯನ್ನು ಬಳಸುವಾಗ . . .”) (ಸಿ) ಆ ವ್ಯಕ್ತಿಯು ಏನನ್ನು ಮಾಡಬೇಕೆಂದು ನೀವು ಬಯಸುತ್ತೀರೊ, ಅದನ್ನು ಸ್ಪಷ್ಟಗೊಳಿಸಿರಿ. (“ಆ ವಿಧದಲ್ಲಿ ನೀನು ನನ್ನೊಂದಿಗೆ ಮಾತಾಡುವುದನ್ನು ನಿಲ್ಲಿಸುವಂತೆ ನಾನು ಬಯಸುತ್ತೇನೆ!”)
“ಹಾಗಿದ್ದರೂ, ಯಾವುದೇ ಪರಿಸ್ಥಿತಿಯ ಕೆಳಗೆ, ಒಬ್ಬನು ಆಕ್ರಮಣವನ್ನು ಆಶ್ರಯಿಸಬಾರದು,” ಎಂಬುದಾಗಿ ಲ್ಯಾಂಗ್ಲನ್ ಎಚ್ಚರಿಸುತ್ತಾರೆ. “ಪ್ರತಿಯಾದ ಆಕ್ರಮಣವು (ಅವಮಾನಗಳು, ಬೆದರಿಕೆಗಳು, ಮತ್ತು ಬೈಗಳನ್ನು ಉಪಯೋಗಿಸುವುದು, ಹೊಡೆಯುವುದು, ಕಿರುಕುಳ ಕೊಡುವವನ ಮೇಲೆ ಉಗುಳುವುದು) ಪ್ರತಿಯಾದ ಪರಿಣಾಮವನ್ನು ಉತ್ಪಾದಿಸುತ್ತದೆ. ಶಾಬ್ದಿಕ ಹಿಂಸಾಚಾರವು ಅಪಾಯಕಾರಿಯಾಗಿದೆ, ಮತ್ತು ಆತ್ಮರಕ್ಷಣೆಯನ್ನು ಅಗತ್ಯಪಡಿಸುವ ಒಂದು ವಾಸ್ತವವಾದ ಶಾರೀರಿಕ ಆಕ್ರಮಣವು ಇರುವ ಹೊರತೂ, ಶಾರೀರಿಕ ಹಿಂಸಾಚಾರವನ್ನು ಬಳಸುವ ಯಾವ ಅಗತ್ಯವು ಇರುವುದಿಲ್ಲ.” ಇಂತಹ ಪ್ರಾಯೋಗಿಕ ಬುದ್ಧಿವಾದವು ರೋಮಾಪುರ 12:17ರಲ್ಲಿರುವ ಬೈಬಲಿನ ಮಾತುಗಳೊಂದಿಗೆ ಹೊಂದಿಕೆಯಲ್ಲಿದೆ: “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ.”
ಕಿರುಕುಳವನ್ನು ನಿಲ್ಲಿಸಲು ನಿಮ್ಮಿಂದ ಸಾಧ್ಯವಾದಷ್ಟನ್ನು ಮಾಡಲು ನೀವು ಪ್ರಯತ್ನಿಸಿದ ಮೇಲೂ, ಅದು ಮುಂದುವರಿದರೆ ಆಗೇನು? ಲೈಂಗಿಕ ಕಿರುಕುಳವನ್ನು ನಿರ್ವಹಿಸಲು ಕೆಲವೊಂದು ಕಂಪನಿಗಳು ಕಾರ್ಯಾವಳಿಗಳನ್ನು ಸ್ಥಾಪಿಸಿವೆ. ಅನೇಕ ವೇಳೆ, ಒಂದು ಕಂಪನಿ ದೂರಿನ ಕಾರ್ಯಾವಳಿಯನ್ನು ಆರಂಭಿಸುವುದರ ಕುರಿತಾದ ಬರಿಯ ಬೆದರಿಕೆಯು, ನಿಮಗೆ ಕಿರುಕುಳ ಕೊಡುವವನನ್ನು ಮುಂದುವರೆಸದಿರುವಂತೆ ಮಾಡುವುದು. ಹಾಗಿದ್ದರೂ, ಅದು ಹಾಗೆ ಮಾಡದೆಯೂ ಇರಬಹುದು. ವಿಷಾದಕರವಾಗಿ, ಸಹಾನುಭೂತಿ ತೋರಿಸುವ ಒಬ್ಬ ಮೇಲ್ವಿಚಾರಕನನ್ನು ಕಂಡುಕೊಳ್ಳುವುದು, ಸ್ತ್ರೀಯರಿಗಾಗಲಿ ಪುರುಷರಿಗಾಗಲಿ ಯಾವಾಗಲೂ ಸುಲಭವಾದೊಂದು ಕೆಲಸವಾಗಿರುವುದಿಲ್ಲ. ಸ್ತ್ರೀ ಕೆಲಸಗಾರಳಿಂದ ಕಿರುಕುಳಕ್ಕೆ ಒಳಗಾಗಿದ್ದನೆಂದು ಹೇಳುವ ಗ್ಲೆನ್, ದೂರುಕೊಡುವುದನ್ನು ಪ್ರಯತ್ನಿಸಿದನು. ಅವನು ಜ್ಞಾಪಿಸಿಕೊಳ್ಳುವುದು: “ಅದರ ಕುರಿತು ನನ್ನ ಮೇಲಧಿಕಾರಿಗೆ ನಾನು ಹೇಳಿದಾಗ, ನನಗೆ ಯಾವ ಸಹಾಯವೂ ಸಿಗಲಿಲ್ಲ. ವಾಸ್ತವದಲ್ಲಿ ಅದು ಸಂತೋಷದ ವಿಷಯವಾಗಿತ್ತೆಂದು ಅವನು ನೆನಸಿದನು. ಆ ಸ್ತ್ರೀಯ ಚಲನವಲನಗಳನ್ನು ನಾನು ಸದಾ ಗಮನಿಸಬೇಕಿತ್ತು ಮತ್ತು ಆಕೆಯನ್ನು ದೂರವಿಡಲು ವಿಶೇಷವಾದ ಪ್ರಯತ್ನವನ್ನು ಮಾಡಬೇಕಿತ್ತು.”
ಕೆಲವರು ನ್ಯಾಯಬದ್ಧ ಕಾರ್ಯಾಚರಣೆಯನ್ನು ಪ್ರಯತ್ನಿಸಿದ್ದಾರೆ. ಆದರೆ ದಾವೆಗಳಲ್ಲಿ ಮಹತ್ತರವಾದ ತೀರ್ಮಾನಗಳ ಕುರಿತು ನೀವು ವಾರ್ತಾಮಾಧ್ಯಮದಲ್ಲಿ ಓದುವ ವಿಷಯಗಳು ಸ್ವಲ್ಪವೂ ಆದರ್ಶರೂಪವಲ್ಲ. ಅಲ್ಲದೆ, ಟಾಕಿಂಗ್ ಬ್ಯಾಕ್ ಟು ಸೆಕ್ಷ್ಯುಅಲ್ ಪ್ರೆಷರ್ ಎಂಬ ಪುಸ್ತಕವು ಎಚ್ಚರಿಸುವುದು: “ಕಿರುಕುಳದ ವಿರುದ್ಧವಿರುವ ಕಾನೂನುಬದ್ಧ ಪರಿಹಾರಗಳು ಮಹತ್ತರವಾದ ಭಾವನಾತ್ಮಕ ಶಕ್ತಿ ಹಾಗೂ ಸಮಯವನ್ನು ಕೇಳಿಕೊಳ್ಳುತ್ತವೆ; ಅವು ಶಾರೀರಿಕ ಹಾಗೂ ಮಾನಸಿಕ ಒತ್ತಡದಲ್ಲಿ ಪರಿಣಮಿಸುತ್ತವೆ.” ಸಕಾರಣದಿಂದ ಬೈಬಲು ಎಚ್ಚರಿಕೆ ನೀಡುವುದು: “ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಹೋಗಬೇಡ.” (ಜ್ಞಾನೋಕ್ತಿ 25:8) ನ್ಯಾಯಬದ್ಧ ಕಾರ್ಯಾಚರಣೆಯ ಭಾವನಾತ್ಮಕ ಹಾಗೂ ಆತ್ಮಿಕ ವೆಚ್ಚಗಳನ್ನು ಎಣಿಕೆಗೆ ತೆಗೆದುಕೊಂಡ ಬಳಿಕ, ಬೇರೆ ಉದ್ಯೋಗವನ್ನು ಹುಡುಕಲು ಕೆಲವರು ಇಷ್ಟಪಟ್ಟಿದ್ದಾರೆ.
ಕಿರುಕುಳದ ಅಂತ್ಯ
ಲೈಂಗಿಕ ಕಿರುಕುಳವು ಹೊಸದೇನೂ ಆಗಿಲ್ಲ. ಅದು ಅಪರಿಪೂರ್ಣ, ಸಂಚು ನಡೆಸುವ, ಅತ್ಯಾಶೆಯ ಮಾನವ ಹೃದಯದಷ್ಟೇ ಸಾರ್ವತ್ರಿಕವಾಗಿದೆ. ಆಯೋಗಗಳು ಹಾಗೂ ನ್ಯಾಯಾಲಯ ಮೊಕದ್ದಮೆಗಳು ಸಮಾಜವನ್ನು ಲೈಂಗಿಕ ಕಿರುಕುಳದಿಂದ ಎಂದಿಗೂ ತೊಲಗಿಸಲಾರವು. ಲೈಂಗಿಕ ಕಿರುಕುಳವನ್ನು ತೊಲಗಿಸುವುದು, ಜನರಲ್ಲಿ ಮೂಲಭೂತ ಹೃದಯದ ಬದಲಾವಣೆಯನ್ನು ಕೇಳಿಕೊಳ್ಳುತ್ತದೆ.
ಇಂದು, ಲೋಕದಾದ್ಯಂತವಾಗಿ ದೇವರ ವಾಕ್ಯ ಮತ್ತು ಆತನ ಆತ್ಮವು ಜನರಲ್ಲಿ ಇಂತಹ ಒಂದು ಬದಲಾವಣೆಯನ್ನು ತರುತ್ತಿವೆ. ಇದು ಪ್ರವಾದಿಯಾದ ಯೆಶಾಯನ ಮೂಲಕ ಮುಂತಿಳಿಸಲಾದಂತೆಯೇ, ತೋಳಗಳು ಮತ್ತು ಸಿಂಹಗಳು ಕುರಿಗಳಂತೆ ಮತ್ತು ಕರುಗಳಂತೆ ವರ್ತಿಸಲು ಕಲಿಯುತ್ತಿರುವಂತಿದೆ. (ಯೆಶಾಯ 11:6-9) ಜನರೊಂದಿಗೆ ಬೈಬಲನ್ನು ಅಭ್ಯಸಿಸುವ ಮೂಲಕ, ಆಳವಾಗಿ ಬೇರೂರಿರುವ, ವ್ಯಕ್ತಿತ್ವದ ಬಾಳುವ ಬದಲಾವಣೆಗಳನ್ನು ಅನೇಕ ಸಾವಿರಾರು ಹಿಂದಿನ ‘ತೋಳಗಳು’ ಮಾಡುವಂತೆ, ಪ್ರತಿ ವರ್ಷ ಯೆಹೋವನ ಸಾಕ್ಷಿಗಳು ಸಹಾಯಮಾಡುತ್ತಾರೆ. “ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು” ಎಂಬುದಾಗಿ ಮತ್ತು ಅದನ್ನು ‘ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿರುವ ನೂತನ ಸ್ವಭಾವದಿಂದ’ ಸ್ಥಾನಭರ್ತಿಮಾಡುವಂತಹ ಶಾಸ್ತ್ರೀಯ ಆಜ್ಞೆಗೆ ಈ ಜನರು ಕಿವಿಗೊಡುತ್ತಾರೆ.—ಎಫೆಸ 4:22-24.
ಒಂದು ದಿನ ಭೂಮಿಯು, ಬೈಬಲ್ ಮಟ್ಟಗಳಿಗೆ ಅಂಟಿಕೊಳ್ಳುವ ಪುರುಷರು ಹಾಗೂ ಸ್ತ್ರೀಯರಿಂದ ಭರ್ತಿಯಾಗುವುದು. ಎಲ್ಲ ವಿಧಗಳ ದುರುಪಚಾರದ ಅಂತ್ಯವಾಗುವ ಆ ದಿನಕ್ಕಾಗಿ ದೇವ-ಭಯವುಳ್ಳ ಜನರು ಆತುರದಿಂದ ಕಾಯುತ್ತಾರೆ. ಅಲ್ಲಿಯ ವರೆಗೆ, ಅವರು ಇಂದಿನ ವಿಕಾರವಾದ ವಾಸ್ತವಿಕತೆಗಳನ್ನು ತಮ್ಮಿಂದ ಸಾಧ್ಯವಾದಷ್ಟು ಉತ್ತಮವಾದ ರೀತಿಯಲ್ಲಿ ನಿಭಾಯಿಸುತ್ತಾರೆ.
[ಪಾದಟಿಪ್ಪಣಿ]
a 1 ಕೊರಿಂಥ 7:1ರಲ್ಲಿರುವ “ಸ್ತ್ರೀಸಂಪರ್ಕವಿಲ್ಲದೆ ಇರುವದು” ಎಂಬ ಪೌಲನ ಎಚ್ಚರಿಕೆಯು, ಅನುದ್ದಿಷ್ಟ ಸ್ಪರ್ಶಕ್ಕಲ್ಲ, ಸ್ಪಷ್ಟವಾಗಿ ಲೈಂಗಿಕ ಸಂಪರ್ಕಕ್ಕೆ ಸೂಚಿಸುತ್ತದೆ. (ಜ್ಞಾನೋಕ್ತಿ 6:29ನ್ನು ಹೋಲಿಸಿ.) ಪೂರ್ವಾಪರದಲ್ಲಿ, ಪೌಲನು ಅವಿವಾಹಿತ ಸ್ಥಿತಿಯನ್ನು ಉತ್ತೇಜಿಸುತ್ತಿದ್ದಾನೆ ಮತ್ತು ಲೈಂಗಿಕ ಅನೈತಿಕತೆಯಲ್ಲಿ ತೊಡಗುವುದರ ವಿರುದ್ಧ ಎಚ್ಚರಿಸುತ್ತಿದ್ದಾನೆ.—ಜನವರಿ 1, 1973ರ ದ ವಾಚ್ಟವರ್ನಲ್ಲಿರುವ “ವಾಚಕರಿಂದ ಪ್ರಶ್ನೆಗಳು” ನೋಡಿರಿ.
[ಪುಟ 8 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಆ ರೀತಿಯ ಮಾತಿಗೆ ನಿಮ್ಮ ತಾಯಿ, ಸಹೋದರಿ, ಅಥವಾ ಮಗಳು ಒಡ್ಡಲ್ಪಡುವುದನ್ನು ನೀವು ಬಯಸುವಿರೊ?”
[ಪುಟ 9 ರಲ್ಲಿರುವ ಚಿತ್ರ]
ವ್ಯವಹಾರೋಚಿತವಾದ ವರ್ತನೆ ಹಾಗೂ ಮಾನಮರ್ಯಾದೆಯುಳ್ಳ ಉಡುಪು ಒಬ್ಬರನ್ನು ಕಿರುಕುಳದಿಂದ ಸಂರಕ್ಷಿಸಲು ಹೆಚ್ಚಿನದ್ದನ್ನು ಮಾಡಬಲ್ಲದು
[ಪುಟ 21 ರಲ್ಲಿರುವ ಚಿತ್ರ]
ಸತ್ಯ ಕ್ರೈಸ್ತರು ಇಂದು, ಒಬ್ಬರನ್ನೊಬ್ಬರು ಒಂದು ಗೌರವಪೂರ್ಣ ವಿಧದಲ್ಲಿ ಉಪಚರಿಸಲು ಕಲಿಯುತ್ತಾರೆ