ಲೋಕದ ಅತ್ಯಂತ ದೊಡ್ಡ ಗೋಡಂಬಿ ಮರ
ಬ್ರೆಸಿಲ್ನ ಎಚ್ಚರ! ಸುದ್ದಿಗಾರರಿಂದ
ಲೋಕದಲ್ಲಿ ಅತ್ಯಂತ ದೊಡ್ಡದೊ? ಗಿನೆಸ್ ಓ ಲಿವ್ರೊ ಡಾಸ್ ರೆಕಾರ್ಡೆಸ್ 1994ಕ್ಕೆ ಅನುಸಾರವಾಗಿ, ಅದು ಅತ್ಯಂತ ದೊಡ್ಡದಾಗಿರಬಹುದು. ರೀಯೊ ಗ್ರಾಂಡಿ ಡ ನಾರ್ಟದ ತೀರದ ಬಳಿ ನೆಲೆಸಿರುವ, ಇಲ್ಲಿ ಚಿತ್ರಿಸಲ್ಪಟ್ಟ ಗೋಡಂಬಿ ಮರವು ಖಂಡಿತವಾಗಿಯೂ ಬ್ರೆಸಿಲ್ನಲ್ಲಿನ ಅತ್ಯಂತ ದೊಡ್ಡದಾದ ಮರವಾಗಿದೆ. ನಿಶ್ಚಯವಾಗಿ, ಈ ಒಂಟಿ ಮರವು ಪ್ರಚಲಿತವಾಗಿ ನಗರದ ಒಂದು ದೊಡ್ಡದಾದ ವಠಾರದ ಕ್ಷೇತ್ರವನ್ನು ಆವರಿಸುತ್ತದೆ, ಇದು ಸರಾಸರಿ ಗಾತ್ರದ 70 ಗೋಡಂಬಿ ಮರಗಳಿಗೆ ಸಮವಾಗಿದೆ!
ಗೋಡಂಬಿ ಮರವು, ಸಾಮಾನ್ಯವಾಗಿ ಗಾತ್ರದಲ್ಲಿ ಒಂದು ಸಣ್ಣ ಕುರುಚಲಿನಿಂದ, ಎತ್ತರದಲ್ಲಿ ಸುಮಾರು 20 ಮೀಟರುಗಳಷ್ಟು ಉದ್ದವಾದ ಒಂದು ಮರಕ್ಕೆ ವ್ಯಾಪಿಸುವ ನಿತ್ಯಹಸುರು ಮರವಾಗಿದೆ. ಗೋಡಂಬಿ ಮರದ ಸಣ್ಣ ಹೂವುಗಳು ಅದರ ದೊಡ್ಡ, ತೊಗಲಿನಂತಿರುವ ಎಲೆಗಳೊಂದಿಗೆ ಸ್ಪಷ್ಟವಾಗಿಗಿ ವ್ಯತಿರಿಕ್ತವಾಗಿವೆ. ತಿನ್ನಬಹುದಾದ ಅದರ ಬೀಜವು, ರುಚಿಕರವಾದ ಗೋಡಂಬಿಯಾಗಿದೆ, ಇದು ಕ್ಯಾಷೂ ಆ್ಯಪಲ್ ಎಂದು ಕರೆಯಲ್ಪಡುವ ಒಂದು ಪೇರು ಆಕಾರದ ಹಣ್ಣಿನೊಳಗೆ ಬಲವತ್ತಾಗಿ ಸೇರಿಸಲ್ಪಟ್ಟಿರುವಂತೆ ತೋರುತ್ತದೆ. ವಿಚಿತ್ರವಾಗಿ, ಗೋಡಂಬಿ ಮರವು ವಿಷಕರ ಐವಿ ಬಳ್ಳಿಗೆ ಸಂಬಂಧಿಸಿದೆ, ಮತ್ತು ಅದನ್ನು ಸ್ಪರ್ಶಿಸುವವರು ಜಾಗ್ರತೆ ವಹಿಸಬೇಕು. ಕಾಯಿಗೆ ಎರಡು ಕರಟಗಳಿವೆ, ಮತ್ತು ಈ ಕರಟಗಳ ನಡುವೆ, ಚರ್ಮದ ಮೇಲೆ ಗುಳ್ಳೆಗಳನ್ನು ಉಂಟುಮಾಡಬಲ್ಲ ಎಣ್ಣೆಯಿದೆ. ಕೃತಜ್ಞತಾಪೂರ್ವಕವಾಗಿ, ಹುರಿಯುವ ಪ್ರಕ್ರಿಯೆಯು ಕಾಯಿಯ ವಿಷಕರ ಗುಣಗಳನ್ನು ತೆಗೆದುಬಿಡುತ್ತದೆ.
ವಿಲಕ್ಷಣವಾಗಿ, ಕಿಡ್ನಿ ಆಕಾರದ ಕಾಯಿಯು ಹಣ್ಣಿನ ಹೊರಗೆ ಬೆಳೆಯುವುದಾಗಿ ಕಂಡುಬರುತ್ತದೆ, ಇದು ಸೃಷ್ಟಿಕರ್ತನು ಕಾಯಿಯನ್ನು ಮರೆತು, ತದನಂತರ ಅದಕ್ಕೆ ಅಂಟಿಸಿದನೊ ಎಂಬಂತಿದೆ. ಕ್ಯಾಷೂ ಆ್ಯಪಲ್ ಕಾಯಿಯ ವೃಂತವಾಗಿದೆ. ಆದುದರಿಂದ ಕೆಲವರು ಕಾಯಿಯನ್ನು ಮರದ ನಿಜವಾದ ಹಣ್ಣೆಂದು ಕರೆಯುತ್ತಾರೆ. ಏನೇ ಆಗಲಿ, ಮುಂದಿನ ಸಲ ನೀವು ಗೋಡಂಬಿಗಳನ್ನು ತಿನ್ನುವಾಗ ಸ್ವಲ್ಪ ಯೋಚಿಸಿರಿ, ನೀವು ಲೋಕದ ಅತ್ಯಂತ ದೊಡ್ಡ ಗೋಡಂಬಿ ಮರದ ಫಲವನ್ನು ತಿನ್ನುತ್ತಿರಬಹುದು!