ಯುವ ಜನರು ಪ್ರಶ್ನಿಸುವುದು . . .
ನನ್ನನ್ನು ಬಿಟ್ಟು ಪ್ರತಿಯೊಬ್ಬರೂ ವಿವಾಹವಾಗುತ್ತಿರುವುದೇಕೆ?
“ನನಗೆ ವಿವಾಹವಾಗಿರುತ್ತಿದ್ದರೆ, ನಾನು ಸಂತೋಷವಾಗಿರುತ್ತಿದ್ದೆ.”—ಶೆರಲ್.a
ವಿವಾಹವಾಗುವಂತೆ ಬಯಸುವುದು ಕೇವಲ ಸ್ವಾಭಾವಿಕ. ಲಿಂಗಜಾತಿಗಳ ನಡುವೆ ಒಂದು ಸ್ವಾಭಾವಿಕ ಆಕರ್ಷಣೆಯೊಂದಿಗೆ ದೇವರು ಪುರುಷ ಮತ್ತು ಸ್ತ್ರೀಯನ್ನು ಉಂಟುಮಾಡಿದನು. ಮತ್ತು ವಿವಾಹವನ್ನು ಪುರುಷನೊಬ್ಬನ ಮತ್ತು ಸ್ತ್ರೀಯೊಬ್ಬಳ ನಡುವಿನ ಒಂದು ಶಾಶ್ವತ ಬಂಧವನ್ನಾಗಿ ಆತನು ಸ್ಥಾಪಿಸಿದನು.—ಆದಿಕಾಂಡ 1:27, 28; 2:21-24.
ಗ್ರಾಹ್ಯವಾಗಿಯೇ, ವಿಶೇಷವಾಗಿ ನಿಮ್ಮ ಸಮಾನಸ್ಥರಲ್ಲಿ ಅನೇಕರು ಈಗಾಗಲೇ ವಿವಾಹಿತ ಸ್ಥಿತಿಯೊಳಗೆ ಪ್ರವೇಶಿಸಿರುವುದಾದರೆ, ನೀವು ಇನ್ನೂ ವಿವಾಹವಾಗಿರದಿದ್ದಲ್ಲಿ, ಆಗ ನೀವು ಕೊಂಚಮಟ್ಟಿಗೆ ನಿರುತ್ತೇಜಿತರು ಅಥವಾ ತ್ಯಜಿಸಲ್ಪಟ್ಟವರು ಆಗಿರುವಂತೆ ನಿಮಗೆ ಅನಿಸಬಹುದು. ಸದುದ್ದೇಶವುಳ್ಳ ಸ್ನೇಹಿತರು ಒತ್ತಡಕ್ಕೆ ಹೆಚ್ಚನ್ನು ಕೂಡಿಸಬಲ್ಲರು. “ನಾನು 24 ವರ್ಷದವಳೂ ಅವಿವಾಹಿತಳೂ ಆಗಿದ್ದೇನೆ, ಮತ್ತು ಸದ್ಯಕ್ಕೆ ಯಾರೊಂದಿಗೂ ನಾನು ಡೇಟ್ ಮಾಡುತ್ತಿಲ್ಲ,” ಎಂದು ಟೀನ ಹೇಳುತ್ತಾಳೆ. “ನಾನು ವಿವಾಹವಾಗಿಲ್ಲವೆಂಬುದರ ಕುರಿತು ಪ್ರತಿಯೊಬ್ಬರು ಎಷ್ಟು ಆಸ್ಥೆಯನ್ನು ವಹಿಸುತ್ತಿದ್ದಾರೆಂದು ತೋರುತ್ತದೆಯೆಂದರೆ, ಅದರ ಕುರಿತಾಗಿ ನಾನು ಮನೋವಿಕಾರಕ್ಕೆ ಒಳಗಾಗುತ್ತಿದ್ದೇನೆ. ವೃದ್ಧ ಕನ್ಯೆಯೋ ಅಥವಾ ನನ್ನಲ್ಲಿ ಏನೋ ದೋಷವಿದೆಯೋ ಎಂದು ನನಗೆ ಅನಿಸುವಂತೆ ಅವರು ಮಾಡುತ್ತಾರೆ.”
ಕೆಲವು ಜನರಿಗೆ ಅವಿವಾಹಿತತೆಯು, ಸಂತೋಷದಿಂದ ಅವರನ್ನು ಪ್ರತ್ಯೇಕಿಸುವ ಒಂದು ಗೋಡೆಯಂತೆ, ದುಸ್ತರವಾದೊಂದು ತಡೆಯಂತೆ ಭಾಸವಾಗಲು ಪ್ರಾರಂಭವಾಗಸಾಧ್ಯವಿದೆ. ಪ್ರತಿಯೊಂದು ವರ್ಷ ಗತಿಸಿದ ಹಾಗೆ, ಆ ಗೋಡೆಯ ಮೇಲೆ ಇಟ್ಟಿಗೆಗಳ ಮತ್ತೊಂದು ಪದರವು ಇಡಲ್ಪಟ್ಟಿದೆಯೋ ಎಂಬಂತೆ ಅದು ಅನಿಸಬಹುದು. ಒಬ್ಬ ಯುವ ವ್ಯಕ್ತಿ, ಅವನು ಅಥವಾ ಅವಳು ಅನಾಕರ್ಷಣೀಯರೂ ಅನಪೇಕ್ಷಣೀಯರೂ ಆಗಿದ್ದೇವೆಂಬುದಾಗಿ ನೆನಸಲು ಪ್ರಾರಂಭಿಸಸಾಧ್ಯವಿದೆ. ಇಟೆಲಿಯಲ್ಲಿರುವ ರೊಸಾನಾ ಎಂಬ ಹೆಸರುಳ್ಳ ಒಬ್ಬ ಯುವ ಸ್ತ್ರೀಯು ಹೇಳುವುದು: “ಅನೇಕವೇಳೆ ನಾನು ಏಕಾಂಗಿಯೂ ಕೆಲಸಕ್ಕೆ ಬಾರದವಳೂ ಆಗಿದ್ದೇನೆಂದು ನೆನಸುತ್ತೇನೆ; ವಿವಾಹವಾಗುವ ಸಂಭವಗಳೇ ನನಗೆ ಇಲ್ಲವೆಂದು ತೋರುತ್ತದೆ.” ಯುವ ಪುರುಷರು ಅದೇ ರೀತಿಯ ಅನಿಸಿಕೆಗಳನ್ನು ಹೊಂದಿರಬಲ್ಲರು. ಉದಾಹರಣೆಗೆ, ಫ್ರ್ಯಾಂಕ್, ತನ್ನ ಎಲ್ಲಾ ಸ್ನೇಹಿತರು ವಿವಾಹವಾದ ಅನಂತರ ಹೆಚ್ಚು ಸ್ವಾರಸ್ಯವುಳ್ಳವರೂ ಸುಸಂಸ್ಕೃತರೂ ಆಗಿ ಪರಿಣಮಿಸಿದರೆಂದು ಭಾವಿಸಲು ಪ್ರಾರಂಭಿಸಿದನು. ವಿವಾಹವು ತನಗೂ ಅದೇ ರೀತಿಯಲ್ಲಿ ಮಾಡಬಹುದೋ ಎಂದು ಆಶ್ಚರ್ಯಗೊಳ್ಳಲು ಅವನು ಪ್ರಾರಂಭಿಸಿದನು.
ತದ್ರೀತಿಯ ವಿಚಾರಗಳನ್ನು ಸ್ವತಃ ಯೋಚಿಸುತ್ತಿರುವುದನ್ನು ನೀವು ಕಂಡುಕೊಳ್ಳುತ್ತೀರೋ? ನೀವು ಅವಿವಾಹಿತರಾಗಿರುವುದಾದರೆ, ನಿಮ್ಮಲ್ಲಿ ಏನೋ ದೋಷವಿದೆ ಅಥವಾ ಅವಿವಾಹಿತತೆಯ ಒಂದು ಜೀವನಕ್ಕೆ ನೀವು ಶಾಶ್ವತವಾಗಿ ಒಳಪಡಬಹುದೆಂಬುದಾಗಿ ನೀವು ಕೆಲವೊಮ್ಮೆ ವಿಸ್ಮಯಪಡುತ್ತೀರೋ?
ವಿವಾಹ—ಮಿಥ್ಯೆಯ ಪ್ರತಿಯಾಗಿ ಸತ್ಯಾಂಶ
ಮೊಟ್ಟ ಮೊದಲಾಗಿ, ವಿವಾಹವು ಸಂತೋಷಕ್ಕೆ ಸ್ವಯಂಚಾಲಿತವಾಗಿ ಕದವನ್ನು ತೆರೆಯುತ್ತದೆಂಬ ಜನಪ್ರಿಯ ನಂಬಿಕೆಯ ಕುರಿತಾಗಿ ಪರೀಕ್ಷಿಸೋಣ. ಒಬ್ಬರ ಸಂತೋಷಕ್ಕೆ ಅನೇಕವೇಳೆ ವಿವಾಹವು ನೆರವನ್ನು ನೀಡಬಲ್ಲದು ಮತ್ತು ನೀಡುತ್ತದೆ ಎಂಬುದು ನಿಜ. ಆದರೂ ಬರೀ ವಿವಾಹವಾಗಿರುವುದೇ ಒಬ್ಬನನ್ನು ಸಂತೋಷಪಡಿಸುವುದಿಲ್ಲ. ಅತ್ಯುತ್ತಮವಾದ ವಿವಾಹಗಳು ಕೂಡ ಸ್ವಲ್ಪ ಮಟ್ಟಿಗೆ ‘ಶರೀರಸಂಬಂಧವಾದ ಕಷ್ಟವನ್ನು’ ತರುತ್ತವೆ. (1 ಕೊರಿಂಥ 7:28) ವೈವಾಹಿಕ ಸಂತೋಷವು ನಿರಂತರವಾದ ಸ್ವತ್ಯಾಗ ಮತ್ತು ಪರಿಶ್ರಮದ ಮುಖಾಂತರ ಮಾತ್ರವೇ ಬರುತ್ತದೆ. ರಸಕರವಾಗಿ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನಾದ, ಯೇಸು ಕ್ರಿಸ್ತನು ಅವಿವಾಹಿತನಾಗಿದ್ದನು. ಆತನನ್ನು ಯಾರಾದರೂ ಅಸಂತೋಷಿತನೆಂದು ಕರೆಯಸಾಧ್ಯವೋ? ಖಂಡಿತವಾಗಿಯೂ ಇಲ್ಲ! ಆತನ ಹರ್ಷವು ಯೆಹೋವನ ಚಿತ್ತವನ್ನು ಮಾಡುವದರಿಂದ ಬಂತು.—ಯೋಹಾನ 4:34.
ವಿವಾಹವು ಏಕಾಂಗಿಕತನಕ್ಕಾಗಿರುವ ಒಂದು ಶಾಶ್ವತವಾದ ಪರಿಹಾರವೆಂಬುದು ಮತ್ತೊಂದು ಮಿಥ್ಯೆಯಾಗಿದೆ. ಅದು ಪರಿಹಾರವಾಗಿರುವುದಿಲ್ಲ! ಒಬ್ಬ ವಿವಾಹಿತ ಕ್ರೈಸ್ತ ಪುರುಷನು ಪ್ರಲಾಪಿಸಿದ್ದು: “ನನ್ನ ಪತ್ನಿಯು ನನ್ನಲ್ಲಿ ಎಂದೂ ಅಂತರಂಗದ ವಿಷಯವನ್ನು ತಿಳಿಸಿಲ್ಲ, ಅಥವಾ ನನ್ನೊಂದಿಗೆ ಅರ್ಥಭರಿತವಾದೊಂದು ಚರ್ಚೆಯನ್ನು ಮಾಡಿಲ್ಲ, ಎಂದೆಂದಿಗೂ ಇಲ್ಲ!” ತದ್ರೀತಿಯಲ್ಲಿ ಕೆಲವು ಕ್ರೈಸ್ತ ಪತ್ನಿಯರು ಅವರ ಪತಿಯರು ಸಂವಾದಿಸಲು ತಪ್ಪಿಹೋಗುತ್ತಾರೆಂದು ಅಥವಾ ತಮ್ಮಲ್ಲಿ ಆಸಕ್ತರಾಗಿರುವುದಕ್ಕಿಂತ ಹೆಚ್ಚು ತಮ್ಮ ಉದ್ಯೋಗ ಅಥವಾ ಸ್ನೇಹಿತರಲ್ಲಿ ಆಸಕ್ತರಾಗಿದ್ದಾರೆಂದು ತೋರುತ್ತದೆ ಎಂಬುದಾಗಿ ದೂರಿದ್ದಾರೆ. ವಿಷಾದನೀಯವಾಗಿ, ವಿವಾಹಿತರಾಗಿದ್ದರೂ ಏಕಾಂಗಿಯಾಗಿರುವುದು ತುಂಬ ಸಾಮಾನ್ಯವಾದ ವಿಷಯವಾಗಿದೆ.
ವಿವಾಹವನ್ನು ಕುಟುಂಬ ಸಮಸ್ಯೆಗಳಿಂದ ಒಂದು ವಿಮೋಚನೆಯಾಗಿ ವೀಕ್ಷಿಸುವವರಿದ್ದಾರೆ. ಒಬ್ಬ ಯುವ ವಿವಾಹಿತ ಸ್ತ್ರೀಯು ಹೇಳುವುದು: “ನಾನು ಬೆಳೆಯಲು ನನ್ನ ಹೆತ್ತವರು ನನಗೆ ಒಂದು ಅವಕಾಶವನ್ನು ಕೊಟ್ಟಿರಬೇಕಾಗಿತ್ತೆಂದು ನಾನು ನೆನಸುತ್ತೇನೆ. ಆದರೆ ನನಗೆ ಒಬ್ಬ ಹುಡುಗ ಸ್ನೇಹಿತನಿರಲು ಅಥವಾ ಸ್ನೇಹಿತರೊಂದಿಗೆ ಹೊರಹೋಗಲು ಅವರು ನನ್ನನ್ನು ಅನುಮತಿಸಲಿಲ್ಲ . . . ನನ್ನ ಹೆತ್ತವರು ನನಗೆ ಒಂದು ಅವಕಾಶವನ್ನು ನೀಡಿದ್ದರೆ, ನಾನು 16 ವರ್ಷ ಪ್ರಾಯದಲ್ಲಿ ವಿವಾಹವಾಗುತ್ತಿರಲಿಲ್ಲವೆಂದು ನಾನು ನೆನಸುತ್ತೇನೆ. ಆದರೆ ನಾನು ಬೆಳೆದಿದ್ದೇನೆಂದು ತೋರಿಸಲು ಬಯಸಿದ್ದೆ.”
ಮನೆಯಲ್ಲಿನ ಜೀವನವು ತುಂಬ ನಿರ್ಬಂಧಕವೆಂದು ನಿಮಗೆ ಅನಿಸಬಹುದು. ಆದರೆ ವಿವಾಹವು ಒಬ್ಬರ ವೈಯಕ್ತಿಕ ಸ್ವಾತಂತ್ರ್ಯವನ್ನು ಅತಿ ಹೆಚ್ಚಾಗಿ ನಿರ್ಬಂಧಿಸುವ ಜವಾಬ್ದಾರಿಗಳನ್ನು ತರುತ್ತದೆ. ಜೀವನಾಧಾರಕ್ಕಾಗಿ ದುಡಿಯುವುದು, ಬಿಲ್ಗಳ ಪಾವತಿ ಮಾಡುವುದು, ಮನೆ ಮತ್ತು ಮೋಟಾರು ಕಾರನ್ನು ರಿಪೇರಿ ಮಾಡುವುದು, ಅಡಿಗೆ ಮಾಡುವುದು, ಶುಚಿ ಮಾಡುವುದು, ಬಟ್ಟೆ ಒಗೆಯುವುದು, ಮತ್ತು ಪ್ರಾಯಶಃ ಮಕ್ಕಳನ್ನು ಬೆಳೆಸುವುದರಲ್ಲಿ ಕೂಡ ಏನು ಒಳಗೊಂಡಿದೆಯೆಂಬುದನ್ನು ಯೋಚಿಸಿರಿ! (ಜ್ಞಾನೋಕ್ತಿ 31:10-31; ಎಫೆಸ 6:4; 1 ತಿಮೊಥೆಯ 5:8) ಈ ಪ್ರಾಯಕ್ಕೆ ಬಂದವರಿಗಿರುವ ಜವಾಬ್ದಾರಿಗಳಿಂದ ಎದುರಾಗುವಾಗ ಅನೇಕ ಯುವಜನರು ಸಿಡಿಗುಂಡಿನ ಧಕ್ಕೆಗೊಳಗಾಗುತ್ತಾರೆ.
ವಿವಾಹವು ಜನಪ್ರಿಯತೆಗೆ ಕೀಲಿ ಕೈಯಾಗಿದೆ ಎಂದು ಸಹ ಕೆಲವರು ನಂಬುತ್ತಾರೆ. ಆದರೆ ಕೇವಲ ನೀವು ವಿವಾಹವಾಗಿದ್ದೀರಿ ಅನ್ನುವುದರ ಕಾರಣದಿಂದ ನಿಮ್ಮ ಅಥವಾ ನಿಮ್ಮ ಸಂಗಾತಿಯ ಸಹವಾಸವನ್ನು ಇತರರು ಯಾಚಿಸುವರೆಂಬ ಖಾತ್ರಿಯಿರುವುದಿಲ್ಲ. ನೀವು ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ, ನೀವು ದಯಾಪರರೂ, ಉದಾರತೆಯುಳ್ಳವರೂ, ನಿಸ್ವಾರ್ಥಿಗಳೂ ಆಗಿರುವಲ್ಲಿ, ಜನರು ನಿಮ್ಮನ್ನು ಬಯಸುವರು. (ಜ್ಞಾನೋಕ್ತಿ 11:25) ಮತ್ತು ದಂಪತಿಗಳಾಗಿರುವುದು ವಿವಾಹಿತ ಸ್ನೇಹಿತರೊಂದಿಗಿರಲು ಹೆಚ್ಚು ಸುಲಭವನ್ನಾಗಿ ಮಾಡುತ್ತದಾದರೂ, ಒಬ್ಬ ಪತಿ ಮತ್ತು ಪತ್ನಿ ತಾವು “ಒಂದೇ ಶರೀರ”ವಾಗಿದ್ದೇವೆಂಬುದನ್ನು ನೆನಪಿನಲ್ಲಿಡತಕ್ಕದ್ದು. (ಆದಿಕಾಂಡ 2:24) ಅವರ ಮುಖ್ಯ ಚಿಂತೆಯು, ಅವರು ಒಬ್ಬರಿಗೊಬ್ಬರು ಹೇಗೆ ಹೊಂದಿಕೊಂಡು ಹೋಗುವುದು ಎಂಬುದೇ ಆಗಿರಬೇಕು, ಸ್ನೇಹಿತರೊಂದಿಗೆ ಹೇಗೆ ಹೊಂದಿಕೊಂಡು ಹೋಗುವುದು ಎಂಬುದಾಗಿರಬಾರದು.
ವಿವಾಹವಾಗಲು ಸಿದ್ಧರೋ?
ಈ ಅಂಶಗಳು ಸಮಂಜಸವಾಗಿವೆ ಎಂಬುದಾಗಿ ನೀವು ಎಣಿಸುವುದಾದರೂ ಕೂಡ, ಕೆಲವೊಮ್ಮೆ ನಿರುತ್ಸಾಹಿತರಾಗಿದ್ದೀರೆಂಬುದಾಗಿ ನಿಮಗೆ ಅನಿಸಬಹುದು ನಿಶ್ಚಯ. ಒಂದು ಪುರಾತನ ಗಾದೆಯು ಅದನ್ನು ಹೀಗೆ ಹೇಳುತ್ತದೆ: “ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು.” (ಜ್ಞಾನೋಕ್ತಿ 13:12) ಉದಾಹರಣೆಗೆ, ಯುವ ಟೋನಿ, ಅವನು ಅವಿವಾಹಿತನಾಗಿದ್ದ ಕಾರಣ ಬಹುಮಟ್ಟಿಗೆ ಹತಾಶೆಯ ಒಂದು ಸ್ಥಿತಿಯಲ್ಲಿ ತನ್ನನ್ನು ಕಂಡುಕೊಂಡನು. ಯಾರನ್ನಾದರೂ ವಿವಾಹವಾಗಲಿಕ್ಕೆ ತಾನು ಸಿದ್ಧನಾಗಿದ್ದೇನೆಂದು ಭಾವಿಸಲು ಅವನು ಪ್ರಾರಂಭಿಸಿದನು. ತದ್ರೀತಿಯಲ್ಲಿ ಒಬ್ಬ ಎಳೆಯ ಹುಡುಗಿಯಾದ ಸ್ಯಾಂಡ್ರ, ಪ್ರತಿಯೊಂದು ಸಮಯವು ಒಂದು ಅಂಕುರಿಸುತ್ತಿರುವ ಪ್ರಣಯದ ಕುರಿತು ತಿಳಿದಾಗ ನಿರುತ್ಸಾಹಿತಳಾದಳು; ತನ್ನ ಸರದಿ ಯಾವಾಗ ಬರುವುದು ಎಂದು ಅವಳು ವಿಸ್ಮಯಗೊಳ್ಳುತ್ತಿದ್ದಳು.
ಅಂಧಕಾರವಾದೊಂದು ಹಳ್ಳದೊಳಗೆ ಬೀಳಲು ಸ್ವತಃ ನಿಮ್ಮನ್ನು ಅನುಮತಿಸಿಕೊಳ್ಳುವ ಮುನ್ನ, ನಿಮ್ಮನ್ನೇ ಕೇಳಿಕೊಳ್ಳಿ, ‘ವಿವಾಹಕ್ಕಾಗಿ ನಾನು ನಿಜವಾಗಿಯೂ ಸಿದ್ಧನಾಗಿದ್ದೇನೋ?’ ಸರಳವಾಗಿ ಹೇಳುವುದಾದರೆ, ನೀವು ಒಬ್ಬ ಹದಿವಯಸ್ಕರಾಗಿರುವಲ್ಲಿ, ಉತ್ತರವು ಇಲ್ಲ ಎಂದು ಒತ್ತಿಹೇಳುವುದಾಗಿರಬಹುದು! ಅಮೆರಿಕದಲ್ಲಿ, ಅಧಿಕಾಂಶ ಹದಿವಯಸ್ಕ ವಿವಾಹಗಳು ಐದು ವರ್ಷಗಳೊಳಗೆ ವಿಫಲಗೊಳ್ಳುತ್ತವೆ.b ಕೆಲವು ಯುವಜನರು ತಮ್ಮ ವಯಸ್ಸಿಗೆ ವಿಶೇಷವಾಗಿ ಪ್ರೌಢರಾಗಿರಬಹುದು ಮತ್ತು ವಿವಾಹವನ್ನು ಒಂದು ಯಶಸ್ಸನ್ನಾಗಿ ಮಾಡಶಕ್ತರಾಗಿರಬಹುದು. ಆದರೆ ಅದು ಅನಿವಾರ್ಯವಾಗಿ ನೀವು ವಿವಾಹವಾಗಬೇಕೆಂಬುದನ್ನು ಅರ್ಥೈಸುವುದಿಲ್ಲ. ವಿವಾಹದ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ನೀವು ಸಿದ್ಧರಾಗಿದ್ದೀರೋ ಇಲ್ಲವೋ ಎಂಬುದನ್ನು ನೀವು ಪ್ರಾಮಾಣಿಕವಾಗಿ ಪರಿಗಣಿಸಿದ್ದೀರೋ?
ಒಂದು ಪ್ರಾಮಾಣಿಕವಾದ ಸ್ವಪರೀಕ್ಷೆಯು ಹೆಚ್ಚು ಪ್ರಕಟಪಡಿಸುವಂತಹದ್ದಾಗಿ ಪರಿಣಮಿಸಬಹುದು. ಉದಾಹರಣೆಗೆ, ನೀವು ಎಷ್ಟು ಪ್ರೌಢರೂ ಜವಾಬ್ದಾರರೂ ಆಗಿದ್ದೀರಿ? ನೀವು ಹಣವನ್ನು ಉಳಿತಾಯ ಮಾಡಲು ಶಕ್ತರಾಗಿದ್ದೀರೋ, ಅಥವಾ ನೀವು ಅದನ್ನು ಪಡೆದ ಕೂಡಲೇ ವ್ಯಯಿಸುತ್ತೀರೋ? ನಿಮ್ಮ ಬಿಲ್ಗಳನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡುತ್ತೀರೋ? ಒಂದು ಉದ್ಯೋಗದಲ್ಲಿ ಉಳಿಯಲು ಅಥವಾ ಒಂದು ಮನೆವಾರ್ತೆಯನ್ನು ನಿರ್ವಹಿಸಲು ನೀವು ಸಮರ್ಥರಾಗಿದ್ದೀರೋ? ಸಹೋದ್ಯೋಗಿಗಳ ಮತ್ತು ಹೆತ್ತವರಂಥ ಇತರರೊಂದಿಗೆ ನೀವು ಹೊಂದಿಕೊಂಡು ಹೋಗುತ್ತೀರೋ, ಅಥವಾ ಅವರೊಂದಿಗೆ ನೀವು ಸತತವಾದ ಘರ್ಷಣೆಯಲ್ಲಿ ಒಳಗೂಡಿದ್ದೀರೋ? ಹಾಗಿರುವಲ್ಲಿ, ಒಬ್ಬ ವಿವಾಹಿತ ಸಂಗಾತಿಯೊಂದಿಗೆ ಹೊಂದಿಕೊಂಡು ಹೋಗುವುದನ್ನು ನೀವು ಅತಿ ಕಷ್ಟಕರವಾಗಿ ಕಂಡುಕೊಳ್ಳಬಹುದು.
ನೀವು ಇನ್ನೂ ಹದಿವಯಸ್ಕರಾಗಿರುವುದಾದರೆ, ಒಬ್ಬ ಒಳ್ಳೆಯ ಪತಿ ಅಥವಾ ಒಬ್ಬ ಒಳ್ಳೆಯ ಪತ್ನಿಯನ್ನಾಗಿ ಮಾಡಲು ಅಗತ್ಯವಿರುವ ಪ್ರೌಢತೆಯನ್ನು ಮತ್ತು ಸ್ಥಿರತೆಯನ್ನು ಪಡೆಯುವ ಸಲುವಾಗಿ, ಅನುಭವದ ಇನ್ನೂ ಸ್ವಲ್ಪ ವರ್ಷಗಳು ನಿಮಗೆ ಅಗತ್ಯವಿದೆ ಎಂಬುದನ್ನು ನೀವು ಚೆನ್ನಾಗಿ ಕಂಡುಹಿಡಿಯಬಹುದು. ಈ ವಾಸ್ತವಾಂಶವನ್ನು ಗ್ರಹಿಸುವುದು ನಿಮ್ಮ ನಿರೀಕ್ಷಣೆಗಳನ್ನು ಪುನರ್ಹೊಂದಿಸಿಕೊಳ್ಳಲು ಮತ್ತು ವಿವಾಹವನ್ನು ಒಂದು ಭಾವಿ ಸಂಭವನೀಯತೆಯೋಪಾದಿ ವೀಕ್ಷಿಸಲು ಸಹಾಯವನ್ನೀಯಬಹುದು. ಇದು ನಿಮ್ಮ ಅವಿವಾಹಿತ ಸ್ಥಿತಿಯ ಕುರಿತು ಹೆಚ್ಚು ‘ದೃಢಚಿತ್ತ’ರಾಗಿರುವಂತೆ ನಿಮಗೆ ಸಹಾಯ ಮಾಡಬಹುದು, ಕಡಿಮೆ ಪಕ್ಷ ಸದ್ಯಕ್ಕೆ.—1 ಕೊರಿಂಥ 7:37.
ಉಚಿತವಾದ ಸಿದ್ಧತೆ
ಆದರೂ, “ಯೌವನದ ಕಾಂತಿ”ಯನ್ನು ನೀವು ದಾಟಿದ್ದೀರೆಂದು ನೀವು ನಂಬುವುದಾದರೆ, ಮತ್ತು ವಿವಾಹವಾಗಲು ನೀವು ಸಿದ್ಧರಾಗಿದ್ದೀರೆಂದು ಭಾವಿಸುವುದಾದರೆ ಆಗೇನು? ಭಾವಿ ವಿವಾಹ ಸಂಗಾತಿಗಳು ಕೊಂಚ ಮಂದಿ ಇರುವುದಾದರೆ ಅಥವಾ ಪ್ರತಿಯೊಂದು ಸಮಯ ನೀವು ಒಬ್ಬರಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದಾಗ ತಿರಸ್ಕರಿಸಲ್ಪಡುವುದಾದರೆ ಅದು ನಿರುತ್ತೇಜನಕರವಾಗಿರಬಲ್ಲದು. ಆದರೆ ಇದು ಅನಿವಾರ್ಯವಾಗಿ ನೀವು ಅನಪೇಕ್ಷಣೀಯರು ಎಂಬುದನ್ನು ಅರ್ಥೈಸುತ್ತದೋ? ಇಲ್ಲವೇ ಇಲ್ಲ. ಅರಸ ಸೊಲೊಮೋನನು, ಅವನು ಮೋಹಿತನಾಗಿದ್ದ ಒಬ್ಬ ಯುವ ಹುಡುಗಿಯನ್ನು ಓಲೈಸುವುದರಲ್ಲಿ ಸಂಪೂರ್ಣವಾಗಿ ವಿಫಲನಾದನು—ಮತ್ತು ಜೀವಿಸಿರುವವರಲ್ಲೀ ಅತ್ಯಂತ ಐಶ್ವರ್ಯವಂತನೂ, ವಿವೇಕಿ ಮನುಷ್ಯನೂ ಆಗಿದ್ದನು! ಸಮಸ್ಯೆ ಏನು? ಹುಡುಗಿಯ ಹೃದಯವು ಕೇವಲ ಅವನಿಗಾಗಿ ಪ್ರಣಯ ಭಾವನೆಗಳನ್ನು ಹೊಂದುವುದರೆಡೆಗೆ ಒಲವುಳ್ಳದ್ದಾಗಿರಲಿಲ್ಲ. (ಪರಮ ಗೀತ 2:7) ತದ್ರೀತಿಯಲ್ಲಿ, ನೀವು ನಿಜವಾಗಿಯೂ ಒಪ್ಪುವ ಒಬ್ಬರನ್ನು ಇನ್ನೂ ಭೇಟಿಯಾಗಿಲ್ಲದಿರಬಹುದು.
ಯಾರಾದರೊಬ್ಬರನ್ನು ಆಕರ್ಷಿಸಲು ಅತಿ ಕುರೂಪಿಗಳಾಗಿದ್ದೀರೆಂದು ನೀವು ನೆನಸುತ್ತೀರೋ? ನಿಜ, ಸುಂದರ ಮುಖಭಾವಗಳು ಪ್ರಯೋಜನಕರವಾಗಿವೆ, ಆದರೆ ಸುಂದರರವಾಗಿ ಕಾಣುವುದು ಅತ್ಯಂತ ಪ್ರಮುಖವಾದ ಮತ್ತು ಅಮೂಲ್ಯವಾದ ವಿಷಯವಾಗಿರುವುದಿಲ್ಲ. ನಿಮಗೆ ತಿಳಿದಿರುವ ವಿವಾಹಿತ ದಂಪತಿಗಳ ಕುರಿತು ನೀವು ಯೋಚಿಸುವಾಗ, ಅವರಲ್ಲಿ ನಾನಾ ರೀತಿಯ ಎತ್ತರ, ಆಕಾರ, ಮತ್ತು ಆಕರ್ಷಣೆಯ ಮಟ್ಟಗಳುಳ್ಳ ಜನರಿರುವುದು ನಿಜವಾಗಿರುವುದಿಲ್ಲವೋ? ಅಲ್ಲದೆ, ನಿಜವಾಗಿ ದೇವಭಯವುಳ್ಳವರಾದ ಯಾರಾದರೊಬ್ಬರು ನೀವು “ಒಳಗಣ ಭೂಷಣ”ದಲ್ಲಿ ಏನಾಗಿದ್ದೀರಿ ಎಂಬುದರೊಂದಿಗೆ ಮುಖ್ಯವಾಗಿ ಆಸ್ಥೆಯುಳ್ಳವರಾಗಿರುವರು.—1 ಪೇತ್ರ 3:4.
ನಿಶ್ಚಯವಾಗಿಯೂ, ಯಾವ ಕಾರಣಕ್ಕೂ ನೀವು ನಿಮ್ಮ ಶಾರೀರಿಕ ತೋರ್ಕೆಯನ್ನು ನಿರ್ಲಕ್ಷಿಸಬಾರದು; ನಿಮ್ಮ ತೋರಿಕೆ ಅತ್ಯುತ್ತಮವಾಗಿರುವಂತೆ ಪ್ರಯತ್ನಿಸುವುದು ತೀರ ನ್ಯಾಯಸಮ್ಮತ. ಕೊಳಕಾದ ತೊಡಿಗೆ ಮತ್ತು ತಲೆಬಾಚುವಿಕೆಯು ಇತರರಿಗೆ ನಿಮ್ಮ ಕುರಿತು ತಪ್ಪಭಿಪ್ರಾಯವನ್ನು ನೀಡಬಲ್ಲದು.c ಹಾಗೂ, ಸಂಭಾಷಣಾ ಕೌಶಲ್ಯಗಳ ನ್ಯೂನತೆ ಮತ್ತು ನಿಮ್ಮ ವ್ಯಕ್ತಿತ್ವದಲ್ಲಿನ ಲೋಪಗಳು, ಅವರು ನಿಮ್ಮನ್ನು ಅರ್ಥಮಾಡಿಕೊಳ್ಳುವ ಮೊದಲೇ ಇತರರು ನಿಮ್ಮನ್ನು ಇಷ್ಟಪಡದಂತೆ ಮಾಡಬಲ್ಲದು. ಈ ಕ್ಷೇತ್ರಗಳಲ್ಲಿ ಕೆಲವೊಂದು ಸರಿಹೊಂದಿಸುವಿಕೆಗಳು ಅಗತ್ಯವಿರುವಲ್ಲಿ ಒಬ್ಬ ಪ್ರೌಢ ಸ್ನೇಹಿತ ಅಥವಾ ಒಬ್ಬ ಹೆತ್ತವರು ನಿಮಗೆ ಹೇಳಬಲ್ಲರು. ಸತ್ಯವು ವೇದನೆಯುಳ್ಳದ್ದಾಗಿರಬಹುದು, ಆದರೆ ಅದನ್ನು ಅಂಗೀಕರಿಸುವುದು ಪ್ರಾಯಶಃ ಸರಿಹೊಂದಿಸುವಿಕೆಗಳನ್ನು ಮಾಡಲು ನಿಮಗೆ ಸಹಾಯವನ್ನೀಯಬಲ್ಲದು ಮತ್ತು ಹೀಗೆ ನೀವು ಇತರರಿಗೆ ಹೆಚ್ಚು ಆಕರ್ಷಕರಾಗಿರುವಿರಿ.—ಜ್ಞಾನೋಕ್ತಿ 27:6.
ಹಾಗಿದ್ದರೂ, ಅಂತಿಮ ವಿಶ್ಲೇಷಣೆಯಲ್ಲಿ, ಒಬ್ಬ ವ್ಯಕ್ತಿಯೋಪಾದಿ ನಿಮ್ಮ ಯೋಗ್ಯತೆ, ಅಥವಾ ಬೆಲೆಯು, ನೀವು ವಿವಾಹಿತರಾಗಿದ್ದೀರೋ ಇಲ್ಲವೋ ಎಂಬುದರ ಮೇಲೆ ನಿರ್ಧರಿಸಲ್ಪಡುವುದಿಲ್ಲ. ನಿಜವಾಗಿಯೂ ಎಣಿಕೆಗೆ ಬರುವುದು ಏನಾಗಿದೆಯೆಂದರೆ, ದೇವರು ನಿಮ್ಮನ್ನು ಯಾವ ವಿಧದಲ್ಲಿ ವೀಕ್ಷಿಸುತ್ತಾನೆ ಎಂಬುದೇ, ಮತ್ತು ಆತನು “ಹೃದಯವನ್ನೇ ನೋಡುವವನಾಗಿದ್ದಾನೆ.” (1 ಸಮುವೇಲ 16:7) ಆದುದರಿಂದ, ನಿಮ್ಮ ಆಸ್ಥೆಯ ಕೇಂದ್ರವು ಯೆಹೋವನ ಮೆಚ್ಚುಗೆಯನ್ನು ಗಳಿಸುವುದಾಗಿರಬೇಕೇ ಹೊರತು ವಿವಾಹವಾಗುವುದಲ್ಲ. ನಿಮ್ಮ ಆಲೋಚನೆಗಳನ್ನೂ ಸಂಭಾಷಣೆಗಳನ್ನೂ ಎರಡನೆಯ ವಿಷಯವು ಆಳಲು ಬಿಡದಂತೆ ಪ್ರಯತ್ನಿಸಿ. ನಿಮ್ಮ ಒಡನಾಟಗಳ, ಸಂಗೀತದ ಆಯ್ಕೆಯ, ಮತ್ತು ಮನೋರಂಜನೆಯ ವಿಷಯವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ.
ವಿವಾಹವಾಗುವ ಅಭಿಲಾಷೆಯು ಹೋಗದಿರಬಹುದು ನಿಜ, ಆದರೆ ಗಾಬರಿಗೊಳ್ಳದಿರಿ. ಸಹನೆಯನ್ನು ಅಭ್ಯಾಸಿಸಿರಿ. (ಪ್ರಸಂಗಿ 7:8) ನಿಮ್ಮ ಅವಿವಾಹಿತತೆಯನ್ನು ಕೇಡಿನೋಪಾದಿ ವೀಕ್ಷಿಸುವ ಬದಲು, ಅವಿವಾಹಿತತೆಯು ನೀಡುವ ಸ್ವಾತಂತ್ರ್ಯದ ಮತ್ತು ಯಾವುದೇ ಅಪಕರ್ಷಣೆಗಳಿಲ್ಲದೇ ದೇವರನ್ನು ಸೇವಿಸಲು ಅದು ಕೊಡುವ ಅವಕಾಶಗಳ ಸಂಪೂರ್ಣ ಪ್ರಯೋಜನವನ್ನು ತೆಗೆದುಕೊಳ್ಳಿರಿ. (1 ಕೊರಿಂಥ 7:33-35, 38) ಸಕಾಲದಲ್ಲಿ ನಿಮಗೆ ವಿವಾಹವಾಗಬಹುದು—ಪ್ರಾಯಶಃ ನೀವು ಯೋಚಿಸುವದಕ್ಕಿಂತ ಅತಿ ಶೀಘ್ರವೇ ಆಗಬಹುದು.
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳಲ್ಲಿ ಕೆಲವು ಬದಲಾಯಿಸಲ್ಪಟ್ಟಿವೆ.
b ನಮ್ಮ ಮೇ 8, 1995ರ ಸಂಚಿಕೆಯಲ್ಲಿ, “ಯುವ ಜನರು ಪ್ರಶ್ನಿಸುವುದು . . . ತೀರ ಚಿಕ್ಕಪ್ರಾಯದಲ್ಲಿ ವಿವಾಹ—ನಾವು ಸಫಲರಾಗಬಲ್ಲೆವೊ?” ಎಂಬ ಲೇಖನವನ್ನು ನೋಡಿರಿ.
c ಈ ವಿಷಯಗಳ ಕುರಿತು ನಿರ್ದಿಷ್ಟ ಸಲಹೆಗಳಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇಂಕ್. ಇವರಿಂದ ಪ್ರಕಾಶಿಸಲ್ಪಟ್ಟ, ಯುವ ಜನರು ಪ್ರಶ್ನಿಸುವುದು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್) ಎಂಬ ಪುಸ್ತಕದ 10 ಮತ್ತು 11ನೇ ಅಧ್ಯಾಯಗಳನ್ನು ನೋಡಿರಿ.
[ಪುಟ 35 ರಲ್ಲಿರುವ ಚಿತ್ರ]
ಒಬ್ಬರ ಸಮಾನಸ್ಥರು ವಿವಾಹವಾಗುತ್ತಿರುವಾಗ ತ್ಯಜಿಸಲ್ಪಟ್ಟ ಅನಿಸಿಕೆಯುಳ್ಳವರಾಗುವುದು ಬಹು ಸುಲಭ