ನಮ್ಮ ಸುತ್ತಲಿನ ಸೌಂದರ್ಯವನ್ನು ನೋಡುವ ವಿಧ
“ಸಕಲ ಭಾಷೆಗಳಲ್ಲಿ, ನಮ್ಮ ಅತ್ಯಾರಂಭಿಕ ಅಭಿವ್ಯಕ್ತಿಗಳಲ್ಲಿ ಒಂದು ‘ನನ್ನನ್ನು ನೋಡಲು ಬಿಡು’ ಎಂಬುದು!”—ವಿಲ್ಯಮ್ ವೈಟ್, ಜೂನ್ಯರ್.
ರೆಕ್ಕೆಯೊದರುತ್ತಿರುವ ಚಿಟ್ಟೆಯನ್ನು ಬಿರುಗಣ್ಣಿನಿಂದ ನೋಡುವ ಒಂದು ಚಿಕ್ಕ ಮಗು, ಶೋಭಾಯಮಾನವಾದ ಸೂರ್ಯಾಸ್ತಮಾನವನ್ನು ಎವೆಯಿಕ್ಕದೆ ನೋಡುವ ವೃದ್ಧ ದಂಪತಿಗಳು, ತನ್ನ ಗುಲಾಬಿ ಹೂವುಗಳ ಪ್ರದರ್ಶನವನ್ನು ಮೆಚ್ಚಿಕೆಯಿಂದ ನೋಡುವ ಗೃಹಿಣಿ—ಎಲ್ಲರು ಕ್ಷಣಿಕಾಲಿಕವಾಗಿ ಸೌಂದರ್ಯದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಿದ್ದಾರೆ.
ದೇವರ ಸೃಷ್ಟಿಯ ಸೌಂದರ್ಯವು ಎಲ್ಲೆಲ್ಲೂ ಇರುವುದರಿಂದ ಅದನ್ನು ನೋಡಲು ನೂರಾರು ಮೈಲು ಪ್ರಯಾಣ ಮಾಡುವ ಅಗತ್ಯವಿಲ್ಲ. ಭಯಚಕಿತಗೊಳಿಸುವ ದೃಶ್ಯವು ಅತಿ ದೂರದಲ್ಲಿರಬಹುದು, ಆದರೆ ನೀವು ನೋಡುವುದಾದರೆ ಮತ್ತು—ಹೆಚ್ಚು ಪ್ರಾಮುಖ್ಯವಾಗಿ—ಅದಕ್ಕಾಗಿ ನೋಡುವ ವಿಧಾನವು ನಿಮಗೆ ಗೊತ್ತಿರುವುದಾದರೆ, ನಿಮ್ಮ ನೆರೆಹೊರೆಯಲ್ಲೀ ಭಾವೂತ್ಪಾದಕ ಕಲಾಕೃತಿಯು ಕಂಡುಬರಬಲ್ಲದು.
“ಸೌಂದರ್ಯವು ಅದನ್ನು ನೋಡುವವನ ಕಣ್ಣಿನಲ್ಲಿದೆ,” ಎಂದು ಆಗಿಂದಾಗ್ಗೆ ಗಮನಿಸಲಾಗಿದೆ. ಆದರೆ, ಸೌಂದರ್ಯವು ಅಲ್ಲಿರುತ್ತದಾದರೂ, ಪ್ರತಿಯೊಬ್ಬನು ಅದನ್ನು ಕಾಣನು. ಎದ್ದು ಗಮನ ಕೊಡುವಂತೆ ಮಾಡಲು ಒಂದು ವರ್ಣಚಿತ್ರ ಅಥವಾ ಛಾಯಾಚಿತ್ರವು ನಮಗೆ ಬೇಕಾದೀತು. ವಾಸ್ತವಿಕವಾಗಿ, ಅನೇಕ ಕಲಾಕಾರರು ನಂಬುವುದೇನಂದರೆ, ಚಿತ್ರಿಸುವುದಕ್ಕಿಂತ ದೃಷ್ಟಿಸುವ ಸಾಮರ್ಥ್ಯದಲ್ಲಿ ಅವರ ಸಾಫಲ್ಯವು ಹೆಚ್ಚು ಆಧಾರಿಸಿದೆ. ಮಾರೀಸ್ ಗ್ರಾಸರ್ ಇವರ ದ ಪೆಯಿಂಟರ್ಸ್ ಐ ಎಂಬ ಪುಸ್ತಕವು ವಿವರಿಸುವುದೇನಂದರೆ, “ಚಿತ್ರಕಾರನು ತನ್ನ ಕೈಗಳಿಂದಲ್ಲ, ಕಣ್ಣುಗಳಿಂದ ಚಿತ್ರ ಬರೆಯುತ್ತಾನೆ. ಅವನು ಏನನ್ನು ನೋಡುತ್ತಾನೋ, ಅದನ್ನು ಸ್ಪಷ್ಟವಾಗಿಗಿ ನೋಡುವಲ್ಲಿ, ಅವನು ಚಿತ್ರಿಸಬಲ್ಲನು. . . . ಸ್ಪಷ್ಟವಾಗಿಗಿ ನೋಡುವುದು ಪ್ರಾಮುಖ್ಯ ವಿಷಯವಾಗಿದೆ.”
ನಾವು ಕಲಾಕಾರರಾಗಿರಲಿ, ಇಲ್ಲದಿರಲಿ, ನಮ್ಮ ಸುತ್ತಲಿನ ಸೌಂದರ್ಯವನ್ನು ಗಮನಿಸಲಿಕ್ಕಾಗಿ ಅಧಿಕ ಸ್ಪಷ್ಟವಾಗಿಗಿ ನೋಡಲು ನಾವು ಕಲಿಯಬಲ್ಲೆವು. ಬೇರೊಂದು ಮಾತಿನಲ್ಲಿ ಹೇಳುವುದಾದರೆ, ಹೊರಗೆ ಹೋಗಿ, ವಿಷಯಗಳನ್ನು ಹೊಸ ಬೆಳಕಿನಲ್ಲಿ ನೋಡುವ ಅಗತ್ಯ ನಮಗಿದೆ.
ಈ ಸಂಬಂಧದಲ್ಲಿ ಪ್ರಾಕೃತಿಕ ಇತಿಹಾಸದ ಮೇಲಣ ಬರಹಗಾರರಾದ ಜಾನ್ ಬ್ಯಾರಿಟ್, ವೈಯಕ್ತಿಕ ಒಳಗೂಡುವಿಕೆಯ ಮೌಲ್ಯವನ್ನು ಒತ್ತಿಹೇಳುತ್ತಾರೆ. “ಸಜೀವ ಪ್ರಾಣಿಗಳನ್ನು ಮತ್ತು ಸಸ್ಯಗಳನ್ನು ಅವು ತಮ್ಮ ಪ್ರಾಕೃತಿಕ ಇರು ನೆಲೆಯಲ್ಲಿ ಇರುವಾಗ ನಾವಾಗಿಯೇ ನೋಡುವುದು, ಸ್ಪರ್ಶಿಸುವುದು, ಆಘ್ರಾಣಿಸುವುದು, ಮತ್ತು ಕಿವಿಗೊಡುವುದನ್ನು ಬೇರೆ ಯಾವುದೂ ಭರ್ತಿಮಾಡದು,” ಎನ್ನುತ್ತಾರೆ ಅವರು. “ಸೌಂದರ್ಯವು ಆಳವಾಗಿ ಅಚೊತ್ಚುವ್ತಂತೆ ಬಿಡಿ . . . ಒಬ್ಬನು ಎಲಿಯ್ಲೇ ಇರಲಿ, ಮೊದಲಾಗಿ ನೋಡಿರಿ, ಆನಂದಿಸಿರಿ ಮತ್ತು ಪುನಃ ನೋಡಿರಿ.”
ಆದರೆ ನಾವು ಯಾವುದನ್ನು ನೋಡಬೇಕು? ಸೌಂದರ್ಯದ ನಾಲ್ಕು ಮೂಲಭೂತ ಘಟಕಾಂಶಗಳನ್ನು ಗಮನಿಸಲು ಕಲಿಯುವ ಮೂಲಕ ನಾವು ಆರಂಭಿಸಬಲ್ಲೆವು. ಈ ಫಟಕಾಂಶಗಳನ್ನು ಯೆಹೋವನ ಸೃಷ್ಟಿಯ ಬಹುಮಟ್ಟಿಗೆ ಪ್ರತಿಯೊಂದು ವಿಷಯದಲ್ಲಿ ಕಾಣಸಾಧ್ಯವಿದೆ. ಅವನ್ನು ನೋಡಲು ಎಷ್ಟು ಹೆಚ್ಚು ಸಲ ನಾವು ನಿಲ್ಲುತ್ತೇವೂ, ಅಷ್ಟು ಹೆಚ್ಚಾಗಿ ಆತನ ಸೃಷ್ಟಿ ಕಲೆಯಲ್ಲಿ ನಾವು ಆನಂದಿಸುವೆವು.
ಸೌಂದರ್ಯದ ಘಟಕಾಂಶಗಳನ್ನು ಗುರುತಿಸುವುದು
ಆಕಾರಗಳು ಮತ್ತು ನಮೂನೆಗಳು. ಅನೇಕ ಆಕಾರಗಳಿರುವ ಒಂದು ಜಗತ್ತಿನಲ್ಲಿ ನಾವು ಜೀವಿಸುತ್ತೇವೆ. ಕೆಲವು ಆಕಾರಗಳು ಬಿದಿರಿನ ಪೊದೆಯ ಸಾಲುಗಳಂತೆ ರೇಖಾಕೃತಿಗಳಾಗಿ ಅಥವಾ ಜೇಡರ ಬಲೆಯಂತೆ ವೃತ್ತಾಕೃತಿಗಳಾಗಿರುವಾಗ, ಬೇರೆಯವುಗಳು ಸದಾ ಬದಲಾಗುವ ಮೋಡದಂತೆ ಆಕಾರರಹಿತವಾಗಿವೆ. ಅನೇಕ ಆಕಾರಗಳು, ಅವು ಪಳಗಿಸಿದ ಆರ್ಕಿಡ್ ಹೂವುಗಳಾಗಿರಲಿ, ಕಡಲಚಿಪ್ಪಿನ ತಿರುಪುಗಳಾಗಿರಲಿ, ಅಥವಾ ತನ್ನ ಎಲೆಗಳನ್ನು ಉದುರಿಸಿರುವ ಮರದ ಕೊಂಬೆಗಳಾದರೂ ಸಹ, ಆಕರ್ಷಕವಾಗಿವೆ.
ಅದೇ ಆಕಾರವು ಪುನಃ ಮಾಡಲ್ಪಟ್ಟಾಗ, ನೋಟಕ್ಕೆ ರಮ್ಯವಾಗಿರಲೂಬಹುದಾದ ಒಂದು ನಮೂನೆಯನ್ನು ಅದು ನಿರ್ಮಿಸುತ್ತದೆ. ಉದಾಹರಣೆಗೆ, ಅರಣ್ಯದಲ್ಲಿ ಸಾಲಾಗಿ ಬೆಳೆದಿರುವ ಮರಗಳ ಕಾಂಡಗಳನ್ನು ಕಲ್ಪಿಸಿಕೊಳ್ಳಿ. ಅವುಗಳ ಆಕಾರಗಳು—ಪ್ರತಿಯೊಂದು ವಿಭಿನ್ನವಾದರೂ ಸಮಾಂತರವಾಗಿದ್ದು—ನೋಟಕ್ಕೆ ಒಂದು ಅಂದವಾದ ನಮೂನೆಯನ್ನು ನಿರ್ಮಿಸುತ್ತವೆ. ಆದರೆ ಅವುಗಳು ನಿರ್ಮಿಸುವ ಆಕಾರಗಳನ್ನು ಮತ್ತು ನಮೂನೆಗಳನ್ನು ನೋಡಲು, ಬೆಳಕು ಇರಲೇ ಬೇಕು.
ಬೆಳಕು. ಬೆಳಕಿನ ವಿತರಣೆಯು ನಾವು ಆಕರ್ಷಣೀಯವಾಗಿ ಕಾಣುವ ಆಕಾರಗಳಿಗೆ ಒಂದು ವಿಶೇಷ ಗುಣಮಟ್ಟವನ್ನು ಕೊಡುತ್ತದೆ. ಪ್ರತಿ ಅಂಶಗಳು ಉಜ್ವಲಗೊಳಿಸಲ್ಪಡುತ್ತವೆ, ಹೊರಮೈಯ ರಚನೆಗೆ ಬಣ್ಣಬರುತ್ತದೆ, ಮತ್ತು ಒಂದು ಮನೋಸ್ಥಿತಿಯು ನಿರ್ಮಿತವಾಗುತ್ತದೆ. ದಿನದ ಹೊತ್ತು, ವರ್ಷದ ಋತು, ಹವಾಮಾನ, ಮತ್ತು ನಾವು ಜೀವಿಸುವ ಸ್ಥಳಕ್ಕನುಸಾರವಾಗಿಯೂ ಬೆಳಕು ಬದಲಾಗುತ್ತದೆ. ಮೋಡಗವಿದ ಶಿಥಿಲವಾದ ಬೆಳಕಿನ ದಿನವು, ಕಾಡು ಹೂವುಗಳ ಅಥವಾ ಶರತ್ಕಾಲದ ಎಲೆಗಳ ಸೂಕ್ಷ್ಮ ವರ್ಣಛಾಯೆಯನ್ನು ಗಣ್ಯಮಾಡಲು ಆದರ್ಶವಾಗಿರುವಾಗ, ಬಂಡೆಗಳು ಮತ್ತು ಪರ್ವತ ಶ್ರೇಣಿಯ ಶಿಖರಗಳು ಸೂರ್ಯನ ಉದಯ ಮತ್ತು ಅಸ್ತಮಾನದಿಂದ ಆಕೃತಿಕೊಡಲ್ಪಟ್ಟಾಗ ತಮ್ಮ ಗಮನಾರ್ಹ ಆಕಾರಗಳನ್ನು ಬೆಡಗಿನಿಂದ ಪ್ರದರ್ಶಿಸುತ್ತವೆ. ಉತ್ತರ ಗೋಲಾರ್ಧದ ಶೀತಲವಾದ ಸೌಮ್ಯ ಬಿಸಿಲು ಗ್ರಾಮಕ ಭೂದೃಶ್ಯಕ್ಕೆ ಭಾವನಾತ್ಮಕ ಆಕರ್ಷಣೆಯನ್ನು ಕೊಡುತ್ತದೆ. ಇನ್ನೊಂದು ಕಡೆ, ಉಷ್ಣವಲಯದ ಪ್ರಕಾಶಮಾನವಾದ ಸೂರ್ಯನ ಬಿಸಿಲು ನಿರಾಳ ಸಾಗರವನ್ನು, ಸ್ನಾರ್ಕೆಲ್ಧಾರಿಗಳ ಪಾರದರ್ಶಕವಾದ ವಿಚಿತ್ರ ಜಗತ್ತನ್ನಾಗಿ ಪರಿವರ್ತಿಸುತ್ತದೆ.
ಆದರೆ ಕಾಣೆಯಾಗಿರುವ ಪ್ರಾಮುಖ್ಯವಾದ ಘಟಕಾಂಶವೊಂದು ಇನ್ನೂ ಇದೆ.
ಬಣ್ಣ. ಅದು ನಮ್ಮ ಸುತ್ತಮುತ್ತಲಲ್ಲಿ ನಾವು ಕಾಣುವ ವಸ್ತುಗಳನ್ನು ಸಜೀವಗೊಳಿಸುತ್ತದೆ. ಅವುಗಳ ಆಕಾರವು ಅವನ್ನು ಪ್ರತ್ಯೇಕಿಸುತ್ತದಾದರೂ, ಅವುಗಳ ಬಣ್ಣ ಅವುಗಳ ಅಸದೃಶತೆಯನ್ನು ಅತ್ಯುಜಲ್ವಗೊಳಿಸುತ್ತದೆ. ಅದಲ್ಲದೆ, ಹೊಂದಿಕೆಯಾದ ನಮೂನೆಗಳಲ್ಲಿ ಬಣ್ಣದ ವಿತರಣೆಯು ಅದರ ಸ್ವಂತ ಸೌಂದರ್ಯವನ್ನು ನಿರ್ಮಿಸುತ್ತದೆ. ಅವು ನಮ್ಮ ಗಮನಕ್ಕಾಗಿ ಕರೆಕೊಡುವ ಕೆಂಪು ಮತ್ತು ಕಿತ್ತಳೆಯಂಥ ಸ್ಪಂದಕ ಬಣ್ಣವಾಗಿರಬಹುದು, ಇಲ್ಲವೇ ನೀಲ ಮತ್ತು ಹಸುರಿನಂಥ ಶಾಮಕ ಬಣ್ಣವಾಗಿರಬಹುದು.
ಕಾಡಿನ ಮರಗಳ ಮಧ್ಯದ ಬಯಲಿನಲ್ಲಿ ಹಳದಿಬಣ್ಣದ ಹೂವುಗಳ ಒಂದು ನೆಲವನ್ನು ಕಲ್ಪಿಸಿಕೊಳ್ಳಿರಿ. ಪ್ರಾತಃಕಾಲದ ಸೂರ್ಯ ಪ್ರಕಾಶದಿಂದ ಪ್ರೋಕ್ಷಿತವಾದ ಮರದ ಕರಿಯ ಕಾಂಡಗಳು ಒಂದು ಪರಿಪೂರ್ಣ ಹಿನ್ನೆಲೆಯನ್ನು ರೂಪಿಸುವಾಗ, ಮುಂಜಾನೆಯ ಗಾಳಿಯಲ್ಲಿ ಹೊಳೆಯುವಂತೆ ಕಾಣುವ ಹಳದಿ ಹೂವುಗಳನ್ನು ಬೆಳಕು ಆವರಿಸುತ್ತದೆ. ನಮಗೀಗ ಲಭಿಸುವುದು ಒಂದು ಚಿತ್ರ. ಕೇವಲ “ಚೌಕಟ್ಟು” ಹಾಕುವುದು ಮಾತ್ರ ಬಾಕಿ, ಸಂಯೋಜನವು ಒಳಬರುವುದು ಇಲ್ಲಿಯೇ.
ಸಂಯೋಜನ. ಈ ಮೂರು ಮೂಲಭೂತ ಘಟಕಾಂಶಗಳು—ಆಕಾರ, ಬೆಳಕು, ಮತ್ತು ಬಣ್ಣ—ಬೆರಸಲ್ಪಡುವ ರೀತಿಯು ಸಂಯೋಜನವನ್ನು ನಿರ್ಧರಿಸುತ್ತದೆ. ಮತ್ತು ಇಲ್ಲಿ ಪ್ರೇಕ್ಷಕರೋಪಾದಿ ನಮಗೆ ಒಂದು ನಿರ್ಣಾಯಕ ಪಾತ್ರವನ್ನು ವಹಿಸಲಿಕ್ಕದೆ. ಸ್ವಲ್ಪವೇ ಮುಂದಕ್ಕೆ, ಹಿಂದಕ್ಕೆ, ಪಕ್ಕಕ್ಕೆ, ತುಸು ಮೇಲೆ ಮತ್ತು ತುಸು ಕೆಳಗೆ ಚಲಿಸುವ ಮೂಲಕ ನಾವು ಘಟಕಾಂಶಗಳನ್ನು ಅಥವಾ ನಮ್ಮ ಮನೋಚಿತ್ರದ ಬೆಳಕನ್ನು ಅಳವಡಿಸಬಲ್ಲೆವು. ನಾವು ಅಪೇಕ್ಷಿಸುವ ಘಟಕಗಳನ್ನು ಮಾತ್ರ ಸೇರಿಸಿಕೊಂಡು ಹೀಗೆ ನಾವು ಚಿತ್ರವನ್ನು ಸೀಮಿತಗೊಳಿಸಬಲ್ಲೆವು.
ಅನೇಕವೇಳೆ ಒಂದು ಶೋಭಾಯಮಾನ ದೃಶ್ಯವನ್ನು ನಾವು ನೋಡುವಾಗ, ಹತ್ತಿರದ ವೃಕ್ಷಗಳು ಮತ್ತು ಸಸ್ಯಗಳಿಂದ ಚೌಕಟ್ಟು ಹಾಕಲ್ಪಟ್ಟಿದೆಯೋ ಎಂಬಂತೆ ಒಂದು ಮನೋಚಿತ್ರವನ್ನು ನಾವು ಯಾಂತ್ರಿಕವಾಗಿಯೇ ಸಂಯೋಜಿಸುತ್ತೇವೆ. ಆದರೆ ಅನೇಕ ಉತ್ಕೃಷ್ಟ ಚಿತ್ರಗಳು, ಚಿಕ್ಕ ಪ್ರಮಾಣದಲ್ಲಿ, ನಮ್ಮ ಕಾಲಕೆಳಗೆಯೇ ಇರಬಹುದು.
ಸಣ್ಣದು ಮತ್ತು ದೊಡ್ಡದನ್ನು ಗಮನಿಸುವುದು
ದೇವರ ಕೈಕೆಲಸದಲ್ಲಿ ಸಣ್ಣದು ಮತ್ತು ದೊಡ್ಡದು ಇವೆರಡೂ ಅಂದವಾಗಿವೆ, ಮತ್ತು ಅಚುಕ್ಚಟಾಗ್ಟಿ ಬೆರೆಯುವ ಅವುಗಳ ಅಂಶಗಳನ್ನೂ ನಾವು ನೋಡಲು ಕಲಿತಲ್ಲಿ, ನಮ್ಮ ಆನಂದವು ದ್ವಿಗುಣಿಸುವುದು. ಪ್ರಕೃತಿಯ ದೊಡ್ಡ ಕ್ಯಾನ್ವಸ್ನಲ್ಲಿ ಸುತ್ತಲೂ ಹರಡಿಕೊಂಡಿರುವ ಪುಟ್ಟ ವರ್ಣಚಿತ್ರಗಳಾಗಿ ಅವು ರೂಪುಗೊಂಡಿವೆ. ಅವುಗಳನ್ನು ಗಣ್ಯಮಾಡಲು, ನಾವು ತುಸು ಬಗ್ಗಬೇಕು ಮತ್ತು ಹತ್ತಿರದಿಂದ ನೋಡಬೇಕು ಅಷ್ಟೆ.
ಈ ಚಿತ್ರದೊಳಗಿನ ಚಿತ್ರಗಳನ್ನು, ಛಾಯಾ ಚಿತ್ರಗಾರ ಜಾನ್ ಷಾ ಇವರು ತಮ್ಮ ಪುಸ್ತಕವಾದ ಕ್ಲೋಸಪ್ಸ್ ಇನ್ ನೇಚರ್ನಲ್ಲಿ ವರ್ಣಿಸಿದ್ದಾರೆ: “ನೈಸರ್ಗಿಕ ವಿವರಗಳ ನಿಕಟ ನೋಟವು ಯಾವಾಗಲೂ ಇನ್ನಷ್ಟು ನಿಕಟ ನೋಟವನ್ನು ಆಮಂತ್ರಿಸುತ್ತದೆ ಎಂಬುದು ನನ್ನನ್ನು ಅಚ್ಚರಿಗೊಳಿಸುವುದನ್ನೆಂದೂ ನಿಲ್ಲಿಸುವುದಿಲ್ಲ. . . . ಮೊದಲಾಗಿ ನಾವು ಒಂದು ದೊಡ್ಡ ನೀಳ ನೋಟವನ್ನು ನೋಡುತ್ತೇವೆ, ಅನಂತರ ಚೌಕಟ್ಟಿನ ಮೂಲೆಯಲ್ಲಿ ಒಂದು ಚೂರು ಬಣ್ಣ. ಹತ್ತಿರದಿಂದ ನೋಡುವಾಗ ಹೂವುಗಳು ಕಾಣಿಸುತ್ತವೆ, ಮತ್ತು ಒಂದು ಹೂವಿನ ಮೇಲೆ ಒಂದು ಚಿಟ್ಟೆ ಕೂತಿದೆ. ಅದರ ರೆಕ್ಕೆಗಳು ಒಂದು ನಿರ್ದಿಷ್ಟವಾದ ನಮೂನೆಯನ್ನು ಪ್ರಕಟಿಸುತ್ತವೆ, ಆ ನಮೂನೆಯು ರೆಕ್ಕೆ ಪೊರೆಗಳ ಒಂದು ನಿಷ್ಕೃಷ್ಟ ಏರ್ಪಾಡಿನಿಂದ ಉತ್ಪಾದಿಸಲ್ಪಟ್ಟಿದೆ, ಮತ್ತು ಪ್ರತಿಯೊಂದು ಪೊರೆಯು ತನ್ನಲ್ಲಿ ತಾನು ಸಂಪೂರ್ಣವಾಗಿದೆ. ಆ ಏಕ ಚಿಟ್ಟೆಯ ರೆಕ್ಕೆ ಪೊರೆಯಲ್ಲಿ ಸಂಯೋಜಿತವಾದ ಪರಿಪೂರ್ಣತೆಯನ್ನು ನಾವು ನಿಜವಾಗಿಯೂ ತಿಳಿದುಕೊಳ್ಳಲು ಶಕ್ತರಾಗುವುದಾದರೆ, ನಿಸರ್ಗವೆಂಬ ರಚನೆಯ ಪರಿಪೂರ್ಣತೆಯನ್ನು ತಿಳಿದುಕೊಳ್ಳಲಾರಂಭಿಸುವ ಸಂಭಾವ್ಯತೆಯು ನಮಗಿದೆ.”
ಅದು ನಮಗೆ ಕೊಡುವ ಸೌಂದರ್ಯೋಪಾಸನೆಯ ಆನಂದವು ಮಾತ್ರವಲ್ಲದೆ, ಪ್ರಕೃತಿಯ ಸೃಷ್ಟಿ ಕಲೆಯು—ದೊಡ್ಡದು ಮತ್ತು ಸಣ್ಣದು ಇವೆರಡೂ—ನಮ್ಮ ನಿರ್ಮಾಣಿಕನಿಗೆ ಹತ್ತಿರವಾಗಿ ನಮ್ಮನ್ನು ಎಳೆಯಬಲ್ಲವು. “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ,” ಎಂದು ಯೆಹೋವನು ಪ್ರಬೋಧಿಸಿದನು. ನಾವು ನಮ್ಮ ದೃಷ್ಟಿಗಳನ್ನು ಆಕಾಶದ ನಕ್ಷತ್ರಗಳ ಮೇಲೆ ಇಲ್ಲವೇ ದೇವರ ಸೃಷ್ಟಿಗಳಾದ ಬೇರೆ ಯಾವುದರ ಮೇಲೆಯೇ ನೆಟ್ಟಿರಲಿ, ನೋಡಲು ನಿಲ್ಲುವ, ದಿಟ್ಟಿಸುವ, ಮತ್ತು ಸೋಜಿಗಪಡುವ ಮೂಲಕ, ಯಾರು ಅವೆಲ್ಲವನ್ನು “ಸೃಷ್ಟಿಸಿ”ದನೋ ಅವನ ಮರುಜ್ಞಾಪನವು ನಮಗೆ ಮಾಡಲ್ಪಡುತ್ತದೆ.—ಯೆಶಾಯ 40:26.
ನೋಡಲು ಕಲಿತ ಮನುಷ್ಯರು
ಬೈಬಲಿನ ಕಾಲದಲ್ಲಿ ದೇವರ ಸೇವಕರು ಸೃಷ್ಟಿಯಲ್ಲಿ ವಿಶೇಷ ಆಸಕ್ತಿಯನ್ನು ತೆಗೆದುಕೊಂಡರು. 1 ಅರಸುಗಳು 4:30, 33ಕ್ಕೆ ಅನುಸಾರವಾಗಿ, “ಅವನ [ಸೊಲೊಮೋನನ] ಜ್ಞಾನವು ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲೂ . . . ಮಿಗಿಲಾದದ್ದು. ಅವನು ಲೆಬನೋನಿನ ದೇವದಾರುವೃಕ್ಷ ಮೊದಲುಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್ ಗಿಡದ ವರೆಗಿರುವ ಎಲ್ಲಾ ವನಸ್ಪತಿಗಳನ್ನೂ ಎಲ್ಲಾ ಪಶುಪಕ್ಷಿಜಲಜಂತುಕ್ರಿಮಿಕೀಟಗಳನ್ನೂ ಕುರಿತು ಪ್ರಸ್ತಾಪಿಸಿದನು.”
ಸೃಷ್ಟಿಯ ವೈಭವಗಳಲ್ಲಿ ಪ್ರಾಯಶಃ ಸೊಲೊಮೋನನ ಆಸಕ್ತಿಯು ಆಂಶಿಕವಾಗಿ ಅವನ ತಂದೆಯ ಮಾದರಿಯಿಂದಾಗಿದ್ದೀತು. ತನ್ನ ಬಾಲ್ಯದ ರೂಪುಗೊಳ್ಳುವ ಅನೇಕ ವರ್ಷಗಳನ್ನು ಕುರುಬನೋಪಾದಿ ಕಳೆದ ದಾವೀದನು, ಅನೇಕಸಲ ದೇವರ ಕೈಕೆಲಸವನ್ನು ಧ್ಯಾನಿಸಿದನು. ಆಕಾಶದ ಸೌಂದರ್ಯವು ವಿಶೇಷವಾಗಿ ಅವನನ್ನು ಪ್ರಭಾವಿಸಿತು. ಕೀರ್ತನೆ 19:1ರಲ್ಲಿ ಅವನು ಬರೆದದ್ದು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.” (ಹೋಲಿಸಿ ಕೀರ್ತನೆ 139:14.) ಸೃಷ್ಟಿಯೊಂದಿಗಿನ ಅವನ ಸಂಪರ್ಕವು ಅವನನ್ನು ದೇವರಿಗೆ ಹತ್ತಿರವಾಗಿ ಎಳೆಯಿತೆಂಬುದು ವ್ಯಕ್ತ. ಅದನ್ನೇ ಅದು ನಮಗೂ ಮಾಡಬಲ್ಲದು.a
ಈ ದೈವಭಕ್ತ ಮನುಷ್ಯರಿಗೆ ತಿಳಿದಂತೆ, ದೇವರ ಕೈಕೆಲಸವನ್ನು ಅಂಗೀಕರಿಸುವುದು ಮತ್ತು ಗಣ್ಯಮಾಡುವುದು ಆತ್ಮವನ್ನು ಉತ್ಕರ್ಷಗೊಳಿಸಿ, ನಮ್ಮ ಜೀವನವನ್ನು ಸಂಪದ್ಯುಕ್ತವಾಗಿ ಮಾಡುತ್ತದೆ. ಮೊದಲೇ ತುಂಬಿಟ್ಟ, ಹೆಚ್ಚಾಗಿ ಕೀಳ್ಮಟ್ಟದ ಮನೋರಂಜನೆಯಿಂದ ಬಾಧಿತವಾದ ನಮ್ಮ ಆಧುನಿಕ ಜಗತ್ತಿನಲ್ಲಿ, ಯೆಹೋವನ ಸೃಷ್ಟಿಯನ್ನು ಗಮನಕ್ಕೆ ತೆಗೆದುಕೊಳ್ಳುವುದು ನಮಗೂ ನಮ್ಮ ಕುಟುಂಬಕ್ಕೂ ಹಿತಕರವಾದ ಚಟುವಟಿಕೆಯನ್ನು ಒದಗಿಸಬಲ್ಲದು. ಯಾರು ದೇವರ ವಾಗ್ದತ್ತ ನೂತನ ಲೋಕಕ್ಕಾಗಿ ಹಾತೊರೆಯುತ್ತಾರೋ ಅವರಿಗೆ ಅದು ಒಂದು ಭವಿಷ್ಯತ್ತು ಕೂಡಿರುವ ಕಾಲಕ್ಷೇಪವಾಗಿದೆ.—ಯೆಶಾಯ 35:1, 2.
ನಾವು ನಮ್ಮ ಸುತ್ತಲೂ ಕಲೆಯನ್ನು ಮಾತ್ರವಲ್ಲ ಅದೆಲ್ಲವನ್ನು ಮಾಡಿದ ಕುಶಲ ಕಲಾಕಾರನ ಗುಣಗಳನ್ನು ಗ್ರಹಿಸಿಕೊಳ್ಳುವಾಗ, ದಾವೀದನ ಮಾತುಗಳನ್ನು ಪ್ರತಿಧ್ವನಿಸಲು ಪ್ರೇರಿಸಲ್ಪಡುವೆವೆಂಬುದು ನಿಸ್ಸಂಶಯ: “ಕರ್ತನೇ, [“ಯೆಹೋವನೇ,” NW] ದೇವರುಗಳಲ್ಲಿ ನಿನಗೆ ಸಮಾನನೇ ಇಲ್ಲ; ನಿನ್ನ ಕೃತ್ಯಗಳಿಗೆ ಸರಿಯಾದದ್ದು ಇನ್ನೊಂದಿಲ್ಲ.”—ಕೀರ್ತನೆ 86:8.
[ಅಧ್ಯಯನ ಪ್ರಶ್ನೆಗಳು]
a ಆಗೂರ್ ಮತ್ತು ಯೆರೆಮೀಯನಂಥ ಇತರ ಬೈಬಲ್ ಲೇಖಕರು ಸಹ ಪ್ರಾಕೃತಿಕ ಇತಿಹಾಸದ ಉತ್ಸುಕ ವೀಕ್ಷಕರಾಗಿದ್ದರು.—ಜ್ಞಾನೋಕ್ತಿ 30:24-28; ಯೆರೆಮೀಯ 8:7.
[ಪುಟ 36 ರಲ್ಲಿರುವ ಚಿತ್ರಗಳು]
ನಮೂನೆ ಮತ್ತು ಆಕಾರ, ಬೆಳಕು, ಬಣ್ಣ, ಮತ್ತು ಸಂಯೋಜನದ ಉದಾಹರಣೆಗಳು
[ಕೃಪೆ]
Godo-Foto