ಸೌಂದರ್ಯವು ಕೇವಲ ಮೇಲು ಮೇಲಿನದ್ದಾಗಿರಬಹುದು
ಇಷ್ಟರ ತನಕ ಜೀವಿಸಿರುವವರಲ್ಲಿ ಪರಮ ಸುಂದರಿಯಾಗಿ ದೇವರಿಂದ ಸೃಷ್ಟಿಸಲ್ಪಟ್ಟ ಏಕಮಾತ್ರ ಹಾಗೂ ಮೊದಲನೆ ಸ್ತ್ರೀ ಹವ್ವಳಿದ್ದಿರಬಹುದು. ಆದರೆ ಅವಳೂ ಅವಳ ಗಂಡ ಆದಾಮನೂ ದೇವರ ವಿರೋಧವಾಗಿ ದಂಗೆಯೆದ್ದರು. ಆದ್ದರಿಂದ ಹವ್ವಳು ದೇವರೊಂದಿಗಿದ್ದ ತನ್ನ ನಿಕಟ ಸಂಬಂಧವನ್ನು ಕಳಕೊಂಡಳು ಮತ್ತು ಮಾನವ ಕುಲದ ಮೇಲೆ ಘೋರ ವಿಪತ್ತನ್ನು ತಂದಳು. ಅನಂತರ, ಅವಳಿನ್ನೂ ಸುಂದರಿಯಾಗಿದ್ದಳೂ ಅವಳ ಸೌಂದರ್ಯವು ಮೇಲು ಮೇಲಿನದ್ದಾಗಿತ್ತು.
ಸೌಂದರ್ಯವು ಅಂತಿಮವಾಗಿ ದೇವರ ವರದಾನವಾಗಿದ್ದು, ಕೆಲವರು ಇನ್ನಿತರರಿಗಿಂತ ಸ್ವಲ್ಪ ಹೆಚ್ಚನ್ನು ಪಡೆದಿದ್ದಾರೆ. ಕೆಲವರು ತಾವಿರುವುದಕ್ಕಿಂತ ಸ್ವಲ್ಪ ಹೆಚ್ಚು ಸುಂದರರಾಗಲು ಯಾ ಚೆಲುವರಾಗಲು ಬಯಸುತ್ತಾರೆ, ಮತ್ತು ಅನೇಕರು ತಮ್ಮ ತೋರ್ಕೆಯನ್ನು ಇನ್ನಷ್ಟು ಅಂದಗೊಳಿಸಲು ತುಂಬಾ ಹಣ ಮತ್ತು ಸಮಯವನ್ನು ವ್ಯಯಿಸುತ್ತಾರೆ. ಆದರೆ ಹವ್ವಳ ಉದಾಹರಣೆಯು ತೋರಿಸುವಂತೆ, ಅದರಲ್ಲಿ ಇತರ ಗುಣಗಳು ಕೂಡಿರದ ಹೊರತು ಸೌಂದರ್ಯವೂಂದೇ ಮುಂದಕ್ಕೆ ನಿಷ್ಪ್ರಯೋಜಕವು. ಆ ಇತರ ಗುಣಗಳು ಯಾವುವು? ರಾಜ ಸೊಲೊಮೋನನ ದಿನಗಳ ಒಂದು ಅನುಭವವು ಅದನ್ನುತ್ತರಿಸಲು ನಮಗೆ ನೆರವಾಗುವುದು.
ಸೌಂದರ್ಯಕ್ಕಿಂತ ಹೆಚ್ಚಿನದ್ದು
ಬೈಬಲ್ ಪುಸ್ತಕವಾದ ಸೊಲೊಮೋನನ ಪರಮಗೀತವು ಕುರುಬರ ಹುಡುಗನೊಬ್ಬನನ್ನು ಪ್ರೇಮಿಸುತ್ತಿದ್ದ ಶೂಲೇಮ್ ಊರಿನ ಒಬ್ಬ ಸುಂದರಿಯಾದ ಹಳ್ಳೀ ಯುವತಿಯ ಕುರಿತು ತಿಳಿಸುತ್ತದೆ. ಅವಳ ಸೌಂದರ್ಯವು ಅರಸನ ಗಮನವನ್ನು ಆಕರ್ಶಿಸಿತ್ತು ಮತ್ತು ಅವಳನ್ನು ತನ್ನ ಪತ್ನಿಯಾಗಿ ಮಾಡುವ ಅಪೇಕ್ಷೆಯಿಂದ ಅವನು ಅವಳನ್ನು ಯೆರೂಸಲೇಮಿಗೆ ತರಿಸಿದನು. ಆ ಯುವತಿಗೆ ಎಂತಹ ಒಂದು ಸದವಕಾಶವಿತ್ತು! ಅಲ್ಲಿ ಆಕೆ ತನ್ನ ಸೌಂದರ್ಯವನ್ನುಪಯೋಗಿಸಿ ರಾಜ್ಯದ ಐಶ್ವರ್ಯ, ಅಧಿಕಾರ ಮತ್ತು ಪ್ರಭಾವಗಳನ್ನು ಗಳಿಸಬಹುದಿತ್ತು. ಆದರೆ ಈ ಯುವತಿಯು ಅರಸನ ಉಬ್ಬಿಸುವ ಸ್ನೇಹಸಂಧಾನಗಳನ್ನು ದೃಢವಾಗಿ ನಿರಾಕರಿಸಿದಳು. ಅವಳು ಯೆರೂಸಲೇಮಿನ ಸೊಬಗು ಮತ್ತು ಐಶ್ವರ್ಯಕ್ಕೆ ಬೆನ್ನುಹಾಕಿ, ತನ್ನ ಕುರುಬರ ಹುಡುಗನಿಗೆ ನಂಬಿಗಸ್ತಳಾಗಿ ನಿಂತಳು. ಅವಳ ವಿಷಯದಲ್ಲಿ ಸೌಂದರ್ಯವು ಹೊರಚರ್ಮಕ್ಕಿಂತ ಹೆಚ್ಚು ಆಳವಾಗಿತ್ತು. ಅವಳು ಆಳವಿಲ್ಲದವಳೂ, ಸಂಧಿಸಾಧಕಳೂ, ದುರಾಶೆಯವಳೂ ಆಗಿರಲ್ಲಿಲ್ಲ. ಬದಲಿಗೆ ಅವಳ ಪೂರ್ವಜೆ ಹವ್ವಳಲ್ಲಿ ಲೋಪವಾಗಿದ್ದ ಅಂತರ್ಯದ ಸೌಂದರ್ಯವಿತ್ತು ಅವಳಲ್ಲಿತ್ತು.—ಪರಮಗೀತ 1:15; 4:1; 8:4, 6, 10.
ದೈಹಿಕ ಸೌಂದರ್ಯದ ಪಾಶಗಳು
ದೈಹಿಕ ಸೌಂದರ್ಯವು ಅಪೇಕ್ಷಣೀಯವಾದರೂ, ಅದು ಅಂತರ್ಯದ ಸುಂದರತೆಯು ಎಂದೂ ಪ್ರಚೋದಿಸದ ಸಮಸ್ಯೆಗಳಿಗೆ ನಡಿಸಬಲ್ಲದು. ಉದಾಹರಣೆಗೆ ಸುಮಾರು 4000 ವರ್ಷಗಳ ಹಿಂದೆ, ಪೂರ್ವಜ ಯಾಕೋಬನಿಗೆ ನಿಸ್ಸಂದೇಹವಾಗಿ ಅತಿ ಸುಂದರಿಯಾದ ದೀನಳೆಂಬ ಮಗಳಿದ್ದಳು. ನಿರ್ಬುದ್ಧಿಯಿಂದ ಆಕೆ “ದೇಶದ ಸ್ತ್ರೀಯರೊಂದಿಗೆ” ಸಹವಾಸಮಾಡುತ್ತಾ ಸಮಯ ಕಳೆಯುತ್ತಿದ್ದಾಗ ಶೆಕೆಮನೆಂಬ ಯುವಕನು ಅವಳಲ್ಲಿ ಎಷ್ಟು ಅನುರಕ್ತನಾದನೆಂದರೆ ಅವಳ ಮಾನಹರಣಗೈದನು.—ಆದಿಕಾಂಡ 34:1, 2.
ಇದಲ್ಲದೆ, ಬಾಹ್ಯ ಸೌಂದರ್ಯದೊಂದಿಗೆ ಅಂತರ್ಯದ ಚೆಲುವು ಸೇರಿರದಿದ್ದರೆ, ಅಂತವರು ಸ್ವಾಭಿಮಾನದಿಂದ ಉಬ್ಬಿಹೋಗಬಲ್ಲರು. ಅಬ್ಸಲೋಮನೆಂಬ ಹೆಸರಿನ ದಾವೀದನ ಪುತ್ರನೊಬ್ಬನ ಕುರಿತು ನಾವು ಓದುವುದು: “ಸೌಂದರ್ಯದಲ್ಲಿ ಅಬ್ಸಾಲೋಮನಂತೆ ಹೆಸರುಗೊಂಡ ಪುರುಷನು ಇಸ್ರಾಯೇಲ್ಯರಲ್ಲಿ ಒಬ್ಬರೂ ಇರಲಿಲ್ಲ.” (2 ಸಮುವೇಲ 14:25) ಆದರೆ ಅಬ್ಸಾಲೋಮನ ದೈಹಿಕ ಸುರೂಪವು ಅಂತರ್ಯದ ಕುರೂಪಕ್ಕೆ ಆವರಣವಾಗಿತ್ತು: ಅವನು ದುರಭಿಮಾನಿ, ಮಹತ್ವಾಕಾಂಕ್ಷಿ ಮತ್ತು ನಿಷ್ಕರುಣಿಯಾಗಿದ್ದನು. ಈ ಯುವಕನು ತನ್ನ ಸ್ವಂತ ಆಕರ್ಶಣೆಯನ್ನು ಇಸ್ರಾಯೇಲ್ಯರಲ್ಲಿ ತನ್ನ ಪಕ್ಷಕ್ಕೆ ಜನಸೆಳೆಯಲು ಯುಕ್ತಿಯಿಂದ ಬಳಸಿ, ಅನಂತರ ರಾಜನಾದ ತನ್ನ ತಂದೆಯ ವಿರುದ್ಧ ದಂಗೆಎದ್ದನು. ಕಟ್ಟಕಡೆಗೆ ಇವನು ಕೊಲ್ಲಲ್ಪಟ್ಟರೂ ಅದಕ್ಕೆ ಮಂಚೆ ಈ ಸುಂದರ ತರುಣನು ರಾಜ್ಯವನ್ನು ಅಂತರಿಕ ಯುದ್ಧಕ್ಕೆ ನಡಿಸಿದವನಾದನು.
ಪುರುಷ ಸೌಂದರ್ಯ
ಅಬ್ಸಾಲೋಮನ ವಿಷಯವು ತೋರಿಸುವಂತೆ, ಸುಂದರರಾದ ಪುರುಷರ ಹಾಗೂ ಸ್ತ್ರೀಯರ ಕುರಿತು ಬೈಬಲು ಮಾತಾಡುತ್ತದೆ. ತನ್ನ ಪುರುಷ ಸೌಂದರ್ಯದ ಪಾಶಕ್ಕೆ ಬಲಿಬೀಳದ ಒಬ್ಬ ಯುವಕನ ಉದಾಹರಣೆಯು ದೀನಳ ಮಲತಮ್ಮನಾದ ಯೋಸೇಫನದ್ದು. (ಆದಿಕಾಂಡ 30:20-24) ಅವನು ಯುವಕನಾಗಿದ್ದಾಗ ಯೋಸೇಫನ ಸಹೋದರರು ಮತ್ಸರದಿಂದ ಅವನನ್ನು ಮಾರಿದರಿಂದ ಅವನು ಐಗುಪ್ತಕ್ಕೆ ದಾಸನಾಗಿ ಒಯ್ಯಲ್ಪಟ್ಟನು. ಅಲ್ಲಿ ಅವನು ಫೊಟೀಫರನೆಂಬ ಮಿಲಿಟರಿ ಅಧಿಕಾರಿಯಿಂದ ಕೊಳ್ಳಲ್ಪಟ್ಟು, ತನ್ನ ಪ್ರಾಮಾಣಿಕತೆ ಮತ್ತು ಶ್ರಮಾಶೀಲತೆಯಿಂದಾಗಿ ಫೊಟೀಫರನ ಮನೆಯ ಪಾರುಪತ್ಯಗಾರನಾದನು. ಅದೇ ಸಮಯ “ಯೋಸೇಫನು ರೂಪದಲ್ಲಿಯೂ ಮುಖಭಾವದಲ್ಲಿಯೂ ಸುಂದರನಾಗಿ ಬೆಳೆದನು.”—ಆದಿಕಾಂಡ 39:6.
ಫೊಟೀಫರನ ಹೆಂಡತಿ ಯೋಸೇಫನಲ್ಲಿ ಕಾಮಾತುರಳಾಗಿ ನಿರ್ಲಜೆಯ್ಜಿಂದ ಅವನನ್ನು ಕೆಡಿಸ ಪ್ರಯತ್ನಿಸಿದಳು. ಆದರೆ ಈ ಯುವಕನು, ತನ್ನಲ್ಲಿ ದೈಹಿಕ ಆಕರ್ಶಣೆಯೊಂದಿಗೆ ಆಂತರಿಕ ಸೌಂದರ್ಯವೂ ಇದೆಂದು ತೋರಿಸಿಕೊಟ್ಟನು. ತನ್ನ ಧನಿ ಫೊಟೀಫರನ ವಿರುದ್ಧ ಪಾಪ ಮಾಡಲು ಅವನು ನಿರಾಕರಿಸಿ ಆ ಸ್ತ್ರೀಯನ್ನು ಬಿಟ್ಟು ಓಡಿಹೋದನು. ಫಲಿತಾಂಶವಾಗಿ ಅವನನ್ನು ಸೆರೆಮನೆಗೆ ದೊಬ್ಬಲಾಯಿತು. ಯಾಕೆ? ನಿರಾಶಳಾದ ಫೊಟೀಫರನ ಹೆಂಡತಿ ತನ್ನ ಮಾನಹರಣಗೈಯಲು ಅವನು ಪ್ರಯತ್ನಿಸಿದನೆಂದು ಸುಳ್ಳು ದೂರು ಕೊಟ್ಟದ್ದರಿಂದಲೇ! ಆದಾಗ್ಯೂ, ಈ ಕಹಿ ಅನುಭವವೂ ಯೋಸೇಫನ ಮನಸ್ಸನ್ನು ಹುಳಿಸಲಿಲ್ಲ ಮತ್ತು ಅತಿ ಕಷ್ಟದ ಕೆಳಗೂ ಅವನ ಈ ಅತ್ಯುತ್ತಮ ಮಾದರಿಯು ಅಂದಿನಿಂದ ಸುಹೃದಯದ ಜನರಿಗೆ ಉತ್ತೇಜನವನ್ನು ಕೊಟ್ಟಿದೆ.
ಈ ಉದಾಹರಣೆಗಳು ತೋರಿಸುವಂತೆ, ಅಂತರಿಕ ಸೌಂದರ್ಯವು—ವಿಶೇಷವಾಗಿ ದೇವರ ಮೇಲಿನ ನಂಬಿಕೆಯಲ್ಲಿ ಆಧರಿತ ಸೌಂದರ್ಯವು—ದೈಹಿಕ ಸುರೂಪಕ್ಕಿಂತಲೂ ಎಷ್ಟೋ ಪ್ರಾಮುಖ್ಯವು. ಮದುವೆಯಾಗಲು ಯೋಚಿಸುವ ಯುವಜನರು ಈ ಕುರಿತು ತಿಳಿದಿರುವ ಅಗತ್ಯವಿದೆ. ಕಾರ್ಮಿಕರಿಗಾಗಿ ಹುಡುಕುವ ಮಾಲಕರು ಇದನ್ನು ನೆನಪಿನಲ್ಲಡಬೇಕು. ನಮಗೆ ದೈಹಿಕ ಸೌಂದರ್ಯದ ಅನುಗ್ರಹವಿರಲಿ, ಇಲ್ಲದಿರಲಿ, ಹೆಚ್ಚು ಮಹತ್ವದ ಈ ಅಂತರ್ಯದ ಸೌಂದರ್ಯವನ್ನು ನಾವು ವಿಕಸಿಸಬಲ್ಲೆವು ಎಂಬದನ್ನು ನಾವೆಲ್ಲರೂ ನೆನಪಿನಲ್ಲಿಡಲೇ ಬೇಕು. ಆದರೆ ಇದರಲ್ಲಿ ಏನು ಒಳಗೂಡಿದೆ? ಮತ್ತು ನಾವದನ್ನು ಹೇಗೆ ವಿಕಸಿಸಬಲ್ಲೆವು? ಮುಂದಿನ ಲೇಖನದಲ್ಲಿ ನಾವದನ್ನು ಚರ್ಚಿಸಲಿರುವೆವು. (w89 2/1)