ಬಡ ರಾಷ್ಟ್ರಗಳು ಧನಿಕ ರಾಷ್ಟ್ರಗಳಿಗೆ ಕೊಂಪೆಗಳಾಗುತ್ತವೆ
ಯಾರಿಗೂ ಬೇಡವಾದ ಅನಾಥನಂತೆ, ವಿಷಮಯವಾದ ಸರಕು, ಒಂದು ಮನೆಗಾಗಿ ಹುಡುಕುತ್ತಾ ಹಡಗಿನಿಂದ ಹಡಗಿಗೆ ಮತ್ತು ಬಂದರಿನಿಂದ ಬಂದರಿಗೆ ಅಲೆದಾಡಿತ್ತು. ವಿಷಭರಿತ ಕೃತಕ ರಾಳ, ಕೀಟನಾಶಕಗಳು ಮತ್ತು ಇತರ ಅಪಾಯಕಾರಿ ರಾಸಾಯನಿಕ ಪದಾರ್ಥಗಳಿಂದ ತುಂಬಿತುಳುಕುತ್ತಿದ್ದ ಹನ್ನೊಂದು ಸಾವಿರ ಕೊಳಗಗಳು, ಆಫ್ರಿಕದ ಜಿಬೂಟಿಯಿಂದ, ವೆನಿಸ್ವೇಲಕ್ಕೆ, ಅಲ್ಲಿಂದ ಸಿರಿಯಕ್ಕೆ ಮತ್ತು ಗ್ರೀಸಿಗೆ ತಳ್ಳಲ್ಪಟ್ಟಿದ್ದವು. ಕೊನೆಗೆ, ಆ ಸೋರುತ್ತಿದ್ದ ಪೀಪಾಯಿಗಳು ಹಡಗಿನ ನಾವಿಕರ ತಂಡದ ನಾವಿಕರಲ್ಲೊಬ್ಬನ ಬಲಿತೆಗೆದುಕೊಳ್ಳಲಾರಂಭಿಸಿದವು. ಹಡಗಿನಲ್ಲಿದ್ದ ವಿಷಭರಿತ ಪದಾರ್ಥದಿಂದಾಗಿ ಒಬ್ಬನು ಸತ್ತನು, ಇತರ ಅನೇಕರಿಗೆ ಚರ್ಮದ, ಮೂತ್ರಪಿಂಡದ ಮತ್ತು ಉಸಿರಾಟದ ರೋಗಗಳು ತಗಲಿದ್ದವು.
ತತ್ಸಮಾನವಾದ ಮಾರಕ ಹಿಪ್ಪೆಯನ್ನು ಹೊತ್ತಿರುವ ಹಡಗುಗಳು, ಟ್ರಕ್ಕುಗಳು, ಮತ್ತು ರೈಲುಗಳು ಅವನ್ನು ಹೊರಗೆಸೆಯಲಿಕ್ಕಾಗಿ ಸ್ಥಳವನ್ನು ಹುಡುಕುತ್ತಾ ಅಡಡ್ಡಲ್ಡಾಗಿ ಭೂಗೋಳವನ್ನೇ ಸುತ್ತಾಡುತ್ತಿವೆ. ಅತಿ ಹೆಚ್ಚಾಗಿ ಈವಾಗಲೇ ದಾರಿದ್ರ್ಯ, ಕ್ಷಾಮ, ಮತ್ತು ರೋಗದಿಂದ ಜರ್ಜರಿತವಾದ ದೇಶಗಳು, ಈ ಟನ್ನುಗಳಷ್ಟು ವಿಷಪದಾರ್ಥಗಳು ಮತ್ತು ಮಲಿನ ಕಚಡವನ್ನು ಎಸೆಯುವ ಕೊಂಪೆಗಳಾಗುತ್ತಿವೆ. ಜೀವಿ ಪರಿಸ್ಥಿತಿಯ ವಿನಾಶವು ಕೇವಲ ಸ್ವಲ್ಪಕಾಲದಲ್ಲಿ ಮುಗಿಯುವ ವಿಷಯವೆಂದು ಪರಿಸರವಾದಿಗಳು ಹೆದರುತ್ತಾರೆ.
ಹಳೆಯ ಪೆಯಿಂಟ್ಗಳು, ದ್ರಾವಕಗಳು, ಟೈಅರ್ಗಳು, ಬ್ಯಾಟರಿಗಳು, ರೇಡಿಯೊ ವಿಕಿರಣ ಹಿಪ್ಪೆ, ಸೀಸ ಮತ್ತು ಪಿಸಿಬಿ ತುಂಬಿದ ಲೋಹದ ಕಿಟ್ಟ, ಇವುಗಳು ನಿಮಗೆ ಹಿಡಿಸದೆ ಇದಾವ್ದು, ಆದರೆ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಔದ್ಯೋಗಿಕ ಹಿಪ್ಪೆ ಉದ್ಯಮಕ್ಕೆ ಅವು ಆಕರ್ಷಕ. ಹಾಸ್ಯವ್ಯಂಗ್ಯವಾಗಿ ಹೇಳುವುದಾದರೆ, ಒಂದು ಸರ್ಕಾರವು ಪರಿಸರೀಯವಾಗಿ ಎಷ್ಟು ಹೆಚ್ಚು ಕಟ್ಟುನಿಟ್ಟಾಗಿದೆಯೋ, ಅದರ ಕೈಗಾರಿಕೆಗಳು ಅಷ್ಟು ಹೆಚ್ಚು ವಿಷಭರಿತ ಹಿಪ್ಪೆಯನ್ನು ದೇಶಾಂತರದಲ್ಲಿ ತೊಲಗಿಸಿಬಿಡುತ್ತವೆ. ಔದ್ಯೋಗಿಕ ರಾಷ್ಟ್ರಗಳ “ನೀತಿ ನಿಷ್ಠೆಗಳಿಲ್ಲದ” ಕಂಪನಿಗಳಿಂದ “ಸುಮಾರು ಎರಡು ಕೋಟಿ ಟನ್ನುಗಳಷ್ಟು ವಿಷಭರಿತ ರಾಸಾಯನಿಕ ಪದಾರ್ಥಗಳು ತೊಲಗಿಸಲ್ಪಡಲಿಕ್ಕಾಗಿ, ತೃತೀಯ ಜಗತ್ತಿನ ದೇಶಗಳಿಗೆ ವಾರ್ಷಿಕವಾಗಿ ರವಾನಿಸಲ್ಪಡುತ್ತವೆ,” ಎಂದು ಲಂಡನ್ ಸಾಪ್ತಾಹಿಕ ದಿ ಅಬ್ಸರ್ವರ್ ಹೇಳಿತು. ಕಾನೂನುಗಳಿಂದ ತಪ್ಪಿಸಿಕೊಳ್ಳುವ ಉಪಾಯಗಳು ಮತ್ತು ನಿಯಮಗಳ ಸಡಿಲು ನಿರ್ವಹಣೆಯ ಮೂಲಕ, ಸಾವಿರಾರು ಟನ್ನುಗಳಷ್ಟು ವಿಷಭರಿತ ಹಿಪ್ಪೆಯು ಆಫ್ರಿಕ, ಏಷಿಯ, ಮತ್ತು ಲ್ಯಾಟಿನ್ ಆಮೆರಿಕದ ದೇಶಗಳಿಗೆ ಬಂದಿಳಿಯುತ್ತದೆ.
ಈ ಕಂಪನಿಗಳು ಹಿಪ್ಪೆಯನ್ನು ತೊಲಗಿಸುವುದನ್ನು ಆಕರ್ಷಣೀಯವಾಗಿ ಕಾಣುವುದೇನೂ ಆಶ್ಚರ್ಯವಲ್ಲ! ಸೂಕ್ತವಾದ ಸ್ಥಾನವು ಬಳಸಲ್ಪಟ್ಟಲ್ಲಿ ಖರ್ಚನ್ನು ಪ್ರಚಂಡವಾಗಿ ತಗ್ಗಿಸಸಾಧ್ಯವಿದೆ. ಇದರ ಒಂದು ಉದಾಹರಣೆಯು ಕಡಲ ಪ್ರಯಾಣದ ಹಡಗಾದ ಯುನೊಯಿಟೆಡ್ ಸ್ಟೇಟ್ಸ್. ಇದು ಒಂದು ಸಮಯದಲ್ಲಿ ಅಮೆರಿಕನ್ ಪ್ರಯಾಣಿಕ ಹಡಗುಪಡೆಯ ಪ್ರತಿಷ್ಠಿತ ಹಡಗಾಗಿತ್ತು. ಸುಖವಿಲಾಸದ ಕಡಲ ಪ್ರಯಾಣಕ್ಕಾಗಿ ನವೀಕರಿಸಲು ಅದನ್ನು 1992ರಲ್ಲಿ ಖರೀದಿಸಲಾಯಿತು. ಸಮುದ್ರದಲ್ಲಿ ತೇಲುವ ಬೇರೆ ಯಾವುದೇ ಹಡಗುಗಳಿಗಿಂತ ಪ್ರಾಯಶಃ ಹೆಚ್ಚು ಕಲ್ನಾರು ಅದರಲ್ಲಿ ಅಡಕವಾಗಿತ್ತು. ಅಮೆರಿಕದಲ್ಲಿ ಕಲ್ನಾರಿನ ತೊಲಗಿಸುವಿಕೆಗೆ 10 ಕೋಟಿ ಡಾಲರುಗಳ ವೆಚ್ಚವಾಗುತ್ತಿತ್ತು. ಅದನ್ನು 20 ಲಕ್ಷ ಡಾಲರುಗಳಲ್ಲಿ ನಿರ್ವಹಿಸಬಲ್ಲ ಟರ್ಕಿಗೆ ಆ ಹಡಗನ್ನು ಎಳೆದುಕೊಂಡು ಹೋಗಲಾಯಿತು. ಆದರೆ ಟರ್ಕಿ ಸರಕಾರವು ಅದನ್ನು ನಿರಾಕರಿಸಿತು—ಈ 46,000 ಚದರ ಮೀಟರ್ಗಳಿಗಿಂತಲೂ ಹೆಚ್ಚಿನ ಕ್ಯಾನ್ಸರ್ಜನಕ ಕಲ್ನಾರನ್ನು ಅವರ ದೇಶದಲ್ಲಿ ಇಳಿಸಿಕೊಳ್ಳುವುದು ತೀರ ಅಪಾಯಕರ. ಕೊನೆಗೆ ಆ ಹಡಗನ್ನು ಎಲ್ಲಿ ಪರಿಸರೀಯ ಮಟ್ಟಗಳು ಕಡಿಮೆ ಕಟ್ಟುನಿಟ್ಟಿನವೋ, ಆ ಇನ್ನೊಂದು ದೇಶದ ಬಂದರಿಗೆ ತಿರುಗಿಸಲಾಯಿತು.
ಮಾರಕ ಪುನರುಪಯೋಗ
ವಿಕಾಸ ಹೊಂದುತ್ತಿರುವ ದೇಶಗಳಲ್ಲಿನ ಪಾಶ್ಚಿಮಾತ್ಯ ಉದ್ಯಮಗಳು ತಮ್ಮನ್ನು ಬಡ ಜನರ ಆಶ್ರಯದಾತರಾಗಿ ಭಾವಿಸಲು ಬಯಸಬಹುದು. ಅಮೆರಿಕದ ವಾಣಿಜ್ಯ ಮಂಡಲಿಯ ಹಾರ್ವಿ ಆಲರ್ಟ್ ಇವರು ಅಭಿಪ್ರಯಿಸುವುದೇನಂದರೆ, “ಹಿಪ್ಪೆ ರಫ್ತು ಮತ್ತು ಪುನರುಪಯೋಗ ಕೈಗಾರಿಕೆಯು ಈ ದೇಶಗಳ ಜೀವನ ಮಟ್ಟಗಳನ್ನು ಮೇಲಕ್ಕೆತ್ತುತ್ತದೆ.” ಆದರೆ ದೇಶಾಂತರದಲ್ಲಿ ಅವುಗಳ ಕೆಲವು ಸಂಘಟಿತ ಕಾರ್ಯಾಚರಣೆಯ ಒಂದು ಪರಾಮರ್ಶೆಯು ಕಂಡುಕೊಂಡದ್ದೇನಂದರೆ, ಅಧಿಕಾಂಶ ಸಂದರ್ಭಗಳಲ್ಲಿ, ಆ ಕಂಪನಿಗಳು ಜೀವನದ ಮಟ್ಟಗಳನ್ನು ಮೇಲಕ್ಕೆತ್ತುವ ಬದಲಿಗೆ, “ಸ್ಥಳಿಕವಾಗಿ ಕನಿಷ್ಠತಮ ವೇತನಗಳಿಗಿಂತ ಹೆಚ್ಚನ್ನು ಕೊಡದವುಗಳಾಗಿ, ಪರಿಸರವನ್ನು ಮಲಿನಗೊಳಿಸುವವುಗಳಾಗಿ ಮತ್ತು ಕೆಲವು ಸಂದರ್ಭಗಳಲ್ಲಿ ಅಪಾಯಕರ ಉತ್ಪಾದನೆಗಳನ್ನು ಮೋಸದಿಂದ ಮಾರಾಟಕ್ಕಿಡುವವುಗಳಾಗಿರುವುದು ಅಧಿಕ ಸಂಭವನೀಯ.”
ವಿಕಾಸ ಹೊಂದುತ್ತಿರುವ ಜಗತ್ತಿನಲ್ಲಿ ಮಾಲಿನ್ಯದ ಕುರಿತ ಇತ್ತೀಚಿನ ಕಾರ್ಯಾಂಗದಲ್ಲಿ, IIನೆಯ ಪೋಪ್ ಜಾನ್ ಪಾಲ್ ತನ್ನ ಚಿಂತನೆಯನ್ನು ವ್ಯಕ್ತಪಡಿಸಿದರು. ಪೋಪ್ ಗುರು ಅಂದದ್ದು: “ಪರಿಸರವನ್ನು ಮತ್ತು ಜನಸಂಖ್ಯೆಯ ಆರೋಗ್ಯವನ್ನು ಇಳಿಗುಂದಿಸುವ ಹೊಲಸು ತಂತ್ರಜ್ಞಾನ ಮತ್ತು ಹಿಪ್ಪೆಗಳನ್ನು ರಫ್ತು ಮಾಡುವ ಮೂಲಕ, ಧನಿಕ ರಾಷ್ಟ್ರಗಳು ಬಡ ರಾಷ್ಟ್ರಗಳ ದುರ್ಬಲ ಆರ್ಥಿಕತೆ ಮತ್ತು ಶಾಸನದಿಂದ ಲಾಭಪಡೆಯುವುದು, ಘೋರ ಅಪಪ್ರಯೋಗವೇ ಸರಿ.”
ಜಗತ್ತಿನಲ್ಲಿ ಪಾದರಸ ಹಿಪ್ಪೆಗಳ ಅತಿ ದೊಡ್ಡ ಪುನರುಪಯೋಗದ ಬೀಡಾಗಿರುವ ಆಫ್ರಿಕದ ದಕ್ಷಿಣ ಭಾಗದಲ್ಲಿ ಇದರ ಒಂದು ಉತ್ಕೃಷ್ಟ ದೃಷ್ಟಾಂತವು ಕಂಡುಬಂದಿದೆ. “ಮಾಲಿನ್ಯ ಅಪನಿಂದೆಗಳಲ್ಲಿ ಭೂಖಂಡದಲ್ಲೇ ಅತ್ಯಂತ ಕೆಟ್ಟದಾದುದರಲ್ಲಿ ಒಂದು” ಆಗಿ ಯಾವುದು ಹೆಸರುಹೊಂದಿತ್ತೋ ಅದು, ಆ ವಿಷಭರಿತ ಹಿಪ್ಪೆಯು ಒಬ್ಬ ಕಾರ್ಮಿಕನನ್ನು ಕೊಂದಿತು, ಇನ್ನೊಬ್ಬನನ್ನು ಅತಿ ಸುಪ್ತಿಗೆ ಬೀಳಿಸಿತು, ಮತ್ತು ಕಾರ್ಮಿಕರಲ್ಲಿ ತೃತೀಯಾಂಶ ಪಾದರಸದ ಒಂದು ತರಹದ ವಿಷದಿಂದ ಬಳಲುತ್ತಿದ್ದಾರೆಂದು ವರದಿಯುಂಟು. ನಿರ್ದಿಷ್ಟ ಔದ್ಯೋಗಿಕ ರಾಷ್ಟ್ರಗಳಲ್ಲಿ ಸರಕಾರಗಳು ನಿರ್ದಿಷ್ಟವಾದ ಪಾದರಸ ಹಿಪ್ಪೆಗಳ ತೊಲಗಿಸುವಿಕೆಯನ್ನು ನಿರೋಧಿಸುತ್ತವೆ ಅಥವಾ ಅತಿಯಾಗಿ ನಿರ್ಬಂಧಿಸುತ್ತವೆ. ಈ ದೇಶಗಳ ಕಡಿಮೆಪಕ್ಷ ಒಂದರ ಕಂಪನಿಯ ಹಡಗುಗಳು ಅಪಾಯಕರ ಸರಕನ್ನು ಆಫ್ರಿಕದ ತೀರಗಳಿಗೆ ರವಾನಿಸುತ್ತವೆ. ಒಂದು ಪುನರುಪಯೋಗದ ಕಾರ್ಖಾನೆಯಲ್ಲಿ, ಮೂರು ವಿದೇಶೀಯ ಕಂಪನಿಗಳಿಂದ 10,000 ಪೀಪಾಯಿಗಳಷ್ಟು ಪಾದರಸ ಹಿಪ್ಪೆಯು ದಾಸ್ತಾನಿದುದ್ದನ್ನು ಒಂದು ಪರಿಶೋಧಕ ತಂಡವು ಕಂಡುಹಿಡಿಯಿತು.
ವಿಕಾಸ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ಹಿಪ್ಪೆಯನ್ನೆಸೆಯುವುದಕ್ಕಿಂತ ಪುನರುಪಯೋಗಕ್ಕಾಗಿ ಸಾಮಗ್ರಿಗಳನ್ನು ಕಳುಹಿಸುವುದು ಹೆಚ್ಚು ಒಳ್ಳೇದಾಗಿ ಧ್ವನಿಸುತ್ತದೆ ನಿಜ. ಅದು ಬೆಲೆಯುಳ್ಳ ಉಪ ಉತ್ಪಾದನೆಗಳನ್ನು ಉತ್ಪಾದಿಸಬಲ್ಲದು, ಉದ್ಯೋಗಗಳನ್ನು ಒದಗಿಸಬಲ್ಲದು ಮತ್ತು ಆರ್ಥಿಕತೆಯನ್ನು ಹುರಿದುಂಬಿಸಬಲ್ಲದು. ಆದರೆ, ಆಫ್ರಿಕದ ದಕ್ಷಿಣ ಭಾಗದಿಂದ ಬಂದ ವರದಿಯು ತೋರಿಸುವಂತೆ, ವಿಪತ್ಕಾರಕ ಪರಿಣಾಮಗಳು ಸಹ ಉಂಟಾಗಬಲ್ಲವು. ಈ ಪದಾರ್ಥಗಳಿಂದ ಪುನಃಪಡೆಯುವ ಬೆಲೆಯುಳ್ಳ ಉತ್ಪಾದನೆಗಳು, ಮಾಲಿನ್ಯ ಮತ್ತು ಕಾಯಿಲೆಯನ್ನು ಉಂಟುಮಾಡುವ ಮಾರಕ ರಾಸಾಯನಿಕ ದ್ರವ್ಯಗಳನ್ನು ಬಿಡುಗಡೆಮಾಡಬಲ್ಲವು, ಕೆಲವೊಮ್ಮೆ ಕೆಲಸಗಾರರಿಗೆ ಸಾವನ್ನೂ ತರಬಲ್ಲವು. ನ್ಯೂ ಸೈಎನ್ಟಿಸ್ಟ್ ಪತ್ರಿಕೆಯು ಅವಲೋಕಿಸುವುದು: “ಪುನರುಪಯೋಗವು ಕೆಲವು ಸಾರಿ ಹಿಪ್ಪೆ ಎಸೆಯುವ ನೆಪವಾಗಿ ಬಳಸಲ್ಪಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.”
ಯು.ಎಸ್.,ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ನಿಂದ ಉಪಾಯ ತಂತ್ರವು ವಿವರಿಸಲ್ಪಟ್ಟಿದೆ: “ವಿಷಭರಿತ ಚರಂಡಿ ರೊಚ್ಚನ್ನು ‘ಅಂಗಾಂಶಭರಿತ ಗೊಬ್ಬರ’ವಾಗಿಯೂ ಹಳಸಿಹೋದ ಕೀಟನಾಶಕಗಳನ್ನು ‘ಕೃಷಿ ಸಹಾಯಕ’ವಾಗಿಯೂ ಮಾರಾಟಮಾಡುವ ಆಕ್ರಮಣಶೀಲ ಹಿಪ್ಪೆ ವ್ಯಾಪಾರಿಗಳಿಗೆ, ಉತ್ಪಾದನೆಗಳ ಅಬದ್ಧ ವರ್ಣನೆಗಳು, ಕಾನೂನುಗಳಿಂದ ತಪ್ಪಿಸಿಕೊಳ್ಳುವ ಉಪಾಯಗಳು ಮತ್ತು ನೈಪುಣ್ಯದ ಕೊರತೆಯು, ವಿಕಾಸ ಹೊಂದುತ್ತಿರುವ ದೇಶಗಳನ್ನು ಸುಲಭ ಗುರಿಹಲಗೆಗಳಾಗಿ ಮಾಡುತ್ತವೆ.”
ಮೆಕ್ಸಿಕೊದಲ್ಲಿ ವಿದೇಶೀಯ ಸ್ವಾಮ್ಯದ ಮಾಕಿಲಾಡೋರಾಸ್ ಅಥವಾ ಕಾರ್ಖಾನೆಗಳು ಮೊಳೆತಿವೆ. ವಿದೇಶೀಯ ಕಂಪನಿಗಳ ಒಂದು ಮುಖ್ಯ ಹೇತುವು, ಕಟ್ಟುನಿಟ್ಟಿನ ಮಾಲಿನ್ಯ ಮಟ್ಟಗಳನ್ನು ತಪ್ಪಿಸಿಕೊಳ್ಳುವುದು ಮತ್ತು ಅಲ್ಪ ವೇತನದ ಕೂಲಿಯಾಳುಗಳ ಅನಂತ ಸಂಗ್ರಹದ ಪ್ರಯೋಜನ ಪಡೆಯುವುದಾಗಿದೆ. ಹತ್ತಾರು ಸಾವಿರ ಮೆಕ್ಸಿಕನರು ದಟ್ಟವಾದ ಮಲಿನ ನೀರಿನ ನಾಲೆಗಳ ಉದ್ದಕ್ಕೂ ಇರುವ ಜೋಪಡಿಗಳಲ್ಲಿ ಜೀವಿಸುತ್ತಾರೆ. “ಆಡುಗಳು ಸಹ ಅದನ್ನು ಕುಡಿಯುವುದಿಲ್ಲ,” ಎಂದು ಒಬ್ಬ ಸ್ತ್ರೀ ಹೇಳಿದಳು. ಒಂದು ಅಮೆರಿಕನ್ ಮೆಡಿಕಲ್ ಅಸೋಸಿಏಷನ್ ವರದಿಯು ಆ ಗಡಿ ಕ್ಷೇತ್ರವನ್ನು “ಸಾಕ್ಷತ್ ರೊಚ್ಚುಗುಂಡಿ ಮತ್ತು ಸೋಂಕು ರೋಗದ ಪೋಷಕ ಸ್ಥಾನ”ವೆಂದು ಕರೆಯಿತು.
ಸಾಯುವುದು ಕೀಟಗಳು ಮಾತ್ರವಲ್ಲ
“ಒಂದು ದೇಶವು ಒಂದು ವಿಷವಸ್ತುವನ್ನು ಸ್ವದೇಶದಲ್ಲಿ ನಿಷೇಧಿಸುವುದೂ ಆದರೆ ಅದನ್ನೇ ಉತ್ಪಾದಿಸಿ ಇತರ ದೇಶಗಳಿಗೆ ಮಾರುವುದೂ ಹೇಗೆ ಸಾಧ್ಯ? ಎಲ್ಲಿದೆ ಇದರ ನೀತಿನಿಯಮ?” ಎಂದು ಕಾರ್ಟೂಮಿನ ಕೃಷಿ ವಿದ್ಯಾಶಾಸ್ತ್ರಿ ಮತ್ತು ಕೀಟನಾಶಕ ಪ್ರವೀಣರಾದ ಅರೀಫ್ ಜಮಾಲ್ ಕೇಳಿದರು. ಪೀಪಾಯಿಗಳ ಚಿತ್ರಗಳು ಹೀಗೆ ಗುರುತಿಸಲ್ಪಟ್ಟಿರುವುದನ್ನು ಅವರು ತೋರಿಸಿದರು: ಅವು ಬಂದಿರುವ ಔದ್ಯೋಗಿಕ ದೇಶದಲ್ಲಿ ಅವು “ಬಳಕೆಗಾಗಿ ರೆಜಿಸ್ಟರಾಗಿರುವುದಿಲ್ಲ.” ಸುಡಾನಿನ ವನ್ಯಜೀವಿಗಳ ಸಂರಕ್ಷಣ ಸ್ಥಾನದಲ್ಲಿ ಅವು ಕಂಡುಬಂದವು. ಸಮೀಪದಲ್ಲಿ ಸತ್ತ ಪ್ರಾಣಿಗಳ ರಾಶಿಗಳಿದ್ದವು.
ಒಂದು ಧನಿಕ ದೇಶವು, “ನಿಷೇಧಿಸಲ್ಪಟ್ಟ, ನಿರ್ಬಂಧಿಸಲ್ಪಟ್ಟ ಅಥವಾ ಗೃಹಕೃತ್ಯಕ್ಕಾಗಿ ಬಳಸಲು ಅನುಮತಿಸಲ್ಪಡದ ಸುಮಾರು 22.7 ಕೋಟಿ ಕಿಲೊಗ್ರಾಮ್ ಕೀಟನಾಶಕಗಳನ್ನು ವಾರ್ಷಿಕವಾಗಿ ರಫ್ತುಮಾಡುತ್ತದೆ,” ಎಂದು ದ ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡುತ್ತದೆ. ಡಿಡಿಟಿಯ ಕ್ಯಾನ್ಸರ್ ಉಂಟುಮಾಡುವ ಸೋದರನಂಟ ಹೆಪಕ್ಟ್ಲೋಅರ್ ಎಂಬ ಕೀಟನಾಶಕವನ್ನು ಆಹಾರ ಧಾನ್ಯಗಳ ಬೆಳೆಗಳ ಮೇಲೆ ಬಳಸದಂತೆ 1978ರಲ್ಲಿ ನಿಷೇಧಿಸಲಾಗಿತ್ತು. ಆದರೆ ಅದನ್ನು ಸಂಶೋಧಿಸಿದ ರಾಸಾಯನಿಕ ಕಂಪನಿಯು ಅದರ ಉತ್ಪಾದನೆಯನ್ನು ಮುಂದುವರಿಸುತ್ತಾ ಇದೆ.
ಒಂದು ಯುಎನ್ ಸಮೀಕ್ಷೆಯು ವಿಕಾಸ ಹೊಂದುತ್ತಿರುವ ಕಡಿಮೆಪಕ್ಷ 85 ರಾಷ್ಟ್ರಗಳಲ್ಲಿ “ಅತ್ಯಂತ ವಿಷಭರಿತ ಕೀಟನಾಶಕಗಳ” ವಿಸ್ತಾರವಾದ ಲಭ್ಯತೆಯನ್ನು ಕಂಡುಹಿಡಿಯಿತು. ಪ್ರತಿವರ್ಷ ಸುಮಾರು ಹತ್ತು ಲಕ್ಷ ಜನರು ತೀವ್ರ ವಿಷದಿಂದಾಗಿ ಬಳಲುತ್ತಾರೆ, ಮತ್ತು ಪ್ರಾಯಶಃ 20,000 ಮಂದಿ ಆ ರಾಸಾಯನಿಕಗಳಿಂದಾಗಿ ಸಾಯುತ್ತಾರೆ.
ತಂಬಾಕು ಉದ್ಯಮವನ್ನು ಮಾರಕ ಲೋಭದ ಸಾರವೆಂಬುದಾಗಿ ಕರೆಯಬಹುದು. ಸೈಎನ್ಟಿಫಿಕ್ ಅಮೆರಿಕನ್ನ “ಭೌಗೋಳಿಕ ತಂಬಾಕು ವ್ಯಾಧಿ” ಎಂಬ ಹೆಸರಿನ ಲೇಖನವು ಹೇಳುವುದು: “ಲೋಕದಾದ್ಯಂತ ತಂಬಾಕು ಸಂಬಂಧಿತ ರೋಗಗಳ ಮತ್ತು ಮರಣಗಳ ಪರಿಮಾಣವು ಅತಿಶಯೋಕ್ತಿಯಾಗಿರಲಾರದು.” ಧೂಮಪಾನ ಆರಂಭಿಸುವವರ ಸರಾಸರಿ ವಯಸ್ಸು ಎಂದಿಗಿಂತಲೂ ಹೆಚ್ಚೆಚ್ಚು ಇಳಿಮುಖವಾಗುತ್ತಿದೆ ಮತ್ತು ಸ್ತ್ರೀ ಧೂಮಪಾಯಿಗಳ ಸಂಖ್ಯೆಯು ಗಮನಾರ್ಹವಾಗಿ ಹೆಚ್ಚುತ್ತಾ ಇದೆ. ಪ್ರಬಲವಾದ ತಂಬಾಕು ಕಂಪನಿಗಳು ಕುಟಿಲ ಜಾಹೀರಾತುಗಾರರ ಒಕ್ಕೂಟದಲ್ಲಿ, ಕಡಿಮೆ ವಿಕಾಸ ಹೊಂದಿದ ದೇಶಗಳ ಮಹತ್ತಾದ ಮಾರುಕಟ್ಟೆಯನ್ನು ಯಶಸ್ವಿಯಾಗಿ ಜಯಿಸುತ್ತಿವೆ. ರೋಗದಿಂದ ಜರ್ಜರಿತವಾಗಿ ಸತ್ತ ಶವಗಳ ಜಾಡು ಅವರ ಐಶ್ವರ್ಯದ ಹಾದಿಯಲ್ಲಿ ಕಸವಾಗಿ ಬಿದ್ದಿರುತ್ತದೆ.a
ಅದರೂ, ಎಲ್ಲ ಕಂಪನಿಗಳು ವಿಕಾಸ ಹೊಂದುತ್ತಿರುವ ರಾಷ್ಟ್ರಗಳ ಸುಕ್ಷೇಮವನ್ನು ಪರಿಗಣಿಸದೆ ಇರುವುದಿಲ್ಲ ಎಂದು ಹೇಳಬೇಕಾಗಿದೆ. ವಿಕಾಸ ಹೊಂದುತ್ತಿರುವ ದೇಶಗಳಲ್ಲಿ ನ್ಯಾಯವಾದ ಮತ್ತು ಹೊಣೆಗಾರಿಕೆಯ ವ್ಯಾಪಾರವನ್ನು ನಡಿಸಲು ಪ್ರಯತ್ನಿಸುವ ಕೆಲವು ಕಂಪನಿಗಳಿವೆ. ಉದಾಹರಣೆಗೆ, ಒಂದು ಕಂಪನಿಯು ನಿವೃತ್ತಿ ಮತ್ತು ಆರೋಗ್ಯ ಭತ್ಯಗಳನ್ನು ಒದಗಿಸುತ್ತದೆ ಮತ್ತು ತನ್ನ ಕೆಲಸಗಾರರಿಗೆ ಆವಶ್ಯಕ ವೇತನಕ್ಕಿಂತ ಮುಮ್ಮಡಿ ವೇತನವನ್ನು ನೀಡುತ್ತದೆ. ಇನ್ನೊಂದು ಕಂಪನಿಯು ಮಾನವ ಹಕ್ಕು ಬಾಧ್ಯತೆಗಳ ಮೇಲೆ ಬಲವಾದ ಸ್ಥಾನವನ್ನು ಸ್ವೀಕರಿಸಿದೆ ಮತ್ತು ಅದರ ಅಪಪ್ರಯೋಗಗಳ ಕಾರಣ ಹತ್ತಾರು ಗುತ್ತಿಗೆಗಳನ್ನು ರದ್ದುಮಾಡಿರುತ್ತದೆ.
ಕಪಟಾಚರಣೆಯ ಹಿಂಜಾರುವಿಕೆ
1989ರಲ್ಲಿ, ರಾಷ್ಟ್ರಗಳ ನಡುವೆ ಅಪಾಯಕರ ಹಿಪ್ಪೆ ಸಾಗಣೆಯನ್ನು ಕ್ರಮಗೊಳಿಸಲು ಯುಎನ್ ಅಧಿವೇಶನ ಒಪ್ಪಂದಕ್ಕೆ, ಸ್ವಿಟ್ಸರ್ಲೆಂಡ್ನ ಬಾಸೆಲ್ನಲ್ಲಿ ಸಹಿ ಹಾಕಲಾಯಿತು. ಸಮಸ್ಯೆಯನ್ನು ಪರಿಹರಿಸುವುದರಲ್ಲಿ ಅದು ಸೋತುಹೋಯಿತು, ಮತ್ತು ಅವೇ ರಾಷ್ಟ್ರಗಳು ಮಾರ್ಚ್ 1994ರಲ್ಲಿ ನಡಿಸಿದ ಅನಂತರದ ಒಂದು ಕೂಟದ ಕುರಿತು ನ್ಯೂ ಸೈಎನ್ಟಿಸ್ಟ್ ವರದಿಸಿದ್ದು:
“ವರ್ಧಿಷ್ಣು ರಾಷ್ಟ್ರಗಳ ಅರ್ಥೈಸಸಾಧ್ಯವಿರುವ ಕೋಪಕ್ಕೆ ಪ್ರತಿಕ್ರಿಯೆಯಲ್ಲಿ, ಬಾಸೆಲ್ ಅಧಿವೇಶನದಲ್ಲಿ ಭಾಗಿಗಳಾದ 65 ದೇಶಗಳು, ಅಪಾಯಕರ ಹಿಪ್ಪೆಯನ್ನು ಓಈಸೀಡಿ [ಆರ್ಥಿಕ ಸಹಕಾರ ಮತ್ತು ವಿಕಾಸಕ್ಕಾಗಿ ಸಂಸ್ಥೆ]ಯಿಂದ ಓಈಸೀಡಿ ಅಲ್ಲದ ದೇಶಗಳಿಗೆ ರಫ್ತು ಮಾಡುವುದನ್ನು ನಿಷೇಧಿಸುವ ಮೂಲಕ ಅಧಿವೇಶನವನ್ನು ಲಂಬಿಸಲು ನಿರ್ಣಯಿಸಿದಾಗ ಒಂದು ಮಹತ್ವದ ಹೆಜ್ಜೆಯನ್ನು ಮುಂದಿಟ್ಟವು.”
ಆದರೆ ಈ ಹೊಸತಾದ ನಿರ್ಣಯವು ವಿಕಾಸ ಹೊಂದಿದ ದೇಶಗಳಿಗೆ ಮೆಚ್ಚಿಕೆಯಾದಂತೆ ತೋರಲಿಲ್ಲ. ನ್ಯೂ ಸೈಎನ್ಟಿಸ್ಟ್ ತನ್ನ ಚಿಂತನೆಯನ್ನು ವ್ಯಕ್ತಪಡಿಸಿತು: “ಹೀಗೆ ಅಮೆರಿಕ, ಬ್ರಿಟನ್, ಜರ್ಮನಿ ಮತ್ತು ಆಸ್ಟ್ರೇಲಿಯ ಇವುಗಳೆಲ್ಲ ಈಗ ಆ ನಿರ್ಣಯವನ್ನು ಉರುಳಿಸಲು ಪ್ರಯತ್ನಿಸುತ್ತಿರುವುದು ಚಿಂತಾಜನಕವಾಗಿದೆ. ಅಮೆರಿಕ ಸರಕಾರದಿಂದ ಹೊರಗೆಡಹಲ್ಪಟ್ಟ ದಸ್ತೈವಜುಗಳು, ಅಧಿವೇಶನವನ್ನು ಸ್ಥಿರೀಕರಿಸಲು ಅದು ಸಮ್ಮತಿಸುವ ಮುಂಚೆ ನಿಷೇಧವನ್ನು ‘ತುಸು ಮಾರ್ಪಡಿಸುವ’ ‘ಮುಚ್ಚುಮರೆಯ’ ಚತುರ ಪ್ರಯತ್ನಗಳನ್ನು ಬಯಲುಪಡಿಸುತ್ತವೆ.”
ಲೋಭಿಗಳಿಗೆ ತೀರ್ಪಿನ ದಿನ
“ಧನಿಕರಾದ ಜನರೇ, ನಿಮಗಾಗಿ ಕಾದಿರುವ ದುರ್ದಶೆಗಳಿಗಾಗಿ ಈಗ ನೀವು ಗೋಳಾಡುವ ಮತ್ತು ಪ್ರಲಾಪಿಸುವ ಸಮಯವಾಗಿದೆ!” ಎಂದು ಬೈಬಲು ಎಚ್ಚರಿಸುತ್ತದೆ ಯಾಕೋಬ 5:1ರಲ್ಲಿ. (ದ ನ್ಯೂ ಟೆಸ್ಟಮೆಂಟ್ ಇನ್ ಮಾಡರ್ನ್ ಇಂಗ್ಲಿಷ್, ಜೆ. ಬಿ. ಫಿಲಿಪ್ಸ್ ಇವರಿಂದ) ವಿಷಯಗಳನ್ನು ಸರಿಪಡಿಸಲು ಶಕ್ತನಾದಾತನ ಹಸ್ತದಿಂದ ತೀರ್ಪು ಬರುವುದು: “ಯೆಹೋವನು ನೀತಿಯನ್ನು ಸಾಧಿಸುವವನಾಗಿ ಕುಗ್ಗಿಹೋದವರೆಲ್ಲರ ನ್ಯಾಯವನ್ನು ಸ್ಥಾಪಿಸುತ್ತಾನೆ.”—ಕೀರ್ತನೆ 103:6.
ಯಾರು ದಬ್ಬುವ ಬಡತನದಲ್ಲಿ ಜೀವಿಸುತ್ತಾರೋ ಅವರು, ಶೀಘ್ರದಲ್ಲೀ ಕೀರ್ತನೆ 72:12, 13ರ ಮಾತುಗಳು ನೆರವೇರಿಸಲ್ಪಡುವವು ಎಂದು ತಿಳಿಯುವುದರಿಂದ ಸಾಂತ್ವನವನ್ನು ಪಡೆಯಬಲ್ಲರು: “ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.”
[ಪಾದಟಿಪ್ಪಣಿ]
a ಜೂನ್ 8, 1995ರ ಎಚ್ಚರ! ಪತ್ರಿಕೆಯಲ್ಲಿ “ಲಕ್ಷಗಟ್ಟಲೆ ಸಂಪಾದಿಸಲು ಲಕ್ಷಗಟ್ಟಲೆ ಜನರ ಸಂಹಾರ” ನೋಡಿ.
[Box on page 6]
ತೊಲಗಿಹೋಗಲು ನಿರಾಕರಿಸುವ ಮಾರಕ ಕಸ
“ಯಾವ ಸರಾಗವಾದ ಪರಿಹಾರವೂ ಲಭ್ಯವಿಲ್ಲದೆ ಮಾರಕ ನ್ಯೂಕ್ಲಿಯರ್ ಹಿಪ್ಪೆಯು ರಾಶಿಬೀಳುತ್ತಿದೆ.” ಹೀಗೆಂದು ಓದಿತು ಕಳೆದ ಮಾರ್ಚ್ ತಿಂಗಳ ದ ನ್ಯೂ ಯಾರ್ಕ್ ಟೈಮ್ಸ್ನ ವಿಜ್ಞಾನ ವಿಭಾಗದ ಶೀರ್ಷಿಕೆ. ಆ ಲೇಖನವಂದದ್ದು: “ಅತಿ ಸುಲಭ ಉಪಾಯವು, ಅದನ್ನು ಹೂಳುವುದಾಗಿದೆ. ಆದರೆ ನೆವಾಡದ ಪ್ರಸ್ತಾಪಿತ ಭೂಗತ ಕೊಂಪೆಯು, ಕಚಡ ವಿಕಿರಣ ಧಾತುವಿನಿಂದ ಪೋಷಿಸಲ್ಪಟ್ಟು, ಕಟ್ಟಕಡೆಗೆ ನ್ಯೂಕ್ಲಿಯರ್ ಸ್ಫೋಟನದಲ್ಲಿ ಬಿರಿದುಹೋಗಬಹುದೋ ಎಂಬುದರ ಕುರಿತಾಗಿ ವಿಜ್ಞಾನಿಗಳು ಈಗ ವಾದಿಸಿದಂತೆ ಮತ್ತು ಸರಕಾರಿ ಕಾರ್ಯಭಾರಿಗಳು ಅಧ್ಯಯನ ನಡೆಸಿದಂತೆ, ಅದು ಟೀಕೆಗೆ ಒಳಗಾಗಿದೆ.”
ಭೂಮಿಯಿಂದ ಮಿಕ್ಕುಳಿದ ವಿಕಿರಣ ಧಾತುವನ್ನು ತೊಡೆದುಹಾಕಲು ವಿಜ್ಞಾನಿಗಳು ಅನೇಕ ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ, ಆದರೆ ಖರ್ಚು, ವಾಗ್ವಾದಗಳು, ಮತ್ತು ಭಯಗಳು ಯೋಜನೆಗಳನ್ನು ಮೂಲೆಗೆ ಹಾಕಿವೆ. ಅನೇಕರಿಗೆ ರುಚಿಸದ ಒಂದು ಉಪಾಯವು ಸಮುದ್ರದಲ್ಲಿ ಅದನ್ನು ಹುಗಿಯುವುದೇ. ಒಂದು ಹೆಚ್ಚು ಊಹಾತ್ಮಕ ಅಭಿಪ್ರಾಯವು, ಅದನ್ನು ಸೂರ್ಯಮಂಡಲದೊಳಗೆ ಸ್ಫೋಟಿಸುವುದು. ಇನ್ನೊಂದು ಪರಿಹಾರವು ಅದನ್ನು ಸುಟ್ಟುಹಾಕಲು ರಿಯಾಕರ್ಟ್ (ನ್ಯೂಕ್ಲಿಯರ್ ಶಕ್ತಿಯನ್ನು ಉತ್ಪನ್ನಮಾಡುವ ಉಪಕರಣ)ಗಳನ್ನು ಉಪಯೋಗಿಸುವುದೇ. ಆದರೆ ಈ ಯೋಚನೆಯನ್ನು ಬಿಟ್ಟುಬಿಡಲಾಯಿತು, ಯಾಕೆಂದರೆ ಇದನ್ನು ಪೂರೈಸಲು “ನೂರಾರು ಅಥವಾ ಸಾವಿರಾರು ವರ್ಷಗಳು ಬೇಕಾಗು”ವವು.
ಇನ್ಸ್ಟಿಟ್ಯೂಟ್ ಫಾರ್ ಎನರ್ಜಿ ಆ್ಯಂಡ್ ಎನ್ವೈರನ್ಮೆಂಟಲ್ ರಿಸರ್ಚ್ನ ಡಾ. ಮಕೀಜಾನಿ ಅಂದದ್ದು: “ತಾಂತ್ರಿಕವಾದ ಪ್ರತಿಯೊಂದು ಸುಪರಿಹಾರಕ್ಕೆ ಭೀಕರವಾದ ರಾಜಕೀಯ ಪಕ್ಕಗಳಿವೆ, ಮತ್ತು ರಾಜಕೀಯವಾದ ಪ್ರತಿಯೊಂದು ಸುಪರಿಹಾರಕ್ಕೆ ತಾಂತ್ರಿಕವಾಗಿ ಕೀಳಾಗಿರುವ ಪ್ರವೃತ್ತಿಯಿದೆ. ಈ ಅವ್ಯವಸ್ಥೆಗೆ ಯಾರಲ್ಲೂ—ನಮ್ಮನ್ನೂ ಸೇರಿಸಿ—ಯಾವುದೇ ಒಳ್ಳೆಯ ಪೂರ್ಣ ಪರಿಹಾರವಿಲ್ಲ.”
ಪ್ರತಿ ವರ್ಷ, ಆರು ಕೋಟಿ ಮನೆಗಳಿಗೆ ವಿದ್ಯುತ್ತನ್ನು ಒದಗಿಸಲಿಕ್ಕಾಗಿ—ದೇಶದ ವಿದ್ಯುತ್ತಿನ 20 ಪ್ರತಿಶತ—ಅಮೆರಿಕದ ನ್ಯೂಕ್ಲಿಯರ್ ಉತ್ಪಾದಕ ಕಾರ್ಖಾನೆಗಳಲ್ಲಿ 107 ರಿಯಾಕ್ಟರುಗಳು 2,000 ಟನ್ನುಗಳಷ್ಟು ನಿಶ್ಶೇಷ ಇಂಧನವನ್ನು ಉತ್ಪಾದಿಸುತ್ತವೆ, ಮತ್ತು 1957ರಿಂದ ಈ ನಿಶ್ಶೇಷ ಇಂಧನವನ್ನು ನ್ಯೂಕ್ಲಿಯರ್ ಕಾರ್ಖಾನೆಗಳಲ್ಲಿ ತಾತ್ಕಾಲಿಕವಾಗಿ ಸಂಗ್ರಹಿಸಿಡಲಾಗಿದೆ. ಅದನ್ನು ತೊಲಗಿಸುವ ಒಂದು ದಾರಿಯನ್ನು ಕಂಡುಕೊಳ್ಳಲು ಜನರು ದಶಮಾನಗಳಿಂದ ಸರಕಾರಕ್ಕಾಗಿ ಕಾದದ್ದು ವ್ಯರ್ಥವೇ ಸರಿ. ಒಂಬತ್ತು ಅಧ್ಯಕ್ಷರು ಅಧಿಕಾರ ಪದಕ್ಕೆ ಬಂದು ಹೋದರು, 18 ಕಾಂಗ್ರೆಸ್ಸುಗಳು ವಿಕಿರಣ ಕಚಡವನ್ನು ಭೂಗತ ಸೌಕರ್ಯಗಳಲ್ಲಿ ಸಂಗ್ರಹಿಸಿಡಲು ಯೋಜನೆಗಳನ್ನು ನೀಡಿದವು ಮತ್ತು ಗಡುವನ್ನಿಟ್ಟವು, ಆದರೆ ಸಾವಿರಾರು ವರ್ಷಗಳ ತನಕ ಸುರಕ್ಷಿತವಾಗಿ ಇಡಬೇಕಾದ ಈ ಮಾರಕ ಹಿಪ್ಪೆಯ ಅಂತಿಮ ತೊಲಗಿಸುವಿಕೆಯು ಇನ್ನೂ ಇತ್ಯರ್ಥವಾಗದೆ ಇದೆ.
ಇದಕ್ಕೆ ವೈದೃಶ್ಯದಲ್ಲಿ, ವಿಶ್ವದ ಅತಿದೂರದ ತಾರಾ ಮಂಡಲದಲ್ಲಿ ಯೆಹೋವ ದೇವರು ನಡೆಸುವ ಶತಕೋಟ್ಯಂತರ ಸಂಲಯನ ಕುಲುಮೆಗಳು ಯಾವ ಬೆದರಿಕೆಯನ್ನೂ ನೀಡುತ್ತಿಲ್ಲ, ಮತ್ತು ನಮ್ಮ ಸೂರ್ಯಮಂಡಲದಲ್ಲಿ ಆತನು ಉಪಯೋಗಿಸುವ ಒಂದು ಕುಲುಮೆಯು ಭೂಮಿಯಲ್ಲಿ ಜೀವನವನ್ನು ಶಕ್ಯಗೊಳಿಸುತ್ತದೆ.
[ಕೃಪೆ]
UNITED NATIONS/IAEA
[ಪುಟ 8 ರಲ್ಲಿರುವ ಚಿತ್ರ]
ವಿಷಭರಿತ ರಾಸಾಯನಿಕ ದ್ರವ್ಯಗಳು, ಕುಡಿಯುವ ಮತ್ತು ತೊಳೆಯಲು ಬಳಸುವ ನೀರನ್ನು ಕಲುಷಿತಗೊಳಿಸುತ್ತವೆ
[ಪುಟ 8 ರಲ್ಲಿರುವ ಚಿತ್ರ]
ಅಪಾಯಕರ ಅಥವಾ ಮಾರಕ ಹಿಪ್ಪೆಯ ಮಧ್ಯೆ ಮಕ್ಕಳು ಆಡುತ್ತಾರೆ