ಆ ಸಂಗ್ರಾಮವು ವಿಜಯಿಯಾಗುತ್ತಿದೆಯೊ?
“ಈ ಭೂಗ್ರಹದ ಯೋಗಕ್ಷೇಮ ನೋಡಿಕೊಳ್ಳಿರಿ, ನಮಗಿರುವಂತಹದ್ದು ಇದೊಂದೇ ಆಗಿದೆ.” ಇದು, ನಿಸರ್ಗಕ್ಕಾಗಿರುವ ಲೋಕವ್ಯಾಪಕ ನಿಧಿಯ ಅಧ್ಯಕ್ಷರಾದ, ಬ್ರಿಟನಿನ ಪ್ರಿನ್ಸ್ ಫಿಲಿಪ್ ಇವರ ಮನಮುಟ್ಟುವ ನಿವೇದನೆಯಾಗಿತ್ತು.
ಸಾವಿರಾರು ವರ್ಷಗಳ ಮುಂಚೆಯೇ ಕೀರ್ತನೆಗಾರನು ಬರೆದುದು: “ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ.” (ಕೀರ್ತನೆ 115:16) ದೇವರು ಭೂಮಿಯನ್ನು ನಮಗೆ ನಮ್ಮ ಮನೆಯೋಪಾದಿ ಕೊಟ್ಟಿದ್ದಾನೆ, ಮತ್ತು ನಾವು ಅದರ ಯೋಗಕ್ಷೇಮ ನೋಡಿಕೊಳ್ಳಬೇಕು. ಜೀವಿಪರಿಸ್ಥಿತಿ ಶಾಸ್ತ್ರವೆಂದರೆ ಅದೇ.
ಅಕ್ಷರಶಃವಾಗಿ “ಜೀವಿಪರಿಸ್ಥಿತಿ ಶಾಸ್ತ್ರ” ಎಂಬ ಶಬ್ದದ ಅರ್ಥವು, “ಗೃಹದ ಅಧ್ಯಯನ”ವಾಗಿದೆ.a ದಿ ಅಮೆರಿಕನ್ ಹೆರಿಟೇಜ್ ಡಿಕ್ ಷನರಿಯಿಂದ ಕೊಡಲ್ಪಟ್ಟ ಒಂದು ಅರ್ಥನಿರೂಪಣೆಯು, “ಸಂಗೋಪನೆಯ ಮೂಲಕ ತಡೆಗಟ್ಟುವಿಕೆಯ ಅಥವಾ ವಿಪರ್ಯಸ್ತಮಾಡುವಿಕೆಯ ಕಡೆಗಿನ ನೋಟದೊಂದಿಗೆ, ಪರಿಸರದ ಮೇಲೆ ಆಧುನಿಕ ನಾಗರಿಕತೆಗಳ ವಿನಾಶಕರ ಪರಿಣಾಮಗಳ ಕುರಿತಾದ ಅಧ್ಯಯನ”ವಾಗಿದೆ. ಸರಳವಾಗಿ ಹೇಳುವುದಾದರೆ, ಮಾನವನು ಯಾವ ಹಾನಿಯನ್ನು ಮಾಡಿದ್ದಾನೆ ಎಂಬುದನ್ನು ಕಂಡು ಹಿಡಿಯುವುದು ಮತ್ತು ತದನಂತರ ಅದನ್ನು ಸರಿಪಡಿಸಲು ಮಾರ್ಗಗಳನ್ನು ಹುಡುಕುವುದೇ ಜೀವಿಪರಿಸ್ಥಿತಿ ಶಾಸ್ತ್ರದ ಅರ್ಥವಾಗಿದೆ. ಇವೆರಡರಲ್ಲಿ ಒಂದೂ ಸುಲಭದ ಕೆಲಸವಲ್ಲ.
ಜೀವಿಪರಿಸ್ಥಿತಿ ಶಾಸ್ತ್ರದ ಮೂರು ಸತ್ಯಾಂಶಗಳು
ಭೂಗ್ರಹದೊಂದಿಗೆ ರಾಜಿಮಾಡಿಕೊಳ್ಳುವುದು (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ, ಜೀವಶಾಸ್ತ್ರಜ್ಞರಾದ ಬ್ಯಾರಿ ಕಾಮನರ್, ಭೂಮಿಯು ದುರುಪಯೋಗಕ್ಕೆ ಏಕೆ ಇಷ್ಟು ಸುಲಭಭೇದ್ಯವಾಗಿದೆ ಎಂಬುದನ್ನು ವಿವರಿಸಲು ಸಹಾಯ ಮಾಡುವ, ಜೀವಿಪರಿಸ್ಥಿತಿ ಶಾಸ್ತ್ರದ ಮೂರು ಸರಳ ನಿಯಮಗಳನ್ನು ಸೂಚಿಸುತ್ತಾರೆ.
ಪ್ರತಿಯೊಂದು ಘಟಕವು ಇತರ ಎಲ್ಲಾ ಘಟಕಗಳೊಂದಿಗೆ ಜೋಡಿಸಲ್ಪಟ್ಟಿದೆ. ಹುಳುಕಾದ ಹಲ್ಲೊಂದು ನಮ್ಮ ಇಡೀ ಶರೀರವನ್ನು ಬಾಧಿಸುವಂತೆಯೇ, ನಿರ್ದಿಷ್ಟವಾದ ಒಂದು ನೈಸರ್ಗಿಕ ಸಂಪನ್ಮೂಲಕ್ಕೆ ಮಾಡಲ್ಪಡುವ ಹಾನಿಯು, ಪರಿಸರೀಯ ಸಮಸ್ಯೆಗಳ ಇಡೀ ಸರಪಣಿಯನ್ನು ವಿಯೋಜಿಸಬಲ್ಲದು.
ಉದಾಹರಣೆಗಾಗಿ, ಕಳೆದ 40 ವರ್ಷಗಳಲ್ಲಿ, ನೇಪಾಲ್ನಲ್ಲಿನ ಹಿಮಾಲಯದ 50 ಪ್ರತಿಶತ ಅರಣ್ಯಗಳು, ಸೌದೆಗಾಗಿ ಅಥವಾ ಮರಕಟ್ಟು (ಟಿಂಬರ್) ಉತ್ಪನ್ನಗಳಿಗಾಗಿ ಕಡಿಯಲ್ಪಟ್ಟಿವೆ. ಒಮ್ಮೆ ಮರಗಳು ತೆಗೆದುಹಾಕಲ್ಪಟ್ಟ ನಂತರ, ಮಳೆಗಾಲದ ಮಳೆಗಳು ಆಗಮಿಸಿದಾಗ ಪರ್ವತ ತಪ್ಪಲುಗಳ ಮಣ್ಣು ಬೇಗನೆ ಕೊಚ್ಚಿಕೊಂಡು ಒಯ್ಯಲ್ಪಟ್ಟಿತು. ಮೇಲ್ಪದರದ ಮಣ್ಣು ಇಲ್ಲದೆ, ಹೊಸ ಮರಗಳು ಸುಲಭವಾಗಿ ಬೇರುಬಿಡಲುಸಾಧ್ಯವಿರಲಿಲ್ಲ, ಮತ್ತು ಅನೇಕ ಪರ್ವತಗಳು ಬರಡಾದವು. ಅರಣ್ಯನಾಶದ ಕಾರಣದಿಂದ, ಈಗ ನೇಪಾಲ್ ಪ್ರತಿ ವರ್ಷ ಲಕ್ಷಗಟ್ಟಲೆ ಟನ್ನುಗಳಷ್ಟು ಮೇಲ್ಪದರದ ಮಣ್ಣನ್ನು ಕಳೆದುಕೊಳ್ಳುತ್ತಿದೆ. ಮತ್ತು ಸಮಸ್ಯೆಗಳು ನೇಪಾಲ್ಗೆ ನಿರ್ಬಂಧಿಸಲ್ಪಟ್ಟಿಲ್ಲ.
ಬಾಂಗ್ಲಾದೇಶದಲ್ಲಿ, ಒಂದು ಕಾಲದಲ್ಲಿ ಮರಗಳಿಂದ ಹೀರಲ್ಪಡುತ್ತಿದ್ದ ಧಾರಾಕಾರ ಮಳೆಗಳು, ಅಡಚಣೆಯಿಲ್ಲದೆ ಬರಡಾದ ಪರ್ವತಗಳಿಂದ ಕರಾವಳಿಯ ತನಕ ಮುನ್ನುಗ್ಗುತ್ತಾ ಮಹಾ ದುರಂತಮಯ ನೆರೆಗಳನ್ನು ಉಂಟುಮಾಡುತ್ತವೆ. ಗತಕಾಲಗಳಲ್ಲಿ, ಬಾಂಗ್ಲಾದೇಶವು ಪ್ರತಿ 50 ವರ್ಷಗಳಲ್ಲಿ ಒಮ್ಮೆ ಅಪಾಯಕರವಾದ ನೆರೆಯನ್ನು ಅನುಭವಿಸುತ್ತಿತ್ತು, ಈಗ ಇದು ಪ್ರತಿ 4 ಅಥವಾ ಅದಕ್ಕಿಂತಲೂ ಕಡಿಮೆ ವರ್ಷಗಳಲ್ಲಿ ಸಂಭವಿಸುತ್ತಿದೆ.
ಲೋಕದ ಇತರ ಭಾಗಗಳಲ್ಲಿ, ಅರಣ್ಯನಾಶವು ಮರುಭೂಮೀಕರಣಕ್ಕೆ ಮತ್ತು ಸ್ಥಳಿಕ ಹವಾಮಾನದಲ್ಲಿನ ಬದಲಾವಣೆಗಳಿಗೆ ನಡೆಸಿದೆ. ಮನುಷ್ಯನು ಲೂಟಿ ಮಾಡುತ್ತಿರುವ ಕೇವಲ ಒಂದು ನೈಸರ್ಗಿಕ ಸಂಪನ್ಮೂಲವು ಅರಣ್ಯಗಳಾಗಿವೆ. ನಮ್ಮ ಬಹು ವಿಸ್ತಾರವಾದ ಜೀವಿಪರಿಸ್ಥಿತಿ ವ್ಯವಸ್ಥೆಯ ಪರಸ್ಪರ ತೊಡರಿಕೊಂಡಿರುವ ಭಾಗಗಳ ಕುರಿತಾಗಿ, ಜೀವಿಪರಿಸ್ಥಿತಿ ಶಾಸ್ತ್ರಜ್ಞರು ಸಂಬಂಧಸೂಚಕವಾಗಿ ಇನ್ನೂ ಸ್ವಲ್ಪ ವಿಷಯವನ್ನು ತಿಳಿದಿರುವುದರಿಂದ, ಈ ಮೊದಲೇ ತೀವ್ರ ಹಾನಿಯು ಆಗಿಹೋಗುವ ತನಕ ಒಂದು ಸಮಸ್ಯೆಯು ಗಮನಿಸಲ್ಪಡದಿರಬಹುದು. ಕಸ ಹೊರಹಾಕುವಿಕೆಯ ವಿಷಯದಲ್ಲಿ ಇದು ಸತ್ಯವಾಗಿದೆ—ಇದು ಜೀವಿಪರಿಸ್ಥಿತಿ ಶಾಸ್ತ್ರದ ದ್ವಿತೀಯ ನಿಯಮವನ್ನು ಚೆನ್ನಾಗಿ ದೃಷ್ಟಾಂತಿಸುತ್ತದೆ.
ಪ್ರತಿಯೊಂದು ಘಟಕವು ಎಲ್ಲಿಗಾದರೂ ಹೋಗಲೇಬೇಕು. ಕಸದ ಹೊರಹಾಕುವಿಕೆಯು ಇಲ್ಲದಿರುತ್ತಿದ್ದ ಒಂದು ಪ್ರತಿನಿಧಿರೂಪದ ಮನೆಯು ಹೇಗೆ ಕಾಣಿಸುವುದೆಂಬುದನ್ನು ಊಹಿಸಿಕೊಳ್ಳಿರಿ. ನಮ್ಮ ಭೂಗ್ರಹವು ಕೇವಲ ಅಂತಹ ಒಂದು ತೆರಪಿಲ್ಲದ ವ್ಯವಸ್ಥೆಯಾಗಿದೆ—ನಮ್ಮ ಎಲ್ಲಾ ಕಸವು ಅಂತಿಮವಾಗಿ ಭೂಗೃಹದ ಸುತ್ತಲಿನ ಯಾವುದಾದರೂ ಒಂದು ಸ್ಥಳಕ್ಕೆ ಒಯ್ಯಲ್ಪಡಬೇಕು. ಕ್ಲೋರೋಫ್ಲುಅರೋಕಾರ್ಬನ್ಸ್ (CFCs)ನಂತಹ ಹಾನಿರಹಿತವಾಗಿ ತೋರುವ ಅನಿಲಗಳು ಸಹ, ತಮ್ಮ ಕುರುಹನ್ನು ಬಿಟ್ಟುಹೋಗದೆ ಸಂಪೂರ್ಣವಾಗಿ ಮರೆಯಾಗುವುದಿಲ್ಲ, ಎಂದು ಓಸೋನ್ ಪದರದ ಅಂಶಿಕ ವಿನಾಶವು ತೋರಿಸುತ್ತದೆ. ಆಕಾಶ, ನದಿಗಳು, ಮತ್ತು ಮಹಾಸಾಗರಗಳೊಳಗೆ ಬಿಡಲ್ಪಡುತ್ತಿರುವ, ನೂರಾರು ಅಪಾಯಸಾಧ್ಯ ಪದಾರ್ಥಗಳಲ್ಲಿ, ಸಿಎಫ್ಸೀಸ್ ಕೇವಲ ಒಂದಾಗಿವೆ.
ನಿಜ, “ಜೈವಿಕ ವಿಘಟನೀಯ” ಎಂದು ಕರೆಯಲ್ಪಟ್ಟಿರುವ ಕೆಲವು ಉತ್ಪನ್ನಗಳು, ಸಕಾಲದಲ್ಲಿ ವಿಭಜಿಸಲ್ಪಟ್ಟು, ನೈಸರ್ಗಿಕ ಪ್ರಕ್ರಿಯೆಗಳಿಂದ ಕಬಳಿಸಲ್ಪಡಸಾಧ್ಯವಿದೆ, ಆದರೆ ಇತರ ಉತ್ಪನ್ನಗಳು ಕಬಳಿಸಲ್ಪಡಸಾಧ್ಯವಿಲ್ಲ. ಲೋಕದ ಕಡಲ ತೀರಗಳು, ಪ್ಲ್ಯಾಸ್ಟಿಕ್ ಪೆಟ್ಟಿಗೆಗಳಿಂದ ಗಲೀಜು ಮಾಡಲ್ಪಟ್ಟಿವೆ, ಇವು ಮುಂದಿನ ದಶಕಗಳ ವರೆಗೆ ಅಲ್ಲೇ ಬಿದ್ದಿರುವವು. ಸಾಮಾನ್ಯವಾಗಿ ಎಲ್ಲಿಯಾದರೂ ಹೂಳಲ್ಪಡುವ, ಕಾರ್ಖಾನೆಯ ವಿಷಮಯ ಕಸವು ಕಡಿಮೆ ದೃಗ್ಗೋಚರವಾಗಿದೆ. ಕಣ್ಣಿಗೆ ಮರೆಯಾಗಿರುವುದಾದರೂ, ಅದು ಯಾವಾಗಲೂ ಮನಸ್ಸಿಗೂ ಮರೆಯಾಗಿರುವುದು ಎಂಬುದಕ್ಕೆ ಯಾವುದೇ ಖಾತ್ರಿ ಇಲ್ಲ. ಅದು ಇನ್ನೂ ನೆಲದ ಕೆಳಗಿರುವ ನೀರಿನ ಸರಬರಾಯಿಗಳೊಳಗೆ ಜಿನುಗಿ, ಮನುಷ್ಯನಿಗೆ ಹಾಗೂ ಪ್ರಾಣಿಗಳಿಗೆ ಮಾರಕವಾದ ಆರೋಗ್ಯಾಪಾಯಗಳನ್ನು ಒಡ್ಡಸಾಧ್ಯವಿದೆ. “ಆಧುನಿಕ ಉದ್ಯಮದಿಂದ ಉತ್ಪಾದಿಸಲ್ಪಟ್ಟ ಎಲ್ಲ ರಾಸಾಯನಿಕಗಳನ್ನು ಏನು ಮಾಡುವುದೆಂದು ನಮಗೆ ತಿಳಿದಿಲ್ಲ,” ಎಂದು ಬುಡಪೆಸ್ಟ್ ಇನ್ಸ್ಟಿಟ್ಯೂಟ್ ಆಫ್ ಹೈಡ್ರೊಲಜಿಯ ಹಂಗೇರಿಯನ್ ವಿಜ್ಞಾನಿಯು ಒಪ್ಪಿಕೊಂಡನು. “ಉತ್ಪಾದಿಸಲ್ಪಡುವ ಎಲ್ಲ ರಾಸಾಯನಿಕಗಳ ಅರಿವೂ ನಮಗಿಲ್ಲ ಅಥವಾ ಅವು ಎಲ್ಲಿ ಶೇಖರಿಸಲ್ಪಡುತ್ತಿವೆ ಎಂಬುದೂ ನಮಗೆ ತಿಳಿದಿಲ್ಲ.”
ಎಲ್ಲವುಗಳಲ್ಲಿ ಅತ್ಯಂತ ಕೇಡುಸೂಚಕ ಕಸವು, ನ್ಯೂಕ್ಲಿಯರ್ ಶಕ್ತಿ ಸ್ಥಾವರಗಳ ಉಪ ಉತ್ಪನ್ನ—ವಿದ್ಯುತ್ ವಿಕಿರಣ ಹಿಪ್ಪೆಯಾಗಿದೆ. ಸಾವಿರಗಟ್ಟಲೆ ಟನ್ನುಗಳಷ್ಟು ನ್ಯೂಕ್ಲಿಯರ್ ಹಿಪ್ಪೆಯು ತಾತ್ಕಾಲಿಕ ಪ್ರದೇಶಗಳಲ್ಲಿ ಸಂಗ್ರಹಿಸಲ್ಪಡುತ್ತದಾದರೂ, ಸ್ವಲ್ಪ ಭಾಗವು ಈಗಾಗಲೇ ಮಹಾಸಾಗರಗಳಲ್ಲಿ ರಾಶಿಹಾಕಲ್ಪಟ್ಟಿದೆ. ವರ್ಷಗಟ್ಟಲೆ ನಡೆಸಲ್ಪಟ್ಟ ವೈಜ್ಞಾನಿಕ ಸಂಶೋಧನೆಯ ಹೊರತೂ, ಸುರಕ್ಷಿತ, ಶಾಶ್ವತ ಸಂಗ್ರಹಣೆ ಅಥವಾ ಹೊರಹಾಕುವಿಕೆಗಾಗಿ ಇನ್ನೂ ಪರಿಹಾರವು ಕಂಡುಕೊಳ್ಳಲ್ಪಟ್ಟಿಲ್ಲ, ಮತ್ತು ಯಾವುದೂ ದೂರಗೋಚರವಾಗಿಲ್ಲ. ಈ ಜೀವಿಪರಿಸ್ಥಿತಿಯ ಟೈಮ್ ಬಾಂಬ್ಗಳು ಯಾವಾಗ ಸ್ಫೋಟಿಸಬಹುದೆಂಬುದು ಯಾರೊಬ್ಬರಿಗೂ ತಿಳಿದಿಲ್ಲ. ಈ ಸಮಸ್ಯೆಯು ಖಂಡಿತವಾಗಿ ಕಾಣೆಯಾಗದು—ಅನೇಕ ಶತಮಾನಗಳು ಅಥವಾ ಬರಲಿರುವ ಸಾವಿರಾರು ವರ್ಷಗಳ ಕಾಲದ ವರೆಗೆ, ಅಥವಾ ದೇವರು ಕ್ರಿಯೆ ಕೈಕೊಳ್ಳುವ ತನಕ, ಹಿಪ್ಪೆಯು ವಿದ್ಯುತ್ ವಿಕಿರಣವಾಗಿರುವುದು. (ಪ್ರಕಟನೆ 11:18) ಹಿಪ್ಪೆಯ ಹೊರಹಾಕುವಿಕೆಯ ವಿಷಯಕ್ಕಾಗಿರುವ ಮನುಷ್ಯನ ಉಪೇಕ್ಷೆಯು ಸಹ, ಜೀವಿಪರಿಸ್ಥಿತಿ ಶಾಸ್ತ್ರದ ಮೂರನೆಯ ನಿಯಮದ ಜ್ಞಾಪನವಾಗಿದೆ.
ನಿಸರ್ಗವು ತನ್ನ ಸ್ವಂತ ಮಾರ್ಗವನ್ನು ಅನುಸರಿಸಲಿ. ಬೇರೆ ಮಾತುಗಳಲ್ಲಿ, ಮನುಷ್ಯನು ಹೆಚ್ಚು ಉತ್ತಮವಾದುದೆಂದು ತಾನು ಆಲೋಚಿಸುವ ಯಾವುದೇ ವಿಷಯದಿಂದ ನೈಸರ್ಗಿಕ ವ್ಯವಸ್ಥೆಗಳನ್ನು ಕಡೆಗಣಿಸುವುದಕ್ಕೆ ಬದಲಾಗಿ, ಅವನು ಅವುಗಳೊಂದಿಗೆ ಸಹಕರಿಸುವ ಅಗತ್ಯವಿದೆ. ಕೆಲವು ಕೀಟನಾಶಕಗಳು ಸಮಂಜಸವಾದ ಉದಾಹರಣೆಯಾಗಿವೆ. ಪ್ರಥಮವಾಗಿ ಪರಿಚಯಿಸಲ್ಪಟ್ಟಾಗ, ಅವು ಕಳೆಗಳನ್ನು ನಿಯಂತ್ರಿಸಲು ಮತ್ತು ವಿಶೇಷವಾಗಿ ವಿನಾಶಕರ ಕೀಟಗಳನ್ನು ತೆಗೆದುಹಾಕಲು ರೈತರಿಗೆ ಅನುಕೂಲ ಒದಗಿಸಿದವು. ಸಮೃದ್ಧ ಬೆಳೆಗಳ ಸಂಭವವಿದೆಯೆಂಬ ಖಾತ್ರಿಯು ತೋರಿಬಂತು. ಆದರೆ ತದನಂತರ ವಿಷಯಗಳು ಅಯುಕ್ತವಾಗಿ ಪರಿಣಮಿಸಿದವು. ಒಂದರ ನಂತರ ಇನ್ನೊಂದು ಕೀಟನಾಶಕಗಳಿಗೆ, ಕಳೆಗಳು ಮತ್ತು ಕ್ರಿಮಿಗಳು ಪ್ರತಿರೋಧಕವಾಗಿ ರುಜುವಾದವು, ಮತ್ತು ಕೀಟನಾಶಕಗಳು, ಕ್ರಿಮಿಗಳನ್ನು ನೈಸರ್ಗಿಕವಾಗಿ ಕೊಂದುತಿನ್ನುವ ವನ್ಯಜೀವಿಗಳು, ಮತ್ತು ಸ್ವತಃ ಮನುಷ್ಯನನ್ನು ಸಹ ವಿಷಪ್ರಯೋಗಕ್ಕೆ ಒಳಪಡಿಸುತ್ತಿದ್ದವೆಂದು ಸುವ್ಯಕ್ತವಾಯಿತು. ಬಹುಶಃ ನೀವು ಕೀಟನಾಶಕದ ವಿಷಪ್ರಯೋಗದಿಂದ ಬಾಧಿಸಲ್ಪಟ್ಟಿದ್ದೀರಿ. ಹಾಗಾದರೆ ನೀವು ಲೋಕವ್ಯಾಪಕವಾಗಿ ಇರುವ ಕಡಿಮೆಪಕ್ಷ ಹತ್ತು ಲಕ್ಷ ಬಲಿಪಶುಗಳಲ್ಲಿ ಒಬ್ಬರಾಗಿದ್ದೀರಿ.
ಕಟ್ಟಕಡೆಯಲ್ಲಿ ಕೀಟನಾಶಕಗಳು ಬೆಳೆಯ ಹುಟ್ಟುವಳಿಗಳನ್ನು ಸಹ ಉತ್ತಮಗೊಳಿಸದಿರಬಹುದೆಂಬ ವೃದ್ಧಿಯಾಗುತ್ತಿರುವ ಪುರಾವೆಯು ಅಂತಿಮ ಹಾಸ್ಯವ್ಯಂಗ್ಯ ಸಂಗತಿಯಾಗಿದೆ. ಅಮೆರಿಕದಲ್ಲಿ, ಕ್ರಿಮಿಗಳು ಕೀಟನಾಶಕ ಕ್ರಾಂತಿಯ ಮುಂಚೆ ಕಬಳಿಸಿದುದಕ್ಕಿಂತಲೂ ಈಗ ಬೆಳೆಯ ಭಾರಿ ಹೆಚ್ಚು ಪಾಲನ್ನು ಕಬಳಿಸುತ್ತವೆ. ತದ್ರೀತಿಯಲ್ಲಿ, ಫಿಲಿಪ್ಪೀನ್ಸ್ನಲ್ಲಿನ ಮೂಲಠಾಣ್ಯವಾದ ಇಂಟರ್ನ್ಯಾಷನಲ್ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಆಗ್ನೇಯ ಏಷ್ಯಾದಲ್ಲಿನ ಅಕ್ಕಿಯ ಹುಟ್ಟುವಳಿಗಳನ್ನು ಕೀಟನಾಶಕಗಳು ಇನ್ನುಮುಂದೆ ಉತ್ತಮಗೊಳಿಸದ್ದನ್ನು ಕಂಡುಹಿಡಿದಿದೆ. ವಾಸ್ತವವಾಗಿ, ಕೀಟನಾಶಕಗಳ ಮೇಲೆ ಅಷ್ಟು ಬಲವಾಗಿ ಅವಲಂಬಿಸಿರದ, ಇಂಡೊನೇಶಿಯನ್ ಸರಕಾರದಿಂದ ಪ್ರಾಯೋಜಿತವಾದ ಕಾರ್ಯಕ್ರಮವು, ಕೀಟನಾಶಕಗಳ ಉಪಯೋಗದಲ್ಲಿನ 65 ಪ್ರತಿಶತ ಇಳಿತದ ಹೊರತಾಗಿಯೂ, 1987ರಿಂದ ಅಕ್ಕಿಯ ಉತ್ಪಾದನೆಯಲ್ಲಿ 15 ಪ್ರತಿಶತ ಏರಿಕೆಯನ್ನು ಸಾಧಿಸಿದೆ. ಆದರೂ, ಪ್ರತಿ ವರ್ಷ ಲೋಕದ ರೈತರು ಇನ್ನೂ ಕೀಟನಾಶಕಗಳನ್ನು ವ್ಯಾಪಕವಾಗಿ ಉಪಯೋಗಿಸುತ್ತಿದ್ದಾರೆ.
ಮೇಲೆ ರೇಖಿಸಲ್ಪಟ್ಟಿರುವ ಜೀವಿಪರಿಸ್ಥಿತಿ ಶಾಸ್ತ್ರದ ಮೂರು ನಿಯಮಗಳು, ವಿಷಯಗಳು ಏಕೆ ಕೆಟ್ಟದ್ದಾಗುತ್ತಾ ಹೋಗುತ್ತಿವೆ ಎಂಬುದನ್ನು ವಿವರಿಸಲು ಸಹಾಯ ಮಾಡುತ್ತವೆ. ಈಗಾಗಲೇ ಎಷ್ಟು ಹಾನಿಯು ಮಾಡಲ್ಪಟ್ಟಿದೆ, ಮತ್ತು ಅದನ್ನು ಸರಿಪಡಿಸಸಾಧ್ಯವಿದೆಯೆ? ಎಂಬುವು ಇತರ ಪ್ರಮುಖ ಪ್ರಶ್ನೆಗಳಾಗಿವೆ.
ಎಷ್ಟು ಹಾನಿಯು ಮಾಡಲ್ಪಟ್ಟಿದೆ?
ಇದರೊಂದಿಗಿರುವ ಲೋಕ ಭೂಪಟವು (8-9ನೆಯ ಪುಟಗಳನ್ನು ನೋಡಿ), ಪ್ರಮುಖವಾದ ಕೆಲವು ಪರಿಸರೀಯ ಸಮಸ್ಯೆಗಳನ್ನು ಮತ್ತು ಅವು ಎಲ್ಲಿ ಅತ್ಯಂತ ಸಂದಿಗ್ಧವಾಗಿವೆ ಎಂಬುದನ್ನು ಎತ್ತಿತೋರಿಸುತ್ತದೆ. ಸ್ಪಷ್ಟವಾಗಿಯೇ, ಇರು ನೆಲೆ ಅಥವಾ ಇತರ ಅಂಶಗಳ ಕೊರತೆಯು, ಒಂದು ಸಸ್ಯ ಅಥವಾ ಪ್ರಾಣಿ ಜಾತಿಯ ನಿರ್ಮೂಲನಕ್ಕೆ ಕಾರಣವಾಗುವಾಗ, ಮನುಷ್ಯನು ಆ ಹಾನಿಯನ್ನು ಸರಿಪಡಿಸಲಾರನು. ಓಸೋನ್ ಪದರದ ಕ್ಷಯಿಸುವಿಕೆಯಂತಹ ಬೇರೆ ಹಾನಿಯು ಈಗಾಗಲೆ ಮಾಡಲ್ಪಟ್ಟಿದೆ. ಮುಂದುವರಿಯುತ್ತಿರುವ ಪರಿಸರೀಯ ಅವನತಿಯ ಕುರಿತಾಗಿ ಏನು? ಅದನ್ನು ನಿಲ್ಲಿಸುವುದರಲ್ಲಿ ಅಥವಾ ಕಡಿಮೆಪಕ್ಷ ಅದನ್ನು ನಿಧಾನಗೊಳಿಸುವುದರಲ್ಲಿ ಪ್ರಗತಿಯು ಮಾಡಲ್ಪಡುತ್ತಿದೆಯೊ?
ಜೀವಿಪರಿಸ್ಥಿತಿ ಹಾನಿಯ ಅತ್ಯಂತ ಪ್ರಮುಖ ಮಾಪಕಗಳಲ್ಲಿ ಎರಡು, ವ್ಯವಸಾಯ ಮತ್ತು ಮೀನುಹಿಡಿಯುವಿಕೆ ಆಗಿದೆ. ಏಕೆ? ಅವುಗಳ ಉತ್ಪನ್ನಕಾರಕತೆಯು ಒಂದು ಆರೋಗ್ಯಕರ ಪರಿಸರದ ಮೇಲೆ ಅವಲಂಬಿಸಿರುವುದರಿಂದ ಮತ್ತು ನಮ್ಮ ಜೀವಗಳು ವಿಶ್ವಾಸಾರ್ಹವಾದ ಆಹಾರ ಸರಬರಾಯಿಯ ಮೇಲೆ ಅವಲಂಬಿಸಿರುವುದರಿಂದಲೇ.
ಎರಡೂ ವಿಭಾಗಗಳು ಕ್ಷಯಿಸುವಿಕೆಯ ಸೂಚನೆಗಳನ್ನು ತೋರಿಸುತ್ತಿವೆ. ಲೋಕದ ಮೀನುಹಿಡಿಯುವ ನೌಕಾ ಬಲಗಳು, ಮೀನಿನ ದಾಸ್ತಾನುಗಳನ್ನು ಗಂಭೀರವಾಗಿ ಅಪಾಯಕ್ಕೊಡ್ಡದೆ, ಹತ್ತು ಕೋಟಿ ಟನ್ನುಗಳಿಗಿಂತಲೂ ಹೆಚ್ಚು ಮೀನುಗಳನ್ನು ಹಿಡಿಯಲು ಅಸಮರ್ಥವಾಗಿವೆಯೆಂದು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಲೆಕ್ಕಿಸಿದೆ. ಆ ಮೊತ್ತವು 1989ರಲ್ಲಿ ಅತಿಶಯಿಸಿತು, ಮತ್ತು ಮುಂದಿನ ವರ್ಷ ಲೋಕವ್ಯಾಪಕವಾದ ಮೀನುಹಿಡಿಯುವಿಕೆಯು 40 ಲಕ್ಷ ಟನ್ನುಗಳಿಗೆ ಇಳಿಯುವ ಮೂಲಕ, ನಿರೀಕ್ಷಿಸಲ್ಪಟ್ಟಂತೆ ಸಂಭವಿಸಿತು. ಸಮುದ್ರದಲ್ಲಿ ಎಲ್ಲಿ ಮೀನುಗಳು ಗುಂಪುಗೂಡುತ್ತವೊ ಅಂತಹ ಕೆಲವು ಸ್ಥಳಗಳ ಕ್ಷಯಿಸುವಿಕೆಯಲ್ಲಿ ತೀರ ಇಳಿತವಾಗುತ್ತಿದೆ. ಉದಾಹರಣೆಗಾಗಿ, ಈಶಾನ್ಯ ಅಟ್ಲಾಂಟಿಕ್ನಲ್ಲಿನ ಮೀನುಹಿಡಿಯುವಿಕೆಯು, ಕಳೆದ 20 ವರ್ಷಗಳಲ್ಲಿ 32 ಪ್ರತಿಶತ ಇಳಿಮುಖವಾಗಿದೆ. ಹೆಚ್ಚಾದ ಮೀನುಹಿಡಿಯುವಿಕೆ, ಮಹಾಸಾಗರಗಳ ಮಾಲಿನ್ಯ, ಮತ್ತು ಮೊಟ್ಟೆಹಾಕುವ ನೆಲಗಳ ವಿನಾಶಗಳು ಪ್ರಮುಖ ಸಮಸ್ಯೆಗಳಾಗಿವೆ.
ದಿಗಿಲೆಬ್ಬಿಸುವ ಈ ಪ್ರವಣತೆಯು, ಬೆಳೆಯ ಉತ್ಪಾದನೆಯಲ್ಲಿ ಪ್ರತಿಬಿಂಬಿಸಲ್ಪಡುತ್ತದೆ. 60ಗಳು ಮತ್ತು 70ಗಳಲ್ಲಿ, ಬೆಳೆಗಳ ಉತ್ತಮಗೊಂಡ ತಳಿಗಳು ಹಾಗೂ ನೀರಾವರಿ ಮತ್ತು ರಾಸಾಯನಿಕ ಕೀಟನಾಶಕಗಳು ಮತ್ತು ಕೃತಕ ಗೊಬ್ಬರಗಳ ವ್ಯಾಪಕವಾದ ಉಪಯೋಗವು, ಲೋಕದ ಧಾನ್ಯ ಉತ್ಪಾದನೆಯನ್ನು ಗಮನಾರ್ಹವಾಗಿ ವರ್ಧಿಸಿದವು. ಈಗ, ಕೀಟನಾಶಕಗಳು ಮತ್ತು ಕೃತಕ ಗೊಬ್ಬರಗಳು ತಮ್ಮ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳುತ್ತಿವೆ, ಮತ್ತು ನೀರಿನ ಅಭಾವಗಳು ಮತ್ತು ಮಾಲಿನ್ಯವು ಸಹ ಹೆಚ್ಚು ಬಡಕಲಾದ ಕೊಯ್ಲಿಗೆ ನೆರವನ್ನೀಯುತ್ತವೆ.
ಪ್ರತಿ ವರ್ಷ ಉಣ್ಣಲಿಕ್ಕಾಗಿ ಬಹುಮಟ್ಟಿಗೆ ಹತ್ತು ಕೋಟಿ ಹೆಚ್ಚಿನ ವ್ಯಕ್ತಿಗಳು ಇರುವುದಾದರೂ, ಕಳೆದ ದಶಕದಲ್ಲಿ ಕೃಷಿ ಮಾಡಲ್ಪಟ್ಟ ಜಮೀನಿನ ಒಟ್ಟು ಪ್ರಮಾಣದಲ್ಲಿ ಇಳಿತವಾಗಿದೆ. ಮತ್ತು ಈ ಸಾಗುವಳಿ ಜಮೀನು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಕಳೆದ 20 ವರ್ಷಗಳಲ್ಲಿ ಸವೆತವು, ರೈತರಿಂದ ಸುಮಾರು 500 ಆ್ಯರಬ್ (50,000 ಕೋಟಿ) ಟನ್ನುಗಳಷ್ಟು ಮೇಲ್ಪದರದ ಮಣ್ಣನ್ನು ಅಪಹರಿಸಿದೆ ಎಂದು ವರ್ಲ್ಡ್ವಾಚ್ ಇನ್ಸ್ಟಿಟ್ಯೂಟ್ ಅಂದಾಜುಮಾಡುತ್ತದೆ. ಸಹಜವಾಗಿ, ಆಹಾರ ಉತ್ಪಾದನೆಯು ಕ್ಷಯಿಸಲಾರಂಭಿಸಿದೆ. “1984 ಮತ್ತು 1992ರ ನಡುವೆ, ಪ್ರತಿ ವ್ಯಕ್ತಿಗೆ 6 ಪ್ರತಿಶತದಷ್ಟು ಕಡಿಮೆ ಧಾನ್ಯವು ದೊರಕುವುದು, ಇಂದು ಲೋಕದಲ್ಲಿರುವ ಅತ್ಯಂತ ಗೊಂದಲಮಯವಾದ ಆರ್ಥಿಕ ಪ್ರವಣತೆ[ಯಾಗಿರ]ಬಹುದು,” ಎಂದು ಸ್ಟೇಟ್ ಆಫ್ ದ ವರ್ಲ್ಡ್ 1993ಯ ವರದಿಯು ಹೇಳಿಕೆಯನ್ನೀಯುತ್ತದೆ.
ಪರಿಸರದ ಕುರಿತಾದ ಮನುಷ್ಯನ ಅಲಕ್ಷ್ಯದ ಫಲಿತಾಂಶವಾಗಿ, ಕೋಟಿಗಟ್ಟಲೆ ಜನರ ಜೀವಗಳು ಈಗಾಗಲೇ ಅಪಾಯದಲ್ಲಿವೆ ಎಂಬುದು ಸ್ಪಷ್ಟ.
ಮನುಷ್ಯನು ಸಮಸ್ಯೆಗಳನ್ನು ನಿರ್ವಹಿಸಬಲ್ಲನೊ?
ಯಾವುದು ಹಾಳಾಗುತ್ತಿದೆ ಎಂಬುದರ ಕುರಿತಾಗಿ ಮನುಷ್ಯನು ಈಗ ಸ್ವಲ್ಪ ವಿಷಯವನ್ನು ಅರ್ಥಮಾಡಿಕೊಳ್ಳುತ್ತಾನಾದರೂ, ಅದನ್ನು ಸರಿಪಡಿಸುವುದು ಸುಲಭವಾಗಿಲ್ಲ. ಪ್ರಥಮ ತೊಡಕು ಯಾವುದೆಂದರೆ, 1992ರಲ್ಲಿನ ಅರ್ತ್ ಸಮಿಟ್ನಲ್ಲಿ ಮುಂದಿಡಲ್ಪಟ್ಟ ವ್ಯಾಪಕ ಯೋಜನೆಗಳನ್ನು ನೆರವೇರಿಸಲಿಕ್ಕಾಗಿ ಅದು ದೊಡ್ಡ ಮೊತ್ತದ ಹಣ—ಒಂದು ವರ್ಷಕ್ಕೆ ಕಡಿಮೆಪಕ್ಷ 600 ಆ್ಯರಬ್ (60,000 ಕೋಟಿ) ಡಾಲರುಗಳು—ವನ್ನು ಅಗತ್ಯಪಡಿಸುವುದು. ಕಡಿಮೆ ಹಾಳುಮಾಡುವುದು ಮತ್ತು ಹೆಚ್ಚು ಆವರ್ತಿಸುವುದು, ನೀರು ಮತ್ತು ಶಕ್ತಿಯನ್ನು ಸಂರಕ್ಷಿಸುವುದು, ಖಾಸಗಿ ಸಾಗಣೆಗೆ ಬದಲಾಗಿ ಸಾರ್ವಜನಿಕ ಸಾಗಣೆಯನ್ನು ಉಪಯೋಗಿಸುವುದು, ಮತ್ತು ಎಲ್ಲವುಗಳಲ್ಲಿ ಅತ್ಯಂತ ಕಷ್ಟಕರವಾದದ್ದಾಗಿ, ಆತ್ಮಾಭಿರುಚಿಗೆ ಬದಲಾಗಿ ಭೂಗ್ರಹವನ್ನು ಪರಿಗಣನೆಗೆ ತೆಗೆದುಕೊಳ್ಳುವಂತಹ ನೈಜ ತ್ಯಾಗಗಳು ಸಹ ಅಗತ್ಯವಾಗಿರುವವು. ಜಲಜೀವಿ ಜೀವಿಪರಿಸ್ಥಿತಿ ವ್ಯವಸ್ಥೆಯನ್ನು ಜೀರ್ಣೋದ್ಧಾರ ಮಾಡುವುದಕ್ಕಾಗಿರುವ ಯು.ಎಸ್. ಕಮಿಟಿಯ ಅಧ್ಯಕ್ಷರಾದ ಜಾನ್ ಕಾರ್ಸ್, ಜೂನಿಯರ್, ಈ ಸಮಸ್ಯೆಯನ್ನು ಸಂಕ್ಷಿಪ್ತ ರೂಪದಲ್ಲಿ ಹೇಳಿದ್ದು: “ನಾವು ಏನು ಮಾಡಬಲ್ಲೆವು ಎಂಬುದರ ಕುರಿತು ನಾನು ಆಶಾವಾದಿಯಾಗಿದ್ದೇನೆ. ನಾವು ಏನು ಮಾಡುವೆವು ಎಂಬುದರ ಕುರಿತು ನಾನು ನಿರಾಶಾವಾದಿಯಾಗಿದ್ದೇನೆ.”
ಒಟ್ಟುಗಟ್ಟಳೆ ಶುಚಿಮಾಡುವಿಕೆಯ ಬರಿಯ ಖರ್ಚು ಎಷ್ಟಾಗಿದೆಯೆಂದರೆ ಅಧಿಕಾಂಶ ದೇಶಗಳು ಲೆಕ್ಕತೀರಿಸುವ ದಿನವನ್ನು ಮುಂದೂಡಲು ಇಷ್ಟಪಡುತ್ತವೆ. ಆರ್ಥಿಕ ವಿಪತ್ತಿನ ಸಮಯದಲ್ಲಿ, ಪರಿಸರೀಯ ಸೂಕ್ತಕ್ರಮಗಳು, ಉದ್ಯೋಗಗಳಿಗೆ ಒಂದು ಬೆದರಿಕೆಯೋಪಾದಿ ಅಥವಾ ಆರ್ಥಿಕ ನಿರ್ವಹಣೆಯ ಮೇಲಿನ ತಡೆಯೋಪಾದಿ ವೀಕ್ಷಿಸಲ್ಪಡುತ್ತವೆ. ಕ್ರಿಯೆಗಿಂತ ಮಾತು ಹೆಚ್ಚು ಸುಲಭ. ಇಷ್ಟರ ವರೆಗಿನ ಪ್ರತಿಕ್ರಿಯೆಯು, “ಭಾಷಣಚಾತುರ್ಯದ ಗುಡುಗುಮಳೆಗಳನ್ನು ನಿಷ್ಕ್ರಿಯೆಯ ಬರಗಳು ಹಿಂಬಾಲಿಸಿ”ದಂತಿದೆ ಎಂದು ಭೂಮಿಯ ಕಾಳಜಿ ವಹಿಸುವುದು (ಇಂಗ್ಲಿಷ್) ಎಂಬ ಪುಸ್ತಕವು ವಿವರಿಸುತ್ತದೆ. ಆದರೆ ಅಗತ್ಯವಾದ ಹುರುಪಿನಿಂದ ಕ್ರಿಯೆಗೈಯಲು ಸೋತಿರುವ ಹೊರತಾಗಿಯೂ, ಸಮಯ ಕೊಡಲ್ಪಡುವಲ್ಲಿ ಹೊಸ ತಂತ್ರಜ್ಞಾನವು, ಭೂಗ್ರಹದ ಅನಾರೋಗ್ಯಗಳಿಗಾಗಿ ವೇದನಾರಹಿತವಾದ ಪರಿಹಾರವನ್ನು ಕಂಡುಹಿಡಿಯಸಾಧ್ಯವಿಲ್ಲವೊ? ಇಲ್ಲ ಎಂಬುದು ಸ್ಪಷ್ಟ.
ಸಂಯುಕ್ತ ಹೇಳಿಕೆಯೊಂದರಲ್ಲಿ, ಯು.ಎಸ್. ನ್ಯಾಷನಲ್ ಅಕ್ಯಾಡೆಮಿ ಆಫ್ ಸೈಎನ್ಸ್ಸ್ ಮತ್ತು ರಾಯಲ್ ಸೊಸೈಟಿ ಆಫ್ ಲಂಡನ್ ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡದ್ದು: “ಜನಸಂಖ್ಯಾ ವೃದ್ಧಿಯ ಪ್ರಚಲಿತ ಭವಿಷ್ಯ ನುಡಿಗಳು ನಿಷ್ಕೃಷ್ಟವಾಗಿ ರುಜುವಾಗಿ, ಭೂಗ್ರಹದ ಮೇಲಿನ ಮಾನವ ಚಟುವಟಿಕೆಯ ನಮೂನೆಗಳು ಬದಲಾಗದೆ ಉಳಿಯುವುದಾದರೆ, ವಿಜ್ಞಾನ ಮತ್ತು ತಂತ್ರಜ್ಞಾನವು, ಪರಿಸರದ ಮಾರ್ಪಡಿಸಲಾಗದ ಅವನತಿಯನ್ನಾಗಲಿ ಲೋಕದ ಹೆಚ್ಚಿನ ಜನರಿಗಿರುವ ಸತತವಾದ ಬಡತನವನ್ನಾಗಲಿ ತಡೆಗಟ್ಟಲು ಅಸಮರ್ಥವಾಗಿರಬಹುದು.”
ನ್ಯೂಕ್ಲಿಯರ್ ಹಿಪ್ಪೆಯ ಹೊರಹಾಕುವಿಕೆಗೆ ಸ್ಥಳವಿಲ್ಲ ಎಂಬ ಬೆದರಿಕೆಯನ್ನುಂಟುಮಾಡುವ ಸಮಸ್ಯೆಯು, ವಿಜ್ಞಾನವು ಮಹತ್ಪ್ರಭಾವದ್ದಾಗಿಲ್ಲ ಎಂಬುದಕ್ಕೆ ಒಂದು ಜ್ಞಾಪನವಾಗಿದೆ. ಉತ್ತಮ ಮಟ್ಟದ ವಿದ್ಯುತ್ ವಿಕಿರಣ ಹಿಪ್ಪೆಯನ್ನು ಶಾಶ್ವತವಾಗಿ ಶೇಖರಿಸಲಿಕ್ಕಾಗಿ, ವಿಜ್ಞಾನಿಗಳು ಸುರಕ್ಷಿತವಾದ ನಿವೇಶನಗಳಿಗಾಗಿ 40 ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದಾರೆ. ಈ ಅನ್ವೇಷಣೆಯು ಎಷ್ಟು ಕಷ್ಟಕರವಾಗಿ ಪರಿಣಮಿಸುತ್ತಿದೆಯೆಂದರೆ, ಇಟಲಿ ಮತ್ತು ಆರ್ಜೆಂಟೀನದಂತಹ ಕೆಲವು ದೇಶಗಳು, ತೀರ ಬೇಗ ಎಂದರೆ 2040ನೇ ವರ್ಷದ ವರೆಗೆ ಅವು ಒಂದು ನಿವೇಶನವನ್ನು ಸಿದ್ಧಪಡಿಸುವುದಿಲ್ಲವೆಂದು ನಿರ್ಧರಿಸಿವೆ. ಈ ಕ್ಷೇತ್ರದಲ್ಲಿನ ಅತ್ಯಂತ ಆಶಾವಾದಿ ದೇಶವಾಗಿರುವ ಜರ್ಮನಿಯು, ಯೋಜನೆಗಳನ್ನು 2008ನೆಯ ವರ್ಷದೊಳಗೆ ಇತ್ಯರ್ಥಗೊಳಿಸಲು ನಿರೀಕ್ಷಿಸುತ್ತದೆ.
ನ್ಯೂಕ್ಲಿಯರ್ ಹಿಪ್ಪೆಯು ಅಂತಹ ಒಂದು ಸಮಸ್ಯೆಯಾಗಿದೆ ಏಕೆ? “ವಿದ್ಯುತ್ ವಿಕಿರಣ ಹಿಪ್ಪೆಯು, ಅತ್ಯಂತ ಒಳ್ಳೆಯ ಉಗ್ರಾಣದಿಂದಲೂ ಎಂದಾದರೊಂದು ದಿನ ಅಪಾಯಕರ ಪ್ರಮಾಣಗಳಲ್ಲಿ ಹೊರಸೂಸುವುದಿಲ್ಲ ಎಂಬುದಕ್ಕೆ, ಯಾವ ವಿಜ್ಞಾನಿಯಾಗಲಿ ಎಂಜಿನಿಯರನಾಗಲಿ ಸಂಪೂರ್ಣ ಖಾತರಿಯನ್ನು ಕೊಡಲಾರನು” ಎಂದು ಭೂವಿಜ್ಞಾನಿಯಾದ ಕಾನ್ರಾಡ್ ಕ್ರೌಸ್ಕಾಫ್ ವಿವರಿಸುತ್ತಾರೆ. ಆದರೆ ಹಿಪ್ಪೆಯ ಹೊರಹಾಕುವಿಕೆಯ ತೊಡಕಿನ ಕುರಿತಾಗಿ ಕೊಡಲ್ಪಟ್ಟ ಆರಂಭದ ಎಚ್ಚರಿಕೆಯ ಹೊರತಾಗಿ, ನಾಳಿನ ತಂತ್ರಜ್ಞಾನವು ಒಂದು ಪರಿಹಾರವನ್ನು ಒದಗಿಸುವುದೆಂದು ಭಾವಿಸುತ್ತಾ, ಸರಕಾರಗಳು ಹಾಗೂ ನ್ಯೂಕ್ಲಿಯರ್ ಉದ್ಯಮವು ನಿರಾತಂಕವಾಗಿ ಮುಂದುವರಿದವು. ಆ ನಾಳೆಯು ಎಂದಿಗೂ ಬರಲಿಲ್ಲ.
ಪರಿಸರೀಯ ವಿಪತ್ತಿಗಾಗಿ ಯಥೋಚಿತ ಪರಿಹಾರವನ್ನು ತಂತ್ರಜ್ಞಾನವು ಹೊಂದಿರದಿದ್ದಲ್ಲಿ, ಇತರ ಯಾವ ಆಯ್ಕೆಗಳು ಉಳಿದಿವೆ? ಭೂಗ್ರಹವನ್ನು ಸಂರಕ್ಷಿಸಲಿಕ್ಕಾಗಿ ಒಟ್ಟಾಗಿ ಕಾರ್ಯನಡಿಸುವಂತೆ, ಅಗತ್ಯವು ಅಂತಿಮವಾಗಿ ರಾಷ್ಟ್ರಗಳನ್ನು ಒತ್ತಾಯಪಡಿಸುವುದೊ?
[ಪಾದಟಿಪ್ಪಣಿ]
a ಗ್ರೀಕ್ ಭಾಷೆಯ ಆಯ್ಕೊಸ್ (ಮನೆ, ಗೃಹ) ಮತ್ತು ಲಾಗಿಯ (ಅಧ್ಯಯನ) ಶಬ್ದದಿಂದ.
[ಪುಟ 8 ರಲ್ಲಿರುವ ಚೌಕ]
ನವೀಕರಣಾರ್ಹ ಶಕ್ತಿ ಸಂಪನ್ಮೂಲಗಳಿಗಾಗಿ ಅನ್ವೇಷಣೆ
ನಮ್ಮಲ್ಲಿ ಅನೇಕರು ಶಕ್ತಿಯನ್ನು—ಎಣ್ಣೆಯ ಬೆಲೆಗಳಲ್ಲಿ ಅಳಿವು ಅಥವಾ ಏರಿಕೆಯು ಇರುವ ತನಕ—ಮಾಮೂಲಾಗಿ ತೆಗೆದುಕೊಳ್ಳುತ್ತೇವೆ. ಆದರೂ ಮಾಲಿನ್ಯದ ಅತ್ಯಂತ ಮಹಾನ್ ಕಾರಣಗಳಲ್ಲಿ ಒಂದು, ಶಕ್ತಿಯ ಬಳಕೆಯಾಗಿದೆ. ಉಪಯೋಗಿಸಲ್ಪಡುವ ಅಧಿಕಾಂಶ ಶಕ್ತಿಯು, ಕಟ್ಟಿಗೆ ಅಥವಾ ಅಗೆದುತೆಗೆದ ಉರುವಲುಗಳನ್ನು ಉರಿಸುವುದರಿಂದ, ಕೋಟಿಗಟ್ಟಲೆ ಟನ್ನುಗಳಷ್ಟು ಇಂಗಾಲದ ಡೈಆಕ್ಸೈಡನ್ನು ವಾಯುಮಂಡಲದೊಳಗೆ ಸಾಗಿಸುವ ಮತ್ತು ಲೋಕದ ಅರಣ್ಯಗಳಲ್ಲಿ ಹತ್ತರಲ್ಲೊಂದು ಪಾಲನ್ನು ಹಾಳುಮಾಡುವ ಪ್ರಕ್ರಿಯೆಯಿಂದ ಬರು ತ್ತದೆ.
ಇನ್ನೊಂದು ಆಯ್ಕೆಯಾದ ನ್ಯೂಕ್ಲಿಯರ್ ಶಕ್ತಿಯು, ಆಕಸ್ಮಿಕಗಳ ಅಪಾಯ ಮತ್ತು ವಿದ್ಯುತ್ ವಿಕಿರಣ ಹಿಪ್ಪೆಯನ್ನು ಶೇಖರಿಸುವುದರ ಕುರಿತ ತೊಡಕಿನ ಕಾರಣದಿಂದ ಹೆಚ್ಚೆಚ್ಚು ಜನಪ್ರಿಯವಲ್ಲದ್ದಾಗುತ್ತಿದೆ. ಉಚಿತವಾಗಿ ಲಭ್ಯವಿರುವ, ನೈಸರ್ಗಿಕವಾಗಿ ದೊರೆಯುವ ಶಕ್ತಿ ಸಂಪನ್ಮೂಲಗಳನ್ನು ಅವು ಸಜ್ಜುಗೊಳಿಸುವುದರಿಂದ, ಇತರ ಪರ್ಯಾಯಗಳು ನವೀಕರಣಾರ್ಹ ಶಕ್ತಿ ಸಂಪನ್ಮೂಲಗಳೋಪಾದಿ ವಿದಿತವಾಗಿವೆ. ಐದು ಪ್ರಮುಖ ವಿಧಗಳು ಇವೆ.
ಸೌರ ಶಕ್ತಿ. ಕಾಯಿಸಲಿಕ್ಕಾಗಿ ಇದನ್ನು ಸುಲಭವಾಗಿ ಉಪಯೋಗಿಸಸಾಧ್ಯವಿದೆ, ಮತ್ತು ಇಸ್ರೇಲ್ನಂತಹ ಕೆಲವು ದೇಶಗಳಲ್ಲಿ, ನೀರನ್ನು ಕಾಯಿಸಲಿಕ್ಕಾಗಿ ಅನೇಕ ಮನೆಗಳಲ್ಲಿ ಸೌರ ಪ್ಯಾನೆಲ್ಗಳಿವೆ. ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಸೂರ್ಯನನ್ನು ಉಪಯೋಗಿಸುವುದು ಹೆಚ್ಚು ಕಷ್ಟಕರವಾಗಿದೆ, ಆದರೆ ಆಧುನಿಕ ಫೋಟೊವಾಲ್ಟೇಇಕ್ ಸೆಲ್ಗಳು ಗ್ರಾಮೀಣ ಕ್ಷೇತ್ರಗಳಲ್ಲಿ ಈಗಾಗಲೆ ವಿದ್ಯುಚ್ಛಕ್ತಿಯನ್ನು ಒದಗಿಸುತ್ತಿವೆ, ಮತ್ತು ಹೆಚ್ಚು ಮಿತವ್ಯಯದ್ದಾಗಿ ಪರಿಣಮಿಸುತ್ತಿವೆ.
ಗಾಳಿ ಶಕ್ತಿ. ಗಾಳಿಯು ಬಲವಾಗಿ ಬೀಸುವ ಲೋಕದ ಅನೇಕ ಭಾಗಗಳಲ್ಲಿ ಬೃಹದಾಕಾರದ ಗಾಳಿ ಯಂತ್ರಗಳು ಈಗ ವ್ಯಾಪಕವಾಗಿ ಹರಡಿಕೊಂಡಿವೆ. ಈಯೊಲಿಯನ್ ಶಕ್ತಿ—ಇದು ಹಾಗೆ ಕರೆಯಲ್ಪಡುತ್ತದೆ—(ಗಾಳಿಯ ಮೂಲಕ ಉತ್ಪಾದಿಸಲ್ಪಡುವ ಶಕ್ತಿ)ಯಿಂದ ಸರಬರಾಯಿ ಮಾಡಲ್ಪಟ್ಟ ವಿದ್ಯುಚ್ಛಕ್ತಿಯು, ಏಕಪ್ರಕಾರವಾಗಿ ಕಡಿಮೆ ವೆಚ್ಚದ್ದಾಗಿದೆ ಮತ್ತು ಈಗ ಕೆಲವು ಕ್ಷೇತ್ರಗಳಲ್ಲಿ ಸಾಂಪ್ರದಾಯಿಕ ಶಕ್ತಿ ಸರಬರಾಯಿಗಳಿಗಿಂತಲೂ ಕಡಿಮೆ ಬೆಲೆಯದ್ದಾಗಿದೆ.
ಜಲವಿದ್ಯುಚ್ಛಕ್ತಿ. ಈಗಾಗಲೆ ಲೋಕದ ವಿದ್ಯುಚ್ಛಕ್ತಿಯಲ್ಲಿ 20 ಪ್ರತಿಶತವು, ಜಲವಿದ್ಯುಚ್ಛಕ್ತಿಯ ಸ್ಥಾವರಗಳಿಂದ ಬರುತ್ತದೆ, ಆದರೆ ಅಸಂತೋಷಕರವಾಗಿಯೆ ವಿಕಾಸಹೊಂದಿರುವ ದೇಶಗಳಲ್ಲಿರುವ ಆಶಾಜನಕ ನಿವೇಶನಗಳಲ್ಲಿನ ಅಧಿಕಾಂಶ ನಿವೇಶನಗಳು ಈಗಾಗಲೆ ಲೂಟಿ ಮಾಡಲ್ಪಟ್ಟಿವೆ. ಬಹುದೊಡ್ಡ ಅಣೆಕಟ್ಟುಗಳು ಸಹ ಗಮನಾರ್ಹವಾದ ಜೀವಿಪರಿಸ್ಥಿತಿ ಶಾಸ್ತ್ರೀಯ ಹಾನಿಯನ್ನು ಉಂಟುಮಾಡಬಲ್ಲವು. ವಿಶೇಷವಾಗಿ ವರ್ಧಿಷ್ಣು ದೇಶಗಳಲ್ಲಿ, ಹೆಚ್ಚು ಸಣ್ಣದಾದ ಜಲವಿದ್ಯುಚ್ಛಕ್ತಿಯ ಅನೇಕ ಸ್ಥಾವರಗಳನ್ನು ನಿರ್ಮಿಸುವುದೇ ಹೆಚ್ಚು ಉತ್ತಮವಾದ ಪ್ರತೀಕ್ಷೆಯಾಗಿ ತೋರುತ್ತದೆ.
ಭೂಉಷ್ಣ ಶಕ್ತಿ. ಕೆಲವು ದೇಶಗಳು, ವಿಶೇಷವಾಗಿ ಐಸ್ಲೆಂಡ್ ಮತ್ತು ನ್ಯೂ ಸೀಲೆಂಡ್, ನೆಲದಲ್ಲಿರುವ “ಬಿಸಿ ನೀರಿನ ವ್ಯವಸ್ಥೆ”ಯನ್ನು ಉಪಯೋಗಿಸಿಕೊಳ್ಳಲು ಶಕ್ತವಾಗಿವೆ. ಭೂಮಿಯ ಕೆಳಗಿನ ಜ್ವಾಲಾಮುಖಿಯಿಂದಾದ ಚಟುವಟಿಕೆಯು ನೀರನ್ನು ಕಾಯಿಸುತ್ತದೆ; ಮನೆಗಳನ್ನು ಕಾಯಿಸಲು ಮತ್ತು ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಇದನ್ನು ಉಪಯೋಗಿಸಸಾಧ್ಯವಿದೆ. ಇಟಲಿ, ಜಪಾನ್, ಮೆಕ್ಸಿಕೊ, ಫಿಲಿಪ್ಪೀನ್ಸ್, ಮತ್ತು ಅಮೆರಿಕಗಳು ಸಹ, ಸ್ವಲ್ಪ ಮಟ್ಟಿಗೆ ಈ ನೈಸರ್ಗಿಕ ಶಕ್ತಿಯ ಮೂಲವನ್ನು ವಿಕಸಿಸಿಕೊಂಡಿವೆ.
ಭರತ ಶಕ್ತಿ. ಬ್ರಿಟನ್, ಫ್ರಾನ್ಸ್, ರಷ್ಯಾಗಳಂತಹ ಕೆಲವು ದೇಶಗಳಲ್ಲಿ ಮಹಾಸಾಗರದ ಭರತಗಳು ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಉಪಯೋಗಿಸಲ್ಪಡುತ್ತಿವೆ. ಆದರೂ, ಮಿತವ್ಯಯದಲ್ಲಿ ಶಕ್ತಿಯ ಈ ಸರಬರಾಯಿಯನ್ನು ಒದಗಿಸಲು, ಸುಲಭವೂ ಪ್ರಾಯೋಗಿಕವೂ ಆಗಿರಸಾಧ್ಯವಿರುವ ನಿವೇಶನಗಳು ಲೋಕದ ಸುತ್ತಲೂ ಕೆಲವೇ ಇವೆ.
[Box/Pictures on page 8, 9]
ಲೋಕದ ಪ್ರಮುಖ ಪರಿಸರೀಯ ಸಮಸ್ಯೆಗಳಲ್ಲಿ ಕೆಲವು
ಅರಣ್ಯಗಳ ವಿನಾಶ. ಲೋಕದ ಸಮಶೀತೋಷ್ಣ ವಲಯದ ಅರಣ್ಯಗಳಲ್ಲಿ ಮುಕ್ಕಾಲು ಭಾಗ ಮತ್ತು ಉಷ್ಣ ವಲಯದ ಅರಣ್ಯಗಳಲ್ಲಿ ಅರ್ಧ ಭಾಗವು ಈಗಾಗಲೆ ಕಳೆದುಕೊಳ್ಳಲ್ಪಟ್ಟಿದೆ, ಮತ್ತು ಕಳೆದ ದಶಕದಲ್ಲಿ ಗಾಬರಿಗೊಳಿಸುವಂತಹ ರೀತಿಯಲ್ಲಿ ಅರಣ್ಯನಾಶದ ಪ್ರಮಾಣವು ಅಧಿಕಗೊಂಡಿದೆ. ಉಷ್ಣ ವಲಯದ ಅರಣ್ಯಗಳ ವಿನಾಶವು, ಪ್ರತಿ ವರ್ಷ 1,50,000 ಮತ್ತು 2,00,000 ಚದರ ಕಿಲೊಮೀಟರ್ನ—ಸುಮಾರು ಯುರಗ್ವೈಯಷ್ಟು ಗಾತ್ರದ್ದು—ನಡುವಿನಷ್ಟಿದೆ ಎಂದು ಇತ್ತೀಚಿಗಿನ ಅಂದಾಜುಗಳು ಸೂಚಿಸುತ್ತವೆ.
ವಿಷಕರ ಹಿಪ್ಪೆಗಳು. ಪ್ರಚಲಿತವಾಗಿ ತಯಾರಿಸಲ್ಪಟ್ಟಿರುವ 70,000 ರಾಸಾಯನಿಕಗಳಲ್ಲಿ ಅರ್ಧ ರಾಸಾಯನಿಕಗಳು ವಿಷಕರವಾಗಿ ವರ್ಗೀಕರಿಸಲ್ಪಟ್ಟಿವೆ. ಪ್ರತಿ ವರ್ಷ ಅಮೆರಿಕ ಒಂದೇ, 24 ಕೋಟಿ ಟನ್ನುಗಳಷ್ಟು ವಿಷಕರ ಹಿಪ್ಪೆಗಳನ್ನು ಉತ್ಪಾದಿಸುತ್ತದೆ. ಮಾಹಿತಿಯ ಕೊರತೆಯು, ಲೋಕವ್ಯಾಪಕ ಮೊತ್ತವನ್ನು ಲೆಕ್ಕಿಸುವುದನ್ನು ಅಸಾಧ್ಯವಾಗಿ ಮಾಡುತ್ತದೆ. ಇದಕ್ಕೆ ಕೂಡಿಸಿ, 2000 ವರ್ಷದಷ್ಟಕ್ಕೆ, ತಾತ್ಕಾಲಿಕ ನಿವೇಶನಗಳಲ್ಲಿ ಬಹುಮಟ್ಟಿಗೆ 2,00,000 ಟನ್ನುಗಳಷ್ಟು ವಿದ್ಯುತ್ ವಿಕಿರಣ ಹಿಪ್ಪೆಯು ಶೇಖರಿಸಲ್ಪಡುವುದು.
ಜಮೀನು ಪ್ರದೇಶದ ಕ್ಷಯಿಸುವಿಕೆ. ಲೋಕದ ಮೇಲ್ಮೈ ಕ್ಷೇತ್ರದ ಮೂರನೇ ಒಂದು ಭಾಗವು, ಮರುಭೂಮೀಕರಣದಿಂದ ಅಪಾಯಕ್ಕೊಡ್ಡಲ್ಪಟ್ಟಿದೆ. ಆಫ್ರಿಕದ ಕೆಲವು ಭಾಗಗಳಲ್ಲಿ, ಕೇವಲ 20 ವರ್ಷಗಳಲ್ಲಿ ಸಹಾರಾ ಮರುಭೂಮಿಯು 350 ಕಿಲೊಮೀಟರ್ಗಳಷ್ಟು ಅಭಿವೃದ್ಧಿಯಾಗಿದೆ. ಈಗಾಗಲೆ ಕೋಟಿಗಟ್ಟಲೆ ಜನರ ಜೀವನೋಪಾಯವು ಅಪಾಯಕ್ಕೊಡ್ಡಲ್ಪಡುತ್ತಿದೆ.
ನೀರಿನ ಅಭಾವ. ಸುಮಾರು ಎರಡು ಆ್ಯರಬ್ (200 ಕೋಟಿ) ಜನರು, ನಿರಂತರವಾಗಿ ನೀರಿನ ಅಭಾವವಿರುವ ಕ್ಷೇತ್ರಗಳಲ್ಲಿ ಜೀವಿಸುತ್ತಾರೆ. ಯಾವುದರ ಮೇಲೆ ಬಾವಿಗಳು ಅವಲಂಬಿಸಿವೆಯೊ, ಆ ಜಲಕುಹರಗಳ ಮುಳುಗುವಿಕೆಯ ಕಾರಣದಿಂದ, ಸಾವಿರಾರು ಬಾವಿಗಳ ಒಣಗಿಹೋಗುವಿಕೆಯು ಈ ಅಭಾವವನ್ನು ಹೆಚ್ಚಿಸುತ್ತಿದೆ.
ಅಳಿವಿನ ಅಪಾಯದಲ್ಲಿರುವ ಜಾತಿಗಳು. ಸಂಖ್ಯೆಗಳು ಹೆಚ್ಚುಕಡಿಮೆ ಅನುಮಾನಾಸ್ಪದವಾಗಿರುವುದಾದರೂ, 2000 ವರ್ಷದಷ್ಟಕ್ಕೆ ಪ್ರಾಣಿಗಳು, ಸಸ್ಯಗಳು ಮತ್ತು ಕ್ರಿಮಿಗಳ 5,00,000 ಮತ್ತು 10,00,000ದ ನಡುವಿನ ಜಾತಿಗಳು ನಿರ್ಮೂಲ ಮಾಡಲ್ಪಟ್ಟಿರುವವೆಂದು ವಿಜ್ಞಾನಿಗಳು ಅಂದಾಜು ಮಾಡುತ್ತಾರೆ.
ವಾಯುಮಂಡಲದ ಕಲುಷಿತಗೊಳಿಸುವಿಕೆ. ನಗರ ಕ್ಷೇತ್ರಗಳಲ್ಲಿ ಜೀವಿಸುವ ಒಂದು ಆ್ಯರಬ್ (100 ಕೋಟಿ) ಜನರು, ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಮಟ್ಟಗಳಲ್ಲಿ, ಗಂಧಕದ ಡೈಆಕ್ಸೈಡ್, ಸಾರಜನಕದ ಡೈಆಕ್ಸೈಡ್, ಮತ್ತು ಇಂಗಾಲದ ಮೋನೋಕ್ಸೈಡ್ಗಳಂತಹ ಮಸಿಯ ಕಣಗಳಿಗೆ ಅಥವಾ ವಿಷಭರಿತ ಅನಿಲಗಳಿಗೆ ದಿನಾಲೂ ಒಡ್ಡಲ್ಪಡುತ್ತಾರೆ, ಎಂದು 1980ಗಳ ಆರಂಭದಲ್ಲಿ ನಡೆಸಲ್ಪಟ್ಟ ಒಂದು ವಿಶ್ವ ಸಂಸ್ಥೆಯ ಅಧ್ಯಯನವು ಕಂಡುಹಿಡಿಯಿತು. ನಿಸ್ಸಂದೇಹವಾಗಿ, ಕಳೆದ ದಶಕದಲ್ಲಿನ ನಗರಗಳ ತೀವ್ರ ಬೆಳವಣಿಗೆಯು, ಈ ಸಮಸ್ಯೆಯನ್ನು ಇನ್ನೂ ಕೆಟ್ಟದ್ದಾಗಿ ಮಾಡಿದೆ. ಇದಲ್ಲದೆ, ವಾರ್ಷಿಕವಾಗಿ 24 ಆ್ಯರಬ್ (2,400 ಕೋಟಿ) ಟನ್ನುಗಳಷ್ಟು ಇಂಗಾಲದ ಡೈಆಕ್ಸೈಡ್ ವಾಯುಮಂಡಲದೊಳಕ್ಕೆ ಪಂಪ್ಮಾಡಲ್ಪಡುತ್ತಿದೆ, ಮತ್ತು ಈ “ಸಸ್ಯಾಗಾರ ಅನಿಲ”ವು ಭೌಗೋಲಿಕ ಕಾವೇರುವಿಕೆಯನ್ನು ಉತ್ಪಾದಿಸಬಹುದೆಂಬ ಭಯವಿದೆ.
[ಭೂಪಟ]
(For fully formatted text, see publication)
ಅರಣ್ಯನಾಶ
ವಿಷಕರ ಹಿಪ್ಪೆಗಳು
ವಾಯುಮಂಡಲದ ಮಾಲಿನ್ಯ
ನೀರಿನ ಅಭಾವ
ಅಪಾಯಕ್ಕೊಳಗಾಗಿರುವ ಜಾತಿಗಳು
ಜಮೀನು ಪ್ರದೇಶದ ಕ್ಷಯಿಸುವಿಕೆ
[Credit Lines]
Mountain High Maps™ copyright© 1993 Digital Wisdom, Inc.
Photo: Hutchings, Godo-Foto
Photo: Mora, Godo-Foto