ಯುವ ಜನರು ಪ್ರಶ್ನಿಸುವುದು . . .
ನನ್ನ ಅತ್ಯಾಪ್ತ ಮಿತ್ರನು ಸ್ಥಳಬಿಟ್ಟು ಹೋದದ್ದೇಕೆ?
‘ನೀನು ನಿನ್ನ ಅತ್ಯಾಪ್ತ ಮಿತ್ರನನ್ನು ಕಳೆದುಕೊಂಡಿದ್ದೀಯೊ ಎಂಬಂತೆ ತೋರುತ್ತೀ.’ ಯಾರಾದರೊಬ್ಬರು ತುಸು ದುಃಖಿತರು ಅಥವಾ ಖಿನ್ನರಾಗಿ ತೋರುವಲ್ಲಿ ಜನರು ಹೀಗೆ ಹೇಳುತ್ತಾರೆ. ಆದರೆ ನೀವು ನಿಜವಾಗಿ ನಿಮ್ಮ ಅತ್ಯಾಪ್ತ ಮಿತ್ರನನ್ನು ಕಳೆದುಕೊಂಡಿರುವಾಗ, ಆ ಹೇಳಿಕೆಗೆ ಹೆಚ್ಚಿನ ಅರ್ಥವಿರುತ್ತದೆ.
ಎಷ್ಟೆಂದರೂ, ನಿಜ ಮಿತ್ರತ್ವವು ವಿಶೇಷವೂ ಅಮೂಲ್ಯವೂ ಅದ ಒಂದು ಸಂಗತಿಯಾಗಿದೆ. ಬೈಬಲ್ ಹೇಳುವುದು: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.” (ಜ್ಞಾನೋಕ್ತಿ 17:17) ಒಳ್ಳೆಯ ಮಿತ್ರರು ನಮಗೆ ಸಾಂಗತ್ಯ ಮತ್ತು ಬೆಂಬಲವನ್ನು ಒದಗಿಸುತ್ತಾರೆ. ಅವರು ನಮಗೆ ಭಾವನಾತ್ಮಕವಾಗಿ ಮತ್ತು ಆತ್ಮಿಕವಾಗಿ ಬೆಳೆಯುವಂತೆ ಸಹಾಯಮಾಡುತ್ತಾರೆ. ಸ್ನೇಹಿತರು ಮತ್ತು ಪರಿಚಯಸ್ಥರು ಹೇರಳವಾಗಿದ್ದರೂ, ನೀವು ನಿಜವಾಗಿ ಭರವಸೆಯಿಡಬಲ್ಲ ಮತ್ತು ಅಂತರಂಗವನ್ನು ತೋಡಿಕೊಳ್ಳಬಹುದಾದ ವ್ಯಕ್ತಿಗಳು ಸಾಮಾನ್ಯವಾಗಿ ವಿರಳ.
ಆದುದರಿಂದ ನಿಮ್ಮ ಅತ್ಯಾಪ್ತ ಮಿತ್ರನು ಸ್ಥಳಬಿಟ್ಟು ಹೋಗಿರುವಲ್ಲಿ, ನಿಮಗೆ ನೆಲವೇ ಕುಸಿದಂತಹ ಅನಿಸಿಕೆಯಾಗುವುದು ಗ್ರಾಹ್ಯ. ತನ್ನ ಅತ್ಯಾಪ್ತ ಮಿತ್ರನು ಸ್ಥಳಬಿಟ್ಟು ಹೋದಾಗ, ತನಗೆ ಹೇಗನಿಸಿತೆಂಬುದನ್ನು ಬ್ರಾಯನ್ ಎಂಬ ಹೆಸರಿನ ಒಬ್ಬ ಯುವಕನು ಜ್ಞಾಪಿಸಿಕೊಂಡನು. “ನಾನು ಹೆದರಿದ್ದೆ, ಏಕಾಂಗಿಯಾಗಿದ್ದೆ ಮತ್ತು ನೊಂದವನಾಗಿದ್ದೆ,” ಎಂದು ಅವನು ಹೇಳಿದನು. ಪ್ರಾಯಶಃ ನಿಮಗೂ ಅದೇ ರೀತಿ ಅನಿಸುತ್ತದೆ.
ನೈಜತೆಯನ್ನು ಎದುರಿಸುವುದು
ನಿಮ್ಮ ಸ್ನೇಹಿತನು ಏಕೆ ಸ್ಥಳಬಿಟ್ಟು ಹೋದನೆಂಬ ಕಾರಣಗಳ ಕುರಿತಾಗಿ ಆಲೋಚಿಸುವುದು ಸಹಾಯ ಮಾಡಬಹುದು. ನಿಮ್ಮ ಮಿತ್ರತ್ವಕ್ಕಾಗಿ ಗಣ್ಯತೆಯ ಕೊರತೆಯಿಂದಾಗಿ ಅಲ್ಲವೆಂಬುದು ನಿಶ್ಚಯ. ಸ್ಥಳಾಂತರಿಸುವುದು, ಆಧುನಿಕ ಜೀವನದ ಒಂದು ಸ್ಥಾಪಿತ ಭಾಗವಾಗಿಬಿಟ್ಟಿದೆ. ಪ್ರತಿ ವರ್ಷ ಅಮೆರಿಕವೊಂದರಲ್ಲೇ, 3.6 ಕೋಟಿಗಿಂತಲೂ ಹೆಚ್ಚು ಜನರು ಸ್ಥಳಾಂತರಿಸುತ್ತಾರೆ! ಯು.ಎಸ್. ಬ್ಯೂರೊ ಆಫ್ ಸೆನ್ಸ್ಸ್ಗನುಸಾರ, ಅಮೆರಿಕದ ಸಾಮಾನ್ಯ ನಿವಾಸಿಯು, ತನ್ನ ಜೀವಮಾನಕಾಲದಲ್ಲಿ 12 ಸಲ ಸ್ಥಳಾಂತರಿಸುವನು.
ಸ್ಥಳಬಿಟ್ಟು ಹೋಗುವುದು ಏಕೆ? ಕಾರಣಗಳು ಭಿನ್ನವಾಗಿರುತ್ತವೆ. ಉತ್ತಮವಾದ ಉದ್ಯೋಗಗಳನ್ನು ಮತ್ತು ವಸತಿಯನ್ನು ಪಡೆಯಲಿಕ್ಕಾಗಿ ಅನೇಕ ಕುಟುಂಬಗಳು ಸ್ಥಳಾಂತರಿಸುತ್ತವೆ. ವರ್ಧಿಷ್ಣು ದೇಶಗಳಲ್ಲಿ, ಯುದ್ಧ ಮತ್ತು ಬಡತನವು ಕೋಟಿಗಟ್ಟಲೆ ಜನರನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿದೆ. ಮತ್ತು ಯೌವನಸ್ಥರು ಯುವ ವಯಸ್ಕರಾದಂತೆ, ಅನೇಕರು ಮನೆಬಿಟ್ಟು, ತಮ್ಮಷ್ಟಕ್ಕೆ ಜೀವಿಸಲು ಆರಿಸಿಕೊಳ್ಳುತ್ತಾರೆ. ಕೆಲವರು ವಿವಾಹವಾಗಲಿಕ್ಕಾಗಿ ಹೊರಟುಹೋಗುತ್ತಾರೆ. (ಆದಿಕಾಂಡ 2:24) ಇನ್ನೂ ಇತರರು ಆತ್ಮಿಕಾಭಿರುಚಿಗಳನ್ನು ಬೆನ್ನಟ್ಟಲು ಸ್ಥಳಾಂತರಿಸಬಹುದು. (ಮತ್ತಾಯ 19:29) ಯೆಹೋವನ ಸಾಕ್ಷಿಗಳ ನಡುವೆ ಅನೇಕರು, ಎಲ್ಲಿ ಕ್ರೈಸ್ತ ಶುಶ್ರೂಷಕರಿಗಾಗಿ ಹೆಚ್ಚಿನ ಅಗತ್ಯವಿದೆಯೊ ಆ ಕ್ಷೇತ್ರಗಳಲ್ಲಿ—ಪ್ರಾಯಶಃ ವಿದೇಶಗಳಲ್ಲೂ—ಸೇವೆಸಲ್ಲಿಸಲಿಕ್ಕಾಗಿ, ಪರಿಚಿತ ಸುತ್ತುಮುತ್ತಲಿನ ಸುಖವನ್ನು ಬಿಟ್ಟುಹೋಗುತ್ತಾರೆ. ಕೆಲವರು ತಮ್ಮ ಸ್ವದೇಶದ ಬೆತೆಲಿನಲ್ಲಿ—ಯೆಹೋವನ ಸಾಕ್ಷಿಗಳ ಕಾರ್ಯದ ಮೇಲ್ವಿಚಾರಣೆ ಮಾಡಲಿಕ್ಕಾಗಿರುವ ಸೌಕರ್ಯಗಳನ್ನು ಹೀಗೆ ಕರೆಯಲಾಗುತ್ತದೆ—ಸೇವೆಸಲ್ಲಿಸಲು ಸ್ಥಳಾಂತರಿಸುತ್ತಾರೆ. ಹೌದು, ನಾವು ನಮ್ಮ ಮಿತ್ರರನ್ನು ಎಷ್ಟೇ ಪ್ರೀತಿಸುತ್ತಿರಲಿ, ಸಮಯವು ಗತಿಸಿದಂತೆ ಅವರು ಪ್ರಾಯಶಃ ಸ್ಥಳಾಂತರಿಸುವರೆಂಬುದನ್ನು ನಾವು ಜೀವನದ ಒಂದು ವಾಸ್ತವಾಂಶದೋಪಾದಿ ದೃಷ್ಟಿಸತಕ್ಕದ್ದು.
ನಿಮ್ಮ ಮಿತ್ರನು ಸ್ಥಳಬಿಟ್ಟು ಹೋದದ್ದಕ್ಕೆ ಕಾರಣವು ಏನೇ ಆಗಿರಲಿ, ಆ ನಷ್ಟದಿಂದ ಚೇತರಿಸಿಕೊಳ್ಳುವುದಾದರೂ ಹೇಗೆಂದು ನೀವು ಸೋಜಿಗಪಡಬಹುದು. ಆದರೆ ಸ್ವಲ್ಪ ಸಮಯಕ್ಕಾಗಿ ಸ್ವಲ್ಪ ಏಕಾಂಗಿಯಾದ ಮತ್ತು ಖಿನ್ನರಾಗಿರುವ ಅನಿಸಿಕೆಯಾಗುವುದು ಸ್ವಾಭಾವಿಕವಾಗಿರುವಾಗ, ಮನೆಯಲ್ಲಿ ಮಂಕುಹಿಡಿದವರಾಗಿ ಕುಳಿತುಕೊಳ್ಳುವುದು, ವಿಷಯಗಳನ್ನು ಒಂದಿಷ್ಟೂ ಉತ್ತಮಗೊಳಿಸದೆಂಬುದನ್ನು ನೀವು ಬಹುಶಃ ಅರಿಯುವಿರಿ. (ಜ್ಞಾನೋಕ್ತಿ 18:1) ಆದುದರಿಂದ ಸಹಾಯಮಾಡಸಾಧ್ಯವಿರುವ ಕೆಲವೊಂದು ವಿಷಯಗಳ ಕಡೆಗೆ ನಾವು ನೋಡೋಣ.
ಸಂಪರ್ಕವನ್ನಿಡುವುದು
“ನಿಮ್ಮ ಮಿತ್ರತ್ವವು ಕೊನೆಗೊಂಡಿಲ್ಲವೆಂಬುದನ್ನು ಅರಿತುಕೊಳ್ಳಿರಿ,” ಎಂದು ಯುವ ಬ್ರಾಯನ್ ಬುದ್ಧಿಹೇಳಿದನು. ಹೌದು, ನಿಮ್ಮ ಅತ್ಯಾಪ್ತ ಮಿತ್ರನು ಸ್ಥಳಬಿಟ್ಟು ಹೋಗಿರುವುದು ಖಂಡಿತವಾಗಿಯೂ ನಿಮ್ಮ ಸಂಬಂಧವನ್ನು ಬದಲಾಯಿಸುವುದು, ಆದರೆ ನಿಮ್ಮ ಮಿತ್ರತ್ವವು ನಿಂತುಹೋಗಬೇಕೆಂಬುದನ್ನು ಇದು ಅರ್ಥೈಸುವುದಿಲ್ಲ. ಹದಿವಯಸ್ಕ ಸಲಹೆಗಾರರಾದ ಡಾ. ರೋಸ್ಮರಿ ವೈಟ್ ಹೇಳಿದ್ದು: “ಜೀವಿತದ ಯಾವುದೇ ಹಂತದಲ್ಲಿ ನಷ್ಟವು ತುಂಬ ಕಷ್ಟಕರವಾಗಿರುತ್ತದೆ. ಆದರೆ ಅದು ಒಂದು ಬದಲಾವಣೆ ಮಾತ್ರ, ಅಂತ್ಯಗತಿಯಲ್ಲ ಎಂದು ಅದರ ಕುರಿತಾಗಿ ಯೋಚಿಸುವುದೇ, ಅದನ್ನು ನಿರ್ವಹಿಸುವ ವಿಧವಾಗಿದೆ.”
ಮಿತ್ರತ್ವದ ಬಾಗಿಲನ್ನು ತೆರೆದಿಡಲು ನೀವೇನು ಮಾಡಬಲ್ಲಿರಿ? ದಾವೀದ ಮತ್ತು ಯೋನಾತಾನರ ಕುರಿತಾದ ಬೈಬಲ್ ವೃತ್ತಾಂತವನ್ನು ಪರಿಗಣಿಸಿರಿ. ಗಣನೀಯವಾದ ವಯಸ್ಸಿನ ಅಂತರದ ಹೊರತೂ, ಅವರು ಮಿತ್ರರಲ್ಲೇ ಅತ್ಯಾಪ್ತರಾದ ಮಿತ್ರರಾಗಿದ್ದರು. ದಾವೀದನು ದೇಶಬಿಟ್ಟು ಓಡಿಹೋಗುವಂತೆ ಪರಿಸ್ಥಿತಿಗಳು ಒತ್ತಾಯಿಸಿದಾಗ, ಅವರು ಮಾತನ್ನಾಡದೇ ಅಗಲಲಿಲ್ಲ. ವ್ಯತಿರಿಕ್ತವಾಗಿ, ಅವರು ತಮ್ಮ ಶಾಶ್ವತವಾದ ಮಿತ್ರತ್ವವನ್ನು ದೃಢೀಕರಿಸುತ್ತಾ, ಮಿತ್ರರಾಗಿ ಉಳಿಯಲು ಒಂದು ಒಡಂಬಡಿಕೆ ಅಥವಾ ಒಪ್ಪಂದವನ್ನು ಮಾಡಿದರು.—1 ಸಮುವೇಲ 20:42.
ತದ್ರೀತಿಯಲ್ಲಿ, ನಿಮ್ಮ ಮಿತ್ರನು ಹೊರಡುವ ಮುಂಚೆ ನೀವು ಅವನೊಂದಿಗೆ ಅಥವಾ ಅವಳೊಂದಿಗೆ ಮಾತಾಡಬಹುದು. ನೀವು ಆ ಮಿತ್ರತ್ವವನ್ನು ಎಷ್ಟು ಅಮೂಲ್ಯವೆಂದೆಣಿಸುತ್ತೀರಿ ಮತ್ತು ಸಂಪರ್ಕವನ್ನಿಡಲು ಎಷ್ಟು ಬಯಸುತ್ತೀರೆಂಬುದನ್ನು ನಿಮ್ಮ ಮಿತ್ರನಿಗೆ ತಿಳಿಸಿರಿ. ಈಗ 8,000 ಕಿಲೊಮೀಟರುಗಳ ನೆಲ ಮತ್ತು ಸಮುದ್ರದಿಂದ ಅಗಲಿಸಲ್ಪಟ್ಟಿರುವ, ಅತ್ಯಾಪ್ತ ಮಿತ್ರರಾದ ಪ್ಯಾಟಿ ಮತ್ತು ಮೆಲೀನಾ, ಅದನ್ನೇ ಮಾಡಿದರು. “ನಾವು ಸಂಪರ್ಕವನ್ನಿಡಲು ಯೋಜಿಸುತ್ತಿದ್ದೇವೆ,” ಎಂದು ಪ್ಯಾಟಿ ವಿವರಿಸಿದಳು. ಹಾಗಿದ್ದರೂ, ನೀವು ನಿಶ್ಚಿತವಾದ ಏರ್ಪಾಡುಗಳನ್ನು ಮಾಡದಿರುವಲ್ಲಿ, ಅಂತಹ ಯೋಜನೆಗಳು ತಡವರಿಸಬಹುದು.—ಆಮೋಸ 3:3ನ್ನು ಹೋಲಿಸಿರಿ.
ಅಪೊಸ್ತಲ ಯೋಹಾನನು ತನ್ನ ಮಿತ್ರನಾದ ಗಾಯನನ್ನು ನೋಡಲು ಅಶಕ್ತನಾಗಿದ್ದಾಗ, ‘ಮಸಿ ಲೇಖಣಿಗಳನ್ನು ತೆಗೆದುಕೊಂಡು ಅವನಿಗೆ ಬರೆಯು’ತ್ತಿದ್ದನೆಂದು ಬೈಬಲ್ ನಮಗೆ ಹೇಳುತ್ತದೆ. (3 ಯೋಹಾನ 13) ಕ್ರಮವಾಗಿ, ಪ್ರಾಯಶಃ ವಾರಕ್ಕೊಮ್ಮೆ, ಅಥವಾ ತಿಂಗಳಿಗೊಮ್ಮೆ ಪರಸ್ಪರ ಒಂದು ಪತ್ರವನ್ನೊ ಕಾರ್ಡನ್ನೊ ಕಳುಹಿಸುವಂತೆಯೂ ನೀವು ಒಪ್ಪಿಕೊಳ್ಳಬಹುದು. ಮತ್ತು ನಿಮ್ಮ ಹೆತ್ತವರಿಗೆ ದೂರ ಅಂತರದ ಫೋನ್ ಬಿಲ್ಗಳ ಕುರಿತಾಗಿ ಅಭ್ಯಂತರವಿಲ್ಲದಿರುವಲ್ಲಿ, ನೀವು ಪ್ರಾಯಶಃ ಆಗಿಂದಾಗ್ಗೆ ಒಬ್ಬರು ಇನ್ನೊಬ್ಬರೊಂದಿಗೆ ಮಾತಾಡಿ, ನಿಮ್ಮ ಜೀವಿತಗಳಲ್ಲಿನ ಇತ್ತೀಚಿನ ಆಗುಹೋಗುಗಳ ಕುರಿತಾಗಿ ಮಾಹಿತಿ ಪಡೆದುಕೊಳ್ಳಬಹುದು. ಅಥವಾ, ಕ್ಯಾಸೆಟ್ ಅಥವಾ ವೀಡಿಯೊ ಟೇಪಿನಲ್ಲಿ ರೆಕಾರ್ಡ್ಮಾಡಲ್ಪಟ್ಟ ಸಂದೇಶಗಳನ್ನು ಒಬ್ಬರಿಗೊಬ್ಬರು ಕಳುಹಿಸಲು ನೀವು ಒಪ್ಪಬಹುದು. ಭವಿಷ್ಯತ್ತಿನಲ್ಲಿ, ಒಂದು ವಾರಾಂತ್ಯದ ಭೇಟಿ ಅಥವಾ ಜೊತೆಯಾಗಿ ರಜೆಕಾಲವನ್ನು ಕಳೆಯುವಂತೆ ಏರ್ಪಡಿಸಲೂ ಸಾಧ್ಯವಾಗಬಹುದು. ಹೀಗೆ ಮಿತ್ರತ್ವವು ಏಳಿಗೆಹೊಂದುತ್ತಾ ಮುಂದುವರಿಯಸಾಧ್ಯವಿದೆ.
ಶೂನ್ಯತೆಯನ್ನು ತುಂಬಿಸುವುದು
ಹಾಗಿರುವಲ್ಲಿಯೂ, ಒಬ್ಬ ಅತ್ಯಾಪ್ತ ಮಿತ್ರನ ನಿರ್ಗಮನವು ನಿಮ್ಮ ಜೀವಿತದಲ್ಲಿ ಒಂದು ಶೂನ್ಯತೆಯನ್ನು ಬಿಟ್ಟುಹೋಗುವುದು. ಫಲಸ್ವರೂಪವಾಗಿ, ನಿಮಗೆ ಹೆಚ್ಚು ಸಮಯವಿರುವುದನ್ನು ನೀವು ಕಂಡುಕೊಳ್ಳಬಹುದು. ಒಳ್ಳೇದು, ಆ ಸಮಯವು ವ್ಯರ್ಥವಾಗುವಂತೆ ಬಿಡಬೇಡಿರಿ. (ಎಫೆಸ 5:16) ಉತ್ಪನ್ನದಾಯಕವಾಗಿರುವ ಒಂದು ವಿಷಯವನ್ನು ಮಾಡಲು ಅದನ್ನು ಉಪಯೋಗಿಸಿರಿ. ಪ್ರಾಯಶಃ ನೀವು ಒಂದು ಸಂಗೀತ ಉಪಕರಣವನ್ನು ನುಡಿಸಲು, ಒಂದು ಹೊಸ ಭಾಷೆಯನ್ನು ಕಲಿಯಲು, ಅಥವಾ ಒಂದು ಹವ್ಯಾಸವನ್ನು ಬೆನ್ನಟ್ಟಲು ಕಲಿಯಸಾಧ್ಯವಿದೆ. ಅಗತ್ಯದಲ್ಲಿರುವವರಿಗಾಗಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುವುದು, ಸಮಯದ ಇನ್ನೊಂದು ಉತ್ಪನ್ನಕಾರಿ ಉಪಯೋಗವಾಗಿದೆ. ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿರುವಲ್ಲಿ, ಸಾರ್ವಜನಿಕ ಸಾರುವಿಕೆಯ ಚಟುವಟಿಕೆಯಲ್ಲಿನ ನಿಮ್ಮ ಪಾಲನ್ನು ಹೆಚ್ಚಿಸಬಲ್ಲಿರಿ. (ಮತ್ತಾಯ 24:14) ಅಥವಾ ನೀವು ಒಂದು ಆಸಕ್ತಿಕರ ಬೈಬಲ್ ಅಧ್ಯಯನ ಕಾರ್ಯಯೋಜನೆಯನ್ನು ಆರಂಭಿಸಬಲ್ಲಿರಿ.
ಇನ್ನೂ ಹೆಚ್ಚಾಗಿ, ಅಪೊಸ್ತಲ ಪೌಲನು ಕೊರಿಂಥದಲ್ಲಿನ ಕ್ರೈಸ್ತರಿಗೆ “ವಿಶಾಲವಾಗು”ವಂತೆ—ಅಂದರೆ, ತಮ್ಮ ಸ್ನೇಹಿತರ ಗುಂಪಿನಲ್ಲಿ ಇತರರನ್ನು ಸೇರಿಸಿಕೊಳ್ಳುವಂತೆ ಸಲಹೆಯನ್ನಿತ್ತನು. (2 ಕೊರಿಂಥ 6:13) ಪ್ರಾಯಶಃ ನೀವು ಒಬ್ಬ ಸ್ನೇಹಿತನೊಂದಿಗೇ ತುಂಬ ಹೊತ್ತು ಕಳೆದು, ಇತರ ಸಂಭಾವ್ಯ ಮಿತ್ರತ್ವಗಳನ್ನು ಕಡೆಗಣಿಸಿದ್ದೀರಿ. ಯೆಹೋವನ ಸಾಕ್ಷಿಗಳಲ್ಲಿ ಯುವಕರು, ತಮ್ಮ ಸ್ಥಳಿಕ ಸಭೆಗಳಲ್ಲೇ ಅನೇಕ ಅವಕಾಶಗಳಿರುವುದನ್ನು ಕಂಡುಕೊಳ್ಳುತ್ತಾರೆ. ಆದುದರಿಂದ ಸಭಾ ಕೂಟಗಳಿಗೆ ಬೇಗನೆ ಬಂದು, ಕೂಟಗಳ ನಂತರ ಸ್ವಲ್ಪ ಹೊತ್ತು ಉಳಿಯಲು ಪ್ರಯತ್ನಿಸಿರಿ. ಇದು ನಿಮಗೆ ಜನರನ್ನು ತಿಳಿದುಕೊಳ್ಳಲು ಹೆಚ್ಚು ಸಮಯವನ್ನು ಕೊಡುವುದು. ಕ್ರೈಸ್ತ ಅಧಿವೇಶನಗಳು ಮತ್ತು ಚಿಕ್ಕ ಸಂತೋಷ ಕೂಟಗಳು, ಹೊಸ ಮಿತ್ರರನ್ನು ಮಾಡಿಕೊಳ್ಳಲು ಇತರ ಅವಕಾಶಗಳನ್ನು ಒದಗಿಸುತ್ತವೆ.
ಆದರೆ ಎಚ್ಚರಿಕೆಯ ಒಂದು ಮಾತು ಸೂಕ್ತ: ನಿಮ್ಮ ಆತ್ಮಿಕ ಗುರಿಗಳು ಮತ್ತು ಮೌಲ್ಯಗಳಲ್ಲಿ ಭಾಗಿಗಳಾಗದ ಯುವ ಜನರೊಂದಿಗೆ ನಿಕಟವಾಗಿ ಸಹವಾಸಿಸಲು ಆರಂಭಿಸುವಷ್ಟರ ಮಟ್ಟಿಗೆ, ಹೊಸ ಮಿತ್ರರನ್ನು ಮಾಡಿಕೊಳ್ಳುವ ತರಾತುರಿಯಲ್ಲಿರಬೇಡಿರಿ. ಅಂತಹವರು ನಿಮ್ಮನ್ನು ಕೆಡವಿ, ಒಳಿತಿಗಿಂತ ಹೆಚ್ಚು ಹಾನಿಯನ್ನು ಮಾಡಸಾಧ್ಯವಿದೆ. (ಜ್ಞಾನೋಕ್ತಿ 13:20; 1 ಕೊರಿಂಥ 15:33) ಒಳ್ಳೆಯ ನಡತೆಗಾಗಿ ಪ್ರಖ್ಯಾತರಾಗಿರುವ ಆತ್ಮಿಕ ಮನಸ್ಸಿನ ಯುವ ಜನರೊಂದಿಗೆ ಅಂಟಿಕೊಳ್ಳಿರಿ.
ನೀವು ಅಂತಹವರೊಬ್ಬರನ್ನು ಕಂಡುಕೊಂಡಾಗ, ಯಾವುದೊ ವಿಷಯವನ್ನು ಜೊತೆಯಾಗಿ ಮಾಡಲು ಯೋಜಿಸುವ ಮೂಲಕ ಆ ಮಿತ್ರತ್ವನ್ನು ಬೆಳೆಸಿರಿ. ಒಟ್ಟಿಗೆ ಊಟಮಾಡಿರಿ. ಒಂದು ವಸ್ತುಸಂಗ್ರಹಾಲಯಕ್ಕೆ ಭೇಟಿನೀಡಿರಿ. ಸ್ವಲ್ಪ ನಡೆದಾಡಿಕೊಂಡು ಬನ್ನಿರಿ. ದೇವರ ರಾಜ್ಯದ ಸುವಾರ್ತೆಯನ್ನು ಸಾರಲಿಕ್ಕಾಗಿ ಜನರನ್ನು ಸಂದರ್ಶಿಸುತ್ತಾ, ಕ್ರೈಸ್ತ ಶುಶ್ರೂಷೆಯಲ್ಲಿ ಜೊತೆಯಾಗಿ ಒಂದು ದಿನವನ್ನು ಕಳೆಯಲು ಏರ್ಪಡಿಸಿರಿ. ಸಮಯ ಮತ್ತು ಪ್ರಯತ್ನದೊಂದಿಗೆ, ಆ ಹೊಸ ಮಿತ್ರತ್ವವು ಬೆಳೆಯಬಲ್ಲದು. ಕ್ರೈಸ್ತ ಪ್ರೀತಿಯು ವಿಸ್ತಾರವಾಗುವುದರಿಂದ—ಅದು, ಇತರರನ್ನು ಒಳಗೂಡಿಸಲು ‘ವಿಶಾಲಗೊಳ್ಳುತ್ತದೆ’—ನೀವು ಹೊಸ ಮಿತ್ರರನ್ನು ಮಾಡಿಕೊಳ್ಳುವಾಗ, ಸ್ಥಳಬಿಟ್ಟು ಹೋಗಿರುವ ನಿಮ್ಮ ಮಿತ್ರನಿಗೆ ನೀವು ನಿಷ್ಠಾಹೀನರಾಗಿದ್ದೀರೆಂದು ನಿಮಗೆ ಅನಿಸುವ ಅಗತ್ಯವಿಲ್ಲ.
ನಿಮ್ಮನ್ನು ಅತಿ ಹೆಚ್ಚಾಗಿ ಪ್ರೀತಿಸುವವರಾಗಿರುವ ನಿಮ್ಮ ಹೆತ್ತವರಿಗೆ ಹೆಚ್ಚು ನಿಕಟರಾಗಲೂ ನೀವು ಆ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅವರ ಸಹವಾಸಕ್ಕಾಗಿ ಪ್ರಯತ್ನಿಸುವುದು ಆರಂಭದಲ್ಲಿ ನಿಮಗೆ ಮುಜುಗರದ್ದಾಗಿ ಅನಿಸಬಹುದಾದರೂ, ಅವರು ನಿಮಗೆ ತುಂಬ ಸಹಾಯಮಾಡಬಲ್ಲರು. ಜೋಷ್ ಎಂಬ ಹೆಸರಿನ ಒಬ್ಬ ಯುವಕನು ಹೇಳಿದ್ದು: “ಅವರೊಂದಿಗೆ ಸಮಯವನ್ನು ಕಳೆಯಲಿಕ್ಕಾಗಿ ನಾನು ಬಹುಮಟ್ಟಿಗೆ ನನ್ನನ್ನೇ ಒತ್ತಾಯಿಸಬೇಕಾಯಿತು, ಯಾಕಂದರೆ ನಾನು ಆ ಸಮಯದಲ್ಲಿ ನನ್ನ ಅಮ್ಮ ಅಥವಾ ಅಪ್ಪನೊಂದಿಗೆ ಆಪ್ತನಾಗಿರಲಿಲ್ಲ. ಆದರೆ ಈಗ ಅವರು ನನ್ನ ಅತಿ ಆಪ್ತ ಮಿತ್ರರಾಗಿದ್ದಾರೆ!”
ಸ್ವರ್ಗದಲ್ಲಿ ನಿಮಗೆ ಇನ್ನೂ ಒಬ್ಬ ಮಿತ್ರನಿದ್ದಾನೆಂಬುದನ್ನೂ ಜ್ಞಾಪಿಸಿಕೊಳ್ಳಿರಿ. 13 ವರ್ಷ ಪ್ರಾಯದ ಡಾನ್ ಅದನ್ನು ಹೇಳಿದಂತೆ, “ನೀವು ನಿಜವಾಗಿ ಏಕಾಂಗಿಯಾಗಿಲ್ಲ, ಯಾಕಂದರೆ ನಿಮಗಿನ್ನೂ ಯೆಹೋವನಿದ್ದಾನೆ.” ನಮ್ಮ ಸ್ವರ್ಗೀಯ ತಂದೆಯು ಯಾವಾಗಲೂ ಪ್ರಾರ್ಥನೆಯ ಮೂಲಕ ನಮಗೆ ಲಭ್ಯವಾಗಿದ್ದಾನೆ. ನೀವು ಆತನಲ್ಲಿ ಭರವಸೆಯಿಡುವಲ್ಲಿ, ಈ ಕಷ್ಟಕರ ಪರಿಸ್ಥಿತಿಯನ್ನು ನಿಭಾಯಿಸುವಂತೆ ಆತನು ನಿಮಗೆ ಸಹಾಯಮಾಡುವನು.—ಕೀರ್ತನೆ 55:22.
ಒಂದು ಸಕಾರಾತ್ಮಕ ಹೊರನೋಟವನ್ನಿಡಿರಿ
ವಿವೇಕಿ ರಾಜನಾದ ಸೊಲೊಮೋನನು ಈ ಬುದ್ಧಿವಾದವನ್ನು ಕೊಟ್ಟನು: “ಹಿಂದಿನ ಕಾಲವು ಈ ಕಾಲಕ್ಕಿಂತ ಮೇಲಾದದ್ದಕ್ಕೆ ಕಾರಣವೇನು ಅನ್ನಬೇಡ.” (ಪ್ರಸಂಗಿ 7:10) ಬೇರೆ ಮಾತುಗಳಲ್ಲಿ ಹೇಳುವುದಾದರೆ, ಗತಕಾಲದ ಕುರಿತಾಗಿ ಯೋಚಿಸುತ್ತಾ ಕುಳಿತುಕೊಳ್ಳಬೇಡಿರಿ; ಪ್ರಸ್ತುತಕಾಲದ ಎಲ್ಲಾ ಅವಕಾಶಗಳೊಂದಿಗೆ ಅದರ ಲಾಭವನ್ನು ಪಡೆಯಿರಿ. ಈಗ ತನ್ನ 20ಗಳ ಆರಂಭದಲ್ಲಿರುವ ಬಿಲ್, ತನ್ನ ಅತ್ಯಾಪ್ತ ಮಿತ್ರನನ್ನು ಕಳೆದುಕೊಂಡಾಗ, ಅದನ್ನೇ ಮಾಡಿದನು. ಅವನು ಜ್ಞಾಪಿಸಿಕೊಂಡದ್ದು: “ಸ್ವಲ್ಪ ಸಮಯದ ನಂತರ ನಾನು ಹೊಸ ಮಿತ್ರರನ್ನು ಮಾಡಿಕೊಳ್ಳಲಾರಂಭಿಸಿದೆ ಮತ್ತು ಗತಕಾಲದ ಕುರಿತಾಗಿ ಅಷ್ಟು ಯೋಚಿಸುತ್ತಾ ಕುಳಿತುಕೊಳ್ಳಲಿಲ್ಲ. ನಾನು ಭವಿಷ್ಯತ್ತಿಗಾಗಿ ತಯಾರಿಸಲು ಮತ್ತು ಪ್ರಸ್ತುತ ಕಾಲದಲ್ಲಿ ಜೀವಿಸಲು ಪ್ರಯತ್ನಿಸಿದೆ.”
ಈ ಸಲಹೆಗಳು ಸಹಾಯಮಾಡಬಹುದು, ಆದರೂ ಒಬ್ಬ ಅತ್ಯಾಪ್ತ ಮಿತ್ರನು ಸ್ಥಳಾಂತರಿಸುವಾಗ ಅದು ಇನ್ನೂ ದುಃಖಕರವಾಗಿರುತ್ತದೆ. ನೀವು ಜೊತೆಯಾಗಿ ಆನಂದಿಸಿದ ಸುಸಮಯಗಳ ಸ್ಮರಣೆಗಳು, ಇನ್ನು ಮುಂದೆ ನಿಮಗೆ ನೋವನ್ನುಂಟುಮಾಡದಿರುವ ತನಕ ಸ್ವಲ್ಪ ಸಮಯ ಗತಿಸಬಹುದು. ಬದಲಾವಣೆಯು ಜೀವನದ ಒಂದು ಭಾಗವಾಗಿದೆ ಮತ್ತು ಅದು ನಿಮಗೆ ಪ್ರೌಢರಾಗಲು ಹಾಗೂ ಬೆಳೆಯಲು ಒಂದು ಅವಕಾಶವನ್ನು ಒದಗಿಸುತ್ತದೆಂಬುದನ್ನು ನೆನಪಿಡಿರಿ ಅಷ್ಟೇ. ಒಬ್ಬ ವಿಶೇಷ ಮಿತ್ರನನ್ನು ಸಂಪೂರ್ಣವಾಗಿ ಸ್ಥಾನಭರ್ತಿಮಾಡುವುದು ಸಾಧ್ಯವಿಲ್ಲದಿರುವಂತೆ ತೋರಬಹುದಾದರೂ, “ಯೆಹೋವನ ಮತ್ತು ಮನುಷ್ಯರ ದೃಷ್ಟಿಕೋನದಿಂದ ಪ್ರಿಯ”ರಾಗುವಂತೆ ಮಾಡುವಂತಹ ಗುಣಗಳನ್ನು ನೀವು ವಿಕಸಿಸಿಕೊಳ್ಳಸಾಧ್ಯವಿದೆ. (1 ಸಮುವೇಲ 2:26, NW) ನೀವದನ್ನು ಮಾಡುವಾಗ, ನಿಮ್ಮ ಮಿತ್ರನೆಂದು ಕರೆಯಲು ನಿಮಗೆ ಯಾವಾಗಲೂ ಯಾರಾದರೊಬ್ಬರು ಇರುವರು!
[ಪುಟ 32 ರಲ್ಲಿರುವ ಚಿತ್ರ]
ನಿಮ್ಮ ಅತ್ಯಾಪ್ತ ಮಿತ್ರನಿಗೆ ವಿದಾಯ ಹೇಳುವುದು ಒಂದು ನೋವುಭರಿತ ಅನುಭವವಾಗಿದೆ