‘ನದಿಯ ನೇತ್ರಗಳ’ ಕುರಿತು ಎಚ್ಚರಿಕೆಯಿಂದಿರ್ರಿ!
ಆಸ್ಟ್ರೇಲಿಯದ ಎಚ್ಚರ! ಸುದ್ದಿಗಾರರಿಂದ
ಬಿಡುವಿನ ಸಮಯದಲ್ಲಿ ಸಾಹಸಿಯೊಬ್ಬಳು ಆಸ್ಟ್ರೇಲಿಯದ ಉತ್ತರ ಕ್ಷೇತ್ರದಲ್ಲಿರುವ, ಕಕಡೂ ನ್ಯಾಷನಲ್ ಪಾರ್ಕ್ನ ವೆಟ್ಲೆಂಡ್ ವಂಡರ್ನಲ್ಲಿ ಈಸ್ಟ್ ಆ್ಯಲಿಗೇಟರ್ ರಿವರ್ನ (ಮೊಸಳೆ ನದಿ) ಉಪನದಿಯೊಂದರ ಉದ್ದಕ್ಕೂ ತನ್ನ ಕಿರುದೋಣಿಯನ್ನು ನಿಶ್ಶಬ್ದವಾಗಿ ಹುಟ್ಟು ಹಾಕುತ್ತಿದ್ದಳು. ಹಠಾತ್ತನೆ, ಕೊಚ್ಚಿಕೊಂಡು ಬಂದ ಹಾನಿರಹಿತವಾದ ಕಟ್ಟಿಗೆಯ ತುಂಡೆಂದು ಆಕೆ ಯಾವುದರ ಕುರಿತು ನೆನೆಸಿದಳೋ, ಅದು ಆಕೆಯ ಕಿರುದೋಣಿಯನ್ನು ಬಡಿಯಲು ಪ್ರಾರಂಭಿಸಿತು. ಅದು ಭೀತಿಕಾರಕವಾದೊಂದು ಉಪ್ಪುನೀರಿನ ಮೊಸಳೆಯಾಗಿತ್ತು, ಮತ್ತು ಆ ಪ್ರವಾಸಿಯು ವರ್ಷದ ಅತ್ಯಂತ ಅಪಾಯಕಾರಿಯದ ಸಮಯದಲ್ಲಿ ಅದರ ನಿಷ್ಕರ್ಷಿಸಲ್ಪಟ್ಟ ಕ್ಷೇತ್ರದಲ್ಲಿ ತನ್ನನ್ನು ಕಂಡುಕೊಂಡಳು.
ಮೈಮರೆತವಳಾಗಿ, ಅವಳು ಮರಗಳ ಒಂದು ಗುಂಪಿನೆಡೆಗೆ ಹುಟ್ಟು ಹಾಕಿದಳು. ಅವಳು ಕಿರುದೋಣಿಯಿಂದ ಮೊದಲ ಕೊಂಬೆಗಳ ಮೇಲೆ ಕಾಲಿಟ್ಟಂತೆ, ಮೊಸಳೆಯು ನೀರಿನಿಂದ ಹೊರಬಂದು, ಅವಳನ್ನು ಪುನಃ ಕೆಳಕ್ಕೆ ಎಳೆದು ಒಟ್ಟು ಮೂರು ಬಾರಿ ಅವಳನ್ನು ಉರುಳಿಸಿತು. ಪ್ರತಿ ಸಲ ಮೊಸಳೆ ತನ್ನ ಹಿಡಿತವನ್ನು ಬದಲಾಯಿಸಿದಂತೆ, ಆ ಸ್ತ್ರೀ ಕೆಸರು ತುಂಬಿದ ನದಿತೀರವನ್ನು ಹತ್ತಲು ಅವಿರತ ಪ್ರಯತ್ನವನ್ನು ಮಾಡಿದಳು. ಮೂರನೆಯ ಯತ್ನದಲ್ಲಿ ಅವಳು, ಸಹಾಯಕ್ಕಾಗಿ ತನ್ನ ಹತಾಶ ಕೂಗುವಿಕೆಗಳನ್ನು ವನರಕ್ಷಕನೊಬ್ಬನು ಕೇಳಿಸಿಕೊಳ್ಳುವ ತನಕ ತನ್ನನ್ನೇ ಒಂದು ಮೈಲಿಯ ವರೆಗೆ ಎಳೆದುಕೊಂಡು ಹೋಗುತ್ತಾ, ತೀರವನ್ನೇರಶಕ್ತಳಾದಳು. ಭೀಷಣವಾದ ಗಾಯಗಳ ಹೊರತೂ ಆ ಸ್ತ್ರೀ ಬದುಕಿ ಉಳಿದಳು.
ಈ ಸನ್ನಿಹಿತ ದುರಂತವು 1985ರಲ್ಲಿ ಸಂಭವಿಸಿತು. ಎರಡು ವರ್ಷಗಳ ಅನಂತರ ಅಮೆರಿಕದ ಒಬ್ಬ ಪ್ರವಾಸಿ ನಿರ್ಭಾಗ್ಯೆಯಾಗಿದ್ದಳು. ಸಂಗಾತಿಗಳಿಂದ ಕೊಡಲ್ಪಟ್ಟ ಎಚ್ಚರಿಕೆಗಳನ್ನು ಅವಳು ಕಡೆಗಣಿಸಿ ಪಶ್ಚಿಮ ಆಸ್ಟ್ರೇಲಿಯದ, ಮೊಸಳೆಯಿಂದ ತುಂಬಿರುವ ಪ್ರಿನ್ಸ್ ರೇಜೆಂಟ್ ನದಿಯಲ್ಲಿ ಈಜಲು ನಿರ್ಧರಿಸಿದಳು. ಅವಳು ಉಪ್ಪುನೀರಿನ ಮೊಸಳೆಯೊಂದರಿಂದ ಆಕ್ರಮಿಸಲ್ಪಟ್ಟು ಕೊಲ್ಲಲ್ಪಟ್ಟಳು. ನೀರಿನಲ್ಲಿ ಮರಿ ಮೊಸಳೆಗಳಿದ್ದವೆಂದು ತೋರಿಸುವ ವರದಿಗಳು, ಪ್ರಾಯಶಃ ಹೆಣ್ಣು ಮೊಸಳೆಯೊಂದು ತನ್ನ ಮರಿಗಳನ್ನು ರಕ್ಷಿಸುತ್ತಿತ್ತು ಎಂಬುದನ್ನು ಸೂಚಿಸುತ್ತವೆ.
ಪ್ರಾಣಾಂತಕ ‘ನದಿಯ ನೇತ್ರಗಳು’
ಅಳಿವೆಯ ಬೆಸ್ತನೊಬ್ಬನು ತಿಂಗಳ ಬೆಳಕಿನಲ್ಲಿ ಕಾಣುವಂಥದ್ದು ಗಾಜಿನಂಥ ನೀರಿನ ಮೇಲೆ ಕೀಟವೊಂದು ಇಳಿಯುವಾಗ ಆಗುವ ನೀರಿನ ಕದಡುವಿಕೆಯ ಪರಿಣಾಮವನ್ನು ಮಾತ್ರ. ಹಾಗೆಯೇ, ಬಹು ದೂರದಲ್ಲಿರುವ ಉತ್ತರ ಆಸ್ಟ್ರೇಲಿಯದಲ್ಲಿನ ಬೆಸ್ತನು, ಅದೃಶ್ಯವಾದ—‘ನದಿಯ ನೇತ್ರಗಳ’ ಕುರಿತು ಸದಾ ಎಚ್ಚರವುಳ್ಳವನಾಗಿದ್ದಾನೆ. ತನ್ನ ವಿದ್ಯುತ್ಪಂಜನ್ನು ಅವನು ಪ್ರಕಾಶಿಸಿದರೆ, ನೀರಿನ ಮೇಲ್ಮೈಯಿಂದ ನಿಶ್ಶಬ್ದವಾಗಿ ಹೊರಬರುವ ಮೊಸಳೆಯ ನೇತ್ರಗಳು ಹೊಳೆಯುವ ಹೊಂಬಣ್ಣದಿಂದ ಪ್ರಜ್ವಲಿಸುವುದು. ಕೊಂದು ತಿನ್ನುವವನ ಒಂದು ಪುರಾತನ ಕ್ಷೇತ್ರವನ್ನು ಅವನು ಒಳನುಗ್ಗಿದ್ದಾನೆ.
ಬೇರೆ ಸ್ಥಳದಲ್ಲೂ ಕಾಣಸಿಗುವ, ಆಸ್ಟ್ರೇಲಿಯದ ಉಪ್ಪುನೀರಿನ ಮೊಸಳೆಯು, ಲೋಕದ 12 ಮೊಸಳೆ ಜಾತಿಗಳಲ್ಲಿ ಅತ್ಯಂತ ದೊಡ್ಡದೂ ಅತ್ಯಂತ ಅಪಾಯಕಾರಿಯೂ ಆದ ಮೊಸಳೆಗಳಲ್ಲಿ ಒಂದಾಗಿದೆ. ನೀಳದಲ್ಲಿ ಅದು ಏಳು ಮೀಟರುಗಳಷ್ಟು ಬೆಳೆಯಬಲ್ಲದು. ಶಂಕಿಸದ ಬೇಟೆ ಪ್ರಾಣಿಯು, ಅದರ ಥಟ್ಟನೆ ಮುನ್ನುಗ್ಗುವ ಆಕ್ರಮಣ ಮತ್ತು ಕುಖ್ಯಾತ ಪ್ರಾಣಾಂತಕ ಮುಳುಗಿಸುವಿಕೆಯ ತಂತ್ರದಿಂದ ತಪ್ಪಿಸಿಕೊಳ್ಳಲು, ಆ ಮಿನುಗುವ ನೇತ್ರಗಳನ್ನು ತುಂಬ ತಡವಾಗಿ ನೋಡುತ್ತದೆ. ಎಮ್ಮೆ, ಗೋವು, ಮತ್ತು ಕುದುರೆಗಳಷ್ಟು ದೊಡ್ಡದಾದ ಬೇಟೆ ಪ್ರಾಣಿಗಳು, ಅವು ನೀರಿನ ಬದಿಯಲ್ಲಿ ತಮ್ಮ ನೀರಡಿಕೆಯನ್ನು ಹೋಗಲಾಡಿಸುತ್ತಿದ್ದಂತೆಯೇ ಆಕ್ರಮಿಸಲ್ಪಟ್ಟಿವೆ.
ಸುಖಭೋಗವು ಅವುಗಳ ಬದುಕಿ ಉಳಿಯುವಿಕೆಯನ್ನು ಬೆದರಿಸುತ್ತದೆ
ತನ್ನ ಬಲಿಪಶುವಿನ ಮೇಲೆ ಮೊಸಳೆಯೊಂದು ದುಃಖದ ಕಪಟ ಕಣ್ಣೀರನ್ನು ಸುರಿಸುವ ಪುರಾತನ ಕಾಲ್ಪನಿಕ ಕಥೆಯು, ಆಧುನಿಕ ಸಂಸ್ಕೃತಿಯೊಳಗೆ “ಮೊಸಳೆ ಕಣ್ಣೀರು” ಎಂಬ ಅಭಿವ್ಯಕ್ತಿಯಲ್ಲಿ ಬಂದಿದೆ. ಆದರೆ ಮೊಸಳೆಯ ಮೇಲೆ ಕೊಂಚವೇ ಮಾನವ ಕಣ್ಣೀರು ಸುರಿಸಲ್ಪಟ್ಟಿದೆ. ಬದಲಿಗೆ, ಈ ಜಲಪ್ರಿಯ ಸರೀಸೃಪವು ಅದರ ಅಮೂಲ್ಯವಾದ ಹದಮಾಡಲ್ಪಟ್ಟ ಚರ್ಮಕ್ಕಾಗಿ ಅಥವಾ ತೊಗಲಿಗಾಗಿ ನಿರ್ದಯೆಯಿಂದ ಬೇಟೆಯಾಡಲ್ಪಟ್ಟಿದೆ.
ಉಪ್ಪುನೀರಿನ ಮೊಸಳೆಯ ಚರ್ಮವು ಲೋಕದಲ್ಲಿಯೇ ಅತ್ಯಂತ ಉತ್ತಮವಾದ ಚರ್ಮ—ಲಭ್ಯವಿರುವ ಅತ್ಯಂತ ನುಣುಪುಳ್ಳದ್ದೂ ಅತಿ ಹೆಚ್ಚು ಬಾಳಿಕೆ ಬರುವಂಥದ್ದೂ—ಆಗಿದೆ ಎಂದು ಕೆಲವರಿಂದ ಪರಿಗಣಿಸಲ್ಪಟ್ಟಿದೆಯಾದುದರಿಂದ, ಫ್ಯಾಷನ್ ಪ್ರದರ್ಶನದಲ್ಲಿ ಮಾಡೆಲ್ಗಳು, ಫ್ಯಾಷನ್ ಆಗಿ ಇರುವ ಮೊಸಳೆಯ ಚರ್ಮದ ಉಡುಗೆ ತೊಡಿಗೆಯ ಐಟಮ್ಗಳೊಂದಿಗೆ ಬಿಂಕದಿಂದ ನಡೆಯುತ್ತಾರೆ. ಇತ್ತೀಚೆಗೆ ಲಂಡನಿನಲ್ಲಿ ಮಹಿಳೆಯರ ಕೈಚೀಲವೊಂದು ಕಡಿಮೆ ದರದ ಮಾರಾಟದಲ್ಲಿ 15,000 ಡಾಲರುಗಳಿಗೆ ಬೆಲೆ ಕಟ್ಟಲ್ಪಟ್ಟಿತು. ಮೊಸಳೆಯ ಚರ್ಮವು ಇನ್ನೂ ಲೋಕದ ಅನೇಕ ಭಾಗಗಳಲ್ಲಿ ಒಂದು ಅಂತಸ್ತಿನ ಕುರುಹು ಆಗಿದೆ.
ದೊಡ್ಡ ಮೊತ್ತದ ಲಾಭಗಳ ಆಕರ್ಷಣೆಯು ಆಸ್ಟ್ರೇಲಿಯದಲ್ಲಿನ ಉಪ್ಪುನೀರಿನ ಮೊಸಳೆಯ ಬದುಕಿ ಉಳಿಯುವಿಕೆಯನ್ನು ಬೆದರಿಸಿತು. 1945 ಮತ್ತು 1971ರ ನಡುವೆ, ಈ ಸರೀಸೃಪಗಳಲ್ಲಿ ಸುಮಾರು 1,13,000 ಸರೀಸೃಪಗಳು ಉತ್ತರ ಕ್ಷೇತ್ರವೊಂದರಲ್ಲೇ ಕೊಲ್ಲಲ್ಪಟ್ಟವು. ಅವುಗಳ ನಿರ್ನಾಮವನ್ನು ತಡೆಯಲಿಕ್ಕೆ, 1970ಗಳ ಆದಿಭಾಗದಲ್ಲಿ ಮೊಸಳೆಯ ಬೇಟೆಯಾಡುವಿಕೆಯು ಸೀಮಿತಗೊಳಿಸಲ್ಪಟ್ಟಿತ್ತು, ಮತ್ತು ಫಲಿತಾಂಶವು ಏನಾಗಿತ್ತೆಂದರೆ, 1986ರೊಳಗಾಗಿ ಅರಣ್ಯದಲ್ಲಿ ಅವುಗಳ ಸಂಖ್ಯೆಗಳು ಸುಧಾರಿಸಿದ್ದವು. ಆದುದರಿಂದ, ಕೆಲವರು ಅದರ ಇರು ನೆಲೆಯು ಗಂಡಾಂತರದಲ್ಲಿದೆ ಎಂದು ವಾದಿಸುತ್ತಾರಾದರೂ, ಮೊಸಳೆಯು ಇನ್ನು ಮುಂದೆ ಆಸ್ಟ್ರೇಲಿಯದಲ್ಲಿ ಗಂಡಾಂತರಕ್ಕೊಳಗಾಗಿರುವುದಿಲ್ಲ.
ಬೇಟೆಗಾರನನ್ನು ತಡೆಯುವುದು
ಆಸ್ಟ್ರೇಲಿಯದ ಮೂಲ ನಿವಾಸಿಯ ಜನಸಂಖ್ಯೆಯು ಗೊತ್ತಿದ್ದೋ ಗೊತ್ತಿಲ್ಲದೆಯೋ ಶತಮಾನಗಳಿಂದ ಮೊಸಳೆಯ ಸಂಖ್ಯೆಯನ್ನು ಸಂರಕ್ಷಿಸಿದೆ. ಕೆಲವು ಗೋತ್ರಗಳು ನುರಿತ ಮೊಸಳೆ ಬೇಟೆಗಾರರಾಗಿದ್ದರೂ, ಇತರ ಗೋತ್ರಗಳು ಧಾರ್ಮಿಕ ಕಾರಣಗಳಿಗಾಗಿ ಅವು ಬೇಟೆಯಾಡಲ್ಪಡುವುದನ್ನು ನಿಷೇಧಿಸಿದವು.
ಇತ್ತೀಚಿನ ವರ್ಷಗಳಲ್ಲಿ ಮೊಸಳೆ ಬೆಳೆಸುವಿಕೆಯು ಶಿಕ್ಷಣದ ಮೇಲಿನ ಒತ್ತಿ ಹೇಳುವಿಕೆಯೊಂದಿಗೆ ಜೊತೆಗೂಡಿ ಮೊಸಳೆಗಳ ಸಂರಕ್ಷಣೆಗೆ ನೆರವನ್ನು ನೀಡಿದೆ. ಸಂತಾನವೃದ್ಧಿ ಮಾಡುವ ಕಾರ್ಯಕ್ರಮಗಳು, ಅರಣ್ಯ ಸಂಖ್ಯೆಗಳ ಮೇಲೆ ಯಾವುದೇ ಅಘಾತವನ್ನು ಮಾಡದೆ ಮೊಸಳೆ ಚರ್ಮದ ಮತ್ತು ಮಾಂಸದ ಕಾರ್ಯವಿಧಾನವನ್ನು ಅನುಮತಿಸುವಾಗ, ತಮ್ಮ ಆರ್ಥಿಕ ಯಶಸ್ಸನ್ನು ನೆಚ್ಚಿಕೊಳ್ಳುತ್ತಾ, ಈಗ ಪ್ರವಾಸಿಗರು ಮೊಸಳೆ ಫಾರ್ಮ್ಗಳಿಗೆ ಒಟ್ಟುಗೂಡುತ್ತಾರೆ.
ಜನರು ತಾವು ಪ್ರೀತಿಸುವ, ಅರ್ಥಮಾಡಿಕೊಳ್ಳುವ, ವಿಷಯಗಳನ್ನು ಮಾತ್ರ ಸಂರಕ್ಷಿಸಿ, ತಮ್ಮ ಸ್ಥಳ ಮತ್ತು ಸಮಯದಲ್ಲಿ ಸ್ವಲ್ಪವನ್ನು ಕೊಡುತ್ತಾರೆಂದು ಒಬ್ಬ ಖ್ಯಾತ ಆಸ್ಟ್ರೇಲಿಯನ್ ಮೊಸಳೆ ರೈತನು ನಂಬುತ್ತಾನೆ. ಅವನು ಹೇಳಿಕೆಯನ್ನಿತ್ತದ್ದು: “ಆದುದರಿಂದ ಮೊಸಳೆಗಳಿಗೆ ಅಷ್ಟೊಂದು ಗಮನವು ದೊರೆಯುವುದಿಲ್ಲ. ಆದರೆ ಅವುಗಳ ಜೀವಿಪರಿಸ್ಥಿತಿ ಶಾಸ್ತ್ರದ ಮೌಲ್ಯವು ಯಾವುದೇ ಫ್ಯಾಷನ್ ಇರುವ ಉಡುಗೆ ತೊಡುಗೆಯ ಐಟಮ್ಗಳಿಗೆ ಸಮವಾಗಿದೆ.”
ಕೊಳಚೆ ಬಣ್ಣವುಳ್ಳ ಚರ್ಮದ ಸರೀಸೃಪಗಳನ್ನು ಅತಿ ಸನಿಹದಿಂದ—ಆದರೆ ತಂತಿ ಬೇಲಿಯೊಂದರ ಭದ್ರತೆಯ ಹಿಂದೆಯಿಂದ—ಒಬ್ಬನು ವೀಕ್ಷಿಸಿದಂತೆ, ಒಂದು ಮೊಸಳೆ ಫಾರ್ಮನ್ನು ಭೇಟಿಮಾಡುವುದು ಉಲ್ಲಾಸಗೊಳಿಸುವಂಥದ್ದಾಗಿದೆ. ಸಾರ್ವಜನಿಕ ಪ್ರದರ್ಶನವನ್ನು ಮಾಡಲು ಅವುಗಳನ್ನು ಆಹ್ವಾನಿಸುತ್ತಾ ಮತ್ತು ಅವುಗಳಿಗೆ ತಾಜಾ ಕೋಳಿ ಮಾಂಸ ಮತ್ತು ಇತರ ಮಾಂಸಗಳನ್ನು ಬಹುಮಾನವಾಗಿ ಕೊಡುತ್ತಾ, ಫಾರ್ಮ್ ಕಾರ್ಮಿಕರು ಭಯವನ್ನು ನಿರ್ಲಕ್ಷಿಸಿ ಮೊಸಳೆಗಳ ಬೇಲಿಯೊಳಗೆ ಹೋಗುತ್ತಾರೆ. ಹಾಗಿದ್ದರೂ, ಒಬ್ಬ ಫಾರ್ಮ್ ಕಾರ್ಮಿಕನು ಇತ್ತೀಚೆಗೆ ಮೊಸಳೆಯೊಂದನ್ನು ಎಂದೂ ಉದಾಸೀನಭಾವದಿಂದ ಎಣಿಸಬಾರದೆಂದು ಕಹಿಯಾದ ಅನುಭವವೊಂದರಿಂದ ಕಲಿತುಕೊಂಡನು. ಅನಿರೀಕ್ಷಿತವಾಗಿ, ಆತನೆಡೆಗೆ ಸರೀಸೃಪವು ಹಠಾತ್ತನೆ ಮುನ್ನುಗ್ಗಿತು ಮತ್ತು ಅವನ ಎಡ ತೋಳನ್ನು ಸಂಪೂರ್ಣವಾಗಿ ಸಿಗಿದು ಹಾಕಿತು!
ಮತ್ತೊಂದು ಕಡೆಯಲ್ಲಿ, 12 ತಿಂಗಳು ಪ್ರಾಯದ ಮೊಸಳೆಯೊಂದನ್ನು ಎತ್ತಿಕೊಂಡಿರುವುದು ಖಂಡಿತವಾಗಿಯೂ ಒಂದು ಅನುಭವಜ್ಞಾನವುಳ್ಳದ್ದೂ ಹೆಚ್ಚು ಅರುಹುವಂತದ್ದೂ ಆಗಿದೆ. ಅಸ್ಟಿಯೊಡರ್ಮ್ಸ್ ಎಂದು ಕರೆಯಲ್ಪಡುವ ಅದರ ಬೆನ್ನಿನ ಮೇಲಿರುವ ಮೂಳೆಗಳ ಶಲ್ಕಗಳು, ದ್ರವ ಬಲ ರಕ್ಷಾ ಕವಚವನ್ನು ರೂಪಿಸುವಾಗ, ಅದರ ಕೆಳಹೊಟ್ಟೆಯ ಚರ್ಮವು ಗಮನಾರ್ಹವಾಗಿ ನುಣುಪಾಗಿದೆ. ಅವುಗಳ ಚರ್ಮವು ಏಕೆ ಇಷ್ಟೊಂದು ಮೆಚ್ಚಲ್ಪಡುತ್ತದೆ ಎಂಬುದು ಈಗ ಗ್ರಹಿಸಶಕ್ತವಾಗಿದೆ. ಆದರೆ ಈ “ದಟ್ಟಗಾಲು ಹಾಕುವ”ವನೊಂದಿಗೆ ಜಾಗ್ರತೆಯಿಂದಿರ್ರಿ. 12 ತಿಂಗಳು ಪ್ರಾಯದ ಮೊಸಳೆಯೂ, ಭದ್ರವಾಗಿ ಬಂಧಿಸಲ್ಪಟ್ಟಿರುವ ತನ್ನ ದವಡೆಗಳೊಂದಿಗೆ ಅದರ ಗಾತ್ರಕ್ಕೆ ಗಮನಾರ್ಹವಾಗಿ ಶಕ್ತಿಶಾಲಿಯಾಗಿದೆ.
ಮೊಟ್ಟೆಯೊಡೆಯದ ಮರಿ ಮೊಸಳೆಗಳು, ತಮ್ಮ ಚಿಪ್ಪುಗಳೊಳಗಿಂದ ಚರ್ಮವನ್ನು ಹೆರೆದು, ತಮ್ಮ ಪುಟ್ಟ ಮೂತಿಯ ತುದಿಯ ಮೇಲಿನ ತಾತ್ಕಾಲಿಕ ಹಲ್ಲೊಂದರ ಸಹಾಯದೊಂದಿಗೆ ಹಠಾತ್ತನೆ ಒಡೆದು ಹೊರಗೆ ಬರುವಾಗ, ಪ್ರೇಕ್ಷಕರನ್ನು ಆನಂದಗೊಳಿಸುತ್ತವೆ. ಮೊಸಳೆಯೊಂದು ನಿಜವಾಗಿ ಮುದ್ದಾಗಿ ಕಾಣುವ ಸಮಯವು ಅದೊಂದೇ ಆಗಿರಬಹುದೆಂಬುದಾಗಿ ಅನೇಕ ಮಂದಿ ಸಮ್ಮತಿಸುತ್ತಾರೆ!
ಕೆಲವು ದೀರ್ಘಕಾಲದ ಕಾಲ್ಪನಿಕ ಕಥೆಗಳು ತೊಲಗಿಸಲ್ಪಟ್ಟಿವೆ
ಮೊಸಳೆ ಫಾರ್ಮ್ಗಳಲ್ಲಿ ಸಾಗುವಳಿಯ ಕೆಳಗೆ ಅವು ಬೆಳೆದಂತೆ, ಈ ಭೀತಿಗೊಳಿಸುವ ಸರೀಸೃಪಗಳ ಸ್ವಭಾವವನ್ನು ನಿಕಟವಾಗಿ ಅವಲೋಕಿಸುತ್ತಿರುವುದು, ಕೆಲವು ದೀರ್ಘಕಾಲದ ಕಾಲ್ಪನಿಕ ಕಥೆಗಳನ್ನು ತೊಲಗಿಸಲು ಸಹಾಯಮಾಡಿದೆ. ಮೊಸಳೆಯೊಂದು ಅನಿರೀಕ್ಷಿತವಾಗಿ ಮಿಂಚಿನ ವೇಗದಲ್ಲಿ ಎರಗುವ ಮುನ್ನ, ದಿನಗಳ, ಅಥವಾ ವಾರಗಳ ತನಕವೂ ತಾಳ್ಮೆಯಿಂದ ತನ್ನ ಬೇಟೆಯನ್ನು ಕದ್ದು ಹಿಂಬಾಲಿಸುತ್ತದೆ ಎಂಬುದಾಗಿ ವರ್ಷಗಳ ವರೆಗೆ ಯೋಚಿಸಲಾಗಿತ್ತು. ಹಾಗಿದ್ದರೂ, ಸದ್ಯದ ಅವಲೋಕನೆಯು ಪ್ರಕಟಪಡಿಸಿದೆಯೇನೆಂದರೆ, ಮಳೆಗಾಲದಲ್ಲಿ ಅವುಗಳ ಕೂಡುವಿಕೆಯ ಸಮಯದಲ್ಲಿ, ಮೊಸಳೆಗಳು ತಮ್ಮ ಪ್ರದೇಶದಲ್ಲಿ ಹೆಚ್ಚು ಆಕ್ರಮಣಶೀಲವಾಗಿರುತ್ತವೆ. ಈ ಸಮಯದಲ್ಲಿ ಅದರ ಕ್ಷೇತ್ರದಲ್ಲಿ ಬೇಟೆಯು ಪ್ರವೇಶಿಸುವುದಾದರೆ, ಮೊಸಳೆಯು ಅದರ ಹಿಂದೆ ಆಕ್ರಮಣಶೀಲವಾಗಿ ಹೋಗಬಹುದು, ಆದರೆ ವರ್ಷದ ಬೇರೆ ಸಮಯದಲ್ಲಿಯಾದರೋ, ಮೊಸಳೆಯು ಅದೇ ಪ್ರಾಣಿಯನ್ನು ಒಂದು ಅಂತರದಿಂದ ಕೇವಲ ನಿರಾಸಕ್ತಿಯಿಂದ ವೀಕ್ಷಿಸಬಹುದು.
ಇಂದು ಮನೋರಂಜನಾತ್ಮಕ ಕ್ಷೇತ್ರಗಳಲ್ಲಿ ದೃಷ್ಟಿಸಲ್ಪಡುವಾಗ, ಮೊಸಳೆಗಳು ಕಸಬುದಾರರಾದ ಮೊಸಳೆ ಬೇಟೆಗಾರರಿಂದ ತೆಗೆದುಹಾಕಲ್ಪಟ್ಟಿವೆ ಮತ್ತು ಪುನಃಸ್ಥಾಪಿಸಲ್ಪಟ್ಟಿವೆ. ಅವರ ಕಾರ್ಯವಿಧಾನದ ಒಂದು ಭಾಗವು, ಕೀಲುಗಳಿಂದ ಕೂಡಿರುವ ಕೆಳ ದವಡೆಯನ್ನು ಬಂಧಿಸಿ, ಅದನ್ನು ಮೇಲಕ್ಕೆ ಎತ್ತುವುದು, ಮತ್ತು ಬೇಗನೆ ಮೇಲಿನ ಮತ್ತು ಕೆಳಗಿನ ದವಡೆಗಳನ್ನು ಜೊತೆಯಾಗಿ ಕಟ್ಟುವುದಾಗಿದೆ. ಕೆಳ ದವಡೆಯ ಮುಚ್ಚಶಕ್ತವಾಗಿರುವ ಸಂದಿನ ಸ್ನಾಯುಗಳು ಅತಿಶಯವಾಗಿ ಶಕ್ತಿಶಾಲಿಯಾಗಿರುವಾಗ, ತೆರೆಯುವ ಸ್ನಾಯುಗಳು ಬಲಹೀನವಾಗಿದ್ದು, ಇದು ಮೊಸಳೆಯ ದವಡೆಯನ್ನು ಕಾರ್ಯತಃ ಶಕ್ತಿರಹಿತವನ್ನಾಗಿ ಮಾಡುತ್ತದೆ. ಹಾಗಿದ್ದರೂ, ಬೇಟೆಗಾರನೊಬ್ಬನು ಜಾಗ್ರತೆಯಿಂದಿಲ್ಲದಿರುವುದಾದರೆ, ಮೊಸಳೆಯ ಶಕ್ತಿಯುತವಾದ ಬಾಲದಿಂದ ಅವನು ಸುಲಭವಾಗಿ ನೆಲಕ್ಕೆ ಬೀಳಿಸಲ್ಪಡಬಲ್ಲನು.
ಎಲ್ಲವೂ ಕ್ರೂರವಾದದ್ದೂ ಹಿಂಸಾತ್ಮಕವಾದದ್ದೂ ಅಲ್ಲ
ಗಂಭೀರವಾಗಿ ಘಾಸಿಗೊಳಿಸಬಲ್ಲ ಅದೇ ದವಡೆಗಳು ಒಂದು ಕುಶಲ ಚಲನೆಗೆ ಸಹಾಯವನ್ನೀಯುವ ಸಾಮರ್ಥ್ಯವನ್ನೂ ಹೊಂದಿವೆ. ಅಜನಿತ ಮೊಸಳೆಗಳು ತಮ್ಮ ಚಿಪ್ಪುಗಳನ್ನು ಒಡೆಯಲು ಸೋಮಾರಿಯಾಗಿರುವುದಾದರೆ, ಮರಿಗಳನ್ನು ಕ್ರಿಯೆಗೈಯುವಂತೆ ಪ್ರೇರಿಸುತ್ತಾ, ತಾಯಿ ಮೊಸಳೆಯು ತನ್ನ ಮೊಟ್ಟೆಗಳನ್ನು ಬಹು ಸೌಮ್ಯವಾಗಿ ಉರುಳಿಸುವುದು.
ಮೊಸಳೆಯ ಹಲ್ಲುಗಳು ಹೋಳು ಮಾಡುವುದಕ್ಕೆ ಬದಲಾಗಿ ಹಿಡಿತಕ್ಕೆ ವಿನ್ಯಾಸಿಸಲ್ಪಟ್ಟಿವೆ. ಸಾಕಷ್ಟು ಚಿಕ್ಕದಾಗಿರುವುದಾದರೆ, ಬೇಟೆಯು ಇಡಿಯಾಗಿ ನುಂಗಲ್ಪಡುತ್ತದೆ. ಇಲ್ಲದಿದ್ದರೆ, ಅದು ಬೇರೆ ಬೇರೆಯಾಗಿ ಸಿಗಿಯಲ್ಪಡುತ್ತದೆ ಮತ್ತು ತುಂಡು ತುಂಡಾಗಿ ಸೇವಿಸಲ್ಪಡುತ್ತದೆ. ಸತ್ತ ಸರೀಸೃಪಗಳ ಮೇಲೆ ನಡೆಸಲ್ಪಟ್ಟ ಶವಪರೀಕ್ಷೆಯು ಅವುಗಳ ಹೊಟ್ಟೆಗಳಲ್ಲಿ ಕಲ್ಲುಗಳನ್ನು ಪ್ರಕಟಪಡಿಸಿವೆ. ಉದ್ದೇಶಪೂರ್ವಕವಾಗಿ ತಿನ್ನಲ್ಪಟ್ಟಿರಲಿ ಇಲ್ಲದಿರಲಿ, ಈ ಕಲ್ಲುಗಳು ಸ್ಥಿರಗೊಳಿಸುವ ಮಾಧ್ಯಮವಾಗಿ ಕ್ರಿಯೆಗೈಯುತ್ತವೆ ಎಂದು ನಂಬಲಾಗುತ್ತದೆ.
ಭೇಟಿ ನೀಡುವವರು ಮೊಸಳೆಗಳನ್ನು ನದಿಯ ತೀರಗಳಲ್ಲಿ ಅವುಗಳ ಬಹು ದೊಡ್ಡ ದವಡೆಗಳೊಂದಿಗೆ ಬಾಯಿ ತೆರೆದುಕೊಂಡಿರುವುದನ್ನು ಆಗಿಂದಾಗ್ಗೆ ಅವಲೋಕಿಸುತ್ತಾರೆ. ಈ ತೆರೆಯಲ್ಪಟ್ಟ ದವಡೆಯ ಭಂಗಿಯು ಆಕ್ರಮಣಶೀಲತೆಯನ್ನು ಸಂಕೇತಿಸುತ್ತದೆಂದು ಅನೇಕರು ಭಾವಿಸಬಹುದು. ಹಾಗಿದ್ದರೂ, ಅದಕ್ಕೆ ವ್ಯತಿರಿಕ್ತವಾಗಿ, ತೆರೆಯಲ್ಪಟ್ಟ ದವಡೆಯ ಭಂಗಿ—ಹೊರಗಿನ ತಾಪಮಾನಕ್ಕೆ ಸರಿಹೊಂದಿಸಿಕೊಳ್ಳಲು ಅನುಮತಿಸುತ್ತದೆ. ಎಲ್ಲ ಸರೀಸೃಪಗಳಂತೆ, ಮೊಸಳೆಗಳು ತಮ್ಮ ದೇಹ ತಾಪಮಾನವನ್ನು ನಿರಂತರವಾಗಿ ಸರಿಹೊಂದಿಸಿಕೊಳ್ಳುತ್ತಿರುತ್ತವೆ.
ಆಶ್ಚರ್ಯಕರವಾಗಿ, ಅದು ಒಂದು ಸರೀಸೃಪವಾಗಿರುವುದಾದರೂ, ಸಸ್ತನಿಯೊಂದರಂತೆಯೇ ಒಂದು ಮೊಸಳೆ, ನಾಲ್ಕು ಕವಾಟಗಳುಳ್ಳ ಒಂದು ಹೃದಯವನ್ನು ಹೊಂದಿದೆ. ಹಾಗಿದ್ದರೂ, ಮುಳುಗುವಾಗ ಒಂದು ಬದಲಾವಣೆಯಾಗುತ್ತದೆ, ಮತ್ತು ಹೃದಯವು ಮೂರು ಕವಾಟಗಳ ಒಂದು ಹೃದಯವಾಗಿ ಕಾರ್ಯ ನಡಿಸುತ್ತದೆ.
ಕಿರಿದಾದ ಮೂತಿಯೊಂದರಿಂದ ಮತ್ತು ಅದರ ದವಡೆಗಳು ಮುಚ್ಚಿರುವಾಗಲೂ ಕಾಣಸಾಧ್ಯವಿರುವ ಕೆಳ ದವಡೆಯಲ್ಲಿನ ಹಲ್ಲುಗಳಿಂದ ಉಪ್ಪುನೀರಿನ ಮೊಸಳೆಯು ನೆಗಳೊಂದರಿಂದ ಗುರುತಿಸಲ್ಪಡುತ್ತದೆ. ನಿಜವಾದ ಮೊಸಳೆಗಳನ್ನು, ಎಲ್ಲಿ ಕುಬ್ಜ ಮೊಸಳೆಗಳು ಜೀವಿಸುತ್ತವೋ ಆ ಆಫ್ರಿಕದಿಂದ ಭಾರತದ ಕಡೆಗೆ ಮತ್ತು ಏಷ್ಯದಿಂದ ಪಾಪುವ ನ್ಯೂ ಗಿನಿಯ ತನಕ ಕಂಡುಕೊಳ್ಳಸಾಧ್ಯವಿದೆ. ಅವು ಆಸ್ಟ್ರೇಲಿಯದ ದಕ್ಷಿಣದಷ್ಟು ದೂರ ವಾಸಿಸುತ್ತವೆ ಮತ್ತು ಮ್ಯಾಂಗ್ರೋವ್ ಕರಾವಳಿ ತೊಗಟೆಗಳನ್ನು ಮತ್ತು ಉಷ್ಣವಲಯದ ಜೌಗುಪ್ರದೇಶಗಳನ್ನು ಇಷ್ಟಪಡುತ್ತವೆ, ಏಕೆಂದರೆ ಅವು ನೀರಿನ ಪಕ್ಕಕ್ಕೆ ಹತ್ತಿರವಾಗಿ ತಮ್ಮ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ. ಇದರ ಸ್ವಾಭಾವಿಕ ಪ್ರತಿಕೂಲ ಪರಿಸ್ಥಿತಿಯೇನೆಂದರೆ, ಪ್ರವಾಹವು ಆಗಿಂದಾಗ್ಗೆ ಮೊಸಳೆಯ ಭ್ರೂಣಗಳ ಅತಿ ದೊಡ್ಡ ಸಂಖ್ಯೆಯನ್ನು ಮುಳುಗಿಸಿಬಿಡುತ್ತದೆ. ವಯಸ್ಕ ಮೊಸಳೆ, ಬರಾಮುಂಡಿ ಮೀನು ಮತ್ತು ನಾನ್ಕೀನ್ ಪಕ್ಷಿಯಂಥ, ಕೊಂದು ತಿನ್ನುವ ಪ್ರಾಣಿಗಳಿಂದಾಗಿ, ಮೊಸಳೆಯ 50 ಪ್ರತಿಶತ ಮರಿಗಳು ಮಾತ್ರ ತಮ್ಮ ಪ್ರಥಮ ವರ್ಷದಲ್ಲಿ ಬದುಕಿ ಉಳಿಯುತ್ತವೆ.
ವಿಸ್ಮಯಕರವಾಗಿ, ಮೊಸಳೆಗಳು ತಮ್ಮ ಸ್ವಂತ ಆಹಾರ ಸರಬರಾಯಿಯೊಂದಿಗೆ ಹುಟ್ಟುತ್ತವೆ. ಜೀವನದ ಮೊದಲ ಕೆಲವು ವಾರಗಳ ವರೆಗೆ ತಮ್ಮ ದೇಹಗಳೊಳಗೇ ಇರುವ ಹಳದಿ ಲೋಳೆಯ ಚೀಲವೊಂದರಿಂದ ಅವು ಪೋಷಿಸಲ್ಪಡುತ್ತವೆ. ಆದರೂ, ಅವುಗಳ ತಾಯಿ ಅವನ್ನು ತನ್ನ ಬಾಯಿಯಲ್ಲಿ ಸೌಮ್ಯವಾಗಿ ತೆಗೆದುಕೊಂಡು ಹೋಗಿ ಅವುಗಳನ್ನು ನೀರಿನ ಬದಿಗೆ ಹೋಗುವಂತೆ ಪ್ರಚೋದಿಸಿದ ತಕ್ಷಣವೇ, ಕೈಗೆಟಕುವ ಯಾವುದೇ ವಸ್ತುವನ್ನು ಪಕ್ಕನೆ ಕಚ್ಚುತ್ತಾ, ಅವು ತಮ್ಮ ಮೂತಿಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತವೆ.
‘ನದಿಯ ನೇತ್ರಗಳು’ ಎಂಬ ಪದವು ಏಕೆ ಅಷ್ಟೊಂದು ತಕ್ಕದ್ದಾಗಿದೆ? ಮರಿಗಳಾಗಿದ್ದರೂ, ರಾತ್ರಿಯಲ್ಲಿ ಕೃತಕ ಬೆಳಕಿನ ಕೆಳಗೆ ಅವುಗಳ ಪುಟ್ಟ ಕಣ್ಣುಗಳು ಹೊಂಬಣ್ಣದಿಂದ ಹೊಳೆಯುವುದರಿಂದಲೇ. ಅಕ್ಷಿಪಟದ ಹಿಂದೆ ಇರುವ ಸ್ಫಟಿಕಗಳ ಒಂದು ಪದರವು ರಾತ್ರಿ ದೃಷ್ಟಿಯನ್ನು ಉತ್ಪ್ರೇಕ್ಷಿಸುತ್ತದೆ ಮತ್ತು ಹೊಂಬಣ್ಣದಿಂದ ಪ್ರಜ್ವಲಿಸುವಂತೆ ಮಾಡುತ್ತದೆ.
ಹೌದು, ಮೊಸಳೆಯು ನಿಜವಾಗಿ ಕುತೂಹಲವನ್ನು ಕೆರಳಿಸುವ ಒಂದು ಸರೀಸೃಪವಾಗಿದೆ—ಆದರೆ ಯಾವಾಗಲೂ ಒಂದು ಸುರಕ್ಷಿತ ಅಂತರವನ್ನು ಇಟ್ಟುಕೊಳ್ಳಿರಿ. ಮತ್ತು ಯಾವನೇ ಬೆಸ್ತನು ಚೆನ್ನಾಗಿ ತಿಳಿದಿರುವಂತೆ, ಲಿವ್ಯತನ್ ಅನ್ನು ಪಳಗಿಸಲಿಕ್ಕೆ ಮಾಡುವ ಪ್ರಯತ್ನಗಳು ವ್ಯರ್ಥವಾಗಿವೆ.
ಯೋಬನ ಪದ್ಯಭಾಗವು ಮೊಸಳೆಯನ್ನು “ಲಿವ್ಯತನ್” ಆಗಿ ಯೋಗ್ಯವಾಗಿಯೇ ವರ್ಣಿಸುತ್ತದೆ: “ನೀನು ಮೊಸಳೆಯನ್ನು ಗಾಳದಿಂದ ಎಳೆದು ಹುರಿಯಿಂದ ಅದರ ನಾಲಿಗೆಯನ್ನು ಅದುಮಿ ಬಿಗಿಯುವಿಯೋ? ಅದರ ಮೂಗಿಗೆ ಆಪನ್ನು ಪೋಣಿಸುವಿಯಾ? ದವಡೆಗೆ ಮುಳ್ಳನ್ನು ಚುಚ್ಚುವಿಯಾ? ಅದು ನಿನಗೆ ಬಹಳವಾಗಿ ವಿಜ್ಞಾಪಿಸುವದೋ? ನಿನ್ನ ಸಂಗಡ ಸವಿಮಾತಾಡೀತೇ? ಅದನ್ನು ನೀನು ಸದಾ ಆಳಾಗಿ ಸೇರಿಸಿಕೊಳ್ಳುವಂತೆ ನಿನ್ನೊಂದಿಗೆ ಒಪ್ಪಂದಮಾಡಿಕೊಳ್ಳುವದೋ? ಅದನ್ನು ಪಕ್ಷಿಯಂತೆ ಆಡಿಸುವಿಯಾ? ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟುವಿಯಾ? ಪಾಲುಗಾರರಾದ ಬೆಸ್ತರು ಅದನ್ನು ವ್ಯಾಪಾರಕ್ಕೆ ಇಡುವರೋ? ವರ್ತಕರಿಗೆ ಹಂಚಿ ಮಾರುವರೋ? ಅದರ ಚರ್ಮವನ್ನೆಲ್ಲ ಕೊಂಡಿಗಳಿಂದಲೂ ತಲೆಯನ್ನೆಲ್ಲ ಮೀನಿನ ಈಟಿಗಳಿಂದಲೂ ಚುಚ್ಚಬಲ್ಲಿಯಾ? ಅದರ ಮೇಲೆ ಕೈಹಾಕಿ ನೋಡು! ಆ ಜಗಳವನ್ನು ನೆನಸಿಕೊಂಡರೆ ನೀನು ಮತ್ತೆ ಅದನ್ನು ಮುಟ್ಟುವದೇ ಇಲ್ಲ.”—ಯೋಬ 41:1-8.
ಅಜಾಗರೂಕರೂ ಕುತೂಹಲಿಗಳೂ ಆದವರಿಗೆ ಪ್ರೋತ್ಸಾಹಿಸುತ್ತಾ, ಎಚ್ಚರಿಕೆಯ ವಿವೇಕಯುಕ್ತ ಮಾತುಗಳು: ‘ನದಿಯ ನೇತ್ರಗಳ’—ಬಲಶಾಲಿಯಾದ, ಭೀತಿಗೊಳಿಸುವಂತಹ ಮೊಸಳೆಯ—ಕುರಿತು ಎಚ್ಚರಿಕೆಯಿಂದಿರ್ರಿ!
[ಪುಟ 31 ರಲ್ಲಿರುವ ಚಿತ್ರ ಕೃಪೆ]
By courtesy of Australian International Public Relations
[ಪುಟ 32 ರಲ್ಲಿರುವ ಚಿತ್ರ]
ರಾತ್ರಿ ಹೊತ್ತಿನಲ್ಲಿ ನೀರಿನ ಮೇಲೆ ಬೆಳಕು ಹರಿಸಲ್ಪಟ್ಟಾಗ, ಮೊಸಳೆಯ ‘ನದಿಯ ನೇತ್ರಗಳು’ ಹೊಂಬಣ್ಣದಿಂದ ಪ್ರಜ್ವಲಿಸುತ್ತವೆ
[ಕೃಪೆ]
By courtesy of Koorana Crocodile Farm, Rockhampton, Queensland, Australia
[ಪುಟ 33 ರಲ್ಲಿರುವ ಚಿತ್ರಗಳು]
ಎಡಗಡೆ: ಒಂದು ಮರಿ ಮೊಸಳೆಯು ಮೊಟ್ಟೆಯಿಂದ ಹಠಾತ್ತನೆ ಹೊರಬರುತ್ತದೆ
[ಕೃಪೆ]
By courtesy of Koorana Crocodile Farm, Rockhampton, Queensland, Australia
ಒಳಸೇರಿಕೆ: ಒಂದು ವಯಸ್ಕ ಮೊಸಳೆಯು ಮೇರಿ ನದಿಯ ಕೆಸರಿನಿಂದ ತುಂಬಿದ ದಡದ ಮೇಲೆ ತನ್ನನ್ನು ಸೂರ್ಯನ ಕಿರಣಕ್ಕೆ ಒಡ್ಡುತ್ತಿರುವುದು
[ಕೃಪೆ]
By courtesy of Australian International Public Relations